ಮಂಗಳವಾರ, ಫೆಬ್ರವರಿ 20, 2018

ದಿನೇಶ ಉಪ್ಪೂರ:

*ನನ್ನೊಳಗೆ -75*

ಕೋಟದ ಬಸ್ ಸ್ಟಾಂಡಿನ ಸ್ವಲ್ಪ ಮುಂದೆ ಹೈ ವೇಯಲ್ಲಿಯೇ ಉಡುಪಿಯ ಕಡೆಗೆ ಹೋದರೆ ಅಲ್ಲಿಯೇ ಎಡಬದಿಯಲ್ಲಿ ಇರುವ ದೊಡ್ಡ ದೇವಸ್ಥಾನವೇ ಕೋಟದ ಹಿರೇ ಮಾಲಿಂಗೇಶ್ವರ ದೇವಸ್ಥಾನ. ಅದರ ಉತ್ತರದ ಬದಿಯಲ್ಲಿ ರಸ್ತೆಯ ಪಕ್ಕದಲ್ಲೇ ಒಂದು ದೊಡ್ಡ ಕೆರೆ ಇದೆ. ಅದರ ಪಕ್ಕದ ಕಟ್ಟಡದಲ್ಲಿ ಕೆಇಬಿ ಆಫೀಸು ಇತ್ತಂತೆ . ಹತ್ತಿರವೇ ಡಾ. ಶಿವರಾಮ ಕಾರಂತರ ಮೂಲ ಮನೆಯೂ ಇತ್ತು.

ಆ ಹಿರೆಮಾಲಿಂಗ ದೇವಸ್ಥಾನದ ಪೌಳಿಯ ಉಪ್ಪರಿಗೆಯ ಮೇಲೆ ಮಳೆಗಾಲದ ಸುಮಾರು ಅಗಸ್ಟ್ ತಿಂಗಳಿನಿಂದ ಅಕ್ಟೋಬರ್ ತಿಂಗಳವರೆಗೆ ಯಕ್ಷಗಾನದ ಭಾಗವತಿಕೆ ತರಬೇತಿಯ ಕ್ಲಾಸ್ ನಡೆಯುತ್ತಿದ್ದುದು. ನನ್ನ ಅಪ್ಪಯ್ಯ ಅಲ್ಲಿ ಭಾಗವತಿಕೆಯ ಕ್ಲಾಸ್ ಮಾಡುತ್ತಿದ್ದರು. ನಾನೂ ಕೋಟದ ಅಕ್ಕನ ಮನೆಗೆ ಹೋದಾಗ, ಆಗಾಗ ಅಪ್ಪಯ್ಯನ ಜೊತೆಗೆ ಹೋಗಿ ಅಲ್ಲಿ ಕುಳಿತುಕೊಳ್ಳುತ್ತಿದ್ದೆ. ಅಪ್ಪಯ್ಯ ಹುಡುಗರಿಗೆ ಭಾಗವತಿಕೆಯನ್ನು ಹೇಳಿಕೊಡುವುದನ್ನು ಕೇಳುತ್ತಿದ್ದೆ. ಪದೇ ಪದೇ ಅಪ್ಪಯ್ಯ ಒಂದು ಪದ್ಯದ ಸಾಲನ್ನು ರಾಗವಾಗಿ ಹೇಳುವುದು, ಮಕ್ಕಳು ಅದನ್ನು ಒಟ್ಟಾಗಿ ಪುನರಾವರ್ತನೆ ಮಾಡಿ ಹೇಳುವುದು. ನಂತರ ಒಬ್ಬೊಬ್ಬರೇ ಅದೇ ಸಾಲನ್ನು ಹೇಳುವುದು. ತಪ್ಪಿದಲ್ಲಿ ಅಪ್ಪಯ್ಯ ಅದನ್ನು ತಡೆದು ಪುನಃ ಹೇಳುವುದು. ತಾಳಾಭ್ಯಾಸ, ಸಪಸ ಕಲಿಕೆ ಶೃತಿ ಲಯ ರಾಗಜ್ಞಾನ. ಅದನ್ನು ಕೇಳುತ್ತಾ ಕುಳಿತರೆ ಸಮಯ ಹೋದದ್ದೇ ಗೊತ್ತಾಗುತ್ತಿರಲಿಲ್ಲ. ಇರಲಿ.

