ಭಾನುವಾರ, ನವೆಂಬರ್ 3, 2019

ದಿನೇಶ ಉಪ್ಪೂರ:

# *ರಾಜಸ್ಥಾನ ಯಾನ*

ಭಾಗ ೧೮

ತಾನೋಟ್ ಮಾತಾ ಮಂದಿರವು, ಭಾರತ ಮತ್ತು ಪಾಕಿಸ್ತಾನದ ಗಡಿಯಲ್ಲಿರುವ ರಾಜಸ್ಥಾನದ ಜೈಸಲ್ಮೇರ್ ಬಳಿ ಇದೆ. ಅಲ್ಲಿ ತಾನೋಟ್ ರಾಯ್ ಮಾತೆಯ ಪ್ರತಿಮೆಯನ್ನು ಸ್ಥಾಪಿಸಲಾಗಿದೆ. ಈ ದೇವಿಯು ಬಲೂಚಿಸ್ತಾನದ ಮಾತಾ ಹಿಂಗ್‌ಲಾಜ್‌ನ ರೂಪ ಎಂದು  ನಂಬಲಾಗಿದೆ. ತಾನೋಟ್ ಮಾತಾ ಭಾರತೀಯ ಗಡಿ ಭದ್ರತಾ ಪಡೆಯ ಆರಾಧ್ಯ ದೇವತೆಯಾಗಿದ್ದಾಳೆ.

 ಸೇನಾ ಸಿಬ್ಬಂದಿಗಳೇ ಸಮವಸ್ತ್ರದಲ್ಲಿದ್ದು ಈ ದೇವಾಲಯದ ಉಸ್ತುವಾರಿ ನೋಡಿಕೊಳ್ಳುತ್ತಾರೆ. ತಾನೋಟ್ ಮಾತಾ ದೇವಸ್ಥಾನಕ್ಕೆ ಸಂಬಂಧಿಸಿದ ವಿಶೇಷ ವಿಷಯಗಳನ್ನು ತಿಳಿಸುವುದಾದರೆ …

ಜೈಸಲ್ಮೇರ್ ಮತ್ತು ಅದರ ಸುತ್ತಮುತ್ತಲಿನ ಜನರಿಗೆ ಈ ದೇವತೆಯ ಮೇಲೆ ಆಳವಾದ ನಂಬಿಕೆ ಇದೆ. ತಾನೋಟ್ ರಾಯ್ ಮಾತಾ ದೇವಸ್ಥಾನದಲ್ಲಿ ನವರಾತ್ರಿ ಸಮಯದಲ್ಲಿ ಪ್ರತಿವರ್ಷ ಜಾತ್ರೆ ನಡೆಯುತ್ತದೆ. ಈ ಪ್ರದೇಶದಲ್ಲಿ ಪ್ರಚಲಿತದಲ್ಲಿರುವ ನಂಬಿಕೆಯ ಪ್ರಕಾರ, ಇಲ್ಲಿಗೆ ಬರುವ ಎಲ್ಲ ಭಕ್ತರ ಬೇಡಿಕೆಯನ್ನು ತಾಯಿ ಈಡೇರಿಸುತ್ತಿದ್ದಳು. ಭಕ್ತರು ಕೋರಿಕೆಯನ್ನು ಕೇಳಿಕೊಂಡು, ಕೆಲವು ರೂಪಾಯಿಗಳನ್ನು ಕರವಸ್ತ್ರದಲ್ಲಿ ಕಟ್ಟಿ ಇಲ್ಲಿ ಇಟ್ಟುಹೋಗುತ್ತಾರೆ. ಇದರ ನಂತರ,ಅವರ ಕೇಳಿಕೆಯು ಪೂರ್ಣಗೊಂಡಾಗ, ಭಕ್ತರು ದೇವಿಯನ್ನು ನೋಡಲು ಬಂದು ಕರವಸ್ತ್ರದಲ್ಲಿ ಇಟ್ಟಿರುವ ಹಣವನ್ನು ದೇವಿಗೆ ಅರ್ಪಿಸುತ್ತಾರೆ.

ಇಲ್ಲಿ ಕ್ರಿ.ಶ.1965ರಲ್ಲಿ ಒಂದು ಪವಾಡವು ಸಂಭವಿಸಿತ್ತು.

ಭಾರತ ಮತ್ತು ಪಾಕಿಸ್ತಾನಗಳು 1965 ರಲ್ಲಿ ಹೋರಾಡಿದವು. ಯುದ್ಧದಲ್ಲಿ, ಮಾತಾ ಮಂದಿರ ಪ್ರದೇಶದಲ್ಲಿ ಸುಮಾರು 3000 ಬಾಂಬ್‌ಗಳನ್ನು ಪಾಕಿಸ್ತಾನ ಸೇನೆಯು ಬೀಳಿಸಿತು, ಆದರೆ ಈ ದೇವಾಲಯಕ್ಕೆ ಯಾವುದೇ ಹಾನಿಯಾಗಲಿಲ್ಲ. ದೇವಾಲಯದ ಕಟ್ಟಡವು ಸಹ ಹಾಗೇ ಇತ್ತು.
ಇಂದು ಸುಮಾರು 450 ಪಾಕಿಸ್ತಾನಿ ಬಾಂಬುಗಳನ್ನು ತಾನೋಟ್ ಮಾತಾ ದೇವಾಲಯ ಸಂಕೀರ್ಣದಲ್ಲಿ ಸಾರ್ವಜನಿಕರ ವೀಕ್ಷಣೆಗಾಗಿ ಇಡಲಾಗಿದೆ. ಭಾರತೀಯ ಸೇನೆ ಮತ್ತು ಇಲ್ಲಿನ ಜನರು ಇದನ್ನು ದೇವತೆಯ ಪವಾಡವೆಂದು ಪರಿಗಣಿಸುತ್ತಾರೆ.

ಆದ್ದರಿಂದ ಭಾರತೀಯ ಗಡಿ ಭದ್ರತಾ ಪಡೆಯು ಈ ದೇವಿಯ ದೇವಾಲಯವನ್ನು ಇಂದೂ ನೋಡಿಕೊಳ್ಳುತ್ತಿದೆ. ಭಾರತ-ಪಾಕಿಸ್ತಾನ ಯುದ್ಧದ ನೆನಪಿಗಾಗಿ ಇಲ್ಲಿ ವಿಜಯ ಸ್ತಂಭವನ್ನು ಸಹ ನಿರ್ಮಿಸಲಾಗಿದೆ. ಈ ಸ್ತಂಭವು ಭಾರತೀಯ ಸೈನಿಕರ ಶೌರ್ಯವನ್ನು ನೆನಪಿಸುತ್ತದೆ.

ಆ ದೇವಾಲಯವನ್ನು ನೋಡಿದ ನಾವು ಮುಂದೆ ಲಾಂಗೆವಾಲ ಪ್ರದೇಶದಲ್ಲಿ ಇರುವ ಒಂದು ಅಪೂರ್ವವಾದ ಮ್ಯೂಸಿಯಮ್ ನ್ನು ನೋಡಲು ಹೊರಟೆವು. ಅದು ಭಾರತ ಪಾಕಿಸ್ಥಾನ ಯುದ್ಧ ನಡೆದಾಗ, ಪಾಕಿಸ್ಥಾನದ ಯುದ್ಧ ಟ್ಯಾಂಕರ್ ನ್ನು ಕೆಲವೇ ಸೈನಿಕರು ವೀರತನದಿಂದ ಕಾದಾಡಿ ಉರುಳಿಸಿದ ಭಾರತದ ಹೆಮ್ಮೆಯ ತಾಣ.

ಕ್ರಿ. ಶ. 1971 ರ ಡಿಸೆಂಬರ್ 4 ರಂದು, ಸಂಜೆ ಪಾಕಿಸ್ತಾನವು ಭಾರತದ ಮೇಲೆ ಆಕ್ರಮಣ ಮಾಡಿದ್ದರಿಂದ, ಪಾಕಿಸ್ತಾನ ಗಡಿಯ ಸಮೀಪವಿರುವ ಲೋಂಗೇವಾಲಾ ಎಂಬ ಪ್ರದೇಶದಲ್ಲಿ ಹೋರಾಡಬೇಕಾಯಿತು.

ಭಾರತದ 23 ಪಂಜಾಬ್ ರೆಜಿಮೆಂಟ್‌ನ 120 ಸೈನಿಕರು ಇರುವ ವಾಯುಪಡೆಯು ಕೆಚ್ಚೆದೆಯಿಂದ ಹೋರಾಡಿ, ಪಾಕಿಸ್ತಾನದ ಇಡೀ ಟ್ಯಾಂಕ್ ರೆಜಿಮೆಂಟ್ ಮತ್ತು ಸಾವಿರಾರು ಕಾಲಾಳು ಪಡೆಗಳನ್ನು ಹಿಮ್ಮೆಟ್ಟಿಸಿದೆ.

………..ಮುಂದುವರಿಯುವುದು.

ಫೋಟೋ ಗಳಿಗಾಗಿ ಕೆಳಗಿನ ಲಿಂಕ್ ನೋಡಿ,

https://drive.google.com/folderview?id=14qu8z5142s4UX5dqtu4RWT6GaBwWeQHP

ಗುರುವಾರ, ಅಕ್ಟೋಬರ್ 31, 2019

ದಿನೇಶ ಉಪ್ಪೂರ:

# *ರಾಜಸ್ಥಾನ ಯಾನ*

ಭಾಗ ೧೭

ಗಾಳಿಯ ರಭಸಕ್ಕೆ ಹೊಯಿಗೆಯ ಕಣಗಳು  ವೇಗದಿಂದ ಬಂದು ನಮ್ಮ ಕಣ್ಣು, ಬಾಯಿಗೆಲ್ಲ ಹೋಗುತ್ತಿದ್ದುದರಿಂದ ಅತ್ಯಂತ ಜಾಗ್ರತೆವಹಿಸಬೇಕಾಗಿತ್ತು. ಆಗಲೇ ಕತ್ತಲಾಗಲು ಶುರುವಾಯಿತು. ಅದು ಮೋಡ ಆವರಿಸಿದ್ದರಿಂದ ಆದದ್ದು. ದೊಡ್ಡ ದೊಡ್ಡ ಮಳೆಯ ಹನಿಗಳು ಬೀಳಲು ಶುರುವಾಯಿತು. ಭಟ್ಟರು ಮಗುವನ್ನು ಹಿಡಿದುಕೊಂಡಿದ್ದರು.

