ಸೋಮವಾರ, ಜುಲೈ 10, 2017

                  ದೊಡ್ಡ ಸಾಮಗರು
        ರಮ ಪೂಜ್ಯರಾದ ಹರಿದಾಸ ಮಲ್ಪೆ ಶಂಕರನಾರಾಯಣ ಸಾಮಗರು, ಉಡುಪಿ ತಾಲೂಕಿನ ಹಾರಾಡಿ ಎಂಬಲ್ಲಿ ದಿನಾಂಕ ೧೧.೧೨.೧೯೧೧ ರಂದು ಜನಿಸಿದರು. ತಂದೆ ಸುಪ್ರಸಿದ್ಧ ಪುರೋಹಿತರಾದ ಲಕ್ಷ್ಮೀನಾರಾಯಣ ಸಾಮಗರು. ತಾಯಿ ಲಕ್ಷ್ಮೀದೇವಿಯಮ್ಮ. ಇವರ ಮನೆ ಮಲ್ಪೆ ಕೊಡವೂರು ಶಂಕರನಾರಾಯಣ ದೇವಸ್ಥಾನದ ಬಳಿಯ ಮೂಡುಬೆಟ್ಟಾದರೂ ಸಾಮಗರು, ತಾಯಿಯ ಮನೆಯಾದ ಹಾರಾಡಿಯಲ್ಲಿ ಹುಟ್ಟಿ ಅಲ್ಲಿಯೇ ಬೆಳೆದು ಬ್ರಹ್ಮಾವರದ ಇಗರ್ಜಿ ಶಾಲೆಯಲ್ಲಿ ನಾಲ್ಕನೇ ತರಗತಿಯವರೆಗೆ ಓದಿ ನಂತರ ಉಡುಪಿ ಮಲ್ಪೆಯ ಕ್ರಿಶ್ಚಿಯನ್ ಹೈಸ್ಕೂಲಿನಲ್ಲಿ ಶಿಕ್ಷಣ ಮುಂದುವರಿಸಿದರು. ಉಡುಪಿ ಕುಕ್ಕಿಕಟ್ಟೆ ಸಮೀಪದ ಮುಚ್ಚಲಕೋಡಿನ ಪೇಜಾವರ ಮಠದ ಆಡಳಿತಕ್ಕೆ ಒಳಪಟ್ಟ ಮಠದ ಸುಬ್ರಮಣ್ಯ ಗುಡಿಯ ಪೂಜೆಯನ್ನು ಪಾರಂಪರಿಕವಾಗಿ ತಂದೆಯಿಂದ ಸಾಮಗರು ಉಪನಯನದ ಬಳಿಕ ಮುಂದುವರಿಸಿಕೊಂಡು ಬೆಳಿಗ್ಗೆ ರಾತ್ರಿ ಪೂಜೆಮಾಡಿಕೊಂಡು ಹಗಲು ಹೈಸ್ಕೋಲಿಗೆ ಹೋಗಿ ಓದುತ್ತಿದ್ದರು. ಆದರೆ ಶಾಲಾ ಪಠ್ಯ ಪುಸ್ತಕಗಳ ಕಲಿಕೆಯಲ್ಲಿ ಆಸಕ್ತಿ ಕಳೆದುಕೊಂಡ ಸಾಮಗರು ಎಂಟನೇ ತರಗತಿಯಲ್ಲಿ ಅನುತ್ತೀರ್ಣರಾದಾಗ ಆದ ಅಪಮಾನವನ್ನು ಸಹಿಸಲಾಗದೆ ಯಾರಲ್ಲೂ ಹೇಳದೆ ಮನೆ ಬಿಟ್ಟು ಓಡಿ ಹೋಗಿ ಪೀರ್ ಸಾಹೇಬರ ನಾಟಕ ಕಂಪೆನಿ ಸೇರಿ ಕಡೂರು ಚಿತ್ರದುರ್ಗ ಮುಂತಾದ ಕಡೆಗಳಲ್ಲಿ ಸಣ್ಣ ಪುಟ್ಟ ಪಾತ್ರಗಳನ್ನು ಮಾಡಿ ದಿನ ಕಳೆದರು. ಕೆಲವು ತಿಂಗಳುಗಳ ಬಳಿಕ ಬಳ್ಳಾರಿಯನ್ನು ಸೇರಿ ಅಂಬಲಪಾಡಿ ಗುರುರಾಜ ಬಲ್ಲಾಳರ ಹೋಟೆಲಿನಲ್ಲಿ ಮಾಣಿಯಾಗಿ ಕೆಲಸಕ್ಕೆ ಸೇರಿದರು. ಪೌರೋಹಿತ್ಯ ಕಸುಬಿನಲ್ಲಿ ಜಿಗುಪ್ಸೆ ತಾಳಿದ್ದ ತಂದೆ ,ಮಗನಾದರೂ ಇಂಗ್ಲೀಷ್ ಕಲಿಯಲಿ ಎಂದು ಶಾಲೆಗೆ ಸೇರಿಸಿದರೆ ಮಗ ಹೋಟೆಲ್ ಮಾಣಿಯಾದದ್ದು ನೋವನ್ನು ಉಂಟು ಮಾಡಿತು. ಆದರೆ ಸಾಮಗರು ಹೋಟೆಲಿನಲ್ಲಿ ಇದ್ದೇ ಟೈಪ್ ರೈಟಿಂಗ್ ಸ್ಕೂಲಿಗೆ ಸೇರಿ ಟೈಪಿಂಗ್ ಕಲಿತರು. ಇಲ್ಲಿಂದ ಸಾಮಗರ ಸ್ವಾತಂತ್ರ್ಯ ಹೋರಾಟದ ಜೀವನ ಪ್ರಾರಂಭವಾಗುತ್ತದೆ. ಬಳ್ಳಾರಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಕಾರ್ಯಾಲಯದಲ್ಲಿ ಹೆಸರು ನೊಂದಾಯಿಸಿಕೊಂಡು ಹುಬ್ಬಳ್ಳಿಗೆ ಹೋಗಿ ಡಾ!ಹೆರಡೆಕರ್ ರವರ ಸ್ವಯಂಸೇವಕ ದಳದಲ್ಲಿ ತರಬೇತಿ ಪಡೆದು ಬಂದ ಸಾಮಗರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ಬಳ್ಳಾರಿಯಲ್ಲಿ ಜೈಲು ಸೇರಿದರು. ಜೈಲಿನಿಂದ ಬಿಡುಗಡೆಯಾದ ನಂತರ ಸಾಮಗರು ಮತ್ತೆ ಊರಿಗೆ ಬಂದರು. ತಂದೆಯವರ ಪೌರೋಹಿತ್ಯ ಹೋಟೆಲ್ ಮಾಣಿ ಕೆಲಸಗಳಲ್ಲಿ ಅನಾಸಕ್ತಿ ಹೊಂದಿ ದೇಶಭಕ್ತಿಯ ಆಕರ್ಷಣೆ ಹೆಚ್ಚಿ ಒಮ್ಮೆ ಕುಂದಾಪುರಕ್ಕೆ ಬಂದಾಗ ಅಮವಾಸ್ಯೆಬೈಲಿನ ಕೃಷ್ಣರಾಯ ಕೊಡ್ಗಿಯವರ ಪರಿಚಯವಾಗುತ್ತದೆ. ಅವರ ಅಪ್ಪಣೆಯಂತೆ ಖದ್ದರ್ ಮಾರಾಟಕ್ಕೆ ಪ್ರಾರಂಭಿಸಿ ಊರೂರು ತಿರುಗಿದರು. ಗಾಂಧಿ ತತ್ವವನ್ನು ಸಾರಿದರು. ಕೊನೆಗೆ ಅಮವಾಸ್ಯೆಬೈಲಿನ ಶಾಲೆಯಲ್ಲಿ ಶಿಕ್ಷಕ ಗಿರಿ ಪಡೆದು ಕೊಡ್ಗಿಯವರ ಮನೆಯಲ್ಲಿ ಇದ್ದು ಅವರ ಮನೆಯ ದೇವರ ಪೂಜೆಯನ್ನೂ ಮಾಡಿದರು. ಕೊಡ್ಗಿಯವರ ತಮ್ಮ ಕೃಷಿಕರಾದ ಸರ್ವೋತ್ತಮ ಕೊಡ್ಗಿಯವರ ಮನೆಯ ಗದ್ದೆಯಲ್ಲಿ ನವರಾತ್ರಿಯ ಸಮಯ ಕೋಣಗಳನ್ನು ನೇಗಿಲಿಗೆ ಬಿಗಿದು ಉತ್ತು ಕ್ರಾಂತಿ ಮಾಡಿದ್ದೂ ಬ್ರಾಹ್ಮಣರ ಆಗ್ರಹಕ್ಕೆ ಪಾತ್ರರಾದದ್ದೋ ಆಯಿತು. ನಂತರ ಶಿಕ್ಷಕ ವೃತ್ತಿಗೆ ರಾಜಿನಾಮೆ ನೀಡಿ ಕುಂದಾಪುರದಲ್ಲಿ ಕಾಂಗ್ರೆಸ್ ಕಾರ್ಯಕರ್ತರಾಗಿ ಕಾಂಗ್ರೆಸ್ ದ್ವಜ ಹಿಡಿದು ಜೈಕಾರ ಹಾಕುತ್ತ ಪೋಲಿಸರಿಂದ ಪೆಟ್ಟು ತಿಂದು ಆಸ್ಪತ್ರೆ ಸೇರಿದರು. ಅಲ್ಲಿಂದ ಬಿಡುಗಡೆಯಾಗಿ ಮತ್ತೆ ಅಮವಾಸ್ಯೆಬೈಲಿನ ಸರಕಾರೀ ಕಾಡಿನಲ್ಲಿ ಮರ ಕಡಿಯುವ ಚಳುವಳಿಯಲ್ಲಿ ಭಾಗವಹಿಸಿ ಮಂಗಳೂರು ಸೆಂಟ್ರಲ್ ಜೈಲಿಗೆ ಸೇರಿದರು.ಅಲ್ಲಿ ಎನ್ ಎಸ್ ಕಿಲ್ಲೆ, ಖಂಡಿಗೆ ಕೃಷ್ಣಭಟ್ ಮುಂತಾದ ವಿದ್ವಾಂಸರ ಪರಿಚಯವಾಗಿ ಜೈಲಿನಲ್ಲೇ ತಾಳಮದ್ದಲ್ಲೆಯ ಪ್ರಯೋಗವನ್ನು ಮಾಡಿದರು. ಜೈಲಿನಿಂದ ಬಿಡುಗಡೆಯಾಗಿ ಬಂದ ಮೇಲೆ ತಾಳಮದ್ದಲೆಗಳಲ್ಲಿ ಆಸಕ್ತಿ ಹೊಂದಿ ರಾಮಾಯಣ ಮಹಾಭಾರತ ಇತ್ಯಾದಿ ಪುರಾಣಗಳನ್ನು ಅಧ್ಯಯನ ಮಾಡಿ ಸಂಪಾದನೆ ಇಲ್ಲದಿದ್ದರೂ ಅಲ್ಲಲ್ಲಿ ತಾಳಮದ್ದಲೆಗಳಲ್ಲಿ ಭಾಗವಹಿಸತೊಡಗಿದರು.
ಹೀಗಿರುತ್ತ ಒಮ್ಮೆ ಹಿರಿಯಡ್ಕ ಜಾತ್ರೆಯಲ್ಲಿ ನೆರೆದ ಜನಗಳ ಮಧ್ಯೆ ಪಾದ್ರಿಯೊಬ್ಬರು ಕೄಷ್ಣನನ್ನು ಅವಹೇಳನ ಮಾಡಿ ಕ್ರೈಸ್ತಮತ ಪ್ರಚಾರ ಮಾಡುತ್ತಿದ್ದಾಗ ಸಾಮಗರು ಮಧ್ಯೆ ಪ್ರಶ್ನೆ ಕೇಳಿದಾಗ, ಪಾದ್ರಿಗಳು ಪ್ರಶ್ನೆಗಳನ್ನು ಕೊನೆಯಲ್ಲಿ ಕೇಳಿ’ ಎಂದರಂತೆ. ಅವರ ಭಾಷಣ ಮುಗಿಯುತ್ತಿದ್ದಂತೆ ಸಾಮಗರು ಒಂದು ಸ್ಟೂಲನ್ನು ಹತ್ತಿ ಕೃಷ್ಣನ ಬಗ್ಗೆ, ಭರತೇಶ ವೈಭವದ ಕತೆಯ ಬಗ್ಗೆ ಬಗೆಬಗೆಯಾಗಿ ಹೇಳಿ ಭಾಷಣ ಮಾಡಿದರು. ಮಧ್ಯೆ ಪಾದ್ರಿಗಳು ಪ್ರಶ್ನೆ ಕೇಳಿದರೆ ನೀವು ಕೊನೆಯಲ್ಲಿ ಕೇಳಿ ಎಂದು ಎರಡು ಮೂರು ಘಂಟೆಯವರೆಗೂ ಭಾಷಣ ಮುಂದುವರೆಸಿದಾಗ ಅವಕಾಶ ಸಿಗದೆ ನಿರಾಶರಾಗಿ ಪಾದ್ರಿಗಳು ಪಲಾಯನ ಮಾಡಿದರಂತೆ. ಅಂದಿನಿಂದ ಸಾಮಗರು ಹರಿಕಥೆ ಸಾಮಗರಾದರು. ಮುಂದೆ ಸತತ ಅಧ್ಯಯನ ನಡೆಸಿ ಅಲ್ಲಲ್ಲಿ ಹರಿಕಥೆಯನ್ನು ಮಾಡಿ ಪ್ರಸಿದ್ಧರಾದರು. ನಂತರ  ಬ್ರಹ್ಮಾವರದ ಹತ್ತಿರದ ಬೈಕಾಡಿ ಊರಿನ ಕಮಲಾಕ್ಷಿ ಎಂಬವರನ್ನು ಮದುವೆಯಾಗಿ, ಮಂಗಳೂರಿಗೆ ಹೋಗಿ ಅಲ್ಲಿ ಬಿಡಾರ ಮಾಡಿ ವಾಸಿಸಿದರು. ಅಲ್ಲಿ ಮಹಾಭಾರತ, ರಾಮಾಯಣ ಇತ್ಯಾದಿ ಹರಿಕಥೆಗಳನ್ನು ನಡೆಸಿ ಹರಿದಾಸರಾಗಿ ಪ್ರಸಿದ್ಧರಾದರು. ಹರಿಕಥೆಯನ್ನು ಒಂದು ಶಿಸ್ತುಬದ್ಧ ಚೌಕಟ್ಟಿಗೆ ಒಳಪಡಿಸಿ ವಿದ್ವಜ್ಜನರು ಮೆಚ್ಚುವಂತೆ ಇಡೀ ರಾತ್ರಿ, ವಾರಗಟ್ಟಲೆ ಹರಿಕಥೆ ನಡೆದರೂ ಜನರು ಕಿಕ್ಕಿರಿದು ಸಾಮಗರ ಹರಿಕಥೆಯನ್ನು ನೋಡುವಂತೆ ಮಾಡಿದರು.
