ಗುರುವಾರ, ಮಾರ್ಚ್ 29, 2018

ದಿನೇಶ ಉಪ್ಪೂರ:

*ನನ್ನೊಳಗೆ- 87*

ಇತ್ತೀಚೆಗೆ ನನ್ನ ಅಪ್ಪಯ್ಯನ ಶ್ರಾದ್ಧ ಇತ್ತು. ನಮ್ಮ ಆದಿಮನೆ ಚೇರಿಕೆಯಲ್ಲೇ ನಾನೂ ಸುರೇಶಣ್ಣಯ್ಯನೂ ಅದನ್ನು
ಪ್ರತೀ ವರ್ಷದಂತೆ ಶ್ರದ್ಧೆಯಿಂದಲೇ ಮಾಡಿದೆವು. ನಮ್ಮ ಕುಲಪುರೋಹಿತರು ನಿಯೋಜಿಸಿದ ಆರ್ಡಿ ಸತ್ಯನಾರಾಯಣ ಅಡಿಗರು ಬಂದು ಬಹಳ ಚಂದದಲ್ಲಿ ಶ್ರಾದ್ಧವನ್ನು ನಮ್ಮಿಂದ ಮಾಡಿಸಿದರು. ನನಗೆ ತೃಪ್ತಿಯಾಯಿತು.

ಈಗಿನ ಕಾಲದಲ್ಲಿ ಶ್ರಾದ್ಧ ಮಾಡಬೇಕೋ ಬೇಡವೋ? ಮಾಡದಿದ್ದರೆ ಏನು? ಈಗಿನ ಮೋಡರ್ನ್ ಯುಗದಲ್ಲಿ, ಕಮರ್ಶಿಲ್ ಮನೋಭಾವನೆಯ ವರ್ತಮಾನ ಕಾಲದಲ್ಲಿ, ಹಿರಿಯರು ಸಂಬಂಧಿಗಳ ಬಗ್ಗೆ ಯೋಚಿಸಲೂ ಸಮಯ ಇಲ್ಲದ ಈ ವೇಗದ ಕಾಲದಲ್ಲಿ, ಅದರ ಪ್ರಸ್ತುತತೆ ಎಷ್ಟು? ಎನ್ನುವುದು ಬೇರೆ ವಿಷಯ.

ಈ ದಿನ ನನ್ನ ಅಪ್ಪಯ್ಯನ ದಿನ, ಇದು ಅಮ್ಮನ ದಿನ ಎಂದು ನಾನು ಆ ದಿನಗಳನ್ನು ಅವರ ನೆನಪಿಗಾಗಿ ಮೀಸಲಾಗಿಡುತ್ತಿದ್ದೇನೆ. ಈಗೀಗಂತೂ ನಮ್ಮ ಖಾಯಂ ಪುರೋಹಿತರು, ಅವರಿಗೆ ಆ ದಿನ ಎರಡು ಮೂರು ಕಡೆ ಕಾರ್ಯಕ್ರಮಗಳು ಇರುತ್ತಿದ್ದು, ಅವರಿಗೆ ಪುರಸೊತ್ತಿಲ್ಲ ಎಂದೋ, ನಮ್ಮ ಮನೆ ದೂರದ ಹಳ್ಳಿಯಲ್ಲಿ ಇದೆ  ಎಂದೋ, ಅವರ ಪರಿಚಯದ ಯಾರು ಯಾರಿಗೋ ಹೇಳಿಸಿ, ನಮ್ಮ ಮನೆಯ ಶ್ರಾದ್ಧದ ಪೌರೋಹಿತ್ಯವನ್ನು ವಹಿಸಿಬಿಡುತ್ತಿದ್ದರು. ಹಾಗಾಗಿ ನಾವು ಪ್ರತೀ ವರ್ಷವೂ ಬೇರೆ ಬೇರೆ ಪುರೋಹಿತರನ್ನು ಕಾಣುವಂತಾಗಿದೆ. ಕೆಲವೊಮ್ಮೆ ಬಂದವರಿಗೆ ಶ್ರಾದ್ಧದ ಬಗ್ಗೆ ಅಷ್ಟು ಗೌರವ ಇಲ್ಲದೇ, ಅವರಿಗೆ ಸರಿಯಾದ ಉಚ್ಛಾರಣೆಯೂ ಬರದೇ, ಹೇಗೆ ಹೇಗೋ ಶ್ರಾದ್ದ ಆದದ್ದೂ ಇದೆ. ಆದರೂ ಆ ದಿನವೊಂದು ಹಿರಿಯರ ನೆನಪಿನಲ್ಲಿ, ಮನೆಯಲ್ಲಿ ಮನೆಯವರ, ಬಂಧುಗಳ ಜೊತೆಯಲ್ಲಿ ಆ ದಿನ ಕಳೆಯಬೇಕು ಎಂಬುದು ನನ್ನ ತೀರ್ಮಾನ.

ಮತ್ತೊಮ್ಮೆ ಅಪ್ಪಯ್ಯ ನೆನಪಾದರು. ಅಪ್ಪಯ್ಯ ಇದ್ದಾಗ, ಅವರ ಮೇಳ ಊರಿನ ಹತ್ತಿರದಲ್ಲಿ ಎಲ್ಲಿಯಾದರೂ ಇದ್ದರೆ, ಮನೆಗೇ ಬಂದೇ ಅವರ ಅಪ್ಪಯ್ಯನ, ಅಮ್ಮನ ಶ್ರಾದ್ಧವನ್ನು ಮಾಡುತ್ತಿದ್ದರು. ಆದರೆ ದೂರದ ಊರಿನಲ್ಲಿದ್ದರೆ,  ಮೇಳದ ಆಟಕ್ಕೆ ರಜೆಯನ್ನು ಹಾಕಿ ಬರಬೇಕಾಗಿದ್ದರಿಂದ, ಆಟ ಇರುವ ಊರಿನ ಹತ್ತಿರದಲ್ಲಿ ಎಲ್ಲಾದರೂ ಅನುಕೂಲವಾದ ಸ್ಥಳದಲ್ಲಿ, ಮೊದಲೇ ಅಲ್ಲಿನ ಒಬ್ಬ ಪುರೋಹಿತರಿಗೆ ತಿಳಿಸಿ ಶ್ರಾದ್ಧವನ್ನು ಮಾಡುತ್ತಿದ್ದರು.

ನಮ್ಮ ಮನೆಯಲ್ಲಿ  ಮಾಡುವಾಗ ನಮ್ಮ ಕುಲಪುರೋಹಿತರಾದ ಹರಿಕೃಷ್ಣ ಅಡಿಗರು ಶ್ರಾದ್ಧ ಮಾಡಿಸಲು ಬರುತ್ತಿದ್ದರು. ಹರಿಕೃಷ್ಣ ಅಡಿಗರು ಎತ್ತರ ಮೈ ಕಟ್ಟಿನ ಕಪ್ಪಗಿನ ಸುಂದರ ಆಳು. ತಲೆಯಲ್ಲಿ ಜುಟ್ಟು. ಮುಖ ನೋಡಿದರೆ ಗೌರವದಿಂದ ನಮಸ್ಕರಿಸುವ ಎನ್ನಿಸುವ ಪ್ರಸನ್ನತೆ.

ಅವರು ನಮ್ಮ ಮನೆಯ ಪೌರೋಹಿತ್ಯದ ಯಾವ ಕಾರ್ಯಕ್ರಮವನ್ನೂ ತಪ್ಪಿಸಿಕೊಂಡವರಲ್ಲ. ಅಡಿಗರು ಅಂದರೆ ನಮಗೆಲ್ಲರಿಗೂ ತುಂಬಾ ಗೌರವ. ಅವರು ಬೆಳಿಗ್ಗೆ ಹಾಲಾಡಿಯ ದೇವಸ್ಥಾನದಲ್ಲಿ ನಿತ್ಯದ ಪೂಜೆಯನ್ನು ಮುಗಿಸಿಕೊಂಡು, ನಡುಮಧ್ಯಾಹ್ನದ ಹೊತ್ತಿಗೆ ಸೈಕಲ್ ಮೇಲೆ ಒಂದು ಅರ್ಧ ದೂರ ಯಜ್ಞನಾರಾಯಣ ಅಡಿಗರು ಎನ್ನುವವರ ಮನೆಯವರೆಗೆ ಬಂದು, ಅವರ ಹಾಡಿಯ ಬದಿಯಲ್ಲಿ ಮರದ ಕೆಳಗೆ ಸೈಕಲ್ ನ್ನು ನಿಲ್ಲಿಸಿ, ನಂತರ ಗದ್ದೆಗೆ ಇಳಿದು ಬಯಲಿನ ಕಂಟದ ಮೇಲೆ, ಮಧ್ಯಾಹ್ನದ ಉರಿ ಬಿಸಿಲಿನಲ್ಲಿ ನಡೆದುಕೊಂಡು ಬಳಲಿ ಬರುತ್ತಿದ್ದರು. ಬರುವಾಗಲೇ ಬಾವಿಕಟ್ಟೆಯಲ್ಲಿ ಕೈಕಾಲುಗಳನ್ನು ತೊಳೆದುಕೊಂಡು, ಚಪ್ಪಲಿಯನ್ನು ಬಾಗಿಲಿನ ಹೊರಗೆ ಬಿಟ್ಟು, ಕಾಲಿನ ಹೊಯಿಗೆಯನ್ನು ಅಲ್ಲಿಯೇ ಇದ್ದ ಗೋಣಿಯ ಹಾಸಿಗೆಗೆ ಚೆನ್ನಾಗಿ ಒರೆಸುವರು, ಹೆಗಲಿನಲ್ಲಿರುವ ಪಾಣಿ ಪಂಚೆಯಲ್ಲಿ ವೇಗವಾಗಿ ತಿರುಗಿಸಿ, "ಹ್ವಾಯ್ " ಎನ್ನುತ್ತಾ ಗಾಳಿ ಬೀಸಿಕೊಳ್ಳುತ್ತಾ ಬಂದು "ಎಂತಾ ಸೆಖೆ ಮರ್ರೆ" ಎಂದು ಚಾವಡಿಯಲ್ಲಿ, ಬಣ್ಣದ ಚಾಪೆಯ ಮೇಲೆ ಆರಾಮವಾಗಿ, ಕೈಗಳನ್ನು ಹಿಂದಕ್ಕೆ ಆಧರಿಸಿ ಕುಳಿತುಕೊಂಡು, ಜಗಲಿಯಲ್ಲಿ ಉದ್ದಕ್ಕೆ ಕಾಲುಗಳನ್ನು ಚಾಚಿಕೊಳ್ಳುತ್ತಿದ್ದರು.

 ಅವರು ಕುಳಿತುಕೊಳ್ಳುವ ಮೊದಲೇ, ಚಾವಡಿಯಲ್ಲಿ ಬಣ್ಣದ ಚಾಪೆಯನ್ನು ನಾವು ಯಾರಾದರೂ ಹಾಸಿಡುತ್ತಿದ್ದೆವು. ಮತ್ತು ಅವರ ಎದುರಿಗೆ, ಒಂದು ತಟ್ಟೆಯಲ್ಲಿ ಬೆಲ್ಲ, ಒಂದು ಚೊಂಬಿನಲ್ಲಿ ನೀರು, ಲೋಟ ಇರಿಸುತ್ತಿದ್ದೆವು. ಅವರು ಒಂದು ಬೆಲ್ಲದ ಚೂರನ್ನು ಬಾಯಿಗೆ ಹಾಕಿಕೊಂಡು, ಸ್ಟೀಲಿನ ಲೋಟಕ್ಕೆ ಚೊಂಬಿನಿಂದ ನೀರನ್ನು ಬಗ್ಗಿಸಿಕೊಂಡು ಗಟಗಟನೇ ಕುಡಿದು, " ಶ್ರಾದ್ಧಕ್ಕೆ ಎಲ್ಲಾ ರೆಡಿಯಾಯ್ತಲ್ಲ" ಎಂದು ವಿಚಾರಿಸುತ್ತಿದ್ದರು. 

ಅಷ್ಟು ತಡವಾಗಿ ಬಂದರೂ, ಅವರು ಬಂದವರೇ ದರ್ಭೆಯನ್ನು ಬೇಕಾದ ಅಳತೆಗೆ ಪಟಪಟನೇ ಕತ್ತರಿಸಿ ಇಟ್ಟು, ಸ್ನಾನ ಮಾಡಿ ಐದು ನಿಮಿಷದಲ್ಲಿ ದೇವರ ಕೋಣೆಗೆ ಬಂದು ಕುಳಿತು, ಮಂತ್ರ ಹೇಳಲು ರೆಡಿ ಆಗಿಯಾಯಿತು. ನಂತರ ಇಟ್ಟಿದ್ದ ಎಲ್ಲ ಸಲಕರಣೆಗಳ ಮೇಲೆ ಒಮ್ಮೆ ಹೀಗೆ ಕಣ್ಣಾಡಿಸಿ, "ಹೋ ಬಾಳೆ ಹಣ್ಣು ಬೇಕಿತ್ತಲ್ಲ". "ಎಲೆಯಡಿಕೆ ಎಲ್ಲಿ?" ಎಂದು ಬೇಕಾಗಿರುವುದನ್ನು ತರಿಸಿಕೊಂಡು, ಗಟ್ಟಿಯಾಗಿ ಮಂತ್ರೋಚ್ಚಾರಣೆಯನ್ನು ಮಾಡುತ್ತಾ ರಂಗೋಲಿ ಹಾಕಿ ಶುರುಮಾಡುತ್ತಿದ್ದರು. ಅಪ್ಪಯ್ಯನಿಗೆ ಆಗಾಗ "ಹಾಂ. ಸವ್ಯಾ, ಜನಿವಾರ ಬಲಕ್ಕೆ ಮಾಡಿಕೊಳ್ಳಿ, ಅಪಸವ್ಯಾ, ಜನಿವಾರ ಎಡಕ್ಕೆ ಮಾಡಿಕೊಳ್ಳಿ" ಎನ್ನುತ್ತಾ ನಿರ್ದೇಶನವನ್ನು ನೀಡುತ್ತಿದ್ದರು. ಅವರು "ಆಚಮನ ಮಾಡಿ, ಪವಿತ್ರ ಹಾಕಿಕೊಳ್ಳಿ, ಪ್ರಾಣಾಯಾಮ ಮಾಡಿ, ಹತ್ತು ಗಾಯತ್ರಿ, ಪಂಚಾಕ್ಷರಿ, ಅಷ್ಟಾಕ್ಷರಿ ಹೇಳಿ" " ಅಲ್ಲಿಗೆ ಅಕ್ಷತೆ, ಇಲ್ಲಿಗೆ ಎಳ್ಳು, ಇಲ್ಲಿ ಗಂಧ ತುಳಸಿ ಹಾಕಿ" ಎಂದಾಗ ಅಪ್ಪಯ್ಯ ಮಂತ್ರಮುಗ್ಧರಂತೆ ಅವರು ಹೇಳಿದ ಹಾಗೆ ಮಾಡುತ್ತಿದ್ದರು.

ಕೊನೆಯಲ್ಲಿ ಮೂರು ತಲೆಮಾರಿನ ಪಿತೃಗಳಿಗೆ ಅವರ ಗೋತ್ರ, ಹೆಸರು ಹೇಳಿ, ಪಿಂಡ ಹಾಕಿ "ಓಂ ನಮೋ ನಾರಾಯಣಾಯ" ಎಂದು ಅಪ್ಪಯ್ಯ ಹೇಳುವುದು. ನಂತರ ಎಲ್ಲ ಕ್ರಮಗಳೂ ಮುಗಿದು, ಕಾಗೆಗೆ ಬಾಳೆಎಲೆ ಹೊರಗೆ ಇಡುವವರೆಗೂ ನಾವು ಕಾದು ಕುಳಿತಿರುತ್ತಿದ್ದೆವು. ನಂತರ ಅಪ್ಪಯ್ಯ ಪುರೋಹಿತರಿಂದ ಮಂತ್ರಾಕ್ಷತೆ ಪಡೆದು ಹಾಕಿಸಿಕೊಂಡ ನಾವು ಒಬ್ಬೊಬ್ಬರೇ ಹೋಗಿ ಅಪ್ಪಯ್ಯನಿಗೆ ನಮಸ್ಕರಿಸಿ ಮಂತ್ರಾಕ್ಷತೆ ಹಾಕಿಸಿಕೊಳ್ಳುತ್ರಿದ್ದೆವು. ನಂತರ ಚಾವಡಿಯಲ್ಲಿ, ಜಗಲಿಯಲ್ಲಿ ಕಸಗುಡಿಸಿ, ಊಟಕ್ಕೆ ಎಲೆ ಹಾಕುತ್ತಿದ್ದೆವು.

ನಂತರ ಅಪ್ಪಯ್ಯ ಹೊರಗೆ ಬಂದು ನಗುಮುಖದಿಂದ ಬಂದ ಎಲ್ಲ ನೆಂಟರನ್ನು, ಬ್ರಾಹ್ಮಣರನ್ನೂ ನೋಡಿ,  "ಬಂದ್ರ್ಯಾ?"  "ಬಂದ್ರ್ಯಾ? " "ಬನ್ನಿ ಊಟಕ್ಕೇಳಿ" ಎಂದು ಉಪಚರಿಸಿ ಮಾತಾಡಿಸುತ್ತಿದ್ದರು. ಊಟ ಉಪಚಾರ ಎಲ್ಲ ಆಗಿ ಊಟವಾದ ಮೇಲೆ, ನಂತರ ದಕ್ಷಿಣೆ ಕೊಡುವ ಕಾರ್ಯಕ್ರಮ ಇಟ್ಟುಕೊಳ್ಳುತ್ತಿದ್ದರು. ಆಗ ಬಂದ ಎಲ್ಲರನ್ನೂ ಮತ್ತೊಮ್ಮೆ ಮಾತಾಡಿಸಿ, ಗುರುತು ಇಲ್ಲದಿದ್ದರೆ, "ನಿನ್ನ  ಮನೆ ಎಲ್ಲಿ? ಯಾರ ಮಗ?" ಎಂದೆಲ್ಲಾ ಕೇಳಿ ವಿಚಾರಿಸಿಕೊಳ್ಳುತ್ತಿದ್ದರು. ನಂತರ ಮಕ್ಕಳಾದ ನಮಗೆಲ್ಲರಿಗೂ ದಕ್ಷಿಣೆ ಸಿಗುತ್ತಿತ್ತು.

ನಮ್ಮ ಪುರೋಹಿತರು ಹರಿಕೃಷ್ಣ ಅಡಿಗರು ಅಂಗಿಯನ್ನು ಹಾಕಿದ್ದು ನಾನು ನೋಡಲೇ ಇಲ್ಲ. ಒಂದು ವೇಷ್ಟಿಯನ್ನು ಉಟ್ಟು, ಹೆಗಲಮೇಲೆ ಒಂದು ಪಾಣಿ ಪಂಚೆಯನ್ನು ಹಾಕಿಕೊಂಡು ಎಲ್ಲಿಂದ ಎಲ್ಲಿಯವರೆಗೂ ಅವರು  ಸೈಕಲ್ಲಿನಲ್ಲೇ ಹೋದಾರು. ಒಂದು ದರ್ಪ ಇಲ್ಲ. ದೌಲತ್ತು ಇಲ್ಲ. ಹೀಗೆಯೇ ಆಗಲೇಬೇಕು ಎಂಬ ಹಠ ಆದೇಶ ಇಲ್ಲ. ಯಾವ ಪರಿಸ್ಥಿತಿಗೂ ಹೊಂದಿಕೊಳ್ಳುವ ಸರಳ ಜೀವಿ. ಎಲ್ಲದಕ್ಕೂ "ಆಯ್ತು" "ಕಾಂಬ" "ಮತ್ತೆಂತ ಮಾಡೂದು" "ಸುಧಾರಿಸುವ" ಎಂಬಂತಹ ಹೊಂದಾಣಿಕೆಯ ಮಾತನ್ನೇ ಆಡುತ್ತಿದ್ದರು

ಅಪ್ಪಯ್ಯ ತೀರಿಹೋದ ನಂತರವೂ ಬಹಳ ವರ್ಷ ನನ್ನ ಅಪ್ಪಯ್ಯನ ಶ್ರಾದ್ಧ ಮಾಡಲಿಕ್ಕೂ ಅವರೇ ನಮ್ಮ ಮನೆಗೆ ಬರುತ್ತಿದ್ದರು. ನಮ್ಮ ಮನೆಯವರನ್ನೆಲ್ಲ ಅವರು ಏಕವಚನದಲ್ಲಿಯೇ ಕರೆದು ಮಾತನಾಡಿಸುತ್ತಿದ್ದುದರಿಂದ ಅವರು ಹೊರಗಿನವರು ಅಂತ ನಮಗೆ ಅನ್ನಿಸುತ್ತಲೇ ಇರಲಿಲ್ಲ. ನಮ್ಮ ಮನೆಯ ಎಲ್ಲ ದೇವರ ಕಾರ್ಯವನ್ನು ಅವರನ್ನು ಬಿಟ್ಟು ಮಾಡಿದ್ದೇ ನನಗೆ ನೆನಪಿಲ್ಲ. ಹಾಲಾಡಿಯಲ್ಲಿರುವ ಅವರ ಮನೆಗೂ ನಾನು ಆಗಾಗ ಹೋಗುತ್ತಿದ್ದೆ. ಅವರು ಕುಳಿತುಕೊಳ್ಳುವ ಭಂಗಿ, ಅವರು ಮಂತ್ರ ಹೇಳುತ್ತಿದ್ದ ಆ ಕಂಚಿನ ಕಂಠದ ಸ್ವರ ಈಗಲೂ ನೆನಪಾಗುತ್ತದೆ.

ಸೋಮವಾರ, ಮಾರ್ಚ್ 26, 2018

ದಿನೇಶ ಉಪ್ಪೂರ:

*ನನ್ನೊಳಗೆ- 86*

ನಾನು ಕಲ್ಲಟ್ಟೆಯಲ್ಲಿ ಇದ್ದು, ಗಂಟಿ ಮೇಯಿಸಿಕೊಂಡು, ಅಲ್ಲಿ ಇಲ್ಲಿ ಕೆಲಸಕ್ಕಾಗಿ ಅಲೆಯುತ್ತಿದ್ದ ಕಾಲ. ಅಮ್ಮನ ತವರು ಮನೆಯಾದ ಮಾರ್ವಿಯ ಮನೆಯಲ್ಲಿ ಸುಶೀಲಕ್ಕ ಅಂತ ಒಬ್ಬರಿದ್ದರು. ಅವರು ನನಗೆ ಅಕ್ಕ ಅಲ್ಲ. ದೂರದ ಸಂಬಂಧಿಗಳನ್ನು  ಸಂಬಂಧದ ಎಳೆಯನ್ನು ಹುಡುಕಿ ಅದರಂತೆ ಕರೆಯುವ ಬದಲು, ನಾವು ಸುಲಭದಲ್ಲಿ ಹಾಗೆ ಎಲ್ಲರಿಗೂ "ಅಕ್ಕ, ಅಣ್ಣಯ್ಯ" ಎಂದು  ಕರೆಯುತ್ತಿದ್ದೆವು.  ಅವರು ಒಮ್ಮೆ ನನಗೆ ಸಿಕ್ಕಿದವರು, "ವಂಡಾರಿನಲ್ಲಿ ಒಬ್ಬರು ಪ್ರಸಿದ್ಧ ಜ್ಯೋತಿಷಿಗಳಿದ್ದಾರೆ. ಅವರು ಹೇಳಿದಂತೆ ಆಗುತ್ತದೆ. ಹೋಗಿಬರುವ" ಎಂದು ಒತ್ತಾಯಿಸಿದರು. ನಾನು ಇದನ್ನೂ ಒಮ್ಮೆ ನೋಡಿದ ಹಾಗಾಯಿತು ಎಂದು ಒಂದು ದಿನ ಮಧ್ಯಾಹ್ನದ ಮೇಲೆ ಅವರೊಂದಿಗೆ ಬಾಯರಿಯವರ ಮನೆಗೆ ಹೋದೆ.ಅವರ ಮನೆಗೆ ನಮ್ಮ ಮನೆಯಿಂದ ಮೂರು, ಮೂರುವರೆ ಮೈಲಿ ಅಷ್ಟೆ.

