ಮಂಗಳವಾರ, ಅಕ್ಟೋಬರ್ 17, 2017

ದಿನೇಶ ಉಪ್ಪೂರ:

*ನನ್ನೊಳಗೆ*

ಭಾಗ 30

 ಅಪ್ಪಯ್ಯನ ಅಪರ ಕ್ರಿಯೆಗಳನ್ನು ಅಣ್ಣಂದಿರೊಂದಿಗೆ ಮಾಡಿ ಮುಗಿಸಿದ ನಾನು, ಮತ್ತೆ ಪುನಹ ಬೆಂಗಳೂರಿಗೆ ಹೋದೆ. ಮನಸ್ಸು ಗೊಂದಲದ ಗೂಡಾಗಿತ್ತು. ಮುಂದೇನು? ಎಂಬ ಪ್ರಶ್ನೆಗೆ ಉತ್ತರವಿಲ್ಲದೇ, ಭವಿಷ್ಯವೆಲ್ಲ ಕತ್ತಲು ಎಂದೆನಿಸಿದ ಕಾಲ ಅದು. ಮನಸ್ಸಿನಲ್ಲಿ, ಹೀಗೆ ದಿನ ಹೋದರೆ, ನನ್ನ ಜೀವನ, ನೆಲೆ ಕಾಣುವುದೆ ಕಷ್ಟ ಎನ್ನಿಸತೊಡಗಿತು. ಸುಮ್ಮನೇ ಕಾಲತಳ್ಳಲು ತೊಡಗಿದೆ. ಮನಸ್ಸಿನ ಬೇಸರವನ್ನು ನೀಗಿಸಲು ಒಂದಷ್ಟು ಇಂಗ್ಲೀಷ್ ಸಿನೇಮಾಗಳಿಗೆ, ಪುರಭವನದಲ್ಲಿ, ರವೀಂದ್ರಕಲಾ ಕ್ಷೇತ್ರದಲ್ಲಿ ಆಗುತ್ತಿದ್ದ ನಾಟಕಗಳಿಗೆ ಹೋದೆ. ಅಣ್ಣಯ್ಯ ಖರ್ಚಿಗೆ ಕೊಡುತ್ತಿದ್ದ. ಕೊನೆಗೆ, ಹೀಗೆ ಅಲ್ಲಿ ಇಲ್ಲಿ ಕಾಣದ ಸ್ಥಳದಲ್ಲಿ ಸುಮ್ಮನೇ ಅಲೆದಾಡುವುದಕ್ಕಿಂತ, ಊರಲ್ಲೇ ಇರುವುದು ಮೇಲು ಎನ್ನಿಸಿತು. ಒಂದು ದಿನ ಅಣ್ಣನಿಗೂ ಹೇಳದೇ ಪುನಹ ಊರಿಗೆ ಬಂದುಬಿಟ್ಟೆ. ಅಮ್ಮನ ಹತ್ತಿರ “ಇನ್ನು ನಾನು ಎಲ್ಲಿಗೂ ಹೋಗುವುದಿಲ್ಲ. ಇಲ್ಲಿಂದಲೇ ಕೆಲಸಕ್ಕೆ ಪ್ರಯತ್ನಿಸುತ್ತೇನೆ. ಆದರೆ ಆಯಿತು. ಇಲ್ಲದಿದ್ದರೆ, ಸುರೇಶ ಅಣ್ಣನಂತೆ ಇಲ್ಲಿಯೇ ಇದ್ದು, ನಾನೂ ಗಂಟಿ ಮೇಯಿಸಿಕೊಂಡು, ಗದ್ದೆಕೆಲಸ ಮಾಡಿಕೊಂಡಿರುತ್ತೇನೆಯೇ, ಹೊರತು ಎಲ್ಲಿಗೂ ಹೋಗುವುದಿಲ್ಲ” ಎಂದೆ.

ಅದೇ ಸಮಯಕ್ಕೆ ಡಿಗ್ರಿ ಓದುವಾಗ ಬಿದ್ಕಲ್ ಕಟ್ಟೆಯ ಸಿಂಡಿಕೇಟ್ ಬ್ಯಾಂಕಿನಲ್ಲಿ ಮಾಡಿದ ಸಾಲ, ಆರೇಳು ಸಾವಿರವಾಗಿ, ಒಂದು ನೋಟೀಸು ನಮ್ಮ ಮನೆಗೆ ಬಂದಿತು. ಯಾವುದೇ ಕೆಲಸವೂ ಇಲ್ಲದ, ಸಂಪಾದನೆಯೂ ಇಲ್ಲದ ನಾನು ದಿಗಿಲುಬಿದ್ದೆ. ಹೀಗೆಯೇ ಬಡ್ಡಿಗೆ ಬಡ್ಡಿ ಸೇರಿ, ಅದೇ ದೊಡ್ಡ ಮೊತ್ತವಾದರೆ ತೀರಿಸುವುದು ಎಲ್ಲಿಂದ?. ಕಂಗಾಲಾದೆ. ರಮೇಶ ಅಣ್ಣಯ್ಯ ಆಗ ಸಿಂಡಿಕೇಟ್ ಬ್ಯಾಂಕಿನಲ್ಲಿಯೇ ಕೆಲಸ ಮಾಡುತ್ತಿದ್ದುದರಿಂದ, ಅಮ್ಮನ ಸಲಹೆಯಂತೆ, ಅವನಿಗೆ ನನ್ನ ಪರಿಸ್ಥಿತಿಯನ್ನು ತಿಳಿಸಿ, ಒಂದು ದೀರ್ಘವಾದ ಪತ್ರ ಬರೆದು “ಏನಾದರೂ ಮಾಡಲು ಸಾಧ್ಯವೇ?” ಎಂದು ಬೇಡಿದೆ. ಅವನೂ ಆಗ ಕೋಟದ ಮಣೂರಿನಲ್ಲಿ ಮನೆ ಮಾಡಿದ್ದು, ಸಾಲ ಸೋಲ ಮಾಡಿಕೊಂಡಿದ್ದ. ಸಾಕಷ್ಟು ಹಣದ ಅಡಚಣೆ ಇದ್ದರೂ, “ನಿನಗೆ ಕೆಲಸ ಸಿಗುವವರೆಗೆ, ನಾನು ತಿಂಗಳಿಗೆ ಐವತ್ತು ರೂಪಾಯಿಯನ್ನು ನಿನ್ನ ಆ ಸಾಲದ ಖಾತೆಗೆ ಜಮಾ ಮಾಡುತ್ತಾ ಬರುತ್ತೇನೆ. ಮುಂದೆ ನೋಡುವ” ಎಂದು ಪತ್ರ ಬರೆದು ಧೈರ್ಯ ಹೇಳಿದ. ಆಗ ಸ್ವಲ್ಪ ಧೈರ್ಯ ಬಂತು.

ಮನೆಯಲ್ಲಿ ಸುಮ್ಮನೇ ಕುಳಿತಿರಲಾರದೇ ಬೆಳಿಗ್ಗೆ ಗಂಟಿಗಳನ್ನು ಮನೆಯ ಹಿಂದಿನ ಮಾರ್ವಿ ಅಣೆಗೋ (ಬೆಟ್ಟ), ಮಕ್ಕಿಗದ್ದೆಗೋ ಹೋಗಿ ಮೇಯಿಸಿಕೊಂಡು ಬರುತ್ತಾ, ಮಧ್ಯಾಹ್ನದ ಮೇಲೆ ಏನಾದರೂ ಗದ್ದೆಯ ಕೆಲಸದಲ್ಲಿ ಸುರೇಶಣ್ಣನಿಗೆ ಸಹಾಯ ಮಾಡುತ್ತಾ ದಿನ ಕಳೆದೆ. ಮನೆಯಲ್ಲಿ ಅಪ್ಪಯ್ಯ ತಂದು ಇರಿಸಿದ್ದ ರಾಮಾಯಣ, ಜೈಮಿನಿ ಭಾರತ, ಮಹಾಭಾರತಗಳನ್ನೆಲ್ಲ ಓದಿಯಾಯಿತು. ಹಳೆಯ ಪ್ರಸಂಗ ಪುಸ್ತಕಗಳನ್ನು ಓದತೊಡಗಿದೆ. ಯಾರು ಯಾರೋ ಪ್ರಸಂಗಕರ್ತರು ಬರೆದು, ಅಪ್ಪಯ್ಯನಿಗೆ “ಆಡಲು ಸಾಧ್ಯವೇ? ನೋಡಿ” ಎಂದು ತಂದುಕೊಟ್ಟ ಹಲವಾರು ಯಕ್ಷಗಾನ ಪ್ರಸಂಗಗಳ ಹಸ್ತಪ್ರತಿಗಳೂ ಮನೆಯಲ್ಲಿ ಇದ್ದವು. ಅವುಗಳನ್ನೆಲ್ಲಾ ಒಮ್ಮೆ ಓದಿ ಮಗುಚಿ ಹಾಕಿದ್ದಾಯಿತು. ಆ ಪ್ರಸಂಗ ಪುಸ್ತಕಗಳನ್ನು ಓದುತ್ತಿದ್ದಂತೆಯೇ ಅವುಗಳಲ್ಲಿ ಇರುವ ಪದ್ಯಗಳ ಪ್ರಾಸ, ಧಾಟಿ, ಛಂದಸ್ಸುಗಳು, ಸಾಹಿತ್ಯಗಳು, ನನ್ನನ್ನು ಆಕರ್ಷಿಸಿತು. ತಾಳಗಳಿಗೆ ಅನುಗುಣವಾಗಿ ಮಟ್ಟುಗಳ ಪ್ರಕಾರ ಅವುಗಳ ಒಂದು ಟಿಪ್ಪಣಿಯನ್ನು ಮಾಡಿದೆ. ನಾನೇ ಒಂದು ಪ್ರಸಂಗ ಬರೆಯಬಾರದೇಕೆ? ಅನ್ನಿಸಿತು. ಆ ಕಾಲದಲ್ಲಿ ನನ್ನ ಮನಸ್ಸಿನಲ್ಲಿ ಪರಿಣಾಮ ಬೀರಿದ್ದ ಭಾಸನ ಪ್ರತಿಮಾ ಪ್ರಸಂಗದ ಕತೆಯನ್ನು ಆರಿಸಿಕೊಂಡು, ಅದರ ದೃಶ್ಯಗಳನ್ನು ವಿಂಗಡಿಸಿಕೊಂಡೆ. ನನ್ನ ಮನಸ್ಸಿಗೆ ಬಂದಂತೆ ಪದ್ಯಗಳನ್ನು ರಚಿಸುತ್ತಾ ಹೋದೆ. ಗಂಟಿಗಳನ್ನು ಮೇಯಿಸುವಾಗಲೆಲ್ಲ ಕಿಸೆಯಲ್ಲಿ ಒಂದು ಕಾಗದ, ಮತ್ತು ಪೆನ್ನನ್ನು ಇಟ್ಟುಕೊಂಡು ಮನಸ್ಸಿನಲ್ಲಿ ಪದ್ಯದ ಜೋಡಣೆಯನ್ನು ಮಾಡಿಕೊಳ್ಳುತ್ತಾ, ಅಲ್ಲೇ ಬರೆದುಕೊಂಡು ಮನೆಗೆ ತಂದು ಒಂದು ಪುಸ್ತಕದಲ್ಲಿ ಬರೆದಿಟ್ಟು ಕೊಳ್ಳತೊಡಗಿದೆ.

ನಾನು ಛಂದಸ್ಸನ್ನು ಅಭ್ಯಾಸ ಮಾಡಿದವನಲ್ಲ. ನನಗೆ ತೋಚಿದಂತೆ, ಹಲವು ಹಳೆಯ ಪ್ರಸಂಗಗಳ ಪದ್ಯಗಳನ್ನು ಅನುಕರಿಸಿಕೊಂಡೇ, ಅದೇ ಅಳತೆಯಲ್ಲಿ, ದಾಟಿಯಲ್ಲಿ, ಆಗ ಭಾಸನ ಪ್ರತಿಮಾ ನಾಟಕವನ್ನು ಆಧರಿಸಿ “ಪ್ರತಿಮಾ ಪ್ರಸಂಗ”ವನ್ನೂ, ಶೂರ್ಪನಖಿಯ ಕತೆಯನ್ನು ಆಧರಿಸಿ “ಚಂದ್ರನಖಿ” ಎಂಬ ಪ್ರಸಂಗವನ್ನೂ ಬರೆದೆ. ಚಂದ್ರಶೇಖರ ಕಂಬಾರರ “ಮತಾಂತರ” ಎಂಬ ನಾಟಕ ಆಗ ಯಾವುದೋ ವಿಶೇಷಾಂಕದಲ್ಲಿ ಬಂದಿದ್ದು, ಅದನ್ನು ಪ್ರತಿ ಮಾಡಿಕೊಂಡು ಆ ನಾಟಕದ ಸಂಭಾಷಣೆಗೆ ಮಧ್ಯ ಮಧ್ಯ ಯಕ್ಷಗಾನದ ಪದ್ಯಗಳನ್ನು ಬರೆದು ಸೇರಿಸಿ “ಸಂಗರ” ಎಂಬ ಒಂದು ಸಾಮಾಜಿಕ ಸಮಸ್ಯೆಯ ಪ್ರಸಂಗವನ್ನೂ ಬರೆದಿದ್ದೆ. ಮತ್ತು ಹಾಲಾಡಿ ಮೇಳದವರು ಕೇಳಿದರು ಅಂತ, ನನ್ನದೇ ಒಂದು ಕಾಲ್ಪನಿಕ ಕತೆಯನ್ನು ಹೆಣೆದುಕೊಂಡು, “ಮೋಹನ ಕಲ್ಯಾಣಿ” ಎಂಬ ಪ್ರಸಂಗವನ್ನೂ ಬರೆದೆ. ಅದನ್ನು ಹಾಲಾಡಿ ಮೇಳದಲ್ಲಿ ಆಡಿದ್ದರು. ಇದರ ವಿಷಯವಾಗಿ ಮುಂದೆ ಹೇಳುತ್ತೇನೆ.

ನಮ್ಮ ಮನೆಗೆ ಒಂದು ಕಾಲಕ್ಕೆ ದೊಡ್ಡ ಭಾಗವತರಾಗಿದ್ದ, ಮಾರ್ವಿ ವಾದಿರಾಜ ಹೆಬ್ಬಾರರು ಆಗಾಗ ಬರುತ್ತಿದ್ದರು. ಅವರು ನಮ್ಮ ಕಲ್ಲಟ್ಟೆಯ ಮನೆಗೆ ಬಂದು, ಹತ್ತಾರು ದಿನ ನಮ್ಮ ಮನೆಯಲ್ಲಿಯೇ ಇದ್ದು ಹೋಗುತ್ತಿದ್ದರು. ಅವರು ಇದ್ದರೆ ಮನೆಯಲ್ಲಿ ಸುಮ್ಮನೇ ಇರುತ್ತಿರಲಿಲ್ಲ. ತೆಂಗಿನ ಹೆಡೆಯಿಂದ ಮಡಲನ್ನೋ, ಅದರ ತುದಿಯ ಭಾಗದಿಂದ ಬೀಸಣಿಗೆಯನ್ನೋ ಏನಾದರೂ ಮಾಡುತ್ತಾ. ಯಕ್ಷಗಾನ ಪದ್ಯಗಳನ್ನು ಗುಣುಗುತ್ತಾ ಇರುತ್ತಿದ್ದರು. ಮೇಳದ ಅವರ ಅನುಭವಗಳನ್ನು ಕೇಳಿದರೆ, ಅದೆಲ್ಲ ಈಗ ಯಾರಿಗೆ ಬೇಕು ಮಾರಾಯಾ? ಎಂದು, ನೆನಪಾದ ಕೆಲವು ಸಂಗತಿಗಳನ್ನು ಹೇಳಿ ಮೆಲುಕು ಹಾಕುತ್ತಿದ್ದರು. ಅವರಿಗೆ ನನ್ನ ಪ್ರಸಂಗಗಳ ಪದ್ಯಗಳನ್ನು ಓದಿ ಹೇಳಿದೆ. ಅವರು ಖುಷಿಪಟ್ಟು, “ಹೋ ಒಳ್ಳೆಯ ಪ್ರಾಸ, ಸಾಹಿತ್ಯ ಎಲ್ಲ ಇತ್ತಲೆ” ಎಂದು ಮೆಚ್ಚುಗೆಯ ಮಾತನ್ನು ಹೇಳಿದ್ದರು. ಈಗಿನ ಪ್ರಸಂಗಕರ್ತರಿಗೆ ಅದೆಲ್ಲ ಬ್ಯಾಡ ಮಾರಾಯ. ಭಾಗವತರಂತೂ ನೀನು ಏನು ಬರೆದು ಕೊಟ್ಟರೂ, ಅವರ ಕಿಸೆಯಿಂದ ಶಬ್ದಗಳನ್ನು ಸೇರಿಸಿಯೇ, ಏನೋ ಒಂದು ಹೇಳುತ್ತಾರೆ, “ಕೌರವಗಂಜುತೆಂದ” ಎಂದು ನಾವು ಬರೆದರೆ ಅವರು “ಕೌರವ ಗಂಜಿ ತಿಂದ” ಎಂದು ಹಾಡಿದರೂ ಹಾಡಿದರೆ, ಸ್ವರವೊಂದು ಗಟ್ಟಿ ಇದ್ದರೆ ಈಗ ಒಳ್ಳೆಯ ಭಾಗವತ” ಎಂದು ನಗೆಯಾಡಿದ್ದರು. ಅವರೂ ಕೆಲವು ಪ್ರಸಂಗಗಳನ್ನು ಬರೆದಿದ್ದರು

. ರಾಜಕೀಯ ವಿಷಯದ, "ಕಾಶ್ಮೀರ ವಿಜಯ," "ಹಾಲಾಡಿ ಕ್ಷೇತ್ರ ಮಹಾತ್ಮೆ", "ಬೇಡರಕಣ್ಣಪ್ಪ" ಎನ್ನುವ ಪ್ರಸಂಗಗಳನ್ನು ಅವರ ಹುಡುಗಾಟಿಕೆಯ ಕಾಲದಲ್ಲೇ ಬರೆದುದಾಗಿತ್ತು. ಅಪ್ಪಯ್ಯನ ಒತ್ತಾಯದ ಮೇರೆಗೆ ಅವರು ಶಂಕರನಾರಾಯಣ ಕ್ಷೇತ್ರ ಮಹಾತ್ಮೆ, ಎಂಬ ಪ್ರಸಂಗವನ್ನೂ ಬರೆದಿದ್ದರು. ಆದರೆ ಇದೊಂದನ್ನು ಬಿಟ್ಟು ಯಾವುದೂ ಅಚ್ಚಾಗಲಿಲ್ಲ. ಹಾಗಾಗಿ ಅವುಗಳ ಹಸ್ತಪ್ರತಿಗಳೂ ಈಗ ಸಿಗಲಿಕ್ಕಿಲ್ಲವಾದ್ದರಿಂದ, ಅವು ಕಾಲಗರ್ಭದಲ್ಲಿ ಮರೆಯಾದಂತೆಯೆ ಸೈ.

