ಭಾನುವಾರ, ಡಿಸೆಂಬರ್ 7, 2014



          ಮನಸ್ಸಿಗೆ ಅನ್ನಿಸಿದ್ದು - ಹೇಳಿದ್ದು
ನಾನು ಚಿಕ್ಕವನಿರುವಾಗ, ಶಾಲೆಗೆ ರಜೆ ಇರುವಾಗ ಅಪ್ಪಯ್ಯನ ಜೊತೆ ಮೇಳದ ಜೊತೆಗೆ ಆಟ ನೋಡಲು ಹೋಗುತ್ತಿದ್ದೆ ಹದಿನೈದು ಇಪ್ಪತ್ತು ದಿನ ಮೇಳದಲ್ಲಿ ಅವರೊಟ್ಟಿಗೇ ಇರುತ್ತಿದ್ದೆ ದಿನಾ ಆಟ ನೋಡುತ್ತಿದ್ದೆ. ನಂತರ ಡಿಗ್ರಿ ಮುಗಿದು ಮನೆಯಲ್ಲಿ ಇರುವಾಗ ಅಪ್ಪಯ್ಯನ ಕಾಲು ನೋವಾಗಿದ್ದ ಅವಧಿಯಲ್ಲೂ ಅವರಿಗೆ ಸಹಾಯಕನಾಗಿ ಅವರು ಹೋದಲ್ಲೆಲ್ಲ ಅವರ ಚೀಲ ಹಿಡಿದು ಆಟಕ್ಕೆ ತಾಳಮದ್ದಲೆಗೆ ಹೋಗುತ್ತಿದ್ದೆ. ಹಾಗಾಗಿ ನಾನು ತುಂಬಾ ಆಟ ನೋಡಿದ್ದೇನೆ ಒಳ್ಳೊಳ್ಳೆಯ ತಾಳಮದ್ದಲೆಯ ಕೂಟಗಳಿಗೆ ಸಾಕ್ಷಿಯಾಗಿದ್ದೇನೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಬೆಂಗಳೂರು ಅಂತ ಅಪ್ಪಯ್ಯನ ಜೊತೆ ನೆರಳಿನಂತೆ ತಿರುಗಿದ್ದೇನೆ. ಅವರ ಹತ್ತಿರ ಇದ್ದ ಹಲವು ಪ್ರಸಂಗ ಪುಸ್ತಕಗಳನ್ನು ಓದಿ ನೋಡಿದ್ದೇನೆ ಅವರ ಜೊತೆ ಹಲವು ಬಾರಿ ಯಕ್ಷಗಾನದ ಬಗ್ಗೆ ಮಾತಾಡಿದ್ದೇನೆ ಅಭಿಪ್ರಾಯ ಹಂಚಿಕೊಂಡಿದ್ದೇನೆ. ಆದರೆ ನಾನು ಭಾಗವತಿಕೆ ಕಲಿಯಲಿಲ್ಲ. ಏಕೊ, ಕಲಿಯಬೇಕು ಅಂತ ತೀವ್ರವಾಗಿ ಅನ್ನಿಸಲೇ ಇಲ್ಲ. ಅವರೂ ಒತ್ತಾಯಿಸಲಿಲ್ಲ ಇರಲಿ ಬಿಡಿ ಅದರಿಂದ ನನಗಾಗಲೀ ಯಕ್ಷಗಾನಕ್ಕಾಗಲೀ ನಷ್ಟವಂತೂ ಆಗಿಲ್ಲ.
