ಮಂಗಳವಾರ, ಜನವರಿ 16, 2018

ದಿನೇಶ ಉಪ್ಪೂರ:

ನನ್ನೊಳಗೆ

   ತಟ್ಟುವಟ್ಟು ವಿಶ್ವನಾಥ ಜೋಯಿಸರ ಅಮ್ಮನ ಅಪ್ಪಯ್ಯ ವಾಸುದೇವ ಭಟ್ಟರೂ ನನ್ನ ಅಜ್ಜಯ್ಯ ಶ್ರೀನಿವಾಸ ಉಪ್ಪೂರರು ಒಳ್ಳೆಯ ಸ್ನೇಹಿತ ರಾಗಿದ್ದರಂತೆ. ಅವರ ಮನೆಯಲ್ಲಿ ಏನಾದರೂ ವಿಶೇಷ ಕಾರ್ಯಕ್ರಮ ಇದ್ದರೆ ರಾತ್ರಿ ಅವರ ಮನೆಯಲ್ಲಿ ತಾಳಮದ್ದಲೆಯೋ ಪುರಾಣ ಪ್ರವಚನವೋ ಇರುತ್ತಿತ್ತು. ಸಂಜೆ ಹೊತ್ತಿಗೆ ಮಾತನಾಡಿಸಲು ಹೋದರೆ ರಾತ್ರಿ ಊಟಮಾಡಿಕೊಂಡೇ ಬರುತ್ತಿದ್ದರು.ಅವರದು ದೊಡ್ಡದೊಡ್ಡ ಕಂಬಗಳ ಚಾವಡಿ ಜಗಲಿ ಪಡಸಾಲೆ ಓರಿ ಕೊಟ್ಟಿಗೆ ಅಂತ ಎಲ್ಲ ಇರುವ ಹಿಂದಿನ ಕಾಲದ ವಿಶಾಲವಾದ ದೊಡ್ಡ ಮನೆ.

ತಟ್ಟುವಟ್ಟು ವಿಶ್ವನಾಥ ಜೋಯಿಸರು ಪ್ರಸಿದ್ಧ ಜ್ಯೋತಿಷಿಗಳು. ನಮ್ಮ ಮನೆಯಲ್ಲಿ ಏನಾದರೂ ಸಮಸ್ಯೆಯಾಗಿ ಜ್ಯೋತಿಷ್ಯ ಕೇಳಬೇಕಾದಲ್ಲಿ ಗಂಡು ಹೆಣ್ಣು ಕೂಡಿಕೆಗೆ ಜಾತಕ ತೋರಿಸಬೇಕಾದಲ್ಲಿ ಅಪ್ಪಯ್ಯ ಅವರಿಗೇ ತೋರಿಸಿ ಕೇಳುತ್ತಿದ್ದುದಾಗಿತ್ರು. ಅವರ ಮನೆಯಲ್ಲಿ ಎಪ್ರಿಲ್ ಮೇ ಸಮಯದಲ್ಲಿ ರಾಮನವಮಿಯನ್ನು ಗಡದ್ದಾಗಿ ಆಚರಿಸುತ್ತಿದ್ದರು. ಅದು ರಾತ್ರಿಯಲ್ಲಿ ಆಗುವ ಕಾರ್ಯಕ್ರಮ. ಊರಿನ ಆಸುಪಾಸಿನ ಪರವೂರಿನ ಬ್ರಾಹ್ಮಣರ ಮನೆಗಳಿಗೆಲ್ಲ ಅವರು ಆಳುಗಳ ಮೂಲಕ ಒಂದು ಸಣ್ಣ ಚೀಟಿಯಲ್ಲಿ ರಾಮನವಮಿಗೆ ಬನ್ನಿ ಎಂದು ಬರೆದು ಹೇಳಿಕೆ ಕಳಿಸುತ್ತಿದ್ದರು.