ಮಾರ್ವಿ ವಾದಿರಾಜ ಹೆಬ್ಬಾರರು ಅವರ ಯೌವನದ ಕಾಲದಲ್ಲಿ ಪ್ರಸಿದ್ಧರಾದ ಭಾಗವತರಾಗಿದ್ದರು. ಅವರ ಅಣ್ಣ ರಾಮಕೃಷ್ಣ ಹೆಬ್ಬಾರರ ಹನುಮಂತ, ಮತ್ತು ಇವರ ಭಾಗವತಿಕೆಯ ಲಂಕಾದಹನ, ರಾಮಾಂಜನೇಯ ಪ್ರಸಂಗಗಳು ಒಂದು ವರ್ಷ ಅಮೃತೇಶ್ವರಿ ಮೇಳದಲ್ಲಿ ಮೆರೆದಾಡಿತ್ತಂತೆ. ಕೋಟದ ಆಸುಪಾಸಿನ ಹತ್ತಾರು ಮೈಲಿಗಳ ವಿಸ್ತೀರ್ಣದಲ್ಲೇ, ಆ ವರ್ಷದ ಇಡೀ ಒಂದು ತಿರುಗಾಟವನ್ನೇ ಮಾಡಿದ್ದರಂತೆ. ಆದರೆ ಒಂದು ತರಹದ ಮೂಡಿ ಆಸಾಮಿ. ಆಟಕ್ಕೆ ಬಂದರೆ ಬಂದರು, ಇಲ್ಲದಿದ್ದರೆ ಇಲ್ಲ. ನಂಬುವಂತಿಲ್ಲ. ಎಲ್ಲಾದರೂ, ಯಾರ ಮನೆಯಲ್ಲಾದರೂ ಉಳಿದರು ಅಂದರೆ, ಆಟಕ್ಕೆ ಕೈಕೊಟ್ಟರು ಅಂತಲೇ ಲೆಕ್ಕ.

ಅವರ ಹೆಂಡತಿ ಬಸುರಿಯಾಗಿದ್ದಾಗಲೇ ತೀರಿಕೊಂಡರಂತೆ. ಆಮೇಲೆ ಅವರು ಮದುವೆಯಾಗಲಿಲ್ಲ. ಒಂಟಿ ಬಾಳು. ಎಲ್ಲೆಲ್ಲೋ ಹೋಗುತ್ತಿದ್ದರು. ಹೋಗಿ ನಾಲ್ಕಾರು ದಿನ ಇರುತ್ತಿದ್ದರು. ನಾನು ನೋಡುವಾಗಲೇ ಅವರಿಗೆ ಸುಮಾರು ಎಪ್ಪತ್ತರ ಮೇಲೆ ವಯಸ್ಸಾಗಿತ್ತು. ದಾರಿಯಲ್ಲಿ ಹೋಗುವಾಗ ಮೈ ತೇಲುತ್ತಿತ್ತು. ಗದ್ದೆಯ ಅಂಚಿನಲ್ಲಿ ಅವರು ನಡೆಯುತ್ತಿದ್ದರೆ, ಎಲ್ಲಿ ಬೀಳುತ್ತಾರೋ ಎಂದು ಭಯವಾಗುತ್ತಿತ್ತು. ಆದರೆ “ನಮ್ಮ ಮನೆಯಲ್ಲೇ ಇರಿ. ಎಲ್ಲಿಗೆ ಹೋಗುತ್ತೀರಿ?” ಎಂದರೆ ಅವರು ಕೇಳುವವರಲ್ಲ. ಹೊರಡಬೇಕು ಅನ್ನಿಸಿದಾಗ, ಅವರ ಒಂದು ಬಟ್ಟೆಯ ಚೀಲದ ಗಂಟನ್ನು ಬಗಲಿಗಿರಿಸಿಕೊಂಡು, ಸಣ್ಣಗೆ ನಗುತ್ತಾ, “ ನಾನ್ ಬರ್ತೆ” ಎನ್ನುತ್ತಾ ಒಂದು ಜಲ್ಲನ್ನು ಊರಿಕೊಂಡು, ಹೊರಟೇ ಬಿಡುತ್ತಿದ್ದರು. ಅವರು ಹಾಲಾಡಿಯಲ್ಲಿ ಒಬ್ಬ ವೇಶ್ಯೆಯ ಮನೆಯಲ್ಲೂ ಇರುತ್ತಿದ್ದರು. “ಅಲ್ಲಿಗೆಲ್ಲಾ ಯಾಕೆ ಹೋತ್ರಿ ಮರ್ರೆ?” ಅಂದರೆ, ಸುಮ್ಮನೇ ಒಂದು ನಗು ಅಷ್ಟೆ. ಅವರ ಜೀವಿತದ ಕೊನೆಯ ಕಾಲದಲ್ಲಿ, ಕಾಲು ನೋವಾಗಿ, ಹುಣ್ಣಾಗಿ, ಹಾಸಿಗೆಯ ಮೇಲೆ ಮಲಗಿಯೇ ಇದ್ದಾಗಲೂ, ಆ ಹೆಂಗಸೇ ಅವರನ್ನು ಚೆನ್ನಾಗಿ ಸೇವೆಮಾಡಿ ನೋಡಿಕೊಂಡದ್ದಂತೆ.

(ಮುಂದುವರಿಯುವುದು)

ಸೋಮವಾರ, ಅಕ್ಟೋಬರ್ 16, 2017

ದಿನೇಶ ಉಪ್ಪೂರ:

*ನನ್ನೊಳಗೆ*

ಭಾಗ 29

ಅಪ್ಪಯ್ಯನಿಗೆ ಕಾಲು ಸ್ವಲ್ಪ ಮಟ್ಟಿಗೆ ಗುಣವಾಗಿ, ಆ ವರ್ಷ ನವಂಬರ್ ಹೊತ್ತಿಗೆ ಮೇಳ ಪ್ರಾರಂಭವಾಗುತ್ತಿದ್ದಂತೆಯೇ ಮೇಳಕ್ಕೆ ಹೋದುದರಿಂದ, ನಾನು ಬೆಂಗಳೂರಿಗೆ ಹೋದೆ. ಅಲ್ಲಿ ಅಣ್ಣನ ಮನೆಯಲ್ಲಿದ್ದುಕೊಂಡೇ ಗುರುನರಸಿಂಹ ಕಲ್ಯಾಣ ಮಂದಿರದಲ್ಲಿ, ಅಣ್ಣನಿಗೆ ಸಹಾಯಕನಾಗಿ  ಮೂರು ತಿಂಗಳು ಕೆಲಸ ಮಾಡಿದ್ದಾಯಿತು. ನಂತರ ಅತ್ತಿಗೆಯ ಅಕ್ಕನ ಮಗ ದೀಪುವಿನ ಜೊತೆಗೂ ಅಲ್ಲಲ್ಲಿ ಅರ್ಜಿ ಹಾಕಿ ಕೆಲಸಕ್ಕಾಗಿ ಅಲೆದಾಡಿದೆ. ಪ್ರಯೋಜನವಾಗಲಿಲ್ಲ. ಮನೆಮನೆಗೆ ಹಾಲುಕೊಡುವುದಾದರೆ ಬಾ ಎಂದು ಅವನ ಸ್ನೇಹಿತರೊಬ್ಬರು ಕರೆದರು. ಅದಕ್ಕೂ ಸೈ ಎಂದು ಒಂದೆರಡು ದಿನ ಅವರೊಟ್ಟಿಗೂ ಹೋದೆ. ಆದರೆ ಅದು ನನಗೆ ಹಿಡಿಸದ ಕೆಲಸ ಅನ್ನಿಸಿ ಮತ್ತೆ ಹೋಗಲಿಲ್ಲ. ಶಂಕರನಾರಾಯಣದ ಸಮೀಪದ ಕೊಂಡಳ್ಳಿಯ ರಂಗನಾಥ ಎನ್ನುವವರ ಪರಿಚಯವಾಗಿ ಅವರೊಂದಿಗೆ ಪಿಯರ್ಲೆಸ್ ಎಂಬ ಇನ್ಸುರೆನ್ಸ್ ಪಾಲಿಸಿ ಮಾಡುವ ಉದ್ಯೋಗವನ್ನು ಮಾಡುತ್ತಾ ನಾಲ್ಕಾರು ದಿನ ಅವರೊಂದಿಗೆ ಓಡಾಡಿದೆ. ನರಸಿಂಹ ಹಂದೇರು ಎಂಬ ಅಣ್ಣನ ಸ್ನೇಹಿತರು, ಅವರ ಅಂಗಡಿಯ ಸಮೀಪದ ಜನಾರ್ದನ ಲಾಡ್ಜ್ ಗೆ ಬಂದ ಉದ್ಯಮಿಯೊಬ್ಬರನ್ನು ಪರಿಚಯ ಮಾಡಿಕೊಂಡು, ನನ್ನ ಬಗ್ಗೆ ಹೇಳಿ ಅವರನ್ನು ಕೆಲಸಕ್ಕಾಗಿ ಸಂದಿಸುವಂತೆ ಮಾಡಿದರು. ಅವರು ಇಂಗ್ಲೀಷಿನಲ್ಲಿ ಕೇಳಿದ ಪ್ರಶ್ನೆಗೆ, ನಾನು ಉತ್ತರಿಸಲು ತಡವರಿಸಿದೆ. ಅಲ್ಲಿಯೂ ಆಯ್ಕೆಯಾಗಲಿಲ್ಲ.

ಮುಂದೆ ದೀಪುವಿನ ಸ್ನೇಹಿತರೊಬ್ಬರ ಮೂಲಕ ಮಾರ್ಕೇಟ್ ಹತ್ತಿರದ ಒಂದು ಹಿಟ್ಟಿನ ಗಿರಣಿಯಲ್ಲಿ ಲೆಕ್ಕಬರೆಯುವ ಕೆಲಸ ಸಿಕ್ಕಿತು. ತಿಂಗಳಿಗೆ ಮುನ್ನೂರು ರೂಪಾಯಿ ಸಂಬಳ. ಅದಕ್ಕೆ ಒಪ್ಪಿ ಅಲ್ಲಿ ಕೆಲಸ ಮಾಡಲುತೊಡಗಿದೆ. ಅಂಗಡಿಯಲ್ಲಿ ಮತ್ತು ಹೊರಗಡೆ ಎಲ್ಲಾ ಹಿಟ್ಟಿನ ಧೂಳು. ಅಲ್ಲಿ ವೃದ್ಧರೊಬ್ಬರು ಸುಮಾರು ಮುವ್ವತ್ತು ಮುವ್ವತ್ತೈದು ವರ್ಷದಿಂದ ಕೆಲಸ ಮಾಡುತ್ತಿದ್ದರು. ಆದರೆ ಅವರಿಗೆ ಸಂಬಳ ತುಂಬಾ ಕಡಿಮೆ ಇತ್ತು. ಅವರು ಕನ್ನಡಕದ ಮೇಲ್ಬದಿಯಿಂದ ನೋಡುತ್ತಾ, ಯಾವಾಗಲೂ ಗೊಣಗುತ್ತಾ ಅವರ ಸಮಸ್ಯೆಗಳನ್ನೇ ಹೇಳುತ್ತಾ ಕಾಲತಳ್ಳುತ್ತಿದ್ದರು. ಅವರಿಗೆ ನಗುವೇ ಗೊತ್ತಿಲ್ಲವೇನೋ ಎಂಬಷ್ಟು ಗಂಭೀರವಾಗಿರುತ್ತಿದ್ದರು. ಹಾಗೂ ಹೀಗೂ ಒಂದು ತಿಂಗಳು ಕೆಲಸ ಮಾಡಿದ್ದಾಯಿತು. ಇನ್ನೇನು ಸಂಬಳದ ದಿನ ಬಂತು ಎನ್ನುವಾಗ ಆ ಕೆಲಸವೂ ಬೇಡ ಅನ್ನಿಸಿತು. ಅದೇ ಸಮಯಕ್ಕೆ ಉಡುಪಿಯಲ್ಲಿ ಜೋಡಾಟ ಇದೆ ಎಂದು ತಿಳಿದು, ನಾನೂ ಜೋಡಾಟ ನೋಡುವ ಹುರುಪಿನಿಂದ ಅಣ್ಣನ ಹತ್ತಿರ ಹೇಳಿ ಸೀದಾ ಊರಿಗೆ ಬಂದೆ. ನನ್ನ ಜೀವನದ ಮೊದಲ ದುಡಿಮೆಯ ತಿಂಗಳ ಸಂಬಳವನ್ನೂ ತೆಗೆದುಕೊಳ್ಳಲಿಲ್ಲ.

1984 ರ ಎಪ್ರಿಲ್ 11 ರಂದು ನಡೆದ ಹಿರೇಮಾಲಿಂಗೇಶ್ವರ ಮೇಳ ಮತ್ತು ಮೂಲ್ಕಿ ಮೇಳದ ಜೋಡಾಟ ಅದು. ಮೂಲ್ಕಿ ಮೇಳದಲ್ಲಿ ನೆಲ್ಲೂರು ಮರಿಯಪ್ಪ ಆಚಾರ್ ರವರ ಭಾಗವತಿಕೆ. ಅಪ್ಪಯ್ಯ, ಧಾರೇಶ್ವರರೊಂದಿಗೆ ನಮ್ಮ ಹಿರೇಮಾಲಿಂಗೇಶ್ವರ ಮೇಳದಲ್ಲಿ. ಮೂಲ್ಕಿ ಮೇಳದಲ್ಲಿ ಜಗನ್ನಾಥ ಶೆಟ್ಟಿಯವರ ಕರ್ಣ ಆದರೆ, ನಮ್ಮ ಮೇಳದಲ್ಲಿ ಗೋಡೆ ನಾರಾಯಣ ಹೆಗಡೆಯವರ ಕರ್ಣ. ಸಾಕಷ್ಟು ನಿಯಮಾವಳಿಗಳನ್ನು ರೂಪಿಸಿಕೊಂಡು ಜಗಳ, ಗಲಾಟೆ ಆಗದಂತೆ ವ್ಯವಸ್ಥಾಪಕರು, ಸಾಕಷ್ಟು ಜಾಗ್ರತೆ ಮಾಡಿದ್ದರೂ ಮುಸುಕು ಹಾಕಿಕೊಂಡು ಆಚೆಗಿನ ಕಲಾವಿದರು ಈಚಿಗೆ, ಈಚಿನ ಕಲಾವಿದರು ಆಚೆಗೆ, ಕದ್ದು ಹೋಗಿ ಏನು ಹೊಸದು ಮಾಡುತ್ತಾರೆ ಎಂದು ನೋಡುತ್ತಿದ್ದರು. ನಮ್ಮ ಮೇಳದಲ್ಲಿ ಜೋಡಾಟದ ಹುಡಿಹಾರಿಸುವ ಕಲಾವಿದರು ಇಲ್ಲದಿದ್ದರೂ, ಇದ್ದ ಕಲಾವಿದರನ್ನೇ ಹುರಿದುಂಬಿಸಿ, ಬೇಕುಬೇಕಾದ ಸೂಚನೆಗಳನ್ನು ಕೊಟ್ಟು, ನಾಲ್ಕಾರು ದಿನಗಳಿಂದ ತಯಾರಿ ನೆಡೆಸಿ. ಅಂದು ರಾತ್ರಿ ಇಡೀ ರಂಗಸ್ಥಳದಲ್ಲಿ ಇದ್ದು ಕೆಲಸ ಮಾಡಿ, ಛಲತೊಟ್ಟು ಮೇಳದ ಜೋಡಾಟದಲ್ಲಿ ನಮ್ಮ ಮೇಳವನ್ನು ಗೆಲ್ಲಿಸಿ ಮರ್ಯಾದೆಯನ್ನು ಉಳಿಸಿದ, ಕೀರ್ತಿ ಅಪ್ಪಯ್ಯನಿಗೆ ಸಂದಿತು. ಅದೇ ಅಪ್ಪಯ್ಯನ ಕೊನೆಯ ಭಾಗವತಿಕೆಯಾಯಿತು.

ಮರುದಿನ ಕುಂದಾಪುರದಲ್ಲಿ ಆಟ, ಭಸ್ಮಾಸುರ ಮೋಹಿನಿ, ವಿಶೇಷ ಆಕರ್ಷಣೆಯಾಗಿ ಚಿಟ್ಟಾಣಿಯವರ ಭಸ್ಮಾಸುರದ ಎದುರು, ಕುಮಾರಿ ಸುಜಾತಳ (ಸುಬ್ರಮಣ್ಯ ಧಾರೇಶ್ವರರ ಹೆಂಡತಿ) ಮೋಹಿನಿ. ಜೋಡಾಟ ಮುಗಿಸಿ ಅಪ್ಪಯ್ಯ, ದಣಿದಿದ್ದರೂ, ಮನೆಗೆ ಬಂದು ಜೋಡಾಟದ ವಿಷಯವನ್ನು ಹೇಳಿ ನಗುತ್ತಾ, “ ಕಂಡ್ರ್ಯಾ? ನಾವು ಬಿಟ್ಟ್ ಕೊಡೂದುಂಟಾ? ಹೇಗಾಯ್ತು? ಎಂದು ಯುದ್ಧದಲ್ಲಿ ಗೆದ್ದ ವೀರರಂತೆ ಗೆಲುವಿನಿಂದ ಮಾತಾಡಿದರು.  ಮಧ್ಯಾಹ್ನ ಊಟಮಾಡಿ, ನಂತರ ಮಲಗಿ ಸ್ವಲ್ಪ ವಿಶ್ರಾಂತಿಯನ್ನೂ ಪಡೆದರು. ಸಂಜೆ ಕುಂದಾಪುರದ ಆಟಕ್ಕೆ ಹೊರಟವರು, ನನ್ನನ್ನು ಕರೆದು “ಆಟಕ್ ಬತ್ಯಾ ಮಾಣಿ? ಬಪ್ದಾದ್ರೆ ಹೊರಡು” ಎಂದರು. ನನಗೆ ಜೋಡಾಟದ ನಿದ್ದೆಯ ಮಂಪರು ಇಳಿದಿರಲಿಲ್ಲ. “ಇವತ್ತು ಬತ್ತಿಲ್ಲೆ, ನೀವ್ ಹೋಯಿನಿ, ಆ ಚಿಟ್ಟಾಣಿಯ ಭಸ್ಮಾಸುರ ಕಂಡ್ ಕಂಡ್ ಸಾಕಾಯ್ತ್” ಎಂದು ಮನೆಯಲ್ಲಿಯೇ ಉಳಿದೆ.