 ಹೊಯಿಗೆಯ ಕಣಗಳು ಬಡಿಯಬಾರದು ಎಂದು ಒಂದು ಬಟ್ಟೆಯಿಂದ ಮಗುವನ್ನು ಮುಚ್ಚಿ ಗಟ್ಟಿಯಾಗಿ ಅಪ್ಪಿಕೊಂಡು ಹಿಡಿದಿದ್ದರು. ಜೀಪ್ ಡ್ರೈವರ್, "ಹೋಗುವ ಬನ್ನಿ ಮಳೆ ಬರುವ ಹಾಗಿದೆ" ಎಂದ. ಬಹುಷ್ಯ ಅವರಿಗೆ ಇದು ಮಾಮೂಲು. ನಮಗೆ ಆಶ್ಚರ್ಯ. ಮರುಭೂಮಿಯಲ್ಲೂ ಮಳೆ ಬರುವುದೇ ಅಂತ. ಅದನ್ನೇ ಅವನಲ್ಲಿ ಕೇಳಿದಾಗ ವರ್ಷಕ್ಕೆ ಒಂದೋ ಎರಡೋ ಹೀಗೆ ಬರುವುದಿದೆ ಎಂದ.

ಆಂತೂ ರಭಸದಿಂದ ಬೀಸುವ ಗಾಳಿಯಲ್ಲಿಯೇ ಹೆದರಿ ಹೆದರಿ ಜೀಪ್ ಹತ್ತಿ ಟೆಂಟ್ ನತ್ತ ಹೊರಟೆವು. ನಮ್ಮ ಜೀಪ್ ಗಾಳಿಯಲ್ಲಿ ಆಚೀಚೆ ವಾಲುತ್ತಾ ನಿಧಾನವಾಗಿ ಸಾಗಿ ಟೆಂಟ್ ತಲುಪಿತು. ನಾವು ಬದುಕಿದೆವು ಎಂದು ನಿಟ್ಟುಸಿರು ಬಿಟ್ಟೆವು. ಗುಡುಗು ಮಿಂಚು ಶುರುವಾಗಿ, ಗಾಳಿ ರಭಸದಿಂದ ಬೀಸುತ್ತಿತ್ತು.

 ಮಳೆ  ಒಂದೆ ಸಮನೆ ಸುರಿಯುತ್ತಿತ್ತು. ನಮ್ಮ ಜೊತೆಗೆ ಹೋದ ಇನ್ನೊಂದು ಜೀಪ್ ಬರಲಿಲ್ಲ. ನಮಗೆ ಮತ್ತೆ ಗಾಬರಿ ಶುರುವಾಯಿತು. ಪೋನ್ ಮಾಡುವ ಎಂದರೆ ನೆಟ್ ವರ್ಕ್ ಸಹ ಸಿಗುತ್ತಿರಲಿಲ್ಲ.
ಪಕ್ಕನೇ ಕರೆಂಟ್ ಹೋಯಿತು. ಗಾಳಿಯ ರಭಸಕ್ಕೆ ಟಾರ್ಪಲ್ ಪಟಪಟ ಹಾರುತ್ತಿತ್ತು. ನಾವಂತೂ ಭಯದಲ್ಲಿ ನಡುಗುತ್ತಿದ್ದೆವು. ನಾನು ಮತ್ತು ಅನ್ನಪೂರ್ಣೆ ವಿಷ್ಣುಸಹಸ್ರನಾಮವನ್ನು ಪಠಣಮಾಡಲು ಶುರುಮಾಡಿದೆವು. ಅಷ್ಟರಲ್ಲಿ ಪಕ್ಕದ ಟೆಂಟ್ ನಲ್ಲಿದ್ದ ಜಾಜಿಯಕ್ಕ ಮತ್ತು ಶ್ರುತಿ ಮಾತಾಡುತ್ತಿರುವುದು ಕೇಳಿಸಿತು. ನಾವೂ ಅಲ್ಲಿಗೇ ಹೋಗುವ ಎಂದಳು ಅನ್ನಪೂರ್ಣೆ. ನಾವು ನಿಧಾನವಾಗಿ ನಡೆದು ಅವರ ಟೆಂಟನ್ನು ತಲುಪಿದೆವು. ಸಂಪೂರ್ಣ ಕತ್ತಲೆ.  ಉಳಿದವರ ಸುದ್ದಿಯೇನಾದರೂ ಗೊತ್ತಾಯ್ತಾ? ಎಂದು ನಾನು ಜಾಜಿಯಕ್ಕನನ್ನು ಕೇಳಿದೆ.

ಅವರು ಹೌದು ಈಗ ಪೋನ್ ಮಾಡಿದ್ದರು. ಅಂತು ಈಗ ಟೆಂಟನ್ನು ಸುರಕ್ಷಿತವಾಗಿ ತಲುಪಿದರಂತೆ ಎಂದರು. ನಾನು "ಹೌದಾ, ದೇವರು ದೊಡ್ಡವನು" ಎಂದು ನೆಮ್ಮದಿಯ ನಿಟ್ಟುಸಿರು ಬಿಟ್ಟೆ.

ಅಂತು ಎಲ್ಲರೂ ಒಂದುಕಡೆ ಸೇರಿದೆವು. ಅಷ್ಟರಲ್ಲಿ ಮಳೆಯೂ ಸ್ವಲ್ಪ ಕಡಿಮೆಯಾಗತೊಡಗಿತು. ಗುಡುಗೂ ಮಿಂಚು ಮಾತ್ರಾ ಕಡಿಮೆಯಾಗಲಿಲ್ಲ

ಕರೆಂಟೂ ಬಂತು. ಹೊರಗಡೆ ನಡೆಯ ಬೇಕಾಗಿದ್ದ ಒಂದು ಸಾಂಸ್ಕ್ರತಿಕ ಕಾರ್ಯಕ್ರಮವು, ಆಗ ಮಳೆಬಂದುದರಿಂದ ಡೈನಿಂಗ್ ಹಾಲ್ ನಲ್ಲಿ ನಡೆಯಲು ಶುರುವಾಯಿತು. ಆವಾಗಲೇ ಬಾಗೋರ್ ಕಿ ಹವೇಲಿಯಲ್ಲಿ ನೋಡಿದ ರಾಜಸ್ಥಾನೀ ನೃತ್ಯವನ್ನು ಮತ್ತೊಮ್ಮೆ ನೋಡಿದೆವು.

ನಂತರ ಎಲ್ಲರೂ ಅಲ್ಲಿ ಊಟಮಾಡಿ ನಮ್ಮ ನಮ್ಮ ಟೆಂಟಿಗೆ ಹೋಗಿ ಮಲಗಿ ನಿದ್ರೆ ಮಾಡಿದೆವು.

ದಿನಾಂಕ 4.10.19

ಮಳೆ ಬಂದುದರಿಂದ ನಮಗೆ ಇನ್ನೊಮ್ಮೆ ಜೀಪ್ ರೈಡಿಂಗ್ ಅವಕಾಶವನ್ನು ಕೊಡಬೇಕು ಎಂದು ವಿನಂತಿಸಿದ ಮೇರೆಗೆ ನಮ್ಮನ್ನು ಬೆಳಿಗ್ಗೆ ಬೇಗ ಸೂರ್ಯೋದಯ ವನ್ನು ನೋಡಲು ಎರಡು ಜೀಪ್ ನಲ್ಲಿ ಕರೆದುಕೊಂಡು ಹೋದರು.ಆದರೆ ಹಿಂದಿನ ರಾತ್ರಿ ಚೆನ್ನಾಗಿ ಮಳೆಬಂದುದರಿಂದ ಹೊಯಿಗೆಯಲ್ಲಿ ದೂಳು ಇರಲಿಲ್ಲ. ನೀರಿನ ಅಂಶವು ಹೊಯಿಗೆಯಲ್ಲಿ ಇದ್ದು ಒದ್ದೆಯಾಗಿದ್ದುದರಿಂದ ವಾತಾವರಣವೂ ಚೆನ್ನಾಗಿತ್ತು. ವೇಗವಾಗಿ ಹೊಯಿಗೆಯಲ್ಲಿ ನಾಲ್ಕು ಸುತ್ತು ಹಳ್ಳ ದಿಣ್ಣೆಯಲ್ಲಿ ಜೀಪ್ ರೈಡಿಂಗ್ ಮಾಡಿಯಾಯಿತು. ಮತ್ತೆ ಒಂಟೆಸವಾರಿಯೂ ಆಯಿತು. ಗೌತಮ್ ಒಂಟೆಯ ಮೇಲೆ ಕುಳಿತು ಓಟದ ಸವಾರಿಯನ್ನೂ ಮಾಡಿದರು. ನಂತರ ಎಲ್ಲರೂ ಮತ್ತೆ ಟೆಂಟ್ ಗೆ ಮರಳಿದೆವು. ಅಲ್ಲಿಗೆ ಬಂದು ಪೂರಿ ಯನ್ನು ತಿಂದು ಚಾ ಕುಡಿದು ಮುಂದಿನ ಪ್ರಯಾಣಕ್ಕೆ ಸಿದ್ಧರಾದೆವು.

ನಂತರ ಅಲ್ಲಿಂದ ನಾವು ನಮ್ಮ ಟಿಟಿಯಲ್ಲಿ ಜಯ್ ಸಲ್ಮೇರ್ ಕಡೆಗೆ ಹೊರಟೆವು. ದಾರಿಯಲ್ಲಿ ಟೊನೋಟಾ ಟೆಂಪಲ್ ಮತ್ತು ಸೈನಿಕರ. ಲಾಂಗ್ವಾಲಾ ಮ್ಯೂಸಿಯಂ ನ್ನು ನೋಡಿಕೊಂಡು ಹೋಗುವುದು ಎಂದು ನಿಶ್ಚಯವಾಗಿತ್ತು. ಅದು ಪಾಕಿಸ್ತಾನದ ಗಡಿಗಿಂತ ಕೇವಲ ಹದಿನೈದು ಕಿಲೋಮೀಟರ್ ಹತ್ತಿರದಲ್ಲಿ ಇತ್ತು.

