ಬುಧವಾರ, ಆಗಸ್ಟ್ 29, 2018

ದಿನೇಶ ಉಪ್ಪೂರ:

*#ನನ್ನೊಳಗೆ - 2*

ಭಾಗ - 5


ನಾನು ಇವಳಿಗೆ ಹೇಳಬೇಕು.

ಇದು ನಾನು ಬರೆಯುವುದಲ್ಲ.

ಯಾರೊ ನನ್ನಿಂದ ಇದನ್ನು ಬರೆಸುತ್ತಿದ್ದಾರೆ .

ತಡೆಯೇ ಇಲ್ಲ ಪುಂಖಾನುಪುಂಖವಾಗಿ ಬಾಣ ಬಿಟ್ಟಹಾಗೆ ಸರಾಗವಾಗಿ ಬರೆಯುತ್ತಿದ್ದೇನೆ .

*****

ರಾತ್ರಿ ಈಗ.

ಇವಳು ಆಗ ಕಣ್ಣು ಬಿಟ್ಟು, ನೋಡಿ ಹೇಳಿದಳು,

“ಸಾಕು ಮಲಗಿ. ಬೆಳಿಗ್ಗೆ ಬರೆದರಾಯಿತು .

“ಆಯಿತು”. ನಾನೆಂದೆ, “ ನೀನು ಮಲಗು”.
***


ವೈದೇಹಿ , ಇಂದು ಬಹು ದೊಡ್ಡ ಬರಹಗಾರರು. ಕಾರಂತರನ್ನು ಹೊರತುಪಡಿಸಿ. ಲೈಬ್ರರಿಯಲ್ಲಿ ಒಂದು ಕಪಾಟಿನಲ್ಲಿ ಬರೆದು ಬಿಟ್ಟಿದ್ದಾರೆ.

“ವೈದೇಹಿ ಬರಹಗಳು”

ನಾನು ಕುತೂಹಲದಿಂದ ಆ ಕಪಾಟು ತೆರೆದು ನೋಡಿದರೆ, ಅಲ್ಲಿ ಅವರ ಬರಹಗಳು ಇರಲೇ ಇಲ್ಲ .

ಯಾರ್ಯಾರದೋ ಸಾಮಾನ್ಯ ಪುಸ್ತಕಗಳು. ಕಾರಂತ ಕುವೆಂಪುರವರದೂ ಹಾಗೆಯೆ.

ಒಮ್ಮೆ ವೈದೇಹಿಯವರಿಗೆ ಹೇಳಬೇಕು.

******


ಒಮ್ಮೆ ಅವರು ನನಗೆ ಫೋನ್ ಮಾಡಿದ್ದರು.

ಅವರೂ ನಮ್ಮ ಒಂದು ವಾಟ್ಸಾಪ್ ಗ್ರೂಪ್ ನಲ್ಲಿ ಇದ್ದರು.

“ನಾನು ವೈದೇಹಿ,  ನನಗೆ ಮೊಬೈಲಿನಲ್ಲಿ ಬರೆಯಲು ಬರುವುದಿಲ್ಲ”.

ಹಾಗಾಗಿ ಫೋನ್ ನಲ್ಲಿ.   “ನಿಮ್ಮ ಬರಹಗಳು ತುಂಬಾ ಚೆನ್ನಾಗಿದೆ”

ನನಗೆ ರೋಮಾಂಚನ!.

ಅವರೆಲ್ಲಿ ನಾನೆಲ್ಲಿ ?

***********


ನನ್ನ ಪುಸ್ತಕ ತೊಂಬತ್ತೈದು ಕಂತು ತಲುಪಿದಾಗ,  ಅದನ್ನು ಪರಿಷ್ಕರಿಸಿ ಅರವತ್ತೈದಕ್ಕೆ ಇಳಿಸಿ, ಇಷ್ಟು ಸಾಕು ಎಂದು ಒಂದು ಪುಸ್ತಕ ಮಾಡಿ ಅವರಿಗೆ ಫೋನ್ ಮಾಡಿದೆ.

“ಮೇಡಂ,  ಆವತ್ತು ನೀವು ನನ್ನ “ನನ್ನೊಳಗೆ” ಬರಹವನ್ನು ಮೆಚ್ಚಿ ಎರಡು ಮಾತು ಹೇಳಿದ್ದೀರಿ. ಈಗ ಮುಗಿದಿದೆ.

ಒಮ್ಮೆ ತಂದು ಕೊಡಲೇ?   ಓದಿ ಅಭಿಪ್ರಾಯ ತಿಳಿಸಬಹುದೇ?

“ಏನು ಪುಸ್ತಕ ಮಾಡುತ್ತೀರಾ ?  ತನ್ನಿ . ನೋಡುತ್ತೇನೆ”

ಅಂದರು ನಮ್ರನಾಗಿ.

ಓಡಿದೆ.  ಅವರ ಮಣಿಪಾಲದ ಅನಂತಪುರದ ಮನೆಗೆ ಹುಡುಕಿಕೊಂಡು ಹೋದೆ. ಅವರಿದ್ದರು .

*********



ನನಗೆ ಪುಸ್ತಕ ಮಾಡುವ ಉದ್ದೇಶ ಇಲ್ಲ.

ಆದರೆ , ನೀವೂ ಒಮ್ಮೆ ಓದಿನೋಡಿದರೆ ನನಗೆ ಸಮಾಧಾನ.

ಅದರಲ್ಲಿ ತೀರಾ ಖಾಸಗಿಯಾದ ವಿಷಯಗಳು ಇವೆ . ಅದೆಲ್ಲ ಯಾಕೆ? ಎಲ್ಲರ ಜೀವನದಲ್ಲೂ ಇರುತ್ತದೆ. ಇರುವುದೆಲ್ಲವ ಬಿಟ್ಟು….  ಸಾಕು ಬಿಡಿ ” ಅಂದವರಿದ್ದಾರೆ.

ನೋಡುವ ಎಂದೆ.

ಅವರಿಗೆ ಎಲ್ಲವೂ ವಿಸ್ಮಯಗಳೆ ?

*********



ಮುಗ್ದ ಮನಸ್ಸಿನ ಮಗಳು.

ಕುಂದಾಪುರ ಕನ್ನಡವನ್ನೇ ಮಾತಾಡುವವರು. ಬರೆಯುವವರು. ಅವರು.

ಯುಟ್ಯೂಬ್ ನಲ್ಲಿ ಅವರ ಯಾವುದೋ  ಸಂದರ್ಶನ ನೋಡಿದ್ದೆ.

ಅಲ್ಲಿಯೂ ಮುಜುಗರವಾಗುವಷ್ಟು ಕುಂದಾಪುರ ಕನ್ನಡ.

ನನಗೆ ಯಾಕೋ ಗೌರವ. ಆಕೆಯ ಮೇಲೆ.

********



ಒಂದು ಹದಿನೈದು ದಿನದಲ್ಲಿ ನನಗೆ ಫೋನ್ ಮಾಡಿದರು.

“ಒಂದು ಪೇಜು ಬರೆದಿಟ್ಟಿದ್ದೇನೆ. ಪುಸ್ತಕ ಚೆನ್ನಾಗಿದೆ. ನೀವು ಪುಸ್ತಕ ಮಾಡುವಾಗ ಮುನ್ನುಡಿಯ ಬಗ್ಗೆ ಬರೆಯಲು ನೋಡುವೆ. ಅಂದರು. ಹೋದೆ.

“ಈ ನಿಮ್ಮ ಪುಸ್ತಕ ನನಗೆ. ಇಗೊ ಈ ಒಂದು ಹಾಳೆ ನಿಮಗೆ”.

ನನಗೆ ಮುಜುಗರವಾಯಿತು.

ಅವರೆಲ್ಲಿ ?  ನಾನೆಲ್ಲಿ?

*”****



“ನಿಮ್ಮ ಪುಸ್ತಕ ಯಾವುದಾದರೂ ಇದೆಯ?