ಸುಮಾರು 1982 ರ ಮಾತು ಇರಬಹುದು. ಮಳೆಗಾಲದ ಒಂದು ದಿನ, ಮಧ್ಯಾಹ್ನದ ಸಮಯ ಇರಬಹುದು. ಹನಿ ಹನಿ ಮಳೆ ಬರುತ್ತಿತ್ತು. ಕೆಲವು ಮಕ್ಕಳು ಆ ದೇವಸ್ಥಾನದ ಕೆರೆಯಲ್ಲಿ ಇಳಿದು ಸ್ನಾನ ಮಾಡುತ್ತಿದ್ದರು. ಕೆಲವರು ಈಜುತ್ತಿದ್ದರು. ಅವರವರಷ್ಟಕ್ಕೆ ಏನೋ ಮಾತನಾಡುತ್ತಿದ್ದರು. ಆಗ ಏನಾಯಿತೋ, ಕೆರೆಯ ಮಧ್ಯಕ್ಕೆ ಈಜುತ್ತಾ ಹೋದ ಒಬ್ಬ ಇದ್ದಕ್ಕಿದ್ದಂತೆ ಕೂಗಿಕೊಂಡ" ಕಾಪಾಡಿ ಕಾಪಾಡಿ" ಅಂತ. ಅವನ ಪಕ್ಕದಲ್ಲಿ ಇದ್ದ ಮತ್ತೊಬ್ಬ ಹುಡುಗ ಗಾಬರಿಯಿಂದ ನೀರನ್ನು ಬಡಿಯುತ್ತಾ ಮುಳುಗುತ್ತ ಇದ್ದ. ಅವನನ್ನು ರಕ್ಷಿಸಲು ಸಾಧ್ಯವಾಗದೇ ಕೂಗಿದ ಅವನು ಸೀದಾ ದಡಕ್ಕೆ ಈಜುತ್ತಾ ಬಂದು, "ಅವನು ನೀರು ಕುಡಿದ, ಮುಳುಗುತ್ತಿದ್ದಾನೆ. ಯಾರಾದರೂ ಕಾಪಾಡಿ" ಎಂದು ಜೋರಾಗಿ ಬೊಬ್ಬೆ ಹೊಡೆಯತೊಡಗಿದ. ಆಚೆ ಈಚೆ ದಾರಿಯಲ್ಲಿ ಹೋಗುವವರೂ ಕೂಗು ಕೇಳಿ ಓಡಿಬಂದು ಕೆರೆಯ ಸುತ್ತ ನಿಲ್ಲತೊಡಗಿದರು. ಎಲ್ಲರೂ ಗುಸುಗುಸು ಮಾತಾಡುತ್ತಿದ್ದರೆ ಹೊರತು ನೀರಿಗೆ ಇಳಿಯಲು ಯಾರಿಗೂ ಧೈರ್ಯ ಇಲ್ಲ.

ಅಷ್ಟರಲ್ಲಿ ಈ ಗಲಾಟೆ ಕೇಳಿಯೇ ಇರಬೇಕು. ಒಬ್ಬರು ವೇಗವಾಗಿ ಕೆರೆಯ ದಡಕ್ಕೆ ಬಂದವರೇ "ಏನು? ಏನು?" ಎಂದು ಕೇಳಿ, ವಿಷಯ ತಿಳಿದವರೇ ತಡ ಮಾಡಲಿಲ್ಲ. "ಎಲ್ಲರೂ ಸುಮ್ಮನೇ ನೋಡುತ್ತಾ ನಿಂತದ್ದಾ?" ಎಂದವರೆ ಉಟ್ಟ ಬಟ್ಟೆಯಲ್ಲಿಯೇ ನೀರಿಗೆ ಹಾರಿಯೇ ಬಿಟ್ಟರು. ಜನರು ಬಿಟ್ಟ ಕಣ್ಣುಗಳಿಂದ ನೋಡನೊಡುತ್ತಿರುವಂತೆಯೇ ಅವರು ಈಜುತ್ತಾ ಹೋಗಿ, ಅಲ್ಲಿ ನೀರಿನಲ್ಲಿ ಮುಳುಗುತ್ತಾ ಬಾಯಿಯಲ್ಲಿ ಉಸಿರು ಬಿಟ್ಟು ಗುಳುಗುಳು ಎಂದು ನೀರಿನಲ್ಲಿ ಗಾಳಿಯ ಗುಳ್ಳೆಗಳನ್ನು ಬಿಡುತ್ತಾ, ಕೆಸರಿನಲ್ಲಿ ಹುಗಿದು ಹೋಗುತ್ತಿದ್ದ ಆ ಹುಡುಗನ ಜುಟ್ಟನ್ನು ಒಮ್ಮೆಲೇ ಹಿಡಿದು ಎಳೆದುಕೊಂಡೇ ಬಂದು ದಡಕ್ಕೆ ಎತ್ತಿ ಹಾಕಿದರು. ಅವರ ಪ್ಯಾಂಟು ಶರ್ಟು ಒಳಗಿನ ದುಡ್ಡು, ಪೇಪರ್  ಎಲ್ಲಾ ಒದ್ದೆಯಾಗಿಬಿಟ್ಟಿತ್ತು. ಅಷ್ಟರಲ್ಲಿ ಅಲ್ಲಿಯೇ ಇದ್ದ ಮತ್ಯಾರೋ ಬಂದು ಕೈಯನ್ನು ಕೊಟ್ಟು ಮೇಲೆ ಎಳೆದುಕೊಂಡು ಆ ಹುಡುಗನನ್ನು ಸಮತಟ್ಟಾದ ಜಾಗದಲ್ಲಿ ಮಲಗಿಸಿ ಪ್ರಥಮ ಚಿಕಿತ್ಸೆ ಮಾಡಿದರು. ಹುಡುಗ ಉಳಿದುಕೊಂಡ.