ಒಮ್ಮೆ ಕುಂದಾಪುರದಲ್ಲಿ ಐತಾಳರ ಹೋಟೆಲಿನಲ್ಲಿ ಕುಳಿತಿದ್ದಾಗ ಕೆಲವು ಸ್ನೇಹಿತರು ಸೌಕೂರಿನ ಆಟಕ್ಕೆ ಸಾಮಗರನ್ನು ಒತ್ತಾಯಿಸಿ ಕರೆದುಕೊಂಡು ಹೋದರು. ಅಲ್ಲಿ ಆಟದ ಬ್ರಹ್ಮಸಭೆಯಲ್ಲಿ ಕುಳಿತ ಸಾಮಗರನ್ನು ಮೇಳದ ಹಾಸ್ಯಗಾರ ಪೆರ್ಡೂರು ವೆಂಕಟರವರು ನೋಡಿ ಚೌಕಿಗೆ ಕರೆದುಕೊಂಡು ಹೋಗಿ ಅಂದಿನ ಸುಧನ್ವ ಕಾಳಗದಲ್ಲಿ ಕೃಷ್ಣನ ಪಾತ್ರ ಮಾಡಲು ಒತ್ತಾಯಿಸಿದಾಗ ಪಾಂಡೇಶ್ವರ ವೆಂಕಟರಾಯರು ಸಾಮಗರ ಮುಖಕ್ಕೆ ಬಣ್ಣ ಬರೆದು ಕೇದಿಗೆ ಮುಂದಲೆ ಬಿಗಿದು ರಂಗಸ್ಥಳಕ್ಕೆ ಕಳಿಸಿದ್ದೇ ಸಾಮಗರ ಯಕ್ಷಗಾನ ಜೀವನದ ಪ್ರಾರಂಭವೆನ್ನಬಹುದು. ಅಂದಿನ ಕೃಷ್ಣನ ಅರ್ಥ ಕೇಳಿ ಪ್ರಭಾವಿತರಾದ ಮೇಳದ ಯಜಮಾನರಾದ ಅಂತಯ್ಯ ಶೆಟ್ಟರು ನೀವು ಬ್ರಾಹ್ಮಣರು, ಸರಸ್ವತಿ ನಿಮಗೆ ಒಲಿದ ಹಾಗೇ ಯಾರಿಗೂ ಒಲಿಯುದಿಲ್ಲ. ನೀವು ಕಸುಬು ಮುಂದುವರಿಸಬೇಕು ಎಂದು ಕಾಲಿಗೆ ಬಿದ್ದು ರಾಣಿ ಮೊಹರಿನ ಒಂದು ಬೆಳ್ಳಿ ನಾಣ್ಯವನ್ನು ದಕ್ಷಿಣೆ ನೀಡಿ ಆಶೀರ್ವಾದ ಬೇಡಿದರು. ಅವರು ಆಶೀರ್ವಾದ ಬೇಡಿದ್ದಲ್ಲ ಮಾಡಿದ್ದು ಎಂದು ಭಾವಿಸಿದ ಸಾಮಗರು ಸ್ವಲ್ಪ ದಿನದಲ್ಲೇ ಮೇಳದ ಕೊಕ್ಕರ್ಣೆ ನರಸಿಂಹನವರ ಒತ್ತಾಯಕ್ಕೆ ಮಣಿದು ಉತ್ತರಕನ್ನಡ ಜಿಲ್ಲೆಯಲ್ಲಿ ತಿರುಗಾಟ ಮಾಡಿದರು. ಅವಧಿಯಲ್ಲಿ ಸಾಮಗರು ಕುಣಿಯುವುದು ಮುಖ ಬರೆದುಕೊಳ್ಳುವುದು ವೇಷ ಕಟ್ಟಿಕೊಳ್ಳುವುದು ಜೊತೆಗೆ ಮದ್ದಲೆ ಬಾರಿಸುವುದನ್ನು ಕಲಿತರು.
ಹೀಗೆ ಯಕ್ಷಗಾನ ಮೇಳದ ಪ್ರಪಂಚದಲ್ಲಿ ಸುಮಾರು ನಾಲ್ಕು ದಶಕಗಳ ಕಾಲ ನಿರಂತರ ಸೌಕೂರು, ಅಮೃತೇಶ್ವರಿ, ಸಾಲಿಗ್ರಾಮ, ಇರಾ ಸೋಮನಾಥೇಶ್ವರ, ಧರ್ಮಸ್ಥಳ, ಮೂಲ್ಕಿ, ಸುರತ್ಕಲ್, ಕುತ್ಯಾಳ, ಮೇಳಗಳಲ್ಲಿ ತಿರುಗಾಟ ಮಾಡಿದರು. ಸಾಮಗರ ಹರಿಶ್ಚಂದ್ರ ಕೊಕ್ಕರ್ಣೆ ನರಸಿಂಹನವರ ಚಂದ್ರಮತಿ, ಸಾಮಗರ ಅಂಗದ ವೀರಭದ್ರ ನಾಯಕರ ಪ್ರಹಸ್ತ ಜನರು ಮತ್ತೆ ಮತ್ತೆ ನೋಡಿ ವರ್ಷವಿಡೀ ಆಡಿ ಮೆಚ್ಚಿದ್ದು ಈಗ ಇತಿಹಾಸ. ಸಾಮಗರೇ ಸೃಷ್ಟಿಸಿದ ಪಾತ್ರಚಿತ್ರಣಗಳಲ್ಲಿ ಚಂದ್ರಾವಳಿ ವಿಲಾಸದ ಚಂದಗೋಪ, ಬೇಡರ ಕಣ್ಣಪ್ಪ ಪ್ರಸಂಗದ ಕೈಲಾಸ ಶಾಸ್ತ್ರಿ ಪಾತ್ರಗಳನ್ನು ಇಂದೂ ಹಿರಿಯರು ನೆನಪಿಸಿಕೊಳ್ಳುತ್ತಾರೆ.