ನಾನು ಈಗ ತಾನೆ ಓದಲಿಕ್ಕೆ ಶುರು ಮಾಡಿದ್ದೇನೆ”

ಅವರದು ಆ ಮಟ್ಟಿಗೆ ನಿಷ್ಠುರ. ಈಗ ನನ್ನಲ್ಲಿ ಯಾವುದೂ ಇಲ್ಲ.

ಇದ್ದರೆ ಕೊಡುತ್ತಿದ್ದೆ . ನನಗೆ ಕೊಡಬಾರದೆಂದೇನೂ ಇಲ್ಲ.

ನನ್ನ ಸಮಗ್ರ ಕತೆಗಳು ಪ್ರಕಟವಾಗಿದೆ. ರಿಯಾಯಿತಿ ದರದಲ್ಲಿ ಸಿಗುತ್ತದೆ.

ನೀವು ಬುಕ್ ಮಾಡಿ ಹಣ ಕೊಟ್ಟು ತರಿಸಿಕೊಳ್ಳಬಹುದು.

“ಇಗೊಳ್ಳಿ ನೀವು ಕೇಳಿದ್ದಕ್ಕೆ . ನಾನೇ ಬರೆದದ್ದು.

“ಅಮ್ಮಚ್ಚಿ ಯೆಂಬ ನೆನಪು ” ಅವರ ಪುಸ್ತಕ ಕೊಟ್ಟರು…….

ಮನೆಗೆ ತಂದು ಓದಿದೆ.

ಹಳ್ಳಿಯ ಸೊಗಡು ಇರುವ ಬರಹಗಳು.

ಆಪ್ತವಾದವುಗಳು.

ಅದರಲ್ಲಿ ಒಂದು ಸಿನಿಮಾ ಆಗುತ್ತಿದೆಯಂತೆ.

ಅದನ್ನೂ ಹೇಳಲಿಲ್ಲ ಅವರು.

“************


ನಿನ್ನೆ , ಭೀಮಣ್ಣ ತಹಶೀಲ್ದಾರ್ ಎನ್ನುವ ನನ್ನ ಜೀವನದ ದಿಕ್ಕನ್ನು ಬದಲಿಸಿದ ಶಿವಮೊಗ್ಗದ ಒಬ್ಬ ಡಾಕ್ಟರ್ ಮಹಾನುಭಾವರು ಅದು  ಹೇಗೋ ನಂಬರ್ ಹುಡುಕಿ ತೆಗೆದು ಫೋನ್ ಮಾಡಿದ್ದರು.

ಅವರು ಯಾರೆಂದು ನಿಮಗೆ ನನ್ನ “ನನ್ನೊಳಗೆ-1” ಓದಿದ್ದರೆ ಖಂಡಿತಾ ನೆನಪಿರಬಹುದು.

ಅವರ ಒಂದೇ ಒಂದು ಸಹಿಯಿಂದ ನನಗೆ ಕೆಲಸ ಸಿಕ್ಕಿತ್ತು ,ನಮ್ಮ ಆಗಿನ ಕೆಇಬಿಯಲ್ಲಿ.

******

ಹೌದು ಅವರಿಗೂ ಆತ್ಮ ಕತೆ ಬರೆಯಬೇಕು ಎನ್ನಿಸಿತ್ತಂತೆ.

“ನೀವು ಬರೆಯುವ ಭಾಷೆ ಸರಳವಾಗಿದೆ. ಚೆನ್ನಾಗಿದೆ. ಒಮ್ಮೆ ನಿಮ್ಮನ್ನು ಭೇಟಿಯಾಗುವೆ. ಮಾತಾಡೋಣವೇ?  ಸಹಾಯ ಮಾಡುವಿರಾ?”

ಎಂದು ವಿನಯದಿಂದ ಕೇಳಿದರು.

ಅಬ್ಬಾ ಅದಕ್ಕಿಂತ ಧನ್ಯತೆ ಇನ್ನು ಬೇರೆ ಇದೆಯಾ?

‘ಬನ್ನಿ” ಎಂದಿದ್ದೇನೆ.



*ಮುಂದುವರಿಯುವುದು…………..*

ಮಂಗಳವಾರ, ಆಗಸ್ಟ್ 28, 2018

ದಿನೇಶ ಉಪ್ಪೂರ:


*#ನನ್ನೊಳಗೆ - 2*

ಭಾಗ - 4


ಆದರೆ ವಿಧಿ.

ಹಾಗೆಯೇ ಆಯಿತು. ಯಾರೋ ಈ ಹುಡುಗ ಎರಡು ಕಡೆಯಲ್ಲಿ ಕೆಲಸ ಮಾಡುತ್ತಾನೆ ಎಂದು ಇವನ ಬಾಸ್ ಗೆ ತಿಳಿಸುವುದಾಗಿ ಹೆದರಿಸಬೇಕು.

. ಆರ್ ಎಂ ಎಸ್ ನ ಇವನ ಬಾಸ್ ಗೆ , ಇವನೇ ಹೋಗಿ ಹೇಳಿದ.

“ಏನು ಮಾಡುವುದು? ಸರ್ ಹೇಳಿ “ ಎಂದು

ಪಿಪಿಸಿಯಲ್ಲಿ ಇವನು ಕೆಲಸ ಮಾಡುವುದು ಅವರಿಗೂ ಗೊತ್ತಿತ್ತು.

ಅವರು ಹೇಳಿದರಂತೆ “ನಿನಗೆ ಈ ಕೆಲಸ ಅಲ್ಲ. ನೀನು ಪ್ರತಿಭಾವಂತ. ನಿನಗೆ ಒಳ್ಳೆಯ ಭವಿಷ್ಯವಿದೆ. ಓದು”.

ಇವನ ವಿರುದ್ಧ ಯಾರೂ ದೂರು ದಾಖಲಿಸಲಿಲ್ಲ.

ಮುಂದೆ ಒಳ್ಳೆಯದಾಗುತ್ತದೆ, ಎಂದದ್ದೇ, “ನಿಮ್ಮ ಆಶೀರ್ವಾದ” ಎಂದು ಆ ಖಾಯಂ ಕೆಲಸಕ್ಕೆ ರಾಜಿನಾಮೆ ಕೊಟ್ಟು ಬಿಟ್ಟ. ಧೈರ್ಯ ವಂತ.

*****


ಹೆದರಲಿಲ್ಲ. ಬದುಕು ಕೊಡುವ ಖಾಯಂ ಕೆಲಸ. ಸೆಂಟ್ರಲ್ ಗವರ್ನ್ ಮೆಂಟ್ ಕೆಲಸ. ಇವನಿಗೆ ತುಚ್ಚವಾಗಿ ಕಂಡಿತು.

ನನಗಿನ್ನೂ ದೊಡ್ಡ ಭವಿಷ್ಯವಿದೆ. ಕನಸು ಕಂಡ ಹುಡುಗ,

ಪಿ ಎಚ್ ಡಿ ಮಾಡಿದ.ಡಾಕ್ಟರೇಟ್ ಪಡೆದ.

********




ಈಗ ಪಾರ್ಟ್ ಟೈಮ್ ಕಡಿಮೆ ಸಂಬಳ. ತಿಂಗಳಿಗೆ ನಾನೂರೋ ಐನೂರೋ ಸಂಬಳ. ಅವನಿಗೆ ಅದು ಕೆಡುಕು ಅನ್ನಿಸಲಿಲ್ಲ .

ಕಮಲಶಿಲೆ ಮೇಳಕ್ಕೆ ಹೋಗಿ ಭಾಗವತನಾಗಿ ಕುಳಿತು ತಾಳ ಹಿಡಿದ. ಆದರೆ ಅದು ಅವನನ್ನು ಹಿಡಿಯಲಿಲ್ಲ. ಅದನ್ನೂ ಬಿಟ್ಟ.

*********



ರಾಜಕೀಯದವರ ಜೊತೆಗೆ ಸೇರಿ ಚುನಾವಣಾ ಪ್ರಚಾರದ ಭಾಷಣ ಮಾಡಿದ.

ಅದು ಬದುಕಿಗೆ ಅನ್ನ ಕೊಡಲಿಲ್ಲ.

