ಮಂಗಳವಾರ, ಮಾರ್ಚ್ 6, 2018

ದಿನೇಶ ಉಪ್ಪೂರ:

*ನನ್ನೊಳಗೆ - 79*

ಮುಲ್ಕಿಯಿಂದ ಪದೋನ್ನತಿಯಾಗಿ ಉಡುಪಿಗೆ ಬಂದ ನಾನು ಅಂಬಾಗಿಲಿನಲ್ಲಿ ಒಂದು ನಿವೇಶನ ಖರೀದಿಸಿದೆ. ಕೆದ್ಲಾಯರು ಎಂಬ ನನ್ನ ಸ್ನೇಹಿತರೊಬ್ಬರು ಮನೆ ಕಟ್ಟಿಸಿಕೊಡಲು ಒಪ್ಪಿದರು. ನಾನೇ ಒಂದು ಮನೆಯ ಸ್ಕೆಚ್ ಬಿಡಿಸಿ ನನ್ನ ಮನೆ ಹೀಗೆ ಇರಬೇಕು ಎಂದೆ. ಅವರು ಒಪ್ಪಿದರು.

  ಮುನಿಸಿಪಾಲಿಟಿಯಿಂದ ಒಂದು ತೆರಿಗೆಯ ಬಗ್ಗೆ ಕ್ಲೀಯರೆನ್ಸ್ ಪತ್ರ ಬೇಕಾಗಿತ್ತು. ನಾನು ಹೋಗಿ ಅರ್ಜಿಕೊಟ್ಟು ಬಂದೆ. "ಒಂದು ವಾರದ ನಂತರ ಬನ್ನಿ" ಎಂದರು. ನಾನು ವಾರದ ನಂತರ ಹೋದೆ. ಆದರೆ ಕೆಲಸ ಆಗಲಿಲ್ಲ. ಮತ್ತೆ ನಾಳೆ ಬನ್ನಿ ಅಂದರು. ನಾಳೆ ಹೋದರೂ ಮತ್ತೆ ನಾಳೆ ಬನ್ನಿ ಅಂತ ಓಡಾಡಿಸಲು ಶುರು ಮಾಡಿದಾಗ ನನಗೆ ಎಲ್ಲಿಲ್ಲದ ಕೋಪ ಬಂತು. ನಾನು, "ಕೊಡಲು ಆಗದಿದ್ದರೆ ಹೇಳಿ. ಏನು ಮಾಡಬೇಕು ಅಂತ ನನಗೆ ಗೊತ್ತಿದೆ" ಎಂದು ಜೋರು ಮಾಡಿದೆ. ಆಗ ಅವರು ನನ್ನ ಪೈಲೇ ಇಲ್ಲ. ಎಲ್ಲೋ ಕಳೆದುಹೋಗಿದೆ. ಮತ್ತೊಮ್ಮೆ ಅರ್ಜಿ ಕೊಡಿ ಎಂದರು.

