ಸೋಮವಾರ, ಫೆಬ್ರವರಿ 26, 2018

ದಿನೇಶ ಉಪ್ಪೂರ:

*ನನ್ನೊಳಗೆ - 77*

ಕೋಟದ ಅಕ್ಕನ ಮನೆಗೆ ಹೋದರೆ, ಕೋಟ ಬಸ್ ಸ್ಟಾಂಡ್  ಅಕ್ಕನಮನೆಗೆ ಹೋಗುವ ದಾರಿಯಲ್ಲಿ  ಅಮೃತೇಶ್ವರಿ ದೇವಸ್ಥಾನದ ಪಕ್ಕದಲ್ಲೇ  ಶ್ರೀಧರ ಟಾಕೀಸ್ ಅಂತ ಒಂದು ಟೆಂಟ್ ಸಿನಿಮಾ ಟಾಕೀಸ್ ಇತ್ತು. ಅಲ್ಲಿಗೆ ಹೋದಾಗ, ಅಕ್ಕ, ಅಕ್ಕನ ಮಕ್ಕಳು ಎಲ್ಲರೂ ಸೇರಿ ಒಟ್ಟಿಗೇ ಸಿನಿಮಾಕ್ಕೆ ಹೋಗುತ್ತಿದ್ದೆವು.

 ಆದರೆ ಸಿನಿಮಾಕ್ಕೆ ಹೋಗುವಾಗ ಭಾವಯ್ಯನಿಗೆ ಹೇಳುತ್ತಿರಲಿಲ್ಲ. ಹೇಳಿದರೆ, "ನಿಮಗೆ ಸಿನ್ಮವಾ ಮತ್ತೆಂತದಾ?" ಅಂತ ಬೈಯುತ್ತಾರೋ  ಅಂತ ಭಯ. ಅವರು ಮೇಳದ ಯಜಮಾನರು. ಯಾವಾಗಲೂ ಗಂಭೀರವಾಗಿಯೇ ಇರುತ್ತಿದ್ದರು. ನಮ್ಮೊಂದಿಗೆ ಸಲಿಗೆ ಅಂತ ಇರಲಿಲ್ಲ. ಮೇಳದ ವ್ಯವಹಾರ, ಕಲಾವಿದರು, ಕ್ಯಾಂಪ್ ಇದರಲ್ಲೇ ಬಿಝಿ ಇರುತ್ತಿದ್ದರು.   ಎಲ್ಲರೂ ಅವರಿಗೆ ಗೌರವ ಕೊಡುತ್ತಿದ್ದುದರಿಂದ, ದೂರವೇ ನಿಂತು ಮಾತಾಡುತ್ತಿದ್ದುದರಿಂದ ನಾವು ಅವರೊಂದಿಗೆ ಮಾತಾಡಲು ಹೆದರುತ್ತಿದ್ದೆವು. ಆಫೀಸಿನಂತೆ ಇರುವ ಒಂದು ಪ್ರತ್ಯೇಕ ರೂಮೂ ಆ ಮನೆಯಲ್ಲಿ ಇತ್ತು.

ಹಾಗಂತ ಅವರು ನಮಗೆ ಬೈದು, ಹೊಡೆದು ಮಾಡಿದವರಲ್ಲ. ಅವರು ಒಂದು ಸಲ ಎದುರಿಗೆ ಬಂದು ಒಮ್ಮೆ ಹೆಗಲಿನ ಮೇಲಿದ್ದ ಶಾಲನ್ನು ಪಟ್ ಅಂತ ಕೊಡಕಿ,  "ಎಂತ ಮಾಡ್ತ್ರಿ ಮಕ್ಳೆ" ಅಂದ್ರೆ ಸಾಕು, ನಾವೆಲ್ಲಾ ಆ ಜಾಗ ಬಿಟ್ಟು ಓಡಿ ಹೋಗುತ್ತಿದ್ದೆವು. ಮನೆಯಲ್ಲಿ ತುಂಬಾ ಜನರು ಇದ್ದು ಮನೆಯವರು, ಮಕ್ಕಳೆಲ್ಲಾ ಗಲಾಟೆ ಮಾಡುತ್ತಿದ್ದರೂ, ಅವರು ಮನೆಗೆ ಬಂದರು ಅಂದರೆ, ಮನೆ ಎಲ್ಲ ಗಪ್ ಚುಪ್. ಆಗ ಎಲ್ಲರದ್ದು ಪಿಸುಪಿಸು ಮಾತು ಅಷ್ಟೆ. ಅವರು ಆಟದ ಕ್ಯಾಂಪಿಗೆ ಹೋಗುತ್ತಾರೆ, ಮನೆಯಲ್ಲಿ ಇರುವುದಿಲ್ಲ ಎಂದು ಗೊತ್ತಾದ ಕೂಡಲೇ, ನಾವು ಎಲ್ಲರೂ ಸೇರಿಕೊಂಡು, ಸಿನಿಮಾಕ್ಕೆ ಹೋಗುತ್ತಿದ್ದೆವು. ಅದೇ ರೀತಿ ನಾನು ಕೆಲವು ಸಿನಿಮಾ ನೋಡಿದ್ದೆ. ಅದರಲ್ಲಿ ವಿಧಿವಿಲಾಸ, ಕೃಷ್ಣಗಾರುಡಿ, ಕೃಷ್ಣ ರುಕ್ಮಿಣಿ ಸತ್ಯಭಾಮೆ ಹೀಗೆ  ನೋಡಿದ ಕೆಲವು ಸಿನಿಮಾದ ಹೆಸರುಗಳು ಮಾತ್ರ ನೆನಪಿನಲ್ಲಿ ಉಳಿದಿದೆ.

ನಾನು ಶಂಕರನಾರಾಯಣದಲ್ಲಿ ಪಿಯುಸಿ ಓದುವಾಗ, ಸಿನಿಮಾ ನೋಡಲು ಕುಂದಾಪುರಕ್ಕೆ ಬರಬೇಕಿತ್ತು. ಸುಮಾರು ಇಪ್ಪತ್ತೆರಡು ಮೈಲಿ ದೂರ. ಮನೆಯಲ್ಲಿ ಗೊತ್ತಾದರೆ "ಸುಮ್ಮನೇ ದುಡ್ಡು ದಂಡ ಮಾಡ್ತ್ಯಾ" ಅಂತ ಅಮ್ಮ ಬೈಯುತ್ತಿದ್ದುದರಿಂದ ಮನೆಯಲ್ಲೂ ಹೇಳಲು ಸಾಧ್ಯವಿರಲಿಲ್ಲ.  ಸುಮಾರಿಗೆ ಶನಿವಾರ ಅಥವ ಭಾನುವಾರ ನಾನು ಬಸ್ಸಿನಲ್ಲಿ ಕುಂದಾಪುರಕ್ಕೆ ಹೋಗಿ, ಸಿನಿಮಾ ನೋಡಿಕೊಂಡು ಸಂಜೆಹೊತ್ತಿಗೆ ಪುನಃ ಶಂಕರನಾರಾಯಣ ಕ್ಕೆ ಬರುತ್ತಿದ್ದೆ. ಶನಿವಾರ ಮಧ್ಯಾಹ್ನ ಒಂದು ಪಿರಿಯೇಡ್ ಗೆ ಚಕ್ಕರ್ ಹಾಕಿ ಬಸ್ಸಿನಲ್ಲಿ ಕುಂದಾಪುರಕ್ಕೆ ಹೋದರೆ ಎರಡೂವರೆಯ ಮ್ಯಾಟನಿ ಶೋ ಮುಗಿಸಿಕೊಂಡು ಬರಲು ಆಗುತ್ತದೆ. ಆದರೆ ಸಂಜೆ ಮೊದಲ ಶೋ ಗೆ ಹೋದರೆ ಕೊನೆಯ ಬಸ್ಸು ಎಂಟುಕಾಲು ಗಂಟೆಗೆ ಇದ್ದು,ಅದು ತಪ್ಪಿ ಹೋದರೆ ಪಚೀತಿ ಆಗುತ್ತಿತ್ತು. ಮತ್ತೆ ಬಸ್ ಇಲ್ಲ. ಆ ರಾತ್ರಿ ಬಸ್ ಸ್ಟಾಂಡಿನಲ್ಲೇ ಇರಬೇಕಾದ್ದರಿಂದ ಹೆದರಿಕೆಯಾಗಿ, ನಾನು ಮ್ಯಾಟನಿ ಶೋ ಗೇ ಹೆಚ್ಚಿಗೆ  ಹೋಗುತ್ತಿದ್ದೆ. ಹಾಗೆಯೇ ನಾನು, ಬದುಕು ಬಂಗಾರವಾಯಿತು, ಬಯಲುದಾರಿ, ಮಯೂರ, ಭೂತಯ್ಯನ ಮಗ ಅಯ್ಯು ಮುಂತಾದ ಸಿನಿಮಾಗಳನ್ನು ಆಗ ನೋಡಿದ್ದೆ. ಕೆಲವು ಇಂಗ್ಲೀಷ್ ಸಿನಿಮಾವನ್ನೂ ನೋಡಿದ್ದೆ. ಚಾರ್ಲಿ ಚಾಪ್ಲಿನ್ ನ ಗೋಲ್ಡ್ ರಶ್ ಕೂಡ ಆಗ ನೋಡಿದ್ದೆ.

ಒಮ್ಮೆ ಏನೋ ತೊಂದರೆಯಾಗಿ ಮಧ್ಯಾಹ್ನ ಹೋಗಲು ಆಗದೇ ಸಾಯಂಕಾಲವೇ ಕುಂದಾಪುರಕ್ಕೆ ಹೋಗಿ  ಸಿನಿಮಾ ನೋಡಬೇಕಾದ ಪ್ರಸಂಗ ಬಂತು. ಯಾವ ಸಿನಿಮಾ ಅಂತ ಸರಿಯಾಗಿ ನೆನಪಿಲ್ಲ. ಕೊನೆಯ ಬಸ್ಸು ತಪ್ಪಿಸಿಕೊಳ್ಳಬಾರದು, ಸ್ವಲ್ಪ ಸಿನಿಮಾ ಇರುವಾಗಲೇ ಬಂದರಾಯಿತು ಎಂದು ಧೈರ್ಯ ಮಾಡಿದ್ದು. ಆದರೆ ಸಿನಿಮಾ ನೋಡುವುದರೊಳಗೆ ಹೊರಗಿನ ಪ್ರಪಂಚವನ್ನೆ ಮರೆತ ನಾನು, ಸಮಯದ ಪರಿವೆಯೇ ಆಗದೆ ಸಿನಿಮಾ ಮುಗಿಯದೇ ಬಿಟ್ಟು ಬರಲು ಆಗಲಿಲ್ಲ. ಸಿನಿಮಾ ಮುಗಿದು ಬಸ್ ಸ್ಟಾಂಡಿಗೆ ಓಡಿ ಓಡಿ ಬಂದರೆ ಬಸ್ಸು ಹೋಗಿಯಾಗಿತ್ತು.

ಏನು ಮಾಡುವುದು‌?. ಅಲ್ಲಿ ಯಾರ ಪರಿಚಯವೂ ಇಲ್ಲ. ಲಾಡ್ಜಿಂಗ್ ಗೆ ಹೋಗುವ ಎಂದರೆ ಕಿಸೆಯಲ್ಲಿ ದುಡ್ಡು ಇಲ್ಲ. ಬಸ್ ಸ್ಟಾಂಡಿನಲ್ಲಿ ಮಲಗಲು ಮನಸ್ಸು ಒಪ್ಪಲಿಲ್ಲ. ಏನು ಮಾಡುವುದು ಶಂಕರನಾರಾಯಣ ಕ್ಕೆ ಸುಮಾರು ಇಪ್ಪತ್ತ ಎರಡು ಕಿಲೋಮೀಟರ್ ದೂರ ಆಗುತ್ತದೆ. ತುಂಬಾ ಹೆದರಿಕೆಯಾಯಿತು. ಅಲ್ಲಲ್ಲಿ ಬೀದಿದೀಪ ಇದ್ದರೂ ಎಲ್ಲ  ಕತ್ತಲೆಯಂತೆಯೇ ಕಾಣುತ್ತಿತ್ತು. ಬಸ್ಸಿನ, ವಾಹನಗಳ ಓಡಾಟವೂ ಕಡಿಮೆಯಾಗುತ್ತಾ ಬಂದಿದ್ದು ನೀರವ ಮೌನದ ವಾತಾವರಣ.

ಸುಮ್ಮನೇ ಕಾಲು ಎಳೆದುಕೊಂಡು ನಡೆಯತೊಡಗಿದೆ. ಮೂರು ಮೈಲಿ ನಡೆದು ಕೋಟೇಶ್ವರ ತಲುಪುವ ಹೊತ್ತಿಗೆ ಕಾಲು ನೋಯಲು ಪ್ರಾರಂಭವಾಯಿತು.  ಸಂಜೆ ಏನೂ ತಿಂದಿರಲಿಲ್ಲ. ಹಸಿವೆಯೂ ಆಗುತ್ತಿತ್ತು. ಆದರೆ ಬೇರೆ ಏನು ಮಾಡಲೂ ತೋಚಲಿಲ್ಲ. ಹಾಗೂ ಹೀಗೂ ಕೋಟೇಶ್ವರಕ್ಕೆ ಬಂದು,ಅಲ್ಲಿಂದ ಎಡಕ್ಕೆ ತಿರುಗಿ ಹಾಲಾಡಿ ರಸ್ತೆಗೆ ಬಂದು, ಮತ್ತೆ ನಿಧಾನವಾಗಿ ನಡೆಯತೊಡಗಿದೆ. ನಡೆಯಲು ಸಾಧ್ಯವಾಗದೇ ಅಲ್ಲಿಯೇ ಒಂದು ಮೋರಿಯ ಬದಿಯಲ್ಲಿ ಸ್ವಲ್ಪ ಹೊತ್ತು ಕುಳಿತುಕೊಂಡೆ. ರಸ್ತೆಯ ದಾರಿ ದೀಪಗಳು ಬಿಟ್ಟರೆ, ಬೇರೆ ಯಾವುದೇ ಬೆಳಕು ಇರಲಿಲ್ಲ. ಜನರ ಓಡಾಟವೂ ಇರಲಿಲ್ಲ. ಸುತ್ತಲೂ ಕತ್ತಲೆ ಕತ್ತಲೆ. ಮತ್ತೆ ಎದ್ದು ನಿಧಾನವಾಗಿ ನಡೆಯತೊಡಗಿದೆ. ಆಗೊಂದು ಈಗೊಂದು ಲಾರಿಯೋ ಕಾರೋ ಸರ್ ರ್  ಅಂತ ಬಂದು ಮರೆಯಾಗಿ ಹೋಗುತ್ತಿತ್ತು.

ಅಂದು ಶನಿವಾರ. ಕುಂದಾಪುರದ ಸಂತೆ.  ಸಂತೆಗೆ ತರಕಾರಿಯನ್ನೋ ಮತ್ತೇನನ್ನೋ ಮಾರಲು ಹೋದ ಒಬ್ಬರು ಸಂತೆಯನ್ನು ಮುಗಿಸಿ, ಒಂದು ಎತ್ತಿನ ಗಾಡಿ ಹೊಡೆದುಕೊಂಡು ಅದೇ ದಾರಿಯಲ್ಲಿ ಬಂದರು. ನಾನು ಆ ಗಾಡಿ ಬರುವವರೆಗೆ ನಿಂತಿದ್ದು, ಅವರ ಗಾಡಿಯ ಜೊತೆಗೆ ನಡೆಯತೊಡಗಿದೆ. ಆ ಗಾಡಿ ಹೊಡೆಯುವವನಿಗೆ ಏನನ್ನಿಸಿತೋ "ಈ ರಾತ್ರಿಯಂಗೆ ಎಲ್ಲಿಗ್ ಹ್ಯಾತ್ರಿ" ಅಂತ ಕೇಳಿದ್ರು. ಯಾರೋ ಮನೆಯನ್ನು ಬಿಟ್ಟು ಓಡಿ ಬಂದ ಹುಡುಗ ಎಂದು ಎಣಿಸಿರಬೇಕು ಅವರು. "ಶಂಕರನಾರಾಯಣಕ್ಕೆ ಹೋಗಬೇಕಿತ್ತು. ಬಸ್ಸು ತಪ್ಪಿಹೋಯಿತು ಮರ್ರೆ" ಎಂದು ನನ್ನ ಅಳಲನ್ನು ತೋಡಿಕೊಂಡೆ. "ನೀವು ಅಲ್ಲೀವರೆಗೆ ಒಬ್ರೆ ನೆಡಕಂಡ್ ಹ್ವಾತ್ರ್ಯಾ?" ಎಂದು ಅವರು ಆಶ್ಚರ್ಯ ತೋರಿಸಿದರು. ನಾನು ಮಾತಾಡಲಿಲ್ಲ. ನನಗೂ ಉತ್ತರ ಗೊತ್ತಿರಲಿಲ್ಲ.

ನಾನು ಹಿಂದೆ ಗಾಡಿಯಲ್ಲಿ ಕುಳಿತುಕೊಳ್ಳಬಹುದೇ? ಎಂದು ತೀರಾ ಕಂಗಾಲಾದ ನಾನು ಕೇಳಿದೆ. ನನಗೆ ಆಗಲೇ ಕಾಲು ನೋಯುತ್ತಿದ್ದು ಇನ್ನು ನಡೆಯಲು ಸಾಧ್ಯವೇ ಇಲ್ಲ ಎಂಬಷ್ಟು ಬಳಲಿಕೆಯಾಗಿತ್ತು. ಅವನಿಗೆ ಕನಿಕರವಾಗಿರಬೇಕು. "ಹೋ ಅಡ್ಡಿಲ್ಲೆ. ಕೂಕಣಿ. ನಾನೇನ್ ನಿಮ್ಮನ್ ಹೊರಕಾ" ಎಂದರು., "ಆದ್ರೆ ನಾನು ಹುಣ್ಸಿಮಕ್ಕೀವರಗೇ ಮಾತ್ರಾ ಹೋಪುದು. ಮತ್ತೆಂತ ಮಾಡ್ತರಿ? " ಎಂದರು. ನಾನು ಏನೂ ಮಾತಾಡಲಿಲ್ಲ. ನಾನು ಹೋಗಿ ಗಾಡಿಯನ್ನು ಹತ್ತಿ ಕುಳಿತುಕೊಂಡೆ.

 ನಾನು ಅಷ್ಟರವರೆಗೆ ಎತ್ತಿನ ಗಾಡಿಯಲ್ಲಿ ಕುಳಿತಿರಲಿಲ್ಲ. ಆಚೆ ಈಚೆ ಎರಡೂ ಕಡೆಯ ದಂಡೆಯನ್ನು ಹಿಡಿದು ಗಟ್ಟಿಯಾಗಿ ಕುಳಿತುಕೊಂಡೆ. ಅದು ಗಡಬಡ ಮಾಡುತ್ತಾ ಆಚೆ ಈಚೆ ಅಲ್ಲಾಡುತ್ತಾ  ಸಾಗುತ್ತಿತ್ತು. ಗಾಡಿಗೆ ಕಟ್ಟಿದ ಎತ್ತುಗಳ ಕುತ್ತಿಗೆಯ ಗಂಟೆಗಳ ಶಬ್ದ, ಎತ್ತುಗಳ ಕಾಲಿನ ಟಕ್ ಟಕ್ ಶಬ್ದ, ಮೌನವನ್ನು ಭೇದಿಸುತ್ತಿದ್ದರೆ, ಎತ್ತುಗಳ ಮಧ್ಯ ಗಾಡಿಯ ಕೆಳಗಡೆ ಕಟ್ಟಿದ ಲಾಟೀನಿನ ಮಂದ ಬೆಳಕು ಗಾಡಿಯ ಅಸ್ಥಿತ್ವವನ್ನು ಆ ರಸ್ತೆಯಲ್ಲಿ ಎತ್ತಿ ತೋರಿಸುತ್ತಿತ್ತು.ಆಗಾಗ ಗಾಡಿಗೆ ಚಕ್ರಕ್ಕೆ ಬಿಗಿದ ಬ್ರೇಕ್ ಬಿರಿಗುಂಟೆ ಕರ್ರ್ ಕರ್ರ್ ಎನ್ನುತ್ತಿತ್ತು. ಮೆಲ್ಲಗೆ ಸಾಗುತ್ತಿತ್ತು ನಮ್ಮ ಪ್ರಯಾಣ. ಹುಣ್ಸೆಮಕ್ಕಿಗೆ ಹೋದ ಮೇಲೆ ಏನು ಮಾಡುವುದು? ಎಂದೂ ನನಗೂ ತಿಳಿಯಲಿಲ್ಲ. ಮನಸ್ಸಿನೊಳಗೆ ಪುಕಪುಕ ಆಗಿ, ನಾನು ಇಷ್ಟು ಉಮೇದು ಮಾಡಬಾರದಿತ್ತು ಎಂದುಕೊಂಡೆ.

ಹಾಗೆಯೇ ಗಾಡಿಯಲ್ಲಿ ಸುಮಾರು ಐದು ಮೈಲು ಪ್ರಯಾಣ ಮಾಡಿ, ಸುಣ್ಣಾರಿಯ ತನಕ ಬಂದದ್ದಾಯಿತು. ಸುಣ್ಣಾರಿಯ ಪೇಟೆಯ ಹತ್ತಿರ ಹತ್ತಿರ ಬರುವಾಗ, ಒಮ್ಮೆಲೆ ಎಲ್ಲೋ ಚಂಡೆ ಮದ್ದಲೆಗಳ ಶಬ್ದ ದೂರದಲ್ಲಿ ಕೇಳಿಸಿತು. ಹೋ, ಇಲ್ಲೆಲ್ಲೋ ಆಟ ಇರಬಹುದು. ರಾತ್ರಿ ಕಳೆಯಲು ಆಗುತ್ತದೆ ಎನ್ನಿಸಿ," ನಾನು ಇಲ್ಲಿಯೇ ಇಳಿಯುತ್ತೇನೆ" ಎಂದು ಗಾಡಿಯವನಿಗೆ ಹೇಳಿದೆ. ಅವನು ಗಾಡಿಯನ್ನು ನಿಲ್ಲಿಸಿದ. ಅಲ್ಲಿಯೇ ಇಳಿದುಕೊಂಡೆ.

ಚಂಡೆಯ ಶಬ್ದ ಕೇಳಿದ ಕಡೆಗೆ ನೋಡುತ್ತಾ ಹೆಜ್ಜೆ ಹಾಕಿದೆ. ಅದರೆ ಆಟದ ಗರದ ಬೆಳಕಾಗಲಿ, ಮೈಕಿನ ಶಬ್ದವಾಗಲೀ, ಜನ ಓಡಾಡುವುದಾಗಲೀ ಕಾಣಲಿಲ್ಲ. ಆದರೂ ಮುಂದೆ ಹೋಗಿ ನೋಡುವಾಗ, ಅಲ್ಲಿ ಒಂದು ಶಾಲೆಯಲ್ಲಿ ಯಕ್ಷಗಾನದ ಟ್ರಯಲ್ ಆಗುತ್ತಿತ್ತು. ಹೋ, ಮತ್ತೆ ನಾನು ತಪ್ಪಿಬಿದ್ದೆ. ಸುಮ್ಮನೆ ಗಾಡಿಯಲ್ಲಿ ಹೋಗಬೇಕಾಗಿತ್ತು ಅನ್ನಿಸಿತು. ಇನ್ನೇನು ಮಾಡುವುದು? ಎಂದುಕೊಳ್ಳುತ್ತಾ ಶಾಲೆಯ ಒಳಗೆ ಹೋದೆ. ಅಲ್ಲಿ ಹೋಗಿ ಇಣಕಿದಾಗ ಅಲ್ಲಿ ಯಕ್ಷಗಾನ ಹೇಳಿಕೊಡುತ್ತಿದ್ದವನು ನನ್ನ ಹಿರಿಯ ಅಣ್ಣ ದಾಮೋದರಣ್ಣಯ್ಯನೇ ಆಗಿದ್ದ.

ನನಗೆ ಒಮ್ಮೆಲೇ ಭಾರೀ ಸಂತೋಷವಾಯಿತು. ಹೋದ ಜೀವ ಬಂದ ಹಾಗಾಗಿ, ಟ್ರಯಲ್ ನಡೆಯುತ್ತಿದ್ದಲ್ಲಿಗೆ ಹೋದೆ. ಅಣ್ಣಯ್ಯ ನನ್ನನ್ಬು ನೋಡಿ ಆಶ್ಚರ್ಯದಿಂದ  "ಇಲ್ಲಿಗೆ ಹೇಗೆ ಬಂದೆ?" ಎಂದು ಕೇಳಿದ. ಏನೋ ಒಂದು ಸುಳ್ಳು ಹೇಳಿದೆ. ಅವನು ಮತ್ತೆ ಪ್ರಶ್ನಿಸದೇ, ಅಲ್ಲಿದ್ದವರಿಗೆಲ್ಲ ನನ್ನ ಪರಿಚಯವನ್ನು ಮಾಡಿಸಿದ. ಅದು ಸ್ವಲ್ಪ ದಿನದ ನಂತರ ಅಲ್ಲಿನ ಊರವರು ಸೇರಿ ಮಾಡುವ ಆಟದ ಗ್ರಾಂಡ್ ಟ್ರಯಲ್ ಆಗಿತ್ತು. ದಾಮೋದರಣ್ಣಯ್ಯನೇ ಅವರಿಗೆ ತಾಳ, ಕುಣಿತಗಳನ್ನು ಹೇಳಿಕೊಟ್ಟು ಪ್ರಸಂಗ ತರಬೇತಿ ಮಾಡಿದ್ದ. ನಾನೂ ಸಾಂದರ್ಭಿಕವಾಗಿ ಆ ಮಕ್ಕಳಿಗೆ ಒಂದೆರಡು ಕುಣಿತ ಹೇಳಿಕೊಡುವುದರಲ್ಲಿ ಭಾಗಿಯಾದೆ. ರಾತ್ರಿ ಅದೇ ಊರಿನ ಬ್ರಾಹ್ಮಣರೊಬ್ಬರ ಮನೆಯಲ್ಲಿ ಊಟವೂ ಆಯಿತು. ಅಂದು ರಾತ್ರಿ ಆ ಶಾಲೆಯಲ್ಲಿಯೇ ಮಲಗಿದೆವು. ಮರುದಿನ ಬೆಳಿಗ್ಗೆ ಅಣ್ಣನೊಂದಿಗೆ ಹೊರಟು ಅವನ ಸೈಕಲ್ಲಿನಲ್ಲಿ ಕುಳಿತು ಹಾಲಾಡಿಯವರೆಗೆ ಬಂದೆ. ನಂತರ ಬಸ್ಸು ಹತ್ತಿ ಶಂಕರನಾರಾಯಣದ ನನ್ನ ರೂಮಿಗೆ ಹೋದಾಗ "ಅಯ್ಯಬ್ಬ" ಅನ್ನಿಸಿತು.

ಶನಿವಾರ, ಫೆಬ್ರವರಿ 24, 2018

ದಿನೇಶ ಉಪ್ಪೂರ:

*ನನ್ನೊಳಗೆ- 76*

ನನಗೂ ಸುಬ್ರಾಯರಿಗೂ ಸ್ನೇಹವಾದದ್ದೂ ಸುಬ್ರಮಣ್ಯ ಉಡುಪರ ಮೂಲಕವೆ. ಅದು ಸುಮಾರು 1987 ರ ಅವಧಿ ಇರಬೇಕು. ಅವರು ಪುತ್ತಿಗೆ ಮಠದ ಹಿಂದುಗಡೆಯಲ್ಲಿರುವ ಸುಗುಣ ಪ್ರಿಂಟರ್ಸ್ ಎಂಬ ಒಂದು ಪ್ರೆಸ್ ನಲ್ಲಿ ಮೆನೇಜರ್ ಆಗಿದ್ದರು. ಆ ಪ್ರೆಸ್ ನ್ನು ಪುತ್ತಿಗೆ ಸ್ವಾಮಿಯವರು ನಡೆಸುತ್ತಿದ್ದರು. ಸುಬ್ರಾಯರಿಗೆ ಅದೇ ಮಠದಲ್ಲಿಯೇ ಒಂದು ರೂಮನ್ನು ಉಳಿದುಕೊಳ್ಳಲು ಕೊಟ್ಟಿದ್ದರು. ನಾನು ಆಫೀಸು ಮುಗಿಸಿ ಸಂಜೆ ಅವರ ಪ್ರೆಸ್ ಗೆ ಹೋದರೆ, ಅದೇ ಹೊತ್ತಿಗೆ ಉಡುಪರೂ ಅಲ್ಲಿಗೆ ಬರುತ್ತಿದ್ದರು. ಅದೂ ಇದೂ ಮಾತಾಡಿ, ರಥಬೀದಿಯಲ್ಲೇ ಇದ್ದ ಮಿತ್ರ ಸಮಾಜಕ್ಕೋ ಅನುರಾಧಾ ಹೋಟೇಲಿಗೋ ಹೋಗಿ,  ತಿಂಡಿ ತಿಂದು ಕಾಫಿ ಕುಡಿದು ಆಮೇಲೆ ನಾನೂ ಉಡುಪರು ನಮ್ಮ ವಾದಿರಾಜ ರಸ್ತೆಯಲ್ಲಿ ಇರುವ ಭೋಜರಾವ್ ಕಂಪೌಂಡ್ ನ ರೂಮಿಗೆ ಹೋಗುತ್ತಿದ್ದೆವು. ಕೆಲವುಸಲ ಪುತ್ತಿಗೆ ಮಠದಲ್ಲಿ ಇರುವ ಸುಬ್ರಾಯರ ರೂಮಿಗೇ ಹೋಗಿ ಅವರಿಂದಲೇ ಒಂದು ಚಾ ಮಾಡಿಸಿ ಕುಡಿಯುವುದೂ ಇತ್ತು. ಗಂಜಿ ಊಟವೂ ಆಗುತ್ತಿತ್ತು.

ಈ ಸುಬ್ರಾಯರು ಹಿಂದೆ ಶಂಕರನಾರಾಯಣದಲ್ಲಿ ಹೋಟೇಲನ್ನೂ ಇಟ್ಟು, ಅದರಲ್ಲಿ ಲಾಭ ಕಾಣದೇ ಹೋಟೇಲು ವೃತ್ತಿ ಕೈಗೆ ಹತ್ತದೇ ಅದನ್ನು ಬಿಟ್ಟು ಉಡುಪಿಗೆ ಬಂದಿದ್ದರು. ಆಗ ಪರಿಚಯವಾದ ಅವರ ಮತ್ತು ಉಡುಪರ ಸ್ನೇಹ, ಉಡುಪಿಗೆ ಬಂದ ಮೇಲೂ ಮುಂದುವರಿದಿತ್ತು. ನಾನು ನನ್ನ ಎಲ್ಲಸುಖ ಕಷ್ಟಗಳನ್ನೂ ಅವರಲ್ಲಿ ಮುಕ್ತವಾಗಿ ಹೇಳಿಕೊಳ್ಳುತ್ತಿದ್ದೆ. ಅವರು ತುಂಬಾ ಸರಳ ಸ್ವಭಾವದವರು. ಕಷ್ಟಜೀವಿ. ಯಾವ ಪರಿಸ್ಥಿತಿಗೂ ಹೊಂದಿಕೊಳ್ಳುವವರು. ಯಾರನ್ನೂ ಸ್ನೇಹಮಾಡಿಕೊಂಡು ಮಾತಾಡಿಸಬಲ್ಲವರು. ಎಲ್ಲಿ ಹೋದರೂ ಪ್ರೆಸ್ಸಿನ ಸುಬ್ರಾಯರು ಎಂದರೆ ಸಾಮಾನ್ಯವಾಗಿ ಗೊತ್ತಿರುತ್ತಿತ್ತು. ಈಗ ಅವರು ಒಳಕಾಡಿನಲ್ಲಿ ಸ್ವಂತ ಪ್ರೆಸ್ ಮಾಡಿಕೊಂಡಿದ್ದಾರೆ.

