ಮಂಗಳವಾರ, ಮಾರ್ಚ್ 20, 2018

ದಿನೇಶ ಉಪ್ಪೂರ:

*ನನ್ನೊಳಗೆ - 84*

ನನ್ನ ಸ್ನೇಹಿತರಾದ ಎಸ್ ವಿ ಭಟ್ರು ಒಮ್ಮೆ ಹೀಗೆ ಮಾತಾಡುತ್ತಾ ಹೇಳಿದ್ದರು. ಅವರ ತಂದೆಯವರು ಹಿಂದಿನ ಕಾಲದವರು,  ಯಾವಾಗಲೂ ಬಹಳ ಗಂಭೀರರಾಗಿ ಇರುತ್ತಿದ್ದರಂತೆ. ಮನೆಯವರ ಹತ್ತಿರ ಮಕ್ಕಳ ಹತ್ತಿರ ಸಲಿಗೆಯಿಂದ ಮಾತಾಡುವುದು ಅಂತಲೇ ಇರಲಿಲ್ಲವಂತೆ. ಹೆಂಡತಿಯ ಹತ್ತಿರವೂ. ಬಹಳ ಬಿಗು, ಗತ್ತು.

ಹತ್ತಿರದಲ್ಲಿ ಎಲ್ಲಾದರೂ ಆಟ ಇದ್ದಾಗ, ಮಕ್ಕಳು "ರಾತ್ರಿ ಆಟಕ್ಕೆ ಹೋಗುತ್ತೇವೆ" ಅಂದರೆ, "ಆಟವಾ ಮತ್ತೆಂತದಾ? ಬಿದ್ಕಣಿ ಕಾಂಬ" ಎಂದು ಜೋರು ಮಾಡುತ್ತಿದ್ದರಂತೆ. ಮಕ್ಕಳು ಆಟಕ್ಕೆ ಹೋಗಲೇ ಬೇಕಾದರೆ, ಅವರಿಗೆ ಗೊತ್ತಾಗದ ಹಾಗೆ, ಅವರು ಮಲಗಿದ ನಂತರ ಮೆಲ್ಲನೇ ಎದ್ದು ಹಿಂದಿನ ಪಾಗಾರ ಹಾರಿ ಹೋಗಿ, ಬೆಳಗಿನ ಜಾವಕ್ಕೆ ಹಟ್ಟಿಯ ಬಾಗಿಲಿನ ಮೂಲಕ ಮನೆಗೆ ಬಂದು ಅಪ್ಪಯ್ಯ ಏಳುವುದರ ಒಳಗೆ ಮಲಗಿಬಿಡುತ್ತಿದ್ದರಂತೆ. ಹಾಗಂತ ಅವರ ಅಪ್ಪಯ್ಯನೂ ಅವರ ಯೌವನದ ಕಾಲದಲ್ಲಿ ಬಹಳ ಆಟಕ್ಕೆ ನೋಡಿದವರೆ. ಆದರೆ ಬಾಳ್ವೆಯ ಕೊನೆಕೊನೆಗೆ ಅವರಿಗೆ ಮಾತಾಡಲು ಸಲಿಗೆಯ ಜನರು ಸಿಗದೇ, ರಾತ್ರಿಯ ಕತ್ತಲೆಯಲ್ಲಿ ಮನೆಯ ಪತ್ತಾಸಿನ ಮೇಲೆ ಒಬ್ಬರೇ ಕುಳಿತೋ,  ಹಾಸಿಗೆಯ ಮೇಲೆ ಕುಳಿತೋ, ತಮ್ಮಷ್ಟಕ್ಕೇ  ಮಾತಾಡಿಕೊಳ್ಳುತ್ರಿದ್ದರಂತೆ. ನಮ್ಮ ಕಾಲದಲ್ಲಿ "ಹಾಗೆ ಇತ್ತು, ಹೀಗೆ ಇತ್ತು", "ಈ ರೇಡಿಯೋ ಒಂದು ಬಂತು ಎಲ್ಲಾ ಹಾಳಾಯ್ತು", "ಒಂದು ಮಾರ್ವಿ ಶ್ರೀನಿವಾಸ ಉಪ್ಪೂರ್ರು ಆಟದಲ್ಲಿ ಪದ ಹೇಳ್ತಿದ್ರು ಹ್ಯಾಂಗೆ?. ಎಂತಾ ಸ್ವರ ಅವರದ್ದು ? ಮೂರು ಮೈಲಿಯ ಆಚೆಯೂ ಕೇಳುತ್ತಿತ್ತು. ಪದಾ ಅಂದ್ರೆ ಅದು. ಈಗಿನವರದ್ದೆಲ್ಲ ಎಂತ ಮಣ್ಣು" ಎಂದು ಅವರಷ್ಟಕ್ಕೇ ಮಾತಾಡಿಕೊಳ್ಳುತ್ತಿದ್ದರಂತೆ.ಆದರೆ ಬುದವಾರ ರಾತ್ರಿ ಒಂಬತ್ತುವರೆಗೆ ರೇಡಿಯೋದಲ್ಲಿ ಯಕ್ಷಗಾನ ಕೇಳಲು ಸಿದ್ದರಾಗಿ ಕುಳಿತುಕೊಳ್ಳುತ್ತಿದ್ದರು. ಆಮೇಲೆ ಆಪದ ಸರಿಯಾಗಿ ಹೇಳಲಿಲ್ಲ. ಈ ಪದ ಬಿಟ್ಟದ್ದಾ ಮುಗಿಸಲು ಅಷ್ಟು ಅವಸರ ಏನು ಎಂದು ಅವರಷ್ಟಕ್ಕೆ ಮಾತಾಡುತ್ತಿದ್ದರು.