ನಾನು ಗಮನಿಸಿದ ಹಾಗೆ ಆ ಪ್ರದೇಶದಲ್ಲಿ ಲೆಕ್ಕವಿಲ್ಲದಷ್ಟು ಗಾಳಿಯಂತ್ರಗಳು ಇತ್ತು. ಬಹುಷ್ಯ ಹೆಚ್ಚಿನ ಪ್ರಮಾಣದಲ್ಲಿ ಗಾಳಿಯಂತ್ರದಿಂದ ಅಲ್ಲಿ ವಿದ್ಯುತ್ ನ್ನು ಪಡೆಯುತ್ತಾರೆ. ಆದರೆ ಗಾಳಿಯೂ ತುಂಬಾ ವೇಗದಿಂದ ಬೀಸುತ್ತಿದ್ದರೂ ನಮಗೆ ಹೊರಗೆ ತುಂಬಾ ಬಿಸಿಯ ಸೆಖೆಯ ಅನುಭವ ಆಗುತ್ತಿತ್ತು.

ಟೆನೋಟಾ ಮಾತಾ ಮಂದಿರದ ಬಗ್ಗೆ ಈ ಕೆಳಗಿನ ಮಾಹಿತಿಯನ್ನು ಸಂಗ್ರಹಿಸಿದೆ.

………..ಮುಂದುವರಿಯುವುದು.


ಫೋಟೋ ಮತ್ತು ವಿಡಿಯೋ ಗಾಗಿ ಕೆಳಗಿನ ಲಿಂಕ್ ನೋಡಿ,

https://drive.google.com/folderview?id=1OFc52eYiC_S8eJYg9DqgLAf6-A1URX5Q

ಬುಧವಾರ, ಅಕ್ಟೋಬರ್ 30, 2019

ದಿನೇಶ ಉಪ್ಪೂರ:


# *ರಾಜಸ್ಥಾನ ಯಾನ*


ಭಾಗ ೧೬


ಒಂದು ಕ್ಷಣ ಏನು ಮಾಡಬೇಕೆಂದೇ ಗೊತ್ತಾಗಲಿಲ್ಲ.

ಆಗ ಅಪೇಕ್ಷಾ ಆ ಮನೆಯಲ್ಲಿ ಕೆಲಸಕ್ಕಿರುವ ಹುಡುಗನಿಗೆ ಪೋನ್ ಮಾಡಿ ವಿಷಯ ತಿಳಿಸಿ ಕೂಡಲೇ ಬರಲು ಹೇಳಿದರು.  ಅವನು ಬಂದು ಏನೂ ಆಗಲಿಲ್ಲ ಎನ್ನುವಂತೆ ಸೀದ ಅಡುಗೆಮನೆಗೆ ಹೋಗಿ ಡ್ರಾವರ್ ನಲ್ಲಿ ಇದ್ದ ಒಂದು ಸ್ಕ್ರೂ ಡ್ರೈವರ್ ನ್ನು ತೆಗೆದುಕೊಂಡು ಬಂದು ಬಾಗಿಲಿನ ಲಾಕ್ ಗೆ ಹಾಕಿದ ಎಲ್ಲ ಸ್ಕ್ರೂಗಳನ್ನು ಬಿಚ್ಚಿ ಬಾಗಿಲನ್ನು ತೆರೆದ. ಬಹುಷ್ಯ ಇದು ಮುಂಚೆಯೂ ಹಾಗೆ ಆಗುತ್ತಿತ್ತು. ಅಂತೂ ನಮಗೆಲ್ಲ ಒಮ್ಮೆ ಹೋದ ಜೀವ ಬಂದ ಹಾಗಾಯ್ತು. ಶ್ರುತಿ ಓಡಿ ಹೋಗಿ ಮಗು ಎದ್ದಿದೆಯಾ? ಎಂದು  ಮುಟ್ಟಿ ನೋಡಿ, ಸಮಾಧಾನದಿಂದ ವಾಪಾಸು ಬಂದಳು. ನಾವು ಇಸ್ಪೀಟ್ ಆಟವನ್ನು ಮುಂದುವರಿಸಿ, ಸಾಕು ಎನಿಸಿದಾಗ ಮುಗಿಸಿ ಮಲಗಿಕೊಂಡೆವು.


ದಿನಾಂಕ 3.10.19


         ಇವತ್ತು ನಮ್ಮ ಪ್ರಯಾಣ ಜಯ್ ಸಲ್ಮೇರ್ ದತ್ತ ಎಂದು ನಿರ್ಣಯವಾಗಿತ್ತು. ಇಡೀ ದಿನದ ಪ್ರಯಾಣ.  ಜಯ್ ಸಲ್ಮೇರ್ ದಿಂದ ಈಗಾಗಲೇ ಗೊತ್ತು ಮಾಡಿದಂತೆ ಅಲ್ಲಿಯ ಏಜೆನ್ಸಿಯವರನ್ನು ಕಂಡು ಬೇಕಾದ ಮಾಹಿತಿಯನ್ನು ಪಡೆದದ್ದಾಯಿತು. ಅಲ್ಲಿಂದ ತಾರ್ ಮರು ಭೂಮಿಯ ಪ್ರದೇಶಕ್ಕೆ ಹೋಗಿ ಸಂಜೆಯ ಸೂರ್ಯಾಸ್ತದ ದ ಸೊಬಗನ್ನು ಸವಿದು, ಒಂಟೆಯಲ್ಲಿ ಕುಳಿತು ಸವಾರಿ, ಹೊಯಿಗೆಯ ಮೇಲೆ ಜೀಪ್ ನಲ್ಲಿ ವೇಗದ ಸವಾರಿ ಮಾಡಿ, ರಾತ್ರಿ ಅಲ್ಲಿಯ ಟೆಂಟ್ ಒಂದರಲ್ಲಿ ಮಲಗಿ, ಬೆಳಿಗ್ಗೆ ಪುನಃ ಮರುಭೂಮಿಯಲ್ಲಿ ಇದ್ದು ಸೂರ್ಯೋದಯ ವನ್ನು ನೋಡಿ ಮರಳುವುದು ನಮ್ಮ ಯೋಜನೆಯಾಗಿತ್ತು.

ಅದರಂತೆ ಮರುಭೂಮಿಯನ್ನು ಪ್ರವೇಶಮಾಡಿದೆವು. ಆದರೆ ನಾನು ಅಂದುಕೊಂಡಂತೆ, ಮತ್ತು ಸಿನಿಮಾಗಳಲ್ಲಿ ನೋಡಿದಂತೆ ಅದು ಬರೀ ಹೊಯಿಗೆ ಮಾತ್ರಾ ವ್ಯಾಪಿಸಿಕೊಂಡ ಪ್ರದೇಶವಾಗಿರಲಿಲ್ಲ. ಅಲ್ಲಲ್ಲಿ ಹಸಿರು ಗಿಡಗಳ ಪೊದೆಗಳು ಇತ್ತು. ಆ ಪೊದೆಗಳ ಗಿಡದಲ್ಲಿ ಕಲ್ಲಂಗಡಿ ಹಣ್ಣಿನ ತರಹದ ಸಣ್ಣ ಸಣ್ಣ ಹಣ್ಣುಗಳೂ ಇತ್ತು. ಆ ಪೊದೆಗಳ ಮಧ್ಯದ ಹೊಯಿಗೆಯಲ್ಲಿ ನಮ್ಮ ವಾಹನ ಸಾಗುತ್ತಿತ್ತು. ನಮಗಾಗಿ ಗೊತ್ತುಮಾಡಿದ ಟೆಂಟ್ ನಲ್ಲಿ ನಮ್ಮ ನಮ್ಮ ಬ್ಯಾಗ್ ಗಳನ್ನು ಇರಿಸಿ, ಒಮ್ಮೆ ಕೈಕಾಲು ಮುಖಗಳನ್ನು ತೊಳೆದುಕೊಂಡು ಪ್ರೆಶ್ ಆದೆವು.

ಟೆಂಟ್ ಅಂದರೆ ಎದುರು ಮಾತ್ರಾ ಟಾರ್ಪಲ್ ಹೊದೆಸಿದ್ದರು, ಹಿಂದೆ ಎಟ್ಯಾಚ್ಡ್ ಬಾತ್ ರೂಮ್ ಕಟ್ಡಿದ,ಟೆಂಟ್ ಅದು. ಯು ಆಕಾರದಲ್ಲಿ ಅಂತಹಾ ನಲವತ್ತು ಐವತ್ತು ಟೆಂಟ್ ನ ಮನೆ ಇರುವ ಜಾಗ ಅದು. ಮಧ್ಯದಲ್ಲಿ ಒಂದು ವೇದಿಕೆ ಯಂತಹ ಜಾಗ ಇತ್ತು. ಆ ಸ್ಥಳವನ್ನು ಹೊಕ್ಕ ಕೂಡಲೇ ಬಲಬದಿಯಲ್ಲಿ ಅಡುಗೆ ಮಾಡುವ ಸ್ಥಳ ಮತ್ತು ಡೈನಿಂಗ್ ಹಾಲ್ ಇತ್ತು.

ನಮ್ಮ ಟಿಟಿಯ ಏಸಿ ಸರಿಯಾಗಿ ಕೆಲಸ ಮಾಡುತ್ತಿರಲಿಲ್ಲ ಎಂಬ ಅನುಭವ ನಮಗೆ ಆಗತೊಡಗಿತು. ಏಕೆಂದರೆ ನಾವು ಹೋದಲ್ಲೆಲ್ಲಾ ಮಳೆ ಬಂದದ್ದರಿಂದ ರಣಬಿಸಿಲಿಗೆ ಹೆಸರಾದ ರಾಜಸ್ಥಾನದಲ್ಲಿದ್ದರೂ ನಮಗೆ ಇಷ್ಟರವರೆಗೆ ಅದು ಕಷ್ಟವಾಗಿರಲಿಲ್ಲ. ಕೂಡಲೇ ಟಿಟಿಯ ಡ್ರೈವರ್ ಗೆ ತಿಳಿಸಿ ನಾವು ಈ ಮರುಭೂಮಿಯಿಂದ ಹೊರಡುವುದರ ಒಳಗೆ ಎಸಿಯನ್ನು ಸರಿಮಾಡಿಸಲೇ ಬೇಕು ಎಂದು ನಿಷ್ಠುರವಾಗಿ ಹೇಳಿದಮೇಲೆ ಅವನು ರಾತ್ರಿ ಪುನಹ ಜೈ ಸಲ್ಮೇರ್ ವರೆಗೆ ಹೋಗಿ ಏಸಿಯನ್ನು ರಿಪೇರಿ ಮಾಡಿಕೊಂಡು, ಬೆಳಿಗ್ಗೆ ನಾವು ಹೊರಡುವುದರ ಒಳಗೆ ಬಂದುಬಿಟ್ಟಿದ್ದ.