ಅವರು ಪಂಚಾಂಗಕರ್ತರೂ ಹೌದು. ಪ್ರತೀ ವರ್ಷ ಅವರು ತಯಾರಿಸುತ್ತಿದ್ದ ಪಂಚಾಂಗ ನಮಗೆಲ್ಲ ಉಚಿತವಾಗಿ ಕೊಡುತ್ತಿದ್ದರು.. ಹಾಗಾಗಿ ನಮ್ಮ ಮನೆಯಲ್ಲಿ ಅವರ ಮನೆಯ ರಾಮನವಮಿಯನ್ನು ಪಂಚಾಂಗ ತರಲೂ ಆಯಿತು ಎಂದು ಮಿಸ್ ಮಾಡಿಕೊಳ್ಳುತ್ತಿರಲಿಲ್ಲ. ರಾತ್ರಿ ಟಾರ್ಚೋ, ಸೂಡಿಯೋ ಹಿಡಿದುಕೊಂಡು ಅದನ್ನು ಮುಂದೆ ಹಿಂದೆ ಆಡಿಸುತ್ತಾ, ಹಾಡಿಯಲ್ಲಿ ಗದ್ದೆಬಯಲಿನ ಕಂಟದಲ್ಲಿ ಸೂಡಿಯ ಬೆಳಕಿನಲ್ಲಿ  ನಡೆದುಕೊಂಡು ಅವರ ಮನೆಗೆ ಹೋಗುವುದೇ ನಮಗೊಂದು ಸಂಭ್ರಮ. ನಾವು ಆಟಕ್ಕೆ ಹೋಗುತ್ತಿದ್ದುದೂ ಹಾಗೆಯೇ.

ಜೋಯಿಸರ ಮನೆಯಲ್ಲಿ ತುಂಬಾ ಹೊತ್ತಿನವರೆಗೆ ಪೂಜೆಯಾಗಿ ತಡರಾತ್ರಿಯಲ್ಲಿ ಫಲಹಾರ ಇರುತ್ತಿತ್ತು. ಊಟ ಇಲ್ಲ. ಆದರೆ ಊಟಕ್ಕಿಂತ ಹೆಚ್ಚು ಬಗೆಯ ತಿಂಡಿಗಳು, ಬೇಳೆ ಕಾಳುಗಳು, ಬಗೆಬಗೆಯ ಹಣ್ಣುಗಳು ಎರಡೆರಡು ಪಾಯಸ, ಅವಲಕ್ಕಿ ಮೊಸರು ಮಾಡಿ ಗಡದ್ದು ಮಾಡುತ್ತಿದ್ದರು. ಅವರ ಮನೆಯಲ್ಲಿ ಅವರ ಅಮ್ಮ ಹಾಗೂ ಅವರ ಹತ್ತಿರ ಜ್ಯೋತಿಷ್ಯ ಕಲಿಯಲು ಬಂದ ವಿದ್ಯಾರ್ಥಿಗಳು ಒಬ್ಬಿಬ್ಬರು ಮತ್ತು ಅವರು ಮಾತ್ರ . ಅವರು ತುಂಬಾ ತಡವಾಗಿ ಮದುವೆ ಆದದ್ದು.

ಒಮ್ಮೆ ಅವರನ್ನು ಮಾತಾಡಿಸಿಕೊಂಡು ಬರಲು ಅವರ ಮನೆಗೆ ಹೋದಾಗ, ಅವರ ಮನೆಯ ಒಳಗಿನ ಕೆಲಸಕ್ಕೆ ಯಾರಾದರೂ ಒಬ್ಬ ಬ್ರಾಹ್ಮಣ ಹೆಂಗಸು ಬೇಕಿತ್ತು ಎಂದು  ಅಪ್ಪಯ್ಯನಿಗೆ ಹೇಳಿದರಂತೆ. ಅಪ್ಪಯ್ಯನ ಮೇಳ ಶೃಂಗೇರಿಯ ಬದಿಗೆ ಹೋದಾಗ, ಅಲ್ಲಿ ಅಭಿಮಾನಿಯೊಬ್ಬರಲ್ಲಿ ಮಾತಾಡುತ್ತಾ, ಅಪ್ಪಯ್ಯ ಈ ವಿಷಯ ಹೇಳಿದರು. ಅವರ ಗುರುತಿನವರೊಬ್ಬ ಹೆಂಗಸು ಇದ್ದು ಅವರು ಬರಲು ಒಪ್ಪಿದ್ದು ಆಯಿತು. ಆದರೆ "ಸ್ವಲ್ಪ ಮಡಿ ಮೈಲಿಗೆ ಇರುವವರು"  ಅಂದರಂತೆ. ಆಗ ಅಪ್ಪಯ್ಯ "ಸರೀ ಆಯಿತು. ಅದು ಜೋಯಿಸರ ಮನೆಯೇ. ಅವರಿಗೂ ಅಂತಹ ಜನವೇ ಬೇಕಾದ್ದು. ಪೂಜೆ ಪುನಸ್ಕಾರ ಅಲ್ಲಿ ಯಾವಾಗಲೂ ಆಗುತ್ತಿರುತ್ತದೆ ". ಎಂದು ಅವರನ್ನು ಕರೆದುಕೊಂಡು ಬಂದು ಜೋಯಿಸರ ಮನೆಯಲ್ಲಿ ಬಿಟ್ಟರು.