ವಿಧಿಯ ಆಟ. ನಾನು ಆ ದಿನ ಅವರೊಂದಿಗೆ ಹೋಗಿದ್ದರೆ ಅಪ್ಪಯ್ಯನ ಅಂತಿಮ ಕ್ಷಣದಲ್ಲಿ ಅವರೊಂದಿಗೆ ಇರುವ ಅವಕಾಶವಾದರೂ ಸಿಗುತ್ತಿತ್ತು. ಅದೇ ದಿನ, ಅಪ್ಪಯ್ಯ ರಂಗಸ್ಥಳಕ್ಕೆ ಹೋಗುವ ಮೊದಲು ಎಂದಿನಂತೆ ಮುಖ ಮಾರ್ಜನ ಮಾಡಿ, ಕಚ್ಚೆ ಹಾಕಿ ಪಂಚೆ ಉಟ್ಟು, ಜುಬ್ಬ ತೊಟ್ಟು ಚೌಕಿಯಲ್ಲಿ ಕನ್ನಡಿ ಎದುರು ಕುಳಿತು, ತಲೆಗೆ ಕೆಂಪು ಮುಂಡಾಸನ್ನು ಕಟ್ಟಿಕೊಳ್ಳುತ್ತಿರುವಾಗ ಎದೆನೋವು ಬಂದು, ಕುಳಿತಲ್ಲೇ ಎದೆ ಹಿಡಿದುಕೊಂಡು ಹಿಂದಕ್ಕೆ ಬಿದ್ದುಬಿಟ್ಟರಂತೆ. ಜನ ಸೇರಿದರು. “ಏನಾಯ್ತು ಉಪ್ಪೂರರೇ?” ಎಂದು ಆದರಿಸಿ ಕುಳ್ಳಿರಿಸಿದರು. “ಏನೋ, ಸ್ವಲ್ಪ ಎದೆ ನೋಯಿತ್ತಪ. ಹೋತ್ ಬಿಡಿ. ರಂಗಸ್ಥಳಕ್ ಹೋಪು ಹೊತ್ ಆಗಿಯೇ ಹೋಯ್ತಲ್ಲ. ಸ್ವಲ್ಪ ಸುಧಾರಿಸಿಕೊಂಡು ರಂಗಸ್ಥಳಕ್ಕೆ ಹೋಗ್ತೆ” ಅಂದರು ಅಪ್ಪಯ್ಯ. ಆದರೆ ದೇವರ ಇಚ್ಛೆಯೇ ಬೇರೆ ಇತ್ತು. ಸುದ್ಧಿ ತಿಳಿದು ಗುರುತಿನವರೆಲ್ಲ ಚೌಕಿಗೆ ಬಂದರು. ಅವರ ಪರಿಸ್ಥಿತಿಯನ್ನು ನೋಡಿ ಪರೀಕ್ಷೆ ಮಾಡಿದ ಒಬ್ಬ ಡಾಕ್ಟರ್ ರು, ಕೂಡಲೇ ಮಣಿಪಾಲಕ್ಕೆ ಕರೆದೊಯ್ಯಬೇಕೆಂದು ತಿಳಿಸಿದರು. ಚಿಟ್ಟಾಣಿಯವರನ್ನು ಕುಣಿಸಲು ತಯಾರಾಗಿ ರಂಗಸ್ಥಳಕ್ಕೆಂದು ಹೊರಟ ಅವರನ್ನು, ಕೂಡಲೆ ವ್ಯಾನಿನಲ್ಲಿ ಮಣಿಪಾಲದ ಆಸ್ಪತ್ರೆಗೆ ಕರೆದುಕೊಂಡು ಹೋದರು. ಹೋಗುವಾಗ ಎದೆ ನೋವು ಇದ್ದರೂ, “ತಡಿನಿ. ಎರಡು ಪದ್ಯ ಹೇಳಿ ಬತ್ತೆ. ಇಲ್ದಿದ್ರೆ ಜನ ಗಲಾಟೆ ಮಾಡೂರ್” ಅಂದರಂತೆ.

ಬೆಳೆಗ್ಗೆಯ ಹೊತ್ತಿಗೆ ಮನೆಯಲ್ಲಿದ್ದ ನಮಗೆಲ್ಲಾ ಸುದ್ಧಿ ಬಂತು, ನಾವೂ ಕೂಡಲೇ ಹೊರಟು, ಮಣೂರಿನ ಅಕ್ಕನ ಮನೆಗೆ ಬಂದೆವು, ಅಲ್ಲಿಂದ ಮಣಿಪಾಲಕ್ಕೆ ಅಕ್ಕನೊಂದಿಗೆ ಹೊರಡುವುದು ನಮ್ಮ ಆಲೋಚನೆಯಾಗಿತ್ತು. ಆದರೆ ಅಷ್ಟರಲ್ಲಿ ಮಣಿಪಾಲಕ್ಕೆ ಹೋಗಿ ಬಂದ, ಶ್ರೀಧರ ಅಣ್ಣಯ್ಯ, ಭಾವಯ್ಯ, “ಈಗ ಸ್ವಲ್ಪ ಅಡ್ಡಿ ಇಲ್ಲ. ಇನ್ನು ಇಪ್ಪತ್ತನಾಲ್ಕು ಗಂಟೆಯ ಒಳಗೆ ಪುನಹ ಹಾರ್ಟ್ ಎಟ್ಯಾಕ್ ಆಗದಿದ್ದರೆ ತೊಂದರೆ ಇಲ್ಲವಂತೆ. ಒಬ್ಸರ್ವೇಶನ್ ನಲ್ಲಿ ಇಟ್ಟಿದ್ದಾರೆ” ಅಂದರು. ಆಗ ನಾವೂ “ಹಾಗಾದರೆ ನಿಧಾನವಾಗಿ ಹೋದರಾಯಿತು” ಎಂದು ಕೋಟದಲ್ಲೆ ಉಳಿದೆವು.

ಆದರೆ ಮಧ್ಯಾಹ್ನ ಎರಡು ಗಂಟೆಗೆ ಹೊತ್ತಿಗೆ ಪುನಹ ಹಾರ್ಟ್ ಎಟ್ಯಾಕ್ ಆಗಿ “ಅಪ್ಪಯ್ಯ ಹೋದರು” ಎಂಬ ವಾರ್ತೆ ಸಿಕ್ಕಿತು. ನಾವೆಲ್ಲ ಏಳು ಮಂದಿ ಗಂಡುಮಕ್ಕಳು ಇದ್ದರೂ, ಸಾಯುವ ಆ ಕೊನೆಯ ಕಾಲಕ್ಕೆ ನಾವು ಯಾರೂ ಅವರ ಬಳಿ ಇರಲಿಲ್ಲ. ಅವರು ಸಾಕಿದ ಮಗ, ಚಂದ್ರ ಭಟ್ರು ಮಾತ್ರ ಇದ್ದರು. ಅವರೇ ಅಪ್ಪಯ್ಯನ ಬಾಯಿಗೆ ನೀರು ಬಿಡಬೇಕಾಯಿತು. ಹೆಣವನ್ನು ಅಂದು ರಾತ್ರಿಯೇ ಮನೆಗೆ ಹೊತ್ತು ತಂದರು.  ಹಿಂದೆಯೇ ಹಲವಾರು ಜನ ಅಭಿಮಾನಿಗಳೂ ಬಂದಿದ್ದರು. ನಮ್ಮ ಮನೆಯವರೆಗೆ ರಸ್ತೆ ಇರಲಿಲ್ಲ. ಹಾಡಿಯಲ್ಲಿ, ಬೈಲುಗದ್ದೆಯ ಅಂಚಿನಲ್ಲಿ, ಹೊಳೆಗೆ ಹಾಕಿದ ಸಂಕವನ್ನು ದಾಟಿಕೊಂಡು ಮೂರು ಮೈಲಿ ನಡೆದುಕೊಂಡೇ ಬರಬೇಕು. ಸುದ್ಧಿ ತಿಳಿದ ಅಪ್ಪಯ್ಯನ ಅಭಿಮಾನಿಗಳು ರಾತ್ರಿಯಾಗಿದ್ದರೂ, ಆ ಕತ್ತಲಲ್ಲಿ ಮನೆಯನ್ನು ಹುಡುಕಿಕೊಂಡು, ಗುಂಪು ಗುಂಪಾಗಿ ಅವರ ಅಂತಿಮ ದರ್ಶನಕ್ಕಾಗಿ ಬರತೊಡಗಿದರು. ಪುರೋಹಿತರು “ಮಕ್ಕಳೆಲ್ಲ ಹತ್ತಿರವೇ ಇದ್ದಾರಲ್ಲ. ಕಾಯುವುದು ಬೇಡ. ಮುಂದುವರಿಸುವ” ಅಂದರು. “ಮೂಗಿನಲ್ಲಿ ರಕ್ತ ಬರುತ್ತಿದೆ ಕಾಯುವುದು ಸರಿಯಲ್ಲ” ಎಂದು ಇನ್ನು ಯಾರೋ ಹೇಳಿದರು. ಹಾಗಾಗಿ ಬೆಂಗಳೂರಿನಲ್ಲಿ ಇದ್ದ ಇಬ್ಬರು ಮಕ್ಕಳು ಬರುವವರೆಗೂ ಕಾಯುವುದೂ ಸಾಧ್ಯವಾಗಲಿಲ್ಲ. ಅಂದು ಮಧ್ಯರಾತ್ರಿಯ  ಹೊತ್ತಿಗೆ ಅಪ್ಪಯ್ಯನ ದೇಹವನ್ನು ಚಿತೆಯ ಮೇಲಿಟ್ಟು, ನೆರೆದ ನೂರಾರು ಜನರ ಸಮಕ್ಷಮದಲ್ಲಿ  ಬೆಂಕಿ ಇಟ್ಟು ಅವರನ್ನು ಮರಳಿ ಬಾರದ ಲೋಕಕ್ಕೆ, ಭಾರದ ಹೃದಯದಿಂದ ಮೌನವಾಗಿ ಕಳಿಸಿಕೊಟ್ಟೆವು. ಬೆಳಗ್ಗಿನವರೆಗೂ ಜನ ಬರುತ್ತಲೇ ಇದ್ದರು. “ಸ್ವಲ್ಪ ಕಾಯಬೇಕಿತ್ತು. ಕೊನೆಯಲ್ಲಿ ಅವರ ಮುಖವನ್ನು ನೋಡಲಿಕ್ಕೂ ಅವಕಾಶವಿಲ್ಲದ ಹಾಗಾಯಿತು” ಎಂದು ಹಲವರು ದುಃಖಿಸುತ್ತಾ ಹಿಂದೆ ಹೋದರು.

(ಮುಂದುವರಿಯುವುದು)

ಭಾನುವಾರ, ಅಕ್ಟೋಬರ್ 15, 2017

ದಿನೇಶ ಉಪ್ಪೂರ:

*ನನ್ನೊಳಗೆ*

ಭಾಗ 28

ಸುಮಾರು ಅದೇ ಸಮಯದಲ್ಲಿ, ಅಪ್ಪಯ್ಯ ಹಿಂದಿನ ದಿನದ ಆಟ ಮುಗಿಸಿ ಉತ್ತರ ಕನ್ನಡದಿಂದ ಕೋಟಕ್ಕೆಂದು ಹೊರಟವರು, ಬಸ್ಸು ಸಿಕ್ಕದೇ ಇದ್ದುದರಿಂದ ಲಾರಿಯನ್ನು, ಅದರ ಬಾಗಿಲನ್ನು ಹಿಡಿದುಕೊಂಡು ಹತ್ತುವಾಗ ಆಯತಪ್ಪಿ ಕಾಲು ಜಾರಿ ಕೆಳಕ್ಕೆ ಬಿದ್ದರು. ಬಿದ್ದ ಹೊಡೆತಕ್ಕೆ ಬಲಕಾಲು ತಿರುಚಿಹೋಯಿತು. ಆ ನೋವಿನಲ್ಲೇ ಕೋಟಕ್ಕೆ ಬಂದು ಡಾಕ್ಟರನ್ನು ನೋಡಿದಾಗ, ಕಾಲಿನ ಪಾದದ ಹತ್ತಿರ ಮೂಳೆಯು ಬಿರುಕು ಬಿಟ್ಟಿದೆ ಎಂದು ಎಕ್ಸ್ ರೇಯಲ್ಲಿ ಗೊತ್ತಾಯಿತು. ಹಾಗೆಯೇ ಅಲ್ಲಿ ಆಸ್ಪತ್ರೆ ಸೇರಿ ಶುಶ್ರೂಷೆ ಪಡೆದು ಬ್ಯಾಂಡೇಜು ಹಾಕಿಸಿಕೊಂಡರೂ ಬಹಳ ಸಮಯದವರೆಗೆ ನೋವು ಕಡಿಮೆಯಾಗಲಿಲ್ಲ. ಡಾಕ್ಟರ್ ರು “ವರ್ಷವಾಯಿತಲ್ಲ ಮೂಳೆ ಕೂಡಿಕೊಳ್ಳಲು ಸಮಯ ಹಿಡಿಯುತ್ತದೆ” ಎಂದರು. ಆ ವರ್ಷದ ಮೇಳದ ನಂತರದ ತಿರುಗಾಟಕ್ಕೆ ಹೋಗಲಿಕ್ಕಾಗಲಿಲ್ಲ. ಆಗ ನಾನೂ ಡಿಗ್ರಿ ಮುಗಿಸಿ ಮನೆಯಲ್ಲಿ ಇದ್ದುದರಿಂದ ಅವರ ಸೇವೆಯಲ್ಲಿ ತೊಡಗಿಸಿಕೊಳ್ಳುವ ಅವಕಾಶವು ನನಗೆ ಒದಗಿತು.

ಅಪ್ಪಯ್ಯನ ಜೊತೆಗೆ ಅವರಿಗೆ ಸಹಾಯಕನಾಗಿ ಅವರು ಹೋದಲ್ಲೆಲ್ಲಾ ನಾನೂ ಹೋಗಬೇಕಾಯಿತು. ಅವರಿಗೆ ನೋವು ಹೆಚ್ಚಾದಾಗ ಕಾಲು ಊರಲೇ ಆಗದ ಪರಿಸ್ಥಿತಿಯಲ್ಲಿ ಕೋಟ ಮಣೂರಿನ, ನನ್ನ ಅಕ್ಕನ ಮನೆಯಲ್ಲಿ ಅವರು ಇದ್ದರು. ಅವರಿಗೆ ಸ್ನಾನ ಮಾಡಿಸಲು, ಕಕ್ಕಸುಮನೆಯವರೆಗೆ ಬೆನ್ನಿನ ಮೇಲೆ ಉಪ್ಪಿನ ಮೂಟೆಯಂತೆ ಇರಿಸಿ ಎತ್ತಿಕೊಂಡು ಹೋಗಲೂ, ನಾನೇ ಜೊತೆಗೆ ನಿಂತೆ. ಅವರ ಜೊತೆಗೆ ಎಲ್ಲಾ ತಿರುಗಾಟಕ್ಕೂ ಜೊತೆಯಾಗಿ ಹೋಗುತ್ತಿದ್ದೆ. ಅವರಿಗೆ ಸಹಾಯವಾಗಲಿ ಎಂದು ಅವರ ಬ್ಯಾಗ್, ಕೊಡೆ ಹಿಡಿದುಕೊಳ್ಳುವುದು, ಬಸ್ಸು ಹತ್ತಲು ಸಹಾಯ ಮಾಡುವುದು ಮಾಡುತ್ತಾ, ಅವರ ಹಿಂದೆಯೇ ತಿರುಗುತ್ತಿದ್ದೆ. ಆಗ ಕಾರ್ಕಳ ವೆಂಕಟರಮಣ ದೇವಸ್ಥಾನ, ಕುಂದಾಪುರ ವೆಂಕಟರಮಣ ದೇವಸ್ಥಾನ, ಇತ್ಯಾದಿ ಕಡೆಗಳಲ್ಲಿ ಶೇಣಿಯವರು, ದೊಡ್ಡ ಸಾಮಗರು, ರಾಮದಾಸ ಸಾಮಗರು, ತೆಕ್ಕಟ್ಟೆ ಆನಂದ ಮಾಸ್ತರ್ ರವರು, ಪ್ರಭಾಕರ ಜೋಷಿಯವರು ಮತ್ತು ಪೆರ್ಲ ಕೃಷ್ಣಭಟ್ರು ಮುಂತಾದ ಮಹಾ ಮಹಾ ಕಲಾವಿದರ ಅರ್ಥದಾರಿಕೆಯಲ್ಲಿ ಹಲವಾರು ತಾಳಮದ್ದಲೆ ನೋಡುವ ಅವಕಾಶ ನನಗೆ ಒದಗಿತ್ತು. ಆಗಿನ ಇಡೀರಾತ್ರಿಯ ತಾಳಮದ್ದಲೆಗಳಲ್ಲಿ ಜೊತೆ ಭಾಗವತರಾಗಿ ಕಾಳಿಂಗ ನಾವಡರೂ, ದಾಮೋದರ ಮಂಡೆಚ್ಚರು, ಬಲಿಪರು ದಾಸ ಭಾಗವತರೂ ಮೊದಲಾದವರು ಇರುತ್ತಿದ್ದರು. ದಾಮೋದರ ಮಂಡೆಚ್ಚರೊಂದಿಗೆ ಕೆಲವು ಕಡೆಗಳಲ್ಲಿ ಒಂದೇ ಪ್ರಸಂಗದಲ್ಲಿ ಅವರೊಂದು ಪದ್ಯ, ಇವರೊಂದು ಪದ್ಯ ಹೇಳಿ ಒಟ್ಟಿಗೇ ಭಾಗವತಿಕೆಯೂ ಆಗುತ್ತಿತ್ತು. ಕಾಳಿಂಗ ನಾವಡರು, ಧಾರೇಶ್ವರರು ಇದ್ದರಂತೂ ತಾಳಮದ್ದಲೆಗಳಲ್ಲಿ ಮೂವರೂ ಒಟ್ಟಿಗೇ ಪದ್ಯಹೇಳಿ ಅದೊಂದು ವಿಶೇಷ ಆಕರ್ಷಣೆಯಾಗಿ ಪ್ರೇಕ್ಷಕರನ್ನು ರಂಜಿಸುತ್ತಿದ್ದರು. ಮದ್ದಲೆಗಾರನಾಗಿ ದುರ್ಗಪ್ಪ ಗುಡಿಗಾರ್ ಹೇಗೂ ಕೋಟದ ಭಾಗವತಿಕೆ ಕೇಂದ್ರದಲ್ಲಿಯೇ ಉಳಿದುಕೊಂಡಿದ್ದು  ಅಪ್ಪಯ್ಯನ ಎಲ್ಲ ಕಾರ್ಯಕ್ರಮಗಳಿಗೂ ಜೊತೆಯಾಗಿ ಮದ್ದಲೆಗಾರನಾಗಿ ಇರುತ್ತಿದ್ದ. ತಾಳಮದ್ದಲೆಯಲ್ಲಿ ಪ್ರಮುಖ ಭಾಗದ ಒಂದೋ ಎರಡೋ ಪದ್ಯಗಳಿಗೆ ಅವನಿಗೆ ಮದ್ದಲೆ ಬಾರಿಸಲು ಸಂಪೂರ್ಣ ಅವಕಾಶವನ್ನು ಕೊಟ್ಟು ಅವನ ವಿದ್ವತ್ತನ್ನು ತೋರಿಸಲು ಅಪ್ಪಯ್ಯ ಅವಕಾಶ ಮಾಡಿಕೊಡುತ್ತಿದ್ದರು. ನಾನು ಸುಮ್ಮನೇ ಇರಬೇಕಲ್ಲ ಅಂತ, ಕೆಲವು ಕಡೆ ಹಾರ್ಮೋನಿಯಂ ಬಾರಿಸಲು ಕುಳಿತುಕೊಳ್ಳುತ್ತಿದ್ದೆ,

