ದಿನೇಶ ಉಪ್ಪೂರ:
*ನನ್ನೊಳಗೆ - 85*
ಬಾಲ್ಯದ ಕತೆಗಳನ್ನು ಅನುಭವಗಳನ್ನು ಮೆಲುಕು ಹಾಕುವುದೆಂದರೆ ಏನೋ ಒಂದು ತರಹದ ಪುಳಕ. ಆ ಹಳ್ಳಿಯ ಬದುಕು, ಕಷ್ಟಗಳ ನೆನಪು, ಅದರಲ್ಲೇ ಕಾಣುತ್ತಿದ್ದ ನೆಮ್ಮದಿ, ಆನಂದದ ಆ ಕ್ಷಣಗಳು, ಈಗ ಹಣ ಇದ್ದರೂ, ಸಮಯ ಇದ್ದರೂ, ಆಗಿನ ಬದುಕಿನ ಅನ್ಯೋನ್ಯತೆಯನ್ನು, ಸರಳತೆಯನ್ನು ಬದುಕಿನ ಬಗೆಗಿನ ಪ್ರೀತಿಯನ್ನು ಈಗ ಕಾಣಲಿಕ್ಕೆ ಏಕೆ ಆಗುವುದಿಲ್ಲವೋ ಏನೊ.
ಈಗ ನಾವು ಎಷ್ಟು ಸರಳವಾಗಿ ಬದುಕಬೇಕು ಎಂದರೂ ಸ್ಟೇಟಸ್ ಅಥವ "ಅವರು ನಮ್ಮಹಾಗೆ ಯೋಚನೆ ಮಾಡುವವರಲ್ಲವೋ ಏನೋ. ಇನ್ನೊಬ್ಬರಿಗೆ ನಮ್ಮಿಂದ ಯಾಕೆ ಸುಮ್ಮನೇ ಉಪದ್ರವ?" ಎಂದು ನಮ್ಮಷ್ಟಕ್ಕೇ ಇರಲು ಬಯಸುವ ಕಾಲ. ಸುಖಕ್ಕಾಗಲೀ ಕಷ್ಟಕ್ಕಾಗಲೀ ಇನ್ನೊಬ್ಬರು ಆಗುತ್ತಾರೆ ಎಂದು ನಾವೂ ನಂಬುವುದಿಲ್ಲ. ನಾವೂ ಇತರರ ಒಳಿತು ಕೆಡುಕುಗಳಿಗೆ ಮೂಗು ತೂರಿಸುವುದೂ ಕಡಿಮೆ. ಒಟ್ಟಿನಲ್ಲಿ ನಾವಾಯಿತು ನಮ್ಮ ಕೆಲಸವಾಯಿತು.
ಹಿಂದೆ ನಾನು ಹಾಲಾಡಿ ಶಾಲೆಯಲ್ಲಿ ಓದುವಾಗ ಕಲ್ಲಟ್ಟೆಯ ಅತ್ತೆಯ ಮನೆಯಲ್ಲಿ ಇದ್ದೆ. ಆಸುಪಾಸಿನಲ್ಲಿ ನಮ್ಮದು ಒಂದೇ ಬ್ರಾಹ್ಮಣರ ಮನೆ. ಆಚೆ ಈಚೆ ಎಲ್ಲ ಕುಡುಬಿಯವರ ಮರಾಠಿಯವರ ಹತ್ತಾರು ಮನೆಗಳು. ಹಿಂದೆ ಆ ಜಮೀನಿನ ಸಾಹುಕಾರರಾಗಿದ್ದ ಶಂಕರನಾರಾಯಣ ಅಡಿಗರು ಅವರಿಗೆಲ್ಲ ಸ್ವಲ್ಪ ಸ್ವಲ್ಪ ಗದ್ದೆಗಳನ್ನು ಗೇಣಿಗೆ ಬಿಟ್ಟುಕೊಟ್ಟು, ಒಕ್ಕಲುಗಳನ್ನಾಗಿ ಮಾಡಿಕೊಂಡಿದ್ದರು.