 ನಮ್ಮ ಹಿರಿಯರಲ್ಲಿ ಹಾಗಿನವರನ್ನು ನಾನೂ ಕೆಲವು ಜನರನ್ನು ನೋಡಿದ್ದೆ.  ಹೆಚ್ಚೇಕೆ ನನ್ನ ಭಾವಯ್ಯ, ಮೇಳದ ಯಜಮಾನರು ಎಂದು ಖ್ಯಾತರಾದ ಶ್ರೀಧರ ಹಂದೆಯವರೂ ಹಾಗೆಯೇ. ಅವರು ದುಡಿಯುವ ಕಾಲಕ್ಕೆ ಎಲ್ಲರೂ ತಮಗೆ ಗೌರವ ಕೊಡಬೇಕೆಂದು ದರ್ಪದಿಂದಲೇ ತಾನು ಯಜಮಾನ ಎಂದು ಗಾಂಭೀರ್ಯದಿಂದ ಇರುತ್ತಿದ್ದರು. ಮನೆಯವರೊಂದಿಗೆ ಯಾವಾಗಲೂ ಮೌನವಾಗಿಯೇ ಇದ್ದು, ಮಾತಾಡಲೇ ಬೇಕಾದಾಗ ಒಂದೋ ಎರಡೋ ಚುಟುಕು ಮಾತಾಡಿ ಇದಮಿತ್ತಂ ಅಂತ ಮುಂದೆ ಪ್ರಶ್ನೆ ಇರಬಾರದು ಹಾಗೆ ಖಡಕ್ ಆಗಿ ಹೇಳಿ ಮುಗಿಸಿಬಿಡುವವರು. ಕೊನೆಕೊನೆಗೆ ಅವರಿಗೆ ತನ್ನ ಹೆಂಡತಿ ಮಕ್ಕಳೊಡನೆಯೇ ಅವರಿಗೆ ಸಲಿಗೆಯಿಂದ ಮಾತಾಡಿಕೊಂಡು ಇರಲೂ "ಇಗೋ" ಬಿಡುತ್ತಿರಲಿಲ್ಲ. ಅದಕ್ಕಾಗಿ ಅವರು ಸ್ವಲ್ಪ ಗಟ್ಟಿಯಾಗಿ ಓಡಾಡಲು ಆಗುವವರೆಗೂ ಹೆಚ್ಚಾಗಿ ಮನೆಯಿಂದ ಹೊರಗೇ ಇರಲು ಬಯಸುತ್ತಿದ್ದರು. ಒಮ್ಮೆ ಮಾತಾಡಿದರೂ ತಾನು ಹೇಳುವುದನ್ನು ಎಲ್ಲರೂ ಕೇಳಬೇಕು, ಎದುರು ಹೇಳಬಾರದು ಎಂಬ ಧೋರಣೆಯೇ ಇರುತ್ತಿತ್ತು. ಆದರೂ ತನ್ನ ಕೊನೆಯ ಉಸಿರಿನವರೆಗೂ ಅವರು ಅದರಂತೆಯೇ ಯಜಮಾನನಾಗಿಯೇ ಬದುಕಿದರು. ಸಾಯುವ ಮೂರು ದಿನದ ಮೊದಲು, ಅವರ ಇಳಿವಯಸ್ಸಿನಲ್ಲಿ ಮಗನ ಮನೆಯಲ್ಲಿ ಬೆಂಗಳೂರಿನಲ್ಲಿ ಇದ್ದವರು, ಒಮ್ಮೆ,ಇದ್ದಕ್ಕಿದ್ದಂತೆ, "ತಾನು ಊರಿಗೆ ಹೋಗಲೇ ಬೇಕು" ಎಂದು ಹಟ ಮಾಡಿದ್ದರಿಂದ, ಕಾರು ಮಾಡಿಕೊಂಡು ಊರಿಗೆ ಅಂದರೆ ಮಂಗಳೂರಿನ ಅವರ ಮಗಳ ಮನೆಗೆ ಬಂದರು. ಎರಡೇ ದಿನದಲ್ಲಿ ಹೃದಯಾಘಾತವಾಗಿ ತನ್ನ ಕೊನೆಯುಸಿರೆಳೆದರು.