 ಆದಿನ ಸಂಜೆ ಒಂಟೆಯ ಮೇಲೆ ಕುಳಿತು, ಒಂಟೆ ಎಳೆಯುವ ಬಂಡಿಯಲ್ಲಿ ಕುಳಿತು ಅಥವ ಜೀಪಿನಲ್ಲಿ ಹೋಗಿ ಹೊಯಿಗೆ ಹಾಸಿನಿಂದ ಆವೃತವಾದ ಏರು ತಗ್ಗಿನ ವಿಶಾಲ ಜಾಗದಲ್ಲಿ ಸಾಗುವ ಕಾರ್ಯಕ್ರಮ.. ಎರಡು ಜೀಪಿನಲ್ಲಿ ನಾವು ಹೊರಟೆವು. ಒಂದು ಜೀಪಿನಲ್ಲಿ ವೇಗವಾಗಿ ಹೊಯಿಗೆಯಲ್ಲಿ ರೈಡ್ ಮಾಡಿಕೊಂಡು ಹೋಗುವವರು ಇನ್ನೊಂದು ಜೀಪಿನಲ್ಲಿ ನಾವು, ನಿಧಾನವಾಗಿ ಹೋಗುವವರು ಕುಳಿತುಕೊಂಡೆವು. ಆಗಲೇ ಸುಮಾರು ಐದುವರೆ ಗಂಟೆಯಾಗಿತ್ತು. ಆಗ ಭಯಂಕರವಾದ ಒಂದು ಘಟನೆ ನಡೆಯಿತು

ಅಲ್ಲಿ ಹೋಗಿ ಒಂದು ಟಾರ್ಪಲ್ ಚಪ್ಪರ ಹಾಕಿದ ಮಾಡಿನ ಬಳಿ, ಸ್ವಲ್ಪ ಹೊತ್ತು ಹೊಯಿಗೆಯ ಮೇಲೆ ಕುಳಿತಿದ್ದೆವಷ್ಟೆ. ಆಗ ಒಮ್ಮೆಲೆ ಗಾಳಿ ಬೀಸಲು ಶುರುವಾಯಿತು. ನೋಡನೋಡುತ್ತಿರುವಂತೆ ಗಾಳಿಯ ವೇಗ ಹೆಚ್ಚುತ್ತಾ ಹೋಗಿ, ಹೊಯಿಗೆಯ ಕಣಗಳು ಗಾಳಿಯ ವೇಗಕ್ಕೆ ಸುರುಳಿ ಸುರುಳಿಯಾಗಿ ಸುತ್ತಿ ಸುಂಟರಗಾಳಿಯಂತೆ ವೇಗವಾಗಿ ನುಗ್ಗುತ್ತಿತ್ತು.

 ಆಗ ಹಾರಿದ ಹೊಯಿಗೆ ಕಣಗಳು ಮೈಗೆ ರಾಚಿ ಉರಿಯುತ್ತಿತ್ತು. ನಾವು ನಿಂತ ಚಪ್ಪರವನ್ನು ಹಾರಿಸಿಕೊಂಡು ಹೋಗುತ್ತದೋ ಎಂಬಷ್ಟು ಗಾಳಿ ಜೋರಾಗಿ ಬೀಸುತ್ತಿದ್ದುದರಿಂದ ನಮಗೆ ಭಯವಾಯಿತು.


*………..ಮುಂದುವರಿಯುವುದು*


ಫೋಟೋ ಮತ್ತು ವಿಡಿಯೋಗಾಗಿ ಕೆಳಗಿನ ಲಿಂಕ್ ನೋಡಿ,

https://drive.google.com/folderview?id=1j-gNpudxlLdqPiFbGM4IELfEQqIhUtTC

ಮಂಗಳವಾರ, ಅಕ್ಟೋಬರ್ 29, 2019

ದಿನೇಶ ಉಪ್ಪೂರ:

# *ರಾಜಸ್ಥಾನ ಯಾನ*

ಭಾಗ ೧೫

ಈ ಪ್ರದೇಶದಲ್ಲಿನ ಬರಗಾಲದಿಂದ ಬಳಲುತ್ತಿರುವ ರೈತರಿಗೆ ಉದ್ಯೋಗ ನೀಡುವುದು ಇದರ ಆರಂಭಿಕ ಉದ್ದೇಶವಾಗಿದ್ದರಿಂದ ಅರಮನೆಯನ್ನು ನಿಧಾನಗತಿಯಲ್ಲಿ ನಿರ್ಮಿಸಲಾಯಿತು. 1929 ರಲ್ಲಿ ಅಡಿಪಾಯ ಹಾಕಲಾಯಿತು. ಇದರ ನಿರ್ಮಾಣದಲ್ಲಿ ಸುಮಾರು 2,000 ದಿಂದ 3,000 ಜನರು ಕೆಲಸ ಮಾಡುತ್ತಿದ್ದರು. ಮಹಾರಾಜರಿಂದ ಅರಮನೆಯ ಉದ್ಯೋಗವು 1943 ರಲ್ಲಿ ಪೂರ್ಣಗೊಂಡ ನಂತರ ಮತ್ತು ಭಾರತೀಯ ಸ್ವಾತಂತ್ರ್ಯದ ಅವಧಿಗೆ ಹತ್ತಿರವಾಯಿತು. ಅರಮನೆಯನ್ನು ನಿರ್ಮಿಸಲು ಅಂದಾಜು 11 ಮಿಲಿಯನ್ ರೂಪಾಯಿ ಆಗಿದೆ.

ಅರಮನೆಗೆ ಆಯ್ಕೆ ಮಾಡಲಾದ ಸ್ಥಳವು ಜೋಧ್‌ಪುರದ ಹೊರ ಮಿತಿಯಲ್ಲಿರುವ ಚಿತ್ತಾರ್ ಬೆಟ್ಟ ಎಂದು ಕರೆಯಲ್ಪಡುವ ಬೆಟ್ಟದ ಮೇಲೆ ಇತ್ತು, ಅಲ್ಲಿ ಯಾವುದೇ ನೀರು ಸರಬರಾಜು ಲಭ್ಯವಿಲ್ಲ ಮತ್ತು ಯಾವುದೇ ಸಸ್ಯವರ್ಗವು ಬೆಟ್ಟದ ಇಳಿಜಾರುಗಳಾಗಿ ಬೆಳೆಯುವುದಿಲ್ಲ. ಕಲ್ಲುಗಳು, ಮರಳುಗಲ್ಲಿನ ಕಲ್ಲುಗಣಿಗಳು ಸಾಕಷ್ಟು ದೂರದಲ್ಲಿರುವುದರಿಂದ ಅಗತ್ಯವಿರುವ ಕಟ್ಟಡ ಸಾಮಗ್ರಿಗಳು ಹತ್ತಿರದಲ್ಲಿರಲಿಲ್ಲ.

ಮಹಾರಾಜರು ತಮ್ಮ ಯೋಜನೆಯನ್ನು ಫಲಪ್ರದವಾಗಿಸುವ ದೂರದೃಷ್ಟಿಯನ್ನು ಹೊಂದಿದ್ದರಿಂದ, ಕಟ್ಟಡ ಸಾಮಗ್ರಿಗಳನ್ನು ಸಾಗಿಸಲು ಕ್ವಾರಿ ಸ್ಥಳಕ್ಕೆ ರೈಲ್ವೆ ಮಾರ್ಗವನ್ನು ನಿರ್ಮಿಸಿದರು. ರೈಲ್ವೆ ಮೂಲಕ ಸಾಗಿಸುವ ಮರಳುಗಲ್ಲನ್ನು ಗಾರೆ ಬಳಸದೆ ಇಡಲು ಅನುಕೂಲವಾಗುವಂತೆ ಇಂಟರ್ಲಾಕಿಂಗ್ ಕೀಲುಗಳನ್ನು ಹೊಂದಿರುವ ದೊಡ್ಡ ಬ್ಲಾಕ್ ಗಳಾಗಿ ಮಾಡಿ ಅಳವಡಿಸಿದ್ದರು.

ಅರಮನೆಯನ್ನು ಎರಡು ರೆಕ್ಕೆಗಳಿಂದ "ಡನ್-ಬಣ್ಣದ" (ಚಿನ್ನದ - ಹಳದಿ) ಮರಳುಗಲ್ಲಿನಿಂದ ನಿರ್ಮಿಸಲಾಗಿದೆ. ಮಕ್ರಾನಾ ಮಾರ್ಬಲ್ ಅನ್ನು ಸಹ ಬಳಸಲಾಗಿದೆ, ಮತ್ತು ಬರ್ಮೀಸ್ ತೇಗದ ಮರವನ್ನು ಆಂತರಿಕ ಮರಗೆಲಸಕ್ಕೆ ಬಳಸಲಾಗುತ್ತದೆ. ಪೂರ್ಣಗೊಂಡಾಗ ಅರಮನೆಯಲ್ಲಿ 347 ಕೊಠಡಿಗಳು, ಹಲವಾರು ಪ್ರಾಂಗಣಗಳು ಮತ್ತು 300 ಜನರು ವಾಸಿಸುವ ದೊಡ್ಡ ಔತಣಕೂಟ ಸಭಾಂಗಣವಿತ್ತು. ವಾಸ್ತುಶಿಲ್ಪದ ಶೈಲಿಯನ್ನು ಅಂದಿನ ಪ್ರಚಲಿತದಲ್ಲಿರುವ ಬ್ಯೂಕ್ಸ್ ಆರ್ಟ್ಸ್ ಶೈಲಿಯನ್ನು ಪ್ರತಿನಿಧಿಸುತ್ತದೆ ಎಂದು ಪರಿಗಣಿಸಲಾಗುತ್ತದೆ, ಇದನ್ನು ಇಂಡೋ-ಡೆಕೊ ಶೈಲಿ ಎಂದೂ ಕರೆಯುತ್ತಾರೆ.