ನಾವು ಹೋಗುವುದಕ್ಕೂ, ಅವರು ಮಧ್ಯಾಹ್ನ ಊಟ ಮಾಡಿ, ಚಾವಡಿಯಲ್ಲಿ ಸ್ವಲ್ಪ ಹೊತ್ತು ಮಲಗಿದ್ದು ಎದ್ದು ಹೊರಬರುವುದಕ್ಕೂ ಸರೀ ಆಯಿತು. ನಮ್ಮನ್ನು ನೋಡುತ್ತಲೇ ಬಾಯರಿಯವರು "ಹೋ ಬನ್ನಿ ಬನ್ನಿ  ಸುಶೀಲಮ್ಮಾ, ಒಳ್ಳೆಯ ಸಮಯಕ್ಕೆ ಬಂದಿದ್ದೀರಿ. ನಿಮ್ಮ ಕೆಲಸ ಆಗುತ್ತದೆ". ಎಂದರು. ಸುಶೀಲಕ್ಕ "ಅಷ್ಟು ಆದರೆ ಸೈ. ನಿಮ್ಮನ್ನೇ ನಂಬಿ ಬಂದಿದ್ದೇವೆ. ನೀವು ನಡೆಸಬೇಕು" ಎಂದು ಕೈ ಮುಗಿದರು. ನಾನೂ ಕೈ ಮುಗಿದೆ. ಆಗ ಬಾಯರಿಯವರು "ನೋಡಿ, ನಾನು ನಿದ್ರೆಯಿಂದ ಎದ್ದು ಹೊರಗೆ ಬರುವ ಸಮಯ. ಮನಸ್ಸು ಪ್ರಶಾಂತವಾಗಿದೆ. ಅಂದರೆ ಅದು ಅಷ್ಟು ಒಳ್ಳೆಯ ಗಳಿಗೆ. ಹಿಂದೆ ಎಷ್ಟೋ ಸಲ ಅದು ಸ್ಪಷ್ಟವಾಗಿದೆ. ನಾನು ಅವರಿಗೆ ಹೇಳಿದ ಭವಿಷ್ಯ ನಿಜವಾಗಿ, ಅವರೇ ಮತ್ತೆ ಬಂದು ಕಾಣಿಕೆ ಕೊಟ್ಟು ಆಶೀರ್ವಾದ ಪಡೆದು ಹೋಗಿದ್ದಾರೆ" ಎಂದರು. ಆಗಲೇ ಅವರನ್ನು ಕಾಣಲು ತುಂಬಾ ಜನ ಜಗಲಿಯಲ್ಲಿ ಸಾಲಾಗಿ ಕುಳಿತಿದ್ದರು.

ಆದರೂ ಅವರು ನಮ್ಮನ್ನು ಕರೆದು ಬಾಯಾರಿಕೆ ಕೊಡಲು ಮನೆಯವರಿಗೆ ಹೇಳಿದರು. ಮತ್ತು "ಸುಶೀಲಮ್ಮಾ, ಏನಾಗಬೇಕಿತ್ತು?" ಎಂದು ಉಪಚಾರ ಮಾಡಿದರು. ನಾನು ನನ್ನ ಜಾತಕ ತೆಗೆದು ಅವರ ಮುಂದಿನ ಟೇಬಲ್ಲಿನ ಮೇಲೆ ಇಟ್ಟು, "ನನಗೆ ಕೆಲಸ ಸಿಗುತ್ತದಾ ಅಂತ ಬೇಕಿತ್ತು" ಎಂದು ವಿನಯದಿಂದ ಹೇಳಿ, ಆಗಲೇ ಕುಳಿತುಕೊಂಡಿದ್ದ ಸುಶೀಲಕ್ಕನ ಪಕ್ಕದ ಕುರ್ಚಿಯಲ್ಲಿ ಕುಳಿತೆ. ಸುಶೀಲಕ್ಕನೂ "ಇವನಿಗೆ ಒಂದು ಎಲ್ಲಾದರೂ ಗವರ್ನ್ ಮೆಂಟ್ ಕೆಲಸ ಸಿಕ್ಕಾತ್ತಾ ಕಂಡ್ ಹೇಳಿ. ಪಾಪ, ಮಾಣಿ ಬಹಳ ಸೋತ್ ಹೋಯಿತ್ತೆ" ಎಂದು ಅನುಕಂಪ ತೋರಿಸಿದರು.

ಅವರು ಜಾತಕ ತೆಗೆದು ದೂರ ಹಿಡಿದು, ಕಿರುಗಣ್ಣು ಮಾಡಿ  ಸ್ವಲ್ಪಹೊತ್ತು ನೋಡಿ "ಏನು ತೊಂದರೆ? ಕೆಲಸ ಸಿಗಲೇ ಬೇಕಲ್ಲ" ಎಂದರು. ನನಗೆ ನಾನು ಅಲ್ಲಿ ಇಲ್ಲಿ ಕೆಲಸಕ್ಕಾಗಿ ಅಲೆದಾಡಿದ್ದು ಬೆಂಗಳೂರು ಬಿಟ್ಟು ಬಂದದ್ದು ಮುಂತಾಗಿ ಸುಮಾರು ಎರಡು ವರ್ಷದ ಬವಣೆ ಕಣ್ಣ ಮುಂದೆ ಹಾದುಹೋಯಿತು. ಅವರು ಮತ್ತೆ ಕಾಗದ ಪೆನ್ನು ತೆಗೆದುಕೊಂಡು ಏನೇನೋ ಬರೆದು ಲೆಕ್ಕ ಹಾಕಿದರು. "ನೋಡಿ, ಮುಂದಿನ ಬೇಸಿಗೆಯ ಒಳಗೆ ನಿಮಗೆ ಒಂದು ಒಳ್ಳೆಯ ಉದ್ಯೋಗವೇ ಆಗುತ್ತದೆ ಏನೂ ಹೆದರಬೇಕಾಗಿಲ್ಲ" ಎಂದರು. ಮತ್ತೇನಾದರೂ ಕೇಳಲಿಕ್ಕೆ ಉಂಟಾ? ಅಂದರು. ನನಗೆ ಮುಳುಗುವವನಿಗೆ ಆಧಾರಕ್ಕೆ ಹುಲ್ಲು ಕಡ್ಡಿ ಸಿಕ್ಕಿದಂತೆ ಎಂಬಂತೆ ಅದನ್ನು ಕೇಳಿ ಖುಷಿಯಾಯಿತು. ಆದರೂ ಮರುಕ್ಷಣಕ್ಕೆ ಅವರು ಹೇಳುವುದೆಲ್ಲ ನಿಜವಾಗುವುದಾದರೆ ಅವರು ದೇವರು ಅಂತಾಗುವುದಿಲ್ಲವೇ ಅನ್ನಿಸಿತು.

 ನಾನು ಸುಮ್ಮನೇ ಇದ್ದೆ. ಅವರು ಆಗಲೇ ಬಂದ ಎಲ್ಲರನ್ನೂ ಒಮ್ಮೆ ನೋಡಿದರು. ನಾನು ಸುಶೀಲಕ್ಕನ ಮುಖ ನೋಡಿದೆ. ಇಬ್ಬರೂ ಎದ್ದೆವು. ಅವರಿಗೆ ಎಷ್ಟು ದಕ್ಷಿಣೆ ಕೊಡಬೇಕು ಎಂದು ಕೇಳಿದೆ. ಅವರು "ಎಷ್ಟಾದರೂ ಕೊಡಿ. ಮತ್ತೆ ನಿಮ್ಮ ಕೆಲಸ ಆದ ಮೇಲೆ ಮತ್ತೆ ನೋಡುವ" ಎಂದು ಗಟ್ಟಿಯಾಗಿ ನಗಾಡಿದರು. ನನಗೆ ಅವರು ಕೊಟ್ಟ ಮಾನಸಿಕ ಧೈರ್ಯವೇ ದೊಡ್ಡ ಭರವಸೆಯಾಯಿತು. ಐವತ್ತೋ ನೂರೋ ಕೊಟ್ಟು ಸುಶೀಲಕ್ಕನನ್ನು ಮಾರ್ವಿಯ ಅವರ ಮನೆಗೆ ಬಿಟ್ಟು ನನ್ನ ಮನೆಗೆ ಬಂದೆ.

ಬರುವಾಗ ಸುಶೀಲಕ್ಕ, "ಅಷ್ಟು ಜನರು ಅವರಲ್ಲಿ ಭವಿಷ್ಯ ಕೇಳಲಿಕ್ಕೆ ಬರುತ್ತಾರೆ. ಆದರೆ ಪಾಪ, ಬಾಯರಿಯವರಿಗೂ ಕಷ್ಟ ಬಿಡಲಿಲ್ಲ. ಅವರ ಬೆಳೆದ ತಂಗಿಯರಿಗೆ ಇನ್ನೂ ಮದುವೆ ಮಾಡಲು ಅವರಿಗೆ ಆಗಲಿಲ್ಲ" ಎಂದರು. ನನಗೆ ಬೇಸರವಾಯಿತು.

ಆ ಬಾಯರಿಯವರ ತಂದೆಯವರು ದೊಡ್ಡ ನಾಗ ಪಾತ್ರಿಯಾಗಿದ್ದರಂತೆ. ಒಮ್ಮೆ ಅವರು ನಾಗ ಬನದಲ್ಲಿ ದರ್ಶನ ಪಾತ್ರಿಯಾಗಿ ಮೈಮೇಲೆ ಬಂದು ಕುಣಿಯುವಾಗ, ಪೇಟೆಯಿಂದ ಬಂದ ಯಾರೋ ಇಬ್ಬರು, "ಮೈಮೇಲೆ ಬಪ್ಪುದಾ, ಮತ್ತೆಂತದಾ? ಇದೆಲ್ಲ ಸುಳ್ಳು" ಎಂದು ನಗಾಡಿದರಂತೆ, ಆಗ ಪಾತ್ರಿಗಳು "ನಾಗಾ, ನೋಡು, ಅವರು ಹೀಗೆ ಹೇಳುತ್ತಾರಲ್ಲ" ಅಂದಾಗ, ಹಿಂದಿನ ಹುತ್ತದಿಂದ ನಿಜವಾದ ನಾಗರ ಹಾವು ಪ್ರತ್ಯಕ್ಷವಾಗಿ ಹೆಡೆ ಎತ್ತಿ ನಿಂತಿತ್ತಂತೆ. ಆಗ ತಮಾಷೆ ಮಾಡಿದವರು ಹೆದರಿ ಪಾತ್ರಿಗಳ ಪಾದಕ್ಕೆ ಅಡ್ಡಬಿದ್ದು ಶರಣಾದರಂತೆ.

ಮತ್ತೊಮ್ಮೆ ನಮ್ಮ ಮನೆಗೆ ಒಬ್ಬ ಹಾಲಕ್ಕಿಯವನು ಬಂದಿದ್ದ. "ಬೆಳಿಗ್ಗೆ ಬೆಳಿಗ್ಗೆ ಏನಪ್ಪಾ ಇವನ ರಗಳೆ?" ಎಂದು, ನಾನು ಅಮ್ಮ ಕೊಟ್ಟ ಐವತ್ತು ಪೈಸೆಯನ್ನು ಕೊಡಲು ಹೋದರೆ, ಅವನು ನನ್ನ ಮುಖ ನೋಡಿದವನೇ ಎಲ್ಲವನ್ನೂ ತಿಳಿದವನಂತೆ, "ಏನು ಸ್ವಾಮಿ, ಇಷ್ಟೇಯಾ?  ನೀವು ಉದ್ಯೋಗ ಇಲ್ಲ ಅಂತ ತಲೆಬಿಸಿ ಮಾಡುವುದಲ್ವಾ? ನೋಡಿ, ನಿಮಗೆ ಇನ್ನು ಹದಿನೆಂಟು ದಿವಸದಲ್ಲಿ ಕೆಲಸ ಆಗುತ್ತದೆ. ಆದರೆ ನೀವು ಕಪ್ಪು ಬಟ್ಟೆ ಮೈಮೇಲೆ ಹಾಕಬಾರದು ನೋಡಿ" ಎಂದ. ಮತ್ತು "ಈಗ ನೀವು ಏನಾದರೂ ಬಟ್ಟೆಯನ್ನು ನನಗೆ ನಿಮ್ಮ ಕೈಯಾರೆ ದಾನ ಕೊಡಬೇಕು" ಎಂದ.

ನಾನು ನಕ್ಕು "ಹೌದಾ? ಹೀಗೆ ಹೇಳುತ್ತಾ ಮನೆಯ ಬಾಗಿಲಿಗೆ ಎಷ್ಟೋ ಜನ ಬರುತ್ತಾರೆ. ಅವರಿಗೆಲ್ಲ ಅಂಗಿ ಪಂಚೆ ಅಂತ ಕೊಟ್ಟರೆ ನಾನೂ ನಿನ್ನ ಹಾಗೆಯೇ ಬೇಡಲು ಹೋಗಬೇಕಾದೀತು" ಎಂದು ಗಡಸಾಗಿ ಹೇಳಿದೆ. ಅವನು "ಇಲ್ಲ ಸ್ವಾಮಿ. ನಾನು ಬೆಳಿಗ್ಗೆ ಬೆಳಿಗ್ಗೆ ಹೇಳಿದ್ದು ಎಂದೂ ಸುಳ್ಳಾಗುವುದಿಲ್ಲ, ನೀವು ಬಟ್ಟೆಯನ್ನು ಕೊಡಲೇ ಬೇಕು" ಎಂದು ಒತ್ತಾಯಿಸಿದ. ಇದನ್ನೆಲ್ಲ ಕೇಳುತ್ತಿದ್ದ ಅಮ್ಮನೂ ಒಳಗಿನಿಂದಲೇ, "ಹೋಗಲಿ, ಅವನ ಹತ್ರ ನಿಂದೆಂತ ವಾದ ಮಾಣೀ?  ನಿನ್ನ ಹಳೆಯ ಅಂಗಿ ಯಾವುದಾದರೂ ಇದ್ರೆ ಕೊಡು" ಎಂದು ಕುಳಿತಲ್ಲೇ ಸಲಹೆ ಕೊಟ್ಟಳು. ನನಗೆ ಅವನ ಮುಖ ನೋಡಿ ಪಾಪ ಅನ್ನಿಸಿತು. ಅವನ ಭವಿಷ್ಯವೇ ಅವನಿಗೆ ಗೊತ್ತಿಲ್ಲ. ಇನ್ನು ನನ್ನ ಭವಿಷ್ಯ ಹೇಳುತ್ತಾನಲ್ಲ ಅನ್ನಿಸಿತು.

 ಒಳಗೆ ಹೋಗಿ, ನನ್ನ ಹಳೆಯ ಆದರೆ ಹರಿದು ಹೋಗದೇ ಇರುವ ಒಂದು ಅಂಗಿಯನ್ನು ತಂದು ಅವನಿಗೆ ಕೊಟ್ಟುಬಿಟ್ಟೆ. ಅವನು ಅದನ್ನು ತೆಗೆದುಕೊಳದೇ, ಮತ್ತೊಮ್ಮೆ " ಇದೆಂತದಕ್ಕೆ? ಹೊಸದು ಕೊಡಿ ಎಂದ. ನಾನು ಸಿಟ್ಟಾಗಿ ಬೇಕಾದರೆ ತೆಗೆದುಕೋ ಎಂದೆ. ಅವನು ಹಾಗಾದರೆ ನಿಮ್ಮ ಕೆಲಸ ಆದ ಮೇಲೆ ಖಂಡಿತಾ ಬರುತ್ತೇನೆ. ಆಗ ನನಗೆ ಹೊಸ ಬಟ್ಟೆ ಕೊಡಬೇಕು" ಎಂದು ಹೇಳಿ ಅಂಗಿಯನ್ನು ತೆಗೆದುಕೊಂಡ. ನಾನು, "ಆಗಲಿ ಮಾರಾಯ. ನೀನು ಹೇಳಿದ ಹಾಗೆ ಆದರೆ ಬಾ. ಕೊಡುವ" ಎಂದು ನಕ್ಕು ಮನೆಯ ಒಳಗೆ ಹೋದೆ.

ನಂತರ ನಾನು, ಶಿರೂರಿನಲ್ಲಿ ರಾಜ ಹೆಬ್ಬಾರನ ಮೆಡಿಕಲ್ಸ್ ಶಾಪಿನಲ್ಲಿ ಇರಲು ಅವನು ಅವಕಾಶ ಮಾಡಿಕೊಟ್ಟದ್ದರಿಂದ, ಅಲ್ಲಿ  ಕೆಲವು ತಿಂಗಳು ಇದ್ದೆ. ಆಗ ಮೇಲಿನ ಎರಡೂ ಘಟನೆಗಳು ನನಗೆ ಮರೆತು ಹೋಯಿತು. ಅಲ್ಲಿ ಮೆಡಿಕಲ್ ಶಾಪಿನಲ್ಲಿ ಇದ್ದ ಸ್ವಲ್ಪ ದಿನದಲ್ಲೇ, ನನಗೆ ಶಂಕರನಾರಾಯಣದಲ್ಲಿ ಹಳೆವಿದ್ಯಾರ್ಥಿಗಳಿಂದ ಒಂದು ಯಕ್ಷಗಾನದಲ್ಲಿ ವೇಷ ಮಾಡಲು ಬರಲು ಹೇಳಿದರು.  ಭೀಷ್ಮ ವಿಜಯದಲ್ಲಿ ನನ್ನದು ಅಂಬೆಯ ಪಾತ್ರ ಎಂದು ತೀರ್ಮಾನವಾಯಿತು. ಕೆಲವು ಟ್ರಯಲ್ ಗೂ ನಾನು ಶಿರೂರಿನಿಂದಲೇ ಬಂದು ಹೋಗಿದ್ದೆ. ಆಟಕ್ಕೆ ಇನ್ನು ಎರಡು ದಿನ ಇದೆ ಎನ್ನುವಾಗ ನನಗೆ ಕೆಇಬಿಯಲ್ಲಿ ಕೆಲಸಕ್ಕಾಗಿ, ಶಿವಮೊಗ್ಗದಲ್ಲಿ ಸಂದರ್ಶನಕ್ಕೆ ಹಾಜರಾಗಲು ಕರೆ ಬಂತು. ನನಗೆ ಆದ ಸಂತೋಷಕ್ಕೆ ಪಾರವೇ ಇರಲಿಲ್ಲ. ನಾನು ನನ್ನ ವೇಷವನ್ನು ಗಣೇಶ ಭಟ್ ಎಂಬವರಿಗೆ ವಹಿಸಿಕೊಟ್ಟು, ಶಿವಮೊಗ್ಗಕ್ಕೆ ಹೋಗಲು ತೀರ್ಮಾನಿಸಿದೆ. ಮನೆಗೆ ಬಂದು ಅಮ್ಮನ ಹತ್ತಿರ ಹೇಳಿದಾಗ, ಅಮ್ಮ ಮೊದಲು ನೆನಪು ಮಾಡಿದ್ದು ಆ ಹಾಲಕ್ಕಿಯವನನ್ನು. "ನೋಡು, ಯಾರನ್ನೂ ನಾವು ಸಸಾರ ಮಾಡುವ ಹಾಗಿಲ್ಲ" ಎಂದು.

ನನ್ನ ಅದೃಷ್ಟಕ್ಕೆ ಅವರಿಬ್ಬರ ಭವಿಷ್ಯವೂ ಸುಳ್ಳಾಗಲಿಲ್ಲ.  ನನಗೆ ಕೆಇಬಿಯಲ್ಲಿ ಕೆಲಸ ಸಿಕ್ಕಿ ಉಡುಪಿಯಲ್ಲಿ ಕೆಲಸಕ್ಕೆ ಹಾಜರಾದೆ.

ಆಮೇಲೆ ಒಂದುದಿನ ವಂಡಾರು ಬಾಯರಿಯವರನ್ನು, ನಮ್ಮ ಮನೆಯಲ್ಲಿ ಸತ್ಯನಾರಾಯಣ ಪೂಜೆ ಮಾಡಿ, ಕರೆಸಿ ಫಲ ತಾಂಬೂಲ ದಕ್ಷಿಣೆಗಳನ್ನು ಕೊಟ್ಟು ಗೌರವಿಸಿದೆ.

 ಆದರೆ ಆ ಹಾಲಕ್ಕಿಯವನು ಮಾತ್ರ ಮತ್ತೆ ಬರಲಿಲ್ಲ. ನನಗೆ ಈಗ ದಾರಿಯಲ್ಲಿ ಯಾರೇ ಹಾಲಕ್ಕಿಯವರು, ಕೈಯಲ್ಲಿ ಡಮರು ಹಿಡಿದುಕೊಂಡು ಬಂದರೆ, ಅವನ ನೆನಪಾಗುತ್ತದೆ. ಅವನನ್ನು ಸರಿಯಾಗಿ ಉಪಚರಿಸದೇ ಸಸಾರ ಮಾಡಿದ ಬಗ್ಗೆ ಈಗಲೂ ಪಶ್ಚಾತ್ತಾಪ ಇದೆ.

ಗುರುವಾರ, ಮಾರ್ಚ್ 22, 2018

ದಿನೇಶ ಉಪ್ಪೂರ:

*ನನ್ನೊಳಗೆ - 85*

ಬಾಲ್ಯದ ಕತೆಗಳನ್ನು ಅನುಭವಗಳನ್ನು ಮೆಲುಕು ಹಾಕುವುದೆಂದರೆ ಏನೋ ಒಂದು ತರಹದ ಪುಳಕ. ಆ ಹಳ್ಳಿಯ ಬದುಕು, ಕಷ್ಟಗಳ ನೆನಪು, ಅದರಲ್ಲೇ ಕಾಣುತ್ತಿದ್ದ ನೆಮ್ಮದಿ, ಆನಂದದ ಆ ಕ್ಷಣಗಳು, ಈಗ ಹಣ ಇದ್ದರೂ, ಸಮಯ ಇದ್ದರೂ, ಆಗಿನ ಬದುಕಿನ ಅನ್ಯೋನ್ಯತೆಯನ್ನು, ಸರಳತೆಯನ್ನು ಬದುಕಿನ ಬಗೆಗಿನ ಪ್ರೀತಿಯನ್ನು ಈಗ ಕಾಣಲಿಕ್ಕೆ ಏಕೆ ಆಗುವುದಿಲ್ಲವೋ ಏನೊ.

 ಈಗ ನಾವು ಎಷ್ಟು ಸರಳವಾಗಿ ಬದುಕಬೇಕು ಎಂದರೂ ಸ್ಟೇಟಸ್ ಅಥವ "ಅವರು ನಮ್ಮಹಾಗೆ ಯೋಚನೆ ಮಾಡುವವರಲ್ಲವೋ ಏನೋ. ಇನ್ನೊಬ್ಬರಿಗೆ ನಮ್ಮಿಂದ ಯಾಕೆ ಸುಮ್ಮನೇ ಉಪದ್ರವ?" ಎಂದು ನಮ್ಮಷ್ಟಕ್ಕೇ ಇರಲು ಬಯಸುವ ಕಾಲ. ಸುಖಕ್ಕಾಗಲೀ ಕಷ್ಟಕ್ಕಾಗಲೀ ಇನ್ನೊಬ್ಬರು ಆಗುತ್ತಾರೆ ಎಂದು ನಾವೂ ನಂಬುವುದಿಲ್ಲ. ನಾವೂ ಇತರರ ಒಳಿತು ಕೆಡುಕುಗಳಿಗೆ ಮೂಗು ತೂರಿಸುವುದೂ ಕಡಿಮೆ. ಒಟ್ಟಿನಲ್ಲಿ ನಾವಾಯಿತು ನಮ್ಮ ಕೆಲಸವಾಯಿತು.

ಹಿಂದೆ ನಾನು ಹಾಲಾಡಿ ಶಾಲೆಯಲ್ಲಿ ಓದುವಾಗ ಕಲ್ಲಟ್ಟೆಯ ಅತ್ತೆಯ ಮನೆಯಲ್ಲಿ ಇದ್ದೆ. ಆಸುಪಾಸಿನಲ್ಲಿ ನಮ್ಮದು ಒಂದೇ ಬ್ರಾಹ್ಮಣರ ಮನೆ. ಆಚೆ ಈಚೆ ಎಲ್ಲ ಕುಡುಬಿಯವರ ಮರಾಠಿಯವರ ಹತ್ತಾರು ಮನೆಗಳು. ಹಿಂದೆ ಆ ಜಮೀನಿನ ಸಾಹುಕಾರರಾಗಿದ್ದ ಶಂಕರನಾರಾಯಣ ಅಡಿಗರು ಅವರಿಗೆಲ್ಲ ಸ್ವಲ್ಪ ಸ್ವಲ್ಪ ಗದ್ದೆಗಳನ್ನು ಗೇಣಿಗೆ ಬಿಟ್ಟುಕೊಟ್ಟು, ಒಕ್ಕಲುಗಳನ್ನಾಗಿ ಮಾಡಿಕೊಂಡಿದ್ದರು.