ಹಿಂದೆ ನಾನು ಒಮ್ಮೆ ಅವರ ಮೂಲ ಮನೆಗೂ ಹೋಗಿದ್ದೆ. ಅದು ಕೊಲ್ಲೂರಿನಿಂದ ಮುಂದೆ ಹೊಸನಗರ ಮಾರ್ಗದಲ್ಲಿ ಇರುವ ಬ್ಯಾಡ್ಗೋಡು ಎಂಬ ಒಂದು ಹಳ್ಳಿ. ಚಳಿಯ ಪ್ರದೇಶ.

ಆವತ್ತು ಅವರ ಮನೆಗೆ ಹೋದಾಗ ಸಂಜೆಯಾಗಿತ್ತು. ಸಣ್ಣಗೆ ಮಳೆಯೂ ಬರುತ್ತಿತ್ತು ಅಂತ ನೆನಪು. ಸುಮಾರು ಅರ್ಧ ಗಂಟೆ ಗುಡ್ಡದದಾರಿ, ನೀರು ಇರುವ ತೋಡು, ಅಡಿಕೆ ತೋಟದ ಬದಿಯ ಏರಿ ಅಂತ ನಡೆದುಹೋಗಿದ್ದೆವು. ದೊಡ್ಡ ಅಡಿಕೆಯ ತೋಟದ ಹಿಂಭಾಗದ ಎತ್ತರದ ಜಾಗದಲ್ಲಿ ಅವರ ಮನೆ. ಅದು ಮಲೆನಾಡಿನ ತುಂಬಾ ಚಳಿಯ ಪ್ರದೇಶ. ಮನೆಯ ಹಿಂದೆ ಎತ್ತರವಾದ ಗುಡ್ಡ.

ಅಂದು ರಾತ್ರಿ ಅವರ ಮನೆಯಲ್ಲಿ ಚಿಮಣಿ ದೀಪದ ಬೆಳಕಿನಲ್ಲಿ ಕಳೆದದ್ದಾಯಿತು. ಊಟವಾಗಿ ಹೊರಗೆ ಚಾವಡಿಯಲ್ಲಿ ಕುಳಿತಿರುವಾಗಲೇ ಚಳಿ ತಾನೂ ಇದ್ದೇನೆ ಎಂದು ತೋರಿಸಿಕೊಂಡದ್ದರಿಂದ ನಾನು ಆಗಲೇ ಕೈಯನ್ನು ತಿಕ್ಕಿತಿಕ್ಕಿ ಬಿಸಿಮಾಡಿಕೊಳ್ಳುತ್ತಾ ಮುರುಟಿಕೊಳ್ಳತೊಡಗಿದ್ದೆ. ಮುಂಜಾಗ್ರತೆಯಿಂದ ನಾನು ಶಾಲು ತಂದಿದ್ದೆನಾದರೂ ಅದನ್ನು ಹೊದೆದಿದ್ದರೂ ಆ ಚಳಿಯ ಮುಂದೆ ಆ ಶಾಲೇ ತಣ್ಣಗಾಗುತ್ತಿರುವಂತೆ ಭಾಸವಾಗುತ್ತಿತ್ತು.

 ಅವರ ಮನೆಯವರೋ ತುಂಬಾ ಉಪಚಾರ ಮಾಡುವವರು. ಊಟಕ್ಕೆ ಬಡಿಸುವಾಗಲೂ ಬೇಡ ಬೇಡ ಎಂದರೂ ಬಡಿಸಿ, ನನ್ನನ್ನು ದಾಕ್ಷಿಣ್ಯಕ್ಕೆ ಒಳಪಡಿಸಿ ಹೊಟ್ಟೆಯಲ್ಲಿ ಜಾಗ ಇಲ್ಲದ ಹಾಗೆ ಮಾಡಿದ್ದರು. ಆಗಲೇ ನಿದ್ದೆ ಬರುವಂತಾಗಿದ್ದು ಮಂಪರು ಶುರುವಾಗಿತ್ತು. ಊಟವಾದ ಮೇಲೆ ಒಂದಷ್ಟು ಮಾತಾಡಿ, ಆಮೇಲೆ ಎಲ್ಲಿ ಮಲಗುವುದು? ಎಂದು ಚರ್ಚೆಯಾಗಿ " ಇವತ್ತು ಚಳಿ ಜೋರು ಉಂಟು. ಮಾಳಿಗೆಯ ಮೇಲೆ ಬೆಚ್ಚಗೆ ಇರುತ್ತದೆ" ಅಂತ ತೀರ್ಮಾನವಾಗಿ ನಾನೂ ಸುಬ್ರಾಯರೂ ಅಲ್ಲಿ ಮಲಗಲು ಹೊರಟೆವು. ಮನೆಯ ಪಡಸಾಲೆಯ ಮಧ್ಯದಲ್ಲಿರುವ ಒಂದು ಮರದ ಏಣಿಯನ್ನು ಇಳಿಬಿಟ್ಟ ಹಗ್ಗವನ್ನು ಹಿಡಿದು ಮೇಲೆ ಹತ್ತಿ ಮಾಳಿಗೆಯನ್ನು ಸೇರಿದೆವು. ಅಲ್ಲಿ ತಲೆಗೆ ಮಾಡು ತಾಗುತ್ತಿದ್ದುದರಿಂದ ನೆಟ್ಟಗೆ ನಿಲ್ಲಲೂ ಆಗುತ್ತಿರಲಿಲ್ಲ. ಕೈಯಲ್ಲೊಂದು ಬ್ಯಾಟರಿಯನ್ನೂ ಕೊಟ್ಟಿದ್ದರು. ಅದರ ಬೆಳಕಿನಲ್ಲಿ ಮೆಲ್ಲನೇ ಅಂಬೆಕಾಲಿಟ್ಟುಕೊಂಡು ಹೋಗಿ, ನನಗಾಗಿ ಹಾಸಿದ ಹಾಸಿಗೆಯಲ್ಲಿ  ಮಲಗಿದೆ. ಎರಡು ಕಂಬಳಿಯನ್ನು ಹೊದೆಯಲು ಕೊಟ್ಟಿದ್ದರು. ಅಷ್ಟಾದರೂ ಚಳಿ ತುಂಬಾ ಇದ್ದು, ನನ್ನ ಹಲ್ಲುಹಲ್ಲಿಗೆ ತಾಗಿ ಕಟಕಟ ಸದ್ದು ಆಗುತ್ತಿತ್ತು. ಕಾಲುಗಳು ತಂಡಿಯೇರಿದಂತೆ ಆಗುತ್ತಿತ್ತು. ಕಿವಿಯು ತಣ್ಣಗೆ ಆಗಿದ್ದರಿಂದ ನನಗೆ ಒಂದು ಪಾಣಿಪಂಚೆಯನ್ಬು ತಲೆಗೆ ಸುತ್ತಿಕೊಳ್ಳಲು ಕೊಟ್ಟಿದ್ದರು.

ಮಲಗಿದ ಸುಮಾರು ಹೊತ್ತಿನ ಬಳಿಕ ಸುಬ್ರಾಯರ ಅಮ್ಮ, ಮತ್ತೆ ಏಣಿಯಲ್ಲಿ ಮೇಲೆ ಹತ್ತಿ ಬಂದು, ಇಣಕಿ " ನಿದ್ದೆ ಬಂತಾ? ಇವತ್ತು ಚಳಿ ಜೋರು ಉಂಟು" ಎಂದು ನನ್ನ ಮೈಮೇಲೆ ಮತ್ತೊಂದು ತೆಳುವಾದ ಬಟ್ಟೆಯನ್ನು ಇಚ್ಚಡಿ ಮಾಡಿ ಹೊದೆಸಿ ಹೋದರು. ಬಹುಷ್ಯ ಅದು ಅವರ ಸೀರೆಯೇ ಇರಬೇಕು. ಅಂದು ಎಷ್ಟು ಹೊತ್ತಿಗೆ ನಿದ್ದೆ ಬಂತೋ ಗೊತ್ತಾಗಲಿಲ್ಲ.  ಬೆಳಿಗ್ಗೆ ತಡವಾಗಿ ಎಚ್ಚರವಾಯಿತು. ಆ ದಿನ ಅಲ್ಲಿಯೇ ಇದ್ದು ಅವರ ಮನೆಯ ಹವ್ಯಕರ ಮನೆಯ ತುಂಬು ಮನಸ್ಸಿನ ಆತಿಥ್ಯ ಸ್ವೀಕರಿಸಿ, ಸಂಜೆಗೆ ಉಡುಪಿಗೆ ಮರಳಿದೆವು. ಅದೊಂದು ನನ್ನ ನೆನಪಿನಲ್ಲಿ ಉಳಿದುಕೊಂಡ ಅನುಭವ.

 ಅವರ ಮದುವೆಯ ಸಂದರ್ಭದ ಘಟನೆಯೂ ನೆನಪಿನಲ್ಲಿ ಉಳಿಯುವಂತಾದ್ದು. ಅವರ ಮದುವೆಗೆಂದು ಅವರ ಹೆಂಡತಿಯ ಮನೆ ಇರುವ ಭೀಮನಕೋಣೆಯ ಊರಿಗೂ ನಮ್ಮ ಸ್ನೇಹಿತರ ಸೈನ್ಯಸಹಿತ ಹೋಗಿದ್ದೆವು. ಅದು ಸಾಗರದ ಹತ್ತಿರದ ಒಂದು ಹಳ್ಳಿ.

ಆ ದಿನ ಅವರ ಮನೆಯ ಹೊರ ಅಂಗಳದಲ್ಲಿ ದೊಡ್ಡ ತಗಡಿನ ಚಪ್ಪರ ಹಾಕಿ ಮಧ್ಯಾಹ್ನ ಊಟಕ್ಕೆ ವ್ಯವಸ್ಥೆ ಮಾಡಿದ್ದರು. ನಾನೂ ಉಡುಪರು ನಮ್ಮ ರೂಮಿನ ಕೆಳಗಡೆಯೇ ಇರುವ ಗೋಪಾಲ ಮಾಸ್ಟ್ರು ರಾಘು ಆಚಾರ್ ಅಡಿಗದ್ವಯರೂ ಎಲ್ಲರೂ ಸಾಲಾಗಿ ಒಟ್ಟಿಗೇ ಕುಳಿತಿದ್ದೆವು. ಮಾತಾಡುತ್ತಾ ನಗೆಯಾಡುತ್ತಾ ಊಟವನ್ನು ಮಾಡುತ್ತಿದ್ದೆವು. ಊಟದ ಮುಗಿಯುತ್ತಾ ಬಂದು ಮಜ್ಜಿಗೆಗೆ ಅನ್ನ ಬಂದು, ಮಜ್ಜಿಗೆ ಬಡಿಸುತ್ತ ಬರುವಾಗ, ಅದೆಲ್ಲಿತ್ತೋ  ದೊಡ್ಡದೊಂದು ಗಾಳಿ,  ಬಿರುಗಾಳಿಯೇ, ರೊಯ್ಯನೇ ಬೀಸಿತು ನೋಡಿ. ಆ ಭಯಂಕರ ಗಾಳಿಯ ಹೊಡೆತಕ್ಕೆ ಆ ತಗಡಿನ ಚಪ್ಪರಕ್ಕೆ ಕಟ್ಟಿದ ಹಗ್ಗವೇ ಬಿಚ್ಚಿಹೋಯಿತು. ಪಟಪಟ.. ಎನ್ನುತ್ತಾ ಒಂದು ಬದಿಯಿಂದ ತಗಡುಗಳು ಒಮ್ಮೆಲೇ ಮೇಲಕ್ಕೆ ಹಾರಿದವು. ಅದರ ಶಬ್ದಕ್ಕೆ ಏನು ಆಗುತ್ತಿದೆ ಎಂದು ತಿಳಿಯದೆ, ನಾವೆಲ್ಲ ಗಾಬರಿಯಾಗಿ, ಎಂಜಲು ಕೈಯಲ್ಲಿ  ಎದ್ದು ಬಿದ್ದು ಓಡಿದ್ದೆ ಓಡಿದ್ದು. ಪುಣ್ಯಕ್ಕೆ ಚಪ್ಪರ ಗಟ್ಡಿಯಾಗಿ ಇದ್ದುದರಿಂದ ತಗಡುಗಳು ಕೆಳಗೆ ಬೀಳಲಿಲ್ಲ. ಯಾರಿಗೂ ಪೆಟ್ಟಾಗಲಿಲ್ಲ.

ಮುಂದೆ ಸುಬ್ರಾಯರು ಅಂಬಾಗಿಲಿನಲ್ಲಿ ಮನೆ ಮಾಡಿದರು. ಅವರ ಮನೆಯ ಹತ್ತಿರವೇ ನಾನೂ ಜಾಗ ತೆಗೆದುಕೊಂಡು ಮನೆ ಕಟ್ಟಿಸಿದೆ.
 ಮೊನ್ನೆ ಮೊನ್ನೆ ಅವರ ಮಗಳ ನಿಶ್ಚಿತಾರ್ಥಕ್ಕೆ ಮತ್ತೆ ಅವರ ಮನೆಗೆ ಹೋಗುವ ಒಂದು ಯೋಗ ಬಂತು. ಆಗ ಹಿಂದಿನದ್ದೆಲ್ಲ ಒಮ್ಮೆ ನೆನಪಾಯಿತು.

ಮಂಗಳವಾರ, ಫೆಬ್ರವರಿ 20, 2018

ದಿನೇಶ ಉಪ್ಪೂರ:

*ನನ್ನೊಳಗೆ -75*

ಕೋಟದ ಬಸ್ ಸ್ಟಾಂಡಿನ ಸ್ವಲ್ಪ ಮುಂದೆ ಹೈ ವೇಯಲ್ಲಿಯೇ ಉಡುಪಿಯ ಕಡೆಗೆ ಹೋದರೆ ಅಲ್ಲಿಯೇ ಎಡಬದಿಯಲ್ಲಿ ಇರುವ ದೊಡ್ಡ ದೇವಸ್ಥಾನವೇ ಕೋಟದ ಹಿರೇ ಮಾಲಿಂಗೇಶ್ವರ ದೇವಸ್ಥಾನ. ಅದರ ಉತ್ತರದ ಬದಿಯಲ್ಲಿ ರಸ್ತೆಯ ಪಕ್ಕದಲ್ಲೇ ಒಂದು ದೊಡ್ಡ ಕೆರೆ ಇದೆ. ಅದರ ಪಕ್ಕದ ಕಟ್ಟಡದಲ್ಲಿ ಕೆಇಬಿ ಆಫೀಸು ಇತ್ತಂತೆ . ಹತ್ತಿರವೇ ಡಾ. ಶಿವರಾಮ ಕಾರಂತರ ಮೂಲ ಮನೆಯೂ ಇತ್ತು.

ಆ ಹಿರೆಮಾಲಿಂಗ ದೇವಸ್ಥಾನದ ಪೌಳಿಯ ಉಪ್ಪರಿಗೆಯ ಮೇಲೆ ಮಳೆಗಾಲದ ಸುಮಾರು ಅಗಸ್ಟ್ ತಿಂಗಳಿನಿಂದ ಅಕ್ಟೋಬರ್ ತಿಂಗಳವರೆಗೆ ಯಕ್ಷಗಾನದ ಭಾಗವತಿಕೆ ತರಬೇತಿಯ ಕ್ಲಾಸ್ ನಡೆಯುತ್ತಿದ್ದುದು. ನನ್ನ ಅಪ್ಪಯ್ಯ ಅಲ್ಲಿ ಭಾಗವತಿಕೆಯ ಕ್ಲಾಸ್ ಮಾಡುತ್ತಿದ್ದರು. ನಾನೂ ಕೋಟದ ಅಕ್ಕನ ಮನೆಗೆ ಹೋದಾಗ, ಆಗಾಗ ಅಪ್ಪಯ್ಯನ ಜೊತೆಗೆ ಹೋಗಿ ಅಲ್ಲಿ ಕುಳಿತುಕೊಳ್ಳುತ್ತಿದ್ದೆ. ಅಪ್ಪಯ್ಯ ಹುಡುಗರಿಗೆ ಭಾಗವತಿಕೆಯನ್ನು ಹೇಳಿಕೊಡುವುದನ್ನು ಕೇಳುತ್ತಿದ್ದೆ. ಪದೇ ಪದೇ ಅಪ್ಪಯ್ಯ ಒಂದು ಪದ್ಯದ ಸಾಲನ್ನು ರಾಗವಾಗಿ ಹೇಳುವುದು, ಮಕ್ಕಳು ಅದನ್ನು ಒಟ್ಟಾಗಿ ಪುನರಾವರ್ತನೆ ಮಾಡಿ ಹೇಳುವುದು. ನಂತರ ಒಬ್ಬೊಬ್ಬರೇ ಅದೇ ಸಾಲನ್ನು ಹೇಳುವುದು. ತಪ್ಪಿದಲ್ಲಿ ಅಪ್ಪಯ್ಯ ಅದನ್ನು ತಡೆದು ಪುನಃ ಹೇಳುವುದು. ತಾಳಾಭ್ಯಾಸ, ಸಪಸ ಕಲಿಕೆ ಶೃತಿ ಲಯ ರಾಗಜ್ಞಾನ. ಅದನ್ನು ಕೇಳುತ್ತಾ ಕುಳಿತರೆ ಸಮಯ ಹೋದದ್ದೇ ಗೊತ್ತಾಗುತ್ತಿರಲಿಲ್ಲ. ಇರಲಿ.

ಸುಮಾರು 1982 ರ ಮಾತು ಇರಬಹುದು. ಮಳೆಗಾಲದ ಒಂದು ದಿನ, ಮಧ್ಯಾಹ್ನದ ಸಮಯ ಇರಬಹುದು. ಹನಿ ಹನಿ ಮಳೆ ಬರುತ್ತಿತ್ತು. ಕೆಲವು ಮಕ್ಕಳು ಆ ದೇವಸ್ಥಾನದ ಕೆರೆಯಲ್ಲಿ ಇಳಿದು ಸ್ನಾನ ಮಾಡುತ್ತಿದ್ದರು. ಕೆಲವರು ಈಜುತ್ತಿದ್ದರು. ಅವರವರಷ್ಟಕ್ಕೆ ಏನೋ ಮಾತನಾಡುತ್ತಿದ್ದರು. ಆಗ ಏನಾಯಿತೋ, ಕೆರೆಯ ಮಧ್ಯಕ್ಕೆ ಈಜುತ್ತಾ ಹೋದ ಒಬ್ಬ ಇದ್ದಕ್ಕಿದ್ದಂತೆ ಕೂಗಿಕೊಂಡ" ಕಾಪಾಡಿ ಕಾಪಾಡಿ" ಅಂತ. ಅವನ ಪಕ್ಕದಲ್ಲಿ ಇದ್ದ ಮತ್ತೊಬ್ಬ ಹುಡುಗ ಗಾಬರಿಯಿಂದ ನೀರನ್ನು ಬಡಿಯುತ್ತಾ ಮುಳುಗುತ್ತ ಇದ್ದ. ಅವನನ್ನು ರಕ್ಷಿಸಲು ಸಾಧ್ಯವಾಗದೇ ಕೂಗಿದ ಅವನು ಸೀದಾ ದಡಕ್ಕೆ ಈಜುತ್ತಾ ಬಂದು, "ಅವನು ನೀರು ಕುಡಿದ, ಮುಳುಗುತ್ತಿದ್ದಾನೆ. ಯಾರಾದರೂ ಕಾಪಾಡಿ" ಎಂದು ಜೋರಾಗಿ ಬೊಬ್ಬೆ ಹೊಡೆಯತೊಡಗಿದ. ಆಚೆ ಈಚೆ ದಾರಿಯಲ್ಲಿ ಹೋಗುವವರೂ ಕೂಗು ಕೇಳಿ ಓಡಿಬಂದು ಕೆರೆಯ ಸುತ್ತ ನಿಲ್ಲತೊಡಗಿದರು. ಎಲ್ಲರೂ ಗುಸುಗುಸು ಮಾತಾಡುತ್ತಿದ್ದರೆ ಹೊರತು ನೀರಿಗೆ ಇಳಿಯಲು ಯಾರಿಗೂ ಧೈರ್ಯ ಇಲ್ಲ.

ಅಷ್ಟರಲ್ಲಿ ಈ ಗಲಾಟೆ ಕೇಳಿಯೇ ಇರಬೇಕು. ಒಬ್ಬರು ವೇಗವಾಗಿ ಕೆರೆಯ ದಡಕ್ಕೆ ಬಂದವರೇ "ಏನು? ಏನು?" ಎಂದು ಕೇಳಿ, ವಿಷಯ ತಿಳಿದವರೇ ತಡ ಮಾಡಲಿಲ್ಲ. "ಎಲ್ಲರೂ ಸುಮ್ಮನೇ ನೋಡುತ್ತಾ ನಿಂತದ್ದಾ?" ಎಂದವರೆ ಉಟ್ಟ ಬಟ್ಟೆಯಲ್ಲಿಯೇ ನೀರಿಗೆ ಹಾರಿಯೇ ಬಿಟ್ಟರು. ಜನರು ಬಿಟ್ಟ ಕಣ್ಣುಗಳಿಂದ ನೋಡನೊಡುತ್ತಿರುವಂತೆಯೇ ಅವರು ಈಜುತ್ತಾ ಹೋಗಿ, ಅಲ್ಲಿ ನೀರಿನಲ್ಲಿ ಮುಳುಗುತ್ತಾ ಬಾಯಿಯಲ್ಲಿ ಉಸಿರು ಬಿಟ್ಟು ಗುಳುಗುಳು ಎಂದು ನೀರಿನಲ್ಲಿ ಗಾಳಿಯ ಗುಳ್ಳೆಗಳನ್ನು ಬಿಡುತ್ತಾ, ಕೆಸರಿನಲ್ಲಿ ಹುಗಿದು ಹೋಗುತ್ತಿದ್ದ ಆ ಹುಡುಗನ ಜುಟ್ಟನ್ನು ಒಮ್ಮೆಲೇ ಹಿಡಿದು ಎಳೆದುಕೊಂಡೇ ಬಂದು ದಡಕ್ಕೆ ಎತ್ತಿ ಹಾಕಿದರು. ಅವರ ಪ್ಯಾಂಟು ಶರ್ಟು ಒಳಗಿನ ದುಡ್ಡು, ಪೇಪರ್  ಎಲ್ಲಾ ಒದ್ದೆಯಾಗಿಬಿಟ್ಟಿತ್ತು. ಅಷ್ಟರಲ್ಲಿ ಅಲ್ಲಿಯೇ ಇದ್ದ ಮತ್ಯಾರೋ ಬಂದು ಕೈಯನ್ನು ಕೊಟ್ಟು ಮೇಲೆ ಎಳೆದುಕೊಂಡು ಆ ಹುಡುಗನನ್ನು ಸಮತಟ್ಟಾದ ಜಾಗದಲ್ಲಿ ಮಲಗಿಸಿ ಪ್ರಥಮ ಚಿಕಿತ್ಸೆ ಮಾಡಿದರು. ಹುಡುಗ ಉಳಿದುಕೊಂಡ.

ಅಂದು ತನ್ನ ಜೀವದ ಹಂಗು ತೊರೆದು ನೀರಿಗೆ ಹಾರಿ ಆ ಹುಡುಗನನ್ನು ಕಾಪಾಡಿದವರು, ಅದೆ ಕೆರೆಯ ಪಕ್ಕದಲ್ಲೇ ಇದ್ದ ಕೆಇಬಿ ಅಫೀಸಿನಲ್ಲಿ ಸೆಕ್ಷನ್ ಆಫೀಸರ್ ಆಗಿದ್ದ ಇಂಜಿನಿಯರ್ ಮಹದೇವಪ್ಪ.

 ನಾನು ಈ ಘಟನೆಯನ್ನು ಪ್ರತ್ಯಕ್ಷ ನೋಡಿದವನಲ್ಲ.
ನಾನು ಅಕ್ಕನ ಮನೆಗೆ ಹೋದಾಗ ಅಕ್ಕನ ಮಗ ವೆಂಕಟೇಶನ ಸ್ನೇಹಿತ ಮೋಹನದಾಸ ಎನ್ನುವವನ ಮನೆಗೆ ಸಂಜೆ ವೆಂಕಟೇಶನ ಜೊತೆಗೆ ಆಗಾಗ ಆಡಲು ಹೋಗುತ್ತಿದ್ದೆ. ಆಗ ಮೋಹನದಾಸ ನನಗೆ ಹೇಳಿದ ಕತೆ ಇದು.

ಕಾಲಚಕ್ರ ಉರುಳಿತು. ಅಲ್ಲಿ ಇದ್ದ ಕೆಇಬಿ ಆಫೀಸು ಗೋ ಆಸ್ಪತ್ರೆಯ ಹತ್ತಿರದ ತನ್ನ ಸ್ವಂತ ಕಟ್ಟಡಕ್ಕೆ ಸ್ಥಳಾಂತರವಾಯಿತು. ಯಕ್ಷಗಾನ ಕೇಂದ್ರವೂ ಅಲ್ಲಿಂದ ಸ್ಥಳಾಂತರವಾಗಿ ಗುಂಡ್ಮಿಯ ಹತ್ತಿರದ ಸ್ವಂತ ಕಟ್ಟಡಕ್ಕೆ ಹೋಯಿತು. ಹೈವೆ ಅಗಲವಾಗಿ ಡಬ್ಬಲ್ ರೋಡ್ ಆಯಿತು. ರಸ್ತೆಯ ಅಕ್ಕಪಕ್ಕದ ಅಂಗಡಿ ಮನೆಯೆಲ್ಲವೂ ರಸ್ತೆಯ ಅಗಲೀಕರಣದಿಂದಾಗಿ ಹಿಂದೆ ಸರಿಯಿತು. ಕೋಟದ ಸ್ವರೂಪವೇ ಬದಲಾಯಿತು.

ಮುಂದೆ ನನಗೂ ಕೆಇಬಿಯಲ್ಲಿ ಕೆಲಸ ಸಿಕ್ಕಿತು. ಕೆಇಬಿ ಯು, ಕೆಪಿಟಿಸಿಎಲ್ ಆಗಿ,  ಮೆಸ್ಕಾಂ ಅಂತಲೂ ಆಯಿತು. ನಾನು ಉಡುಪಿ, ಮುಲ್ಕಿ, ಮಂಗಳೂರು, ಇತ್ಯಾದಿ ಊರುಗಳಲ್ಲಿ ಕೆಲಸವನ್ನು ಮಾಡಿದೆ. ಮಾಡುವ ಕೆಲಸದ ಹುದ್ದೆಯಲ್ಲೂ ಪದೋನ್ನತಿಗಳಾಗಿ, ಲೆಕ್ಕಾಧಿಕಾರಿಯಾಗಿದ್ದು ಮಂಗಳೂರಿನಿಂದ,  ಕುಂದಾಪುರದಲ್ಲಿ ಆಗಲೇ ನೂತನವಾಗಿ ಆರಂಭಗೊಂಡ ವಿಭಾಗೀಯ ಕಛೇರಿಗೆ ವರ್ಗವಾಗಿ ಬಂದೆ.

ಅದು, ಮೇಲಿನ ಘಟನೆ ನಡೆದು ಸುಮಾರು ಮುವ್ವತ್ತು ವರ್ಷಗಳ ನಂತರ, ಅಂದರೆ 2011ರಲ್ಲಿ. ಆಗ ಕುಂದಾಪುರದ ಆಫೀಸಿನಲ್ಲಿ ಮೇಲೆ ಹೇಳಿದ ಆ ಹುಡುಗನ ಜೀವ ಉಳಿಸಿದ ಆ ಮಹಾದೇವಪ್ಪನವರೇ ವಿಭಾಗೀಯ ಕಛೇರಿಯ ಮುಖ್ಯಸ್ಥರಾಗಿದ್ದರು. ಅವರ ಜೊತೆ ನಾಲ್ಕುವರ್ಷ ಕೆಲಸಮಾಡುವ ಅವಕಾಶವೂ ನನಗೆ ಸಿಕ್ಕಿತು. ಅವರು ಒಬ್ಬ ದಕ್ಷ ಅಧಿಕಾರಿಗಳಾಗಿದ್ದರು. ಆಗ ತಾನೆ ನೂತನವಾಗಿ ಕಾರ್ಯಾರಂಭಗೊಂಡ ಕುಂದಾಪುರ ವಿಭಾಗವನ್ನು ಇಡೀ ಮೆಸ್ಕಾಂ ಕಂಪೆನಿಯಲ್ಲಿಯೇ ಉತ್ತಮ ವಿಭಾಗ ಎಂದು ಗುರುತಿಸುವಂತೆ ಮಾಡಿದ ಖ್ಯಾತಿ ಅವರದು. ನಿಷ್ಪಕ್ಷಪಾತಿಯಾಗಿ ಎಲ್ಲ ಸಹೋದ್ಯೋಗಿಗಳೊಡನೆ ಸ್ಪಂದಿಸುತ್ತಾ ಸಮಸ್ಯೆಗಳನ್ನು ಎದುರಿಸುತ್ತಾ, ತಕ್ಷಣ ಪರಿಹಾರಗಳನ್ನು ಕಂಡುಕೊಳ್ಳುತ್ತಾ ಎಲ್ಲರೊಡನೆ ಬೆರೆತು ವಿಭಾಗವನ್ನು ನಡೆಸಿದರು. ಆದರೂ ನನ್ನಿಂದ ಏನೂ ಆಗಿಲ್ಲ ನಿಮ್ಮೆಲ್ಲರ ಸಹಕಾರದಿಂದ ಇದು ಸಾಧ್ಯವಾಯಿತು ಎಂದು ವಿನಮ್ರರಾಗಿ ಹೇಳುತ್ತಿದ್ದರು.

ಅವರೂ ಉಡುಪಿಯಲ್ಲಿಯೇ ಮನೆ ಮಾಡಿದ್ದರಿಂದ ನಾನೂ, ಮತ್ತು ಅವರು ಹೆಚ್ಚಿನ ದಿನಗಳಲ್ಲಿ ಸಂಜೆ ಮನೆಗೆ ಬರುವಾಗ ಒಟ್ಟಿಗೇ ಬರುತ್ತಿದ್ದೆವು. ಆಗೊಮ್ಮೆ ಕೋಟವನ್ನು ಹಾದು ಬರುವಾಗ ನನಗೆ ಮೇಲೆ ಹೇಳಿದ ಘಟನೆಯು ನೆನಪಾಗಿ "ಹೌದಾ? ಹೀಗಾಗಿತ್ತಂತೆ" ಎಂದು ಅವರನ್ನು ಕೇಳಿದೆ. ಅವರು ತುಂಬಾ ಕುಷಿಯಾಗಿ, ಹಿಂದಿನ ಅವರ ಅನುಭವವನ್ನು ನೆನಪು ಮಾಡಿಕೊಂಡು ಕಣ್ಣಿಗೆ ಕಟ್ಟುವಂತೆ ವರ್ಣಿಸಿದ್ದರು‌.