ಓದುವ ದಾಹ. ಅಲ್ಲಿಯೇ ಇದ್ದು ಅದೇ ಸಂಬಳದಲ್ಲಿ ಪಿಹೆಚ್ ಡಿ ಯನ್ನು ಮಾಡಿದ . ಮುಂದೆ ಅದೇ ಕೆಲಸ ಖಾಯಂ ಆಯಿತು.

ಈಗ ಬಹುಷ್ಯ ಯುಜಿಸಿ ಸ್ಕೇಲ್. ಒಂದು ಲಕ್ಷಕ್ಕೆ ಕಡಿಮೆ ಇಲ್ಲದಂತೆ ತೆಗೆದು ಕೊಳ್ಳುತ್ತಿರಬಹುದು. ನನ್ನ ಸಮಪ್ರಾಯ ಅವನಿಗೆ . ಇನ್ನೂ ಸರ್ವೀಸ್ ಇದೆ.

ಈಗ ಅವನೇ ಪಿಪಿಸಿಯಲ್ಲಿ ಕನ್ನಡ ವಿಭಾಗದ ಮುಖ್ಯಸ್ಥನಂತೆ

********



“ನೀವು ಚೆನ್ನಾಗಿ ಬರೆಯುತ್ತೀರಿ. ಸರಳವಾಗಿ. ಕಾರಂತರಂತೆ.

ನಿಜಕ್ಕೂ, ನನಗೆ  ಕಾರಂತರ ‘ಅಳಿದ ಮೇಲೆ’ ನೆನಪಾಯಿತು”.

“ಒಳ್ಳೆಯ ಹುಡುಗಾಟ ನಿಮ್ಮದು’.

ವಾಟ್ಸಾಪ್ ನಲ್ಲಿ ಬಂದ ನನ್ನ “ನನ್ನೊಳಗೆ”

ಓದಿ ಅವನ ಉದ್ಘಾರ ಅದು. ಕಾರಂತರೆಲ್ಲಿ ನಾನೆಲ್ಲಿ !

ನಾನು ಈಗಷ್ಟೆ ಕಣ್ಣು ಬಿಟ್ಟವನು. ಬರೆಯಲು ಪ್ರಾರಂಭಿಸಿದವನು. ಬದುಕಿನ ಕೊನೆಯಲ್ಲಿ. ಇದ್ದ ಸರಕಾರಿ ಉದ್ಯೋಗವನ್ನು ಬಿಟ್ಟು. ನಾನೇನು ಸಾಧಿಸಬಲ್ಲೆ?.

ಪಾಪ . ಅವರ ಮನಸ್ಸು ದೊಡ್ಡದು.

********




ಹೌದು. ಲೈಬ್ರೆರಿಯಲ್ಲಿ ನಾನು ಮೊದಲು ಓದತೊಡಗಿದ್ದು ಕಾರಂತರ ಪುಸ್ತಕಗಳನ್ನು.

ಶ್ರೀಧರ ಅಣ್ಣಯ್ಯನಲ್ಲೂ ಕೆಲವು ಪುಸ್ತಕ ಇತ್ತು .

ಕೇಳಿ ತಂದೆ ಓದಿದೆ. ಒಂದೊಂದೆ.

ಅದೊಂದು ಭಾವಲೋಕ. ಯಾರೂ ಬರೆಯಲಾರದಷ್ಟು ಬರೆದಿದ್ದಾರೆ. ಮೈಮನಗಳ ಸುಳಿಯಲ್ಲಿ,  ಮರಳಿ ಮಣ್ಣಿಗೆ , ಧರ್ಮರಾಯನ ಸಂಸಾರ, ಬೆಟ್ಟದ ಜೀವ, ಕರುಳಿನ ಕರೆ.ಶನೀಶ್ವರನ ನೆರಳಿನಲ್ಲಿ,, ಸ್ವಪ್ನದ ಹೊಳೆ, ಮುಗಿದ ಯುದ್ಧ,  ಸನ್ಯಾಸಿಯ ಬದುಕು, ಔದಾರ್ಯದ ಉರುಳಲ್ಲಿ, ಸರಸಮ್ಮನ ಸಮಾಧಿ. ಕುಡಿಯರ ಕೂಸು. ಮೂಕಜ್ಜಿಯ ಕನಸುಗಳು……..ಇನ್ನೂ..

ಅವರು ಸಾವಿರದಷ್ಟು ಬರೆದಿರಬಹುದು.

ಒಂದಾ ಎರಡಾ? ಎಲ್ಲ ಕ್ಷೇತ್ರದಲ್ಲಿ ಯೂ ಇದ್ದಾರೆ.

******



ಅವರ ಆತ್ಮಕತೆ ಹುಚ್ಚು ಮನಸ್ಸಿನ ಹತ್ತು ಮುಖಗಳು.ಓದಬೇಕು.

ಅದೊಂದೇ ಸಾಕು. ಅವರ ವಿರಾಟ್ ರೂಪವನ್ನು ತಿಳಿಯುವುದಕ್ಕೆ.

ಅದು ಅವರಿಗೆ ಸಾಕಾಗಲಿಲ್ಲ ಮತ್ತೂ ಬರೆದರು. ಮತ್ತೆ  ನಾಲ್ಕಾರು ಪುಸ್ತಕಗಳು.

ಸ್ಮೃತಿ ಪಟಲದಲ್ಲಿ……

ಒಂದು ಜೋಳಿಗೆ ಚೀಲ ಬಗಲಲ್ಲಿ.

ಅದರಲ್ಲಿ‌ ಗೋದಿ ಹಿಟ್ಟು. ಅವಲಕ್ಕಿ. ಇಷ್ಟೆ. ದಿನದ ಹಸಿವಿನ ಶಮನಕ್ಕೆ

ಅವಧೂತನಂತೆ ಊರೂರು ತಿರುಗಿದರು. ಬರೆದರು.

ಕುಣಿದರು ವಿದೇಶಕ್ಕೆ ಹಾರಿದರು. ಇತರರಿಗೆ ಕಲಿಸಿದರು.

ಯಕ್ಷಗಾನ ಬಯಲಾಟಕ್ಕೆ ಪ್ರಶಸ್ತಿಯ ಗರಿ.

*****




ಮತ್ತೆ  ದೊಡ್ಡ ದೊಡ್ಡವರ ಆತ್ಮ ಚರಿತ್ರೆ ಓದಬೇಕು.

ಲೈಬ್ರೆರಿಯಲ್ಲಿ ಹುಡುಕಾಡಿದಾಗ ಕೈಗೆ ಸಿಕ್ಕಿದ್ದು.

ಬಿ.ವಿ.ಕಾರಂತರ ಬದುಕು.

ವೈದೇಹಿಯವರು, ಅವರ ಜೊತೆಗೆ ಇದ್ದು, ಬರೆದದ್ದು ತಿಂಗಳು ಗಟ್ಟಳೆ .

ಮತ್ತೂ ದೀರ್ಘ ಅವಧಿ.

 ಕೊನೆಗೆ ಬಿವಿ ಕಾರಂತರ ಅನಾರೋಗ್ಯ.

ರಾತ್ರಿಯೂ ಪೋನ್ ಮಾಡುತ್ತಿದ್ದರಂತೆ.

“ವೈದೇಹಿ, ಬೇಸರ ಮಾಡಬೇಡ. ಇದೊಂದು ಹೇಳುವುದು ಬಿಟ್ಟು ಹೋಯಿತು”.

ಇವರು “ಇಲ್ಲ ತೊಂದರೆ ಇಲ್ಲ . ಹೇಳಿ”  ಎಂದು ಆಗಲೇ ನೋಟ್ ಮಾಡಿಕೊಳ್ಳುತ್ತಿದ್ದರು. ಅವರೂ ಒಂದು ಅದ್ಭುತ.

ಅವರು ಮಾತನಾಡುವುದು, ಇಂದಿಗೂ ಕುಂದಾಪುರ ಕನ್ನಡದಲ್ಲಿ.