ಒಮ್ಮೆ ಮುದ್ರಾಡಿಯಲ್ಲಿ ಒಬ್ಬ ಡಾಕ್ಟರ್ ಅವರ ಹೆಸರು ಎಂ ಎಸ್ ರಾವ್ ಅಂತೆ. ಅಪ್ಪಯ್ಯನನ್ನು ಕರೆಸಿ, ಅವರ ಪದ್ಯಗಳನ್ನು ರೆಕಾರ್ಡ್ ಮಾಡಲು ಅಲೋಚಿಸಿ, ಮುದ್ರಾಡಿಗೆ ಬರಲು ಆಮಂತ್ರಿಸಿದ್ದರು. ಅಂಬಾತನಯ ಮುದ್ರಾಡಿಯವರು ಅಪ್ಪಯ್ಯ ಹಾಡುವ ಪದ್ಯದ ಸಂದರ್ಭ ಮತ್ತು ರಾಗ ತಾಳಗಳ ಹೆಸರಿನ ನಿರೂಪಣೆ ಮಾಡುವುದು ಎಂದು ನಿಶ್ಚಯವಾಗಿತ್ತು. ಮುದ್ರಾಡಿಯ ಒಂದು ಶಾಲೆಯಲ್ಲಿ ಆದ ಕಾರ್ಯಕ್ರಮ ಅದು. ದುರ್ಗಪ್ಪನಿಗೆ ಮುದ್ರಾಡಿಗೇ ಬರಲು ಹೇಳಿದ್ದು, ನಮಗೆ ಮುದ್ರಾಡಿಗೆ ಹೋದ ನಂತರವೇ ಅವನು ಬರಲಿಲ್ಲ ಎಂದು ತಿಳಿಯಿತು. ದುರ್ಗಪ್ಪನಿಗೆ ಅದೇನೋ ಕಾರಣದಿಂದ ಆವತ್ತು ಬರಲು ಅನನುಕೂಲವಾಯಿತು. ಈಗಿನ ಹಾಗೆ ಪೋನೋ ಮತ್ತೊಂದೋ ಅನುಕೂಲಗಳು ಆಗ ಇಲ್ಲದೇ ನಮಗೆ ತಿಳಿಸಲೂ ಅವನಿಗೆ ಆಗಲಿಲ್ಲ. ಆಗಲೇ ಕತ್ತಲಾಗಲು ಶುರುವಾಗಿತ್ತು. ಏನಾದರೂ ಮಾಡುವ ಅಂದರೆ ಮದ್ದಲೆಗಾರರೇ ಇಲ್ಲ. ಹೇಗೆ ಪದ್ಯ ಹೇಳುವುದು?. ಕೊನೆಗೆ ಅಂಬಾತನಯ ಮುದ್ರಾಡಿಯವರು ಹಿರಿಯಡ್ಕಕ್ಕೆ ಜನ ಹೋದರೆ ಗೋಪಾಲ ಬರಬಹುದು ಅಂದರು. ಡಾಕ್ಟರ್ ಒಪ್ಪಿ, ಅವರ ಕಾರನ್ನು ಕಳುಹಿಸಿ ಹಿರಿಯಡ್ಕ ಗೋಪಾಲರನ್ನು ಮದ್ದಲೆಯೊಂದಿಗೆ ಬರಲು ವಿನಂತಿಸಿಕೊಂಡರು. ಗೋಪಾಲರು ರಾತ್ರಿ ಹನ್ನೊಂದು ಗಂಟೆಯ ಸುಮಾರಿಗೆ ಬಂದರು. ನಂತರ ರಾತ್ರಿ ಸುಮಾರು ಎರಡು ಗಂಟೆಯವರೆಗೂ ಬೇರೆ ಬೇರೆ ಪ್ರಸಂಗಗಳಿಂದ ಆಯ್ದ ಹಲವಾರು ಪದ್ಯಗಳನ್ನು ಅಪ್ಪಯ್ಯ ಹೇಳಿದರು. ಡಾಕ್ಟರ್ ರ ಒತ್ತಾಯದ ಮೇರೆಗೆ ಆ ದಿನಗಳಲ್ಲಿ ಕಾಳಿಂಗ ನಾವಡರಿಂದ ಪ್ರಸಿದ್ಧಿಯಾಗಿದ್ದ "ನೀಲಗಗನದೊಳು ಮೇಘಗಳ" ಪದ್ಯವನ್ನೂ ಅಪ್ಪಯ್ಯ ಹಾಡಿದ್ದರು.

ಮತ್ತೊಮ್ಮೆ ಅಪ್ಪಯ್ಯ ಬೆಂಗಳೂರಿನ ಆಟಕ್ಕೆ ಹೋಗಬೇಕಾಯಿತು. ನಾನು ಮತ್ತು ಅಪ್ಪಯ್ಯ ಮರುದಿನ ಬೆಳಗಿನ ಒಳಗೆ ಬೆಂಗಳೂರು ತಲುಪಬೇಕೆಂದು ಆಲೋಚನೆ ಮಾಡಿ ಹಿಂದಿನ ದಿನ ಸಂಜೆಯೇ ಕೋಟದಿಂದ ಹೊರಟವರು, ಸುಮಾರು ಹತ್ತು ಗಂಟೆಯ ಹೊತ್ತಿಗೆ ಶಿವಮೊಗ್ಗ ತಲುಪಿದೆವು. ಆಗ ನೇರವಾಗಿ ಬೆಂಗಳೂರಿಗೆ ಹೋಗುವ ಬಸ್ಸು ಸಿಗಲಿಲ್ಲವೋ ಏನೋ ಸರಿಯಾಗಿ ನೆನಪಾಗುವುದಿಲ್ಲ. ಶಿವಮೊಗ್ಗದಲ್ಲಿ ವಿಚಾರಿಸುವಾಗ ಬೆಳಿಗ್ಗೆ ನಾಲ್ಕರವರೆಗೆ ಬೆಂಗಳೂರಿಗೆ ಬಸ್ಸು ಇಲ್ಲ ಎಂದು ತಿಳಿಯಿತು. ಅಪ್ಪಯ್ಯ ಏನು ಮಾಡ್ವ ಮಾಣಿ, ಹೀಗಾಯಿತಲ್ಲ? ಎಂದು ನನ್ನನ್ನು ಕೇಳಿದರು. ನಾನು “ಕಾಯುವ. ಮತ್ತೇನು ಮಾಡುವುದು?” ಎಂದೆ. ಅಷ್ಟು ರಾತ್ರಿಯಲ್ಲಿ ಯಾವುದೇ ರೂಮು ಹಿಡಿಯುವುದು ಸಾಧ್ಯವಿರಲಿಲ್ಲ. ಅಪ್ಪಯ್ಯನ ಪರಿಚಯ ಇರುವವರು ಶಿವಮೊಗ್ಗದಲ್ಲಿ ಕೆಲವರು ಇದ್ದರೂ ಇಷ್ಟು ರಾತ್ರಿಯ ಹೊತ್ತಿನಲ್ಲಿ ಹೋಗಿ ಉಪದ್ರವ ಕೊಡುವುದು ಸರಿಯಲ್ಲ ಎಂದು ಅಪ್ಪಯ್ಯನಿಗೆ ಅನಿಸಿರಬೇಕು. ಅಲ್ಲಿಯೇ ಬಸ್ ನಿಲ್ದಾಣದ ಎದುರು ಇರುವ ಒಂದು ಹೋಟೇಲಿನ ಹೊರಗಿನ ಜಗುಲಿಯೇ ನಮಗೆ ಆಶ್ರಯದಾಣವಾಯಿತು. ಅಲ್ಲಿಯೇ ಕುಳಿತು ಅದೂಇದೂ ಮಾತಾಡುತ್ತಾ ಆ ರಾತ್ರಿ ಕಾಲಕಳೆದೆವು. ಬೆಳಗ್ಗೆ ಸುಮಾರು ಐದು ಗಂಟೆಗೆ ಬೆಂಗಳೂರಿಗೆ ಹೋಗುವ ಬಸ್ಸೊಂದು ಬಂತು. ಅದರಲ್ಲಿ ಕುಳಿತು ಬೆಳಿಗ್ಗೆ ತಡವಾಗಿ  ಬೆಂಗಳೂರು ತಲುಪಿದೆವು. ಆ ಬೆಳಿಗ್ಗೆಯೇ ಕೆಲವರನ್ನು ಮಾತಾಡಿಸಬೇಕಿತ್ತು ಎಲ್ಲಾ ಹಾಳಾಯಿತಲ್ಲ ಎಂದು ಅಪ್ಪಯ್ಯ ಅಲವತ್ತುಕೊಂಡರು. ಬೆಂಗಳೂರಿನಲ್ಲಿ ಗುರುನರಸಿಂಹ ಛತ್ರದ ಮೆನೇಜರ್ ಆಗಿದ್ದ ಕೃಷ್ಣಮೂರ್ತಿ ಅಣ್ಣಯ್ಯನ ಮನೆಯಲ್ಲಿ ಉಳಿದುಕೊಂಡೆವು.  ಅಂದು ಮುರಳೀಧರ  ಎನ್ನುವವರ ಉಪನಯನದ ಪ್ರಯುಕ್ತ ಸಂಜೆ ಒಂದು ಆಟವನ್ನು ಪ್ರಾಯೋಜಿಸಿದ್ದರು. ಪ್ರಸಂಗ ಬಬ್ರುವಾಹನ ಕಾಳಗ. ಭಾಗವತರಾಗಿ ಧಾರೇಶ್ವರ, ಕಾಳಿಂಗ ನಾವಡರ ಜೊತೆಗೆ ಅಪ್ಪಯ್ಯ ಇದ್ದರೆ, ತೀರ್ಥಹಳ್ಳಿ ಗೋಪಾಲರ ಬಬ್ರುವಾಹನ, ಕೋಟ ವೈಕುಂಠನ ಚಿತ್ರಾಂಗದೆ, ಕೊಳಗಿ ಅನಂತ ಹೆಗಡೆಯವರ ಅರ್ಜುನ, ಮತ್ತು ಸಿರಿಮಠ ಪಂಜು, ಚಂದ್ರ ಭಟ್ರು ಹಳದೀಪುರ ಗಜಾನನ ಭಂಡಾರಿ ಮೊದಲಾದವರು ಇದ್ದು ಪ್ರದರ್ಶನ ತುಂಬಾ ಚೆನ್ನಾಗಿ ಆಗಿತ್ತು. ಅದರಲ್ಲಿ ನಾನೇ ಹಾರ್ಮೋನಿಯಂ ಬಾರಿಸಿದ್ದು, ಆ ದಿನದ ಉಪನಯನದ ಜೊತೆ ಅದನ್ನೂ ವಿಡಿಯೋ ಚಿತ್ರೀಕರಣ ಮಾಡಿರುವುದರಿಂದ ಅದೊಂದು ಅಪ್ಪಯ್ಯನ ಏಕಮಾತ್ರ ವಿಡಿಯೋದ ದಾಖಲೀಕರಣವಾದಂತಾಗಿದೆ.

ಅದೇ ಸಮಯದಲ್ಲಿ ಬೆಂಗಳೂರು ಆಕಾಶವಾಣಿಯಲ್ಲಿಯೂ ಒಂದು ಕಾರ್ಯಕ್ರಮಕ್ಕೆ ಆಹ್ವಾನ ಬಂದಿತ್ತು. ಮರುದಿನ ರೇಡಿಯೋ ಪ್ರೋಗ್ರಾಮ್ ಪ್ರಸಂಗ “ಕಂಸ ವಧೆ”. ಜಲವಳ್ಳಿ ವೆಂಕಟೇಶ ರಾವ್ ರವರ ಕಂಸ, ಹೊನ್ನಪ್ಪ ಗೋಕರ್ಣ ರ ಅಕ್ರೂರ ಕೊಳಗಿ ಅನಂತ ಹೆಗಡೆಯವರ ಕೃಷ್ಣ, ಶಿರಳಗಿ ಭಾಸ್ಕರ ಜೋಷಿಯವರ ಗೋಪಿಕಾ ಸ್ತ್ರೀ. ಅದರಲ್ಲಿ ಕೃಷ್ಣ ಗೋಪಿಕಾಸ್ತ್ರೀಯರನ್ನು ಸಂತೈಸುವ ಸಂದರ್ಭಕ್ಕೆ ನನ್ನ ಮೆಚ್ಚಿನ ಅಪ್ಪಯ್ಯನ ಪದ್ಯ “ಪೋಗಿ ಬರುವೆ ಗೋಪ ನಾಗವೇಣಿಯರೆ”.... ಪದ್ಯವನ್ನು ಅಳವಡಿಸಿದರೆ ಲಾಯಿಕ್ ಆತಿತ್.  ಎಂದು ಹೇಳಿದೆ. ಅವರು ಕೂಡಲೇ ಒಪ್ಪಿ ಆ ಆಕಾಶವಾಣಿ ಕಾರ್ಯಕ್ರಮದಲ್ಲಿ ಆ ಪದ್ಯವನ್ನು ಅಳವಡಿಸಿಕೊಂಡು ತುಂಬಾ ಸೊಗಸಾಗಿ ಹಾಡಿದ್ದರು.

(ಮುಂದುವರಿಯುವುದು)

ಶನಿವಾರ, ಅಕ್ಟೋಬರ್ 14, 2017

ದಿನೇಶ ಉಪ್ಪೂರ:

*ನನ್ನೊಳಗೆ*

ಭಾಗ 27

ಅಂತೂ ಮೂರು ವರ್ಷದ ಡಿಗ್ರಿಯನ್ನು ಆರಾಮವಾಗಿ ಪೂರೈಸಿದೆ. ಓದಿದರೆ ಓದಿದೆ. ಬಿಟ್ಟರೆ ಬಿಟ್ಟೆ. ಡಿಗ್ರಿಯ ಕೊನೆಯ ವರ್ಷದ ಪ್ರಾರಂಭದಲ್ಲಿ ನಮ್ಮ ರೂಮಿನಲ್ಲಿದ್ದ ಮಲಿಯಾಳಿ ಮಿತ್ರನಿಗೆ ಮದುವೆಯಾದ್ದರಿಂದ, ಅವನ ಸಂಸಾರ ಅಲ್ಲಿಗೇ ಬರುತ್ತದೆ ಎಂದು ನಾನು ಮತ್ತು ಗೋಪಿ, ಕೊಡ್ಗಿ ಕಂಪೌಂಡ್ ನ್ನು ಬಿಟ್ಟು, ಚಿಕ್ಕನ್ ಸಾಲ್ ರಸ್ತೆಯಲ್ಲಿರುವ ನಮ್ಮ ಕಾಲೇಜಿನ ಪ್ರಾಧ್ಯಾಪಕರೇ ಆದ ಎ.ಸಿ.ತುಂಗರ ಮನೆಯ ಮಹಡಿಗೆ ನಮ್ಮ ವಾಸ್ತವ್ಯವನ್ನು ಬದಲಿಸಬೇಕಾಯಿತು. ಅಲ್ಲಿ ಸುಬ್ರಮಣ್ಯ ಐತಾಳ ಎನ್ನುವ ಪಡುಕೊಣೆಯ  ಸ್ನೇಹಿತನೊಬ್ಬನೂ ನಮ್ಮ ಜೊತೆಗೆ ಇದ್ದ. ಬರೀ ಪಾಪದ ಹುಡುಗ. ದೊಡ್ಡ ಸೋಡಾ ಗ್ಲಾಸ್ ಹಾಕುತ್ತಿದ್ದ. ಮೆಲ್ಲನೇ ಮಾತಾಡುತ್ತಿದ್ದ. ಹತ್ತು ಮಾತಾಡಿದರೆ ಒಂದು ಮಾತಾಡುವವನು. ಡಿಗ್ರಿಯ ನಂತರ ಬೆಂಗಳೂರಿನ ಯಾವುದೋ ಹೋಟೇಲಿನಲ್ಲಿ ಕ್ಯಾಶಿಯರ್ ಆಗಿ ಕೆಲಸ ಮಾಡುತ್ತಿದ್ದು, ನಂತರ ಸ್ವಲ್ಪ ಅವಧಿಯಲ್ಲಿಯೇ ಕಾಯಿಲೆಯಿಂದ ತೀರಿಕೊಂಡನೆಂದು ಕೇಳಿದೆ.

 ಅಂತಿಮ ವರ್ಷದಲ್ಲಿರುವಾಗ ಬೊಟನಿಕಲ್ ಟೂರ್ ಅಂತ ಊಟಿ ಕೊಡೆಕೆನಲ್ ಗೂ ಹೋದ ನೆನಪು. ಆದರೆ ಆ ಪ್ರವಾಸದ ಕ್ಷಣಗಳು ಯಾವುದೂ ಸರಿಯಾಗಿ ನೆನಪಿಗೆ ಬರುತ್ತಿಲ್ಲ. ಅಂತಿಮ ವರ್ಷದ ಕೆಮೆಸ್ಟ್ರಿ ಪರೀಕ್ಷೆಯ ಹಿಂದಿನ ದಿನ, ಕುಂದಾಪುರ ನರಿಬ್ಯಾಣದಲ್ಲಿ ಅಮೃತೇಶ್ವರೀ ಮೇಳದ “ಮಾಯಾ ಮೃಗಾವತಿ” ಆಟ ಇತ್ತು.  ಅದನ್ನು ಮಿಸ್ ಮಾಡಿಕೊಂಡರೆ ಆ ಆಟ ಮುಂದೆ ಸಿಗುವುದಿಲ್ಲವಲ್ಲ ಎಂದು ಅದಕ್ಕೂ ಹೋಗಿದ್ದೆ. ಆದರೂ ಫೈಲ್ ಆಗದೇ ಮಧ್ಯಮ ತರಗತಿಯಲ್ಲಿ ಪಾಸ್ ಆಗಿಬಿಟ್ಟೆ. ಮುಂದೇನು?. ಮುಂದೆ ಓದಲಿಕ್ಕೆ ಮನಸ್ಸಿಲ್ಲ. ಏನಾದರೂ ಕೆಲಸ ಹಿಡಿಯಬೇಕು. ಅಪ್ಪಯ್ಯ ಇದ್ದಾರಲ್ಲ?. ಅವರಿಗೆ ಎಲ್ಲರ ಪರಿಚಯ ಇದೆ. ಎಲ್ಲಾದರೂ ಒಂದು ಸಿಕ್ಕೀತು ಎಂಬ ಭಾವ.  ಸ್ವಲ್ಪ ದಿನ ಮನೆಯಲ್ಲಿ ಹಾಯಾಗಿ ಕಳೆಯಬೇಕು ಅಂತ ಕಲ್ಲಟ್ಟೆಯ ಅತ್ತೆಯ ಮನೆಯಲ್ಲಿ ಇದ್ದೆ.

 ಕಲ್ಲಟ್ಟೆಯಲ್ಲಿ, ಅತ್ತೆಗೆ ಮಕ್ಕಳಿಲ್ಲದಿರುವುದರಿಂದ ಅವರ ಕೊನೆಯ ಕಾಲದಲ್ಲಿ ಅಪ್ಪಯ್ಯನೇ ಅವರ ಆಗುಹೋಗುಗಳನ್ನು ನೋಡಿಕೊಂಡರು. ಅತ್ತೆಗೋ ಈ ಮುದ್ದಿನ ತಮ್ಮ “ನಾರ್ಣಪ್ಪು” ಅಂದರೆ ಅಷ್ಟು ಆಸೆ. ಮೇಳದಲ್ಲಿದ್ದಾಗ ಚೇರಿಕೆಯ ಮನೆಗೆ ಬಂದವರು, ಕಲ್ಲಟ್ಟೆಗೆ ಬಂದು, ಮಾತಾಡಿಸಿ ಹೋಗದಿದ್ದರೆ ಬೇಸರ ಮಾಡಿಕೊಳ್ಳುತ್ತಿದ್ದರು. ಅಪ್ಪಯ್ಯನಿಗೂ ಒಬ್ಬಳೇ ಅಕ್ಕ. ಅವಳು ಅಂದರೆ ಅಷ್ಟೇ ಅಕ್ಕರೆ.

