ಭಾನುವಾರ, ಡಿಸೆಂಬರ್ 7, 2014



          ಮನಸ್ಸಿಗೆ ಅನ್ನಿಸಿದ್ದು - ಹೇಳಿದ್ದು
ನಾನು ಚಿಕ್ಕವನಿರುವಾಗ, ಶಾಲೆಗೆ ರಜೆ ಇರುವಾಗ ಅಪ್ಪಯ್ಯನ ಜೊತೆ ಮೇಳದ ಜೊತೆಗೆ ಆಟ ನೋಡಲು ಹೋಗುತ್ತಿದ್ದೆ ಹದಿನೈದು ಇಪ್ಪತ್ತು ದಿನ ಮೇಳದಲ್ಲಿ ಅವರೊಟ್ಟಿಗೇ ಇರುತ್ತಿದ್ದೆ ದಿನಾ ಆಟ ನೋಡುತ್ತಿದ್ದೆ. ನಂತರ ಡಿಗ್ರಿ ಮುಗಿದು ಮನೆಯಲ್ಲಿ ಇರುವಾಗ ಅಪ್ಪಯ್ಯನ ಕಾಲು ನೋವಾಗಿದ್ದ ಅವಧಿಯಲ್ಲೂ ಅವರಿಗೆ ಸಹಾಯಕನಾಗಿ ಅವರು ಹೋದಲ್ಲೆಲ್ಲ ಅವರ ಚೀಲ ಹಿಡಿದು ಆಟಕ್ಕೆ ತಾಳಮದ್ದಲೆಗೆ ಹೋಗುತ್ತಿದ್ದೆ. ಹಾಗಾಗಿ ನಾನು ತುಂಬಾ ಆಟ ನೋಡಿದ್ದೇನೆ ಒಳ್ಳೊಳ್ಳೆಯ ತಾಳಮದ್ದಲೆಯ ಕೂಟಗಳಿಗೆ ಸಾಕ್ಷಿಯಾಗಿದ್ದೇನೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಬೆಂಗಳೂರು ಅಂತ ಅಪ್ಪಯ್ಯನ ಜೊತೆ ನೆರಳಿನಂತೆ ತಿರುಗಿದ್ದೇನೆ. ಅವರ ಹತ್ತಿರ ಇದ್ದ ಹಲವು ಪ್ರಸಂಗ ಪುಸ್ತಕಗಳನ್ನು ಓದಿ ನೋಡಿದ್ದೇನೆ ಅವರ ಜೊತೆ ಹಲವು ಬಾರಿ ಯಕ್ಷಗಾನದ ಬಗ್ಗೆ ಮಾತಾಡಿದ್ದೇನೆ ಅಭಿಪ್ರಾಯ ಹಂಚಿಕೊಂಡಿದ್ದೇನೆ. ಆದರೆ ನಾನು ಭಾಗವತಿಕೆ ಕಲಿಯಲಿಲ್ಲ. ಏಕೊ, ಕಲಿಯಬೇಕು ಅಂತ ತೀವ್ರವಾಗಿ ಅನ್ನಿಸಲೇ ಇಲ್ಲ. ಅವರೂ ಒತ್ತಾಯಿಸಲಿಲ್ಲ ಇರಲಿ ಬಿಡಿ ಅದರಿಂದ ನನಗಾಗಲೀ ಯಕ್ಷಗಾನಕ್ಕಾಗಲೀ ನಷ್ಟವಂತೂ ಆಗಿಲ್ಲ.
ಈಗೀಗ ಎಲ್ಲಾ ಯಕ್ಷಗಾನ ವಿದ್ವಾಂಸರು ಚಿಂತಕರು ವಿಮರ್ಶಕರು ಹೇಳುವುದು ಒಂದೆ. ಯಕ್ಷಗಾನ ಕುಲಗೆಡುತ್ತಿದೆ. ದಾರಿ ತಪ್ಪುತ್ತಿದೆ. ಇದಕ್ಕೆ ಭವಿಷ್ಯ ಇಲ್ಲ. ಈಗೀಗ ಬರುತ್ತಿರುವ ಬದಲಾವಣೆಗಳು ಯಕ್ಷಗಾನಕ್ಕೇ ಮಾರಕ ಎಂದು. ಹೌದು ಒಂದು ರೀತಿಯಲ್ಲಿ ನಾವು ನೋಡಿದ ಹಿಂದಿನ ಕಾಲದ ಆಟಗಳನ್ನು ನೆನಪಿಸಿಕೊಂಡು ಈಗ ಆಟಕ್ಕೆ ಹೋದರೆ ನಾವು ಆಟಕ್ಕೆ ಬಂದಿದ್ದಾ ಅಥವಾ ಇನ್ನೇನೋ ನೋಡುತ್ತಿದ್ದೇವೆಯೋ ಎಂಬಷ್ಟು ಈಗ ಪ್ರದರ್ಶನಗಳು ಬದಲಾಗುತ್ತಿದೆ. ಯಕ್ಷಗಾನದ ಅಪೂರ್ವವಾದ ಮಟ್ಟು, ಹಾಡಿನ ದಾಟಿಗಳು, ಮರೆಯಾಗಿ ಇಂದು ಹಿಂದುಸ್ಥಾನಿ ಸಂಗೀತಗಳು ಭಾವಗೀತೆಗಳು ನೇರವಾಗಿ ಸಿನಿಮಾ ಗೀತೆಗಳು ಅರ್ಧ ಗಂಟೆ ಆಲಾಪನೆಗಳು ತುಂಬಿಹೋಗಿವೆ. ಕೇವಲ ಜನರನ್ನು ರಂಜಿಸುವುದೇ ಉದ್ದೇಶ ಎಂಬಂತೆ ಪರಿಭಾವಿಸಲಾಗುತ್ತಿದೆ. ಕುಣಿತಗಳಲ್ಲಿ ಆಂಗ ಅಕಾರಗಳಿಲ್ಲದೇ ಆಂಗಿಕ ಚೇಷ್ಟೆಗಳೇ ಹೆಚ್ಚಾಗಿ ಕಲಾವಿದರು ಕುಳಿತು, ಮಲಗಿ, ಮುಂಗಾಲಲ್ಲಿ ನಡೆದು ಏನೇನೆಲ್ಲಾ ಸರ್ಕಸ್ ಮಾಡಿ ಇದೇ ಯಕ್ಷಗಾನ ಎಂಬಂತೆ ಬಿಂಬಿಸುತ್ತಿದ್ದಾರೆ. ಇವರೆಲ್ಲ ಅವರು ಅವರ ಜೀವನ ವೃತ್ತಿಗಳಿಗಷ್ಟೆ ಅಲ್ಲ ಅವರಿಗೆ ಕಲಿಸಿದ ಗುರುಗಳಿಗೇ ಅನ್ಯಾಯ ಮಾಡುತ್ತಿದ್ದಾರೆ ಅನ್ನದೇ ವಿಧಿ ಇಲ್ಲ. ಒಬ್ಬ ಕಲಾವಿದ ಪ್ರೇಕ್ಷನನ್ನು ತನ್ನ ಮಟ್ಟಕ್ಕೇ ಏರಿಸಬೇಕೇ ವಿನಹಾ ಅವನಿಗೆ ಖುಷಿಕೊಡುವ ನೆವನದಲ್ಲಿ ಅವನ ಮಟ್ಟಕ್ಕೆ ಇಳಿಯಬಾರದು ಅದಕ್ಕಾಗಿಯೇ ದಿ. ಕೆರೆಮನೆ ಶಂಭು ಹೆಗಡೆಯವರು ಇಂದಿನ ಕಲಾವಿದರಿಗೆ ಆಟಮಾಡುವುದು ಹೇಗೆ ಎಂದು ತರಬೇತಿ ಕೊಡುವುದರ ಜೊತೆಜೊತೆಗೆ ಪ್ರೇಕ್ಷಕರಿಗೆ ಯಕ್ಷಗಾನದ ಅಭಿಮಾನಿಗಳಿಗೆ ಆಟ ನೋಡುವುದು ಹೇಗೆ ? ಎಂಬ ಬಗ್ಗೆಯೂ ತರಬೇತಿ ಕೊಡಬೇಕು ಎಂಬಂತಹಾ ಮಾತನ್ನು ಒಂದು ಸಂದರ್ಶನದಲ್ಲಿ ಆಡಿದ್ದರು.
ಅಂದ ಮಾತ್ರಕ್ಕೇ ಇಂದು ಒಳ್ಳೆಯ ಯಕ್ಷಗಾನ ಇಲ್ಲವೇ ಅಂದರೆ ಅದು ತಪ್ಪು . ಖಂಡಿತಾ ಇದೆ. ಈ ಸಿನಿಮಾ ಪದ್ಯಗಳನ್ನು ಹಾಡುವವರು ಸರ್ಕಸ್ ಕುಣಿತ ಮಾಡುವವರೇ ಅದ್ಭುತವಾಗಿ ಒಳ್ಳೆಯ ಪ್ರಭುದ್ಧ ಪ್ರದರ್ಶನವನ್ನೂ ನೀಡಬಲ್ಲರು. ಹಾಗಾಗಿ ನಾವು ಆಟ ನೋಡಲೇಬೇಕು. ನೋಡದಿದ್ದರೆ ಒಳ್ಳೆಯದೂ ಇಲ್ಲ ಕೆಟ್ಟದ್ದೂ ಇಲ್ಲ ಅಂತ ಆಗಿಬಿಡುತ್ತದೆ.
