ಶುಕ್ರವಾರ, ಆಗಸ್ಟ್ 24, 2018

ದಿನೇಶ ಉಪ್ಪೂರ
ಕಥನದೊಳಗೆ– 2
ಸೇಡು
ಪುಟ 1
ನಾನು  ಭಂಡಾರ್ಕಾರ್ಸ್ ಕಾಲೇಜಿಗೆ ಹೋಗುವಾಗ, ನಾಡ ಗುಡ್ಡೆಯಂಗಡಿಯ ಜಯಪ್ರಕಾಶ ಶೆಟ್ಟಿ ಯಾನೆ ಪಕ್ಕ ಎಂಬವನ ಹೆಸರು ಆಗಾಗ ಕೇಳಿಬರುತ್ತಿದ್ದು ಅವನು ಕುಂದಾಪುರ ಭಂಡಾರ್ಕಾರ್ಸ್ ಕಾಲೇಜಿನ ಹಳೆಯ ವಿದ್ಯಾರ್ಥಿಯಾಗಿದ್ದ. ಒಂದು ತರದ ರೌಡಿ. ಅಂಗಿಗೆ ಗುಂಡಿ ಇದ್ದರೂ ಹಾಕದೇ ಕರಡದಂತಿದ್ದ ಎದೆಯ ಕಪ್ಪು ಕೂದಲನ್ನು ತೋರಿಸಿಕೊಂಡೇ ತಿರುಗುತ್ತಿದ್ದ. ಸದಾ ಹಿಂದೆ ಮುಂದೆ ನಾಲ್ಕಾರು ಜೊತೆಗಾರ ಪುಂಡು ಮಕ್ಕಳು.
ಭಂಡಾರ್ಕಾರ್ಸ್ ಕಾಲೇಜು ಅಂದರೆ ಆಗಿನ ಕಾಲದಲ್ಲಿ ರೌಡಿಗಳ ಕಾಲೇಜು ಅಂತಲೇ ಹೆಸರು ಪಡೆದಿತ್ತು. ಯಾವಾಗಲೂ ಗಲಾಟೆ, ಪೆಟ್ಟು ಆಗುವ ಕಾಲೇಜು ಅದು. ಆದ್ದರಿಂದ ಕೆಲವರು ತಮ್ಮ ಮಕ್ಕಳನ್ನು ಆ ಕಾಲೇಜಿಗೆ ಸೇರಿಸಲೂ ಹಿಂದೆ ಮುಂದೆ ನೋಡುತ್ತಿದ್ದರು.
ಆದರೆ ನಾವು ಕಾಲೇಜಿಗೆ ಹೋಗುವಾಗ ಅವನು ಇರಲಿಲ್ಲ. ಆದರೆ ಅವನ ಹೆಸರು, ಅವನು ಮಾಡಿದ ಕಿತಾಪತಿ ಮತ್ತು ಅವನು ಗುಂಪು ಕಟ್ಟಿಕೊಂಡು ಗಲಾಟೆ ಮಾಡುತ್ತಿದ್ದುದು ಆಗಾಗ ಚರ್ಚಿತವಾಗುತ್ತಿದ್ದ ವಿಷಯವಾಗಿತ್ತು.
ಆವಾಗಿನ ಶಾಸ್ತ್ರಿ ಸರ್ಕಲ್ ನ ಹಿಂಭಾಗ ಇದ್ದ ಬಂಟ್ಸ್ ಹಾಸ್ಟೆಲ್ ಎಂಬ ಬಹುಮಹಡಿ ಕಟ್ಟಡದಲ್ಲಿ ಆಗುತ್ತಿದ್ದ ಗಲಾಟೆ. ಕಾಲೇಜ್ ಕ್ಯಾಂಪಸ್ ಒಳಗಡೆ, ಸ್ಟುಡೆಂಟ್ಸ್ ಇಲೆಕ್ಷನ್ ಸಮಯದಲ್ಲಿ ಮಾಡುತ್ತಿದ್ದ ಗುಂಪುಗಾರಿಕೆ. ನಾವು ಕಾಲೇಜಿಗೆ ಹೋಗುವಾಗಲೂ ಎಲ್ಲರ ಬಾಯಿಯಲ್ಲಿ ಕೇಳಿ ಬರುತ್ತಿತ್ತು. ಅವನು ತನ್ನ ಅಂಗಿಯ ಒಳಗೆ ಯಾವಾಗಲೂ ಉದ್ದದ ತಲವಾರ್ ಮತ್ತು ಸೊಂಟದಲ್ಲಿ ಒಂದು ಸೈಕಲ್ ಚೈನ್ ಇಟ್ಟುಕೊಂಡೇ ಓಡಾಡುತ್ತಿದ್ದನಂತೆ.
ಒಂದು ದಿನ ತಡರಾತ್ರಿ ತನ್ನ ಗುಂಪಿನ ಜೊತೆಗೆ ಯಾವುದೋ ಬಾರಿನಲ್ಲಿ ತಿಂದು, ಕುಡಿದು ಉಂಡು ಬೈಕಿನಲ್ಲಿ ಬರುವಾಗ, ಮತ್ತೊಂದು ಗುಂಪಿನವರು ರಸ್ತೆಯ ಪಕ್ಕದಲ್ಲಿ ಅಡಗಿ ಕುಳಿತು ಕಾಯುತ್ತಿದ್ದು, ಪಕ್ಕ ಯಾನೆ ಜಯಪ್ರಕಾಶ ಬಂದ ಕೂಡಲೇ ಕತ್ತಲೆಯಲ್ಲಿ ಸೈಕಲ್ ಚೈನನ್ನು ಬೀಸಿದರಂತೆ.
ಅದರ ಅರಿವಿಲ್ಲದ ಅವನು ಏನಾಗುತ್ತಿದೆ ಎಂದು ಗೊತ್ತಾಗುವುದರ ಒಳಗೆ ಬೈಕಿನೊಂದಿಗೆ ರಸ್ತೆಗೆ ಬಿದ್ದ. ಉಳಿದವರು ದಿಕ್ಕಾಪಾಲಾಗಿ ಓಡಿಹೋದರು. ನಿರ್ಜನ ರಸ್ತೆಯಲ್ಲಿ ನರಳುತ್ತಾ ಬಿದ್ದಿದ್ದ ಅವನನ್ನು, ಕೊನೆಗೆ ಎಷ್ಟೋ ಹೊತ್ತಿನ ಮೇಲೆ ನೋಡಿ, ಇವನ ನರಳಾಟವನ್ನು ಕೇಳಿ, ಯಾರೋ ಕಾರಿನಲ್ಲಿ ಹೋಗುವವರು, ಇವನನ್ನು ಹೊತ್ತುಕೊಂಡು ಹೋಗಿ ಆಸ್ಪತ್ರೆಗೆ ಸೇರಿಸಿದರು.
ಅಂದು ಬಿದ್ದು ತುಂಬಾ ಪೆಟ್ಟು ಮಾಡಿಕೊಂಡಿದ್ದ ಪಕ್ಕ ಯಾನೆ ಜಯಪ್ರಕಾಶ ಶೆಟ್ಟಿ ಮತ್ತೆ ಒಂದೆರಡು ತಿಂಗಳು ಆಸ್ಪತ್ರೆಯಲ್ಲಿದ್ದು ಗುಣವಾಗಿ ಬಂದ ನಂತರವೂ ಮತ್ತೆ ಬಂಡಾಟ ಶುರುಮಾಡಿದ. ಅವನ ಮೇಲೆ ನಾಲ್ಕಾರು ಪೋಲೀಸ್ ಕೇಸೂ ಆಗಿತ್ತಂತೆ. ಅಂತೂ ನಾನು ಕಾಲೇಜು ಸೇರುವ ಮೊದಲೇ ಅವನ ಕಾಲೇಜೂ ಮುಗಿದಿತ್ತು.
ಅಂತಹ ಪಕ್ಕ ಯಾನೆ ಜಯಪ್ರಕಾಶ ಶೆಟ್ಟಿ ನನಗೆ ಮತ್ತೆ ಕಾಣ ಸಿಕ್ಕಿದ್ದು ಅವನು ನಮ್ಮ ಹಾಲಾಡಿ ಸಂತೆ ಮಾರ್ಕೆಟ್ ನ ದಕ್ಷಿಣ ದಿಕ್ಕಿಗೆ ಇರುವ ದೊಡ್ಡಮನೆ ಕೊಯ್ಕಾಡಿ ಶೇಕು ಶೆಟ್ರ ಮಗಳು ಮಿಣುಕು ಶೆಡ್ತಿಯನ್ನು ಮದುವೆಯಾಗಿ ನಮ್ಮ ಊರಿಗೆ ಬಂದಾಗ. ನಮ್ಮಲ್ಲಿ ಶೆಟ್ಟರ ಜಾತಿಯಲ್ಲಿ ಅಳಿಯ ಸಂತಾನದ ಪದ್ದತಿ ಇರುವುದರಿಂದ, ಅದರ ನಿಯಮದಂತೆ ಮದುವೆಯಾದ ಮೇಲೆ ಪಕ್ಕ, ತನ್ನ  ಹೆಂಡತಿಯ ಮನೆಯಲ್ಲಿ ಬಂದು ಇರತೊಡಗಿದ್ದ.
ನಾನು ನಮ್ಮ ಮನೆಯಿಂದ ಹಾಲಾಡಿಗೆ ಬರುವಾಗ ಆ ಕೊಯ್ಕಾಡಿ ಶೇಕು ಶೆಟ್ಟರ ಮನೆಯ ಮುಂದಿನ ಅಂಗಳದ ಬದಿಯಲ್ಲಿ ಹಾದು ಹೋಗಬೇಕಾಗಿದ್ದರಿಂದ ನಾನು ಕಾಲೇಜಿಗೆ ಹೋಗುವಾಗ ಆಗಾಗ ಅವನು ಎದುರು ಸಿಗುತ್ತಿದ್ದ.

**********"

ನಾನೂ ಅದೇ ಕಾಲೇಜಿಗೆ ಹೋಗುವುದನ್ನು ತಿಳಿದುಕೊಂಡ ಅವನು, ಕೆಲವೊಮ್ಮೆ ದಾರಿಯಲ್ಲಿ ಎದುರು ಸಿಕ್ಕಿದಾಗ ನನ್ನನ್ನು ಅಡ್ದಗಟ್ಟಿ ನಿಲ್ಲಿಸಿ ಮಾತಾಡಿಸುತ್ತಿದ್ದ. ಕಾಲೇಜಿನಲ್ಲಿ ಅವನು ಮಾಡಿದ ಕಿತಾಪತಿಯನ್ನು ಸಾಹಸಗಾಥೆಯಂತೆ ಎಳೆಎಳೆಯಾಗಿ ಬಣ್ಣಿಸುತ್ತಿದ್ದ, ನಾನು ಅವನ ದಪ್ಪವಾದ ಮೀಸೆ, ಕೆಂಪು ಕಣ್ಣು ಹಾಗೂ ಗಡಸು ಸ್ವರಕ್ಕೆ  ಸ್ವಲ್ಪ ಹೆದರಿಕೊಳ್ಳುತ್ತಿದ್ದು, ಅವನು ಹೇಳುತ್ತಿದ್ದುದನ್ನು ಸಹನೆಯಿಂದ ಕೇಳಿಕೊಳ್ಳುತ್ತಿದ್ದೆ.
ಹುಯ್ಯಾರು ಹಿರಣ್ಣಯ್ಯ ಶೆಟ್ರು, ಸೌಡ ಆನಂದ ಶೆಟ್ರು, ಆವರ್ಸೆ ಭೋಜ ಶೆಟ್ರು, ಚೋರಾಡಿ ಹಿರಿಯಣ್ಣ ಶೆಟ್ರು, ಕೊಳ್ಕೆಬೈಲು ಸಂಜು ಶೆಟ್ರು, ಹೀಗೆ ನಮ್ಮ ಊರಿನಲ್ಲಿ ಒಂದೊಂದು ಪ್ರಾಂತ್ಯಕ್ಕೆ ಒಬ್ಬೊಬ್ಬ ದೊಡ್ಡ ಬಂಟ್ಸ್ ಸಾಹುಕಾರರು. ಅವರಲ್ಲಿ ಈ ಕೊಯ್ಕಾಡಿ ಶೇಕು ಶೆಟ್ರೂ ಒಬ್ಬರು. ಹಾಲಾಡಿ ಹೊಳೆಯ ಸಣ್ಣ ಸೇತುವೆಯ ದಕ್ಷಿಣ ಭಾಗದ, ಹೊಳೆಯ ಬದಿಯಿಂದ ಹಿಡಿದು ಪಶ್ಚಿಮಕ್ಕೆ ಕಣ್ಣುಹಾಯಿಸುವಷ್ಟು ದೂರದವರೆಗೂ ಶೇಕು ಶೆಟ್ಟರದೇ ಗದ್ದೆಗಳು ತೋಟಗಳು.
ಆ ಬಯಲಿನ ದಕ್ಷಿಣ ಭಾಗದ ಎತ್ತರದ ಗುಡ್ಡೆಯಲ್ಲಿ ದೊಡ್ಡದಾಗಿ ಕಾಣುವ ಉಪ್ಪರಿಗೆ ಮನೆಯೇ ಶೆಟ್ಟರದ್ದು. ಮನೆಯ ಮುಂದೆ ದೊಡ್ಡ ಹೆಬ್ಬಾಗಿಲು, ಅದರ ಮುಂದೆ ದೊಡ್ಡ ಜಗಲಿ.  ಅವರಲ್ಲಿ ಇರುವ ಅಷ್ಟೂ ಗದ್ದೆಗಳನ್ನು ಹಾಡಿ ಗುಡ್ಡೆಗಳನ್ನು ವಿಂಗಡಿಸಿ ವಿಂಗಡಿಸಿ ಹಲವಾರು ಒಕ್ಕಲುಗಳಿಗೆ ಗೇಣಿಗೆ ಸಾಗುವಳಿ ಮಾಡಲು ಕೊಟ್ಟಿದ್ದರಿಂದ, ಅವರ ಮೇಲೆ ಅಧಿಕಾರ ಚಲಾಯಿಸಿಕೊಂಡು ಶೆಟ್ಟರು  ಬಹಳ ಕಾಲದಿಂದ ಮೆರೆಯುತ್ತಿದ್ದರು. ಕಣ್ಣಿಗೆ ಕಾಣುವಷ್ಟು ದೂರ ಹಸಿರೋ ಹಸಿರು. ಒಕ್ಕಲುಗಳೂ ಶೆಟ್ಟರನ್ನು ಭಯ ಭಕ್ತಿ ಗೌರವದಿಂದ ಕಾಣುತ್ತಿದ್ದರು.
ಶೆಟ್ರು ಜಗುಲಿಯಲ್ಲಿ ಕುಳಿತು ಒಮ್ಮೊಮ್ಮೆ ಎಲ್ಲಾ ಒಕ್ಕಲುಗಳನ್ನು ಕರೆಸಿ ಪಂಚಾಯಿತಿಕೆ ಮಾಡುವುದಿತ್ತು. ಕುಶಲೋಪರಿಯ ಸಭೆ ಮಾಡುವುದಿತ್ತು. ಊಟ ಹಾಕಿಸಿ ಗಮ್ಮತ್ತು ಮಾಡುವುದಿತ್ತು. ಕೋಳಿಪಡೆ ಮಾಡಿಸಿ ಮಾಂಸದ ಊಟ ಹಾಕಿಸಿ ಗೌಜು ಮಾಡಿಸುವುದಿತ್ತು.
ಹೆಬ್ಬಾಗಿಲಿನ ಮುಂದೆ ಆರಾಮ ಕುರ್ಚಿಯಲ್ಲಿ ಕುಳಿತು ಶೆಟ್ಟರು ಹಣೆಯ ಮೇಲೆ ಅಡ್ಡಲಾಗಿ ಕೈ ಇಟ್ಟು ಕಿರುಗಣ್ಣು ಮಾಡಿ ತಮ್ಮ ಬಯಲು ಗದ್ದೆಗಳನ್ನು  ನೋಡುವುದನ್ನು ನೋಡುವುದೇ ಒಂದು ಚಂದ. ಎಲ್ಲಿ ನೋಡಿದರೂ ಹಸಿರು ಭತ್ತದ ಬೆಳೆಗಳು. ತೆಂಗು ಅಡಿಕೆತೋಟಗಳು. ಮನೆಯ ಮುಂದೆಯೇ ದೊಡ್ಡ ಅಂಗಳ. ಪಕ್ಕದಲ್ಲೇ, ದೊಡ್ಡ ತರಕಾರಿ ಹಿತ್ತಲು.
ಆ ಶೆಟ್ಟರ ಜಾಪು ಏನು? ದೌಲತ್ತು ಏನು? ಉಟ್ಟ ಪಂಚೆಯ ಒಂದು ಸೆರಗನ್ನು ಕೈಯಲ್ಲಿ ಹಿಡಿದು, ನಿಧಾನವಾಗಿ ಸುತ್ತಲೂ ನೋಡುತ್ತಾ ರಾಜ ಗಾಂಭೀರ್ಯದಿಂದ ನಡೆದು ಎದುರು ಬರುವಾಗ, ಸರಿಯಾದ ಸರಿ ದೃಷ್ಟಿ ಇದ್ದರೂ ಕಿರುಗಣ್ಣಿಂದ ನೋಡಿ,
“ಹೋ ಮಾಣಿ? ಎಲ್ಲಿಗ್ ಹ್ವಾತ್ ಸವಾರಿ? ಅಪ್ಪಯ್ಯ ಬಂದೀರಾ?”
ಎಂದು ನಕ್ಕು ಹೇಳಿ, ನಾನು ಅವರ ಮಾತನ್ನು ಕೇಳಿಸಿಕೊಂಡು ಪ್ರತಿಯಾಗಿ ನಕ್ಕು, ಉತ್ತರಕ್ಕೆ ಸಿದ್ಧನಾಗುವುದರ ಒಳಗೆ,  ಉತ್ತರಕ್ಕೂ ಕಾಯದೇ ಮುಂದೆ ಹೋಗುವ ಗತ್ತು, ಯಾರನ್ನೂ ಮರುಳು ಮಾಡೀತು.
ಆಗಿನ ಕಾಲವೂ ಹಾಗೆಯೇ ಇತ್ತಲ್ಲವೇ?. ನಮಗೆ ಇರುವ ಆರು ಎಕರೆ ಭೂಮಿಯಲ್ಲಿ, ನಾವೂ ಸುಮಾರು ಐದು ಎಕರೆಯಷ್ಟನ್ನು ಒಕ್ಕಲುಗಳಿಗೇ ಗೇಣಿಗೆ ಕೊಟ್ಟಿದ್ದೆವು. ನನ್ನ ಅಣ್ಣಂದಿರು ಓದಲಿಕ್ಕೆ, ಕೆಲಸಕ್ಕೆ ಅಂತ ಬೇರೆ ಬೇರೆ ಊರುಗಳಿಗೆ ಹೋದರು. ಮನೆಯಲ್ಲಿ ಬೇಸಾಯ ಮಾಡುವವರು ಗಟ್ಟಿ ಆಳು ಅಂತ ಯಾರೂ ಇರಲಿಲ್ಲ. ಎಲ್ಲ ಅಮ್ಮನದೇ ಯಜಮಾನಿಕೆ. ಯಜಮಾನಿಕೆ ಅಂದರೆ ಏನು ಮಣ್ಣು?.
ಗದ್ದೆಯ ಕೆಲಸಗಳು, ಹಟ್ಟಿಗೆ ಸೊಪ್ಪು, ಗಂಟಿಗಳ ಆರೈಕೆ ಎಲ್ಲಾ ನೋಡುತ್ತಿದ್ದುದು, ಆ ನಮ್ಮ ಒಕ್ಕಲುಗಳೆ. ಅವರಿಗೆ ಗೇಣಿಗೆ ಕೊಟ್ಟ ಗದ್ದೆಯ ಹೂಟಿ ಕೊಯ್ಲುಗಳ ಜೊತೆಗೆ ನಮ್ಮದನ್ನೂ ಅವರೇ ಮಾಡಿಕೊಡುವುದು. ನಾವು ಬರೀ “ಅದು ಆಗಿಲ್ಲ.  ಇದು ಆಗಿಲ್ಲ” ಅಂತ ಆತಂಕ ತೋರಿಸುವುದು ಅಷ್ಟೆ. ಆಗ ಯಾರಾದರೂ ಒಕ್ಕಲು ಗಂಡಸರು ಬಂದು, “ನೀವು ತಲೆಬಿಸಿ ಮಾಡ್ಬೇಡಿಯಮ್ಮ ನಾವೆಲ್ಲ ಇಲ್ಯಾ? ಏನಾರು ಮಾಡ್ವ” ಎನ್ನುತ್ತಾರೆ. ಆಗ ಅಮ್ಮನಿಗೆ ಸಮಾಧಾನ.
ನಮ್ಮ ಎಲ್ಲಾ ಗದ್ದೆಗಳಿಗೆ ಯಾವ ಕಾಲಕ್ಕೆ ಏನು ಮಾಡಬೇಕು? ಯಾವ ಬೀಜ ಹಾಕಬೇಕು? ಯಾವಾಗ ಹೂಟಿ ಮಾಡಬೇಕು? ನೆಟ್ಟಿ ಮಾಡಬೇಕು? ಯಾವಾಗ ಕೊಯ್ಲು ಮಾಡಬೇಕು? ಯಾವ ಯಾವ ಧಾನ್ಯ ಹಾಕಬೇಕು? ಎಂದು ಎಲ್ಲವನ್ನೂ ನಿರ್ಧರಿಸಿ ಆಯಾಯ ಕಾಲಕ್ಕೆ ಕುಂದಿಲ್ಲದೇ ಮಾಡಿಕೊಡುತ್ತಿದ್ದವರು ಅವರೆ.
ಅದೇಕೋ ಒಮ್ಮೆ ರಾತ್ರಿ ತಿಂಗಳ ಬೆಳಕಲ್ಲೂ ಗದ್ದೆಯ ಹೂಟಿ ಮಾಡುತ್ತಿದ್ದರಪ. ಕೇಳಿದರೆ ಹಗಲು ಝಳಝಳ ಬಿಸಿಲು. ಎತ್ತುಗಳಿಗೆ ಕಷ್ಟವಾಗುತ್ತದೆ. ಬೇಗ ದಣಿವಾಗುತ್ತದೆ. ರಾತ್ರಿ ತಂಪಿರುತ್ತದೆಯಲ್ಲ ಅದಕ್ಕೆ ಅನ್ನುತ್ತಿದ್ದರು. ಆದರೆ ಅಮ್ಮ ಹೇಳುತ್ತಿದ್ದುದೇ ಬೇರೆ. “ನನಗೆ ಗೊತ್ತು. ಅವರದ್ದು ಗದ್ದೆ ಕೆಲಸ ಮಾಡುವಾಗ, ನಮ್ಮದು ತಡವಾಗಿ ಹೋಗಿ, ನಮಗೆ ಬೇಸರ ವಾಗಬಾರದು ಅಂತ ಹಾಗೆ ಮಾಡುತ್ತಿದ್ದರು ಅನ್ನುತ್ತಿದ್ದಳು.
ರಾತ್ರಿ ಎಷ್ಟು ಎಷ್ಟು ಹೊತ್ತಿಗೋ ಬಂದು, ನಮ್ಮ ಮನೆಯ ಗಂಟಿ ಕರುಗಳಿಗೆ, ಹುಲ್ಲು, ಅಕ್ಕಚ್ಚು, ಬೈರುಗಳನ್ನು ಕೊಟ್ಟಿಗೆ ಬಾಗಿಲಿನ ಮೂಲಕ ಒಳಗೆ ಬಂದು ಹಾಕುತ್ತಿದ್ದರು. ನಮ್ಮ ಮನೆ ಅವರದೇ ಮನೆ ಎಂಬಷ್ಟು ಅಧಿಕಾರ, ಆ ಒಕ್ಕಲುಗಳಿಗೆ. ಅಧಿಕಾರವಾ ಅದು ? ಅಲ್ಲ ಅಭಿಮಾನ. ಗೇಣಿಗೆ ಅಂತ ನಾವು ಗದ್ದೆಗಳನ್ನು ಅವರಿಗೆ ಕೊಟ್ಟಿದ್ದೆವಲ್ಲ. ಜೀವನಕ್ಕೊಂದು ಹೊತ್ತು ತುತ್ತಿಗೆ, ಊಟಕ್ಕೆ ದಾರಿ ಮಾಡಿಕೊಟ್ಟಿದ್ದೆವಲ್ಲ. ಆ ಋಣಕ್ಕೆ.
ಯಾರ ಮನೆಯಲ್ಲಾದರೂ ಹೆರಿಗೆಯೋ, ಮರಣವೋ ಆದರೆ,  ಹುಷಾರಿಲ್ಲದಿದ್ದರೆ ಅದು ಅವರೊಬ್ಬರ ಸಂತೋಷ ಸಂಕಟ ಮಾತ್ರ ಆಗುತ್ತಿರಲಿಲ್ಲ. ಅದು ಇಡೀ ನಮ್ಮ ಊರಿನದ್ದೇ ಭಾವ ಆಗುತ್ತಿತ್ತು. ಎದುರು ಸಿಕ್ಕಿದರೆ ಮಾತಿಗೆ ಬೇರೆ ವಿಷಯ ಬೇಕಾಗುತ್ತಿರಲಿಲ್ಲ.
ಆದರೆ ಒಕ್ಕಲು ಮಸೂದೆ ಎಂಬ ರಾಕ್ಷಸ ಕಾನೂನು ಬಂದ ನಂತರ ನಮ್ಮೂರಿನ ಪರಿಸ್ಥಿತಿಯೇ ಬದಲಾಯಿತು.