 ಆದಾಗ್ಯೂ, ರಾಜಮನೆತನದ ದುರಂತ ಘಟನೆಗಳ ನಂತರ ಹಲವು ವರ್ಷಗಳಿಂದ ಅರಮನೆ ಸಂಪೂರ್ಣವಾಗಿ ಕಾರ್ಯನಿರ್ವಹಿಸಲಿಲ್ಲ. ಕೇವಲ ನಾಲ್ಕು ವರ್ಷಗಳ ಕಾಲ ಈ ಸ್ಥಳದಲ್ಲಿಯೇ ಇದ್ದ ಉಮೈದ್ ಸಿಂಗ್ 1947 ರಲ್ಲಿ ನಿಧನರಾದರು. ಅವರ ನಂತರ ಬಂದ ಹನುಮಂತ್ ಸಿಂಗ್ ಕೂಡ ಚಿಕ್ಕ ವಯಸ್ಸಿನಲ್ಲಿಯೇ ನಿಧನರಾದರು; ಅವರು ಕೇವಲ 1952 ರ ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದಿದ್ದರು ಮತ್ತು ಈ ಗೆಲುವಿನ ನಂತರ ಮನೆಗೆ ಹಿಂದಿರುಗುತ್ತಿದ್ದಾಗ ಅವರ ವಿಮಾನ ಅಪಘಾತಕ್ಕೀಡಾಗಿ ಅವರು ನಿಧನರಾದರು. ತನ್ನ ತಂದೆಯ ನಂತರ ಬಂದ ಗಜ್ ಸಿಂಗ್ II 1971 ರಲ್ಲಿ ಅರಮನೆಯ ಒಂದು ಭಾಗವನ್ನು ಹೋಟೆಲ್ ಆಗಿ ಪರಿವರ್ತಿಸಲು ನಿರ್ಧರಿಸಿದರು.

ಅರಮನೆಯ ಹಲವಾರು ಕೋಣೆಗಳು, ಆಯುಧಗಳು, ಗಡಿಯಾರಗಳು ಅಲಂಕಾರಿಕ ಸಾಮಗ್ರಿಗಳು, ದೊಡ್ಡ ದೊಡ್ಡ ಪ್ರಾಂಗಣಗಳು, ಪಲ್ಲಕಿಗಳು ರಾಜರು ಕುಳಿತು ಸಮಾಲೋಚನೆ ಮಾಡುತ್ತಿದ್ದ ದರ್ಬಾರ್ ಸ್ಥಳವನ್ನು ಜೊತೆಗೆ, ಅಲ್ಲಲ್ಲಿ ರಾಜಸ್ಥಾನೀ ವೇಷಭೂಷಣದಲ್ಲಿ ದೊಡ್ಡ ಮೀಸೆ ಹೊತ್ತು ನಗುತ್ತಾ ಸ್ವಾಗತಿಸುವ ಸೇವಕರನ್ನು ಕಂಡೆವು.

ಇದರ ಒಂದು ಭಾಗವೇ ಆಗಿರುವ, ತಾಜ್ ಹೋಟೆಲ್ ನಲ್ಲಿಯೇ, ನಟಿ ಪ್ರಿಯಾಂಕಾ ಚೋಪ್ರಾರ ವಿವಾಹ ನಡೆದಿತ್ತಂತೆ. ಅಲ್ಲಿ ರೂಮುಗಳ ಬಾಡಿಗೆ ಲಕ್ಷಗಳಲ್ಲಿ ಇರುತ್ತದೆ ಎಂದು ನಮ್ಮ ಗೈಡ್ ತಿಳಿಸಿದ. ಅವನು ಈಗಿನ ರಾಜ ಗಜ ಸಿಂಗ್ ಗೆ ಜಿಮ್ ಹೇಳಿ ಕೊಡುವವನಂತೆ. ವಿರಾಮವಿರುವ ಹೊತ್ತಿನಲ್ಲಿ ಗೈಡ್ ಆಗಿ ಕೆಲಸ ಮಾಡುತ್ತಿದ್ದ.

ಅಲ್ಲಿಂದ ಹೊರಬಂದ ನಾವು ಅನತಿ ದೂರದಲ್ಲಿ ಇದ್ದ ಬೆಂಚಿನ ಮೇಲೆ ಕುಳಿತು ವಿಶ್ರಾಂತಿ ಪಡೆದೆವು. ನಮ್ಮಲ್ಲಿ ಕೆಲವರು ಅಲ್ಲಿಯೇ ಸನಿಹದಲ್ಲಿದ್ದ ಹಳೆಯ ಕಾರುಗಳ ಪ್ರದರ್ಶನಾಲಯಕ್ಕೆ ಹೋಗಿ ಬಂದರು. ಅಲ್ಲಿಂದ ನಾವು ನಮ್ಮ ಅಪಾರ್ಟ್ ಮೆಂಟ್ ಗೆ ಹಿಂತಿರುಗಿದೆವು.
ರಾತ್ರಿ ಊಟವನ್ನು ಮಾಡಿದ ನಾವು, ಮಕ್ಕಳೆಲ್ಲ ಉತ್ಸಾಹ ತೋರಿಸಿದ್ದರಿಂದ ಒಟ್ಟಾಗಿ ಸೇರಿ ಇಸ್ಪೀಟ್ ನ್ನು ಆಡುತ್ತಿದ್ದೆವು. ನನಗೆ ಗೊತ್ತಿರುವುದು ಕತ್ತೆ ಮತ್ತು ಸೆಟ್ ಮಾಡುವುದು ಮಾತ್ರಾ. ಆದ್ದರಿಂದ ಸೆಟ್ ಮಾಡುವ ಆಟವನ್ನು ಆಡಲು ಶುರು ಮಾಡಿದೆವು. ಹಣವನ್ನು ಇಟ್ಟು ಆಡುವ ಆಟವಲ್ಲ. ಸುಮ್ಮನೆ ಸಮಯ ಕಳೆಯುವುದಕ್ಕೆ ಒಂದೆರಡು ಆಟದಲ್ಲಿ ನಾನು ಗೆದ್ದೂ ಬಿಟ್ಟೆ. ಆಗ ಒಂದು ಪ್ರಸಂಗ ನಡೆಯಿತು.

 ಶ್ರುತಿಯ ಸಣ್ಣ ಮಗು, ಅವರು ಇರುವ ಬೆಡ್ ರೂಮಿನಲ್ಲಿ ಮಲಗಿತ್ತು. ಮಗುವನ್ನು ಮಲಗಿಸಿದ, ಶ್ರುತಿಯ ಗಂಡ ನಾಗರಾಜ್ ಅವರು ರೂಮಿನಿಂದ ಹೊರಗೆ ಬರುವಾಗ ಬಾಗಿಲು ಹಾಕಿಕೊಂಡು ಬಂದಿದ್ದರು.

ಸ್ವಲ್ಪಹೊತ್ತಿನಲ್ಲಿ ಅವರು ಏಕೋ ಮತ್ತೆ ಬೆಡ್ ರೂಮಿಗೆ ಹೋಗಲು ಬಾಗಿಲು ತೆರೆಯಬೇಕು ಎನ್ನುವಾಗ ಅದರ ಹಿಡಿಯು ಅವರ ಕೈಗೇ ಬಂದುಬಿಟ್ಟಿತು. ಪುನಹ ಜೋಡಿಸಿ ತಿರುಗಿಸಿದರೆ ತಿರುಗುವುದೇ ಇಲ್ಲ. ಅದು ಇಲ್ಲದೇ ಇದ್ದರೆ ಬಾಗಿಲು ತೆಗೆಯಲು ಆಗುವುದೇ ಇಲ್ಲ.  ಒಳಗೆ ಮಗು ಒಂದೆ. ಮಲಗಿದೆ. ಸುದ್ಧಿ ತಿಳಿದು ಕೆಲವರು ಪ್ರಯತ್ನಿಸಿದರೂ ಬಾಗಿಲು ತೆರೆಯಲು ಆಗಲಿಲ್ಲ. ಎಲ್ಲರಿಗೂ ಗಾಬರಿ. ಏನುಮಾಡುವುದು? ಮಗು ಎದ್ದು ಅತ್ತರೆ?.

……..ಮುಂದುವರಿಯುವುದು.

ಸೋಮವಾರ, ಅಕ್ಟೋಬರ್ 28, 2019

ದಿನೇಶ ಉಪ್ಪೂರ:

# *ರಾಜಸ್ಥಾನ ಯಾನ*

ಭಾಗ ೧೪

ಜಸ್ವಂತ್ ಥಾಡಾ ಎಂಬುದು ಭಾರತದ ರಾಜಸ್ಥಾನದ ಜೋಧ್ಪುರದಲ್ಲಿದೆ. ಇದನ್ನು 1899 ರಲ್ಲಿ ಜೋಧಪುರ ರಾಜ್ಯದಮಹಾರಾಜ ಸರ್ದಾರ್ ಸಿಂಗ್ ಅವರು ತಮ್ಮ ತಂದೆ ಮಹಾರಾಜ ಜಸ್ವಂತ್ ಸಿಂಗ್ II ರ ನೆನಪಿಗಾಗಿ ನಿರ್ಮಿಸಿದರು.

ಇದೊಂದು ಆಗ್ರಾದ ತಾಜ್ ಮಹಲ್ ನ್ನು ಹೋಲುವ ಸ್ಮಾರಕವಾಗಿದ್ದು ಸಮಾಧಿಯನ್ನು ಅಮೃತಶಿಲೆಯಿಂದ ಕೆತ್ತಿದ ಹಾಳೆಗಳಿಂದ ನಿರ್ಮಿಸಲಾಗಿದೆ. ಈ ಹಾಳೆಗಳು ಅತ್ಯಂತ ತೆಳುವಾದ ಮತ್ತು ಹೊಳಪು ಹೊಂದಿದ್ದು ಸೂರ್ಯನಿಂದ ಪ್ರಕಾಶಿಸಲ್ಪಟ್ಟಾಗ ಅವು ಬೆಚ್ಚಗಿನ ಹೊಳಪನ್ನು ಹೊರಸೂಸುತ್ತವೆ.

ಸ್ಮಾರಕದ ಮೈದಾನದಲ್ಲಿ ಉದ್ಯಾನ ಮತ್ತು ಸಣ್ಣ ಸರೋವರವಿದೆ. ಮೈದಾನದಲ್ಲಿ ಇನ್ನೂ ಮೂರು ಸಮಾಧಿಗಳಿವೆ. ಮಹಾರಾಜ ಜಸ್ವಂತ್ ಸಿಂಗ್ ಅವರ ಸ್ಮಾರಕವು ಜೋಧಪುರದ ಆಡಳಿತಗಾರರ ಮತ್ತು ಮಹಾರಾಜರ ಭಾವಚಿತ್ರಗಳನ್ನು ಪ್ರದರ್ಶಿಸುತ್ತದೆ.