ಅವರೆಲ್ಲರೂ ನಮ್ಮ ಮನೆಯವರಿಗೆ ಅಷ್ಟು ವಿಧೇಯರಾಗಿದ್ದು, ಕರೆದಾಗ ಓಡಿ ಬರುತ್ತಿದ್ದರು. ಅವರ ಸುಖ ಕಷ್ಟಗಳನ್ನು ಹೇಳಿಕೊಂಡು ಹಂಚಿಕೊಳ್ಳುತ್ತಿದ್ದರು. ಆಗಾಗ ನಮ್ಮ ಮನೆಯ ಎದುರು ಅಂಗಳದಲ್ಲಿ, ಹಾದು ಹೋಗುತ್ತಾ " ಬೈಲ್ ಬದಿಗ್ ಹೋಯ್ ಬಪ್ಪ ಅಂದೇಳಿ ಹೀಂಗೆ ಬಂದಿನೆ. ಅಮ್ಮಾ, ಹ್ಯಾಂಗಿದ್ರಿ?" ಅಂತ ಮಾತಾಡಿಸಿಕೊಂಡು ಹೋಗುತ್ತಿದ್ದರು. ಮನೆಯಲ್ಲಿ ಬೆಳೆದ ತರಕಾರಿಯನ್ನೋ, ಮಾವಿನಹಣ್ಣು, ಬಾಳೆಹಣ್ಣನ್ನು ಎಷ್ಟಾದರೆ ಅಷ್ಟು ತಂದು ಕೊಡುತ್ತಿದ್ದರು.
ಹಾಗೆಯೇ "ಅಮ್ಮಾ, ಒಂಚೂರು ಚಾಪುಡಿ ಕೊಡಿನ್ಯೆ. ಯಜ್ಮಾರ್ರ್ ಇವತ್ ಪ್ಯಾಟಿಗ್ ಹ್ವಾಯ್ ಲೆ ಇಲ್ಯೆ" ಅಂತಲೋ "ಒಂದ್ ಎಸಳು ಹೊಗೆಸೊಪ್ಪು ಕೊಡಿ" ಅಂತಲೋ, ಬಂದು ಜಗಲಿಯ ತುದಿಯಲ್ಲಿ ಕುಳಿತು ಒಂದು ವೀಳ್ಯ ಹಾಕಿ ಮಾತಾಡಿಸಿ ಯಾರ್ಯಾರ ಸುದ್ದಿಯನ್ನು ಹೇಳಿ ಹೋಗುತ್ತಿದ್ದರು. ಅವರ ಮನೆಯಲ್ಲಿ ಮಕ್ಕಳ ಮದುವೆ ಆದರೆ ನನ್ನ ಅತ್ತೆಯ ಚಿನ್ನದ ಬಳೆ, ನೆಕ್ಲೆಸ್ ಗಳೂ ಅವರಿಗೆ ಹಸ್ತಾಂತರವಾಗಿ, ಆ ಹೆಂಗಸರ ಕುತ್ತಿಗೆಯಲ್ಲಿ ಶೋಭಿಸಿ ಮರುದಿನ ಮರಳುತ್ತಿತ್ತು.
ಅತ್ತೆಯೂ ಹಾಗೆ. ಯಾರಾದರೂ ನಮ್ಮ ಮನೆಯ ಕಡೆ ಬಾರದಿದ್ದರೆ "ಹೋ ಅವಳ ಪತ್ತೆಯೇ ಇಲ್ಲಪ. ಎಲ್ಲಿ ಸತ್ತಳೋ ? ಆ ಕಡೆಗೆ ಹೋದರೆ ನಾನು ಬರಲಿಕ್ಕೆ ಹೇಳಿದ್ದೆ ಅಂತ ಹೇಳು" ಅಂತ ಯಾರ ಹತ್ತಿರವಾದರೂ ಹೇಳಿ ಕಳಿಸುತ್ತಿದ್ದರು. ಅವರವರಲ್ಲಿ ಸಣ್ಣಪುಟ್ಟ ಜಗಳ ಆದರೂ ಅತ್ತೆ ಕರೆಸಿ ಬುದ್ಧಿ ಹೇಳಿ ಸಮಾಧಾನ ಮಾಡುತ್ತಿದ್ದರು. ನಮ್ಮ ಮನೆಯ ರಾಘವೇಂದ್ರ ಸ್ವಾಮಿಗಳ ಆರಾಧನೆಯಲ್ಲಿ, ಮದುವೆ, ಉಪನಯನದ ಸಮಯದಲ್ಲಿ ಸುತ್ತಮುತ್ತಲಿನ ಎಲ್ಲ ಒಕ್ಕಲುಗಳೂ, ಅವರ ಮಕ್ಕಳೂ ಬಂದು ನಮ್ಮ ಮನೆಯಲ್ಲೇ ಉಂಡು ಹೋಗುತ್ತಿದ್ದರು.