""""""*****



ಒಕ್ಕಲು ಮಸೂದೆ ಕಾಯಿದೆ ಬರುತ್ತಿದ್ದ ಹಾಗೆ ಒಡೆಯ ಒಕ್ಕಲುಗಳ ನಡುವಿನ ಮನೋಭಾವವೇ ಬದಲಾಗಿ ಹೋಯಿತಲ್ಲ. ಬರೀ ನಿಂತದ್ದರಿಂದ ಆ ನೆಲ ನಮ್ಮದು ಎಂಬ ಕಾನೂನು ಅದು. ಮನುಷ್ಯ ಮನುಷ್ಯರ ಮಧ್ಯದ ವಿಶ್ವಾಸ ನಂಬಿಕೆಗಳಿಗೆ ಕೊಡಲಿಯಿಟ್ಟ ಕಾನೂನು. ಅಂತಹ ಒಂದು ಕಾನೂನು ಬಂದು ಒಡೆಯರು ಒಕ್ಕಲುಗಳು ಅಂತ ಏನು, ಒಬ್ಬರು ಇನ್ನೊಬ್ಬರನ್ನು ನಂಬಿಕೆಯಿಂದ ಕಾಣದ ಹಾಗಾಯಿತು.
ಬೇರೆಯವರದು ನಮ್ಮದು ಎಂದು ಸಾಧಿಸುವುದರ ಜೊತೆಗೆ ನಮ್ಮದನ್ನು ಇನ್ನೊಬ್ಬರು ಅಪಹರಿಸದ ಹಾಗೆ ನೋಡುವುದೂ ಜನರ ಕೆಲಸವಾಯಿತು. ಎದುರಿಗೆ ಬಂದು ಎದೆಕೊಟ್ಟು ಅಂತಃಕರಣಪೂರ್ವಕವಾಗಿ ಮಾತಾಡುತ್ತಿದ್ದವರೂ “ಹೌದು ಹಾಂಗೆ ಹೇಳ್ತ್ರಪ, ಮತ್ತೆಂತ ಮಾಡೂದ್, ಇವರು ಹೀಂಗ್ ಹೇಳಿದ್ರಲೆ ಅಂತ ನಾನ್ ಮಾಡಿದಿ” ಎಂಬ ಅತಂತ್ರಧೋರಣೆಯ ಮಾತುಗಳು ಆತ್ಮೀಯರೆನ್ನಿಸಿಕೊಂಡವರಿಂದಲೇ ಕೇಳಬೇಕಾಯಿತು.
ಶೆಟ್ಟರು ಅನೂಚಾನವಾಗಿ ನನ್ನದು ಎಂದು ತಿಳಿದು ಬೀಗುತ್ತಾ, ಮೆರೆಯುತ್ತಾ ಇದ್ದ ಭೂಮಿಗಳು, ಗದ್ದೆಗಳು, ತೋಟ ಹಾಡಿಗಳು, ರಾತ್ರಿ ಬೆಳೆಗಾಗುವುದರೊಳಗೆ ಅವರದಲ್ಲ ಅದನ್ನು ಅನುಭವಿಸುತ್ತಿರುವವರದು ಎಂದಾಯಿತು. ಒಕ್ಕಲುಗಳು ಹೇಳದೇ ಕೇಳದೇ ಇವರ ಭೂಮಿಗಳಿಗೆ ತಮ್ಮದು ಎಂದು ಡಿಕ್ಲರೇಶನ್ ಕೊಟ್ಟಿದ್ದರಿಂದ, ಶೆಟ್ರ ಮನಸ್ಸು ಮಂಕಾಯಿತು. ಇದು ಹೀಗೂ ಆಗಲು ಸಾಧ್ಯವೇ ಎಂದು ದಿಗಿಲುಗೊಂಡ ಅವರ ದರ್ಬಾರು ಕಳೆಗುಂದಿತು.
ಒಕ್ಕಲುಗಳು ಕೂಲಿಗಳು ನಂತರ ಶೆಟ್ಟರ ಎದುರು ಬಂದು ಮುಖ ತೋರಿಸದೇ, ಎದುರಿಗೆ ಬಾರದೇ ತಲೆ ತಪ್ಪಿಸಿಕೊಂಡು ತಿರುಗಾಡಲು ಶುರುಮಾಡಿದರು. ಶೆಟ್ಟರೇ ಕರೆ ಕಳಿಸಿದರೂ ಏನೋ ಒಂದು ಸುಳ್ಳು ನೆವಹೇಳಿ ತಪ್ಪಿಸಿಕೊಳ್ಳಲು ದಾರಿ ಹುಡುಕಿಕೊಳ್ಳುತ್ತಿದ್ದರು.
ಶೆಟ್ಟರ ಸಿಟ್ಟು ಶೆಡವು ಹೆಚ್ಚಾಯಿತು, ಕೊನೆಗೆ ಹತಾಶರಾಗಿ ಶೆಟ್ಟರೇ ಕೆಲವು ಒಕ್ಕಲುಗಳನ್ನು ಕರೆದು, “ತಾವಾಗಿಯೇ ಸ್ವಲ್ಪ ಸ್ವಲ್ಪ ಗದ್ದೆಗಳನ್ನು ಬಿಟ್ಟು ಕೊಡುತ್ತೇನೆ. ರಾಜಿಗೆ ಬನ್ನಿ” ಎಂದರೂ ಯಾರೂ ಬರಲಿಲ್ಲ.
ಶೆಟ್ಟರು ವೃಥಾ ಎಲ್ಲರ ಮೇಲೂ ಹರಿಹಾಯಲು ಶುರು ಮಾಡಿದ್ದರಿಂದ ನಾಯಕರಾಗಿದ್ದ ಶೆಟ್ಟರು ಕಳೆಗುಂದಿ, ಬಸವಳಿದು, ದುಷ್ಷ, ಅಮಾನವೀಯ ಕಾನೂನಿನ ಮುಂದೆ ಖಳನಾಯಕರಾಗಬೇಕಾಯಿತು. ಕಡೆಗೂ ಬದುಕುವುದಕ್ಕೊಂದಷ್ಟು ತನ್ನದೇ ಭೂಮಿಯನ್ನು ಉಳಿಸಿಕೊಳ್ಳುವುದರಲ್ಲಿ ಶೆಟ್ಟರು ಯಶಸ್ವಿಯಾದರೂ, ಹೈರಾಣಾಗಿಬಿಟ್ಟರು.
ಅಸಹಾಯಕ ಶೂರರಾಗಿ ಬಹುತೇಕ ಏಕಾಂಗಿಯಾಗಿ ಬಿಟ್ಟಿದ್ದರೂ, ಅವರ ದರ್ಪ, ದೌಲತ್ತು ಮೊದಲಿನ ಹಾಗೆಯೇ ಇತ್ತು. ಆಷ್ಟೇ ಅಲ್ಲದೆ, ಎದುರಿಗೆ ಬಂದು ವಿನಯ ತೋರಿಸುತ್ತಿದ್ದ ಕೆಲವು ಸ್ನೇಹಿತರೂ, ಇವರಿಂದ ಲಾಭಪಡೆದು ಚೇಲಾಗಳಂತೆ ಹಿಂದೆ ಮುಂದೆ ಸುತ್ತಾಡುತ್ತಿದ್ದ ಬಂಧುಗಳು, ಒಕ್ಕಲುಗಳು ಹಿಂದಿನಿಂದ ಇವರನ್ನು ತಮಾಷೆ ಮಾಡುವ ಹಾಗಾಯಿತು.
ಅಂತಹ ಕಾಲದಲ್ಲಿ ಅವರ ಒಬ್ಬಳೇ ಮಗಳು ಶಂಕರನಾರಾಯಣ ಜ್ಯೂನಿಯರ್ ಕಾಲೇಜಿನಲ್ಲಿ ಓದುತ್ತಿದ್ದವಳು, ಓದಿನಲ್ಲಿ ಹಿಂದೆ ಬಿದ್ದು, ಎಸ್ ಎಸ್ ಎಲ್ ಸಿ.ಯಲ್ಲಿ ಡುಮ್ಕಿ ಹೊಡೆದು ಪಾಸ್ ಆಗದೇ ಇದ್ದುದರಿಂದ, ಇನ್ನೂ ಅವಮಾನವಾದಂತಾಗಿ ಶೆಟ್ಟರು, ಅವಳಿಗೆ ,
“ಇನ್ನು ನೀನು ಓದಿದ್ದು ಸಾಕು. ಒಂದು ಮದುವೆ ಮಾಡಿಸುವ”
ಎಂದು ಹೊರಟಿದ್ದೇ, ಮೇಲೆ ಹೇಳಿದ ಪಕ್ಕ ಯಾನೆ ಜಯಪ್ರಕಾಶ ಶೆಟ್ಟಿಯ ಮನೆಯವರೊಂದಿಗೆ ಮಾತಾಡಿ ಸಂಬಂಧ ಕುದುರಿಸಿ, ಗಡದ್ದಾಗಿ ಮದುವೆ ಮಾಡಿ ಅಳಿಯನನ್ನು ಮನೆಗೆ ಕರೆತರುವುದರಲ್ಲಿ ಪ್ರಕರಣ ಅಂತ್ಯವಾಗಿತ್ತು.
ಆದರೆ ಆ ಅಳಿಯನೂ ಮಾವನಂತೆಯೇ ಸ್ವಲ್ಪ ದರ್ಪದವನೂ, ದರ್ಬಾರಿಯೂ ಆದ್ದರಿಂದ, ಅವರ ಮಧ್ಯ ಸರಿಬರದೇ ಇರಲು ಹೆಚ್ಚು ಕಾಲ ಬೇಕಾಗಲಿಲ್ಲ. ಮತ್ತೆ ಮತ್ತೆಯಂತೂ ಮಾತುಕತೆಯೇ ಇರಲಿಲ್ಲವಂತೆ. ಮನೆಯಲ್ಲಿ ಮಾವ ಇದ್ದರೆ, ಅಳಿಯ ಇಲ್ಲ. ಅಳಿಯ ಇದ್ದರೆ, ಮಾವ ಇಲ್ಲ ಎಂಬಂತಾಯಿತು.
ಇಬ್ಬರೂ ಮುಷುಂಡಿಗಳೆ.
ಆದರೆ ಗ್ರಹಚಾರಕ್ಕೆ, ಮದುವೆಯಾದ ಒಂದೆರಡು ವರ್ಷದಲ್ಲಿ  ಪಕ್ಕ ಯಾನೆ ಜಯಪ್ರಕಾಶ ಶೆಟ್ಟಿಗೆ ಬೆನ್ನಿನ ಮೂಳೆಯಲ್ಲಿ ಮತ್ತೆ ನೋವು ಕಾಣಿಸಿಕೊಂಡಿತು.

*""""*""*****




ಬಹುಷ್ಯ ಕಾಲೇಜಿಗೆ ಹೋಗುವಾಗ ಸೈಕಲ್ ಚೈನಿನಿಂದ ಹೊಡೆಸಿಕೊಂಡಾಗ ಆದ ಬೆನ್ನು ಮೂಳೆಯ ನೋವು, ಕಗ್ಗಡಿಯಾಗಿ ಒಳಗಿಂದೊಳಗೇ ಹಾಗೆಯೇ ಉಳಿದು ಕೊಂಡು ಇದ್ದಿರಬೇಕು. ಒಮ್ಮೆ ಮಾಡಿದ ಔಷಧಿ ಪಥ್ಯಗಳಿಂದ ತಾತ್ಕಾಲಿಕವಾಗಿ ಅಡಗಿದ ನೋವು, ಮತ್ತೆ ಇಷ್ಟು ಕಾಲದ ನಂತರ ಹೆಡೆಯೆತ್ತಿ ಕಾಡತೊಡಗಿತು.
ಕಂಡವರು ಹೇಳಿದ ಮದ್ದನ್ನು ಮಾಡಿಸಿದ್ದಾಯಿತು. ಮಣಿಪಾಲದಲ್ಲಿ ತೋರಿಸಿಯಾಯಿತು. ಬೆಂಗಳೂರಿನ ವಿಕ್ಟೋರಿಯ ಆಸ್ಪತ್ರೆಯ ನೀರೂ ಕುಡಿದಾಯಿತು. ಪಕ್ಕ ಯಾನೆ ಜಯ ಪ್ರಕಾಶ ಶೆಟ್ಟಿ, ಸೋತು ಹಣ್ಣಾಗಿ ಬಿಟ್ಟ.
ಆಸ್ಪತ್ರೆಗೆ ಹೋಗಿ ಗುಣ ಅಂತ ಆಗಿ,  ಮನೆಗೆ ಬಂದ ಕೆಲವು ದಿನ, ನೋವು ಸ್ವಲ್ಪ ಕಡಿಮೆಯಾದಂತೆ ತೋರಿದರೂ, ಕಡೆಕಡೆಗೆ  ಏಳಲೂ ಆಗದೇ ಅವನು ಹಾಸಿಗೆ ಹಿಡಿದ. ಓಡಾಡಲಿಕ್ಕೇ ಆಗದ ಪರಿಸ್ಥಿತಿ. ಬೆನ್ನು ನೋವಿನಿಂದ ಹಾಸಿಗೆಯಲ್ಲಿಯೇ ಇದ್ದು ನರಳತೊಡಗಿದ.
ಮಲಗಿದಲ್ಲೇ ಅಂತ ಆದ ಮೇಲೆ ಅವನ ಪರಿಸ್ಥಿತಿ ಮತ್ತೂ ಚಿಂತಾಜನಕವಾಯಿತು.  ಆಗಾಗ ಕೊಡಬೇಕಾದ ಇಂಜೆಕ್ಷನ್ ವಗೈರೆಗೆ ಒಬ್ಬ ಡಾಕ್ಟರರನ್ನು ಗೊತ್ತು ಮಾಡಬೇಕಾಯಿತು. ಇಂಜೆಕ್ಷನ್ ತೆಗೆದುಕೊಳ್ಳುವುದು ಕೇವಲ ನೋವು ನಿವಾರಣೆಗೇ ಆದರೂ, ಅದನ್ನು ತೆಗೆದುಕೊಳ್ಳದಿದ್ದರೆ ಪಕ್ಕಯಾನೆ ಜಯಪ್ರಕಾಶ ಶೆಟ್ಟಿಯ ಸೊಂಟದ ನೋವು ತೀವ್ರವಾಗಿ ಅವನ ಬೊಬ್ಬೆಗೆ, ಕಿರುಚಾಟಕ್ಕೆ ಎಣೆಯೇ ಇಲ್ಲವಾಗುತ್ತಿತ್ತು. ಮನೆಗೆ ಬಂದು ಇಂಜೆಕ್ಷನ್ ಆದರೂ ಕೊಡಲು ಒಬ್ಬ ಡಾಕ್ಟರ್ ಬೇಕಾಯಿತು.
ಒಬ್ಬರು ಸಿಕ್ಕಿದರು. ಪಕ್ಕ ಯಾನೆ ಜಯಪ್ರಾಕಾಶ ಶೆಟ್ಟಿಯ ಮಾವನ ಸ್ನೇಹಿತರೇ ಆದ, ಸದಾಶಿವ ಶೆಟ್ಟಿ ಎನ್ನುವವರು.
ಆಯಿತು ಅವರನ್ನು ಕಂಡು ಮಾತಾಡಿ ಗೊತ್ತು ಮಾಡಿದರು. ಅವರದ್ದು ಮೂಡುಹಾಲಾಡಿಯ ಬಸ್ ಸ್ಟಾಂಡ್ ಹತ್ತಿರದ ಉತ್ತರ ಬದಿಯ ಎತ್ತರದ ಜಾಗದಲ್ಲಿ ಸಾಲಾಗಿ ಇರುವ ಕಳಿನ್ ಸಾಹೇಬರು ಎಂಬವರ ಕಟ್ಟಡದಲ್ಲಿ ಇರುವ ಒಂದು ಬಾಡಿಗೆ ಶಾಪು.
ಪಕ್ಕದಲ್ಲೇ ಸರಕಾರಿ ಧರ್ಮಾಸ್ಪತ್ರೆಯೂ ಇದ್ದುದರಿಂದ, ಅವರಲ್ಲಿಗೆ ಗಿರಾಕಿಗಳು ಹೆಚ್ಚಿಗೆ ಬರುತ್ತಿರಲಿಲ್ಲ. ಅವರಿಗೆ ವಾರಕ್ಕೊಮ್ಮೆ ಕೊಯ್ಕಾಡಿಯ ಶೆಟ್ಟರ ಮನೆಗೆ ಬಂದು ಪಕ್ಕನಿಗೆ ಇಂಜೆಕ್ಷನ್ ಕೊಡುವುದೂ ಕಷ್ಟವಾಗದೇ ಇರುವುದರಿಂದ, ಅದರಿಂದ ಖಾಯಂ ಆದಾಯವೂ ಬರುತ್ತಿದ್ದುದರಿಂದ ಅವರು ಆ ಹೊಣೆಯನ್ನು ವಹಿಸಿಕೊಂಡರು.
ಕೊಯ್ಕಾಡಿ ಶೆಟ್ಟರ ಮನೆಯಲ್ಲಿ ಒಂದು ದೊಡ್ಡ ಆಲ್ಶೇಶಿಯನ್ ನಾಯಿ ಇತ್ತು. ಅದು ಯಾವಾಗಲೂ ಈ ಪಕ್ಕ ಯಾನೆ ಜಯಪ್ರಕಾಶ ಶೆಟ್ಟಿಯ ಭಂಟ. ಅವನ ಹಾಸಿಗೆಯ ಬಳಿಯೇ ಕುಳಿತಿರುತ್ತಿತ್ತು.  ಅವನನ್ನು ಕಂಡರೆ ಆ ನಾಯಿಗೆ ಪಂಚಪ್ರಾಣ. ಅವನ ಊಟ ತಿಂಡಿಗಳಲ್ಲಿ ಅದಕ್ಕೊಂದು ಪಾಲು.
ಆದರೆ ಅದೇಕೋ ಗೊತ್ತಿಲ್ಲ. ಆ ನಾಯಿಗೆ ಈ ಸದಾಶಿವ ಡಾಕ್ಟರರನ್ನು ಕಂಡರೆ ಆಗುತ್ತಿರಲಿಲ್ಲವಂತೆ. ಸದಾಶಿವ ಡಾಕ್ಟರು ಬಂದರೆ ಸಾಕು, ಅದು ಅವರ ಮೇಲೆ ಎರಗಿ ಕಚ್ಚಲು ಹೋಗುತ್ತಿತ್ತು.
ಹಾಗಾಗಿ ಆ ಡಾಕ್ಟರರು ಬರುವ ದಿನ ಮೊದಲಾಗಿ ತಿಳಿದು, ಅವರು ಬರುವ ಸಮಯದಲ್ಲಿ ಅದನ್ನು ಸರಪಳಿಯಿಂದ ಕಟ್ಟಿ ಹಾಕುತ್ತಿದ್ದರು. ಆದರೂ ಅವರು ಬಂದು ಇಂಜೆಕ್ಷನ್ ಕೊಟ್ಟು, ಶೆಟ್ಟರ ಹೆಂಡತಿ, ಮಿಣುಕು ಶೆಡ್ತಿ ಕೊಡುವ ಕಾಫಿ ತಿಂಡಿಯನ್ನು ಸೇವಿಸಿ, ಅವಳು ಅವರ ಬ್ಯಾಗನ್ನು ಹೊತ್ತು, ಅವರ ಹಿಂದೆ ಹಿಂದೆಯೆ ಹೋಗಿ, ಮನೆಯ ಅಂಗಳದ ಮುಂದಿನ ಗದ್ದೆಗಳನ್ನು ಉತ್ತರಿಸಿ, ಆಚೆಗೆ ಹೋಗಿ ಅವರು ಅಲ್ಲಿ ಇರಿಸುತ್ತಿದ್ದ, ಬೈಕಿನವರೆಗೆ ಹೋಗಿ, ಡಾಕ್ಟರರನ್ನು ಕಳಿಸಿ ಬರುವವರೆಗೂ ಅದು ಗುರುಗುಟ್ಟುತ್ತಾ ಇರುತ್ತಿತ್ತು.
ಕೆಲವರು ಆ ಡಾಕ್ಟರಿಗೂ, ಮಿಣಕು ಶೆಡ್ತಿಗೂ ಏನೋ ಸಂಬಂಧ ಇದೆ, ಹಾಗಾಗಿ ಆ ನಾಯಿಗೆ ಡಾಕ್ಟರ್ ರನ್ನು ಕಂಡರೆ ಆಗುವುದಿಲ್ಲ ಎನ್ನುತ್ತಿದ್ದರು.
ಅಂತೂ ಪಕ್ಕ ಯಾನೆ ಜಯಪ್ರಕಾಶ ಶೆಟ್ಟಿ ಮಲಗಿದಲ್ಲೇ ಆಗಿ ಆಗಲೇ ವರ್ಷವಾಗುತ್ತಾ ಬಂದಿತ್ತು.