ಹೌದು ಯಾವುದೇ ಕಲೆ ನಿಂತ ನೀರಾಗಬಾರದು ಬದಲಾವಣೆ ಬೇಕೇ ಬೇಕು. ಹೊಸ ಹೊಸ ಸಾಧ್ಯತೆಗಳತ್ತ ತೆರೆದುಕೊಳ್ಳಬೇಕು.  ಆದರೆ ಆ ಬದಲಾವಣೆಗಳು ಕಲೆಗೆ ಪೂರಕವಾಗಿರಬೇಕೆ ಹೊರತು ಮಾರಕವಾಗಬಾರದು. ಹಿಂದೆ ಹೇಳುವುದಿತ್ತು ಸತ್ವಸಾರ ಇರುವ ಬದಲಾವಣೆಗಳು ಹೊಸತನಗಳು ಕಲೆಯೊಂದಿಗೆ ಲೀನವಾಗಿ ಶಾಶ್ವತವಾಗಿ ಉಳಿಯುತ್ತದೆ ಸತ್ವವಿಲ್ಲದ ಜಳ್ಳು ಸ್ವಲ್ಪ ಕಾಲದಲ್ಲಿ ಪ್ರಯೋಗವೆಂಬಂತೆ ಮರೆಯಾಗಿ ಹೋಗುತ್ತದೆ ಎಂದು. ಒಬ್ಬ ಕೃಷಿಕ ಭತ್ತದ ಹೊಸಹೊಸ ತಳಿಗಳನ್ನು ಹುಡುಕಿ ಭತ್ತ ಬೆಳೆದು ಲಾಭ ಗಳಿಸಬೇಕು. ಆದರೆ ಹೊಸತಳಿಗಳನ್ನು ಸಂಶೋದಿಸುವ ನೆಪದಲ್ಲಿ ಬತ್ತದ ಬದಲು ಗೋದಿ ಬೆಳೆಯಬಾರದು. ಅದು ಬೇಕಾದ ಬದಲಾವಣೆಯಲ್ಲ. ಆ ಎಚ್ಚರ ಸದಾ ಇರಬೇಕು.
ಕಲಾವಿದನಲ್ಲಿ ಕಲಿಯುವ ತುಡಿತ ಅನವರತವೂ ಇರಬೇಕು. ಅವನು ದೈನ್ಯತೆಯಿಂದ ದಿವ್ಯತೆಯೆಡೆಗೆ ಸಾಗಬೇಕು ಎಂಬ ಮಾತಿದೆ. ತಾನು ಕಲಿತಾಯಿತು ಎನ್ನುವ ಕಲಾವಿದ, ಬೇರೆಯವರು ನನಗೆ ಏನು ಹೇಳುವುದು? ಎನ್ನುವ ಕಲಾವಿದನ ಬೆಳವಣಿಗೆ ನಿಂತು ಹೋಗಿಬಿಡುತ್ತದೆ.ಈ ಕಲೆ ಹಣವನ್ನೂ ಹೆಸರನ್ನೂ ಕೊಡುವುದರಿಂದ ಇದನ್ನೇ ನಂಬಿ ಬದುಕುವ ಕಲಾವಿದನಲ್ಲಿ ದೈನ್ಯತೆ ಇಲ್ಲದಿದ್ದರೆ ಕಲಾಭಿಮಾನಿಗಳ ಅವಲಂಬನೆ ಇಲ್ಲದಿದ್ದರೆ ಬೇಗನೇ ಭ್ರಮನಿರಸನ ಹೊಂದಿ ಹುಚ್ಚನಾಗಿ ಬಿಡುತ್ತಾನೆ.
ಇನ್ನು ಪ್ರದರ್ಶನದ ಮಟ್ಟಿಗೆ ಹೇಳುವುದಾದರೆ. ಈ ಪ್ರದರ್ಶನ ಶಬ್ಧದಲ್ಲಿಯೇ ದರ್ಶನ ಎಂಬುದು ಕೂಡ ಇದೆ ಎನ್ನುವ ಎಚ್ಚರ ಪ್ರತೀ ಕಲಾವಿದನಿಗೆ ಬೇಕೇ ಬೇಕು. ಕಲಾವಿದರಲ್ಲಿ ಎರಡು ಬಗೆಯಂತೆ ಒಂದು ಮೇರು ಪ್ರತಿಭೆಗಳು ಇನ್ನೊಂದು ಸಾಗರ ಪ್ರತಿಭೆಗಳು. ಈ ಮೇರು ಪ್ರತಿಭೆಯ ಕಲಾವಿದರು ಬೇರೆ ಕಲಾವಿದರ ಬಗ್ಗೆ ಯೋಚಿಸುವುದೇ ಇಲ್ಲ ಎದುರು ಕಲಾವಿದರೊಂದಿಗೆ ಹೊಂದಾಣಿಕೆ ಬೇಡ. ಇತರರೊಂದಿಗೆ ಪಾತ್ರದ ಬಗ್ಗೆ ಚರ್ಚಿಸುವುದೂ ಬೇಕಿಲ್ಲ. ಅವರದ್ದು ಒಂದು ಚಂದ ಆದರೆ ಸಾಕು. ಈಗೀಗ ಇಂತಹಾ ಕಲಾವಿದರೇ ಹೆಚ್ಚು ಅಂತ ನನ್ನ ಭಾವನೆ . ನನ್ನ ಅನಿಸಿಕೆ ತಪ್ಪು ಇದ್ದರೂ ಇದ್ದಿತು. ಹೌದಾಗಿದ್ದರೆ ಕ್ಷಮಿಸಿ.
ಇನ್ನೊಂದು ಪ್ರಕಾರದ ಕಲಾವಿದರು ಸಾಗರ ಪ್ರತಿಭೆಗಳು. ಇವರಿಗೆ ಓಟ್ಟಾರೆ ಪ್ರದರ್ಶನ ಚೆನ್ನಾಗಿ ಆಗಬೇಕು. ಇವರು ತಮ್ಮ ಪತ್ರದ ಬಗ್ಗೆ ಮುಂಚಿತವಾಗಿ ತಯಾರಿ ಮಾಡಿಕೊಂಡೇ ರಂಗಸ್ಥಳಕ್ಕೆ ಬರುತ್ತಾರೆ. ಎದುರು ಪಾತ್ರದವರು ಏನು ಹೇಳುತ್ತಾರೆ? ಅದಕ್ಕೆ ತಾನು ಏನು ಉತ್ತರ ಕೊಡಬೇಕು? ಯಾವ ಪಧ್ಯಕ್ಕೆ ಎಷ್ಟು ಅರ್ಥ ಹೇಳಬೇಕು? ಏನು ಹೇಳಬೇಕು? ಎಂದು ಮುಂಚಿತವಾಗಿ ಮನನ ಮಾಡಿಕೊಂಡಿರುತ್ತಾರೆ. ಭಾಗವತರ ಹತ್ತಿರ ಮೊದಲೇ ಮಾತಾಡಿ ಕೊಂಡು ಯಾವ ಪದ್ಯಕ್ಕೆ ಪುನರಾವರ್ತನೆ ಬೇಕು ಯಾವ ಪದ್ಯಕ್ಕೆ ಚಾಲು ಕುಣಿತ ಬೇಕು ಎಂದೆಲ್ಲಾ ಸುಮಾರಾಗಿ ಮೊದಲೇ ತೀರ್ಮಾನ ಆಗಿ ಬಿಟ್ಟಿರುತ್ತದೆ. ಇಂತಹಾ ಕಲಾವಿದರು ಸೇರಿ ಒಂದು ಪ್ರದರ್ಶನ ಮಾಡಿದರೆ ಅದು ಬಹುತೇಕ ಯಶಸ್ವೀ ಪ್ರದರ್ಶನ ಆಗುತ್ತದೆ. ಮತ್ತೆ ಒಂದು ಪ್ರದರ್ಶನ ಯಶಸ್ವಿ ಆಗುವುದು ಬಿಡುವುದು ಆಯಾಯ ಕಲಾವಿದನ ಅಂದಿನ ಮನೋಧರ್ಮ ,   ಪ್ರೇಕ್ಷಕರ ಅದೃಷ್ಟ.