ಅವರಲ್ಲಿಯೇ ಯಾರಿಗಾದರೂ ಒಂದಿಬ್ಬರಿಗೆ ಹೇಳಿದರೆ, ಆ ದಿನ ಬೆಳಗ್ಗೆ ಬಂದು ಮನೆಯನ್ನೆಲ್ಲಾ ಚೆನ್ನಾಗಿ ಗುಡಿಸಿ, ಸಗಣಿ ಬಳಿದು ಸಾರಿಸಿ, ಇಡೀ ಮನೆಯನ್ನು ತಂಪಾಗಿಸಿ, ಗಮಗಮ ಎನ್ನಿಸುವಂತೆ ಮಾಡುತ್ತಿದ್ದರು. ಹಾಗೂ ಸಂಜೆ ಬಂದು ಹೊರಗೆ ಹಾಕಿದ ಎಲ್ಲ ಪಾತ್ರೆಗಳನ್ನು ತೊಳೆದು ಕೊಡುತ್ತಿದ್ದರು. ಆ ದಿನ ಹೆಚ್ಚಿಗೆ ಉಳಿದ ಅನ್ನ ಸಾರು ಪಾಯಸ ಎಲ್ಲವನ್ನು ಅವರ ಮನೆಗೆ ತೆಗೆದುಕೊಂಡು ಹೋಗುತ್ತಿದ್ದರು. ನಮ್ಮ ಮನೆಯಲ್ಲಿ ಊಟ ಆದರೆ ಅವರಿಗೂ ನಮ್ಮ ಹಾಗೆಯೇ ಸಂಭ್ರಮ. ಎಲ್ಲರೂ ತುಂಬಾ ಮುಗ್ಧರು. ಬಡತನ ಇದ್ದರೂ ಸದಾ ಸುಖಿಗಳು. ಸಂತೃಪ್ತರು.
ಪ್ರತೀ ವರ್ಷಕ್ಕೊಮ್ಮೆ ಮರಾಠಿಯವರು, ಕುಡುಬಿಯವರು ತುಂಬಾ ಸಂಭ್ರಮದಿಂದ ಹೋಳಿಹಬ್ಬವನ್ನು ಆಚರಿಸುತ್ತಾರೆ. ಆ ಕುಣಿತಗಳನ್ನು ಸುಮಾರು ಒಂದು ತಿಂಗಳ ಹಿಂದಿನಿಂದಲೂ ಪ್ರತೀ ರಾತ್ರಿ ಯಾರಾದರೂ ಒಬ್ಬರ ಮನೆಯಲ್ಲಿ ಸೇರಿ, ತರಬೇತಿ ಮಾಡಿಕೊಂಡು ಎಲ್ಲರೂ ಒಂದೇ ರೀತಿ ಹೊಂದಾಣಿಕೆಯಿಂದ ಕುಣಿಯುತ್ತಾರೆ. ಅದಕ್ಕಾಗಿಯೇ ಒಂದು ವಿಶಿಷ್ಟ ಉಡುಪನ್ನು ಇಟ್ಟುಕೊಂಡು, ಅದನ್ನು ಶುಚಿಮಾಡಿ ಧರಿಸುತ್ತಾರೆ, ಅವರ ಮುಂಡಾಸಿನ ತುದಿಗೆ ಅದ್ಯಾವುದೋ ಹಕ್ಕಿಯ ಪುಕ್ಕವನ್ನು ಸಿಕ್ಕಿಸಿಕೊಳ್ಳುತ್ತಿದ್ದರು. ಸುತ್ತಮುತ್ತಲಿನ ಎಲ್ಲರ ಮನೆಗೂ ಹೋಗಿ, ಗುಮಟೆಯನ್ನು ಬಾರಿಸುತ್ತಾ ಕುಣಿಯುತ್ತಾರೆ. ನಂತರ ಬಣ್ಣದ ಕೋಲುಗಳನ್ನು ಹಿಡಿದುಕೊಂಡು ಕೋಲಾಟವನ್ನು ಮಾಡುತ್ತಿದ್ದರು. ಅವರಲ್ಲೇ ಹಿರಿಯ ಸದಸ್ಯರು ಹಿಂದೆ ನಿಂತುಕೊಂಡು ಪದ ಹೇಳುತ್ತಾರೆ. ಹಬ್ಬ ಹಬ್ಬವೆ. ಮಕ್ಕಳಿಗೆ ಹಿರಿಯರಿಗೆ ಎಲ್ಲರಿಗೂ. ಅದನ್ನು ಅಷ್ಟು ಶೃದ್ಧೆಯಿಂದ ಮಾಡದಿದ್ದರೆ ಅವರ ದೈವಕ್ಕೆ, ಭೂತಕ್ಕೆ ಸಿಟ್ಟುಬರುತ್ತದೆ ಎಂಬ ಭಯವೂ ಇತ್ತು.