ಅವರೆಲ್ಲರೂ ನಮ್ಮ ಮನೆಯವರಿಗೆ ಅಷ್ಟು ವಿಧೇಯರಾಗಿದ್ದು, ಕರೆದಾಗ ಓಡಿ ಬರುತ್ತಿದ್ದರು. ಅವರ ಸುಖ ಕಷ್ಟಗಳನ್ನು ಹೇಳಿಕೊಂಡು ಹಂಚಿಕೊಳ್ಳುತ್ತಿದ್ದರು. ಆಗಾಗ ನಮ್ಮ ಮನೆಯ ಎದುರು ಅಂಗಳದಲ್ಲಿ, ಹಾದು ಹೋಗುತ್ತಾ " ಬೈಲ್ ಬದಿಗ್ ಹೋಯ್ ಬಪ್ಪ ಅಂದೇಳಿ ಹೀಂಗೆ ಬಂದಿನೆ. ಅಮ್ಮಾ, ಹ್ಯಾಂಗಿದ್ರಿ?" ಅಂತ ಮಾತಾಡಿಸಿಕೊಂಡು ಹೋಗುತ್ತಿದ್ದರು. ಮನೆಯಲ್ಲಿ ಬೆಳೆದ ತರಕಾರಿಯನ್ನೋ, ಮಾವಿನಹಣ್ಣು, ಬಾಳೆಹಣ್ಣನ್ನು ಎಷ್ಟಾದರೆ ಅಷ್ಟು ತಂದು ಕೊಡುತ್ತಿದ್ದರು.

ಹಾಗೆಯೇ "ಅಮ್ಮಾ, ಒಂಚೂರು ಚಾಪುಡಿ ಕೊಡಿನ್ಯೆ. ಯಜ್ಮಾರ್ರ್  ಇವತ್ ಪ್ಯಾಟಿಗ್ ಹ್ವಾಯ್ ಲೆ ಇಲ್ಯೆ"  ಅಂತಲೋ "ಒಂದ್ ಎಸಳು ಹೊಗೆಸೊಪ್ಪು ಕೊಡಿ" ಅಂತಲೋ, ಬಂದು ಜಗಲಿಯ ತುದಿಯಲ್ಲಿ ಕುಳಿತು ಒಂದು ವೀಳ್ಯ ಹಾಕಿ ಮಾತಾಡಿಸಿ ಯಾರ್ಯಾರ ಸುದ್ದಿಯನ್ನು ಹೇಳಿ ಹೋಗುತ್ತಿದ್ದರು. ಅವರ ಮನೆಯಲ್ಲಿ ಮಕ್ಕಳ ಮದುವೆ ಆದರೆ ನನ್ನ ಅತ್ತೆಯ ಚಿನ್ನದ ಬಳೆ, ನೆಕ್ಲೆಸ್ ಗಳೂ ಅವರಿಗೆ ಹಸ್ತಾಂತರವಾಗಿ, ಆ ಹೆಂಗಸರ ಕುತ್ತಿಗೆಯಲ್ಲಿ ಶೋಭಿಸಿ ಮರುದಿನ ಮರಳುತ್ತಿತ್ತು.

 ಅತ್ತೆಯೂ ಹಾಗೆ. ಯಾರಾದರೂ ನಮ್ಮ ಮನೆಯ ಕಡೆ ಬಾರದಿದ್ದರೆ "ಹೋ ಅವಳ ಪತ್ತೆಯೇ ಇಲ್ಲಪ. ಎಲ್ಲಿ ಸತ್ತಳೋ ? ಆ ಕಡೆಗೆ ಹೋದರೆ ನಾನು ಬರಲಿಕ್ಕೆ ಹೇಳಿದ್ದೆ ಅಂತ ಹೇಳು" ಅಂತ ಯಾರ ಹತ್ತಿರವಾದರೂ ಹೇಳಿ ಕಳಿಸುತ್ತಿದ್ದರು. ಅವರವರಲ್ಲಿ ಸಣ್ಣಪುಟ್ಟ ಜಗಳ ಆದರೂ ಅತ್ತೆ ಕರೆಸಿ ಬುದ್ಧಿ ಹೇಳಿ ಸಮಾಧಾನ ಮಾಡುತ್ತಿದ್ದರು. ನಮ್ಮ ಮನೆಯ ರಾಘವೇಂದ್ರ ಸ್ವಾಮಿಗಳ ಆರಾಧನೆಯಲ್ಲಿ, ಮದುವೆ, ಉಪನಯನದ ಸಮಯದಲ್ಲಿ ಸುತ್ತಮುತ್ತಲಿನ ಎಲ್ಲ ಒಕ್ಕಲುಗಳೂ, ಅವರ ಮಕ್ಕಳೂ ಬಂದು ನಮ್ಮ ಮನೆಯಲ್ಲೇ ಉಂಡು ಹೋಗುತ್ತಿದ್ದರು.

ಅವರಲ್ಲಿಯೇ ಯಾರಿಗಾದರೂ ಒಂದಿಬ್ಬರಿಗೆ ಹೇಳಿದರೆ, ಆ ದಿನ ಬೆಳಗ್ಗೆ ಬಂದು ಮನೆಯನ್ನೆಲ್ಲಾ ಚೆನ್ನಾಗಿ ಗುಡಿಸಿ, ಸಗಣಿ ಬಳಿದು ಸಾರಿಸಿ, ಇಡೀ ಮನೆಯನ್ನು ತಂಪಾಗಿಸಿ, ಗಮಗಮ ಎನ್ನಿಸುವಂತೆ ಮಾಡುತ್ತಿದ್ದರು. ಹಾಗೂ ಸಂಜೆ ಬಂದು ಹೊರಗೆ ಹಾಕಿದ ಎಲ್ಲ ಪಾತ್ರೆಗಳನ್ನು ತೊಳೆದು ಕೊಡುತ್ತಿದ್ದರು. ಆ ದಿನ  ಹೆಚ್ಚಿಗೆ ಉಳಿದ ಅನ್ನ ಸಾರು ಪಾಯಸ ಎಲ್ಲವನ್ನು ಅವರ ಮನೆಗೆ ತೆಗೆದುಕೊಂಡು ಹೋಗುತ್ತಿದ್ದರು. ನಮ್ಮ ಮನೆಯಲ್ಲಿ ಊಟ ಆದರೆ ಅವರಿಗೂ ನಮ್ಮ ಹಾಗೆಯೇ ಸಂಭ್ರಮ. ಎಲ್ಲರೂ ತುಂಬಾ ಮುಗ್ಧರು. ಬಡತನ ಇದ್ದರೂ ಸದಾ ಸುಖಿಗಳು. ಸಂತೃಪ್ತರು.

ಪ್ರತೀ ವರ್ಷಕ್ಕೊಮ್ಮೆ ಮರಾಠಿಯವರು, ಕುಡುಬಿಯವರು ತುಂಬಾ ಸಂಭ್ರಮದಿಂದ ಹೋಳಿಹಬ್ಬವನ್ನು ಆಚರಿಸುತ್ತಾರೆ. ಆ ಕುಣಿತಗಳನ್ನು ಸುಮಾರು ಒಂದು ತಿಂಗಳ ಹಿಂದಿನಿಂದಲೂ ಪ್ರತೀ ರಾತ್ರಿ ಯಾರಾದರೂ ಒಬ್ಬರ ಮನೆಯಲ್ಲಿ ಸೇರಿ, ತರಬೇತಿ ಮಾಡಿಕೊಂಡು ಎಲ್ಲರೂ ಒಂದೇ ರೀತಿ ಹೊಂದಾಣಿಕೆಯಿಂದ ಕುಣಿಯುತ್ತಾರೆ. ಅದಕ್ಕಾಗಿಯೇ ಒಂದು ವಿಶಿಷ್ಟ ಉಡುಪನ್ನು ಇಟ್ಟುಕೊಂಡು, ಅದನ್ನು ಶುಚಿಮಾಡಿ ಧರಿಸುತ್ತಾರೆ, ಅವರ ಮುಂಡಾಸಿನ ತುದಿಗೆ ಅದ್ಯಾವುದೋ ಹಕ್ಕಿಯ ಪುಕ್ಕವನ್ನು ಸಿಕ್ಕಿಸಿಕೊಳ್ಳುತ್ತಿದ್ದರು. ಸುತ್ತಮುತ್ತಲಿನ ಎಲ್ಲರ ಮನೆಗೂ ಹೋಗಿ, ಗುಮಟೆಯನ್ನು ಬಾರಿಸುತ್ತಾ ಕುಣಿಯುತ್ತಾರೆ. ನಂತರ ಬಣ್ಣದ ಕೋಲುಗಳನ್ನು ಹಿಡಿದುಕೊಂಡು ಕೋಲಾಟವನ್ನು ಮಾಡುತ್ತಿದ್ದರು. ಅವರಲ್ಲೇ ಹಿರಿಯ ಸದಸ್ಯರು ಹಿಂದೆ ನಿಂತುಕೊಂಡು ಪದ ಹೇಳುತ್ತಾರೆ. ಹಬ್ಬ ಹಬ್ಬವೆ. ಮಕ್ಕಳಿಗೆ ಹಿರಿಯರಿಗೆ ಎಲ್ಲರಿಗೂ. ಅದನ್ನು ಅಷ್ಟು ಶೃದ್ಧೆಯಿಂದ ಮಾಡದಿದ್ದರೆ ಅವರ ದೈವಕ್ಕೆ, ಭೂತಕ್ಕೆ ಸಿಟ್ಟುಬರುತ್ತದೆ ಎಂಬ ಭಯವೂ ಇತ್ತು.

ಆಗಿನ ಒಂದು ಘಟನೆ ಹೇಳುತ್ತೇನೆ. ಒಮ್ಮೆ ನಮ್ಮ ಮನೆಯಲ್ಲಿ ಮಾಡಿದ ಉಪ್ಪಿನಕಾಯಿಯಲ್ಲಿ ಏನೋ ಅಜಾಗ್ರತೆಯಿಂದ ಹುಳವಾಗಿಬಿಟ್ಟಿತ್ತು. ಒಳ್ಳೆಯ ಪರಿಮಳದ ಮಾವಿನ ಮಿಡಿ. ಮೂರು ದೊಡ್ಡ ಜಾಲಿಯಲ್ಲಿ ಹಾಕಿಟ್ಟಿದ್ದು  ತಂಡಿಯಾಗಬಾರದು ಎಂದು, ಅಡುಗೆ ಮನೆಯಲ್ಲಿ ಹೊಗೆ ಹೋಗಿ ಬಿಸಿ ಇರುವ ಜಾಗದಲ್ಲೇ ಇಟ್ಟಿದ್ದರೂ, ತೆಗೆದು ನೋಡುವಾಗ ಅಲ್ಲಲ್ಲಿ ಒಂದೊಂದು ಮೇಲೆ ಕೆಳಗೆ ಬಿಜಿಬಿಜಿ ಎಂದು ಓಡಾಡುವುದು ಕಂಡಿತು. ಹೊಟ್ಟೆಯೆಲ್ಲ ಉರಿದು ಹೋಯಿತು. ಏನು ಮಾಡುವುದು? ತಿನ್ನುವ ಹಾಗಿಲ್ಲ. ಬಿಸಾಡುವ ಹಾಗಿಲ್ಲ.

ಒಂದು ಸಲ ನಮ್ಮ ಬೈಲುಮನೆಯ ಒಕ್ಕಲು, ರುಕ್ಕು ಬಾಯಿ (ಕುಡುಬಿ ಹೆಂಗಸು) ಮನೆಗೆ ಬಂದಾಗ ಅತ್ತೆ, ಅವಳ ಹತ್ತಿರ ಬೇಸರದಿಂದ, "ನಮ್ಮ ಉಪ್ಪಿನ ಕಾಯಿ ಒಂದು ದಂಡ ಆಯಿತು ಮಾರಾಯ್ತಿ. ಮೇಲೆ ಬಿಜಿಬಿಜಿ ಅನ್ನತ್, ಇನ್ನು ಬಿಸಾಡುವುದೇ ಸೈ" ಎಂದರು. ಅವಳು ಆಶ್ಚರ್ಯದಿಂದ ಬಾಯಿ ಕಳೆದು, "ಎಂತ ಬಿಸಾಡ್ ತ್ರ್ಯಾ?  ತಕಬನ್ನಿ ಕಾಂಬ" ಅಂದಳು. ತಂದು ತೋರಿಸಿದರೆ "ಅಯ್ಯೊ, ನಿಮಗ್ ಮರ್ಲಾ? ಇಷ್ಟ್ ಲಾಯ್ಕಿತ್ತ್. ನಿಮ್ಗೆ ಬ್ಯಾಡದಿದ್ರೆ ನಂಗ್ ಕೊಡಿ. ನಾನೊಂದ್ ಮುಷ್ಠ ಮಾಡಿ ಸರಿ ಮಾಡ್ಕಂತಿ" ಅಂದಳು. ಅತ್ತೆ ಕುತೂಹಲದಿಂದ " ಅದೆಂತ ಮುಷ್ಠ ಮಾರಾಯ್ತಿ" ಅಂದರೆ, ಅವಳು,  ಇಲ್ಕಾಣಿ, ಹಿಂದಿನ್ ರಾತ್ರಿ, ಸಣ್ ಕಿಚ್ಚಿನ್ ಉರಿ ಮಾಡಿ, ಒಲಿ ದಂಡಿಯಂಗೆ, ಒಂದ್ ಮಡ್ಕಿಯಂಗ್ ಈ ಉಪ್ಪಿನ್ ಕಾಯಿ, ಬೆಚ್ಚಿರ್ ಸೈಯೆ. ಬೆಳಿಗ್ಗೆ ಕಾಂಬತಿಗೆ ಒಂದ್ ಹುಳ ಇದ್ರೆ ಹೇಳಿ" ಅಂದಳು.

ನಮಗೆ ಗೊತ್ತಾಯಿತು. ನಾವೆಲ್ಲ ಗಟ್ಟಿಯಾಗಿ ನಕ್ಕೆವು. ಅತ್ತೆ , "ಹಾಂಗಾರೆ ತಗೊಂಡ್ ಹೋಗ್ ಮಾರಾಯ್ತಿ. ಏನ್ ಬೇಕಾರೂ ಮಾಡ್" ಎಂದು ಅಷ್ಟೂ ಉಪ್ಪಿನ ಕಾಯಿಯನ್ನು ಅವಳಿಗೇ ಕೊಟ್ಟರು.

ಅದೇ ಸ್ವಲ್ಪ ದಿನದ ನಂತರ ಹೋಳಿಹಬ್ಬವನ್ನು ಆಚರಿಸಿದ ಕುಡುಬಿಯವರೆಲ್ಲೂ ಹೋಳಿ ಹುಣ್ಣಿಮೆಯಂದು ರಾತ್ರಿ ಅವಳ ಮನೆಯಲ್ಲಿ ತಿಂಗಳ ಬೆಳಕಿನಲ್ಲಿ , ಹೆಂಡವನ್ನೋ ಕಳ್ಳನ್ನೋ ಕುಡಿದು, ಮಾಂಸವನ್ನು ತಿಂದು ಉಂಡು ಖುಷಿ ಪಟ್ಟರು. ಎಲ್ಲರಿಗೂ ಉಪ್ಪಿನಕಾಯಿಯ ಸಮಾರಾಧನೆಯಾಯಿತು. ಎಲ್ಲರೂ ಉಪ್ಪಿನ ಕಾಯಿಯನ್ನು ಕೇಳಿ ಕೇಳಿ ಹಾಕಿಸಿಕೊಂಡರಂತೆ. ಮರುದಿನ ಕೆಲವರು ನಮ್ಮ ಮನೆಗೂ ಬಂದು, "ಅಮ್ಮ , ನಿಮ್ಮ ಮನೀದ್ ಉಪ್ಪಿನ್ಕಾಯಿಯಂಬ್ರಲೆ, ಭಾರಿ ಲಾಯ್ಕಿತ್ತು ಮರ್ರೆ" ಎಂದು ಹೊಗಳಿಯೂ ಹೋದರು. ನಮಗೆ ಒಳಗೊಳಗೆ ನಗು. ಉಪ್ಪಿನಕಾಯಿ ದಂಡ ಆಗಲಿಲ್ಲವಲ್ಲ ಎಂಬ ಸಮಾಧಾನ.

ಮುಂದೆ ಅತ್ತೆಯೂ ಕಾಲವಾದರು. ಇತ್ತ ಇಂದಿರಾ ಗಾಂಧಿಯ ಒಕ್ಕಲು ಮಸೂದೆ ಬಂದು, ಅವರವರು ಉಳುವ ಗದ್ದೆಗಳೆಲ್ಲ ಅವರದೇ ಆಯಿತು. ಆಗ ನಮ್ಮೊಂದಿಗೆ ಆ ಒಕ್ಕಲುಗಳೆಲ್ಲ ಸ್ವಲ್ಪ ನಿಷ್ಠುರವಾಗಿ ಇದ್ದರೂ, ನಮ್ಮ ಮನೆಗೆ ಬರುವುದು ಹೋಗುವುದು, ಬೇಸಾಯದಲ್ಲಿ ಸಹಾಯ ಮಾಡುವುದು ಸಂಪೂರ್ಣವಾಗಿ ನಿಲ್ಲಿಸಲಿಲ್ಲ. ಯಾಕೆಂದರೆ, ಅಲ್ಲಿ ಆ ಒಕ್ಕಲುಗಳಿಲ್ಲದಿದ್ದರೆ, ಅವರ ಸಹಾಯ ಇಲ್ಲದಿದ್ದರೆ, ನಮಗೆ ಇರುವ ಗದ್ದೆಯ ಬೇಸಾಯವನ್ನು ಮಾಡುವುದು ಕಷ್ಟವಾಗಿತ್ತು.

ಆದರೆ ಕ್ರಮೇಣ ಹಿಂದಿನ ಸಲಿಗೆ ಆತ್ಮೀಯತೆ ಕಡಿಮೆಯಾಗುತ್ತಾ ಬಂತು ಅನ್ನಿಸುತ್ತದೆ. ಕಾಲವೂ ಬದಲಾಗುತ್ತಾ ಬಂತು. ಹಿಂದೆ ಇದ್ದ ಆತ್ಮೀಯತೆ, ಮನುಷ್ಯ ಮನುಷ್ಯರ ನಡುವಿನ ನಂಬಿಕೆ, ವಿಶ್ವಾಸವೂ ಕಡಿಮೆಯಾಯಿತು. ಆ ಒಕ್ಕಲುಗಳ ಮಕ್ಕಳಲ್ಲಿ ಕೆಲವರು ಓದಿ, ಬೇರೆ ಕಡೆ ಹೋಗಿ ನೆಲೆಸಿದರು. ಇಲ್ಲವೇ ಮದುವೆಯಾಗಿ ತಮ್ಮ ಹಿರಿಯರೊಂದಿಗೆ ಹೊಂದಿಕೊಂಡು ಒಟ್ಟಿಗೆ ಇರಲಾಗದೇ, ಬೇರೆ ಮನೆ ಮಾಡಿಕೊಂಡರು. ಒಂದೇ ಮನೆಯಲ್ಲಿ ಮುವ್ವತ್ತು ನಲವತ್ತು ಜನ ಇದ್ದ ಮರಾಠಿ ಮನೆಯ ಮುಂದಿನ ಗದ್ದೆಯಲ್ಲೆಲ್ಲಾ ಒಂದೊಂದು ಮನೆಯಾಗಿ ಅಣ್ಣತಮ್ಮಂದಿರದ್ದು ಬೇರೆಬೇರೆ ಮನೆಯಾಯಿತು. ಸರಕಾರದಿಂದ ಹಲವಾರು ಸೌಲಭ್ಯಗಳು ದೊರೆತವು.

ಮನೆಯ ತನಕವೂ ರಸ್ತೆಯಾಯಿತು.  ಇದ್ದ ಸ್ವಲ್ಪವೇ ಗದ್ದೆಗಳನ್ನು ಚೂರು ಮಾಡಿ ಪಾಲು ಮಾಡಿಕೊಂಡರು. ಮನೆಯ ಕೆಲಸ, ಸುತ್ತಲಿನ ಪರಿಸರ ಸಸಾರವಾಯಿತು. ಊಟಕ್ಕೆ, ಬದುಕಿನ ಹೊಸ ಅವಶ್ಯಕತೆಗಳಿಗೆ, ಆಧುನಿಕ ಜೀವನಕ್ಕೆ ದುಡಿಯುವ, ದುಡಿಮೆ ಸಾಲದಾಯಿತು. ಸರಕಾರಿ ಸೌಲಭ್ಯಕ್ಕಾಗಿ ಆಸೆ ಪಡುತ್ತಾ, ಸುಲಭವಾಗಿ ಸಿಗುವ ಸೌಕರ್ಯಕ್ಕಾಗಿ ಹಾತೊರೆಯುತ್ತಾ ಬದುಕುವ ಪರಿಸ್ಥಿತಿ ಬಂತು.

ಈಗಲೂ ದಾರಿಯಲ್ಲಿ ಅವರಲ್ಲಿ ಯಾರಾದರೂ ಸಿಕ್ಕಿದರೆ, ಹಿಂದಿನ ನೆನಪನ್ನು ಮಾಡಿಕೊಂಡು, ವಿಷಾದದಿಂದ "ಆಗಿನ್ ಕಾಲವೇ ಚೆಂದ ಇತ್ತ್ ಅಯ್ಯ" ಎನ್ನುತ್ತಾರೆ

ಮಂಗಳವಾರ, ಮಾರ್ಚ್ 20, 2018

ದಿನೇಶ ಉಪ್ಪೂರ:

*ನನ್ನೊಳಗೆ - 84*

ನನ್ನ ಸ್ನೇಹಿತರಾದ ಎಸ್ ವಿ ಭಟ್ರು ಒಮ್ಮೆ ಹೀಗೆ ಮಾತಾಡುತ್ತಾ ಹೇಳಿದ್ದರು. ಅವರ ತಂದೆಯವರು ಹಿಂದಿನ ಕಾಲದವರು,  ಯಾವಾಗಲೂ ಬಹಳ ಗಂಭೀರರಾಗಿ ಇರುತ್ತಿದ್ದರಂತೆ. ಮನೆಯವರ ಹತ್ತಿರ ಮಕ್ಕಳ ಹತ್ತಿರ ಸಲಿಗೆಯಿಂದ ಮಾತಾಡುವುದು ಅಂತಲೇ ಇರಲಿಲ್ಲವಂತೆ. ಹೆಂಡತಿಯ ಹತ್ತಿರವೂ. ಬಹಳ ಬಿಗು, ಗತ್ತು.