ಮೊದಲು ಭಾಗವತರೇ ಯಕ್ಷಗಾನ ಪ್ರದರ್ಶನದ ನಿರ್ದೇಶಕರಾಗಿರುತ್ತಿದ್ದರು. ಅವರು ಹೇಳಿದಂತೆ ಕತೆ ಸಾಗುತ್ತಿತ್ತು. ಯಾವ ಪ್ರಸಂಗದಲ್ಲಿ ಯಾವುದು ಮುಖ್ಯ? ಎಲ್ಲಿ ಓಡಿಸಬಹುದು? ಎಲ್ಲಾ ಅವರೇ ನೋಡಿ ಕೊಳ್ಳುತ್ತಿದ್ದುದು. ಈಗ ಕಾಲ ಬದಲಾಗಿದೆ. ಎಲ್ಲಾ ಕಲಾವಿದರಿಗೂ ಅವಕಾಶ ಕೊಡಬೇಕು. ಎಲ್ಲರೂ ದೊಡ್ಡದೊಡ್ಡಕಲಾವಿದರೆ, ಆದ್ದರಿಂದ ಭೀಷ್ಮ ವಿಜಯ ಆದರೆ ಸಾಲ್ವ ಅಂಬೆಯರ ಸಂವಾದ ಕಾಲಮಿತಿ ಯಕ್ಷಗಾನದಲ್ಲೂ ಅರ್ಧ ಭಾಗ ತಿನ್ನುತ್ತದೆ. ಕರ್ಣಾರ್ಜುನ ಆದರೆ ಕರ್ಣನಿಗಿಂತ ಶಲ್ಯ ಕೃಷ್ಣರೇ ಪ್ರದರ್ಶನವನ್ನು ಆವರಿಸಿ ಬಿಡುತ್ತಾರೆ. ಚಿತ್ರಾಕ್ಷಿ ಕಲ್ಯಾಣ ಅದರೆ ವಾರಿಜಾಂಬಕಿ ಲಾಲಿಸು ಅರ್ಧ ಗಂಟೆಗೂ ಹೆಚ್ಚು ಕಾಲ ತೆಗೆದುಕೊಳ್ಳುತ್ತದೆ. ಗದಾಯುದ್ಧ ಆದರೆ ಕಪಟ ನಾಟಕ ರಂಗ, ಭಾಗವತರೂ ಕೌರವನೂ ಸ್ಪರ್ಧೆಗಿಳಿದು ಒಬ್ಬರು ಸೋಲುವವರೆಗೂ ಪದ್ಯ ಕುಣಿತ ಸಾಗುತ್ತದೆ ಹೀಗೆ.
ಹೀಗಾಗಬಾರದು. ಪ್ರದರ್ಶನದ ಒಟ್ಟಂದಕ್ಕೆ ಇದು ಮಾರಕ. ಅದನ್ನು ನೋಡುವುದಕ್ಕಾಗಿಯೇ ಪ್ರೇಕ್ಷಕರು ಬರುತ್ತಾರೆ ಎಂಬ ಮನೋಭಾವ ಕಲಾವಿದರಿಗಿದ್ದರೆ ಬರೀ ಆ ಭಾಗವನ್ನು ಮಾಡಲಿಕ್ಕೇ ಒಂದು ಪ್ರದರ್ಶನ ಏರ್ಪಡಿಸಲಿ ಅಲ್ಲವೇ?
 ಹಿಂದೆ ಒಂದು ಕಾಲ ಇತ್ತು. ಅದನ್ನು ಯಕ್ಷಗಾನದ ಸ್ವರ್ಣಯುಗ ಎಂದುಹಿರಿಯರು ಹೇಳುವುದನ್ನು ಕೇಳಿದ್ದೇನೆ. ಸಾಲಿಗ್ರಾಮ ಮೇಳ ಅಮೃತೇಶ್ವರಿ ಮೇಳ, ಜನ ಈಗಲೂ ನೆನಪಿಸಿಕೊಳ್ಲುತ್ತಾರೆ ಭೀಷ್ಮ ಭೀಷ್ಮ ಭೀಷ್ಮ ಚಂದ್ರಹಾಸ - ಬೇಡರ ಕಣ್ಣಪ್ಪ. ಭಸ್ಮಾಸುರ - ರಾಜಾ ಯಯಾತಿ, ಇಡಗುಂಜಿ ಮೇಳದ ಹರಿಶ್ಚಂದ್ರ, ನಳದಮಯಂತಿ ಒಂದೇ ಎರಡೇ...... .ಆಗಿನ ಕಲಾವಿದರು ಇದ್ದಕ್ಕಿದ್ದಂತೆ ರಾತ್ರಿ ಬೆಳಗಾಗುವುದರೊಳಗೆ ಪ್ರಸಿದ್ಧಿಗೆ ಬಂದವರಲ್ಲ. ಹಲವಾರು ವರ್ಷಗಳಿಂದ ಹಿರಿಯ ಕಲಾವಿದರನ್ನು ನೋಡಿ, ಅನುಸರಿಸಿ ಬೆಳೆದು ಬಂದವರು. ಅನುಭವದ ಮೂಸೆಯಲ್ಲಿ ಮೈತಳೆದು ಬಂದವರು. ಆಗ ಭಾಗವತರ ಪ್ರಯತ್ನವೂ ಅಷ್ಟೇ. ಅಂತಹವರ ಸಾಲಿನಲ್ಲಿ ನಮ್ಮ ತಂದೆ ನಾರ್ಣಪ್ಪ ಉಪ್ಪೂರರು ಕೆಪ್ಪೆಕೆರೆ ಸುಬ್ರಾಯ ಭಾಗವತರು. ದಾಸ ಭಾಗವತರೂ ನೆಬ್ಬೂರರು ಕಾಳಿಂಗ ನಾವಡರು ದಾರೇಶ್ವರರು... ಬರುತ್ತಾರೆ.  ಅದನ್ನು ಹೇಳಲಿಕ್ಕೆ ಹೋದರೆ ಅಂತ್ಯವೇ ಇಲ್ಲ.

                                                                                        ದಿನೇಶ ಉಪ್ಪೂರ
                                                                ಅಂಬಾಗಿಲು ಸಂತೆಕಟ್ಟೆ ಅಂಚೆ
                                                                           ಉಡುಪಿ -5

ಗುರುವಾರ, ಆಗಸ್ಟ್ 14, 2014



ಕಲಾವಿದರು ಹಾಗೂ ಹವ್ಯಾಸಿ ಕಲಾವಿದರು
ದಿನೇಶ ಉಪ್ಪೂರ
                ಹವ್ಯಾಸಿ ಕಲಾವಿದರು ಮತ್ತು ಸಂಘಟನೆ ಮತ್ತು ಅವರ ಸಮಸ್ಯೆಗಳು ಎಂಬ ವಿಷಯದ ಬಗ್ಗೆ ಬರೆಯಬೇಕು ಎಂದು ಒಂದು ಪತ್ರಿಕೆಯ ಸಂಪಾದಕರಿಂದ ಆಹ್ವಾನ ಬಂದಾಗ, ಮೊದಲಿಗೆ ನನಗನ್ನಿಸಿದ್ದು ಹವ್ಯಾಸಿ ಕಲಾವಿದರು ಎಂದರೆ ಯಾರು? ಕಲಾವಿದರಲ್ಲಿ ಹವ್ಯಾಸಿಗಳು, ವೃತ್ತಿ ಪರರು ಎಂದೋ, ವ್ಯವಸಾಯಿಗಳು, ಪ್ರಯೋಗಶೀಲರು ಎಂದೋ ವಿಂಗಡಣೆ ಮಾಡುವುದು ಈಗಿನ ಯಕ್ಷಗಾನ ವಾತಾವರಣದಲ್ಲಿ  ಸಾಧ್ಯವೇ? ಹಾಗೆ ಮಾಡಿದರೆ ಈಗ ಕಾಲಮಿತಿ ಎಂಬ ಹಣೆಪಟ್ಟಿ ಕಟ್ಟಿಕೊಂಡು ತಿರುಗಾಟ ಮಾಡುತ್ತಿರುವ ಪ್ರಬುದ್ಧ ಕಲಾವಿದರ ತಂಡಗಳನ್ನು ಯಾವ ಗುಂಪಿಗೆ ಸೇರಿಸಬೇಕು? ಏಂದು. ಯಾಕೆಂದರೆ ಅಂತಹಾ ತಂಡಗಳಲ್ಲಿ. ವ್ಯವಸಾಯೀ ಮೇಳಗಳಂತೆ ಸೇವೆ ಆಟ,  ಖಾಯಂ ಆರು ತಿಂಗಳ ತಿರುಗಾಟ, ಮಳೆಗಾಲದ ಬಿಡುವು ಇತ್ಯಾದಿಗಳು ಅವರಿಗೆ ಇರುವುದಿಲ್ಲ ಇವರಲ್ಲಿ ವೃತ್ತಿ ಕಲಾವಿದರ ಜೊತೆ ಬೇರೆ ಖಾಯಂ ಉದ್ಯೋಗದಲ್ಲಿರುವವರು ಇರುತ್ತಾರೆ .ಹಾಗಂತ ಅವರನ್ನು ಹವ್ಯಾಸಿಗಳು ಅಂತ ಕರೆಯಲು ಆಗುವುದಿಲ್ಲ. ಇವರ ವಿಂಗಡಣೆ ಹೇಗೆ? ಇಂಗ್ಲೀಷಿನಲ್ಲಾದರೆ ಮೆಚ್ಯುರ್ ಎಮೆಚ್ಯುರ್, ಅಂದರೆ ಒಬ್ಬರು ಕಲಿತವರು ಮತ್ತೊಬ್ಬರು ಕಲಿಯುವವರು.  