ಭಾನುವಾರ, ಫೆಬ್ರವರಿ 18, 2018

ದಿನೇಶ ಉಪ್ಪೂರ:

*ನನ್ನೊಳಗೆ - 74*

ಅಮ್ಮ ಯಾವಾಗಲೂ ಹೇಳುವುದಿತ್ತು. "ನಮ್ ಕೈ ಕಾಲ್ ಗಟ್ಟಿ ಇಪ್ಪೂವರೆಗೆ ನಮ್ ನಮ್ ಕೆಲ್ಸ ನಾವೇ ಮಾಡ್ಕಣ್ಕ್. ಇನ್ನೊಬ್ರ ಮರ್ಜೀ ಕಾಂಬ್ಕಾಗ" ಅಂತ. ನಾನು ಕೆಲಸ ಮಾಡುವಾಗ ಉದಾಶೀನ ಮಾಡಿದಾಗಲೆಲ್ಲ "ಮಗೂ, ಪುಟ್ಟಾ," ಅಂತ ಹೇಳಿಯಾದರೂ ನಮ್ಮಿಂದಲೇ ನಮ್ಮ ಕೆಲಸಗಳನ್ನು ಅವಳು ಮಾಡಿಸುತ್ತಿದ್ದಳು. ಅಂದರೆ ಬೆಳಿಗ್ಗೆ ಎದ್ದ ಕೂಡಲೇ ಮಲಗಿದ ಚಾಪೆಯನ್ನು ಮಡಚಿ ಅದರ ಸ್ಥಾನದಲ್ಲಿ ಇಡುವುದರಿಂದ ಹಿಡಿದು ಊಟವಾದ ಮೇಲೆ ನಾವು ಉಂಡ ಬಟ್ಟಲನ್ನು ಆಗಲೇ ತೊಳೆದು ಇಡುವುದು, ಕಾಫಿ ಕುಡಿದ ನಂತರ ಖಾಲಿ ಲೋಟವನ್ನು ತೊಳೆದು ಇಡುವುದು. ನಮ್ಮ ನಮ್ಮ ಬಟ್ಟೆಗಳನ್ನು ಒಗೆದುಕೊಳ್ಳುವುದು, ಸ್ನಾನ ಮಾಡುವಾಗ ಬಚ್ಚಲ ತಾಮ್ರದ ಹಂಡೆಯಲ್ಲಿ ನೀರು ಖಾಲಿಯಾದರೆ, ಬಾವಿಯಿಂದ ಕೊಡಪಾನದಲ್ಲಿ ನೀರು ಎತ್ತಿ ತಂದು ಬಚ್ಚಲಹಂಡೆಗೆ ಹಾಕಿ ನಂತರ ಸ್ನಾನಮಾಡುವವರಿಗೆ ಅನುಕೂಲ ಮಾಡುವುದು.

ಹೀಗೆ ಮನೆ ಅಂತ ಆದಾಗ ಸಣ್ಣಪುಟ್ಟ ಇಂತಹ ಸಾವಿರ ಕೆಲಸ ಇದ್ದೇ ಇರುತ್ತದೆ. ಆದರೆ ಅದು ಕಣ್ಣಿಗೆ ಕಾಣುವುದಿಲ್ಲ.ಕಡಿಮೆ ಪಕ್ಷ, ನಮ್ಮ ನಮ್ಮ ದೈನಂದಿನ ಕೆಲಸಗಳನ್ನು ನಾವೇ ಮಾಡಿಕೊಳ್ಳಬೇಕು. ಇದರಿಂದ ನಮ್ಮ ನಮ್ಮ ಆತ್ಮ ಸ್ಥೈರ್ಯ ಹೆಚ್ಚುತ್ತದೆ. ಆ ಕೆಲಸದ ಮೇಲಿನ ಗೌರವ ಹೆಚ್ಚುತ್ತದೆ. ಇನ್ನೊಬ್ಬರಿಂದ ಮಾಡಿಸಿದಾಗ ಗೊತ್ತಾಗದ ಆ ಕೆಲಸದ ಶ್ರಮ, ಸಮಯ, ಗುರುತ್ವ, ಆ ಕೆಲಸವನ್ನು ನಾವೇ ಮಾಡಿದಾಗ ಹೆಚ್ಚು ತಿಳಿಯುತ್ತದೆ.

ಮೊನ್ನೆ ಒಬ್ಬರ ಮನೆಗೆ ಹೋಗಿದ್ದಾಗ ಅವರ ಒಬ್ಬಳೇ ಮಗಳ ಬಗ್ಗೆ ಅವರು, "ಮನೆಯಲ್ಲಿ ಒಂದು ಚೂರು ಕೆಲಸ ಮಾಡುವುದಿಲ್ಲ ಮಾರಾಯ್ರೆ. ಮೊದಲು ಸಣ್ಣವಳಲ್ಲವಾ ಪಾಪ ಓದಿಕೊಳ್ಳಲಿ ಅಂತ ಬಿಟ್ಟದ್ದು. ಈಗ ಏನಾದರೂ ಹೇಳಿದರೆ ಮುಖ ತಿರುಗಿಸಿ ಹೋಗುತ್ತಾಳೆ. ನಾಳೆ ಗಂಡನ ಮನೆಗೆ ಹೋದರೆ ಕಷ್ಟ ಅಲ್ಲವೇ? ಅಂದರು. ಅದಕ್ಕೆ ಆ ಮಗಳು ಆಚೆ ಕೋಣೆಯಿಂದಲೇ "ಆಗ ಕಲಿತುಕೊಂಡರಾಯಿತು" ಎಂದು ಕೂಗಿದಳು.

 ಮನೆಗೆ ಯಾರಾದರೂ ನೆಂಟರೋ, ಆಗಂತುಕರೋ ಬಂದರೆ ಎದ್ದು ಬಾಗಿಲು ತೆರೆದು ಬಂದವರನ್ನು ಬನ್ನಿ ಕುಳಿತು ಕೊಳ್ಳಿ ಎನ್ನಲೂ ಈಗಿನ ಮಕ್ಕಳಿಗೆ "ಮಾಡಿ" ಎಂದು ಹೇಳಬೇಕು.
ನಾನು ಚಿಕ್ಕವರಿರುವಾಗ ಅಮ್ಮನಿಗೆ, ಅತ್ತಿಗೆಗೆ, ಅಡುಗೆ ಮನೆಯಲ್ಲಿ ತೆಂಗಿನ ಕಾಯಿ ಹೆರೆದುಕೊಡುವುದು, ಬೆಳ್ಳುಳ್ಳಿ ಸಿಪ್ಪೆ ತೆಗೆದುಕೊಡುವುದು, ಮಸಾಲೆ ರುಬ್ಬಿಕೊಡುವುದು ಬೆಳಿಗ್ಗೆ ತಿಂಡಿಯ ದೋಸೆ ಹೊಯ್ಯುವುದು ಇತ್ಯಾದಿಗಳನ್ನು ಮಾಡಿ ಸಹಾಯ ಮಾಡುತ್ತಿದ್ದೆ. ಆಗೊಮ್ಮೆ ಈಗೊಮ್ಮೆ ಕಸಗುಡಿಸುವುದೂ ನೆಲ ಒರೆಸುವುದೂ ಪಾತ್ರೆ ತೊಳೆಯುವುದೂ ಮಾಡಿದ್ದಿದೆ. ಹಾಗಾಗಿ ಈಗಲೂ ನನಗೆ ಯಾವುದೇ ಕೆಲಸ ಗೊತ್ತಿಲ್ಲ ಅಂತ ಇಲ್ಲ. ಕಡಬು ಮಾಡಲು ಹಲಸಿನ ಎಲೆಯನ್ನು ಸೆಟ್ಟು ಕೊಟ್ಟೆ ಮಾಡುವುದು, ಬರಿಯಕ್ಕಿ ದೋಸೆ ಹೊಯ್ಯುವುದು. ಹಲಸಿನ ಹಪ್ಪಳ, ಅಕ್ಕಿ ಹಪ್ಪಳ ಮಾಡುವುದು ಎಲ್ಲವೂ ಗೊತ್ತಿದೆ. ಈಗಿನ ಮಕ್ಕಳಿಗೆ ಅದು ಬೇಡ. ಮನೆಯಲ್ಲಿ ಓದುವುದನ್ನು ಬಿಟ್ಟರೆ, ಟಿವಿ ಮೊಬೈಲ್ ಮಾತ್ರ ಸಾಕು ಅವರಿಗೆ. ಇಂತಹ ಕೆಲಸ ಹೇಳಿಕೊಡುವವರೂ ಇಲ್ಲ, ಹೇಳಿದರೆ ಮಾಡುವವರೂ ಇಲ್ಲ. ಅದರ ಸುಖ ಅವರಿಗೆ ಗೊತ್ತೇ ಇಲ್ಲ. ಇವೇನು ಸಣ್ಣ ಸಣ್ಣ ಸಂಗತಿಗಳಾದರೂ ಕಡೆಗಣಿಸುವಂತವುಗಳಲ್ಲ.

 ಮನೆಯಲ್ಲಿ ಸಣ್ಣಪುಟ್ಟ ಕೆಲಸಗಳನ್ನು ನಾವು ನಾವೇ ಮಾಡಿಕೊಳ್ಳಬೇಕು. ನಮಗೆ ಮಾಡಲು ಸಾಧ್ಯವಿರುವಾಗ ಸ್ಥಾನಮಾನ ಅಂತ ಎಣಿಸದೇ ಅದನ್ನು ನಾವೇ ಮಾಡಬೇಕು. ಇನ್ನೊಬ್ಬರಿಗೆ ಭಾರವಾಗಿ ಇರಬಾರದು. ನಾವು ಮಾಡಿದರೆ, ನಮ್ಮ ಮಕ್ಕಳು ಕಲಿತುಕೊಳ್ಳುತ್ತಾರೆ. ಮನೆಯಲ್ಲಿ ಇಂತದ್ದನ್ನು ಮಾಡುವ ಕೆಲಸಗಾರರು ಇರಬಹುದು. ಇವೆಲ್ಲ ನಮ್ಮ ಕೆಲಸವಲ್ಲ ಅಂತ ಅಂದುಕೊಳ್ಳುವುದೂ ಬಹಳ ಸುಲಭ. ಆದರೆ ಅನಿವಾರ್ಯ ಸಂದರ್ಭದಲ್ಲಿ ನಾವೇ ಮಾಡಿಕೊಳ್ಳಬೇಕಾಗಿ ಬಂದಾಗ ಅಥವ ಬೇರೆಯವರನ್ನು ಅವಲಂಬಿಸಿಕೊಳ್ಳಬೇಕಲ್ಲ ಎಂಬ ಸ್ಥಿತಿಬಂದಾಗ ಮಾತ್ರ ಕಷ್ಟವಾಗುತ್ತದೆ. ಇಂದು ಯಾವುದೋ ಮುಲಾಜಿಗೋ, ಸಂಬಳಕ್ಕೋ, ನಮ್ಮ ಕೆಲಸ ಮಾಡುವವರು, ಮುಂದೊಮ್ಮೆ ನಮಗೆ ಅಂತಹ ಕೆಲಸ ಗೊತ್ತಿಲ್ಲದ್ದನ್ನೇ ಬಂಡವಾಳ ಮಾಡಿಕೊಂಡು ನಮ್ಮ ಮೇಲೆ ಸವಾರಿ ಮಾಡಬಹುದು.

ಆದ್ದರಿಂದ ಸುಮ್ಮನೇ ಕುಳಿತುಕೊಂಡಿರುವಾಗಲೆಲ್ಲ  "ಅಲ್ಲಿ ಇನ್ನು ಏನು ಮಾಡಿದರೆ ಸ್ವಲ್ಪ ಬೆಟರ್ ಆಗಬಹುದು" ಎಂದು ಯೋಚಿಸಿದರೆ ಏನಾದರೂ ಕೆಲಸ ಮಾಡಲು, ನಿಮ್ಮ ಅಭಿರುಚಿಯನ್ನು ತೋರಿಸಲು ಅವಕಾಶದೊರೆತೇ ದೊರೆಯುತ್ತದೆ.

ಹಿಂದೆ ಕಕ್ಕುಂಜೆ ಗ್ರಾಮದ ಪಟೇಲರೂ, ಅಗರ್ಭ ಶ್ರೀಮಂತರೂ ಆಗಿದ್ದ ಶಂಕರನಾರಾಯಣ ಅಡಿಗರು  ನನ್ನ ಅತ್ತೆ ಭವಾನಿಯಮ್ಮನನ್ನು ಮದುವೆಯಾಗಿ ಕಲ್ಲಟ್ಟೆಯಲ್ಲಿ ಮನೆ ಕಟ್ಟಿಸಿ, ಅಲ್ಲಿಯ ಜಮೀನು ನೋಡಿಕೊಂಡು ಅಲ್ಲಿಯೇ ವಾಸವಾಗಿದ್ದಾಗ  ನಡೆದ ಘಟನೆಯನ್ನು ನನ್ನ ಅತ್ತೆ ಹೇಳಿದ್ದರು.

 ಒಮ್ಮೆ  ಗದ್ದೆಯಲ್ಲಿದ್ದ ಭತ್ತದ ಕೊಯ್ಲು ಆಗಿ, ಅದನ್ನು ಭತ್ತದ  ಸಮೇತ (ಕೆಯ್ ) ಗದ್ದೆಯಿಂದ ಅಂಗಳಕ್ಕೆ  ತಂದು ರಾಶಿ ಹಾಕಿದ್ದರು. ನಂತರ ಆಳುಗಳು ಅಂಗಳದ ಮಧ್ಯದ ಮೇಟಿಕಂಬಕ್ಕೆ ತಾಗಿಸಿ ಇರಿಸಿದ್ದ ಹಡಿಮಂಚಕ್ಕೆ ಭತ್ತದ ಕಟ್ಟನ್ನು ಬಡಿದು ಭತ್ತವನ್ನು  ಬೇರೆ ಮಾಡಿದ್ದಾಯಿತು. ಸಂಜೆ ಅಂಗಳವನ್ನು ಗುಡಿಸಿ ಚೆಲ್ಲಿಹರಡಿಹೋದ ಭತ್ತವನ್ನು  ಗುಡಿಸಿ ಒಂದೆಡೆಯಲ್ಲಿ ರಾಶಿ ಹಾಕಿ ಕೆಲಸಗಾರರು ಮನೆಗೆ ಹೋದರು. ನಂತರ  ನಸು ಕತ್ತಲ ಹೊತ್ತಿನಲ್ಲಿ, ಅಡಿಗರು,  ಅಂಗಳದ ಒಂದು ಬದಿಯಲ್ಲಿ ಕುಕ್ಕರಗಾಲಿನಲ್ಲಿ ಕುಳಿತು ಅಲ್ಲಲ್ಲಿ ಬಿದ್ದ ಒಂದೊಂದು ಕಾಳು ಭತ್ತವನ್ನು ಹೆಕ್ಕಿ ಹೆಕ್ಕಿ ಒಂದು ಸಿಬ್ಬಲಿಗೆ ಹಾಕುತ್ತಿದ್ದರಂತೆ.

ಯಾರೋ ಪಕ್ಕದ ದಾರಿಯಲ್ಲಿ ಹಾದುಹೋಗುವಾಗ ಅದನ್ನು ನೋಡಿದರು. ಇಷ್ಟು ಹೊತ್ತಿನಲ್ಲಿ ಅಂಗಳದ ಮಧ್ಯದಲ್ಲಿ ಕುಳಿತು ಈ ಅಯ್ಯ ಎಂತ ಮಾಡ್ತಾರಪ್ಪ ಎಂದು ನೋಡಲು ಹತ್ತಿರ ಬಂದು ಅದನ್ನು ನೋಡಿದರೆ,.. ಅಡಿಗರು ಒಂದೊಂದೇ ಭತ್ತದ ಕಾಳನ್ನು ಹೆಕ್ಕುತ್ತಿದ್ದಾರೆ.  ಅವರು ಆಶ್ಚರ್ಯದಿಂದ "ಎಂತ ಅಯ್ಯ, ನೀವು  ಭತ್ತದ ಕಾಳು ಹೆಕ್ಕುದಾ? ಇಷ್ಟೆಲ್ಲ ಇಪ್ಪವರು" ಅಂದರಂತೆ.

ಆಗ ಅಡಿಗರು "ಯಾಕೆ ? ನಾನು ಹೆಕ್ಕಬಾರದಂತ ಉಂಟಾ? ಇದರಿಂದ ಅವಮಾನ ಏನೂ ಇಲ್ಲ. ಇಂತ ಒಂದೊಂದು ಬತ್ತವನ್ನು ಒಟ್ಟಾಗಿಯೇ  ಅಲ್ವನಾ ಅಷ್ಟು ದೊಡ್ಡ ತಿರಿಯಾಗುವುದು?, ಆಣೆ ಆಣೆ ಸೇರಿಯೇ ರುಪಾಯಿಯಲ್ದಾ? ಇದೇನ್ ನಂಗೆ ಅವಮಾನ ಅಲ್ಲ.   ಹೀಂಗೆ ಇರುವುದರಿಂದಲೇ ನಾನಿವತ್ತು ಇಷ್ಟರಮಟ್ಟಿಗೆ ಇದ್ದದ್ದು ಮಾರಾಯಾ" ಅಂದರಂತೆ. ಬಂದವರು, "ಅದೂ ಸಮವೆ ಎನ್ನಿ" ಎಂದು ಅವರಿಗೆ ನಮಸ್ಕರಿಸಿ  ಮುಂದೆ ಹೊರಟುಹೋದರಂತೆ.

ಭಾನುವಾರ, ಫೆಬ್ರವರಿ 11, 2018

ದಿನೇಶ ಉಪ್ಪೂರ:

*ನನ್ನೊಳಗೆ - 73*

ಹಿಂದೆ, ಈಗಿನ ಕಲಾವಿದರಂತೆ ಒಂದೇ ದಿನ ಎರಡು ಮೂರು ಕಡೆ ಕಾರ್ಯಕ್ರಮವನ್ನು ಒಪ್ಪಿಕೊಳ್ಳುತ್ತಿರಲಿಲ್ಲ. ಚೌಕಿಗೆ ಹೋದ ಮೇಲೆ ಪರಿಚಿತರೂ ಅಭಿಮಾನಿಗಳು ಬಂದು ಮಾತಾಡಿಸಿದರೂ ಒಂದೋ ಎರಡೋ ಮಾತಾಡಿ ಆಮೇಲೆ ಅವರು ಅಂದು ಮಾಡುವ ಪಾತ್ರದೊಳಗೆ ಪರಕಾಯ ಪ್ರವೇಶ ಮಾಡುತ್ತಿದ್ದರು. ಒಮ್ಮೆ ಉಡುಪಿಯ ಆಟದಲ್ಲಿ ಒಬ್ಬರು ಕಲಾವಿದರಲ್ಲಿ ಯಾರೋ ದೊಡ್ಡವರು ಬಂದರು, ಎಂದು ಕರೆಯಲು ಹೋದರೆ, ಅವರು "ಅವರು ಬಂದ್ರೆ ನಾನು ಏನು ಮಾಡುವುದು?" ಎಂದು ಕಟುವಾಗಿ ನುಡಿದು ಕಳಿಸಿದ್ದು ನನಗೆ ನೆನಪಿದೆ.

 ಯಾರು ಹೆಚ್ಚು ಹಣ ಕೊಡುತ್ತಾರೋ ಅವರ ಮೇಳಕ್ಕೆ ಹೋಗುವುದು ಅಂತ ಇರಲಿಲ್ಲ. ಒಮ್ಮೆಯಂತೂ ಧರ್ಮಸ್ಥಳ ಮೇಳದಲ್ಲಿದ್ದ ಒಬ್ಬ ಭಾಗವತರು, ಸಾಲಿಗ್ರಾಮ ಮೇಳಕ್ಕೆ ನಿಶ್ಚಯವಾಯಿತು. ಅದು ಹೆಗಡೆಯವರಿಗೆ ಗೊತ್ತಾಗಿ ವಾಪಾಸು ಕರೆಸಬೇಕೆಂದರೂ ಸಾಲಿಗ್ರಾಮ ಮೇಳದ ಯಜಮಾನರು ಒಪ್ಪದೇ ಇದ್ದುದರಿಂದ ಆಗಲಿಲ್ಲ. ಕೊನೆಗೆ, ಆ ಮನಸ್ತಾಪ ಎಲ್ಲಿಯವರೆಗೆ ಹೋಯಿತು ಎಂದರೆ, ಆ ವರ್ಷ ಎಲ್ಲಿ ಸಾಲಿಗ್ರಾಮ ಮೇಳದ ಟಿಕೇಟು ಇಟ್ಟು ಆಟ ಆಗುತ್ತದೋ, ಅದೇ ಊರಿನ ಹತ್ತಿರದಲ್ಲಿ ಧರ್ಮಸ್ಥಳ ಮೇಳದ ಬಯಲಾಟ ಆಡಿ ಸಾಲಿಗ್ರಾಮ ಮೇಳದವರಿಗೆ ಕಲೆಕ್ಷನ್ ಆಗದ ಹಾಗೆ ಮಾಡಿದರು. ಕೊನೆಗೆ ಆ ಭಾಗವತರು ಪುನಃ ಧರ್ಮಸ್ಥಳ ಮೇಳಕ್ಕೇ ಹೋಗಬೇಕಾಯಿತು.

 ಈಗ ಎಲ್ಲ ಕ್ಷೇತ್ರದಲ್ಕೂ ಈ ಕಾಂಟ್ರಾಕ್ಟ್ ಸಿಸ್ಟಮ್  ಬಂದು, ಮನುಷ್ಯ ಮನುಷ್ಯರೊಳಗಿನ ನಂಬಿಕೆ, ನಿಯತ್ತುಗಳೇ ಮಾಯವಾಗಿವೆ. ಅಡುಗೆ ಊಟದಿಂದ ಹಿಡಿದು ಮನೆ, ಮದುವೆ, ಶ್ರಾದ್ಧದವರೆಗೂ ಇಂತಿಷ್ಟು ಕೆಲಸಕ್ಕೆ, ಇಂತಿಷ್ಟು ಹಣ ಅಂತ ಆಗಿಬಿಟ್ಟಿದೆ. ಅಥವ ಇಂತಿಂತಹ ವ್ಯವಸ್ಥೆಗೆ ಇಂತಿಷ್ಟು ಅಂತ ಗುತ್ತಿಗೆ. ಕಾಂಟ್ರಾಕ್ಟ್ ಇಲ್ಲದೇ ಯಾವ ಕೆಲಸವನ್ನೂ ಮಾಡಿಸಲು ಸಾಧ್ಯವಾಗದ ಪರಿಸ್ಥಿತಿ ಬಂದಿದೆ. ಬದುಕಿನ ಪ್ರತೀ ಕ್ರಿಯೆಯಲ್ಲೂ ಭಾವುಕತೆ, ಮುಲಾಜು, ದಾಕ್ಷಿಣ್ಯ ಇರಬೇಕಾದ ಜಾಗದಲ್ಲಿ ನಿಷ್ಟುರತೆ ವ್ಯವಹಾರ ಡೋಂಗಿ ಆವರಿಸಿಕೊಂಡುಬಿಟ್ಟಿದೆ. ಇರಲಿ.

  ಮಳೆಗಾಲದಲ್ಲಿ  ಅಪ್ಪಯ್ಯ ಅನಿವಾರ್ಯ ಅಲ್ಲದಿದ್ದರೆ ಹಂಗಾರಕಟ್ಟೆ ಯಕ್ಷಗಾನ ಕೇಂದ್ರದಲ್ಲಿ ಗುರುಗಳಾಗಿದ್ದ ಕಾಲದಲ್ಲಿ ಆಟವನ್ನು ಒಪ್ಪಿಕೊಳ್ಳುತ್ತಿರಲಿಲ್ಲ. ಹಣ ಸಿಗುತ್ತದೆಯಾದರೂ ಕೇಂದ್ರದಲ್ಲಿ ತಾನು ಇಲ್ಲದಿದ್ದರೆ ಸಮ ಆಗುವುದಿಲ್ಲ ಎಂಬ ಭಾವ ಅವರಿಗೆ. ಖಾಯಂ ಹೋಗುವ ತಾಳಮದ್ದಲೆಗಳು  ಆಟಗಳು ಆಗಿದ್ದರೆ ಮಾತ್ರ, ಬಿಡಲಾಗದಿದ್ದುದಕ್ಕೆ, ಕೇಂದ್ರದಲ್ಲಿ ಸಮರ್ಥರಾದವರಿಗೆ ಹೇಳಿ, ಪರ್ಯಾಯ ವ್ಯವಸ್ಥೆಯನ್ನು ಮಾಡಿಯೇ ಹೋಗುತ್ತಿದ್ದರು. ಅದು ಅವರ ನಿಯತ್ತು.

ನಿಯತ್ತಿನ ಮಾತು ಬಂದಾಗ ಹಿಂದಿನ ಕಲಾವಿದರ ಕೆಲವು ಆದರ್ಶಗಳು ನೆನಪಿಗೆ ಬರುತ್ತದೆ. ಒಮ್ಮೆ ಶಂಕರನಾರಾಯಣ ಸಾಮಗರು ಒಂದು ತಾಳಮದ್ದಲೆಯಲ್ಲಿ ಕೊಟ್ಟ ಸಂಭಾವನೆ ಹೆಚ್ಚಾಯಿತು ಎಂದು ಎಂ ಒ ಮಾಡಿ ಹಿಂದೆ ಕಳಿಸಿದ್ದರಂತೆ. ಸಾಲಿಗ್ರಾಮ ಮೇಳದಲ್ಲಿದ್ದ ಅಪ್ಪಯ್ಯ ಭಾವಯ್ಯನ ಒತ್ತಾಯಕ್ಕೆ ಅಮೃತೇಶ್ವರಿ ಮೇಳಕ್ಕೆ ಬರಲು ನಿಶ್ಚಯಿಸಿದಾಗ, ಮದ್ದಲೆಗಾರ ತಿಮ್ಮಪ್ಪನನ್ನಾದರೂ ಸಾಲಿಗ್ರಾಮ ಮೇಳದಲ್ಲಿ ಉಳಿಸಿರಿ ಎಂದು ಸೋಮನಾಥ ಹೆಗಡೆಯವರು ಸಾಲಿಗ್ರಾಮ ಮೇಳದ ಯಜಮಾನರು ಹೇಳಿದಾಗ, ಅಪ್ಪಯ್ಯ "ಮದ್ಲೆಗಾರನನ್ನೇ ಕೇಳಿ" ಅಂದರಂತೆ. ತಿಮ್ಮಪ್ಪನನ್ನು ಕೇಳಿದಾಗ, ಅವನು ಅಂದದ್ದು. "ನನಗೆ ಊಟಕ್ಕೆ ಕಷ್ಟ ಇರಬಹುದು. ಆದರೆ ನಾನು ಆತ್ಮತೃಪ್ತಿಗೋಸ್ಕರ ದುಡಿಯುವವ. ದುಡ್ಡು ಕೊಟ್ಟವರೆಲ್ಲ ನನ್ನ ಯಜಮಾನರಲ್ಲ. ಭಾಗವತ್ರು (ಉಪ್ಪೂರರು) ಯಾವ ಮೇಳವೋ, ಅದೆ ನನ್ನ ಮೇಳ".

ಕೆಮ್ಮಣ್ಣು ಆನಂದ ತುಂಬಾ ಕುಡಿಯುತ್ತಿದ್ದ ಕಾಲದಲ್ಲಿ, ಎಲ್ಲೆಲ್ಲೋ ಮೈಮೇಲಿನ ಸ್ವಯ ತಪ್ಪಿ ಬೀಳುತ್ತಿದ್ದ ಕಾಲದಲ್ಲಿಯೂ ಅವನು, ಚಂಡೆಯ ಎರಡು ಕೋಲು ಅವನ ಅಂಗಿಯ ಒಳಗೆ ಪಂಚೆಗೆ ಸಿಕ್ಕಿಸಿಕೊಂಡೇ ಇರುತ್ತಿದ್ದನಂತೆ. ಅವನ ಕುಡಿತದಿಂದ ಕಸುಬು ಮಾಡುವುದರಲ್ಲಿ ಸೋತು, ಯಾವ ಮೇಳದಲ್ಲೂ ಉಳಿಯದಿದ್ದರೂ, ಅವನು ಚಂಡೆ ನುಡಿಸಿದ ಹಾಗೆ ನುಡಿಸುವವರು ಇನ್ನೂ ಹುಟ್ಟಲೇ ಇಲ್ಲ. ಇರಲಿ

ಒಮ್ಮೆ, ಮಂಗಳೂರಿನಲ್ಲಿ ಮಳೆಗಾಲದ ಆಟ. ಆಟ ಆಡಿಸುವ ಗುತ್ತಿಗೆದಾರರು ಅಪ್ಪಯ್ಯನ ಸ್ನೇಹಿತರೆ. ಪ್ರತೀ ವರ್ಷ ಭಾಗವತಿಕೆಗೆ ಅಪ್ಪಯ್ಯನೇ ಆಗಬೇಕು. ಅವರಿಗೇ ಹೇಳುತ್ತಿದ್ದರು. ಆದರೆ ಆ ವರ್ಷ ಆಟಕ್ಕೆ ಅಪ್ಪಯ್ಯನಿಗೆ ಹೇಳಿರಲಿಲ್ಲ. ಅಪ್ಪಯ್ಯನಿಗೆ 'ಆಟ ಇದೆ' ಎಂದು ಗೊತ್ತಾಯಿತು.  ಹಾಗಾದರೆ ಬೇರೆ ಯಾರೋ ಭಾಗವತರಿಗೆ ಹೇಳಿರಬೇಕು ಎಂದು ಸುಮ್ಮನಾದರು.

ಆದರೆ, ಆಟದ ದಿನ ಉದಯವಾಣಿ ಪೇಪರಿನಲ್ಲಿ ನೋಡಿದರೆ ಆಟದ ಪ್ರಕಟಣೆಯಲ್ಲಿ ಅಪ್ಪಯ್ಯನ ಹೆಸರು ಇತ್ತು. ಆ ಬಗ್ಗೆ ವಿಚಾರಿಸುವ ಎಂದರೆ ಆಗ ಈಗಿನಂತೆ ಪೋನ್ ವ್ಯವಸ್ಥೆಯೂ ಇರಲಿಲ್ಲ.
ಅಪ್ಪಯ್ಯ ಯೋಚಿಸಿದರು, "ಏನು ಮಾಡುವುದು?" ಬಹುಷ್ಯ ಇವರಿಗೆ ಹೇಳಲು ಮರೆತುಹೋಗಿರಬಹುದು. ಅಥವ ಪೇಪರಿನಲ್ಲಿ ಬಂದಿದೆ ಎಂದಾದರೆ ಬಹುಷ್ಯ 'ನನಗೆ ಹೇಳಿದ್ದೇನೆ' ಎಂದೇ ತಿಳಿದುಕೊಂಡಿರಬೇಕು. ಏನೇ ಇರಲಿ ಹೋಗಿಯೇ ತಿಳಿಯಬೇಕು. ಎಂದು  ಸಂಜೆ ಕೋಟದಿಂದ ಮಂಗಳೂರಿಗೆ ಬಸ್ಸು ಹತ್ತಿದರು.

