ಬುಧವಾರ, ಏಪ್ರಿಲ್ 30, 2014


                ರಮೇಶ ಉಪ್ಪೂರರ ನೆನಪು



ಎಲ್ಲರ ಮೆಚ್ಚಿನ ಹಾಲಾಡಿ ಅಪ್ಪಯ್ಯ (ನಾರ್ಣಪ್ಪ ಉಪ್ಪೂರರು ) ನ 30 ನೇ ಪುಣ್ಯ ತಿಥಿಯ ಈ ದಿನ (12.04.2014) ಅವರ ಸ್ಮರಣಾರ್ಥವಾಗಿ ನಡೆಸುತ್ತಿರುವ ಈ ಕಾರ್ಯಕ್ರಮದಲ್ಲಿ ಅವರ ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳು ಎಲ್ಲರೂ ಸೇರಿರುವ ಈ ದಿನದಂದು ದಿನೇಶ ನನ್ನ ಗಂಡ ರಮೇಶ (ನಾರಣಪ್ಪ ಉಪ್ಪೂರರ ಮಗ ರಮೇಶ ಉಪ್ಪೂರ ರು ಸಿಂಡಿಕೇಟ್ ಬ್ಯಾಂಕಿನಲ್ಲಿ ಆಪೀಸರ್ ಆಗಿ ಅಹಮದಾಬಾದ್ ನಲ್ಲಿ ಕೆಲಸ ಮಾಡುತ್ತಿರುವಾಗಲೇ ಹೃದಯಾಘಾತದಿಂದ ನಿಧನರಾದರು ) ರ ಬಗ್ಗೆ ಮಾತಾಡಿ ಅವರ ನೆನಪನ್ನು ಹಂಚ್ಕೊಳ್ಳಬೇಕು ಎಂದು ಹೇಳಿದ. ಅವರ ಬಾಳ ಸಂಗಾತಿಯಾಗಿ ನಾನೂ ಅವರ ಹವ್ಯಾಸಗಳ ಬಗ್ಗೆ ತಿಳಿಸಲಾ? ಆದರೆ ಅವು ನಿಮಗೆಲ್ಲಾ ಗೊತ್ತಿರೋದೆ.. ಆದ್ದರಿಂದ ತಿಳಿಸಲಾ ಅನ್ನೋದಕ್ಕಿಂತ ನೆನಪಿಸಲಾ ಅನ್ನೋದೇ ಸರಿ...
   ಮೊದಲಾಗಿ ನಿಮಗೇ ಗೊತ್ತಿದ್ದಂತೆ ಕಥೆ ಬರೆಯುವ ಹವ್ಯಾಸ ಅವರಿಗಿತ್ತು. ಉದಯವಾಣಿ,ತುಷಾರ, ಮಯೂರ, ಕರ್ಮವೀರ, ಸುಧಾ, ಇತ್ತೀಚೆಗೆ ದಿನೇಶ ತಿಳಿಸಿದ “ಪ್ರಕಾಶ” ಎಂಬ ಪತ್ರಿಕೆಗಳಲ್ಲಿ ಇವರು ಬರೆದ ಹಲವಾರು ಕಥೆಗಳು ಪ್ರಕಟವಾಗಿದ್ದವು. ಉದಯವಾಣಿ “ದೀಪಾವಳಿ” ವಿಶೇಷಾಂಕದಲ್ಲಿಯ ಕಥಾಸ್ಪರ್ಧೆಯಲ್ಲಿ ಒಮ್ಮೆ 2ನೇ. 