ಈಗೀಗ ಎಲ್ಲಾ ಯಕ್ಷಗಾನ ವಿದ್ವಾಂಸರು ಚಿಂತಕರು ವಿಮರ್ಶಕರು ಹೇಳುವುದು ಒಂದೆ. ಯಕ್ಷಗಾನ ಕುಲಗೆಡುತ್ತಿದೆ. ದಾರಿ ತಪ್ಪುತ್ತಿದೆ. ಇದಕ್ಕೆ ಭವಿಷ್ಯ ಇಲ್ಲ. ಈಗೀಗ ಬರುತ್ತಿರುವ ಬದಲಾವಣೆಗಳು ಯಕ್ಷಗಾನಕ್ಕೇ ಮಾರಕ ಎಂದು. ಹೌದು ಒಂದು ರೀತಿಯಲ್ಲಿ ನಾವು ನೋಡಿದ ಹಿಂದಿನ ಕಾಲದ ಆಟಗಳನ್ನು ನೆನಪಿಸಿಕೊಂಡು ಈಗ ಆಟಕ್ಕೆ ಹೋದರೆ ನಾವು ಆಟಕ್ಕೆ ಬಂದಿದ್ದಾ ಅಥವಾ ಇನ್ನೇನೋ ನೋಡುತ್ತಿದ್ದೇವೆಯೋ ಎಂಬಷ್ಟು ಈಗ ಪ್ರದರ್ಶನಗಳು ಬದಲಾಗುತ್ತಿದೆ. ಯಕ್ಷಗಾನದ ಅಪೂರ್ವವಾದ ಮಟ್ಟು, ಹಾಡಿನ ದಾಟಿಗಳು, ಮರೆಯಾಗಿ ಇಂದು ಹಿಂದುಸ್ಥಾನಿ ಸಂಗೀತಗಳು ಭಾವಗೀತೆಗಳು ನೇರವಾಗಿ ಸಿನಿಮಾ ಗೀತೆಗಳು ಅರ್ಧ ಗಂಟೆ ಆಲಾಪನೆಗಳು ತುಂಬಿಹೋಗಿವೆ. ಕೇವಲ ಜನರನ್ನು ರಂಜಿಸುವುದೇ ಉದ್ದೇಶ ಎಂಬಂತೆ ಪರಿಭಾವಿಸಲಾಗುತ್ತಿದೆ. ಕುಣಿತಗಳಲ್ಲಿ ಆಂಗ ಅಕಾರಗಳಿಲ್ಲದೇ ಆಂಗಿಕ ಚೇಷ್ಟೆಗಳೇ ಹೆಚ್ಚಾಗಿ ಕಲಾವಿದರು ಕುಳಿತು, ಮಲಗಿ, ಮುಂಗಾಲಲ್ಲಿ ನಡೆದು ಏನೇನೆಲ್ಲಾ ಸರ್ಕಸ್ ಮಾಡಿ ಇದೇ ಯಕ್ಷಗಾನ ಎಂಬಂತೆ ಬಿಂಬಿಸುತ್ತಿದ್ದಾರೆ. ಇವರೆಲ್ಲ ಅವರು ಅವರ ಜೀವನ ವೃತ್ತಿಗಳಿಗಷ್ಟೆ ಅಲ್ಲ ಅವರಿಗೆ ಕಲಿಸಿದ ಗುರುಗಳಿಗೇ ಅನ್ಯಾಯ ಮಾಡುತ್ತಿದ್ದಾರೆ ಅನ್ನದೇ ವಿಧಿ ಇಲ್ಲ. ಒಬ್ಬ ಕಲಾವಿದ ಪ್ರೇಕ್ಷನನ್ನು ತನ್ನ ಮಟ್ಟಕ್ಕೇ ಏರಿಸಬೇಕೇ ವಿನಹಾ ಅವನಿಗೆ ಖುಷಿಕೊಡುವ ನೆವನದಲ್ಲಿ ಅವನ ಮಟ್ಟಕ್ಕೆ ಇಳಿಯಬಾರದು ಅದಕ್ಕಾಗಿಯೇ ದಿ. ಕೆರೆಮನೆ ಶಂಭು ಹೆಗಡೆಯವರು ಇಂದಿನ ಕಲಾವಿದರಿಗೆ ಆಟಮಾಡುವುದು ಹೇಗೆ ಎಂದು ತರಬೇತಿ ಕೊಡುವುದರ ಜೊತೆಜೊತೆಗೆ ಪ್ರೇಕ್ಷಕರಿಗೆ ಯಕ್ಷಗಾನದ ಅಭಿಮಾನಿಗಳಿಗೆ ಆಟ ನೋಡುವುದು ಹೇಗೆ ? ಎಂಬ ಬಗ್ಗೆಯೂ ತರಬೇತಿ ಕೊಡಬೇಕು ಎಂಬಂತಹಾ ಮಾತನ್ನು ಒಂದು ಸಂದರ್ಶನದಲ್ಲಿ ಆಡಿದ್ದರು.