ಅಲ್ಲಿ ಹೋಗಿ ನೋಡಿದರೆ ಬೇರೆ ಯಾವ ಭಾಗವತರಿಗೂ ಹೇಳಿರಲಿಲ್ಲ ಎಂದು ಗೊತ್ತಾಯಿತು. ಅಷ್ಟರಲ್ಲಿ ಆಟ ವಹಿಸಿಕೊಂಡ ಗುತ್ತಿಗೆದಾರರೇ ಎದುರಿಗೆ ಬಂದರು. ಅಪ್ಪಯ್ಯನನ್ನು ನೋಡಿದವರೇ ಓಡಿಬಂದು ಅಪ್ಪಯ್ಯನ ಕೈ ಹಿಡಿದು, "ನನ್ನ ಮರ್ಯಾದೆ ಉಳಿಸಿದಿರಿ ಭಾಗವತರೆ, ನನಗೆ ಇವತ್ತು ಗೊತ್ತಾಯಿತು. ನನ್ನ ತಮ್ಮನಿಗೆ ಹೇಳಿದ್ದೆ. ಕೋಟಕ್ಕೆ ಹೋಗಿ ಉಪ್ಪೂರರಿಗೆ ಹೇಳಿ ಒಪ್ಪಿಸಿ ಬಾ ಎಂದು. ಅವನು, ಅವನ ಕೆಲಸದ ಗಡಿಬಿಡಿಯಲ್ಲಿ ಮರೆತೇ ಬಿಟ್ಟಿದ್ದನಂತೆ. ಇವತ್ತು ನನ್ನ ಹತ್ತಿರ ಹೇಳುತ್ತಿದ್ದಾನೆ. ಒಂದು ಕಾರ್ಡು ಬರೆದು ಹಾಕಿದರೂ ಆಗುತ್ತಿತ್ತು. ಏನು ಮಾಡುವುದು? ಎಂದು ತಲೆಬಿಸಿ ಮಾಡಿಕೊಂಡಿದ್ದೆ. ಏನೇ ಆಗಲಿ ನೀವು ದೇವರು ಬಂದ ಹಾಗೆ ಬಂದಿರಿ. ಇಲ್ಲದಿದ್ದರೆ ಗಂಡಾಂತರವೇ ಆಗುತ್ತಿತ್ತು"  ಎಂದು  ಕಾಲು ಹಿಡಿಯಲು ಬಂದರಂತೆ. ಆದರೆ ಅದೇ ಆಟದಲ್ಲಿ ಒಬ್ಬರು ದೂರದ ಕಲಾವಿದರು ಅವರಿಗೆ ಪತ್ರಮುಖೇನ ಆಟಕ್ಕೆ ಆಮಂತ್ರಿಸಿದ್ದು, ಅವರು ಒಪ್ಪಿಗೆ ಸೂಚಿಸಿಯೂ, ಅಂದು ಉದಯವಾಣಿಯಲ್ಲಿ ಪ್ರಕಟವಾದ ಆಟದ ಪ್ರಕಟಣೆಯಲ್ಲಿ ಅವರ ಹೆಸರು ಇರಲಿಲ್ಲ ಎಂದು ಅವರು ಆಟಕ್ಕೆ ಬಂದಿರಲಿಲ್ಲ.

ನೈತಿಕತೆ ಇಲ್ಲದಿದ್ದರೆ ಕಲಾವಿದನಲ್ಲಿಯ ಕಲಾವಿದ ಸತ್ತು ಹೋಗುತ್ತಾನೆ. ಭಾವಯ್ಯ ಅಮೃತೇಶ್ವರಿ ಮೇಳದ ಯಜಮಾನರಾಗಿದ್ದಾಗ ಕೆಲವು ಕಲಾವಿದರು ಅವರ ಮನೆಗೆ ಬಂದರೆ ವಾರಗಟ್ಟಳೆ ಇರುತ್ತಿದ್ದರು.  ಅವರಿಗೆ ಮನೆಯಿಲ್ಲ ಅಥವ ಮನೆಯಲ್ಲಿ ಇಲ್ಲ ಅಂತ ಅಲ್ಲ, ಯಜಮಾನರಿಗೆ ತನ್ನಿಂದ ಏನಾದರೂ ಸಹಾಯವಾಗುವುದಾದರೆ ಆಗಲಿ ಅಂತ. ಭಾವಯ್ಯ ಏನಾದರು ಕೆಲಸ ಹೇಳಿದರೆ, ಯಾವುದಾದರೂ ಕಲಾವಿದರನ್ನು ಮಾತಾಡಿಸಿ ಬಾ ಎಂದೋ, ಇಂತಹ ಊರಿಗೆ ಹೋಗಿ ಒಂದು ಆಟ ನಿಶ್ಚಯ ಮಾಡಿ ಬಾ, ಎಂದು ಹೇಳಿದರೆ, ಅವರು ಅದು ಅವರದೇ ಕೆಲಸ ಎಂಬಷ್ಟು ನಿಷ್ಟೆಯಿಂದ ಅದನ್ನು ಮಾಡುತ್ತಿದ್ದರು. ಒಮ್ಮೆ ನಗರ ಜಗನ್ನಾಥ ಶೆಟ್ರು ಕಾಯಿಲೆಯಾದಾಗ ಅಕ್ಕನ ಮನೆಯಲ್ಲೇ ವಾರಗಟ್ಟಳೆ ಇದ್ದು ಹುಷಾರಾಗಿಯೇ ಮನೆಗೆ ಹೋಗಿದ್ದರಂತೆ. ಕೋಟ ವೈಕುಂಠನಂತೂ ಯಜಮಾನರೇ, ಯಜಮಾನರೇ, ಎನ್ನುತ್ತಾ ಅಲ್ಲಿಯೇ ಇರುತ್ತಿದ್ದ.

ಒಮ್ಮೆ ಕೋಟದ ಹತ್ತಿರ ಬಯಲಾಟದಲ್ಲಿ ಭಾವಯ್ಯ ವೇಷ ಮಾಡಿದ್ದರು. ಭೀಷ್ಮ ವಿಜಯದಲ್ಲಿ ಭೀಷ್ಮ. ವೈಕುಂಠನದು ಅಂಬೆ. ಬೆಳಿಗ್ಗೆ ಮನೆಗೆ ಬಂದವನೇ ಖುಷಿಯಲ್ಲಿ ಮೈಕುಂಠ " ಯಜಮಾನ್ರೆ ಹೇಂಗೆ?  ನಿಮಗೆ ಬೈದದ್ದು? ನಿನ್ನೆ ಆಟದಲ್ಲಿ ನಿಮ್ಮ ಮೇಲಿದ್ದ ಸಿಟ್ಟೆಲ್ಲ ತೀರಿಸಿಕೊಂಡೆ" ಅಂದನಂತೆ. ನಿಜ ಜೀವನದಲ್ಲಿ ಯಜಮಾನರಿಗೆ ಬೈಯಲು ಆಗುವುದಿಲ್ಲವಲ್ಲ.

ಬುಧವಾರ, ಫೆಬ್ರವರಿ 7, 2018

ದಿನೇಶ ಉಪ್ಪೂರ:

*ನನ್ನೊಳಗೆ -72*

ಕಷ್ಟ ಮನುಷ್ಯನಿಗಲ್ಲದೇ ಮರಕ್ಕೆ ಬರುತ್ತದೆಯೇ. ಕಷ್ಟ ಬಂದಾಗ ನಮ್ಮ ಬದುಕೇ ಮುಗಿಯಿತು ಎಂದು ಹತಾಶರಾಗಿ  ಕುಳಿತರೆ ಬದುಕು ಮುಗಿದೇ ಹೋಗುತ್ತದೆ. ಅದರ ಬದಲು ತೋಚಿದ ಮಾರ್ಗದಲ್ಲಿ ಮುನ್ನುಗ್ಗಿ ಹೋರಾಟಕ್ಕಿಳಿದರೆ ಒಂದಲ್ಲ ಒಂದು ಮಾರ್ಗ ಸಿಕ್ಕಿಯೇ ಸಿಗುತ್ತದೆ.

ಅದು 2003 ನೇ ಜನವರಿ ತಿಂಗಳು. ನಾನು ಮುಲ್ಕಿಯಿಂದ ಸಹಾಯಕ ಲೆಕ್ಕಾಧಿಕಾರಿಯಾಗಿ ಆಫೀಸರ್ ಎಂಬ ಹಣೆಪಟ್ಟಿಯೊಂದಿಗೆ ಪ್ರೊಮೋಶನ್ ಪಡೆದು, ಉಡುಪಿಗೆ ಬಂದು ವರದಿ ಮಾಡಿಕೊಂಡಿದ್ದೆ. ನನಗೆ ಬಹಳ ಕುಷಿಯಾಗಿತ್ತು. ನಾನು ಕೆಲಸಕ್ಕೆ ಹಾಜರಾದ ಸ್ಥಳಕ್ಕೇ ನಾನು ಮೇಲಧಿಕಾರಿಯಾಗಿ ಬಂದಿದ್ದೆ. ಅಲ್ಲಿಯ ಕಪಾಟು ತೆಗೆಯುವಾಗ ಒಂದು ರೀತಿಯ ಪುಳಕ. ನನ್ನ ಹಿಂದಿನ ಬಾಸ್ ಗಳ ಕೈಬರಹ ಇರುವ ಪೈಲ್ ಗಳು ರಿಜಿಸ್ಟರ್ ಗಳನ್ನು ಮುಟ್ಟಿ ಮುಟ್ಟಿ ನೋಡಿದೆ. ನನ್ನ ಮೇಲಧಿಕಾರಿಗಳು ನನ್ನಿಂದ ಕೆಲಸ ಮಾಡಿಸುತ್ತ, ನಾನು ಗೌರವದಿಂದ ಪಕ್ಕದಲ್ಲಿ ನಿಲ್ಲುತ್ತಿದ್ದ ಜಾಗದಲ್ಲಿ ನಾನೀಗ ವಿರಾಜಮಾನನಾಗಿದ್ದೇನೆ. ಮಾಹಾಮಹಾ ಬಾಸ್ ಗಳು ಅನ್ನಿಸಿಕೊಂಡ  ಮೆಲ್ವಿಲ್ ಪಿಂಟೋ, ಗೋಪಾಲಕೃಷ್ಣ, ಮನೋಹರ ಬೈಲೂರ್, ಮಾಧವ ರಾವ್ ವೆಂಕಟಗಿರಿ‌ ಮೊದಲಾದ ಘಟಾನುಘಟಿಗಳು ಕುಳಿತು, ಮೆರೆದ  ಸಿಂಹಾಸನ(ಕುರ್ಚಿ) ಅದು. ಈಗ ನಾನೇ ಅಲ್ಲಿಯ ಅಧಿಕಾರಿ. ಹಿಂದೆ ನಾನು ಗುಮಾಸ್ತನಾಗಿದ್ದಾಗ ನನ್ನ ಜೊತೆಗೆ ಕೆಲಸ ಮಾಡುತ್ತಿದ್ದ ನಾಗಪ್ಪ, ಪ್ರಸನ್ನ, ಶಾರದಾ ಯಶೋದಮ್ಮ ಅಂತ ಹತ್ತಾರು ಮಂದಿ ಇನ್ನೂ ಅಲ್ಲಿಯೇ ಇದ್ದು, ಅದೇ ಕೆಲಸ ಮಾಡುತ್ತಾ ಇದ್ದಾರೆ. ನನ್ನ ಜೊತೆಗೆ ಕೆಲಸ ಮಾಡುತ್ತಿದ್ದ ಅವರಿಗೆಲ್ಲ ಈಗ ನಾನೇ ಬಾಸ್ ಆಗಿದ್ದೆ. ಅದಕ್ಕಿಂತ ಸ್ವಾರಸ್ಯವಾದದ್ದೆಂದರೆ ಅಲ್ಲಿ ಹಿಂದೆ ನನ್ನ ಕೆಲಸದ ಮೇಲ್ವಿಚಾರಕರಾಗಿ ಅಕೌಂಟೆಂಟ್ ಆಗಿದ್ದ ಲಕ್ಷ್ಮ ನಾಯಕ್ ಎಂಬವರಿಗೂ ಈಗ ನಾನೇ ಬಾಸ್. ಮೊದಮೊದಲು ಸ್ವಲ್ಪ ಕಷ್ಟವಾಯಿತು. ಆಮೇಲೆ ಪರಿಸ್ಥಿತಿಗೆ ಹೊಂದಾಣಿಕೆ ಮಾಡಿಕೊಂಡು ಅವರು ನನ್ನನ್ನೇ "ಸರ್ ಸರ್" ಅನ್ನತೊಡಗಿದರು. ನಾನೇ, "ನೀವು ನನಗೆ ಸರ್ ಅನ್ನಬೇಡಿ ಮಾರಾಯ್ರೆ. ನನಗೆ ಮುಜುಗರವಾಗುತ್ತದೆ.  ಹೆಸರು ಹಿಡಿದು ಕರೆಯಿರಿ ಅಡ್ಡಿಲ್ಲ" ಎನ್ನುತ್ತಿದ್ದೆ.

ಅದೊಂದು ದೊಡ್ಡ ಸೆಕ್ಷನ್, ಆಗ ಸುಮಾರು ನಲವತ್ತು ಐವತ್ತು ಸಿಬ್ಬಂದಿಗಳು ಒಟ್ಟಿಗೇ ಅಲ್ಲಿ ಕೆಲಸ ಮಾಡುತ್ತಿದ್ದರು. ಅದು ಇಡೀ ಉಡುಪಿ ಜಿಲ್ಲಾ ವ್ಯಾಪ್ತಿಯ ಆ ವಿಭಾಗಕ್ಕೇ ಹೆಚ್ಚು ರೆವೆನ್ಯೂ ತರುತ್ತಿದ್ದ ಹಾಗೂ ಹೆಚ್ಚು ಸಮಸ್ಯೆಯೂ ಇದ್ದ ಮತ್ತು ಪ್ರಭಾವೀ ವ್ಯಕ್ತಿಗಳು ಎಲ್ಲದಕ್ಕೂ ತಲೆತೂರಿಸುತ್ತಿದ್ದ ಆಫೀಸು. ದೊಡ್ಡ ಆಫೀಸಿನ ಹತ್ತಿರವೇ ಇರುವುದರಿಂದ ಎಲ್ಲ ಪರಿಶೀಲನಾ ಅಧಿಕಾರಿಗಳಿಗೆ ಹತ್ತಿರವಿದ್ದ ಸುಲಭದಲ್ಲಿ  ಬಂದು ಪರಿಶೀಲನೆಯ ಹೆಸರಲ್ಲಿ ಕಡತಗಳನ್ಬು ಜಾಲಾಡಲಿಕ್ಕೆ ಸಿಗುತ್ತಿದ್ದ ಸ್ಥಳವಾಗಿತ್ತು. ಹೇಳಿಕೇಳಿ  ಉಡುಪಿ ಕೃಷ್ಣನ ಪುಣ್ಯಕ್ಷೇತ್ರವಾದ್ದರಿಂದ  ಕೃಷ್ಣನನ್ನು ನೋಡಲು ಟೂರ್ ಹಾಕಿಸಿಕೊಂಡು ಬರುವ ಆಫೀಸರ್ ಗಳಿಗೂ ಕೊರತೆಯಿರಲಿಲ್ಲ. ಅವರನ್ನೂ ಉಪಚರಿಸಬೇಕಿತ್ತು. ನನ್ನ ಮೇಲಧಿಕಾರಿಗಳಾಗಿದ್ದ ಜಯಸೂರ್ಯ ಎನ್ನುವವರೂ ಒಬ್ಬ ಒಳ್ಳೆಯ ದಕ್ಷ ಅಧಿಕಾರಿಗಳಾಗಿದ್ದರು.

ನಾನು ಅಲ್ಲಿ ರಿಪೋರ್ಟ್ ಮಾಡಿಕೊಂಡ ಮರುದಿನವೋ ಅಥವ ಅದರ ಎರಡನೆಯ ದಿನವೋ, ಒಂದು ದುರ್ಘಟನೆ ನಡೆದು ಹೋಯಿತು. ನಮ್ಮ ಆಫೀಸಿನವರೇ ಆದ ಒಬ್ಬರ ಮದುವೆಗೆಂದು, ಬ್ರಹ್ಮಾವರಕ್ಕೆ ನಮ್ಮದೇ ಆಫೀಸು ಜೀಪಿನಲ್ಲಿ ಆರೇಳು ಮಂದಿ ಹೋಗುತ್ತಿದ್ದಾಗ, ನಮ್ಮ ಜೀಪ್ ಡ್ರೈವರ್ ನ ನಿರ್ಲಕ್ಷ್ಯದಿಂದ, ಮುಂದಿನಿಂದ ಬರುತ್ತಿದ್ದ ಲಾರಿಗೆ ಗುದ್ದಿ ಆಕ್ಸಿಡೆಂಟ್ ಆಯಿತು. ಆ ಡ್ರೈವರ್ ಕುಡಿದಿದ್ದ. ಸದಾನಂದ ಶೆಟ್ಟಿ ಎಂತ ಅವನ. ಹೆಸರಿರಬೇಕು. ಅವನಿಗೆ ಹೆಚ್ಚು ಪೆಟ್ಟಾಗಲಿಲ್ಲ. ಆದರೆ ನಮ್ಮ ಆಫೀಸಿನ ಶಾರದಾ ಎನ್ನುವ ಒಬ್ಬ ಮಹಿಳಾ ಸಿಬ್ಬಂದಿಯ ಬಲಕೈ ಮುರಿದು ನೇತಾಡತೊಡಗಿತು. ಕೈಯಿಯ ಮಾಂಸ ಮೂಳೆ ಎಲ್ಲ ಹೊರಗೆ ಬಂದಿತ್ತು, ಕೂಡಲೇ ಮಣಿಪಾಲ ಕ್ಕೆ ಕರೆದುಕೊಂಡು ಹೋಗಿ, ಸೇರಿಸಿದರು. ಆ ಬಲಕೈಯ ಮೂಳೆಯ ಒಂದು ಭಾಗ ಆಕ್ಸಿಡೆಂಟ್ ಆದ ಜಾಗದಲ್ಲಿಯೇ ಬಿದ್ದು ಹೋಗಿದ್ದು, ಅದು ಸಿಕ್ಕದೇ ಇರುವುದರಿಂದ ಅವರ ಬಲಕೈ ಊನವೇ ಆಯಿತು. ಪೋಲಿಸ್ ಕೇಸ್ ಆಯಿತು. ಆ ಡ್ರೈವರ್ ಗೆ ಶಿಕ್ಷೆಯಾಗಿ ವರ್ಗಾವಣೆಯೂ ಆಯಿತು.
ನಾಲ್ಕಾರು ತಿಂಗಳ ನಂತರ, ಆಪೀಸಿನಲ್ಲಿ ಗುಮಾಸ್ತೆಯಾಗಿದ್ದು ಬರೆಯುವ ಕೆಲಸವೇ ತನ್ನ ಜೀವನಾಧಾರವಾಗಿದ್ದ ಬಲ ಕೈಯನ್ನು ಕಳೆದುಕೊಂಡ ಶಾರದಾ, ಆಪೀಸಿಗೇ ಬರಲು ಒಪ್ಪಲಿಲ್ಲ. ಬನ್ನಿ ಅಂದರೆ, ನನಗೆ ಬರೆಯಲಿಕ್ಕೇ ಆಗುವುದಿಲ್ಲ ಸರ್ ಬಂದು ಏನು ಮಾಡಲಿ ಎಂದು ಕಣ್ಣೀರು ಹಾಕುವುದೊಂದೇ ಮಾಡುತ್ತಿದ್ದರು. ನಾನು ಅವರಿಗೆ  ಪೋನ್ ಮಾಡಿ, “ಸುಮ್ಮನೇ ರಜೆ ಮುಂದುವರಿಸಬೇಡಿ. ಆಫೀಸಿಗೆ ಬನ್ನಿ. ಏನಾದರೂ ಮಾಡುವ” ಎಂದು ಧೈರ್ಯ ಹೇಳಿದೆ.

ಹಿಂದೆ ಹೀಗೆಯೇ ನಾನು ಅದೇ ಸೆಕ್ಷನ್ ನಲ್ಲಿ ಕೆಲಸ ಮಾಡುತ್ತಿದ್ದಾಗ, ಒಬ್ಬರು ಕಣ್ಣಿನ ಸಮಸ್ಯೆಯಿಂದ ಬಳಲುತ್ತಿದ್ದರು. ಹಿರಿಯ ಅಕೌಂಟೆಂಟ್ ಆಗಿದ್ದ ಅವರು, ಅದೂ ಇದು ಕೆಲಸ ಮಾಡುತ್ತಾ ಕೆಲಸದ ಮೇಲ್ವಿಚಾರಣೆ ಮಾಡುತ್ತಾ ಇದ್ದರು. ಆಗಿನ ನಮ್ಮ ಬಾಸ್ ಒಬ್ಬರು ಅವರಿಗೆ  "ನಿಮಗೆ ಆಗುವುದಿಲ್ಲ ನೀವು ರಜೆಯ ಮೇಲೆ ಹೋಗಿ, ಸ್ವಯಂನಿವೃತ್ತಿಯನ್ನು ತೆಗೆದುಕೊಳ್ಳಿ. ಆಫೀಸಿಗೆ ಬರಬೇಡಿ" ಎಂದು ಬೆದರಿಸಿ ಬೆದರಿಸಿ ಬಲವಂತವಾಗಿ ಮನೆಗೆ ಕಳಿಸಿದ್ದರು. ಅದು ನನ್ನ ಮನಸ್ಸಿನಲ್ಲಿ ಉಳಿದಿತ್ತು. ಅವರು ಇಪ್ಪತ್ತು ಇಪ್ಪತೈದು ವರ್ಷ ತನ್ನನ್ನು ತೊಡಗಿಸಿಕೊಂಡು ಜೀವವನ್ನು ತೇದದಕ್ಕೆ ಅಷ್ಟು ನಿಷ್ಟುರವಾಗಿ ನಡೆದುಕೊಳ್ಳುರವುದು ಸರಿಯೇ? ಎಂಬ ವಿಚಾರ ಮನಸ್ಸನ್ನು ಕಾಡುತ್ತಿತ್ತು.

ನನ್ನ ಒತ್ತಾಯಕ್ಕೆ ಶಾರದಾ ರವರು ಕೆಲಸಕ್ಕೆ ಬರಲು ಶುರುಮಾಡಿದರು. ನಾನು ಕೆಲವುದಿನ ಅವರನ್ನು ಸುಮ್ಮನೇ ಕುಳ್ಳಿರಿಸಿದ್ದರೂ, ಸಣ್ಣಪುಟ್ಟ ಕೆಲಸ ಎಡಕೈಯಲ್ಲಿ ಮಾಡಬಹುದಾದ ಕೆಲಸವನ್ನು ಅವರು ಮಾಡಿದರು. "ಮನೆಯಲ್ಲಿ ಇದ್ದರೆ ನಿಮಗೆ ಹುಚ್ಚೇ ಹಿಡಿದೀತು. ಈ ಆಫೀಸ್ ನ ವಾತಾವರಣದಲ್ಲಿದ್ದರೆ ಬೇಡ ಎಂದರೂ ಸುಧಾರಿಸುತ್ತೀರಿ" ಎನ್ನುತ್ತಿದ್ದೆ. "ಆದರೆ ನೀವು ಸುಮ್ಮನೇ ಕುಳಿತುಕೊಳ್ಳಬಾರದು ನಿಮಗೆ ಪುರಸೊತ್ತಿರುವಾಗಲೆಲ್ಲ ಎಡಕೈಯಲ್ಲಿ ಅಆಇಈ ಎಬಿಸಿಡಿ ಇತ್ಯಾದಿ ಬರೆಯುತ್ತಾ ಇರಿ. ಅದನ್ನು ತಿದ್ದಿರಿ ಎನ್ನುತ್ತಿದ್ದೆ‌. ಅವರು ಮನೆಯಲ್ಲೂ ಅದನ್ನು ಮಾಡಿದರು.

ಆಗ, ಸಿಂಡಿಕೇಟ್ ಬ್ಯಾಂಕಿನಲ್ಲಿ ಆಫೀಸರ್ ಆಗಿದ್ದ,ನನ್ನ ಅಣ್ಣ ರಮೇಶ ಎಂಬವನು, ಅವನ ಸುಮಾರು ನಲವತ್ತೈದು ವರ್ಷ ವಯಸ್ಸಿಗೇ ಅವನಿಗೆ ತನ್ನ ಬಲ ಹೆಬ್ಬೆರಳು ಮಡಚಲು ಆಗದ ಪರಿಸ್ಥಿತಿ ಬಂದು ಬರೆಯಲೇ ಆಗುತ್ತಿರಲಿಲ್ಲ.. ಆಗ ಬರೆಯುವುದೇ ಉದ್ಯೋಗವಾಗಿದ್ದ ಅವನಿಗೆ ಕೈಯಲ್ಲಿ ಬರೆಯಲು ಆಗದೇ ಇದ್ದು ಸಮಸ್ಯೆಯಾದರೂ ಅವನು ದೃತಿಗೆಡಲಿಲ್ಲ. ಎರಡೇ ಎರಡು ತಿಂಗಳಲ್ಲಿ ಎಡಕೈಯಲ್ಲಿ ಬರೆಯುವುದನ್ನು ಅಭ್ಯಾಸ ಮಾಡಿ, ಬಲಕೈಯಲ್ಲಿ ಬರೆಯುತ್ತಿದ್ದಂತೆಯೇ ಬರೆಯಲು ಛಲತೊಟ್ಟು ಅಭ್ಯಾಸ ಮಾಡಿ ಯಶಸ್ಸನ್ನು ಪಡೆದ. ಆ ನನ್ನ ರಮೇಶಣ್ಣಯ್ಯನ ಉದಾಹರಣೆಯನ್ನು ಅವರಿಗೆ ಕೊಟ್ಟು ನೀವು ಮನಸ್ಸು ಮಾಡಿದರೆ ಮುಂಚಿನಂತೆ ಬರೆಯಲು ಆಗುತ್ತದೆ ಎಂದು ಹುರಿದುಂಬಿಸಿದೆ. ಅವರೂ ಉದಾಸೀನ ಮಾಡಲಿಲ್ಲ. ಹಠಹಿಡಿದು ಸ್ವಲ್ಪ ಸಮಯದಲ್ಲೇ ಎಡಕೈಯಲ್ಲಿಯೇ ಬರೆಯಲು ಕಲಿತರು.

ಆದರೆ ಆಗಲೇ ನಮ್ಮಲ್ಲಿ ಎಲ್ಲ ಕಂದಾಯ ಲೆಕ್ಕಗಳೂ ಕಂಪ್ಯೂಟರೈಶೇನ್ ಆಗುತ್ತಿದ್ದು, ಮತ್ತೊಂದು ಸಮಸ್ಯೆ ಶುರುವಾಯಿತು. ಆಗ ಎಲ್ಲರಿಗೂ ಹೊಸದಾಗಿದ್ದ ಕಂಪ್ಯೂಟರನ್ನೂ ಅವರು ಎಡಕೈಯಲ್ಲೇ ಕಲಿಯಬೇಕಾಯಿತು. ಟೈಪಿಂಗ್ ಬರುತ್ತಿರಲಿಲ್ಲವಾದ್ದರಿಂದ  ನಾವೆಲ್ಲ ಮಾಡುವಂತೆ ಯಾವುದಾದರೂ ಕೈಯ ಒಂದೇ ಬೆರಳಲ್ಲೇ ಕುಟ್ಟಿಕುಟ್ಟಿ ಟೈಪ್ ಮಾಡಿದರೆ ಸಾಕಾಗಿತ್ತು.  ಅದನ್ನು ಒಂದೇ ಬೆರಳಲ್ಲಿ ಕೀ ಬೋರ್ಡನ್ನು ಒತ್ತಿ ಒತ್ತಿ ಅವರೂ ಕಲಿತುಕೊಂಡರು.ಎಡಗೈಯಲ್ಲೇ ಮೌಸ್ ಹಿಡಿದರು.

 ಹೀಗೆ ಅವರು ಜೀವನವೇ ಮುಗಿದು ಹೋಯಿತು ಎಂದು ನಿರಾಶೆಯಿಂದ ದುಃಖಿಸಿ ಹಲುಬುತ್ತಿದ್ದ ಕಾಲಕ್ಕೆ, ನಾನು ತುಂಬಿದ ಧೈರ್ಯದಿಂದ ನನ್ನ ಸಹಕಾರದಿಂದ ಮತ್ತೆ ಅವರು ದುಡಿಯುವಂತಾಗಿದ್ದು ಅವರು ನನ್ನನ್ನು ಈಗಲೂ ನೆನಪಿಸಿಕೊಳ್ಳುತ್ತಾರೋ ಇಲ್ಲವೋ ನನಗಂತೂ ನಾನು ಸರಿಯಾದುದನ್ನೇ ಮಾಡಿದ್ದೇನೆ ಅಂತ ಭಾವಿಸುತ್ತೇನೆ.

ಮಂಗಳವಾರ, ಫೆಬ್ರವರಿ 6, 2018

ದಿನೇಶ ಉಪ್ಪೂರ:

*ನನ್ನೊಳಗೆ - 70*

ನಾನು ಚಿಕ್ಕವನಿರುವಾಗ, ನೋಡಿದ ಜೋಡಾಟ ಅಂದರೆ ಈಗಿನ ಕಾಲದಂತೆ ಇರುವ ಎರಡು ರಂಗಸ್ಥಳ ಆಸುಪಾಸು ಜೋಡಿಸಿ ಇಟ್ಟು ಮಾಡುವ ಕೂಡಾಟ ಆಲ್ಲ. ಕಲಾವಿದರು ಅವರವರೊಳಗೆ ಮಾತಾಡಿಕೊಂಡು ಒಟ್ಟಾರೆ ಕುಣಿದು ಬರೀಗೌಜು ಮಾಡಿ ಗಮ್ಮತ್ತು ಮಾಡುವ ಆಟ ಆಗಿರಲಿಲ್ಲ.  ಅಲ್ಲಿ ಆಗ ಒಂದು ತರಹದ ಯುದ್ಧದ ವಾತಾವರಣವೇ ಇರುತ್ತಿತ್ತು. ಸ್ಪರ್ಧೆ ಇತ್ತು ಏನೇ ಆದರೂ ಈ ಸಲ ಬಿಡುವುದಿಲ್ಲ ನಾವು ಕಡಿಮೆಯವರಲ್ಲ ಎಂಬ ಛಲ ಪ್ರತೀ ಕಲಾವಿದರಲ್ಲೂ ಇರುತ್ತಿತ್ತು.