ಅವರ ಗತ್ತು ಗಾಂಭೀರ್ಯ ತಾನು ಯಜಮಾನನೆಂಬ ಭಾವವನ್ನು ಅವರ ಕೊನೆಯ ಉಸಿರು ಇರುವವರೆಗೂ ಅವರು ಬಿಟ್ಟುಕೊಡಲಿಲ್ಲ. ಹಿಂದೆ ಹತ್ತಾರು ವರ್ಷ ಮೇಳದ ಯಜಮಾನನಾಗಿ ಎಷ್ಟೋ ಕಲಾವಿದರನ್ನೂ, ಟೆಂಟಿನ ಮೇಳದ ಆಳುಕಾಳು ನೌಕರರನ್ನು ದರ್ಪದಿಂದ ಗತ್ತಿನಿಂದ ಆಳಿದರು.  ಅವರ ಬದುಕಿಗೆ ದಾರಿಯಾದರು. ಅಷ್ಟು ಹಿಂದಿನ ಕಾಲದಲ್ಲೇ, ಬಿಳಿಯ ಅಂಬಾಸಿಡರ್ ಕಾರಿನಲ್ಲಿ ಓಡಾಡಿ ರಾಜನಂತೆ ಮೆರೆದ, ಅವರು ಮೇಳದಲ್ಲಿ ನಷ್ಟವಾಗಿ ಬಂಧುಗಳು ಸ್ನೇಹಿತರು, "ಇನ್ನು ಮೇಳ ಸಾಕು. ಮನೆಯಲ್ಲಿ ಇರಿ" ಎಂದು ಬಲವಂತದಿಂದ ಕೂರಿಸಿದಾಗ, ಮನೆಯಲ್ಲಿ ಇದ್ದಾಗಲೂ  ಹಿಂದೆ ಅವರ ಮೇಳದಲ್ಲಿ ಅನ್ನ ತಿಂದ ಹಂಗಿನಿಂದ ಯಾರಾದರೂ ಕಲಾವಿದರು ಬಂದು ಮಾತಾಡಿಸಿದರೆ, ಯಜಮಾನರೇ ಅಂದರೆ, ಆಗಿನ ಅವರ ಗತ್ತೇ ಬೇರೆ ಆಗುತ್ತಿತ್ತು. ಅವರು ಮೇಳವನ್ನು ಕೈದು ಮಾಡಿದ ನಂತರವೂ, ಅವರ ಮನೆಯಲ್ಲಿ ಇದ್ದ ಒಂದು ಪ್ರತ್ಯೇಕ ರೂಮಿನಲ್ಲಿಯೇ ಅವರು ಇರುತ್ತಿದ್ದರು. ನಾವು ಅಕ್ಕನ ಮನೆಗೆ ಹೋದರೆ, ಒಮ್ಮೆ ಅವರನ್ನು ಮಾತಾಡಿಸಲು ಅಂತಲೇ ಅವರ ರೂಮಿಗೆ ಹೋಗಿ ಅವರ ಎದುರಿನ ಕುರ್ಚಿಯಲ್ಲಿ ಒಂದು ಐದು ನಿಮಿಷ ಔಪಚಾರಿಕವಾಗಿ ಕುಳಿತು ಬರುವುದಿತ್ತು. ಆದರೆ ಅವರು ಮಾತಾಡಿಸಿದರೂ ಒಂದೋ ಎರಡೊ ಮಾತು ಅಷ್ಟೆ. ಆದರೆ ನಾವು ಹಾಗೆ ಹೋಗಿ ಅವರ ಎದುರು ಕುಳಿತು ಬರದೇ ಇದ್ದರೆ, ನಾವು ವಾಪಾಸು ಬಂದ ಮೇಲೆ ಅಕ್ಕನ ಹತ್ತಿರ "ಮಾಣಿ ಬಂದಿತ್ತನಾ?" ಎಂದು ನಾವು ಮಾತಾಡಿಸದೇ ಬಂದುದಕ್ಕೆ ಅಸಮಾಧಾನಪಟ್ಟು ಕೊಳ್ಳುತ್ತಿದ್ದರು.

