ಮಂಗಳವಾರ, ಮಾರ್ಚ್ 13, 2018

ದಿನೇಶ ಉಪ್ಪೂರ:

* ನನ್ನೊಳಗೆ- 81*

ಹಿಂದೆ ನನ್ನ ಹತ್ತಿರವಿದ್ದ  ಕೈನೆಟಿಕ್ ಹೊಂಡಾ  ಹಳೆಯದಾಗಿತ್ತು. ಆಗಾಗ ರಿಪೇರಿಗೆ ಬರುತ್ತಿತ್ತು. ಆದರೂ ನನಗೆ ಮಾರುವ ಮನಸ್ಸಿರಲಿಲ್ಲ. ಸ್ನೇಹಿತರೆಲ್ಲ "ಇದೆಂತಹ ಹಳೆಯ ಲಟ್ಕಾಸಿ ಗಾಡಿ ಮರಾಯ್ರೆ!  ಮಾರಿಬಿಟ್ಟು ಒಂದು ಒಳ್ಳೆಯ ಸ್ಕೂಟರ್  ತೆಗೆದುಕೊಳ್ಳಬಾರದೇ?" ಎಂದು ತಮಾಷೆ ಮಾಡುತ್ತಿದ್ದರು. ನಾನು "ಇರಲಿ. ನೋಡುವ" ಎಂದು ಅದರಲ್ಲೇ ದಿನದೂಡುತ್ತಿದ್ದೆ.

ಉಡುಪಿಗೆ ಹೋಗುವ ದಾರಿಯಲ್ಲಿಯೇ ತಾಂಗದಗಡಿ ಎಂಬಲ್ಲಿ ದಿನೇಶ ಎಂಬ ಒಬ್ಬನ ಗ್ಯಾರೇಜ್ ಇತ್ತು. ಅವನು, "ನಿಮ್ಮ ಗಾಡಿ ಒಳ್ಳೆಯದಿದೆ. ಈಗ ಇಂತಹ ಗಾಡಿ ಸಿಗುವುದೇ ಇಲ್ಲ. ಮಾರಾಟ ಮಾಡಬೇಡಿ" ಎನ್ನುತ್ತಿದ್ದ.

ಮುಂಚೆ, ಕರಾವಳಿ ಹತ್ತಿರದ ಒಬ್ಬ ಗ್ಯಾರೇಜ್ ನವನು ಇವನಿಗಿಂತ ಭಿನ್ನವಾಗಿ "ಈಗ ಕೈನೆಟಿಕ್ ಹೊಂಡದ ಪಾರ್ಟ್ಸ್ ಸಿಕ್ಕುವುದಿಲ್ಲ. ಆದ್ದರಿಂದ ಇದನ್ನು ಬೇಗ ಯಾರಿಗಾದರೂ ದಾಟಿಸುವುದು ಒಳ್ಳೆಯದು. ಬದಲಾಯಿಸಿ ಬಿಡಿ" ಎಂದಾಗ, ನಾನು ಅವನನ್ನೇ ಬದಲಾಯಿಸಿ ಈ ದಿನೇಶನನ್ನು ಹಿಡಿದಿದ್ದೆ. ಅಲ್ಲದೇ ಈಗ ಯಾವುದೇ ಯಂತ್ರದ, ಉಪಕರಣದ ಬಿಡಿ ಭಾಗ ಕೆಲಸ ಮಾಡದಿದ್ದರೆ, ಅದನ್ನು ರಿಪೇರಿ ಮಾಡಲು ಹೋಗದೇ ಆ ಇಡೀ ಭಾಗವನ್ನೇ ಬದಲಾಯಿಸಿಯೇ ಬಿಡುತ್ತಾರೆ.