ಅಂದು ತನ್ನ ಜೀವದ ಹಂಗು ತೊರೆದು ನೀರಿಗೆ ಹಾರಿ ಆ ಹುಡುಗನನ್ನು ಕಾಪಾಡಿದವರು, ಅದೆ ಕೆರೆಯ ಪಕ್ಕದಲ್ಲೇ ಇದ್ದ ಕೆಇಬಿ ಅಫೀಸಿನಲ್ಲಿ ಸೆಕ್ಷನ್ ಆಫೀಸರ್ ಆಗಿದ್ದ ಇಂಜಿನಿಯರ್ ಮಹದೇವಪ್ಪ.

 ನಾನು ಈ ಘಟನೆಯನ್ನು ಪ್ರತ್ಯಕ್ಷ ನೋಡಿದವನಲ್ಲ.
ನಾನು ಅಕ್ಕನ ಮನೆಗೆ ಹೋದಾಗ ಅಕ್ಕನ ಮಗ ವೆಂಕಟೇಶನ ಸ್ನೇಹಿತ ಮೋಹನದಾಸ ಎನ್ನುವವನ ಮನೆಗೆ ಸಂಜೆ ವೆಂಕಟೇಶನ ಜೊತೆಗೆ ಆಗಾಗ ಆಡಲು ಹೋಗುತ್ತಿದ್ದೆ. ಆಗ ಮೋಹನದಾಸ ನನಗೆ ಹೇಳಿದ ಕತೆ ಇದು.

ಕಾಲಚಕ್ರ ಉರುಳಿತು. ಅಲ್ಲಿ ಇದ್ದ ಕೆಇಬಿ ಆಫೀಸು ಗೋ ಆಸ್ಪತ್ರೆಯ ಹತ್ತಿರದ ತನ್ನ ಸ್ವಂತ ಕಟ್ಟಡಕ್ಕೆ ಸ್ಥಳಾಂತರವಾಯಿತು. ಯಕ್ಷಗಾನ ಕೇಂದ್ರವೂ ಅಲ್ಲಿಂದ ಸ್ಥಳಾಂತರವಾಗಿ ಗುಂಡ್ಮಿಯ ಹತ್ತಿರದ ಸ್ವಂತ ಕಟ್ಟಡಕ್ಕೆ ಹೋಯಿತು. ಹೈವೆ ಅಗಲವಾಗಿ ಡಬ್ಬಲ್ ರೋಡ್ ಆಯಿತು. ರಸ್ತೆಯ ಅಕ್ಕಪಕ್ಕದ ಅಂಗಡಿ ಮನೆಯೆಲ್ಲವೂ ರಸ್ತೆಯ ಅಗಲೀಕರಣದಿಂದಾಗಿ ಹಿಂದೆ ಸರಿಯಿತು. ಕೋಟದ ಸ್ವರೂಪವೇ ಬದಲಾಯಿತು.

ಮುಂದೆ ನನಗೂ ಕೆಇಬಿಯಲ್ಲಿ ಕೆಲಸ ಸಿಕ್ಕಿತು. ಕೆಇಬಿ ಯು, ಕೆಪಿಟಿಸಿಎಲ್ ಆಗಿ,  ಮೆಸ್ಕಾಂ ಅಂತಲೂ ಆಯಿತು. ನಾನು ಉಡುಪಿ, ಮುಲ್ಕಿ, ಮಂಗಳೂರು, ಇತ್ಯಾದಿ ಊರುಗಳಲ್ಲಿ ಕೆಲಸವನ್ನು ಮಾಡಿದೆ. ಮಾಡುವ ಕೆಲಸದ ಹುದ್ದೆಯಲ್ಲೂ ಪದೋನ್ನತಿಗಳಾಗಿ, ಲೆಕ್ಕಾಧಿಕಾರಿಯಾಗಿದ್ದು ಮಂಗಳೂರಿನಿಂದ,  ಕುಂದಾಪುರದಲ್ಲಿ ಆಗಲೇ ನೂತನವಾಗಿ ಆರಂಭಗೊಂಡ ವಿಭಾಗೀಯ ಕಛೇರಿಗೆ ವರ್ಗವಾಗಿ ಬಂದೆ.