ಅದಕ್ಕೆ, "ಇನ್ನೊಂದು ಅರ್ಜಿ ಯಾಕೆ ಕೊಡಬೇಕು?" ಎಂದು ನಾನು ಮೊದಲು ಕೊಟ್ಟ ಅರ್ಜಿಯ ದಿನಾಂಕವನ್ನು ನಮೂದಿಸಿ, ಇನ್ನೂ ನನಗೆ ದೃಢ ಪತ್ರಿಕೆ ಸಿಕ್ಕದೇ ಇರುವ ಬಗ್ಗೆ ಮತ್ತು ಆ ಗುಮಾಸ್ತರು ಇನ್ನೊಂದು ಅರ್ಜಿ ಕೊಡಿ ಎಂದ ಬಗ್ಗೆಯೂ  ಉಲ್ಲೇಖಿಸಿ ಒಂದು ಪತ್ರ ಬರೆದು ಇಟ್ಟುಕೊಂಡೆ. ಅದನ್ನು ನೇರವಾಗಿ ಆಗ ಕಮಿಶನರ್ ಆಗಿದ್ದ ಪ್ರಸನ್ನ ಎಂಬವರ ಚೇಂಬರಿಗೆ ಹೋಗಿ, ಅವರ ದರ್ಶನಕ್ಕಾಗಿ ಚೀಟಿಯನ್ನು ಎಟೆಂಡರ್ ಮೂಲಕ ಕಳಿಸಿ ಅವಕಾಶ ಪಡೆದೆ. ಅವರಲ್ಲಿ ಹೋಗಿ ನನ್ನ ಕತೆ ಹೇಳಿ, ನನಗೆ ಕ್ಲಿಯರೆನ್ಸ್ ಪತ್ರ  ಕೊಡಿಸಬೇಕೆಂದು ವಿನಂತಿಸಿದೆ. ಅವರು ನಾನು ಕೊಟ್ಟ ಪತ್ರವನ್ನು ಒಮ್ಮೆ ಓದಿ ನೋಡಿ, ಬೆಲ್ ಮಾಡಿದರು. ಅವರ ಫಿಯೋನ್ ನಿಗೆ ಆ ಗುಮಾಸ್ತರನ್ನು ಕರೆಯಲು ಹೇಳಿದರು. ಅವನು ಹೋಗಿ ಗುಮಾಸ್ತನನ್ನು ಕರೆದುಕೊಂಡು ಬಂದ. ಅವನು ನನ್ನನ್ನು ನೋಡಿದ ಕೂಡಲೇ ವಿಷಯ ತಿಳಿದುಕೊಂಡು, ತನಗೆ ಕೆಲಸ ಹೆಚ್ಚಿಗೆ ಇರುವುದಾಗಿ, ಹೇಳಿ ನನಗೆ ಇನ್ನೂ ಸಮಯ ಬೇಕು ಎಂದು ಏನೇನೋ ಹೇಳಿದ. ಎಲ್ಲವನ್ನು ಕೇಳಿಸಿಕೊಂಡ ಪ್ರಸನ್ನರು ಒಂದೇ ಮಾತು ಹೇಳಿ ಮುಗಿಸಿದರು. "ನಾಳೆ ಮಧ್ಯಾಹ್ನದ ಒಳಗೆ ಅವರ ದೃಢ ಪತ್ರಿಕೆ ನನ್ನ ಟೇಬಲ್ಲಿಗೆ ಸಹಿಗಾಗಿ ಬರಬೇಕು. ಇಲ್ಲದಿದ್ದರೆ ನಿಮ್ಮನ್ನು ಸಸ್ಪೆಂಡ್ ಮಾಡಿ ಮನೆಗೆ ಕಳಿಸುತ್ತೇನೆ" ಎಂದು. ನಾನು ವಾಪಾಸು ಬಂದೆ.
ಮರುದಿನ ಮಧ್ಯಾಹ್ನ ಹೋದಾಗ ನನ್ನ ದೃಢ ಪತ್ರಿಕೆ ಸಿದ್ದವಾಗಿತ್ತು. ನಾನು ಪುನಹ ಪ್ರಸನ್ನರನ್ನು ಕಂಡು ಧನ್ಯವಾದ ಹೇಳಿ ಮರಳಿದೆ.

ಕತೆ ಅಷ್ಟಕ್ಕೇ ಮುಗಿಯಲ್ಲಿಲ್ಲ. ನನಗೆ ಕಟ್ಟಡ ಕಟ್ಟಲು ಪರವಾನಿಗೆಯ ಬಗ್ಗೆ ಅಲ್ಲಿನ ಒಂದು ಪತ್ರ ಬೇಕಾಯಿತು. ನಾನು ಅದಕ್ಕೂ ಒಂದು ಅರ್ಜಿಯನ್ನು ಕೊಟ್ಟುಬಂದೆ. ಅಲ್ಲಿನ ಇಂಜಿನಿಯರು ನನ್ನ ಜಾಗಕ್ಕೆ ಬಂದು ಪರಿಶೀಲನೆ ಮಾಡಿ, ಬಿಲ್ಡಿಂಗ್ ಪ್ಲಾನ್ ನೋಡಿ ಕಟ್ಟಡ ಕಟ್ಟಬಹುದೆಂದು ಶಿಪಾರಸ್ಸು ಮಾಡಬೇಕಿತ್ತು.