ಸಾಮಗರು ಯಕ್ಷಗಾನದ ಸುಮಾರು ಐವತ್ತು ಕಥೆಗಳ ಪ್ರಬಂಧ ಸಾರವಾದ ಯಕ್ಷಗಾನ ಸೌರಭ ಎಂಬ ಗ್ರಂಥವನ್ನು ಬರೆದಿದ್ದರು. ಚೂಡಾಮಣಿ, ಅಂಗದ ಸಂಧಾನ ಪ್ರಸಂಗಗಳಿಗೆ ಅರ್ಥವನ್ನೂ ,ಸಂಕ್ಷಿಪ್ತ ದೇವಿ ಮಹಾತ್ಮೆ ಎಂಬ ಪುಸ್ತಕವನ್ನು ಬರೆದಿದ್ದಾರೆ. ಶಿವರಾತ್ರಿ ಎಂಬ ಲೇಖನವನ್ನು ಬೋಳಾರು ಭಜನಾ ಮಂಡಳಿಗೆ ಬರೆದು ಕೊಟ್ಟಿದ್ದು ಅದು ಸಹಸ್ರ ಸಂಖ್ಯೆಯಲ್ಲಿ ಅಚ್ಚಾಗಿ ಕಾಲಕ್ಕೆ ಸರ್ವಮಾನ್ಯವಾಗಿತ್ತು. ಸಾಂಸಾರಿಕವಾಗಿ ಸಾಮಗರಿಗೆ ಹೆಣ್ಣು ಮತ್ತು ಗಂಡು ಮಕ್ಕಳು ಇದ್ದು ಮಂಗಳ, ಲಕ್ಷ್ಮೀನಾರಾಯಣ ಬಾಲಕೃಷ್ಣ ಕಸ್ತೂರಿಯರು ತಂದೆಯ ಬದುಕಿನ ಆದರ್ಶ ಸಂಸ್ಕಾರಗಳನ್ನು ಹೊಂದಿ ಬದುಕುವಂತೆ ಮಾಡಿದರು. ಸಾಮಗರಿಗೆ ಸಂದ ಮಾನ ಸಮ್ಮಾನಗಳಿಗೆ ಲೆಕ್ಕವಿಲ್ಲ. ಬೆಂಗಳೂರಿನ ಕೀರ್ತನಕಾರರ ಸಮ್ಮೇಳನದಲ್ಲಿ ಹರಿಕತಾ ಪ್ರವೀಣ ಎಂಬ ಪ್ರಶಸ್ತಿ ಅಂಕೋಲೆಯಲ್ಲಿ ಗಣ್ಯರು ನೀಡಿದ ಯಕ್ಷಗಾನ ಚಕ್ರವರ್ತಿ ಎಂಬ ಬಿರುದು ಹಾಗೂ ಅಲ್ಲಲ್ಲಿ ಹಲವಾರು ಬಿರುದು ಸಮ್ಮಾನಗಳನ್ನಿತ್ತು ಅವರನ್ನು ಗೌರವಿಸಲಾಗಿದೆ.
ತಾಳಮದ್ದಲೆ ಕ್ಷೇತ್ರದಲ್ಲಿ ಸಾಮಗರ ಹೆಸರು ಚಿರಸ್ಥಾಯಿಯಾಗಿ ಉಳಿಯುವಂತಾದ್ದು. ಅಂದಿನ ಕಾಲದ ಸುಪ್ರಸಿದ್ಧ ಅರ್ಥದಾರಿಗಳೆನಿಸಿದ್ದ ಪೊಳಲಿ ಮಟ್ಟಿ ತೆಕ್ಕಟ್ಟೆ ಕೋಣಿ ಕಾರಂತರು ದೇರಾಜೆ ಶೇಣಿ ಸಣ್ಣ ಸಾಮಗರು ಪೆರ್ಲ ಕುಂಬ್ಲೆ ಜೋಷಿಮುಂತದವರು ಭಾಗವತರಾದ ಅಗರಿ ಬಲಿಪ ಮಂಡೆಚ್ಚರು ಶೇಷಗಿರಿ ಭಾಗವತರು ಉಪ್ಪೂರರು ಇಂತಹ ದಿಗ್ಗಜಗಳ ತಾಳ ಮದ್ದಲೆಗಳು ೭೦-೯೦ ದಶಕದಲ್ಲಿ ಹಲವಾರು ನಡೆದಿದ್ದು ತಾಳಮದ್ದಲೆ ಕ್ಷೇತ್ರದಲ್ಲಿ ಅವಿಸ್ಮರಣೀಯ ಕಾಲಘಟ್ಟವೆಂದು ಹೇಳಬಹುದು.
ಸಾಮಗರು ಬದುಕಿನ ಕೊನೆಯಲ್ಲಿ ಅವರಿಗೆ  ಸ್ವಾತಂತ್ರ್ಯ ಹೋರಾಟಗಾರರ ನೆಲೆಯಲ್ಲಿ ಸರಕಾರದಿಂದ ನೀಡಿದ  ಬೆಳ್ಕಲ್ ಗುಡ್ಡೆಯ ಜಾಗದಲ್ಲಿ ತಾವೇ ಕಟ್ಟಿಸಿದ ಗಾಂಧಿಗುಡಿಯಲ್ಲಿ ಗುಡ್ಡವನ್ನು ಅಗೆದು ತೋಟ ಮಾಡುತ್ತ ತನ್ನ ಜೊತೆಗಾರ ಉಬ್ಬಸ ಕಾಯಿಲೆಯೊಂದಿಗೆ ಹೊಂದಾಣಿಕೆ ಮಾಡಿಕೊಂಡು ಸರಕಾರ ನೀಡಿದ ಮಾಸಾಶನವನ್ನು  ಪಡೆದು ಗೌರವದಿಂದ ಬದುಕಿನ ಸಾರ್ಥಕತೆಯನ್ನು ಪಡೆದರು.
ಇಷ್ಟು ಹೇಳಿದರೆ ಪೂಜ್ಯರಾದ ಶಂಕರನಾರಾಯಣಸಾಮಗರನ್ನು ತಿಳಿಸಿದಂತೆ ಆಗುತ್ತದೆಯಾದರೂ ಅವರ ವ್ಯಕ್ತಿತ್ವವನ್ನು ಬದುಕನ್ನು ತಿಳಿಸಿದಂತೆ ಆಗಲು ಅವರ ಜೀವನದ ಕೆಲವು ಸ್ವಾರಸ್ಯಕರ ಪ್ರಸಂಗಗಳನ್ನು ತಿಳಿಸಿದರೆ ಸಾಮಗರ ಬಗ್ಗೆ ಹೆಚ್ಚು ತಿಳಿದಂತಾಗುತ್ತದೆ.

ಗಾಂಧಿವಾದಿಗಳಾಗಿ
ಸಾಮಗರ ಚಿತ್ರಣ ಹೀಗೆ- ಮದ್ಯಮ ಎತ್ತರದ ಎಣಗಪ್ಪು ಬಣ್ಣದ ಸುಂದರ ಆಳು ಗೋಕರ್ಣದೋತ್ರ ಎಂದು ಕರೆಸಿಕೊಳ್ಳುವ ಗಿಡ್ಡ ಮೊಳಕಾಲಿನವರೆಗಷ್ಟೆ ಬರುವ ಕಚ್ಚೆ ದೋತಿಖದ್ದರ್ ಅಂಗಿ ಅದರ ಮೋಲೊಂದು ವಾಷ್ ಕೋಟು.  ತಲೆಯ ಮೇಲೊಂದು ಗಾಂಧಿ ಟೋಪಿ. ಬಗಲಿಗೊಂದು ಜೋಳಿಗೆ ಚೀಲ. ಮನೆಯಲ್ಲಾದರೆ ಬೈರಾಸ್ ಕಚ್ಚೆ . ಟೋಪಿ ಮಾತ್ರ ಎಂದೂ ಇದ್ದೇ ಇರುತ್ತದೆ.