ಆಗ ಆಗುತ್ತಿದ್ದ ಅಮೃತೇಶ್ವರಿ ಮತ್ತು ಸಾಲಿಗ್ರಾಮ ಮೇಳದ ಜೋಡಾಟ ಅದು ಮೇಳದ, ಕಲಾವಿದರ ಪೈಪೋಟಿ ಎಂಬುದಕ್ಕಿಂತ ಆಯಾಯ ಮೇಳಗಳ ಊರಿನವರ, ಮೇಳದ ಅಭಿಮಾನಿಗಳ ಸ್ವಾಭಿಮಾನದ ಪ್ರಶ್ನೆಯೂ ಆಗಿತ್ತು. ಈ ಸಲ ನಮ್ಮ ಮೇಳವೇ ಗೆಲ್ಲುವುದು,  ಆ ಮೇಳದಲ್ಲಿ ಇರುವವರನ್ನು ಈ ಸಲ ಒಂದು ಕೈ ನೋಡಿಯೇ ಬಿಡುವುದು ಎಂದು ಜೋಡಾಟದ ದಿನ ಬರುವವರೆಗೂ ಗುಸುಗುಸು ಮಾಡಿ ಸುದ್ದಿ ಹಬ್ಬಿಸುತ್ತಿದ್ದರು. ಪ್ರಸಂಗವನ್ನು ಎರಡು ಮೇಳದವರು ಸೇರಿಯೇ ನಿರ್ಣಯಿಸುತ್ತಿದ್ದರು. ಒಂದು ಮೇಳದವರು ಕುಣಿತ ಹೊಡ್ತ ಯುದ್ಧ ಇರುವ ಪ್ರಸಂಗ ಕೇಳಿದರೆ ಇನ್ನೊಂದು ಮೇಳಕ್ಕೆ ಬೇರೆ ಬೇರೆ ತರಹದ ವೇಷ ವಿಜೃಂಭಣೆ ಶೃಂಗಾರ ಚಮತ್ಕಾರ ಇರುವ ಪ್ರಸಂಗ ಕೇಳುತ್ತಿದ್ದರು. ತಾಮ್ರದ್ವಜ ಕಾಳಗ ನಮ್ಮದು ಎಂದರೆ ಇನ್ನೊಬ್ಬರು ವೀರಮಣಿ ಕಾಳಗ ಎನ್ನುತ್ತಿದ್ದರು. ಒಬ್ಬರು ಕೀಚಕ ವಧೆ ಅಂದರೆ ಇನ್ನೊಬ್ಬರು  ವಾಲಿ ವಧೆ ಅನ್ನುತ್ತಿದ್ದರು. ಆದರೆ ಎಲ್ಲರಲ್ಲೂ ಹುರುಪು ಉತ್ಸಾಹ. "ಬನ್ನಿ, ಈ ಸಲ ಒಂದು ಆಟ ನೋಡಲೇ ಬೇಕು ನೀವು " ಅಂತ ಕಲಾವಿದರೂ, ಏನೋ ರಹಸ್ಯ ಇರುವ ಹಾಗೆ ಗುರುತಿನವರನ್ನು ಆಟಕ್ಕೆ ಆಮಂತ್ರಿಸುತ್ತಿದ್ದರು. ತಮ್ಮ ಮೇಳವನ್ನು ಹೊಗಳಿ ಅಲ್ಲಿಗಿಂತ ನಾವೇನು ಕಮ್ಮಿ? ಅಲ್ಲಿ ಅಂತವರಿದ್ದರೆ ನಮ್ಮಲ್ಲಿ ಇಂತವರು ಇದ್ದಾರೆ ಎಂದು ಕೊಚ್ಚಿಕೊಳ್ಳುತ್ತಿದ್ದರು. ಆ ಕಲಾವಿದರು ಜೋಡಾಟಕ್ಕೆ ಹೇಳಿಸಿದವರಲ್ಲ ಎಂದು ಮತ್ತೊಂದು ಮೇಳದವರನ್ನು ದೂರುತ್ತಿದ್ದರು.

 ಸುಮಾರು ಒಂದು ತಿಂಗಳಿಂದಲೂ ತಯಾರಿ ನಡೆಸಿ, ಮೇಳದಲ್ಲಿರುವ ಎಲ್ಲ ವೇಷಗಳ ಸಾಮಾನುಗಳಿಗೆ ಬೇಗಡೆ ಹಚ್ಚುವುದು, ಆಭರಣಕ್ಕೆ ಹಚ್ಚಿದ ಮಸುಕಾದ ಕನ್ನಡಿಗಳನ್ನು ತೆಗೆದು ಹೊಸದು ಹಾಕುವುದು. ಹರಿದ ಬಟ್ಟೆಗಳನ್ನು ಹೊಲಿಸಿ, ರಿಪೇರಿ ಮಾಡುವುದು ಕೇದಗೆಮುಂದಲೆಯ ಅಟ್ಟೆಗಳನ್ನು ಸಿದ್ಧ ಮಾಡುವುದು, ಹುಲ್ಲಿನ ಜಡೆ ಮಾಡುವುದು ಹೀಗೆ. ಹೊಸಹೊಸ ಜರಿ ಸೀರೆ, ದಗಲೆ, ಕಸೆ ಸೀರೆಗಳನ್ನು ಯಜಮಾನರ ಹಿಂದೆ ಅಲೆದು ಅಲೆದು ತಲೆ ತುರಿಸಿಕೊಂಡು ಒಲಿಸಿ ಕಾಡಿಬೇಡಿ ತರಿಸಿಕೊಳ್ಳುತ್ತಿದ್ದರು. ಹೀಗೆ ಒಟ್ಟು ಹಗಲಲ್ಲೂ ನಿದ್ದೆ ಮಾಡದೇ ಈ ವರ್ಷ ಹೇಗೆ ಎದುರು ಮೇಳದವರನ್ನು ಸೋಲಿಸುವುದು ಎಂಬುದೇ ಚರ್ಚಿಯ ವಿಷಯವಾಗಿ ಕಾಲಕಳೆಯುತ್ತಿದ್ದರು.. ಹಾಗೂ ಯಾರಾದರೂ ಗುರುತಿನವರು ಸಿಕ್ಕರೆ ಎದುರು ಮೇಳದವರು ಹೇಗೆ ತಯಾರಿ ನಡೆಸುತ್ತಿದ್ದಾರೆ ಎಂಬುದನ್ನು ತಿಳಿದುಕೊಳ್ಳಲು ಪ್ರಯತ್ನ ಮಾಡುತ್ತಿದ್ದರು. ಜೋಡಾಟಕ್ಕಿಂತ ಒಂದು ವಾರದ ಹಿಂದಿನ ಎಲ್ಲ ಆಟಗಳಲ್ಲಿ ಕುಣಿದು ಕುಣಿದು ಜೋಡಾಟಕ್ಕೆ ಮೈಯನ್ನು ಹದಗೊಳಿಸುತ್ತಿದ್ದರು. ಭಾಗವತರಿಗೆ ಅಥವ ಮೇಳದ ಮೇನೇಜರ್ ಆದವರಿಗೆ  ಕಲಾವಿದರಿಗೆ ಆಯಾಯ ದಿನದ ಪ್ರಸಂಗದಲ್ಲಿ ವೇಷ ಬರೆಯುವ ಪುಸ್ತಕದಲ್ಲಿ ಜೋಡಾಟದ ದಿನ ಏನೇನು ಎಚ್ಚಿರಿಕೆ ತೆಗೆದುಕೊಳ್ಳಬೇಕೆಂಬುದರ ಬಗ್ಗೆ ಹಲವಾರು ಸೂಚನೆಗಳನ್ನೂ ಬರೆಯುವುದೇ ಕೆಲಸ.

ಮೇಳದ ಅಭಿಮಾನಿಗಳಿಗೂ ಅದೊಂದು ಪ್ರತಿಷ್ಠೆಯ ಪ್ರಶ್ನೆ. ತಮ್ಮ ಮೇಳ ಹಿಂದೆ ಬೀಳಬಾರದು ಅಂತ. ಅದಕ್ಕಾಗಿ ಏನೇನು ತಯಾರಿ ಆಗಿದೆ ಎಂದು ಆಗಾಗ ಬಂದು ವಿಚಾರಿಸಿಕೊಂಡುಹೋಗುವುದೂ ಇತ್ತು.

ಜೋಡಾಟದ ದಿನ ಬರುತ್ತಿದ್ದಂತೆಯೇ ಎಲ್ಲ ಕಲಾವಿದರಿಗೂ ಒಂದು ರೀತಿಯ ಉದ್ವೇಗ. ತಳಮಳ. ಮೇಳದ ಕಲಾವಿದರ ಮಕ್ಕಳಾದ ನಮ್ಮಂತವರಿಗೂ ಮಾತಾಡಲು ಅದೇ ಸುದ್ದಿ. ಈ ಸಲ ಏನಾಗುತ್ತದೋ ಅಂತ ಆತಂಕ. ಕಲಾವಿದರೆಲ್ಲರಿಗೂ ಆರೋಗ್ಯ ಸರಿ ಇರಲಪ್ಪ, ಯಾರೂ ಎರಡು ಮನಸ್ಸು ಮಾಡಿ ಜೋಡಾಟದ ದಿನ ಕೈ ಕೊಡದೇ ಇರಲಿ. ಭಾಗವತರ ಸ್ವರ ಬಿದ್ದು ಹೋಗದಿರಲಿ. ಸಾರಾಯಿ ಕುಡಿದು ಆಟಕ್ಕೆ ಕಳಪು ಹಾಕುವ ಕಲಾವಿದರು ಅಂದು ಸರಿಯಾಗಿ ಇರಲಿ  ಎಂದು ದೇವರಲ್ಲಿ ಬೇಡುತ್ತಿದ್ದೆವು. ಮೇಳದ ಪ್ರತೀ ಕಲಾವಿದರಿಂದ ಹಿಡಿದು ಟೆಂಟಿನ ಕಂಬ ಹುಗಿಯುವ ಕಾರ್ಮಿಕನವರೆಗೂ ಎಲ್ಲರೂ ಎದುರಿನ ಮೇಳದಲ್ಲಿ ಜೋಡಾಟದ ಹುರುಪಿನ ಕಲಾವಿದರಿದ್ದರೆ ಅವರೊಬ್ಬರಿಗೆ ಆದಿನ ಏನಾದರೂ ತೊಡಕು ಆಗಲಿ ಎಂದೂ ಹಾರೈಸಿ ಜಯ ನಮಗೆ ಸಿಗಬೇಕು ಅನ್ನಿಸುವಷ್ಟು ಒತ್ತಡ ಕ್ಕೊಳಗಾಗುತ್ತಿದ್ದರು.
ಆಟದ ದಿನ ಬೆಳಗ್ಗೆ ಯಾರು ಬೇಗ ಬಂದು ಆಟದ ಗರ ಪ್ರವೇಶಿಸುತ್ತಾರೆ ಎಂಬುದರಲ್ಲೂ ಪೈಪೋಟಿ. ಆಗ ಜೋಡಾಟ ಆಡಿಸುವವರು ಪೂರ್ವ ಪಶ್ಚಿಮವಾಗಿ ಎದುರು ಬದುರು ರಂಗಸ್ಥಳ ಕಟ್ಟಿಸುತ್ತಿದ್ದರು. ಈಗಿನಂತೆ ಒಂದರ ಪಕ್ಕದಲ್ಲಿ ಇನ್ನೊಂದಲ್ಲ. ಪ್ರೇಕ್ಷಕರು ಮಧ್ಯದಲ್ಲಿ ಆಚೆ ಈಚೆ ಎಲ್ಲ ಕಡೆಯಲ್ಲಿಯೂ ಕುಳಿತು ಆಟ ನೋಡಬಹುದಿತ್ತು.  ಹತ್ತಿರವಾದರೆ ನೆಲದಲ್ಲಿ ದೂರದಲ್ಲಿಯಾದರೆ ಕುರ್ಚಿ. ಮೊದಲು ಬಂದವರು ಪಶ್ಚಿಮದ ಬದಿಯ ರಂಗಸ್ಥಳವನ್ನು ಆರಿಸಿಕೊಳ್ಳುತ್ತಿದ್ದರು. ನಂತರ ಬಂದವರಿಗೆ ಉಳಿದ ಬದಿ. ಮೊದಲು ಬಂದ ಮೇಳದವರು ರಂಗಸ್ಥಳದಲ್ಲಿ ರಥ ಕಟ್ಟಿ ಸ್ಥಾಪನೆಯಾದರೆ ಸೈ. ಪಶ್ಚಿಮ ದಿಕ್ಕೇ ಏಕೆಂದರೆ ಅವರು ಪೂರ್ಭಿಮುಖವಾಗಿ ಕುಣಿಯುತ್ತಾರಲ್ಲ ಅದು ಸೂರ್ಯ ಉದಯಿಸುವ ದಿಕ್ಕು. ಪಶ್ಚಿಮಕ್ಕೆ ಮುಖ ಮಾಡಿ ಕುಣಿಯುವವರು ಸೂರ್ಯ ಮುಳುಗುವುದನ್ನು ನೋಡುವವರು ಸೋಲುವವರು ಎಂಬ ನಂಬಿಕೆ.

ಆಗಿನ ಜೋಡಾಟ ಎಂದರೆ ಈಗಿನ ಕಾಲದ ಹಾಗೆ ಹೊಂದಾಣಿಕೆಯ ಆಟವಲ್ಲ. ಏನೇ ಆಗಲಿ ನಾವು ಮೈ ಹುಡಿಮಾಡಿಕೊಳ್ಳುವುದಿಲ್ಲ ಎಂಬ ಕಲಾವಿದರಿರಲಿಲ್ಲ. ಎಲ್ಲರೂ ಶಕ್ತಿ ಮೀರಿ  ಕುಣಿಯುವವರೆ. ಮೇಳದ ಮರ್ಯಾದೆಯ ಪ್ರಶ್ನೆ. ಒಂದು ಪ್ರಸಂಗ ಏನೋ ಆಗಿ ಸೋಲುತ್ತದೆ ಅನ್ನಿಸಿದ ಕೂಡಲೇ ಆಟವನ್ನು ಓಡಿಸಿ ಮುಂದಿನ ಪ್ರಸಂಗಕ್ಕೆ ಹಾರುವುದೆ. ಎದುರಿನವರಿಗೆ ಸ್ಪರ್ಧೆಗೆ ಅವಕಾಶವೇ ಇಲ್ಲದ ಹಾಗೆ ಮಾಡುವುದೂ ಇತ್ತು.  ಏನಾದರೂ ಹೊಸದನ್ನು ತುರುಕಿಸಿ ಎದುರು ಮೇಳದ ಕಲಾವಿದರನ್ನು ತಬ್ಬಿಬ್ಬು ಮಾಡಿದರೂ ಮಾಡಿದರೆ. ಹಾಗಾಗಿ ಕೊನೆಕೊನೆಗೆ  ಮೇಳದ ಯಜಮಾನರುಗಳು ಒಂದು ಮೀಟಿಂಗ್ ಮಾಡಿ ಕೆಲವು ನಿಯಮಗಳನ್ನು ಹಾಕಿಕೊಂಡು ಅದರಂತೆ ಮಾಡಬೇಕು ಎಂದು ತೀರ್ಮಾನಿಸುವಂತಾಯಿತು. ಒಂದು ಪ್ರಸಂಗದಲ್ಲಿ ಇಂತಿಷ್ಟೇ ಪದ್ಯ ಇರಬೇಕು ಇಂತದ್ದೇ ದೃಶ್ಯ ಇರಬೇಕು  ಒಡ್ಡೋಲಗದಲ್ಲಿ ಇಂತಿಷ್ಟೇ ವೇಷ ಇರಬೇಕು ಅದರಲ್ಲೂ ಯಾವುದು ಕಿರೀಟ ಯಾವುದು ಮುಂಡಾಸು ಯಾವುದಕ್ಕೆ ಕೇದಗೆಮುಂದಲೆ ಅಂತಲೂ ನಿಯಮವಾಯಿತು. ಅಷ್ಟಾದರೂ ಒಮ್ಮೆ ಮುಂಡಾಸು ಅಂತ ಮಾತ್ರ ಇತ್ತು ಅಂತ ಒಂದು ಮೇಳದಲ್ಲಿ   ಕೆಂಪು ಮುಂಡಾಸಿನ ಬದಲು ಬಲರಾಮನಿಗೆ ಹಸಿರು ಮುಂಡಾಸು ಕಟ್ಟಿ ಎದುರು ಮೇಳದವರನ್ನು ತಬ್ಬಿಬ್ಬು ಮಾಡಿದ್ದೂ ಆಗಿತ್ತು. ಸುಧನ್ವ ಕಾಳಗದಲ್ಲಿ ಅರ್ಜುನ ಸೋತ ಕೂಡಲೆ ಕೃಷ್ಣ ಪ್ರವೇಶದ ಬದಲು ಪದ್ಯದಲ್ಲಿ ಮೊದಲರ್ಧ ಭಾಗದಲ್ಲಿರುವಂತೆ ಧರ್ಮರಾಜನನ್ನು ಸಂತೈಸಿ ಬಂದ ಎನ್ನುವ ಭಾಗಕ್ಕೆ ಧರ್ಮರಾಜನ ಯಾಗದ ದೃಶ್ಯ ಮಾಡಿ ಅವನಿಗೆ ಕೃಷ್ಣ ಧೈರ್ಯ ಹೇಳಿ ನಂತರ ಅರ್ಜುನನಲ್ಲಿ ಬರುವುದು ಒಂದು ಮೇಳದಲ್ಲಿ ಮಾಡಿದಾಗ ಆಚೆ ಮೇಳದಲ್ಲಿ ಧರ್ಮರಾಯ ಪಾತ್ರವೇ ಇಲ್ಲದೇ ಗಡಿಬಿಡಿಯಾಗಿ ಅಭಿಮಾನಿಗಳು ಗಲಾಟೆ ಮಾಡಿ ಆಟ ನಿಲ್ಲಿಸಿದ ಪ್ರಕರಣವೂ ಒಮ್ಮೆ ಆಗಿತ್ತು. ಒಮ್ಮೆ ಮೀನಾಕ್ಷಿ ಕಲ್ಯಾಣದ ಈಶ್ವರ ಬ್ಯಾಟರಿ ಯಿಂದ ಮಾಡಿದ ಬಣ್ಣಬಣ್ಣದ ಲೈಟಿನ ಚಂದ್ರನನ್ನು ಧರಿಸಿ ರಂಗಸ್ಥಳಕ್ಕೆ ಬಂದಿದ್ದ. ಹಿಂದಿನ ಸಲ ಆಚೆ ಮೇಳದಲ್ಲಿ ಗುಟ್ಟಿನಲ್ಲಿ ತಂದು ಮೂರು ಚಂಡೆ ಭಾರಿಸಿದ ಎಂದು ಮುಂದಿನ ಸಲ  ಈ ಮೇಳದಲ್ಲಿ ಯಾರನ್ನೆಕಾಡಿ ಬೇಡಿ ಏಳು ಚಂಡೆಗಳನ್ನು ತಂದು ಸಾಲಾಗಿ ಇಟ್ಟು ನಿಂತುಕೊಂಡು ಹೊಡೆದು ವಿಕ್ರಮ ಸಾಧಿಸಿದ್ದಾಯಿತು.

 ಆಗ ಮೇಳದ ಅಭಿಮಾನಿಗಳೂ ಅಷ್ಟೆ ಮೇಳ ಸೋಲುತ್ತದೆ ಅಂತ ಅನಿಸಿದ ಕೂಡಲೆ ಏನಾದರೂ ಸಣ್ಣ ಪುಕಾರು ತೆಗೆದು ಎದುರು ಬಂದು ನಿಲ್ಲಿಸಿ ನಿಲ್ಲಿಸಿ ಅಂತ ಬೊಬ್ಬೆ ಹೊಡೆದಾಯಿತು. ಆಟ ನಿಂತ ಮೇಲೆ ಒಂದಷ್ಟು ಜನ ಸೇರಿದರು. ಜೋಡಾಟಕ್ಕೆ ನಿಯೋಜಿಸಿದ ನಿರ್ಣಾಯಕರಿಗೆ ಆಟದ ಕಲಾವಿದರ ಸ್ಪರ್ಧೆಯನ್ನು ನಿಯಂತ್ರಿಸುವುದರ ಜೊತೆಗೆ ಇಂತವರನ್ನು ಸುಧಾರಿಸುವುದೂ ಒಂದು ಕೆಲಸ ಆಗುತ್ತಿತ್ರು. ಕಲಾವಿದರಲ್ಲಿ ಕುಮಚಟ್ಟು ಮಂಡಿ ದಿಗಣ ಹೊಡೆದು ಹೊಡೆದು ತಾ ಮೇಲು ತಾ ಮೇಲು ಅಂತ ಕುಣಿಯುವಾಗ ಈ ನಿರ್ಣಾಯಕರು ಗಂಟೆ ಹೊಡೆದು ನಿಲ್ಲಿಸಲು ಸೂಚನೆ ಕೊಡುತ್ತಾರೆ. ಕೆಲವು ಸಲ ಗಂಟೆ ಹೊಡೆದರೂ ಕಲಾವಿದರೂ ಕೇಳದಿದ್ದಾಗ, ಎರಡೂ ರಂಗಸ್ಥಳ ದ ಮಧ್ಯಬಂದು ಅವರು ಕೂಗ ಬೇಕಾಗುತ್ತಿತ್ತು. ಆಗ ಈ ಮೇಳದ ಅಭಿಮಾನಿಗಳೂ ನುಗ್ಗುವುದಿತ್ತು.

  ನಾವು ಜೋಡಾಟಕ್ಕೆ ಹೋಗುವುದು ಅಂತಹ ಸ್ವಾರಸ್ಯಗಳು ನಡೆಯುತ್ತದೆ ಅಂತಲೇ ಆಗಿತ್ರು. ತಮ್ಮ ತಮ್ಮ ಮೇಳದ ಅಭಿಮಾನಿಗಳಿಗೆಂದೇ ಮುಂದಿನ ಸಾಲಿನಲ್ಲಿ ಒಂದಷ್ಟು ಸೀಟುಗಳನ್ನು ಕಾಯ್ದಿರಿಸುತ್ತಿದ್ದರು. ಜೋಡಾಟದಲ್ಲಿ ಬರೀ ಭಾಗವತರ ಬೊಬ್ಬೆ ಚಂಡೆ ಮದ್ದಲೆಗಳ ಗದ್ದಲ ಅಂತ ಅನ್ನಿಸಿದರೂ ಪ್ರಸಂಗ ಗೊತ್ತಿರುವುದೇ ಆಗುತ್ತಿದ್ದರಿಂದ ಕಲಾವಿದರು ಯಾವ ಪದ್ಯಕ್ಕೆ ಹೇಗೆ ಕೆಲಸ ಮಾಡಿದರು ಎಷ್ಟು ಕುಣಿದರು ಏನು ಹೊಸತನ್ನು ಮಾಡಿ ವಿಸ್ಮಯ ಸೃಷ್ಟಿಮಾಡಿದರು ಎಂದೇ ನೋಡಲು ಜನ ಹೋಗುವುದು. ಪದ್ಯಕ್ಕೆ ಅರ್ಥ ನೆಪಕ್ಕೆ ಮಾತ್ರ ಆಚೆಯ ಮೇಳದ ಕಲಾವಿದರು ಮುಂದಿನ ಪದ್ಯಕ್ಕೆ ಹೋದರೆ ಇವರು ಆಚೆ ನೋಡಿಕೊಂಡು ಅರ್ಥವನ್ನೇ ಹಾರಿಸಿಬಿಟ್ಟು ಮುಂದಿನ ಪದ್ಯ ಎತ್ತು ಗಡಿ ಮಾಡುತ್ತಿದ್ದರು.  ಪದ್ಯದ ಮಧ್ಯ ಆಚೆಯವರು ಮಂಡಿ ಹಾಕಿ ಸ್ಪರ್ಧೆಗೆ ಕರೆದರೆ ಇವರು ಅಲ್ಲಿಯೇ ಮಂಡಿಹಾಕಲು ಕುಳಿತಾಯಿತು. ಒಂದು ಮೇಳದವರು ಆಟ ಓಡಿಸಿದರೆ ಇನ್ನೊಂದು ಮೇಳದವರು ಅವರನ್ನು ಹಿಂದಿಕ್ಕಿ ಮುಂದೆ ಹೋಗಲು ಪ್ರಯತ್ನಿಸುತ್ತಿದ್ದರು. ರಾತ್ರಿ ಕತ್ತಲೆಯಲ್ಲಿ ಒಂದು ಮೇಳದ ಕಲಾವಿದರು ಮುಸುಕು ಹಾಕಿಕೊಂಡು ಮತ್ತೊಂದು ಮೇಳದ ಚೌಕಿಗೆ ಮೆಲ್ಲನೆ ನುಸುಳಿ ಬಂದು ಇವರು ಏನು ಮಾಡುತ್ತಿದ್ದಾರೆ ಮುಂಡಾಸಿಗೆ ಎಷ್ಟು ಅಟ್ಟೆ ಇರಿಸುತ್ತಾರೆ? ರತಿಕಲ್ಯಾಣದಂತ ಪ್ರಸಂಗ ಆದರೆ  ದಿಬ್ಬಣ ಅಂತ ಎಷ್ಟು ಜನ ಸೇರಿಸುತ್ತಾರೆ?. ಎಂದು ತಿಳಿದುಕೊಂಡು ಹೋಗಿ, ಅದನ್ನೇ ಅಲ್ಲಿಯೂ ಮಾಡುತ್ತಿದ್ದರು ಅಥವ ಅವರಿಗಿಂತ ನಾವು ಅಡ್ಡಿಲ್ಲ ಎಂದು ತೀರ್ಮಾನಿಕೊಳ್ಳುತ್ತಿದ್ದರು.

ರತಿ ಕಲ್ಯಾಣ ಮೀನಾಕ್ಷಿ ಕಲ್ಯಾಣದಂತಹ ಪ್ರಸಂಗಗಳಲ್ಲಿ ದಿಬ್ಬಣಕ್ಕೆ ಅಡುಗೆಯಮನೆಯ ಪಾತ್ರೆಗಳು ಚರಿಗೆ ಹಂಡೆಗಳು ಸೌಟು ಸಟ್ಟಗಗಳು ಚೌಕಿಯ ವಸ್ತ್ರದ ಗಂಟುಗಳೆಲ್ಲ ರಂಗಸ್ಥಳಕ್ಕೆ ಬರುತ್ರಿದ್ದವು. ರತಿಕಲ್ಯಾಣದ ದೂತ ದ್ರೌಪದಿಯ ಚಂಡಿಯ ರೂಪವನ್ನು ಕಂಡು ಆ ದಿನ ಒಂದರ ಮೇಲೆ ಒಂದು ಚೌಕಿಯಲ್ಲಿ ಇದ್ದ ಎಲ್ಲ ದಗಲೆ ಅಂಗಿಗಳನ್ನು ಹಾಕಿಕೊಂಡು ಬಂದು ರಂಗಸ್ಥಳದಲ್ಲೇ ಚಂಡಿಯ ಮೇಲೆ ಒಂದೊಂದರಂತೆ ಎಸೆದು ಕೊನೆಗೆ ಬರೀ ಮೈಯಲ್ಲಿ ಓಡುತ್ತಿದ್ದ. ಏನಾಗುತ್ತದೆ ಎಂದು ಕ್ಷಣಕ್ಷಣಕ್ಕೂ ಕುತೂಹಲ. ಅಂತೂ ಬೆಳಿಗ್ಗೆಯವರೆಗೆ ಆಟ ಆಗಿ ಆಟ ಮುಗಿಯಿತು ಅಂತ ಆಗಿ ಬೆಳಿಗ್ಗೆ ಯಜಮಾನರಿಂದ ವೀಳ್ಯ ಪಡೆಯುವುದರಲ್ಲೂ ತಾಮುಂದು ತಾಮುಂದು ಅಂತ ಪೈಪೋಟಿ.

ಅದೊಂದು ಸಂಭ್ರಮ ಕೊನೆಗೆ ನಿರ್ಣಾಯಕರು ಯಾರನ್ನೂ ಬಿಡಲಾರದೇ ಒಂದುಪ್ರಸಂಗ ಅವರು ಗೆದ್ದರು ಇನ್ನೊಂದು ಇವರದೇ ಮೇಲಾಯಿತು ಎಂದು ತೀರ್ಮಾನಿಸುತ್ತಿದ್ದರು. ಆ ಜೋಡಾಟದ ಸುದ್ಧಿಯು ಆಟ ಮುಗಿದು ತಿಂಗಳುಗಟ್ಟಲೆಯವರೆಗೂ ಕಲಾಭಿಮಾನಿಗಳ ಮಾತಿಗೆ ವಿಷಯವಾಗಿರುತ್ತಿತ್ತು.