ನಾನು ಹೇಗೂ ಬರುತ್ತಾರಲ್ಲ ಎಂದು ಕೆಲಸ ಶುರು ಮಾಡಲು  ಕೆದ್ಲಾಯರಿಗೆ ಹೇಳಿದೆ. ಕೆಲಸವೂ ಶುರುವಾಗಿ ಪಂಚಾಂಗ ಎದ್ದಿತು. ಮತ್ತೊಮ್ಮೆ ನಾನು ಮುನಿಸಿಪಾಲಿಟಿಯ ಪತ್ರಕ್ಕಾಗಿ ಹೋಗಿ ಏನಾಯಿತು? ಎಂದು ವಿಚಾರಿಸಿದೆ. ಆಗ ಆ ಇಂಜಿನಿಯರ್ ನೀವು ಅರ್ಜಿ ಕೊಟ್ಟರೆ ಆಗುತ್ತದಾ? ನನ್ನನ್ನು ಕರೆದುಕೊಂಡು ಹೋಗುವವರು ಯಾರು? ಎಂದು ಜೋರು ಮಾಡಿದರು. ನಾನು "ಗೊತ್ತಿರಲಿಲ್ಲ" ಎಂದು ಕ್ಷಮೆ ಕೇಳಿ, ಅವರಿಗಾಗಿ ಒಂದು ರಿಕ್ಷಾವನ್ನು ಬಾಡಿಗೆಗೆ ಪಡೆದು ಕರೆದುಕೊಂಡು ಬರಲು ಹೋದೆ. ಆಗ ಆ ಇಂಜಿನಿಯರು "ರಿಕ್ಷಾ ತಂದಿದ್ದೇನೆ" ಎಂದ ಕೂಡಲೇ ಅವರು ಮುಖ ಸಣ್ಣದು ಮಾಡಿದರು. ಆಗ ನಾನು, "ಕಮಿಶನರ್ ಪ್ರಸನ್ನ ರು ಈಗ ಇಲ್ಲವೇ? ನಾನು ಹಿಂದೊಮ್ಮೆ ಬಂದಿದ್ದೆ" ಎಂದು ನನ್ನ ಅನುಭವವನ್ನು ಅವರಿಗೆ ಹೇಳಿದೆ. ಅವರು ಸ್ವಲ್ಪ ತಣ್ಣಗಾಗಿ ಅವರು ಟ್ರಾನ್ಸ್ ಫರ್ ಆಗಿ ಬೇರೆಯವರು ಬಂದಾಯಿತಲ್ಲ ಎಂದು, ಅಸಮಾಧಾನದಿಂದಲೇ ನನ್ನೊಂದಿಗೆ ಹೊರಟರು. ನಾನು ಅವರನ್ನು ನನ್ನ ಸೈಟ್ ಇರುವ ಅಂಬಾಗಿಲಿಗೆ ಕರೆದುಕೊಂಡು ಬಂದೆ. ಆಗಲೇ ಅಲ್ಲಿ ಹಾಕಿದ ಮನೆಯ ಪಂಚಾಂಗವನ್ನು ನೋಡಿದ ಅವರು, "ನೀವು ಪಂಚಾಂಗ ಶುರು ಮಾಡುವ ಮೊದಲೇ ಅನುಮತಿ ಪಡೆಯಬೇಕಿತ್ತು. ಈಗ ಹೇಗೆ ಪತ್ರ ಕೊಡುವುದು? ಆಫೀಸಿನಲ್ಲಿ ಮಾತಾಡಿ" ಎಂದು ಗುರುಗುರು ಮಾಡುತ್ತಾ ಹೊರಟು ಹೋದರು.

