ಶನಿವಾರ, ಫೆಬ್ರವರಿ 3, 2018

ದಿನೇಶ ಉಪ್ಪೂರ:

*ನನ್ನೊಳಗೆ* 68

ರಾಧಕ್ಕ ಎನ್ನುವ ನನ್ನ ಸಂಬಂಧಿಕರೊಬ್ಬರು ಸಾಗರದಲ್ಲಿ ಇದ್ದರು. ಅವರು ನೋಡಲು ಸುಮಾರಿಗೆ ನನ್ನ ಅತ್ತೆ ಭವಾನಿಯಮ್ಮನ ಹಾಗೆಯೆ ಇದ್ದಿದ್ದರು. ಅವರೂ, ನನ್ನ ಅಪ್ಪಯ್ಯನೂ ವಾವೆಯಲ್ಲಿ ಅಣ್ಣ ತಂಗಿಯರೆ. ಅಂದರೆ ಅಪ್ಪಯ್ಯನ ಅಮ್ಮನ ತಂಗಿಯ ಮಗಳು. ಅವರನ್ನು ವೆಂಕಟಾಚಲ ಹೊಳ್ಳರು ಎನ್ನುವವರಿಗೆ ಮದುವೆ ಮಾಡಿ ಕೊಟ್ಟಿದ್ದರು. ರಾಧಕ್ಕ  ಸಂಬಂಧದಲ್ಲಿ ನಮಗೆ ಅತ್ತೆ ಆದರೂ ನಾವು ಅವರನ್ನು ರಾಧಕ್ಕ ಎಂದೇ ಕರೆಯುತ್ತಿದ್ದೆವು. ಅಪ್ಪಯ್ಯ ಸಾಗರದಲ್ಲಿ ಆಟ ಇದ್ದಾಗ ಅವರ ಮನೆಯಲ್ಲಿಯೇ ಉಳಿದುಕೊಳ್ಳುತ್ತಿದ್ದರು. ಅವರ ಮಕ್ಕಳಲ್ಲಿ ಕೊನೆಯ ಮಗಳನ್ನೇ ಶ್ರೀಧರ ಅಣ್ಣಯ್ಯ ಮದುವೆಯಾದದ್ದು. ವೃತ್ತಿಯಿಂದ ನಿವೃತ್ತರಾದ ಬಳಿಕ ಹೊಳ್ಳರು ಸಾಗರದಲ್ಲಿ ಇರುವ ರಾಘವೇಂದ್ರ ಮಠದ ಉಸ್ತುವಾರಿಯನ್ನು ನೋಡಿಕೊಂಡು ಹೆಚ್ಚಿಗೆ ಅಲ್ಲಿಯೇ ಇರುತ್ತಿದ್ದರು.

 ರಾಧಕ್ಕ,  ಯಾರಾದರೂ ಸ್ನೇಹಿತರು ಸಂಬಂಧಿಕರು ಅವರ ಮನೆಗೆ ಹೋದಾಗ ಮಾಡುವ ಉಪಚಾರ ತೋರುವ ಸ್ನೇಹ ಹೋದ ನಮಗೆ ದಾಕ್ಷಿಣ್ಯವಾಗುವಷ್ಟು ಇರುತ್ತಿತ್ತು. ಅವರಿಗೆ ತುಂಬಾ ಮಾತಾಡಬೇಕು. ಒಮ್ಮೆ ಭೇಟಿಯಾದರೆ ಊರಲ್ಲಿರುವ ನಮ್ಮ ಎಲ್ಲಾ ಸಂಬಂಧಿಕರ ಬಗ್ಗೆ "ಹೋ ಅವರ್ ಎಲ್ಲಿದ್ರ್ ? ಈಗ ಎಂತ ಮಾಡತ್ರ್ ? ಎಂದು ಸಂಪೂರ್ಣವಾಗಿ ವಿವರವನ್ನು ಕೇಳಿ ಕೇಳಿ ತಿಳಿದುಕೊಳ್ಳುತ್ತಿದ್ದರು.