3 ನೇ ಬಹುಮಾನಗಳು ಬಂದಿದ್ದವು ಎಂಬ ನೆನಪು. ಯಕ್ಷಗಾನದಲ್ಲಿ ತುಂಬಾ ಆಸಕ್ತಿ ಇದ್ದುದರಿಂದಲೋ ಏನೋ, ಅವರ ಹೆಚ್ಚಿನ ಕಥೆಗಳಲ್ಲಿ ಆಟದ ವಿಷಯ ಇಣುಕಿದ್ದು, ಒಂದೆರಡು ಕಥೆಗಳಲ್ಲಿ ಯಕ್ಷಗಾನ ಕಲಾವಿದರೇ ಕಥೆಯ ಮುಖ್ಯ ಪಾತ್ರಧಾರಿಗಳಾಗಿದ್ದೂ ಹೌದು. ದುರದೃಷ್ಟದಿಂದಲೋ, ದೂರದೃಷ್ಟಿಯ ಅಭಾವದಿಂದಲೋ ಈಗ ನನ್ನ ಹತ್ತಿರ ಇರುವುದು 4-5 ಕಥೆಗಳು ಮಾತ್ರ. ಬಹಳ ಚಿಕ್ಕ ವಯಸ್ಸಿನಲ್ಲೇ ಬರೆಯಲು ಪ್ರಾರಂಭ ಮಾಡಿದ್ದ ಅವರು ಸಾಧಾರಣ ೭೬-೭೭ ಇಸವಿ ತನಕವೂ ಬರೆಯುತ್ತಿದ್ದರು. ಆದರೆ ನಂತರ ಒಂದೂ ಕಥೆ ಬರೆಯಲೇ ಇಲ್ಲ. ಬಹುಶಃ ಬ್ಯಾಂಕಿಗೆ ಸೇರಿದ ಮೇಲೆ ಬದುಕಿನ ಕಥೆಯೇ ದೊಡ್ದದಾಗಿರಬೇಕು. ಹಿಂದಿನವರು ಹೇಳಿದ ಹಾಗೆ, ‘ಗಯನ ಕಣೆಂಗೆ’ ತಿರುಗುವ ಹಾಗಾಗಿತ್ತು. ನಮ್ಮ ಬದುಕು. ಕಡತೋಕ ಬಿಟ್ರೆ ಮತ್ತೆಲ್ಲಾ ಕಡೆ ತುಂಬಾ ಬೇಗ ಬೇಗ ಟ್ರಾನ್ಸ್ ಫರ್ಸ್. 2 ವರ್ಷ, 1 ವರ್ಷ ಒಂದ್ಸಲ 6 ತಿಂಗಳಿಗೂ ಆಗಿದ್ದಿತ್ತು. ಹೊಸ ಊರಿಗೆ ಹೋಗು, ಮನೆ ನೋಡು, ಮಕ್ಕಳ ಸ್ಕೂಲು ನೋಡು, ಅಫೀಸು ನೋಡು. ಈ ಗಲಾಟೆಯಲ್ಲಿ ಹವ್ಯಾಸ ದೂರವಾಯ್ತು ಅನ್ನಿಸುತ್ತೆ. ತುಂಬಾ ಒತ್ತಾಯ ಮಾಡಿದ್ದರಿಂದ ಒಂದೆರಡು ಹನಿಗವನಗಳನ್ನು ಬರೆದಿದ್ರು.....
   ಅಂದ ಹಾಗೆ ಒಂದು ವಿಷಯ ಹೇಳಲೇಬೇಕು. ಅವರದು ತುಂಬಾ ಸುಂದರವಾದ ಅಕ್ಷರಗಳಾಗಿದ್ದವು. ಮೊದಲು ಕೆಲಸವಿಲ್ಲದೆ ಸುಮ್ಮನೆ ಕುಳಿತಿದ್ದಾಗ ಅಮೃತೇಶ್ವರಿ ಮೇಳದಲ್ಲಿ ವಾಲ್ ಪೋಸ್ಟರ್ ಬರೆಯುವ ಕೆಲಸ ಮಾಡ್ತಿದ್ದರಂತೆ. ಶಿರ್ಶಿಯಲ್ಲಿರುವಾಗ ಏನೋ ಕಾರಣದಿಂದ ಬಲಗೈಯಲ್ಲಿ ಬರೆಯಲಾಗದಿದ್ದಾಗ ಆ ವಯಸ್ಸಿನಲ್ಲೂ ಹಟದಿಂದ ದಿನಾ ಎಡಗೈಯಲ್ಲಿ ಕಾಪಿ ಬರೆದು ಅಷ್ಟೇ ಸುಂದರವಾಗಿ ಎಡಗೈಯಲ್ಲಿ ಬರೆಯುತ್ತಿದ್ದರು.
