ದಿನೇಶ ಉಪ್ಪೂರ:
*ನನ್ನೊಳಗೆ- 78*
ನಮ್ಮ ಮನೆಯ ಕೆಲಸದ ಆಳು ಬೆಳ್ಳ ನಾಯ್ಕ ಬಹಳ ನಂಬಿಕಸ್ಥ ಆಳು. ತುಂಬ ಜವಾಬ್ದಾರಿ ಯಿಂದ ಕೆಲಸ ಮಾಡುತ್ತಿದ್ದ. ಆದರೆ ಅವನು ಪಟಪಟನೇ ಮಾತನಾಡುತ್ತಿದ್ದ. ಅವನು ಏನು ಹೇಳುತ್ತಾನೆ ಎಂಬುದನ್ನು ಗಮನವಿಟ್ಟು ಕೇಳದಿದ್ದರೆ ಮತ್ತೆ "ಆಂ" ಎಂದು ಪುನಃ ಕೇಳಬೇಕಾಗುತ್ತಿತ್ತು. ಎಷ್ಟೋ ಸಲ ಅವನ ಚುರುಕು ಮಾತು ಅರ್ಥವಾಗದೆ ಇದ್ದರೂ ಪುನಃ ಕೇಳಲು ಉದಾಸೀನವಾಗಿ ಬಿಟ್ಟುಬಿಡುವುದೂ ಇತ್ತು.
ಅವನ ಸೊಂಟಕ್ಕೆ ಒಂದು ತುಂಡು ಪಂಚೆಯನ್ನು ಮಾತ್ರ ಕಟ್ಟಿಕೊಂಡು ಕೆಲಸ ಮಾಡುತ್ತಿದ್ದ. ಅವನ ಸೊಂಟದಲ್ಲಿ ಒಂದು ಕತ್ತಿ ಯಾವಾಗಲೂ ಇರುತ್ತಿತ್ತು. ಅದನ್ನು ಅವನು ಒಂದು ಎಸ್ ಆಕಾರದ ಕಬ್ಬಿಣದ ತುಂಡಿಗೆ ಸಿಕ್ಕಿಸಿ ಬೆನ್ನಿನ ಹಿಂದೆ ಒಂದು ಹಗ್ಗದಿಂದ ಕಟ್ಟಿರುತ್ತಿದ್ದ. ಮರ ಏರುವಾಗಲೂ, ಮಣ್ಣು ಕಡಿದು ತೋಡು ಮಾಡುವಾಗಲೂ ಅದನ್ನು ಬಿಡುತ್ತಿರಲಿಲ್ಲ. ನಮ್ಮ ಮನೆಯಲ್ಲಿರುವ ಕತ್ತಿಗಳನ್ನೆಲ್ಲಾ ಸಿಕ್ಕಿಸಿ ಇಡಲು ಒಂದು ಬಿದಿರಿನ ತುಂಡನ್ನು ಮಧ್ಯದಲ್ಲಿ ಉದ್ದಕ್ಕೆ ತೂತು ಮಾಡಿ ನೇತು ಹಾಕುತ್ತಿದ್ದರು. ಎಲ್ಲ ಕತ್ತಿಗಳನ್ನು ಅದರಲ್ಲಿ ಸಿಕ್ಕಿಸಿ ಇಡುತ್ತಿದ್ದೆವು. ಆದರೆ ಬೆಳ್ಳನ ಕತ್ತಿಯನ್ನು ಯಾರೂ ಮುಟ್ಟುತ್ತಿರಲಿಲ್ಲ. ಒಂದು, ಅವನು ಜೋರು ಮಾಡುತ್ತಾನೆ ಎಂಬುದಾಗಿದ್ದರೆ ಎರಡನೆಯದು ಅವನು ಅದನ್ನು ಯಾವಾಗಲೂ ಮಸೆದು ಹರಿತಗೊಳಿಸಿ ಇಟ್ಟು ಕೊಳ್ಳುತ್ತಿದ್ದುದರಿಂದ, ಅದರಲ್ಲಿ ಏನನ್ನಾದರೂ ಕತ್ತರಿಸಲು ಹೋದರೆ ನಮ್ಮ ಕೈಯೇ ಕತ್ತರಿಸಿಹೋದೀತು ಅಂತ ಭಯವಾಗುತ್ತಿತ್ತು. ಬೆಣಚುಗಲ್ಲಿನ ಪುಡಿಮಾಡಿ ಒಂದು ಉದ್ದದ ಮಣೆಯಲ್ಲಿ ಹಾಕಿ, ಅವನು ಯಾವಾಗಲೂ ಆ ಕತ್ತಿಯನ್ನು ಮಸೆದು ಮಸೆದು ಇಟ್ಟುಕೊಳ್ಳುತ್ತಿದ್ದ.