ಆದರೆ ಇವನು, "ಗಾಡಿ ಒಳ್ಳೆಯದುಂಟು ಮಾರಾಯ್ರೆ!" ಎಂದು ನಾನು ರಿಪೇರಿಗೆ ಹೋದಷ್ಟು ಸಲವೂ ಹೇಳಿ, ಹಾಳಾದದ್ದನ್ನು ಅದು ಹೇಗೋ ಲಂಗ್ ಲಸ್ಕ್ ಮಾಡಿ ಸರಿ ಮಾಡಿಕೊಡುತ್ತಿದ್ದ. ಅದು ಸ್ವಲ್ಪ ಸಮಯದಲ್ಲಿಯೇ ಮತ್ತೆ ಕೈಕೊಡುತ್ತಿತ್ತು. ನನಗೆ ಅವನು ರಿಪೇರಿ ಮಾಡಲು ತೋರುವ ಉತ್ಸುಕತೆ ಕಡಿಮೆ ಆಗದೇ ಇರುವುದೇ ಮನಸ್ಸಿಗೆ ಹಿಡಿಸಿತ್ತು. ಆದರೆ ಪದೇ ಪದೇ ಅವನಲ್ಲಿಗೆ ದೂಡಿಕೊಂಡು ಹೋಗಿಯೋ, ಅವನನ್ನು ಮನೆಗೆ ಬರಲು ಹೇಳಿಯೋ, ಅದು ಹಾಳಾದಲ್ಲಿಯೇ ಇಟ್ಟು, ಅವನಿಗೆ ಪೋನ್ ಮಾಡಿ ತೆಗೆದುಕೊಂಡು ಹೋಗಲೋ ಹೇಳುವಾಗ ನನಗೇ ಕಿರಿಕಿರಿಯಾಗುತ್ತಿತ್ತು. ಆದರೆ ಪದೇ ಪದೇ ಹಾಗಾಗಲಿಕ್ಕೆ ಶುರುವಾದಾಗ, ನನಗೆ ಕಂಡು ಕಂಡು ಸಾಕಾಗಿ ಇನ್ನು ರಿಪೇರಿ ಮಾಡಿ ಪೂರೈಸುವುದಿಲ್ಲ ಎಂದು ನಿರ್ಧರಿಸಿದ ನಾನು, ದಿನೇಶನ ಹತ್ತಿರ ಒಮ್ಮೆ, "ನೋಡುವ, ನೀವೇ ಇದನ್ನು ಯಾರಿಗಾದರೂ ಮಾರಾಟ ಮಾಡಿಕೊಡಿ ಮಾರಾಯ್ರೆ" ಎಂದೆ.

ಅವನು "ಮಾರಾಟ ಮಾಡ್ತೀರಾ? ಹೌದಾ? ಹಾಗಾದರೆ ಈಗಲೇ ಒಂದು ಗಿರಾಕಿ ಉಂಟು" ಎಂದು ಹೇಳಿ, ಸ್ವಲ್ಪ ದಿನದಲ್ಲಿಯೇ, ಭೋಜ ಪೂಜಾರಿ ಎನ್ನುವವರನ್ನು ಒಮ್ಮೆ ನನ್ನ ಮನೆಗೆ ಕರೆದುಕೊಂಡು ಬಂದ. ನನ್ನ ಸ್ಕೂಟರನ್ನು ಅವರಿಗೆ ತೋರಿಸಿ "ಗಾಡಿ ಫಸ್ಟ್ ಕ್ಲಾಸ್ ಉಂಟು ಈಗ ಬರುವ ಹೊಸಗಾಡಿಗಳೆಲ್ಲ ದಂಡ" ಎಂದು ತುಳುವಿನಲ್ಲಿ ಹೇಳಿ ಅವನನ್ನು ಉಬ್ಬಿಸಿದ. ಆಗಲೇ ಹನ್ನೆರಡು ವರ್ಷ ಆದ ನನ್ನಗಾಡಿ, ನೋಡಲೂ ಅಷ್ಟು ಚೆನ್ನಾಗಿರಲಿಲ್ಲ. ಕೆಲವು ಭಾಗಗಳು ಆಗಲೇ  ತುಕ್ಕು ಹಿಡಿದಿತ್ತು. ನಾನೂ,"ನನಗೆ ಕೊಡಲು ಮನಸ್ಸಿಲ್ಲ. ಆದರೂ ಒಳ್ಳೆಯ ರೇಟ್ ಬಂದರೆ ನೋಡಬಹುದು" ಎಂದು ಅರೆಮನಸ್ಸಿನಿಂದ ಹೇಳಿದೆ.

ಅಂತೂ ಐದು ಸಾವಿರ ಎಂದು ಹೇಳಿದ್ದು, ಕೊನೆಗೆ ಚೌಕಾಶಿ ಆಗಿ ಆಗಿ, ನಾಲ್ಕುವರೆ ಸಾವಿರಕ್ಕೆ ಮಾತು ಆಯಿತು. ಭೋಜ ಪೂಜಾರಿಯವರು ಆಗಲೇ ಐನೂರು ರೂಪಾಯಿ ಅಡ್ವಾನ್ಸ್ ನ್ನು ಕೊಟ್ಟರು. ದಿನೇಶನಿಗೆ ಅವರು ಪರಿಚಿತರಂತೆ, ಅಷ್ಟರಲ್ಲೇ ಅವನು "ಇದನ್ನು ಮತ್ತೊಬ್ಬರೂ ನೋಡಿ ಹೋಗಿದ್ದಾರೆ" ಎಂದು ಬಂಡಲ್ ಬಿಟ್ಟ.