ಈ ಎಮೆಚ್ಯುರ್ ಗುಂಪನ್ನು ಹವ್ಯಾಸಿಗಳು ಎಂದುಕೊಂಡರೆ ಅವರಲ್ಲಿ ಕಲೆಯ ಆಸಕ್ತಿಯಿರುವ ಹಲವು ಗೆಳೆಯರನ್ನು ಕೂಡಿಸಿಕೊಂಡು ಒಬ್ಬ ಗುರುಗಳನ್ನು ಆರಿಸಿಕೊಂಡು ನಿಯಮಿತವಾಗಿ ಒಂದು ಸ್ಥಳದಲ್ಲಿ ಸೇರಿ ಯಕ್ಷಗಾನದ ತಾಳ,ಕುಣಿತ ಕಲಿತು ಯಾವುದಾದರೂ ಒಂದು ಪ್ರಸಂಗದ ಬಗ್ಗೆ ಅಭ್ಯಾಸ ಮಾಡಿಕೊಂಡು ಅದರ ಅರ್ಥ ಬರೆದುಕೊಂಡು ಬಾಯಿಪಾಠ ಮಾಡಿಕೊಂಡು, ಅವರಿವರನ್ನು ಕೇಳಿ, ಬೇಡಿ ಹಣಹೊಂದಿಸಿ ಒಂದೋ ಎರಡೋ ಪ್ರದರ್ಶನ ಮಾಡಿ ಕೈ ಸುಟ್ಟುಕೊಂಡು ತೃಪ್ತಿ ಪಟ್ಟುಕೊಳ್ಳುವವರ ಗುಂಪು ಎನ್ನಬಹುದು. ಅವರಿಗೆ ಸಮಸ್ಯೆಗಳೇ ಇರುವುದಿಲ್ಲ ಅಥವಾ ಎಲ್ಲವೂ ಸಮಸ್ಯೆಗಳೇ. ಒಂದು ಚಟ. ಅವರ ಉತ್ಸಾಹವೇ ಪ್ರದರ್ಶನಕ್ಕೆ ಹೇತುವೇ ಹೊರತು ಲಾಭ ನಷ್ಟದ ಇಷ್ಟ ಕಷ್ಟಗಳ ಗೊಡವೆ ಅವರಿಗಿರುವುದಿಲ್ಲ. ಅದರಿಂದಲೇ ಅವರು ಜೀವನ ನಡೆಸಬೇಕಾಗಿರುವುದಿಲ್ಲ. ಆದರೆ ಇವರಂತೆ ಇಂದು ಹಲವಾರು ಕಾಲಮಿತಿ ತಂಡಗಳು ಅಲ್ಲಿ ಇಲ್ಲಿ ಪ್ರದರ್ಶನ ನೀಡುತ್ತಿವೆ.ಅವರು ವೃತ್ತಿ ಕಲಾವಿದರನ್ನು, ಪ್ರವೃತ್ತಿ ಕಲಾವಿದರನ್ನು ಸೇರಿಸಿಕೊಂಡು ವಿವಿದೆಡೆ ವಿಜ್ರಂಭಣೆಯಿಂದ ಅಲ್ಲಲ್ಲಿ ಪ್ರದರ್ಶನ ಏರ್ಪಡಿಸುತ್ತಾರೆ. ಇವರನ್ನು ಅಲ್ಲಲ್ಲಿ ಇರುವ ಆ ಕಲಾವಿದರ ಅಭಿಮಾನಿಗಳು, ಸಂಘಟಕರು ಕರೆಸಿ ಪ್ರದರ್ಶನ ಏರ್ಪಡಿಸುವುದರಿಂದ ಇವರಿಗೆ ಸಂಭಾವನೆ, ವ್ಯವಸ್ಥೆಗಳ ಕೊರತೆಗಳು ಇರುವುದಿಲ್ಲ. ಅವರಿಗೆ ಆಟ ಮಾಡಿ ಹೋಗುವುದು ಹೊರತುಪಡಿಸಿದರೆ ಬೇರೆ ಯಾವುದೇ ಸಮಸ್ಯೆಗಳೂ ಇರುವುದಿಲ್ಲ.
ಮೇಲೆ ತಿಳಿಸಿದಂತೆ ಕೇವಲ ಒಂದೆರಡು ಆಟದ ಮಟ್ಟಿಗೆ ಯಕ್ಷಗಾನ ಕಲಿತು ಆಟ ಮಾಡಿ ಕೈತೊಳೆದು ಕೊಳ್ಳುವ ಕಲಾವಿದರನ್ನು ಹವ್ಯಾಸಿಗಳೆಂದುಕೊಂಡರೆ ಅವರ ಸಮಸ್ಯೆಗಳು ಒಂದೆರಡಲ್ಲ. ಯಕ್ಷಗಾನ ಕಲಿಸುವವರನ್ನು ಹುಡುಕಿ ಕರೆಸಬೇಕು. ಭಾಗವತರು ಹಿಮ್ಮೇಳವನ್ನು ಹೊಂದಿಸಿಕೊಳ್ಳಬೇಕು. ವೇಷಭೂಷಣದವರಿಗೆ ಮುಂಚಿತವಾಗಿ ತಿಳಿಸಿ ದಿನ ನಿಶ್ಚಯಿಸಬೇಕು. ಪಾತ್ರಗಳನ್ನು ಹಂಚುವಾಗ ಗೊತ್ತಿಲ್ಲದವರಿಗೆ ಕಲಿಸಿ ಗೊತ್ತಿದ್ದವರಿಗೆ ಅವರಿಗೆ ಗೊತ್ತಿರುವುದನ್ನು ಪ್ರದರ್ಶಿಸಲು ಅವಕಾಶ ನೀಡಬೇಕು ಅವರಿಗೆ ಅವರು ಮಾಡುವ ತರಹದ ವೇಷವನ್ನೇ ಕೊಡಬೇಕು ಟ್ರಯಲ್ ವ್ಯವಸ್ಥೆ ಅದಕ್ಕೆ ಬಾರದವರನ್ನು ಮನಒಲಿಸಿ ಕರೆದುತಂದು ಎದುರು ಪಾತ್ರಗಳಿಗೆ ಹೊಂದಾಣಿಕೆ ಮಾಡಿಕೊಳ್ಳುವಂತೆ ಮಾಡಬೇಕು. ಪ್ರದರ್ಶನದ ದಿನವಂತೂ ಕಲಾವಿದರನ್ನು ಮುಂಚಿತವಾಗಿ ಬರಹೇಳಿ ಅವರಿಗೆ ಮುಖವರ್ಣಿಕೆ ಮಾಡಿಸಿ ವೇಷತೊಡಿಸಿ ರಂಗಸ್ಥಳಕ್ಕೆ ಬಿಟ್ಟರೆ ಸಾಲದು ಅವರು ಸುಸ್ಥಾದರೆ ಗಾಳಿಹಾಕುವ ಕಿರೀಟಬಿಗಿದು ತಲೆನೋವು ಬಂದು ವಾಂತಿ ಮಾಡಿಕೊಂಡರೆ ಆರೈಕೆಮಾಡಿ ಹುರಿದುಂಬಿಸುವ ಈ ಆಟ ಒಂದು ಮುಗಿದರೆ ಸಾಕು ಇನ್ನು ಇದರ ಸುದ್ಧಿ ಬೇಡವೇ ಬೇಡ ಎಂದು ಎಲ್ಲರಿಗೂ ಹೇಳಿ, ಆಟ ಮುಗಿಯುತ್ತಿದ್ದಂತೆ ಇನ್ಯಾವಾಗ ಮಾಡುವ ಎಂದು ತೃಪ್ತಿಯಿಂದ ಹೇಳುವ ವರೆಗೆ ಸಮಸ್ಯೆ ಇರಬಹುದು. ಆದರೆ ಈಗ ಆಲ್ಲಲ್ಲಿ ಪ್ರದರ್ಶನ ನೀಡಿ ಜನರ ಮನ ಗೆದ್ದಿರುವ ಕಾಲಮಿತಿ ತಂಡಗಳಿಗೆ ಇಂತಹಾ ಯಾವ ಸಮಸ್ಯೆಗಳೂ ಇರುವುದಿಲ್ಲ. ಇಂದಿನ ಚಿಟ್ಟಾಣಿಯವರ ವೀರಾಂಜನೇಯ ಯಕ್ಷಗಾನ ಮಂಡಳಿ, ಯಾಜಿ ಯಕ್ಷಬಳಗ, ವಿದ್ಯಾಧರ ಕಲಾ ತಂಡ, ಕೊಂಡದಕುಳಿಯವರ ತಂಡ ಕೆರೆಮನೆ ತಂಡ ಮೊದಲಾದ ಮೇಳಗಳಲ್ಲಿ ಇಂದು ಗೊತ್ತು ಪಡಿಸಿದ ದಿನಾಂಕದಂದು ನಿಗದಿಪಡಿಸಿದ ಕಲಾವಿದರೊಂದಿಗೆ ಬಂದು ಪ್ರದರ್ಶನ ನೀಡಿ ಅವರು ಪ್ರದರ್ಶನ ನೀಡಿ ಅವರು ಹೋಗಿ ಬಿಡುತ್ತಾರೆ ಅವರಿಗೆ ಇಂತಿಷ್ಟು ಅಂತ ಕೊಟ್ಟರೆ ಮುಗಿಯಿತು. ಎಲ್ಲ ಜವಾಬ್ದಾರಿ ಆಟ ಮಾಡಿಸಿದ ಸಂಘಟಕನಿಗೆ. ವ್ಯವಸಾಯಿ ಮೇಳಗಳಂತೆ ಮಾರನೆಯ ದಿನದ ಯೋಚನೆ ಅವರಿಗಿರುವುದಿಲ್ಲ. ಅವರಲ್ಲಿ ಸ್ವಂತ ಬೇರೆ ಉದ್ಯೋಗಿಗಳೂ ಇರುತ್ತಾರೆ.