ಅವರು ಮೇಳ ಮಾಡುವ ಮೊದಲು ಬೆಂಗಳೂರಿನಲ್ಲಿ ಒಂದು ಹೋಟೇಲು ನಡೆಸುತ್ತಿದ್ದರು. ಅವರಿಗೆ ಮೂರು ಹೆಣ್ಣು ಹಾಗೂ ಕೊನೆಯಲ್ಲಿ ಒಬ್ಬ ಗಂಡುಮಗ ಹುಟ್ಟಿದ್ದು ಅಲ್ಲಿಯೇ. ಹೋಟೇಲು ವ್ಯಾಪಾರದಲ್ಲಿ ನಷ್ಟವಾಗಿ  ಊರಿಗೆ ಬಂದವರು, ಆಮೇಲೆ ಒಂದೆರಡು ವರ್ಷ ಅಮೃತೇಶ್ವರಿ ಮೇಳ ಮಾಡಿ, ನಂತರ ಬಡಗುತಿಟ್ಟಿನಲ್ಲಿ  ಸಾಲಿಗ್ರಾಮ ಮೇಳವನ್ನು ಹೊಸದಾಗಿ ಟೆಂಟು ಮೇಳವನ್ನಸಗಿ ಎಬ್ಬಿಸಿದಾಗ, ಕೆರೆಮನೆ ಕಲಾವಿದರನ್ನು ಕರೆತಂದು, ಅವರ ಜೊತೆಗೆ, ದೊಡ್ಡ ಸಾಮಗರು, ಶಿರಿಯಾರ ಮಂಜು, ವೀರಭದ್ರ ನಾಯ್ಕರಂತ ದೊಡ್ಡ ದೊಡ್ಡ ಕಲಾವಿದರನ್ನು ಹಾಕಿಕೊಂಡು ಗಜಮೇಳ ಮಾಡಿ, ಅದ್ದೂರಿಯಾಗಿ ಮೆರೆದದ್ದು, ಮತ್ತೆ ಅದನ್ನು ಸೋಮನಾಥ ಹೆಗಡೆಯವರಿಗೆ ಕೊಟ್ಟು ಅಮೃತೇಶ್ವರಿ ಮೇಳ ಮಾಡಿ ಯಶಸ್ವಿಯಾಗಿದ್ದು ಈಗ ಇತಿಹಾಸ.