ಒಮ್ಮೆ ಮಲ್ಪೆ ಪೇಟೆಯಲ್ಲಿ ನಡೆದು ಹೋಗುತ್ತಿದ್ದರಂತೆ. ಬರ್ರನೆ ಹಿಂದಿನಿಂದ ಬಂದ ಕಾರೊಂದರಿಂದ ಹೊರಗಿಣಿಕಿದ ತಲೆಯೊಂದು ಕೈಯಿಂದ ರಪ್ಪಕ್ಕನೆ ಸಾಮಗರ ಟೊಪ್ಪಿಯನ್ನು ಹಾರಿಸಿ ಸಾಗಿತು. ಎಲ್ಲಾ ಒಂದೇ ಕ್ಷಣದೊಳಗೆ. ಸಾಮಗರು ತಡ ಮಾಡಲಿಲ್ಲ. ಸಮಯ ಸ್ಪೂರ್ತಿಯಿಂದ ಪಕ್ಕನೆ ತಮ್ಮ ಚೀಲ ಬದಿಗಿರಿಸಿ ಕಿಸೆಯಿಂದ ಡೈರಿ ತೆಗೆದು ಕಾರಿನ ನಂಬರನ್ನು  ನೋಟ್ ಮಾಡಿಕೊಂಡು  ಪೋಲಿಸ್ ಸ್ಟೇಷನ್ನಿಗೆ ಹೋಗಿ ದೂರು ಸಲ್ಲಿಸಿದರು. ಕಾರು ನಂಬರಿನ ಆದಾರದ ಮೇಲೆ ಪೋಲಿಸರು ಪತ್ತೆಗಾರಿಕೆ ಮಾಡಿದಾಗ ಊರ ಗಣ್ಯ ವ್ಯಕ್ತಿಯಾಗಿದ್ದವರ  ಮನೆಗೆ ಬಂದ ಅವರ ಮೊಮ್ಮಕ್ಕಳು ತಮಾಷೆಗಾಗಿ ಮಾಡಿದ ಕೆಲಸವನ್ನು ತಿಳಿದು ಮಕ್ಕಳಿಗೆ ಬೈದು ಟೋಪಿಯನ್ನು ಪುನಹ ಸಾಮಗರ ಮನೆಗೆ ಹೋಗಿ ಕೊಟ್ಟು ಬರಬೇಕೆಂದು ತಾಕೀತು ಮಾಡಿದ್ದಾಯಿತು. ಮಕ್ಕಳು ಅದನ್ನು ಲಘುವಾಗಿ ತೆಗೆದುಕೊಂಡು ಮತ್ತೊಬ್ಬರಿಗೆ ಟೊಪ್ಪಿಯನ್ನು ಸಾಮಗರಿಗೆ ಕೊಡುವಂತೆ ಹೇಳಿದರು.
ಟೊಪ್ಪಿಯನ್ನು ತಂದವರನ್ನು ಕಾಣುತ್ತಿದ್ದಂತೆ ಸಾಮಗರು ಕಳ್ಳರು ಕದ್ದ ಮಾಲನ್ನು ನೀವು ಹೇಗೆ ತೆಗೆದುಕೊಂಡಿರಿ? ಅಂತ ಮತ್ತೆ ಹೋಗಿ ಪೋಲಿಸ್ ಸ್ಟೇಷನ್ನಿಗೆ ಬಂದು ಅವರ ಮೇಲೇ ದೂರು ನೀಡಿದರು. ಪೋಲಿಸರೊಂದಿಗೆ ಸಾಮಗರ ಮನೆಗೆ ಓಡಿ ಬಂದ ವ್ಯಕ್ತಿಗೆ ಸಾಮಗರು ಟೋಪಿ ಕಳವಿನಲ್ಲಿ ನೀವೂ ಶಾಮೀಲಾಗಿದ್ದೀರಿ.  ಟೋಪಿ ತೆಗೆದುಕೊಂಡವರೇ ತಂದು ಒಪ್ಪಿಸಿದರೆ ತೆಗೆದುಕೊಂಡೇನು ಎಂದರು. ಕೊನೆಗೆ ಗಣ್ಯವ್ಯಕ್ತಿಗಳೇ ಯುವಕರ ದಿಬ್ಬಣ ಮತ್ತು ಟೋಪಿ ಸಹಿತ ಸಾಮಗರಲ್ಲಿ ಬಂದು ಕಾಲು ಹಿಡಿಸಿ ತಪ್ಪೊಪ್ಪಿಗೆ ಕೊಟ್ಟಾಗ ಸಾಮಗರು ಕ್ಷಮೆ ಕೇಳುವುದೇನು ಬೇಡ ನಿಮ್ಮ ಮುಖವನ್ನೊಮ್ಮೆ ನೋಡಬೇಕಿತ್ತು ಕಾನೂನು ಪ್ರಕಾರ ಇಂತಹಾ ಕುಶಾಲು ತಪ್ಪು ಎಂದೆಲ್ಲಾ ಹೇಳಿ ಚಹಾ ನೀಡಿ ಕಳಿಸಿದರು.
ಇಂತಹಾ ಸಾಮಗರು ತನ್ನ ಆದಾಯದಲ್ಲಿ ಒಂದು ಭಾಗವನ್ನು ದಾನಕ್ಕಾಗಿಯೇ ವಿನಿಯೋಗಿಸುತ್ತಿದ್ದರು. ಪರರ ವಸ್ತುವನ್ನು ಬಯಸದೇ ಸ್ವಸಹಾಯ ಪದ್ಧತಿಗೆ ಅಂಟಿಕೊಂಡು ತನ್ನ ಬಟ್ಟೆಯನ್ನು ತಾನೇ ಒಗೆದು ಕೊಳ್ಳುತ್ತಿದ್ದರು. ಬೀದಿಬದಿಯ ನಾಯಿಗಳಿಗೆ  ತಿಂಡಿ ಚಿಕ್ಕ ಮಕ್ಕಳಿಗೆ ತಿಂಡಿಕೊಡುತ್ತಿದ್ದರು. ಅಬಲರು ಆರ್ಥರನ್ನು ಕಂಡರೆ ತನ್ನಲ್ಲಿದ್ದುದನ್ನು ಕೊಟ್ಟುಬಿಡುತ್ತಿದ್ದರು. ಅನ್ಯಾಯವನ್ನು ಆಗಲೇ ಪ್ರತಿಭಟಿಸುತ್ತಿದ್ದರು ಹೆಂಡತಿ ಸತ್ತಾಗ ಅಗಲುವಿಕೆಯ ದುಖಃವನ್ನು ಮರೆಯಲು ಇಡೀದಿನ ಮನೆಯ ಬಾವಿಯ ನೀರು ಸೇದಿ ಗಿಡಗಳಿಗೆ ನೀರು ಹಾಕಿದರು.