ಹತ್ತಿರದಲ್ಲಿ ಎಲ್ಲಾದರೂ ಆಟ ಇದ್ದಾಗ, ಮಕ್ಕಳು "ರಾತ್ರಿ ಆಟಕ್ಕೆ ಹೋಗುತ್ತೇವೆ" ಅಂದರೆ, "ಆಟವಾ ಮತ್ತೆಂತದಾ? ಬಿದ್ಕಣಿ ಕಾಂಬ" ಎಂದು ಜೋರು ಮಾಡುತ್ತಿದ್ದರಂತೆ. ಮಕ್ಕಳು ಆಟಕ್ಕೆ ಹೋಗಲೇ ಬೇಕಾದರೆ, ಅವರಿಗೆ ಗೊತ್ತಾಗದ ಹಾಗೆ, ಅವರು ಮಲಗಿದ ನಂತರ ಮೆಲ್ಲನೇ ಎದ್ದು ಹಿಂದಿನ ಪಾಗಾರ ಹಾರಿ ಹೋಗಿ, ಬೆಳಗಿನ ಜಾವಕ್ಕೆ ಹಟ್ಟಿಯ ಬಾಗಿಲಿನ ಮೂಲಕ ಮನೆಗೆ ಬಂದು ಅಪ್ಪಯ್ಯ ಏಳುವುದರ ಒಳಗೆ ಮಲಗಿಬಿಡುತ್ತಿದ್ದರಂತೆ. ಹಾಗಂತ ಅವರ ಅಪ್ಪಯ್ಯನೂ ಅವರ ಯೌವನದ ಕಾಲದಲ್ಲಿ ಬಹಳ ಆಟಕ್ಕೆ ನೋಡಿದವರೆ. ಆದರೆ ಬಾಳ್ವೆಯ ಕೊನೆಕೊನೆಗೆ ಅವರಿಗೆ ಮಾತಾಡಲು ಸಲಿಗೆಯ ಜನರು ಸಿಗದೇ, ರಾತ್ರಿಯ ಕತ್ತಲೆಯಲ್ಲಿ ಮನೆಯ ಪತ್ತಾಸಿನ ಮೇಲೆ ಒಬ್ಬರೇ ಕುಳಿತೋ,  ಹಾಸಿಗೆಯ ಮೇಲೆ ಕುಳಿತೋ, ತಮ್ಮಷ್ಟಕ್ಕೇ  ಮಾತಾಡಿಕೊಳ್ಳುತ್ರಿದ್ದರಂತೆ. ನಮ್ಮ ಕಾಲದಲ್ಲಿ "ಹಾಗೆ ಇತ್ತು, ಹೀಗೆ ಇತ್ತು", "ಈ ರೇಡಿಯೋ ಒಂದು ಬಂತು ಎಲ್ಲಾ ಹಾಳಾಯ್ತು", "ಒಂದು ಮಾರ್ವಿ ಶ್ರೀನಿವಾಸ ಉಪ್ಪೂರ್ರು ಆಟದಲ್ಲಿ ಪದ ಹೇಳ್ತಿದ್ರು ಹ್ಯಾಂಗೆ?. ಎಂತಾ ಸ್ವರ ಅವರದ್ದು ? ಮೂರು ಮೈಲಿಯ ಆಚೆಯೂ ಕೇಳುತ್ತಿತ್ತು. ಪದಾ ಅಂದ್ರೆ ಅದು. ಈಗಿನವರದ್ದೆಲ್ಲ ಎಂತ ಮಣ್ಣು" ಎಂದು ಅವರಷ್ಟಕ್ಕೇ ಮಾತಾಡಿಕೊಳ್ಳುತ್ತಿದ್ದರಂತೆ.ಆದರೆ ಬುದವಾರ ರಾತ್ರಿ ಒಂಬತ್ತುವರೆಗೆ ರೇಡಿಯೋದಲ್ಲಿ ಯಕ್ಷಗಾನ ಕೇಳಲು ಸಿದ್ದರಾಗಿ ಕುಳಿತುಕೊಳ್ಳುತ್ತಿದ್ದರು. ಆಮೇಲೆ ಆಪದ ಸರಿಯಾಗಿ ಹೇಳಲಿಲ್ಲ. ಈ ಪದ ಬಿಟ್ಟದ್ದಾ ಮುಗಿಸಲು ಅಷ್ಟು ಅವಸರ ಏನು ಎಂದು ಅವರಷ್ಟಕ್ಕೆ ಮಾತಾಡುತ್ತಿದ್ದರು.

 ನಮ್ಮ ಹಿರಿಯರಲ್ಲಿ ಹಾಗಿನವರನ್ನು ನಾನೂ ಕೆಲವು ಜನರನ್ನು ನೋಡಿದ್ದೆ.  ಹೆಚ್ಚೇಕೆ ನನ್ನ ಭಾವಯ್ಯ, ಮೇಳದ ಯಜಮಾನರು ಎಂದು ಖ್ಯಾತರಾದ ಶ್ರೀಧರ ಹಂದೆಯವರೂ ಹಾಗೆಯೇ. ಅವರು ದುಡಿಯುವ ಕಾಲಕ್ಕೆ ಎಲ್ಲರೂ ತಮಗೆ ಗೌರವ ಕೊಡಬೇಕೆಂದು ದರ್ಪದಿಂದಲೇ ತಾನು ಯಜಮಾನ ಎಂದು ಗಾಂಭೀರ್ಯದಿಂದ ಇರುತ್ತಿದ್ದರು. ಮನೆಯವರೊಂದಿಗೆ ಯಾವಾಗಲೂ ಮೌನವಾಗಿಯೇ ಇದ್ದು, ಮಾತಾಡಲೇ ಬೇಕಾದಾಗ ಒಂದೋ ಎರಡೋ ಚುಟುಕು ಮಾತಾಡಿ ಇದಮಿತ್ತಂ ಅಂತ ಮುಂದೆ ಪ್ರಶ್ನೆ ಇರಬಾರದು ಹಾಗೆ ಖಡಕ್ ಆಗಿ ಹೇಳಿ ಮುಗಿಸಿಬಿಡುವವರು. ಕೊನೆಕೊನೆಗೆ ಅವರಿಗೆ ತನ್ನ ಹೆಂಡತಿ ಮಕ್ಕಳೊಡನೆಯೇ ಅವರಿಗೆ ಸಲಿಗೆಯಿಂದ ಮಾತಾಡಿಕೊಂಡು ಇರಲೂ "ಇಗೋ" ಬಿಡುತ್ತಿರಲಿಲ್ಲ. ಅದಕ್ಕಾಗಿ ಅವರು ಸ್ವಲ್ಪ ಗಟ್ಟಿಯಾಗಿ ಓಡಾಡಲು ಆಗುವವರೆಗೂ ಹೆಚ್ಚಾಗಿ ಮನೆಯಿಂದ ಹೊರಗೇ ಇರಲು ಬಯಸುತ್ತಿದ್ದರು. ಒಮ್ಮೆ ಮಾತಾಡಿದರೂ ತಾನು ಹೇಳುವುದನ್ನು ಎಲ್ಲರೂ ಕೇಳಬೇಕು, ಎದುರು ಹೇಳಬಾರದು ಎಂಬ ಧೋರಣೆಯೇ ಇರುತ್ತಿತ್ತು. ಆದರೂ ತನ್ನ ಕೊನೆಯ ಉಸಿರಿನವರೆಗೂ ಅವರು ಅದರಂತೆಯೇ ಯಜಮಾನನಾಗಿಯೇ ಬದುಕಿದರು. ಸಾಯುವ ಮೂರು ದಿನದ ಮೊದಲು, ಅವರ ಇಳಿವಯಸ್ಸಿನಲ್ಲಿ ಮಗನ ಮನೆಯಲ್ಲಿ ಬೆಂಗಳೂರಿನಲ್ಲಿ ಇದ್ದವರು, ಒಮ್ಮೆ,ಇದ್ದಕ್ಕಿದ್ದಂತೆ, "ತಾನು ಊರಿಗೆ ಹೋಗಲೇ ಬೇಕು" ಎಂದು ಹಟ ಮಾಡಿದ್ದರಿಂದ, ಕಾರು ಮಾಡಿಕೊಂಡು ಊರಿಗೆ ಅಂದರೆ ಮಂಗಳೂರಿನ ಅವರ ಮಗಳ ಮನೆಗೆ ಬಂದರು. ಎರಡೇ ದಿನದಲ್ಲಿ ಹೃದಯಾಘಾತವಾಗಿ ತನ್ನ ಕೊನೆಯುಸಿರೆಳೆದರು.

ಅವರ ಗತ್ತು ಗಾಂಭೀರ್ಯ ತಾನು ಯಜಮಾನನೆಂಬ ಭಾವವನ್ನು ಅವರ ಕೊನೆಯ ಉಸಿರು ಇರುವವರೆಗೂ ಅವರು ಬಿಟ್ಟುಕೊಡಲಿಲ್ಲ. ಹಿಂದೆ ಹತ್ತಾರು ವರ್ಷ ಮೇಳದ ಯಜಮಾನನಾಗಿ ಎಷ್ಟೋ ಕಲಾವಿದರನ್ನೂ, ಟೆಂಟಿನ ಮೇಳದ ಆಳುಕಾಳು ನೌಕರರನ್ನು ದರ್ಪದಿಂದ ಗತ್ತಿನಿಂದ ಆಳಿದರು.  ಅವರ ಬದುಕಿಗೆ ದಾರಿಯಾದರು. ಅಷ್ಟು ಹಿಂದಿನ ಕಾಲದಲ್ಲೇ, ಬಿಳಿಯ ಅಂಬಾಸಿಡರ್ ಕಾರಿನಲ್ಲಿ ಓಡಾಡಿ ರಾಜನಂತೆ ಮೆರೆದ, ಅವರು ಮೇಳದಲ್ಲಿ ನಷ್ಟವಾಗಿ ಬಂಧುಗಳು ಸ್ನೇಹಿತರು, "ಇನ್ನು ಮೇಳ ಸಾಕು. ಮನೆಯಲ್ಲಿ ಇರಿ" ಎಂದು ಬಲವಂತದಿಂದ ಕೂರಿಸಿದಾಗ, ಮನೆಯಲ್ಲಿ ಇದ್ದಾಗಲೂ  ಹಿಂದೆ ಅವರ ಮೇಳದಲ್ಲಿ ಅನ್ನ ತಿಂದ ಹಂಗಿನಿಂದ ಯಾರಾದರೂ ಕಲಾವಿದರು ಬಂದು ಮಾತಾಡಿಸಿದರೆ, ಯಜಮಾನರೇ ಅಂದರೆ, ಆಗಿನ ಅವರ ಗತ್ತೇ ಬೇರೆ ಆಗುತ್ತಿತ್ತು. ಅವರು ಮೇಳವನ್ನು ಕೈದು ಮಾಡಿದ ನಂತರವೂ, ಅವರ ಮನೆಯಲ್ಲಿ ಇದ್ದ ಒಂದು ಪ್ರತ್ಯೇಕ ರೂಮಿನಲ್ಲಿಯೇ ಅವರು ಇರುತ್ತಿದ್ದರು. ನಾವು ಅಕ್ಕನ ಮನೆಗೆ ಹೋದರೆ, ಒಮ್ಮೆ ಅವರನ್ನು ಮಾತಾಡಿಸಲು ಅಂತಲೇ ಅವರ ರೂಮಿಗೆ ಹೋಗಿ ಅವರ ಎದುರಿನ ಕುರ್ಚಿಯಲ್ಲಿ ಒಂದು ಐದು ನಿಮಿಷ ಔಪಚಾರಿಕವಾಗಿ ಕುಳಿತು ಬರುವುದಿತ್ತು. ಆದರೆ ಅವರು ಮಾತಾಡಿಸಿದರೂ ಒಂದೋ ಎರಡೊ ಮಾತು ಅಷ್ಟೆ. ಆದರೆ ನಾವು ಹಾಗೆ ಹೋಗಿ ಅವರ ಎದುರು ಕುಳಿತು ಬರದೇ ಇದ್ದರೆ, ನಾವು ವಾಪಾಸು ಬಂದ ಮೇಲೆ ಅಕ್ಕನ ಹತ್ತಿರ "ಮಾಣಿ ಬಂದಿತ್ತನಾ?" ಎಂದು ನಾವು ಮಾತಾಡಿಸದೇ ಬಂದುದಕ್ಕೆ ಅಸಮಾಧಾನಪಟ್ಟು ಕೊಳ್ಳುತ್ತಿದ್ದರು.

ಅವರು ಮೇಳ ಮಾಡುವ ಮೊದಲು ಬೆಂಗಳೂರಿನಲ್ಲಿ ಒಂದು ಹೋಟೇಲು ನಡೆಸುತ್ತಿದ್ದರು. ಅವರಿಗೆ ಮೂರು ಹೆಣ್ಣು ಹಾಗೂ ಕೊನೆಯಲ್ಲಿ ಒಬ್ಬ ಗಂಡುಮಗ ಹುಟ್ಟಿದ್ದು ಅಲ್ಲಿಯೇ. ಹೋಟೇಲು ವ್ಯಾಪಾರದಲ್ಲಿ ನಷ್ಟವಾಗಿ  ಊರಿಗೆ ಬಂದವರು, ಆಮೇಲೆ ಒಂದೆರಡು ವರ್ಷ ಅಮೃತೇಶ್ವರಿ ಮೇಳ ಮಾಡಿ, ನಂತರ ಬಡಗುತಿಟ್ಟಿನಲ್ಲಿ  ಸಾಲಿಗ್ರಾಮ ಮೇಳವನ್ನು ಹೊಸದಾಗಿ ಟೆಂಟು ಮೇಳವನ್ನಸಗಿ ಎಬ್ಬಿಸಿದಾಗ, ಕೆರೆಮನೆ ಕಲಾವಿದರನ್ನು ಕರೆತಂದು, ಅವರ ಜೊತೆಗೆ, ದೊಡ್ಡ ಸಾಮಗರು, ಶಿರಿಯಾರ ಮಂಜು, ವೀರಭದ್ರ ನಾಯ್ಕರಂತ ದೊಡ್ಡ ದೊಡ್ಡ ಕಲಾವಿದರನ್ನು ಹಾಕಿಕೊಂಡು ಗಜಮೇಳ ಮಾಡಿ, ಅದ್ದೂರಿಯಾಗಿ ಮೆರೆದದ್ದು, ಮತ್ತೆ ಅದನ್ನು ಸೋಮನಾಥ ಹೆಗಡೆಯವರಿಗೆ ಕೊಟ್ಟು ಅಮೃತೇಶ್ವರಿ ಮೇಳ ಮಾಡಿ ಯಶಸ್ವಿಯಾಗಿದ್ದು ಈಗ ಇತಿಹಾಸ.

 ಅಂತಹ ಭಾವಯ್ಯನನ್ನು ಸುಧಾರಿಸಿಕೊಂಡು,ಅರ್ಥಮಾಡಿಕೊಂಡು, ಅವರಿಗೆ ಹೊಂದಿಕೊಂಡು, ಬಾಳ್ವೆ ಮಾಡಿದ ನನ್ನ ಅಕ್ಕನ ತಾಳ್ಮೆ, ಸಾಹಸ ಸಣ್ಣದೇನಲ್ಲ. ಮೇಳದ ಯಜಮಾನರಾಗಿದ್ದಾಗ ರಾತ್ರಿ ಕ್ಯಾಂಪಿನಿಂದ ಎಷ್ಟು ಎಷ್ಟು ಹೊತ್ತಿಗೋ ಅವರು ಮನೆಗೆ ಬರುತ್ತಿದ್ದರು. ಬರುವಾಗ ಯಾರು ಯಾರನ್ನೋ ಮನೆಗೆ ಕರೆತರುತ್ತಿದ್ದರು.ಅಷ್ಟು ರಾತ್ರಿಯ ಮೇಲೆ ಎದ್ದು ಸ್ವಲ್ಪವೂ ಗೊಣಗದೇ, ಎದ್ದು  ಅನ್ನ ಮಾಡಿ, ಅವರಿಗೆಲ್ಲ ಬಡಿಸಿ ಉಪಚರಿಸುತ್ತಿದ್ದಳು ಅವಳು.

ಅವರು ಮೊದಲು ಬೆಂಗಳೂರಿನಲ್ಲಿ ಇರುವಾಗ ಒಂದು ರಾತ್ರಿ ಮನೆಗೆ ಕಳ್ಳನೊಬ್ಬ ಕದಿಯಲು ಬಂದಿದ್ದನಂತೆ. ಹಾಗೆ ಬಂದು ಕತ್ತಲೆಯಲ್ಲಿ ತಡಕಾಡುತ್ತಿರುವಾಗ, ನನ್ನ ಅಕ್ಕನಿಗೆ ಪಕ್ಕನೇ ಎಚ್ಚರಾಯಿತು. ಅವಳು ಎಲ್ಲರಂತೆ ಕಳ್ಳ ಕಳ್ಳ ಅಂತ ಬೊಬ್ಬೆ ಹೊಡೆಯಲಿಲ್ಲ. ಬದಲು, ಸದ್ದು ಮಾಡದೇ ಮೆಲ್ಲನೇ ಎದ್ದು, ಹಿಂದಿನಿಂದ ಹೋಗಿ ಆ ಕಳ್ಳನನ್ನು ಕಪ್ಪರಿಸಿ ಗಟ್ಟಿಯಾಗಿ ಹಿಡಿದುಕೊಂಡು "ಕಳ್ಳನನ್ನು ಹಿಡಿದುಕೊಂಡಿದ್ದೇನೆ. ಬನ್ನಿ ಬನ್ನಿ" ಅಂತ ಬೊಬ್ಬೆ ಹೊಡೆದಳಂತೆ. ಆ ಕಳ್ಳ ತಪ್ಪಿಸಿಕೊಳ್ಳಲಾಗದೇ ಜನ ಸೇರುವವರೆಗೂ ಒದ್ದಾಡಿ, ನಂತರ ಪೋಲೀಸರಿಗೆ ಅತಿಥಿಯಾದನಂತೆ. ಆಗಿನ ಅವಳ ಧೈರ್ಯಕ್ಕೆ, ಸಾಹಸಕ್ಕೆ ಎಲ್ಲರೂ ಮೆಚ್ಚಿದ್ದೇ ಮೆಚ್ಚಿದ್ದು.

ಆ ಕತೆಯನ್ನು ಆಕೆಯ ಬಾಯಿಯಿಂದಲೇ ಹಲವಾರು ಭಾರಿ ಕೇಳಿದ್ದೆವು. ಆಗ ನಮಗೆಲ್ಲ ರೋಮಾಂಚನ ಆಗುತ್ತಿತ್ತು. ಅವಳನ್ನೇ ಬಿಟ್ಟಕಣ್ಣುಗಳಿಂದ ನೋಡುತ್ತಿದ್ದೆವು. ನನ್ನ ಅಕ್ಕ ಅಂದರೆ ಒನಕೆ ಓಬವ್ವನಿಗಿಂತಲೂ ಏನೂ ಕಡಿಮೆಯವಳಲ್ಲ ಎಂಬ ಹೆಮ್ಮೆಯೂ ಆಗುತ್ತಿತ್ತು.

ಭಾನುವಾರ, ಮಾರ್ಚ್ 18, 2018

ದಿನೇಶ ಉಪ್ಪೂರ:

*ನನ್ನೊಳಗೆ-_ 83*

ನಮ್ಮ ಮನೆಯಿಂದ ಉತ್ತರದ ಬೈಲು ಗದ್ದೆಯಲ್ಲಿಯೇ ಸ್ವಲ್ಪ ಮುಂದೆ ಹೋದರೆ ಮುದೂರಿಯ ಹತ್ತಿರ ತೋಡಿನ ದಂಡೆಯ ಆ ಬದಿಯ ಎತ್ತರದ ಜಾಗದ ಗುಡ್ಡೆಯಲ್ಲಿ ಪುರುಷ ನಾಯ್ಕ ಅಂತ ಒಬ್ಬ ಕುಡುಬಿಯ ಮನೆ ಇತ್ತು. ಮನೆ ಅಂದರೆ ಎಂತದ್ದು. ಒಂದು ಗುಡಿಸಲು. ಮೇಲೆ ಅಡಿಕೆ ಯ ಸೋಗೆಯ ಹೊದಿಕೆ, ತೆಂಗಿನ ಮಡಲಿನ ದಿಡಕಿಯ ಗೋಡೆ. ಮನೆಗೆ ಬಾಗಿಲೂ ಅದರದ್ದೆ. ಆ ಪುರುಷನಿಗೆ ಮೂರೋ ನಾಲ್ಕೋ ಗಂಡು ಮಕ್ಕಳು. ಹಿರಿಯವನು ಬೆಳ್ಳ ನಂತರ ರಾಮ ಗಿಡ್ಡ... ಹೀಗೆ.

 ಹಿರಿಯವನಾದ ಬೆಳ್ಳ ಶಾಲೆಗೆ ಹೋದವನಲ್ಲ. ಸ್ವಲ್ಪ ಓಡಾಡಲು ಆಗುವಾಗಲೇ ಅಲ್ಲಿಯೇ ಹತ್ತಿರ ಇದ್ದ ಬ್ರಾಹ್ಮಣರ ಮನೆಯಲ್ಲಿ ಗಂಟಿ ಮೇಯಿಸುವ ಕೆಲಸ.  ಮೈಮೇಲೆ ಸೊಂಟಕ್ಕೆ ಒಂದು ತುಂಡು ಪಂಚೆ ಬಿಟ್ಟರೆ ಬೇರೆ ಇಲ್ಲ.  ಓದಲು ಅಲ್ಲಿಯೇ ಹತ್ತಿರ ಮುಧೂರಿ ದೇವಸ್ಥಾನದ ಪೌಳಿಯಲ್ಲಿ ಶಾಲೆ ಇದ್ದರೂ, ಅವನು ಶಾಲೆಗೆ ಹೋದವನಲ್ಲ. ಬದಲು ಅಪ್ಪನ ಜೊತೆಗೆ ಗದ್ದೆಗೆ ಇಳಿದು ಹೂಟಿಗೆ ಗುಡ್ಡಿಗೆ ಹೋಗಿ ಸೊಪ್ಪು ಸೌದೆ ತರಲು ಸಹಾಯಕ್ಕಾದಾನು. ಓದುವ ಅವಕಾಶ ಇದ್ದರೂ ಅವನ ಅಪ್ಪನ ಧೋರಣೆಯೇ ಬೇರೆ., ಬಡವರಾದ ನಮಗೆ ಓದೆಲ್ಲ ಯಾಕೆ?  ಬೇರೆಯವರ ಮನೆಯ ಹಟ್ಟಿಗೆ ಸೊಪ್ಪು ತರುವ, ಅವರ ಗದ್ದೆಯ ಕೆಲಸ ಮಾಡಿ ದುಡಿಮೆ ಮಾಡುವ ನಮಗೆ, ಓದಿನಿಂದ ಹೊಟ್ಟೆ ತುಂಬತ್ತಾ?  ದೇಹದಲ್ಲಿ ಕಸುವು ಇರುವವರೆಗೆ ದುಡಿಯುವುದಪ ಅಂತ. ಇರಲಿ.

ಒಮ್ಮೆ ಬೆಂಗಳೂರಿನ ನಮ್ಮ ಸಂಬಂಧಿಕರೊಬ್ಬರ ಹೋಟೇಲಿಗೆ ಕ್ಲೀನರ್ ಬೇಕಾಗಿತ್ತು. ಕ್ಲೀನರ್ ಕೆಲಸಕ್ಕೆ ಜನ ಸಿಗುತ್ತಿರಲಿಲ್ಲ. ಸಿಕ್ಕಿದರೂ ಹೆಚ್ಚು ಕಾಲ ಅವರು ನಿಲ್ಲುತ್ತಿರಲಿಲ್ಲ. ಯಜಮಾನರ ಜೋರಿಗೆ ಹೆದರಿಯೋ, ಆಗಲೇ ಪರಿಚಯವಾದ ಬೇರೆ ಹೊಟೇಲಿನಲ್ಲಿ ಒಂದು ರೂಪಾಯಿ ಹೆಚ್ಚು ಕೊಡುತ್ತಾರೆ ಅಂತಲೋ, ಬೆಂಗಳೂರಿನ ನೀರು ಕುಡಿದು ಜನ ಜೀವನ ಕಂಡು ತಲೆಕೆಟ್ಟೋ ಅಥವ ಸೊಕ್ಕಿಯೋ, ಏನೋ, ಅಂತೂ ಅಲ್ಲಿ ನಿಲ್ಲದೇ ಸ್ವಲ್ಪದಿನದಲ್ಲಿಯೇ ಹೇಳದೇ ಕೇಳದೇ ಹೋಗಿಬಿಡುತ್ತಿದ್ದರು. ಹಾಗಾಗಿ "ಊರಬದಿಯಲ್ಲಿ ಯಾರಾದರೂ ಶೂದ್ರ ಗಂಡುಗಳು ಇದ್ರೆ ಹೇಳಿ ಮರ್ರೆ ಒಳ್ಳೆ ಸಂಬಳವನ್ನೂ ಕೊಡುವ" ಎಂದು ಅಪ್ಪಯ್ಯ ಬೆಂಗಳೂರಿಗೆ ಆಟಕ್ಕೆ ಅಂತ ಹೋದಾಗ ಒಬ್ಬ ಹೋಟೇಲಿನ ಯಜಮಾನರು ಮಾತಾಡುತ್ತಾ ಹೇಳಿದರಂತೆ.