ಆದರೆ ಇಂದಿನ ಸಾಕೇತ ಕಲಾವಿದರು, ಲಕ್ಷ್ಮಿ ಜನಾರ್ಧನ ಯಕ್ಷಗಾನ ಮಂಡಳಿ ಅಂಬಲಪಾಡಿ, ಚೇರ್ಕಾಡಿ ಮಕ್ಕಳಮೇಳ, ಸಾಲಿಗ್ರಾಮ ಮಕ್ಕಳ ಮೇಳ  ಇವರನ್ನು ಮೇಲಿನ ಗುಂಪಿಗೆ ಸೇರಿಸಬಹುದೇ? ಯಾಕೆಂದರೆ ಇವರೂ ಇಂದು ತಯಾರಿಯಿಲ್ಲದೇ ಉತ್ತಮ ಪ್ರದರ್ಶನ ಕೊಡಬಲ್ಲರು. ವೃತ್ತಿ ಮೇಳಗಳಂತೆ ಅವರದೇ ಆದ ವೇಷಭೂಷಣ, ಹಿಮ್ಮೇಳ, ರಂಗಸ್ಥಳ, ಲೈಟು, ಮೈಕು ಎಲ್ಲವೂ ಇದೆ. ಆದರೂ ಇವರನ್ನು ವ್ಯವಸಾಯೀ ಮೇಳಗಳ ಪಟ್ಟಿಗೆ ತರುವುದು ಕಷ್ಟವೇ. ಯಾಕೆಂದರೆ ಇಂತಹಾ ಮೇಳಗಳಲ್ಲಿ ಇಂದು ವೃತ್ತಿ ಮೇಳಗಳಲ್ಲಿ ಪ್ರಮುಖವಾಗಿ ಎದುರಿಸುತ್ತಿರುವ ಒಂದು ಊರಿನಿಂದ ಇನ್ನೊಂದು ಊರಿಗೆ ಪ್ರಯಾಣ, ಊಟ ಬಿಡಾರದ ವ್ಯವಸ್ಥೆ, ಅರ್ಧ ರಾತ್ರಿಯನಂತರದ ಪ್ರೇಕ್ಷಕರ ಕೊರತೆ, ಪ್ರದರ್ಶನಕ್ಕೆ ಹಣಸಂಗ್ರಹದ ಸಮಸ್ಯೆ, ಕಲಾವಿದರನ್ನು ಓಲೈಸುವ ಸಮಸ್ಯೆ ಇವೆಲ್ಲಾ ಇರುವುದಿಲ್ಲ
ಆದ್ದರಿಂದ ಯಕ್ಷಗಾನದಲ್ಲಿ ಹವ್ಯಾಸಿ ವ್ಯವಸಾಯಿ ಅಥವಾ ಮೆಚ್ಯುರ್ ಎಮೆಚ್ಯುರ್ ಎಂಬ ಅರ್ಥದಲ್ಲಿ ಕಲಾವಿದರನ್ನು ಮೇಳಗಳನ್ನು ವಿಂಗಡಿಸುವುದು ಸ್ವಲ್ಪ ಕಷ್ಟವೆ. ಅದರಲ್ಲೂ ಯಕ್ಷಗಾನ ಕಲೆಯಲ್ಲಿ ಒಂದು ಪ್ರತ್ಯೇಕ ವೈಶಿಷ್ಟ್ಯತೆ ಇದೆ ಎಂದು ಹೇಳಬಹುದಾಗಿದೆ.

ದಿನೇಶ ಉಪ್ಪೂರ

ಶನಿವಾರ, ಜುಲೈ 19, 2014



ನನ್ನ ಮನಸ್ಸಿಗೆ ಅನ್ನಿಸಿದ್ದು
      ನನಗೆ ಅನ್ನಿಸುವುದು ಹೀಗೆ. ಇತ್ತೀಚೆಗೆ ಯಕ್ಷಗಾನದಲ್ಲಿ ಏನೆಲ್ಲಾ ಬದಲಾವಣೆಯಾಗುತ್ತಿದೆ, ಆಟ ನೋಡುತ್ತಿದ್ದರೆ ನಾನು ಏನನ್ನು ನೋಡುತ್ತಾ ಇದ್ದೇನೆ ಎಂಬುದು ಮರೆತುಹೋಗುವಷ್ಟು.ಮುಖ್ಯವಾಗಿ ಕುಣಿತ ಭಾಗವತಿಕೆಯ ಭಾಗಗಳಲ್ಲಿ. ಇದೆಲ್ಲಾ ಅನಿವಾರ್ಯವಾಗಿತ್ತೇ? ಆಗಿತ್ತಾದರೆ ಯಾರಿಗೆ? ಯಾಕೆ? ಅದೂ, ಹೇಗೆ ಬೇಕಾದರೂ ಕುಣಿಯಬಹುದು, ಏನು ಬೇಕಾದರೂ ಹಾಡಬಹುದು ಎಂಬಷ್ಟರ ಮಟ್ಟಿಗೆ.
        ಕಲೆ ನಿಂತ ನೀರಾಗಬಾರದು ಬದಲಾವಣೆಯಾಗುತ್ತಲೇ ಇರಬೇಕು ಹೊಸಹೊಸ ದೃಷ್ಟಿ ಸೃಷ್ಟಿಗಳು  ಇರಲೇಬೇಕು ಆದರೆ ಅದು ಆ ಕಲೆಗೆ ಪೂರಕವಾಗಿರಬೇಕು ಅಂತಹಾ ಬದಲಾವಣೆಗಳಲ್ಲಿ ಗಟ್ಟಿತನ ಇದ್ದರೆ ಸತ್ವ ಇದ್ದರೆ ಅದು ಬಹು ಕಾಲ ಉಳಿದು ಕಲೆಯ ಜೊತೆಗೇ ಬೆರೆತುಹೋಗಿ ಉಳಿದು ಬಿಡುತ್ತದೆ. ಇಲ್ಲದಿದ್ದರೆ ಅದೊಂದು ಕೇವಲ ಪ್ರಯೋಗವೋ ಪ್ರಯತ್ನವೋ ಆಗಿಬಿಟ್ಟು ಸ್ವಲ್ಪ ಕಾಲದಲ್ಲಿಯೇ ಅಳಿದುಹೋಗಿ ನೆನಪಾಗಿ ಉಳಿದು ಬಿಡುತ್ತದೆ. ಹಾಗಾದರೆ ಇತ್ತೀಚಿನ ಈ  ಆರೇಳು ವರ್ಷಗಳಲ್ಲಿ ಯಕ್ಷಗಾನದಲ್ಲಿ ಆದ ಬದಲಾವಣೆಗಳು ಇಷ್ಟು ಕಾಲ ಉಳಿದು ಮುಂದುವರಿಯುತ್ತಿದೆ ಎಂದ ಮಾತ್ರಕ್ಕೆ ಅವು ಯಕ್ಷಗಾನ ಒಳಿತಿಗೆ ಬೇಕಾದ ಬದಲಾವಣೆಗಳೇ? ಯಕ್ಷಗಾನಕ್ಕೆ ಅದರದ್ದೆ ಆದ ರಾಗಗಳಿವೆ ಮಟ್ಟುಗಳಿವೆ ಎಂದು ಪ್ರತಿಪಾದಿಸಿದ ವಿದ್ವಾಂಸರು ನಾಚಿ ತಲೆ ತಗ್ಗಿಸುವಂತೆ ಮಾಡುವ ಅದೆಷ್ಟೋ ರಾಗಗಳು ಹಿಂದುಸ್ಥಾನಿ ಕರ್ನಾಟಕ ಸಂಗೀತ ಹೆಚ್ಚೇಕೆ ಹೊಸಹೊಸ ಸಿನಿಮಾದ ರಾಗಗಳು ಜನಪದ ಪದಗಳು ಅನಾಮತ್ತಾಗಿ ಆಟಗಳಲ್ಲಿ ಬಳಸಲಾಗುತ್ತಿದೆ. ಈವರೆಗೆ ಕಾಣದ ಮನಸ್ಸಿಗೆ ಒಪ್ಪದ ಯಕ್ಷಗಾನಕ್ಕೆ ಹೊಂದದ ವಿಕಾರವಾದ, ನಾಟ್ಯಶಾಸ್ತ್ರದಲ್ಲೂ ಸಿಕ್ಕದ ಕುಣಿತಗಳು ಇಂದು ಪ್ರೇಕ್ಷಕರನ್ನು ದಂಗುಬಡಿಸುತ್ತಿದೆ. ಬೇಕಾದವರು ನೋಡಲಿ ಬೇಡದವರು ಬಿಡಲಿ ಎಂಬ ದೋರಣೆ. ಮಾರುಕಟ್ಟೆಯಲ್ಲಿ ಸಿಗುವ ಅಗ್ಗದ ವಸ್ತುಗಳು ಸುಲಭವಾಗಿ ಜನರನ್ನು ತಲುಪುತ್ತದೆ. ಅಂತಹವರಿಗೋಸ್ಕರ ತಾವು ಕಲಿತಿರುವುದನ್ನು ಗಾಳಿಗೆ ತೂರಿ ಹೊಸತು ಕೊಡುವ ಹುಚ್ಚಿನಿಂದ ಭ್ರಮೆಯಿಂದ  ಇಷ್ಟೆಲ್ಲಾ ಮಾಡಬೇಕೆ?