***********




ನಾನು ಕುಂದಾಪುರದ ಕಾಲೇಜಿನಲ್ಲಿ ಡಿಗ್ರಿ ಮುಗಿಸಿ ಮನೆಗೆ ಬಂದೆ. ಆದರೆ ನಮ್ಮ ಮನೆ ಇರುವುದು ಹಾಲಾಡಿಯಿಂದ ದಕ್ಷಿಣ ದಿಕ್ಕಿನಲ್ಲಿ. ಸುಮಾರು ಐದು ಮೈಲಿ ದೂರದಲ್ಲಿ. ನಡೆದೇ ಹೋಗಬೇಕು. ರಸ್ತೆ ಸೌಕರ್ಯ ಇಲ್ಲ. ಹಲವಾರು ಗದ್ದೆ ಬಯಲು, ಹಾಡಿ ಗುಡ್ಡವನ್ನೂ, ತೋಡಿಗೆ ಹಾಕಿದ ಸಂಕವನ್ನು ದಾಟಿ, ಬೇಲಿಗಳನ್ನು ಹಾರಿ ದಾಟಿಕೊಂಡೇ ಹೋಗಬೇಕು. ನನಗೆ ಡಿಗ್ರಿಯಾದ ಮೇಲೆ ಮುಂದೆ ಓದುವ ಅನುಕೂಲವಿಲ್ಲದಿದ್ದುದರಿಂದ ನಾನು ಮನೆಯಲ್ಲಿ ಅಣ್ಣನೊಂದಿಗೆ ಅದೂ ಇದೂ ಕೆಲಸ ಮಾಡುತ್ತಾ, ಪ್ರತಿ ದಿನ ಸಂಜೆಯ ಹೊತ್ತಿಗೆ ಹಾಲಾಡಿಯವರೆಗೆ ನಡೆದು ಬಂದು ಗೋಳೇರ ಜೀನಸಿಅಂಗಡಿಯಲ್ಲಿ, ಎದುರಿನ ದೊಡ್ಡ ಚಾವಡಿಯಂತಹ ಜಾಗದ ಬೆಂಚಿನಲ್ಲಿ ಕುಳಿತು, ಅವರು ತರಿಸುವ ನಾಲ್ಕಾರು ದಿನಪತ್ರಿಕೆಗಳನ್ನು ಓದುತ್ತಿದ್ದೆ. ಪೇಪರಲ್ಲಿ ಬೇಕಾಗಿದ್ದಾರೆ ಎಂಬ ಕಾಲಂ ನ್ನು ತಪ್ಪದೇ ನೋಡಿ, ಅಲ್ಲಿ ಇಲ್ಲಿ ಕೆಲಸಕ್ಕಾಗಿ ಅರ್ಜಿ ಹಾಕುತ್ತಿದ್ದೆ. ಮತ್ತು ಕತ್ತಲಾಗುವ ಮೊದಲು ಮನೆಯನ್ನು ಸೇರಿಕೊಳ್ಳುತ್ತಿದ್ದೆ.
ನಮ್ಮ ಮನೆಯಿಂದ ಹಾಲಾಡಿಗೆ ನಾವು ನಾಲ್ಕಾರು ಬೇರೆ ಬೇರೆ ದಾರಿಗಳಲ್ಲಿ ಹೋಗಬಹುದಾಗಿತ್ತು. ಅದರಲ್ಲಿ ಒಂದು ದಾರಿ, ಅಂದರೆ ನಾವು ಮನೆಯ ಮುಂದಿನ ಬಯಲನ್ನು ಒಂದು ಸಣ್ಣ ಹೊಳೆಯ ಸಂಕವನ್ನು ಏರಿ, ಗುಡ್ಡದಲ್ಲಿ ಸ್ವಲ್ಪ ದೂರ ಸಾಗಿ, ತಟ್ಟುವಟ್ಟು ಬಯಲಿಗೆ ಇಳಿದು ದಾಟಿ ಕುಚ್ಚಾಲಿನ ಹಾಡಿಯಲ್ಲಿ ನಡೆಯುತ್ತಾ ಬಂದು, ಒಂದು ಸಣ್ಣ ಗುಡ್ಡವನ್ನು ದಾಟಿದರೆ ಅದು ಇಳಿಯುವುದು ಕೊಯ್ಕಾಡಿಯ ಆ ಶೇಕು ಶೆಟ್ಟರ ಮನೆಯ ಹಿಂದಿನ ಹಟ್ಟಿಯ ಪಕ್ಕದಲ್ಲಿ.
ಅಲ್ಲಿಂದ ಹಾಗೆ ಕೆಳಗೆ ಇಳಿದು, ಮತ್ತೆ ಅವರ ಮನೆಯನ್ನು ಬಳಸಿಕೊಂಡು ಎದುರಿನ ಅಂಗಳದ ಪಕ್ಕದಲ್ಲಿ ನಡೆದು ಬರಬೇಕು. ಅಂಗಳದ ಮತ್ತೊಂದು ಬದಿಯಲ್ಲಿ ದೊಡ್ಡ ಕಣಿ, ಪ್ರಪಾತ. ಮಣ್ಣು ಜರಿದು ಹೋಗಬಾರದು ಅಂತ ಅಲ್ಲಿ ನಾಲ್ಕಾರು ಹಲಸು, ಮಾವಿನ ಮರಗಳನ್ನು ನೆಟ್ಟಿದ್ದರು. ಬಾಳೆಲೆ ಕಸಕಡ್ಡಿಗಳನ್ನು ಅಲ್ಲಿಯೇ ಎಸೆಯುತ್ತಿದ್ದರು. ಅಲ್ಲಿಂದ ಅಂಗಳಬದಿಯಲ್ಲೇ ಮುಂದಕ್ಕೆ ಹೋಗಿ ಮೆಟ್ಟಲಲ್ಲಿ ಇಳಿದು, ಗದ್ದೆಯ ಬಯಲಿಗೆ ಹೋಗಿ ಅದನ್ನು ದಾಟಬೇಕು.
ಅವರ ಮನೆಯ ಅಂಗಳದ ಹತ್ತಿರದ ಮೆಟ್ಟಲಿನ ಮತ್ತೊಂದು ಮಗ್ಗುಲಲ್ಲಿ ಒಂದು ದೊಡ್ಡ ಕೆರೆ. ಅದಕ್ಕೆ ಗುಮ್ಮಿ ಅನ್ನುತ್ತಾರೆ ಅವರು. ಬಯಲು ದಾಟಿದ ನಂತರ ಒಂದು ಸಣ್ಣ ತೋಡು. ಅಲ್ಲಿಂದ ಮುಂದಿನ ಓಣಿಯಲ್ಲಿ ಸಾಗುತ್ತಾ ಬಂದರೆ ಆ ದಾರಿ, ಹಾಲಾಡಿ ಬಂಡಸಾಲೆಯ ಪೋಸ್ಟ್ ಆಫೀಸ್ ನ ಎದುರಿಗೆ ಹಾಲಾಡಿ ರಸ್ತೆಯನ್ನು ಸೇರುತ್ತದೆ. ಆಮೇಲೆ ರಸ್ತೆಯಲ್ಲಿ ನಡೆದು ಮೂಡು ಹಾಲಾಡಿಗೆ ಬಂದು ಗೋಳೇರ ಅಂಗಡಿಗೆ ಬರಬಹುದು. ನಾನು ಸಾಮಾನ್ಯವಾಗಿ ಆ ದಾರಿಯಲ್ಲಿಯೇ ಹಾಲಾಡಿಗೆ ಬರುತ್ತಿದ್ದೆ.
ಆದರೆ ನಾನು ಬಾಲ್ಯದಲ್ಲಿ ಕಂಡ ಬಯಲಿನ ಹಸಿರು ಸಮೃದ್ಧತೆ ಎಲ್ಲೆಲ್ಲೂ ಹಸಿರುತುಂಬಿ ನಳನಳಿಸುವ ಬೆಳೆ ಈಗ ಸ್ವಲ್ಪ ಮಂಕಾದಂತೆ ಕಾಣುತ್ತದೆ. ಈಗೀಗ ರೈತರಿಗೆ ಬೇಸಾಯದ ಬಗ್ಗೆ ಅಷ್ಟೇನೂ ಆಸಕ್ತಿಯೂ ಇಲ್ಲದೇ ಬೇಕೋ ಬೇಡವೋ ಎಂದು ಬೆಳೆ ಬೆಳೆಯುತ್ತಿದ್ದಾರೆ.
ತರಕಾರಿ ಮತ್ತು ನಿತ್ಯ ಸಿಗುವ ವಸ್ತುಗಳನ್ನು ಮನೆಯಲ್ಲಿ ಬೆಳೆಯದೇ ಪೇಟೆಯಿಂದ ತರುತ್ತಿದ್ದರು. ಅತ್ತ ಸರಕಾರವೂ ರೈತರಿಗೆ ಪ್ರೋತ್ಸಾಹಧನ, ಕೃಷಿ ಸಾಲ ಇತ್ಯಾದಿಗಳ ಆಕರ್ಷಣೆಯನ್ನು ಅಂಗೈಗೆ ಹಚ್ಚಿದ ಬೆಲ್ಲದಂತೆ ತೋರಿಸುತ್ತಾ ಓಟು ಕೀಳುವ ರಾಜಕಾರಣವಾಗಿ ಬದಲಾಗುತ್ತಿತ್ತು. ನಿಜವಾಗಿ ದುಡಿದು ತಿನ್ನುವವರೂ ಕೆಲವು ಪ್ರಭಾವಿ ವ್ಯಕ್ತಿಗಳ ಹಿಂದೆ ಬಿದ್ದು ಹೇಗೆ ದುಡಿಯದೇ ಗಳಿಸಬಹುದು ಎಂಬುದರ ಬಗ್ಗೆ ಯೋಚಿಸುತ್ತಿದ್ದರು.
ಜನರಲ್ಲಿ ಪೇಟೆಯ ಆಕರ್ಷಣೆ, ಒಳಗೆ ಏನೂ ಇಲ್ಲದಿದ್ದರೂ ಹೊರಗೆ ಶೋಕಿಯಾಗಿ ಮೆರೆಯುವ ಮನೋಭಾವ ಎಲ್ಲೆಲ್ಲೂ ಕಾಣಿಸತೊಡಗಿತು.
ಆ ಸದಾಶಿವ ಡಾಕ್ಟರು ಎಂಬವರು ಯಾವುದೋ ಒಂದು ಕಡೆಯಿಂದ ನೋಡಿದರೆ ನನ್ನ ಹಾಗೆಯೇ ಕಾಣುತ್ತ ಇದ್ದರು ಅಂತ ಕೆಲವರು ಹೇಳುತ್ತಿದ್ದರು. ಆ ಮಿಣಕು ಶೆಡ್ತಿಯೂ, ಯಾವಾಗಲಾದರೂ ನಾನು ದಾರಿಯಲ್ಲಿ ದಾಟಿ ಹೋಗುವಾಗ, ಎದುರು ಸಿಕ್ಕಿದರೆ ಹೇಳುವುದಿತ್ತು.  
"ಹ್ವಾಯ್  ಅಯ್ಯ, ನಿಮ್ಮನ್ನು ಕಂಡ್ರೆ ನಂಗೆ ಆ ಸದಣ್ಣನ್ ಕಂಡಾಂಗೆ ಆತ್ ಮರ್ರೆ"
ಅಂತ.
ಸದಣ್ಣ ಅಂದರೆ ಅದೇ ಡಾಕ್ಟರರು, ಸದಾಶಿವ ಶೆಟ್ರು. ಆ ಡಾಕ್ಟ್ರು ಆವಾಗ ಅಲ್ಲಿಗೆ ಆಗಾಗ ಬರುತ್ತಿದ್ದರಲ್ಲ.
ಆದರೆ ನನಗೆ ಗೊತ್ತಿದ್ದ ಹಾಗೆ ಆ ಡಾಕ್ಟರರ ತಲೆಯ ಮುಂದಿನ ಭಾಗದ ಕೂದಲು ಉದುರಿಹೋಗಿ ಬೋಳಾಗಿತ್ತು. ಮತ್ತು ಅವರು ಸದಾ ಕನ್ನಡಕ ಹಾಕುತ್ತಿದ್ದರು. ಮತ್ತು ವಯಸ್ಸಿನಲ್ಲಿ ನನಗಿಂತ ತುಂಬಾ ಹಿರಿಯರಾಗಿದ್ದರು.
ನಾನು ಸುಮ್ಮನೇ ನಕ್ಕು ಮುಂದೆ ಹೋಗುತ್ತಿದ್ದೆ.


************




ಇದೆಲ್ಲ ಸುಮಾರು ಹತ್ತು ಹನ್ನೆರಡು ವರ್ಷದ ಹಿಂದಿನ ಕತೆ.
ಆಮೇಲೆ ನನಗೆ ಒಂದು ಸರಕಾರಿ ಕೆಲಸ ಸಿಕ್ಕಿ, ಮದುವೆಯೂ ಆಗಿ ಒಬ್ಬ ಮಗನೂ ಇದ್ದಾನೆ. ನಾವು ದೂರದ ಬೇರೆ ಬೇರೆ ಊರುಗಳಲ್ಲಿ ಕೆಲಸ ಮಾಡಿ, ಮತ್ತೆ ಉಡುಪಿಗೆ ಬಂದು ಸೆಟ್ಲ್ ಆಗಿದ್ದೇವೆ. ಅಮ್ಮ ಅಪ್ಪಯ್ಯ ತೀರಿಹೋದ ಮೇಲೆ ಊರಿಗೆ ಹೋಗುವುದು ತೀರಾ ಕಡಿಮೆ.
ಇದ್ದಕ್ಕಿದ್ದಂತೆ ಒಮ್ಮೆ ಮಳೆಗಾಲದಲ್ಲಿ ನನಗೆ ನಾಲ್ಕು ದಿನ ರಜೆ ಸಿಕ್ಕಿದಾಗ, ಊರಿಗೆ ಹೋಗಿ ಬರುವ ಅಂತ ಮನಸ್ಸಾಯಿತು. ಬಸ್ಸಿನಲ್ಲಿ ಹಾಲಾಡಿಗೆ ಹೊರಟೆವು. ಸಂಜೆಯ ಹೊತ್ತಿಗೆ  ಹಾಲಾಡಿಗೆ ಬಂದು, ಪೋಸ್ಟ್ ಆಫೀಸಿನ ಹತ್ತಿರ ಬಸ್ಸನ್ನು ಇಳಿದೆವು.
ಆಗಲೇ ಸಂಜೆಯಾಗುತ್ತಾ ಬಂದದ್ದರಿಂದ ಸ್ವಲ್ಪ ಸ್ವಲ್ಪ ಕತ್ತಲು ಆವರಿಸುತ್ತಿತ್ತು. ಪೂರ್ತಿ ಕತ್ತಲಾಗುವುದರೊಳಗೆ ಮನೆ ಸೇರಿಕೊಳ್ಳುವ ಎಂದು ಗಡಿಬಿಡಿಯಿಂದ ಬೇಗ ಬೇಗ ಹೊರೆಟವು. ಓಣಿಯಲ್ಲಿ ನಡೆದು, ತೋಡಿಗೆ ಹಾಕಿದ ಸಂಕವನ್ನು ದಾಟಿ, ಮುಂದಿನ ಗದ್ದೆ ಬಯಲಿನ ಕಂಟದಲ್ಲಿ ಕೆಸರಿನಲ್ಲಿ ಕಾಲನ್ನು ತೋಯಿಸಿಕೊಂಡು ಬ್ಯಾಲೆನ್ಸ್ ಮಾಡುತ್ತ ದಾಟಿದೆವು.
ಈಗ ಮೊದಲಿನ ಹಾಗೆ ಉತ್ಸಾಹದಿಂದ ಬೇಸಾಯವನ್ನು ಮಾಡುವವರಿಲ್ಲ. ಕೆಲವು ಗದ್ದೆಗಳು ಬೇಸಾಯ ಮಾಡದೇ ಇದ್ದು ಹಡಲು ಬಿದ್ದಿತ್ತು. ಹಿಂದೆ ಹಸಿರಿನಿಂದ ನಳನಳೆದುತ್ತಿದ್ದ ಭತ್ತದ ಗದ್ದೆಗಳೆಲ್ಲ ಈಗ ಕಳೆ ಬೆಳೆದು ಕಾಂತಿಹೀನವಾಗಿತ್ತು.
ಮಧ್ಯೆ ಮಧ್ಯೆ ಅಲ್ಲೊಂದು ಇಲ್ಲೊಂದು ಗದ್ದೆ ನಟ್ಟಿ ಮಾಡಿದ್ದರೂ ಹಿಂದಿನಂತೆ ಬೆಳೆ ನಳನಳಿಸುತ್ತಿರಲಿಲ್ಲ. ಶೆಟ್ರರ ವಿಶಾಲ ಗದ್ದೆ ಬಯಲು ಯಾವುದೋ ವೈಭವದ ಅವಶೇಷದಂತೆ ಕಾಣುತ್ತಿತ್ತು.
ಯಾರೋ ಎದುರಿನಿಂದ ಕೊಡೆಹಿಡಿದುಕೊಂಡು ಬರುತ್ತಿದ್ದರು. ಮೊದಲಾದರೆ ಗದ್ದೆಗಿ ಇಳಿದು ನಮಗೆ ದಾರಿ ಮಾಡಿಕೊಡುತ್ತಿದ್ದರು. ಈಗ ಕಂಟದ ಬದಿಯಲ್ಲಿ ಬ್ಯಸಲೆನ್ಸ್ ಮಾಡುತ್ತಾ ನಮ್ಮನ್ನು ದಾಟಿದರು. ಯಾರೋ ಪರಿಚಿತ ಮುಖ ಅನ್ನಿಸಿತು. ಅವರು ತಿರುಗಿ ನೋಡದಿದ್ದರೂ ನಾನೇ ಮಾತಾಡಿಸಿದೆ.
ಹ್ಯಾಯ್ ಇದು ನಟ್ಟಿ ಮಾಡುವ ಸಮಯ ಅಲ್ದಾ?
ಅವರು ತಿರುಗಿನಿಂತು ಉತ್ತರಿಸಿದರು,
ಹೌದು ನಿಮಗೆ ಎಲ್ಲಾಯಿತು. ಈಗ ನಟ್ಟಿಮಾಡೂಕೆ ಜನವೇ ಸಿಕ್ಕುದಿಲ್ಲೆ. ಮನೆಯಲ್ಲಿಯೂ ಒಬ್ಬೊಬ್ಬರು ಇಬ್ಬಿಬ್ಬಿರು ಇಪ್ಪುದಲ್ದೆ? ಹೆಂಗಸರೆಲ್ಲ ಬೀಡಿ ಕಟ್ಟುಕೆ ಹ್ವಾತ್ವೆ. ಗಂಡಸರು ಕಾರ್ಖಾನಿ ಕೆಲಸಕ್ಕೆ ಹ್ವಾತ್ರು. ಹಾಂಗಾಯಿ ಈಗ ನಟ್ಟಿ ಬೇಸಾಯ ಮಾಡ್ವವರೇ ಇಲ್ಲೆ.
ಮತ್ತೆ ಉಬುಕೆ?
ನೀವ್ ಎಲ್ಲಿದ್ರಿ? ಈಗ ಸರ್ಕಾರವೇ ಒಂದ್ ರುಪಾಯಿಗೆ ಬೇಕಂಬಷ್ಟು ಅಕ್ಕಿ ಕೊಡತ್ತಲೆ.
ಎಂತಹಾ ಧಗಾ.? ವಂಚನೆ. ಭೂಮಿ ತಾಯಿ ಇವರನ್ನೆಲ್ಲ ಕ್ಷಮಿಸಿಯಾಳೇ? ಬೆಂಕಿ ಬೇಂಕಿಯಾಗಿ ಉರಿದು ಇವರನ್ನೆಲ್ಲಾ ಸುಟ್ಟು ನಾಶ ಮಾಡಲಿಕ್ಕಿಲ್ಲವೇ? ಏನೋ.
ಅವರಿಗೆ ಏನೂ ಅನ್ನಿಸಲಿಲ್ಲ ಮುಂದೆ ಹೊರಟುಹೋದರು.
ಕೊಯ್ಕಾಡಿ ಶೆಟ್ಟರ ಮನೆಯ ಅಂಗಳದ ಎದುರಿನ ಮೆಟ್ಟಲುಗಳನ್ನು ಹತ್ತಿ ಮೇಲೆ ಬರುತ್ತಿದ್ದೆನಷ್ಟೆ.
ನನ್ನನ್ನು ನೋಡಿದ ಅವರ ಮನೆಯ ನಾಯಿ ಇದ್ದಕ್ಕಿದ್ದಂತೆ ಜೋರಾಗಿ ಕೂಗುತ್ತಾ ಓಡಿ ಬಂದು, ನನ್ನ ಮೇಲೆ ಎರಗಲು ಹಾರಿತು. ನನಗೆ ಒಮ್ಮೆಲೇ ಗಾಬರಿಯಾಯಿತು. ಸಣ್ಣಗೆ ಮಳೆಯೂ ಬರುತ್ತಿದ್ದುದರಿಂದ ನಾನು ಕೊಡೆಯನ್ನು ಹಿಡಿದಿದ್ದೆ, ಯಾವ ಧೈರ್ಯವೋ ಒಮ್ಮೆಲೇ ಕೊಡೆಯನ್ನು ಪಕ್ಕನೇ ಅಡ್ಡ ಹಿಡಿದೆ. ಆಗಲೇ ಆ ನಾಯಿ ಮುದಿಯಾಗುತ್ತಾ ಬಂದಿದ್ದು, ಬಹುಷ್ಯ ಅದರ ಗುರಿ ಸ್ವಲ್ಪ ತಪ್ಪಿದ್ದಿರಬೇಕು. ಅಥವ ನನ್ನ ಕೊಡೆಯು ಇದ್ದಕ್ಕಿದ್ದಂತೆ ಅಡ್ಡ ಬಂದುದರಿಂದ ಹೆದರಿ ಅದರ ಗತಿಯನ್ನು ಸ್ವಲ್ಪ ಬದಲಾಯಿಸಿತೋ ಏನೋ.,
ಅಂತೂ ಒಮ್ಮೆಲೇ ಹಾರಿದ ರಭಸಕ್ಕೆ ನನ್ನ ಕೊಡೆಯ ಮುಂದಿನ ಭಾಗಕ್ಕೆ ರಪಕ್ಕನೇ ಬಡಿದು, ಮುಂದಕ್ಕೆ ಜಿಗಿದು, ನನ್ನ ಮುಂಭಾಗದಿಂದ ದಾಟಿ ಎಡಬದಿಯ ದೊಡ್ಡ ಪ್ರಪಾತಕ್ಕೆ ಬಿದ್ದು ಬಿಟ್ಟಿತು. ಅದರ ತಲೆಯು ಯಾವುದೋ ಚೂಪಾದ ಕಲ್ಲಿಗೆ ಬಡಿದಿದ್ದಿರಬೇಕು. ಒಮ್ಮೆಲೇ ಅದರ ಗೌವ್ ಗೌವ್ ಸ್ವರ ಮಾಯವಾಗಿ ಕುಯ್ ಕುಯ್ ಆಗಿ ಸ್ವಲ್ಪ ಹೊತ್ತಿನಲ್ಲಿಯೇ ಅದೂ ನಿಂತು ಹೋಯಿತು.
ನಾನು ಹೆದರಿಕೆಯಿಂದ ಗಡಗಡ ನಡುಗುತ್ತಿದ್ದೆ. ನನ್ನ ಹೆಂಡತಿ ಜೋರಾಗಿ ಅಯ್ಯೋ ಏನಾಯ್ತು? ಎಂದು ಕೂಗುತ್ತಿದ್ದಳು. ಮಗ ಇನ್ನೂ ಮೆಟ್ಟಲು ಹತ್ತುತ್ತಾ ಕೆಳಗೆ ಇದ್ದವನು, ಓಡೋಡಿ ಹತ್ತಿರ ಬಂದು ನನ್ನನ್ನು ಹಿಡಿದುಕೊಂಡ. ಅಷ್ಟರಲ್ಲಿ ಆ ಶೆಟ್ಟರ ಮನೆಯ ದೊಡ್ಡ ಹೆಬ್ಬಾಗಿಲನ್ನು ತೆರೆದು ಒಬ್ಬರು "ಯಾರದು? ಯಾರದು?"ಎನ್ನುತ್ತಾ ಕೈಯಲ್ಲಿ ಒಂದು ಕೊಡೆಯನ್ನು ಹಿಡಿದುಕೊಂಡು ಬಿಡಿಸುತ್ತಾ ಓಡಿಬಂದರು
ನಾನು "ಎಂತ ಮರ್ರೆ, ನಿಮ್ಮ ನಾಯಿ ನನ್ನನ್ ಕೊಲ್ತಿತ್ತಲೆ.... ಎಂದು ತೊದಲಿದೆ. ಅವರು "ಎಂತ ಆಯ್ತು ? ಎಂತ ಆಯ್ತು? ಎನ್ನುತ್ತ  ಹತ್ತಿರ ಓಡಿ ಬಂದರು. ನಾನು "ಎಂತ ಆಗಲಿಲ್ಲ ಪುಣ್ಯಕ್ಕೆ. ನಿಮ್ಮ ನಾಯಿ ಇಲ್ಲೆ ಕೆಳಗೆ ಬಿತ್ತು ಕಾಣಿ" ಎಂದು ತೊದಲಿದೆ.
“ಹೌದಾ ಮರ್ರೆ ಈಗ ಅದಕ್ಕೆ ಕಣ್ಣು ಸಮಾ ಕಾಂತಿಲ್ಯೆ?” ಎನ್ನುತ್ತಾ ಗಡಿಬಿಡಿಯಲ್ಲಿ ಅವನು ಮತ್ತೆ ಮನೆಯ ಒಳಗೆ ಹೋಗಿ, ಒಂದು ಬ್ಯಾಟರಿಯನ್ನು ತಂದ. ಅಂಗಳದ ತುದಿಯಲ್ಲಿ ನಿಂತು, ಕೆಳಗೆ ಬೆಳಕು ಬಿಟ್ಟ.
ನಾಯಿ ಪ್ರಪಾತದ ಮಧ್ಯ ಧರೆಯಲ್ಲಿ ಒಂದು ಬೇರಿಗೆ ಸಿಕ್ಕಿ ಬಿದ್ದಿತ್ತು. ಅವನು "ಟೀಪು, ಟೀಪು, ಬಾರಾ ಬಾರಾ" ಎಂದು ಕೂಗಿದ.
ಅದು ಏಳಲಿಲ್ಲ.
ಕೊನೆಗೆ “ಎಂತ ಮರ್ರೆ ? ಹೋಯ್ತಾ ಅಂತ. ಆ ಸಣ್ಣ ಶೆಟ್ರ ಸತ್ ಹೋದ ಮೇಲೆ, ಈ ನಾಯಿ ತಣ್ಣಗೆ ಆಯಿತ್. ಕೂಗುದೇ ಕೈದ್ ಮಾಡಿತ್ ಮರ್ರೆ. ಅದ್ ಇಷ್ಟ್ ಕೂಗಿದ್ದು, ನಾನ್ ಕೇಣಲೆ ಇಲ್ಲೆ" ಅಂದ.
ನಾನು ಅಷ್ಟರೊಳಗೆ ಸ್ವಲ್ಪ ಸುಧಾರಿಸಿಕೊಂಡಿದ್ದೆ.
"ಹೋ ಜಯಪ್ರಕಾಶ ಶೆಟ್ರು ತೀರಿಕೊಂಡ್ರಾ?" ಅಂದೆ.
"ಹೌದು. ಅವರು ಹೋಗಿ ಏಳೆಂಟು ವರ್ಷವೇ ಆಯ್ತಲ್ಲ ಮರ್ರೆ. ನೀವು ಯಾರು?” ಎಂದ.
ನನ್ನ ಪರಿಚಯ ಹೇಳಿ ಅವನು ಯಾರೆಂದೂ ಕೇಳಿದೆ.
ಅವನು ಅಲ್ಲಿಯ ಒಬ್ಬ ಕೂಲಿಯಾಳು. ದೊಡ್ಡ ಶೆಟ್ರು ಅಂದರೆ ಶೇಕು ಶೆಟ್ರು ಈಗ ಹಾಸಿಗೆಯಲ್ಲಿಯೇ. ಅವರಿಗೆ ಉಬ್ಬಸವಂತೆ. ಅವರನ್ನು ನೋಡಿಕೊಳ್ಳಲು ಅವನು ಇದ್ದನಂತೆ.
"ಮನೆಯಲ್ಲಿ ಬೇರೆ ಯಾರೂ ಇಲ್ಲವಾ? ಎಂದೆ. ಅವನು "ಇಲ್ಲ ಮಾರಾಯ್ರೆ. ನಾವೇ ಸೈ" ಅಂದ.
ನಾನು "ಮಿಣುಕು ಶೆಡ್ತಿಯವರು ಅಂತ ಒಬ್ರು ಇದ್ದಿದ್ರಲ್ಲ" ಅಂದೆ.
ಅದಕ್ಕೆ ಅವನು, "ಅವರು ಈಗ ಬೊಂಬಾಯಿಯಂಗೆ ಇದ್ರು. ಇಲ್ಲಿಗೆ ವರ್ಷಕ್ಕೆ ಒಂದೆರಡು ಸಲ ಬರ್ತು ಅಷ್ಟೆ" ಅಂದ.
"ಬೊಂಬಾಯಿಯಲ್ಲಿ ಅವರಿಗೆ ಯಾರು ಇದ್ದಾರೆ?" ಎಂದದ್ದಕ್ಕೆ ಅವನು,
"ಅಲ್ ಯಾರೂ ಇಲ್ಲೆ. ಆಚಿಪೇಟೆಯ ರಾಜೀವಿಗೂ, ಈ ಅಮ್ಮಂಗೂ ದೋಸ್ತಿಯಾಯ್ತು. ಅವರೇ ಕರ್ಕ್ಕೊಂಡು ಹೋದ್ರು" ಅಂದ.
ನನಗೆ ಗೊತ್ತಾಯಿತು.
ರಾಜೀವಿ ಅಂದರೆ ಹಾಲಾಡಿ ಪೇಟೆಯಲ್ಲಿ ಇರುವ ಒಬ್ಬ ಸೂಳೆಯರವಳು, ದೇವದಾಸಿ. ನಾನು ಸುಮ್ಮನಾದೆ.
ಅವನೇ ಹೇಳಿದ "ತಾನೂ, ನನ್ನ ಹೆಂಡ್ತಿಯೂ ಇಲ್ಲಿ ಇಪ್ದು. ಮಲ್ಕಂಡೆ ಇದ್ದ ಹಳೆಯ ಶೆಟ್ರಿಗೆ ಊಟ ಬೇಯಿಸಿ ಹಾಕಿ, ಮನೆ ನೋಡ್ಕಂಡ್ ಇದ್ದೊ ,ಆ ಮಿಣುಕಮ್ಮ ಶೆಡ್ತಿಯರೇ ಬೊಂಬಾಯಿಯಿಂದ ಆಗಾಗ ದುಡ್ಡು ಕಳಿಸತ್ರೆ” ಅಂದ.
ಅವನು ಪುನಃ ಏನೋ ನೆನಪಾದಂತೆ, "ಈ ನಾಯಿಗ್ ಎಂತ ಆಯ್ತು ಮರ್ರೆ!" ಎಂದು ಮತ್ತೆ ಆ ದೊಡ್ಡ ಧರೆಯ ಅಂಚಿಗೆ ಬ್ಯಾಟರಿ ಬೆಳಕನ್ನು ಬಿಡುತ್ತಾ ನೋಡಿದ.
ಕಡೆಗೆ ಮೆಲ್ಲನೆ ಕೆಳಗೆ ಇಳಿಯತೊಡಗಿದ.
ಒಂದು ಹಲಸಿನ ಮರದ ಬೇರಿಗೆ ಸಿಕ್ಕಿಹಾಕಿಕೊಂಡ ಆ ನಾಯಿ ಆಗಲೇ ಪ್ರಾಣ ಬಿಟ್ಟಿತ್ತು.
ನಾನು ಆಗಲೇ ಮಳೆಗೆ ಒದ್ದೆಯಾದ ನನ್ನ ಕನ್ನಡಕವನ್ನು ತೆಗೆದು, ಕರ್ಚೀಪಿನಿಂದ ಒರೆಸಿಕೊಂಡು, ಮುಂದೆ ಬೋಳಾಗಿದ್ದ ನನ್ನ ತಲೆಯನ್ನು ನೇವರಿಸಿಕೊಂಡೆ.
ಆಗಲೇ ಕತ್ತಲಾಗಲು ಶುರುವಾಗಿತ್ತು.
ಮಳೆಯೂ ಸಣ್ಣಗೆ ಸುರಿಯುತ್ತಿತ್ತು.
ಅವನು ಅಷ್ಟರಲ್ಲಿ ಆ ನಾಯಿಯ ಕಾಲನ್ನು ಹಿಡಿದು ಎಳೆದು ಮೇಲೆ ತಂದು ಅಂಗಳದಲ್ಲಿ ಹಾಕಿದ.
ಇನ್ ಇದನ್ ಎಂತ ಮಾಡೂದಂತ ಕಾಣಕ್ ಎಂದು ಅವನಷ್ಟಕ್ಕೇ ಹೇಳಿಕೊಂಡ.
"ಮಾರಾಯಾ, ಇಲ್ಲಿಯೇ ಕತ್ತಲಾಗಿ ಬಿಟ್ಡಿತಲ್ಲ. ನಮಗೊಂದು ಬ್ಯಾಟರಿಯಾದರೂ ಕೊಡು. ನಾಳೆ ಮತ್ತೆ ಬರುವಾಗ ವಾಪಾಸು ಕೊಡ್ತೇನೆ" ಎಂದೆ.
“ಅಕ್ಕೆ, ಒಂದ್ ಬ್ಯಾಟರಿ ಇರ್ಕ್.  ತಡೀನಿ ತಂದ್ ಕೊಡ್ತಿ” ಅಂತ ಹೇಳಿ ಅವನು ಬ್ಯಾಟರಿಯನ್ನು ತರಲು ಒಳಗೆ ಹೋದ.
ಸಣ್ಣಗೆ ಮಳೆಯಲ್ಲಿ ಸುತ್ತಲೂ ಕತ್ತಲು ಆವರಿಸುತ್ತಿತ್ತು.
  • ಮುಗಿಯಿತು  -
ದಿನೇಶ ಉಪ್ಪೂರ

