ದಿನೇಶ ಉಪ್ಪೂರ:
*ನನ್ನೊಳಗೆ- 86*
ನಾನು ಕಲ್ಲಟ್ಟೆಯಲ್ಲಿ ಇದ್ದು, ಗಂಟಿ ಮೇಯಿಸಿಕೊಂಡು, ಅಲ್ಲಿ ಇಲ್ಲಿ ಕೆಲಸಕ್ಕಾಗಿ ಅಲೆಯುತ್ತಿದ್ದ ಕಾಲ. ಅಮ್ಮನ ತವರು ಮನೆಯಾದ ಮಾರ್ವಿಯ ಮನೆಯಲ್ಲಿ ಸುಶೀಲಕ್ಕ ಅಂತ ಒಬ್ಬರಿದ್ದರು. ಅವರು ನನಗೆ ಅಕ್ಕ ಅಲ್ಲ. ದೂರದ ಸಂಬಂಧಿಗಳನ್ನು ಸಂಬಂಧದ ಎಳೆಯನ್ನು ಹುಡುಕಿ ಅದರಂತೆ ಕರೆಯುವ ಬದಲು, ನಾವು ಸುಲಭದಲ್ಲಿ ಹಾಗೆ ಎಲ್ಲರಿಗೂ "ಅಕ್ಕ, ಅಣ್ಣಯ್ಯ" ಎಂದು ಕರೆಯುತ್ತಿದ್ದೆವು. ಅವರು ಒಮ್ಮೆ ನನಗೆ ಸಿಕ್ಕಿದವರು, "ವಂಡಾರಿನಲ್ಲಿ ಒಬ್ಬರು ಪ್ರಸಿದ್ಧ ಜ್ಯೋತಿಷಿಗಳಿದ್ದಾರೆ. ಅವರು ಹೇಳಿದಂತೆ ಆಗುತ್ತದೆ. ಹೋಗಿಬರುವ" ಎಂದು ಒತ್ತಾಯಿಸಿದರು. ನಾನು ಇದನ್ನೂ ಒಮ್ಮೆ ನೋಡಿದ ಹಾಗಾಯಿತು ಎಂದು ಒಂದು ದಿನ ಮಧ್ಯಾಹ್ನದ ಮೇಲೆ ಅವರೊಂದಿಗೆ ಬಾಯರಿಯವರ ಮನೆಗೆ ಹೋದೆ.ಅವರ ಮನೆಗೆ ನಮ್ಮ ಮನೆಯಿಂದ ಮೂರು, ಮೂರುವರೆ ಮೈಲಿ ಅಷ್ಟೆ.
ನಾವು ಹೋಗುವುದಕ್ಕೂ, ಅವರು ಮಧ್ಯಾಹ್ನ ಊಟ ಮಾಡಿ, ಚಾವಡಿಯಲ್ಲಿ ಸ್ವಲ್ಪ ಹೊತ್ತು ಮಲಗಿದ್ದು ಎದ್ದು ಹೊರಬರುವುದಕ್ಕೂ ಸರೀ ಆಯಿತು. ನಮ್ಮನ್ನು ನೋಡುತ್ತಲೇ ಬಾಯರಿಯವರು "ಹೋ ಬನ್ನಿ ಬನ್ನಿ ಸುಶೀಲಮ್ಮಾ, ಒಳ್ಳೆಯ ಸಮಯಕ್ಕೆ ಬಂದಿದ್ದೀರಿ. ನಿಮ್ಮ ಕೆಲಸ ಆಗುತ್ತದೆ". ಎಂದರು. ಸುಶೀಲಕ್ಕ "ಅಷ್ಟು ಆದರೆ ಸೈ. ನಿಮ್ಮನ್ನೇ ನಂಬಿ ಬಂದಿದ್ದೇವೆ. ನೀವು ನಡೆಸಬೇಕು" ಎಂದು ಕೈ ಮುಗಿದರು. ನಾನೂ ಕೈ ಮುಗಿದೆ. ಆಗ ಬಾಯರಿಯವರು "ನೋಡಿ, ನಾನು ನಿದ್ರೆಯಿಂದ ಎದ್ದು ಹೊರಗೆ ಬರುವ ಸಮಯ. ಮನಸ್ಸು ಪ್ರಶಾಂತವಾಗಿದೆ. ಅಂದರೆ ಅದು ಅಷ್ಟು ಒಳ್ಳೆಯ ಗಳಿಗೆ. ಹಿಂದೆ ಎಷ್ಟೋ ಸಲ ಅದು ಸ್ಪಷ್ಟವಾಗಿದೆ. ನಾನು ಅವರಿಗೆ ಹೇಳಿದ ಭವಿಷ್ಯ ನಿಜವಾಗಿ, ಅವರೇ ಮತ್ತೆ ಬಂದು ಕಾಣಿಕೆ ಕೊಟ್ಟು ಆಶೀರ್ವಾದ ಪಡೆದು ಹೋಗಿದ್ದಾರೆ" ಎಂದರು. ಆಗಲೇ ಅವರನ್ನು ಕಾಣಲು ತುಂಬಾ ಜನ ಜಗಲಿಯಲ್ಲಿ ಸಾಲಾಗಿ ಕುಳಿತಿದ್ದರು.