*********


*ಮುಂದುವರಿಯುವುದು….*

ಸೋಮವಾರ, ಆಗಸ್ಟ್ 27, 2018

ಗಾಂಧಾರ ಗಾನ: ದಿನೇಶ ಉಪ್ಪೂರ:*#ನನ್ನೊಳಗೆ - 2*ಭಾಗ - 3ಮೊಬೈಲಲ್ಲ...

ಗಾಂಧಾರ ಗಾನ:
ದಿನೇಶ ಉಪ್ಪೂರ:

*#ನನ್ನೊಳಗೆ - 2*

ಭಾಗ - 3

ಮೊಬೈಲಲ್ಲ...
: ದಿನೇಶ ಉಪ್ಪೂರ: *#ನನ್ನೊಳಗೆ - 2* ಭಾಗ - 3 ಮೊಬೈಲಲ್ಲಿ ಬರೆಯುವುದೇ ನನಗೆ ಇಷ್ಟ. ಕೈಯಿಂದ ಪೇಪರಲ್ಲಿ ಬರೆಯುವುದು ಯಾವಾಗಲೋ ಬಿಟ್ಟು ಹೋಯಿತು. ಕಂಪ್ಯೂಟರ್ ಮುಂ...

ದಿನೇಶ ಉಪ್ಪೂರ:

*#ನನ್ನೊಳಗೆ - 2*

ಭಾಗ - 3

ಮೊಬೈಲಲ್ಲಿ ಬರೆಯುವುದೇ ನನಗೆ ಇಷ್ಟ.
ಕೈಯಿಂದ ಪೇಪರಲ್ಲಿ ಬರೆಯುವುದು ಯಾವಾಗಲೋ ಬಿಟ್ಟು ಹೋಯಿತು. ಕಂಪ್ಯೂಟರ್ ಮುಂದೆ ಕುಳಿತರೆ ಬರೆಯಬಹುದು.
ಆದರೆ ಇತ್ತೀಚೆಗೆ ಅದೂ ಟಚ್ಚು ಬಿಟ್ಟು ಹೋಗಿದೆ.
*******

ಮೊಬೈಲಲ್ಲಾದರೆ ಬರೆಯಬಹುದು.
ಕುಳಿತು . ನಿಂತು. ಮಲಗಿ. ಇದಕ್ಕೆ ಒಂದೇ ಬೆರಳು ಸಾಕು.
ಪಟಪಟಾ ಅಂತ ಬರೆಯಬಲ್ಲೆ.
ನನಗೆ ಅದು ಅಭ್ಯಾಸವಾಗಿ ಹೋಗಿದೆ. ಮನಸ್ಸಿನಲ್ಲಿ ಇದ್ದದ್ದು ಕೂಡಲೇ ಮೊಬೈಲಿಗೆ ಇಳಿಸಬಹುದು.
ಕೊನೆಗೆ ಎಲ್ಲ ಆದ ಮೇಲೆ ವಾಕ್ಯ ಶಬ್ಧ ಸರಿಮಾಡಬಹುದು.
********

ಹೌದು. ಎಲ್ಲಿಗೆ ನಿಲ್ಲಿಸಿದೆ?
ಹೌದು ಲೈಬ್ರೆರಿಗೆ ಹೋಗುತ್ತಿದ್ದೆ . ಪ್ರತೀದಿನ ಯಾವು ಯಾವುದೋ ಪುಸ್ತಕ ತರುತ್ತಿದ್ದೆ . ಓದುತ್ತಿದ್ದೆ ಮರಳಿಸುತ್ತಿದ್ದೆ.
ಹಿಂದೆ ಆಫೀಸಿನ ಜಂಜಾಟದಲ್ಲಿ ಬರೆಯುವುದು, ಓದುವುದೇ ಬಿಟ್ಟುಹೋಗಿತ್ತು.
***********

ಮೊದಲಿಗೆ ಕಾರಂತರ ಪುಸ್ತಕ ಓದುವ ಅಂತ ಅನ್ನಿಸಿತು.
ಅದು ಅಡೀ ಇತ್ತು. ಅದನ್ನು ಓದುವವರು ಕಡಿಮೆ.
 ಲೈಬ್ರೆರಿಯಿಂದ ಸಿಕ್ಕಿದ್ದು ತಂದು ಓದಿದೆ ಓದಿದೆ. ಅದು ಎಂತದ್ದು !
ಕಾರಂತರು ಒಬ್ಬ ಮನುಷ್ಯ ಅಲ್ಲ .ದೈತ್ಯ ಅಲ್ಲ.  ಆ ಹೋಲಿಕೆ ಬೇಡ. ವಿರಾಟ್ ಆಗಿ ಬೆಳೆದ ದೈವ ಅಲ್ಲ ದೇವ ಶಕ್ತಿ ಅವರು.
ಒಂದು ಭಂಡಾರ .
ಕಾರಂತರು ಮುಟ್ಟದ ವಿಷಯ ಇಲ್ಲ . ಹಿತ್ತಲ ಗಿಡ ಮದ್ದಲ್ಲ.
ಆಡು ಮುಟ್ಟದ ಸೊಪ್ಪಿಲ್ಲ . ಯಾರೋ ಬರೆದಿದ್ದರು .
ಹೌದು ಕಾರಂತರು ಈಗಲೂ ಇದ್ದಿದ್ದರೆ ಇನ್ನೂ ಬರೆಯುತ್ತಿದ್ದರು. ನೀವು ಬೇಕಾದರೆ ಓದಿ . ಬೇಡದಿದ್ದರೆ ಬಿಡಿ.  ನನಗೆ ಬರೆಯಬೇಕು ಅನ್ನಿಸಿದೆ. ಬರೆಯುತ್ತೇನೆ.
ಬೇಡ ಅನ್ನಿಸಿದರೆ ಬಿಡುತ್ತೇನೆ.
ಇದು ಕಾರಂತರ ಮಾತು .
ನನಗೂ ಹಾಗೆಯೇ.
ನಾನು ಸಣ್ಣವ.
*********

 ನಾನು ಕಾರಂತರನ್ನು ಆವಾಹಿಸಿಕೊಂಡವನು.
ಯಾರು ಓದದಿದ್ದರೂ ನಾನು ಬರೆಯ ಬೇಕು ಅನ್ನಿಸಿದರೆ, ಬರೆಯುತ್ತೇನೆ . ಈಗ ಮೊದಲಿನ ಹಾಗೆ ಅಲ್ಲ.  ಪ್ರಕಟಿಸುವವರು ಅಂತ ಪತ್ರಿಕೆ ಬೇಕಿಲ್ಲ . ಸಂಪಾದಕರ ಹಂಗಿಲ್ಲ.
ಮನಸ್ಸಿಗೆ ತೋಚಿದಂತೆ ಫೇಸ್ ಬುಕ್ಕಿನಲ್ಲಿ ಬರೆದುಬಿಡಬಹುದು.
ವಾಟ್ಸಾಪ್ ನಲ್ಲಿ ಹರಿದು ಬಿಡಬಹುದು.
ಬರೆಯಬೇಕು ಅನ್ನಿಸಿದರೆ ಬರೆದು ಬಿಡುತ್ತೇನೆ ನಾನು.
ನಾನು ನನ್ನ ಕುಷಿಗೆ ಬರೆಯುವವನು.
*****************