ಕಥನದೊಳಗೆ.

*#ಸಂಸ್ಕಾರ* ಕತೆಗೆ

*ಎರಡನೇ ಕೊಂಡಿ*

ಪೋನ್ ರಿಂಗ್ ಆಯ್ತು.

ನಾನು ಪುನಃ ಇದೇನಪ್ಪಾ ಅಂತ ಹೆದರುತ್ತಲೇ ಎತ್ತಿಕೊಂಡೆ.

“ಸರ್ , ನಾನು ಫೇಸ್ ಬುಕ್ ಲ್ಲಿ ನೀವು ಬರೆದ ನಿಮ್ಮ ಸಂಸ್ಕಾರ ಕತೆ ಓದಿದೆ. ನಾನೂ ಅದರಲ್ಲಿ ಬಂದ ಸದಾಶಿವನ ಪಾತ್ರದ ಹಾಗೆ. ತುಂಬಾ ಆಸಲೇಶನ್ ಸರ್ . ನನ್ನ ಅಪ್ಪ ಅಮ್ಮ ಊರಲ್ಲಿ ಇಬ್ಬರೇ ಇದ್ದಾರೆ. ನನ್ನ ಜೊತೆಗೆ ಬಂದು ಇರಲು ಒಪ್ಪುವುದಿಲ್ಲ. ನನಗೂ ಅಲ್ಲಿ ಹೋಗಿ ಇರಲಿಕ್ಕೆ ಆಗುತ್ತಿಲ್ಲ. ನನ್ಬ ಹೆಂಡತಿಯೂ ದುಡಿಯುತ್ತಾ ಇದ್ದಾಳೆ. ತುಂಬಾ ಕಾಂಪಿಟೀಶನ್ ಯುಗ ಅಲ್ವಾ ಸರ್. ನೀವು ಒಟ್ಟಾರೆ ಏನೋ ಬರೆದ್ರಿ ಅಂತ ನಾನು ಹೇಳುವುದಲ್ಲ. ನೋಡಿ ಸರ್ , ನಾನು ನನ್ನ ಮಗನಿಗೆ ಎಲ್ ಕೆ ಜಿ ಗೆ ಸೇರಿಸ್ಲಿಕ್ಕೆ ಎರಡು ಲಕ್ಷ ಡೆಪೋಸಿಟ್ ಮಾಡಿ ಬಂದೆ. ಮತ್ತೆ ಒಬ್ಬ ಮಗಳು ಇದ್ದಾಳೆ.ಅವಳ ಅವಶ್ಯಕತೆ ಪೂರೈಸಲಿಕ್ಕೆ ಈಗಲೇ ಕಷ್ಟ ಆಗ್ತಿದೆ. ಇಂತಹ ಕಂಡೀಶನ್ ನಲ್ಲಿ ಅಪ್ಪ ಅಮ್ಮ ಇದ್ದಲ್ಲಿಗೆ ಹೋಗಿ ಇರುವುದು ಸಾಧ್ಯವಾ? “

ನಾನು ಸುಮ್ಮನಿದ್ದೆ.

“ಪ್ರಯತ್ನಿಸಿದರೆ ಭಾವನಾತ್ಮಕವಾಗಿ ಬರೆಯುವುದು ಸುಲಭ. ಅಲ್ವ ಸರ್.”

“…………..”

“ಬೇಸರಿಸಬೇಡಿ”

“ನೋಡಿ,  ನನ್ನ ಹತ್ರ ಇದಕ್ಕೂ ಒಂದು ಸಲಹೆ ಇದೆ. ಆದರೆ ಅದು ನಿಮಗೆ ಹೊಂದಿಕೆ ಆಗುತ್ತಾ ಇಲ್ವಾ ಗೊತ್ತಿಲ್ಲ”

“ಹೇಳಿ ಸರ್,  ಅದರಿಂದ ನನ್ನ ಸಮಸ್ಯೆ ಪರಿಹಾರ ಆಗುತ್ತದೆ ಅನ್ನಿಸಿದರೆ ಖಂಡಿತಾ ಮಾಡ್ತೇನೆ”

“ನಿಮ್ಮ ಹೆಂಡ್ತಿಯೂ ದುಡಿಯುತ್ತಾ ಇದ್ದಾರೆ ಅಂದ್ರಿ ಅಲ್ವಾ?”
“ಹೌದು.”

“ಹಾಗಾದರೆ ನೀವು ನಿಮ್ಮ ಮಕ್ಕಳನ್ನು ಅವರ ಸುಪರ್ದಿಗೆ ಒಪ್ಪಿಸಿ, ಅವರನ್ನು ಕನ್ವಿನ್ಸ್ ಮಾಡಿ ಊರಿಗೆ ಬಂದು ಬಿಡಿ. ನಿಮ್ಮ ತಂದೆತಾಯಿಗಳ ಸೇವೆ ಮಾಡಿ. ಅವರ ಕಾಲದ ನಂತರ ಪುನಃ ಹೋಗಿ ನಿಮ್ಮವರನ್ನು ಕೂಡಿಕೊಂಡರೆ ಆಯ್ತು.”

“ಸಲಹೆ ಒಳ್ಳೆಯದೇ. ಆದರೆ ಅನುಸರಿಸುವುದು ಅಷ್ಟು ಸುಲಭ ಅಲ್ಲ ಸರ್”

ನಾನೇ ಪೋನ್ ಇಟ್ಟು ಬಿಟ್ಟೆ.


******************


*ಮೂರನೇ ಕೊಂಡಿ*

ಮತ್ತೆ ಪೋನ್

ಎತ್ತಿಕೊಂಡೆ

“ ಹಲೋ ಅಂಕಲ್ , ನಾನು ವರುಣ್ ಅಂತ ಬೆಂಗಳೂರ್ ನಿಂದ ಮಾತಾಡ್ತಿದೀನಿ. ನಿಮ್ಮ ಸಂಸ್ಕಾರ ಕತೆ ಹೇಗೋ ಕಣ್ಣಿಗೆ ಬಿತ್ತು. ಓದಿದೆ.”

“…,.............”

“ತುಂಬಾ ಭಾವುಕನಾಗಿದೀನಿ ಅಂಕಲ್. ನಮ್ಮಪ್ಪ ಹಳ್ಳಿಯಲ್ಲಿದ್ದ ನಮ್ಮ ಹಿರಿಯರ ಆಸ್ತಿಯನ್ನೆಲ್ಲ ಮಾರಿಬಿಟ್ಟ. ನಾವು ಚಿಕ್ಕವರಿರುವಾಗ ಅಲ್ಲೆಲ್ಲ ಹೋಗಿ ಬರ್ತಿದ್ವಿ. ನಂಗೆ ಬಹಳ ಇಷ್ಟವಾದ ಜಾಗ ಅದು. ಏನೋ ಅಪ್ಪ ಹಣದ ವಿಷಯದಲ್ಲಿ ದೊಡ್ಡಪ್ಪನ ಜೊತೆಗೆ ಜಗಳ ಮಾಡಿಬಿಟ್ಟು , ಪಾಲು ತಗೊಂಡು ಅದನ್ನೆಲ್ಲ ಮಾರಿಬಿಟ್ಟರು. ದೊಡ್ಡಪ್ಪನೂ ಆ ಹಳ್ಳಿಬೇಡ ಅಂತ ಅದನ್ನು ಮಾರಿಬಿಟ್ಟು ಪೇಟೆ ಹತ್ರ ಮನೆ ಮಾಡ್ಕೊಂಡ್ ಇದಾರೆ.
ನಿಮ್ಮ ಕತೆ ಓದುತ್ತಾ ಇದ್ದಹಾಗೆ ಅದೆಲ್ಲ ಇದ್ದಿದ್ರೆ …. ಅಂತ ಅನ್ನಿಸಿ ನಂಗೆ ಕಣ್ಣಲ್ಲಿ ನೀರು ಬಂತು.

“ಮಗೂ, ಇದಕ್ಕೆ ನನ್ನ ಹತ್ರ ಒಂದು ಪರಿಹಾರ ಇದೆ.”

“ಏನು ಅಂಕಲ್?”

“ನಿಮ್ಮ ತಂದೆಯವರು ಮುಂದೆ ರೇಟ್ ಬರುತ್ತದೆ ಅಂತ ಬೆಂಗಳೂರಲ್ಲೋ ಆಸುಪಾಸಲ್ಲೋ ಒಂದಷ್ಟು ಸೈಟ್ ತೆಗೆದು ಹಾಕಿಟ್ಟಿರಬಹುದು ಅಲ್ವಾ?”

“ಹೌದು. ಇದೆ ಅಂಕಲ್”

“ಸ್ವಲ್ಪ ಪ್ರೆಶರ್ ಹಾಕು. ಅದನ್ನು ಮಾರಿಬಿಟ್ಟು ನಿಮ್ಮ ಹಿರಿಯರು ಇದ್ದ ಜಾಗ ಮನೆ ಮತ್ತೆ ಕೊಂಡುಕೊಳ್ಳುಕ್ಕೆ ಆಗುತ್ತಾ ನೋಡು.ಆದ್ರೆ ಈಗ ಅದಕ್ಕೆ ಬೆಲೆ ಇರದೇ ಇರಬಹುದು. ಹಳ್ಳಿ ಕೊಂಪೆ ಆಗಿರಬಹುದು. ನೀನು ಮುದುಕ ಆದಾಗ ಅದರ ನಿಜವಾದ ಬೆಲೆ ನಿಂಗೆ ಗೊತ್ತಾಗುತ್ತದೆ”

“ಆಯ್ತು ಅಂಕಲ್ . ತುಂಬಾ ಥ್ಯಾಂಕ್ಸ್”


*************

*ಕೊನೆಯ ಕೊಂಡಿ*

ಕಾಲಿಂಗ್ ಬೆಲ್ ಆಯ್ತು.

ಹೋಗಿ ಬಾಗಿಲು ತೆರೆದೆ.

ನಮ್ಮ ಕಾಲೋನಿಯಲ್ಲೇ ನಾಲ್ಕು ಮನೆ ಆಚೆಗೆ ಇದ್ದ ಮುದುಕರೊಬ್ಬರು ನಗುತ್ತಾ ನಿಂತಿದ್ದರು.

“ಬನ್ನಿ , ಬನ್ನಿ “

ಅಂತ ಒಳಗೆ ಕರೆದೆ.

“ಇರಲಿ,  ಇರಲಿ”

ಅನ್ನುತ್ತಾ ಅವರು ಬಂದು ಸೋಫಾದ ಮೇಲೆ ಕುಳಿತರು.

“ನಾನು ನಿಮ್ಮ ಕತೆ ಓದಿದ್ದೆ.

“ಹೌದಾ ? ತುಂಬಾ ಕುಷಿಯಾಯ್ತು ಸರ್”

“ನೀವು ಹೇಳುವುದೆಲ್ಲ ಸರಿ. ಆದರೆ ಈಗ ನನ್ನನ್ನೇ ನೋಡಿ. ಸರಕಾರಿ ಕೆಲಸ. ಬೇರೆ ಬೇರೆ ಊರು, ಟ್ರಾನ್ಸಫರ್,  ತಿರುಗಾಟ. ಈ ಹಿರಿಯರ ಆಚಾರ ಅನುಷ್ಟಾನ ಅಂದ್ರೆ ಕಷ್ಟವೇ. ಅಲ್ವ. ನಮಗೆ ಮಾಡಬೇಕು ಅಂತಿರುತ್ತದೆ. ಆದರೆ ಹೋದಲ್ಲೆಲ್ಲ ಅದಕ್ಕೆ ಅನುಕೂಲ ಬೇಕಲ್ಲ.ಈಗ ವಯಸ್ಸಾಯ್ತು.

“………..”

“ಬೇಸರ ಮಾಡಬೇಡಿ. ತುಂಬಾ ಭಾವುಕವಾಗಿ ಬರೆದಿದ್ದೀರಿ. ನನಗೂ ಫೀಲ್ ಆಯ್ತು. ಹೇಳಿ.  ನಿಮ್ಮ ದೃಷ್ಟಿಯಲ್ಲಿ ನನ್ನಂತವನು ಏನು ಮಾಡಬಹುದು”

ಪಾಪ . ಸುಮಾರು ಎಪ್ಪತ್ತರ ಗಡಿದಾಟಿದ ಮುದುಕರು
“ಬೇಸರಪಡಿಸಿದನೇ” ಅನ್ನಿಸಿತು.

ಆದರೂ ಸ್ವಲ್ಪ ಕೂಲಾಗಿ ಹೇಳಿದೆ.