ಆದರೂ ಅವರು ನಮ್ಮನ್ನು ಕರೆದು ಬಾಯಾರಿಕೆ ಕೊಡಲು ಮನೆಯವರಿಗೆ ಹೇಳಿದರು. ಮತ್ತು "ಸುಶೀಲಮ್ಮಾ, ಏನಾಗಬೇಕಿತ್ತು?" ಎಂದು ಉಪಚಾರ ಮಾಡಿದರು. ನಾನು ನನ್ನ ಜಾತಕ ತೆಗೆದು ಅವರ ಮುಂದಿನ ಟೇಬಲ್ಲಿನ ಮೇಲೆ ಇಟ್ಟು, "ನನಗೆ ಕೆಲಸ ಸಿಗುತ್ತದಾ ಅಂತ ಬೇಕಿತ್ತು" ಎಂದು ವಿನಯದಿಂದ ಹೇಳಿ, ಆಗಲೇ ಕುಳಿತುಕೊಂಡಿದ್ದ ಸುಶೀಲಕ್ಕನ ಪಕ್ಕದ ಕುರ್ಚಿಯಲ್ಲಿ ಕುಳಿತೆ. ಸುಶೀಲಕ್ಕನೂ "ಇವನಿಗೆ ಒಂದು ಎಲ್ಲಾದರೂ ಗವರ್ನ್ ಮೆಂಟ್ ಕೆಲಸ ಸಿಕ್ಕಾತ್ತಾ ಕಂಡ್ ಹೇಳಿ. ಪಾಪ, ಮಾಣಿ ಬಹಳ ಸೋತ್ ಹೋಯಿತ್ತೆ" ಎಂದು ಅನುಕಂಪ ತೋರಿಸಿದರು.