          ಇಂತಹಾ ಕಲಾವಿದರನ್ನು ಒಪ್ಪಿಕೊಳ್ಳುವುದು ಎಷ್ಟು ಸರಿ? ಒಪ್ಪಿಕೊಳ್ಳದಿದ್ದರೆ ಏನು ಮಾಡಬೇಕು? ಹೇಗೆ ಸರಿಪಡಿಸಬೇಕು. ಕಲೆ ಒಬ್ಬರ ಸ್ವತ್ತಲ್ಲ ಯಕ್ಷಗಾನದಲ್ಲಿಯಂತೂ ಏನು ಬೇಕಾದರೂ ಮಾಡಬಹುದು. ಒಮ್ಮೆ ತೀರಾ ಗ್ರಾಮ್ಯವಾಗಿದ್ದ ಜಾಳುಜಾಳಾಗಿದ್ದ ಈ ಕಲೆಯನ್ನು ಸುಮಾರು ೧೯೬೮- ೭೨ ರ ಹಾಗೆ ಎಲ್ಲ ಕಲಾವಿದರನ್ನು ಕಲೆಹಾಕಿ ಸಮಾಲೋಚನೆ ಮಾಡಿ ಒಂದು ಶಿಸ್ತುಬದ್ದ ವ್ಯವಸ್ಥೆಗೆ ತಂದ ಶಿವರಾಮ ಕಾರಂತರಂತವರು ಇನ್ನೊಮ್ಮೆ ಹುಟ್ಟಿ ಬರುವುದು ಸಾಧ್ಯವೇ?.ಬಂದರೂ ಇನ್ನೊಮ್ಮೆ ಅಂತಹಾ ಸಂಘಟನೆ ಸಾಧ್ಯವೇ? ಅಥವಾ ನಾವು ಕಾಣುವ ಕಣ್ಣಿನಲ್ಲೇ ದೋಷವಿದೆಯೇ? ಅಥವಾ…
         ಇತ್ತೀಚೆಗೆ ಯಕ್ಷಗಾನದ ಒಳ್ಳೆಯ ಸಂಸ್ಕಾರ ಇರುವ ಒಂದು ಗುಂಪು ಎಲ್ಲಿಯೋ ನಡೆಯುತ್ತಿರುವ ಒಂದು ಯಕ್ಷಗಾನ ಸ್ಪರ್ಧೆಯನ್ನು ಬಹಿಷ್ಕರಿಸಿ ಪ್ರತಿಭಟಿಸುವ ಹವಣಿಕೆಯಲ್ಲಿ ಇದೆ ಎಂದು ಕೇಳಿ,ತೀರಾ ಬೇಸರವಾಯಿತು. ಯಾಕೆಂದರೆ ಜಗತ್ತಿನ ಎಲ್ಲಾಕ್ಷೇತ್ರಗಳಲ್ಲೂ ಸ್ಪರ್ಧೆ, ಬಹುಮಾನ ಇತ್ಯಾದಿಗಳು ಇರುತ್ತವೆ. ಅದರ ನಿಯಮಾವಳಿಗಳನ್ನು ಆಯೋಜಿಸುವವರು ಮಾಡಿಕೊಂಡು ಸ್ಪರ್ಧಿಗಳಿಗೆ ಆಹ್ವಾನ ನೀಡುತ್ತಾರೆ, ಒಪ್ಪಿಗೆ ಇರುವವರು ಸ್ಪರ್ಧಿಸಬಹುದು. ಸ್ಪರ್ಧಿಗಳೆಲ್ಲಾ ಬಹುಮಾನ ಸಿಗಲೇ ಬೇಕೆಂದರೆ ಅದು ಸ್ಪರ್ಧೆ ಅಂತ ಆಗುವುದೇ ಇಲ್ಲ. ಒಂದು ಮುಖ್ಯವಾದ ಅಂಶವೆಂದರೆ ಆ ಸ್ಪರ್ಧೆ ನಿಸ್ಪಕ್ಷಪಾತವಾಗಿ ನಡೆಯಬೇಕು ಎಂಬುದು. ಸ್ಪರ್ಧೆಯ ನಿಯಮಾವಳಿ ಅಸ್ಪಷ್ಟವಿದ್ದರೆ ಒಪ್ಪಿಗೆ ಇಲ್ಲ ಅಂತದರೆ ಅವರು ಭಾಗವಹಿಸದಿದ್ದರಾಯಿತು. ಅಷ್ಟಕ್ಕೇ ಆ ಸ್ಪರ್ಧೆಯಿಂದ ಆ ಕಲೆಗೇ ಅನ್ಯಾಯವಾಗುತ್ತದೆ ಎಂದು ತಿಳಿಯಬೇಕಾಗಿಲ್ಲ. ಯಾಕೆಂದರೆ ಯಾವುದೇ ಒಂದು ಕಲೆ ಕಾಲಾವಿದರ ಸ್ವತ್ತಲ್ಲ. ಅದರ ಬದಲು ಆ ಕಲೆಯನ್ನು ಅದರಂತೆ ಉಳಿಸುವುದು ಅಥವಾ ತನ್ನ ಕೊಡುಗೆ ನೀಡಿ ಇನ್ನೂ ವಿಜ್ರಂಭಿಸುವಂತೆ ಮಾಡುವುದು ಕಲಾವಿದನ ಪ್ರೇಕ್ಷಕನ ಜವಾಬ್ದಾರಿಯಾಗಿರುತ್ತದೆ. ಆದರೆ ಇಂತಹಾ ಸ್ಪರ್ಧೆಗಳು ಒಂದು ಘಟನೆ, ಒಂದು ಕಾಲಘಟ್ಟಕ್ಕೆ ಸೀಮಿತವಾಗಿರುತ್ತದೆ. ಅದರಿಂದ ಕಲೆಗೆ ನಷ್ಟವಾಗುವುದಿಲ್ಲ ಕೆಡುವುದಿಲ್ಲ. ಇಂತಹಾ ಸ್ಪರ್ಧೆಗೆ ಕಲಾವಿದರು ದುಡ್ಡು ಹಾಕುವುದಿಲ್ಲ . ಒಂದು ಕೇಸೆಟ್ಟೋ ಪ್ರೋಗ್ರಾಮೋ ಮಾಡಿದಂತೆ ಅದರ ಲಾಭ ನಷ್ಟಗಳು ಸಂಘಟಕನ ತಲೆಯ ಮೇಲೆ ಬೀಳುತ್ತದೆ. ಅಷ್ಟಾಗಿ ಈ ಜಗತ್ತಿನಲ್ಲಿ ಒಂದು ಸ್ಪರ್ಧೆಯನ್ನು ಎಲ್ಲರಿಗೂ ಒಪ್ಪಿತವಾಗುವಂತೆ ನಡೆಸುವುದು ಅಸಾಧ್ಯವೇ ಸರಿ.ವಿರೋದ ಆಬಾಸಗಳು ಇದ್ದೇ ಇರುತ್ತವೆ.
        ಹಾಗಾಗಿ ನನಗೆ ಅನ್ನಿಸುವುದೇನೆಂದರೆ  ಇಂತಹಾ ಪ್ರತಿಭಟನೆ ಮಾಡುವ ಉತ್ಸಾಹವಿರುವವರು ಯಕ್ಷಗಾನಕ್ಕೆ ಶಾಶ್ವತವಾಗಿ ಹಾನಿ ಮಾಡುವ ಮೇಲೆಹೇಳಿದಂತಹಾ ಕಲಾವಿದರ ಭಾಗವತರ ವಿರುದ್ಧ ಪ್ರತಿಭಟನೆ ಮಾಡಬಹುದು. ಇಂತಹಾ ಗುಂಪು ದೊಡ್ಡದಿದ್ದಷ್ಟು ಕಲೆಯ ಕುಲಗೆಡಿಸುವವರನ್ನು ಎದುರಿಸುವುದು ಸುಲಬ. ಒಂದಷ್ಟು ಸಮರ್ಥರು ಕಲಾವಿದರು ಗೌರವಿಸುವಂತವರು ಇದರಲ್ಲಿ ಸೇರಿಕೊಂಡರೆ ಮತ್ತಷ್ಟು ಅನುಕೂಲ. ಕಲಾವಿದರನ್ನು ಕರೆಸಿ ಮನವೊಲಿಸುವುದು ಸರಳ. ಪಠ್ಯಮಾಡುವುದು ಮತ್ತೊಂದು ಮಾಡುವುದಕ್ಕಿಂತ ಇದು ಈಗ ಹೆಚ್ಚು ಪ್ರಸ್ತುತ. ಪ್ರದರ್ಶನದ ವೇಳೆಯೇ ಅದನ್ನು ನಿಲ್ಲಿಸಿ ತಪ್ಪನ್ನು ಹೇಳುವವರು ಹಿಂದೆ ಇದ್ದರೆಂದು ಕೇಳಿದ್ದೇನೆ. ಆದರೆ ಈಗ ಎಲ್ಲಿದ್ದಾರೆ? ಯಾರಿದ್ದಾರೆ ? ಹೇಳಿದರೆ ಯಾರು ಕೇಳುತ್ತಾರೆ?.  ಹೇಳುವವರಿಗೂ ಗೊತ್ತಿರಬೇಕಾದದ್ದು ಅಷ್ಟೇ ಮುಖ್ಯ. ಮತ್ತು ಅವರಿಗೆ ತನಗೆ ಗೊತ್ತಿದ್ದದ್ದೇ ಸರಿ ಎಂಬ ಧೋರಣೆಯೂ ಇರಬಾರದು. ಅಗತ್ಯದ ಬದಲಾವಣೆಯನ್ನು ಒಪ್ಪಿಕೊಂಡು ಒಟ್ಟಿಗೇ ಸಮಾಲೋಚನೆ ಮಾಡಿ ತೀರ್ಮಾನ ಮಾಡುವ ಅದನ್ನು ಎಲ್ಲರೂ ಒಪ್ಪುವಂತೆ ಮಾಡುವ ತಾಕತ್ತು ಇರುವವರಾಗಬೇಕಾದ್ದು ಮುಖ್ಯ. ಇದಮಿತ್ತಂ ಅಂತ ಮಾಡಬೇಕಾಗಿಲ್ಲ. ಇದಕ್ಕೆ ಎಷ್ಟುಮಂದಿ ಜೊತೆಗೂಡಲು ಸಿದ್ಧರಿದ್ದೀರಿ? ಅಭಿಯಾನಕ್ಕೆ ಸಿದ್ಧರಾಗಿ. ನಾನೂ ನಿಮ್ಮನ್ನು ಸೇರಿಕೊಳ್ಳುತ್ತೇನೆ. ಮುಂದೆ ಬನ್ನಿ ನೋಡುವ.