ಅಪ್ಪಯ್ಯ ಮನೆಗೆ ಬಂದಿದ್ದಾಗ ಈ  ಪುರುಷ ಎಲ್ಲಿಗೋ ಹೋಗುವವನು ಸಂಜೆ ನಮ್ಮ ಮನೆಗೆ , "ಅಮ್ಮಾ ಒಂದು ವೀಳ್ಯ ಕೊಡಿ" ಎನ್ನುತ್ತಾ ಬಂದು ಮಾತಾಡುವಾಗ, ಅಮ್ಮ ಕೇಳಿದಳು "ಪುರುಷಾ, ನಿನ್ನ ಹೆರೀ ಗಂಡನ್ನು ಹೋಟೇಲಿಗೆ ಕಳಿಸುವ ಯೋಚನೆ ಇದ್ದರೆ ಹೇಳು. ನಾಲ್ಕು ರೂಪಾಯಿ ಸಂಪಾದನೆಯೂ ಆಗುತ್ತದೆ. ಬೆಂಗಳೂರಿನ ನಮ್ಮ ಪೈಕಿಯವರಿಗೊಂದು ಜನ ಬೇಕಿತ್ತಂತೆ" ಎಂದು ಅಪ್ಪಯ್ಯನಿಂದ ವಿಷಯ ತಿಳಿದು ಅಂದಳು. ಆಗ ಅಪ್ಪಯ್ಯನೂ "ಹೌದು ಮಾರಾಯಾ, ಕಳ್ಸುದಾದ್ರೆ ಹೇಳು" ಎಂದರು.  ಅವನು " ಹಾಂ ಹೂಂ ಕಾಂಬೋ ಕೇಂಬೋ" ಆಂದ. ಮನೆಗೆ ಹೋಗಿ ಆ ಬೆಳ್ಳನ ಹತ್ರ ಕೇಳಿದಾಗ, ಅವನು ಕೂಡಲೇ ಒಪ್ಪಿಯೇ ಬಿಟ್ಟನಂತೆ. ಪುರುಷ  ಮರುದಿನ ಬಂದು "ಗಂಡ್ ಬತ್ತತ್ತಂಬ್ರೆ" ಅಂದ. ಅಮ್ಮ ಆ ಗಂಡನ್ನು ಬರಲಿಕ್ಕೆ ಹೇಳಿ, ನನ್ನ ಅಣ್ಣಯ್ಯನದ್ದೇ ಎರಡು ಜೊತೆ ಹಳೆಯ ಅಂಗಿ ಚಡ್ಡಿಗಳನ್ನೂ ಕೊಟ್ಟು ಕಳಿಸಿದ್ದಾಯಿತು.

ನಂತರ ಬೆಂಗಳೂರಿಗೆ ಬಸ್ಸು ಹತ್ತಿಸಿ ಕಳಿಸಿ ಕೊಡುವ. ಅಲ್ಲಿ ಮೆಜೆಸ್ಟಿಕ್ಕಿಗೆ ಬಂದು ಕರೆದುಕೊಂಡು ಹೋದರಾಯಿತಲ್ಲ ಅಂತ ಯೋಚಿಸಿ, ಇಂತಾ ದಿನ ಬರುತ್ತಾನೆ ಎಂದು ಆ ಹೋಟೇಲಿನ ಯಜಮಾನರಿಗೆ ಪತ್ರ ಬರೆದು ತಿಳಿಸಿಯೂ ಆಯಿತು. ಬಸ್ಸಿನ ಹೆಸರು ಹುಡುಗನ ಹೆಸರೂ ಬರುವ ದಿನಾಂಕ ಎಲ್ಲವನ್ನೂ ತಿಳಿಸಿದರು

ಹೀಗೆ ಪುರುಷನ ಮಗ ಬೆಳ್ಳ ಕುಷಿಯಿಂದಲೇ ಬೆಂಗಳೂರು ಸೇರಿದ. ಸ್ವಲ್ಪ ದಿನ ಹೋಟೇಲು ಕೆಲಸವನ್ನೂ ಮಾಡಿದ. ಒಂದು ನಾಲ್ಕು ದಿನ ಕಳೆಯತ್ತಲೇ ಗಂಡಿಗೆ ಅಮ್ಮ ಅಪ್ಪನ ನೆನಪು ಕಾಡಲು ಶುರುವಾಯಿತು. ಮನೆಗೆ ಹೋಗುವ ಇಚ್ಚೆ ಜೋರಾಯಿತು. ಅಲ್ಲಿಯವರ ಹತ್ತಿರ ಹೇಳಿದರೆ ಯಾರೂ ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ದಿನ ಕಳೆದಂತೆ  ಬೆಳ್ಳನಿಗೆ ಅಲ್ಲಿರಲು ಆಗಲೇ ಇಲ್ಲ ಎಂಬ ಸ್ಥಿತಿ ಬಂತು. ಕೊನೆಗೆ ಒಂದು ದಿನ ಊರಿಗೆ ಹೋಗುತ್ತೇನೆ ಅಂತ ಹೊರಟೆ ಬಿಟ್ಟ. ಅಲ್ಲಿಯವರಲ್ಲಿ ಹೇಳಲೂ ಇಲ್ಲ.

 ಕೈಯಲ್ಲಿ ಬಿಡಿಗಾಸೂ ಇಲ್ಲ. ಒಂದು ಅಂದಾಜಿನ ಮೇಲೆ ನಡೆಯುತ್ತಾ ನಡೆಯಿತ್ತಾ ಬಹಳ ದೂರ ಬಂದುಬಿಟ್ಟ. ಆ ಊರು ಈ ಊರು ಹಾದು ಹೇಗೋ ಶಿವಮೊಗ್ಗಕ್ಕೆ ಬಂದುದಾಯಿತು. ಮತ್ತೆ ಕುಂದಾಪುರದ ಹೆಸರು ಹೇಳಿ ಅವರಿವರಲ್ಲಿ ವಿಚಾರಿಸಿಕೊಂಡು ಯಾರು ಯಾರನ್ನೋ ವಿಚಾರಿಸಿ ಘಟ್ಟವನ್ನೂ ಇಳಿದು ಒಂದು ಹತ್ತು ಹದಿನೈದು ದಿನದ ನಂತರ ಊಟ ತಿಂಡಿ ಇಲ್ಲದೇ ನಿತ್ರಾಣಿಯಾಗಿ ಮನೆ ತಲುಪಿದ ಅಂತ ಆಯಿತು.

 ಅಲ್ಲಿ ಬೆಂಗಳೂರಿನಲ್ಲಿ ಇವನನ್ನು ಹುಡುಕಿದ್ದೇ ಹುಡುಕಿದ್ದು. ಕೊನೆಗೆ ಬೇರೆ ಹೋಟೇಲಿಗೆ ಹೋದನೋ ಏನೋ ಎಂದು ಅವರೂ ಸುಮ್ಮನಾದರು. ಕಣ್ಣು ಕಾಣದ ಆ ದೊಡ್ಡ ಊರಿನಲ್ಲಿ ಎಲ್ಲಿ  ಅಂತ ಹುಡುಕಿಸಿಯಾರು?. ಮತ್ತೊಮ್ಮೆ ಅಪ್ಪಯ್ಯ ಬೆಂಗಳೂರಿಗೆ ಹೋದಾಗಲೇ ಗೊತ್ತಾದದ್ದು ಈ ಮಹಾರಾಯಾ ನಡೆದುಕೊಂಡೇ ಊರಿಗೆ ಬಂದಿದ್ದಾನೆ ಎಂದು. ಗಂಡಿನ ಸಾಹಸಕ್ಕೆಎಲ್ಲರೂ ತಲೆತೂಗಿದ್ದೇ "ಸಾಕು ಮಾರಾಯ ನಿನ್ನ ಸಾಹಸ. ದಾರಿ ತಪ್ಪಿಹೋಗಿ, ಬೇರೆ ಎಲ್ಲಿಯಾದರೂ ಹೋಗಿದ್ದರೆ ದೇವರೇ ಗತಿಯಾಗುತ್ತಿತ್ತು" ಎಂದರೆ ಅವನು ಸುಮ್ಮನೇ ನಗಾಡುತ್ತಿದ್ದ.

ಗುರುವಾರ, ಮಾರ್ಚ್ 15, 2018

ದಿನೇಶ ಉಪ್ಪೂರ:

*ನನ್ನೊಳಗೆ - 82*

ನಮ್ಮ ಪಡುಹಾಲಾಡಿಯ ಹತ್ತಿರದ ದಕ್ಚಿಣದಿಕ್ಕಿನ  ಬಯಲಿನ ಅಂಚಿನಲ್ಲಿ ಕುಚ್ಚಾಳು ಎಂಬ ಸಣ್ಣ ಊರಿನಲ್ಲಿ ಪೈಕ ನಾಯ್ಕ ಅಂತ ಒಬ್ಬ ಕುಡುಬಿ ಇದ್ದ. ನಾನು ನೋಡುವಾಗಲೇ ಅವನಿಗೆ ಅರವತ್ತರ ಮೇಲೆ ಪ್ರಾಯವಾಗಿತ್ತು. ಬಾಯಿಯ ತುಂಬಾ ಯಾವಾಗಲೂ ಎಲೆಯಡಿಕೆ ಹಾಕಿ, ಹೊಗೆಸೊಪ್ಪಿನ ಸಣ್ಣ ತುಂಡಿಗೆ ಸುಣ್ಣ ಒರೆಸಿ ಬಾಯಿಯಲ್ಲಿ ಇಟ್ಟುಕೊಳ್ಳುತ್ತಿದ್ದ. ಬಯಲು ಗದ್ದೆಯ ಅಂಚಿನಲ್ಲಿ ಎದುರು ಸಿಕ್ಕಾಗ ಗದ್ದೆಗೆ ಇಳಿದು ನಮಗೆ ದಾರಿ ಬಿಟ್ಟು ಕೊಡುತ್ತ, "ಅಯ್ಯ ಶಾಲಿಗ್ ಹ್ವಾತ್ರ್ಯಾ?" ಎಂದು ಪ್ರಶ್ನಿಸಿ ನಾವು ಉತ್ತರ ಕೊಡುವುದರ ಒಳಗೆ, ಮುಖ ಅಡ್ಡಮಾಡಿ, ತೋರು ಬೆರಳು ಮಧ್ಯದ ಬೆರಳುಗಳಿಂದ ಬಾಯಿಯನ್ನು ಮುಚ್ಚಿ, ಅದರ ಮಧ್ಯದಲ್ಲಿ ಎಂಜಲನ್ನು  ಪಿಚಕ್ ಎಂದು ಗದ್ದೆಗೆ ಉಗಿದುಬಿಡುತ್ತಿದ್ದ.

 ಅವನು ಗದ್ದೆಯಲ್ಲಿ ಮೈಮುರಿದು ದುಡಿಯುವವನಾದ್ದರಿಂದ ದುಡಿಮೆ ಇಲ್ಲದಿದ್ದಾಗ ಅಥವ ದುಡಿದು ಮೈಕೈ ನೋವು ಅನ್ನಿಸಿದಾಗ ಅವನು ಹಾಲಾಡಿ ಬಸ್ ಸ್ಟಾಂಡಿನ ಬಳಿ ಇದ್ದ ಸಾರಾಯಿ ಅಂಗಡಿಯ ಎದುರೇ ಇರುತ್ತಿದ್ದ. ರಾತ್ರಿ ರಸ್ತೆ ಅಳೆಯುತ್ತಾ ಅಡ್ಡಡ್ಡಕ್ಕೆ ಹೋಗುತ್ತಾ, ಬಾಯಿಯಲ್ಲಿ ತನ್ನಷ್ಟಕ್ಕೆ ಎನೇನೋ ಮಾತಾಡುತ್ತಾ ಮನೆಗೆ ಸೇರುತ್ತಿದ್ದ.

ಸುಮ್ಮನೇ ಅವನ ವಿಷಯ ಇಷ್ಟು ಹೇಳಿದ್ದಲ್ಲ. ಆ ಪೈಕ ನಾಯ್ಕ ನಮ್ಮ ಊರಿನ ಗೋ ಡಾಕ್ಟರ್. ನಾಟಿ ವೈದ್ಯ. ನಮ್ಮ ಮನೆಯಲ್ಲಿ ಇರುವ ದನವೋ ಎತ್ತೋ ಹೋರಿಯೇ ಕರುವೋ ಕುತ್ತಿಗೆ ಅಡ್ಡ ಹಾಕಿ ಮಲಗಿದರೆ, ಹೊಟ್ಟೆ ಉಬ್ಬರಿಸಿದರೆ, ಮೇಯುವಾಗ ಬಿದ್ದು ಕಾಲು ಪ್ಲಾಕ್ಚರ್ ಮಾಡಿಕೊಂಡರೆ, ನಾವು ಅವನನ್ನು ಹುಡುಕಿಕೊಂಡು ಹೋಗಬೇಕಾಗಿತ್ತು.  ಗಂಟಿಗಳಿಗೆ ಕಾಯಿಲೆ ಬರಬಾರದು ಒಣಗು ವಗೈರೆ ಬರಬಾರದು  ಅಕ್ಕಚ್ಚು ಬೈರು ಸರಿಯಾಗಿ ತಿನ್ನಬೇಕು ಅಂತ ಅಮ್ಮ ಆಗಾಗ ಹರಕೆ ಹೇಳಿಕೊಂಡು, ಬೊಬ್ಬರ್ಯನ ಬ್ರಹ್ಮನ ಹೆಸರು ಹೇಳಿ ಕಾಯಿಯನ್ನು ಸುಳಿದು ಮನೆಯ ಹಟ್ಟಿಯ ಮಾಡಿಗೆ ತೂಗು ಹಾಕುತ್ತಿದ್ದಳು. ಆದರೂ ಕೆಲವೊಮ್ಮೆ ಇದ್ದಕ್ಕಿದ್ದಂತೆ ದನಗಳಿಗೆ ಏನಾದರೂ ಕಾಯಿಲೆ ಬಂದು ಮನೆಯ ಎಲ್ಲರಿಗೂ ಆತಂಕ ಸೃಷ್ಟಿಯಾಗುತ್ತಿತ್ರು. ಆಗ ಆ ಪೈಕ ನಾಯ್ಕನನ್ನು ಹುಡುಕಿಕೊಂಡು ಹೋಗಬೇಕು. ಆದ್ದರಿಂದ ಅವನ್ನು ಗೊತ್ತಿಲ್ಲ ಅನ್ನುವವರೇ ನಮ್ಮ ಊರಿನಲ್ಲಿ ಇರಲಿಲ್ಲ.

ನಾವು ಬೇಸಿಗೆಯಲ್ಲಿ ಮಧ್ಯಾಹ್ನ ಗಂಟಿಗಳನ್ನು ಬಯಲಿನ ದೊಡ್ಡ ಗದ್ದೆಗೋ ಮಕ್ಕಿಗೋ ಮೇಯಿಸಲು ಎಬ್ಬಿಕೊಂಡು ಹೋಗುವುದಿತ್ತು. ಬಿಸಿಲಿನ ರಾಪಿಗೆ ಮೇವು ಒಣಗಿ ಹಸಿರು ಕಮ್ಮಿಯಾಗುತ್ತಾ ಬರುವಾಗ ಧರೆಯ ಅಂಚಿನಲ್ಲಿರುವ ಹಳುವಿಗೋ ಮರದ ಬುಡದ ಸೊಪ್ಪಿಗೋ ಬಾಯಿ ಹಾಕುವಾಗ ಕೆಲವೊಮ್ಮೆ ಧರೆಯ ಅಂಚಿನಲ್ಲಿ ಜಾರಿ ದನಗಳು ಧರೆಯ ಕೆಳಗೆ ಜಾರಿ ಬೀಳುವುದು. ಒಮ್ಮೆ ಹಾಗೆಯೇ ಆಯಿತು. ಧರೆಯ ಅಂಚಿನಲ್ಲಿ ಮೇಯುತ್ತಿದ್ದ ನಮ್ಮ ಹಾಲು ಕರೆಯುವ ದೊಡ್ಡ ದನ ಹಸಿರು ಬೆರಕೆಸೊಪ್ಪನ್ನು ನೀಕಿ ನೀಕಿ ಬಾಯಿಯಲ್ಲಿ ಕಚ್ಚಿ ಎಳೆಯಲು ಪ್ರಯತ್ನಿಸುತ್ತಿರುವಾಗ ಆಯ ತಪ್ಪಿ ಧರೆಯ ಅಂಚಿನ ಮಣ್ಣು ಜರಿದು ಬಿದ್ದು ಬಿಟ್ಟಿತು. ಗ್ರಹಚಾರಕ್ಕೆ ಹಲಸಿನ ಬೇರೊಂದಕ್ಕೆ ಹಿಂದಿನ ಕಾಲು ಸಿಕ್ಕಿ ಬಿದ್ದು ಮಧ್ಯದಲ್ಲಿ ದನ ನೇತಾಡತೊಡಗಿತು. ಶಬ್ಧ ಕೇಳಿ ಓಡಿಬಂದ ನಾವು ದನದ ಅವಸ್ಥೆಯನ್ನು ನೋಡಿ ಬೊಬ್ಬೆ ಹೊಡೆದೆವು. ಮನೆಯ ಕೆಲಸದ ಆಳು ಬೆಳ್ಳ ರಾಮ ನಮ್ಮ ಮನೆಯವರು ಎಲ್ಲರೂ ಓಡಿಬಂದರು.

ಆ ದನದ ಅಸಹಾಯಕ ಪರಿಸ್ಥಿತಿಯನ್ನು ನೋಡಿ ನಮಗೆ ಸಂಕಟವಾಯಿತು. ನಮ್ಮಂತೆ ಬೊಬ್ಬೆ ಹೊಡೆದು ದುಃಖಿಸಲೂ ನೋವನ್ನು ತಿಳಿಸಲು ಸಹ ಮೂಕ ಪ್ರಾಣಿಗೆ ಆಗುವುದಿಲ್ಲವಲ್ಲ. ಆಗ ಬೆಳ್ಳ ಒಂದು ಗರಗಸವನ್ನು ತಂದು ಧರೆಯ ಆಯಕಟ್ಟಿನ ಜಾಗದಲ್ಲಿ ನಿಂತು, ಹಲಸಿನ ಬೇರನ್ನು ಕತ್ತರಿಸಿ ಹಾಕಿದ. ಮರದ ಬೇರು ಒಮ್ಮೆಲೇ ತುಂಡಾದ ಹೊಡೆತಕ್ಕೆ ದನ  ಮತ್ತೆ ಗಾಬರಿಯಾಗಿ ಅಂಬಾ ಎಂದು ಅರಚುತ್ತಾ ಕೆಳಗೆ ಬಿತ್ತು. ಎಲ್ಲರೂ ಹತ್ತಿರ ಓಡಿ ಹೋದೆವು. ಬೇರಿನ ಮಧ್ಯ ಸಿಕ್ಕಿದ ಅದರ ಹಿಂದಿನ ಎಡಕಾಲು ಮುರಿದು ಹೋಗಿ ನೇತಾಡುತ್ತಿತ್ತು. ಮುಟ್ಟಿ ನೋಡುವ ಎಂದರೆ ಆ ಕಾಲಿನ ಹತ್ತಿರಕ್ಕೆ ಹೋದರೆ ದನ ನೋವಿನಿಂದ ಮೂತಿಯಿಂದ ನಮ್ಮನ್ನು ದೂಡಿ ಅಂಬಾ ಎಂದು ಅರಚುತ್ತಿತ್ತು. ಆಗಲೇ ಸಂಜೆಯಾಗುತ್ತಾ ಬರುತ್ತಿದ್ದು ಕತ್ತಲು ಆವರಿಸತೊಡಗಿತ್ತು. ಏನು ಮಾಡುವುದು? ಅಂತ ಚರ್ಚೆಯಾಯಿತು.  ಕಾಲಿಗೆ ಬ್ಯಾಂಡೇಜು ಮಾಡಲು ಪೈಕ ನಾಯ್ಕನೇ ಬೇಕು.

ಸರಿ. ಒಬ್ಬರು ಪೈಕನಾಯ್ಕ ಎಲ್ಲಿದ್ದ ಅಂತ ಹುಡುಕಿಕೊಂಡು ಹೊರಟೇ ಬಿಟ್ಟರು. ಮತ್ತೆಲ್ಲಿರುತ್ತಾನೆ ಅಷ್ಟು ಹೊತ್ತಿನಲ್ಲಿ.? ಹಾಲಾಡಿ ಪೇಟೆಗೆ ಹೋಗಿ ಸಾರಾಯಿ ಅಂಗಡಿಯ ಎದುರು ತೂರಾಡುತ್ತಿದ್ದ ಅವನನ್ನು ಹುಡುಕಿ ಒತ್ತಾಯಿಸಿ ಮನೆಗೆ ಕರೆದು ತಂದಾಯಿತು. ದನವನ್ನು ಅಂಗಳದ ಹತ್ತಿರವಿರುವ ಸೌದೆ ಕೊಟ್ಟಿಗೆಗೆ ಹೊತ್ತು ತಂದು ಮಲಗಿಸಿದರು. ಆಗಲೇ ಕತ್ತಲು ಆವರಿಸತೊಡಗಿತ್ತು. ಪೈಕ ನಾಯ್ಕ  ನಮ್ಮ ಮನೆಗೆ ಮೂರು ಮೈಲಿ ನಡೆದು ಬಳಲಿದ್ದರೂ ಸ್ವಲ್ಪ ತೂರಾಡುತ್ತಲೇ ಆದರೆ ಬಹಳ ಗಂಭೀರವಾಗಿದ್ದು  ಬಂದವನೇ ಒಂದು ಬ್ಯಾಟರಿ ಲೈಟನ್ನು ಕೊಡಲು ಹೇಳಿ ಆಚೆ ಈಚೆ ಮನೆಯ ಹಿಂದೆ ಓಡಾಡಿದ. ಲೈಟನ್ನು ತೆಗೆದುಕೊಂಡು ತೋಟಕ್ಕೆ ಹಿತ್ತಲಿಗೆ ಹೋಗಿ ಸುತ್ತಾಡಿ, ಏನೋ ಒಂದೆರಡು ಹಸಿರು ಸೊಪ್ಪನ್ನು ತಂದ.  ಬೇರುಗಳನ್ನು ತಂದ. ಅವನ ಮೈ ವಾಸನೆ ಬರುತ್ತಿದ್ದರೂ ಆಗ ತಾಳ್ಮೆಯ ಮೂರ್ತಿಯಾಗಿದ್ದ. ಯಾವುದೇ ಗಡಿಬಿಡಿ ಇರಲಿಲ್ಲ. ಕಾಲದ, ಸಮಯದ ಗೊಡವೆಯೇ ಇದ್ದಂತಿರಲಿಲ್ಲ. ತಂದ ಸೊಪ್ಪುಗಳನ್ನು ಬಟ್ಟೆ ಒಗೆಯುವ ಕಲ್ಲಿನ ಮೇಲೆ ಇಟ್ಟು, ಅರೆಯುವ ಕಲ್ಲಿನ ಮಗುವನ್ನು ಅದರ ಮೇಲೆ ನಿಧಾನವಾಗಿ  ಓಡಿಸಿ ಓಡಿಸಿ ಸಣ್ಣಗೆ ಮಾಡಿದ. ಅದನ್ನು ಅಂಗೈಯಲ್ಲಿ ಹಿಡಿದು ದನವನ್ನು ಅಲುಗಾಡದ ಹಾಗೆ ಹಿಡಿದುಕೊಳ್ಳಲು ಹೇಳಿದ.

ಬಾಯಿಯಲ್ಲಿ ಎಲೆಯಡಿಕೆ ಹಾಕಿ ಅದು ಕೆಳಗೆ ಬೀಳಬಾರದೆಂದು ಮೇಲೆ ನೋಡುತ್ತ ಮಾತಾಡಿ ಆದೇಶಿಸುತ್ತಿದ್ದ. ಕೆಲವೊಮ್ಮೆ ಅವನು ಏನು ಹೇಳುತ್ತಾನೆ ಅಂತಲೇ ಗೊತ್ತಾಗುತ್ತಿರಲಿಲ್ಲ. ಆದರೆ ಮತ್ತೆ ಮತ್ತೆ ಕೇಳಿಸಿಕೊಂಡು ಅವನ ಆದೇಶಕ್ಕೆ ಎಲ್ಲರೂ ಮಂತ್ರ ಮುಗ್ಧರಂತೆ ಕೆಲಸಮಾಡುತ್ತಿದ್ದರು.