ಅವನು ಶ್ರೀಕಾಂತ.
 ನನಗೆ ಯಾವಾಗಲಾದರೊಮ್ಮೆ ನೆನಪಾಗುತ್ತಾನೆ . ನಾನು ಎಂಟನೇ ಕ್ಲಾಸಿನಿಂದ ಅವನನ್ನು ಬಲ್ಲೆ.
 ಬಹಳ ಹಠವಾದಿ. ಅವನಿಗೆ ಪಿಯುಸಿ ಯಾಗುವಾಗಲೇ ಕೆಲಸ ಸಿಕ್ಕಿತ್ತು. ಆರ್ ಎಮ್ ಎಸ್ ನಲ್ಲಿ ಕೆಲಸ.
 ಅವನಿಗೆ ಆಗಿನ ಕಾಲಕ್ಕೆ ಅದು ಒಳ್ಳೆಯ ಕೆಲಸವೆ. ಆದರೆ ಹುಡುಗನಿಗೆ ಓದುವ ಹುಚ್ಚು.
ಮನೆಯಲ್ಲಿ ಅಂತಹ ಅನುಕೂಲವೇನಿಲ್ಲ.  ಉಡುಪಿಯಲ್ಲಿ ಕಾಲೇಜು ಸೇರಿ ಓದಿದ.
ಮಾಸ್ಟರ್ ಡಿಗ್ರಿ ಪಡೆದೂ ಆಯಿತು.
ಮತ್ತೆ ಅವನಿಗೆ ಪಾಠ ಮಾಡುವ ಹುಚ್ಚು. ಆರ್ ಎಂ ಎಸ್ ನಲ್ಲಿ ಕುಳಿತು ಬರೆಯುವುದು ನನಗೆ ಸಾಧ್ಯವಿಲ್ಲ ಅನ್ನಿಸಿರಬೇಕು.
ಪಿಪಿಸಿಯಲ್ಲಿ ಪಾರ್ಟ್ ಟೈಮ್ ಆಗಿ ಕೆಲಸ ಸಿಕ್ಕಿಯೇ ಬಿಟ್ಟಿತು. ಹಗಲಿನಲ್ಲಿ ಪಾಠ ಮಾಡುವುದು. ರಾತ್ರಿ ಆರ್ ಎಂ ಎಸ್ ನಲ್ಲಿ ದುಡಿಯುವುದು. ಆರೂರು ಕಂಪೌಂಡ್ ನಲ್ಲಿ ವಾಸ.
 ನನಗೂ ಆಗಿನ ಕೆಇಬಿಯಲ್ಲಿ ಕೆಲಸ ಇತ್ತಲ್ಲ?. ಆಗಾಗ ಎದುರು ಸಿಗುತ್ತಿದ್ದ. “ಉಪ್ಪೂರರೆ, ನನಗೆ ರೀಸರ್ಚ್ ಮಾಡಬೇಕು”
 ನಾನು,
“ ಮಾಡಿ ಮರ್ರೆ . ರೀಸರ್ಚ್ ಮಾಡಿ. ಇನ್ನೇನೇ ಮಾಡಿ.  ಆದರೆ ಹೀಗೆ ಮಾಡಿ ಎರಡು ದೋಣಿಗೆ ಕಾಲು ಹಾಕಿಕೊಂಡು, ಇರುವ ಕೆಲಸ ಕಳೆದುಕೊಳ್ಳಬೇಡಿ. ಹೊಟ್ಟೆಯ ಹಿಟ್ಟಿಗೆ ಮೋಸ ಮಾಡಿಕೊಳ್ಳಬೇಡಿ” ಎಂದೆ.
*****************

*ಮುಂದುವರಿಯುವುದು……….*

ಭಾನುವಾರ, ಆಗಸ್ಟ್ 26, 2018

ಗಾಂಧಾರ ಗಾನ: ದಿನೇಶ ಉಪ್ಪೂರ:*#ನನ್ನೊಳಗೆ-2*ಭಾಗ - 2ಕೆಲವರು ಆಗ ಹೇ...

ಗಾಂಧಾರ ಗಾನ: ದಿನೇಶ ಉಪ್ಪೂರ:

*#ನನ್ನೊಳಗೆ-2*
ಭಾಗ - 2

ಕೆಲವರು ಆಗ ಹೇ...
: ದಿನೇಶ ಉಪ್ಪೂರ: *#ನನ್ನೊಳಗೆ-2* ಭಾಗ - 2 ಕೆಲವರು ಆಗ ಹೇಳಿದ್ದರು. “ಹೋ , ಮುಗಿಸಿಯೇ ಬಿಟ್ಟಿರಾ? ಬೇಡ ಮುಂದುವರಿಸಿ. ನಾವು ಓದುತ್ತೇವೆ” ಅಂದರು. ಏನು ಬರೆಯು...
ದಿನೇಶ ಉಪ್ಪೂರ:

*#ನನ್ನೊಳಗೆ-2*
ಭಾಗ - 2

ಕೆಲವರು ಆಗ ಹೇಳಿದ್ದರು.

“ಹೋ , ಮುಗಿಸಿಯೇ ಬಿಟ್ಟಿರಾ? ಬೇಡ ಮುಂದುವರಿಸಿ. ನಾವು ಓದುತ್ತೇವೆ” ಅಂದರು.

ಏನು ಬರೆಯುವುದು? ಬರೆಯಲು ಒಳಗಿನಿಂದ ಒತ್ತಡ ಬರಬೇಕು.
ಬರೆಯದೇ ಇರಲಾರದಷ್ಟು .

 ಬರೆಯದಿದ್ದರೆ ಆಗುವುದೇ ಇಲ್ಲ ಅನ್ನುವಷ್ಟು ಒತ್ತಡ ಬರಬೇಕು.
ಇಲ್ಲದಿದ್ದರೆ ನನಗೆ ಬರೆಯಲು ಅಗುವುದಿಲ್ಲ.
**********


ಆವತ್ತು ಇನ್ ಕಂ ಟ್ಯಾಕ್ಸ್ ರಿಟರ್ನ್ ಫೈಲ್ ಮಾಡಲು ಹೋಗಿದ್ದೆ.

ಕುಂದಾಪುರಕ್ಕೆ .
 ಅವರೂ ನನ್ನ ಒಬ್ಬ ಸ್ನೇಹಿತರು ರಾಮಕೃಷ್ಣ ಐತಾಳರು.  ಅವರಲ್ಲಿಗೆ ಹೋಗಿದ್ದೆ.

ಅವರೂ ನನಗೆ ಮೊದಲಿನಿಂದಲೂ ಪರಿಚಯ. ಅದು ಹೇಗೋ ಮತ್ತೆ ಕುಂದಾಪುರಕ್ಕೆ ಹೋದ ಮೇಲೆ ಪರಿಚಯವಾಯಿತು.

ನನ್ನ ಆಫೀಸಿನ ಟ್ಯಾಕ್ಸ್ ಫೈಲ್ ಮಾಡುತ್ತಿದ್ದುದು ಅವರೆ.

ಈಗಲೂ ಮುಂದುವರಿದಿಸಿದ್ದಾರೆ.
***********

ನಾನು ಅಲ್ಲಿಗೆ ಹೋಗಿದ್ದೆ.

ಅವನು ಅವರ ಆಫೀಸಿನಲ್ಲಿ ಇರುವ ಒಬ್ಬ ನನ್ನನ್ನು ಮಾತಾಡಿಸಿದ.

ಅವನು ಅರುಣ,

 ನನ್ನನ್ನು ನೋಡಿದ ಕೂಡಲೆ ಹೇಳಿದ.

“ಸರ್, ನೀವು ನನ್ನೊಳಗೆ ಬರೆಯುವಾಗ ನಮಗೆ ಬೆಳಿಗ್ಗೆ ಎದ್ದಕೂಡಲೇ ಅದೇ ಕೆಲಸ. ಅದನ್ನು ಓದಿಯೇ ಮುಂದಿನ ಕೆಲಸ. ಈಗ ಬರೆಯುವುದಿಲ್ಲವೇ? ಬರೆಯಿರಿ ಸರ್.”

ನನ್ನ ಹೃದಯ ತುಂಬಿ ಬಂತು.

ಇವರಿಗೆಲ್ಲ ನಾನು ಏನಾಗಬೇಕು?
*******


ಮತ್ತೆ ಎಲ್ಲರೂ ಆತ್ಮ ಚರಿತ್ರೆ ಬರೆಯುತ್ತೇವೆ ಅಂತ ಬರೆಯುತ್ತಾರಲ್ಲ .
ಏನಿರುತ್ತದೆ ಅದರಲ್ಲಿ?

ಸರಿ. ಹುಡುಕಾಟ ಶುರುವಾಯಿತು.
ನಾನು ನಿವೃತ್ತನಾದ ಮೇಲೆ ಪ್ರತೀ ದಿನ ಉಡುಪಿಯ ಜಿಲ್ಲಾ ಲೈಬ್ರರಿಗೆ ಹೋಗುತ್ತಿದ್ದೆ.