 ಅಂತಹ ಭಾವಯ್ಯನನ್ನು ಸುಧಾರಿಸಿಕೊಂಡು,ಅರ್ಥಮಾಡಿಕೊಂಡು, ಅವರಿಗೆ ಹೊಂದಿಕೊಂಡು, ಬಾಳ್ವೆ ಮಾಡಿದ ನನ್ನ ಅಕ್ಕನ ತಾಳ್ಮೆ, ಸಾಹಸ ಸಣ್ಣದೇನಲ್ಲ. ಮೇಳದ ಯಜಮಾನರಾಗಿದ್ದಾಗ ರಾತ್ರಿ ಕ್ಯಾಂಪಿನಿಂದ ಎಷ್ಟು ಎಷ್ಟು ಹೊತ್ತಿಗೋ ಅವರು ಮನೆಗೆ ಬರುತ್ತಿದ್ದರು. ಬರುವಾಗ ಯಾರು ಯಾರನ್ನೋ ಮನೆಗೆ ಕರೆತರುತ್ತಿದ್ದರು.ಅಷ್ಟು ರಾತ್ರಿಯ ಮೇಲೆ ಎದ್ದು ಸ್ವಲ್ಪವೂ ಗೊಣಗದೇ, ಎದ್ದು  ಅನ್ನ ಮಾಡಿ, ಅವರಿಗೆಲ್ಲ ಬಡಿಸಿ ಉಪಚರಿಸುತ್ತಿದ್ದಳು ಅವಳು.

ಅವರು ಮೊದಲು ಬೆಂಗಳೂರಿನಲ್ಲಿ ಇರುವಾಗ ಒಂದು ರಾತ್ರಿ ಮನೆಗೆ ಕಳ್ಳನೊಬ್ಬ ಕದಿಯಲು ಬಂದಿದ್ದನಂತೆ. ಹಾಗೆ ಬಂದು ಕತ್ತಲೆಯಲ್ಲಿ ತಡಕಾಡುತ್ತಿರುವಾಗ, ನನ್ನ ಅಕ್ಕನಿಗೆ ಪಕ್ಕನೇ ಎಚ್ಚರಾಯಿತು. ಅವಳು ಎಲ್ಲರಂತೆ ಕಳ್ಳ ಕಳ್ಳ ಅಂತ ಬೊಬ್ಬೆ ಹೊಡೆಯಲಿಲ್ಲ. ಬದಲು, ಸದ್ದು ಮಾಡದೇ ಮೆಲ್ಲನೇ ಎದ್ದು, ಹಿಂದಿನಿಂದ ಹೋಗಿ ಆ ಕಳ್ಳನನ್ನು ಕಪ್ಪರಿಸಿ ಗಟ್ಟಿಯಾಗಿ ಹಿಡಿದುಕೊಂಡು "ಕಳ್ಳನನ್ನು ಹಿಡಿದುಕೊಂಡಿದ್ದೇನೆ. ಬನ್ನಿ ಬನ್ನಿ" ಅಂತ ಬೊಬ್ಬೆ ಹೊಡೆದಳಂತೆ. ಆ ಕಳ್ಳ ತಪ್ಪಿಸಿಕೊಳ್ಳಲಾಗದೇ ಜನ ಸೇರುವವರೆಗೂ ಒದ್ದಾಡಿ, ನಂತರ ಪೋಲೀಸರಿಗೆ ಅತಿಥಿಯಾದನಂತೆ. ಆಗಿನ ಅವಳ ಧೈರ್ಯಕ್ಕೆ, ಸಾಹಸಕ್ಕೆ ಎಲ್ಲರೂ ಮೆಚ್ಚಿದ್ದೇ ಮೆಚ್ಚಿದ್ದು.

ಆ ಕತೆಯನ್ನು ಆಕೆಯ ಬಾಯಿಯಿಂದಲೇ ಹಲವಾರು ಭಾರಿ ಕೇಳಿದ್ದೆವು. ಆಗ ನಮಗೆಲ್ಲ ರೋಮಾಂಚನ ಆಗುತ್ತಿತ್ತು. ಅವಳನ್ನೇ ಬಿಟ್ಟಕಣ್ಣುಗಳಿಂದ ನೋಡುತ್ತಿದ್ದೆವು. ನನ್ನ ಅಕ್ಕ ಅಂದರೆ ಒನಕೆ ಓಬವ್ವನಿಗಿಂತಲೂ ಏನೂ ಕಡಿಮೆಯವಳಲ್ಲ ಎಂಬ ಹೆಮ್ಮೆಯೂ ಆಗುತ್ತಿತ್ತು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