ಸ್ವಾತಂತ್ರ್ಯಹೋರಾಟಗಾರರಾಗಿ
ಜೈಲಿನಲ್ಲಿದ್ದಾಗ ಸಮೀಪದ ಬಂಧುಗಳು ಬಂದು ನಿನಗೆ ಯಾಕೆ ಮಾರಾಯಾ ಗಾಂಧಿ ಸಹವಾಸ ಸುಮ್ಮನೇ ಮನೆಗೆ ಬಂದಿರಬಾರದೇ ಎಂದರೆ ನೀವೇ ಬಂದು ಅಳಿಲ ಸೇವೆ ಮಾಡಿ. ನೀವೂ ಹೋರಾಡಿ ಕೈ ಕಾಲು ಮುರಿದುಕೊಂಡು ಪಕ್ಕದಲ್ಲಿ ಇದ್ದರೆ ನನಗೋ ಹೆಮ್ಮೆ ಭರತ ಮಾತೆಗೋ ಹೆಮ್ಮೆ ಅನ್ನುತ್ತಿದ್ದರು. ಕುಂದಾಪುರದಲ್ಲಿ ಚಳುವಳಿಯಲ್ಲಿ ಭಾಗವಹಿಸಿ ಪೋಲಿಸರ ಏಟಿನಿಂದ ತಲೆಗೆ ಪೆಟ್ಟಾಗಿ ಆಸ್ಪತ್ರೆ ಸೇರಿದಾಗ ಇವರ ತಂದೆ ನೋಡಲು ಬಂದಿದ್ದರು. ಪ್ರಜ್ಞೆ ಬಂದು ಸುತ್ತ ನೋಡಿದ ಸಾಮಗರು ಯಾವುದೋ ಲೋಕದಲ್ಲಿದ್ದವರಂತೆ ಭಾರತಮಾತೆಗೆ ಜಯವಾಗಲಿ ಎಂದು ಜಯಕಾರ ಕೂಗಿ ಮತ್ತೆ ಪ್ರಜ್ಞೆ ಕಳೆದುಕೊಂಡರು. ಬಳ್ಳಾರಿ ಜೈಲಿನಲ್ಲಿದ್ದಾಗ  ಅಲ್ಲಿಯ ಕ್ರಮದಂತೆ ದೊಡ್ಡ ಜಮೀನ್ ದಾರರು ಗ್ರೇಡಿನವರು. ತುಸು ಕೆಳಗಿನವರು ಬಿ ಗ್ರೇಡಿನವರು. ಉಳಿದವರು ಸಿ ಗ್ರೇಡಿನವರು ಎಂದು ವರ್ಗೀಕರಣಗೊಂಡಿದ್ದು ಸಾಮಗರು ತಮಗೆ ಕೊಟ್ಟ ಅನ್ನದಲ್ಲೇ ಒಂದಿಷ್ಟು ತೆಗೆದಿರಿಸಿ ಕ್ರಿಮಿನಲ್ ಕೈದಿಗಳಿಗೆ ಗುಟ್ಟಾಗಿ ಒಯ್ದು ಕೊಡುತ್ತಿದ್ದರು. ಜೈಲಿನಲ್ಲಿ ಹೊರಗೆ ಅಡ್ಡಾಡುವಾಗ ಕ್ರಿಮಿನಲ್ ಕೈದಿಗಳು ಬೆಳೆಸಿದ ತೋಟದ ಗಿಡದ ಚಿಗುರನ್ನು ಚಿವುಟಿದ ಸಹ ಕೈದಿಯೊಬ್ಬನ ಮೇಲೆ ಸಾಮಗರೇ ದೂರು ನೀಡಿ ಶಿಕ್ಷೆ ಕೊಡಿಸಿದ್ದರು.
ಹರಿದಾಸರಾಗಿ
ಹರಿದಾಸರಾಗಿ ಪ್ರಸಿದ್ಧಿ ಹೊಂದಿದ ಸಾಮಗರು ಒಮ್ಮೆ ಕುಗ್ರಾಮದಲ್ಲಿ ಹರಿಕಥೆ ಮಾಡಲು ಹೋದರು. ಮಧ್ಯಾಹ್ನ ವೇಳೆಗೆ ಹಿಮ್ಮೇಳದೊಂದಿಗೆ ಬಸ್ಸಿನಿಂದಿಳಿದ ಸಾಮಗರು ಮನೆ ಸ್ವಲ್ಪ ದೂರದಲ್ಲಿದೆ ಎನ್ನುವಾಗ ನೋಡುತ್ತಾರೆ, ಜನ ಸಂದಣಿ ಗಲಾಟೆ, ಹೋಗಿ ನೋಡಿದಾಗ ಗೊತ್ತಾಯಿತು. ಅಲ್ಲಿ ನಡೆಯುತ್ತಿದ್ದುದು ಕೋಳಿ ಅಂಕ ಜೂಜು ಗರಗರ ಮಂಡಲ ಗಮ್ಮತ್ತಿಗೆ ಹೆಂಡ ಕುಡಿಯುವವರ ಪಟಾಪಟಿ. ನೇರವಾಗಿ ಒಳ ಬಂದ ಸಾಮಗರು ಮನೆಯವರ ಉಪಚಾರ ಪಲಹಾರಗಳನ್ನು ಸ್ವೀಕರಿಸದೇ ನೇರವಾಗಿ ವೇದಿಕೆಗೆ ಬಂದು ನಿಂತು ಬಿಟ್ಟರು. ಅಲ್ಲಿಂದಲೇ ಘೋಷಣೆ ಮಾಡಿದರು. ನಾನಿಂದು ಹರಿಕಥೆ ಮಾಡುವುದಿಲ್ಲ. ಆದರೆ ಒಂದು ಗಳಿಗೆ ಹೊರಗಿನವರು ಬಂದು ನನ್ನ ಮಾತು ಕೇಳಬೇಕು. ಎಲ್ಲರೂ ಒಳ ಬಂದು ಕುಳಿತರೆಂದಾಯಿತು. ಸಾಮಗರ ಮಾತು ಶುರು. ಗಾಂಧೀತತ್ವದ ಬಗ್ಗೆ ದುಶ್ಚಟಗಳಿಂದಾಗುವ ಹಾನಿಯ ಬಗ್ಗೆ, ಅತ್ಮ ನಿಗ್ರಹದ ಬಗ್ಗೆ, ಜೂಜಿನಲ್ಲಿ ಗೆದ್ದವನ ಹಾಗೂ ಸೋತವನ ಸ್ಥಿತಿಗತಿಗಳ ಬಗ್ಗೆ ಮಾತಾಡಿದ್ದೇ ಆಡಿದ್ದು. ಸುಮಾರು ಎರಡೂವರೆ ತಾಸಿನಷ್ಟು. ಸ್ವಾರಸ್ಯವೆಂದರೆ ನಡುವೆ ಆಶುಕವಿತೆ ದೇಶಭಕ್ತಿಗೀತೆಗಳನ್ನು ಬಳಸಿ ಹಿಮ್ಮೇಳದವರಿಗೂ ಕೆಲಸ ಕೊಟ್ಟಿದ್ದರು. ಆಡಿಸಿದವರು ಸಂಭಾವನೆ ಕೊಡಲು ಬಂದಾಗ ಇದು ಹರಿಕಥೆ ಆಗಲಿಲ್ಲ ಮುಂದೆಂದಾದರೂ ಹರಿಕಥೆ ಮಾಡಿಯೇ ವೀಳ್ಯ ತಕೊಳ್ತೇನೆ ಎಂದು ಬಿಟ್ಟರು.
ಮತ್ತೊಮ್ಮೆ ಹರಿಕಥೆಯ ಸಂದರ್ಭ ಪಕ್ಕದ ಮನೆಯ ಹಟ್ಟಿಗೆ ಬೆಂಕಿ ಬಿದ್ದಾಗ ಸಾಮಗರು ಹರಿಕಥೆ ನಿಲ್ಲಿಸಿ ದನಕರುಗಳನ್ನು ಹಗ್ಗ ಬಿಡಿಸಿ ಬೆಂಕಿಯಿಂದ ಕಾಪಾಡಿದ್ದರು.