 ಬೇರೆ ಯಾವ ಪುಸ್ತಕವೂ ನನಗೆ ಬೇಡ.
ಸುಮ್ಮನೇ ಯಾಕೆ ಎಲ್ಲರೂ ಬರೆಯುತ್ತಾರೆ ?

ಲೈಬ್ರೆರಿ ತುಂಬಾ ಪುಸ್ತಕಗಳೆ.
ಆದರೆ ಅಲ್ಲಿಯ ವ್ಯವಸ್ಥೆ ಸರಿ ಇಲ್ಲ . ಅಲ್ಲಿ ಪುಸ್ತಕದ ಬಗ್ಗೆ ಸರಿಯಾಗಿ ಗೊತ್ತಿದ್ದವರು ಇಲ್ಲ.

ಸಾಧ್ಯವಾದರೆ ನಾನೇ ಅದನ್ನು ಸರಿ ಮಾಡಬೇಕು ಅಂತ ಒಮ್ಮೊಮ್ಮೆ ಅನ್ನಿಸಿ ಬಿಡುತ್ತದೆ.

ಆದರೆ ನಾನು ಈಗ ಅಲ್ಲಿಯ ನೌಕರ ಅಲ್ಲ. ಅಧಿಕಾರವೂ ಇಲ್ಲ.
**********


ಈಗ ರಾತ್ರಿ ಹನ್ನೆರಡು ಗಂಟೆ.
ಫಕ್ಕನೆ ಎಚ್ಚರ‌ವಾಯಿತು.

ಈತ್ತೀಚೆಗೆ ಪ್ರತೀದಿನ ಹಾಗೆ.
ರಾತ್ರಿ ಎಚ್ಚರವಾಗುತ್ತದೆ.
ಇವಳು,

 “ರಾತ್ರಿ ಅಂತ ನೋಡದೇ ನೀವು ಯಾರು ಯಾರಿಗೋ ಮೆಸೇಜು ಮಾಡುತ್ತೀರಿ.
 ಇಲ್ಲದ ತೊಂದರೆ ತಂದುಕೊಳ್ಳುತ್ತೀರಿ. ಮತ್ತೆ ತಲೆಬಿಸಿ ಮಾಡಿಕೊಳ್ಳುವುದು.”
ಎಂದು ನನ್ನ ಮೊಬೈಲನ್ನು ಅಡಗಿಸಿ ಇಟ್ಟಿದ್ದಳು.

ನಾನು ಮೆಲ್ಲಗೆ ಅವಳು ಮಗ್ಗುಲಾದಾಗ ಎಚ್ಚರಾಯಿತು ಎಂದು ತಿಳಿದು, ಕೇಳಿದೆ

“ನನ್ನ ಮೊಬೈಲು ಎಲ್ಲಿ?”

ಅವಳು ಜೋರುಮಾಡಿದಳು

 “ಸುಮ್ಮನೇ ಮಲಗಿಕೊಳ್ಳಿ. ನಿದ್ದೆ ಬರುತ್ತದೆ”.

“ಇಲ್ಲ.  ನಾನು ಯಾರಿಗೂ ಮೆಸೇಜು ಮಾಡುವುದಿಲ್ಲ . ಸ್ವಲ್ಪ ಬರೆಯಬೇಕಿತ್ತು”

ನಾನು ಹಾಗೆಯೇ. ಕೆಲವು ಸಲ ಭಾವೋದ್ವೇಗಕ್ಕೆ ಒಳಗಾಗಿ ಹಾಗೆ ಮಾಡಿದ್ದೆ.

“ಇಲ್ಲ  ಈಗ ರಾತ್ರಿ . ಬೇಡ . ಏನಿದ್ದರು ಬೆಳಗಾದ ಮೇಲೆ”

ನಾನು ಮತ್ತೆ ಗೋಗರೆದೆ.

“ ಬೇಡ . ಈಗಲೇ ಬರೆಯುತ್ತೇನೆ “
ಅವಳಿಗೆ ಏನೆನ್ನಿಸಿತೋ ?

ತನ್ನ ಹಾಸಿಗೆಯ ಅಡಿಯಲ್ಲಿ ಅಡಗಿಸಿ ಇಟ್ಟ ನನ್ನ ಮೊಬೈಲನ್ನು ನನಗೆ ಕೊಟ್ಟು
ಹೇಳಿದಳು,

“ತಗೊಳ್ಳಿ.  ಏನು ಬೇಕಾದರೂ ಮಾಡಿ. ನೀವು ಹೇಳಿದ್ದು ಕೇಳುವವರಲ್ಲ”

“ಇಲ್ಲ ನಾನು ಏನೂ ಮಾಡುವುದಿಲ್ಲ . ಸುಮ್ಮನೇ ಬರೆಯುತ್ತೇನೆ”.
********


ಮುಂದುವರಿಯುತ್ತದೆ…………..

ಶನಿವಾರ, ಆಗಸ್ಟ್ 25, 2018

ದಿನೇಶ ಉಪ್ಪೂರ:
#ಸಂಸ್ಕಾರ
ಕತೆಗೊಂದು ಕೊಂಡಿ

ಬೆಳಿಗ್ಗೆ ಬೆಳಿಗ್ಗೆ ಪೋನ್ ಕಿರುಚಿತು.

“ಹಲೋ……”

ಯಾರ್ರೀ ಅದು?  ಫೇಸ್ ಬುಕ್ ಲ್ಲಿ ದೊಡ್ಡದಾಗಿ ಒಂದು ಕತೆ ಬರ್ದು ಬಿಟ್ಟು, ಅದು ನಿಮ್ದೇ ಕತೆ ಅಂತ ಬೇರೆ ಹಾಕಿದ್ದೀರಲ್ಲ? ನಿಮಗೆ ತಲೆಗಿಲೆ ಸರಿ ಇಲ್ವಾ?

“ಯಾವ ಕತೆ ಸರ್? ನೀವು ಯಾರು ಮಾತಾಡುವುದು? ನಿಮಗೆ ಯಾರು ಬೇಕಿತ್ತು?”

“ನನಗೆಲ್ಲಾ ಗೊತ್ರಿ. ನನಗೆ ಅವಮಾನ ಮಾಡಬೇಕಂತಾನೆ ನೀವು ಹೀಗೆ ಬರೆದಿದ್ದು. ನಾನು ನಿಮ್ಮನ್ನು ಹೀಗೆ ಬಿಡುವುದಿಲ್ಲ. ನಿಮ್ಮ ಮೇಲೆ ಮಾನ ನಷ್ಟ ಮೊಕದ್ದಮೆ ಹಾಕ್ತೇನೆ. ಕೋರ್ಟ್ಗೆ ಮನೆಗೆ ಓಡಾಡ್ಸ್ ತೇನೆ.”

ಕೋರ್ಟ್ ನ ಸುದ್ದಿ ಕೇಳಿ ನನಗೆ ಸರಿಯಾಗಿ ಎಚ್ಚರವಾಯಿತು.

“ಸರ್, ನೀವು ಯಾರು? ನಿಮಗೆ ಏನು ಬೇಕು?”

“ಅದೇ ಸಂಸ್ಕಾರ ಅಂತ ಫೇಸ್ ಬುಕ್ ಕತೆ ಬರ್ದೀದಿರಲ್ಲ ನೀವೇ ತಾನೆ?”

“ಹೌದು.”

“ಮತ್ತೆ ನನ್ನದೇ ಕತೆ ಅಂತ ಬರ್ದಿದ್ದೀರಿ?”

ನನಗೆ ವಿಷಯ ಅರ್ಥವಾಯಿತು.

“ ಅದು ಹಾಗಲ್ಲ ಸಾರ್, ನೀವು ಇದನ್ನು ಇನ್ನೂ ಚೆನ್ನಾಗಿ…..”