ನಮ್ಮ ಮನೆಯಲ್ಲಿ ಅಮ್ಮ, ದಾಮೋದರಣ್ಣಯ್ಯ ವೀಳ್ಯ ಹಾಕುತ್ತಿದ್ದರೂ ಹೊಗೆಸೊಪ್ಪು ಹಾಕುತ್ತಿರಲಿಲ್ಲ. ಆದರೆ ಆ ಬೆಳ್ಳನಿಗೋಸ್ಕರವಾಗಿ ಪೇಟೆಯಿಂದ ಹೊಗೆಸೊಪ್ಪು ತಂದು ಇಟ್ಟು ಕೊಳ್ಳಬೇಕಾಗುತ್ತಿತ್ತು. ಅವನು ಸಂಜೆ ಕೆಲಸ ಮುಗಿಸಿ ಕೈ ಕಾಲು ತೊಳೆದು ಮನೆಗೆ ಹೊರಡುವ ಸಮಯಕ್ಕೆ "ಅಯ್ಯಾ", ಎಂದ ಕೂಡಲೇ ನಮಗೆ ಗೊತ್ತಾಗಬೇಕು. ಹೊಗೆಸೊಪ್ಪು ಬೇಕೆಂದು. ಇಲ್ಲದಿದ್ದರೆ ಪುನಃ ಯಾರನ್ನಾದರು ಕರೆದು, ಒಂದ್ ಚೂರು ಹೋಯ್ ಸೊಪ್" ಎಂದ ಕೂಡಲೇ, ನಾವು ಒಳಗೆ ಕಪಾಟಿನಲ್ಲಿ ಡಬ್ಬದಲ್ಲಿಟ್ಟ, ಹೊಗೆಸೊಪ್ಪಿನ ಎಲೆಯಲ್ಲಿ, ಅರ್ಧ ತುಂಡು ಮಾಡಿ ಅವನಿಗೆ ಕೊಡುವುದು. ಅಲ್ಲದೇ ಮನೆಗೆ ಬಂದ ನೆಂಟರು, ಆಚೀಚೆ ಮನೆಯವರು, ಶೂದ್ರರೂ, ಕೆಲಸದವರಿಗೂ "ವೀಳ್ಯ ಹಾಕ್ತಿಯನಾ? ಬೇಕಾ?" ಎಂದು ಎಲೆ ಪೆಟ್ಟಿಗೆ ಜಾರಿಸುವುದು, ಒಂದು ಆತ್ಮೀಯತೆಯ ಸಲಿಗೆಯ ಮಾತಿನ ಆರಂಭವಾಗಿತ್ತು.
ಕಲ್ಲಟ್ಟೆಯ ಮನೆಯಲ್ಲಿ ಕಬ್ಬು ಭತ್ತ ಧಾನ್ಯಗಳನ್ನು ಬೆಳೆಯುತ್ತಿದ್ದಾಗ, ಬಯಲು ಗದ್ದೆಯಲ್ಲಿ ಹಂದಿಗಳನ್ನು, ಹಕ್ಕಿಗಳನ್ನು ಓಡಿಸಲು ಗದ್ದೆಯ ಮಧ್ಯಭಾಗದಲ್ಲಿ ಒಂದು ಸಣ್ಣ ಮನೆ ಮಾಡುತ್ತಿದ್ದರು. ಇದನ್ನು ಹಳ್ಳಿ ಮನೆ ಎಂದು ಹೇಳುತ್ತಿದ್ದರು. ಗದ್ದೆಯ ಮಧ್ಯೆ ಒಂದು ಗೂಟ ನಿಲ್ಲಿಸಿ ಅದಕ್ಕೆ ಒಂದು ಚಿಮಣಿ ಎಣ್ಣೆಯ ಡಬ್ಬ ಕವುಚಿ ಹಾಕಿ ಕಟ್ಟುತ್ತಿದ್ದರು. ಅದರ ಒಳಗೆ ಒಂದು ಕೋಲನ್ನು ಕಟ್ಟುತ್ತಿದ್ದು, ಅದನ್ನು ಎಳೆದಾಗ ಡಬ್ಬಿಗೆ ಹೊಡೆದು ಶಬ್ದವಾಗುವಂತೆ ಮಾಡಿ ಆ ಕೋಲನ್ನು ಕಟ್ಟಿದ ಹಗ್ಗದ ಇನ್ನೊಂದು ತುದಿ ಹಳ್ಳಿಮನೆಯ ಮಾಡಿಗೆ ಕಟ್ಟುತ್ತಿದ್ದರು. ಆ ಹಗ್ಗವನ್ನು ಎಳೆದರೆ ಕೋಲು ಡಬ್ಬಕ್ಕೆ ಬಡಿದು ಶಬ್ದವಾಗುತ್ತಿತ್ತು. ಹಕ್ಕಿಗಳು ಹಂದಿ ಮುಂತಾದ ಪ್ರಾಣಿ ಪಕ್ಷಿಗಳು ಬಂದು ಸದ್ದು ಮಾಡಿದಾಗ, ಅವನ್ನು ಓಡಿಸಲು ಹೀಗೆ ಡಬ್ಬಿ ಬಡಿದು ಸದ್ದು ಮಾಡುತ್ತಿದ್ದರು. ಆ ಹಳ್ಳಿಮನೆಯಲ್ಲಿಯೇ ರಾತ್ರಿ ಯಾರಾದರೂ ಮಲಗುತ್ತಿದ್ದರು.