ಆಗಿನ ಒಂದು ಘಟನೆ ಹೇಳುತ್ತೇನೆ. ಒಮ್ಮೆ ನಮ್ಮ ಮನೆಯಲ್ಲಿ ಮಾಡಿದ ಉಪ್ಪಿನಕಾಯಿಯಲ್ಲಿ ಏನೋ ಅಜಾಗ್ರತೆಯಿಂದ ಹುಳವಾಗಿಬಿಟ್ಟಿತ್ತು. ಒಳ್ಳೆಯ ಪರಿಮಳದ ಮಾವಿನ ಮಿಡಿ. ಮೂರು ದೊಡ್ಡ ಜಾಲಿಯಲ್ಲಿ ಹಾಕಿಟ್ಟಿದ್ದು ತಂಡಿಯಾಗಬಾರದು ಎಂದು, ಅಡುಗೆ ಮನೆಯಲ್ಲಿ ಹೊಗೆ ಹೋಗಿ ಬಿಸಿ ಇರುವ ಜಾಗದಲ್ಲೇ ಇಟ್ಟಿದ್ದರೂ, ತೆಗೆದು ನೋಡುವಾಗ ಅಲ್ಲಲ್ಲಿ ಒಂದೊಂದು ಮೇಲೆ ಕೆಳಗೆ ಬಿಜಿಬಿಜಿ ಎಂದು ಓಡಾಡುವುದು ಕಂಡಿತು. ಹೊಟ್ಟೆಯೆಲ್ಲ ಉರಿದು ಹೋಯಿತು. ಏನು ಮಾಡುವುದು? ತಿನ್ನುವ ಹಾಗಿಲ್ಲ. ಬಿಸಾಡುವ ಹಾಗಿಲ್ಲ.
ಒಂದು ಸಲ ನಮ್ಮ ಬೈಲುಮನೆಯ ಒಕ್ಕಲು, ರುಕ್ಕು ಬಾಯಿ (ಕುಡುಬಿ ಹೆಂಗಸು) ಮನೆಗೆ ಬಂದಾಗ ಅತ್ತೆ, ಅವಳ ಹತ್ತಿರ ಬೇಸರದಿಂದ, "ನಮ್ಮ ಉಪ್ಪಿನ ಕಾಯಿ ಒಂದು ದಂಡ ಆಯಿತು ಮಾರಾಯ್ತಿ. ಮೇಲೆ ಬಿಜಿಬಿಜಿ ಅನ್ನತ್, ಇನ್ನು ಬಿಸಾಡುವುದೇ ಸೈ" ಎಂದರು. ಅವಳು ಆಶ್ಚರ್ಯದಿಂದ ಬಾಯಿ ಕಳೆದು, "ಎಂತ ಬಿಸಾಡ್ ತ್ರ್ಯಾ? ತಕಬನ್ನಿ ಕಾಂಬ" ಅಂದಳು. ತಂದು ತೋರಿಸಿದರೆ "ಅಯ್ಯೊ, ನಿಮಗ್ ಮರ್ಲಾ? ಇಷ್ಟ್ ಲಾಯ್ಕಿತ್ತ್. ನಿಮ್ಗೆ ಬ್ಯಾಡದಿದ್ರೆ ನಂಗ್ ಕೊಡಿ. ನಾನೊಂದ್ ಮುಷ್ಠ ಮಾಡಿ ಸರಿ ಮಾಡ್ಕಂತಿ" ಅಂದಳು. ಅತ್ತೆ ಕುತೂಹಲದಿಂದ " ಅದೆಂತ ಮುಷ್ಠ ಮಾರಾಯ್ತಿ" ಅಂದರೆ, ಅವಳು, ಇಲ್ಕಾಣಿ, ಹಿಂದಿನ್ ರಾತ್ರಿ, ಸಣ್ ಕಿಚ್ಚಿನ್ ಉರಿ ಮಾಡಿ, ಒಲಿ ದಂಡಿಯಂಗೆ, ಒಂದ್ ಮಡ್ಕಿಯಂಗ್ ಈ ಉಪ್ಪಿನ್ ಕಾಯಿ, ಬೆಚ್ಚಿರ್ ಸೈಯೆ. ಬೆಳಿಗ್ಗೆ ಕಾಂಬತಿಗೆ ಒಂದ್ ಹುಳ ಇದ್ರೆ ಹೇಳಿ" ಅಂದಳು.