ಆಗ ನಮ್ಮ ಚಂದ್ರ ಭಟ್ಟರಿಗೆ, ಅಪ್ಪಯ್ಯನೇ ನಮ್ಮ ತಾಯಿಯ ಸಂಬಂಧದ ಕಡೆಯ ಮಾರ್ವಿ ಮಹಾಬಲ ಹೆಬ್ಬಾರರ ಮಗಳನ್ನು ತಂದು ಮದುವೆ ಮಾಡಿಕೊಟ್ಟರು. ಅವರಿಗೆ ಅತ್ತೆಯ ಜೊತೆಯಲ್ಲಿ ಇರಲು ವ್ಯವಸ್ಥೆ ಮಾಡಿಕೊಟ್ಟಿದ್ದರು. ಅವರು, ಅವರ ಹೆಂಡತಿ ಮಕ್ಕಳೂ ಅತ್ತೆಯನ್ನು ನೋಡಿಕೊಂಡು ಕಲ್ಲಟ್ಟೆಯಲ್ಲಿಯೇ ಇದ್ದರು. ಮತ್ತೊಬ್ಬಳು ಸೇಸಿ ಮರಾಠಿ ಎಂಬ ಪ್ರಾಯದ ಹೆಂಗಸೂ, ನಮ್ಮ ಮನೆಗೆ ಬಂದರೆ ವಾರಗಟ್ಟಳೆ ಇದ್ದು, ಉಂಡು ಹೋಗುತ್ತಿದ್ದಳು. ಅವಳೇ, ಚಂದ್ರ ಭಟ್ರ ಹೆಂಡತಿ ಸರಸ್ವತಿ ಅಕ್ಕ, ಅವರ ಎಲ್ಲ ಹೆರಿಗೆ ಮತ್ತು ಮಕ್ಕಳ ಬಾಣಂತನವನ್ನು ನಮ್ಮ ಮನೆಯಲ್ಲೇ ಇದ್ದು ಓಡಾಡಿ ಮಾಡಿದವಳು.

ಅತ್ತೆ ಹೃದಯಾಘಾತದಿಂದ ತೀರಿಕೊಂಡರು. ರಾತ್ರಿ ನಮ್ಮೊಡನೆ ಮಾತಾಡಿ ಮಲಗಿದವರು, ಬೆಳಿಗ್ಗೆ ಏಳುವಾಗ ಉಸಿರಿರಲಿಲ್ಲ. ಸುಖಮರಣ. ಆದರೆ ಬದುಕಿರುವವರೆಗೆ ಅವರು ಆ ಊರಿನ ರಾಣಿಯಂತೆ ಗೌರವಯುತವಾಗಿಯೇ ಬದುಕಿದರು. ಆದರೆ ಅವರಿಗೆ ಮಕ್ಕಳಿರಲಿಲ್ಲ. ಶಂಕರನಾರಾಯಣ ಅಡಿಗರು, ಅವರು ಸಾಯುವ ಮೊದಲು, ಅವರ ಮಕ್ಕಳಿಂದ ಅತ್ತೆಗೆ ತೊಂದರೆ ಆಗದೇ ಇರಲಿ ಎಂದು, ಕಲ್ಲಟ್ಟೆಯ ಆಸ್ತಿ ಮತ್ತು ಮನೆಯು, ಅತ್ತೆಯು ಬದುಕಿ ಇರುವವರೆಗೆ ಅವರ ಅನುಭೋಗಕ್ಕೆ ಹಕ್ಕು ಇರುತ್ತದೆ ಎಂದು ವೀಲು ಬರೆದಿಟ್ಟು ಕಾಲವಾಗಿದ್ದರು.

 ಅತ್ತೆಯು ಸತ್ತಾಗ, ಅಷ್ಟರವರೆಗೆ ಆ ಮನೆಗೆ ಬಂದು ಹೋಗಿ ಮಾಡದೇ ಇದ್ದ, ಶಂಕರನಾರಾಯಣ ಅಡಿಗರ ಮಗನಾದ ಬಾಬು ಅಡಿಗರು ಕುಂದಾಪುರದಲ್ಲಿ ವಕೀಲರಾಗಿದ್ದವರು, ಅತ್ತೆಯ ಅಂತಿಮ ಸಂಸ್ಕಾರದ ಸಮಯದಲ್ಲಿ ಮನೆಗೆ ಬಂದು ನಮ್ಮೊಡನೆ ಸ್ನೇಹದಿಂದಲೇ ಮಾತಾಡಿಸಿ ಹೋಗಿದ್ದರು. ಅತ್ತೆಯ ಗಂಡ ಅಂದರೆ ನಮ್ಮ ಮಾವ ರಾಮಕೃಷ್ಣ ಹೆಬ್ಬಾರರ ಮಗನಾದ ರತ್ನಾಕರ ಎನ್ನುವವರು, ನಮ್ಮ ಅತ್ತೆಯ ಉತ್ತರ ಕ್ರಿಯೆಯನ್ನು ಮಾಡಲು ಒಪ್ಪಿ, ನಮ್ಮ ಮನೆಯಲ್ಲೇ ಇದ್ದು ಎಲ್ಲ ಅಪರಕಾರ್ಯಗಳನ್ನು ಮಾಡಿದ್ದರು.

ಅತ್ತೆಯು ತೀರಿಕೊಂಡ ನಂತರ, ಚೇರಿಕೆಯಲ್ಲಿ ದಾಮೋದರ ಅಣ್ಣಯ್ಯನ ಸಂಸಾರವನ್ನು ಇರಿಸಿ, ಅಪ್ಪಯ್ಯ, ಅಮ್ಮ ಮತ್ತು ನಾವೆಲ್ಲ ಕಲ್ಲಟ್ಟೆಗೆ ಬಂದು ಅಲ್ಲಿ ನೆಲೆಸಿದೆವು. ಮುಂದೆಯೂ ನಾವೇ ಆ ಮನೆಯಲ್ಲಿ ವಾಸವಾಗಿದ್ದೆವು. ಅವರ ಗಂಡ ಶಂಕರನಾರಾಯಣ ಅಡಿಗರು ಕಕ್ಕುಂಜೆ ಗ್ರಾಮದ ಪಟೇಲರಾಗಿದ್ದವರು. ಅವರಿಗೆ ಉಗ್ರಾಣಿಯಾಗಿ ಇದ್ದು, ಸದಾ ಅವರ ಹಿಂದೆ ತಿರುಗುತ್ತಿದ್ದ, ಶೇಷ ಮಡಿವಾಳ ಎನ್ನುವವ, ಅಡಿಗರ ಕಾಲದ ನಂತರವೂ ಕಲ್ಲಟ್ಟೆಯ ನಂಟನ್ನು ಬಿಡಲಿಲ್ಲ. ಆಗಾಗ ಬಂದು ಹೋಗಿ ಮಾಡುತ್ತಿದ್ದ. ಅವನ ಹೆಂಡತಿ ರುಕ್ಕು ಎನ್ನುವವಳಂತೂ ಅತ್ತೆ ಇರುವಾಗ ಆಗಾಗ ನಮ್ಮ ಮನೆಗೆ ಬಂದು, ಒಂದಷ್ಟು ಅದೂ ಇದೂ ಪಟ್ಟಾಂಗ ಹೊಡೆದು, ಊರಿನ ಸುದ್ದಿಯೆಲ್ಲಾ ಮಾತಾಡಿ, ಹಿಂದಿನ ದಿನ ನೆನೆಸಿ ಇಟ್ಟ ನೋಳಿ ಸೊಪ್ಪಿನಲ್ಲಿ ಅತ್ತೆಗೆ ಚೆನ್ನಾಗಿ ತಲೆ ಸ್ನಾನ ಮಾಡಿಸಿ ಉಪಚಾರ ಮಾಡುತ್ತಿದ್ದಳು. ಪ್ರತೀ ವರ್ಷ ದೀಪಾವಳಿಯ ಸ್ನಾನದ ದಿನ ಅವಳೇ, ನಮಗೆಲ್ಲ ಎಣ್ಣೆ ಹಚ್ಚಿ ಸ್ನಾನ ಮಾಡಿಸುತ್ತಿದ್ದಳು. ಹಾಗೆ ಬಂದವಳು ನಮ್ಮ ಮನೆಯಲ್ಲೇ ಮಧ್ಯಾಹ್ನ ಉಂಡು, ಜಗಲಿಯಲ್ಲಿ ಮಲಗಿ, ಸಂಜೆಯವರೆಗೆ ಇದ್ದು ಅತ್ತೆಯಿಂದ ಹಳೆಯ ಸೀರೆ, ತರಕಾರಿ, ತೆಂಗಿನಕಾಯಿ ಅಂತ ಏನಾದರೂ ಬೇಡಿ, ಗೆದ್ದುಕೊಂಡೇ ಹೋಗುತ್ತಿದ್ದಳು.

ಅತ್ತೆ ಇರುವವರೆಗೆ ಸುತ್ತಮುತ್ತಲು ಇದ್ದ ಒಕ್ಕಲುಗಳು, ಮನೆಗೆ ಬಂದು ಹೋಗುತ್ತಾ “ಅಮ್ಮಾ, ಒಂದ್ ವೀಳ್ಯ ಕೊಡಿ ಕಾಂಬ”. ಎಂದು , ಹೊರಗಿನ ಜಗಲಿಯಲ್ಲಿ ಕುಕ್ಕರುಕಾಲಿನಲ್ಲಿ ಕುಳಿತು ಮಾತಾಡಿಸಿ ಹೋಗುತ್ತಿದ್ದರು. “ಅಮ್ಮಾ. ಇಂದು ಪೇಟೆಗೆ ಯಾರೂ ಹೋಪರ್ ಇಲ್ಯೆ. ಒಂದು ಚೂರ್ ಕಾಫಿ ಪುಡಿ ಕೊಡ್ತ್ರ್ಯೆ?. ಸಕ್ಕರೆ ಕೊಡಿನ್ಯೆ ಬೆಲ್ಲ ಕೊಡಿನ್ಯೆ. ಕಡಿಕ್ ತಂದು ಕೊಡತಿ” ಎಂದು ಕಡ ತೆಗೆದುಕೊಂಡು ಹೋಗಿ, ಮತ್ತೆ ಯಾವಾಗಲಾದರೂ ಹಿಂದಿರುಗಿಸುತ್ತಿದ್ದರು. ಅತ್ತೆಯೂ ಅವರ ಸುಖಕಷ್ಟಕ್ಕೆ ಆಗುತ್ತಿದ್ದುದರಿಂದ ಆಗಾಗ ಕೈಗಡವಾಗಿ ಹಣವನ್ನೂ ಕೊಡುತ್ತಿದ್ದರು.

ಆವಾಗಿನ ಒಂದು ಆಕಸ್ಮಿಕ ಬೆಳವಣಿಗೆಯೆಂದರೆ ಇಂದಿರಾಗಾಂಧಿ ಸರಕಾರದ ಒಕ್ಕಲು ಮಸೂದೆ ಕಾನೂನು ಬಂದದ್ದು. ಉಳುವವನೇ ಭೂಮಿಯ ಒಡೆಯ. ನಿಜವಾದ ಅಧಿಕಾರವಿದ್ದ ಯಜಮಾನನಿಗೆ ಭೂಮಿ ಇಲ್ಲ. ಆದರೆ ನಾವು ನಮಗಿದ್ದ ಬೇಸಾಯವನ್ನು ಮಾಡಲು, ಕೆಲಸಕ್ಕೆ ಜನ ಹಾಕಿಕೊಂಡು ಮಾಡಿದರೆ ಅಸಲಾಗುವುದಿಲ್ಲವೆಂದು ಮನೆಯ ಹತ್ತಿರದ ಮರಾಠಿ ಮತ್ತು ಕುಡುಬಿಯರು ಅಂತ ಹತ್ತಾರು ಮನೆಯವರಿಗೆ ಮುಕ್ಕಾಲಂಶ ಗದ್ದೆಗಳನ್ನು ಗೇಣಿಗೆ ಕೊಟ್ಟಿದ್ದು ಅವರು ನಿಷ್ಠೆಯಿಂದ ದುಡಿದು, ವರ್ಷ ವರ್ಷ ಗೇಣಿಯನ್ನು ಕೊಟ್ಟು ನಮ್ಮ ಅತ್ತೆ ಇರುವವರೆಗೆ ಅವರನ್ನು ಗೌರವವಾಗಿಯೇ ಕಾಣುತ್ತಿದ್ದರು.

ಅತ್ತೆಯ ಕಾಲಾನಂತರ ಅದೇ ಅವಧಿಯಲ್ಲಿ ಬಂದ ಒಕ್ಕಲು ಮಸೂದೆ ಕಾಯಿದೆಯು, ಕಲ್ಲಟ್ಟೆಯ ಮನೆಯ ಸ್ಥಿತಿಗತಿಯನ್ನು ಬದಲಾಯಿಸಲು ಬಂದಂತಾಯಿತು. ಒಕ್ಕಲುಗಳೆಲ್ಲಾ ಸ್ವಂತ ಬುದ್ಧಿಯನ್ನು ಬಿಟ್ಟು, ಅವರು  ಬೇಸಾಯ ಮಾಡುತ್ತಿದ್ದ ಗದ್ದೆಗಳೆಲ್ಲಾ, ಅವರದೇ ಎಂದು ಹೇಳಿ ಅದಕ್ಕೆ ಡಿಕ್ಲರೇಶನ್ ಕೊಟ್ಟರು. ಆದರೆ ಅಲ್ಲಿರುವ ಆ ಅಸ್ತಿಯು ಅತ್ತೆಯ ಕಾಲದ ನಂತರ, ಅಡಿಗರ ಮಕ್ಕಳಿಗೆ ಅವರ ಪೀಳಿಗೆಗೆ ಸೇರಬೇಕಿತ್ತು. ಅವರು  ನಮ್ಮನ್ನು ಅಲ್ಲಿಂದ ಹೋಗಲು ಒತ್ತಾಯ ಮಾಡದೇ ಇದ್ದುದರಿಂದ ನಾವೇ ಅದನ್ನು ಅನುಭೋಗಿಸಿಕೊಂಡು ಬರುತ್ತಿದ್ದೆವು. ಆದರೆ ಅಲ್ಲಿ ವಾಸಮಾಡಿ ಕೊಂಡಿದ್ದರಿಂದ ನಾವೇನು ಅಡಿಗರಿಗೆ ಗೇಣಿಯನ್ನೋ ಮತ್ತೊಂದನ್ನೋ ಕೊಡುತ್ತಿರಲಿಲ್ಲ. ಆದರೆ ಈ ಒಕ್ಕಲು ಮಸೂದೆಯ ಕಾನೂನಿನಿಂದ ಅದು ನಮಗೂ ಇಲ್ಲ, ಅಡಿಗರಿಗೂ ಇಲ್ಲ ಅಂತ ಆಗುತ್ತದೆ ಎಂದು ಅಪ್ಪಯ್ಯ ಮುಂದಿನ ಸಾಧ್ಯತೆಗಳ ಬಗ್ಗೆ ಕುಂದಾಪುರದಲ್ಲಿ ಒಬ್ಬ ವಕೀಲರಲ್ಲಿ ಹೋಗಿ, ಅಭಿಪ್ರಾಯ ಕೇಳಿದಾಗ ಹೇಳಿದ್ದನ್ನು ಅಪ್ಪಯ್ಯ ನಂಬಬೇಕಾಯಿತು. ಅವರು ಅಪ್ಪಯ್ಯನ ಅಭಿಮಾನಿಗಳೂ ಆಗಿದ್ದು, “ನೀವು ಸುಮ್ಮನಿದ್ದರೆ ಆಗುವುದಿಲ್ಲ. ಕೊನೆಗೆ ಆ ಆಸ್ತಿ ಯಾರಿಗೂ ಇಲ್ಲದ ಹಾಗಾಗುತ್ತದೆ” ಅಂತ ಹೇಳಿದ್ದನ್ನು ಕೇಳಿ ಅಪ್ಪಯ್ಯನೂ ನಾವು ಮಾಡುತ್ತಿದ್ದ ಬೇಸಾಯದ ಗದ್ದೆ ಮತ್ತು ಗೇಣಿಗೆ ಕೊಟ್ಟ ಗದ್ದೆಯನ್ನೂ ಸೇರಿಸಿ ಅಡಿಗರಿಗೆ ಆ ಆಸ್ತಿ ನಮ್ಮ ಅನುಭೋಗದ್ದು ಎಂದು ಡಿಕ್ಲರೇಶನ್ ಕೊಟ್ಟರು. ಅಪ್ಪಯ್ಯನಿಗೆ ಈ ಮಾರ್ಗ ಸುತರಾಂ ಇಷ್ಟವಿರಲಿಲ್ಲ. ಆದರೂ ನಮ್ಮ ಒಕ್ಕಲುಗಳು ಸ್ವಲ್ಪವೂ ನಮಗೆ ತಿಳಿಸದೇ, ಹೀಗೆ ಮಾಡಿದರಲ್ಲ ಎಲ್ಲವೂ ಕೈ ತಪ್ಪಿ ಹೋಗುತ್ತದೆ ಎಂದು ಹಾಗೆ ಮಾಡಲೇ ಬೇಕಾಯಿತು. ಆದರೆ ಅದರಿಂದ, ಆವರೆಗೆ ನಮ್ಮ ಬಗ್ಗೆ ಸ್ವಲ್ಪ ಮೃದುವಾಗಿದ್ದ ಅಡಿಗರ ಕುಟುಂಬದೊಂದಿಗೆ ಮತ್ತೆ ನಿಷ್ಠುರವಾಗಬೇಕಾಯಿತು. ಡಿಕ್ಲರೇಶನ್ ವ್ಯಾಜ್ಯ ಕೋರ್ಟಿನಲ್ಲಿ ನಡೆದು ನಡೆದು ನಮ್ಮ ಕುಂದಾಪುರದ ವಕೀಲರಿಗೆ ಅಪ್ಯಯ್ಯನಿಂದ ಹಣ ಸಂದಾಯವಾಗುತ್ತಲೇ ಬಂದದ್ದು ಮಾತ್ರವಾಗಿ, ಕೇಸು ಮುಂದೆ ಮುಂದೆ ಹೋಯಿತು. ನಂತರ ಕೋರ್ಟಿನಲ್ಲಿಯೇ ತೀರ್ಮಾನವಾಗಿ ಇಡೀ ಆಸ್ತಿಯನ್ನು  ನಮಗೂ, ನಮ್ಮ ಒಕ್ಕಲುಗಳಿಗೂ ಅಷ್ಟಷ್ಟನ್ನು ಪಾಲು ಅಂತ ಮಾಡಿ ತೀರ್ಮಾನ ಕೊಟ್ಟರು. ಆಗಲೇ ಒಕ್ಕಲುಗಳಲ್ಲಿ ನಿಷ್ಠುರವಾಗಿದ್ದರಿಂದ ’ಏನಾದರೂ ಬಿಡುವುದಿಲ್ಲ’ ಎಂದು ಆ ತೀರ್ಪಿಗೆ, ಆಕ್ಷೇಪಿಸಿ, ಅಪ್ಪಯ್ಯ ಮೇಲಿನ ಕೋರ್ಟಿನಲ್ಲಿ ಅಫೀಲು ಮಾಡಿದರು. ಅಂತೂ ಅಪ್ಪಯ್ಯನ ಕಾಲದವರೆಗೂ ಆ ಟ್ರಿಬ್ಯುನಲ್ ವ್ಯಾಜ್ಯ ಇತ್ಯರ್ಥ ಆಗಲೇ ಇಲ್ಲ.