ನಿನ್ನೆ ತೊಟ್ಟಂ ಎಂಬಲ್ಲಿ ಆದ ನೀಲಾವರ ಮತ್ತು ಸಿಗಂದೂರು ಮೇಳದ ಜೋಡಾಟಕ್ಕೆ ನಾನು ಎಸ್ ವಿ ಭಟ್ಟರ ಜೊತೆಗೆ ಹೋಗಿದ್ದೆ. ದಾರಿಯಲ್ಲಿ ಚರ್ಚಿಸಿದ ಸಂಗತಿಗಳನ್ನು ನನ್ನ ಅನುಭವದ ಜೊತೆಗೆ ಇಲ್ಲಿ ಅಳವಡಿಸಿಕೊಂಡಿದ್ದೇನೆ. ಇದನ್ನು ಓದಿದ ಭಟ್ಟರು ಬೆಳಿಗ್ಗಿನ ವೀಳ್ಯ ಹಿಡಿಯುವ ಸಂಗತಿಯನ್ನು ಇನ್ನೂ ವಿವರವಾಗಿ ತಿಳಿಸಿದರು. ಬೆಳಿಗ್ಗೆ ಆಟ ಮುಗಿದ ತಕ್ಷಣ ಮಂಗಳ ಪದ್ಯ ಹೇಳಿದ ಕೂಡಲೇ ರಂಗಸ್ಥಳದಲ್ಲಿ ಕುಣಿಯುತ್ತಿದ್ದ ಸ್ತ್ರೀ ವೇಷದವರು ಮುಕ್ತಾಯದ ಕೊನೆಯಲ್ಲಿ ಎರಡೂ ರಂಗಸ್ಥಳದ ಮಧ್ಯ ಇದ್ದು ಎರಡೂ ಕೈಯಲ್ಲಿ  ವೀಳ್ಯಹಿಡಿದು ಆದರೆ ಕೈಯನ್ನು ಆಚೆ ಈಚೆ ಮಾಡಿ ಕತ್ತರಿಯಂತೆ ಎಡಕೈಯನ್ನು ಬಲಬದಿಯಲ್ಲೂ ಬಲಕೈಯನ್ನು ಎಡಬದಿಗೂ ಹಿಡಿದು ನಿಂತ ಯಜಮಾನರತ್ತ ರಭಸದಿಂದ ಹಾರಿ ಹೋಗಿ ಅವರ ಬಲಕೈಯಲ್ಲಿ ಹಿಡಿದ ವೀಳ್ಯವನ್ನು ತೆಗೆದುಕೊಂಡು ಹೋದವರು ಗೆದ್ದಂತೆ ಎಂದು ತೀರ್ಮಾನ. ಅದಕ್ಕೆ ಅದನ್ನು ಕತ್ತರಿ ವೀಳ್ಯ ಹಿಡಿಯುವುದು ಎಂದು ಮತ್ತೂ ವಿವರವನ್ನು ತಿಳಿಸಿದ್ದಾರೆ..
ದಿನೇಶ ಉಪ್ಪೂರ:

*ನನ್ನೊಳಗೆ - 71*

ಅಪ್ಪಯ್ಯ ಆಗ  ಕೊಲ್ಲೂರೋ ಮಾರಣಕಟ್ಟೆಯೋ ಮೇಳದಲ್ಲಿ ಭಾಗವತರಾಗಿ ಇದ್ದರೂ ಸಂಪಾದನೆ ಅಷ್ಟು ಚೆನ್ನಾಗಿ ಇರಲಿಲ್ಲ. ಕೆಲವು ದಿನ ಆಟವೇ ನಿಶ್ಚಯವಾಗದೇ ಮಲಗಿಕೊಳ್ಳುವ ಪರಿಸ್ಥಿತಿ. ಆಟವೇ ಇಲ್ಲದಿದ್ದ ಮೇಲೆ ಸಂಬಳ ಎಲ್ಲಿ? ಒಂದು ವರ್ಷವಂತೂ ಕೊಲ್ಲೂರು ಮೇಳದಲ್ಲಿ ಆಟ ವಹಿಸಿಕೊಂಡ ಯಜಮಾನರು ಮಧ್ಯದಲ್ಲಿ ಕೈ ಕೊಟ್ಟು (ಬಿಟ್ಟು)ಹೋದುದರಿಂದ ತಿರುಗಾಟವನ್ನು ಅರ್ಧದಲ್ಲಿಯೇ ನಿಲ್ಲಿಸಿ, ವೇಷದ ಸಾಮಾನುಗಳನ್ನು  ಗಣಪತಿ ಪೆಟ್ಟಿಗೆಯನ್ನು ಕೊಲ್ಲೂರಿನ ಯಾರದೋ ಮನೆಯಲ್ಲಿ, ಆಗ ಮೇಳದಲ್ಲಿದ್ದ ತೆಕ್ಕಟ್ಟೆ ಆನಂದ ಮಾಸ್ತರ್ ಮತ್ತು ಅಪ್ಪಯ್ಯ ಸೇರಿ ಇಟ್ಟು ಬಂದದ್ದೂ ಇತ್ತು. ಮನೆಯಲ್ಲಿ ಬೇಸಾಯವಿದ್ದರೂ ಎಲ್ಲ ಕೆಲಸವನ್ನು ಆಳುಗಳಿಂದ ಮಾಡಿಸಿಯೇ ಆಗಬೇಕಿತ್ತು.

ಹಾಗಾಗಿ ನನ್ನ ಮೊದಲ ದೊಡ್ಡಣ್ಣಯ್ಯ ದಾಮೋದರನು ಮೂರು ಮೈಲಿದೂರದ ಹಾಲಾಡಿ ಶಾಲೆಯಲ್ಲಿ ಏಳನೇ ಕ್ಲಾಸ್ ಕಲಿತು ಮುಗಿಸಿದವನೇ ಮುಂದೆ ಓದಲು ಆಗದೇ ಮನೆಯಲ್ಲಿ ಉಳಿದ. ಎರಡನೆಯ ಅಣ್ಣ ಕೃಷ್ಣಮೂರ್ತಿಗೆ ಹಾಲಾಡಿ ಶಾಲೆಯಲ್ಲಿ ಏಳನೇ ಕ್ಣಾಸು ಪಾಸಾದ ಕೂಡಲೆ, ಅಲ್ಲಿಂದ ಮತ್ತೆ ಐದು ಮೈಲಿ ದೂರದ ಶಂಕರನಾರಾಯಣದಲ್ಲಿ ಎಂಟನೇ ಕ್ಲಾಸಿಗೆ ಸೇರಿ ಮುಂದೆ ಓದುವ ಆಸೆ. ಆದರೆ ಹಾಲಾಡಿಯಲ್ಲಿರುವ ವಾರಾಹಿ ನದಿಯನ್ನು ದಾಟಿ ಶಂಕರ ನಾರಾಯಣಕ್ಕೆ ಹೋಗಬೇಕಾಗಿತ್ತು. ಆಗ ಈಗಿನಂತೆ ವಾರಾಹಿ ನದಿಗೆ ಸೇತುವೆ ಇರಲಿಲ್ಲ. ದೋಣಿಯನ್ನು ದಾಟಿ ಹೋಗಬೇಕಾಗಿತ್ತು. ಅಲ್ಲಿಯ ಮರ್ಲ ಚಿಕ್ಕು ದೈವಸ್ಥಾನದ ಹತ್ತಿರ ಒಬ್ಬರು ಸಾಯಿಬರು (ಅವರಿಗೆ ಕಳಿನ್ ಸಾಯಿಬ್ರು ಅಂತಲೇ ಕರೆಯುತ್ತಿದ್ದರು). ಅವರು ಒಂದು ದೋಣಿ ಇರಿಸಿಕೊಂಡು ನದಿದಾಟಲು ಬಂದ ಜನರನ್ನು ಆಚೆಗೆ ಈಚೆಗೆ ಮುಟ್ಟಿಸುತ್ತಿದ್ದರು. ಹಾಗೆ ದೋಣಿಯಲ್ಲಿ ನದಿ ದಾಟಲು ಅರ್ಧ ಆಣೆ ಕೊಡಬೇಕಾಗಿತ್ತು. ಪ್ತತೀದಿನ ಶಾಲೆಗೆ ಹೋಗುವುದೆಂದರೆ, ಹೋಗುವುದಕ್ಕೆ ಬರುವುದಕ್ಕೆ ಪ್ರತೀ ದಿನ ಒಂದು ಆಣೆ ಖರ್ಚು ಮಾಡಲೇಬೇಕಾಗಿತ್ತು. ಮನೆಯ ಪರಿಸ್ಥಿತಿಯಲ್ಲಿ ಅದು ಅಮ್ಮನಿಗೆ ಕಷ್ಟವಾಗಿ ಕಂಡದ್ದರಿಂದ 'ಮಾಣಿ ನೀನು ಓದಿದ್ ಸಾಕು. ಮನೆಯಲ್ಲಿ ಅದು ಇದು ಮಾಡ್ಕೊಂಡು, ಗಂಟಿ ಮೇಯಿಸ್ಕೊಂಡ್ ಆಯ್ಕೊ. ನಮಗೂ ಅನುಕೂಲ ಆತ್' ಎಂದು ಹೇಳಿದರು. ಆದರೆ ಕೃಷ್ಣಮೂರ್ತಿಯ ಮನಸ್ಸಿನಲ್ಲಿ ಹೇಗಾದರೂ ಮಾಡಿ ಮುಂದೆ ಓದಲೇ ಬೇಕೆಂಬ ಹಠ ಇತ್ತು. ಆದರೆ ಅದನ್ನು ಹೇಳುವ ಧೈರ್ಯ ಇರಲಿಲ್ಲ.

 ಹಾಲಾಡಿ ಶಾಲೆಯಲ್ಲಿ ಏಳನೇ ಕ್ಲಾಸು ಮುಗಿದ ವರ್ಷ, ಈ ಮಕ್ಕಳಿಂದ ಒಂದು ನಾಟಕ ಮಾಡುವ ಉಮೇದು ಊರಿನ ಕೆಲವು ಹಿರಿಯರಿಗೆ ಬಂತು. ಯಾವ ನಾಟಕ ಎಂದು, ಅದು ಇದು ಅಂತ ಚರ್ಚೆಯಾಗಿ, ಕಡೆಗೆ "ಕರ್ಣಾರ್ಜುನ ಕಾಳಗ" ಮಾಡುವುದು ಅಂತ ನಿಶ್ಚಯವಾಯಿತು. ನಮ್ಮ ಮನೆಯಿಂದ ಸುಮಾರು ಅರ್ಧ ಪರ್ಲಾಂಗ್ ಆಚೆಯಿರುವ ಎಂಕಪ್ಪ ಹಂಜಾರರು ಎನ್ನುವವರ ಮಗ ಗಣೇಶ ಹಂಜಾರನದ್ದೇ ಕರ್ಣ. ನಮ್ಮ ಕೃಷ್ಣಮೂರ್ತಿಯಣ್ಣನದ್ದು ಅರ್ಜುನ.  ಪ್ರತೀದಿನ ರಾತ್ರಿ ಹಾಲಾಡಿ ಶಾಲೆಯಲ್ಲಿಯೇ ಟ್ರಯಲ್. ಒಳ್ಳೆಯ ಪ್ರಚಾರವೂ ಆಗಿತ್ತು. ಹಾಲಾಡಿಯ ಮಾರಿಕಾನು ದೇವಸ್ಥಾನದ ಹತ್ತಿರವೇ ರಸ್ತೆಯ ಬದಿಯಲ್ಲಿ ಒಂದು ದೊಡ್ಡ ಬಾವಿಯ ಕಟ್ಟೆ. ಅದರ ಪಕ್ಕದಲ್ಲೇ ವಿಶಾಲವಾದ ಜಾಗದಲ್ಲಿ ನಾಟಕದ ಸ್ಟೇಜ್ ಕಟ್ಟಿ ಪರದೆ ಬಿಟ್ಟು ಎಲ್ಲವೂ ಸಿದ್ದವಾಯಿತು. ಗ್ಯಾಸ್ ಲೈಟ್ ಬೆಳಕಿನಲ್ಲಿ ನಾಟಕ. ನಿಶ್ಚಿತ ದಿನದಂದು "ಮಕ್ಕಳನಾಟಕ ಅಲ್ವಾ ಹ್ಯಾಂಗ್ ಮಾಡ್ತೊ ಕಾಂಬ" ಎಂದು ಪೇಟೆಯವರು, ಮಕ್ಕಳ ಸಂಬಂಧಿಕರು, ಆಸುಪಾಸಿನವರು ಎಲ್ಲರೂ ಬಂದಿದ್ದರು. ಈಗಿನಂತೆ ಟಿವಿ, ಮೊಬೈಲ್ ಎಲ್ಲ ಇಲ್ಲದ ಕಾಲವಲ್ಲವೇ? ಇಂತಹ ಮನರಂಜನೆ ಇದ್ದಾಗ ಹಳ್ಳಿಯವರು ತಪ್ಪದೇ ಬಂದು ನೋಡುತ್ತಿದ್ದರು. ಅಜ್ಜಯ್ಯ ಶ್ರೀನಿವಾಸ ಉಪ್ಪೂರರೂ ಮೊಮ್ಮಗನ "ಹೊಡ್ತ" ನೋಡುವ ಎಂದು ನಾಟಕಕ್ಕೆ ಬಂದು ಎದುರಿಗೇ ಕುಳಿತಿದ್ದರು.

ಕೃಷ್ಣಮೂರ್ತಿ ಅಣ್ಣಯ್ಯನಿಗೆ ಸ್ವಲ್ಪ ಯಕ್ಷಗಾನದ ಟಚ್ಚೂ ಇದ್ದುದರಿಂದ, ಹಾಗೂ ಸಾಕಷ್ಟು ಕರ್ಣಾರ್ಜುನ ಕಾಳಗದ ಬಯಲಾಟ ನೋಡಿದ್ದರಿಂದ ಅವನು ತುಂಬಾ ಆತ್ಮವಿಶ್ವಾಸದಿಂದ ಸಾಕಷ್ಟು ಚೆನ್ನಾಗಿಯೇ ಅಭಿನಯಿಸಿದ್ದನಂತೆ. ಜೊತೆಗೆ ಅಜ್ಜಯ್ಯನೂ 'ಹಾಂಗಲ್ಲ ಹೀಂಗೆ ಮಾಡ್' ಎಂದು ಸ್ವಲ್ಪ ನಿರ್ದೇಶನ ಕೊಟ್ಟಿದ್ದಿರಬಹುದು.

ನಾಟಕದಲ್ಲಿ ಇವನ ಡೈಲಾಗ್ ಹೇಳುವಾಗ ಭಾರೀ ಚಪ್ಪಾಳೆ ಬಂತು. ಎದುರು ಪಾತ್ರಧಾರಿ ಕರ್ಣನಾಗಿ ಪಾತ್ರವಹಿಸಿದ್ದ ಗಣೇಶ ಹಂಜಾರನ ಪಾತ್ರ ಸಪ್ಪೆಯಾಯಿತು. ಅದು ಅವನಿಗೂ ಅನ್ನಿಸಿರಬೇಕು. ತನ್ನದು ಉಟಾವ್ ಆಗಲಿಲ್ಲ ಎಂಬ ಬೇಸರದೊಡನೆ ಹೊಡಿ ಹಾರಿಸಿ ಚಪ್ಪಾಳೆಗಿಟ್ಟಿಸಿಕೊಳ್ಳುತ್ರಿದ್ದ ಅರ್ಜುನನ ಮೇಲೂ ಸಿಟ್ಟು ಬಂದು, ಏನಾದರೂ ಮಾಡಿ ಅರ್ಜುನನ್ನು ಸಣ್ಣದು ಮಾಡಬೇಕು ಎಂದೋ ಅಥವ ಸಿಟ್ಟಿನಲ್ಲಿ ಗೊತ್ತಾಗದೇ ಹೋಯಿತೋ ಅಂತೂ ಸರ್ಪಾಸ್ತ್ರವನ್ನು ಪ್ರಯೋಗಿಸುವ ಸಂದರ್ಭ, ಅವನು ಬಿಟ್ಟ ಬಾಣ ಸ್ವಲ್ಪ ಹೆಚ್ಚು ರಭಸದಿಂದ ಬಂದು ಅಣ್ಣಯ್ಯನಿಗೆ ತಾಗಿತು. ಅಣ್ಣಯ್ಯನಿಗೆ ಏನಾಗುತ್ತಿದೆ ಅಂತ ಗೊತ್ತಾಗುವುದರ ಒಳಗೆ ಹಿಂದಕ್ಕೆ ಹಾರಿದ್ದರಿಂದ ಆಯತಪ್ಪಿ ಕೆಳಗೆ ಬಿದ್ದುಬಿಟ್ಟ. ಆಗ ಏನಾಯಿತು? ಏನಾಯಿತು? ಅಂತ ಜನ ಕುಳಿತಲ್ಲಿಂದ ಎದ್ದು ಸ್ಟೇಜಿನ ಕಡೆಗೆ ಬರತೊಡಗಿದರು. ಅಜ್ಜಯ್ಯನೂ ಆಧಾರಕ್ಕೆ ಹಿಡಿದ ಕೋಲನ್ನೇ ಎತ್ತರಕ್ಕೆ ತೂರಿ, "ಬಾಣ ಹೊಡೆದು ಕೊಲ್ತಿಯನಾ ನಮ್ಮ ಮಾಣಿನಾ?" ಅಂತ ಆರ್ಭಟಿಸುತ್ತಾ ಎದ್ದೇ ಸ್ಟೇಜಿಗೆ ಏರಿ ಬಿಟ್ಟರು. ಗಣೇಶ ಹಂಜಾರನಿಗೆ ಗಾಬರಿಯಾಗಿರಬೇಕು. ಥಟ್ಟನೇ ಅವನು ವೇಷದಸಹಿತ ಹಿಂದಕ್ಕೆ ಹಾರಿ ಪಕ್ಕದ ಗುಡ್ಡ ಹತ್ತಿ ಕತ್ತಲಲ್ಲಿ ಏಳುತ್ತಾ ಬೀಳುತ್ತಾ ಹೋ ಎಂದು ಕೂಗುತ್ತಾ  ಓಡತೊಡಗಿದ. ಅಜ್ಜಯ್ಯ ಅವನನ್ನು ಹಿಂಬಾಲಿಸುತ್ತಾ "ನಿನ್ನನ್ನ್ ಇವತ್ ಬಿಡುದಿಲ್ಲ. ಎಲ್ ಹೋತೆ ಕಾಂತೆ' ಅಂತ ಬೆನ್ನಟ್ಟಿದರು. ನಂತರ ಊರ ಜನರೆಲ್ಲ ಸೇರಿ ಹಂಜಾರನನ್ನು ಹಿಡಿದು, ಧೈರ್ಯ ಹೇಳಿ ಕರೆದುಕೊಂಡು ಬಂದರು. ಅಜ್ಜಯ್ಯನನ್ನು ಸಮಾಧಾನ ಮಾಡಿ ಕುಳ್ಳಿರಿಸಿ ನಾಟಕವನ್ನು ಮುಂದುವರಿಸಿದರಂತೆ.

ರಜೆ ಮುಗಿದ ಕೂಡಲೇ ಮತ್ತೆ ತಾನು ಮುಂದೆ ಓದಬೇಕು ಅಂತ ಹಠಮಾಡತೊಡಗಿದ ಮಗನನ್ನು ಸುಧಾರಿಸಲಾಗದೇ ಮನೆಯಲ್ಲಿ 'ಏನು ಬೇಕಾದರೂ ಮಾಡಿಕೋ' ಎಂದದ್ದೇ, ಒಂದು ದಿನ ಕೃಷ್ಣಮೂರ್ತಿಯಣ್ಣಯ್ಯ ಮನೆಯಲ್ಲಿ ಯಾರಿಗೂ ಹೇಳದೇ ಕೇಳದೆ ಬಸ್ಸು ಹತ್ತಿ ಹೋಗಿಯೇ ಬಿಟ್ಟ. ಮಗ ಮನೆ ಬಿಟ್ಟು ಹೋದದ್ದು ಗೊತ್ತಾಗಿ ಮನೆಯಲ್ಲಿ ಹಾಹಾಕಾರ ಶುರುವಾಯಿತು. ಅಪ್ಪಯ್ಯ ಮನೆಗೆ ಬಂದ ಕೂಡಲೆ ವಿಷಯ ತಿಳಿದು ಚಿಂತೆಗೊಳಗಾದರು.  ಎಲ್ಲಿ ಅಂತ ಹುಡುಕುವುದು? ಆಟಕ್ಕೆ ಹೋದ ಊರಿನಲ್ಲಿ ಅಲ್ಲಿ ಇಲ್ಲಿ ಎಲ್ಲಾ ಕಡೆಯಲ್ಲೂ ವಿಚಾರಿಸಿದರು. ಮಗ ಬೇಸರಗೊಂಡು ಮನೆಯನ್ನು ಬಿಟ್ಟು ಹೋದದ್ದು ಅವರಿಗೆ ನುಂಗಲಾರದ ತುತ್ತಾಯಿತು. "ಎಲ್ಲಾದರೂ ಇರಲಿ ಚೆನ್ನಾಗಿ ಇದ್ದರೆ ಸಾಕು" ಎಂದು ದೇವರಲ್ಲಿ ಬೇಡುವುದೊಂದೆ ಆಯಿತು.

ಅತ್ತ, ಮನೆ ಬಿಟ್ಟುಹೋದ ಕೃಷ್ಣಮೂರ್ತಿಯಣ್ಣಯ್ಯ ಗೊತ್ತುಗುರಿಯಿಲ್ಲದೇ ಎಲ್ಲೆಲ್ಲೋ ತಿರುಗಿದ. ಎಲ್ಲ ಕಡೆಯಲ್ಲಿಯೂ ಕೆಲಸಕ್ಕೆ ಪ್ರಯತ್ನಿಸಿದ. ಏಳನೇ ಕ್ಲಾಸು ಓದಿದವನಿಗೆ ಗುರುತು ಪರಿಚಯ ಇಲ್ಲದ ಊರಿನಲ್ಲಿ ಎಲ್ಲಿ ಕೆಲಸ ಸಿಕ್ಕೀತು? ಯಾರು ಕರೆದು ಕೆಲಸ ಕೊಟ್ಟಾರು? ಅಂತೂ ಶಿವಮೊಗ್ಗ, ದಾವಣಗೆರೆ ಹೊಸಪೇಟೆ ಅಂತ ಅಲ್ಲಿ ಇಲ್ಲಿ ಓಡಾಡಿ, ಸಿಕ್ಕಿದ ಕಡೆಯಲ್ಲಿ ಯಾರದೋ ಮನೆಯ ಜಗುಲಿಯಲ್ಲೋ, ಬಸ್ ಸ್ಟೇಂಡಿನಲ್ಲೋ ರಾತ್ರಿಯನ್ನು ಕಳೆದು, ಮತ್ತೆ ಹಾಗೂ ಹೀಗೂ ಅಂತೂ ಮೈಸೂರನ್ನು ಸೇರಿದ. ಅಲ್ಲಿ ಒಂದು ಹೋಟೇಲಿನಲ್ಲಿ ಇವನಿಗೆ ಕೆಲಸ ಸಿಕ್ಕಿತ್ತು. ಅದನ್ನೇ ಆಸಕ್ತಿಯಿಂದ ಮಾಡಿ ಹೋಟೇಲಿನ ಯಜಮಾನರ ವಿಶ್ವಾಸ ಗಳಿಸಿದ ಕೃಷ್ಣಮೂರ್ತಿಯಣ್ಣಯ್ಯ, ಹೋಟೇಲಿನ ಪಕ್ಕದಲ್ಲಿ ಇದ್ದ ಒಂದು ಸ್ಟುಡಿಯೋಗೂ ಸಮಯವಾದಾಗಲೆಲ್ಲ ಹೋಗಿ ಪೋಟೋಗ್ರಫಿಯನ್ನು  ಕಲಿಯತೊಡಗಿದ. ತನ್ನ ಆಸಕ್ತಿಯ ವಿಷಯವಾದ ಚಿತ್ರಕಲೆಯನ್ನು ಹೆಚ್. ಆರ್. ಶೇಷಾದ್ರಿ ಎಂಬವರಲ್ಲಿ ಕಲಿತುಕೊಂಡ. ಇವನ ಜೊತೆಗೆ ಅದೇ ಹೋಟೇಲಿನಲ್ಲಿ ಕೆಲಸ ಮಾಡುತ್ತಿದ್ದ ಸುಬ್ರಾಯ ಎಂಬ ಹುಡುಗನೂ ಇವನಿಗೆ ಜೊತೆಯಾಗಿದ್ದನಂತೆ.

ಮನೆಯಲ್ಲಿ ಅಪ್ಪಯ್ಯ, ಮಗನನ್ನು ಹುಡುಕಿ ಹುಡುಕಿ ಸುಸ್ತಾಗಿ ಮಗನ ಆಶೆಯನ್ನು ಬಿಟ್ಟು ಅವನ ಚಿಂತೆಯಲ್ಲೇ ಇದ್ದರು. ಅದಾದ ಸುಮಾರು ಆರೇಳು ವರ್ಷಗಳ ನಂತರ ಅಪ್ಪಯ್ಯನಿಗೆ, ಒಮ್ಮೆ ಮೈಸೂರಿಗೆ ಆಟಕ್ಕಾಗಿ ಹೋಗುವ ಅವಕಾಶ ಬಂದಿತು.  ಮೈಸೂರಿಗೆ ಹೋದವರು  ಅಲ್ಲಿ ಅವರ ತಾಯಿಯ ತಂಗಿಯ ಮಗಳೊಬ್ಬಳು ಲಕ್ಷ್ಮಿದೇವಮ್ಮ ಅಂತ ಇದ್ದರು, ಅವರ ಮಗ ಒಂದು ಹೋಟೆಲಿನಲ್ಲಿ ಕೆಲಸಕ್ಕಿದ್ದ ಎಂದು ತಿಳಿದಿದ್ದರಿಂದ ಆ ತಂಗಿಯ ಮನೆಗೆ ಹೋಗಲು ದಾರಿ ತಿಳಿಯದೇ, ಅವರ ಮಗ ಇದ್ದ ಹೋಟೇಲನ್ನು ಹುಡುಕಿಕೊಂಡು ಹೋದರು. ಅಂತೂ ಹೋಟೆಲಿಗೆ ಹೋಗಿ, ಲಕ್ಷ್ಮಿದೇವಮ್ಮನ ಮಗ ಸುಬ್ರಾಯನನ್ನು ಹುಡುಕಿ ತನ್ನ ಪರಿಚಯ ಹೇಳಿಕೊಂಡು ಅವರ ಮನೆಗೆ ಕರೆದುಕೊಂಡು ಹೋಗಲು ಹೇಳಿದರು. ಹಾಗೆಯೇ ಆಚೀಚೆ ನೋಡುತ್ತಿರುವಾಗ ಒಬ್ಬ ಹುಡುಗ ಮರೆಯಲ್ಲಿ ಇವರನ್ನೇ ನೋಡುತ್ತಾ ಅಡಗಿಕೊಳ್ಳುತ್ತಿರುವುದು ಅಕಸ್ಮಾತ್ ಆಗಿ ಕಾಣಿಸಿತು. ಸರಿಯಾಗಿ ನೋಡಿದರೆ ಅವನೇ, ಮಗ ಕೃಷ್ಣಮೂರ್ತಿ. ಒಮ್ಮೆ ರೋಮಾಂಚನವಾಗಿರಬೇಕು ಅಪ್ಪಯ್ಯನಿಗೆ. ಮಗನೆಂದು ಗೊತ್ತಾಗುತ್ತಲೇ ಕೂಡಲೇ ಓಡಿ ಹೋಗಿ ಅವನನ್ನು ಕಂಡು ಮಾತಾಡಿಸಿದರು. ಅಷ್ಟರವರೆಗೂ ಅದೇ ಹೋಟೆಲಿನಲ್ಲಿದ್ದರೂ ಆ ಸುಬ್ರಾಯ ಎನ್ನುವವನು ತನ್ನ ಸಂಬಂಧಿಕ ಎಂದು ಕೃಷ್ಣಮೂರ್ತಿಯಣ್ಣನಿಗೆ ತಿಳಿದಿರಲೇ ಇಲ್ಲ. ಯಾವ ಊರಿನಿಂದ ಬಂದದ್ದು ಅಂತ ಹೇಳಿದರಲ್ಲವೇ ಗೊತ್ತಾಗುವುದು? ಅಂತೂ ಮಗನನ್ನು ನೋಡಿ ಅಪ್ಪಯ್ಯನಿಗೆ ಭಾರೀ ಸಂತೋಷವಾಯಿತು.ಆಗಲೇ
"ಮನೆಗೆ ಹೊರಡು" ಎಂದು ಒತ್ತಾಯ ಮಾಡಿದರು. ಅಷ್ಟರಲ್ಲಿ ಕೃಷ್ಣಮೂರ್ತಿಯಣ್ಣನಿಗೆ ಮನೆಯಿಂದ ಹೇಳದೇ ಕೇಳದೇ ಬಂದುದು ತಪ್ಪಾಯಿತು ಅನ್ನಿಸಿರಬೇಕು. ಅಪ್ಪಯ್ಯನ ಮಾತಿಗೆ ಒಪ್ಪಿ, ಹೋಟೆಲ್ ಯಜಮಾನರಿಗೆ ವಿಷಯವನ್ನು ಹೇಳಿ, ಲಕ್ಷ್ಮಿದೇವಮ್ಮನ ಮನೆಗೂ ಹೋಗಿ ಅಪ್ಪಯ್ಯನೊಂದಿಗೆ  ಹೊರಟ. ಅಲ್ಲಿ ಅಪ್ಪಯ್ಯನು ಒಪ್ಪಿಕೊಂಡ ಆಟ ಮುಗಿಸಿ ಮಗನೊಂದಿಗೆ ಮನೆಗೆ ಬಂದರು. ಅದೇ ಸುಬ್ರಾಯ ಎನ್ನುವವರು ಮುಂದೆ ಮೈಸೂರಿನಲ್ಲಿ ಮುರಳಿ ಸ್ಟುಡಿಯೋ ಎಂಬ ಸ್ಟುಡಿಯೋವನ್ನು ಇಟ್ಟು ಪೋಟೋಗ್ರಾಫಿಯನ್ನೇ ಮುಂದುವರಿಸಿದರಂತೆ.

ಮುಂದೆಯೂ ಕೃಷ್ಣಮೂರ್ತಿ ಯಣ್ಣಯ್ಯನಿಗೆ ಓದು ಮುಂದುವರಿಸಲು ಆಗಲಿಲ್ಲ. ಮತ್ತೆ ಬೆಂಗಳೂರಿಗೆ ಹೋಗಿ, ನನ್ನ ಅಕ್ಕನ ಗಂಡನ ತಮ್ಮನ ಹೋಟೆಲಿಗೆ ಸೇರಿಕೊಂಡು ಹೋರಾಟದ ಬದುಕು ನಡೆಸಿದ. ಕಷ್ಟಪಟ್ಟು ಹಗಲೂ ರಾತ್ರಿ ದುಡಿದು ಅಲ್ಲಿಯೇ ಅವನ ಜೀವನದ ದಾರಿಯನ್ನು ಕಂಡುಕೊಂಡ. ಹೋಟೆಲಿನಲ್ಲಿ ಸಪ್ಲೈಯರ್ ಆಗಿ, ಕ್ಯಾಶಿಯರ್ ಆಗಿ ರೋಜ್  ಅಡುಗೆಯವನಾಗಿ ದುಡಿದ. ಒಂದು ಸೆಕೆಂಡ್ ಹ್ಯಾಂಡ್ ಅಟೋರಿಕ್ಷಾವನ್ನು ಖರೀದಿಸಿ ಅದನ್ನು ಬಾಡಿಗೆಗೆ ಓಡಿಸಿ ಜೀವನ ನಡೆಸಿದ. ಮುಂದೆ ಬಸವನ ಗುಡಿಯಲ್ಲಿರುವ ಗುರುನರಸಿಂಹ ಕಲ್ಯಾಣ ಮಂದಿರದಲ್ಲಿ ಮೇನೇಜರ್ ಆಗಿ ದುಡಿದು, ಈಗ ನಿವೃತ್ತನಾಗಿ  ಬೆಂಗಳೂರಿನಲ್ಲಿಯೇ ಹವ್ಯಾಸಕ್ಕಾಗಿ ಯಕ್ಷಗಾನದ ವಿವಿಧ ರೀತಿಯ ಗೊಂಬೆಗಳನ್ನು ತಯಾರಿಸುವುದು, ಆಟ ನೋಡುವುದು ಅದು ಇದು ಮಾಡಿಕೊಂಡು ವಿಶ್ರಾಂತ ಜೀವನವನ್ನು ನಡೆಸುತ್ತಿದ್ದಾನೆ.