ಅದನ್ನು ಅರೆಬರೆ ಆಸಕ್ತಿಯಿಂದ ನೋಡಿ ನಾವು ಸಿಟಿ ಪ್ಲಾಜಾ ಎಂಬ ಒಂದು ಹೋಟೆಲಿಗೆ ಹೋಗಿ ಊಟ ಮಾಡಿದೆವು. ನಂತರ ಸ್ವಲ್ಪಹೊತ್ತು ವಿಶ್ರಾಂತಿಯ ಬಳಿಕ ಅಲ್ಲಿಂದ ಮುಂದೆ ಉಮೈದ್ ಭವನವನ್ನು ನೋಡಲು ಹೋಗುವುದು ನಮ್ಮ ಉದ್ದೇಶವಾಗಿತ್ತು.
ಭಾರತದ ರಾಜಸ್ಥಾನದ ಜೋಧಪುರದಲ್ಲಿರುವ ಉಮೈದ್ ಭವನ ಅರಮನೆ ವಿಶ್ವದ ಅತಿದೊಡ್ಡ ಖಾಸಗಿ ನಿವಾಸಗಳಲ್ಲಿ ಒಂದಾಗಿದೆ.

ಪ್ರಸ್ತುತ ಮಾಲೀಕ ಗಜ್ ಸಿಂಗ್ ಅವರ ಅಜ್ಜ ಮಹಾರಾಜ ಉಮೈದ್ ಸಿಂಗ್ ಅವರ ಹೆಸರನ್ನು ಇಡಲಾಗಿದೆ. ಈ ಅರಮನೆಯಲ್ಲಿ 347 ಕೊಠಡಿಗಳಿವೆ ಮತ್ತು ಇದು ಜೋಧಪುರದ ಹಿಂದಿನ ರಾಜಮನೆತನದ ಪ್ರಮುಖ ನಿವಾಸವಾಗಿದೆ. ಅರಮನೆಯ ಒಂದು ಭಾಗವು ವಸ್ತುಸಂಗ್ರಹಾಲಯವಾಗಿದೆ. ಅರಮನೆಯ ಇನ್ನೊಂದು ಭಾಗವನ್ನು ತಾಜ್ ಹೊಟೇಲ್ ಆಗಿ ನಿರ್ವಹಿಸಲಾಗುತ್ತಿದೆ.

1929 ರ ನವೆಂಬರ್ 18 ರಂದು ಮಹಾರಾಜ ಉಮೈದ್ ಸಿಂಗ್ ಅವರು ಕಟ್ಟಡದ ಅಡಿಪಾಯವನ್ನು ಹಾಕಿದ್ದು ಮತ್ತು ನಿರ್ಮಾಣ ಕಾರ್ಯಗಳು 1943 ರಲ್ಲಿ ಪೂರ್ಣಗೊಂಡವು.
ಇದು 1943 ರಲ್ಲಿ ತೆರೆದಿದ್ದು, ವಿಶ್ವದ ಅತಿದೊಡ್ಡ ರಾಜಮನೆತನದ ನಿವಾಸಗಳಲ್ಲಿ ಒಂದಾಗಿದೆ.

ಉಮೈದ್ ಭವನ ಅರಮನೆಯನ್ನು ನಿರ್ಮಿಸುವ, ಬರಗಾಲದ ಅವಧಿಯಲ್ಲಿ ರಾಥೋಡ್ ರಾಜವಂಶವು ಉತ್ತಮ ಆಡಳಿತವನ್ನು ನಡೆಸುತ್ತಿತ್ತು. ಆದರೂ, ಪ್ರತಾಪ್ ಸಿಂಗ್ ಅವರ ಸುಮಾರು 50 ವರ್ಷಗಳ ಆಳ್ವಿಕೆಯ ನಂತರ, ಜೋಧ್ಪುರ್ 1920 ರ ದಶಕದಲ್ಲಿ ಸತತ ಮೂರು ವರ್ಷಗಳ ಕಾಲ ತೀವ್ರ ಬರ ಮತ್ತು ಬರಗಾಲವನ್ನು ಎದುರಿಸಿತು. ಈ ಸಂಕಷ್ಟವನ್ನು ಎದುರಿಸಿದ ಪ್ರದೇಶದ ರೈತರು, ಆಗಿನ ರಾಜ ಉಮೈದ್ ಸಿಂಗ್, ಅವರ ಸಹಾಯವನ್ನು ಬೇಡಿದರು. ಜೋಧ್‌ಪುರದ ಮೇವಾಡದ 37 ನೇ ರಾಥೋಡ್ ಆಡಳಿತಗಾರರಾಗಿದ್ದರು, ಅವರಿಗೆ ಸ್ವಲ್ಪ ಉದ್ಯೋಗವನ್ನು ಒದಗಿಸಲು, ರೈತರಿಗೆ ಸಹಾಯ ಮಾಡುವ ಸಲುವಾಗಿ ಅದ್ದೂರಿ ಅರಮನೆಯನ್ನು ನಿರ್ಮಿಸಲು ನಿರ್ಧರಿಸಿದರು.

ಅವರು ಅರಮನೆಯ ಯೋಜನೆಗಳನ್ನು ಸಿದ್ಧಪಡಿಸಲು ಹೆನ್ರಿ ವಾಘನ್ ಲ್ಯಾಂಚೆಸ್ಟರ್ ಅವರನ್ನು ವಾಸ್ತುಶಿಲ್ಪಿಯಾಗಿ ನೇಮಿಸಿದರು; ಲ್ಯಾಂಚೆಸ್ಟರ್ ಸರ್ ಎಡ್ವಿನ್ ಲುಟಿಯೆನ್ಸ್ ಅವರ ಸಮಕಾಲೀನರಾಗಿದ್ದರು, ಅವರು ನವದೆಹಲಿ ಸರ್ಕಾರಿ ಸಂಕೀರ್ಣದ ಕಟ್ಟಡಗಳನ್ನು ಯೋಜಿಸಿದ್ದರು.

 ಲ್ಯಾಂಚೆಸ್ಟರ್ ಗುಮ್ಮಟಗಳು ಮತ್ತು ಕಾಲಮ್‌ಗಳ ವಿಷಯವನ್ನು ಅಳವಡಿಸಿಕೊಳ್ಳುವ ಮೂಲಕ ನವದೆಹಲಿ ಕಟ್ಟಡ ಸಂಕೀರ್ಣದ ಮಾದರಿಯಲ್ಲಿ ಉಮೈದ್ ಅರಮನೆಯನ್ನು ವಿನ್ಯಾಸಗೊಳಿಸಿದರು. ಅರಮನೆಯನ್ನು ಪಾಶ್ಚಾತ್ಯ ತಂತ್ರಜ್ಞಾನ ಮತ್ತು ಭಾರತೀಯ ವಾಸ್ತುಶಿಲ್ಪದ ವೈಶಿಷ್ಟ್ಯಗಳ ಮಿಶ್ರಣವಾಗಿ ವಿನ್ಯಾಸಗೊಳಿಸಲಾಗಿದೆ.

*……...ಮುಂದುವರಿಯುವುದು*

ಫೋಟೋ ಗಾಗಿ ಕೆಳಗಿನ ಲಿಂಕ್ ನೋಡಿ,
https://drive.google.com/folderview?id=1FTreYkP18V0HIBNcdZp7ZzDP8VBeoVLD

ಭಾನುವಾರ, ಅಕ್ಟೋಬರ್ 27, 2019

ದಿನೇಶ ಉಪ್ಪೂರ:

# *ರಾಜಸ್ಥಾನ ಯಾನ*

ಭಾಗ ೧೩

ದಿನಾಂಕ 2.10.19

ಬೆಳಿಗ್ಗೆ ಬೇಗ ಎದ್ದು ಅಂದಿನ ವೀಕ್ಷಣೆಗೆ ತಯಾರಾದೆವು. ಉದಯಪುರದಿಂದ ಬಂದ ಟಿಟಿಯಲ್ಲಿಯೇ ಜೋಧಪುರದಲ್ಲೂ ತಿರುಗಾಟ ಮಾಡುವ ಯೋಜನೆಯಿತ್ತು. ಅಂದು ನಾವು ಇರುವ ಆನಂದ ವಿಲ್ಲಾದ ಕುಕ್ ಗೆ ಹೇಳಿ, ಇಡ್ಲಿ ವಡೆ ಮತ್ತು ಚಟ್ನಿ, ಸಾಂಬಾರ್ ಮಾಡಿಸಿದ್ದೆವು. ರಾತ್ರಿ ಚಪಾತಿ, ಮಿಕ್ಸ್ ವೆಜ್ ಮಸಾಲ ಮುಂತಾದ ಅಡುಗೆಯನ್ನು ಮಾಡಲು ಹೇಳಿ, ಚೆನ್ನಾಗಿ ಬೇಯಿಸಿ ಅನ್ನವನ್ನು ಮಾಡಲು ಅವನಿಗೆ ನಿರ್ದೇಶನ ಕೊಟ್ಟು ಅಂದು ಮೆಹರ್ನಗಢ ಎಂಬ ಕೋಟೆ ಮತ್ತು ಅರಮನೆಯನ್ನು ನೋಡಲು ಹೊರಟೆವು.

ನಾವು ನೋಡಿದ ಆ ಪ್ರೇಕ್ಷಣೀಯ ಸ್ಥಳದ ಬಗ್ಗೆ ಗೂಗಲ್ ಈ ಕೆಳಗಿನ ವಿವರವನ್ನು ನೀಡುತ್ತದೆ

ಜೋಧ್‌ಪುರ ಜಂಕ್ಷನ್‌ನಿಂದ 6 ಕಿ.ಮೀ ದೂರದಲ್ಲಿ, ಇರುವ ಮೆಹರನ್‌ ಗಢ ಕೋಟೆ ಜೋಧ್‌ಪುರ ನಗರದ ಪುರಾತನ ಬೆಟ್ಟದ ಮೇಲಿನ ದೊಡ್ಡ ಕೋಟೆಯಾಗಿದೆ. ಇದು ನಗರದಿಂದ 410 ಅಡಿ ಎತ್ತರದಲ್ಲಿದೆ, ಮೆಹರನ್‌ಗಢ ಕೋಟೆಯನ್ನು ಕ್ರಿ.ಶ 1459 ರಲ್ಲಿ ರಾವ್ ಜೋಧಾ ಅವರು ತಮ್ಮ ರಾಜಧಾನಿಯನ್ನು ಒಂದು ಸಾವಿರ ವರ್ಷದಷ್ಟು ಹಳೆಯದಾದ ಮಾಂಡೋರ್‌ನಿಂದ ಜೋಧಪುರಕ್ಕೆ ವರ್ಗಾಯಿಸಿದಾಗ ನಿರ್ಮಿಸಿದರು. ಈ ಕೋಟೆಗೆ ಮೆಹರನ್‌ಗಢ ಎಂದು ಹೆಸರಿಡಲಾಯಿತು, ಇದರ ಅರ್ಥ 'ಸೂರ್ಯನ ಕೋಟೆ'.

