ಮಂಗಳವಾರ, ಸೆಪ್ಟೆಂಬರ್ 25, 2018

ದಿನೇಶ ಉಪ್ಪೂರ:

ಕಥನದೊಳಗೆ - 5

*ತೀರ್ಪು*

ಆವತ್ತು ಶಾರದಾ ಕಲ್ಯಾಣ ಮಂಟಪದಲ್ಲಿ ಊರಿನ ಸಂಬಂಧಿಕರ ಮನೆಯವರೊಬ್ಬರ ಮಗನ ಮದುವೆ. ಆಫೀಸಿನ ಕೆಲಸದ ಮಧ್ಯ ಮಧ್ಯಾಹ್ನದ ಊಟದ ಸಮಯಕ್ಕೆ ಸರಿಯಾಗಿ ಹೋಗಿ ಒಂದು ಮದುವೆಯ ಕಾರ್ಯಕ್ರಮದಲ್ಲಿ ಭಾಗಿಯಾಗಿ ಬರಬೇಕಾಗಿತ್ತು. ಗಡಿಬಿಡಿಯಲ್ಲಿ ಎದುರಿಗೆ ಸಿಕ್ಕ ಪರಿಚಯದವರನ್ನು, "ಹ್ವಾಯ್ ಹ್ಯಾಂಗಿದ್ರಿ? ಎಲ್ಲ ಸೌಖ್ಯವಾ?" ಎಂದು ನಕ್ಕು ಮಾತಾಡಿಸುತ್ತಾ, ಅವರು ಉತ್ತರಕೊಡುವ ಮೊದಲೇ ಕೈ ಎತ್ತಿ, "ಬತ್ತೆ ಅಕಾ" ಅಂತ ಹೇಳಿ, ಮಂಟಪಕ್ಕೆ ಹೋಗಿ ಅಲ್ಲಿಯ ಪೋಟೋಗ್ರಾಫರ್ ಮಧ್ಯ ನುಸುಳಿ ಮದುಮಗನ ತಲೆಯ ಮೇಲೆ ಅಕ್ಷತೆಕಾಳು ಹಾಕಿದೆ.
ಊಟಕ್ಕೆ ಇನ್ನೂ ರೆಡಿ ಆಗಿಲ್ಲ ಎಂಬುದನ್ನು ತಿಳಿದು,ಅಲ್ಲಿಯೇ ಹಾಲ್ ನ ಬದೀಯ ಒಂದು ಕುರ್ಚಿಯಲ್ಲಿ ಕುಳಿತು ಸುಮ್ಮನೇ ಸುತ್ತಲೂ ನೋಡಿದೆ.
ಒಬ್ಬರು ಸುಮಾರು ಎಪ್ಪತ್ತರ ಪ್ರಾಯದ ಮುದುಕರತ್ತ ನನ್ನ ದೃಷ್ಠಿ ನೆಟ್ಟಿತು. ಹೌದು! ಅವರೇ ಐತಾಳರು, ಪುಟ್ಟಯ್ಯ ಐತಾಳರು. ನಮ್ಮ ಮನೆಗೆ ಪುರೋಹಿತ್ಯಕ್ಕೆ ಆಗಾಗ ಬರುತ್ತಿದ್ದರು. ಸೊಂಟಕ್ಕೆ ಒಂದು ಪಾಣಿಪಂಚೆ, ಹೆಗಲಿನ ಮೇಲೆ ಒಂದು ಮಸುಕು ಪಾಣಿಪಂಚೆ. ಎದೆಗೂಡು ಕಾಣುವಂತಹ ತೆಳ್ಳಗಿನ ಶರೀರ. ಆದರೆ ಕಂಚಿನ ಕಂಠ. ಬ್ರಾಹ್ಮಣ ಕಳೆಬೀರುವ ತೇಜೋಪುಂಜ ಕಣ್ಣುಗಳು. ನೋಡಿದರೇ ಕಾಲು ಮುಟ್ಟಿ ನಮಸ್ಕರಿಸಬೇಕು ಎನ್ನುವಷ್ಟು ಗೌರವಮೂಡುವ ಆಕೃತಿ.
ಈಗ ವಯಸ್ಸಾಗಿದೆ. ಒಂದು ವೇಷ್ಠಿಯನ್ನು ಉಟ್ಟು ಮಸುಕಾದ ಅಂಗಿ ತೊಟ್ಟು ಮೂಲೆಯ ಕುರ್ಚಿಯಲ್ಲಿ ಎರಡೂ ಕೈಯಿಂದ ಒಂದು ಜಲ್ಲಿನ್ನು ಹಿಡಿದು ಆಧರಿಸಿ ಕುಳಿತಿದ್ದಾರೆ.
ಮುಖದಲ್ಲಿ ಬಿಳಿಕುರುಚಲು ಗಡ್ಡ. ಕಳಾಹೀನ ಕಣ್ಣುಗಳು . ಬಾಯಿಯ ಹಲ್ಲು ಹೋಗಿದ್ದರಿಂದ ಒಳಸರಿದ ಕಫೋಲಗಳು. ಅದು ಅವರೇ ಐತಾಳರು.
ನಾನು ಮೆಲ್ಲನೇ ಎದ್ದು ಒಮ್ಮೆ ಮಾತಾಡಿಸಿ ಬರುವ ಎಂದು ಅವರಿದ್ದಲ್ಲಿಗೆ ಹತ್ತಿರ ಹೋಗಿ, "ನಮಸ್ಕಾರಾ, ಎಂದು ಅವರ ಮುಂದೆ ಬಾಗಿ ಕಾಲು ಮುಟ್ಟಿ ನಮಸ್ಕರಿಸಿ, "ನನ್ನ ಗುರುತಾಯ್ತಾ?" ಎಂದೆ.
ಅವರು ನಿಧಾನವಾಗಿ ತಿರುಗಿ ಕೈಯನ್ನು ಎತ್ತಿ ಹಣೆಗೆ ಅಡ್ಡ ಹಿಡಿದು , "ಯಾರು? ನಂಗ್ ಈಗ ಕಣ್ಣ್ ಸಮಾ ಕಾಂತಿಲ್ಯೆ" ಎಂದು ಕಣ್ಣು ಕಿರಿದು ಮಾಡಿ ನೋಡಿ,ನಗಾಡಿ,"ನನಗೆ ನೆನಪು ಸಾಲ ಮರ್ರೆ. ಯಾರು ಹೇಳಿ" ಎಂದರು.
ನಾನು ನನ್ನ ಅಪ್ಪಯ್ಯನ ಹೆಸರು ಹೇಳಿ ಅವರ ಮಗ ಎಂದು ಪರಿಚಯ ಮಾಡಿಕೊಂಡ ಕೂಡಲೇ,
"ಹೋ,  ನೀನಾ? ನಿಮ್ಮ ಮನೆಗೆ ನಾನು ಎಷ್ಟು ಸಲ ಬಂದಿದ್ದೆ? ಆಗ ನೀನು ಸಣ್ಣ ಮಾಣಿ. ಮನ್ಯಲ್ ಎಲ್ಲ ಸೌಖ್ಯಾವಾ? "ಹೌದನಾ ನೀನ್ ಈಗ ಎಲ್ಲಿಪ್ದ್?"
ಎಂದು ನನ್ನ ಎಲ್ಲ ವಿಚಾರವನ್ನು ಕೇಳಿ ಕೇಳಿ ತಿಳಿದುಕೊಂಡರು.
ನಾನು ಮೆಲ್ಲನೇ, "ನೀವು ಮುಡಾರಿ ಗಣಪತಿ ದೇವಸ್ಥಾನದಲ್ಲಿ ಇದ್ದಾಗ ನಾನೂ ನಿಮ್ಮ ಮನೆಗೆ ತುಂಬಾ ಸಲ ಬಂದಿದ್ದೆ"
ಎಂದೆ. ಅವರ ಮುಖ ಒಮ್ಮೆಲೇ ಕಪ್ಪಿಟ್ಟಿತು.
"ನಾನು ಆ ಊರ್ ಬಿಟ್ಟ್ ಸುಮಾರು ಸಮಯ ಆಯ್ತಲ್ಲಾ" ಅಂದರು. ನಾನು ಮೆಲ್ಲನೆ, "ಗೊತ್ತಿತ್" ಅಂದೆ.
"ಆ ಗಣಪತಿಗ್ ನಾನ್ ಬ್ಯಾಡಾ ಅಂತಾಯ್ತ್ . ಇನ್ ಅಲ್ ಇಪ್ಕಾಗ ಅಂತ ಊರ್ ಬಿಟ್ಟೆ. ಯಾರ್ಯಾರಿಗೆ ಎಲ್ಲಿ ಅನ್ನ ನೀರಿನ್ ಋಣ ಇತ್ತೋ ಅಷ್ಟ್ ದಿನ ಮಾತ್ರಾ ಇಪ್ಕಾಪ್ದ್. ಈಗ ಇಲ್ಲೇ ಉಡ್ಪೀಯಲ್ ಹೆರಿಮಗನ್ ಮನ್ಯಲ್ ಇದ್ದೆ" ಅಂದರು.
ಅವನ್ ಹೆಸ್ರ್ ಸುರೇಶ ಅಲ್ದಾ? ಅಂತ ನೆನಪು ಮಾಡಿಕೊಂಡು ಹೇಳಿ, "ಅವ ಇಲ್ ಎಂತ ಮಾಡ್ತಿದ್ದ?"  ಅಂದೆ
ಅವ ಇಲ್ಲೇ ಬ್ಯಾಂಕಲ್ ಇದ್ದ. ಒಂದ್ ಸಣ್ ಮಾಣಿ ಅವ್ನಿಗೆ. ಎರಡನೇ ಮಗ ಅಮೇರಿಕದಲ್ ಇಪ್ದ್. ಕಿರ್ದ್ ಒಂದ್ ಮಾಣಿ ಶಂಕ್ರ. ಅಲ್ಲ್ ಇಲ್ಲ್ ಪೌರೋಹಿತ್ಯ ಅದ್ ಇದ್ ಮಾಡ್ಕಂಡಿತ್ . ಅದ್ಕೊಂದ್ ಮದ್ವಿ ಮಾಡೀರ್ ನನ್ ಜವಾಬ್ಧಾರಿ ಮುಗೀತ್ ಕಾಣ್. "ನಿಮ್ಮ್ ಬದಿಯಲ್ ಎಲ್ಲಾರ್ ಒಂದ್ ಹುಡ್ಗಿ ಇದ್ರೆ ಹೇಳ್ ಕಾಂಬ"  ಅಂದರು.
ನಮ್ಮ ಊರು ಬಿಟ್ಟು ಬಂದ ನೋವನ್ನು ಮಾತಿನಲ್ಲಿ ತೋರ್ಪಡಿಸಬಾರದು ಎಂದು ಪ್ರಯತ್ನಿಸುತ್ತಿರುವುದು ಗೊತ್ತಾಗುತ್ತಿತ್ತು.