ಉಡುಪಿಯಲ್ಲಿ ಅವರ ಮಗಳ ಮನೆ ಇತ್ತು. ಆಗಾಗ ಅಲ್ಲಿಗೆ ಬಂದು ಇದ್ದು ಹೋಗುತ್ತಿದ್ದರು. ಹಾಗೆ ಬಂದಾಗ ಒಮ್ಮೊಮ್ಮೆ  ಅವರು ನನಗೆ ಅವರ ಅಳಿಯನಿಂದ ಪೋನ್ ಮಾಡಿಸಿ ಅವರನ್ನು ನನ್ನ ಮನೆಗೆ ಕರೆದುಕೊಂಡು ಹೋಗಲು ತಿಳಿಸುತ್ತಿದ್ದರು. ನಾನು ಹೋಗಿ, ನಮ್ಮ ಕೆಇಬಿ ವಸತಿಗೃಹಕ್ಕೆ ಅವರನ್ನು ಕರೆದುಕೊಂಡು ಬರುತ್ತಿದ್ದೆ. ಬರುವಾಗ ಸುಮ್ಮನೇ ಬರುತ್ತಿರಲಿಲ್ಲ. ಅವರೇ ಮಾಡಿದ ಅಪ್ಪೆಮಿಡಿ ಉಪ್ಪಿನ ಕಾಯಿ, ಮಾವಿನಕಾಯಿಯ ಹಿಂಡಿ, ಏನೂ ಇಲ್ಲದಿದ್ದರೆ ಅವರ ಮನೆಯಲ್ಲಿ ಮಾಡಿದ ತಿಂಡಿಯನ್ನು ಒಂದು ಸ್ಟೀಲ್ ಬಾಕ್ಸ್ ಗೆ ಹಾಕಿ ತಂದು ನಮಗೆ ಕೊಡುತ್ತಿದ್ದರು. ಅವರನ್ನು ನೋಡಿದಾಗ ನನಗೆ ನನ್ನ ಅತ್ತೆ ಭವಾನಿಯಮ್ಮನ ನೆನಪು ಆಗುತ್ತಿತ್ತು.

ನಾನು ಮಂಗಳೂರಿನಲ್ಲಿದ್ದಾಗ ಒಮ್ಮೆ ಆಫೀಸಿನ ಕೆಲಸದ ಮೇಲೆ ಸಾಗರಕ್ಕೆ ಹೋಗಬೇಕಾಗಿ ಬಂತು. ಅಲ್ಲಿಗೆ ಹೋದವನು ರಾಧಕ್ಕನನ್ನು ಮಾತಾಡಿಸಿಕೊಂಡು ಬರುವ. ನೋಡದೇ ತುಂಬಾ ಸಮಯವಾಯಿತು ಎಂದು ಅವರ ಮನೆಗೆ ಹೋಗಿದ್ದೆ. ಆಗ ಅವರು ವೃದ್ದಾಪ್ಯದಿಂದ ಹಾಸಿಗೆ ಹಿಡಿದ್ದಿದ್ದರು. ನನಗೀಗ ಏನೂ ಮಾಡಲು ಆಗುವುದಿಲ್ಲ ಮಗೂ, ಎಲ್ಲದಕ್ಕೂ ಇನ್ನೊಬ್ಬರನ್ನು ಅವಲಂಬಿಸಬೇಕಾಗಿದೆ. ನಾನು ಇನ್ನು ಹೋದರೂ ಅಡ್ಡಿ ಇಲ್ಲ. ನನಗೆ ಇನ್ನು ಯಾವ ಆಶೆಯೂ ಇಲ್ಲ. ಜೀವನದಲ್ಲಿ ನೋಡಬೇಕಾದ್ದೆಲ್ಲ ನೋಡಿಯಾಯಿತು ಎಂಬ ಸಂತೃಪ್ತಭಾವದಿಂದ ಮಾತಾಡಿದರು. ಮತ್ತು ಎಂದಿನಂತೆ, "ದಾಮೋದರ ಏನ್ ಮಾಡ್ತಾನೆ? ಊರಿಗೆ ಹೋಯಿದ್ಯಾ? ಅಕ್ಕ ಎಲ್ಲಿಪ್ದ್ ? ರಮೇಶನ ಹೆಂಡ್ತಿ ಮಾತಾಡಿದ್ಲಾ?" ಅವಳ ಮಕ್ಳು ಏನ್ ಮಾಡ್ತಾ ಇದ್ರು? ಹೀಗೆ ಒಬ್ಬೊಬ್ಬರನ್ನಾಗಿ ಎಲ್ಲರನ್ನೂ ವಿಚಾರಿಸಿಯಾಯಿತು. ಮನೆಯವರ ತಿಂಡಿ ಕಾಫಿಯ ಹೃದಯಸ್ಪರ್ಶಿ ಉಪಚಾರವಾಯಿತು.