ನಿಮ್ಮ
ದಿನೇಶ ಉಪ್ಪೂರ

ಬುಧವಾರ, ಏಪ್ರಿಲ್ 30, 2014


                ರಮೇಶ ಉಪ್ಪೂರರ ನೆನಪು



ಎಲ್ಲರ ಮೆಚ್ಚಿನ ಹಾಲಾಡಿ ಅಪ್ಪಯ್ಯ (ನಾರ್ಣಪ್ಪ ಉಪ್ಪೂರರು ) ನ 30 ನೇ ಪುಣ್ಯ ತಿಥಿಯ ಈ ದಿನ (12.04.2014) ಅವರ ಸ್ಮರಣಾರ್ಥವಾಗಿ ನಡೆಸುತ್ತಿರುವ ಈ ಕಾರ್ಯಕ್ರಮದಲ್ಲಿ ಅವರ ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳು ಎಲ್ಲರೂ ಸೇರಿರುವ ಈ ದಿನದಂದು ದಿನೇಶ ನನ್ನ ಗಂಡ ರಮೇಶ (ನಾರಣಪ್ಪ ಉಪ್ಪೂರರ ಮಗ ರಮೇಶ ಉಪ್ಪೂರ ರು ಸಿಂಡಿಕೇಟ್ ಬ್ಯಾಂಕಿನಲ್ಲಿ ಆಪೀಸರ್ ಆಗಿ ಅಹಮದಾಬಾದ್ ನಲ್ಲಿ ಕೆಲಸ ಮಾಡುತ್ತಿರುವಾಗಲೇ ಹೃದಯಾಘಾತದಿಂದ ನಿಧನರಾದರು ) ರ ಬಗ್ಗೆ ಮಾತಾಡಿ ಅವರ ನೆನಪನ್ನು ಹಂಚ್ಕೊಳ್ಳಬೇಕು ಎಂದು ಹೇಳಿದ. ಅವರ ಬಾಳ ಸಂಗಾತಿಯಾಗಿ ನಾನೂ ಅವರ ಹವ್ಯಾಸಗಳ ಬಗ್ಗೆ ತಿಳಿಸಲಾ? ಆದರೆ ಅವು ನಿಮಗೆಲ್ಲಾ ಗೊತ್ತಿರೋದೆ.. ಆದ್ದರಿಂದ ತಿಳಿಸಲಾ ಅನ್ನೋದಕ್ಕಿಂತ ನೆನಪಿಸಲಾ ಅನ್ನೋದೇ ಸರಿ...
   ಮೊದಲಾಗಿ ನಿಮಗೇ ಗೊತ್ತಿದ್ದಂತೆ ಕಥೆ ಬರೆಯುವ ಹವ್ಯಾಸ ಅವರಿಗಿತ್ತು. ಉದಯವಾಣಿ,ತುಷಾರ, ಮಯೂರ, ಕರ್ಮವೀರ, ಸುಧಾ, ಇತ್ತೀಚೆಗೆ ದಿನೇಶ ತಿಳಿಸಿದ “ಪ್ರಕಾಶ” ಎಂಬ ಪತ್ರಿಕೆಗಳಲ್ಲಿ ಇವರು ಬರೆದ ಹಲವಾರು ಕಥೆಗಳು ಪ್ರಕಟವಾಗಿದ್ದವು. ಉದಯವಾಣಿ “ದೀಪಾವಳಿ” ವಿಶೇಷಾಂಕದಲ್ಲಿಯ ಕಥಾಸ್ಪರ್ಧೆಯಲ್ಲಿ ಒಮ್ಮೆ 2ನೇ. 3 ನೇ ಬಹುಮಾನಗಳು ಬಂದಿದ್ದವು ಎಂಬ ನೆನಪು. ಯಕ್ಷಗಾನದಲ್ಲಿ ತುಂಬಾ ಆಸಕ್ತಿ ಇದ್ದುದರಿಂದಲೋ ಏನೋ, ಅವರ ಹೆಚ್ಚಿನ ಕಥೆಗಳಲ್ಲಿ ಆಟದ ವಿಷಯ ಇಣುಕಿದ್ದು, ಒಂದೆರಡು ಕಥೆಗಳಲ್ಲಿ ಯಕ್ಷಗಾನ ಕಲಾವಿದರೇ ಕಥೆಯ ಮುಖ್ಯ ಪಾತ್ರಧಾರಿಗಳಾಗಿದ್ದೂ ಹೌದು. ದುರದೃಷ್ಟದಿಂದಲೋ, ದೂರದೃಷ್ಟಿಯ ಅಭಾವದಿಂದಲೋ ಈಗ ನನ್ನ ಹತ್ತಿರ ಇರುವುದು 4-5 ಕಥೆಗಳು ಮಾತ್ರ. ಬಹಳ ಚಿಕ್ಕ ವಯಸ್ಸಿನಲ್ಲೇ ಬರೆಯಲು ಪ್ರಾರಂಭ ಮಾಡಿದ್ದ ಅವರು ಸಾಧಾರಣ ೭೬-೭೭ ಇಸವಿ ತನಕವೂ ಬರೆಯುತ್ತಿದ್ದರು. ಆದರೆ ನಂತರ ಒಂದೂ ಕಥೆ ಬರೆಯಲೇ ಇಲ್ಲ. ಬಹುಶಃ ಬ್ಯಾಂಕಿಗೆ ಸೇರಿದ ಮೇಲೆ ಬದುಕಿನ ಕಥೆಯೇ ದೊಡ್ದದಾಗಿರಬೇಕು. ಹಿಂದಿನವರು ಹೇಳಿದ ಹಾಗೆ, ‘ಗಯನ ಕಣೆಂಗೆ’ ತಿರುಗುವ ಹಾಗಾಗಿತ್ತು. ನಮ್ಮ ಬದುಕು. ಕಡತೋಕ ಬಿಟ್ರೆ ಮತ್ತೆಲ್ಲಾ ಕಡೆ ತುಂಬಾ ಬೇಗ ಬೇಗ ಟ್ರಾನ್ಸ್ ಫರ್ಸ್. 2 ವರ್ಷ, 1 ವರ್ಷ ಒಂದ್ಸಲ 6 ತಿಂಗಳಿಗೂ ಆಗಿದ್ದಿತ್ತು. ಹೊಸ ಊರಿಗೆ ಹೋಗು, ಮನೆ ನೋಡು, ಮಕ್ಕಳ ಸ್ಕೂಲು ನೋಡು, ಅಫೀಸು ನೋಡು. ಈ ಗಲಾಟೆಯಲ್ಲಿ ಹವ್ಯಾಸ ದೂರವಾಯ್ತು ಅನ್ನಿಸುತ್ತೆ. ತುಂಬಾ ಒತ್ತಾಯ ಮಾಡಿದ್ದರಿಂದ ಒಂದೆರಡು ಹನಿಗವನಗಳನ್ನು ಬರೆದಿದ್ರು.....
   ಅಂದ ಹಾಗೆ ಒಂದು ವಿಷಯ ಹೇಳಲೇಬೇಕು. ಅವರದು ತುಂಬಾ ಸುಂದರವಾದ ಅಕ್ಷರಗಳಾಗಿದ್ದವು. ಮೊದಲು ಕೆಲಸವಿಲ್ಲದೆ ಸುಮ್ಮನೆ ಕುಳಿತಿದ್ದಾಗ ಅಮೃತೇಶ್ವರಿ ಮೇಳದಲ್ಲಿ ವಾಲ್ ಪೋಸ್ಟರ್ ಬರೆಯುವ ಕೆಲಸ ಮಾಡ್ತಿದ್ದರಂತೆ. ಶಿರ್ಶಿಯಲ್ಲಿರುವಾಗ ಏನೋ ಕಾರಣದಿಂದ ಬಲಗೈಯಲ್ಲಿ ಬರೆಯಲಾಗದಿದ್ದಾಗ ಆ ವಯಸ್ಸಿನಲ್ಲೂ ಹಟದಿಂದ ದಿನಾ ಎಡಗೈಯಲ್ಲಿ ಕಾಪಿ ಬರೆದು ಅಷ್ಟೇ ಸುಂದರವಾಗಿ ಎಡಗೈಯಲ್ಲಿ ಬರೆಯುತ್ತಿದ್ದರು.