ಅವರು ಜಾತಕ ತೆಗೆದು ದೂರ ಹಿಡಿದು, ಕಿರುಗಣ್ಣು ಮಾಡಿ ಸ್ವಲ್ಪಹೊತ್ತು ನೋಡಿ "ಏನು ತೊಂದರೆ? ಕೆಲಸ ಸಿಗಲೇ ಬೇಕಲ್ಲ" ಎಂದರು. ನನಗೆ ನಾನು ಅಲ್ಲಿ ಇಲ್ಲಿ ಕೆಲಸಕ್ಕಾಗಿ ಅಲೆದಾಡಿದ್ದು ಬೆಂಗಳೂರು ಬಿಟ್ಟು ಬಂದದ್ದು ಮುಂತಾಗಿ ಸುಮಾರು ಎರಡು ವರ್ಷದ ಬವಣೆ ಕಣ್ಣ ಮುಂದೆ ಹಾದುಹೋಯಿತು. ಅವರು ಮತ್ತೆ ಕಾಗದ ಪೆನ್ನು ತೆಗೆದುಕೊಂಡು ಏನೇನೋ ಬರೆದು ಲೆಕ್ಕ ಹಾಕಿದರು. "ನೋಡಿ, ಮುಂದಿನ ಬೇಸಿಗೆಯ ಒಳಗೆ ನಿಮಗೆ ಒಂದು ಒಳ್ಳೆಯ ಉದ್ಯೋಗವೇ ಆಗುತ್ತದೆ ಏನೂ ಹೆದರಬೇಕಾಗಿಲ್ಲ" ಎಂದರು. ಮತ್ತೇನಾದರೂ ಕೇಳಲಿಕ್ಕೆ ಉಂಟಾ? ಅಂದರು. ನನಗೆ ಮುಳುಗುವವನಿಗೆ ಆಧಾರಕ್ಕೆ ಹುಲ್ಲು ಕಡ್ಡಿ ಸಿಕ್ಕಿದಂತೆ ಎಂಬಂತೆ ಅದನ್ನು ಕೇಳಿ ಖುಷಿಯಾಯಿತು. ಆದರೂ ಮರುಕ್ಷಣಕ್ಕೆ ಅವರು ಹೇಳುವುದೆಲ್ಲ ನಿಜವಾಗುವುದಾದರೆ ಅವರು ದೇವರು ಅಂತಾಗುವುದಿಲ್ಲವೇ ಅನ್ನಿಸಿತು.
ನಾನು ಸುಮ್ಮನೇ ಇದ್ದೆ. ಅವರು ಆಗಲೇ ಬಂದ ಎಲ್ಲರನ್ನೂ ಒಮ್ಮೆ ನೋಡಿದರು. ನಾನು ಸುಶೀಲಕ್ಕನ ಮುಖ ನೋಡಿದೆ. ಇಬ್ಬರೂ ಎದ್ದೆವು. ಅವರಿಗೆ ಎಷ್ಟು ದಕ್ಷಿಣೆ ಕೊಡಬೇಕು ಎಂದು ಕೇಳಿದೆ. ಅವರು "ಎಷ್ಟಾದರೂ ಕೊಡಿ. ಮತ್ತೆ ನಿಮ್ಮ ಕೆಲಸ ಆದ ಮೇಲೆ ಮತ್ತೆ ನೋಡುವ" ಎಂದು ಗಟ್ಟಿಯಾಗಿ ನಗಾಡಿದರು. ನನಗೆ ಅವರು ಕೊಟ್ಟ ಮಾನಸಿಕ ಧೈರ್ಯವೇ ದೊಡ್ಡ ಭರವಸೆಯಾಯಿತು. ಐವತ್ತೋ ನೂರೋ ಕೊಟ್ಟು ಸುಶೀಲಕ್ಕನನ್ನು ಮಾರ್ವಿಯ ಅವರ ಮನೆಗೆ ಬಿಟ್ಟು ನನ್ನ ಮನೆಗೆ ಬಂದೆ.
ಬರುವಾಗ ಸುಶೀಲಕ್ಕ, "ಅಷ್ಟು ಜನರು ಅವರಲ್ಲಿ ಭವಿಷ್ಯ ಕೇಳಲಿಕ್ಕೆ ಬರುತ್ತಾರೆ. ಆದರೆ ಪಾಪ, ಬಾಯರಿಯವರಿಗೂ ಕಷ್ಟ ಬಿಡಲಿಲ್ಲ. ಅವರ ಬೆಳೆದ ತಂಗಿಯರಿಗೆ ಇನ್ನೂ ಮದುವೆ ಮಾಡಲು ಅವರಿಗೆ ಆಗಲಿಲ್ಲ" ಎಂದರು. ನನಗೆ ಬೇಸರವಾಯಿತು.