“ಯಾಕೆ ಸರ್ ? ನಿಮಗೆ ಇನ್ನು ಆಯಸ್ಸೂ ಇದೆ. ಅವಕಾಶವೂ ಇದೆ. ಮನಸ್ಸು ತೆರೆಯಬೇಕಷ್ಟೆ.”

ಅವರು ಗಟ್ಟಿಯಾಗಿ ನಕ್ಕರು.

“ನಿಮ್ಮನ್ನು ಸೋಲಿಸುವವರಿಲ್ಲಪ್ಪ”

ಎನ್ನುತ್ತಾ ಎದ್ದರು.

ನಾನು ,

“ಸ್ವಲ್ಪ ಕಾಫಿ ಕುಡಿದು ಹೋಗಿ”

ಎಂದು ಒತ್ತಾಯಿಸಿದೆ.

******************

*ಮುಗಿಯಿತು*.



ದಿನೇಶ ಉಪ್ಪೂರ:     
ಕಥನದೊಳಗೆ            
ಸಂಸ್ಕಾರ
ಪುಟ 1                               -

ರಾಮ ಅಡಿಗರ ಮನಸ್ಸು ಬೆಳಿಗ್ಗೆಯಿಂದ ವಿಹ್ವಲಗೊಂಡಿತ್ತು. ಒಂದು ರೀತಿಯ ದುಗುಡ, ಏನೋ ಆತಂಕ. ಮನಸ್ಸನ್ನು ಹಿಡಿತದಲ್ಲಿ ಇಟ್ಟುಕೊಳ್ಳಲೇ ಆಗುತ್ತಿಲ್ಲ. ನಸುಕಿನಲ್ಲಿ ಎದ್ದು ನಿತ್ಯಕರ್ಮಗಳನ್ನು ಮುಗಿಸಿ, ಅಡುಗೆಯ ಮನೆಯ ಎಲ್ಲ ಕೆಲಸವನ್ನು ಮುಗಿಸಿದರು. ಬಾವಿಯ ಕಟ್ಟೆಗೆ ಹೋಗಿ ಕೊಡಪಾನದಿಂದ ತಣ್ಣೀರನ್ನು ಎತ್ತಿ ತಲೆಗೆ ಝಳಝಳ ಹೊಯ್ದುಕೊಂಡು, ಸ್ನಾನ ಮಾಡಿ ಉಟ್ಟ ಪಾಣಿ ಪಂಚೆಯಿಂದ ಮೈಯನ್ನು ಒರೆಸಿಕೊಂಡು ದೇವರ ಶ್ಲೋಕಗಳನ್ನು ಬಾಯಿಯಲ್ಲಿ ಗುಣುಗುತ್ತಾ ದೇವರ ಕೋಣೆಗೆ ಬಂದು ದೇವರ ಮುಂದೆ ಕುಳಿತರೂ, ಮನಸ್ಸು ಸ್ಥಿಮಿತಕ್ಕೆ ಬರಲಿಲ್ಲ. ನಿತ್ಯ ಹೇಳುತ್ತಿದ್ದ ಮಂತ್ರಗಳು ಮಧ್ಯದಲ್ಲಿ ನಿಂತುಬಿಟ್ಟು ಸ್ಥಬ್ದವಾಗುತ್ತಿದೆ. ಮರೆತು ಹೋಗುತ್ತಿದೆ.
ದೇವರ ಕಿಂಡಿಯಲ್ಲಿದ್ದ ಹಿತ್ತಾಳೆಯ ತಟ್ಟೆಯಲ್ಲಿರುವ ಸಾಲಿಗ್ರಾಮದ ಮೇಲಿನ ನಿನ್ನೆಯ ಮಲಿನ ಹೂವುಗಳನ್ನು ತೆಗೆದರು. ದೇವರ ಪೂಜೆಯನ್ನೂ ಮುಂದುವರಿಸಲಾಗದೇ, ಹಾಗೆಯೇ ನೆಟ್ಟಗೆ ಕುಳಿತು ಅದನ್ನೇ ನೋಡುತ್ತಾ ಕುಳಿತರು.
ಮಗ ಪೋನ್ ಮಾಡದೇ ಎಷ್ಟು ದಿನವಾಯಿತು?. ಲಕ್ಷ್ಮಿ ಹಾಸಿಗೆ ಹಿಡಿದು ವರ್ಷವಾಗುತ್ತಾ ಬಂತಲ್ಲವೇ? ಪಾಪ, ಸ್ವಲ್ಪ ಎಚ್ಚರಾದರೂ ಮಗನ ಬಗ್ಗೆಯೇ ಕೇಳುತ್ತಾಳೆ. ವಾತದ ರೋಗ ಅವಳನ್ನು ಓಡಾಡದಂತೆ ಮಾಡಿ ಮಲಗಿಸಿಬಿಟ್ಟಿತು. ಮೊದಲು ಎಷ್ಟೆಲ್ಲಾ ಮಾಡಿದವಳು. ಇದ್ದ ಒಬ್ಬನೇ ಮಗನಿಗಾಗಿ  ತನ್ನ ಆಸೆ ಆಕಾಂಕ್ಷೆಗಳನ್ನು ಬಲಿಕೊಟ್ಟಳು. ಅವನೆದುರೇ ಇದ್ದು ತನಗೆ ಬೇರ ಪ್ರಪಂಚವೇ ಇಲ್ಲವೆಂದು, ಹಠ ಹಿಡಿದು ಓದಿಸಿ ಇಂಜಿನಿಯರ್ ಮಾಡಬೇಕೆಂದು ಅವನಿಗಾಗಿ ಬದುಕನ್ನೇ ಸವೆಸಿದಳು.
ಅವನು ಇಂಜಿನಿಯರೂ ಆದ. ಅವನು ಅಮೇರಿಕ ಸೇರಿದ ಮೇಲೆ ಮತ್ತೆ ಮನೆಯಲ್ಲಿ ತಾನು, ಅವಳು ಇಬ್ಬರೇ ಆಗಿಬಿಟ್ಟೆವು. ತಾನೂ ಯೌವನದಲ್ಲಿ ಗಟ್ಟಿ ಇರುವಾಗ ಸಾಕಷ್ಟು ದುಡಿದಿದ್ದರಿಂದ ಈಗ ತನ್ನದೇ ಆದ ಒಂದು ಮನೆ, ಆಸ್ತಿ ಅಂತ ಮಾಡಿಕೊಳ್ಳಲು ಆಯಿತು. ಬರೀ ಅವರಿವರ ಮನೆಯ ಪೌರೋಹಿತ್ಯವನ್ನೆ ಮಾಡಿ ಇಷ್ಟೆಲ್ಲ ಮಾಡಿದ್ದಲ್ಲವೇ? ಅದರಲ್ಲೇ ಮಗನನ್ನು ಓದಿಸಿದೆ ಎಂದರೆ ನಂಬಲಿಕ್ಕೇ ಆಗುತ್ತಿಲ್ಲ. ಲಕ್ಷ್ಮಿಯೇ ಇದಕ್ಕೆಲ್ಲ ಕಾರಣ. ಅವಳ ದೂರಾಲೋಚನೆ, ಸಹಕಾರ ಇಲ್ಲದೇ ಇದ್ದರೆ ನಾನೂ ಹಿಂದಿನಂತೆ ಇನ್ನೂ ಆ ಮಂಜ ಭಟ್ಟರ ಹರಕು ಕೊಗಳಿನ ಅಡಿಯಲ್ಲೇ ಜೀವನ ಸಾಗಿಸಬೇಕಾಗಿತ್ತು.
ಹೂಂ. ಕಾಲ ಎಷ್ಟು ಬೇಗ ಮುಂದೆ ಬಂದು ಬಿಟ್ಟಿತು. ಮನುಷ್ಯನ ಪರಿಸ್ಥಿತಿ,ಮನಸ್ಥಿತಿಗಳೂ ಬದಲಾಗಿ ಹೋದವು. ಈಗ ತೋಟದ ಕೆಲಸ ಮಾಡಲು ಜನವೇ ಸಿಕ್ಕವುದಿಲ್ಲ. ಗದ್ದೆ ಬೇಸಾಯವನ್ನು ಕೈದುಮಾಡಿ ಎಷ್ಟೋ ಕಾಲವಾಯಿತು. ಎಲ್ಲ ಗದ್ದೆಗಳೂ ಹಡುಬೀಳುತ್ತಿವೆ. ಯಾವುದರಲ್ಲೂ ಮೊದಲಿನಂತೆ ಆಸಕ್ತಿಯಿಲ್ಲ. ಬೆಟ್ಟು ಗದ್ದೆಗೆಲ್ಲ ಗೇರು ಸಸಿ ಹಾಕಿ ನಾನು ಜೀವ ಸವೆಸಿ ಮಾಡಿದ ಗದ್ದೆಗಳನ್ನು ಪುನಃ ಜಡ್ಡು ಮಾಡಿಯಾಯಿತು.
ಇಷ್ಟಕ್ಕೂ ಇತ್ತೀಚೆಗೆ ‘ಇನ್ನು ಇದನ್ನೆಲ್ಲಾ ಮಾಡುವುದು ಯಾರಿಗಾಗಿ’ ಎಂಬ ಒಂದು ಸಣ್ಣಹುಳ ಅಡಿಗರ ತಲೆಗೆ ಹೋಗಿ ಇಷ್ಟೆಲ್ಲ ಅದ್ವಾನವಾದದ್ದು.
ಮಗ ಇನ್ನು ಬಂದು ಇಲ್ಲಿ ಇರಲು ಸಾಧ್ಯವೇ?
ಆದರೆ ನನಗೆ ಈ ಊರಿನ ಋಣ ಇನ್ನೂ ಮುಗಿಯಲಿಲ್ಲವಲ್ಲ.
ನನ್ನನ್ನು ನಂಬಿ ಪೌರೋಹಿತ್ಯಕ್ಕೆ ಕರೆಯುವ ಊರಿನ ಹತ್ತಾರು ಬ್ರಾಹ್ಮಣರ ಮನೆಗೆ ಹೋಗಿ ಅವರ ಮನೆಯ ಶ್ರಾದ್ಧವೋ, ಗಣಹೋಮವೋ ಸತ್ಯನಾರಾಯಣ ಕತೆಯೋ ಮಾಡಿ ಮಧ್ಯಾಹ್ನ ಅಲ್ಲಿಯೇ ಉಂಡು ಅವರು ಕೊಟ್ಟ ದಕ್ಷಿಣೆಯನ್ನು ಅಕ್ಕಿಕಾಯಿಯನ್ನು ಮನೆಗೆ ತಂದು, ಅದರಲ್ಲೇ ಸಂಸಾರದ ರಥ ಸಾಗುತ್ತದೆ.
ಅವಳಿಗೆ ಬೆಳಿಗ್ಗೆ ಅನ್ನವೋ ಗಂಜಿಯೋ ಮಾಡಿ, ಒಂದು ನೀರು ಸಾರೋ, ಗೊಜ್ಜೋ  ಮಾಡಿ ಇಟ್ಟರೆ ಆಯಿತು. ಅವಳೆ ಉಸ್ ಉಸ್ ಎನ್ನುತ್ತಾ ಅಡುಗೆ ಮನೆಗೆ ನಡೆದು ಬಂದು, ಉಂಡು ಮತ್ತೆ ಹಾಗೆ ಹಾಸಿಗೆಯನ್ನು ಸೇರುತ್ತಾಳೆ. ರಾತ್ರಿ ಊಟ ಹೇಗೂ ಇಲ್ಲ. ಇದ್ದ ಮುಸರೆ ಪಾತ್ರೆಗಳನ್ನು ತೊಳೆದು ಇಟ್ಟರೆ ಒಂದು ದಿನದ ಕಾರ್ಯಕ್ರಮ ಮುಗಿಯಿತು.
ಲಕ್ಷ್ಮಿಯ ನರಳಿಕೆ ಅಡಿಗರನ್ನು ಎಚ್ಚರಿಸಿತು.
ತನ್ನ ಮಗ ಕೈ ಮುಗಿದು ಪಕ್ಕದಲ್ಲಿ ತಾನು ಹೇಳುವ ಶ್ಲೋಕಗಳನ್ನು ಒಪ್ಪಿಸುತ್ತ ಇದ್ದ ಹಾಗೆ ಅನ್ನಿಸಿತು. ಕಣ್ಣು ತೆರೆದು ಎಡಮಗ್ಗುಲನ್ನು ನೋಡಿದರು. ಎಲ್ಲ ಭ್ರಮೆ. ಸಣ್ಣ ಮಂದಹಾಸವೊಂದು ಮುಖದಲ್ಲಿ ಮೂಡಿ ಮಾಯವಾಯಿತು. ಮಗ ಈಗ ಪೂಜೆ  ಜಪ ಯಾವುದನ್ನೂ ಮಾಡುವುದಿಲ್ಲವಂತೆ. ಅದೆಲ್ಲ ಅಮೇರಿಕದಲ್ಲಿ ಯಾರು ಮಾಡುತ್ತಾರೆ? ತನ್ನ ಕೆಲಸಗಳನ್ನೇ ಮಾಡಿಕೊಳ್ಳಲು ಸಮಯ ಸಾಕಾಗುವುದಿಲ್ಲ ಅಂದನಲ್ಲ. “ಹೋ ಬಹಳ ಹೊತ್ತು ಕುಳಿತುಬಿಟ್ಟೆ. ಇನ್ನು ಹಂಜಾರರ ಮನೆಯ ಶ್ರಾದ್ಧಕ್ಕೆ ಹೋಗಬೇಕು” ಎಂದುಕೊಳ್ಳುತ್ತಾ ಬೇಗ ಬೇಗ ಪೂಜೆಯನ್ನು ಮುಂದುವರಿಸಿದರು.
ಅಂತೂ ಪೂಜೆ ಮುಗಿಯಿತು.
ತಾನು ಅಂಗಿಯನ್ನು ಹಾಕದೇ ಎಷ್ಟು ವರ್ಷವಾಯಿತೋ ಏನೋ ಅನ್ನಿಸಿಮುಖದಲ್ಲಿ ಒಂದು ನಗು ಮೂಡ ಮಾಯವಾಯಿತು.
ಒಂದು ಪಂಚೆಯನ್ನು ಉಟ್ಟು, ಹೆಗಲ ಮೇಲೊಂದು ಶಾಲನ್ನು ಹೊದೆದುಕೊಂಡು ಅಡಿಗರು ಹೊರಟುಬಿಟ್ಟರು. ಬಗಲಲ್ಲೊಂದು ಉದ್ದ ಮರದ ಜಲ್ಲಿನ ಕೊಡೆ, ಬಿಸಿಲಿಗೆ.
“ಲಕ್ಷ್ಮಿ, ಇವತ್ ಹಂಜಾರ್ರ ಮನೆಯ ಶ್ರಾದ್ದ ಇತ್ ಮಾರಾಯ್ತಿ.  ಹೋಯ್ ಬತ್ತೆ. ಅಡಿಗೆ ಮನೇಲಿ ಎಲ್ಲ ರೆಡಿಮಾಡಿ ಇಟ್ಟಿದ್ದೆ. ಹೆಚ್ ಓಡಾಡಿ ಆಯಾಸ ಮಾಡ್ಕಂಡ್ಬೇಡ. ಔಷಧಿಯನ್ನು, ಮಾತ್ರೆಯನ್ನೂ ನೆನಪು ಮಾಡಿ ತಕ್ಕೊ ಅಕಾ”. ಎಂದು  ಮಾಮೂಲಿನಂತೆ ಹೇಳಿ ಮೆಟ್ಟಿಲುಗಳನ್ನು ಇಳಿದು ಮೆಟ್ಟನ್ನು ಹಾಕಿಕೊಂಡು ಹೆಬ್ಬಾಗಿಲನ್ನು ಮುಂದೆ ಮಾಡಿಕೊಂಡು ಅಂಗಳಕ್ಕೆ ಇಳಿದು ಹೊರಟರು.

**************

ಈಗ ಹರೀನ್ ಗುಡ್ಡೆಗೆ ಎಲ್ಲಾ ಕಡೆಯಿಂದಲೂ ಸರಕಾರದವರು ಮುಳ್ಳು ಬೇಲಿ ಹಾಕಿಬಿಟ್ಟಿದ್ದಾರೆ. ಅಲ್ಲಿ ಗೋವೆ ಮರಗಳನ್ನು ನೆಟ್ಟು ಅದು ಫಸಲು ಬಂದಮೇಲೆ ವರ್ಷವರ್ಷವೂ ಗುತ್ತಿಗೆಗೆ ಕೊಡುವುದಂತೆ. ಎಲ್ಲಕಡೆ ಅಗಳು ತೋಡಿ ಮನುಷ್ಯರು ಗಂಟಿಕರುಗಳು ಆ ಪ್ರದೇಶಕ್ಕೆ ಹೋಗದಂತೆ ಮಾಡಿಬಿಟ್ಟಿದ್ದಾರೆ. ಮುಂಚಿನಂತೆ ಮನೆಯ ಗಂಟಿಗಳಿಗೆ ಮಳೆಗಾಲದಲ್ಲಿ ಮೇವಿನ ತಾಣವಾಗಿದ್ದ ಆ ಗುಡ್ಡಿಗೆ, ಈಗ ಯಾರೂ ಪ್ರವೇಶಿಸದ ಹಾಗಾಗಿಬಿಟ್ಟಿದೆ.

ಮೊದಲಾದರೆ ಆ ಗುಡ್ಡೆಯ ಪಶ್ಚಿಮಭಾಗದಲ್ಲಿ ಇರುವ ಹಲವಾರು ಮೆಟ್ಟಿಲುಗಳನ್ನು ಹತ್ತಿ ಹತ್ತಿ ಹೋಗಿ ವಿಶಾಲವಾದ ಹರಿನ್ ಗುಡ್ಡೆಯಲ್ಲಿ ನಡೆದು ಹಾಯ್ಕಾಡಿಗೆ ಹೋಗಲಿಕ್ಕೆ ಬಹಳ ಸುಲಭವಿತ್ತು. ಆದರೆ ಈಗ ಗೋರಾಜಿಗೆ ಹೋಗಿ, ಅಲ್ಲಿಂದ ಕಾಸಾಡಿಗೆ ಬಂದು ತಾರುರಸ್ತೆಯಲ್ಲೇ ಸೇರಿ ನಡೆದು ಹಾಯ್ಕಾಡಿಗೆ ಹೋಗಬೇಕು.

ಹಾಯ್ಕಾಡಿ ಪೇಟೆಯಲ್ಲೇ ಸ್ವಲ್ಪ ಕೆಳಗೆ, ತೆಂಕುಬದಿಯ ಗದ್ದೆಯ ಬೈಲಿಗೆ ಇಳಿದರೆ ಅದರ ಮೇಲ್ ಬದಿಯ ಎತ್ತರದ ಜಾಗದಲ್ಲಿ ಇರುವುದೇ ಎಂಕಪ್ಪ ಹಂಜಾರರ ಮನೆ. ಏನಿಲ್ಲವೆಂದರೂ ಮುಕ್ಕಾಲು, ಒಂದು ಗಂಟೆಯ ದಾರಿ.

ದೇವರ ಸ್ರೋತ್ರಗಳನ್ನು ತನ್ನಷ್ಟಕ್ಕೇ ಬಾಯಿಯಲ್ಲಿ ಹೇಳುತ್ತಾ, ತಲೆಯಡಿ ಮಾಡಿಕೊಂಡು ಅಡಿಗರು ಮೆಲ್ಲನೆ ನಡೆಯತೊಡಗಿದರು.

ಎಂಕಪ್ಪ ಹಂಜಾರರ ತಂದೆ ರಾಮ ಹಂಜಾರರ ಕಾಲದಿಂದಲೂ ಅವರು ಆ ಊರಿಗೆ ಬಂದಂದಿನಿಂದ ಅವರ ಮನೆಗೆ ತಾನೆ ಪೌರೋಹಿತ್ಯ ಮಾಡಿದವನು. ಆದರೆ ಅವರ ಮಕ್ಕಳ ಕಾಲದಲ್ಲಿ ಅಂದರೆ, ಇತ್ತೀಚೆಗೆ ಕೆಲವು ವರ್ಷಗಳಲ್ಲಿ ಆ ಮನೆಯಲ್ಲಿ ಹಿಂದಿನಷ್ಟು ಸಲಿಗೆ, ಆತ್ಮೀಯತೆ ತನಗೆ ಇಲ್ಲ. ಅನುಕೂಲಸ್ಥರು. ಮಕ್ಕಳೆಲ್ಲ ಓದಿ ಪರವೂರಿನಲ್ಲಿದ್ದಾರೆ.

ಆ ಮನೆಯಲ್ಲಿ ಮೊದಲು ಹೋಗು ಬಾ ಅನ್ನುತ್ತಿದ್ದವನು ಈಗ ಅವರ ಮನೆಯ ಮಕ್ಕಳಿಗೂ “ನೀವು” ಅನ್ನುತ್ತಿದ್ದೇನೆ. ಏಕೋ ಆ ಮನೆಯಲ್ಲಿ ಮೊದಲಿನ ಹಾಗೆ ಬೆರೆತು ಮಾತನಾಡಲು ಆಗುತ್ತಿಲ್ಲ. ಅವರ ಮನೆ ಎಂದರೆ ಏನು? ಎಲ್ಲರ ಮನೆಯಲ್ಲೂ ಹಾಗೆಯೇ ಆಗಿಬಿಟ್ಟಿದೆ. ನಾವು ಹಿಂದಿನ ಕಾಲದವರು, ಈಗಿನವರಂತೆ ಮುಂದುವರಿದಿಲ್ಲ ಎಂಬ ಭಾವ. ಈಗಿನ ಮಕ್ಕಳೇ ಹಾಗೆ ಹಿರಿಯರನ್ನು ಅವರ ಆಚರಣೆಗಳನ್ನು ತಾತ್ಸಾರ ಮಾಡುತ್ತವೆ.

ರಾಮ ಹಂಜಾರರ ಮಕ್ಜಳಲ್ಲಿ, ಇಬ್ಬರು ಮಕ್ಕಳು ಈಗ ಎರಡು ಮೂರು ವರ್ಷದಿಂದ ಬೆಂಗಳೂರಿನಲ್ಲೇ ಇದ್ದವರು ಅಲ್ಲಿಯೇ ಶ್ರಾದ್ಧ ಮಾಡುತ್ತಾರೆ. ಈ ಎಂಕಪ್ಪ ಹಾಗೂ ಕಿರಿಯವ ಶೀನ ಹಂಜಾರ ಮಾತ್ರಾ ಇಲ್ಲಿ ಮಾಡುವವರು.

ಶೀನನೂ ಅದೆಲ್ಲೋ ದೂರದ ಊರಿನಲ್ಲಿ ಕೆಲಸ ಮಾಡುತ್ತಿದ್ದು ಶ್ರಾದ್ಧದ ದಿನವೇ ಬಂದು, ನೆಂಟನಂತೆ ಇದ್ದು ಹೋಗುವವ. ಇವರಿಗೆ ಶ್ರಾದ್ಧ ಅಂದರೆ ಬರೀ ಹರಕೆ ಬಲಿ. ಒಂದು ಶ್ರದ್ಧೆ ಇಲ್ಲ. ಸಮರ್ಪಣೆ ಇಲ್ಲ ಮಾಡದಿದ್ದರೆ ಯಾರಾದರೂ ಏನಾದರೂ ಹೇಳುತ್ತಾರೆ ಎಂಬ ಹೆದರಿಕೆ ಅಷ್ಟೆ.