"ನೀವು ಬಿಟ್ಬಂದ್ ಮೇಲೆ ಆ ದೇವಸ್ಥಾನಕ್ ಸರೀಕಟ್ ಪೂಜೆಯವ್ರೇ ಇಲ್ಲದ ಹಾಂಗಾಯ್ತ್ ಮಾರಾಯ್ರೆ. ಎಷ್ಟೋ ಜನ ಬಂದ್ ಬಂದ್ ಬಿಟ್ಟ ಹ್ಯೋತಿದ್ರ್. ಈಗ ಅಲ್ಲಿಯೇ ಪಕ್ಕದ ಮನಿ ಸತ್ಯ ಭಟ್ರೇ ಹೋಗಿ ಒಂದ್ ಹೊತ್ ದೇವ್ರ ತಲೆಮೇಲೆ ಒಂದ್ ಸೌಂಟ್ ನೀರ್ ಹಾಕಿ ಬತ್ರಂಬ್ರ್ , ನಾನು ಮೊನ್ನೆ ಊರಿಗ್ ಹೋದಾಗ ಅಲ್ಲಿಗ್ ಹೋಯಿ ಬಂದಿದ್ದೆ"  ಅಂದೆ.
ಅವರು ಮಾತಾಡಲಿಲ್ಲ. ಪುನಃ ಹೇಳಿದೆ.
"ಇತ್ತೀಚೆಗೆ ಅಲ್ಲಿ ಒಂದ್ ಆರೋಡ ಪ್ರಶ್ನೆ ಅಂತ ಮಾಡಿರಂಬ್ರ್. ದೇವಸ್ಥಾನಕ್ ಬರ್ಕತ್ ಇಲ್ಲೆ. ಇನ್ನೂ ಒಂದ್ ಜೀರ್ಣೋದ್ಧಾರ ಮಾಡೂಕಾಯ್ಲಿಲ್ಲೆ. ಯಾಕೆ ಅಂತ ಪ್ರಶ್ನೆ. ಪ್ರಶ್ನೆ ಇಟ್ಟಾಗ ಎಂತ ಬಂತ್ ಗೊತ್ತಾಯ್ತಾ? ದೇವಸ್ಥಾನದ್ ಜೀರ್ಣೋದ್ಧಾರ ಮಾಡೂಕ್ ಮೋದ್ಲು ಅಲ್ಲಿ ಒಬ್ಬ ಬ್ರಾಹ್ಮಣ ಶಾಪ ಕಾಂತಾ ಇದೆ. ಉಟ್ಟ ಬಟ್ಯಲ್ಲೇ ಅವ್ರನ್ ಓಡ್ಸೀರ್. ಹಾಂಗ್ ಬೇಜಾರಾಗಿ ಹೋದ್  ಭಟ್ರ್ ಎಲ್ಲಿದ್ರ್ ಅಂತ ಕಂಡ್ ಹಿಡ್ದ್ ಅವ್ರನ್ ಸಮಾಧಾನ ಮಾಡಿ ಕರ್ಸಿ. ಇಲ್ಲೇ ಒಂದು ಮನೆ ಕಟ್ಟಿ ಕೊಡಿ. ಆಮೇಲೇ ಉಳಿದ ಕೆಲ್ಸ ಅಂತ ದೇವರು ಹೇಳ್ತಂಬ್ರ್" ಅಂದೆ.
ಸ್ವಲ್ಪ ಹೊತ್ತು ಮೌನವಾಗಿದ್ದ ಐತಾಳರು,
"ಹೌದು. ಗೊತ್ತಾಯ್ತ್. ಊರಿನಿಂದ ಬಚ್ಚು ಶೆಟ್ರು , ಜನಾರ್ದನ ಕೊಡ್ಲಾಯರು ಎಲ್ಲ ಸೇರ್ಕಂಡ್ ನನ್ನನ್ನ್ ಹುಡುಕಿಕೊಂಡ್ ಒಂದ್ಸಲ ಬಂದಿದ್ರ್ . ನಂಗೂ ವಯಸ್ಸಾಯ್ತ್ ಅಲ್ದನಾ? ಇನ್ ನಾನ್ ಅಲ್ಲಿಗ್ ಬಬ್ದ್ ಹೌದಾ? ಅಂದೆ. ಆದ್ರೆ ನಂಗ್ ಹಿಂದ್ ಆದ್ ಬಗ್ಗೆ ಏನೂ ಬೇಜಾರಿಲ್ಲೆ . ಇವತ್ ನನ್ನನ್ನು ಈ ಮಟ್ಟಕ್ ತಂದವ ಅವನೇ, ಆ ಗಣಪತಿ ಅಲ್ದಾ? ನೀವು ದೇವಸ್ಥಾನದ್ ಜೀರ್ಣೋದ್ಧಾರ ಮಾಡೂದಾರೆ ನಾನೂ ನನ್ ಕೈಲಾದ ಸಹಾಯ ಮಾಡ್ತೆ ಅಂದೆ" ಅಂದರು.
ನನ್ನ ಮನಸ್ಸು ಇಪ್ಪತ್ತು ಇಪ್ಪತ್ತೈದು ವರ್ಷಗಳ ಹಿಂದಕ್ಕೆ ಓಡಿತು. ಅವರೇ ಹೇಳಿದ ಕತೆ ಅದು.