ಈ ಕೋಟೆಯನ್ನು ಮೂಲತಃ 1459 ರಲ್ಲಿ ರಾವ್ ಜೋಧಾ ಪ್ರಾರಂಭಿಸಿದರೂ, ಇಂದು ಇರುವ ಹೆಚ್ಚಿನ ಕೋಟೆಯು ಮಾರ್ವಾರ್ನ ಜಸ್ವಂತ್ ಸಿಂಗ್ (1638 -78) ರ ಕಾಲದಿಂದ ಬಂದಿದೆ. ಹಾಗೂ ಇಂದು, ಈ ಕೋಟೆಯನ್ನು ಈಗಿನ ರಾಥೋಡ್ ಆಡಳಿತಗಾರ ಮಹಾರಾಜ ಗಜ್ ಸಿಂಗ್  ರವರು ಸಂರಕ್ಷಿಸಿದ್ದಾರೆ.

 ಮೆಹರನ್‌ಗಢ ಕೋಟೆಯನ್ನು ಕಟ್ಟಲು ರಾವ್ ಜೋಧಾ ಅವರು ಬೆಟ್ಟದ ಮೇಲೆ ವಾಸವಾಗಿದ್ದ  ಚೀರಿಯಾ ನಾಥ್ಜಿ (ಪಕ್ಷಿಗಳ ಅಧಿಪತಿ) ಎಂಬ ಸನ್ಯಾಸಿಯನ್ನು ಸ್ಥಳಾಂತರಿಸಲು ಬಯಸಿದರೆ ಅವನು ಒಪ್ಪಲಿಲ್ಲವಂತೆ. ಕೊನೆಗೆ ಕರ್ಣಿಮಾತಾರನ್ನು ಕರೆಸಿ ಅವರಿಂದ ಹೇಳಿಸಿದಾಗ, ಅವರ ಪ್ರಭಾವಕ್ಕೆ ಹೆದರಿ ಅವನು ಓಡಿಹೋದನಂತೆ.

 ಆದರೆ, ಈ ಬಲವಂತದ ಸ್ಥಳಾಂತರದ ಬಗ್ಗೆ ಕೋಪಗೊಂಡ ಚೀರಿಯಾ ನಾಥ್ಜಿ , ರಾವ್ ಜೋಧಾ ಅವರ ರಾಜ್ಯವು ನೀರಿನ ಕೊರತೆಯಿಂದ ಬಳಲಲಿ ಎಂದು ಶಪಿಸಿದನಂತೆ. ಆದ್ದರಿಂದ ಇಂದಿಗೂ ಈ ಪ್ರದೇಶವು ಪ್ರತಿ 3 ರಿಂದ 4 ವರ್ಷಗಳಿಗೊಮ್ಮೆ ಬರಗಾಲದಿಂದ ಬಳಲುತ್ತಿದೆ

ಈ ಕೋಟೆಯು 120 ಅಡಿ ಎತ್ತರ ಮತ್ತು 70 ಅಡಿ ದಪ್ಪ ಗೋಡೆಗಳಿಂದ ಸುತ್ತುವರೆದಿದೆ. ಈ ಕೋಟೆಯು ಏಳು ದ್ವಾರಗಳನ್ನು ಹೊಂದಿದೆ ಮತ್ತು ಅವುಗಳಲ್ಲಿ ಅತ್ಯಂತ ಪ್ರಸಿದ್ಧವಾದದ್ದು ಜಯಪೋಲ್ (ಅಂದರೆ ವಿಜಯದ ದ್ವಾರ). ಜೈಪುರ ಮತ್ತು ಬಿಕಾನೆರ್ ಸೈನ್ಯಗಳ ವಿರುದ್ಧದ ವಿಜಯವನ್ನು ಆಚರಿಸಲು ಮಹಾರಾಜ ಮನ್ ಸಿಂಗ್ ಅವರು ಈ ಗೇಟ್ ಅನ್ನು ನಿರ್ಮಿಸಿದ್ದಾರೆ. ಮತ್ತೊಂದು ಗೇಟ್ - ಮೊಘಲರ ಸೋಲಿನ ನೆನಪಿಗಾಗಿ ಮಹಾರಾಜ ಅಜಿತ್ ಸಿಂಗ್ ಅವರು ಫತೇಪೋಲ್ ಅನ್ನು ಕಟ್ಟಿದರು.

ಜೈಪುರದ ಸೈನ್ಯಗಳ ಮೇಲೆ ದಾಳಿ ಮಾಡುವ ಮೂಲಕ ಹಾರಿಸಿದ ಫಿರಂಗಿ ಚೆಂಡಿನ ಗುರುತುಗಳನ್ನು ಎರಡನೇ ಗೇಟ್‌ನಲ್ಲಿ ಇನ್ನೂ ಕಾಣಬಹುದು. ಲೋಹಾ ಪೋಲ್ ಕೋಟೆ ಸಂಕೀರ್ಣದ ಮುಖ್ಯ ಭಾಗದ ಅಂತಿಮ ದ್ವಾರವಾಗಿದೆ.

ಕೋಟೆ ಸಂಕೀರ್ಣದೊಳಗಡೆಯಿಂದ ಸುಮಾರು 11 ಅಂತಸ್ತುಗಳಮೇಲೆ ಏರಬೇಕಾಗಿದ್ದು ಅದನ್ನು ಪ್ರವೇಶಿಸಲು ಈಗ ಲಿಫ್ಟ್ ವ್ಯವಸ್ಥೆಯನ್ನು ಮಾಡಲಾಗಿದ್ದು ಅಲ್ಲಿ ಹಲವಾರು ಅರಮನೆಗಳು ಇವೆ, ಅವುಗಳು ಸಂಕೀರ್ಣವಾದ ಕೆತ್ತನೆಗಳು ಮತ್ತು ವಿಸ್ತಾರವಾದ ಪ್ರಾಂಗಣಗಳಿಗೆ ಹೆಸರುವಾಸಿಯಾಗಿದೆ. ಇವುಗಳಲ್ಲಿ ಮೋತಿ ಮಹಲ್, ಫೂಲ್ ಮಹಲ್, ಶೀಶಾ ಮಹಲ್, ಮತ್ತು ದೌಲತ್ ಖಾನಾ ಸೇರಿದೆ.

ಮೋತಿ ಮಹಲ್ ಅಥವಾ ಪರ್ಲ್ ಪ್ಯಾಲೇಸ್ ಕೋಟೆಯು ಪ್ರಮುಖ ಅರಮನೆಗಳಲ್ಲಿ ಒಂದಾಗಿದೆ, ಇದರಲ್ಲಿಯ ಜೋಧಪುರದ ರಾಜ ಸಿಂಹಾಸನವನ್ನು ಶೃಂಗಾರ್ ಚೌಕಿ ಎಂದು ಕರೆಯಲಾಗುತ್ತದೆ. ಇದನ್ನು ರಾಜಾ ಸುರ್ ಸಿಂಗ್ (1595-1619) ನಿರ್ಮಿಸಿದ್ದಾರೆ. ಈ ಅರಮನೆಯು ಸುಂದರವಾಗಿ ಕೆತ್ತಿದ ವಾಸ್ತುಶಿಲ್ಪದ ಪರದೆಗಳಿಗೆ ಹೆಸರುವಾಸಿಯಾಗಿದೆ.

ಮಹಾರಾಜ ಅಭಯ ಸಿಂಗ್ (1724-1749) ಅವರು ಫೂಲ್ ಮಹಲ್ ಅನ್ನು ನಿರ್ಮಿಸಿದರು, ಅದು ಚಿನ್ನದ ಫಿಲಿಗ್ರೀಗಳಿಂದ ಸಮೃದ್ಧವಾಗಿದೆ.  ಮಹಾರಾಜ ತಖ್ತ್ ಸಿಂಗ್ ತಖ್ತ್ ವಿಲಾ ನಿರ್ಮಿಸಿದರು. ಪ್ಲ್ಯಾಸ್ಟರ್‌ನಲ್ಲಿ ಮಾಡಿದ ಪ್ರಕಾಶಮಾನವಾಗಿ ಚಿತ್ರಿಸಿದ ಧಾರ್ಮಿಕ ವ್ಯಕ್ತಿಗಳ ಕನ್ನಡಿ ಕೆಲಸವು ಶೀಶಾ ಮಹಲ್ ಅನ್ನು ಅಲಂಕರಿಸುತ್ತದೆ.

ಮೆಹರನ್‌ಗಢ ಕೋಟೆಯ ಬಹುಪಾಲು ಭಾಗವನ್ನು ಪಾರಂಪರಿಕ ವಸ್ತುಸಂಗ್ರಹಾಲಯವನ್ನಾಗಿ ಪರಿವರ್ತಿಸಲಾಗಿದೆ,  ವಸ್ತುಸಂಗ್ರಹಾಲಯದಲ್ಲಿ ರಾಯಲ್ ಪಲ್ಲಕ್ಕಿಗಳು, ಚಿಕಣಿ ವರ್ಣಚಿತ್ರಗಳು, ಪೀಠೋಪಕರಣಗಳು ಮತ್ತು ಐತಿಹಾಸಿಕ ಶಸ್ತ್ರಾಸ್ತ್ರಗಳು ಇತ್ಯಾದಿಗಳ ದೊಡ್ಡ ಸಂಗ್ರಹವಿದೆ. ಮೂರು ಅಂತಸ್ತಿನ ದೌಲತ್ ಖಾನಾ ಗ್ಯಾಲರಿಯಲ್ಲಿ ರಾಥೋರ್ಸ್‌ಗೆ ಸಂಬಂಧಿಸಿದ ಅಮೂಲ್ಯವಾದ ಕಲಾಕೃತಿಗಳು ಇವೆ.

ಕೋಟೆಯ ಒಳಗಡೆ ಅರಮನೆಯ ಆವರಣದಲ್ಲಿ ತುಂಬಾ ಕೋಣೆಗಳಿದ್ದು ಅಂತಸ್ತುಗಳಿದ್ದು  ಅದನ್ನು ಮೆಟ್ಟಿಲು ಹತ್ತಿ ಇಳಿದು ಹತ್ತಿ ಇಳಿದು, ಅದನ್ನು ಸಂಪೂರ್ಣವಾಗಿ ನೋಡಿ ನಾವು ಜಸ್ವಂತ್ ಥಾಡಾ ಎಂಬ ಇನ್ನೊಂದು ಸ್ಥಳವನ್ನು ನೋಡಲು ಹೊರಟೆವು. ಆಗಲೇ ಮಧ್ಯಾಹ್ನವಾಗುತ್ತಾ ಬಂದಿದ್ದು ಎಲ್ಲರಿಗೂ ಹಸಿವೆಯಾಗುತ್ತ ಇತ್ತು.