 ಅದು ನನಗೆ ಗೊತ್ತಿರಲಿಲ್ಲ ಅಂತಲ್ಲ. ನಾನು ಅರ್ಜಿಕೊಟ್ಟಾಗಲೇ ಅವರು ಬಂದಿದ್ದರೆ ಆಗಲೇ ಪತ್ರ ಸಿಕ್ಕಿ ನಾನು ಪಂಚಾಂಗವನ್ನು ಹಾಕಬಹುದಿತ್ತು. ಮರುದಿನ ಮತ್ತೆ ಹೋದೆ. ಅವರು  "ಅದೆಲ್ಲಾ ಆಗುವುದಿಲ್ಲ. ನೀವು ಮೊದಲೇ ಪತ್ರ ಪಡೆದೇ ಪಂಚಾಂಗ ಶುರು ಮಾಡದೇ ಇರುವುದರಿಂದ ಪತ್ರ ಕೊಡಲು ಸಾಧ್ಯವಿಲ್ಲ" ಎಂದರು. ನನಗೆ ತಲೆಬಿಸಿಯಾಯಿತು.

 ಹಾಗಾದರೆ ಇದಕ್ಕೆ ಪರಿಹಾರವೇ ಇಲ್ಲವೇ? "ಎಷ್ಟೋ ಜನ ನಿಮ್ಮ ಗಮನಕ್ಕೂ ತಾರದೇ ಕಟ್ಟಡವನ್ನೇ ಕಟ್ಟುತ್ತಾರಲ್ಲ" ಎಂದು ನಾನು ವಾದಿಸಿದೆ. ಅವರು ಜಪ್ಪಯ್ಯ ಎಂದರೂ ತಲೆ ಮೇಲೆ ಎತ್ತಲೇ ಇಲ್ಲ. ನಾನು ವಾಪಾಸು ಬಂದೆ. ಮರುದಿನ ಮತ್ತೆ ಹೋದೆ. ಅವರ ಪಕ್ಕದಲ್ಲಿಯೇ ಇದ್ದ ಮತ್ತೊಬ್ಬರ ಹತ್ತಿರ "ಏನು ಮಾಡಲಿಕ್ಕೆ ಆಗುತ್ತದೆ. ದಾರಿ ಹೇಳಿ" ಅಂದೆ. ಅವರು ಮಲ್ಲನೇ ಒಂದು ದಾರಿಯನ್ನು ಹೇಳಿದರು.
ಆದರೆ ನನಗೆ ಆ ದಾರಿ ಸರಿಬರಲಿಲ್ಲ. ಪುನಹ ಇಂಜಿನಿಯರ್ ಹತ್ತಿರ ಹೋಗಿ, "ಆಯಿತಪ್ಪ ತಪ್ಪಾಗಿದೆ. ನನಗೆ ಗೊತ್ತಿಲ್ಲದೇ ಪಂಚಾಂಗ ಹಾಕಿಬಿಟ್ಟೆ. ಇನ್ನು ಅದನ್ನು ತೆಗೆಸುವುದೂ ಧರ್ಮವಲ್ಲ. ತಪ್ಪು ಮಾಡಿದ್ದಕ್ಕೆ ದಂಡ ತೆರುತ್ತೇನೆ. ಆದರೆ  ನೀವು ಅಂದುಕೊಂಡ ಯಾವುದೇ ಒಳಮಾರ್ಗ ಅನುಸರಿಸುವುದಿಲ್ಲ. ಇದಕ್ಕೂ ನೀವು ಒಪ್ಪದಿದ್ದರೆ, ನಾನು ನಿಮ್ಮ ಮೇಲಿನ ಎಲ್ಲ ಅಧಿಕಾರಿಗಳನ್ನೂ ಸಂದರ್ಶಿಸಲು ಶುರುಮಾಡುತ್ತೇನೆ. ನನಗಂತು ಸಮಯ ಇದೆ" ಎಂದೆ.