“ಅದೆಲ್ಲ ಗೊತ್ತಿಲ್ಲರೀ ನಂಗೆ. ಅಲ್ಲ, ನನ್ನನ್ನು ಅಷ್ಟು ಕೆಟ್ಟದಾಗಿ ಚಿತ್ರಣ ಮಾಡೋದೇನ್ರಿ? ಕಾಲಕ್ಕೆ ಸರಿಯಾಗಿ ಹೊಂದ್ಕೋಬೇಕಪ್ಪಾ”

“ ಸರ್ , ನೀವು ಯಾವ ಪಾತ್ರ…..ಸರ್?

“ಅದೇ ಮಗ …… ಸದಾಶಿವ..”

“ಬೇಡ ಸರ್,  ನೀವು ಅಡಿಗರ ಪಾತ್ರ ತಗೊಳ್ಳಿ. ಅವರೇ ಕತೆಯ ಕೇಂದ್ರ ಬಿಂದು... ಅಲ್ವಾ?”

“ಬೇಡಾರಿ. ಅವರನ್ನು ನೀವು ಕೊಂದೇ ಬಿಟ್ರಲ್ಲ . ಇನ್ನೇನು ಮಾಡೋಕಾಗತ್ತೆ?”

ಹಾಗಾದ್ರೆ ಸೊಸೆಯ ಪಾತ್ರ…..

“ಬೇಡಾರಿ, ಈಗಿನ್ ಕಾಲದಲ್ಲಿ ಹೆಣ್ಮಕ್ಕಳನ್ನು ಬದಲಾಯಿಸುವುದು ಕಷ್ಷ. ಅದು ಬೇಡ”

“ಹಾಗಾದ್ರೆ ಆ ಅಡಿಗರ ಮೊಮ್ಮಗಳು ? …...‌ಆದು ಅಮೇರಿಕಾದಿಂದ ಅಮ್ಮನೊಟ್ಟಿಗೆ ಕೈ ಹಿಡಿದು ಬರತ್ತಲ್ಲಾ . ಅದು …?”

“ಅದ್ಯಾಕ್ರಿ ? ಮಣ್ಣಿಗೆ.  ಒಂದೇ ಒಂದು ಡೈಲಾಗಿಲ್ಲ”

“ಇಲ್ಲ ಸರ್, ಅದಕ್ಕೆ ಮುಂದೆ ಒಳ್ಳೆಯ ಅವಕಾಶ ಇದೆ.”

ಪೋನ್ ಕಟ್ಟಾಯ್ತು.

“ಅಯ್ಯಬ್ಬ”

ಎಂದು ನೆಮ್ಮದಿಯ ನಿಟ್ಟುಸಿರು ಬಿಟ್ಟೆ.


**************

ದಿನೇಶ ಉಪ್ಪೂರ

ಕಥನದೊಳಗೆ.

*#ಸಂಸ್ಕಾರ* ಕತೆಗೆ

*ಎರಡನೇ ಕೊಂಡಿ*

ಪೋನ್ ರಿಂಗ್ ಆಯ್ತು.

ನಾನು ಪುನಃ ಇದೇನಪ್ಪಾ ಅಂತ ಹೆದರುತ್ತಲೇ ಎತ್ತಿಕೊಂಡೆ.

“ಸರ್ , ನಾನು ಫೇಸ್ ಬುಕ್ ಲ್ಲಿ ನೀವು ಬರೆದ ನಿಮ್ಮ ಸಂಸ್ಕಾರ ಕತೆ ಓದಿದೆ. ನಾನೂ ಅದರಲ್ಲಿ ಬಂದ ಸದಾಶಿವನ ಪಾತ್ರದ ಹಾಗೆ. ತುಂಬಾ ಆಸಲೇಶನ್ ಸರ್ . ನನ್ನ ಅಪ್ಪ ಅಮ್ಮ ಊರಲ್ಲಿ ಇಬ್ಬರೇ ಇದ್ದಾರೆ. ನನ್ನ ಜೊತೆಗೆ ಬಂದು ಇರಲು ಒಪ್ಪುವುದಿಲ್ಲ. ನನಗೂ ಅಲ್ಲಿ ಹೋಗಿ ಇರಲಿಕ್ಕೆ ಆಗುತ್ತಿಲ್ಲ. ನನ್ಬ ಹೆಂಡತಿಯೂ ದುಡಿಯುತ್ತಾ ಇದ್ದಾಳೆ. ತುಂಬಾ ಕಾಂಪಿಟೀಶನ್ ಯುಗ ಅಲ್ವಾ ಸರ್. ನೀವು ಒಟ್ಟಾರೆ ಏನೋ ಬರೆದ್ರಿ ಅಂತ ನಾನು ಹೇಳುವುದಲ್ಲ. ನೋಡಿ ಸರ್ , ನಾನು ನನ್ನ ಮಗನಿಗೆ ಎಲ್ ಕೆ ಜಿ ಗೆ ಸೇರಿಸ್ಲಿಕ್ಕೆ ಎರಡು ಲಕ್ಷ ಡೆಪೋಸಿಟ್ ಮಾಡಿ ಬಂದೆ. ಮತ್ತೆ ಒಬ್ಬ ಮಗಳು ಇದ್ದಾಳೆ.ಅವಳ ಅವಶ್ಯಕತೆ ಪೂರೈಸಲಿಕ್ಕೆ ಈಗಲೇ ಕಷ್ಟ ಆಗ್ತಿದೆ. ಇಂತಹ ಕಂಡೀಶನ್ ನಲ್ಲಿ ಅಪ್ಪ ಅಮ್ಮ ಇದ್ದಲ್ಲಿಗೆ ಹೋಗಿ ಇರುವುದು ಸಾಧ್ಯವಾ? “

ನಾನು ಸುಮ್ಮನಿದ್ದೆ.

“ಪ್ರಯತ್ನಿಸಿದರೆ ಭಾವನಾತ್ಮಕವಾಗಿ ಬರೆಯುವುದು ಸುಲಭ. ಅಲ್ವ ಸರ್.”

“…………..”

“ಬೇಸರಿಸಬೇಡಿ”

“ನೋಡಿ,  ನನ್ನ ಹತ್ರ ಇದಕ್ಕೂ ಒಂದು ಸಲಹೆ ಇದೆ. ಆದರೆ ಅದು ನಿಮಗೆ ಹೊಂದಿಕೆ ಆಗುತ್ತಾ ಇಲ್ವಾ ಗೊತ್ತಿಲ್ಲ”

“ಹೇಳಿ ಸರ್,  ಅದರಿಂದ ನನ್ನ ಸಮಸ್ಯೆ ಪರಿಹಾರ ಆಗುತ್ತದೆ ಅನ್ನಿಸಿದರೆ ಖಂಡಿತಾ ಮಾಡ್ತೇನೆ”

“ನಿಮ್ಮ ಹೆಂಡ್ತಿಯೂ ದುಡಿಯುತ್ತಾ ಇದ್ದಾರೆ ಅಂದ್ರಿ ಅಲ್ವಾ?”
“ಹೌದು.”

“ಹಾಗಾದರೆ ನೀವು ನಿಮ್ಮ ಮಕ್ಕಳನ್ನು ಅವರ ಸುಪರ್ದಿಗೆ ಒಪ್ಪಿಸಿ, ಅವರನ್ನು ಕನ್ವಿನ್ಸ್ ಮಾಡಿ ಊರಿಗೆ ಬಂದು ಬಿಡಿ. ನಿಮ್ಮ ತಂದೆತಾಯಿಗಳ ಸೇವೆ ಮಾಡಿ. ಅವರ ಕಾಲದ ನಂತರ ಪುನಃ ಹೋಗಿ ನಿಮ್ಮವರನ್ನು ಕೂಡಿಕೊಂಡರೆ ಆಯ್ತು.”

“ಸಲಹೆ ಒಳ್ಳೆಯದೇ. ಆದರೆ ಅನುಸರಿಸುವುದು ಅಷ್ಟು ಸುಲಭ ಅಲ್ಲ ಸರ್”

ನಾನೇ ಪೋನ್ ಇಟ್ಟು ಬಿಟ್ಟೆ.