ಆ ಬಾಯರಿಯವರ ತಂದೆಯವರು ದೊಡ್ಡ ನಾಗ ಪಾತ್ರಿಯಾಗಿದ್ದರಂತೆ. ಒಮ್ಮೆ ಅವರು ನಾಗ ಬನದಲ್ಲಿ ದರ್ಶನ ಪಾತ್ರಿಯಾಗಿ ಮೈಮೇಲೆ ಬಂದು ಕುಣಿಯುವಾಗ, ಪೇಟೆಯಿಂದ ಬಂದ ಯಾರೋ ಇಬ್ಬರು, "ಮೈಮೇಲೆ ಬಪ್ಪುದಾ, ಮತ್ತೆಂತದಾ? ಇದೆಲ್ಲ ಸುಳ್ಳು" ಎಂದು ನಗಾಡಿದರಂತೆ, ಆಗ ಪಾತ್ರಿಗಳು "ನಾಗಾ, ನೋಡು, ಅವರು ಹೀಗೆ ಹೇಳುತ್ತಾರಲ್ಲ" ಅಂದಾಗ, ಹಿಂದಿನ ಹುತ್ತದಿಂದ ನಿಜವಾದ ನಾಗರ ಹಾವು ಪ್ರತ್ಯಕ್ಷವಾಗಿ ಹೆಡೆ ಎತ್ತಿ ನಿಂತಿತ್ತಂತೆ. ಆಗ ತಮಾಷೆ ಮಾಡಿದವರು ಹೆದರಿ ಪಾತ್ರಿಗಳ ಪಾದಕ್ಕೆ ಅಡ್ಡಬಿದ್ದು ಶರಣಾದರಂತೆ.
ಮತ್ತೊಮ್ಮೆ ನಮ್ಮ ಮನೆಗೆ ಒಬ್ಬ ಹಾಲಕ್ಕಿಯವನು ಬಂದಿದ್ದ. "ಬೆಳಿಗ್ಗೆ ಬೆಳಿಗ್ಗೆ ಏನಪ್ಪಾ ಇವನ ರಗಳೆ?" ಎಂದು, ನಾನು ಅಮ್ಮ ಕೊಟ್ಟ ಐವತ್ತು ಪೈಸೆಯನ್ನು ಕೊಡಲು ಹೋದರೆ, ಅವನು ನನ್ನ ಮುಖ ನೋಡಿದವನೇ ಎಲ್ಲವನ್ನೂ ತಿಳಿದವನಂತೆ, "ಏನು ಸ್ವಾಮಿ, ಇಷ್ಟೇಯಾ? ನೀವು ಉದ್ಯೋಗ ಇಲ್ಲ ಅಂತ ತಲೆಬಿಸಿ ಮಾಡುವುದಲ್ವಾ? ನೋಡಿ, ನಿಮಗೆ ಇನ್ನು ಹದಿನೆಂಟು ದಿವಸದಲ್ಲಿ ಕೆಲಸ ಆಗುತ್ತದೆ. ಆದರೆ ನೀವು ಕಪ್ಪು ಬಟ್ಟೆ ಮೈಮೇಲೆ ಹಾಕಬಾರದು ನೋಡಿ" ಎಂದ. ಮತ್ತು "ಈಗ ನೀವು ಏನಾದರೂ ಬಟ್ಟೆಯನ್ನು ನನಗೆ ನಿಮ್ಮ ಕೈಯಾರೆ ದಾನ ಕೊಡಬೇಕು" ಎಂದ.