ಒಂದು ಅಡಿಕೆಯ ಹಾಳೆಯನ್ನು ಅವನ ಆಜ್ಞೆಯಂತೆ ತಂದರು. ಒಂದು ಸಪೂರ ಹುರಿ ಹಗ್ಗವನ್ನೂ ಹುಡುಕಿ ತಂದರು. ದನದ ಕಾಲನ್ನು ಇಬ್ಬಿಬ್ಬರು ಒತ್ತಿಹಿಡಿದು ದನವು ಅಲ್ಲಾಡದ ಹಾಗೆ ಗಟ್ಟಿಯಾಗಿ ಹಿಡಿದುಕೊಂಡರು. ದನದ ಕಾಲನ್ನು ಒಮ್ಮೆ ಗಟ್ಟಿಯಾಗಿ ಹಿಡಿದು ಏನೋ ಮಂತ್ರ ಹೇಳುವಂತೆ ಹಿಡಿದ ಪೈಕ ನಾಯ್ಕ ಅದರ ಸುತ್ತ ಸೊಪ್ಪನ್ನು ಹಚ್ಚಿ ಏನೋ ರಸವನ್ನು ಅದಕ್ಕೆ ಬಿಟ್ಟು ಅಡಿಕೆ ಹಾಳೆಯಿಂದ ಸುತ್ತಿದ. ಸುತ್ತಲೂ ನಾಲ್ಕಾರು ಅಡಿಕೆಯ ಮರದ ದಬ್ಬೆಯನ್ನು ಇಟ್ಟು ಮೇಲೆ ಹುರಿ ಹಗ್ಗದಿಂದ ಗಟ್ಟಿಯಾಗಿ ಬಿಗಿದು ಸುತ್ತಿ ಕಾಲನ್ನು ಬಿಗಿಯಾಗಿ ಕಟ್ಟಿದ. ಬ್ಯಾಂಡೇಜ್ ಆಯಿತು.  ಲಾಟೀನು ಬ್ಯಾಟರಿ ಚಿಮಣಿ ದೀಪ ಹಿಡಿದು ಸುತ್ತಲೂ ನಿಂತ ಮನೆಯವರು ಒಬ್ಬೊಬ್ಬರೇ ದನವನ್ನು ಕತ್ತಲಲ್ಲಿ ಬಿಟ್ಟು ಮನೆ ಸೇರಿದೆವು. ಪಾಯ್ಕನಾಯ್ಕನಿಗೆ ಅಕ್ಕಿ ಕಾಯಿಯ ಮರ್ಯಾದೆಯೂ ಸಂದಿತು. ದನವೂ ಹತ್ತು ಹದಿನೈದು ದಿನದಲ್ಲಿ ಎದ್ದು ಕಾಲೂರಿ ಓಡಾಡಲು ಸಮರ್ಥವಾಯಿತು.

ಮಂಗಳವಾರ, ಮಾರ್ಚ್ 13, 2018

ದಿನೇಶ ಉಪ್ಪೂರ:

* ನನ್ನೊಳಗೆ- 81*

ಹಿಂದೆ ನನ್ನ ಹತ್ತಿರವಿದ್ದ  ಕೈನೆಟಿಕ್ ಹೊಂಡಾ  ಹಳೆಯದಾಗಿತ್ತು. ಆಗಾಗ ರಿಪೇರಿಗೆ ಬರುತ್ತಿತ್ತು. ಆದರೂ ನನಗೆ ಮಾರುವ ಮನಸ್ಸಿರಲಿಲ್ಲ. ಸ್ನೇಹಿತರೆಲ್ಲ "ಇದೆಂತಹ ಹಳೆಯ ಲಟ್ಕಾಸಿ ಗಾಡಿ ಮರಾಯ್ರೆ!  ಮಾರಿಬಿಟ್ಟು ಒಂದು ಒಳ್ಳೆಯ ಸ್ಕೂಟರ್  ತೆಗೆದುಕೊಳ್ಳಬಾರದೇ?" ಎಂದು ತಮಾಷೆ ಮಾಡುತ್ತಿದ್ದರು. ನಾನು "ಇರಲಿ. ನೋಡುವ" ಎಂದು ಅದರಲ್ಲೇ ದಿನದೂಡುತ್ತಿದ್ದೆ.

ಉಡುಪಿಗೆ ಹೋಗುವ ದಾರಿಯಲ್ಲಿಯೇ ತಾಂಗದಗಡಿ ಎಂಬಲ್ಲಿ ದಿನೇಶ ಎಂಬ ಒಬ್ಬನ ಗ್ಯಾರೇಜ್ ಇತ್ತು. ಅವನು, "ನಿಮ್ಮ ಗಾಡಿ ಒಳ್ಳೆಯದಿದೆ. ಈಗ ಇಂತಹ ಗಾಡಿ ಸಿಗುವುದೇ ಇಲ್ಲ. ಮಾರಾಟ ಮಾಡಬೇಡಿ" ಎನ್ನುತ್ತಿದ್ದ.

ಮುಂಚೆ, ಕರಾವಳಿ ಹತ್ತಿರದ ಒಬ್ಬ ಗ್ಯಾರೇಜ್ ನವನು ಇವನಿಗಿಂತ ಭಿನ್ನವಾಗಿ "ಈಗ ಕೈನೆಟಿಕ್ ಹೊಂಡದ ಪಾರ್ಟ್ಸ್ ಸಿಕ್ಕುವುದಿಲ್ಲ. ಆದ್ದರಿಂದ ಇದನ್ನು ಬೇಗ ಯಾರಿಗಾದರೂ ದಾಟಿಸುವುದು ಒಳ್ಳೆಯದು. ಬದಲಾಯಿಸಿ ಬಿಡಿ" ಎಂದಾಗ, ನಾನು ಅವನನ್ನೇ ಬದಲಾಯಿಸಿ ಈ ದಿನೇಶನನ್ನು ಹಿಡಿದಿದ್ದೆ. ಅಲ್ಲದೇ ಈಗ ಯಾವುದೇ ಯಂತ್ರದ, ಉಪಕರಣದ ಬಿಡಿ ಭಾಗ ಕೆಲಸ ಮಾಡದಿದ್ದರೆ, ಅದನ್ನು ರಿಪೇರಿ ಮಾಡಲು ಹೋಗದೇ ಆ ಇಡೀ ಭಾಗವನ್ನೇ ಬದಲಾಯಿಸಿಯೇ ಬಿಡುತ್ತಾರೆ.

ಆದರೆ ಇವನು, "ಗಾಡಿ ಒಳ್ಳೆಯದುಂಟು ಮಾರಾಯ್ರೆ!" ಎಂದು ನಾನು ರಿಪೇರಿಗೆ ಹೋದಷ್ಟು ಸಲವೂ ಹೇಳಿ, ಹಾಳಾದದ್ದನ್ನು ಅದು ಹೇಗೋ ಲಂಗ್ ಲಸ್ಕ್ ಮಾಡಿ ಸರಿ ಮಾಡಿಕೊಡುತ್ತಿದ್ದ. ಅದು ಸ್ವಲ್ಪ ಸಮಯದಲ್ಲಿಯೇ ಮತ್ತೆ ಕೈಕೊಡುತ್ತಿತ್ತು. ನನಗೆ ಅವನು ರಿಪೇರಿ ಮಾಡಲು ತೋರುವ ಉತ್ಸುಕತೆ ಕಡಿಮೆ ಆಗದೇ ಇರುವುದೇ ಮನಸ್ಸಿಗೆ ಹಿಡಿಸಿತ್ತು. ಆದರೆ ಪದೇ ಪದೇ ಅವನಲ್ಲಿಗೆ ದೂಡಿಕೊಂಡು ಹೋಗಿಯೋ, ಅವನನ್ನು ಮನೆಗೆ ಬರಲು ಹೇಳಿಯೋ, ಅದು ಹಾಳಾದಲ್ಲಿಯೇ ಇಟ್ಟು, ಅವನಿಗೆ ಪೋನ್ ಮಾಡಿ ತೆಗೆದುಕೊಂಡು ಹೋಗಲೋ ಹೇಳುವಾಗ ನನಗೇ ಕಿರಿಕಿರಿಯಾಗುತ್ತಿತ್ತು. ಆದರೆ ಪದೇ ಪದೇ ಹಾಗಾಗಲಿಕ್ಕೆ ಶುರುವಾದಾಗ, ನನಗೆ ಕಂಡು ಕಂಡು ಸಾಕಾಗಿ ಇನ್ನು ರಿಪೇರಿ ಮಾಡಿ ಪೂರೈಸುವುದಿಲ್ಲ ಎಂದು ನಿರ್ಧರಿಸಿದ ನಾನು, ದಿನೇಶನ ಹತ್ತಿರ ಒಮ್ಮೆ, "ನೋಡುವ, ನೀವೇ ಇದನ್ನು ಯಾರಿಗಾದರೂ ಮಾರಾಟ ಮಾಡಿಕೊಡಿ ಮಾರಾಯ್ರೆ" ಎಂದೆ.

ಅವನು "ಮಾರಾಟ ಮಾಡ್ತೀರಾ? ಹೌದಾ? ಹಾಗಾದರೆ ಈಗಲೇ ಒಂದು ಗಿರಾಕಿ ಉಂಟು" ಎಂದು ಹೇಳಿ, ಸ್ವಲ್ಪ ದಿನದಲ್ಲಿಯೇ, ಭೋಜ ಪೂಜಾರಿ ಎನ್ನುವವರನ್ನು ಒಮ್ಮೆ ನನ್ನ ಮನೆಗೆ ಕರೆದುಕೊಂಡು ಬಂದ. ನನ್ನ ಸ್ಕೂಟರನ್ನು ಅವರಿಗೆ ತೋರಿಸಿ "ಗಾಡಿ ಫಸ್ಟ್ ಕ್ಲಾಸ್ ಉಂಟು ಈಗ ಬರುವ ಹೊಸಗಾಡಿಗಳೆಲ್ಲ ದಂಡ" ಎಂದು ತುಳುವಿನಲ್ಲಿ ಹೇಳಿ ಅವನನ್ನು ಉಬ್ಬಿಸಿದ. ಆಗಲೇ ಹನ್ನೆರಡು ವರ್ಷ ಆದ ನನ್ನಗಾಡಿ, ನೋಡಲೂ ಅಷ್ಟು ಚೆನ್ನಾಗಿರಲಿಲ್ಲ. ಕೆಲವು ಭಾಗಗಳು ಆಗಲೇ  ತುಕ್ಕು ಹಿಡಿದಿತ್ತು. ನಾನೂ,"ನನಗೆ ಕೊಡಲು ಮನಸ್ಸಿಲ್ಲ. ಆದರೂ ಒಳ್ಳೆಯ ರೇಟ್ ಬಂದರೆ ನೋಡಬಹುದು" ಎಂದು ಅರೆಮನಸ್ಸಿನಿಂದ ಹೇಳಿದೆ.

ಅಂತೂ ಐದು ಸಾವಿರ ಎಂದು ಹೇಳಿದ್ದು, ಕೊನೆಗೆ ಚೌಕಾಶಿ ಆಗಿ ಆಗಿ, ನಾಲ್ಕುವರೆ ಸಾವಿರಕ್ಕೆ ಮಾತು ಆಯಿತು. ಭೋಜ ಪೂಜಾರಿಯವರು ಆಗಲೇ ಐನೂರು ರೂಪಾಯಿ ಅಡ್ವಾನ್ಸ್ ನ್ನು ಕೊಟ್ಟರು. ದಿನೇಶನಿಗೆ ಅವರು ಪರಿಚಿತರಂತೆ, ಅಷ್ಟರಲ್ಲೇ ಅವನು "ಇದನ್ನು ಮತ್ತೊಬ್ಬರೂ ನೋಡಿ ಹೋಗಿದ್ದಾರೆ" ಎಂದು ಬಂಡಲ್ ಬಿಟ್ಟ.

ನನ್ನ ಹತ್ತಿರ ಸ್ಕೂಟರ್ ಗೆ ಸಂಬಂಧಿಸಿದ  ಎಲ್ಲ ದಾಖಲೆಗಳು ಇದ್ದವು. ಭೋಜ ಪೂಜಾರಿಯವರು ಪೂರ್ತಿ ಹಣವನ್ನು ಕೊಟ್ಟು ದಾಖಲೆಗಳನ್ನು ಪಡೆದುಕೊಂಡು ಹೋದರು. ಗಾಡಿಯನ್ನು ಅವರು ತೆಗೆದುಕೊಂಡು ಹೋಗುವಾಗ ನನಗೆ ಒಳಗೊಳಗೆ ಬೇಸರವೂ ಆಯಿತು. ಸ್ವಲ್ಪ ದಿನದಲ್ಲಿಯೇ ನಾನು ಮತ್ತೆ ಹೊಸ ಕೈನೆಟಿಕ್ ಹೊಂಡವನ್ನೇ ತೆಗೆದುಕೊಂಡೆ.

ಸ್ವಲ್ಪ ದಿನ ಕಳೆದಿರಬಹುದು. ಒಮ್ಮೆ ಭೋಜ ಪೂಜಾರಿಯವರು ಎದುರು ಸಿಕ್ಕಿದರು. ನನ್ನನ್ನು ಕೂಡಲೇ ಗುರುತಿಸಿ ನಿಲ್ಲಿಸಿ, "ಈ ಗಾಡಿ ಸರೀ ಇಲ್ಲ ಮಾರಾಯ್ರೆ. ಏನೋ ಪ್ರಾಬ್ಲೆಮ್ ಇತ್ತಲೆ. ಮೊನ್ನೆ ಸ್ಟಾರ್ಟೇ ಆಗಲಿಲ್ಲ. ರಿಪೇರಿಗೆ ಒಂದು ಸಾವಿರ ಖರ್ಚಾಯಿತು. ಆ ದಿನೇಶ ಈಗ ಸಿಕ್ಕುವುದೇ ಇಲ್ಲ ಮಾರಾಯ್ರೆ" ಅಂದ.

ನನಗೆ ಬೇಸರವಾಯಿತು. ನೀವು ಸರಿಯಾಗಿ ನೋಡಿಕೊಂಡೇ ತೆಗೆದುಕೊಳ್ಳಬೇಕಾಗಿತ್ತಲ್ಲವೇ? ಫೈನಲ್ ಆಗುವ ಮೊದಲು ಯಾರಿಗಾದರೂ ಒಮ್ಮೆ ತೋರಿಸಬಹುದಿತ್ತು. ಈಗ ನನಗೂ ವಾಪಾಸು ಬೇಡ. ಆದರೆ ನಿಮಗೆ ಬೇಸರವಾಗುವುದಾದರೆ, ನೀವು ಕೊಟ್ಟ ಹಣದಲ್ಲಿ ಸ್ವಲ್ಪ ಹಣವನ್ನು ಬೇಕಾದರೆ ಹಿಂದೆ ಕೊಡುತ್ತೇನೆ" ಎಂದೆ. ಅವರು "ಆ ದಿನೇಶನೇ ಇಷ್ಟು ಮಾಡಿದ್ದು. ಅವನನ್ನು ನಂಬಿ ನಾನು ಮೋಸ ಹೋದೆ" ಎಂದರು. ನಾನು "ಹಾಗಾದರೆ ಒಮ್ಮೆ ಇಬ್ಬರೂ ಆ ಗ್ಯಾರೇಜ್ ಗೆ ಹೋಗಿ ಮಾತಾಡುವ" ಎಂದೆ. ಅವರು ಮಾತಾಡಲಿಲ್ಲ. ಸ್ವಲ್ಪ  ಹೊತ್ತು ನನ್ನನ್ನು ನೋಡುತ್ತಿದ್ದು, ಕೊನೆಗೆ ಏನೋ ಗೊಣಗೊಣ ಎನ್ನುತ್ತಾ ಹೊರಟುಹೋದರು.

ಆಮೇಲೆ ನಾನು ಮತ್ತೊಮ್ಮೆ ದಿನೇಶನನ್ನು ಕಂಡು ಭೋಜ ಪೂಜಾರಿಯವರು ಸಿಕ್ಕಿ ಹೇಳಿದ್ದನ್ನು ಹೇಳಿದೆ. "ಪಾಪ ಅವರಿಗೆ ಬೇಸರವಾಗಿದೆ. ಈ ವ್ಯಾಪಾರವೇ ಬೇಡವಿತ್ತು" ಎಂದೆ. ಅವನು "ನಿಮಗೆ ಮರ್ಲಾ ಮರ್ರೆ? ಸೆಕೆಂಡ್ ಹ್ಯಾಂಡ್ ಗಾಡಿ ಸೇಲ್ ಮಾಡುವುದೇ ಹಾಗೆ. ಮತ್ತೆ ನೀವು ಹಣ ಹಿಂದೆ ಕೊಡಬೇಡಿ ಮತ್ತೆ" ಎಂದು ಖಡಾಖಂಡಿತವಾಗಿ ಹೇಳಿದ. ನಾನು ಸುಮ್ಮನಾದೆ.

ನನ್ನ ಮನಸ್ಸಿನಲ್ಲಿ ನಾನು ಭೋಜ ಪೂಜಾರಿಯವರಿಗೆ ಮೋಸ ಮಾಡಿದೆನೇ ಎಂದು ಒಂದು ಭಾವ ಉಳಿದುಬಿಟ್ಟಿತು. ಸುಮಾರು ಎರಡು ವರ್ಷದ ನಂತರ ಒಮ್ಮೆ ಅದೇ ಗಾಡಿಯಲ್ಲಿ ಹೋಗುತ್ತಿದ್ದ ಅವರನ್ನು ದೂರದಿಂದ ನೋಡಿದೆ. ನಂಬರ್ ನೋಡುತ್ತಿದ್ದಂತೆ ನನಗೆ ಅದರ ಗುರುತು ಸಿಕ್ಕಿತು. ನನ್ನ ಆ ಗಾಡಿಯ ಮೇಲೆ ನೆಟ್ಟ ನನ್ನ ಕಣ್ಣನ್ನು ತೆಗೆಯಲು ಆಗಲಿಲ್ಲ. ಏನೋ ನನಗಿನ್ನೂ ಆ ಗಾಡಿಯ ಮೇಲೆ ಮೋಹ ಹೋಗಲಿಲ್ಲವಲ್ಲ ಅನ್ನಿಸಿತು. ಆದರೆ ಭೋಜಪೂಜಾರಿಯವರನ್ನು ಮಾತಾಡಿಸಲು ಧೈರ್ಯವಾಗಲಿಲ್ಲ. ಏನೋ ಅಳುಕು.

ಮನಸ್ಸಿನ ಯಾವುದೋ ಮೂಲೆಯಲ್ಲಿ ನಾವು ಯಾವುದೇ ವಸ್ತು ಎಷ್ಟೇ ಚೆನ್ನಾಗಿ ಕೆಲಸ ಮಾಡಿದ್ದರೂ ಹಳೆಯದಾದ ಕೂಡಲೆ, ಅದು ಮೊದಲು ಮಾಡಿದ ಕೆಲಸವನ್ನು, ಸೇವೆಯನ್ನು ಮರೆತು, ಅದು ಇರುವುದೇ ಒಂದು ಅಡಚಣೆ, ದಂಡ ಎಂದು ಎಷ್ಟು ಸುಲಭದಲ್ಲಿ ಇನ್ನೊಬ್ಬರಿಗೆ ದಾಟಿಸಿಬಿಡುತ್ತೇವೆ? ಅನ್ನಿಸಿತು. ಹಾಲು ಬತ್ತಿಹೋದ ವಯಸ್ಸಾದ ಬತ್ತುಗಂದಿ ದನವನ್ನು ಸಾಹೇಬರಿಗೆ ಕೊಡುವ, ದುಡಿಯಲು ಆಗದ ವಯಸ್ಸಾದ ಹಿರಿಯರನ್ನು  ವೃದ್ಧಾಶ್ರಮಕ್ಕೆ ಕಳಿಸುವ ಮಕ್ಕಳ ಸ್ಥಾನದಲ್ಲಿ ನಿಂತ ಭಾವ ಮನಸ್ಸನ್ನು ಆವರಿಸಿತು.

ಭಾನುವಾರ, ಮಾರ್ಚ್ 11, 2018

ದಿನೇಶ ಉಪ್ಪೂರ:

*ನನ್ನೊಳಗೆ - 80*

ನಮ್ನ ಊರಿನಲ್ಲಿ "ಪ್ರೀತಿ ಕ್ಲಿನಿಕ್" ಅಂತ ಒಂದು ಡಾಕ್ಟರ್ ಮನೆ ಇದೆ. ಅಂದರೆ, ಡಾಕ್ಟರ್ ರ ಮನೆಯೇ. ಮನೆಯ ಮುಂಬಾಗದ ಒಂದು ಕೋಣೆಯಲ್ಲಿಯೇ ಆ ಡಾಕ್ಟರ್ ರ ಶಾಪ್.

ಎದುರಿಗೇ ಒಂದು ಬೋರ್ಡು. ಬೆಳಿಗ್ಗೆ ಏಳರಿಂದ ರಾತ್ರಿ ಹತ್ತರವರೆಗೂ ಡಾಕ್ಟರ್ ವಿಸಿಟಿಂಗ್ ಸಮಯ ಅಂತ ಅದರಲ್ಲಿತ್ತು. ಅದರ ಪಕ್ಕದಲ್ಲಿ ಒಂದು ಕಾಲಿಂಗ್ ಬೆಲ್. ಅದರ ಕೆಳಗೆ "ಒಮ್ಮೆ ಮಾತ್ರ ಒತ್ತಿ" ಅಂತ  ಸೂಚನೆಯ ಬರಹ. ಸಂದರ್ಶಕರು ಇಲ್ಲದಿದ್ದಾಗ, ಡಾಕ್ಟರ್ ಯಾವಾಗಲೂ ಮನೆಯ ಒಳಗೋ ಹಿಂದಿನ ತೋಟದಲ್ಲೋ ಕೆಲಸ ಮಾಡುತ್ತಾ ಇರುತ್ತಾರೆ. ಒಮ್ಮೆ ಬೆಲ್ಲು ಮಾಡಿದರೆ ಸಾಕು. ಕೇಳಲಿಲ್ಲವೇನೋ ಎಂದು ಪದೇ ಪದೇ ಬೆಲ್ಲು ಮಾಡಬೇಡಿ ಎಂಬ ಸೂಚನೆ ಅದು ಎಂದು ಅಂದಾಜು.

ಆ  ಡಾಕ್ಟರ್ ರ ಒಂದು ವಿಶೇಷ ಅಂದರೆ, ನೀವು ಏನೇ ಕಾಯಿಲೆ ಆಂತ ಹೋದರೂ  ಎರಡು ದಿನಕ್ಕೆ ಮಾತ್ರ ಮಾತ್ರೆಯೋ, ಔಷದಿಯನ್ನೋ ಕೊಟ್ಟು, ಇಪ್ಪತ್ತು ರುಪಾಯಿ ಮಾತ್ರ ಫೀಸು ತೆಗೆದು ಕೊಳ್ಳುತ್ತಿದ್ದರು. ಕಾಯಿಲೆ ಗುಣ ಆಗದಿದ್ದರೆ ಮತ್ತೆ ಹೋಗಬೇಕು. ಆಗ ಫೀಸು ಮತ್ತೆ ಇಪ್ಪತ್ತು ರೂಪಾಯಿ.

ಒಮ್ಮೆ ಜ್ವರವೋ, ಶೀತವೋ ಏನೋ ಆಗಿ ಮನೆಯಲ್ಲಿ ಅದು ಇದು ಮದ್ದು ಮಾಡಿ ಉಪಯೋಗ ಇಲ್ಲ ಎಂದು ತೀರ್ಮಾನವಾಗಿ ಅವರಲ್ಲಿಗೆ ಹೋಗಿದ್ದೆ. ಎಂದಿನಂತೆ ಅವರು ಬಾಗಿಲು ಹಾಕಿ ಮನೆಯ ಹಿಂದೆ ಎಲ್ಲೋ ಇದ್ದರು. ನಾನು ಸ್ವಲ್ಪ ಹೊತ್ತು ಕುಳಿತೆ. ಅವರು ಬರಲಿಲ್ಲ. ಬೆಲ್ಲು ಒತ್ತಿದೆ. ಕಾದೆ. ಅವರು ಬಾರದೇ ಇರುವುದರಿಂದ ಬೆಲ್ಲು ಮಾಡಿದ್ದು ಕೇಳಿಸಲಿಲ್ಲವೋ ಏನೋ ಎಂದು ಮತ್ತೊಮ್ಮೆ ಬೆಲ್ಲು ಮಾಡಿದೆ. ಆ ಕೂಡಲೇ ಆ ಡಾಕ್ಟರ್ ಬಂದು ದಡಕ್ಕನೇ ಬಾಗಿಲು ತೆರೆದು, ನಿಮಗೆ ಓದಲಿಕ್ಕೆ ಬರುವುದಿಲ್ಲವೇ? ಎಂದರು. ನನಗೆ ಏನು ಅಂತ ಅರ್ಥ ಆಗಲಿಲ್ಲ. ಆಗ ಅವರೇ "ನಮ್ಮಲ್ಲಿ ಒಮ್ಮೆ ಬೆಲ್ಲು ಮಾಡುವವರು ಉತ್ತಮರು, ಎರಡು ಸಲ ಬೆಲ್ಲು ಮಾಡುವವರು ಮಧ್ಯಮರು" ಅಂದರು. ನನಗೆ ಆಗ ಅರ್ಥವಾಯಿತು. ಸದ್ಯ ನಾನು ಅಧಮನಾಗಲಿಲ್ಲವಲ್ಲ ಎಂದು ಸಮಾಧಾನ ಮಾಡಿಕೊಂಡೆ.