  ಸ್ವಲ್ಪ ಹೊತ್ತು ಮಾತಾಡಿ, 'ನಾನು ಬರುತ್ತೇನೆ. ಹೀಗೆಯೇ ಮಾತಾಡಿಸಿಕೊಂಡು ಹೋಗುವ ಅಂತ ಬಂದೆ. ನಮ್ಮ ಆಫೀಸಿನ ಕೆಲಸಕ್ಕೆ ಬಂದದ್ದು ಆಫೀಸಿನವರದ್ದೇ ಆದ ಅತಿಥಿಗೃಹ ಇದೆ. ಅಲ್ಲಿಯೇ ಇದ್ದೇನೆ' ಎಂದು ಹೊರಟು, ಅವರಿಗೆ ನಮಸ್ಕರಿಸಲು ಹೋದೆ. ಅವರು ಪ್ರಯತ್ನ ಪಟ್ಟು ಮಲಗಿದಲ್ಲಿಂದ ಎದ್ದು ಕುಳಿತು, "ನಮಸ್ಕಾರ ಎಲ್ಲ ಬೇಡ ಮಾರಾಯ. ಎಲ್ಲಿ ನಿನ್ನ ಕೈ ಕೊಡ್ ಕಾಂಬ" ಎಂದು ಶೇಕ್ ಹ್ಯಾಂಡ್ ಕೊಡಲು ಕೈ ಮುಂದೆ ಮಾಡಿದರು. ನಾನು ಅವರ ಕೈಯನ್ನು ಹಿಡಿದುಕೊಂಡೆ. ಅವರ ಬೆಚ್ಚಗಿನ ಕೈಯನ್ನು ಹಿಡಿಯುತ್ತಿದ್ದಂತೆ ನನಗೆ ವಿದ್ಯುತ್ ಸಂಚಾರವಾದ ಹಾಗಾಯಿತು. ಆ ವಾತ್ಸಲ್ಯದ ಸ್ಪರ್ಶದಿಂದ ಮನಸ್ಸಿಗೆ ಯಾವುದೋ ಅನಿರ್ವಚನೀಯ ಆನಂದ. "ನಾನು ಹೀಂಗೆಯೇ ಆಶೀರ್ವಾದ ಮಾಡೂದ್". ಎಂದು ಎರಡೂ ಕೈಯಿಂದ ನನ್ನ ಕೈಯನ್ನು ಹಿಡಿದುಕೊಂಡು ಒತ್ತಿ ಒಳ್ಳೆಯದಾಗಲಿ ಎಂದು ಹೇಳಿದರು. ನಾನು ಆ ಅನುಭವದಿಂದ ಸುಧಾರಿಸಿಕೊಂಡು ನಗುತ್ತಾ ಮತ್ತೊಮ್ಮೆ "ಬರುತ್ತೇನೆ" ಎಂದು ಹೇಳಿ ಅಲ್ಲಿಂದ ಹೊರಟು ಬಂದೆ. ಬಹುಷ್ಯ ಅದರ ನಂತರ ಸ್ವಲ್ಪ ಸಮಯದಲ್ಲೇ ಅವರು ತೀರಿಕೊಂಡರು ಎಂದು ನೆನಪು.