ಸ್ವಲ್ಪ ದಿನ ಆಗಿರಬಹುದು. ಇನ್ನೊಮ್ಮೆ ಅಪ್ಪಯ್ಯ ನಮ್ಮ ಮನೆಗೆ ಬರುವವರು, ಆ ಹೆಂಗಸು ಹೇಗಿದ್ದಾರೆ ಅಂತ ನೋಡುವ ಅಂತ ದಾರಿಯಲ್ಲಿ ಇರುವ ಆ ಜೋಯಿಸರ ಮನೆಗೆ ಹೋದರು. ಜೋಯಿಸರು ನಕ್ಕು "ಇದು ಆಗುವುದಲ್ಲ ಮರಾಯ್ರೆ. ಇದು ಮಡಿ ಮೈಲಿಗೆ ಅಂದರೆ ಭಯಂಕರ. ಅವರು ನಡೆಯುವಾಗಲೆಲ್ಲ ಮುಂದೆ ನೆಲದ ಮೇಲೆ ಸಗಣಿಯ ನೀರು ಚಿಮುಕಿಸುತ್ತಾ ನಡೆಯುತ್ತಾರೆ. ಅವರ ಧ್ಯಾನ ಪೂಜೆ ಭಜನೆಯ ವ್ಯಾಪಾರದಲ್ಲಿ ನಾವೇ ಅವರ ಸೇವೆ ಮಾಡುವುದಾಯಿತು". ಎಂದರು. ಅಪ್ಪಯ್ಯ ನಕ್ಕು ಪುನಹ ಅವರನ್ನು ಶೃಂಗೇರಿಗೆ ಕರೆದುಕೊಂಡು ಹೋಗಿ ಬಿಟ್ಟು ಬರಬೇಕಾಯಿತು.

ಜೋಯಿಸರು ಬಹಳ ಓದಿದವರು. ವೇದಾಧ್ಯಯನ ಮಾಡಿದವರು. ಊರಿನ ಎಲ್ಲರಿಗೂ ಬೇಕಾದವರಾಗಿದ್ದರು. ಚಿಮಣಿ ಎಣ್ಣೆಯ ದೀಪ, ಹೆಚ್ಚೆಂದರೆ ಗ್ಯಾಸ್ಲೈಟ್ ಮಾತ್ರ ಇದ್ದ ಆ ಕಾಲದಲ್ಲಿ, ಮನೆಯ ಹತ್ತಿರದವರೆಗೆ ರಸ್ತೆ ಆಗಬೇಕು, ಕರೆಂಟ್ ಬರಬೇಕು ಎಂದು ಕನಸು ಕಂಡು ಆ ಬಗ್ಗೆ ಬಹಳ ಶ್ರಮಿಸಿದರು. ಅಪ್ಪಯ್ಯನೂ ಅವರ ಜೊತೆ ಕೈಗೂಡಿಸಿದರು. ನಮ್ಮ ಇಡೀ ರಾಷ್ಟ್ರದಲ್ಲಿ ಕರೆಂಟ್ ಇರಲಿಲ್ಲ. ಆದರೆ ಆಗ ಇದ್ದ ಪಂಪುಸೆಟ್ಟು ಸ್ಕೀಮ್ ಒಂದರಲ್ಲಿ ಕನಿಷ್ಟ ಮೂರು ಜನ ಒಟ್ಟಿಗೇ ಸೇರಿದರೆ ಮಾತ್ರಾ ಕಂಬ ಹಾಕಿ ಎಷ್ಟು ದೂರ ಆದರೂ ತಂತಿ ಎಳೆದು ವಿದ್ಯುತ್ ಕೊಡುತ್ತಿದ್ದರು. ಕೃಷಿ ಪಂಪ್ ಗೆ ಕರೆಂಟ್ ಬಂದರೆ ಮನೆಗೂ ತೆಗೆದುಕೊಳ್ಳಬಹುದು ಎಂದು ಅವರ ಲೆಕ್ಕಾಚಾರ. ಆಗ ನಮ್ಮ ಮನೆಗೆ ಬರಲು ಇಪ್ಪತ್ತೊಂದು ಕಂಬ ಹಾಕಬೇಕಾಗಿತ್ತು. ಆದರೆ ನನ್ನ ಅಪ್ಪಯ್ಯ ಮತ್ತು ಆ ಜೋಯಿಸರು ಬಿಟ್ಟರೆ ಮೂರನೆಯ ಜನ ಅವರಿಗೆ ಸಿಗಲೇ ಇಲ್ಲ. ಹಾಗಾಗಿ ಅಪ್ಪಯ್ಯ ಬದುಕಿರುವವರೆಗೂ ನಮ್ಮ ಮನೆಗೆ ಕರೆಂಟ್ ಬರಲೇ ಇಲ್ಲ.