ನನ್ನ ಹತ್ತಿರ ಸ್ಕೂಟರ್ ಗೆ ಸಂಬಂಧಿಸಿದ  ಎಲ್ಲ ದಾಖಲೆಗಳು ಇದ್ದವು. ಭೋಜ ಪೂಜಾರಿಯವರು ಪೂರ್ತಿ ಹಣವನ್ನು ಕೊಟ್ಟು ದಾಖಲೆಗಳನ್ನು ಪಡೆದುಕೊಂಡು ಹೋದರು. ಗಾಡಿಯನ್ನು ಅವರು ತೆಗೆದುಕೊಂಡು ಹೋಗುವಾಗ ನನಗೆ ಒಳಗೊಳಗೆ ಬೇಸರವೂ ಆಯಿತು. ಸ್ವಲ್ಪ ದಿನದಲ್ಲಿಯೇ ನಾನು ಮತ್ತೆ ಹೊಸ ಕೈನೆಟಿಕ್ ಹೊಂಡವನ್ನೇ ತೆಗೆದುಕೊಂಡೆ.

ಸ್ವಲ್ಪ ದಿನ ಕಳೆದಿರಬಹುದು. ಒಮ್ಮೆ ಭೋಜ ಪೂಜಾರಿಯವರು ಎದುರು ಸಿಕ್ಕಿದರು. ನನ್ನನ್ನು ಕೂಡಲೇ ಗುರುತಿಸಿ ನಿಲ್ಲಿಸಿ, "ಈ ಗಾಡಿ ಸರೀ ಇಲ್ಲ ಮಾರಾಯ್ರೆ. ಏನೋ ಪ್ರಾಬ್ಲೆಮ್ ಇತ್ತಲೆ. ಮೊನ್ನೆ ಸ್ಟಾರ್ಟೇ ಆಗಲಿಲ್ಲ. ರಿಪೇರಿಗೆ ಒಂದು ಸಾವಿರ ಖರ್ಚಾಯಿತು. ಆ ದಿನೇಶ ಈಗ ಸಿಕ್ಕುವುದೇ ಇಲ್ಲ ಮಾರಾಯ್ರೆ" ಅಂದ.

ನನಗೆ ಬೇಸರವಾಯಿತು. ನೀವು ಸರಿಯಾಗಿ ನೋಡಿಕೊಂಡೇ ತೆಗೆದುಕೊಳ್ಳಬೇಕಾಗಿತ್ತಲ್ಲವೇ? ಫೈನಲ್ ಆಗುವ ಮೊದಲು ಯಾರಿಗಾದರೂ ಒಮ್ಮೆ ತೋರಿಸಬಹುದಿತ್ತು. ಈಗ ನನಗೂ ವಾಪಾಸು ಬೇಡ. ಆದರೆ ನಿಮಗೆ ಬೇಸರವಾಗುವುದಾದರೆ, ನೀವು ಕೊಟ್ಟ ಹಣದಲ್ಲಿ ಸ್ವಲ್ಪ ಹಣವನ್ನು ಬೇಕಾದರೆ ಹಿಂದೆ ಕೊಡುತ್ತೇನೆ" ಎಂದೆ. ಅವರು "ಆ ದಿನೇಶನೇ ಇಷ್ಟು ಮಾಡಿದ್ದು. ಅವನನ್ನು ನಂಬಿ ನಾನು ಮೋಸ ಹೋದೆ" ಎಂದರು. ನಾನು "ಹಾಗಾದರೆ ಒಮ್ಮೆ ಇಬ್ಬರೂ ಆ ಗ್ಯಾರೇಜ್ ಗೆ ಹೋಗಿ ಮಾತಾಡುವ" ಎಂದೆ. ಅವರು ಮಾತಾಡಲಿಲ್ಲ. ಸ್ವಲ್ಪ  ಹೊತ್ತು ನನ್ನನ್ನು ನೋಡುತ್ತಿದ್ದು, ಕೊನೆಗೆ ಏನೋ ಗೊಣಗೊಣ ಎನ್ನುತ್ತಾ ಹೊರಟುಹೋದರು.