ಹೀಗೆ ಕೈಯಿಂದ ಮುಟ್ಟಿ ತಲೆಯನ್ನು ಅಥವ ಬೆನ್ನನ್ನು ಸವರಿ ಆಶೀರ್ವಾದ ಮಾಡುವ ಬಹಳ ಮಂದಿ ಹಿರಿಯರನ್ನು ನಾನು ನೋಡಿದ್ದೇನೆ. ಕಾಲು ಮುಟ್ಟಿ ನಮಸ್ಕರಿಸುವಾಗ ಒಳ್ಳೆಯದಾಗಲಿ ಎಂದು ಹಾರೈಸಿ ತಲೆಯನ್ನು ಮುಟ್ಟಿ ನೇವರಿಸುವವರೂ ಇದ್ದಾರೆ. ಕೈಯನ್ನು ಬೆನ್ನ ಹಿಂದಿನಿಂದ ಬಳಸಿ ಹಿಡಿದು ಹತ್ತಿರಕ್ಕೆ ಎಳೆದು  ಎದೆಗೆ ಆನಿಸಿ ಹಿಡಿದು ಸಲಿಗೆ ತೋರುವವರೂ ಇದ್ದಾರೆ. ಆದರೆ ಸಾಮಾನ್ಯವಾಗಿ ನಮ್ಮ ಉಡುಪಿ ಕಡೆಯ ಸ್ವಾಮಿಗಳು ದೂರದಿಂದಲೇ ನಮಸ್ಕರಿಸಲು ಅವಕಾಶ ಮಾಡುತ್ತಾರೆ. ಮೈಲಿಗೆ ಅನ್ನುವುದಕ್ಕಿಂತ, ಸ್ಪರ್ಶಿಸಿದರೆ ಅವರ ಶಕ್ತಿ ಹರಿದು  ಆಶೀರ್ವಾದ ಮಾಡಿಸಿಕೊಂಡವರಿಗೆ ಹೋಗುತ್ತದೆ ಎನ್ನುವುದು ಒಂದು ನಂಬಿಕೆ. ರೇಖಿ ಮುಂತಾದ ಪ್ರಕಾರಗಳಲ್ಲಿ ಅದಕ್ಕೆ ಸಮರ್ಥನೆಯೂ ಇದೆ ಎಂದು ಓದಿದ ನೆನಪು.

 ಆದರೆ ಇದಕ್ಕೆ ವ್ಯತಿರಿಕ್ತವಾಗಿ ಬಾಳಿಗಾರು ಮಠದ ಸ್ವಾಮಿಯವರು ಉಡುಪಿಗೆ ಬಂದಾಗ ಮೊನ್ನೆ ಒಮ್ಮೆ ನಾನು ಅವರ ದರ್ಶನಕ್ಕೆ ಹೋಗಿದ್ದು, ಅವರಿಗೆ ನಮಸ್ಕರಿಸಿ ಎದ್ದು ಕುಳಿತಾಗ ಅವರು, ಹತ್ತಿರಕ್ಕೆ ಬಾಗಿ ನನ್ನ ಬೆನ್ನು ತಟ್ಟಿ ಆಶೀರ್ವದಿಸಿ ಪುಳಕಿತನನ್ನಾಗಿ ಮಾಡಿದರು. ಆ ಕ್ಷಣದಿಂದ ಅವರ ಬಗ್ಗೆ ಗೌರವದ ಜೊತೆಗೆ ಏನೋ ಒಂದು ರೀತಿಯ ಆಪ್ತತೆಯೂ ಹುಟ್ಟಿತು ಎಂದು ನನ್ನ ಮನಸ್ಸಿಗೆ ಅನ್ನಿಸಿತು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