ದಿನೇಶ ಉಪ್ಪೂರ:
*ನನ್ನೊಳಗೆ - 82*
ನಮ್ಮ ಪಡುಹಾಲಾಡಿಯ ಹತ್ತಿರದ ದಕ್ಚಿಣದಿಕ್ಕಿನ ಬಯಲಿನ ಅಂಚಿನಲ್ಲಿ ಕುಚ್ಚಾಳು ಎಂಬ ಸಣ್ಣ ಊರಿನಲ್ಲಿ ಪೈಕ ನಾಯ್ಕ ಅಂತ ಒಬ್ಬ ಕುಡುಬಿ ಇದ್ದ. ನಾನು ನೋಡುವಾಗಲೇ ಅವನಿಗೆ ಅರವತ್ತರ ಮೇಲೆ ಪ್ರಾಯವಾಗಿತ್ತು. ಬಾಯಿಯ ತುಂಬಾ ಯಾವಾಗಲೂ ಎಲೆಯಡಿಕೆ ಹಾಕಿ, ಹೊಗೆಸೊಪ್ಪಿನ ಸಣ್ಣ ತುಂಡಿಗೆ ಸುಣ್ಣ ಒರೆಸಿ ಬಾಯಿಯಲ್ಲಿ ಇಟ್ಟುಕೊಳ್ಳುತ್ತಿದ್ದ. ಬಯಲು ಗದ್ದೆಯ ಅಂಚಿನಲ್ಲಿ ಎದುರು ಸಿಕ್ಕಾಗ ಗದ್ದೆಗೆ ಇಳಿದು ನಮಗೆ ದಾರಿ ಬಿಟ್ಟು ಕೊಡುತ್ತ, "ಅಯ್ಯ ಶಾಲಿಗ್ ಹ್ವಾತ್ರ್ಯಾ?" ಎಂದು ಪ್ರಶ್ನಿಸಿ ನಾವು ಉತ್ತರ ಕೊಡುವುದರ ಒಳಗೆ, ಮುಖ ಅಡ್ಡಮಾಡಿ, ತೋರು ಬೆರಳು ಮಧ್ಯದ ಬೆರಳುಗಳಿಂದ ಬಾಯಿಯನ್ನು ಮುಚ್ಚಿ, ಅದರ ಮಧ್ಯದಲ್ಲಿ ಎಂಜಲನ್ನು ಪಿಚಕ್ ಎಂದು ಗದ್ದೆಗೆ ಉಗಿದುಬಿಡುತ್ತಿದ್ದ.
ಅವನು ಗದ್ದೆಯಲ್ಲಿ ಮೈಮುರಿದು ದುಡಿಯುವವನಾದ್ದರಿಂದ ದುಡಿಮೆ ಇಲ್ಲದಿದ್ದಾಗ ಅಥವ ದುಡಿದು ಮೈಕೈ ನೋವು ಅನ್ನಿಸಿದಾಗ ಅವನು ಹಾಲಾಡಿ ಬಸ್ ಸ್ಟಾಂಡಿನ ಬಳಿ ಇದ್ದ ಸಾರಾಯಿ ಅಂಗಡಿಯ ಎದುರೇ ಇರುತ್ತಿದ್ದ. ರಾತ್ರಿ ರಸ್ತೆ ಅಳೆಯುತ್ತಾ ಅಡ್ಡಡ್ಡಕ್ಕೆ ಹೋಗುತ್ತಾ, ಬಾಯಿಯಲ್ಲಿ ತನ್ನಷ್ಟಕ್ಕೆ ಎನೇನೋ ಮಾತಾಡುತ್ತಾ ಮನೆಗೆ ಸೇರುತ್ತಿದ್ದ.