(ಮುಂದುವರಿಯುವುದು)

ಶುಕ್ರವಾರ, ಅಕ್ಟೋಬರ್ 13, 2017

ದಿನೇಶ ಉಪ್ಪೂರ:

*ನನ್ನೊಳಗೆ*

ಭಾಗ 26

ಆಗ ಕುಂದಾಪುರದ ನಮ್ಮ ಭಂಡಾರ್ಕಾರ್ಸ್ ಕಾಲೇಜು ಗಲಾಟೆಗೆ, ಸ್ಟ್ರೈಕ್ ಗೆ ಬಹಳ ಪ್ರಸಿದ್ಧಿಯಾಗಿತ್ತು. ಮಕ್ಕಳು ಎಷ್ಟು ಜೋರಾಗಿದ್ದರು ಎಂದರೆ ಒಮ್ಮೆ ಕ್ಲಾಸಿನಲ್ಲಿ ವಿದ್ಯಾರ್ಥಿಗಳು ತುಂಬಾ ಗಲಾಟೆ ಮಾಡುತ್ತಿದ್ದಾಗ ಪ್ರಿನ್ಸಿಪಾಲರು ಬುದ್ಧಿ ಹೇಳಲು ಕ್ಲಾಸಿಗೆ ಬಂದರು. “ಹಾಗೆ ಮಾಡಬಾರದು ಹೀಗೆ ಮಾಡಬೇಕು” ಅಂತ ಉಪದೇಶವಾಯಿತು. ಅವರು ಬಂದಾಗ ಮತ್ತು ಅವರು ಮಾತನಾಡಿದ ಅಷ್ಟೂ ಹೊತ್ತು ಎಲ್ಲರೂ ಪಾಪದವರಂತೆ ಸುಮ್ಮನೇ ಕುಳಿತಿದ್ದರು. ಅವರು ಮಕ್ಕಳಿಗೆ ಚೆನ್ನಾಗಿ ಬೈದು ಮುಗಿಸಿ, ಕ್ಲಾಸಿನಿಂದ ತಿರುಗಿ ಹೊರಗೆ ಹೋಗಿ, ಪ್ಯಾಸೇಜಿನಲ್ಲಿ ಮುಂದೆ ಹೋಗುತ್ತಿದ್ದರಷ್ಟೆ. ಅವರ ಬೆನ್ನಿನ ಹಿಂದೆಯೇ ಡಮ್ ಡಮ್ ಶಬ್ದ. ಒಮ್ಮೆಲೇ ಹೌಹಾರಿದ ಅವರು ಹಿಂದೆ ನೋಡದೇ ಓಡಿ ಹೋಗಬೇಕಾಯಿತು. ಕ್ಲಾಸಿನ ಒಳಗಿನಿಂದ ಕಿಟಕಿಯ ಮೂಲಕ ಹೊರಗೆ ಅವರ ಹಿಂದೆಯೇ ಬೀಳುವಂತೆ ಯಾರೋ ಪಟಾಕಿ ಸರಕ್ಕೆ ಬೆಂಕಿ ಹಚ್ಚಿ ಎಸೆದು ಬಿಟ್ಟಿದ್ದರು. 

ಆಗ ಶಾಸ್ತ್ರಿ ವೃತ್ತದ ಹತ್ತಿರವೇ ರಸ್ತೆಯ ಆಚೆ ಮೂಡುದಿಕ್ಕಿನಲ್ಲಿ, ದೊಡ್ಡ ಬಂಟ್ಸ್ ಹಾಸ್ಟಲ್ ಇತ್ತು. ಈಗ ಇಲ್ಲ. ಅದನ್ನು ಕೆಡವಿ ದೊಡ್ಡ ಮದುವೆ ಹಾಲ್ ಮಾಡಿದ್ದಾರೆ. ಅಲ್ಲಿ ಊರ ಪರ ಊರ ಬಂಟ್ಸ್ ನವರ ಮಕ್ಕಳು, ಕಾಲೇಜಿನಲ್ಲಿ ಓದುವವರು ಮಾತ್ರ ಇರುತ್ತಿದ್ದರು. ಅಲ್ಲಿಯ ಮಕ್ಕಳಲ್ಲಿಯೇ ಎರಡು ಗುಂಪು. ಯಾವಾಗಲೂ ಹೊಡೆದಾಟ. ಗಲಾಟೆ. ಆಗ ಜಯಪ್ರಕಾಶ,  ಉದಯ ಅಂತೆಲ್ಲಾ ಯಾರುಯಾರೋ ಬಹಳ ಜೋರು ಜೋರಿನ, ಭರ್ತಿ ಆಳಿನ ಗಡ್ಡ ಮೀಸೆ ಬಿಟ್ಟು ಗತ್ತಿನಲ್ಲಿ ತಿರುಗುವ ಮಕ್ಕಳು ಇದ್ದರು. ಅವರು ಶರ್ಟಿನ ಮೇಲಿನೆರಡು ಗುಂಡಿಯನ್ನು ಹಾಕದೇ, ಅವರ ಅಗಲವಾದ ಎದೆಯನ್ನು ತೋರಿಸುತ್ತಾ ನಾಲ್ಕಾರು ಮಕ್ಕಳ ಜೊತೆಗೆ ಬರುತ್ತಿದ್ದರೆ, ಅವರನ್ನು ನೋಡಿದ ನಾವು ಬದಿಗೆ ಸರಿದು ದಾರಿ ಬಿಡುತ್ತಿದ್ದೆವು. ನಮಗೆ ಹೆದರಿಕೆಯಾಗುತ್ತಿತ್ತು. ಕೆಲವು ಹುಡುಗರು ಅವರ ಅಂಗಿಯ ಒಳಗೆ ತಲವಾರು, ಕತ್ತಿಯನ್ನು, ಸೈಕಲ್ ಚೈನನ್ನು ಇರಿಸಿಕೊಂಡು ತಿರುಗುತ್ತಿದ್ದರು ಅಂತಲೂ ಹೇಳುತ್ತಿದ್ದರು.

ಒಮ್ಮೆ ಒಂದು ಗಲಾಟೆ ಪ್ರಕರಣದಲ್ಲಿ ಹೊಡೆದಾಟವಾಗಿ ಒಂದಷ್ಟು ಮಕ್ಕಳು ಆಸ್ಪತ್ರೆಗೆ ದಾಖಲಾದರು. ಅವರಲ್ಲೇ ವೈರ ಬೆಳೆದು ಪೋಲೀಸ್ ಕೇಸ್ ಆಯಿತು. ಅವರಲ್ಲೇ ಒಂದು ಪಕ್ಷದವರ ದೂರಿನ ಮೇಲೆ, ವಿಚಾರಣೆ ಮಾಡಲು, ಆಗಿನ ಬಹಳ ಜೋರು ಸ್ಟ್ರಿಕ್ಟ್ ಅಂತ ಹೆಸರುವಾಸಿಯಾಗಿದ್ದ, ಎಸ್. ಐ. ಭಾವ ಎನ್ನುವವರು ಅಲ್ಲಿನ ಕೆಲವು ಹುಡುಗರಿಗೆ ಪೋಲೀಸ್ ಸ್ಟೇಶನ್ನಿಗೆ ಬರಹೇಳಿದರು. ಇವರು ಹೋಗಲೇ ಇಲ್ಲ. ಕರೆಯಲು ಬಂದ ಪೋಲೀಸರಿಗೆ “ಧೈರ್ಯವಿದ್ದರೆ ಅವರೇ ಇಲ್ಲಿಗೆ ಬಂದು ಕರೆಯೊಯ್ಯಲಿ” ಎಂಬ ಸವಾಲು ಬೇರೆ. ಎಸ್ ಐ ಯವರಿಗೂ ಹುರುಪು. ಕೈಯಲ್ಲಿರುವ ಅಧಿಕಾರದ ಧೈರ್ಯ. ಅವರು ಜೋರಿನಿಂದಲೇ ಏನಾಗುತ್ತದೆ?. ನೋಡಿಯೇ ಬಿಡುತ್ತೇನೆ ಎಂದು ಹಾಸ್ಟೆಲ್ಲಿಗೆ ಅವರ ಬುಲೆಟ್ ಹತ್ತಿಕೊಂಡು ಬಹಳ ರಭಸದಿಂದ ಬಂದೇ ಬಿಟ್ಟರು.

ಅದು ಚೌಕಾಕಾರದ ಮೂರು ಮಹಡಿಯ ದೊಡ್ಡ ಕಟ್ಟಡ. ಪಶ್ಚಿಮದ ರಸ್ತೆಯ ಭಾಗದಲ್ಲಿ ಹೆಬ್ಬಾಗಿಲು ಇದ್ದರೆ, ಮಧ್ಯದಲ್ಲಿ ವಿಶಾಲವಾದ ಬೈಕ್ ಸೈಕಲ್ ಗಳನ್ನು ಇಡುವ ದೊಡ್ಡ ಅಂಗಳದಂತಹ ವಿಶಾಲ ಸ್ಥಳ. ಎಸ್ ಐ ಯವರು ಅಲ್ಲಿಗೆ ಹೋಗಿ ಮಧ್ಯದಲ್ಲಿ ನಿಂತು. ಆಚೆ ಈಚೆ ನೋಡಿದರು. ಕಡೆಗೆ ಮೇಲೆ ನೋಡಿ, ಕೇಸ್ ಇರುವ ಹುಡುಗರ ಹೆಸರು ಹಿಡಿದು ಗಟ್ಟಿಯಾಗಿ ಕೂಗಿ, “ಯಾರದು ಕಾಲೇಜಿನಲ್ಲಿ ನ್ಯೂಸೆನ್ಸ್ ಮಾಡಿದ್ದು? ಹೊರಗೆ ಬನ್ನಿ” ಎಂದು ಕರೆದರು.

ಆದರೆ ಯಾರೂ ಹೊರಗೆ ಬರಲಿಲ್ಲ. ಅವರ ಸುತ್ತ ಇದ್ದ ಕೈಕೆಳಗಿನ ನಾಲ್ಕಾರು ಪೋಲೀಸರು ಆಗಲೇ ಎಚ್ಚರಿಸಿದ್ದರಿಂದ ಸೀದಾ ರೂಮಿನ ಒಳಗೆ ನುಗ್ಗಿ ಹೋಗಲು ಧೈರ್ಯ ಸಾಲಲಿಲ್ಲ ಎಂದು ಕಾಣುತ್ತದೆ. ಎಸ್. ಐ.ಯವರು  ಕೋಪದಿಂದ ಕುದಿದರು. ಅದು ತಮಗೆ ಆದ ಅವಮಾನ ಎಂದು ಅವರ ಸ್ಥಾನ ಮಾನ, ಅಧಿಕಾರವೂ ಎಚ್ಚರಿಸಿತು. ಆಮೇಲೆ ಅಲ್ಲಿಯೇ ಅಂಗಳದಲ್ಲಿ ಇರಿಸಿದ್ದ ಕೆಲವು ಸೈಕಲ್ಲುಗಳನ್ನು ಕೆಳಗೆ ಹಾಕಿ ಅದರ ಮೇಲೇ ಬೈಕ್ ಹಾರಿಸಿ ಕೆಲವು ಸೈಕಲ್ಲುಗಳನ್ನು ಪುಡಿಮಾಡಿದರು. ಆದರೂ ಹುಡುಗರು ಯಾರೂ ಹೊರಗೆ ಬರಲಿಲ್ಲ. ಎಸ್. ಐ. ಯವರು ಮತ್ತೆ ಜೋರಾಗಿ ಅರಚಿ ಕರೆದರು. ಅಷ್ಟರಲ್ಲಿ ಅನಿರೀಕ್ಷಿತವಾದ ಘಟನೆಯೊಂದು ನಡೆದುಬಿಟ್ಟಿತು. ಮೇಲಿನಿಂದ ಪದಾರ್ಥವನ್ನು ಅರೆಯಲು ಉಪಯೋಗಿಸುವ ದೊಡ್ಡ ಕಲ್ಲಿನ ಮಗುವನ್ನು  ಯಾರೋ ದೊಪ್ಪೆಂದು ಕೆಳಗೆ ಎತ್ತಿ ಹೊತ್ತು ಹಾಕಿದರು. ಪುಣ್ಯಕ್ಕೆ ಅದು ಎಸ್. ಐ. ಯವರಿಗಿಂತ ಸ್ವಲ್ಪ ಹಿಂದೆ ಬಿದ್ದುದರಿಂದ ಅವರಿಗೆ ಏನೂ ಪೆಟ್ಟಾಗಲಿಲ್ಲ. ಆದರೆ ಬೈಕ್ ನ ಹಿಂದಿನ ಒಂದು ಬದಿಯ ಮೇಲೆ ಬಲವಾಗಿ ಬಿದ್ದುದರಿಂದ ಅದು ಜಕಮ್ ಆಯಿತು. ಕಲ್ಲು ದಡ್ ದಡ್ ಎಂದು ಸದ್ದು ಮಾಡುತ್ತಾ ಹೋಗಿ ಮೂಲೆಯಲ್ಲಿ ಬಿದ್ದಿತು. ಮೇಲೆ ನೋಡಿದರೆ ಯಾರೂ ಇಲ್ಲ. ಎಲ್ಲರಿಗೂ ಗಾಬರಿಯಾಯಿತು. ಇಂತಹಾ ಸಂದರ್ಭದಲ್ಲಿ ಮತ್ತೆ ಎಲ್ಲಾ ಮಕ್ಕಳು ಒಂದಾಗಿದ್ದರು. ಅವರಲ್ಲೇ ಒಗ್ಗಟ್ಟು. ಯಾರೂ ಬಾಯಿಬಿಡುವುದಿಲ್ಲ.

ಆಗ ಎಸ್. ಐ. ಯವರಿಗೆ ಸ್ವಲ್ಪ ಹೆದರಿಕೆಯಾಯಿತು. ಈ ಹಿಂದು ಮುಂದಿಲ್ಲದ ಬಿಸಿ ರಕ್ತದ ಮಕ್ಕಳ ದೆಸೆಯಿಂದ ಕೈ ಕಾಲು ಮುರಿದುಕೊಂಡರೆ ಮತ್ತೆ ರಗಳೆ ಯಾಕೆ? ಎಂದೂ ಅನ್ನಿಸಿರಬೇಕು. ಅದೂ ಅಲ್ಲದೇ ಅಲ್ಲಿರುವುದು ಪ್ರಭಾವಿ ವ್ಯಕ್ತಿಗಳ, ಶ್ರೀಮಂತರ ಮಕ್ಕಳೇ ಅಂತಲೂ ಗೊತ್ತಾಗಿರಬೇಕು. ಆದರೆ ಹಾಗೆಯೇ ಹಿಂದೆ ಹೋದರೆ ಅವರ ಮರ್ಯಾದೆ ಏನಾಗುತ್ತದೆ? ಕೂಡಲೇ ಸಿಟ್ಟಿನಿಂದ, “ನೀವು ನನ್ನನ್ನು ಏನು ಅಂತ ತಿಳಿದಿದ್ದೀರಿ? ಇದನ್ನು ಹೀಗೆಯೇ ಬಿಡುವುದಿಲ್ಲ. ಕೋರ್ಟಿನಲ್ಲಿ ನಿಮ್ಮನ್ನು ನೋಡಿಕೊಳ್ಳುತ್ತೇನೆ.” ಎನ್ನುತ್ತಾ ಅವರ ಸಹಚರರೊಂದಿಗೆ ಜಾಗ ಖಾಲಿ ಮಾಡಿದರು. ಅಂತೂ ಅವರಿಗೂ ಏನೂ ಮಾಡಲಾಗಲಿಲ್ಲ. ಮುಂದೆ ಏನಾಯಿತೋ ಗೊತ್ತಾಗಲಿಲ್ಲ.

(ಮುಂದುವರಿಯುವುದು)

ಗುರುವಾರ, ಅಕ್ಟೋಬರ್ 12, 2017

ದಿನೇಶ ಉಪ್ಪೂರ:

*ನನ್ನೊಳಗೆ*

ಭಾಗ 25

ಪ್ರತೀ ವರ್ಷ ನವಂಬರ್ ಒಂದರಂದು ಭಂಡಾರ್ಕಾರ್ಸ್ ಕಾಲೇಜಿನಲ್ಲಿ ತಾಳಮದ್ದಲೆ ನಡೆಯುತ್ತಿತ್ತು. ಬಹುಷ್ಯ ಅದು ಈಗಲೂ ಮುಂದುವರಿದಿದೆ. ಇಡೀ ರಾತ್ರಿಯ ತಾಳಮದ್ದಲೆ. ಒಂದು ಬಡಗುತಿಟ್ಟಿನ ಭಾಗವತಿಕೆಯಲ್ಲಿ ಇದ್ದರೆ ಇನ್ನೊಂದು ತೆಂಕುತಿಟ್ಟಿನ ಭಾಗವತಿಕೆಯಲ್ಲಿ ಇರುತ್ತಿತ್ತು. ಕಾಲೇಜಿನ ತಾಳಮದ್ದಲೆ ಎಂದರೆ ಆಗಿನ ತಾಳಮದ್ದಲೆಯ ಪ್ರಸಿದ್ಧ ಅರ್ಥದಾರಿಗಳೆಲ್ಲ ಇರುತ್ತಿದ್ದರು. ನಮ್ಮ ಕಾಲೇಜಿನ ತಾಳಮದ್ದಲೆಯಲ್ಲಿ ಭಾಗವಹಿಸುವುದೆಂದರೆ ಕಲಾವಿದರಿಗೆ ಅದೊಂದು ಪ್ರತಿಷ್ಠೆಯ ವಿಷಯವಾಗಿತ್ತು. ಶೇಣಿಯವರು, ರಾಮದಾಸ ಸಾಮಗರು, ಪೆರ್ಲ ಕೃಷ್ಣ ಭಟ್ರು, ಕುಂಬ್ಳೆ ಸುಂದರ್, ಪ್ರಭಾಕರ ಜೋಷಿಯವರು, ತೆಕ್ಕಟ್ಟೆ ಆನಂದ ಮಾಸ್ಟ್ರು  ದಾಮೋದರ ಮಂಡೆಚ್ಚರು. ಬಲಿಪರು, ಅಪ್ಪಯ್ಯ, ಕಾಳಿಂಗ ನಾವಡರು ಮುಂತಾದ ಅತಿರಥ ಮಹಾರಥ ಕಲಾವಿದರು ಎಲ್ಲರೂ ಇರುವ ಒಂದು ದೊಡ್ಡ ಕಾರ್ಯಕ್ರಮವಾಗುತ್ತಿತ್ತು.

ಒಮ್ಮೆ ನಾನು ಓದುತ್ತಿರುವಾಗ ಆದ ತಾಳಮದ್ದಲೆಯಲ್ಲಿ ನಡೆದ ಒಂದು ಘಟನೆಯನ್ನು ಹೇಳುತ್ತೇನೆ. ಆ ದಿನ ಮೊದಲ ಪ್ರಸಂಗ ವಾಲಿವಧೆ. ರಾಮದಾಸ ಸಾಮಗರ  ಮತ್ತು ಶೇಣಿಯವರ ರಾಮ ಮತ್ತು ವಾಲಿ. ಕೊನೆಯ ಸನ್ನಿವೇಶ. ಆ ಸಮಯದಲ್ಲಿ ಅವರ ವಾಗ್ಯುದ್ಧ ನೋಡಲೆಂದೆ ಜನ ಎಲ್ಲೆಲ್ಲಿಂದ ಬರುತ್ತಿದ್ದರು. ಇಡೀ ಹಾಲ್ ಪ್ರೇಕ್ಷಕರಿಂದ ತುಂಬಿತ್ತು. ಅಪ್ಪಯ್ಯನ ಕ್ರಮ ಅಂದರೆ,  ತಾಳಮದ್ದಲೆಯಲ್ಲಿ.  ಅರ್ಥದಾರಿಗಳು ಅವಧಿ ಮೀರಿ ಅರ್ಥ ಹೇಳಿದರೆ, ಬೋರ್ ಆಯಿತು ಅನ್ನಿಸಿದರೆ ಮುಂದಿನ ಪದ್ಯಕ್ಕೆ ಅರ್ಥವನ್ನು ತಂದು ನಿಲ್ಲಿಸಲು ತಾಳವನ್ನು ಮೆಲ್ಲಗೆ ಕುಟ್ಟಿ ಸೂಚನೆ ಕೊಡುತ್ತಿದ್ದರು. ಮೂರು ಬಾರಿ ತಾಳ ಹೊಡೆಯುವುದರ ಒಳಗೆ ಅರ್ಥದಾರಿಗಳು ಮುಂದಿನ ಪದ್ಯಕ್ಕೆ ಅರ್ಥವನ್ನು ತಂದು ನಿಲ್ಲಿಸಬೇಕು. ಅದು ತಾಳಮದ್ದಲೆ ಬಿದ್ದು ಹೋಗದೇ ಇರಲು ಮತ್ತು ನಿರ್ದಿಷ್ಟ ಅವಧಿಯಲ್ಲಿ ಕಾರ್ಯಕ್ರಮ ಮುಗಿಯಲು ಅಪ್ಪಯ್ಯ ಅನುಸರಿಸುತ್ತಿದ್ದ, ಹಾಗೂ ಅಪ್ಪಯ್ಯ ಮತ್ತು ಕಲಾವಿದರೊಳಗಿನ ಒಂದು ಅಲಿಖಿತ ಒಪ್ಪಂದ. ತಾಳಮದ್ದಲೆ ಶುರುವಾಗುವ ಮೊದಲು ಅಲ್ಲಿಯ ವ್ಯವಸ್ಥಾಪಕರೂ ಕಲಾವಿದರೂ ಈ ನಿಯಮವನ್ನು ತಿಳಿದಿರುತ್ತಿದ್ದರು.