 ಇನ್ನೊಂದು ಕಡೆಯಲ್ಲಿ ಹರಿಕಥೆಗೆ ಮುನ್ನ ಯಜಮಾನರಲ್ಲಿ ಯಾವ ಕಥೆ ಇವತ್ತು ಎಂದು ಕೇಳಿದಾಗ ಅವರು ಎಳ್ಳಿನ ಕಥೆ ಹೇಳಿ ಎಂದರ್ಂತೆ ಒಂದು ಗಳಿಗೆ ಯೋಚಿಸಿ ಸಾಮಗರು ಹೋ ತಿಲಮಹಾತ್ಮೆಯಾ? ಅದು ಒಂದು ಸಪ್ತಾಹ ಮಾಡುವಷ್ಟಿದೆ ನೋಡುವ ಸಣ್ಣದು ಮಾಡಿ ಹೇಳಲು ಪ್ರಯತ್ನಿಸುತ್ತೇನೆ ಎಂದು ಪ್ರಾರಂಭಿಸಿಯೆ ಬಿಟ್ಟರು. ಎಳ್ಳು ನೋಡಲು ಸಣ್ಣದಿದ್ದರೂ ಅದರ ಪುರಾಣ ಅಗಾಧವಾದದ್ದು ವಿಷ್ಣುವಿನ ದೇಹದಿಂದ ಹುಟ್ಟಿದ್ದು ನವಧಾನ್ಯಗಳಲ್ಲಿ ಒಂದಾದ ಎಳ್ಳಿಗೆ ಇರುವ ಶನಿ ದೇವರ ನಂಟು ಅಪರಕ್ರಿಯೆಯಲ್ಲಿ ಎಳ್ಳಿನ ಪ್ರಾಧಾನ್ಯತೆ ಎಳ್ಳು ಬೆಳೆಸುವ ಕಾಲ ಕ್ರಮ ಸಂಗ್ರಹ ವಿಧಾನಗಳು ಎಳ್ಳಿನಿಂದ ಭಕ್ಷ್ಯ ಬೋಜ್ಯಗಳು ಪಶುಗಳಿಗೆ ಎಳ್ಳಿನ ಹಿಂಡಿಯ ಹಿತಕಾರಿ ಎಂಬ ಬಗ್ಗೆ ಇತ್ಯಾದಿ ಇತ್ಯಾದಿ..ನಡು ನಡುವೆ ಆಶುಕವಿತೆಗಳ ಉಪಕಥೆಗಳ ರಸಗ್ರಾಸ. ಹರಿಕಥೆ ಮುಗಿದಾಗ ಯಜಮಾನರು ವೀಳ್ಯ ಕೊಡುತ್ತಾ ಇವರ ಪಾಮ್ಡಿತ್ಯಕ್ಕೆ ಶರಣಾಗಿ ಕಾಲಿಗೆರಗಿದರು.
ವೇಷದಾರಿಯಾಗಿ
ಸಾಮಗರು ಇತರ ಕಲಾವಿದರಂತೆ ವೇತನ ಬಟವಾಡೆ ಇತ್ಯಾದಿಗಳಿಲ್ಲದ ಆಯಾಯ ದಿನದ ಸಂಭಾವನೆಯ ಕಲಾವಿದರು. ರಾತ್ರಿ ಆಟ ಮುಗಿದ ತಕ್ಷಣ ಬೆಳಿಗ್ಗೆ ಅವರ ಸಂಭಾವನೆ ಕೈ ಸೇರಲೇಬೇಕು. ತಡ ಮಾಡಿದರೆ ಮನೆಗೆ ಹೊರಡುತ್ತಾರೆ. ಮೇಳದ ಸಹಕಲಾವಿದರೊಂದಿಗೆ ಮಕ್ಕಳಂತೆ ಬೆರೆಯುತ್ತಿದ್ದರು. ಚಿಕ್ಕವರಿಗೆ ಅರ್ಥ ಹೇಳಿಕೊಡುವುದು ತಿಂಡಿಕೊಡಿಸುವುದು ಇವರಿಗೆ ಅಬ್ಯಾಸ ಅಡುಗೆ ನಿಧಾನವಾದರೆ ಅಡುಗೆ ಭಟ್ಟರಿಗೆ ಸಹಾಯನ್ನೂ ಮಾಡುವರು ತರಕಾರಿ ತರುವವನ ಜೊತೆಗೆ ಸಂತೆಗೆ ಹೋಗಿ ತರಕಾರಿಯ ಆಯ್ಕೆಯನ್ನು ಮಾಡುವರು. ಒಮ್ಮೆ ಟೆಂಟಿನ ಹುಡುಗನಿಗೆ ಯಜಮಾನರು ಕೈ ಎತ್ತಿದಾಗ ಅವನ ಪರ ನಿಂತು ಪ್ರತಿಭಟನೆ ಮಾಡಿ ನ್ಯಾಯ ಕೊಡಿಸಿದರು. ಇನ್ನೊಮ್ಮೆ ಮೂರು ದಿನಕ್ಕೊಮ್ಮೆ  ಮಾಡಬೇಕಾದ ಬಟವಾಡೆ ಮಾಡದಿದ್ದಾಗ ತನ್ನ ಕಿಸೆಯಿಂದ ಹಣ ಕೊಟ್ಟು ಮತ್ತೆ ಕೊಡಲು ಹೇಳಿದ್ದುಂಟು. ಯಾರಲ್ಲಾದರೂ ಹೊಸ ಪುಸ್ತಕ ಕಂಡರೆ ಅದನ್ನು ಪಡೆದು ಓದಿ ಕೂಡಲೇ ಹಿಂತಿರುಗಿಸುತ್ತಿದ್ದರು. ಮತ್ತು ಏಕಪಾಠಿಯಾದ ಸಾಮಗರು ಅದನ್ನು ಮನನ ಮಾಡಿಕೊಂಡು ಪುನಹ ಒಪ್ಪಿಸುವ ಪ್ರವೀಣರಾಗಿದ್ದರು ಒಂದು ಕಡೆ ಯಜಮಾನರು ಇವರಿಗೆ ಬುದ್ಧಿ ಕಲಿಸಲು ಕೃಷ್ಣನನ್ನು ಎಬ್ಬಿಸುವ ಚಾರಕನ ಪಾತ್ರವನ್ನು ಕೊಟ್ಟರು. ಚಾರಕ ಕೃಷ್ಣ ಪರಮಾತ್ಮನಿಗೆ ಉದಯ ರಾಗ ಹಾಡುತ್ತಾ ಕೃಷ್ಣನ ಮಹಿಮೆಯನ್ನು ಹೇಳುತ್ತ ಗಂಟೆಗಳ ಕಾಲ ಅರ್ಥ ಹೇಳಿದಾಗ ಯಜಮಾನರೇ ಬಂದು ಕ್ಷಮೆ ಕೇಳಿದಾಗಲೇ ಕೃಷ್ಣನನ್ನು ಏಳಿಸಿದ ಮಹಾತ್ಮರಿವರು. ರಾತ್ರಿ ನಿದ್ದೆ ಮಾದದ ಸಾಮಗರು ಯಾವವೇಷಮಾದಲೂ ತಯಾರಿದ್ದರು. ಬರೀ ಕಚ್ಚೆಯಲ್ಲಿ ರಂಗಸ್ಠಳಕ್ಕೆ ಬಂದ ಸನಕ ದೊಗಲೆ ತೊಟ್ಟ ಚಾರಕ  ಕಿರಾತ ಇಂದ್ರಜಾಲ ಮಾಡುವ ಗಾರುಡಿಗ ನಿಜವಾದ ಆನೆಯ ಮೇಲೆ ಏರಿ ಬಂದ ಸಮುದ್ರ ಮಠನದ ದೇವೇಂದ್ರ ಒಂದೇ ಎರಡೇ
ತಾಳಮದ್ದಲೆ ಅರ್ಥದಾರಿಗಳಾಗಿ
ತಾಳಮದ್ದಲೆ ಅರ್ಥದಾರಿಗಳಾಗಿ ಸಾಮಗರದು ವಿಶಿಷ್ಟ ಪ್ರತಿಭೆ. ಬ್ರಹ್ಮಾವರದೊಲ್ಲೊಂದು ತಾಳಮದ್ದಲೆ. ಕೃಷ್ಣ ಸಂಧಾನ. ಸಾಮಗರ ಕೃಷ್ಣನಿಗೂ ಕೌರವನಿಗೂ ಮಾತಿನ ಜಟಾಪಟಿಯಾಗಿ ತನಗರಿವಿಲ್ಲದಂತೆ ಕೌರವನು ತಟಕ್ಕನೇ ಮೇಲೆದ್ದು ಕೃಷ್ಣನನ್ನು ಬೈದು ನೀನು ಬೆಣ್ಣೆಗಳ್ಳ, ಸ್ತ್ರೀಲೋಲ ಎಂದು ಅಬ್ಬರಿಸಿದರು. ಸಾಮಗರು ದಿಡೀರನೆ ಮೇಲೆದ್ದು ಕುಣಿಯತೊಡಗಿದರು. ಪ್ರೇಕ್ಷಕರು ಅವಕ್ಕಾಗಿ ನೋಡುತ್ತಿದ್ದರೆ ಅದಕ್ಕೆ ಸಾಮಗರ ಸಮರ್ಥನೆ ಹೀಗಿತ್ತು. ಮಲಗಿ ಪಾಡಿದರೆ ಕುಳಿತು ಕೇಳುವ, ಕುಳಿತು ಪಾಡಲು ನಿಲುವ, ನಿಂತರೆ ನಲಿವ  ಎಂಬಂತೆ ನಾನು ಕುಣಿದೆ, ಎಂದಾಗ ವಾತಾವರಣ ತಿಳಿಯಾಗಿ ಎಲ್ಲರೂ ಮೆಚ್ಚಿ ಚಪ್ಪಳೆ ತತ್ತಿದರು.