*******
ನಮ್ನ ಊರಿನ ಸಮೀಪದ ಮುಡಾರಿಯ ಗಣಪತಿ ದೇವಸ್ಥಾನ ಅಂದರೆ ಅದು ಅಂತಹಾ ಭಾರೀ ಹಿನ್ನೆಲೆ ಇರುವ ದೊಡ್ಡ ದೇವಸ್ಥಾನವೇನೂ ಅಲ್ಲ. ತೀರ ಹಳ್ಳಿಯೇ ಆದ್ದರಿಂದ ಅಲ್ಲಿ ಊರ ಪರವೂರ ಭಕ್ತರು ಬಂದು ಕಾಣಿಕೆ ಕೊಟ್ಟು ಒಳ್ಳೆಯ ಉತ್ಪತ್ತಿ ಇರುವ ಕಾರಣಿಕ ದೇವಸ್ಥಾನವೂ ಅದಲ್ಲ. ಭಕ್ತರು ಬಂದರೆ ಬಂದರು. ಇಲ್ಲದಿದ್ದರೆ ಇಲ್ಲ. ಆದರೆ ಈ ಪುಟ್ಟಯ್ಯ ಐತಾಳ್ರು ಅಲ್ಲಿ ಇರುವವರೆಗೆ ಆ ದೇವಸ್ಥಾನದ ಮೂರೂ ಹೊತ್ತು ಪೂಜೆಯನ್ನು ನಿಷ್ಠೆಯಿಂದ ಮಾಡುತ್ತಾ ಬಂದಿದ್ದರು. ದೇವಸ್ಥಾನದ ಎದುರಿನ ಎರಡು ಮುಡಿ ಗದ್ದೆ, ದೇವಸ್ಥಾನದ ಪಶ್ಚಿಮ ಭಾಗದಲ್ಲಿ ಅವರೇ ಬೆವರು ಸುರಿಸಿ ಮಾಡಿದ ಒಂದು ಹತ್ತಿಪ್ಪತ್ತು ತೆಂಗು ಅಡಿಕೆ ಇರುವ ತೋಟವೇ ಅವರ ಬದುಕಾಗಿತ್ತು.‌ ಮತ್ತೆ ನಮ್ಮ ಕುಲಪುರೋಹಿತರಾದ ಕಿಟ್ಟಯ್ಯ ಅಡಿಗರ ಒಟ್ಟಿಗೆ ಅಥವ ಅವರಿಗೆ ಏನಾದರೂ ತೊಂದರೆ ಇದ್ದಾಗ ಇವರೇ ಊರಿನ ಬ್ರಾಹ್ಮಣರ ಮನೆಗೆ ಶ್ರಾದ್ಧಕ್ಕೆ, ಪೂಜೆ ಪಾರಾಯಣಕ್ಕೆ ಅಂತ ಪೌರೋಹಿತ್ಯಕ್ಕೆ ಹೋಗುತ್ತಿದ್ದರು. ದೇವಸ್ಥಾನದಲ್ಲಿ ಏನೂ ಉತ್ಪತ್ತಿ ಇಲ್ಲದ್ದರಿಂದ ಅದರಲ್ಲೇ ಅವರ ಮೂರು ಗಂಡು ಮಕ್ಕಳು, ಹೆಂಡತಿ, ವಿಧವೆ ಅಕ್ಕ ಇರುವ ಅವರ ಸಂಸಾರರಥ ನಡೆಯಬೇಕಿತ್ತು.
ದೇವಸ್ಥಾನದ ಹೊರಪೌಳಿಯಲ್ಲೇ ಈಶಾನ್ಯದ ಮೂಲೆಯಲ್ಲಿ ಒಂದು ಅಡಿಗೆಮನೆ ಇದ್ದು, ಹೊರ ಪೌಳಿಯೇ ಇವರ ಬೆಡ್ ರೂಮು ಕಮ್ ಚಾವಡಿ ಆಗಿತ್ತು. ಹೊರ ಪೌಳಿಯ ದಕ್ಷಿಣಭಾಗದ ಗೋಡೆಯೂ ಅಲ್ಲಲ್ಲಿ ಕುಸಿದು ಹೋಗಿರುವುದರಿಂದ ಅವರೇ ಒಂದು ತಟ್ಟಿಯನ್ನು ಕಟ್ಟಿಕೊಂಡಿದ್ದರು. ಅಲ್ಲಿಯೇ ಅನತಿ ದೂರದಲ್ಲಿ ಒಂದು ಕೊಟ್ಟಿಗೆ ಮಾಡಿ ಕರಾವಿಗೆ ಒಂದು ದನವನ್ನೂ ಸಾಕಿಕೊಂಡಿದ್ದರು. ಮೂರುಹೊತ್ತೂ ಗಣಪತಿಯ ಪೂಜೆಯನ್ನು ನಿಷ್ಠೆಯಿಂದ ಭಕ್ತಿಯಿಂದ ಮಾಡುತ್ತಿದ್ದರು.
*********
ಇಂತಿಪ್ಪ ಕಾಲದ ಒಂದು ದಿನ ಅಂತಹ ಪಾಳುಬಿದ್ದ ದೇವಸ್ಥಾನವನ್ನು ಉದ್ಧಾರ ಮಾಡಬೇಕೆಂದು ಆ ಊರಿನ ದೊಡ್ಡ ಕುಳವಾದ ಅಂತು ಶೆಟ್ರು ಎಂಬವರಿಗೆ ಒಮ್ಮೆಲೇ ಅನ್ನಿಸಿಬಿಟ್ಟಿತು. ಊರಿನ ಪ್ರತಿಷ್ಠಿತರಲ್ಲಿ ಒಬ್ಬರಾದ ಶೆಟ್ಟರು. ಅವರ ತಲೆಗೆ ಒಂದು ವಿಚಾರ ಹೊಕ್ಕಮೇಲೆ ತಡಬಡ ಇಲ್ಲ. ಊರವರನ್ನೆಲ್ಲ ಸೇರಿಸಿ ಒಂದು ಮೀಟಿಂಗ್ ಮಾಡಿಯೇ ಬಿಟ್ಟರು. ಊರಿನ ದೇವಸ್ಥಾನ ಜೀರ್ಣೋದ್ಧಾರ ಆಗಲೇ ಬೇಕು ಅಂತ ತೀರ್ಮಾನವು ಆಯಿತು.