ಈಗಂತೂ ಮಗ ಹೇಳಿದ ಹಾಗೆ ಎಲ್ಲವೂ ಕಾಂಟ್ರಾಕ್ಟ್.  ಈ ಶ್ರಾದ್ಧವೂ ಯಾರಾದರೂ ಕಾಂಟ್ರಾಕ್ಟ್ ವಹಿಸಿಕೊಂಡು ಮಾಡುವ ಭಟ್ಟರಿದ್ದರೆ, ಅದನ್ನೂ ಹಣ ಕೊಟ್ಟು ಮಾಡಿಸಿ ಪ್ರಸಾದ ಕಳಿಸಲು ಹೇಳುತ್ತಿದ್ದರೋ ಏನೊ.

ಮುಂದೆ ಆ ಕಾಲವು ಬಂದರೂ ಬಂದೀತು.

ಹೀಗೆ ಏನೇನೋ ಯೋಚಿಸುತ್ತಾ ಅಡಿಗರು ಹಂಜಾರರ ಮನೆಯ ಎದುರಿನ ಅಡಿಕೆ ತೋಟವನ್ನು ಹಾದು ಅಂಗಳಕ್ಕೆ ಬಂದರು. ಅಲ್ಲಿಯೇ ಇದ್ದ ಬಾವಿಕಟ್ಟೆಯ ನೀರಿನ ಟಾಂಕಿಯಿಂದ ಒಂದು ಚೊಂಬಿನಲ್ಲಿ ನೀರು ತೆಗೆದು ಕಾಲಿನ ಹಿಂಬದಿಗೆ ಹೊಯ್ದುಕೊಂಡು ಮೆಟ್ಟಲೇರಿ ಮನೆಯ ಒಳಗೆ ಹೋದರು.

**""***"**********

ಎಂಕಪ್ಪ ಹಂಜಾರರು ಅಡಿಗರನ್ನು ನೋಡಿ, “ಬನ್ನಿ ಬನ್ನಿ” ಎಂದು ಹೇಳಿ ಒಳಗೆ ಕೋಣೆಗೆ ಹೋಗಿ ಒಂದು ಬಣ್ಣದ ಚಾಪೆಯನ್ನು ಚಾವಡಿಯಲ್ಲಿ ಹಾಸಿ “ಕುಳಿತುಕೊಳ್ಳಿ. ಸ್ವಲ್ಪ ಬಾಯಾರಿಕೆಗೆ...” ಎಂದು ಉಪಚರಿಸಿದರು. ಒಂದು ತಟ್ಟೆಯಲ್ಲಿ ಬೆಲ್ಲದ ತುಂಡು, ತಂಬಿಗೆಯಲ್ಲಿ ನೀರು, ಒಂದು ಲೋಟವನ್ನು ತಂದು ಅವರ ಹೆಂಡತಿ ಅಡಿಗರ ಮುಂದೆ ಇಟ್ಟು, “ಬಂದ್ರಿಯಾ” ಎಂದು ನಗೆ ಬೀರಿ ಮಾತಾಡಿಸಿದರು.

ಅಡಿಗರು ಚಾವಡಿಯಲ್ಲಿ ಚಾಪೆಯಲ್ಲಿ ಕಾಲು ನೀಡಿ ಕುಳಿತು, “ಎಂತಹಾ ಶೆಖೆ ಮರ್ರೆ” ಎಂದು ತನ್ನ ಪಾಣಿಪಂಚೆಯಲ್ಲಿ ಮುಖವನ್ನು ಒರೆಸಿಕೊಂಡು, ಅದನ್ನೇ ಗಿರಿಗಿಟಿಯಂತೆ ಸುತ್ತಲೂ ತಿರುಗಿಸುತ್ತಾ ಗಾಳಿ ಹಾಕಿಕೊಂಡು ಲೋಟಕ್ಕೆ ನೀರು ಬಗ್ಗಿಸಿ, ಬೆಲ್ಲದ ತುಂಡನ್ನು ಬಾಯಿಗೆ ಎಸೆದು, ನೀರನ್ನು ಗಟಗಟನೆ ಕುಡಿದು, “ಎಲ್ಲಾ ರೆಡಿಯಾ?” ಎಂದರು.

“ಹೌದಪ” ಎಂದ ಹಂಜಾರರು, ಒಂದು ದರ್ಭೆಯ ಕಟ್ಟನ್ನು ಒಂದು ಕತ್ತಿಯನ್ನು ತಂದು ಚಾವಡಿಯಲ್ಲಿ  ಅವರ ಎದುರಿಗೆ ಹಾಕಿದರು.

ಅಡಿಗರು ದರ್ಭೆಯ ಕಟ್ಟನ್ನು ಬಿಡಿಸಿ, ಅದನ್ನು ಕತ್ತರಿಸಿ “ಈ ವರ್ಷ ಶ್ರಾದ್ದಕ್ಕೆ ಎಷ್ಟ್ ಜನ? ಎಲ್ಲರೂ ಬತ್ರಾ” ಎಂದು ಮಾಮೂಲಿನಂತೆ ಕೇಳಿದರು. ಹಂಜಾರರು “ಇಲ್ಯೆ ನಾವಿಬ್ರೆ ಸೈ. ಉಳಿದವ್ರು ಬೆಂಗ್ಳೂರಲ್ಲೆ ಮಾಡ್ತರಂಬ್ರು” ಎಂದರು. ಅಡಿಗರು ದರ್ಭೆಯನ್ನು ಕತ್ತರಿಸಿ ಶ್ರಾದ್ಧ ಕ್ರಿಯೆಗೆ ಬೇಕಾದ ಪವಿತ್ರ, ಸಣ್ಣ ಸಣ್ಣ ದರ್ಭೆ ಕಟ್ಟು ಇತ್ಯಾದಿಗಳನ್ನು ಮಾಡಲು ಶುರುಮಾಡಿದರು.

ಅಷ್ಟರಲ್ಲಿ ಎಂಕಪ್ಪ ಹಂಜಾರರ ತಮ್ಮನೂ ಬಂದು ಅದೂ ಇದು ಲೋಕಾಭಿರಾಮ ಮಾತಾಡಿದ. ಅವನು ಬರೀ ಅವನ ತಾಪತ್ರಯಗಳನ್ನೇ ಹೇಳುತ್ತಿದ್ದಾನೆ ಎಂದು ಅಡಿಗರಿಗೆ ಅನ್ನಿಸಿ ಬೇಕೋ ಬೇಡವೋ ಅಂತ ಒಂದೆರಡು ಮಾತಾಡಿದರು.

ಶ್ರಾದ್ಧ ಶುರುವಾಯಿತು.
ಅಡಿಗರು ಅಂದ ಮೇಲೆ ಎಲ್ಲವೂ ಚೊಕ್ಕ. ಶಿಸ್ತು ಎಲ್ಲವೂ ಹೇಗೆ ಆಗಬೇಕೋ ಹಾಗೇ ಆಗಬೇಕು.

ಸುಮಾರು ಒಂದು ಗಂಟೆಯ ಸುಮಾರಿಗೆ ಶ್ರಾದ್ಧ ಮುಗಿದೂ ಹೋಯಿತು.

ಹಂಜಾರರ ಹೆಂಡತಿ “ನಿಮ್ಮ ಮಗ ಬಂದಿದ್ನೆ?” ಎಂದು ವಿಚಾರಿಸಿದರು. “ಇಲ್ಲ ಮರ್ರೆ ಅವ ಎರಡ್ ಮೂರ್ ವರ್ಷಕ್ ಒಂದ್ಸಾರಿ ಬಪ್ದ್ ಅಲ್ದೆ?” ಸ್ವರದಲ್ಲಿ ಏಕೋ ನಡುಕವುಂಟಾಗಿ ತಾನು ಒಂಟಿ ಎಂಬ ಭಾವ ಅಡಿಗರ ಮನಸ್ಸಿನಲ್ಲಿ ಮೂಡಿ ಮಾಯವಾಯಿತು.

*********

“ನಮ್ ಮಾಣಿ, ಶಂಕ್ರನಾರಾಯ್ಣ ಮದರ್ ತೆರೆಸಾ ಶಾಲಿಗ್ ಹ್ವಾಪದೆ. ಅವ ಬಪ್ಪು ಹೊತ್ತಾಯ್ತ. ಇಲ್ಲೆ ಪ್ಯಾಟಿಗ್ ಹೋಯಿ, ಕರ್ಕಂಡ್ ಬತ್ತೆ ಅಕ್ಕಾ?”
ಎಂದು ಅಂಗಿ ಹಾಕಿಕೊಳ್ಳುತ್ತಾ ಎಂಕಪ್ಪ ಹಂಜಾರರು ಹೊರಗೆ ಹೊರಟರು.

“ ಮನೆಯಲ್ಲಿ ಆಗುವ ಇಂತಹ ವಿಶೇಷ ಕಟ್ಲೆಯ ದಿನ ಆದ್ರೂ, ಮಕ್ಳು ಮನೆಗಿರ್ಕೆ. ಇಲ್ದಿದ್ರೆ ಅವುಕೆ ಈ ಕ್ರಮ, ಸಂಸ್ಕಾರ, ಸಂಪ್ರದಾಯ ಎಲ್ಲ ಹ್ಯಾಂಗ್ ಗೊತ್ತಾತ್ತೆ?”
ಅಂದರು ಅಡಿಗರು.
“ಅವು ರಜೆ ಮಾಡೂಕ್ ಎಡಿಯಾ ಅಂತ್ವೆ. ಪಾಠ ಮಿಸ್ ಆತ್ತಂಬ್ರ್. ನಮಗಂತೂ ಓದೂಕಾಯ್ಲಿಲ್ಲೆ. ಮಕ್ಳಾರೂ ಓದ್ವಷ್ಟ್ ಓದ್ಕಣ್ಲಿ”
ಎಂದು ನಗುತ್ತಾ ಹೊರಟರು ಹಂಜಾರರು.
ಸಂಸ್ಕಾರ ಇದ್ದೂ ಇಂದು ನನ್ನ ಮಗ ಏನು ಮಾಡುತ್ತಿದ್ದಾನೆ, ಎಂದುಕೊಂಡರು ಅಡಿಗರು.

ಮನಸ್ಸು ತನ್ನ ಬಾಲ್ಯಕ್ಕೆ ಓಡಿತು. ಅಪ್ಪಯ್ಯನಿಂದಲೇ ವೇದ ಪಾರಾಯಣ ಪಾಠ ಹೇಳಿಸಿಕೊಂಡ ನಾನು, ಅಪ್ಪಯ್ಯ ಹೋದ ಪೌರೋಹಿತ್ಯದ ಮನೆಗೆಲ್ಲ ಅವರ ಹಿಂದೆ ಹೋಗುತ್ತಿದ್ದೆ. ಅವರ ಸೇವೆಯೇ ನನ್ನ ಬದುಕು ಅಂದುಕೊಂಡಿದ್ದೆ. ಅವರೂ ಹಾಗೆಯೇ ಅವರ ಸೇವೆಗೇ ನಾನು ಹುಟ್ಟಿದ್ದು ಎಂಬಂತೆ ಇದ್ದರು. ಸುತ್ತಮುತ್ತಲಿನ ಬ್ರಾಹ್ಮಣರ ಮನೆಯಲ್ಲಿ ನನಗೆ ಎಷ್ಟೊಂದು ಗೌರವ ಇತ್ತು. ದಾರಿಯಲ್ಲಿ ಸಿಕ್ಕಿದರೆ ಮಾತಾಡಲು ಅಂಜುತ್ತಿದ್ದರು. ಎದುರು ಬರುವಾಗ ದಾರಿ ಬಿಟ್ಟು ಬದಿಗೆ ಸರಿಯುತ್ತಿದ್ದರು.

ಆದರೆ  ಈಗ? ನನ್ನನ್ನು ನೋಡಿದರೆ ಯಾರೂ ಗೌರವ ಕೊಡುತ್ತಾರೆ ಎಂಬ ವಿಶ್ವಾಸವೇ ಇಲ್ಲ. ಪರಿಚಿತರೇ ಆದರೂ ದೂರದಿಂದಲೇ  ನೋಡಿ ನಕ್ಕು ಹಾಗೆಯೇ ಹೋಗುತ್ತಾರೆ.

ಆದರೆ ನನ್ನ ಮಗ?  ನಮ್ಮ ಊರಿನಲ್ಲೇ ಹೆಚ್ಚಿನವರಿಗೆ  ಪರಿಚಯವಿಲ್ಲ. ಹೆಚ್ಚು ಅವರಿವರ ಮನೆಗೆ ಹೋಗಿ ಬಂದವನೆ ಅಲ್ಲ. ನೆಂಟರಿಷ್ಟರೊಡನೆ ಬೆರೆಯುತ್ತಲೇ ಇರಲಿಲ್ಲ ಚಿಕ್ಕಂದಿನಿಂದಲೂ ಓದುವ ನೆಪದಲ್ಲಿ ಮನೆಯಿಂದ ಹೊರಗೆ ಬರುತ್ತಲೇ ಇರಲಿಲ್ಲ. ಆಗ ಅವನ ಅಮ್ಮನೂ ಅದನ್ನು ಸಮರ್ಥಿಸಿದಳು.
ನಾನು ಅಪ್ಪಯ್ಯನಿಗೆ ಹೆದರುತ್ತಿದ್ದೆನಾ? ಹೆದರಿಕೆಯೇ ಅದು? ಅಲ್ಲ. ಅದು ಗೌರವ. ಅಪ್ಪಯ್ಯ ನನಗೆ ಜೋರು ಮಾಡಿದ್ದೇ ಇಲ್ಲ. ಕಾಲ ಬಹಳ ಬದಲಾಗಿ ಹೋಯಿತು. ಈಗ ಮಗ ಮನೆಯಲ್ಲಿದ್ದಾಗ ಆಪ್ಯಾಯತೆಯಿಂದ ಇಲ್ಲಿ ಬಾ ಎಂದು ಕರೆಯಬೇಕು ಅನ್ನಿಸಿದರೂ, ಅವನು ಕುಳಿತಲ್ಲಿಂದ ಎದ್ದು ಬರುತ್ತಾನೆ ಎಂಬ ವಿಶ್ವಾಸ ನನಗಿಲ್ಲ. ಹಾಗಂತ. ಅದನ್ನು ಪರೀಕ್ಷೆ ಮಾಡಲು ಹೋಗಲಿಕ್ಕೂ ಧೈರ್ಯವಿಲ್ಲ. ಈಗೀಗ ಮನೆಗೆ ಬಂದರೂ ನನ್ನನ್ನು ಕಂಡರೆ ಕಣ್ಣು ತಪ್ಪಿಸಿಕೊಂಡು ತಿರುಗುತ್ತಾನೆ. ಎದುರಿಗೆ ಬಂದು ನಿಲ್ಲುವುದೇ ಇಲ್ಲ. ಮಾತುಕತೆಯಂತೂ ಇಲ್ಲವೇ ಇಲ್ಲ. ದೈವ ಭಕ್ತಿ ಪೂಜೆ ಪುನಸ್ಕಾರ ಎಲ್ಲ ನನ್ನ ಕಾಲಕ್ಕೇ ಮುಗಿಯಿತಾ ಅಂತ.

ಈಗ ಅಲ್ಲಿಯೂ ಪೂಜೆ ಮಾಡುತ್ತಾನಾ? ಹೊತ್ತಿನಿಂದ ಹೊತ್ತಿಗೆ ಸರಿಯಾಗಿ ಸ್ನಾನವನ್ನೂ ಮಾಡುತ್ತಾನೋ ಇಲ್ಲವೊ. ಹಿಂದೆ ಒಮ್ಮೆ ಮನೆಯಲ್ಲಿರುವಾಗ ಅದನ್ನೆಲ್ಲ ಹೇಳಿದರೆ “ಅದೆಲ್ಲ ನಿಮ್ ಕಾಲದಲ್ಲಾಯ್ತು. ಈಗ ಚೆನ್ನಾಗಿ ದುಡಿಯಬೇಕು, ಹಣ ಮಾಡಬೇಕು. ಕಾಲಕ್ಕೆ ತಕ್ಕಂತೆ ಬದಲಾಗಬೇಕು” ಅಂದಿದ್ದ. ಯಾವುದು ಬದಲಾವಣೆ? ನಮ್ಮ ನಮ್ಮ ಸಂಸ್ಕಾರವನ್ನು ಕಿತ್ತೊಗೆಯುವುದಾ? ಹಿರಿಯವರಿಗೆ ಗೌರವ ಕೊಡದಿರುವುದಾ? ಪಾಶ್ಚಾತ್ಯರನ್ನು ಅನುಕರಿಸುವುದಾ? ಎಂದರೆ,
“ಅದೆಲ್ಲ ನಿಮಗೆ ಗೊತ್ತಾಗುವುದಿಲ್ಲ” ಅನ್ನುತ್ತಾನೆ.

ಹೌದು ನಾನೇ ಹೆಡ್ಡನಾದೆ.

ನಾಳೆಯ ದಿನಗಳನ್ನು ಯೋಚಿಸಲೇ ಇಲ್ಲ. ನನ್ನ ಲಕ್ಷ್ಮಿಯೂ ಹೇಳಿದಳಲ್ಲ. ಮಗ ಓದಲಿಕ್ಕೆ ಹುಷಾರಿದ್ದಾನೆ. ಓದುವಷ್ಟು ಓದಿಸುವ ಅಂತ. ಮಗ ಓದಿ ಓದಿ ಮೇಲೆ ಮೇಲೆ ಹೋದ. ನಾವು ಹಿಂದುಳಿದೆವು. ಚೆನ್ನಾಗಿ ಓದಿ ದುಡಿದು ಹಣವನ್ನು ನೀರಿನಂತೆ ಖರ್ಚು ಮಾಡುವ ಮಗ, ಎಲ್ಲಾದರೂ ಇರಲಿ ಸುಖವಾಗಿ ಇರಲಿ ಎನ್ನುವುದಕ್ಕಿಂತ ಕಷ್ಟವೋ ಸುಖವೊ ಮಗ ಕಣ್ಣಮುಂದೆಯೇ  ಇರಲಿ ಎಂದು ಬಯಸುವುದು ಸ್ವಾರ್ಥ ಅಂತ ಆಗುತ್ತದೆಯಾ?
“ಊಟಕ್ಕೇಳಿ”
ಅಂದರು ಹಂಜಾರರು.


******""****



ಊಟದ ಶಾಸ್ತ್ರ ಆಯಿತು.

ಊಟ ಮುಗಿದು ಒಂದು ವೀಳ್ಯ ಹಾಕಿ,  ಒಂದು ಗಳಿಗೆ ಚಾವಡಿಯಲ್ಲಿ ದಿಂಬಿಗೆ ಆನಿಸಿ ಕಣ್ಣು ಮುಚ್ಚಿದ ಅಡಿಗರು,  ಐದು ನಿಮಿಷದಲ್ಲಿಯೇ ಎದ್ದು ಹೆಂಡತಿಯ ನೆನಪಾಗಿ ಪಾಣಿ ಪಂಚೆಯನ್ನು ಕೊಡಕಿ ಹೆಗಲಿಗೇರಿಸಿ,
"ಹಂಜಾರ್ರೆ, ನಾನು ಇನ್ನು ಬತ್ತೆ"
ಎಂದು ಹೊರಡಲು ಅನುವಾದರು.
ಹಂಜಾರರು ಒಂದು ಹರಿವಾಣದಲ್ಲಿ ಅಕ್ಕಿ, ಕಾಯಿ, ಎಲೆ ಅಡಿಕೆ ಇಟ್ಟು ದಕ್ಷಿಣೆ ನೀಡಿ ಕಾಲಿಗೆ ನಮಸ್ಕರಿಸಿದರು.
“ಆಯುಷ್ಮಾನ್ ಭವ”
ಎಂದು ಆಶೀರ್ವದಿಸಿದ ಅಡಿಗರು ಎದ್ದು ಹೊರಟು ನಿಂತರು.

ಹಂಜಾರರ ಹೆಂಡತಿ ಒಳಗೆ ಹೋಗಿ ಒಂದು ಲೋಟ ಕಾಫಿಯನ್ನು ತಂದು ಕೊಟ್ಟು,

“ಲಕ್ಷ್ಮಿಯಮ್ಮ ಹ್ಯಾಂಗಿದ್ರೆ?” ಎಂದು ಕೇಳಿದರು.

ಅಲ್ಲಿಯೇ ಮತ್ತೆ ಚಾವಡಿಯ ತುದಿಯಲ್ಲಿ ಕುಳಿತ ಅಡಿಗರು,

“ಏನ್ ಹೇಳೂದ್? ಮನ್ಕಂಡಲ್ಲೇ ಅನ್ಭವಿಸ್ತಾ ಇದ್ಲು. ಏನೂ ಮಾಡ್ಕಂಬ್ಕಾತಿಲ್ಲೆ. ಇವತ್ತಂತೂ ತುಂಬಾ ಸೋತಂಗ್ ಕಾಂತಿತ್. ನಾನ್ ಬತ್ತೆ. ಇವತ್ ಉಂಡ್ಲೊ ಇಲ್ಯೋ?”

“ಒಟ್ಟಾರೆ ಕಷ್ಟ ಅಲ್ದಾ?”

“ಎಂತಾ ಮಾಡೂದ್ ಹೇಳಿ. ಆ ನಮ್ಮ ಬೆಳ್ಳ ನಾಯ್ಕನ ಕಿರೀ ಹೆಣ್ ಒಂದ್ ಎಷ್ಟ್ ಹೊತ್ತಿಗಾರೂ ದಿನಾ ಬಂದ್ ಕಸ ಗುಡಿಸಿ, ನೆಲ ಒರೆಸಿ ಬಟ್ಟೆ ಒಗ್ದ್ ಹಾಕಿ ಹ್ವೋತ್. ಅದಕ್ ಎಂತಾರೂ ಕೊಡುದ್”

ಅವರು ಕೊಟ್ಟ ಕಾಫಿಯನ್ನು ಘಟಘಟ ಕುಡಿದು, ಪೊಟ್ಟಣದಲ್ಲಿ ಹಾಕಿ ಕೊಟ್ಟ ಸಿಹಿಯನ್ನು ತೆಗೆದುಕೊಂಡು ಅಂಗಳಕ್ಕಿಳಿದರು.

ಮತ್ತೆ ಮನಸ್ಸಿನಲ್ಲಿ ದುಗುಡ ತುಂಬಿಕೊಂಡಿತು. ಇಂದು ಯಾಕೆ ಹೀಗೆ ಆಗುತ್ತಿದೆ?. ಇತ್ತೀಚೆಗೆ ಮನದ ಒಳಗೆ ಏನೋ ಒಂದು ರೀತಿಯ ಭಯ. ಒಂದು ರೀತಿಯ ಅನಿಶ್ಚಿತತೆ.
ಲಕ್ಷ್ಮೀ ನರಸಿಂಹಾ ಮನಸ್ಸಿಗೆ ನೆಮ್ಮದಿಕೊಡಿ ಎಂದು ದೇವರನ್ನು ಧ್ಯಾನಿಸಿದರು.

ಮನೆಗೆ ಬಂದು ಅಂಗಳದಲ್ಲಿ ಮೆಟ್ಟನ್ನು ಕಳಚಿಟ್ಟು,
“ಉಸ್ಸಪ್ಪ”

ಎಂದು ಜಗಲಿಯ ಮೇಲೆ ಕಾಲು ನೀಡಿ ಕುಳಿತು ಕೊಂಡರು.