ಆದರೆ ಅಂದು ತಾಳಮದ್ದಲೆಯಲ್ಲಿ ಅಪ್ಪಯ್ಯ ಹಾಕಿದ ನಿಯಮವು  ಅಲ್ಲಿ ನಡೆಯಲಿಲ್ಲ. ಶೇಣಿಯವರು, ಸಾಮಗರು ಮಾತಿಗೆ ಮಾತು ಬೆಳೆದು ವಾದಕ್ಕೆ ಪ್ರತಿವಾದ ಮಾಡಿಕೊಳ್ಳುತ್ತಾ ಬಿಸಿಬಿಸಿಯಾಗಿ ಜೋರಿನಿಂದ ಅರ್ಥ ಹೇಳುತ್ತಿದ್ದರು. ಸಮಯದ ಅರಿವೆಯೇ ಅವರಿಗೆ ಇರಲಿಲ್ಲ. ಅಪ್ಪಯ್ಯ ಮೊದಲೇ ಹೇಳಿದಂತೆ ಒಂದು ತಾಳ ಹೊಡೆದು ಸೂಚನೆ ಕೊಟ್ಟರು. ಎರಡನೆಯ ಸಲವೂ ಆಯಿತು, ಆದರೆ ಅವರು ಮುಂದಿನ ಪದ್ಯಕ್ಕೆ ಬರುವಂತೆಯೇ ಕಾಣಲಿಲ್ಲ. ಆಮೇಲೆ ತುಂಬಾ ಅಸಮಾಧಾನದಿಂದ ಮೂರನೆಯ ಬಾರಿಯೂ ತಾಳ ಹೊಡೆದು ಸೂಚನೆಯನ್ನು ಕೊಟ್ಟಾಯಿತು. ಆದರೆ ಅರ್ಥದಾರಿಗಳು ಮಾತು ನಿಲ್ಲಿಸುವಂತೆ ಕಾಣಲಿಲ್ಲ. ಅಪ್ಪಯ್ಯನಿಗೆ ತಾಳ್ಮೆ ತಪ್ಪಿತು. ನಿಧಾನವಾಗಿ ಅವರ ಸ್ಥಾನದಿಂದ ಎದ್ದು ಆ ದೊಡ್ಡ ಹಾಲಿನಿಂದ ಹೊರಗೆ ಬಂದು, ಒಂದು ಕಂಬಕ್ಕೆ ಒರಗಿ ಕತ್ತಲನ್ನು ನೋಡುತ್ತಾ ನಿಂತು ಬಿಟ್ಟರು. ಸಭೆಯಲ್ಲಿ ಸೇರಿದ ಪ್ರೇಕ್ಷಕರೂ ಹಿಂದಿನಿಂದ, “ಸಾಕು, ಮುಂದೆ ಹೋಗಲಿ” ಎಂದು ಕೂಗಲು ಶುರು ಮಾಡಿದರು.

ಅಂತೂ ಇಂತೂ ಕೊನೆಗೆ ವಾದವನ್ನು ಮುಗಿಸಿದ ಆ ಕಲಾವಿದರು, ಮುಂದಿನ ಪದ್ಯಕ್ಕೆ ಭಾಗವತರನ್ನು ನೋಡಿದರೆ, ಭಾಗವತರು ಎಲ್ಲಿದ್ದಾರೆ? ಅವರ ಸ್ಥಾನ ಖಾಲಿ. ಮದ್ದಲೆ ಬಾರಿಸುತ್ತಿದ್ದ ದುರ್ಗಪ್ಪ ಆಚೆ ಈಚೆ ನೋಡುತ್ತಿದ್ದಾನೆ. ಭಾಗವತರು ಇಲ್ಲ. ಹಾರ್ಮೋನಿಯಂ ಬಾರಿಸುತ್ತಿದ್ದವರಿಗೂ ಗೊತ್ತಿಲ್ಲ. ತಾಳ ಮದ್ದಲೆ ನಿಂತಿತು. ವ್ಯವಸ್ಥಾಪಕರನ್ನು ಕರೆಸಿ  ಭಾಗವತರು ಎಲ್ಲಿ ಅಂತ ಹುಡುಕಿಸುವುದಾಯಿತು. ಯಾರೋ “ಅವರು ಹೊರಗೆ ಇದ್ದಾರೆ” ಅಂದರು. ವ್ಯವಸ್ಥಾಪಕರು ಓಡಿ ಭಾಗವತರನ್ನು ಕಂಡು, “ಏನು ಇಲ್ಲಿದ್ದೀರಿ? ಏನಾಯಿತು? ಬನ್ನಿ ಪದ್ಯಕ್ಕಾಯಿತು” ಎಂದರೆ, ಅಪ್ಪಯ್ಯನಿಂದ, “ಅವರಿಗೆ ಭಾಗವತಿಕೆ ಯಾಕೆ? ಅವರೇ ಅರ್ಥ ಹೇಳಿ ಮುಗಿಸಲಿ, ಅವರು ನನ್ನ ಸೂಚನೆಯನ್ನು ಪಾಲಿಸಲಿಲ್ಲ, ತಾಳಮದ್ದಲೆ ಹಾಳಾದರೆ ನಾನು ಇದ್ದು ಏನು ಮಾಡಿದಂತಾಯಿತು?” ಎನ್ನುವ ಉತ್ತರ ಬಂತು. ಕೊನೆಗೆ “ಹಾಗಲ್ಲ, ಹೀಗೆ. ಸಮಾಧಾನ ಮಾಡಿಕೊಳ್ಳಿ. ತಾಳಮದ್ದಲೆ ನಿಂತರೆ ನಮ್ಮ ಮರ್ಯಾದೆ  ಹೋಗುತ್ತದೆ ಬನ್ನಿ”, ಎಂದು ಗೋಗರೆದ ಮೇಲೆ ಅಪ್ಪಯ್ಯ ಪುನಹ ಬಂದು ಭಾಗವತಿಕೆಗೆ, ಅವರ ಸ್ವಸ್ಥಾನದಲ್ಲಿ ಕುಳಿತರು ಅಂತಾಯಿತು. ನಂತರ ಎಲ್ಲರು ಒಂದು ತರಹ ಬಿಗುವಾಗಿಯೇ ಇದ್ದರು. ಮುಂದೆ ಏನಾಗುತ್ತದೋ? ಯಾರು ಯಾರೊಡನೆ ಮಾತಿಗಿಳಿದು ಜಗಳ ಶುರುವಾಗುತ್ತದೋ ಅಂತ ಆತಂಕದಿಂದಲೇ ತಾಳಮದ್ದಲೆ ಮುಂದುವರಿಯಿತು. ಆದರೆ ಹೆಚ್ಚುಕಡಿಮೆ ಒಂದು ಅರ್ಧಗಂಟೆಯ ಅಂತರದಲ್ಲಿ ಪೂರ್ವದಲ್ಲಿ ನಿರ್ಣಯಿಸಿದ ಅವಧಿಯಲ್ಲಿಯೇ ಆ ಪ್ರಸಂಗವೂ ಮುಗಿಯಿತು, ಮುಂದಿನ ಪ್ರಸಂಗಕ್ಕೆ ಮುಂದಿನ ಭಾಗವತರಿಗೆ ಅಪ್ಪಯ್ಯ ತಾಳವನ್ನು ಹಸ್ತಾಂತರಿಸಿದರು.

ರಂಗಸ್ಥಳದಲ್ಲಿ ಕಲಾವಿದರು ಪದ್ಯವನ್ನು ಎತ್ತುಗಡೆ ಮಾಡಿ ಮಧ್ಯ ಮಧ್ಯ ಕೆಲವು ಪದಗಳನ್ನು ಮಾತ್ರ ಹೇಳಬೇಕು. ಒಳ್ಳೆಯ ಸ್ವರದ ಕಲಾವಿದರಿದ್ದರೆ ಭಾಗವತರು ಅವರಿಗೆ ಪದ್ಯದ ನಿರ್ದಿಷ್ಟ ಪದವನ್ನು ಹೇಳಲು ಅವಕಾಶ ಮಾಡಿಕೊಟ್ಟು, ಅದರ ಮುಂದಿನ ಪದವನ್ನು ಅದೇ ಶೃತಿಯಲ್ಲಿ ಹೇಳುವುದು ಸಂಪ್ರದಾಯ. ಆಗಿನ ಕಾಲದ ಒಬ್ಬ ಪ್ರಸಿದ್ಧ ಕಲಾವಿದರು ಅವರ ಪಾತ್ರದಲ್ಲಿ ಬರುವ ಇಡೀ ಪದ್ಯವನ್ನು ಹೇಳುತ್ತಿದ್ದರು. ಆದರೆ ಅಪ್ಪಯ್ಯನಿಗೆ ಅದು ಕಿರಿಕಿರಿಯಾಗುತ್ತಿತ್ತು. “ನೀವೇ ಎಲ್ಲ ಪದ್ಯ ಹೇಳುವುದಾದರೆ, ನಾವು ಭಾಗವತರು ಅಂತ ಯಾಕೆ ಇರುವುದು?” ಎಂದು ಅವರಿಗೆ ಒಮ್ಮೆ ಹೇಳಿಯೂ ಹೇಳಿದರು. ಆದರೆ ಅವರು ಆಟದ ವಿಶೇಷ ಆಕರ್ಷಣೆಯಾಗಿ, ಅತಿಥಿ ಕಲಾವಿದರಾಗಿ ಬರುತ್ತಿದ್ದುದರಿಂದ ಮತ್ತು ಅಪ್ಪಯ್ಯ ಮತ್ತು ಅವರ ಜೋಡಿಯನ್ನು ಪ್ರೇಕ್ಷಕರೂ ಬಯಸುತ್ತಿದ್ದುದರಿಂದ ಆ ಕಲಾವಿದರು ಅದಕ್ಕೆ ಅಷ್ಟು ಗಮನವನ್ನು ಕೊಡಲಿಲ್ಲ ಅಂತ ಕಾಣುತ್ತದೆ. ಅಪ್ಪಯ್ಯನಿಗೆ ಒಮ್ಮೆ ಸಿಟ್ಟು ಬಂದು, ಆ ಕಲಾವಿದರ ಪಾತ್ರವು ರಂಗಸ್ಥಳಕ್ಕೆ ಬಂದಾಗ ಅವರ ಮಾಮೂಲಿ ಶೃತಿಗಿಂತ ಮೇಲಿನ ಸ್ಥಾಯಿಯಲ್ಲಿ ಶೃತಿಯನ್ನು ಇಟ್ಟು ಪದ್ಯ ಹೇಳಿದರು. ಅವರಿಗೆ ಆ ಏರುಶೃತಿಯಲ್ಲಿ ಪದ್ಯಕ್ಕೆ ಬಾಯಿ ಹಾಕುವುದೇ ಕಷ್ಟವಾಯಿತು. ಆಗ ಆ ಕಲಾವಿದರ ಒಬ್ಬ ಕಟ್ಟಾ ಅಭಿಮಾನಿಗಳು, “ಉಪ್ಪೂರರು ಅವರಿಗೆ ಬೇಕಂತಲೇ ಅವಕಾಶ ನೀಡದೇ ಪಾತ್ರ ಕಳಪೆಯಾಗುವಂತೆ ಮಾಡಿ ಆಟವನ್ನೇ ಹಾಳು ಮಾಡಿದರು” ಎಂದು ಟೀಕೆ ಮಾಡಿದರು. ಅದು ಅಪ್ಪಯ್ಯನಿಗೆ ತಿಳಿಯಿತು. ಆ ಅಭಿಮಾನಿಗಳೂ ಅಪ್ಪಯ್ಯನ ಸ್ನೇಹಿತರೆ.

ಆ ಅಭಿಮಾನಿಗಳು ಯಾವುದೇ ಆಟವಾಗಲಿ, ತಾಳಮದ್ದಲೆಯಾಗಲಿ ಅವರ ಟೇಪ್ ರೆಕಾರ್ಡರ್ ತಂದು, ಎಲ್ಲಾ ಕಡೆಯಲ್ಲೂ ಇಡೀ ಆಟವನ್ನು ರೆಕಾರ್ಡ್ ಮಾಡುತ್ತಿದ್ದರು. ಒಮ್ಮೆ ಅವರು  ಕಾಲೇಜಿನ ತಾಳಮದ್ದಲೆಯಲ್ಲಿ ಟೇಪ್ ರೆಕಾರ್ಡರ್ ತಂದು ಎಂಪ್ಲಿಪಯರಿಗೆ  ವಯರನ್ನು ಸಿಕ್ಕಿಸಿದ್ದು ನೋಡಿದ ಅಪ್ಪಯ್ಯನಿಗೆ ಒಮ್ಮೆಲೇ ಸಿಟ್ಟು ಬಂದು, ಅವರನ್ನು ಕರೆದು, “ಮೊದಲು ಅದನ್ನು ತೆಗೆಯಿರಿ. ನೀವು ನನ್ನ ಪದ್ಯ ಸಮ ಇಲ್ಲವೆಂದು ಹೇಳಿಕೊಂಡು ತಿರುಗುತ್ತೀರಲ್ಲ. ನನ್ನ ಪದ್ಯ ರೆಕಾರ್ಡ್ ಮಾಡುವುದು ಬೇಡ” ಎಂದು ಹಟ ಹಿಡಿದರು. ಅವರು ಎಂಪ್ಲಿಪೈರಿಂದ  ವಯರ್ ನ್ನು ತೆಗೆಯುವಲ್ಲಿಯವರೆಗೆ ಬಿಡಲಿಲ್ಲ. ನಮಗೆಲ್ಲ ಆಶ್ಚರ್ಯ. ಯಾರು ಬೇಕಾದರೂ “ಉಪ್ಪೂರರೇ, ನಮ್ಮ ಕಡೆಗೆ ಯಾವಾಗಲಾದರೂ ಒಮ್ಮೆ ಬನ್ನಿ. ಒಂದು ನಾಲ್ಕು ಪದ್ಯ ಹೇಳಿದರೆ ಕೇಳುವ ಆಶೆಯಿದೆ” ಎಂದರೆ ನೆನಪಿಟ್ಟುಕೊಂಡು ಅವಕಾಶವಾದಾಗ ಅವರ ಮನೆಗೆ, ಮದ್ದಲೆಯವನನ್ನು ಕರೆದುಕೊಂಡು ಹೋಗಿ, ಒಂದಷ್ಟು ಪದ್ಯವನ್ನು ಹೇಳಿ ಮೆಚ್ಚಿಸಿ ಬರುತ್ತಿದ್ದ ಅಪ್ಪಯ್ಯನಿಗೆ ಅಷ್ಟು ಸಿಟ್ಟು ಬಂದದ್ದು ನೋಡಿದ್ದೇ, ನಾವು ಅದೇ ಮೊದಲ ಸಲ.

(ಮುಂದುವರಿಯುವುದು)

ಬುಧವಾರ, ಅಕ್ಟೋಬರ್ 11, 2017

ದಿನೇಶ ಉಪ್ಪೂರ:

*ನನ್ನೊಳಗೆ*

ಭಾಗ 24

ನಮಗೆ ಹೆದರಿಕೆ. ಎಲ್ಲಿ ಯಾವ ಕಾಡುಪ್ರಾಣಿಯ ಸುಳಿವನ್ನೋ, ಇನ್ನೇನನ್ನೋ ಕಂಡನೋ ಅಂತ. ಬೀಸುವ ಗಾಳಿಯನ್ನು ಬಿಟ್ಟರೆ ಎಲ್ಲ ಸ್ತಬ್ದ. ಆಗ ಸುಮ್ಮನಿರಲು ಹೇಳಿದವನೇ “ನೋಡಿ, ಎಲ್ಲೋ ನೀರು ಬೀಳುವ ಶಬ್ಧ ಕೇಳುತ್ತಿದೆ ನೋಡಿ. ಇಲ್ಲೆಲ್ಲೋ ಜಲಪಾತ ಇರಬೇಕು. ಹೋಗಿ ನೋಡುವ” ಅಂದ. ನಮಗೆ ನಿರಮ್ಮಳವಾಯಿತು. ಮತ್ತೆ ನಮಗೆ ಉಮೇದು. “ಹೌದು ನೋಡಿಯೇ ಬಿಡುವ” ಅಂತ ಶಬ್ಧ ಕೇಳಿದ ದಿಕ್ಕಿಗೆ ತಿರುಗಿ, ಪೊದೆಯ ಮಧ್ಯ ದಾರಿ ಮಾಡಿಕೊಂಡು ಅಲ್ಲಲ್ಲಿ ಕಲ್ಲು ಮುಳ್ಳುಗಳನ್ನು ಹಾದು ಏಳುತ್ತಾ ಬೀಳುತ್ತಾ ಇಳಿಜಾರಿನಲ್ಲಿ ಮರಗಳನ್ನು ಹಿಡಿದುಕೊಂಡು ಒಬ್ಬರ ಹಿಂದೆ ಮತ್ತೊಬ್ಬರು ಆದರಿಸಿಕೊಳ್ಳುತ್ತಾ ಮುಂದೆ ನಡೆದೆವು. ಸ್ವಲ್ಪ ದೂರ ಹೋದ ಮೇಲೆ ಕಡಿದಾದ ದಾರಿಯಲ್ಲಿ ಇಳಿದು ಹೋಗಿ ಹಾಗೆ ಕಣ್ಣು ಹಾಯಿಸಿ ನೋಡಿದರೆ,

ಏನು ನೋಡುವುದು?. ದೂರದಲ್ಲಿ ದೊಡ್ದ ಜಲಪಾತ. ಧಾರೆ ಧಾರೆಯಾಗಿ ಮೇಲಿನಿಂದ ಸುರಿಯುವ ಹಾಲಿನಂತಹ ನೀರು ದೂರದಲ್ಲಿ ಕಾಣಿಸಿತು. ಪಕ್ಕದಲ್ಲಿರುವವರ ಮಾತೂ ಕೇಳದಷ್ಟು ಜೋರಾಗಿ ಬೋರ್ಗರೆಯುವ ಸದ್ದು. ಅದಕ್ಕೆ ಏನೋ ಹೆಸರಿದೆ. ನನಗೀಗ ನೆನಪಿಗೆ ಬರುತ್ತಿಲ್ಲ. ಸುಮಾರು ಐನೂರು ಆರುನೂರು ಅಡಿ ಎತ್ತರದಿಂದ ದುಮುಕುವ ನೀರನ್ನು ನೋಡಿಯೇ ನಾವು ಮೈಮರೆತೆವು. ಅದರ ಬುಡಕ್ಕೇ ಹೋಗುವ ಎಂದ ಒಬ್ಬ. ನಮ್ಮ ಗುರುಗಳು “ಬೇಡ ಅದರ ಬುಡಕ್ಕೆ ಹೋಗಲು ಸರಿಯಾದ ದಾರಿ ಇಲ್ಲ.  ಅಲ್ಲದೇ ಕೊಟಚಾದ್ರಿ ತುದಿಯನ್ನು ಮುಟ್ಟುವುದು ಕಷ್ಟ, ತಡವಾಗಬಹುದು” ಅಂದರು. ನಾವೂ ನೋಡಿಯೇ ನೋಡಿದೆವು. ಜಲಪಾತದ ಬುಡಕ್ಕೆ ಹೋಗುವುದೂ ಅಷ್ಟು ಸುಲಭವಿರಲಿಲ್ಲ. ಅಷ್ಟು ಕಡಿದಾದ ಪೊದೆ ಮರ ಬೀಳುಗಳು ಇರುವ ಜಾಗ ಅದು. ಅಷ್ಟರಲ್ಲಿ ಮತ್ತೊಬ್ಬ ಹೇಳಿದ “ಇಲ್ಲಿಗೇ ಅಂತಲೇ ಒಮ್ಮೆ ಬರುವ. ಈಗ ಸರ್ ಹೇಳಿದಂತೆ ಹಿಂದಿರುಗುವ” ಎಂದ. ಎಲ್ಲರೂ ಒಪ್ಪಿ, ಅಲ್ಲಿಂದಲೇ ಕಣ್ಣು ತಣಿಯುವಷ್ಟು ಹೊತ್ತು ಆ ಪಾತಾಳಕ್ಕೆ ಮುತ್ತಿನ ಧಾರೆಯಂತೆ ಬೀಳುವ ನೀರನ್ನು ನೋಡಿ, ಹಿಂದಕ್ಕೆ ಬಂದು ಪುನಹ ಬೆಟ್ಟವನ್ನು ಏರತೊಡಗಿದೆವು.