ಅಂದು ರಾತ್ರಿ ದೇವಸ್ಥಾನ ಕ್ಕೆ ಬಂದ ಆ ಶೆಟ್ಟರು ತಮ್ಮ ಶೆಟ್ಟರ ಗತ್ತಿನಿಂದಲೇ,
"ಐತಾಳ್ರೆ ವಿಷ್ಯ ಗೊತ್ತಾಯ್ತಾ? ನಾವು ಈ ದೇವಸ್ಥಾನದ ಜೀರ್ಣೋದ್ಧಾರ ಮಾಡ್ವಾ ಅಂತ ಎಣ್ಸ್ ಕಂಡಿತ್. ಇವತ್ ಒಂದ್ ಮೀಟಿಂಗೂ ಮಾಡ್ತ್" ಎಂದು ಪೀಠಿಕೆ ಹಾಕಿದರು.
ಐತಾಳರಿಗೆ ತುಂಬಾ ಖುಷಿ ಆಯಿತು.
"ಹೋ ಓಳ್ಳೇ ಸುದ್ಧಿ ಹೇಳಿದ್ರಿ ಶೆಟ್ರೆ . ನಾನ್ ಯಾವತ್ತಿಂದ ಹೇಳ್ತಿದ್ನಲೆ. ದೇವ್ರಿಗೆ ಕಳೆ ಬರ್ಕರೆ ಒಂದು ಜೀರ್ಣೋದ್ಧಾರ ಮಾಡಿ, ಒಂದ್ ಸಣ್ಣಕ್ಕಾದ್ರೂ ಬ್ರಹ್ಮಕಲಶ ಅಂತ ಮಾಡ್ಕೆ. ಆಮೇಲೆ ನಮ್ ಗಣಪತಿಯ ಕಾರಣಿಕ ಕಾಣಿ ಅಂದೇಳಿ"; ಎಂದು ನಗುತ್ತಾ ಹೇಳಿದರು.
ಆಗ ಶೆಟ್ರು ನಗುತ್ತಾ, "ಅದೆಲ್ಲ ಸಮ. ಆದ್ರೆ ಜೀರ್ಣೋದ್ಧಾರ ಅಂದ್ರ್ ಸುಮ್ನೇ ಆತ್ತಾ? ದುಡ್ , ಜನ ಎಲ್ಲ ಆಯ್ಕಲೆ. ಇಲ್ ಜಾಗವೂ ಸ್ವಲ್ಪ ಅಚ್ಕಟ್ ಅಲ್ದೆ? ಹಾಂಗಾಯಿ ಈ ಸಲ ಈ ಹೊರ ಪೌಳಿ ಎಲ್ಲ ತೆಗ್ದ್ ಹೊಸ್ತಾಗಿ ಮಾಡ್ವಾ ಅಂತ ಎಣ್ಸೀತೆ. ಹಾಂಗಾಯಿ ನೀವ್ ಇಲ್ಲಿಂದ ಜಾಗ ಖಾಲಿ ಮಾಡ್ಕಾತ್ತಲೆ" ಅಂದರು.
ಐತಾಳರಿಗೆ ಒಮ್ಮೆಲೇ ಶಾಕ್ ಆಯ್ತು.
"ನಾನಾ? ಅಯ್ಯೋ ನಾನ್ ಎಲ್ಲಿಗ್ ಹ್ವಾಪ್ದ್ ? ಅಪ್ಪಯ್ಯನ್ ಕಾಲ್ದಿಂದ ಇಲ್ಲೇ ಇದ್ದವ ನಾನ್" ಎಂದರು ಭಯದಿಂದ.
"ಅದನ್ ನಾವ್ ಹೇಳೂಕಾತ್ತಾ? ಎಲ್ಲಾರೂ ಗುಡ್ಡೀ ಮ್ಯಾಲೆ ಒಂದ್ ಕೊಗ್ಳ್ ಕಟ್ಕಂಡ್ ಆಯ್ಕಣಿ. ದಿನಾ ಬಂದ್ ಪೂಜಿ ಮಾಡಿ ಹ್ವಾರ್ ಸೈ" ಅಂದರು ಶೆಟ್ಟರು ಗತ್ತಿನಿಂದ.
"ನಾನ್ ಇನ್ನೂ ಹುಡ್ಗಾ ಅಂದೇಳಿ ಮಾಡಿರ್ಯಾ? ವರ್ಷ ಐವತ್ತರ ಮೇಲ್ ಆಯ್ತ್ . ದಿನಾ ಗುಡ್ಡಿ ಇಳ್ದ್ ಹತ್ತೀ ಮಾಡೂಕಾತ್ತಾ ನಂಗೆ ಇನ್?"  ಐತಾಳರು ಇನ್ನೂ ಚೇತರಿಸಿಕೊಳ್ಳಲಿಲ್ಲ. ಗಣಪತಿಯ ಸಾನ್ನಿದ್ಯವನ್ನು ಬಿಟ್ಟು ದೂರ ಹೋಗುವುದನ್ನು ಅವರಿಗೆ ಕಲ್ಪಿಸಿಕೊಳ್ಳಲು ಆಗಲಿಲ್ಲ.
"ಅದೆಲ್ಲ ಗೊತ್ತಿಲ್ಲೆ ನಂಗೆ. ಇದು ಊರವರ್ ಎಲ್ಲ ಸಭೆ ಸೇರಿ ಮಾಡಿದ್ ತೀರ್ಮಾನ. ನೀವ್ ಏನಾರೂ ಮಾಡ್ಕಣಿ. ಈ ಜಾಗ ಖಾಲಿ ಮಾಡಿ ಅಷ್ಟೆ"ಶೆಟ್ಟರಿಗೆ ಐತಾಳರ ಮುಖವನ್ನು ನೋಡುವ ವ್ಯವಧಾನವೂ ಇರಲಿಲ್ಲ. ಐತಾಳರು ಕಂಗಾಲಾದರು.