ಗದ್ದೆಯ ಮಧ್ಯೆ ಶಿಲುಬೆಯಂತೆ ಮರದ ಗೂಟ ಮಾಡಿ ಹುಗಿದು ಅದಕ್ಕೆ ಮನೆಯಲ್ಲಿರುವ, ಹಳೆಯ ಅಂಗಿ ಪ್ಯಾಂಟು ತೊಡಿಸಿ ಗೂಟದ ತುದಿಯಲ್ಲಿ ಒಂದು ಮಣ್ಣಿನ ಮಡಕೆಯನ್ನು ಕವುಚಿ ಅದರಲ್ಲಿ ಸುಣ್ಣದಿಂದ ಒಂದು ಮುಖ ಬಿಡಿಸುವುದೂ ಇತ್ತು.
ನಮ್ಮ ಕಲ್ಲಟ್ಟೆ ಮನೆಯ ಮೇಲ್ಭಾಗದಲ್ಲಿರುವ ಮರಾಟಿ ಮನೆಯ ಮುಂದಿನ ಗದ್ದೆಯಲ್ಲಿ ಕಬ್ಬಿನ ಆಲೆ ಮನೆಯನ್ನು ಹೂಡಿ ಪ್ರತೀ ವರ್ಷ ಬೆಲ್ಲ ಮಾಡುತ್ತಿದ್ದರು. ಹೋರಿಗಳ ಸಹಾಯದಿಂದ ಗಾಣವನ್ನು ತಿರುಗಿಸಿ ಕಬ್ಬಿನ ರಸವನ್ನು ತೆಗೆದು ದೊಡ್ಡ ಕೊಪ್ಪರಿಗೆಯಲ್ಲಿ ಹಾಕಿ ಕುದಿಸಿ ಬೆಲ್ಲವನ್ನು ಮಾಡಿ ಮಾಡಿ ಡಬ್ಬಿಗೆ ಹಾಕಿ ಇಡುತ್ತಿದ್ದರು. ರಾತ್ರಿ ಇಡೀ ಈ ಕೆಲಸ ಮಾಡುತ್ತಿದ್ದರು. ನಾವು ಹೋದರೆ ಕಬ್ಬಿನ ಹಾಲನ್ನು ಕುಡಿಯಬಹುದಿತ್ತು. ಮನೆಯಲ್ಲೂ ಬರಿ ಅಕ್ಕಿದೋಸೆ ಮಾಡಿ ಕಬ್ಬಿನ ಹಾಲಿನಲ್ಲಿ ಅದ್ದಿಕೊಂಡು ತಿಂದರೆ ಅದು ಬಹಳ ರುಚಿ. ಈಗ ನಮ್ಮಲ್ಲಿ ಕಬ್ಬು ಬೆಳೆಯುವವರು ಇಲ್ಲ. ಗಾಣವೂ ಇಲ್ಲ.