.ಇನ್ನೊಂದು ಸಂಧಾನದ ಸಂದರ್ಭದಲ್ಲಿ ಸಾಮಗರ ಕೃಷ್ಣನಿಗೆ ಕೌರವನು ನಿನ್ನ ಹೆಂಡಂದಿರ ಹೆಸರು ಗೊತ್ತುಂಟೋ ಎಂದು ಕೇಳಿದಾಗ ಸ್ವಲ್ಪವೂ ವಿಚಲಿತರಾಗದೇ ಸಾಮಗರು ಗೊತ್ತುಂಟು ಕೇಳು ಎಂದವರೇ ಮೊದಲು ಅಷ್ಟ ಪತ್ನಿಯರ ಹೆಸರು ಹೇಳಿ ನಂತರ ಜಲಜ, ವನಜ, ಕಮಲ ಇತ್ಯಾದಿ ಪಟ ಪಟನೆ ಒಂದಷ್ಟು ಹೆಸರು ಹೇಳಿ ಎಷ್ಟಾಯಿತು ಹೇಳು ಎಂದು ಬಿಟ್ಟರು. ಕೌರವ ಬೆಪ್ಪಾಗಿ ತಲೆ ಅಲ್ಲಾಡಿಸಿದಾಗ ಇಷ್ಟನ್ನೇ ಲೆಕ್ಕ ಮಾಡದವ ಹದಿನಾರು ಸಾವಿರವನ್ನು ಹೇಗೆ ಲೆಕ್ಕ ಮಾಡುತ್ತಿ ಎಂದು ಬಿಟ್ಟರು. ಆಗ ಕೌರವ ನೀನು ಹೇಳಿದ ಹೆಸರನ್ನೇ ಮತ್ತೆ ಮತ್ತೆ ಹೇಳಿದೆಯಲ್ಲ ಎಂದಾಗ ಹೆಸರು ಒಂದೇ ಆದರೂ ಅವರು ಬೇರೆ ಬೇರೆ ವ್ಯಕ್ತಿಗಳಲ್ಲವೇ ಎಂದವರು ನಿನ್ನ ತಮ್ಮಂದಿರ ಹೆಸರು ಹೇಳು ಎಂದು ನಿನ್ನನ್ನು ಕಂಗಾಲು ಮಾಡುವವ ನಾನಲ್ಲ ಎಂದು ಮುಂದಿನ ಮಾತು ಹೇಳಿದರಂತೆ. ಯಾಕೆಂದರೆ ಕೌರವನ ತಮ್ಮಂದಿರ ಹೆಸರೆಲ್ಲವೂ ದು ಎಂಬ ಅಕ್ಷರದಿಂದಲೇ ಪ್ರಾರಂಭವಾಗುತ್ತದಲ್ಲ.
ಇನ್ನೊಂದು, ಕುಂದಾಪುರ ವೆಂಕಟರಮಣ ದೇವಸ್ಥಾನದಲ್ಲಿ ನಡೆದ ತಾಳಮದ್ದಲೆಯ ಘಟನೆ.
ಶೇಣಿಯವರ ಭೀಷ್ಮ ದೊಡ್ಡ ಸಾಮಗರ ಪರಶುರಾಮ ಎಮ್.ಎಲ್ ಸಾಮಗರ ಏಕಲವ್ಯ. ಎಮ್.ಎಲ್ ಸಾಮಗರು ಏಕಲವ್ಯನಾಗಿ ಭೀಷ್ಮನೊಡನೆ ಯುದ್ಧದ ಸಂದರ್ಭದಲ್ಲಿ ಅರ್ಥದ ಸಮರ್ಥನೆಗೆ ಕೆಲವು ಶ್ಲೋಕಗಳನ್ನು ಹೇಳಿ ಅರ್ಥ ಹೇಳಿದ್ದರು. ಮುಂದೆ ಭೀಷ್ಮ ಪರಶುರಾಮರ ಸಂಭಾಷಣೆಯಲ್ಲಿ ಶೇಣಿಯವರು ಈಗೀಗ ಕಾಡಿನ ಕಿರಾತರು ಸಂಸ್ಕೃತ ಮಾತಾಡುತ್ತಾರೆ ಎಂದು ದೊಡ್ಡ ಸಾಮಗರ ಮಗನನ್ನು ಉದ್ದೇಶಿಸಿ ಹೇಳಿದಾಗ ದೊಡ್ದ ಸಾಮಗರು ಅವನು ಕಿರಾತನಾದರೇನಾಯಿತು? ಅವನ ಅಪ್ಪ ದೊಡ್ಡ ವಿದ್ವಾಂಸನಾಗಿದ್ದಿರಬಹುದು. ಎಂದು ಹೇಳಿದರು.
ಇಂತಹ ಅದೆಷ್ಟೋ ಸ್ವಾರಸ್ಯಕರ ಘಟನೆಗಳು ಸಾಮಗರ ಜೀವನದಲ್ಲಿ ನಡೆದಿದ್ದು ನಮ್ಮಂತಹ ಅಭಿಮಾನಿಗಳಿಗೆ ಅದನ್ನು ಮೆಲುಕು ಹಾಕುವಂತೆ ಮಾಡಿದ ದೊಡ್ಡ ಸಾಮಗರ ನೆನಪು ಜಗತ್ತಿನಲ್ಲಿ ಎಂದೂ ಅಳಿಯುವುದಿಲ್ಲ. ಎಂದು ತಿಳಿಸುತ್ತಾ ಸಾಮಗರನನ್ನು ನೆನಪಿಸಲು ಅವಕಾಶ ಮಾಡಿಕೊಟ್ಟ ನಿಮಗೆಲ್ಲ ಕೃತಜ್ಞತೆ ಸಲ್ಲಿಸುತ್ತಾ ನನ್ನ ಮಾತನ್ನು ಮುಗಿಸಿ ವಿರಮಿಸುತ್ತೇನೆ. ನಮಸ್ಕಾರ.


ದಿನೇಶ ಉಪ್ಪೂರ
                                                             ಅಂಬಾಗಿಲು ಸಂತೆಕಟ್ಟೆ ಅಂಚೆ

                                                             ಉಡುಪಿ ೫೭೬೧೦೫