"ಹೀಗ್ ಉಟ್ಟಬಟ್ಯಲ್ಲೆ ಹೋಯ್ಕ್ ಅಂದ್ರೆ ಎಲ್ಲಿಗ್ ಹ್ವಾಪದ್ ಶೆಟ್ರೆ? ನಾನ್ ಇದೇ ಜಾಗದಲ್ ಹುಟ್ಟಿ ಓಡಾಡ್ಕಂಡ್ ಬೆಳೆದವ. ಸ್ವಲ್ಪ ಯೋಚ್ನೆ ಮಾಡೂಕ್ ಟೈಮ್ ಕೊಡಿ" ಎಂದು ಐತಾಳರು ಅಂಗಲಾಚಿದರು.
"ಅದೆಲ್ಲ ನಂಗ್ ಗೊತ್ತಿಲ್ಲೆ . ಹೇಳೂದ್ ಹೇಳಿದಿ. ಇನ್ ನಿಮಗ್ ಬಿಟ್ಟದ್" ಎಂದು ಶೆಟ್ರು ಹೇಳಿ ಬಿರಬಿರನೇ ಹೊರಟುಹೋದರು.
ಐತಾಳರಿಗೆ ಕಣ್ಣು ಕತ್ತಲು ಬಂದ ಹಾಗಾಯ್ತು. ಹೀಗೆ ಇದ್ದಕ್ಕಿದ್ದ ಹಾಗೆ ಎದ್ದು ಹೋಗಿಬಿಡಿ ಎಂದರೆ ಎಲ್ಲಿಗೆ ಹೋಗುವುದು? "ಗಣಪತೀ ನಿನಗೂ ನನ್ನ ಸೇವೆ ಪೂಜೆ ಸಾಕು ಅನ್ನಿಸಿತಾ" ಎಂದು ಅಲ್ಲಿಯೇ ಕುಸಿದು ಕುಳಿತರು. ಕತ್ತಲೆಯಲ್ಲಿ ಕಾಲದ ಪರಿವೆಯೇ ಅವರಿಗೆ ಇರಲಿಲ್ಲ.
ರಾತ್ರಿ ಎಷ್ಟು ಹೊತ್ತಿಗೋ ಗಂಡ ಎಲ್ ಹೋದ್ರು ? ಎಂದು ಚಿಮಣಿ ಬೆಳಕಲ್ಲಿ ಹುಡುಕುತ್ತಾ ಬಂದ ಅವರ ಹೆಂಡತಿ ;ಐತಾಳರನ್ನು ನೋಡಿ,, ಮೈ ಮುಟ್ಟಿ ಏಳಿಸಿದಾಗಲೇ ಮತ್ತೆ ಎಚ್ಚರವಾದದ್ದು.
ಆಗಲೇ ಅವರು ಒಂದು ತೀರ್ಮಾನಕ್ಕೆ ಬಂದಿದ್ದರು.
"ಹ್ವಾ ನಮ್ಗೆ ಇನ್ ಈ ಊರಿನ ನೀರಿನ್ ಋಣ ತೀರ್ತಾ ಕಾಂತ್" ಎಂದರು.
ಸಂಜೆಯಿಂದ ಎಲ್ಲ ಮಾತನ್ನೂ ಕೇಳಿಸಿಕೊಂಡಿದ್ದ ಅವರ ಹೆಂಡತಿ "ಎಲ್ಲ ಅವನೇ ಕಂಡ್ಕಂತ. ನೀವು ತಲೆಬಿಸಿ ಮಾಡ್ಕ್ಯಂಬೇಡಿ" ಅಂದರು ಮುಸಿಮುಸಿ ಅಳುತ್ತಾ.
ರಾತ್ರಿ ಎಂದೂ ಐತಾಳರು ಊಟ ಮಾಡುವವರಲ್ಲ. ಹಾಗೆಯೇ ಅಡಿಗೆ ಮನೆಗೆ ಹೋಗಿ ಒಂದು ಚೊಂಬು ನೀರನ್ನು ಗಟಗಟನೇ ಕುಡಿದುಬಂದು  ಚಾಪೆ ಹಾಕಿ ಸುತ್ತಪೌಳಿಯಲ್ಲಿ ಅಂಗಾತ ಮಲಗಿದರು.
ನಿದ್ದೆ ಬರುತ್ತಿಲ್ಲ. ಎದ್ದು ಗರ್ಭಗುಡಿಗೆ ಹೋಗಿ ಗಣಪತಿಯ ಮುಂದೆ ಕಣ್ಣುಮುಚ್ಚಿ ಕುಳಿತರು. ಎಷ್ಟು ಹೊತ್ತು ಹಾಗೆ ಕುಳಿತಿದ್ದರೋ ? ಅವರಿಗೆ ಗೊತ್ತಿಲ್ಲ.
ಒಮ್ಮೆಲೇ ಎಚ್ಚರವಾಗಿ ಎದ್ದು ಸೀದಾ ಹೊರಗೆ ಬಂದು ಹೆಂಡತಿಯನ್ನು, ಅಕ್ಕನನ್ನು ಕರೆದು ಹೇಳಿದರು.
"ಹೊರಡಿ. ಮಕ್ಕಳನ್ನು ಕರ್ಕಂಡ್ ಹೊರಡಿ"
ಅವರ ಆಜ್ಞೆಗೆ ಎಲ್ಲರೂ ಬದ್ಧರು. ಎಲ್ಲರೂ ದಡಬಡ ಎದ್ದರು. ಮಕ್ಕಳನ್ನೂ ಎಬ್ಬಿಸಿ ಅಂಗಿಚಡ್ಡಿ ಹಾಕಿ ಸಿದ್ದಮಾಡಿಯಾಯಿತು. ನಸುಕು ನಸುಕು ಬೆಳಕಿನಲ್ಲಿ ಹೊರಟೇ ಬಿಟ್ಟರು.