ಬೇಸಿಗೆಗಾಲದಲ್ಲಿ ಎತ್ತರದ ಗದ್ದೆಯಲ್ಲಿ ಒಣ ಮಣ್ಣು ಶೆಟ್ಟೆಯನ್ನು, ಹುಡಿಮಾಡಲು ಹೋರಿಗಳನ್ನು ನೇಗಿಲಿಗೆ ಕಟ್ಟಿ ಹೂಟೆ ಮಾಡುತ್ತಿದ್ದರು. ದೊಡ್ಡ ಶೆಟ್ಟೆಯನ್ನು ಹುಡಿಮಾಡಲು ಹೂಟೆ ಮಾಡುವಾಗ ನಾವು ಗೋರಿಯ ಮೇಲೆ ಭಾರಕ್ಕಾಗಿ ಕುಳಿತು ಸವಾರಿ ಮಾಡುತ್ತಿದ್ದೆವು. ಅದೊಂದು ನಮಗೆ ಆಟ. ಬೆಳ್ಳನು ಒಂದು ಕೈಯಲ್ಲಿ ಹೂಟಿಯ ಕೋಲು ಇನ್ನೊಂದು ಕೈಯಲ್ಲಿ ಎಡದ ಬದಿಯ ಹೋರಿಯ ಬಾಲ ಹಿಡಿದು, ಹಾಡುತ್ತಾ ನಮ್ಮ ಆಚೆ ಈಚೆ ಬದಿಯಲ್ಲಿ ಕಾಲು ಅಗಲಿಸಿ ನಿಂತು ಗೋರಿಯ ಮೇಲೆ ಹತ್ತಿ ಅವನೂ ಸವಾರಿ ಮಾಡುತ್ತಾ ಇರುತ್ತಿದ್ದ. ಅದೆಲ್ಲ ಈಗ ನೆನಪು.
ಹಲಸಿನ ಹಕ್ಕಿ ಅಂತ ಒಂದುಜಾತಿಯ ಹಕ್ಕಿಗಳು ನಮ್ಮ ಮನೆಯ ಸುತ್ತ ಇರುತ್ತಿದ್ದವು. ಮಾಂಸ ತಿನ್ನುವ ಕೂಲಿಯವರ ಜಾತಿಯವರು ಅದನ್ನು ಹಿಡಿದು ಕೊಂದು ಪದಾರ್ಥಮಾಡಿ ತಿನ್ನುತ್ತಿದ್ದರು. ಆ ಹಕ್ಕಿಗಳನ್ನು ಹಿಡಿಯಲು ನಮ್ಮ ಮನೆಯ ಅಂಗಳದಲ್ಲಿ ಒಂದು ದೊಡ್ಡ ಹೆಡಗೆಯನ್ನು ಬೋರಲಾಗಿ ಇಟ್ಟು ಅದರ ಮೇಲೆ ಒಂದು ಮೀನು ಹಿಡಿಯುವ ಬಲೆಯನ್ನು ಹೊದಿಸಿ ಅದರ ಒಂದು ಬದಿಯನ್ನು ಸ್ವಲ್ಪ ಎತ್ತರ ಮಾಡಿ ಒಂದು ಕೋಲನ್ನು ಆಧರಿಸಿ ಆ ಹೆಡಗೆ ನಿಲ್ಲುವಂತೆ ಮಾಡುತ್ತಿದ್ದರು. ಆ ಕೋಲಿಗೆ ಹಗ್ಗವನ್ನು ಕಟ್ಟುತ್ತಿದ್ದು ಆ ಹಗ್ಗವನ್ನು ಎಳೆದರೆ ಹೆಡಗೆ ಬೀಳುತ್ತಿತ್ತು. ಹಾಗೂ ಮುಚ್ಚಿಬಿಡುತ್ತಿತ್ತು. ಆ ಹೆಡಗೆಯ ಕೆಳಗೆ ಏನಾದರೂ ಕಾಳುಗಳನ್ನು ಹಾಕಿದರೆ ಹಲಸಿನ ಹಕ್ಕಿಗಳು ಅದನ್ನು ತಿನ್ನಲು ಹೆಡಗೆಯ ಕೆಳಗೆ ಬಂದ ಕೂಡಲೇ ದೂರದಲ್ಲಿ ನಿಂತು ಹಗ್ಗವನ್ನು ಎಳೆದಾಗ ಕೋಲು ಬಿದ್ದು ಹೆಡಗೆಯನ್ನು ಬೀಳಿಸಿ, ಹಕ್ಕಿಯನ್ನು ಸೆರೆ ಹಿಡಿಯಲು ಆಗುತ್ತಿತ್ತು.
ಅದೆಲ್ಲ ನೆನಪು ಮಾಡಿಕೊಳ್ಳುವಾಗ ಏನೋ ಕುಷಿ.
ನಾವು ಇಂದಿನ ಮಕ್ಕಳಿಗೆ ತುಂಬಾ ಸಂತೋಷವನ್ನು ಮಿಸ್ ಮಾಡುತ್ತಿದ್ದೇವೆ ಅಂತ ಅನ್ನಿಸುವುದಿಲ್ಲವೇ?

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