ನಮಗೆ ಗೊತ್ತಾಯಿತು. ನಾವೆಲ್ಲ ಗಟ್ಟಿಯಾಗಿ ನಕ್ಕೆವು. ಅತ್ತೆ , "ಹಾಂಗಾರೆ ತಗೊಂಡ್ ಹೋಗ್ ಮಾರಾಯ್ತಿ. ಏನ್ ಬೇಕಾರೂ ಮಾಡ್" ಎಂದು ಅಷ್ಟೂ ಉಪ್ಪಿನ ಕಾಯಿಯನ್ನು ಅವಳಿಗೇ ಕೊಟ್ಟರು.
ಅದೇ ಸ್ವಲ್ಪ ದಿನದ ನಂತರ ಹೋಳಿಹಬ್ಬವನ್ನು ಆಚರಿಸಿದ ಕುಡುಬಿಯವರೆಲ್ಲೂ ಹೋಳಿ ಹುಣ್ಣಿಮೆಯಂದು ರಾತ್ರಿ ಅವಳ ಮನೆಯಲ್ಲಿ ತಿಂಗಳ ಬೆಳಕಿನಲ್ಲಿ , ಹೆಂಡವನ್ನೋ ಕಳ್ಳನ್ನೋ ಕುಡಿದು, ಮಾಂಸವನ್ನು ತಿಂದು ಉಂಡು ಖುಷಿ ಪಟ್ಟರು. ಎಲ್ಲರಿಗೂ ಉಪ್ಪಿನಕಾಯಿಯ ಸಮಾರಾಧನೆಯಾಯಿತು. ಎಲ್ಲರೂ ಉಪ್ಪಿನ ಕಾಯಿಯನ್ನು ಕೇಳಿ ಕೇಳಿ ಹಾಕಿಸಿಕೊಂಡರಂತೆ. ಮರುದಿನ ಕೆಲವರು ನಮ್ಮ ಮನೆಗೂ ಬಂದು, "ಅಮ್ಮ , ನಿಮ್ಮ ಮನೀದ್ ಉಪ್ಪಿನ್ಕಾಯಿಯಂಬ್ರಲೆ, ಭಾರಿ ಲಾಯ್ಕಿತ್ತು ಮರ್ರೆ" ಎಂದು ಹೊಗಳಿಯೂ ಹೋದರು. ನಮಗೆ ಒಳಗೊಳಗೆ ನಗು. ಉಪ್ಪಿನಕಾಯಿ ದಂಡ ಆಗಲಿಲ್ಲವಲ್ಲ ಎಂಬ ಸಮಾಧಾನ.
ಮುಂದೆ ಅತ್ತೆಯೂ ಕಾಲವಾದರು. ಇತ್ತ ಇಂದಿರಾ ಗಾಂಧಿಯ ಒಕ್ಕಲು ಮಸೂದೆ ಬಂದು, ಅವರವರು ಉಳುವ ಗದ್ದೆಗಳೆಲ್ಲ ಅವರದೇ ಆಯಿತು. ಆಗ ನಮ್ಮೊಂದಿಗೆ ಆ ಒಕ್ಕಲುಗಳೆಲ್ಲ ಸ್ವಲ್ಪ ನಿಷ್ಠುರವಾಗಿ ಇದ್ದರೂ, ನಮ್ಮ ಮನೆಗೆ ಬರುವುದು ಹೋಗುವುದು, ಬೇಸಾಯದಲ್ಲಿ ಸಹಾಯ ಮಾಡುವುದು ಸಂಪೂರ್ಣವಾಗಿ ನಿಲ್ಲಿಸಲಿಲ್ಲ. ಯಾಕೆಂದರೆ, ಅಲ್ಲಿ ಆ ಒಕ್ಕಲುಗಳಿಲ್ಲದಿದ್ದರೆ, ಅವರ ಸಹಾಯ ಇಲ್ಲದಿದ್ದರೆ, ನಮಗೆ ಇರುವ ಗದ್ದೆಯ ಬೇಸಾಯವನ್ನು ಮಾಡುವುದು ಕಷ್ಟವಾಗಿತ್ತು.