ಶನಿವಾರ, ಫೆಬ್ರವರಿ 3, 2018

ದಿನೇಶ ಉಪ್ಪೂರ:

*ನನ್ನೊಳಗೆ 69*

ನನಗಾಗ ಏಳು ಅಥವ ಎಂಟು ವರ್ಷ ಇರಬಹುದು. ಎಪ್ರಿಲ್ ನಲ್ಲಿ ಶಾಲೆಗೆ ರಜೆ ಸಿಕ್ಕಿದಾಗ ನಾನು ಕೋಟದ ಅಕ್ಕನ ಮನೆಗೆ ಹೋಗುವುದಿತ್ತು. ಆಗ ಅಕ್ಕನ ಮನೆ, ಕೋಟದ ಪಡುಕೆರೆ ಎಂಬಲ್ಲಿ  ಇದ್ದಿತ್ತು. ಮನೆಯ ಹಿಂದುಗಡೆ ಸುಮಾರು ಒಂದು ಕಿಲೋಮೀಟರ್ ದೂರದಲ್ಲಿಯೇ ಅರಬ್ಬೀ ಸಮುದ್ರ. ಅಕ್ಕನ ಮನೆಯಲ್ಲಿ ಇದ್ದರೆ ಆ ಸಮುದ್ರದ ಭೋರ್ಗರೆತ ಭೋ ಎಂದು ಒಂದೇ ಸಮನೆ ಕೇಳಿಸುತ್ತಿತ್ತು. ಆದರೆ ನಾನು ಆ ಸಮುದ್ರವನ್ನು ನೋಡಿರಲಿಲ್ಲ. ಆ ಶಬ್ದಕ್ಕೆ ನಾನು ಹೆದರಿ ಈಗಲೋ ಇನ್ನೊಂದು ಕ್ಷಣಕ್ಕೋ ಸಮುದ್ರದ ನೀರು ಉಕ್ಕಿ ಹರಿದು ಮನೆಯ ಮೇಲೇಯೇ ಬಂದಂತೆ, ಇಡೀ ಊರೇ ಮುಳುಗಿಹೋದಂತೆ ಕನಸು ಕಾಣುತ್ತಿದ್ದೆ.

 ಹಾಗೆ ಒಮ್ಮೆ ನಾನು ಅಕ್ಕನ ಮನೆಗೆ ಹೋಗಿದ್ದಾಗ ಅಪ್ಪಯ್ಯನೂ ಅಲ್ಲಿ ಇದ್ದರು. ಆಗ ಅವರು ಅಮೃತೇಶ್ವರಿ ಮೇಳದಲ್ಲಿ  ಭಾಗವತರು. ಬಹುಷ್ಯ ಹತ್ತಿರದ ಮೊಗವೀರರ ಕೇರಿಯಲ್ಲಿಯೋ, ಕೋಟದ ಪೇಟೆಯಲ್ಲೋ ಆಟ ಇರಬೇಕು.

ಸಂಜೆಯ ಹೊತ್ತಿಗೆ ನನ್ನನ್ನು ಕರೆದು "ಬತ್ಯಾ ಮಾಣಿ, ಸಮುದ್ರಕ್ಕೆ ಹೋಯ್ ಬಪ್ಪ" ಅಂದರು. ನನಗೆ ರೋಮಾಂಚನವಾಯಿತು. ಖುಷಿಯಿಂದ "ಹೂಂ" ಎಂದು ಅದೇ ಉಡುಪಿನಲ್ಲಿಯೇ ಹೊರಟು ಬಿಟ್ಟೆ.

 ನಾನು ಅದುವರೆಗೆ ಸಮುದ್ರವನ್ನು ನೋಡಿರಲಿಲ್ಲ. ನೋಡುವ ಉತ್ಸಾಹ ಒಮ್ಮೆಲೇ ಹೆಚ್ಚಾಯಿತು. ಅವರು ಮುಂದೆ ನಾನು ಹಿಂದೆ. ಒಮ್ಮೆ ಎತ್ತರದ ಗುಡ್ಡದ ದಾರಿ, ಒಮ್ಮೆ ತಗ್ಗಿನ ತೋಡು, ಹೀಗಿನ ದಾರಿಯಲ್ಲಿ ನಡೆದೇ ನಡೆದೆವು. ಸಮುದ್ರ ಹತ್ತಿರವಾಗುತ್ತಿದೆ ಎನ್ನುವಾಗ ಕಡಲಿನ ಭೋರ್ಗರೆತದ ಶಬ್ಧಕ್ಕೆ ನನಗೆ ಏನೋ ಅವರ್ಣನೀಯ ಆನಂದದ ಭಾವ. ಆಮೇಲಿನ ದಾರಿ ಬರೀ ಹೊಯಿಗೆಯದು. ಆ ಹೊಯಿಗೆಯಲ್ಲಿ ನಡೆಯಬೇಕು, ಒಂದಷ್ಟು ದೂರ. ಕಾಲು ಎತ್ತಿ ಮುಂದೆ ಇಟ್ಟರೆ ಹಿಂದಿನಕಾಲು ಹೊಯಿಗೆಯಲ್ಲಿ ಹಿಂದೆ ಜಾರುತ್ತಿತ್ತು.  ಚಪ್ಪಲಿಯ ಒಳಗೆಲ್ಲ ಹೊಯಿಗೆ. ಜೋರಾಗಿ ಗಾಳಿ ಬೀಸುತ್ತಿತ್ತು. ಜೊತೆಗೆ ಕೊಳೆತ ಮೀನಿನ ವಾಸನೆ.

ಅಂತೂ ಸಮುದ್ರದ ಎದುರು ಬಂದು ನಿಂತೆವು. ವಾಹ್ ಎಂತಹ ವಿಶಾಲ ಕಡಲು. ಆಚೆ ಈಚೆ ಮುಂದೆ ಎಲ್ಲಿ ನೋಡಿದರೂ ನೀರು. ಕಣ್ಣು ಕಾಣುವಷ್ಟು ದೂರ. ಅದಕ್ಕೆ ಅಂತ್ಯವೇ ಇಲ್ಲ ಎನ್ನುವಷ್ಟು ನೀರೇನೀರು. ಹೊಯಿಗೆಯಲ್ಲಿ ನಡೆಯಲು ಕಷ್ಟಪಡುವ ನನ್ನನ್ನು ನೋಡಿ ಮುಂದೆ ಹೋಗುತ್ತಿದ್ದ ಅಪ್ಪಯ್ಯ ನಿಂತು ಹಿಂದೆ ತಿರುಗಿ, " ಬಾ " ಎಂದು ಕೈ ನೀಡಿ ನನ್ನ ಕೈಯನ್ನು ಹಿಡಿದುಕೊಂಡು ನಡೆಯತೊಡಗಿದರು. ಜೊತೆಜೊತೆಯಾಗಿ ನಡೆದು ಮುಂದೆ ಮುಂದೆ ಹೋಗಿ ಸಮುದ್ರದ ಹತ್ತಿರಕ್ಕೆ ಬಂದೆವು.

ತೆರೆಯ ಹತ್ತಿರ ಹೋಗುವುದೇ ಬೇಡ. ಅದೇ ನಮ್ಮನ್ನು ಹಿಡಿಯಲೋ ಎಂಬಂತೆ ರಭಸದಿಂದ ನಮ್ಮೆಡೆಗೆ ಬರುತ್ತಿತ್ತು. ಒಮ್ಮೆಲೆ ನಮ್ಮ ಕಾಲುಗಳಿಗೆ ಬಡಿದು ಬಳಸಿಕೊಂಡು ಹಿಂದಕ್ಕೆ ಹೋಯಿತು. ಅಪ್ಪಯ್ಯ ನನ್ನ ಕೈ ಹಿಡಿದುಕೊಂಡೇ ಇನ್ನೂ ಮುಂದೆ ಹೊರಟರು. ಕಾಲಿನಡಿಯ ಹೊಯಿಗೆಯಲ್ಲಿ ಕಾಲು ಹುಗಿದು ಹುಗಿದು ಹೋಗುತ್ತಿತ್ತು. ಅಪ್ಪಯ್ಯ ಸುಮಾರಿಗೆ ನನ್ನನ್ನು ಎಳೆದುಕೊಂಡೇ ಹೋಗುತ್ತಿದ್ದರು. ನನಗೆ ಅಪ್ಪಯ್ಯ ಕೈ ಹಿಡಿದದ್ದೇ ಧೈರ್ಯ.

ಇನ್ನೂ ತೆರೆಯ ಹತ್ತಿರಕ್ಕೆ ಮುಂದೆ ಮುಂದೆ ಹೋದೆವು. ಅಷ್ಟರಲ್ಲಿ ಇನ್ನೊಂದು ತೆರೆ ದಡಕ್ಕೆ ಅಪ್ಪಳಿಸಿ, ಮೇಲೆ ಆಕಾಶದಷ್ಟು ಎತ್ತರಕ್ಕೆ ಎದ್ದು ಹಾವಿನ ಹೆಡೆಯಂತೆ ಮಡಚಿಕೊಂಡು ಮತ್ತೆ ನಮ್ಮತ್ತ ಮುನ್ನುಗ್ಗಿ ಬರತೊಡಗಿತು. ನಾನು ನೋಡನೋಡುತ್ತಿರುವಷ್ಟರಲ್ಲಿಯೇ ಅದು ನಮ್ಮ ಕಾಲಿನ ಸುತ್ತ ತೊಡೆಯಷ್ಟು ಮೇಲೆ ನುಗ್ಗಿ ಬಂದು ನನ್ನ ಚಡ್ಡಿಯನ್ನು ಪೂರ್ತಿಯಾಗಿ ಒದ್ದೆಮಾಡಿಬಿಟ್ಟಿತು. ನಮ್ಮನ್ನು ಬಳಸಿಕೊಂಡು ಹೋಗಿದ್ದೇ ಮತ್ತೆ ರಭಸದಿಂದ ಹಿಂದಕ್ಕೆ ಬಂದು ಕಾಲಿನ ಅಡಿಯ ಮರಳನ್ನು ಕೊಚ್ಚಿಕೊಂಡು ಸಮುದ್ರಕ್ಕೆ ನೊರೆನೊರೆಯಾಗಿ ಹೋಗಿ ಸೇರಿತು. ಅಬ್ಬಾ, ನನ್ನನ್ನೇ ಸಮುದ್ರಕ್ಕೆ ಎಳೆದುಕೊಂಡು ಹೋಯಿತೋ ಎಂಬಷ್ಟು ರಭಸ. ಅಪ್ಪಯ್ಯ ಕೈ ಹಿಡಿದುಕೊಂಡಿದ್ದರಿಂದ ನಾನು ಉಳಿದೆ. ಅದು ಎಂತಹ ಆನಂದ. ಮೈ ಮರೆಯುವ ಸಂತೋಷ.

 ಮತ್ತೆ ತೆರೆ ಮೇಲೆದ್ದು ಬಂದಿತು.  ಕಾಲಿನ ಅಡಿಯ ಹೊಯಿಗೆಯೊಂದಿಗೆ ಮತ್ತೆ ನಮ್ಮನ್ನು ಸಮುದ್ರದತ್ತ ಎಳೆಯತೊಡಗಿತು.  ಮತ್ತೆ ಪುನಹ ಪುನಹ ಉಕ್ಕಿ ಬರುವ ಕಡಲು. ಲಂಕಾದಹನದ ಪದ್ಯದ ಹಾಗೆ

" ಕಂಡಿರೇನೈ ನೀವೂ ಕಂಡಿರೇನೈ | ಕಂಡಿರೇ ಸಮುದ್ರರಾಜ| ಕೆಂಡದಂತುಬ್ಬೇರಿ ನಭೋ |ಮಂಡಲಕ್ಕೆ ಹಾರಿ ಮಗುಚಿ |ಬರುವುದಾ| ಭೋರ್ಗರೆವುದಾ||

ಎಂಬಂತೆ ತೆರೆಗಳು ದಡಕ್ಕೆ ಅಪ್ಪಳಿಸುವ ಸದ್ದು. ರಭಸವಾಗಿ ಬೀಸುವ ಗಾಳಿ.

  ಅಪ್ಪಯ್ಯ ನನ್ನೊಡನೆ ಏನೂ ಮಾತಾಡುತ್ತಿರಲಿಲ್ಲ. ಅಥವ "ಮಾಣಿ ಲಾಯ್ಕಿತ್ತಾ?" ಎಂದಿರಬಹುದೋ ಏನೋ. ಹೀಗೆಯೇ ಸ್ವಲ್ಪಹೊತ್ತು ಕಳೆಯಿತು. ಕೊನೆಗೆ ಸೂರ್ಯ ಪಡುಗಡಲ ಬಾನಿನ ಅಂಚಿನಲ್ಲಿ ಮೋಡಗಳ ಮಧ್ಯದಲ್ಲಿ ಮರೆಯಾಗುತ್ತಾ, ಆಗಸದಲ್ಲಿ ತನ್ನ ಪ್ರಖರತೆಯನ್ನು ಕಳೆದುಕೊಳ್ಳುತ್ತಾ  ಕಣ್ಮರೆಯಾದ. ನಿಧಾನವಾಗಿ ಕತ್ತಲು ಆವರಿಸತೊಡಗಿತು.

 ಅಪ್ಪಯ್ಯ, "ಹೋಗುವ ಹೊತ್ತಾಯ್ತು" ಅಂದರು. ನಾನು ಮಾತಾಡಲಿಲ್ಲ. ನಿಧಾನವಾಗಿ ಹೊರಟೆವು. ನಾನು ಮತ್ತೆ ಮತ್ತೆ ತಿರುಗಿ ಸಮುದ್ರವನ್ನು ನೋಡುತ್ತಿದ್ದೆ. ಅಪ್ಪಯ್ಯ ನನ್ನ ಕೈಯನ್ನು ಆ ಹೊಯಿಗೆಯ ರಾಶಿಯನ್ನು ದಾಟುವವರೆಗೂ ಹಿಡಿದಿದ್ದರು. ನಂತರ ನಾನು ಕುಣಿಯುತ್ತಾ ಮುಂದೆ ಹೋಗುತ್ತಿದ್ದರೆ ಅವರು ಹಿಂದೆ ರಾಜಗಾಂಭೀರ್ಯದಿಂದ ಬರುತ್ತಿದ್ದರು. ಪೂರ್ತಿ ಕತ್ತಲಾಗುವುದರ ಒಳಗೆ ಮನೆಯನ್ನು ಬಂದು ಸೇರಿದೆವು. 

ಹೀಗೆ ನಾನು ಮೊದಲ ಸಲ ಸಮುದ್ರವನ್ನು ಕಂಡದ್ದು.
ದಿನೇಶ ಉಪ್ಪೂರ:

*ನನ್ನೊಳಗೆ* 68

ರಾಧಕ್ಕ ಎನ್ನುವ ನನ್ನ ಸಂಬಂಧಿಕರೊಬ್ಬರು ಸಾಗರದಲ್ಲಿ ಇದ್ದರು. ಅವರು ನೋಡಲು ಸುಮಾರಿಗೆ ನನ್ನ ಅತ್ತೆ ಭವಾನಿಯಮ್ಮನ ಹಾಗೆಯೆ ಇದ್ದಿದ್ದರು. ಅವರೂ, ನನ್ನ ಅಪ್ಪಯ್ಯನೂ ವಾವೆಯಲ್ಲಿ ಅಣ್ಣ ತಂಗಿಯರೆ. ಅಂದರೆ ಅಪ್ಪಯ್ಯನ ಅಮ್ಮನ ತಂಗಿಯ ಮಗಳು. ಅವರನ್ನು ವೆಂಕಟಾಚಲ ಹೊಳ್ಳರು ಎನ್ನುವವರಿಗೆ ಮದುವೆ ಮಾಡಿ ಕೊಟ್ಟಿದ್ದರು. ರಾಧಕ್ಕ  ಸಂಬಂಧದಲ್ಲಿ ನಮಗೆ ಅತ್ತೆ ಆದರೂ ನಾವು ಅವರನ್ನು ರಾಧಕ್ಕ ಎಂದೇ ಕರೆಯುತ್ತಿದ್ದೆವು. ಅಪ್ಪಯ್ಯ ಸಾಗರದಲ್ಲಿ ಆಟ ಇದ್ದಾಗ ಅವರ ಮನೆಯಲ್ಲಿಯೇ ಉಳಿದುಕೊಳ್ಳುತ್ತಿದ್ದರು. ಅವರ ಮಕ್ಕಳಲ್ಲಿ ಕೊನೆಯ ಮಗಳನ್ನೇ ಶ್ರೀಧರ ಅಣ್ಣಯ್ಯ ಮದುವೆಯಾದದ್ದು. ವೃತ್ತಿಯಿಂದ ನಿವೃತ್ತರಾದ ಬಳಿಕ ಹೊಳ್ಳರು ಸಾಗರದಲ್ಲಿ ಇರುವ ರಾಘವೇಂದ್ರ ಮಠದ ಉಸ್ತುವಾರಿಯನ್ನು ನೋಡಿಕೊಂಡು ಹೆಚ್ಚಿಗೆ ಅಲ್ಲಿಯೇ ಇರುತ್ತಿದ್ದರು.

 ರಾಧಕ್ಕ,  ಯಾರಾದರೂ ಸ್ನೇಹಿತರು ಸಂಬಂಧಿಕರು ಅವರ ಮನೆಗೆ ಹೋದಾಗ ಮಾಡುವ ಉಪಚಾರ ತೋರುವ ಸ್ನೇಹ ಹೋದ ನಮಗೆ ದಾಕ್ಷಿಣ್ಯವಾಗುವಷ್ಟು ಇರುತ್ತಿತ್ತು. ಅವರಿಗೆ ತುಂಬಾ ಮಾತಾಡಬೇಕು. ಒಮ್ಮೆ ಭೇಟಿಯಾದರೆ ಊರಲ್ಲಿರುವ ನಮ್ಮ ಎಲ್ಲಾ ಸಂಬಂಧಿಕರ ಬಗ್ಗೆ "ಹೋ ಅವರ್ ಎಲ್ಲಿದ್ರ್ ? ಈಗ ಎಂತ ಮಾಡತ್ರ್ ? ಎಂದು ಸಂಪೂರ್ಣವಾಗಿ ವಿವರವನ್ನು ಕೇಳಿ ಕೇಳಿ ತಿಳಿದುಕೊಳ್ಳುತ್ತಿದ್ದರು.

ಉಡುಪಿಯಲ್ಲಿ ಅವರ ಮಗಳ ಮನೆ ಇತ್ತು. ಆಗಾಗ ಅಲ್ಲಿಗೆ ಬಂದು ಇದ್ದು ಹೋಗುತ್ತಿದ್ದರು. ಹಾಗೆ ಬಂದಾಗ ಒಮ್ಮೊಮ್ಮೆ  ಅವರು ನನಗೆ ಅವರ ಅಳಿಯನಿಂದ ಪೋನ್ ಮಾಡಿಸಿ ಅವರನ್ನು ನನ್ನ ಮನೆಗೆ ಕರೆದುಕೊಂಡು ಹೋಗಲು ತಿಳಿಸುತ್ತಿದ್ದರು. ನಾನು ಹೋಗಿ, ನಮ್ಮ ಕೆಇಬಿ ವಸತಿಗೃಹಕ್ಕೆ ಅವರನ್ನು ಕರೆದುಕೊಂಡು ಬರುತ್ತಿದ್ದೆ. ಬರುವಾಗ ಸುಮ್ಮನೇ ಬರುತ್ತಿರಲಿಲ್ಲ. ಅವರೇ ಮಾಡಿದ ಅಪ್ಪೆಮಿಡಿ ಉಪ್ಪಿನ ಕಾಯಿ, ಮಾವಿನಕಾಯಿಯ ಹಿಂಡಿ, ಏನೂ ಇಲ್ಲದಿದ್ದರೆ ಅವರ ಮನೆಯಲ್ಲಿ ಮಾಡಿದ ತಿಂಡಿಯನ್ನು ಒಂದು ಸ್ಟೀಲ್ ಬಾಕ್ಸ್ ಗೆ ಹಾಕಿ ತಂದು ನಮಗೆ ಕೊಡುತ್ತಿದ್ದರು. ಅವರನ್ನು ನೋಡಿದಾಗ ನನಗೆ ನನ್ನ ಅತ್ತೆ ಭವಾನಿಯಮ್ಮನ ನೆನಪು ಆಗುತ್ತಿತ್ತು.

ನಾನು ಮಂಗಳೂರಿನಲ್ಲಿದ್ದಾಗ ಒಮ್ಮೆ ಆಫೀಸಿನ ಕೆಲಸದ ಮೇಲೆ ಸಾಗರಕ್ಕೆ ಹೋಗಬೇಕಾಗಿ ಬಂತು. ಅಲ್ಲಿಗೆ ಹೋದವನು ರಾಧಕ್ಕನನ್ನು ಮಾತಾಡಿಸಿಕೊಂಡು ಬರುವ. ನೋಡದೇ ತುಂಬಾ ಸಮಯವಾಯಿತು ಎಂದು ಅವರ ಮನೆಗೆ ಹೋಗಿದ್ದೆ. ಆಗ ಅವರು ವೃದ್ದಾಪ್ಯದಿಂದ ಹಾಸಿಗೆ ಹಿಡಿದ್ದಿದ್ದರು. ನನಗೀಗ ಏನೂ ಮಾಡಲು ಆಗುವುದಿಲ್ಲ ಮಗೂ, ಎಲ್ಲದಕ್ಕೂ ಇನ್ನೊಬ್ಬರನ್ನು ಅವಲಂಬಿಸಬೇಕಾಗಿದೆ. ನಾನು ಇನ್ನು ಹೋದರೂ ಅಡ್ಡಿ ಇಲ್ಲ. ನನಗೆ ಇನ್ನು ಯಾವ ಆಶೆಯೂ ಇಲ್ಲ. ಜೀವನದಲ್ಲಿ ನೋಡಬೇಕಾದ್ದೆಲ್ಲ ನೋಡಿಯಾಯಿತು ಎಂಬ ಸಂತೃಪ್ತಭಾವದಿಂದ ಮಾತಾಡಿದರು. ಮತ್ತು ಎಂದಿನಂತೆ, "ದಾಮೋದರ ಏನ್ ಮಾಡ್ತಾನೆ? ಊರಿಗೆ ಹೋಯಿದ್ಯಾ? ಅಕ್ಕ ಎಲ್ಲಿಪ್ದ್ ? ರಮೇಶನ ಹೆಂಡ್ತಿ ಮಾತಾಡಿದ್ಲಾ?" ಅವಳ ಮಕ್ಳು ಏನ್ ಮಾಡ್ತಾ ಇದ್ರು? ಹೀಗೆ ಒಬ್ಬೊಬ್ಬರನ್ನಾಗಿ ಎಲ್ಲರನ್ನೂ ವಿಚಾರಿಸಿಯಾಯಿತು. ಮನೆಯವರ ತಿಂಡಿ ಕಾಫಿಯ ಹೃದಯಸ್ಪರ್ಶಿ ಉಪಚಾರವಾಯಿತು.

  ಸ್ವಲ್ಪ ಹೊತ್ತು ಮಾತಾಡಿ, 'ನಾನು ಬರುತ್ತೇನೆ. ಹೀಗೆಯೇ ಮಾತಾಡಿಸಿಕೊಂಡು ಹೋಗುವ ಅಂತ ಬಂದೆ. ನಮ್ಮ ಆಫೀಸಿನ ಕೆಲಸಕ್ಕೆ ಬಂದದ್ದು ಆಫೀಸಿನವರದ್ದೇ ಆದ ಅತಿಥಿಗೃಹ ಇದೆ. ಅಲ್ಲಿಯೇ ಇದ್ದೇನೆ' ಎಂದು ಹೊರಟು, ಅವರಿಗೆ ನಮಸ್ಕರಿಸಲು ಹೋದೆ. ಅವರು ಪ್ರಯತ್ನ ಪಟ್ಟು ಮಲಗಿದಲ್ಲಿಂದ ಎದ್ದು ಕುಳಿತು, "ನಮಸ್ಕಾರ ಎಲ್ಲ ಬೇಡ ಮಾರಾಯ. ಎಲ್ಲಿ ನಿನ್ನ ಕೈ ಕೊಡ್ ಕಾಂಬ" ಎಂದು ಶೇಕ್ ಹ್ಯಾಂಡ್ ಕೊಡಲು ಕೈ ಮುಂದೆ ಮಾಡಿದರು. ನಾನು ಅವರ ಕೈಯನ್ನು ಹಿಡಿದುಕೊಂಡೆ. ಅವರ ಬೆಚ್ಚಗಿನ ಕೈಯನ್ನು ಹಿಡಿಯುತ್ತಿದ್ದಂತೆ ನನಗೆ ವಿದ್ಯುತ್ ಸಂಚಾರವಾದ ಹಾಗಾಯಿತು. ಆ ವಾತ್ಸಲ್ಯದ ಸ್ಪರ್ಶದಿಂದ ಮನಸ್ಸಿಗೆ ಯಾವುದೋ ಅನಿರ್ವಚನೀಯ ಆನಂದ. "ನಾನು ಹೀಂಗೆಯೇ ಆಶೀರ್ವಾದ ಮಾಡೂದ್". ಎಂದು ಎರಡೂ ಕೈಯಿಂದ ನನ್ನ ಕೈಯನ್ನು ಹಿಡಿದುಕೊಂಡು ಒತ್ತಿ ಒಳ್ಳೆಯದಾಗಲಿ ಎಂದು ಹೇಳಿದರು. ನಾನು ಆ ಅನುಭವದಿಂದ ಸುಧಾರಿಸಿಕೊಂಡು ನಗುತ್ತಾ ಮತ್ತೊಮ್ಮೆ "ಬರುತ್ತೇನೆ" ಎಂದು ಹೇಳಿ ಅಲ್ಲಿಂದ ಹೊರಟು ಬಂದೆ. ಬಹುಷ್ಯ ಅದರ ನಂತರ ಸ್ವಲ್ಪ ಸಮಯದಲ್ಲೇ ಅವರು ತೀರಿಕೊಂಡರು ಎಂದು ನೆನಪು.

ಹೀಗೆ ಕೈಯಿಂದ ಮುಟ್ಟಿ ತಲೆಯನ್ನು ಅಥವ ಬೆನ್ನನ್ನು ಸವರಿ ಆಶೀರ್ವಾದ ಮಾಡುವ ಬಹಳ ಮಂದಿ ಹಿರಿಯರನ್ನು ನಾನು ನೋಡಿದ್ದೇನೆ. ಕಾಲು ಮುಟ್ಟಿ ನಮಸ್ಕರಿಸುವಾಗ ಒಳ್ಳೆಯದಾಗಲಿ ಎಂದು ಹಾರೈಸಿ ತಲೆಯನ್ನು ಮುಟ್ಟಿ ನೇವರಿಸುವವರೂ ಇದ್ದಾರೆ. ಕೈಯನ್ನು ಬೆನ್ನ ಹಿಂದಿನಿಂದ ಬಳಸಿ ಹಿಡಿದು ಹತ್ತಿರಕ್ಕೆ ಎಳೆದು  ಎದೆಗೆ ಆನಿಸಿ ಹಿಡಿದು ಸಲಿಗೆ ತೋರುವವರೂ ಇದ್ದಾರೆ. ಆದರೆ ಸಾಮಾನ್ಯವಾಗಿ ನಮ್ಮ ಉಡುಪಿ ಕಡೆಯ ಸ್ವಾಮಿಗಳು ದೂರದಿಂದಲೇ ನಮಸ್ಕರಿಸಲು ಅವಕಾಶ ಮಾಡುತ್ತಾರೆ. ಮೈಲಿಗೆ ಅನ್ನುವುದಕ್ಕಿಂತ, ಸ್ಪರ್ಶಿಸಿದರೆ ಅವರ ಶಕ್ತಿ ಹರಿದು  ಆಶೀರ್ವಾದ ಮಾಡಿಸಿಕೊಂಡವರಿಗೆ ಹೋಗುತ್ತದೆ ಎನ್ನುವುದು ಒಂದು ನಂಬಿಕೆ. ರೇಖಿ ಮುಂತಾದ ಪ್ರಕಾರಗಳಲ್ಲಿ ಅದಕ್ಕೆ ಸಮರ್ಥನೆಯೂ ಇದೆ ಎಂದು ಓದಿದ ನೆನಪು.

 ಆದರೆ ಇದಕ್ಕೆ ವ್ಯತಿರಿಕ್ತವಾಗಿ ಬಾಳಿಗಾರು ಮಠದ ಸ್ವಾಮಿಯವರು ಉಡುಪಿಗೆ ಬಂದಾಗ ಮೊನ್ನೆ ಒಮ್ಮೆ ನಾನು ಅವರ ದರ್ಶನಕ್ಕೆ ಹೋಗಿದ್ದು, ಅವರಿಗೆ ನಮಸ್ಕರಿಸಿ ಎದ್ದು ಕುಳಿತಾಗ ಅವರು, ಹತ್ತಿರಕ್ಕೆ ಬಾಗಿ ನನ್ನ ಬೆನ್ನು ತಟ್ಟಿ ಆಶೀರ್ವದಿಸಿ ಪುಳಕಿತನನ್ನಾಗಿ ಮಾಡಿದರು. ಆ ಕ್ಷಣದಿಂದ ಅವರ ಬಗ್ಗೆ ಗೌರವದ ಜೊತೆಗೆ ಏನೋ ಒಂದು ರೀತಿಯ ಆಪ್ತತೆಯೂ ಹುಟ್ಟಿತು ಎಂದು ನನ್ನ ಮನಸ್ಸಿಗೆ ಅನ್ನಿಸಿತು.
ದಿನೇಶ ಉಪ್ಪೂರ:

ನನ್ನೊಳಗೆ 67

    ನಾನು ಚಿಕ್ಕವನಿರುವಾಗ, ಮನೆಯಲ್ಲಿ ಏನಾದರೂ ವಿಶೇಷ ಊಟದ ಕಾರ್ಯಕ್ರಮ ಆದಾಗ, ನೆಂಟರು ಇಷ್ಟರು ಬಂದರೆ, ಅವರು ಈಗಿನಂತೆ ಊಟದ ಸಮಯಕ್ಕೆ ಬಂದು ಊಟ ಆಗಿ ಕೈ ತೊಳೆದ ಕೂಡಲೆ " ಹ್ವಾಯ್ ನಂಗೆ ಒಂಚೂರ್ ಹರಬ್ ಇತ್ತ್ ಮರ್ರೆ, ನಾನ್ ಬತ್ತೆ. ಅಕ್ಕಾ" ಎಂದು ತಮ್ಮತಮ್ಮ ಮನೆಗೆ ಹೊರಡುತ್ತಿರಲಿಲ್ಲ. ಬೆಳಿಗ್ಗೆ ಹತ್ತು ಗಂಟೆಯ ಹೊತ್ತಿಗೆಲ್ಲ ಬಂದು "ಏನಾರೂ  ಕೆಲಸ ಮಾಡುಕ್ಕಿತ್ತಾ? ಎಂದು ಉಪಚಾರದ ಮಾತಾಡಿ, ಬಾಳೆ ಎಲೆ ಸರಿ ಮಾಡುವುದು. ಬಾವಿಯಿಂದ ನೀರು ತರುವುದು,ನಂತರ ಬಂದವರಿಗೆ ನೀರು ಬೆಲ್ಲದ ಪಾತ್ರೆ,  ವೀಳ್ಯದ ಎಲೆ ಪೆಟ್ಟಿಗೆ ನೀಡುವುದು ಮಾಡುತ್ತಿದ್ದರು.  ಚಾವಡಿಯಲ್ಲಿ ಬಣ್ಣದ ಚಾಪೆ ಹಾಸಿ ಬನ್ನಿ ಬನ್ನಿ ಎಂದು ಉಪಚರಿಸುತ್ತಿದ್ದರು. ಏನೂ ಇಲ್ಲದಿದ್ದರೆ ಬಂದ ಇತರರ ಜೊತೆ ಲೋಕಾಭಿರಾಮವಾಗಿ ಸುಖಕಷ್ಟ ಮಾತಾಡುವುದು ಮಾಡುತ್ತಿದ್ದರು.  ಊಟದ ನಂತರವೂ ಕೆಲವರು ಎರಡನೇ ಊಟದ ಪಂಕ್ತಿಗೆ ಬಡಿಸುವುದೂ ಇತ್ತು. ನಂತರ ಉಳಿದ ಪದಾರ್ಥಗಳ ವಿಲೆವಾರಿ, ಸಿಹಿ ಖಾರತಿಂಡಿಗಳ ಹಂಚಿಕೆಗಳಿಗೆ ನೆರವಾಗುತ್ತಿದ್ದರು. ಕೆಲವು ಬಂಧುಗಳು ನಮ್ಮ ಮನೆಯಲ್ಲಿಯೇ ಉಳಿದುಕೊಂಡು ರಾತ್ರಿಯೂ ಇದ್ದು ಮರುದಿನ ಮನೆಗೆ ಹೋಗುತ್ತಿದ್ದರು. ಅವರಿಗಾಗಿ ರಾತ್ರಿ ಭಜನೆಯೋ ತಾಳಮದ್ದಲೆಯೋ ಹರಿಕತೆಯೋ ಏನೂ ಇಲ್ಲದಿದ್ದರೆ ಒಂದು ಸಣ್ಣ ಇಸ್ಪೀಟು ಆಟದ ವ್ಯವಸ್ಥೆ ಇರುತ್ತಿತ್ತು. ನಾವು, ಬದಿಯಲ್ಲಿ ಇದ್ದು ಅವರಿಗೆ ಚಾ,  ಕುಡಿಯಲು ನೀರು, ವೀಳ್ಯ ಸರಬರಾಜಿಗೆ ಓಡಾಡಿ ಸಂಭ್ರಮಿಸುವುದಿತ್ತು.