ಜೋಯಿಸರು ಊರಿಗೆ ಸ್ಥಿತಿವಂತರಾಗಿದ್ದರು. ಸಹಾಯ ಕೇಳಿ ಅವರ ಮನೆಗೆ ಹೋದರೆ ನಿರಾಶೆಯಾಗಿ ಬರಬೇಕಾಗಿರಲಿಲ್ಲ. ಮಾರ್ವಿ ರಾಮಕೃಷ್ಣ ಹೆಬ್ಬಾರರ ಮತ್ತೊಬ್ಬ ಹೆಂಡತಿ ಅವರ ಜಾಗದಲ್ಲಿಯೇ ಸ್ವಲ್ಪ ಆಚೆ ಮಕ್ಕಿಯಲ್ಲಿ ಹುಲ್ಲಿನ ಮನೆ ಕಟ್ಡಿಕೊಂಡು ಇದ್ದು ಅವರ ಮನೆಯ ಕೆಲಸ ಮಾಡಿಕೊಂಡು ಮಕ್ಕಳೊಂದಿಗೆ ಬಹಳ ಸಮಯದ ವರೆಗೆ ಇದ್ದರು.

 ಮೊನ್ನೆ ಮೊನ್ನೆ ಅಪ್ಪಯ್ಯ ನ ಯಕ್ಷಗಾನ ಅಧ್ಯಯನ ಪುಸ್ತಕವನ್ನು ಪುನರ್ ಮುದ್ರಣ ಮಾಡುವ ಕೆಲಸಕ್ಕೆ ನಾನು ಮಂಗಳೂರಿನ ಗಣೇಶ ಪ್ರಿಂಟರ್ಸ್ ಗೆ ಹೋಗಿದ್ದಾಗ ಅಲ್ಲಿಯ ಪ್ರೆಸ್ ನ ಯಜಮಾನರು ಆ ವಿಶ್ವನಾಥ ಜೋಯಿಸರನ್ನು ತುಂಬಾ ನೆನೆಪಿಸಿಕೊಂಡರು. ಅವರ ಪಂಚಾಂಗವನ್ನು ಅಲ್ಲಿಯೇ ಪ್ರಿಂಟ್  ಮಾಡಿಸುತ್ತಿದ್ದರಂತೆ. ಒಮ್ಮೆ ತಿದ್ದುಪಡಿ ಗೆ ಬಂದರೆ ಎಲ್ಲ ತಿದ್ದುಪಡಿಗಳನ್ನೂ ನೋಟ್ ಮಾಡಿಕೊಂಡು ಬೆಳಿಗ್ಗೆ ಬಂದು ರಾತ್ರಿಯವರೆಗೆ ಇದ್ದು ಒಂದೇ ದಿನದಲ್ಲಿ ಮುಗಿಸುತ್ತಿದ್ದರಂತೆ. ಅವರನ್ನು ನೋಡಿದರೇ ಕಾಲಿಗೆ ಬಿದ್ದು ನಮಸ್ಕಾರ ಮಾಡಬೇಕು ಅನ್ನಿಸುತ್ತಿತ್ತು ಎಂದು ಅವರು ಹೇಳಿದರು. ಅಂತಹ ವ್ಯಕ್ತಿತ್ವ. ಮಧ್ಯಾಹ್ನ ಒಂದು ಎಳನೀರು. ಅಷ್ಟೇ ಅವರ ಆಹಾರ. ಇಂತಹ ದಿನ ಬರಬಹುದಾ? ಎಂದು ಒಂದು ದಿನ ನಿಶ್ಚಯ ಮಾಡಿದ ಮೇಲೆ ಅವರು ತಪ್ಪದೇ ಅಂದು ಬರುತ್ತಿದ್ದರಂತೆ.

ಒಮ್ಮೆ  ದೀಪಾವಳಿಯ ಅಂಗಡಿಪೂಜೆಗೆಂದು ಕುಂದಾಪುರಕ್ಕೆ ಹೋದವರು ಮನೆಗೆ ಬಂದು,ಅವರ ಮನೆಯ ದೇವರ ಕೋಣೆಯಲ್ಲಿ ಕುಳಿತವರು  ಅಲ್ಲಿಯೇ ಹೃದಯಾಘಾತದಿಂದ ನಿಧನರಾದರು.