ಆದರೆ ಅದು ಅಷ್ಟು ದೊಡ್ಡ ಅಪರಾಧ ಅನ್ನಿಸಲೇ ಇಲ್ಲ ನನಗೆ. ಸುಮ್ಮನೇ ನಗೆಯಾಡಿದೆ. ಆದರೆ ಅವರು ಅಷ್ಟು ಸೀರಿಯಸ್ಸಾಗಿ ಹೇಳಿದ್ದಕ್ಕೆ ಏನಾದರೂ ಹೇಳಲೇ ಬೇಕು ಅಂತ ನನಗೆ ಅನ್ನಿಸಿತು. ನನಗೆ ಆ ಡಾಕ್ಟರ್ ಒಬ್ಬರೇ ಅಲ್ಲ. ಅವರಿಗೂ ನಾನೊಬ್ಬನೇ ಪೇಶಂಟ್ ಅಲ್ಲದಿದ್ದರೂ ನನ್ನಿಂದ ಸಿಗುವ ಫೀಸು ಸಿಗದಿದ್ದರೆ ಅವರಿಗೆ ನಷ್ಟ ಎಂದು ಲೆಕ್ಕಾಚಾರ ನನ್ನದು. ಅವರು ಡಿಗ್ರಿ ಪಡೆದಿರುವುದರಿಂದ ಕಲಿತು ಬಂದಿರುವುದರಿಂದ ಜನರಿಗೆ ಮದ್ದು ಕೊಟ್ಟು ದುಡ್ಡು ಪಡೆಯುತ್ತಾರೆ. ಅಂದರೆ ಅದು ಒಂದು ತರಹದ ವ್ಯಾಪಾರ. ಆದರೆ ಎಲ್ಲ ಡಾಕ್ಟರ್ ರು ಹಾಗೆ ಅಂತ ಹೇಳುವುದಲ್ಲ. ನಾನು ಅವರಿಂದ ಮಾತ್ರೆ ಪಡೆದು ದುಡ್ಡು ಕೊಡುವಾಗ ಹೇಳಿದೆ. "ಆ ಹೆಚ್ಚುವರಿ ಬೆಲ್ಲು ಮಾಡಿದ್ದರಿಂದ ನಿಮಗೆ ಹರ್ಟ್ ಆಗಿದ್ದರೆ, ಅಥವ ಏನಾದರೂ ನಷ್ಟ ಆಗಿದ್ದರೆ, ಅದನ್ನು ನಿಮ್ಮ ಫೀಸಿನಲ್ಲಿ ಮುರಿದುಕೊಳ್ಳಿ" ಅಂತ. ಅವರು ಮಾತಾಡಲಿಲ್ಲ.

ಮತ್ತೊಮ್ಮೆ ಅವರಲ್ಲಿ ಹೋದಾಗ ನನ್ನ ಕೋರಿಕೆಯಂತೆ, ನನ್ನ ಬಿಪಿ ಟೆಸ್ಟ್ ಮಾಡಿದರು. "ನಿಮಗೆ ಸ್ವಲ್ಪ ಬಿಪಿ ಇದೆ. ಹೆಚ್ಚಾಗದಿರಲಿ ಅಂತ ಈಗಿನಿಂದಲೇ ಒಂದು ಕಡಿಮೆ ಪವರ್ ನ ಮಾತ್ರೆ ಕೊಡುತ್ತೇನೆ. ತೆಗೆದುಕೊಳ್ಳಿ" ಅಂದರು. ಅವರು ಕೊಟ್ಟ ಮಾತ್ರೆಯನ್ನು ಒಂದು ವಾರ ತೆಗೆದುಕೊಂಡೆ. ಮತ್ತೆ ಅವರೇ ಹೇಳಿದಂತೆ ಅದೇ ಹೆಸರಿನ ಮಾತ್ರೆಯನ್ನು ಡ್ರಗ್ ಶಾಪಿನಿಂದ ಪಡೆದು ಮುಂದುವರಿಸಬೇಕಿತ್ತು. ಆದರೆ ನನ್ನ ಮನಸ್ಸಿನಲ್ಲಿ ನನಗೆ ಬಿಪಿ ಇರಲಿಕ್ಕಿಲ್ಲ ಅಂತ ಇತ್ತು. ನಾನು ಮುಂದಿನ ಸಲದಿಂದ ಅದರಲ್ಲಿ ಅರ್ಧ ಮಾತ್ರೆಯನ್ನು ಮಾತ್ರ ತೆಗೆದುಕೊಳ್ಳತೊಡಗಿದೆ. ಮತ್ತೆ ಎರಡು ಮೂರು ದಿನ ನಿಲ್ಲಿಸಿದೆ. ನಂತರ ಅವರ ಹತ್ತಿರ ಹೋದೆ. "ಸರ್, ನಾನು ನೀವು ಕೊಟ್ಟ ಮಾತ್ರೆಯನ್ನು ಕಡಿಮೆ ಕಡಿಮೆ ಮಾಡಿ ನಿಲ್ಲಿಸಿದೆ. ಈಗ ಸ್ವಲ್ಪ ಟೆಸ್ಟ್ ಮಾಡಬಹುದೇ?" ಅಂತ ಕೇಳಿದೆ.

ಅವರು ಒಮ್ಮೆಲೇ ಸಿಟ್ಟಾಗಿ, "ಒಹೋ ನೀವೇ ತೀರ್ಮಾನ ತೆಗೆದುಕೊಂಡದ್ದಾ? ಮಾತ್ರೆ ತೆಗೆದುಕೊಳ್ಳುತ್ತಾ ಇದ್ದರೆ ಮಾತ್ರೆ ಬಿಪಿ ನಾರ್ಮಲ್ ಇರುವುದು" ಎಂದು ಬುಸುಗುಟ್ಟಿ ಹೇಳಿ ನನ್ನ ಕೈ ಹಿಡಿದು ತೋಳಿಗೆ ಪಟ್ಟಿ ಸುತ್ತಿ ಟೆಸ್ಟ್ ಮಾಡಿದರು. "ಹೋ, ಈಗ ನೋಡಿ ನೂರ ಎಪ್ಪತ್ತಕ್ಕೆ ಹೋಗಿದೆ. ನೀವು ನೆಗ್ಲೆಟ್ ಮಾಡಿದಿರಿ"ಎಂದು ಮತ್ತೊಂದು ಮಾತ್ರೆಯನ್ನು ಬರೆದುಕೊಟ್ಟು, ಅಂಗಡಿಯಲ್ಲಿ ತೆಗೆದುಕೊಳ್ಳಿ ಅಂದರು. ಆಯಿತು ಎಂದು ಫೀಸು ಕೊಟ್ಟು ಬಂದ ನನಗೆ, ಒಮ್ಮೆ ದಿಗಿಲಾದರೂ ಸ್ವಲ್ಪ ಹೊತ್ತಿನಲ್ಲಿ ನೋಡುವ ಒಮ್ಮೆ ಬೇರೆ ಡಾಕ್ಟರ್ ರಿಗೆ ತೋರಿಸುವ ಎಂದು ಪರಿಚಿತರಾದ ಆಯುರ್ವೇದ ಡಾಕ್ಟರ್ ಒಬ್ಬರ ಹತ್ತಿರ ಹೋಗಿ ತೋರಿಸಿದೆ. ಹಿಂದಿನ ಕತೆಯನ್ನು ಹೇಳದೇ "ಸರ್, ಒಮ್ಮೆ ನನ್ನ ಬಿಪಿ ಚೆಕ್ ಮಾಡುತ್ತೀರಾ?" ಎಂದೆ.

ಅವರು ಟೆಸ್ಟ್ ಮಾಡಿ "ಬಾರ್ಡರ್ ಲ್ಲಿ ಇದೆ. ಆದರೆ ಮಾತ್ರೆ ಗೀತ್ರೆ ಏನೂ ಬೇಡ. ಪುಡ್ ಕಂಟ್ರೋಲ್ ಮಾಡಿ, ಉಪ್ಪು ಕಡಿಮೆ ಮಾಡಿ ಮೂರು ತಿಂಗಳು ಬಿಟ್ಟು ಮತ್ತೊಮ್ಮೆ ಟೆಸ್ಟ್ ಮಾಡಿಸಿಕೊಳ್ಳಿ" ಎಂದರು. ಮತ್ತೊಮ್ಮೆ ನಾಲ್ಕು ತಿಂಗಳ ನಂತರ ಮತ್ತೊಮ್ಮೆ ಟೆಸ್ಟ್ ಮಾಡಿದಾಗ ಬಿಪಿ ನಾರ್ಮಲ್ ಅಂತಲೇ ಆಯಿತು. ಆದ್ದರಿಂದ ಈಗ ನನಗೆ ಬಿಪಿ ಇಲ್ಲ ಎಂದು ನನಗೇ ಗ್ಯಾರಂಟಿಯಾಗಿದೆ. ಮತ್ತು ಅದು ಆ ಕ್ಲಿನಿಕ್ ನ ಡಾಕ್ಟರ್ ರಿಗೇ ಇದೆ ಎಂದು ತೀರ್ಮಾನಕ್ಕೆ ಬಂದಿದ್ದೇನೆ.

ಮಂಗಳವಾರ, ಮಾರ್ಚ್ 6, 2018

ದಿನೇಶ ಉಪ್ಪೂರ:

*ನನ್ನೊಳಗೆ - 79*

ಮುಲ್ಕಿಯಿಂದ ಪದೋನ್ನತಿಯಾಗಿ ಉಡುಪಿಗೆ ಬಂದ ನಾನು ಅಂಬಾಗಿಲಿನಲ್ಲಿ ಒಂದು ನಿವೇಶನ ಖರೀದಿಸಿದೆ. ಕೆದ್ಲಾಯರು ಎಂಬ ನನ್ನ ಸ್ನೇಹಿತರೊಬ್ಬರು ಮನೆ ಕಟ್ಟಿಸಿಕೊಡಲು ಒಪ್ಪಿದರು. ನಾನೇ ಒಂದು ಮನೆಯ ಸ್ಕೆಚ್ ಬಿಡಿಸಿ ನನ್ನ ಮನೆ ಹೀಗೆ ಇರಬೇಕು ಎಂದೆ. ಅವರು ಒಪ್ಪಿದರು.

  ಮುನಿಸಿಪಾಲಿಟಿಯಿಂದ ಒಂದು ತೆರಿಗೆಯ ಬಗ್ಗೆ ಕ್ಲೀಯರೆನ್ಸ್ ಪತ್ರ ಬೇಕಾಗಿತ್ತು. ನಾನು ಹೋಗಿ ಅರ್ಜಿಕೊಟ್ಟು ಬಂದೆ. "ಒಂದು ವಾರದ ನಂತರ ಬನ್ನಿ" ಎಂದರು. ನಾನು ವಾರದ ನಂತರ ಹೋದೆ. ಆದರೆ ಕೆಲಸ ಆಗಲಿಲ್ಲ. ಮತ್ತೆ ನಾಳೆ ಬನ್ನಿ ಅಂದರು. ನಾಳೆ ಹೋದರೂ ಮತ್ತೆ ನಾಳೆ ಬನ್ನಿ ಅಂತ ಓಡಾಡಿಸಲು ಶುರು ಮಾಡಿದಾಗ ನನಗೆ ಎಲ್ಲಿಲ್ಲದ ಕೋಪ ಬಂತು. ನಾನು, "ಕೊಡಲು ಆಗದಿದ್ದರೆ ಹೇಳಿ. ಏನು ಮಾಡಬೇಕು ಅಂತ ನನಗೆ ಗೊತ್ತಿದೆ" ಎಂದು ಜೋರು ಮಾಡಿದೆ. ಆಗ ಅವರು ನನ್ನ ಪೈಲೇ ಇಲ್ಲ. ಎಲ್ಲೋ ಕಳೆದುಹೋಗಿದೆ. ಮತ್ತೊಮ್ಮೆ ಅರ್ಜಿ ಕೊಡಿ ಎಂದರು.

ಅದಕ್ಕೆ, "ಇನ್ನೊಂದು ಅರ್ಜಿ ಯಾಕೆ ಕೊಡಬೇಕು?" ಎಂದು ನಾನು ಮೊದಲು ಕೊಟ್ಟ ಅರ್ಜಿಯ ದಿನಾಂಕವನ್ನು ನಮೂದಿಸಿ, ಇನ್ನೂ ನನಗೆ ದೃಢ ಪತ್ರಿಕೆ ಸಿಕ್ಕದೇ ಇರುವ ಬಗ್ಗೆ ಮತ್ತು ಆ ಗುಮಾಸ್ತರು ಇನ್ನೊಂದು ಅರ್ಜಿ ಕೊಡಿ ಎಂದ ಬಗ್ಗೆಯೂ  ಉಲ್ಲೇಖಿಸಿ ಒಂದು ಪತ್ರ ಬರೆದು ಇಟ್ಟುಕೊಂಡೆ. ಅದನ್ನು ನೇರವಾಗಿ ಆಗ ಕಮಿಶನರ್ ಆಗಿದ್ದ ಪ್ರಸನ್ನ ಎಂಬವರ ಚೇಂಬರಿಗೆ ಹೋಗಿ, ಅವರ ದರ್ಶನಕ್ಕಾಗಿ ಚೀಟಿಯನ್ನು ಎಟೆಂಡರ್ ಮೂಲಕ ಕಳಿಸಿ ಅವಕಾಶ ಪಡೆದೆ. ಅವರಲ್ಲಿ ಹೋಗಿ ನನ್ನ ಕತೆ ಹೇಳಿ, ನನಗೆ ಕ್ಲಿಯರೆನ್ಸ್ ಪತ್ರ  ಕೊಡಿಸಬೇಕೆಂದು ವಿನಂತಿಸಿದೆ. ಅವರು ನಾನು ಕೊಟ್ಟ ಪತ್ರವನ್ನು ಒಮ್ಮೆ ಓದಿ ನೋಡಿ, ಬೆಲ್ ಮಾಡಿದರು. ಅವರ ಫಿಯೋನ್ ನಿಗೆ ಆ ಗುಮಾಸ್ತರನ್ನು ಕರೆಯಲು ಹೇಳಿದರು. ಅವನು ಹೋಗಿ ಗುಮಾಸ್ತನನ್ನು ಕರೆದುಕೊಂಡು ಬಂದ. ಅವನು ನನ್ನನ್ನು ನೋಡಿದ ಕೂಡಲೇ ವಿಷಯ ತಿಳಿದುಕೊಂಡು, ತನಗೆ ಕೆಲಸ ಹೆಚ್ಚಿಗೆ ಇರುವುದಾಗಿ, ಹೇಳಿ ನನಗೆ ಇನ್ನೂ ಸಮಯ ಬೇಕು ಎಂದು ಏನೇನೋ ಹೇಳಿದ. ಎಲ್ಲವನ್ನು ಕೇಳಿಸಿಕೊಂಡ ಪ್ರಸನ್ನರು ಒಂದೇ ಮಾತು ಹೇಳಿ ಮುಗಿಸಿದರು. "ನಾಳೆ ಮಧ್ಯಾಹ್ನದ ಒಳಗೆ ಅವರ ದೃಢ ಪತ್ರಿಕೆ ನನ್ನ ಟೇಬಲ್ಲಿಗೆ ಸಹಿಗಾಗಿ ಬರಬೇಕು. ಇಲ್ಲದಿದ್ದರೆ ನಿಮ್ಮನ್ನು ಸಸ್ಪೆಂಡ್ ಮಾಡಿ ಮನೆಗೆ ಕಳಿಸುತ್ತೇನೆ" ಎಂದು. ನಾನು ವಾಪಾಸು ಬಂದೆ.
ಮರುದಿನ ಮಧ್ಯಾಹ್ನ ಹೋದಾಗ ನನ್ನ ದೃಢ ಪತ್ರಿಕೆ ಸಿದ್ದವಾಗಿತ್ತು. ನಾನು ಪುನಹ ಪ್ರಸನ್ನರನ್ನು ಕಂಡು ಧನ್ಯವಾದ ಹೇಳಿ ಮರಳಿದೆ.

ಕತೆ ಅಷ್ಟಕ್ಕೇ ಮುಗಿಯಲ್ಲಿಲ್ಲ. ನನಗೆ ಕಟ್ಟಡ ಕಟ್ಟಲು ಪರವಾನಿಗೆಯ ಬಗ್ಗೆ ಅಲ್ಲಿನ ಒಂದು ಪತ್ರ ಬೇಕಾಯಿತು. ನಾನು ಅದಕ್ಕೂ ಒಂದು ಅರ್ಜಿಯನ್ನು ಕೊಟ್ಟುಬಂದೆ. ಅಲ್ಲಿನ ಇಂಜಿನಿಯರು ನನ್ನ ಜಾಗಕ್ಕೆ ಬಂದು ಪರಿಶೀಲನೆ ಮಾಡಿ, ಬಿಲ್ಡಿಂಗ್ ಪ್ಲಾನ್ ನೋಡಿ ಕಟ್ಟಡ ಕಟ್ಟಬಹುದೆಂದು ಶಿಪಾರಸ್ಸು ಮಾಡಬೇಕಿತ್ತು.

ನಾನು ಹೇಗೂ ಬರುತ್ತಾರಲ್ಲ ಎಂದು ಕೆಲಸ ಶುರು ಮಾಡಲು  ಕೆದ್ಲಾಯರಿಗೆ ಹೇಳಿದೆ. ಕೆಲಸವೂ ಶುರುವಾಗಿ ಪಂಚಾಂಗ ಎದ್ದಿತು. ಮತ್ತೊಮ್ಮೆ ನಾನು ಮುನಿಸಿಪಾಲಿಟಿಯ ಪತ್ರಕ್ಕಾಗಿ ಹೋಗಿ ಏನಾಯಿತು? ಎಂದು ವಿಚಾರಿಸಿದೆ. ಆಗ ಆ ಇಂಜಿನಿಯರ್ ನೀವು ಅರ್ಜಿ ಕೊಟ್ಟರೆ ಆಗುತ್ತದಾ? ನನ್ನನ್ನು ಕರೆದುಕೊಂಡು ಹೋಗುವವರು ಯಾರು? ಎಂದು ಜೋರು ಮಾಡಿದರು. ನಾನು "ಗೊತ್ತಿರಲಿಲ್ಲ" ಎಂದು ಕ್ಷಮೆ ಕೇಳಿ, ಅವರಿಗಾಗಿ ಒಂದು ರಿಕ್ಷಾವನ್ನು ಬಾಡಿಗೆಗೆ ಪಡೆದು ಕರೆದುಕೊಂಡು ಬರಲು ಹೋದೆ. ಆಗ ಆ ಇಂಜಿನಿಯರು "ರಿಕ್ಷಾ ತಂದಿದ್ದೇನೆ" ಎಂದ ಕೂಡಲೇ ಅವರು ಮುಖ ಸಣ್ಣದು ಮಾಡಿದರು. ಆಗ ನಾನು, "ಕಮಿಶನರ್ ಪ್ರಸನ್ನ ರು ಈಗ ಇಲ್ಲವೇ? ನಾನು ಹಿಂದೊಮ್ಮೆ ಬಂದಿದ್ದೆ" ಎಂದು ನನ್ನ ಅನುಭವವನ್ನು ಅವರಿಗೆ ಹೇಳಿದೆ. ಅವರು ಸ್ವಲ್ಪ ತಣ್ಣಗಾಗಿ ಅವರು ಟ್ರಾನ್ಸ್ ಫರ್ ಆಗಿ ಬೇರೆಯವರು ಬಂದಾಯಿತಲ್ಲ ಎಂದು, ಅಸಮಾಧಾನದಿಂದಲೇ ನನ್ನೊಂದಿಗೆ ಹೊರಟರು. ನಾನು ಅವರನ್ನು ನನ್ನ ಸೈಟ್ ಇರುವ ಅಂಬಾಗಿಲಿಗೆ ಕರೆದುಕೊಂಡು ಬಂದೆ. ಆಗಲೇ ಅಲ್ಲಿ ಹಾಕಿದ ಮನೆಯ ಪಂಚಾಂಗವನ್ನು ನೋಡಿದ ಅವರು, "ನೀವು ಪಂಚಾಂಗ ಶುರು ಮಾಡುವ ಮೊದಲೇ ಅನುಮತಿ ಪಡೆಯಬೇಕಿತ್ತು. ಈಗ ಹೇಗೆ ಪತ್ರ ಕೊಡುವುದು? ಆಫೀಸಿನಲ್ಲಿ ಮಾತಾಡಿ" ಎಂದು ಗುರುಗುರು ಮಾಡುತ್ತಾ ಹೊರಟು ಹೋದರು.

 ಅದು ನನಗೆ ಗೊತ್ತಿರಲಿಲ್ಲ ಅಂತಲ್ಲ. ನಾನು ಅರ್ಜಿಕೊಟ್ಟಾಗಲೇ ಅವರು ಬಂದಿದ್ದರೆ ಆಗಲೇ ಪತ್ರ ಸಿಕ್ಕಿ ನಾನು ಪಂಚಾಂಗವನ್ನು ಹಾಕಬಹುದಿತ್ತು. ಮರುದಿನ ಮತ್ತೆ ಹೋದೆ. ಅವರು  "ಅದೆಲ್ಲಾ ಆಗುವುದಿಲ್ಲ. ನೀವು ಮೊದಲೇ ಪತ್ರ ಪಡೆದೇ ಪಂಚಾಂಗ ಶುರು ಮಾಡದೇ ಇರುವುದರಿಂದ ಪತ್ರ ಕೊಡಲು ಸಾಧ್ಯವಿಲ್ಲ" ಎಂದರು. ನನಗೆ ತಲೆಬಿಸಿಯಾಯಿತು.

 ಹಾಗಾದರೆ ಇದಕ್ಕೆ ಪರಿಹಾರವೇ ಇಲ್ಲವೇ? "ಎಷ್ಟೋ ಜನ ನಿಮ್ಮ ಗಮನಕ್ಕೂ ತಾರದೇ ಕಟ್ಟಡವನ್ನೇ ಕಟ್ಟುತ್ತಾರಲ್ಲ" ಎಂದು ನಾನು ವಾದಿಸಿದೆ. ಅವರು ಜಪ್ಪಯ್ಯ ಎಂದರೂ ತಲೆ ಮೇಲೆ ಎತ್ತಲೇ ಇಲ್ಲ. ನಾನು ವಾಪಾಸು ಬಂದೆ. ಮರುದಿನ ಮತ್ತೆ ಹೋದೆ. ಅವರ ಪಕ್ಕದಲ್ಲಿಯೇ ಇದ್ದ ಮತ್ತೊಬ್ಬರ ಹತ್ತಿರ "ಏನು ಮಾಡಲಿಕ್ಕೆ ಆಗುತ್ತದೆ. ದಾರಿ ಹೇಳಿ" ಅಂದೆ. ಅವರು ಮಲ್ಲನೇ ಒಂದು ದಾರಿಯನ್ನು ಹೇಳಿದರು.
ಆದರೆ ನನಗೆ ಆ ದಾರಿ ಸರಿಬರಲಿಲ್ಲ. ಪುನಹ ಇಂಜಿನಿಯರ್ ಹತ್ತಿರ ಹೋಗಿ, "ಆಯಿತಪ್ಪ ತಪ್ಪಾಗಿದೆ. ನನಗೆ ಗೊತ್ತಿಲ್ಲದೇ ಪಂಚಾಂಗ ಹಾಕಿಬಿಟ್ಟೆ. ಇನ್ನು ಅದನ್ನು ತೆಗೆಸುವುದೂ ಧರ್ಮವಲ್ಲ. ತಪ್ಪು ಮಾಡಿದ್ದಕ್ಕೆ ದಂಡ ತೆರುತ್ತೇನೆ. ಆದರೆ  ನೀವು ಅಂದುಕೊಂಡ ಯಾವುದೇ ಒಳಮಾರ್ಗ ಅನುಸರಿಸುವುದಿಲ್ಲ. ಇದಕ್ಕೂ ನೀವು ಒಪ್ಪದಿದ್ದರೆ, ನಾನು ನಿಮ್ಮ ಮೇಲಿನ ಎಲ್ಲ ಅಧಿಕಾರಿಗಳನ್ನೂ ಸಂದರ್ಶಿಸಲು ಶುರುಮಾಡುತ್ತೇನೆ. ನನಗಂತು ಸಮಯ ಇದೆ" ಎಂದೆ.