ನಾನು ನಕ್ಕು "ಹೌದಾ? ಹೀಗೆ ಹೇಳುತ್ತಾ ಮನೆಯ ಬಾಗಿಲಿಗೆ ಎಷ್ಟೋ ಜನ ಬರುತ್ತಾರೆ. ಅವರಿಗೆಲ್ಲ ಅಂಗಿ ಪಂಚೆ ಅಂತ ಕೊಟ್ಟರೆ ನಾನೂ ನಿನ್ನ ಹಾಗೆಯೇ ಬೇಡಲು ಹೋಗಬೇಕಾದೀತು" ಎಂದು ಗಡಸಾಗಿ ಹೇಳಿದೆ. ಅವನು "ಇಲ್ಲ ಸ್ವಾಮಿ. ನಾನು ಬೆಳಿಗ್ಗೆ ಬೆಳಿಗ್ಗೆ ಹೇಳಿದ್ದು ಎಂದೂ ಸುಳ್ಳಾಗುವುದಿಲ್ಲ, ನೀವು ಬಟ್ಟೆಯನ್ನು ಕೊಡಲೇ ಬೇಕು" ಎಂದು ಒತ್ತಾಯಿಸಿದ. ಇದನ್ನೆಲ್ಲ ಕೇಳುತ್ತಿದ್ದ ಅಮ್ಮನೂ ಒಳಗಿನಿಂದಲೇ, "ಹೋಗಲಿ, ಅವನ ಹತ್ರ ನಿಂದೆಂತ ವಾದ ಮಾಣೀ? ನಿನ್ನ ಹಳೆಯ ಅಂಗಿ ಯಾವುದಾದರೂ ಇದ್ರೆ ಕೊಡು" ಎಂದು ಕುಳಿತಲ್ಲೇ ಸಲಹೆ ಕೊಟ್ಟಳು. ನನಗೆ ಅವನ ಮುಖ ನೋಡಿ ಪಾಪ ಅನ್ನಿಸಿತು. ಅವನ ಭವಿಷ್ಯವೇ ಅವನಿಗೆ ಗೊತ್ತಿಲ್ಲ. ಇನ್ನು ನನ್ನ ಭವಿಷ್ಯ ಹೇಳುತ್ತಾನಲ್ಲ ಅನ್ನಿಸಿತು.
ಒಳಗೆ ಹೋಗಿ, ನನ್ನ ಹಳೆಯ ಆದರೆ ಹರಿದು ಹೋಗದೇ ಇರುವ ಒಂದು ಅಂಗಿಯನ್ನು ತಂದು ಅವನಿಗೆ ಕೊಟ್ಟುಬಿಟ್ಟೆ. ಅವನು ಅದನ್ನು ತೆಗೆದುಕೊಳದೇ, ಮತ್ತೊಮ್ಮೆ " ಇದೆಂತದಕ್ಕೆ? ಹೊಸದು ಕೊಡಿ ಎಂದ. ನಾನು ಸಿಟ್ಟಾಗಿ ಬೇಕಾದರೆ ತೆಗೆದುಕೋ ಎಂದೆ. ಅವನು ಹಾಗಾದರೆ ನಿಮ್ಮ ಕೆಲಸ ಆದ ಮೇಲೆ ಖಂಡಿತಾ ಬರುತ್ತೇನೆ. ಆಗ ನನಗೆ ಹೊಸ ಬಟ್ಟೆ ಕೊಡಬೇಕು" ಎಂದು ಹೇಳಿ ಅಂಗಿಯನ್ನು ತೆಗೆದುಕೊಂಡ. ನಾನು, "ಆಗಲಿ ಮಾರಾಯ. ನೀನು ಹೇಳಿದ ಹಾಗೆ ಆದರೆ ಬಾ. ಕೊಡುವ" ಎಂದು ನಕ್ಕು ಮನೆಯ ಒಳಗೆ ಹೋದೆ.