ಅವರು ಒಮ್ಮೆ ನನ್ನನ್ನು ದುರುದುಟ್ಟಿ ನೋಡಿ ಮತ್ತೆ ತಲೆ ಕೆಳಗೆ ಹಾಕಿದರು. ನಾನು ಅಲ್ಲಿಯೇ ಕುಳಿತೆ. ಏಳಲಿಲ್ಲ. ಸ್ವಲ್ಪ ಹೊತ್ತಿನ ನಂತರ ಅವರು, "ನಾಳೆ ಬನ್ನಿ. ನೋಡುವ" ಎಂದರು. ನಾನು ಮರಳಿದೆ. ಮತ್ತೆ ಮರುದಿನ ಅವರು ಹೇಳಿದ ಸಮಯಕ್ಕೆ ಸರಿಯಾಗಿ ಹೋದೆ. ಅವರು ನನ್ನ ತಪ್ಪಿಗೆ ಇನ್ನೂರು ರೂಪಾಯಿ ದಂಡ ಹಾಕಿ, ಪಾವತಿಸಲು ಹೇಳಿದರು. ಅದನ್ನು ನನ್ನಿಂದ ವಸೂಲು ಮಾಡಿದ ಮೇಲೇ ನನಗೆ ಬೇಕಾದ ಪತ್ರವನ್ನು ಕೊಟ್ಟರು. ನಾನು ನೀವು ಇತರರಿಗೆ ಯಾವರೀತಿಯಲ್ಲಿ ಇಂತಹ ಪತ್ರ ಕೊಡುತ್ತೀರಿ, ಎಂದು ತಿಳಿದುಕೊಂಡು ಈಗ ಕಟ್ಟಿದ ದಂಡವನ್ನು ಮರಳಿಪಡೆಯುತ್ತೇನೆ ಎಂದು ಹೇಳಿ ಬಂದೆ.