ಸುಮ್ಮನೇ ಅವನ ವಿಷಯ ಇಷ್ಟು ಹೇಳಿದ್ದಲ್ಲ. ಆ ಪೈಕ ನಾಯ್ಕ ನಮ್ಮ ಊರಿನ ಗೋ ಡಾಕ್ಟರ್. ನಾಟಿ ವೈದ್ಯ. ನಮ್ಮ ಮನೆಯಲ್ಲಿ ಇರುವ ದನವೋ ಎತ್ತೋ ಹೋರಿಯೇ ಕರುವೋ ಕುತ್ತಿಗೆ ಅಡ್ಡ ಹಾಕಿ ಮಲಗಿದರೆ, ಹೊಟ್ಟೆ ಉಬ್ಬರಿಸಿದರೆ, ಮೇಯುವಾಗ ಬಿದ್ದು ಕಾಲು ಪ್ಲಾಕ್ಚರ್ ಮಾಡಿಕೊಂಡರೆ, ನಾವು ಅವನನ್ನು ಹುಡುಕಿಕೊಂಡು ಹೋಗಬೇಕಾಗಿತ್ತು. ಗಂಟಿಗಳಿಗೆ ಕಾಯಿಲೆ ಬರಬಾರದು ಒಣಗು ವಗೈರೆ ಬರಬಾರದು ಅಕ್ಕಚ್ಚು ಬೈರು ಸರಿಯಾಗಿ ತಿನ್ನಬೇಕು ಅಂತ ಅಮ್ಮ ಆಗಾಗ ಹರಕೆ ಹೇಳಿಕೊಂಡು, ಬೊಬ್ಬರ್ಯನ ಬ್ರಹ್ಮನ ಹೆಸರು ಹೇಳಿ ಕಾಯಿಯನ್ನು ಸುಳಿದು ಮನೆಯ ಹಟ್ಟಿಯ ಮಾಡಿಗೆ ತೂಗು ಹಾಕುತ್ತಿದ್ದಳು. ಆದರೂ ಕೆಲವೊಮ್ಮೆ ಇದ್ದಕ್ಕಿದ್ದಂತೆ ದನಗಳಿಗೆ ಏನಾದರೂ ಕಾಯಿಲೆ ಬಂದು ಮನೆಯ ಎಲ್ಲರಿಗೂ ಆತಂಕ ಸೃಷ್ಟಿಯಾಗುತ್ತಿತ್ರು. ಆಗ ಆ ಪೈಕ ನಾಯ್ಕನನ್ನು ಹುಡುಕಿಕೊಂಡು ಹೋಗಬೇಕು. ಆದ್ದರಿಂದ ಅವನ್ನು ಗೊತ್ತಿಲ್ಲ ಅನ್ನುವವರೇ ನಮ್ಮ ಊರಿನಲ್ಲಿ ಇರಲಿಲ್ಲ.
ನಾವು ಬೇಸಿಗೆಯಲ್ಲಿ ಮಧ್ಯಾಹ್ನ ಗಂಟಿಗಳನ್ನು ಬಯಲಿನ ದೊಡ್ಡ ಗದ್ದೆಗೋ ಮಕ್ಕಿಗೋ ಮೇಯಿಸಲು ಎಬ್ಬಿಕೊಂಡು ಹೋಗುವುದಿತ್ತು. ಬಿಸಿಲಿನ ರಾಪಿಗೆ ಮೇವು ಒಣಗಿ ಹಸಿರು ಕಮ್ಮಿಯಾಗುತ್ತಾ ಬರುವಾಗ ಧರೆಯ ಅಂಚಿನಲ್ಲಿರುವ ಹಳುವಿಗೋ ಮರದ ಬುಡದ ಸೊಪ್ಪಿಗೋ ಬಾಯಿ ಹಾಕುವಾಗ ಕೆಲವೊಮ್ಮೆ ಧರೆಯ ಅಂಚಿನಲ್ಲಿ ಜಾರಿ ದನಗಳು ಧರೆಯ ಕೆಳಗೆ ಜಾರಿ ಬೀಳುವುದು. ಒಮ್ಮೆ ಹಾಗೆಯೇ ಆಯಿತು. ಧರೆಯ ಅಂಚಿನಲ್ಲಿ ಮೇಯುತ್ತಿದ್ದ ನಮ್ಮ ಹಾಲು ಕರೆಯುವ ದೊಡ್ಡ ದನ ಹಸಿರು ಬೆರಕೆಸೊಪ್ಪನ್ನು ನೀಕಿ ನೀಕಿ ಬಾಯಿಯಲ್ಲಿ ಕಚ್ಚಿ ಎಳೆಯಲು ಪ್ರಯತ್ನಿಸುತ್ತಿರುವಾಗ ಆಯ ತಪ್ಪಿ ಧರೆಯ ಅಂಚಿನ ಮಣ್ಣು ಜರಿದು ಬಿದ್ದು ಬಿಟ್ಟಿತು. ಗ್ರಹಚಾರಕ್ಕೆ ಹಲಸಿನ ಬೇರೊಂದಕ್ಕೆ ಹಿಂದಿನ ಕಾಲು ಸಿಕ್ಕಿ ಬಿದ್ದು ಮಧ್ಯದಲ್ಲಿ ದನ ನೇತಾಡತೊಡಗಿತು. ಶಬ್ಧ ಕೇಳಿ ಓಡಿಬಂದ ನಾವು ದನದ ಅವಸ್ಥೆಯನ್ನು ನೋಡಿ ಬೊಬ್ಬೆ ಹೊಡೆದೆವು. ಮನೆಯ ಕೆಲಸದ ಆಳು ಬೆಳ್ಳ ರಾಮ ನಮ್ಮ ಮನೆಯವರು ಎಲ್ಲರೂ ಓಡಿಬಂದರು.
ಆ ದನದ ಅಸಹಾಯಕ ಪರಿಸ್ಥಿತಿಯನ್ನು ನೋಡಿ ನಮಗೆ ಸಂಕಟವಾಯಿತು. ನಮ್ಮಂತೆ ಬೊಬ್ಬೆ ಹೊಡೆದು ದುಃಖಿಸಲೂ ನೋವನ್ನು ತಿಳಿಸಲು ಸಹ ಮೂಕ ಪ್ರಾಣಿಗೆ ಆಗುವುದಿಲ್ಲವಲ್ಲ. ಆಗ ಬೆಳ್ಳ ಒಂದು ಗರಗಸವನ್ನು ತಂದು ಧರೆಯ ಆಯಕಟ್ಟಿನ ಜಾಗದಲ್ಲಿ ನಿಂತು, ಹಲಸಿನ ಬೇರನ್ನು ಕತ್ತರಿಸಿ ಹಾಕಿದ. ಮರದ ಬೇರು ಒಮ್ಮೆಲೇ ತುಂಡಾದ ಹೊಡೆತಕ್ಕೆ ದನ ಮತ್ತೆ ಗಾಬರಿಯಾಗಿ ಅಂಬಾ ಎಂದು ಅರಚುತ್ತಾ ಕೆಳಗೆ ಬಿತ್ತು. ಎಲ್ಲರೂ ಹತ್ತಿರ ಓಡಿ ಹೋದೆವು. ಬೇರಿನ ಮಧ್ಯ ಸಿಕ್ಕಿದ ಅದರ ಹಿಂದಿನ ಎಡಕಾಲು ಮುರಿದು ಹೋಗಿ ನೇತಾಡುತ್ತಿತ್ತು. ಮುಟ್ಟಿ ನೋಡುವ ಎಂದರೆ ಆ ಕಾಲಿನ ಹತ್ತಿರಕ್ಕೆ ಹೋದರೆ ದನ ನೋವಿನಿಂದ ಮೂತಿಯಿಂದ ನಮ್ಮನ್ನು ದೂಡಿ ಅಂಬಾ ಎಂದು ಅರಚುತ್ತಿತ್ತು. ಆಗಲೇ ಸಂಜೆಯಾಗುತ್ತಾ ಬರುತ್ತಿದ್ದು ಕತ್ತಲು ಆವರಿಸತೊಡಗಿತ್ತು. ಏನು ಮಾಡುವುದು? ಅಂತ ಚರ್ಚೆಯಾಯಿತು. ಕಾಲಿಗೆ ಬ್ಯಾಂಡೇಜು ಮಾಡಲು ಪೈಕ ನಾಯ್ಕನೇ ಬೇಕು.