******************


*ಮೂರನೇ ಕೊಂಡಿ*

ಮತ್ತೆ ಪೋನ್

ಎತ್ತಿಕೊಂಡೆ

“ ಹಲೋ ಅಂಕಲ್ , ನಾನು ವರುಣ್ ಅಂತ ಬೆಂಗಳೂರ್ ನಿಂದ ಮಾತಾಡ್ತಿದೀನಿ. ನಿಮ್ಮ ಸಂಸ್ಕಾರ ಕತೆ ಹೇಗೋ ಕಣ್ಣಿಗೆ ಬಿತ್ತು. ಓದಿದೆ.”

“…,.............”

“ತುಂಬಾ ಭಾವುಕನಾಗಿದೀನಿ ಅಂಕಲ್. ನಮ್ಮಪ್ಪ ಹಳ್ಳಿಯಲ್ಲಿದ್ದ ನಮ್ಮ ಹಿರಿಯರ ಆಸ್ತಿಯನ್ನೆಲ್ಲ ಮಾರಿಬಿಟ್ಟ. ನಾವು ಚಿಕ್ಕವರಿರುವಾಗ ಅಲ್ಲೆಲ್ಲ ಹೋಗಿ ಬರ್ತಿದ್ವಿ. ನಂಗೆ ಬಹಳ ಇಷ್ಟವಾದ ಜಾಗ ಅದು. ಏನೋ ಅಪ್ಪ ಹಣದ ವಿಷಯದಲ್ಲಿ ದೊಡ್ಡಪ್ಪನ ಜೊತೆಗೆ ಜಗಳ ಮಾಡಿಬಿಟ್ಟು , ಪಾಲು ತಗೊಂಡು ಅದನ್ನೆಲ್ಲ ಮಾರಿಬಿಟ್ಟರು. ದೊಡ್ಡಪ್ಪನೂ ಆ ಹಳ್ಳಿಬೇಡ ಅಂತ ಅದನ್ನು ಮಾರಿಬಿಟ್ಟು ಪೇಟೆ ಹತ್ರ ಮನೆ ಮಾಡ್ಕೊಂಡ್ ಇದಾರೆ.
ನಿಮ್ಮ ಕತೆ ಓದುತ್ತಾ ಇದ್ದಹಾಗೆ ಅದೆಲ್ಲ ಇದ್ದಿದ್ರೆ …. ಅಂತ ಅನ್ನಿಸಿ ನಂಗೆ ಕಣ್ಣಲ್ಲಿ ನೀರು ಬಂತು.

“ಮಗೂ, ಇದಕ್ಕೆ ನನ್ನ ಹತ್ರ ಒಂದು ಪರಿಹಾರ ಇದೆ.”

“ಏನು ಅಂಕಲ್?”

“ನಿಮ್ಮ ತಂದೆಯವರು ಮುಂದೆ ರೇಟ್ ಬರುತ್ತದೆ ಅಂತ ಬೆಂಗಳೂರಲ್ಲೋ ಆಸುಪಾಸಲ್ಲೋ ಒಂದಷ್ಟು ಸೈಟ್ ತೆಗೆದು ಹಾಕಿಟ್ಟಿರಬಹುದು ಅಲ್ವಾ?”

“ಹೌದು. ಇದೆ ಅಂಕಲ್”

“ಸ್ವಲ್ಪ ಪ್ರೆಶರ್ ಹಾಕು. ಅದನ್ನು ಮಾರಿಬಿಟ್ಟು ನಿಮ್ಮ ಹಿರಿಯರು ಇದ್ದ ಜಾಗ ಮನೆ ಮತ್ತೆ ಕೊಂಡುಕೊಳ್ಳುಕ್ಕೆ ಆಗುತ್ತಾ ನೋಡು.ಆದ್ರೆ ಈಗ ಅದಕ್ಕೆ ಬೆಲೆ ಇರದೇ ಇರಬಹುದು. ಹಳ್ಳಿ ಕೊಂಪೆ ಆಗಿರಬಹುದು. ನೀನು ಮುದುಕ ಆದಾಗ ಅದರ ನಿಜವಾದ ಬೆಲೆ ನಿಂಗೆ ಗೊತ್ತಾಗುತ್ತದೆ”

“ಆಯ್ತು ಅಂಕಲ್ . ತುಂಬಾ ಥ್ಯಾಂಕ್ಸ್”


*************

*ಕೊನೆಯ ಕೊಂಡಿ*

ಕಾಲಿಂಗ್ ಬೆಲ್ ಆಯ್ತು.

ಹೋಗಿ ಬಾಗಿಲು ತೆರೆದೆ.

ನಮ್ಮ ಕಾಲೋನಿಯಲ್ಲೇ ನಾಲ್ಕು ಮನೆ ಆಚೆಗೆ ಇದ್ದ ಮುದುಕರೊಬ್ಬರು ನಗುತ್ತಾ ನಿಂತಿದ್ದರು.

“ಬನ್ನಿ , ಬನ್ನಿ “

ಅಂತ ಒಳಗೆ ಕರೆದೆ.

“ಇರಲಿ,  ಇರಲಿ”

ಅನ್ನುತ್ತಾ ಅವರು ಬಂದು ಸೋಫಾದ ಮೇಲೆ ಕುಳಿತರು.

“ನಾನು ನಿಮ್ಮ ಕತೆ ಓದಿದ್ದೆ.

“ಹೌದಾ ? ತುಂಬಾ ಕುಷಿಯಾಯ್ತು ಸರ್”

“ನೀವು ಹೇಳುವುದೆಲ್ಲ ಸರಿ. ಆದರೆ ಈಗ ನನ್ನನ್ನೇ ನೋಡಿ. ಸರಕಾರಿ ಕೆಲಸ. ಬೇರೆ ಬೇರೆ ಊರು, ಟ್ರಾನ್ಸಫರ್,  ತಿರುಗಾಟ. ಈ ಹಿರಿಯರ ಆಚಾರ ಅನುಷ್ಟಾನ ಅಂದ್ರೆ ಕಷ್ಟವೇ. ಅಲ್ವ. ನಮಗೆ ಮಾಡಬೇಕು ಅಂತಿರುತ್ತದೆ. ಆದರೆ ಹೋದಲ್ಲೆಲ್ಲ ಅದಕ್ಕೆ ಅನುಕೂಲ ಬೇಕಲ್ಲ.ಈಗ ವಯಸ್ಸಾಯ್ತು.

“………..”

“ಬೇಸರ ಮಾಡಬೇಡಿ. ತುಂಬಾ ಭಾವುಕವಾಗಿ ಬರೆದಿದ್ದೀರಿ. ನನಗೂ ಫೀಲ್ ಆಯ್ತು. ಹೇಳಿ.  ನಿಮ್ಮ ದೃಷ್ಟಿಯಲ್ಲಿ ನನ್ನಂತವನು ಏನು ಮಾಡಬಹುದು”

ಪಾಪ . ಸುಮಾರು ಎಪ್ಪತ್ತರ ಗಡಿದಾಟಿದ ಮುದುಕರು
“ಬೇಸರಪಡಿಸಿದನೇ” ಅನ್ನಿಸಿತು.

ಆದರೂ ಸ್ವಲ್ಪ ಕೂಲಾಗಿ ಹೇಳಿದೆ.

“ಯಾಕೆ ಸರ್ ? ನಿಮಗೆ ಇನ್ನು ಆಯಸ್ಸೂ ಇದೆ. ಅವಕಾಶವೂ ಇದೆ. ಮನಸ್ಸು ತೆರೆಯಬೇಕಷ್ಟೆ.”

ಅವರು ಗಟ್ಟಿಯಾಗಿ ನಕ್ಕರು.

“ನಿಮ್ಮನ್ನು ಸೋಲಿಸುವವರಿಲ್ಲಪ್ಪ”

ಎನ್ನುತ್ತಾ ಎದ್ದರು.

ನಾನು ,

“ಸ್ವಲ್ಪ ಕಾಫಿ ಕುಡಿದು ಹೋಗಿ”

ಎಂದು ಒತ್ತಾಯಿಸಿದೆ.

******************

*ಮುಗಿಯಿತು*.