ನಂತರ ನಾನು, ಶಿರೂರಿನಲ್ಲಿ ರಾಜ ಹೆಬ್ಬಾರನ ಮೆಡಿಕಲ್ಸ್ ಶಾಪಿನಲ್ಲಿ ಇರಲು ಅವನು ಅವಕಾಶ ಮಾಡಿಕೊಟ್ಟದ್ದರಿಂದ, ಅಲ್ಲಿ ಕೆಲವು ತಿಂಗಳು ಇದ್ದೆ. ಆಗ ಮೇಲಿನ ಎರಡೂ ಘಟನೆಗಳು ನನಗೆ ಮರೆತು ಹೋಯಿತು. ಅಲ್ಲಿ ಮೆಡಿಕಲ್ ಶಾಪಿನಲ್ಲಿ ಇದ್ದ ಸ್ವಲ್ಪ ದಿನದಲ್ಲೇ, ನನಗೆ ಶಂಕರನಾರಾಯಣದಲ್ಲಿ ಹಳೆವಿದ್ಯಾರ್ಥಿಗಳಿಂದ ಒಂದು ಯಕ್ಷಗಾನದಲ್ಲಿ ವೇಷ ಮಾಡಲು ಬರಲು ಹೇಳಿದರು. ಭೀಷ್ಮ ವಿಜಯದಲ್ಲಿ ನನ್ನದು ಅಂಬೆಯ ಪಾತ್ರ ಎಂದು ತೀರ್ಮಾನವಾಯಿತು. ಕೆಲವು ಟ್ರಯಲ್ ಗೂ ನಾನು ಶಿರೂರಿನಿಂದಲೇ ಬಂದು ಹೋಗಿದ್ದೆ. ಆಟಕ್ಕೆ ಇನ್ನು ಎರಡು ದಿನ ಇದೆ ಎನ್ನುವಾಗ ನನಗೆ ಕೆಇಬಿಯಲ್ಲಿ ಕೆಲಸಕ್ಕಾಗಿ, ಶಿವಮೊಗ್ಗದಲ್ಲಿ ಸಂದರ್ಶನಕ್ಕೆ ಹಾಜರಾಗಲು ಕರೆ ಬಂತು. ನನಗೆ ಆದ ಸಂತೋಷಕ್ಕೆ ಪಾರವೇ ಇರಲಿಲ್ಲ. ನಾನು ನನ್ನ ವೇಷವನ್ನು ಗಣೇಶ ಭಟ್ ಎಂಬವರಿಗೆ ವಹಿಸಿಕೊಟ್ಟು, ಶಿವಮೊಗ್ಗಕ್ಕೆ ಹೋಗಲು ತೀರ್ಮಾನಿಸಿದೆ. ಮನೆಗೆ ಬಂದು ಅಮ್ಮನ ಹತ್ತಿರ ಹೇಳಿದಾಗ, ಅಮ್ಮ ಮೊದಲು ನೆನಪು ಮಾಡಿದ್ದು ಆ ಹಾಲಕ್ಕಿಯವನನ್ನು. "ನೋಡು, ಯಾರನ್ನೂ ನಾವು ಸಸಾರ ಮಾಡುವ ಹಾಗಿಲ್ಲ" ಎಂದು.
ನನ್ನ ಅದೃಷ್ಟಕ್ಕೆ ಅವರಿಬ್ಬರ ಭವಿಷ್ಯವೂ ಸುಳ್ಳಾಗಲಿಲ್ಲ. ನನಗೆ ಕೆಇಬಿಯಲ್ಲಿ ಕೆಲಸ ಸಿಕ್ಕಿ ಉಡುಪಿಯಲ್ಲಿ ಕೆಲಸಕ್ಕೆ ಹಾಜರಾದೆ.
ಆಮೇಲೆ ಒಂದುದಿನ ವಂಡಾರು ಬಾಯರಿಯವರನ್ನು, ನಮ್ಮ ಮನೆಯಲ್ಲಿ ಸತ್ಯನಾರಾಯಣ ಪೂಜೆ ಮಾಡಿ, ಕರೆಸಿ ಫಲ ತಾಂಬೂಲ ದಕ್ಷಿಣೆಗಳನ್ನು ಕೊಟ್ಟು ಗೌರವಿಸಿದೆ.
ಆದರೆ ಆ ಹಾಲಕ್ಕಿಯವನು ಮಾತ್ರ ಮತ್ತೆ ಬರಲಿಲ್ಲ. ನನಗೆ ಈಗ ದಾರಿಯಲ್ಲಿ ಯಾರೇ ಹಾಲಕ್ಕಿಯವರು, ಕೈಯಲ್ಲಿ ಡಮರು ಹಿಡಿದುಕೊಂಡು ಬಂದರೆ, ಅವನ ನೆನಪಾಗುತ್ತದೆ. ಅವನನ್ನು ಸರಿಯಾಗಿ ಉಪಚರಿಸದೇ ಸಸಾರ ಮಾಡಿದ ಬಗ್ಗೆ ಈಗಲೂ ಪಶ್ಚಾತ್ತಾಪ ಇದೆ.

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