ಅಂದ ಮಾತ್ರಕ್ಕೇ ಇಂದು ಒಳ್ಳೆಯ ಯಕ್ಷಗಾನ ಇಲ್ಲವೇ ಅಂದರೆ ಅದು ತಪ್ಪು . ಖಂಡಿತಾ ಇದೆ. ಈ ಸಿನಿಮಾ ಪದ್ಯಗಳನ್ನು ಹಾಡುವವರು ಸರ್ಕಸ್ ಕುಣಿತ ಮಾಡುವವರೇ ಅದ್ಭುತವಾಗಿ ಒಳ್ಳೆಯ ಪ್ರಭುದ್ಧ ಪ್ರದರ್ಶನವನ್ನೂ ನೀಡಬಲ್ಲರು. ಹಾಗಾಗಿ ನಾವು ಆಟ ನೋಡಲೇಬೇಕು. ನೋಡದಿದ್ದರೆ ಒಳ್ಳೆಯದೂ ಇಲ್ಲ ಕೆಟ್ಟದ್ದೂ ಇಲ್ಲ ಅಂತ ಆಗಿಬಿಡುತ್ತದೆ.
ಹೌದು ಯಾವುದೇ ಕಲೆ ನಿಂತ ನೀರಾಗಬಾರದು ಬದಲಾವಣೆ ಬೇಕೇ ಬೇಕು. ಹೊಸ ಹೊಸ ಸಾಧ್ಯತೆಗಳತ್ತ ತೆರೆದುಕೊಳ್ಳಬೇಕು.  ಆದರೆ ಆ ಬದಲಾವಣೆಗಳು ಕಲೆಗೆ ಪೂರಕವಾಗಿರಬೇಕೆ ಹೊರತು ಮಾರಕವಾಗಬಾರದು. ಹಿಂದೆ ಹೇಳುವುದಿತ್ತು ಸತ್ವಸಾರ ಇರುವ ಬದಲಾವಣೆಗಳು ಹೊಸತನಗಳು ಕಲೆಯೊಂದಿಗೆ ಲೀನವಾಗಿ ಶಾಶ್ವತವಾಗಿ ಉಳಿಯುತ್ತದೆ ಸತ್ವವಿಲ್ಲದ ಜಳ್ಳು ಸ್ವಲ್ಪ ಕಾಲದಲ್ಲಿ ಪ್ರಯೋಗವೆಂಬಂತೆ ಮರೆಯಾಗಿ ಹೋಗುತ್ತದೆ ಎಂದು. ಒಬ್ಬ ಕೃಷಿಕ ಭತ್ತದ ಹೊಸಹೊಸ ತಳಿಗಳನ್ನು ಹುಡುಕಿ ಭತ್ತ ಬೆಳೆದು ಲಾಭ ಗಳಿಸಬೇಕು. ಆದರೆ ಹೊಸತಳಿಗಳನ್ನು ಸಂಶೋದಿಸುವ ನೆಪದಲ್ಲಿ ಬತ್ತದ ಬದಲು ಗೋದಿ ಬೆಳೆಯಬಾರದು. ಅದು ಬೇಕಾದ ಬದಲಾವಣೆಯಲ್ಲ. ಆ ಎಚ್ಚರ ಸದಾ ಇರಬೇಕು.