ಅವರು ಒಮ್ಮೆ ನನ್ನನ್ನು ದುರುದುಟ್ಟಿ ನೋಡಿ ಮತ್ತೆ ತಲೆ ಕೆಳಗೆ ಹಾಕಿದರು. ನಾನು ಅಲ್ಲಿಯೇ ಕುಳಿತೆ. ಏಳಲಿಲ್ಲ. ಸ್ವಲ್ಪ ಹೊತ್ತಿನ ನಂತರ ಅವರು, "ನಾಳೆ ಬನ್ನಿ. ನೋಡುವ" ಎಂದರು. ನಾನು ಮರಳಿದೆ. ಮತ್ತೆ ಮರುದಿನ ಅವರು ಹೇಳಿದ ಸಮಯಕ್ಕೆ ಸರಿಯಾಗಿ ಹೋದೆ. ಅವರು ನನ್ನ ತಪ್ಪಿಗೆ ಇನ್ನೂರು ರೂಪಾಯಿ ದಂಡ ಹಾಕಿ, ಪಾವತಿಸಲು ಹೇಳಿದರು. ಅದನ್ನು ನನ್ನಿಂದ ವಸೂಲು ಮಾಡಿದ ಮೇಲೇ ನನಗೆ ಬೇಕಾದ ಪತ್ರವನ್ನು ಕೊಟ್ಟರು. ನಾನು ನೀವು ಇತರರಿಗೆ ಯಾವರೀತಿಯಲ್ಲಿ ಇಂತಹ ಪತ್ರ ಕೊಡುತ್ತೀರಿ, ಎಂದು ತಿಳಿದುಕೊಂಡು ಈಗ ಕಟ್ಟಿದ ದಂಡವನ್ನು ಮರಳಿಪಡೆಯುತ್ತೇನೆ ಎಂದು ಹೇಳಿ ಬಂದೆ.

ಮತ್ತೊಮ್ಮೆ ಕೆನರಾ ಬ್ಯಾಂಕಿನಲ್ಲಿ ನನ್ನ ಅನುಮತಿಯಿಲ್ಲದೇ ಉಳಿತಾಯ ಖಾತೆಯಿಂದ ತೆಗೆದು ನನ್ನ ಸಾಲಕ್ಕೆ ಹಣ ವಜಾ ಮಾಡಿದ್ದರಿಂದ ನನಗೆ ಕನಿಷ್ಟ ಶುಲ್ಕ ಇರಲಿಲ್ಲ ಎಂದು ಇಪ್ಪತ್ತು ರೂಪಾಯಿ ದಂಡ ಹಾಕಿದ್ದರು ನಾನು ಮರುದಿನ ಹಣ ಪಾವತಿಸಲು ಹೋದಾಗ ಅದು ನನಗೆ ಗೊತ್ತಾಗಿ ಇಪ್ಪತ್ತು ರೂಪಾಯಿ ಹಿಂದೆ ಕೊಡಬೇಕೆಂದು ಜಗಳ ಮಾಡಿದೆ. ಆಗಲೂ ಆ ಮೇನೇಜರ್ ಅದು ಕಂಪ್ಯೂಟರ್ ಲ್ಲಿ ಆಗುವುದಿಲ್ಲ. ನೀವು ಅಷ್ಟು ಹಠ ಮಾಡಿದರೆ ತಾನೇ ಕಿಸೆಯಿಂದ ಕೊಡಬೇಕು ಎಂದು ಅನುನಯಿಸಲು ಹೊರಟರು. ಆಗಲೂ ನೀವು ಯಾಕೆ ಕೊಡಬೇಕು  ಎಂದು ಜಗಳ ಮಾಡಿದೆ. ಮತ್ತೊಮ್ಮೆ ನನ್ನ ಮನೆಗೆ ನೋಡಲು ಬರದೇ ಸ್ಥಳಪರಿಶೀಲನಾ ಶುಲ್ಕ ವಿಧಿಸಿದ್ದಾರೆ ಎಂದು ವಿಚಾರಿಸಲು ಹೋಗಿ, ಅವರ ಆಗ್ರಹಕ್ಕೆ ಪಾತ್ರನಾದೆ. ಆಗ ಇನ್ಸ ಪೆಕ್ಷನ್ ಗೆ ಹಾಗೆ ನಿಮ್ಮ ಮನೆಗೆ ಬಂದಿದ್ದರೆ ನಿಮ್ಮ ಕಾಫಿ ಖರ್ಚಾಗುತ್ತಿತ್ತು ಅದನ್ನು ಉಳಿಸಿದೆವಲ್ಲ ಎಂದು ಅವರು ಸಮಜಾಯಿಸಿ ಹೇಳಿದರು. ಆಗೆಲ್ಲ ನನ್ನ ಹೆಂಡತಿ ನೀವು ಹೋದಲ್ಲೆಲ್ಲ ಜಗಳ ಮಾಡುತ್ತೀರಿ. ನೀವು ಹೋದರೆ ಅವರು ಗುಸುಗುಸು ಮಾತನಾಡುತ್ತಾರೆ. ನಿಮ್ಮಜೊತೆಗೆ ಬರಲಿಕ್ಕೇ ನನಗೆ ಹೆದರಿಕೆಯಾಗುತ್ತದೆ ಎನ್ನಲೂ ಶುರುಮಾಡಿದಳು ಆದ್ದರಿಂದ ನಾನು ಈಗ ಸ್ವಲ್ಪ ಬದಲಾಗುತ್ತಿದ್ದೇನೆ.

ಆದರೆ ಈಗ ನಾನು ಅಷ್ಟು ಹಟ ಮಾಡುವುದಿಲ್ಲ ವ್ಯವಸ್ಥೆಯ ಪರಿಸ್ಥಿತಿಗೆ ಹೊಂದಿಕೊಂಡಿದ್ದೇನೆ.

ನನಗೆ ಈಗ ಕೆಲಸ ಆದರೆ ಸೈ ಯಾರಾದರೂ ಹಣ ತಿಂದು ಸಾಯಲಿ ನನಗಂತೂ ಈ ವ್ಯವಸ್ಥೆಯನ್ನು ಸರಿಮಾಡಲು ಸಾಧ್ಯವಿಲ್ಲ ಎನ್ನಿಸಿ ಬಿಟ್ಟಿದೆ. ನಾನು ಸರಿ ಇದ್ದರೆ ಸಾಕು. ಎಲ್ಲರೂ ನನ್ನಂತೆ ಯೋಚಿಸುವ ಕಾಲ ಬಂದಾಗ ಇದು ಸರಿಯಾಗುತ್ತದೆ. ಅನ್ನಿಸಿದೆ.  ಆದರೂ ಯಾವುದಾದರೂ ಕಛೇರಿಗೆ ಹೋದಾಗ ಕೆಲವರಾದರೂ ಈಗಲೂ ಪ್ರಾಮಾಣಿಕರು ಸಿಗುತ್ತಾರೆ. ನಾನು ತಪ್ಪದೇ ಅವರನ್ನು ಹೊಗಳಿ ನಾಲ್ಕು ಮಾತಾಡಿ ಧನ್ಯವಾದ ಹೇಳಿ ಬರುತ್ತೇನೆ. ಆಗ ಅವರಿಗೂ ಕೆಲಸ ಮಾಡಿದ ತೃಪ್ತಿ.

ಶನಿವಾರ, ಮಾರ್ಚ್ 3, 2018

ದಿನೇಶ ಉಪ್ಪೂರ:

*ನನ್ನೊಳಗೆ- 78*

ನಮ್ಮ ಮನೆಯ ಕೆಲಸದ ಆಳು ಬೆಳ್ಳ ನಾಯ್ಕ  ಬಹಳ ನಂಬಿಕಸ್ಥ ಆಳು. ತುಂಬ ಜವಾಬ್ದಾರಿ ಯಿಂದ ಕೆಲಸ ಮಾಡುತ್ತಿದ್ದ. ಆದರೆ ಅವನು ಪಟಪಟನೇ ಮಾತನಾಡುತ್ತಿದ್ದ. ಅವನು ಏನು ಹೇಳುತ್ತಾನೆ ಎಂಬುದನ್ನು ಗಮನವಿಟ್ಟು ಕೇಳದಿದ್ದರೆ ಮತ್ತೆ "ಆಂ" ಎಂದು ಪುನಃ ಕೇಳಬೇಕಾಗುತ್ತಿತ್ತು. ಎಷ್ಟೋ ಸಲ ಅವನ ಚುರುಕು ಮಾತು ಅರ್ಥವಾಗದೆ ಇದ್ದರೂ ಪುನಃ ಕೇಳಲು ಉದಾಸೀನವಾಗಿ ಬಿಟ್ಟುಬಿಡುವುದೂ ಇತ್ತು.

 ಅವನ ಸೊಂಟಕ್ಕೆ ಒಂದು ತುಂಡು ಪಂಚೆಯನ್ನು ಮಾತ್ರ ಕಟ್ಟಿಕೊಂಡು ಕೆಲಸ ಮಾಡುತ್ತಿದ್ದ. ಅವನ ಸೊಂಟದಲ್ಲಿ ಒಂದು ಕತ್ತಿ ಯಾವಾಗಲೂ ಇರುತ್ತಿತ್ತು. ಅದನ್ನು ಅವನು ಒಂದು ಎಸ್ ಆಕಾರದ ಕಬ್ಬಿಣದ ತುಂಡಿಗೆ ಸಿಕ್ಕಿಸಿ ಬೆನ್ನಿನ ಹಿಂದೆ ಒಂದು ಹಗ್ಗದಿಂದ ಕಟ್ಟಿರುತ್ತಿದ್ದ. ಮರ ಏರುವಾಗಲೂ, ಮಣ್ಣು ಕಡಿದು ತೋಡು ಮಾಡುವಾಗಲೂ ಅದನ್ನು ಬಿಡುತ್ತಿರಲಿಲ್ಲ. ನಮ್ಮ ಮನೆಯಲ್ಲಿರುವ ಕತ್ತಿಗಳನ್ನೆಲ್ಲಾ ಸಿಕ್ಕಿಸಿ ಇಡಲು ಒಂದು ಬಿದಿರಿನ ತುಂಡನ್ನು ಮಧ್ಯದಲ್ಲಿ ಉದ್ದಕ್ಕೆ ತೂತು ಮಾಡಿ ನೇತು ಹಾಕುತ್ತಿದ್ದರು. ಎಲ್ಲ ಕತ್ತಿಗಳನ್ನು ಅದರಲ್ಲಿ ಸಿಕ್ಕಿಸಿ ಇಡುತ್ತಿದ್ದೆವು. ಆದರೆ ಬೆಳ್ಳನ ಕತ್ತಿಯನ್ನು ಯಾರೂ ಮುಟ್ಟುತ್ತಿರಲಿಲ್ಲ. ಒಂದು, ಅವನು ಜೋರು ಮಾಡುತ್ತಾನೆ ಎಂಬುದಾಗಿದ್ದರೆ ಎರಡನೆಯದು ಅವನು ಅದನ್ನು ಯಾವಾಗಲೂ ಮಸೆದು ಹರಿತಗೊಳಿಸಿ ಇಟ್ಟು ಕೊಳ್ಳುತ್ತಿದ್ದುದರಿಂದ, ಅದರಲ್ಲಿ ಏನನ್ನಾದರೂ ಕತ್ತರಿಸಲು ಹೋದರೆ ನಮ್ಮ ಕೈಯೇ ಕತ್ತರಿಸಿಹೋದೀತು ಅಂತ ಭಯವಾಗುತ್ತಿತ್ತು. ಬೆಣಚುಗಲ್ಲಿನ ಪುಡಿಮಾಡಿ ಒಂದು ಉದ್ದದ ಮಣೆಯಲ್ಲಿ ಹಾಕಿ, ಅವನು ಯಾವಾಗಲೂ ಆ ಕತ್ತಿಯನ್ನು ಮಸೆದು ಮಸೆದು ಇಟ್ಟುಕೊಳ್ಳುತ್ತಿದ್ದ.

ನಮ್ಮ ಮನೆಯಲ್ಲಿ ಅಮ್ಮ, ದಾಮೋದರಣ್ಣಯ್ಯ ವೀಳ್ಯ ಹಾಕುತ್ತಿದ್ದರೂ ಹೊಗೆಸೊಪ್ಪು ಹಾಕುತ್ತಿರಲಿಲ್ಲ. ಆದರೆ ಆ ಬೆಳ್ಳನಿಗೋಸ್ಕರವಾಗಿ ಪೇಟೆಯಿಂದ ಹೊಗೆಸೊಪ್ಪು ತಂದು ಇಟ್ಟು ಕೊಳ್ಳಬೇಕಾಗುತ್ತಿತ್ತು. ಅವನು ಸಂಜೆ ಕೆಲಸ ಮುಗಿಸಿ ಕೈ ಕಾಲು ತೊಳೆದು ಮನೆಗೆ ಹೊರಡುವ ಸಮಯಕ್ಕೆ "ಅಯ್ಯಾ", ಎಂದ ಕೂಡಲೇ ನಮಗೆ ಗೊತ್ತಾಗಬೇಕು. ಹೊಗೆಸೊಪ್ಪು ಬೇಕೆಂದು. ಇಲ್ಲದಿದ್ದರೆ ಪುನಃ ಯಾರನ್ನಾದರು ಕರೆದು, ಒಂದ್ ಚೂರು ಹೋಯ್ ಸೊಪ್"  ಎಂದ ಕೂಡಲೇ, ನಾವು ಒಳಗೆ ಕಪಾಟಿನಲ್ಲಿ ಡಬ್ಬದಲ್ಲಿಟ್ಟ, ಹೊಗೆಸೊಪ್ಪಿನ ಎಲೆಯಲ್ಲಿ, ಅರ್ಧ ತುಂಡು ಮಾಡಿ ಅವನಿಗೆ ಕೊಡುವುದು. ಅಲ್ಲದೇ ಮನೆಗೆ ಬಂದ ನೆಂಟರು, ಆಚೀಚೆ ಮನೆಯವರು, ಶೂದ್ರರೂ, ಕೆಲಸದವರಿಗೂ "ವೀಳ್ಯ ಹಾಕ್ತಿಯನಾ? ಬೇಕಾ?" ಎಂದು ಎಲೆ ಪೆಟ್ಟಿಗೆ ಜಾರಿಸುವುದು, ಒಂದು ಆತ್ಮೀಯತೆಯ ಸಲಿಗೆಯ ಮಾತಿನ ಆರಂಭವಾಗಿತ್ತು.

ಕಲ್ಲಟ್ಟೆಯ ಮನೆಯಲ್ಲಿ ಕಬ್ಬು ಭತ್ತ ಧಾನ್ಯಗಳನ್ನು ಬೆಳೆಯುತ್ತಿದ್ದಾಗ, ಬಯಲು ಗದ್ದೆಯಲ್ಲಿ ಹಂದಿಗಳನ್ನು, ಹಕ್ಕಿಗಳನ್ನು ಓಡಿಸಲು ಗದ್ದೆಯ ಮಧ್ಯಭಾಗದಲ್ಲಿ ಒಂದು ಸಣ್ಣ ಮನೆ ಮಾಡುತ್ತಿದ್ದರು. ಇದನ್ನು ಹಳ್ಳಿ ಮನೆ ಎಂದು ಹೇಳುತ್ತಿದ್ದರು. ಗದ್ದೆಯ ಮಧ್ಯೆ ಒಂದು ಗೂಟ ನಿಲ್ಲಿಸಿ ಅದಕ್ಕೆ ಒಂದು ಚಿಮಣಿ ಎಣ್ಣೆಯ ಡಬ್ಬ ಕವುಚಿ ಹಾಕಿ ಕಟ್ಟುತ್ತಿದ್ದರು.  ಅದರ ಒಳಗೆ ಒಂದು ಕೋಲನ್ನು ಕಟ್ಟುತ್ತಿದ್ದು, ಅದನ್ನು ಎಳೆದಾಗ ಡಬ್ಬಿಗೆ ಹೊಡೆದು ಶಬ್ದವಾಗುವಂತೆ ಮಾಡಿ ಆ ಕೋಲನ್ನು ಕಟ್ಟಿದ ಹಗ್ಗದ ಇನ್ನೊಂದು ತುದಿ ಹಳ್ಳಿಮನೆಯ ಮಾಡಿಗೆ ಕಟ್ಟುತ್ತಿದ್ದರು. ಆ ಹಗ್ಗವನ್ನು ಎಳೆದರೆ ಕೋಲು ಡಬ್ಬಕ್ಕೆ ಬಡಿದು ಶಬ್ದವಾಗುತ್ತಿತ್ತು. ಹಕ್ಕಿಗಳು ಹಂದಿ ಮುಂತಾದ ಪ್ರಾಣಿ ಪಕ್ಷಿಗಳು ಬಂದು ಸದ್ದು ಮಾಡಿದಾಗ, ಅವನ್ನು ಓಡಿಸಲು ಹೀಗೆ ಡಬ್ಬಿ ಬಡಿದು ಸದ್ದು ಮಾಡುತ್ತಿದ್ದರು. ಆ ಹಳ್ಳಿಮನೆಯಲ್ಲಿಯೇ ರಾತ್ರಿ ಯಾರಾದರೂ ಮಲಗುತ್ತಿದ್ದರು.

ಗದ್ದೆಯ ಮಧ್ಯೆ ಶಿಲುಬೆಯಂತೆ ಮರದ ಗೂಟ ಮಾಡಿ ಹುಗಿದು ಅದಕ್ಕೆ ಮನೆಯಲ್ಲಿರುವ, ಹಳೆಯ ಅಂಗಿ ಪ್ಯಾಂಟು ತೊಡಿಸಿ ಗೂಟದ ತುದಿಯಲ್ಲಿ ಒಂದು ಮಣ್ಣಿನ ಮಡಕೆಯನ್ನು ಕವುಚಿ ಅದರಲ್ಲಿ ಸುಣ್ಣದಿಂದ ಒಂದು ಮುಖ ಬಿಡಿಸುವುದೂ ಇತ್ತು.

ನಮ್ಮ ಕಲ್ಲಟ್ಟೆ ಮನೆಯ ಮೇಲ್ಭಾಗದಲ್ಲಿರುವ ಮರಾಟಿ ಮನೆಯ ಮುಂದಿನ ಗದ್ದೆಯಲ್ಲಿ ಕಬ್ಬಿನ ಆಲೆ ಮನೆಯನ್ನು ಹೂಡಿ  ಪ್ರತೀ ವರ್ಷ ಬೆಲ್ಲ ಮಾಡುತ್ತಿದ್ದರು. ಹೋರಿಗಳ ಸಹಾಯದಿಂದ ಗಾಣವನ್ನು ತಿರುಗಿಸಿ ಕಬ್ಬಿನ ರಸವನ್ನು ತೆಗೆದು ದೊಡ್ಡ ಕೊಪ್ಪರಿಗೆಯಲ್ಲಿ ಹಾಕಿ ಕುದಿಸಿ ಬೆಲ್ಲವನ್ನು ಮಾಡಿ ಮಾಡಿ ಡಬ್ಬಿಗೆ ಹಾಕಿ ಇಡುತ್ತಿದ್ದರು. ರಾತ್ರಿ ಇಡೀ ಈ ಕೆಲಸ ಮಾಡುತ್ತಿದ್ದರು. ನಾವು ಹೋದರೆ ಕಬ್ಬಿನ ಹಾಲನ್ನು ಕುಡಿಯಬಹುದಿತ್ತು. ಮನೆಯಲ್ಲೂ ಬರಿ ಅಕ್ಕಿದೋಸೆ ಮಾಡಿ ಕಬ್ಬಿನ ಹಾಲಿನಲ್ಲಿ ಅದ್ದಿಕೊಂಡು ತಿಂದರೆ ಅದು ಬಹಳ ರುಚಿ. ಈಗ ನಮ್ಮಲ್ಲಿ ಕಬ್ಬು ಬೆಳೆಯುವವರು ಇಲ್ಲ. ಗಾಣವೂ ಇಲ್ಲ.

 ಬೇಸಿಗೆಗಾಲದಲ್ಲಿ ಎತ್ತರದ ಗದ್ದೆಯಲ್ಲಿ ಒಣ ಮಣ್ಣು ಶೆಟ್ಟೆಯನ್ನು, ಹುಡಿಮಾಡಲು ಹೋರಿಗಳನ್ನು ನೇಗಿಲಿಗೆ ಕಟ್ಟಿ ಹೂಟೆ ಮಾಡುತ್ತಿದ್ದರು. ದೊಡ್ಡ ಶೆಟ್ಟೆಯನ್ನು ಹುಡಿಮಾಡಲು ಹೂಟೆ ಮಾಡುವಾಗ ನಾವು ಗೋರಿಯ ಮೇಲೆ ಭಾರಕ್ಕಾಗಿ ಕುಳಿತು ಸವಾರಿ ಮಾಡುತ್ತಿದ್ದೆವು. ಅದೊಂದು ನಮಗೆ ಆಟ. ಬೆಳ್ಳನು ಒಂದು ಕೈಯಲ್ಲಿ ಹೂಟಿಯ ಕೋಲು ಇನ್ನೊಂದು ಕೈಯಲ್ಲಿ ಎಡದ ಬದಿಯ ಹೋರಿಯ ಬಾಲ ಹಿಡಿದು, ಹಾಡುತ್ತಾ ನಮ್ಮ ಆಚೆ ಈಚೆ ಬದಿಯಲ್ಲಿ ಕಾಲು ಅಗಲಿಸಿ ನಿಂತು ಗೋರಿಯ ಮೇಲೆ ಹತ್ತಿ  ಅವನೂ ಸವಾರಿ ಮಾಡುತ್ತಾ ಇರುತ್ತಿದ್ದ. ಅದೆಲ್ಲ ಈಗ ನೆನಪು.

 ಹಲಸಿನ ಹಕ್ಕಿ ಅಂತ ಒಂದುಜಾತಿಯ ಹಕ್ಕಿಗಳು ನಮ್ಮ ಮನೆಯ ಸುತ್ತ ಇರುತ್ತಿದ್ದವು. ಮಾಂಸ ತಿನ್ನುವ ಕೂಲಿಯವರ ಜಾತಿಯವರು ಅದನ್ನು ಹಿಡಿದು ಕೊಂದು ಪದಾರ್ಥಮಾಡಿ ತಿನ್ನುತ್ತಿದ್ದರು. ಆ ಹಕ್ಕಿಗಳನ್ನು ಹಿಡಿಯಲು ನಮ್ಮ ಮನೆಯ ಅಂಗಳದಲ್ಲಿ ಒಂದು ದೊಡ್ಡ ಹೆಡಗೆಯನ್ನು ಬೋರಲಾಗಿ ಇಟ್ಟು ಅದರ ಮೇಲೆ ಒಂದು ಮೀನು ಹಿಡಿಯುವ ಬಲೆಯನ್ನು ಹೊದಿಸಿ ಅದರ ಒಂದು ಬದಿಯನ್ನು ಸ್ವಲ್ಪ ಎತ್ತರ ಮಾಡಿ ಒಂದು ಕೋಲನ್ನು ಆಧರಿಸಿ ಆ ಹೆಡಗೆ ನಿಲ್ಲುವಂತೆ ಮಾಡುತ್ತಿದ್ದರು. ಆ ಕೋಲಿಗೆ ಹಗ್ಗವನ್ನು ಕಟ್ಟುತ್ತಿದ್ದು ಆ ಹಗ್ಗವನ್ನು ಎಳೆದರೆ ಹೆಡಗೆ ಬೀಳುತ್ತಿತ್ತು. ಹಾಗೂ ಮುಚ್ಚಿಬಿಡುತ್ತಿತ್ತು. ಆ ಹೆಡಗೆಯ ಕೆಳಗೆ ಏನಾದರೂ ಕಾಳುಗಳನ್ನು ಹಾಕಿದರೆ ಹಲಸಿನ ಹಕ್ಕಿಗಳು ಅದನ್ನು ತಿನ್ನಲು ಹೆಡಗೆಯ ಕೆಳಗೆ ಬಂದ ಕೂಡಲೇ ದೂರದಲ್ಲಿ  ನಿಂತು ಹಗ್ಗವನ್ನು ಎಳೆದಾಗ ಕೋಲು ಬಿದ್ದು ಹೆಡಗೆಯನ್ನು ಬೀಳಿಸಿ, ಹಕ್ಕಿಯನ್ನು ಸೆರೆ ಹಿಡಿಯಲು ಆಗುತ್ತಿತ್ತು.
ಅದೆಲ್ಲ ನೆನಪು ಮಾಡಿಕೊಳ್ಳುವಾಗ ಏನೋ ಕುಷಿ.
ನಾವು ಇಂದಿನ ಮಕ್ಕಳಿಗೆ ತುಂಬಾ ಸಂತೋಷವನ್ನು ಮಿಸ್ ಮಾಡುತ್ತಿದ್ದೇವೆ ಅಂತ ಅನ್ನಿಸುವುದಿಲ್ಲವೇ?