ಎಲ್ಲಿಗೆ? ಅಂತ ಯಾರೂ ಕೇಳಲಿಲ್ಲ. ಕೇಳಿದ್ದರೆ ಐತಾಳರಿಗೆ ಗೊತ್ತೂ ಇರಲಿಲ್ಲ.

ಅವರದ್ದೊಂದು ಕಬ್ಬಿಣದ ಟ್ರಂಕು. ಅದರ ಒಳಗೆ ಅವರ ಅಪ್ಪಯ್ಯನ ಒಂದಷ್ಟು ತಾಳೆಗರಿ ಪುಸ್ತಕಗಳು, ಪಾರಾಯಣದ, ಪೂಜೆಯ ಪುಸ್ತಕಗಳು. ಹೆಂಡತಿಯ ಕೈಯಲ್ಲಿ, ವಿಧವೆ ಅಕ್ಕನ ಕೈಯಲ್ಲಿ ಅವರವರದೇ ಒಂದು ಹಳೆಸೀರೆಗಳ ಒಂದೊಂದು ಗಂಟು. ಜೊತೆಗೆ ಕೌಳಗೀ ಸೌಟು, ಹರಿವಾಣ ತಟ್ಟೆ ಇರುವ ಒಂದು ಕೈಚೀಲ. ಒಳಗಿನ ಪಾತ್ರೆ ಪಗಡಿ ಅವರದ್ದಲ್ಲ. ಕುರ್ಚಿ ಕಪಾಟು ದೇವಸ್ಥಾನದ್ದೆ.
ಹೊರಡುವ ಮುಂಚೆ, ಗಣಪತಿಯ ಮುಂದೆ ಬಂದು ಐತಾಳರು ಭಕ್ತಿಯಿಂದ " ಗಣಪತೀ, ನಿನಗೆ ನನ್ನ ಸೇವೆ ಸಾಕು ಅನ್ನಿಸಿತಲ್ಲ. ಅದಕ್ಕೇ ಹೊರಟೇ ಬಿಟ್ಟೆ. ಆದರೆ ನಿನ್ನನ್ನೇ ನಂಬಿದವ ನಾನು. ಎಲ್ಲಾದರೂ ದಡಕಾ"ಎಂದು ಎದ್ದು ಹೊರಟೇಬಿಟ್ಟರು. ಮತ್ತೆ ಹಿಂದೆ ತಿರುಗಿ ನೋಡಲಿಲ್ಲ.

ಕಾಲು ಹೋದತ್ತ ಮನಸ್ಸು ತಿಳಿಸಿದತ್ತ ನಡೆದರು. ಗದ್ದೆ ಬೈಲು ದಾಟಿದರು. ಹಾಡಿ ಹೊಳೆಸಂಕಗಳನ್ನು ಉತ್ತರಿಸಿದರು. ಮೂರು ಸಣ್ಣಸಣ್ಣ ಮಕ್ಕಳು. ಒಂದಂತೂ ಹಾಲುಕುಡಿಯುವ ಮಗು ಹೆಂಡತಿಯ ಬಗಲಲ್ಲಿ. ಸರೀ ಬೆಳಕು ಮೂಡುವಷ್ಟರಲ್ಲಿ ಹಾಲಾಡಿಪೇಟೆಗೆ ಬಂದರು. ಮುಂದೆ? ಏನೂ ತಿಳಿಯದೇ ಸುಮ್ಮನೇ ನಿಲ್ಲಲೂ ಆಗದೇ, ಕುಂದಾಪುರದ ಕಡೆಗೆ ನಡೆಯತೊಡಗಿದರು.
ಬಸ್ಸಿನ ಸಂಚಾರ ಇನ್ನೂ ಶುರುವಾಗಿರಲಿಲ್ಲ.ಬಸ್ಸು ಬಂದರೂ ಎಲ್ಲಿಗೆ ಹೋಗುವುದು ಎಂದು ನಿರ್ಣಯವಾಗದೇ ಯಾವ ಬಸ್ಸಿಗೇ ಅಂತ ಹತ್ತುವುದು? ಕೈಯಲ್ಲಿದ್ದ ನಾಲ್ಕು ಕಾಸು ಖರ್ಚಾಗಿ ಹೋದರೆ ನಾಳೆ ಊಟಕ್ಕೆ ಏನು ಮಾಡುವುದು? ಅಂತು ಸುಮಾರು ಬಿದ್ಕಲ್ ಕಟ್ಟೆಯ ಹತ್ತಿರ ಹತ್ತಿರ ಬರುತ್ತಿರುವಾಗ ಮಕ್ಕಳು ಹಸಿವೆ ಎಂದು ಕಿರಿಕಿರಿ ಮಾಡಲು ಶುರುಮಾಡಿದವು. ಅರ್ಧಂಬರ್ಧ ನಿದ್ದೆಕಣ್ಣು ಅವುಗಳಿಗೆ ಅಲ್ಲಿ ರಸ್ತೆಯ ಪಕ್ಕದಲ್ಲಿ ಒಂದು ಮೋರಿಯ ಹತ್ತಿರ ಎಲ್ಲರೂ ಕುಳಿತರು. ಐತಾಳರ ಹೆಂಡತಿ ಮನೆಯಿಂದ ತಂದ ಅವಲಕ್ಕಿಯ ಗಂಟು ಬಿಚ್ಚಿ ಅದನ್ನೇ ಮಕ್ಕಳಿಗೆ ಕೊಟ್ಟರು. ರಸ್ತೆಯ ಪಕ್ಕದಲ್ಲಿಯೇ ಇದ್ದ ಒಂದು ನಲ್ಲಿಯಲ್ಲಿ ನೀರು ಬರುತ್ತಿತ್ತು. ಎಲ್ಲರೂ ಅದನ್ನು ಕುಡಿದು ಮತ್ತೆ ಹೊರಟರು.