ಕಲಾವಿದನಲ್ಲಿ ಕಲಿಯುವ ತುಡಿತ ಅನವರತವೂ ಇರಬೇಕು. ಅವನು ದೈನ್ಯತೆಯಿಂದ ದಿವ್ಯತೆಯೆಡೆಗೆ ಸಾಗಬೇಕು ಎಂಬ ಮಾತಿದೆ. ತಾನು ಕಲಿತಾಯಿತು ಎನ್ನುವ ಕಲಾವಿದ, ಬೇರೆಯವರು ನನಗೆ ಏನು ಹೇಳುವುದು? ಎನ್ನುವ ಕಲಾವಿದನ ಬೆಳವಣಿಗೆ ನಿಂತು ಹೋಗಿಬಿಡುತ್ತದೆ.ಈ ಕಲೆ ಹಣವನ್ನೂ ಹೆಸರನ್ನೂ ಕೊಡುವುದರಿಂದ ಇದನ್ನೇ ನಂಬಿ ಬದುಕುವ ಕಲಾವಿದನಲ್ಲಿ ದೈನ್ಯತೆ ಇಲ್ಲದಿದ್ದರೆ ಕಲಾಭಿಮಾನಿಗಳ ಅವಲಂಬನೆ ಇಲ್ಲದಿದ್ದರೆ ಬೇಗನೇ ಭ್ರಮನಿರಸನ ಹೊಂದಿ ಹುಚ್ಚನಾಗಿ ಬಿಡುತ್ತಾನೆ.
ಇನ್ನು ಪ್ರದರ್ಶನದ ಮಟ್ಟಿಗೆ ಹೇಳುವುದಾದರೆ. ಈ ಪ್ರದರ್ಶನ ಶಬ್ಧದಲ್ಲಿಯೇ ದರ್ಶನ ಎಂಬುದು ಕೂಡ ಇದೆ ಎನ್ನುವ ಎಚ್ಚರ ಪ್ರತೀ ಕಲಾವಿದನಿಗೆ ಬೇಕೇ ಬೇಕು. ಕಲಾವಿದರಲ್ಲಿ ಎರಡು ಬಗೆಯಂತೆ ಒಂದು ಮೇರು ಪ್ರತಿಭೆಗಳು ಇನ್ನೊಂದು ಸಾಗರ ಪ್ರತಿಭೆಗಳು. ಈ ಮೇರು ಪ್ರತಿಭೆಯ ಕಲಾವಿದರು ಬೇರೆ ಕಲಾವಿದರ ಬಗ್ಗೆ ಯೋಚಿಸುವುದೇ ಇಲ್ಲ ಎದುರು ಕಲಾವಿದರೊಂದಿಗೆ ಹೊಂದಾಣಿಕೆ ಬೇಡ. ಇತರರೊಂದಿಗೆ ಪಾತ್ರದ ಬಗ್ಗೆ ಚರ್ಚಿಸುವುದೂ ಬೇಕಿಲ್ಲ. ಅವರದ್ದು ಒಂದು ಚಂದ ಆದರೆ ಸಾಕು. ಈಗೀಗ ಇಂತಹಾ ಕಲಾವಿದರೇ ಹೆಚ್ಚು ಅಂತ ನನ್ನ ಭಾವನೆ . ನನ್ನ ಅನಿಸಿಕೆ ತಪ್ಪು ಇದ್ದರೂ ಇದ್ದಿತು. ಹೌದಾಗಿದ್ದರೆ ಕ್ಷಮಿಸಿ.