ಸ್ವಲ್ಪ ಮೇಲೆ ಹೋಗುತ್ತಿದ್ದಂತೆ ಕೆಲವರ ಕಾಲಿಗೆ ಏನೋ ಚುಚ್ಚಿದಂತೆ ಆಗತೊಡಗಿತು. ನೋಡಿದರೆ ಕಪ್ಪುಕಪ್ಪು ಹುಳಗಳು.  ನಮ್ಮ ಕಾಲಿಗೆ ಕಚ್ಚಿ ರಕ್ತವನ್ನು ಹೀರುತ್ತಿವೆ. ಅದು ಇಂಬಳ. ಕಚ್ಚುವುದು ಗೊತ್ತಾಗುವುದೇ ಇಲ್ಲ. ಅದು ನಮ್ಮ ರಕ್ತ ಹೀರಿ ದೊಡ್ದದಾಗಿ, ಅವಕ್ಕೇ ಸಾಕು ಎನ್ನಿಸಿದ ಮೇಲೇ ನಮ್ಮನ್ನು ಬಿಟ್ಟು ಕೆಳಗೆ ಬೀಳುತ್ತವೆ. ಆಗ ನಮಗೆ ನೋವಾಗಿ ಚುರುಗುಟ್ಟುತ್ತದೆ. ಅದನ್ನು ಎಳೆದು ಬಿಡಿಸಿಕೊಳ್ಳಲು ಹೋದರೆ ತುಂಡಾಗುತ್ತದೆಯೇ ಹೊರತು, ಚರ್ಮವನ್ನು ಬಿಡುವುದಿಲ್ಲ. ನಮ್ಮ ಗುರುಗಳು ಮುಂಜಾಗ್ರತೆಯಿಂದ ಉಪ್ಪನ್ನು ಒಂದು ಕೈ ಚೀಲದಲ್ಲಿ ಹಾಕಿಕೊಂಡು ಬಂದದ್ದರಿಂದ ನಾವು ಬಚಾವಾದೆವು. ಅವರು ಎಲ್ಲರಿಗೂ ಸ್ವಲ್ಪ ಸ್ವಲ್ಪ ಉಪ್ಪನ್ನು ಕೊಟ್ಟು ಅದನ್ನು ಕರ್ಚೀಪ್ ಗೆ ಹಾಕಿ ಇಂಬಳ ಕಚ್ಚಿದಲ್ಲಿ ಒರೆಸಿಕೊಳ್ಳಿ ಅಂದರು. ನಾವು ಹಾಗೆಯೇ ಮಾಡಿದೆವು. ಅವುಗಳು ಚರ್ಮವನ್ನು ಬಿಟ್ಟು ಕೆಳಗೆ ಬಿದ್ದವು.

 ಬೆಟ್ಟದ ಮಧ್ಯ ಭಾಗಕ್ಕೆ ಬಂದಾಗ ಒಂದು ದೇವಸ್ಥಾನ ಹಾಗೂ ಒಬ್ಬ ಭಟ್ರ ಮನೆ ಸಿಕ್ಕಿತು. ನಮಗೆ  ಆಶ್ಚರ್ಯ, ಅವರು ಇಲ್ಲಿ ಹೇಗೆ ಇದ್ದು ಜೀವನ ಸಾಗಿಸುತ್ತಾರೆ ಎಂದು. ಯಾಕೆಂದರೆ ಆ ಪ್ರದೇಶದಲ್ಲಿ ಅವರೊಬ್ಬರದೇ ಮನೆ. ಅವರಿಗೆ ಏನು ಸಾಮಾನು ಬೇಕಾದರೂ ಬೆಟ್ಟದಿಂದ ಕೆಳಗೆ ಇಳಿದು ನಾಗೋಡಿಗೋ ಕೊಲ್ಲೂರಿಗೋ ಬರಬೇಕು. ಒಂದು ಸರಿಯಾದ ರಸ್ತೆ ಸಹ ಇರಲಿಲ್ಲ. ಅವರನ್ನು ಮಾತಾಡಿಸಿದ ನಾವು, ಮಧ್ಯಾಹ್ನ ನಮ್ಮ ಎಲ್ಲರಿಗೂ ಊಟಕ್ಕೆ ವ್ಯವಸ್ಥೆ ಮಾಡಬಹುದೇ? ಎಂದು ಕೇಳಿದೆವು. ಅವರು ಒಪ್ಪಿದ್ದರಿಂದ ಮಧ್ಯಾಹ್ನದ ಊಟದ ಸಮಸ್ಯೆ ಬಗೆಹರಿದಂತಾಯಿತು. ಪುನಹ ಬೆಟ್ಟ ಹತ್ತಲು ಶುರುಮಾಡಿದೆವು. ಸುಮಾರು ಮಧ್ಯಾಹ್ನದ ಹೊತ್ತಿಗೆ ನಾವು ಕೊಟಚಾದ್ರಿಯ ತುದಿಯಲ್ಲಿ ಇದ್ದೆವು.  ನಮ್ಮ ಎದುರೇ ಮೋಡಗಳು ಹತ್ತಿಯ ಮುದ್ದೆ ಮುದ್ದೆಯಂತೆ ತೇಲಿತೇಲಿ ಸಾಗುತ್ತಿತ್ತು. ಕೆಳಗೆ ಸುತ್ತಮುತ್ತ ಹಸಿರೇ ಹಸಿರು. ಮೇಲಿನಿಂದ ಕೆಳಗೆ ನೋಡುವಾಗ ಮರಗಿಡಗಳು ಬೆಟ್ಟಗುಡ್ಡಗಳು ರಾಶಿಹಾಕಿದಂತೆ ಕಾಣುತ್ತಿತ್ತು.

ನಮಗೆ ಖುಷಿಯೋ ಖುಷಿ. ಅತ್ಯಂತ ಎತ್ತರದಲ್ಲಿ ಆಕಾಶದಲ್ಲಿ ಮೋಡಗಳೊಂದಿಗೆ ನಾವಿದ್ದೇವೆ. ಸುತ್ತಲ ಪ್ರಕೃತಿ ಸೌಂದರ್ಯ ನಮ್ಮನ್ನು ಮುಗ್ದರನ್ನಾಗಿಸಿತ್ತು. ಕೆಲವರು ಸಂತೋಷ ತಾಳಲಾಗದೇ ಕುಣಿಯತೊಡಗಿದರು. ಗಟ್ಟಿಯಾಗಿ ಹುಚ್ಚರಂತೆ ಕೂಗುಹಾಕಿದರು. ಅಲ್ಲೊಂದು ಕಲ್ಲಿನ ಮಂಟಪ.  ಸರ್ವಜ್ಞಪೀಠ. ಅಲ್ಲಿಯೇ ಕುಳಿತು ಮನಸ್ಸು ತಣಿಯುವವರೆಗೆ ಆ ಸೌಂದರ್ಯವನ್ನು ಸವಿದದ್ದಾಯಿತು. ಅಷ್ಟರಲ್ಲೇ ಹೊಟ್ಟೆ ತಾಳಹಾಕಲು ಶುರು ಮಾಡಿದ್ದರಿಂದ ಎಲ್ಲರೂ ಒಟ್ಟಾಗಿ ಪುನಹ ಬೆಟ್ಟವನ್ನು ಇಳಿದು ಭಟ್ರ ಮನೆಗೆ ಬಂದು ತಲುಪಿದೆವು. ಅಲ್ಲಿಯ ಒಂದು ಕೆರೆಯಲ್ಲಿ ಕೆಲವರು ಸ್ನಾನ ಮಾಡಿದರು ನೀರು ಮಂಜುಗಡ್ಡೆಯಷ್ಟು ತಣ್ಣಗಾಗಿತ್ತು. ಒಮ್ಮೆ ನೀರಿಗಿಳಿದರೆ ಆಮೇಲೆ ಆ ಹವೆಗೆ ಹೊಂದಿಕೆಯಾಗಿ ಹಿತವಾಗಿದ್ದು.  ಕೆರೆಯಿಂದ ಮೇಲೆ ಬರುವುದೇ ಕಷ್ಟವಾಯಿತು. ಅಲ್ಲಿ ಸ್ಥಳಾವಕಾಶ ಕಡಿಮೆ ಇರುವುದರಿಂದ ಹತ್ತುಹತ್ತು ಮಂದಿ ಸರದಿಯಂತೆ ಊಟ ಮಾಡಿದೆವು.

ಸಂಜೆಯವರೆಗೆ ಸ್ವಲ್ಪ ವಿಶ್ರಾಂತಿ ತೆಗೆದುಕೊಂಡು ಮತ್ತೆ ಗುಡ್ಡವನ್ನು ಏರಿ ಕೊಟಚಾದ್ರಿಯ ಶಿಖರ ತಲುಪಿದೆವು. ಆಚೆ ಈಚೆ ತಿರುಗಿದೆವು. ಒಂದು ಬದಿಯಲ್ಲಿ ಚಿತ್ರಮೂಲ ಎಂದು ಬೋರ್ಡು ಹಾಕಿದ್ದರು. ಪಕ್ಕದಲ್ಲಿಯೇ ಇಳಿದು ಹೋಗಲು ಕಾಲುದಾರಿ. ಮರಗಳು ಬೀಳುಗಳನ್ನೇ ಆಧಾರಕ್ಕೆ ಹಿಡಿದುಕೊಂಡು ಇಳಿಯಬೇಕಾಗಿತ್ತು. ಎಲ್ಲಾದರು ಕ್ಷಣಕಾಲ ಆಯತಪ್ಪಿದರೆ ಕೆಳಗೆ ಪಾತಾಳ. ಮೂಳೆ ಸಹ ಸಿಗಲಾರದು. ಅಷ್ಟು ಆಳದ ಕಣಿವೆ. ಜಾಗ್ರತೆಯಿಂದ ಒಬ್ಬೊಬ್ಬರಾಗಿ ಪಕ್ಕದವರಿಗೆ ಎಚ್ಚರಿಕೆ ಹೇಳುತ್ತಾ ನಿಧಾನವಾಗಿ ಇಳಿಯುತ್ತಾ ಸಾಗಿದೆವು. ಅದೊಂದು ಅವಿಸ್ಮರಣೀಯ ಅನುಭವ. ಅಂತೂ ಆ ಬೆಟ್ಟದ ಸಂಧಿಯಲ್ಲಿ ಒಂದು ಕಲ್ಲು ಬಾಯ್ತೆರೆದು ಇದ್ದಂತಹ ಗುಹೆಗೆ ತಲುಪಿದ್ದಾಯಿತು. ಅಲ್ಲಿ ಸುಮಾರು ಹತ್ತಿಪ್ಪತ್ತು ಜನ ನಿಲ್ಲುವಷ್ಟು ಮಾತ್ರಾ ಸಮತಟ್ಟಾದ ಸ್ಥಳ ಇತ್ತು. ಯಾವುದೋ ಮುನಿ ಅಲ್ಲಿಕುಳಿತು ತಪಸ್ಸು ಮಾಡಿದ್ದರಂತೆ. ಮುಂದೆ ಕೆಳಗೆ ಪಾತಾಳ. ಕೆಳಗೆ ನೋಡಲಿಕ್ಕೇ ಹೆದರಿಕೆಯಾಗುತ್ತಿತ್ತು. ಎಲ್ಲೆಲ್ಲೂ ಮರಗಳ ತುದಿಯೇ ಕಾಣುತ್ತಿತ್ತು. ಆಯತಪ್ಪಿದರೆ. ದೇವರೇ ಗತಿ. ಸ್ವಲ್ಪ ಹೊತ್ತು ಅಲ್ಲಿ ಕಾಲ ಕಳೆದು ಪುನಹ ಆ ಕೊರಕಲಿನ ದಾರಿಯಲ್ಲಿ ಹತ್ತಿಕೊಂಡು ಮೇಲೆ ಬಂದೆವು. ಅಷ್ಟರಲ್ಲಿ ಸಂಜೆಯಾಗುತ್ತಾ ಬಂದಿತ್ತು. ಆ ರಾತ್ರಿ ಅಲ್ಲಿಯೇ ಉಳಿಯುವ ನಿರ್ಧಾರ ನಮ್ಮದು.

ಎಷ್ಟು ದೂರದವರೆಗೆ ಕಣ್ಣು ಹಾಯಿಸಿದರೂ ದೃಷ್ಟಿಗೆ ತಡೆ ಎಂಬುದೇ ಇರಲಿಲ್ಲ. ಅಲ್ಲಲ್ಲಿ ತೆಂಗಿನ ತೋಟಗಳು ಹರಡಿಹೋದಂತೆ. ಮನೆಗಳೂ ಚಿಕ್ಕಚಿಕ್ಕದಾಗಿ ಬೆಂಕಿಪೊಟ್ಟಣದ ಹಾಗೆ ಕಾಣುತ್ತಿತ್ತು. ಹರಿಯುವ ನದಿಯು ಭೂಮಾತೆಯ ಸೀರೆಯ ಸೆರಗಿನಂತೆ ಅಡ್ಡಾದಿಡ್ಡಿಯಾಗಿ ಊರೂರನ್ನು ಸುತ್ತುಬಳಸಿ ಹರಿಯುವುದನ್ನು ಕಂಡು ಪುಳಕವಾಯಿತು. ಪಶ್ಚಿಮದ ಆಗಸವು ಆಗಲೇ ಕೆಂಪು ಅರಶಿಣ ಮಿಶ್ರವಾಗಿ ಮೋಡದ ಮರೆಯಲ್ಲಿ ಸೂರ್ಯ ಕಣ್ಣುಮುಚ್ಚಾಲೆಯಾಡಿದಂತೆ ಆಗಾಗ ಎದುರಿಗೆ ಬಂದು ಹೋಗಿ, ಬಂದು ಹೋಗಿ ಮಾಡುತ್ತಿದ್ದ. ಕೊನೇಗೊಮ್ಮೆ ಕಡಲ ಅಂಚಿನಲ್ಲಿ ಮೋಡಗಳ ಮಧ್ಯದಲ್ಲಿ ಅಂತರ್ಧಾನನಾದ. ಹಾಗೆಯೇ ಆ ಸೌಂದರ್ಯವನ್ನು ಸವಿಯುತ್ತಾ ನಮ್ಮನಮ್ಮೊಳಗೆ ಮಾತಾಡುತ್ತಾ ಸಮಯಹೋಗಿ ಕತ್ತಲಾವರಿಸಿದ್ದೇ ಗೊತ್ತಾಗಲಿಲ್ಲ.

ಸೂರ್ಯಾಸ್ತಮಾನದ ಸುಂದರ ಕ್ಷಣಗಳನ್ನು ಕಂಡೆವು. ಕತ್ತಲಾವರಿಸುತ್ತಿದ್ದಂತೆ ತಾಳಲಾರದಷ್ಟು ಚಳಿ. ತಲೆಗೆ ಕಿವಿಗೆ ಬಟ್ಟೆ ಸುತ್ತಿಕೊಂಡು ಸ್ವೆಟರ್ ಶಾಲುಗಳನ್ನು ಹೊದೆದುಕೊಂಡೆವು, ಸೌದೆಯ ಚೂರುಗಳನ್ನು ಅಲ್ಲಲ್ಲಿಹುಡುಕಿ ತಂದು ಒಟ್ಟು ಮಾಡಿ ಬೆಂಕಿ ಹಚ್ಚಿ ಚಳಿ ಕಾಯಿಸಿಕೊಂಡೆವು. ಆಗ ಮತ್ತೆ ಹಾಡು ಕುಣಿತ ಜೊತೆಯಲ್ಲಿ ತಂದ ಚಪಾತಿ ಪಲ್ಯ ಸೇವನೆ. ಎಲ್ಲರೂ ಕುಣಿದು ದಣಿದು ನಿದ್ದೆ ಮಾಡಿದರು. ಬೆಳಿಗ್ಗೆ ಎದ್ದು ನಿತ್ಯವಿಧಿಗಳನ್ನು ಪೂರೈಸಿ, ಬೆಟ್ಟವನ್ನು ಇಳಿದು ಬಂದು ಭಟ್ರರ ಮನೆಗೆ ಬಂದೆವು. ಮೊದಲೇ ಅವರಿಗೆ ತಿಳಿಸಿದ್ದರಿಂದ ಅವರು ಮಾಡಿದ ಇಡ್ಲಿಯನ್ನು ತಿಂದು ಕಾಫಿಯನ್ನು ಕುಡಿದೆವು. ಬಳಿಕ ಅಲ್ಲಿಂದ ಹೊರಟು, ಬೆಟ್ಟವನ್ನು ಇಳಿದು ಎಲ್ಲರೂ ಹೋಗುವ ಮಾಮೂಲು ದಾರಿಯಲ್ಲಿ ನಡೆದು ಮಧ್ಯಾಹ್ನವಾಗುವಷ್ಟರಲ್ಲಿ ಕೊಲ್ಲೂರು ಸೇರಿ ಅಲ್ಲಿಂದ ಕುಂದಾಪುರಕ್ಕೆ ಬಂದು ನಮ್ಮ ನಮ್ಮ ಗೂಡನ್ನು ಸೇರಿಕೊಂಡೆವು.(ಈ ಭಾಗದಲ್ಲಿ ಇದು ಕೇವಲ ವರದಿ ಅಂತ ಆಗಬಾರದು ಎಂಬ ದೃಷ್ಟಿಯಿಂದ ಕೆಲವು ಸಂಗತಿಗಳನ್ನು ಸ್ವಾರಸ್ಯಕರವಾಗಿ ಬರೆಯಬೇಕಾಯಿತು)

(ಮುಂದುವರಿಯುವುದು)