ಮತ್ತೊಮ್ಮೆ ಕೆನರಾ ಬ್ಯಾಂಕಿನಲ್ಲಿ ನನ್ನ ಅನುಮತಿಯಿಲ್ಲದೇ ಉಳಿತಾಯ ಖಾತೆಯಿಂದ ತೆಗೆದು ನನ್ನ ಸಾಲಕ್ಕೆ ಹಣ ವಜಾ ಮಾಡಿದ್ದರಿಂದ ನನಗೆ ಕನಿಷ್ಟ ಶುಲ್ಕ ಇರಲಿಲ್ಲ ಎಂದು ಇಪ್ಪತ್ತು ರೂಪಾಯಿ ದಂಡ ಹಾಕಿದ್ದರು ನಾನು ಮರುದಿನ ಹಣ ಪಾವತಿಸಲು ಹೋದಾಗ ಅದು ನನಗೆ ಗೊತ್ತಾಗಿ ಇಪ್ಪತ್ತು ರೂಪಾಯಿ ಹಿಂದೆ ಕೊಡಬೇಕೆಂದು ಜಗಳ ಮಾಡಿದೆ. ಆಗಲೂ ಆ ಮೇನೇಜರ್ ಅದು ಕಂಪ್ಯೂಟರ್ ಲ್ಲಿ ಆಗುವುದಿಲ್ಲ. ನೀವು ಅಷ್ಟು ಹಠ ಮಾಡಿದರೆ ತಾನೇ ಕಿಸೆಯಿಂದ ಕೊಡಬೇಕು ಎಂದು ಅನುನಯಿಸಲು ಹೊರಟರು. ಆಗಲೂ ನೀವು ಯಾಕೆ ಕೊಡಬೇಕು  ಎಂದು ಜಗಳ ಮಾಡಿದೆ. ಮತ್ತೊಮ್ಮೆ ನನ್ನ ಮನೆಗೆ ನೋಡಲು ಬರದೇ ಸ್ಥಳಪರಿಶೀಲನಾ ಶುಲ್ಕ ವಿಧಿಸಿದ್ದಾರೆ ಎಂದು ವಿಚಾರಿಸಲು ಹೋಗಿ, ಅವರ ಆಗ್ರಹಕ್ಕೆ ಪಾತ್ರನಾದೆ. ಆಗ ಇನ್ಸ ಪೆಕ್ಷನ್ ಗೆ ಹಾಗೆ ನಿಮ್ಮ ಮನೆಗೆ ಬಂದಿದ್ದರೆ ನಿಮ್ಮ ಕಾಫಿ ಖರ್ಚಾಗುತ್ತಿತ್ತು ಅದನ್ನು ಉಳಿಸಿದೆವಲ್ಲ ಎಂದು ಅವರು ಸಮಜಾಯಿಸಿ ಹೇಳಿದರು. ಆಗೆಲ್ಲ ನನ್ನ ಹೆಂಡತಿ ನೀವು ಹೋದಲ್ಲೆಲ್ಲ ಜಗಳ ಮಾಡುತ್ತೀರಿ. ನೀವು ಹೋದರೆ ಅವರು ಗುಸುಗುಸು ಮಾತನಾಡುತ್ತಾರೆ. ನಿಮ್ಮಜೊತೆಗೆ ಬರಲಿಕ್ಕೇ ನನಗೆ ಹೆದರಿಕೆಯಾಗುತ್ತದೆ ಎನ್ನಲೂ ಶುರುಮಾಡಿದಳು ಆದ್ದರಿಂದ ನಾನು ಈಗ ಸ್ವಲ್ಪ ಬದಲಾಗುತ್ತಿದ್ದೇನೆ.

ಆದರೆ ಈಗ ನಾನು ಅಷ್ಟು ಹಟ ಮಾಡುವುದಿಲ್ಲ ವ್ಯವಸ್ಥೆಯ ಪರಿಸ್ಥಿತಿಗೆ ಹೊಂದಿಕೊಂಡಿದ್ದೇನೆ.

ನನಗೆ ಈಗ ಕೆಲಸ ಆದರೆ ಸೈ ಯಾರಾದರೂ ಹಣ ತಿಂದು ಸಾಯಲಿ ನನಗಂತೂ ಈ ವ್ಯವಸ್ಥೆಯನ್ನು ಸರಿಮಾಡಲು ಸಾಧ್ಯವಿಲ್ಲ ಎನ್ನಿಸಿ ಬಿಟ್ಟಿದೆ. ನಾನು ಸರಿ ಇದ್ದರೆ ಸಾಕು. ಎಲ್ಲರೂ ನನ್ನಂತೆ ಯೋಚಿಸುವ ಕಾಲ ಬಂದಾಗ ಇದು ಸರಿಯಾಗುತ್ತದೆ. ಅನ್ನಿಸಿದೆ.  ಆದರೂ ಯಾವುದಾದರೂ ಕಛೇರಿಗೆ ಹೋದಾಗ ಕೆಲವರಾದರೂ ಈಗಲೂ ಪ್ರಾಮಾಣಿಕರು ಸಿಗುತ್ತಾರೆ. ನಾನು ತಪ್ಪದೇ ಅವರನ್ನು ಹೊಗಳಿ ನಾಲ್ಕು ಮಾತಾಡಿ ಧನ್ಯವಾದ ಹೇಳಿ ಬರುತ್ತೇನೆ. ಆಗ ಅವರಿಗೂ ಕೆಲಸ ಮಾಡಿದ ತೃಪ್ತಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