ಇನ್ನೊಂದು ಪ್ರಕಾರದ ಕಲಾವಿದರು ಸಾಗರ ಪ್ರತಿಭೆಗಳು. ಇವರಿಗೆ ಓಟ್ಟಾರೆ ಪ್ರದರ್ಶನ ಚೆನ್ನಾಗಿ ಆಗಬೇಕು. ಇವರು ತಮ್ಮ ಪತ್ರದ ಬಗ್ಗೆ ಮುಂಚಿತವಾಗಿ ತಯಾರಿ ಮಾಡಿಕೊಂಡೇ ರಂಗಸ್ಥಳಕ್ಕೆ ಬರುತ್ತಾರೆ. ಎದುರು ಪಾತ್ರದವರು ಏನು ಹೇಳುತ್ತಾರೆ? ಅದಕ್ಕೆ ತಾನು ಏನು ಉತ್ತರ ಕೊಡಬೇಕು? ಯಾವ ಪಧ್ಯಕ್ಕೆ ಎಷ್ಟು ಅರ್ಥ ಹೇಳಬೇಕು? ಏನು ಹೇಳಬೇಕು? ಎಂದು ಮುಂಚಿತವಾಗಿ ಮನನ ಮಾಡಿಕೊಂಡಿರುತ್ತಾರೆ. ಭಾಗವತರ ಹತ್ತಿರ ಮೊದಲೇ ಮಾತಾಡಿ ಕೊಂಡು ಯಾವ ಪದ್ಯಕ್ಕೆ ಪುನರಾವರ್ತನೆ ಬೇಕು ಯಾವ ಪದ್ಯಕ್ಕೆ ಚಾಲು ಕುಣಿತ ಬೇಕು ಎಂದೆಲ್ಲಾ ಸುಮಾರಾಗಿ ಮೊದಲೇ ತೀರ್ಮಾನ ಆಗಿ ಬಿಟ್ಟಿರುತ್ತದೆ. ಇಂತಹಾ ಕಲಾವಿದರು ಸೇರಿ ಒಂದು ಪ್ರದರ್ಶನ ಮಾಡಿದರೆ ಅದು ಬಹುತೇಕ ಯಶಸ್ವೀ ಪ್ರದರ್ಶನ ಆಗುತ್ತದೆ. ಮತ್ತೆ ಒಂದು ಪ್ರದರ್ಶನ ಯಶಸ್ವಿ ಆಗುವುದು ಬಿಡುವುದು ಆಯಾಯ ಕಲಾವಿದನ ಅಂದಿನ ಮನೋಧರ್ಮ ,   ಪ್ರೇಕ್ಷಕರ ಅದೃಷ್ಟ.
ಮೊದಲು ಭಾಗವತರೇ ಯಕ್ಷಗಾನ ಪ್ರದರ್ಶನದ ನಿರ್ದೇಶಕರಾಗಿರುತ್ತಿದ್ದರು. ಅವರು ಹೇಳಿದಂತೆ ಕತೆ ಸಾಗುತ್ತಿತ್ತು. ಯಾವ ಪ್ರಸಂಗದಲ್ಲಿ ಯಾವುದು ಮುಖ್ಯ? ಎಲ್ಲಿ ಓಡಿಸಬಹುದು? ಎಲ್ಲಾ ಅವರೇ ನೋಡಿ ಕೊಳ್ಳುತ್ತಿದ್ದುದು. ಈಗ ಕಾಲ ಬದಲಾಗಿದೆ. ಎಲ್ಲಾ ಕಲಾವಿದರಿಗೂ ಅವಕಾಶ ಕೊಡಬೇಕು. ಎಲ್ಲರೂ ದೊಡ್ಡದೊಡ್ಡಕಲಾವಿದರೆ, ಆದ್ದರಿಂದ ಭೀಷ್ಮ ವಿಜಯ ಆದರೆ ಸಾಲ್ವ ಅಂಬೆಯರ ಸಂವಾದ ಕಾಲಮಿತಿ ಯಕ್ಷಗಾನದಲ್ಲೂ ಅರ್ಧ ಭಾಗ ತಿನ್ನುತ್ತದೆ. ಕರ್ಣಾರ್ಜುನ ಆದರೆ ಕರ್ಣನಿಗಿಂತ ಶಲ್ಯ ಕೃಷ್ಣರೇ ಪ್ರದರ್ಶನವನ್ನು ಆವರಿಸಿ ಬಿಡುತ್ತಾರೆ. ಚಿತ್ರಾಕ್ಷಿ ಕಲ್ಯಾಣ ಅದರೆ ವಾರಿಜಾಂಬಕಿ ಲಾಲಿಸು ಅರ್ಧ ಗಂಟೆಗೂ ಹೆಚ್ಚು ಕಾಲ ತೆಗೆದುಕೊಳ್ಳುತ್ತದೆ. ಗದಾಯುದ್ಧ ಆದರೆ ಕಪಟ ನಾಟಕ ರಂಗ, ಭಾಗವತರೂ ಕೌರವನೂ ಸ್ಪರ್ಧೆಗಿಳಿದು ಒಬ್ಬರು ಸೋಲುವವರೆಗೂ ಪದ್ಯ ಕುಣಿತ ಸಾಗುತ್ತದೆ ಹೀಗೆ.