ಕೊನೆಗೆ ನಡೆದೂ ನಡೆದೂ ಹುಣಸೆ ಮಕ್ಕಿಯನ್ನು ದಾಟಿ ಸುಣ್ಣಾರಿಯಲ್ಲಿ ಎಡಕ್ಕೆ ತಿರುಗಿ ಉಳ್ತೂರಿನ ರಸ್ತೆಗೆ ತಿರುಗಿದರು. ಮಧ್ಯಾಹ್ನದ ಹೊತ್ತಿಗೆ ಯಾರದೋ ಬ್ರಾಹ್ಮಣರ ಮನೆಯ ಹೆಬ್ಬಾಗಿಲ ಹೊರಗಿನ ಜಗಲಿಯನ್ನು ಸೇರಿ ಆಯಾಸದಿಂದ ಬಳಲಿ ಕುಳಿತು,
"ಅಮ್ಮಾ, ಒಂದು ಚೊಂಬು ನೀರು ಕೊಡಿ" ಎಂದರು.
************
ಅವರು ಗಣಪತಿಯನ್ನು ಬಿಟ್ಟರೂ, ಅವರು ನಂಬಿಕೊಂಡು ಕೊಂಡು ಬಂದ ಗಣಪತಿ ಅವರನ್ನು ಬಿಡಲಿಲ್ಲ.
ಆ ಮನೆಯೇ ಅವರಿಗೆ ಆಶ್ರಯ ಕೊಟ್ಟಿತು. ಆ ಮನೆಯ ಕುಪ್ಪಯ್ಯ ಕಾರಂತರು ಅವರ ಸ್ಥಿತಿಯನ್ನು ನೋಡಿ ಪಾಪ ಅನ್ನಿಸಿ, ಗುರುತು ಪರಿಚಯ ಕೇಳಿ ಕನಿಕರಿಸಿ ಅವರಿಗೆ ಆಶ್ರಯಕೊಟ್ಟರು.
ವಾರದ ಒಳಗೆ ಅವರ ಮನೆಯ ಪಡಸಾಲೆಯಲ್ಲಿಯೇ ಒಂದು ಒಲೆಯನ್ನು ಹೂಡಿ ಅಡಿಗೆ ಮಾಡಿ ಐತಾಳರು ಸಂಸಾರ ಪ್ರಾರಂಭಿಸಿದರು. ಅವರಿವರ ಪರಿಚಯ ಮಾಡಿಕೊಂಡು ಅಲ್ಲಿ ಇಲ್ಲಿ ಪೌರೋಹಿತ್ಯ ಮಾಡಿ ಮಕ್ಕಳನ್ನು ಓದಿಸಿ ಬೆಳೆಸಿದರು. ಆ ಕಾರಂತರ ಮನೆಯ ಹತ್ತಿರದಲ್ಲಿಯೇ ಒಂದು ಜಾಗವನ್ನು ತೆಗೆದುಕೊಂಡು ಒಂದು ಸಣ್ಣ ಮನೆಯನ್ನೂ ಕಟ್ಟಿಸಿದರು. ಕಾಲಗತಿಗನುಸಾರವಾಗಿ ಅವರ ವಿಧವೆ ಅಕ್ಕನನ್ನೂ , ಹೆಂಡತಿಯನ್ನು ಅಗಲಿದರು.
ನಾನೂ ಒಂದೆರಡು ಸಲ ಅವರ ಮನೆಗೆ ಹುಡುಕಿಕೊಂಡು ಹೋಗಿ ಮಾತಾಡಿಸಿ ನಮ್ಮ ಮನೆಯ ಯಾವುದೋ ಕಾರ್ಯಕ್ರಮಕ್ಕೆ ಹೇಳಿಕೆ ಹೇಳಿ ಆಮಂತ್ರಿಸಿ ಬಂದಿದ್ದೆ. ಈಗ ಸುಮಾರು ಹತ್ತಾರು ವರ್ಷದಿಂದ ನಮ್ಮ ಸಂಪರ್ಕ ಇರಲಿಲ್ಲ.
ಈಗ ಬ್ಯಾಂಕ್ ನಲ್ಲಿ ಕೆಲಸಮಾಡುವ ಮಗನೊಂದಿಗೆ ಸುಖವಾಗಿ ಉಡುಪಿಯ ಮಗನ ಮನೆಯಲ್ಲಿ ಕಾಲಕಳೆಯುತ್ತಿದ್ದಾರೆ.
********
ನಾನು ಅವರ ಮುಖ ನೋಡಿದೆ. ನಿರ್ಲಿಪ್ತವಾಗಿತ್ತದು.
ಅಷ್ಟರಲ್ಲಿ, "ಊಟಕ್ಕಾಯಿತು. ಎಲ್ಲ ಬನ್ನಿ"ಎಂದು ಯಾರೋ ಕರೆದರು. ಎಲ್ಲರೂ ದಡಬಡ ಎದ್ದು ಡೈನಿಂಗ್ ಹಾಲಿಗೆ ಹೊರಟರು. ನಾನು ನಿಧಾನವಾಗಿ ಅವರ ಕೈ ಹಿಡಿದು "ಬನ್ನಿ ಹೋಗುವ"ಎಂದು ಊಟದ ಮನೆಯತ್ತ ಕರೆದುಕೊಂಡು ಹೊರಟೆ.
*********
-ಮುಗಿಯಿತು-