ಇನ್ನು ಪೋಟೋಗ್ರಫಿ ಕೂಡ ಅವರ ಮತ್ತೊಂದು ನೆಚ್ಚಿನ ಹವ್ಯಾಸವಾಗಿತ್ತು. ಚೆಂದದ ಪೋಟೋ ತೆಗೆಯುವುದಲ್ಲದೆ, ಅವುಗಳನ್ನು ಮನೆಯಲ್ಲಿಯೇ ಸ್ವತಃ ಡೆವೆಲಪ್ ಮಾಡುವುದು ಕೂಡ ಅವರಿಗೆ ಇಷ್ಟವಾಗಿತ್ತು. ಕೃಷ್ಣಮೂರ್ತಿ ಅಣ್ಣಯ್ಯನ ಒಂದು ಹ್ಯಾಂಡ್ ಮೇಡ್ ಡೆವೆಲಪರ್ ಒಂದಿತ್ತು. ಕಡತೋಕಾದ ಮನೆಯಲ್ಲಿ ತೆಗೆದ ಪೋಟೋಗಳನ್ನು ವಾಶ್ ಮಾಡಿ ಪ್ರಿಂಟ್ ಹಾಕಿ ಒಣಗಿಸುವ ಸಂಭ್ರಮ ನೋಡಬೇಕಿತ್ತು. ರಾತ್ರಿ ಆದ ಮೇಲೆ ಬಾಗಿಲು ಹಾಕಿ, ರೆಡ್ ಲೈಟ್ ಮಾತ್ರ ಹಾಕಿಕೊಂಡು ನೆಗೆಟಿವ್ ವಾಶ್ ಮಾಡಿ, ಪ್ರಿಂಟ್ ಹಾಕಿ... ಚೆಂದ ಬಂದಾಗ ಕುಶಿಯೋ ಕುಶಿ. ಶೇಕ್ ಆಗಿ ಹಾಳಾದಾಗ ‘ಛೇ’ ಅಂತ ಬೇಜಾರು. ಈಗಿನ ಹಾಗೆ ಚೆಂದ ಬಂದ್ರೆ ಇಟ್ಟು, ಚೆಂದವಾಗ ಇದ್ರೆ ಡಿಲೀಟ್ ಮಾಡುವ ಡಿಜಿಟಲ್ ಕೆಮರಾ ಅಲ್ಲವಲ್ಲ. 32 ಪೋಟೋಗಳ ರೀಲ್, ಅವುಗಳ ಹಣೆಬರಹ ಪ್ರಿಂಟ್ ಹಾಕಿದ ಮೇಲೆ ತಿಳಿಯುವುದು. ಅವರು ತೆಗೆದ ಪೋಟೋಗಳ ದೊಡ್ಡ ಸಂಗ್ರಹವೇ ಇದೆ ಅನ್ನಬಹುದು.
 ಇನ್ನು ಯಕ್ಷಗಾನದ ಮನೆಯಲ್ಲಿ ಹುಟ್ಟಿ ಬಂದ ಮೇಲೆ ಸಹಜವಾಗಿಯೇ ಅವರಿಗೆ ಅದರಲ್ಲಿ ಆಳದ ಆಸಕ್ತಿ. ಉಳಿದ ಸಹೋದರರಂತೆ ಯಕ್ಷಗಾನದ ಯಾವ ವಿಭಾಗದಲ್ಲೂ ಸ್ವಂತ ಅನುಭವ ಇಲ್ಲದಿದ್ರೂ, ಅವುಗಳನ್ನು ಸಂಗ್ರಹಿಸಿ ಇಡುವ ಹವ್ಯಾಸ ಅವರಿಗೆ ತುಂಬಾ ಇಷ್ಟವಾಗಿತ್ತು. ವೀಡಿಯೋ ಇಲ್ಲದ ಕಾಲವದು. ಭಟ್ಕಳಕ್ಕೆ ಹೋಗಿ ಒಂದು ನ್ಯಾಷನಲ್ ಪ್ಯಾನಾಸಾನಿಕ್ ರೆಕಾರ್ಡರ್ ತಂದಿದ್ರು. ಎಲ್ಲಿ ಆಟಕ್ಕೆ ಹೋಗಬೇಕಾದ್ರೂ ಹೆಗಲಲ್ಲೊಂದು ಟೇಪ್ ರೆಕಾರ್ಡರ್ ಚೀಲ.  ನಾವಾಗ ಕಡತೋಕದಲ್ಲಿ 5 ವರ್ಷ ಇದ್ದೆವು. ಆಗ ನೋಡಿದ ಆಟಗಳು ಲೆಕ್ಕವಿಲ್ಲ. ಮಾಡಿದ ಕೆಸೆಟ್ ಗಳಿಗೂ ಲೆಕ್ಕವಿಲ್ಲ. ಅದಲ್ಲದೆ, ಆಗ ಕೋಟದಲ್ಲಿದ್ದ ನಮ್ಮ ಮನೆಯಲ್ಲಿ ಉಪ್ಪರಿಗೆಯ ಮೇಲೆ ಹಾಲಾಡಿ ಅಪ್ಪಯ್ಯ (ನಾರಣಪ್ಪ ಉಪ್ಪೂರರ)ನ ಅದೆಷ್ಟೋ ಪದ್ಯಗಳನ್ನು ರೆಕಾರ್ಡ್ ಮಾಡಿದ್ರು. ಹಾಗೆಯೇ ನಾವುಡರ, ದಾರೇಶ್ವರರ ಹಾಡುಗಳನ್ನು ರೆಕಾರ್ಡ್ ಮಾಡಿದ್ರು. ಈಗಲೂ ಆ ಕೆಸೆಟ್ ಗಳನ್ನು ಸಿ.ಡಿ. ಮಾಡಿ ದಿನೇಶ ಸಂಗ್ರಹಿಸಿದ್ದಾನೆ. 