ಸರಿ. ಒಬ್ಬರು ಪೈಕನಾಯ್ಕ ಎಲ್ಲಿದ್ದ ಅಂತ ಹುಡುಕಿಕೊಂಡು ಹೊರಟೇ ಬಿಟ್ಟರು. ಮತ್ತೆಲ್ಲಿರುತ್ತಾನೆ ಅಷ್ಟು ಹೊತ್ತಿನಲ್ಲಿ.? ಹಾಲಾಡಿ ಪೇಟೆಗೆ ಹೋಗಿ ಸಾರಾಯಿ ಅಂಗಡಿಯ ಎದುರು ತೂರಾಡುತ್ತಿದ್ದ ಅವನನ್ನು ಹುಡುಕಿ ಒತ್ತಾಯಿಸಿ ಮನೆಗೆ ಕರೆದು ತಂದಾಯಿತು. ದನವನ್ನು ಅಂಗಳದ ಹತ್ತಿರವಿರುವ ಸೌದೆ ಕೊಟ್ಟಿಗೆಗೆ ಹೊತ್ತು ತಂದು ಮಲಗಿಸಿದರು. ಆಗಲೇ ಕತ್ತಲು ಆವರಿಸತೊಡಗಿತ್ತು. ಪೈಕ ನಾಯ್ಕ ನಮ್ಮ ಮನೆಗೆ ಮೂರು ಮೈಲಿ ನಡೆದು ಬಳಲಿದ್ದರೂ ಸ್ವಲ್ಪ ತೂರಾಡುತ್ತಲೇ ಆದರೆ ಬಹಳ ಗಂಭೀರವಾಗಿದ್ದು ಬಂದವನೇ ಒಂದು ಬ್ಯಾಟರಿ ಲೈಟನ್ನು ಕೊಡಲು ಹೇಳಿ ಆಚೆ ಈಚೆ ಮನೆಯ ಹಿಂದೆ ಓಡಾಡಿದ. ಲೈಟನ್ನು ತೆಗೆದುಕೊಂಡು ತೋಟಕ್ಕೆ ಹಿತ್ತಲಿಗೆ ಹೋಗಿ ಸುತ್ತಾಡಿ, ಏನೋ ಒಂದೆರಡು ಹಸಿರು ಸೊಪ್ಪನ್ನು ತಂದ. ಬೇರುಗಳನ್ನು ತಂದ. ಅವನ ಮೈ ವಾಸನೆ ಬರುತ್ತಿದ್ದರೂ ಆಗ ತಾಳ್ಮೆಯ ಮೂರ್ತಿಯಾಗಿದ್ದ. ಯಾವುದೇ ಗಡಿಬಿಡಿ ಇರಲಿಲ್ಲ. ಕಾಲದ, ಸಮಯದ ಗೊಡವೆಯೇ ಇದ್ದಂತಿರಲಿಲ್ಲ. ತಂದ ಸೊಪ್ಪುಗಳನ್ನು ಬಟ್ಟೆ ಒಗೆಯುವ ಕಲ್ಲಿನ ಮೇಲೆ ಇಟ್ಟು, ಅರೆಯುವ ಕಲ್ಲಿನ ಮಗುವನ್ನು ಅದರ ಮೇಲೆ ನಿಧಾನವಾಗಿ ಓಡಿಸಿ ಓಡಿಸಿ ಸಣ್ಣಗೆ ಮಾಡಿದ. ಅದನ್ನು ಅಂಗೈಯಲ್ಲಿ ಹಿಡಿದು ದನವನ್ನು ಅಲುಗಾಡದ ಹಾಗೆ ಹಿಡಿದುಕೊಳ್ಳಲು ಹೇಳಿದ.