ಅದು, ಮೇಲಿನ ಘಟನೆ ನಡೆದು ಸುಮಾರು ಮುವ್ವತ್ತು ವರ್ಷಗಳ ನಂತರ, ಅಂದರೆ 2011ರಲ್ಲಿ. ಆಗ ಕುಂದಾಪುರದ ಆಫೀಸಿನಲ್ಲಿ ಮೇಲೆ ಹೇಳಿದ ಆ ಹುಡುಗನ ಜೀವ ಉಳಿಸಿದ ಆ ಮಹಾದೇವಪ್ಪನವರೇ ವಿಭಾಗೀಯ ಕಛೇರಿಯ ಮುಖ್ಯಸ್ಥರಾಗಿದ್ದರು. ಅವರ ಜೊತೆ ನಾಲ್ಕುವರ್ಷ ಕೆಲಸಮಾಡುವ ಅವಕಾಶವೂ ನನಗೆ ಸಿಕ್ಕಿತು. ಅವರು ಒಬ್ಬ ದಕ್ಷ ಅಧಿಕಾರಿಗಳಾಗಿದ್ದರು. ಆಗ ತಾನೆ ನೂತನವಾಗಿ ಕಾರ್ಯಾರಂಭಗೊಂಡ ಕುಂದಾಪುರ ವಿಭಾಗವನ್ನು ಇಡೀ ಮೆಸ್ಕಾಂ ಕಂಪೆನಿಯಲ್ಲಿಯೇ ಉತ್ತಮ ವಿಭಾಗ ಎಂದು ಗುರುತಿಸುವಂತೆ ಮಾಡಿದ ಖ್ಯಾತಿ ಅವರದು. ನಿಷ್ಪಕ್ಷಪಾತಿಯಾಗಿ ಎಲ್ಲ ಸಹೋದ್ಯೋಗಿಗಳೊಡನೆ ಸ್ಪಂದಿಸುತ್ತಾ ಸಮಸ್ಯೆಗಳನ್ನು ಎದುರಿಸುತ್ತಾ, ತಕ್ಷಣ ಪರಿಹಾರಗಳನ್ನು ಕಂಡುಕೊಳ್ಳುತ್ತಾ ಎಲ್ಲರೊಡನೆ ಬೆರೆತು ವಿಭಾಗವನ್ನು ನಡೆಸಿದರು. ಆದರೂ ನನ್ನಿಂದ ಏನೂ ಆಗಿಲ್ಲ ನಿಮ್ಮೆಲ್ಲರ ಸಹಕಾರದಿಂದ ಇದು ಸಾಧ್ಯವಾಯಿತು ಎಂದು ವಿನಮ್ರರಾಗಿ ಹೇಳುತ್ತಿದ್ದರು.

ಅವರೂ ಉಡುಪಿಯಲ್ಲಿಯೇ ಮನೆ ಮಾಡಿದ್ದರಿಂದ ನಾನೂ, ಮತ್ತು ಅವರು ಹೆಚ್ಚಿನ ದಿನಗಳಲ್ಲಿ ಸಂಜೆ ಮನೆಗೆ ಬರುವಾಗ ಒಟ್ಟಿಗೇ ಬರುತ್ತಿದ್ದೆವು. ಆಗೊಮ್ಮೆ ಕೋಟವನ್ನು ಹಾದು ಬರುವಾಗ ನನಗೆ ಮೇಲೆ ಹೇಳಿದ ಘಟನೆಯು ನೆನಪಾಗಿ "ಹೌದಾ? ಹೀಗಾಗಿತ್ತಂತೆ" ಎಂದು ಅವರನ್ನು ಕೇಳಿದೆ. ಅವರು ತುಂಬಾ ಕುಷಿಯಾಗಿ, ಹಿಂದಿನ ಅವರ ಅನುಭವವನ್ನು ನೆನಪು ಮಾಡಿಕೊಂಡು ಕಣ್ಣಿಗೆ ಕಟ್ಟುವಂತೆ ವರ್ಣಿಸಿದ್ದರು‌.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