“ಹ್ವಾ, ಉಂಡ್ಯಾ? ಎಂತಾ ಮಾಡಿದೆ? ನಿದ್ದೆ ಬಂತಾ?” ಎಂದು ಕುಳಿತಲ್ಲಿಂದಲೇ ಹೆಂಡತಿಯನ್ನು ಕೂಗಿ ವಿಚಾರಿಸಿದರು.

ಉತ್ತರ ಬರಲಿಲ್ಲ.

ಹಾಗೆಯೇ ಸ್ವಲ್ಪ ಹೊತ್ತು ಕುಳಿತಿದ್ದು, ಮೆಲ್ಲನೇ ಎದ್ದು, ಕಾಲಿಗೆ ನೀರು ಹಾಕಿಕೊಂಡು, ಒಳಗೆ ಚಾವಡಿಗೆ ಬಂದು, ಕೊಡೆಯನ್ನು ಮಾಡಿಗೆ ಸಿಕ್ಕಿಸಿ, ಅಡುಗೆ ಮನೆಗೆ ಹೋದರು.

ಎಲ್ಲವೂ ಎಲ್ಲಿ ಇಟ್ಟಿದ್ದಾರೋ ಅಲ್ಲಿಯೇ ಇತ್ತು.

ಹಾಗಾದರೆ ಇವಳು ಊಟವನ್ನೇ ಮಾಡಲಿಲ್ಲ.

ಮೆಲ್ಲನೇ ನಡೆದು ಪಡಸಾಲೆಗೆ ಬಂದರು. ಒಮ್ಮೆ ಹಾಗೆಯೇ ಕಿಟಕಿಯಿಂದ ಹೊರಗೆ ತೋಟದ ಕಡೆಗೆ ದೃಷ್ಟಿ ಹಾಯಿಸಿದರು. ಏಕೋ ಇತ್ತಿತ್ತಲಾಗೆ ತಾನು ಇಷ್ಟಪಟ್ಟು ಬೆಳೆಸಿದ ತೆಂಗು ಅಡಿಕೆ ಮರಗಳೇ ತನಗೆ ಅಪರಿಚಿತವಾದಂತೆ ಕಾಣುತ್ತಿದೆ. ಯಾವುದೂ ಬೇಡ ಅನ್ನಿಸಲಿಕ್ಕೆ ಶುರುವಾಗಿದೆ.

ಯಾವತ್ತೂ ಒಮ್ಮೆ ಹೋಗಿ, ಪ್ರತೀ ಅಡಿಕೆ ಮರದ ಬುಡದಲ್ಲಿ ಎಡದ ಕೈಯಲ್ಲಿ ಮರವನ್ನು ಆನಿಸಿ ಹಿಡಿದುನಿಂತು, ಒಮ್ಮೆ ತಲೆ ಎತ್ತಿ ಮರದ ತುದಿಯನ್ನು ಕಣ್ಣು ಕಿರಿದು ಮಾಡಿ ನೋಡಿದರೆ, “ಹೋ, ಇದೆಲ್ಲ ತನ್ನದೇ” ಎಂದು ಅಭಿಮಾನದಿಂದ ಸಮಾಧಾನ ಪಟ್ಟುಕೊಳ್ಳುತ್ತಿದ್ದವರಿಗೆ, ಇತ್ತೀಚೆಗೆ ತೋಟದ ಕಡೆಗೂ ಹೋಗಿ ಬರಲು ಮನಸ್ಸಾಗಿರಲಿಲ್ಲ. ಕೆಲಸಕ್ಕೆ ಸರಿಯಾಗಿ ಜನವೂ ಸಿಕ್ಕುವುದಿಲ್ಲ.

ಮಲಗುವ ಕೋಣೆಗೆ ಬಂದರು.

“ಹ್ವಾ ಹ್ಯಾಂಗಿದ್ದೆ?”

ಎಂದು ಹೇಳುತ್ತಾ, ಮಂಚದ ಕಾಲುಬದಿಯಲ್ಲಿ ಮೆಲ್ಲನೇ ಕುಳಿತರು.

“ಈಗೀಗ ಈ ಶ್ರಾದ್ದವೋ, ಪೂಜೆಯೋ ನಮ್ಮ ಬ್ರಾಹ್ಮಣರಿಗೂ ಬ್ಯಾಡ ಆಯಿತ್ ಮಾರಾಯ್ತಿ. ಒಟ್ ಹರ್ಕಿಬಲಿ ತೀರ್ಸ್ತೊ” ಅಂದರು.
……………….

ಹೆಂಡತಿ ಮಗ್ಗುಲು ಮಲಗಿದವಳು ತಿರುಗಲಿಲ್ಲ.

“ಹಾಂ ಹೂಂ” ಇಲ್ಲ

ನಿಧಾನವಾಗಿ ಅವಳ ಕಾಲನ್ನು ನೇವರಿಸಿದರು.

ಆಗಲೂ ಉತ್ತರವಿಲ್ಲ.

************

ಉತ್ತರಬಾರದಿದ್ದಾಗ ಸ್ವಲ್ಪ ಗಾಬರಿಯಾಗಿ ಎದ್ದು ತಲೆದಿಸೆಗೆ ಬಂದು ಹೊದೆವಸ್ತ್ರವನ್ನು ಸರಿಸಿ ಹಣೆಯನ್ನು ಮುಟ್ಟಿನೋಡಿದರು.

ಆದರೂ ಲಕ್ಷ್ಮಿ ಸ್ಪಂದಿಸದಾಗ,

“ಹ್ವಾ ಎಂತ ಆತ್?”

ಎಂದು ಆಪ್ಯಾಯತೆಯಿಂದ ನುಡಿದರು.

ಅದಕ್ಜೂ ಉತ್ತರವಿಲ್ಲ .

ಪುನಃ

“ಲಕ್ಷ್ಮೀ “

ಎಂದು ಮೈಯನ್ನು ಅಲುಗಾಡಿಸಿ ಗಟ್ಟಿಯಾಗಿ ಕರೆದರು.

ಲಕ್ಷ್ಮಿ ನಿಧಾನವಾಗಿ ಕಣ್ಣು ತೆರೆದು ಗಂಡನತ್ತ ತಿರುಗಿದರು.

ಮೆಲ್ಲನೆ
“ನಂಗೆ ಏನೂ ಎಡುದಿಲ್ಯೆ. ಇನ್ನೂ ಎಷ್ಟ್ ದಿನ ಈ ಗ್ವಾಲೆಯೋ? ಆ ಯಮನಿಗೆ ಇನ್ನೂ ಕರುಣೆ ಬರಲಿಲ್ಲೆ”
ಎಂದು ನೋವಿನಿಂದ ನರಳಿ ಹೇಳಿದರು.

“ನಾನ್ ಎಷ್ಟ್ ಸಲ ಹೇಳಿದ್ದೆ ನಿಂಗೆ? ನೀನು ಹೀಂಗೆ ನಬಿಯುದ್ ಬ್ಯಾಡ. ನನ್ ಕೈಯಲ್ಲಿ ನೋಡುಕ್ ಆತಿಲ್ಲೆ.  ಒಮ್ಮೆ ಮಣಿಪಾಲಕ್ ಹ್ವಾಪ ಎಂದು. ಆ ಡಾಕ್ಟರ ಹೇಳಿರಲೆ. ನೀನು ಬ್ಯಾಡ ಬ್ಯಾಡ ಅಂತ್ಲೆ ಹೇಳಿಯೇ ಕಾಲ ಕಳೆದೆ. ಎಂತ ಆತ್ ಅಂತ್ಲೂ ಸಮಾ ಹೇಳುದಿಲ್ಲೆ. ಇವತ್ ಒಂದ್ ಮುಷ್ಟಿ ಉಣಲೂ ಇಲ್ಲೆ.”

ಅದಕ್ಕೂ ಉತ್ತರವಿಲ್ಲ.

“ಇನ್ ನಿನ್ ಮಾತು ನಾನು ಕೇಳಿದಿಲ್ಲೆ. ರಾಮ ನಾಯ್ಕನಿಗ್ ಪೋನ್ ಮಾಡಿ ಈಗಲೇ ಕಾರ್ ತಪ್ಪುಕೆ ಹೇಳ್ತೆ”

ಎಂದು ನಿರ್ಧಾರದಿಂದ ಎದ್ದು, ಚಾವಡಿಗೆ ಬಂದು ಹಾಲಾಡಿಯಲ್ಲಿ ಬಾಡಿಗೆ ಕಾರನ್ನು  ಓಡಿಸುತ್ತಿದ್ದ ರಾಮ ನಾಯ್ಕನಿಗೆ ಪೋನ್ ಮಾಡಿ ಕಾರು ತರಲು ಹೇಳಿದರು

ಅಡಿಗರು ಮಣಿಪಾಲಕ್ಕೆ ಹೊರಡಲು ಗಡಿಬಿಡಿಯಲ್ಲಿ ಸಿದ್ದತೆ ಮಾಡತೊಡಗಿದರು.

ಯಾವಾಗಲೂ

“ಬೇಡ್ದೆ , ನಾನ್ ಸತ್ರೆ ಇಲ್ಲೆ ಸಾಯ್ತೆ”

ಎಂದು ಹೇಳುತ್ತಿದ್ದ ಲಕ್ಷ್ಮಿಯಮ್ಮ ಇವತ್ತು ಉತ್ತರ ಕೊಡಲಾರದಷ್ಟು ಬಳಲಿದ್ದರು. ಅದನ್ನು ನೋಡಿ ಅವಳಿಗೆ ಆಗುವ ನೋವು ಎಷ್ಟು ಎಂಬುದನ್ನು ಎಣಿಸಿಕೊಂಡು ಅಡಿಗರು ಮತ್ತಷ್ಟು ಆತಂಕಗೊಂಡರು.

ಕಾರು ಬಂದು ನಿಂತ ಶಬ್ದ ಆಯಿತು.

“ರಾಮ, ಬಾ ಎಲ್ಲ ರೆಡಿ ಮಾಡ್ಕಂಡ್ ಆಯ್ತು. ಒಂದು ಚಾ ಕುಡ್ಕೊ. ಅವಳನ್ ಹೊತ್ಕಂಡ್ ಕಾರಿಗೆ ಹಾಕ್ವಾ. ಮಣಿಪಾಲಕ್ ತಕಂಡ್ ಹ್ವಾಪ. ಮುಂದಿದ್ ದೇವರ ಕಂಡಂಗೆ ಆತ್”
ಎಂದು ಅದು ತನಗೂ ಅವನಿಗೂ ಅನ್ವಯಿಸುತ್ತದೆ ಎಂಬಂತೆ ಹೇಳಿದರು.

ಅಡಿಗರು ಅವನ ಉತ್ತರಕ್ಕೆ ಕಾಯಲಿಲ್ಲ.

ಅವನು ಅಡಿಗರು ಕೊಟ್ಟ ಚಾ ಕುಡಿದು, ಬಾವಿಕಟ್ಟೆಗೆ ಹೋಗಿ ಲೋಟವನ್ನು ಕುಚುಕುಚು ಮಾಡಿ ತೊಳೆದು, ತಂದು ಜಗಲಿಯ ಮೂಲೆಯಲ್ಲಿ ಕವುಚಿಹಾಕಿ ಮೆಟ್ಟಿಲು ಹತ್ತಿ ಒಳಗೆ ಬಂದ.

ಇಬ್ಬರೂ ಲಕ್ಷ್ಮಿಯಮ್ಮನನ್ನು ಎತ್ತಿ ಕೂರಿಸಿ, ಆಚೆ ಒಬ್ಬರು, ಈಚೆ ಒಬ್ಬರು ರಟ್ಟೆ ಹಿಡಿದು, ಆನಿಸಿ ಹಿಡಿದುಕೊಂಡು ಒಂದು ರೀತಿಯಲ್ಲಿ ಹೇಳುವುದಾದರೆ ಎಳೆದುಕೊಂಡೇ ಹೋಗಿ ಕಾರಿನ ಹಿಂದಿನ ಸೀಟಿನಲ್ಲಿ ಮಲಗಿಸಿದರು.


************

ಅಡಿಗರು ಮತ್ತೆ ಒಳಗೆ ಹೋಗಿ ಕೈಚೀಲದಲ್ಲಿ ಮಣಿಪಾಲದ ಆಸ್ಪತ್ರೆಯಲ್ಲಿ ಉಳಿಯಲು ಬೇಕಾದ ಬಟ್ಟೆ ತಟ್ಟೆಯೊಂದಿಗೆ ಬಂದು, ಹೊರಬಾಗಿಲಿಗೆ ಬೀಗ ಹಾಕಿದರು.  
ಮನೆಯ ಹಿಂದಿನ ಕೂಲಿಯಾಳು ರಾಧು ಬಾಯಿಯ ಮನೆಯ ಎದುರು ಹೋಗಿ ಕೂಗಿ ಹೇಳಿದರು,

“ಬಾಯಿ, ನಾನ್ ಮಣಿಪಾಲಕ್ಕೆ ಹೆಂಡತಿಯನ್ನು ಕರ್ಕಂಡ್ ಹ್ವಾತೆ, ಮನೆ ಕಡೆ ಸ್ವಲ್ಪ ನೋಡ್ಕೊ ಮಾರಾಯ್ತಿ. ಇಗಾ ಮನೆ ಬೀಗದ್ ಕೈ ನಿನ್ನತ್ರ ಇರ್ಲಿ” ಎಂದು ಹೇಳಿ ಕೀಯನ್ನು ಕೊಟ್ಟು, ಬಂದು ಕಾರಿನ ಹಿಂದಿನ ಸೀಟಿನಲ್ಲಿ ಹೆಂಡತಿಗೆ ತಾಗಿ ಕುಳಿತರು.

“ಹ್ವಾಪ”
ಎಂದರು.

ತುಂಬಾ ಆಯಾಸವಾದಂತೆ ಅನಿಸಿತು. ತಮ್ಮ ಉಪ್ಪರಿಗೆಯ ದೊಡ್ಡ ಮನೆಯತ್ತ ತಿರುಗಿ ನೋಡಿದರು. ಕಣ್ಣಿನಲ್ಲಿ ಅಯಾಚಿತವಾಗಿ ಒಂದುಹನಿ ನೀರು ಇಳಿಯಿತು.

ಕಾರು ಹೊರಟಿತು.

ಮಣಿಪಾಲದಲ್ಲಿ ಡಾಕ್ಟರರು ಪರಿಚಯದವರೆ. ಲಕ್ಷ್ಮಿಯನ್ನು ಒಂದು ವಾರ್ಡಿಗೆ ಸೇರಿಸಿಯಾಯಿತು. ಇಲ್ಲಿ ಕೆಲವರಾದರೂ ನನ್ನ ಉಡುಗೆ ತೊಡುಗೆಯನ್ನು ನೋಡಿ ಸ್ವಲ್ಪ ಗೌರವ ಕೊಡುತ್ತಾರೆ.

ಒಬ್ಸರ್ವೇಶನ್ ಅಂತೆ.

ಏನೇನೋ ಟೆಸ್ಟ್ ಗಳಾದವು.

ಅಂತೂ ರಾತ್ರಿ ತಡವಾಗಿ ಡಾಕ್ಟರು ಬಂದರು.

“ಅಡಿಗ್ರೆ, ಹೆದರೂದ್ ಬ್ಯಾಡ. ಒಳ್ಳೆ ಟೈಮಿಗೆ ಕರ್ಕಂಡ್ ಬಂದ್ರಿ. ಇನ್ನೂ ಸ್ವಲ್ಪ ತಡಾ ಮಾಡಿದ್ರೆ ಬಹಳ ಕಷ್ಟ ಇದ್ದಿತ್ತು. ಎಲ್ಲ ಟೆಸ್ಟ್ ಮಾಡಿದ್ವೊ. ನೋಡುವಾ” ಎಂದರು.

ಅಡಿಗರು ಮಗ ಸದಾಶಿವನಿಗೆ ಪೋನ್ ಮಾಡಿ ವಿಷಯ ತಿಳಿಸಿದರು.

*ಅಮ್ಮನಿಗ ಹುಷಾರಿಲ್ಲೆ ಮಾರಾಯಾ, ಮಣಿಪಾಲಕ್ ಕರ್ಕಂಡ್ ಬಂತ್ ನೀನ್ ಸ್ವಲ್ಪ ಪುರ್ಸೊತ್ ಮಾಡ್ಕಂಡ್ ಬತ್ಯಾ?” ಎಂದರು.

ವಿಷಯವನ್ನು ಕೇಳಿದ ಮಗ ಹೇಳಿದ,

“ಹೌದಾ ಅಪ್ಪಯ್ಯ, ಎಷ್ಟ್ ಖರ್ಚಾದ್ರೂ ಅಡ್ಡಿಲ್ಲೆ. ನಾನ್ ಇಲ್ಲಿಂದ್ಲೆ ಡಾಕ್ಟರಿಗೆ ಮಾತಾಡ್ತೆ. ಅಪ್ಪಯ್ಯ, ನೀವು ಹೆದ್ರಬೇಡಿ. ಧೈರ್ಯದಿಂದಿರಿ” ಅಂದ,

“ಎಂತ ಧೈರ್ಯವೋ ಮಗಾ?, ನಿಂಗ್ ಸ್ವಲ್ಪ ಪುರಸೊತ್ ಮಾಡ್ಕಂಡ್ ಬಪ್ಪುಕಾತ್ತಾ? ನಂಗೆ ಕೈಕಾಲೆ ಆಡುದಿಲ್ಲೆ. ಎಂತ ಮಾಡ್ಕಂದೇಳಿ ಗೊತ್ತಾತಿಲ್ಲೆ ಮಾರಾಯಾ. ತುಂಬ ಹೆದ್ರಿಕಿ ಆತ್” ಎಂದರು.

ಎಂದೂ ಹೀಗೆ ಮಾತಾಡದ ಅಪ್ಪಯ್ಯನ ಮಾತು ಕೇಳಿ ಸ್ವಲ್ಪ ಅಧೀರನಾದರೂ, ಅವನು

“ನಂಗೆ ಈಗ ರಜೆ ಸಿಕ್ಕೂದಿಲ್ಲ. ತುಂಬ ಕೆಲಸ. ಕಂಪ್ನಿಯವ್ರ್ ನನ್ನ ಮೇಲೇ ಡಿಪೆಂಡ್ ಆಯರ್ ಸ್ವಲ್ಪ ಧೈರ್ಯ ತಗೊಳ್ಳಿ. ಎಲ್ಲ ಸಮಾ ಆತ್”

ಎಂದು ಹೇಳಿದ.

ಅವನಿಗೆ ನನ್ನ ಮನಸ್ಥಿತಿಯ ಅರಿವಾಗಬೇಕಿದ್ದರೆ ಅವನಿಗೆ ನನ್ನಷ್ಟು ವರ್ಷವಾಗಬೇಕೋ ಏನೋ ಎಂದುಕೊಂಡರು ಅಡಿಗರು.

ಆದರೆ ಆ ಲಕ್ಷ್ಮಿಯಮ್ಮ ಮರುದಿನ ಬೆಳಗನ್ನು ನೋಡಲೇ ಇಲ್ಲ.



********"***



ಡಾಕ್ಟರರು ಬಂದು,

“ಅಡಿಗರೆ, ಕ್ಷಮಿಸಿ, ಎಲ್ಲ ಅವನ ಇಚ್ಚೆ. ನಾವು ಮಾಡೂದನ್ನು ಮಾಡಿದ್ದೇವೆ”

ಎಂದು ಅಡಿಗರನ್ನು ಸಂತೈಸಿದರು.

ಅಡಿಗರ ಮನಸ್ಸು ಶೂನ್ಯವಾಗಿತ್ತು.

ಒಳಗೆ ಅಂಧಕಾರ.

ಏನು ಮಾಡಬೇಕೆಂದೇ ತಿಳಿಯಲಿಲ್ಲ.

ಮಗನಿಗೆ ಪೋನ್ ಮಾಡಿದರು.

“ಎಲ್ಲ ಮುಗಿತ್ ಮಗಾ”

ಎಂದು ಗದ್ಗದಿತರಾಗಿ ವಿಷಯ ತಿಳಿಸಿದರು.

ಮಗ  ಮಾತಾಡಲಿಲ್ಲ

ಸ್ವಲ್ಪ ಗಡಸಿನಿಂದಲೇ,

“ರಜೆ ಹಾಕಿ ಕೂಡಲೇ ಬಾ. ಬಾಡಿಯನ್ನು ಐಸ್ ಲ್ಲಿ ಇಡ್ತೇವೆ. ಎಲ್ಲ ಆಯ್ಕಲೆ”

ಅಂದರು.

ಮಗ ಮತ್ತೂ ಸ್ವಲ್ಪ ಹೊತ್ತು ಮೌನವಾಗಿದ್ದು ಮತ್ತೆ ಮೆಲ್ಲನೇ ಹೇಳಿದ.

“ಅಪ್ಪಯ್ಯ, ನಾನು ಬರುವುದು ಎರಡು ದಿನ ಆದೀತು. ಅಷ್ಟರವರೆಗೆ ಯಾಕೆ ಇಡ್ತೀರಿ?  ನೀವು ಮುಂದುವರಿಸಿ. ನಮ್ಮ ಮಗುವಿಗೂ ಅಷ್ಟು ಹುಷಾರಿಲ್ಲ. ಸಣ್ಣದು. ನನಗೆ ಅಮ್ಮನು ಇನ್ನೂ ಜೀವಂತ ಇರುವ ಹಾಗಿನ ಮುಖವೆ ಕಣ್ಣ ಮುಂದೆ ಬರ್ತಾ ಇತ್ . ಅದು ಹಾಂಗೇ ಇರಲಿ”

ಎಂದು ಹೇಳಿದ.

ಅಡಿಗರಿಗೆ ಗಂಟಲು ಕಟ್ಟಿತು.

ಯಾಂತ್ರಿಕವಾಗಿ ಪೋನ್ ಇಟ್ಟರು.

ಹೌದು ನಾನು ಕಳೆದುಕೊಂಡದ್ದು ಕೇವಲ ಒಬ್ಬ ನನ್ನ ಮಗನನ್ನು ಮಾತ್ರ ಅಲ್ಲ. ನನ್ನ ಇಡೀ ಬದುಕನ್ನು, ನೆಮ್ಮದಿಯನ್ನು ಅನೂಚಾನವಾಗಿ ನಡೆಸಿಕೊಂಡು ಬಂದ, ಆಚರಿಸಿಕೊಂಡು ಬಂದ ಧರ್ಮವನ್ನು. ಮಗನನ್ನು ದೊಡ್ಡದಾಗಿ ಓದಿಸುತ್ತೇನೆ ಎಂಬ ಭ್ರಮೆಯಲ್ಲಿ, ನಾನೇ ನಮ್ಮ ಕುಲ ಪರಂಪರೆ ಆಚಾರ ವಿಚಾರ ಎಲ್ಲ ಎಲ್ಲವನ್ನೂ ಚಿವುಟಿ ಹಾಕಿದೆ. ನಮ್ಮ ವಂಶಕ್ಕೆ ನಾನೇ ಮುಕ್ತಾಯ ಹಾಡಿದೆ. ಕೊನೆಯವನಾಗಿಬಿಟ್ಟೆ.

ಹಿಂದಿನ ಕಾಲದಲ್ಲೂ ನಮ್ಮ ಕುಲದಲ್ಲಿ ಓದಿದವರಿರಲಿಲ್ಲವೇ? ಅದಕ್ಕಾಗಿ ತನ್ನ ಸಕಲ ಸುಖ ಸಂತೋಷವನ್ನು ಬಲಿಗೊಟ್ಟು ಯಶಸ್ಸು ಹೊಂದಿದವರಿರಲಿಲ್ಲವೇ? ಯಾಕಿಲ್ಲ?