*............ಮುಂದುವರಿಯುವುದು.*

ಫೋಟೋ ಮತ್ತು ವಿಡಿಯೋಗಾಗಿ ಕಿಳಗಿನ ಲಿಂಕ್ ನೋಡಿ.


https://drive.google.com/folderview?id=123Z4S0EB_k36_EnkUd_QSvhSb9zxWXxu

ಶನಿವಾರ, ಅಕ್ಟೋಬರ್ 26, 2019

ದಿನೇಶ ಉಪ್ಪೂರ:

*ರಾಜಸ್ಥಾನ ಯಾನ*

ಭಾಗ ೧೨

ಅದು ಬುಲೆಟ್ ಬಾಬಾ ಮಂದಿರ. ಅದೊಂದು ಸಣ್ಣ ದೈವಸ್ಥಾನ ಇದ್ದಹಾಗಿತ್ತು. ಆದರೆ ಅಲ್ಲಿ ದೇವರ ಬದಲು ಒಂದು ಬುಲೆಟ್ ಬೈಕಿಗೆ ಪೂಜೆ ಮಾಡುತ್ತಿದ್ದರು. ಬುಲೆಟ್ ನ ಮುಂದೆ ಒಂದು ದೊಡ್ಡ ಕಟ್ಟೆ ಇದ್ದು ಅಲ್ಲಿ ಒಂದು ಬಾಬಾನ ಫೋಟೋ ಮತ್ತು ಒಂದೆಡೆ ಬೆಂಕಿಯನ್ನು ಉರಿಸಿಟ್ಟಿದ್ದರು. ಒಬ್ಬರು ಆ ಬಾಬಾನ ಫೋಟೋಗೆ ಒಂದು ಬಾಟಲಿಯಲ್ಲಿ ಮದ್ಯವನ್ನು ಕುಡಿಸುವಂತೆ ಬಾಗಿಸಿ ಹಿಡಿದು ತೆಗೆದುಕೊಂಡು ಹೋದರು.

ಓಂ ಬನ್ನಾ ಅಥವ ಬುಲೆಟ್ ಬಾಬಾ ಮಂದಿರದ ಇತಿಹಾಸವನ್ನು ಗೂಗಲ್ ಹೀಗೆ ತಿಳಿಸುತ್ತದೆ.
ಬುಲೆಟ್ ಬಾಬಾ (ಇದನ್ನು ಶ್ರೀ ಓಂ ಬನ್ನಾ ಎಂದೂ ಕರೆಯುತ್ತಾರೆ) ಭಾರತದ ಜೋಧ್‌ಪುರದ ಬಳಿಯ ಪಾಲಿ ಜಿಲ್ಲೆಯಲ್ಲಿರುವ ಒಂದು ದೇವಾಲಯವಾಗಿದ್ದು, ಮೋಟಾರ್ಸೈಕಲ್ ರೂಪದಲ್ಲಿ ದೇವತೆಗೆ ಅರ್ಪಿತವಾಗಿದೆ.

2 ಡಿಸೆಂಬರ್ 1991 ರಂದು, ಓಂ ಬನ್ನಾ (ಹಿಂದೆ ಇವರನ್ನು ಓಂ ಸಿಂಗ್ ರಾಥೋಡ್ ಎಂದು ಕರೆಯುತ್ತಾರೆ) ಪಾಲಿಯ ಸ್ಯಾಂಡೇರಾವ್ ಬಳಿಯ ಬಾಂಗ್ಡಿ ಪಟ್ಟಣದಿಂದ ಚೋಟಿಲಾಕ್ಕೆ ಪ್ರಯಾಣಿಸುತ್ತಿದ್ದಾಗ, ತನ್ನ ಮೋಟಾರ್ ಸೈಕಲ್‌ನ ನಿಯಂತ್ರಣ ಕಳೆದುಕೊಂಡು ಮರಕ್ಕೆ ಡಿಕ್ಕಿ ಹೊಡೆದು ಸಾವನ್ನಪ್ಪಿದರು ಮತ್ತು ಅವರ ಮೋಟಾರ್ ಸೈಕಲ್ ಹತ್ತಿರದ ಕಂದಕಕ್ಕೆ ಬಿತ್ತು. ಅಪಘಾತದ ನಂತರದ ಬೆಳಿಗ್ಗೆ ಸ್ಥಳೀಯ ಪೊಲೀಸರು ಮೋಟಾರ್ ಸೈಕಲ್ ನ್ನು ಹತ್ತಿರದ ಪೊಲೀಸ್ ಠಾಣೆಗೆ ತಂದು ಇಟ್ಟರು. ಮರುದಿನ ಅದು ಕಣ್ಮರೆಯಾಗಿ ಘಟನೆಯ ಸ್ಥಳದಲ್ಲಿ ಮತ್ತೆ ಪತ್ತೆಯಾಯ್ತು. ಆಶ್ಚರ್ಯಗೊಂಡ ಪೊಲೀಸರು ಮತ್ತೊಮ್ಮೆ ಮೋಟಾರ್ ಸೈಕಲ್ ಅನ್ನು ಸ್ಟೇಶನ್ನಿಗೆ ತಂದರು. ಮತ್ತು ಅದರ ಇಂಧನ ಟ್ಯಾಂಕ್ ಅನ್ನು ಖಾಲಿ ಮಾಡಿ ಲಾಕ್ ಮಾಡಿ ಮತ್ತು ಚೈನ್ ತೆಗೆದು ಅಡಿಯಲ್ಲಿ ಇಟ್ಟರು.  ಆದರೂ ಮರುದಿನ ಬೆಳಿಗ್ಗೆ ಅದು ಮತ್ತೆ ಕಣ್ಮರೆಯಾಗಿದ್ದು, ಅಪಘಾತದ ಸ್ಥಳದಲ್ಲಿ ಕಂಡುಬಂತು.

ಸ್ಥಳೀಯ ಜನರಿಗೆ ಇದು ಪವಾಡವೆಂದು ಕಂಡುಬಂದಿತು ಮತ್ತು ಅವರು "ಬುಲೆಟ್ ಬೈಕ್" ಅನ್ನು ಪೂಜಿಸಲು ಪ್ರಾರಂಭಿಸಿದರು.
ಪ್ರತಿದಿನ ಹತ್ತಿರದ ಗ್ರಾಮಸ್ಥರು ಮತ್ತು ಪ್ರಯಾಣಿಕರು ಬೈಕು ಮತ್ತು ಅದರ ದಿವಂಗತ ಮಾಲೀಕ ಓಂ ಸಿಂಗ್ ರಾಥೋಡ್ ಅವರನ್ನು  ಪ್ರಾರ್ಥಿಸುತ್ತಾರೆ. ಮತ್ತು ಕೆಲವು ಚಾಲಕರು ಸಣ್ಣ ಮದ್ಯದ ಬಾಟಲಿಗಳನ್ನು ಸಹ ಸ್ಥಳದಲ್ಲಿ ನೀಡುತ್ತಾರೆ. ಮೋಟಾರುಬೈಕಿನಲ್ಲಿ ಕೆಂಪು ದಾರವನ್ನು ಕಟ್ಟುತ್ತಾರೆ.
ಅಲ್ಲಿಯೇ ಪಕ್ಕದಲ್ಲಿ ಇರುವ ಒಂದು ಹೋಟಲ್ ನಲ್ಲಿ ಚಾ ಕುಡಿದು ನಮ್ಮ ಪ್ರಯಾಣವನ್ನು ಮುಂದುವರಿಸಿದೆವು.

ರಾತ್ರಿ ಏಳರ ಸುಮಾರಿಗೆ ಜೋಧಪುರಕ್ಕೆ ತಲುಪಿ ಅಲ್ಲಿ ಮೊದಲೇ ಗೊತ್ತುಮಾಡಿದ್ದ ಆನಂದ ವಿಲ್ಲಾ ಎಂಬ ಮನೆಯನ್ನು ಪ್ರವೇಶಮಾಡಿ ವಿಶ್ರಾಂತಿ ಪಡೆದದ್ದಾಯಿತು. ಅಲ್ಲಿಯೂ ಅಡುಗೆ ಮಾಡಲು ಒಬ್ಬ ಕುಕ್ ಇದ್ದ. ನಮ್ಮ ಗೃಹಿಣಿಯರು ನಮಗೆ ಬೇಕಾದ ಹಾಗೆ ರಾತ್ರಿಗೆ ಅಡುಗೆ ಮಾಡಲು ಅವನಿಗೆ ನಿರ್ದೇಶನವನ್ನು ಕೊಟ್ಟರು. ಅವನು ಮಾಡಿದ ಅಡುಗೆಯನ್ನು ಉಂಡು ಮಲಗಿದೆವು.

ಅದು ಮೂರು ಅಂತಸ್ತಿನ ದೊಡ್ಡ ಬಂಗಲೆ. ಕೆಳ ಅಂತಸ್ತಿನಲ್ಲಿ ಒಂದು ದೊಡ್ಡ ಹಾಲ್ ಮತ್ತು ಎರಡು ಬೆಡ್ ರೂಮ್ ಇತ್ತು. ಮೊದಲ ಮತ್ತು ಎರಡನೇ ಅಂತಸ್ತಿನಲ್ಲೂ ಎರಡೆರಡು ಬೆಡ್ ರೂಮ್ ಗಳೂ ಮತ್ತು ಬಾಲ್ಕನಿಗಳೂ ಇದ್ದವು. ಅಲ್ಲಿ ವೈಫೈ ಕೂಡ ಇದ್ದುದರಿಂದ ನಮಗೆ ಅನುಕೂಲವಾಯಿತು. ಎದುರಿಗೆ ದೊಡ್ಡ ಕಾಡು ಇದ್ದು ನವಿಲುಗಳು ಕಡವೆಗಳೂ ಸಂಚರಿಸುವುದು ಕಾಣುತ್ತಿತ್ತು.

*……..ಮುಂದುವರಿಯುವುದು*

ಪೋಟೋ ಮತ್ತು ವಿಡಿಯೋಗಾಗಿ ಕೆಳಗಿನ ಲಿಂಕ್ ನೋಡಿ,

https://drive.google.com/folderview?id=1TpN3AOshITRr-21R_QldRlTtDOCH_zMj