ಆದರೆ ಕ್ರಮೇಣ ಹಿಂದಿನ ಸಲಿಗೆ ಆತ್ಮೀಯತೆ ಕಡಿಮೆಯಾಗುತ್ತಾ ಬಂತು ಅನ್ನಿಸುತ್ತದೆ. ಕಾಲವೂ ಬದಲಾಗುತ್ತಾ ಬಂತು. ಹಿಂದೆ ಇದ್ದ ಆತ್ಮೀಯತೆ, ಮನುಷ್ಯ ಮನುಷ್ಯರ ನಡುವಿನ ನಂಬಿಕೆ, ವಿಶ್ವಾಸವೂ ಕಡಿಮೆಯಾಯಿತು. ಆ ಒಕ್ಕಲುಗಳ ಮಕ್ಕಳಲ್ಲಿ ಕೆಲವರು ಓದಿ, ಬೇರೆ ಕಡೆ ಹೋಗಿ ನೆಲೆಸಿದರು. ಇಲ್ಲವೇ ಮದುವೆಯಾಗಿ ತಮ್ಮ ಹಿರಿಯರೊಂದಿಗೆ ಹೊಂದಿಕೊಂಡು ಒಟ್ಟಿಗೆ ಇರಲಾಗದೇ, ಬೇರೆ ಮನೆ ಮಾಡಿಕೊಂಡರು. ಒಂದೇ ಮನೆಯಲ್ಲಿ ಮುವ್ವತ್ತು ನಲವತ್ತು ಜನ ಇದ್ದ ಮರಾಠಿ ಮನೆಯ ಮುಂದಿನ ಗದ್ದೆಯಲ್ಲೆಲ್ಲಾ ಒಂದೊಂದು ಮನೆಯಾಗಿ ಅಣ್ಣತಮ್ಮಂದಿರದ್ದು ಬೇರೆಬೇರೆ ಮನೆಯಾಯಿತು. ಸರಕಾರದಿಂದ ಹಲವಾರು ಸೌಲಭ್ಯಗಳು ದೊರೆತವು.
ಮನೆಯ ತನಕವೂ ರಸ್ತೆಯಾಯಿತು. ಇದ್ದ ಸ್ವಲ್ಪವೇ ಗದ್ದೆಗಳನ್ನು ಚೂರು ಮಾಡಿ ಪಾಲು ಮಾಡಿಕೊಂಡರು. ಮನೆಯ ಕೆಲಸ, ಸುತ್ತಲಿನ ಪರಿಸರ ಸಸಾರವಾಯಿತು. ಊಟಕ್ಕೆ, ಬದುಕಿನ ಹೊಸ ಅವಶ್ಯಕತೆಗಳಿಗೆ, ಆಧುನಿಕ ಜೀವನಕ್ಕೆ ದುಡಿಯುವ, ದುಡಿಮೆ ಸಾಲದಾಯಿತು. ಸರಕಾರಿ ಸೌಲಭ್ಯಕ್ಕಾಗಿ ಆಸೆ ಪಡುತ್ತಾ, ಸುಲಭವಾಗಿ ಸಿಗುವ ಸೌಕರ್ಯಕ್ಕಾಗಿ ಹಾತೊರೆಯುತ್ತಾ ಬದುಕುವ ಪರಿಸ್ಥಿತಿ ಬಂತು.
ಈಗಲೂ ದಾರಿಯಲ್ಲಿ ಅವರಲ್ಲಿ ಯಾರಾದರೂ ಸಿಕ್ಕಿದರೆ, ಹಿಂದಿನ ನೆನಪನ್ನು ಮಾಡಿಕೊಂಡು, ವಿಷಾದದಿಂದ "ಆಗಿನ್ ಕಾಲವೇ ಚೆಂದ ಇತ್ತ್ ಅಯ್ಯ" ಎನ್ನುತ್ತಾರೆ

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