ಆಮೇಲೆ ನಾನು ಮತ್ತೊಮ್ಮೆ ದಿನೇಶನನ್ನು ಕಂಡು ಭೋಜ ಪೂಜಾರಿಯವರು ಸಿಕ್ಕಿ ಹೇಳಿದ್ದನ್ನು ಹೇಳಿದೆ. "ಪಾಪ ಅವರಿಗೆ ಬೇಸರವಾಗಿದೆ. ಈ ವ್ಯಾಪಾರವೇ ಬೇಡವಿತ್ತು" ಎಂದೆ. ಅವನು "ನಿಮಗೆ ಮರ್ಲಾ ಮರ್ರೆ? ಸೆಕೆಂಡ್ ಹ್ಯಾಂಡ್ ಗಾಡಿ ಸೇಲ್ ಮಾಡುವುದೇ ಹಾಗೆ. ಮತ್ತೆ ನೀವು ಹಣ ಹಿಂದೆ ಕೊಡಬೇಡಿ ಮತ್ತೆ" ಎಂದು ಖಡಾಖಂಡಿತವಾಗಿ ಹೇಳಿದ. ನಾನು ಸುಮ್ಮನಾದೆ.

ನನ್ನ ಮನಸ್ಸಿನಲ್ಲಿ ನಾನು ಭೋಜ ಪೂಜಾರಿಯವರಿಗೆ ಮೋಸ ಮಾಡಿದೆನೇ ಎಂದು ಒಂದು ಭಾವ ಉಳಿದುಬಿಟ್ಟಿತು. ಸುಮಾರು ಎರಡು ವರ್ಷದ ನಂತರ ಒಮ್ಮೆ ಅದೇ ಗಾಡಿಯಲ್ಲಿ ಹೋಗುತ್ತಿದ್ದ ಅವರನ್ನು ದೂರದಿಂದ ನೋಡಿದೆ. ನಂಬರ್ ನೋಡುತ್ತಿದ್ದಂತೆ ನನಗೆ ಅದರ ಗುರುತು ಸಿಕ್ಕಿತು. ನನ್ನ ಆ ಗಾಡಿಯ ಮೇಲೆ ನೆಟ್ಟ ನನ್ನ ಕಣ್ಣನ್ನು ತೆಗೆಯಲು ಆಗಲಿಲ್ಲ. ಏನೋ ನನಗಿನ್ನೂ ಆ ಗಾಡಿಯ ಮೇಲೆ ಮೋಹ ಹೋಗಲಿಲ್ಲವಲ್ಲ ಅನ್ನಿಸಿತು. ಆದರೆ ಭೋಜಪೂಜಾರಿಯವರನ್ನು ಮಾತಾಡಿಸಲು ಧೈರ್ಯವಾಗಲಿಲ್ಲ. ಏನೋ ಅಳುಕು.

ಮನಸ್ಸಿನ ಯಾವುದೋ ಮೂಲೆಯಲ್ಲಿ ನಾವು ಯಾವುದೇ ವಸ್ತು ಎಷ್ಟೇ ಚೆನ್ನಾಗಿ ಕೆಲಸ ಮಾಡಿದ್ದರೂ ಹಳೆಯದಾದ ಕೂಡಲೆ, ಅದು ಮೊದಲು ಮಾಡಿದ ಕೆಲಸವನ್ನು, ಸೇವೆಯನ್ನು ಮರೆತು, ಅದು ಇರುವುದೇ ಒಂದು ಅಡಚಣೆ, ದಂಡ ಎಂದು ಎಷ್ಟು ಸುಲಭದಲ್ಲಿ ಇನ್ನೊಬ್ಬರಿಗೆ ದಾಟಿಸಿಬಿಡುತ್ತೇವೆ? ಅನ್ನಿಸಿತು. ಹಾಲು ಬತ್ತಿಹೋದ ವಯಸ್ಸಾದ ಬತ್ತುಗಂದಿ ದನವನ್ನು ಸಾಹೇಬರಿಗೆ ಕೊಡುವ, ದುಡಿಯಲು ಆಗದ ವಯಸ್ಸಾದ ಹಿರಿಯರನ್ನು  ವೃದ್ಧಾಶ್ರಮಕ್ಕೆ ಕಳಿಸುವ ಮಕ್ಕಳ ಸ್ಥಾನದಲ್ಲಿ ನಿಂತ ಭಾವ ಮನಸ್ಸನ್ನು ಆವರಿಸಿತು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