ಇನ್ನು ಪೋಟೋಗ್ರಫಿ ಕೂಡ ಅವರ ಮತ್ತೊಂದು ನೆಚ್ಚಿನ ಹವ್ಯಾಸವಾಗಿತ್ತು. ಚೆಂದದ ಪೋಟೋ ತೆಗೆಯುವುದಲ್ಲದೆ, ಅವುಗಳನ್ನು ಮನೆಯಲ್ಲಿಯೇ ಸ್ವತಃ ಡೆವೆಲಪ್ ಮಾಡುವುದು ಕೂಡ ಅವರಿಗೆ ಇಷ್ಟವಾಗಿತ್ತು. ಕೃಷ್ಣಮೂರ್ತಿ ಅಣ್ಣಯ್ಯನ ಒಂದು ಹ್ಯಾಂಡ್ ಮೇಡ್ ಡೆವೆಲಪರ್ ಒಂದಿತ್ತು. ಕಡತೋಕಾದ ಮನೆಯಲ್ಲಿ ತೆಗೆದ ಪೋಟೋಗಳನ್ನು ವಾಶ್ ಮಾಡಿ ಪ್ರಿಂಟ್ ಹಾಕಿ ಒಣಗಿಸುವ ಸಂಭ್ರಮ ನೋಡಬೇಕಿತ್ತು. ರಾತ್ರಿ ಆದ ಮೇಲೆ ಬಾಗಿಲು ಹಾಕಿ, ರೆಡ್ ಲೈಟ್ ಮಾತ್ರ ಹಾಕಿಕೊಂಡು ನೆಗೆಟಿವ್ ವಾಶ್ ಮಾಡಿ, ಪ್ರಿಂಟ್ ಹಾಕಿ... ಚೆಂದ ಬಂದಾಗ ಕುಶಿಯೋ ಕುಶಿ. ಶೇಕ್ ಆಗಿ ಹಾಳಾದಾಗ ‘ಛೇ’ ಅಂತ ಬೇಜಾರು. ಈಗಿನ ಹಾಗೆ ಚೆಂದ ಬಂದ್ರೆ ಇಟ್ಟು, ಚೆಂದವಾಗ ಇದ್ರೆ ಡಿಲೀಟ್ ಮಾಡುವ ಡಿಜಿಟಲ್ ಕೆಮರಾ ಅಲ್ಲವಲ್ಲ. 32 ಪೋಟೋಗಳ ರೀಲ್, ಅವುಗಳ ಹಣೆಬರಹ ಪ್ರಿಂಟ್ ಹಾಕಿದ ಮೇಲೆ ತಿಳಿಯುವುದು. ಅವರು ತೆಗೆದ ಪೋಟೋಗಳ ದೊಡ್ಡ ಸಂಗ್ರಹವೇ ಇದೆ ಅನ್ನಬಹುದು.
 ಇನ್ನು ಯಕ್ಷಗಾನದ ಮನೆಯಲ್ಲಿ ಹುಟ್ಟಿ ಬಂದ ಮೇಲೆ ಸಹಜವಾಗಿಯೇ ಅವರಿಗೆ ಅದರಲ್ಲಿ ಆಳದ ಆಸಕ್ತಿ. ಉಳಿದ ಸಹೋದರರಂತೆ ಯಕ್ಷಗಾನದ ಯಾವ ವಿಭಾಗದಲ್ಲೂ ಸ್ವಂತ ಅನುಭವ ಇಲ್ಲದಿದ್ರೂ, ಅವುಗಳನ್ನು ಸಂಗ್ರಹಿಸಿ ಇಡುವ ಹವ್ಯಾಸ ಅವರಿಗೆ ತುಂಬಾ ಇಷ್ಟವಾಗಿತ್ತು. ವೀಡಿಯೋ ಇಲ್ಲದ ಕಾಲವದು. ಭಟ್ಕಳಕ್ಕೆ ಹೋಗಿ ಒಂದು ನ್ಯಾಷನಲ್ ಪ್ಯಾನಾಸಾನಿಕ್ ರೆಕಾರ್ಡರ್ ತಂದಿದ್ರು. ಎಲ್ಲಿ ಆಟಕ್ಕೆ ಹೋಗಬೇಕಾದ್ರೂ ಹೆಗಲಲ್ಲೊಂದು ಟೇಪ್ ರೆಕಾರ್ಡರ್ ಚೀಲ.  ನಾವಾಗ ಕಡತೋಕದಲ್ಲಿ 5 ವರ್ಷ ಇದ್ದೆವು. ಆಗ ನೋಡಿದ ಆಟಗಳು ಲೆಕ್ಕವಿಲ್ಲ. ಮಾಡಿದ ಕೆಸೆಟ್ ಗಳಿಗೂ ಲೆಕ್ಕವಿಲ್ಲ. ಅದಲ್ಲದೆ, ಆಗ ಕೋಟದಲ್ಲಿದ್ದ ನಮ್ಮ ಮನೆಯಲ್ಲಿ ಉಪ್ಪರಿಗೆಯ ಮೇಲೆ ಹಾಲಾಡಿ ಅಪ್ಪಯ್ಯ (ನಾರಣಪ್ಪ ಉಪ್ಪೂರರ)ನ ಅದೆಷ್ಟೋ ಪದ್ಯಗಳನ್ನು ರೆಕಾರ್ಡ್ ಮಾಡಿದ್ರು. ಹಾಗೆಯೇ ನಾವುಡರ, ದಾರೇಶ್ವರರ ಹಾಡುಗಳನ್ನು ರೆಕಾರ್ಡ್ ಮಾಡಿದ್ರು. ಈಗಲೂ ಆ ಕೆಸೆಟ್ ಗಳನ್ನು ಸಿ.ಡಿ. ಮಾಡಿ ದಿನೇಶ ಸಂಗ್ರಹಿಸಿದ್ದಾನೆ. 
  ಇನ್ನು ಇಂಗ್ಲೀಷ್, ಕನ್ನಡ ಕಾದಂಬರಿಗಳನ್ನು ತುಂಬಾ ಓದುತ್ತಿದ್ದರು. ನನಗೆ ಶಿವರಾಮ ಕಾರಂತರು, ಭೈರಪ್ಪನವರ ಹುಚ್ಚು ಹಿಡಿಸಿದವರೇ ಅವರು ಅನ್ನಬಹುದು. ಅವರ ಕಾದಂಬರಿಗಳ ಬಗ್ಗೆ ನಮ್ಮಲ್ಲಿ ಬೇಕಾದಷ್ಟು ವಾದಗಳಾದದ್ದು ಉಂಟು. ಹಾಗೆಯೇ ಹಳೆಯ ಹಾಡುಗಳಂದ್ರೆ ತುಂಬಾ ಇಷ್ಟವಾಗಿತ್ತವರಿಗೆ. ಮುಖೇಶ, ಎಮ್.ಡಿ. ರಫಿಯ ಹಾಡುಗಳಲ್ಲಿ ಮುಳುಗಿ ಏಳುತ್ತಿದ್ದರು. ಮತ್ತೆ ಸಮುದ್ರ, ಅದರ ದಂಡೆಯ ಮೇಲೆ ಕುಳಿತು ಗಂಟೆಗಟ್ಟಲೆ ಬೇಕಾದ್ರೂ ಕಳೀತಿದ್ರು.
ಇನ್ನೇನು ಹೇಳಲಿ? ಇಲ್ಲಿ ಇರುವವರಿಗೆ ಅವರು ಹೊಸಬರೂ ಅಲ್ಲ. ತಿಳಿಯದಿದ್ದವರೂ ಅಲ್ಲ. ಮನೆ, ಮಕ್ಕಳನ್ನು ತುಂಬಾ ಪ್ರೀತಿಸುತ್ತಿದ್ದ ಅವರು ಅಕಾಲದಲ್ಲಿ ಹೋಗಿ ಇವತ್ತಿನ ಪ್ರೋಗ್ರಾಂ ನಲ್ಲಿ ‘ನೆನಪುಗಳು’  ಆಗಿದ್ದು ನಮ್ಮ ದುರದೃಷ್ಟ. ಅಷ್ಟೇ.
ಕಳೆದ ಸಲ ಊರಿಗೆ ಹೋದಾಗ ನಮ್ಮ ಚೀಅಣ್ಣಯ್ಯ (ಶ್ರೀಧರ ಉಪ್ಪೂರ ) ಹೀಗೇ ಲೋಕಾಭಿರಾಮ ಮಾತನಾಡುತ್ತ ಅಲ್ಲಮ ಪ್ರಭು ಹೇಳಿದ ಒಂದು ವಾಕ್ಯ ಹೇಳಿದ. “ಮಾತು ಸೋತಿತು”. ಅವರ ವಿಷಯದಲ್ಲೂ ನಾನು ಅಷ್ಟೆ ಹೇಳಬಲ್ಲೆ.
                          “ ಮಾತು ಸೋತಿತು ”
                                                                                       - ಸಖು ರಮೇಶ್ ಉಪ್ಪೂರ