 ನನ್ನ ನೆನಪಿದ್ದ ಹಾಗೆ ಹರಿಕತೆಯನ್ನು ನಾನು ಮೊದಲು ನೋಡಿದ್ದು ನಮ್ಮ ಮುಧೂರಿಯ ಸಾವಿತ್ರಮ್ಮನ ಮನೆಯಲ್ಲಿ. ಆ ದಿನ ಅಲ್ಲಿ ಮಧ್ಯಾಹ್ನ ಏನೋ ವಿಶೇಷ ಊಟದ ಕಾರ್ಯಕ್ರಮ ಇತ್ತು. ರಾತ್ರಿ ಹರಿಕತೆ. ಮಾ. ನಾರಾಯಣ ಹೆಬ್ಬಾರ್ ಎನ್ನುವವರನ್ನು ಹರಿಕತೆ ಮಾಡಲು ಕರೆಸಿದ್ದರು. ಅವರ ಮನೆ ಗೋಳಿಅಂಗಡಿ ಹತ್ತಿರ ಇತ್ತು.

 ಸಾವಿತ್ರಮ್ಮನ ಮನೆಯ ಎದುರು ದೊಡ್ಡ ದೊಡ್ಡ ಬಯಲು ಗದ್ದೆಗಳು ಸುತ್ತ ಎಲ್ಲಿ ನೋಡಿದರೂ ಹಸಿರೋ ಹಸಿರು  ವಿಶಾಲವಾದ ಜಾಗ ಅವರ ಮನೆಯ ಹೊರ ಅಂಗಳದಲ್ಲಿ ಒಂದು ಮಡಲಿನ ದೊಡ್ಡ ಚಪ್ಪರ ಹಾಕಿ ಕೆಳಗೆ ಚಾಪೆಗಳನ್ನು ಹಾಸಿದ್ದರು. ಆಗ ಮೂರೋ ನಾಲ್ಕೋ ಗ್ಯಾಸ್ ಲೈಟ್ ಬೆಳಕಿನಲ್ಲಿ ಹರಿಕತೆ ತಡ ರಾತ್ರಿಯಲ್ಲಿ ರಾತ್ರಿ ಊಟ ಆದ ನಂತರ ಪ್ರಾರಂಭವಾಗಿತ್ತು. ಹರಿಕತೆಯಾಗುವಾಗ ಕೆಲವರು ಕುಳಿತು ನೋಡುತ್ತಿದ್ದರು. ಕೆಲವರು ಹಗಲಿನಲ್ಲಿ ಕೆಲಸ ಮಾಡಿ ದಣಿದವರು ಅಲ್ಲಿಯೇ ಪಕ್ಕಕ್ಕೆ ಒರಗಿ ನಿದ್ದೆ ಮಾಡುತ್ತಿದ್ದರು. ಮಕ್ಕಳು ಕಚಕಚ ಮಾತಾಡುತ್ತಿದ್ದವು. ಅದರ ಮಧ್ಯ ಅವರು ಮಕ್ಕಳಿಗೆ "ಸುಮ್ಮನಿರಿ ಮಕ್ಳೆ" ಎಂದು ಗದರಿಸಿ ಜೋರು ಸ್ವರದಲ್ಲಿ ಹರಿಕತೆ ಶುರುಮಾಡಿದ್ದರು.

ಅವರು ಒಂದು ಉಪಕತೆ ಹೇಳಿದ್ದು ನನಗಿನ್ನೂ ನೆನಪಿದೆ. ಅದೇನೆಂದರೆ, ಹರಿಕತೆ ಮುಗಿಸಿ ಮನೆಗೆ ಹೋದ ಮೇಲೆ ಒಬ್ಬರನ್ನು ಯಾರೋ ಕೇಳಿದರಂತೆ. "ಹರಿಕತೆ ಹ್ಯಾಂಗಾಯ್ತೆ?" ಅಂತ. ಅದಕ್ಕೆ ಹರಿಕತೆಗೆ ಹೋದವರು "ಹರಿಕತೆ ಉಪ್ಪುಪ್ಪಾಯ್ತು" ಎಂದರಂತೆ. "ಹಾಂಗಂದರೆ ಎಂತ" ಅಂತ ಅವರು ಕೇಳಿದ್ದಕ್ಕೆ ಇವರು "ಗಡದ್ದಾಯಿತು". ಅಂದರಂತೆ ಆದರೆ ಆದದ್ದೇನು? ಅಂದರೆ, ಇವರು ಹರಿಕತೆಗೆ ಹೋದವರು ಸ್ವಲ್ಪಹೊತ್ತು ಹರಿಕತೆ ನೋಡಿ ಅಲ್ಲಿಯೇ ಬದಿಯಲ್ಲಿ ಮಲಗಿದರು. ಮಲಗಿದ್ದು ನಾಯಿ ಮಲಗುವ ಗೋಣಿಯ ಮೇಲೆ. ನಾಯಿ ಬಂದು ನೋಡಿತು. ಇವರು ಬಾಯಿ ಕಳೆದುಕೊಂಡು ಗೊರಕೆ ಹೊಡೆಯುತ್ತಿದ್ದಾರೆ. ಅದು ಕುಯ್ ಕುಯ್ ಎಂದು ಏಳಲು ತಿಳಿಸಿತು. ಇವರು ಮತ್ತೂ ದೊಡ್ಡದಾಗಿ ಬಾಯಿಯಲ್ಲಿ ಹೂಸು ಬಿಟ್ಟು ಸ್ವರ ಮಾಡಿದರು. ಅದಕ್ಕೆ ಸಿಟ್ಟು ಬಂದು ಒಂದು ಕಾಲನ್ನು ಎತ್ತಿ ಅವರ ಮುಖದ ಮೇಲೆ ತೀರ್ಥ ಪ್ರೋಕ್ಷಣೆ ಮಾಡಿ ಹೊರಟು ಹೋಯಿತಂತೆ. ಹಾಗಾಗಿ ಅವರು ಹರಿಕತೆ ಉಪ್ಪುಪ್ಪಾಯಿತು ಅಂದರು ಅಂತ ಕತೆ. ಇಂತಹ ತುಂಬಾ ಕತೆಗಳನ್ನು ಅವರು ಅಂದು ಹೇಳಿದ್ದರು.

ಒಂದು ಕಾಲದಲ್ಲಿ ಹರಿಕತೆಗೆ ತುಂಬಾ ಜನ ಸೇರುತ್ತಿದ್ದರು. ಮಲ್ಪೆ ರಾಮದಾಸ ಸಾಮಗರ ಹರಿಕತೆ ಶಂಕರನಾರಾಯಣ ದೇವಸ್ಥಾನದಲ್ಲಿ ವಾರಗಟ್ಟಳೆ ನಡೆಯುತ್ತಿತ್ತು. ರಾಮಾಯಣ, ಭಾಗವತ, ಮಹಾಭಾರತ ಇತ್ಯಾದಿ ಕತೆಗಳನ್ನು ಒಂದೊಂದು ದಿವಸ ಇಟ್ಟು ಅದರ ಕತೆಯನ್ನು ಒಂದು ದೊಡ್ಡ ಪೀಠಿಕೆಯೊಂದಿಗೆ ಪ್ರಾರಂಭಿಸುತ್ತಿದ್ದರು. ನಾವು ಅದನ್ನು ಕೇಳಲು ಮನೆಯಿಂದ ನಡೆದುಕೊಂಡೇ ಅಲ್ಲಿಗೆ ಹೋಗಿ ಹರಿಕತೆಯನ್ನು ಕೇಳಿ ರಾತ್ರಿ ತುಂಬಾ ತಡವಾದರೆ ಅಲ್ಲಿಯೇ ದೇವಸ್ಥಾನದಲ್ಲಿ ಮಲಗಿ ಬೆಳಿಗ್ಗೆ ಮರಳುತ್ತಿದ್ದೆವು.

ಶೇಣಿಯವರು ದೊಡ್ಡ ಸಾಮಗರಂತವರಾದರೆ ಕತೆಗಿಂತ ಪೀಠಿಕೆಯೇ ದೊಡ್ಡದಿರುತ್ತಿತ್ತು. ಪೀಠಿಕೆಯಲ್ಲಿ ಅವರು ಅಂದಿನ ಕತೆಯ ಸಂದರ್ಭ ಅದರ ಹಿನ್ನೆಲೆ ಕತೆಯ ಮಹತ್ವ, ಕತೆ ಸಾರುವ ನೀತಿಯ ಬಗ್ಗೆ ಹಲವು ಉದಾಹರಣೆಗಳನ್ನು ಕೊಟ್ಟು ವಿವರಿಸುತ್ತಿದ್ದರು. ಆಮೇಲೆ ಕತೆಯನ್ನು ಭಾವನಾತ್ಮಕವಾಗಿ ಹೇಳುತ್ತಾ ಮಧ್ಯ ಮಧ್ಯ ದಾಸರ ಪದಗಳನ್ನು, ಸ್ವರಚಿತ ಪದ್ಯಗಳನ್ನು ಹೇಳುತ್ತಾರೆ. ಅಲ್ಲಲ್ಲಿ ಉಪಕತೆಗೂ, ಹಾಸ್ಯ ರಂಜನೆಗಳೂ ಆಗಮಿಸಿದ ಪ್ರೇಕ್ಷಕರು ನಿಂತರೆ,  ಹೊರಟರೆ, ಮಲಗಿದರೆ, ಮಾತಾಡುತ್ತಿದ್ದರೆ ಅವರಿಗೆ ಮಾತಿನಲ್ಲೇ ಸಾಂದರ್ಭಿಕವಾಗಿ ಚಮತ್ಕಾರವಾಗಿ ಚುಚ್ಚಿ ಮಾತಾಡುವುದೂ ಇತ್ತು. ರಾಮದಾಸ ಸಾಮಗರಂತವರು ಎಷ್ಟು ಭಾವನಾತ್ಮಕವಾಗಿ ಕೆಲವು ಪಾತ್ರಗಳನ್ನು ಚಿತ್ರಿಸುತ್ತಿದ್ದರೆಂದರೆ ಅವರು ಪಾತ್ರದಲ್ಲೇ ತನ್ಮಯರಾಗಿ ಭಾವಪರವಶರಾಗಿ ಮಾತನಾಡಿ ನಮ್ಮ ಕಣ್ಣಿನಲ್ಲೂ ನೀರು ಬರುವಂತೆ ಮಾಡುತ್ತಿದ್ದರು. ಪ್ರಾಸಬದ್ದವಾದ ಪದಪುಂಜಗಳನ್ನು ವೇಗವಾಗಿ ಹಾಡಿ ವಿಸ್ಮಯವನ್ನು ಮೂಡಿಸುತ್ತಿದ್ದರು.
ನಾವು ಅಂತಹ ಪದ್ಯಗಳನ್ನು ಉರುಹೊಡೆದು ಮರುದಿನ ಪ್ರಯೋಗ ಮಾಡಲು ಪ್ರಯತ್ನಿಸಿ ನಗೆಪಾಟಲಿಗೀಡಾಗುತ್ತಿದ್ದೆವು.

ಈಗ ಹರಿಕತೆ ಮಾಡುವವರೂ ಕಡಿಮೆ ಮಾಡಿಸಿದರೆ ನೋಡಲು ಬರುವವರೂ ಕಡಿಮೆ. ಒಮ್ಮೆ ನಾನು ವಾಸುದೇವ ಸಾಮಗರನ್ನು ಹರಿಕತೆಗೆ ಮಾಡಲು ಬರುತ್ತೀರಾ ಎಂದು ಕೇಳಿದಾಗ ಅವರು ಈಗ ಹರಿಕತೆ ಯಾರಿಗೆ ಬೇಕು ಮರ್ರೆ? ಕಾಂಬುಕೆ ಯಾರ್ ಬತ್ರು? ನಿಮಗೆ ಬೇರೆ ಕೆಲಸ ಇಲ್ಯಾ? ಎಂದು ಹೇಳಿ ನಿರಾಶೆ ಮಾಡಿದ್ದರು.
ದಿನೇಶ ಉಪ್ಪೂರ:

ನನ್ನೊಳಗೆ 66

   ತಟ್ಟುವಟ್ಟು ವಿಶ್ವನಾಥ ಜೋಯಿಸರ ಅಮ್ಮನ ಅಪ್ಪಯ್ಯ ವಾಸುದೇವ ಭಟ್ಟರೂ ನನ್ನ ಅಜ್ಜಯ್ಯ ಶ್ರೀನಿವಾಸ ಉಪ್ಪೂರರು ಒಳ್ಳೆಯ ಸ್ನೇಹಿತ ರಾಗಿದ್ದರಂತೆ. ಅವರ ಮನೆಯಲ್ಲಿ ಏನಾದರೂ ವಿಶೇಷ ಕಾರ್ಯಕ್ರಮ ಇದ್ದರೆ ರಾತ್ರಿ ಅವರ ಮನೆಯಲ್ಲಿ ತಾಳಮದ್ದಲೆಯೋ ಪುರಾಣ ಪ್ರವಚನವೋ ಇರುತ್ತಿತ್ತು. ಸಂಜೆ ಹೊತ್ತಿಗೆ ಮಾತನಾಡಿಸಲು ಹೋದರೆ ರಾತ್ರಿ ಊಟಮಾಡಿಕೊಂಡೇ ಬರುತ್ತಿದ್ದರು.ಅವರದು ದೊಡ್ಡದೊಡ್ಡ ಕಂಬಗಳ ಚಾವಡಿ ಜಗಲಿ ಪಡಸಾಲೆ ಓರಿ ಕೊಟ್ಟಿಗೆ ಅಂತ ಎಲ್ಲ ಇರುವ ಹಿಂದಿನ ಕಾಲದ ವಿಶಾಲವಾದ ದೊಡ್ಡ ಮನೆ.

ತಟ್ಟುವಟ್ಟು ವಿಶ್ವನಾಥ ಜೋಯಿಸರು ಪ್ರಸಿದ್ಧ ಜ್ಯೋತಿಷಿಗಳು. ನಮ್ಮ ಮನೆಯಲ್ಲಿ ಏನಾದರೂ ಸಮಸ್ಯೆಯಾಗಿ ಜ್ಯೋತಿಷ್ಯ ಕೇಳಬೇಕಾದಲ್ಲಿ ಗಂಡು ಹೆಣ್ಣು ಕೂಡಿಕೆಗೆ ಜಾತಕ ತೋರಿಸಬೇಕಾದಲ್ಲಿ ಅಪ್ಪಯ್ಯ ಅವರಿಗೇ ತೋರಿಸಿ ಕೇಳುತ್ತಿದ್ದುದಾಗಿತ್ರು. ಅವರ ಮನೆಯಲ್ಲಿ ಎಪ್ರಿಲ್ ಮೇ ಸಮಯದಲ್ಲಿ ರಾಮನವಮಿಯನ್ನು ಗಡದ್ದಾಗಿ ಆಚರಿಸುತ್ತಿದ್ದರು. ಅದು ರಾತ್ರಿಯಲ್ಲಿ ಆಗುವ ಕಾರ್ಯಕ್ರಮ. ಊರಿನ ಆಸುಪಾಸಿನ ಪರವೂರಿನ ಬ್ರಾಹ್ಮಣರ ಮನೆಗಳಿಗೆಲ್ಲ ಅವರು ಆಳುಗಳ ಮೂಲಕ ಒಂದು ಸಣ್ಣ ಚೀಟಿಯಲ್ಲಿ ರಾಮನವಮಿಗೆ ಬನ್ನಿ ಎಂದು ಬರೆದು ಹೇಳಿಕೆ ಕಳಿಸುತ್ತಿದ್ದರು.

ಅವರು ಪಂಚಾಂಗಕರ್ತರೂ ಹೌದು. ಪ್ರತೀ ವರ್ಷ ಅವರು ತಯಾರಿಸುತ್ತಿದ್ದ ಪಂಚಾಂಗ ನಮಗೆಲ್ಲ ಉಚಿತವಾಗಿ ಕೊಡುತ್ತಿದ್ದರು.. ಹಾಗಾಗಿ ನಮ್ಮ ಮನೆಯಲ್ಲಿ ಅವರ ಮನೆಯ ರಾಮನವಮಿಯನ್ನು ಪಂಚಾಂಗ ತರಲೂ ಆಯಿತು ಎಂದು ಮಿಸ್ ಮಾಡಿಕೊಳ್ಳುತ್ತಿರಲಿಲ್ಲ. ರಾತ್ರಿ ಟಾರ್ಚೋ, ಸೂಡಿಯೋ ಹಿಡಿದುಕೊಂಡು ಅದನ್ನು ಮುಂದೆ ಹಿಂದೆ ಆಡಿಸುತ್ತಾ, ಹಾಡಿಯಲ್ಲಿ ಗದ್ದೆಬಯಲಿನ ಕಂಟದಲ್ಲಿ ಸೂಡಿಯ ಬೆಳಕಿನಲ್ಲಿ  ನಡೆದುಕೊಂಡು ಅವರ ಮನೆಗೆ ಹೋಗುವುದೇ ನಮಗೊಂದು ಸಂಭ್ರಮ. ನಾವು ಆಟಕ್ಕೆ ಹೋಗುತ್ತಿದ್ದುದೂ ಹಾಗೆಯೇ.

ಜೋಯಿಸರ ಮನೆಯಲ್ಲಿ ತುಂಬಾ ಹೊತ್ತಿನವರೆಗೆ ಪೂಜೆಯಾಗಿ ತಡರಾತ್ರಿಯಲ್ಲಿ ಫಲಹಾರ ಇರುತ್ತಿತ್ತು. ಊಟ ಇಲ್ಲ. ಆದರೆ ಊಟಕ್ಕಿಂತ ಹೆಚ್ಚು ಬಗೆಯ ತಿಂಡಿಗಳು, ಬೇಳೆ ಕಾಳುಗಳು, ಬಗೆಬಗೆಯ ಹಣ್ಣುಗಳು ಎರಡೆರಡು ಪಾಯಸ, ಅವಲಕ್ಕಿ ಮೊಸರು ಮಾಡಿ ಗಡದ್ದು ಮಾಡುತ್ತಿದ್ದರು. ಅವರ ಮನೆಯಲ್ಲಿ ಅವರ ಅಮ್ಮ ಹಾಗೂ ಅವರ ಹತ್ತಿರ ಜ್ಯೋತಿಷ್ಯ ಕಲಿಯಲು ಬಂದ ವಿದ್ಯಾರ್ಥಿಗಳು ಒಬ್ಬಿಬ್ಬರು ಮತ್ತು ಅವರು ಮಾತ್ರ . ಅವರು ತುಂಬಾ ತಡವಾಗಿ ಮದುವೆ ಆದದ್ದು.

ಒಮ್ಮೆ ಅವರನ್ನು ಮಾತಾಡಿಸಿಕೊಂಡು ಬರಲು ಅವರ ಮನೆಗೆ ಹೋದಾಗ, ಅವರ ಮನೆಯ ಒಳಗಿನ ಕೆಲಸಕ್ಕೆ ಯಾರಾದರೂ ಒಬ್ಬ ಬ್ರಾಹ್ಮಣ ಹೆಂಗಸು ಬೇಕಿತ್ತು ಎಂದು  ಅಪ್ಪಯ್ಯನಿಗೆ ಹೇಳಿದರಂತೆ. ಅಪ್ಪಯ್ಯನ ಮೇಳ ಶೃಂಗೇರಿಯ ಬದಿಗೆ ಹೋದಾಗ, ಅಲ್ಲಿ ಅಭಿಮಾನಿಯೊಬ್ಬರಲ್ಲಿ ಮಾತಾಡುತ್ತಾ, ಅಪ್ಪಯ್ಯ ಈ ವಿಷಯ ಹೇಳಿದರು. ಅವರ ಗುರುತಿನವರೊಬ್ಬ ಹೆಂಗಸು ಇದ್ದು ಅವರು ಬರಲು ಒಪ್ಪಿದ್ದು ಆಯಿತು. ಆದರೆ "ಸ್ವಲ್ಪ ಮಡಿ ಮೈಲಿಗೆ ಇರುವವರು"  ಅಂದರಂತೆ. ಆಗ ಅಪ್ಪಯ್ಯ "ಸರೀ ಆಯಿತು. ಅದು ಜೋಯಿಸರ ಮನೆಯೇ. ಅವರಿಗೂ ಅಂತಹ ಜನವೇ ಬೇಕಾದ್ದು. ಪೂಜೆ ಪುನಸ್ಕಾರ ಅಲ್ಲಿ ಯಾವಾಗಲೂ ಆಗುತ್ತಿರುತ್ತದೆ ". ಎಂದು ಅವರನ್ನು ಕರೆದುಕೊಂಡು ಬಂದು ಜೋಯಿಸರ ಮನೆಯಲ್ಲಿ ಬಿಟ್ಟರು.

ಸ್ವಲ್ಪ ದಿನ ಆಗಿರಬಹುದು. ಇನ್ನೊಮ್ಮೆ ಅಪ್ಪಯ್ಯ ನಮ್ಮ ಮನೆಗೆ ಬರುವವರು, ಆ ಹೆಂಗಸು ಹೇಗಿದ್ದಾರೆ ಅಂತ ನೋಡುವ ಅಂತ ದಾರಿಯಲ್ಲಿ ಇರುವ ಆ ಜೋಯಿಸರ ಮನೆಗೆ ಹೋದರು. ಜೋಯಿಸರು ನಕ್ಕು "ಇದು ಆಗುವುದಲ್ಲ ಮರಾಯ್ರೆ. ಇದು ಮಡಿ ಮೈಲಿಗೆ ಅಂದರೆ ಭಯಂಕರ. ಅವರು ನಡೆಯುವಾಗಲೆಲ್ಲ ಮುಂದೆ ನೆಲದ ಮೇಲೆ ಸಗಣಿಯ ನೀರು ಚಿಮುಕಿಸುತ್ತಾ ನಡೆಯುತ್ತಾರೆ. ಅವರ ಧ್ಯಾನ ಪೂಜೆ ಭಜನೆಯ ವ್ಯಾಪಾರದಲ್ಲಿ ನಾವೇ ಅವರ ಸೇವೆ ಮಾಡುವುದಾಯಿತು". ಎಂದರು. ಅಪ್ಪಯ್ಯ ನಕ್ಕು ಪುನಹ ಅವರನ್ನು ಶೃಂಗೇರಿಗೆ ಕರೆದುಕೊಂಡು ಹೋಗಿ ಬಿಟ್ಟು ಬರಬೇಕಾಯಿತು.

ಜೋಯಿಸರು ಬಹಳ ಓದಿದವರು. ವೇದಾಧ್ಯಯನ ಮಾಡಿದವರು. ಊರಿನ ಎಲ್ಲರಿಗೂ ಬೇಕಾದವರಾಗಿದ್ದರು. ಚಿಮಣಿ ಎಣ್ಣೆಯ ದೀಪ, ಹೆಚ್ಚೆಂದರೆ ಗ್ಯಾಸ್ಲೈಟ್ ಮಾತ್ರ ಇದ್ದ ಆ ಕಾಲದಲ್ಲಿ, ಮನೆಯ ಹತ್ತಿರದವರೆಗೆ ರಸ್ತೆ ಆಗಬೇಕು, ಕರೆಂಟ್ ಬರಬೇಕು ಎಂದು ಕನಸು ಕಂಡು ಆ ಬಗ್ಗೆ ಬಹಳ ಶ್ರಮಿಸಿದರು. ಅಪ್ಪಯ್ಯನೂ ಅವರ ಜೊತೆ ಕೈಗೂಡಿಸಿದರು. ನಮ್ಮ ಇಡೀ ರಾಷ್ಟ್ರದಲ್ಲಿ ಕರೆಂಟ್ ಇರಲಿಲ್ಲ. ಆದರೆ ಆಗ ಇದ್ದ ಪಂಪುಸೆಟ್ಟು ಸ್ಕೀಮ್ ಒಂದರಲ್ಲಿ ಕನಿಷ್ಟ ಮೂರು ಜನ ಒಟ್ಟಿಗೇ ಸೇರಿದರೆ ಮಾತ್ರಾ ಕಂಬ ಹಾಕಿ ಎಷ್ಟು ದೂರ ಆದರೂ ತಂತಿ ಎಳೆದು ವಿದ್ಯುತ್ ಕೊಡುತ್ತಿದ್ದರು. ಕೃಷಿ ಪಂಪ್ ಗೆ ಕರೆಂಟ್ ಬಂದರೆ ಮನೆಗೂ ತೆಗೆದುಕೊಳ್ಳಬಹುದು ಎಂದು ಅವರ ಲೆಕ್ಕಾಚಾರ. ಆಗ ನಮ್ಮ ಮನೆಗೆ ಬರಲು ಇಪ್ಪತ್ತೊಂದು ಕಂಬ ಹಾಕಬೇಕಾಗಿತ್ತು. ಆದರೆ ನನ್ನ ಅಪ್ಪಯ್ಯ ಮತ್ತು ಆ ಜೋಯಿಸರು ಬಿಟ್ಟರೆ ಮೂರನೆಯ ಜನ ಅವರಿಗೆ ಸಿಗಲೇ ಇಲ್ಲ. ಹಾಗಾಗಿ ಅಪ್ಪಯ್ಯ ಬದುಕಿರುವವರೆಗೂ ನಮ್ಮ ಮನೆಗೆ ಕರೆಂಟ್ ಬರಲೇ ಇಲ್ಲ.

ಜೋಯಿಸರು ಊರಿಗೆ ಸ್ಥಿತಿವಂತರಾಗಿದ್ದರು. ಸಹಾಯ ಕೇಳಿ ಅವರ ಮನೆಗೆ ಹೋದರೆ ನಿರಾಶೆಯಾಗಿ ಬರಬೇಕಾಗಿರಲಿಲ್ಲ. ಮಾರ್ವಿ ರಾಮಕೃಷ್ಣ ಹೆಬ್ಬಾರರ ಮತ್ತೊಬ್ಬ ಹೆಂಡತಿ ಅವರ ಜಾಗದಲ್ಲಿಯೇ ಸ್ವಲ್ಪ ಆಚೆ ಮಕ್ಕಿಯಲ್ಲಿ ಹುಲ್ಲಿನ ಮನೆ ಕಟ್ಡಿಕೊಂಡು ಇದ್ದು ಅವರ ಮನೆಯ ಕೆಲಸ ಮಾಡಿಕೊಂಡು ಮಕ್ಕಳೊಂದಿಗೆ ಬಹಳ ಸಮಯದ ವರೆಗೆ ಇದ್ದರು.

 ಮೊನ್ನೆ ಮೊನ್ನೆ ಅಪ್ಪಯ್ಯ ನ ಯಕ್ಷಗಾನ ಅಧ್ಯಯನ ಪುಸ್ತಕವನ್ನು ಪುನರ್ ಮುದ್ರಣ ಮಾಡುವ ಕೆಲಸಕ್ಕೆ ನಾನು ಮಂಗಳೂರಿನ ಗಣೇಶ ಪ್ರಿಂಟರ್ಸ್ ಗೆ ಹೋಗಿದ್ದಾಗ ಅಲ್ಲಿಯ ಪ್ರೆಸ್ ನ ಯಜಮಾನರು ಆ ವಿಶ್ವನಾಥ ಜೋಯಿಸರನ್ನು ತುಂಬಾ ನೆನೆಪಿಸಿಕೊಂಡರು. ಅವರ ಪಂಚಾಂಗವನ್ನು ಅಲ್ಲಿಯೇ ಪ್ರಿಂಟ್  ಮಾಡಿಸುತ್ತಿದ್ದರಂತೆ. ಒಮ್ಮೆ ತಿದ್ದುಪಡಿ ಗೆ ಬಂದರೆ ಎಲ್ಲ ತಿದ್ದುಪಡಿಗಳನ್ನೂ ನೋಟ್ ಮಾಡಿಕೊಂಡು ಬೆಳಿಗ್ಗೆ ಬಂದು ರಾತ್ರಿಯವರೆಗೆ ಇದ್ದು ಒಂದೇ ದಿನದಲ್ಲಿ ಮುಗಿಸುತ್ತಿದ್ದರಂತೆ. ಅವರನ್ನು ನೋಡಿದರೇ ಕಾಲಿಗೆ ಬಿದ್ದು ನಮಸ್ಕಾರ ಮಾಡಬೇಕು ಅನ್ನಿಸುತ್ತಿತ್ತು ಎಂದು ಅವರು ಹೇಳಿದರು. ಅಂತಹ ವ್ಯಕ್ತಿತ್ವ. ಮಧ್ಯಾಹ್ನ ಒಂದು ಎಳನೀರು. ಅಷ್ಟೇ ಅವರ ಆಹಾರ. ಇಂತಹ ದಿನ ಬರಬಹುದಾ? ಎಂದು ಒಂದು ದಿನ ನಿಶ್ಚಯ ಮಾಡಿದ ಮೇಲೆ ಅವರು ತಪ್ಪದೇ ಅಂದು ಬರುತ್ತಿದ್ದರಂತೆ.

ಒಮ್ಮೆ  ದೀಪಾವಳಿಯ ಅಂಗಡಿಪೂಜೆಗೆಂದು ಕುಂದಾಪುರಕ್ಕೆ ಹೋದವರು ಮನೆಗೆ ಬಂದು,ಅವರ ಮನೆಯ ದೇವರ ಕೋಣೆಯಲ್ಲಿ ಕುಳಿತವರು  ಅಲ್ಲಿಯೇ ಹೃದಯಾಘಾತದಿಂದ ನಿಧನರಾದರು.