ಹೀಗಾಗಬಾರದು. ಪ್ರದರ್ಶನದ ಒಟ್ಟಂದಕ್ಕೆ ಇದು ಮಾರಕ. ಅದನ್ನು ನೋಡುವುದಕ್ಕಾಗಿಯೇ ಪ್ರೇಕ್ಷಕರು ಬರುತ್ತಾರೆ ಎಂಬ ಮನೋಭಾವ ಕಲಾವಿದರಿಗಿದ್ದರೆ ಬರೀ ಆ ಭಾಗವನ್ನು ಮಾಡಲಿಕ್ಕೇ ಒಂದು ಪ್ರದರ್ಶನ ಏರ್ಪಡಿಸಲಿ ಅಲ್ಲವೇ?
 ಹಿಂದೆ ಒಂದು ಕಾಲ ಇತ್ತು. ಅದನ್ನು ಯಕ್ಷಗಾನದ ಸ್ವರ್ಣಯುಗ ಎಂದುಹಿರಿಯರು ಹೇಳುವುದನ್ನು ಕೇಳಿದ್ದೇನೆ. ಸಾಲಿಗ್ರಾಮ ಮೇಳ ಅಮೃತೇಶ್ವರಿ ಮೇಳ, ಜನ ಈಗಲೂ ನೆನಪಿಸಿಕೊಳ್ಲುತ್ತಾರೆ ಭೀಷ್ಮ ಭೀಷ್ಮ ಭೀಷ್ಮ ಚಂದ್ರಹಾಸ - ಬೇಡರ ಕಣ್ಣಪ್ಪ. ಭಸ್ಮಾಸುರ - ರಾಜಾ ಯಯಾತಿ, ಇಡಗುಂಜಿ ಮೇಳದ ಹರಿಶ್ಚಂದ್ರ, ನಳದಮಯಂತಿ ಒಂದೇ ಎರಡೇ...... .ಆಗಿನ ಕಲಾವಿದರು ಇದ್ದಕ್ಕಿದ್ದಂತೆ ರಾತ್ರಿ ಬೆಳಗಾಗುವುದರೊಳಗೆ ಪ್ರಸಿದ್ಧಿಗೆ ಬಂದವರಲ್ಲ. ಹಲವಾರು ವರ್ಷಗಳಿಂದ ಹಿರಿಯ ಕಲಾವಿದರನ್ನು ನೋಡಿ, ಅನುಸರಿಸಿ ಬೆಳೆದು ಬಂದವರು. ಅನುಭವದ ಮೂಸೆಯಲ್ಲಿ ಮೈತಳೆದು ಬಂದವರು. ಆಗ ಭಾಗವತರ ಪ್ರಯತ್ನವೂ ಅಷ್ಟೇ. ಅಂತಹವರ ಸಾಲಿನಲ್ಲಿ ನಮ್ಮ ತಂದೆ ನಾರ್ಣಪ್ಪ ಉಪ್ಪೂರರು ಕೆಪ್ಪೆಕೆರೆ ಸುಬ್ರಾಯ ಭಾಗವತರು. ದಾಸ ಭಾಗವತರೂ ನೆಬ್ಬೂರರು ಕಾಳಿಂಗ ನಾವಡರು ದಾರೇಶ್ವರರು... ಬರುತ್ತಾರೆ.  ಅದನ್ನು ಹೇಳಲಿಕ್ಕೆ ಹೋದರೆ ಅಂತ್ಯವೇ ಇಲ್ಲ.

                                                                                        ದಿನೇಶ ಉಪ್ಪೂರ
                                                                ಅಂಬಾಗಿಲು ಸಂತೆಕಟ್ಟೆ ಅಂಚೆ
                                                                           ಉಡುಪಿ -5