ಬಾಯಿಯಲ್ಲಿ ಎಲೆಯಡಿಕೆ ಹಾಕಿ ಅದು ಕೆಳಗೆ ಬೀಳಬಾರದೆಂದು ಮೇಲೆ ನೋಡುತ್ತ ಮಾತಾಡಿ ಆದೇಶಿಸುತ್ತಿದ್ದ. ಕೆಲವೊಮ್ಮೆ ಅವನು ಏನು ಹೇಳುತ್ತಾನೆ ಅಂತಲೇ ಗೊತ್ತಾಗುತ್ತಿರಲಿಲ್ಲ. ಆದರೆ ಮತ್ತೆ ಮತ್ತೆ ಕೇಳಿಸಿಕೊಂಡು ಅವನ ಆದೇಶಕ್ಕೆ ಎಲ್ಲರೂ ಮಂತ್ರ ಮುಗ್ಧರಂತೆ ಕೆಲಸಮಾಡುತ್ತಿದ್ದರು.
ಒಂದು ಅಡಿಕೆಯ ಹಾಳೆಯನ್ನು ಅವನ ಆಜ್ಞೆಯಂತೆ ತಂದರು. ಒಂದು ಸಪೂರ ಹುರಿ ಹಗ್ಗವನ್ನೂ ಹುಡುಕಿ ತಂದರು. ದನದ ಕಾಲನ್ನು ಇಬ್ಬಿಬ್ಬರು ಒತ್ತಿಹಿಡಿದು ದನವು ಅಲ್ಲಾಡದ ಹಾಗೆ ಗಟ್ಟಿಯಾಗಿ ಹಿಡಿದುಕೊಂಡರು. ದನದ ಕಾಲನ್ನು ಒಮ್ಮೆ ಗಟ್ಟಿಯಾಗಿ ಹಿಡಿದು ಏನೋ ಮಂತ್ರ ಹೇಳುವಂತೆ ಹಿಡಿದ ಪೈಕ ನಾಯ್ಕ ಅದರ ಸುತ್ತ ಸೊಪ್ಪನ್ನು ಹಚ್ಚಿ ಏನೋ ರಸವನ್ನು ಅದಕ್ಕೆ ಬಿಟ್ಟು ಅಡಿಕೆ ಹಾಳೆಯಿಂದ ಸುತ್ತಿದ. ಸುತ್ತಲೂ ನಾಲ್ಕಾರು ಅಡಿಕೆಯ ಮರದ ದಬ್ಬೆಯನ್ನು ಇಟ್ಟು ಮೇಲೆ ಹುರಿ ಹಗ್ಗದಿಂದ ಗಟ್ಟಿಯಾಗಿ ಬಿಗಿದು ಸುತ್ತಿ ಕಾಲನ್ನು ಬಿಗಿಯಾಗಿ ಕಟ್ಟಿದ. ಬ್ಯಾಂಡೇಜ್ ಆಯಿತು. ಲಾಟೀನು ಬ್ಯಾಟರಿ ಚಿಮಣಿ ದೀಪ ಹಿಡಿದು ಸುತ್ತಲೂ ನಿಂತ ಮನೆಯವರು ಒಬ್ಬೊಬ್ಬರೇ ದನವನ್ನು ಕತ್ತಲಲ್ಲಿ ಬಿಟ್ಟು ಮನೆ ಸೇರಿದೆವು. ಪಾಯ್ಕನಾಯ್ಕನಿಗೆ ಅಕ್ಕಿ ಕಾಯಿಯ ಮರ್ಯಾದೆಯೂ ಸಂದಿತು. ದನವೂ ಹತ್ತು ಹದಿನೈದು ದಿನದಲ್ಲಿ ಎದ್ದು ಕಾಲೂರಿ ಓಡಾಡಲು ಸಮರ್ಥವಾಯಿತು.

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