  ಇನ್ನು ಇಂಗ್ಲೀಷ್, ಕನ್ನಡ ಕಾದಂಬರಿಗಳನ್ನು ತುಂಬಾ ಓದುತ್ತಿದ್ದರು. ನನಗೆ ಶಿವರಾಮ ಕಾರಂತರು, ಭೈರಪ್ಪನವರ ಹುಚ್ಚು ಹಿಡಿಸಿದವರೇ ಅವರು ಅನ್ನಬಹುದು. ಅವರ ಕಾದಂಬರಿಗಳ ಬಗ್ಗೆ ನಮ್ಮಲ್ಲಿ ಬೇಕಾದಷ್ಟು ವಾದಗಳಾದದ್ದು ಉಂಟು. ಹಾಗೆಯೇ ಹಳೆಯ ಹಾಡುಗಳಂದ್ರೆ ತುಂಬಾ ಇಷ್ಟವಾಗಿತ್ತವರಿಗೆ. ಮುಖೇಶ, ಎಮ್.ಡಿ. ರಫಿಯ ಹಾಡುಗಳಲ್ಲಿ ಮುಳುಗಿ ಏಳುತ್ತಿದ್ದರು. ಮತ್ತೆ ಸಮುದ್ರ, ಅದರ ದಂಡೆಯ ಮೇಲೆ ಕುಳಿತು ಗಂಟೆಗಟ್ಟಲೆ ಬೇಕಾದ್ರೂ ಕಳೀತಿದ್ರು.
ಇನ್ನೇನು ಹೇಳಲಿ? ಇಲ್ಲಿ ಇರುವವರಿಗೆ ಅವರು ಹೊಸಬರೂ ಅಲ್ಲ. ತಿಳಿಯದಿದ್ದವರೂ ಅಲ್ಲ. ಮನೆ, ಮಕ್ಕಳನ್ನು ತುಂಬಾ ಪ್ರೀತಿಸುತ್ತಿದ್ದ ಅವರು ಅಕಾಲದಲ್ಲಿ ಹೋಗಿ ಇವತ್ತಿನ ಪ್ರೋಗ್ರಾಂ ನಲ್ಲಿ ‘ನೆನಪುಗಳು’  ಆಗಿದ್ದು ನಮ್ಮ ದುರದೃಷ್ಟ. ಅಷ್ಟೇ.
ಕಳೆದ ಸಲ ಊರಿಗೆ ಹೋದಾಗ ನಮ್ಮ ಚೀಅಣ್ಣಯ್ಯ (ಶ್ರೀಧರ ಉಪ್ಪೂರ ) ಹೀಗೇ ಲೋಕಾಭಿರಾಮ ಮಾತನಾಡುತ್ತ ಅಲ್ಲಮ ಪ್ರಭು ಹೇಳಿದ ಒಂದು ವಾಕ್ಯ ಹೇಳಿದ. “ಮಾತು ಸೋತಿತು”. ಅವರ ವಿಷಯದಲ್ಲೂ ನಾನು ಅಷ್ಟೆ ಹೇಳಬಲ್ಲೆ.
                          “ ಮಾತು ಸೋತಿತು ”
                                                                                       - ಸಖು ರಮೇಶ್ ಉಪ್ಪೂರ