ತನ್ನ ಒಂದು ಸಣ್ಣ ಮಾತು ನಡೆಯಲಿಲ್ಲವೆಂದು ಅನ್ನವಿತ್ತು ಆಶ್ರಯನೀಡಿದ ರಾಜನ ಆಶ್ರಯವನ್ನೇ ಧಿಕ್ಕರಿಸಿ ಬಂದಿದ್ದರಂತೆ ನಮ್ಮ ಹಿರಿಯರೊಬ್ಬರು. ಅವರ ದೃಢತೆ ವ್ಯಕ್ತಿತ್ವಕ್ಕೆ ಯೋಗ್ಯತೆಗೆ ಶರಣಾದ ಆ ರಾಜ ಇವರು ಹೋದ ಊರಿನಲ್ಲಿಯ ದೇವಸ್ಥಾನದಲ್ಲೇ ದೊಡ್ಡ ಸ್ಥಾನವನ್ನು ನೀಡಿ ಗೌರವಿಸಿದನಂತೆ. ನಮ್ಮಲ್ಲೂ ಓದಿದವರಿದ್ದರು, ಪ್ರಖಾಂಡ ಪಂಡಿತರೂ ಇದ್ದರು. ಆದರೆ ಯಾರೂ ಹೀಗೆ ತಾನು ಕಲಿತ ವಿದ್ಯೆಯನ್ನು ತನ್ನ ಸುಖಕ್ಕಾಗಿ ವಿನಿಯೋಗಿಸಲಿಲ್ಲ. ತನ್ನ ತನವನ್ನು ಮಾರಿಕೊಂಡು ಧನದ ಹಿಂದೆ ಹೋಗಲಿಲ್ಲ. ಇನ್ನೊಬ್ಬರ ದಾಸ್ಯವನ್ನು ಸ್ವೀಕಾರ ಮಾಡಲಿಲ್ಲ.

“ಹ್ವಾಯ್, ನೀವು  ನಮ್ ಮುದೂರಿ ಅಡಿಗ್ರಲ್ದಾ? ಇಲ್ಲೆಂತ ಮಾಡ್ತಿದ್ರಿ?  ಯಾರಿದ್ರು?”

ಎಂಬ ಒಬ್ಬ ಊರಿನ ಪರಿಚಿತರ ಧ್ವನಿಯಿಂದ ಅಡಿಗರು ಎಚ್ಚೆತ್ತರು.

ಅಡಿಗರು ತನ್ನ ಲಕ್ಷ್ಮಿ ಅಸ್ತಂಗತಳಾದ ವಿಷಯ ಹೇಳಿದರು.

“ಹೌದಾ, ಅಮ್ಮ ಹ್ವಾದ್ರಂತಾ? ಪಾಪ. ಬಾಳ ದಿನದಿಂದ ಮಲಗಿ ದಲ್ಲೇ ಆಯ್ ಇದ್ರ್ ಅಲ್ದಾ? ಬಿಡುಗಡೆ ಸಿಕ್ತು. ಪುಣ್ಯ ಮಾಡಿರ್ ಬಿಡಿ. ಅಲಾ, ನೀವು ಹೀಗ್ ಸುಮ್ನೆ ಕೂಕಂಡ್ರೆ ಆತ್ತಾ? ಮುಂದಿದೆಲ್ಲ ಆಪದ್ ಬ್ಯಾಡ್ದಾ? ಬನ್ನಿ ಬನ್ನಿ  ನಮ್ ಗುರ್ತ ಇಪ್ಪವ್ರೊಬ್ರು ಇಲ್ ಇದ್ರ್”

ನಂತರ ಮುಂದಿನ ಎಲ್ಲ ಕೆಲಸಗಳು ಯಾಂತ್ರಿಕವಾಗಿ ನಡೆಯಿತು.

ಪೋನ್ ಮಾಡಿ ಊರಲ್ಲಿ ಕೆಲವು ಆಪ್ತರಿಗೆ ಹೇಳಿದ್ದರಿಂದ ಅದು ಬಾಯಿಯಿಂದ ಬಾಯಿಗೆ ಹೋಗಿ, ಹಾಲಾಡಿ ಪೇಟೆಯಲ್ಲಿ ನೂರಾರು ಜನ ಸೇರಿದ್ದರು.

ಅಂತೂ ಮನೆಗೆ ಹೆಂಡತಿಯ ಶವವನ್ನು ತಂದು, ಊರವರ ಸಹಕಾರದಿಂದ ದಹನವನ್ನೂ ಮಾಡಿದ್ದಾಯಿತು.

ಇನ್ನು ಮಗನ ಬರವನ್ನು ಕಾಯುವುದಾಯಿತು.

***********


ಎರಡನೇ ದಿನಕ್ಕೆ ಮಗ ಬಂದ. ಜೊತೆಯಲ್ಲಿ ಸೊಸೆ, ಮತ್ತು ಅವರ ಸಣ್ಣ ಹೆಣ್ಣುಮಗಳು.

ನಾನೇ ಜಾತಕ ನೋಡಿ ಆರಿಸಿ ಮಾಡಿದ ಮದುವೆ. ಬಹುಷ್ಯ ಮಗ ನನ್ನ ಮಾತನ್ನು ಕೇಳಿ ಒಪ್ಪಿ ಸ್ವೀಕರಿಸಿದ ಮಾತು ಅದೊಂದೆ. ಊರಿಗೇ ಔತಣ ಹಾಕಿಸಿದೆ. ಮಗ ಅಮೇರಿಕಾದಲ್ಲಿ ಇದ್ದಾನೆ. ಏನು ಸಂಭ್ರಮ ಆಗ?

ಆರಾಮ ಕುರ್ಚಿಯಲ್ಲಿ ಒರಗಿ ಕುಳಿತಿದ್ದ ಅಡಿಗರ ಮುಖದಲ್ಲಿ ಒಂದು ವಿಷಾದದ ನಗೆ ಮೂಡಿತು.

ಅವನ ಅಮ್ಮನ ಒತ್ತಾಯಕ್ಕೆ ನಾಲ್ಕಾರು ಭಾರಿ ಈ ಮನೆಗೆ ಬಂದಿದ್ದರಲ್ಲ. ಆದರೆ ಅವರು ಎಂದೂ ನಮ್ಮ ಮನೆಯವರಾಗಿ ಬರಲೇ ಇಲ್ಲ. ಇರಲೇ ಇಲ್ಲ.

ಬರುತ್ತಲೇ ಒಮ್ಮೆ ಅಡಿಗರನ್ನು ಮಾತಾಡಿಸಿದ ಮಗ ಸೊಸೆಯರು, ಅವರ ಸಾಮಾನಿನೊಂದಿಗೆ ಹೋಗಿ ಉಪ್ಪರಿಗೆ ಸೇರಿಕೊಂಡರು. ಇನ್ನು ಅವರು ಕೆಳಗೆ ಬರುವುದು ರಾತ್ರಿ ಊಟಕ್ಕೆ.

ಅಡುಗೆಗೆ ಅಂತ ಲಕ್ಷ್ಮಿಯ ಪೈಕಿಯ ಮಾರ್ವಿಯ ಒಂದು ಮಾಣಿ ಮನೆಯಲ್ಲಿಯೇ ಉಳಿದುಕೊಂಡಿದ್ದ.

ಅಷ್ಟರ ಒಳಗೆ ಅಡಿಗರು ಸುಮಾರಾಗಿ ಮನೆಯ, ಹಾಗೂ ಮುಂದಿನ ಬದುಕಿನ ಪರಿಸ್ಥಿತಿಗೆ ಹೊಂದಿಕೊಂಡಿದ್ದರು.

ಆದರೆ ಗಾಢ ಮೌನ.

ಮಗ ಮನೆಯಲ್ಲಿ ಇದ್ದರೂ, ಅಪ್ಪ ಮಗನ ಮಧ್ಯ ಮಾತಿಲ್ಲ. ಕತೆಯಿಲ್ಲ.

ಅವನು ಮನೆಯಿಂದ ಹೊರಗೂ ಹೋಗಲಿಲ್ಲ.

ಹಾಗೆಯೇ ಮತ್ತೆ ಎರಡು ದಿನ ಕಳೆಯಿತು.

ಆ ರಾತ್ರಿ ಊಟವಾದ ಮೇಲೆ ಚಾವಡಿಯಲ್ಲಿ ಕುಳಿತು, ಮಗನನ್ನು ಕರೆದು ಕೇಳಿದರು.

“ನೋಡು ಮಗು, ಹೀಂಗ್ ಮಾಡೀರ್ ಹ್ಯಾಂಗೆ? ಸುಮ್ನೇ ಇದ್ರ್ ಆತ್ತಾ? ಮುಂದಿನ ಕಾರ್ಯ ಎಲ್ಲ ಎಲ್ಲಿ ಮಾಡೂದು? ಹೇಗೆ ಮಾಡುವುದು? ಅಂತ ಯೋಚನೆ ಏನಾದ್ತೂ ಮಾಡಿದ್ಯಾ? ಈಗಿನ ಈ ಪರಿಸ್ಥಿತಿಯಲ್ಲಿ ಮನೆಯಲ್ಲಿ ಮಾಡುವುದು ಕಷ್ಟ ಅಂತ ಕಾಣುತ್ತದೆ. ಎಲ್ಲದಕ್ಕೂ ಇನ್ನೊಬ್ರ ಕೈಯನ್ನೆ ಕಾಣ್ಕಾತ್. ನಮ್ಗೇ ಮಾಡೂ ಕಾತಿಲ್ಲೆ. ನಂಗೆ ವಯಸ್ಸಾಯ್ತು. ನಿಂಗೆ ಗೊತ್ತಾಗುದಿಲ್ಲೆ. ಎಷ್ಟ್ ಅಂತ ಇನ್ನೊಬ್ರ ಕೈ ಕಾಂಬೂಕಾತ್?  ಹಾಗಂತ ಗೋಕರ್ಣದಲ್ಲಿ ಮಾಡಿದ್ರೆ ಶ್ರೇಷ್ಠ ಅಂತ್ರಪ. ಎಂತ ಮಾಡೂದ್ ಗೊತ್ತಾತಿಲ್ಲೆ. ಇಲ್ಲೇ ತೀರ್ಥಬೈಲಂಗೂ ಮಾಡ್ಲಕ್. ಎಲ್ಲ ವ್ಯವಸ್ಥೆ ಇತ್ತಂಬ್ರಪ. ನಾಳೆ ಹೋಯಿ ಮಾತಾಡಿ ಬರ್ಲಕ್ಕಾ?”

ಮಗ ಅದಕ್ಕೂ ಮಾತಾಡಲಿಲ್ಲ.  

ಆದರೆ ಬೆಳಿಗ್ಗೆ ಎದ್ದವನೇ ಅಂಗಿ ಹಾಕಿಕೊಂಡು ಹೊರಟುಬಿಟ್ಟ. ಬರುವಾಗ ರಾತ್ರಿಯಾಗಿತ್ತು.

ರಾತ್ರಿ ಊಟ ಮಾಡುವಾಗ ಮೆಲ್ಲನೆ, “ಅಪ್ಪಯ್ಯ, ನಾನ್ ಇವತ್ ತೀರ್ಥಬೈಲಿಗೆ ಹೋಗಿ ಬಂದೆ.  ಎಲ್ಲ ವ್ಯವಸ್ಥೆ ಆಯ್ತ್” ಎಂದ.

ಚಾವಡಿಯ ಮಂಚದ ಮೇಲೆ ಮಲಗಿದ್ದ ಅಡಿಗರು ಆಗಲಿ ಎಂದು ಮಗನ ಕಡೆಗೆ ತಿರುಗಿ ನಗೆಬೀರಿದರು.

ಮಗ ಸ್ವಲ್ಪ ಹೊತ್ತು ಸುಮ್ಮನಿದ್ದು,

“ನಾನ್ ಒಂದ್ ಮಾತ್ ಹೇಳ್ತೆ. ನೀವ್ ಸಿಟ್ ಮಾಡೂಕಾಗ.” ಅಂದ.

ಅಡಿಗರು ಏನು ಎನ್ನುವಂತೆ ಮಗನನ್ನು ನೋಡಿದರು.

“ನನಗೆ ರಜೆ ಇಲ್ಲ. ಇನ್ನು ಎರಡು ದಿನದಲ್ಲಿ ನಾನು ಕೆಲಸಕ್ಕೆ ಹಿಂದೆ ಹೋಗ್ದಿದ್ರೆ, ನನ್ನ ಕೆಲಸವೇ ಹೋತ್. ಅದಕ್ಕೆ ಅದಕ್ಕೆ ನಾನು ನಾಳೆ ಹೊರ್ಡತೇನೆ”

ಎಂದು ತಡೆದು ತಡೆದು ಹೇಳಿದ.

ಅಡಿಗರಿಗೆ ಒಮ್ಮೆ ಅವನು ಏನು ಹೇಳುತ್ತಿದ್ದಾನೆ ಎಂಬುದು ಅರ್ಥವಾಗಲಿಲ್ಲ.

ಒಮ್ಮೆಲೆ ಎದ್ದು ಸ್ವರ ಏರಿಸಿ,

“ಸತ್ ಹ್ವಾದ್ ನಿನ್ ಅಮ್ಮ ಮಾರಾಯಾ. ಪಿಂಡಾ ಇಡಬೇಕಾದವ ನೀನು”

ಎಂದು ಅಬ್ಬರಿಸಿದರು.

*********

ಅವರು ತನ್ನನ್ನು ಕಂಟ್ರೊಲ್ ಮಾಡಲು ಪ್ರಯತ್ನಿಸಲಿಲ್ಲ.

ಸ್ವಲ್ಪ ಹೊತ್ತು ಯಾರೂ ಮಾತಾಡಲಿಲ್ಲ.

ಹಾಗೆಯೇ ಹಿಂದಕ್ಕೆ ಸರಿದು ಮಂಚದ ಮೇಲೆ ಕುಳಿತು ಸಮಾಧಾನದಿಂದ ಹೇಳಿದರು.

ಆದ್ರೆ ಹೆತ್ತು ಮುದ್ದುಮಾಡಿ ವಿದ್ಯೆಬುದ್ಧಿ ಕಲಿಸಿ ನಿನ್ನನ್ ಈ ಮಟ್ಟಕ್ ತಂದ ಆ ಅಮ್ಮನ ಸದ್ಗತಿಗೆ ಸಂಸ್ಕಾರ ಮಾಡೂದಿಲ್ಲೆ ಅನ್ನುವಷ್ಟು ನೀನು ಓದಿಕೊಂಡಿದ್ದೆ ಎಂದು ನಾನ್ ಕನಸು ಮನಸಿನಲ್ಲೂ ಎಣಸಿರ್ಲಿಲ್ಲೆ. ಇಷ್ಟಕ್ಕೂ ಇದೆಲ್ಲ ಯಾರದ್ದು?, ನಮ್ಮ ಹಿರಿಯವರಿಂದ, ಲಾಗಾಯ್ತಿನಿಂದ ನಮಗೆ ಬಂದದ್ದು. ಈ ನೆಲ. ಉಪ್ಪರಿಗೆ ಮನೆ, ಆಸ್ತಿ. ಮನೆದೇವರು. ಪೌರೋಹಿತ್ಯ. ಇಲ್ಲಿಯ ಮಣ್ಣಿನ ಒಂದೊಂದು ಕಣವೂ, ಜಾಗದ ಮೂಲೆಮೂಲೆಯೂ ನಮಗೆ ಎಷ್ಟು ಪರಿಚಿತ. ಆಪ್ತವಾಗಿ ಇತ್. ನನ್ನ ಮೈಯ ರಕ್ತದ ಒಂದೊಂದು ಕಣದಲ್ಲೂ ಇಲ್ಲಿಯ ಅನುಭೂತಿ ಹರೀತಾ ಇತ್ ಮಗೂ. ನಿಂಗೋ ಪಾಲು ಗೀಲು  ಅಂತ ಕೇಳುವ ದಾಯಾದಿಗಳೂ ಇಲ್ಲ. ಇಷ್ಟೆಲ್ಲಾ ಇದೆ. ಇದೆಲ್ಲಾ ಯಾರಿಗೆ?. ಇದೂ ಊರೇ ಅಲ್ದಾ? ನಿನ್ನ ಇಷ್ಟೊತ್ತಿನ್ ವರೆಗಿನ ದುಡಿತದ ಹಣ ತಕೊಂಡ್ ಬಂದರೆ, ಇಲ್ಲಿ ಬಂದು ಮರ್ಯಾದೆಯಿಂದ ಬದುಕುಕ್ಕೆ ಇದೆಲ್ಲ ಸಾಕಾತಿಲ್ಯಾ? ಸಮಸ್ಯೆ ಎಲ್ಲಾ ಬದಿಗೂ ಇರತ್.

“ಅಪ್ಪಯ್ಯ, ನಾನ್ ಇಲ್ ಇಪ್ದಾ? ಇವಳು ಇದಕ್ ಒಪ್ಪೂಳಾ?”

ಸ್ವಲ್ಪ ಹೊತ್ತು ಮೌನ,

ನಂತರ ಮಗನೇ ಮೆಲ್ಲನೇ ಮಾತಾಡಿದ.

ಅಪ್ಪಯ್ಯಾ, ಅಷ್ಟ್ ಸೆಂಟಿಮೆಂಟ್ ಆಪೂದ್ ಬ್ಯಾಡ ನೀವು. ನನಗೆ ಈ ಪೂಜೆ ಪುನಸ್ಕಾರ  ಇದರಲ್ಲಿಯೆಲ್ಲ ನಿಮ್ಮಷ್ಟ್ ನಂಬಿಕೆ ಇಲ್ಲೆ. ಬೇಜಾರ್ ಮಾಡ್ಕಂಡ್ಬೇಡಿ.

……………...

ಸತ್ ಮೇಲ್ ಎಂತ ಆತ್ತೋ, ಎಲ್ ಇರತ್ತೋ? ಯಾರಿಗೂ ಗೊತ್ತಿಲ್ಲೆ. ಅದೆಲ್ಲ ನಮ್ ನಮ್ಮ ಮನಸ್ಥಿತಿ, ನಂಬಿಕೆ ಇದ್ದ ಹಾಂಗೆ ಅಲ್ದಾ?”.

“………………”

ಈ ಸಂಸ್ಕಾರ, ಉತ್ತರಕ್ರಿಯೆ, ಶ್ರಾದ್ಧ ಇವೆಲ್ಲ ಹಾಂಗೆ. ಈಗ ಬೇರೆ ಬೇರೆ ಜಾತಿಯಲ್ ಹೀಂಗೆ ಮಾಡ್ತ್ರಾ?

“ಈಗ ನಾನೇ ನಿಮ್ ಮಗಳು ಆಗಿದ್ದೆ ಅಂತ ಇಟ್ಕಳಿ. ಆಗ ಏನ್ ಮಾಡ್ತಿದ್ರಿ? ಯಾರ ಹತ್ರ ಪಿಂಡ ಹಾಕಿಸ್ತಿದ್ರಿ?

ಅಡಿಗರಿಗೆ ಮಾತು ತೋಚಲಿಲ್ಲ. ಮಂಚದ ಮೇಲೆ ಹಾಗೆಯೇ ಮಲಗಿದರು.  ಕಣ್ಣು ತೆರೆಯಲಿಲ್ಲ.

“ಅಮ್ಮ ಹೋದ ದುಃಖ ನನಗೂ ಇಲ್ಯಾ? ನಾನ್ ತೋರ್ಸ್ಕಂಬುದ್ ಇಲ್ಲೆ ಅಷ್ಟೆ. ಆದ್ರೆ ನಂಗೆ ಅದ್ರಲ್ಲೆಲ್ಲ ಅಷ್ಟು ನಂಬಿಕೆ ಇಲ್ಲೆ. ಅಮ್ಮ ಹೇಗೂ ಹೋದ್ಲು. ಇನ್ನು ಅವಳ ನೆನಪು ಮಾತ್ರಾ. ನಿಮಗೆ ನಂಬಿಕೆ ಇದ್ರೆ ನೀವು ಮಾಡಿ” ಎಂದು ಹೇಳಬೇಕಾದ್ದನ್ನು ಹೇಳಿ ಮುಗಿಸಿದಂತೆ ನಿಟ್ಟುಸಿರು ಬಿಟ್ಟು ಕುಳಿತಲ್ಲಿಂದ ಎದ್ದು ಹೊರಟ.

ಅಡಿಗರು ಒಮ್ಮೆಲೇ ಎದ್ದು ನಿಂತು ಕೈಯನ್ನು ಮುಂದಕ್ಕೆ ಚಾಚಿ ಮಗನಿಗೆ ಆದೇಶವೆಂಬಂತೆ,

“ ಎದ್ರು ಮಾತಾಡ್ ಬ್ಯಾಡಾ”

ಎನ್ನುತ್ತಾ, ಕೂಗಿ ಹೇಳಿ, ಮತ್ತೊಂದು ಕೈಯಲ್ಲಿ ಎದೆಯನ್ನು ಹಿಡಿದುಕೊಂಡು, ನೋವಿನಿಂದ,
“ಲಕ್ಷ್ಮೀ ನರಸಿಂಹಾ”

ಎಂದು ಹೇಳುತ್ತಾ, ಮುಂದಕ್ಕೆ ಕುಸಿದು ಜಗಲಿಗೆ ಬಿದ್ದುಬಿಟ್ಟರು.

“ಅಯ್ಯೋ, ಅಪ್ಪಯ್ಯಾ, ಎಂತಾ ಆಯ್ತು? ಎಂತಾ ಆಯ್ತು?. ಕಣ್ ಬಿಡಿ. ಅಪ್ಪಯ್ಯಾ, ತಪ್ಪಾಯ್ತು ದಮ್ಮಯ್ಯ, ಇನ್ನು ಹಾಂಗ್ ಹೇಳುದಿಲ್ಲೆ. ನೀವು ಹೇಳಿದಾಂಗೇ ಕೇಂತೆ. ಎದ್ರು ಮಾತಾಡೂದಿಲ್ಲ”

ಎನ್ನುತ್ತಾ ಓಡಿಬಂದು ತಂದೆಯನ್ನು ಅಪ್ಪಿ ಹಿಡಿದುಕೊಂಡ.

*ಅಪ್ಪಯ್ಯಾ, ಮಾತಾಡಿ ಮಾತಾಡಿ”

ಎಂದು ಅಡಿಗರ ಮೈಯನ್ನು ಎರಡೂ ಕೈಯಿಂದ ಹಿಡಿದು ಅಲುಗಾಡಿಸಿದ.

ಅಡಿಗರ ಮುಖ ಪ್ರಶಾಂತವಾಗಿತ್ತು.

****************

*ಮುಗಿಯಿತು*

*ನಿಮ್ಮ ಪ್ರತಿಕ್ರಿಯೆ ಬರಲಿ*.
*ಇದು ನಿಮ್ಮದೇ ಕತೆ. ಇನ್ನೂ ಚಂದ ಮಾಡಿ ಬರೆಯಬಹುದಿತ್ತಾ? ಹೇಗೆ? ಯಾವ ಭಾಗದಲ್ಲಿ?*
*ಮುಂದಿನ ಕತೆ ಶೀಘ್ರದಲ್ಲಿ*