ಶನಿವಾರ, ಫೆಬ್ರವರಿ 3, 2018

ದಿನೇಶ ಉಪ್ಪೂರ:

*ನನ್ನೊಳಗೆ 69*

ನನಗಾಗ ಏಳು ಅಥವ ಎಂಟು ವರ್ಷ ಇರಬಹುದು. ಎಪ್ರಿಲ್ ನಲ್ಲಿ ಶಾಲೆಗೆ ರಜೆ ಸಿಕ್ಕಿದಾಗ ನಾನು ಕೋಟದ ಅಕ್ಕನ ಮನೆಗೆ ಹೋಗುವುದಿತ್ತು. ಆಗ ಅಕ್ಕನ ಮನೆ, ಕೋಟದ ಪಡುಕೆರೆ ಎಂಬಲ್ಲಿ  ಇದ್ದಿತ್ತು. ಮನೆಯ ಹಿಂದುಗಡೆ ಸುಮಾರು ಒಂದು ಕಿಲೋಮೀಟರ್ ದೂರದಲ್ಲಿಯೇ ಅರಬ್ಬೀ ಸಮುದ್ರ. ಅಕ್ಕನ ಮನೆಯಲ್ಲಿ ಇದ್ದರೆ ಆ ಸಮುದ್ರದ ಭೋರ್ಗರೆತ ಭೋ ಎಂದು ಒಂದೇ ಸಮನೆ ಕೇಳಿಸುತ್ತಿತ್ತು. ಆದರೆ ನಾನು ಆ ಸಮುದ್ರವನ್ನು ನೋಡಿರಲಿಲ್ಲ. ಆ ಶಬ್ದಕ್ಕೆ ನಾನು ಹೆದರಿ ಈಗಲೋ ಇನ್ನೊಂದು ಕ್ಷಣಕ್ಕೋ ಸಮುದ್ರದ ನೀರು ಉಕ್ಕಿ ಹರಿದು ಮನೆಯ ಮೇಲೇಯೇ ಬಂದಂತೆ, ಇಡೀ ಊರೇ ಮುಳುಗಿಹೋದಂತೆ ಕನಸು ಕಾಣುತ್ತಿದ್ದೆ.

 ಹಾಗೆ ಒಮ್ಮೆ ನಾನು ಅಕ್ಕನ ಮನೆಗೆ ಹೋಗಿದ್ದಾಗ ಅಪ್ಪಯ್ಯನೂ ಅಲ್ಲಿ ಇದ್ದರು. ಆಗ ಅವರು ಅಮೃತೇಶ್ವರಿ ಮೇಳದಲ್ಲಿ  ಭಾಗವತರು. ಬಹುಷ್ಯ ಹತ್ತಿರದ ಮೊಗವೀರರ ಕೇರಿಯಲ್ಲಿಯೋ, ಕೋಟದ ಪೇಟೆಯಲ್ಲೋ ಆಟ ಇರಬೇಕು.

ಸಂಜೆಯ ಹೊತ್ತಿಗೆ ನನ್ನನ್ನು ಕರೆದು "ಬತ್ಯಾ ಮಾಣಿ, ಸಮುದ್ರಕ್ಕೆ ಹೋಯ್ ಬಪ್ಪ" ಅಂದರು. ನನಗೆ ರೋಮಾಂಚನವಾಯಿತು. ಖುಷಿಯಿಂದ "ಹೂಂ" ಎಂದು ಅದೇ ಉಡುಪಿನಲ್ಲಿಯೇ ಹೊರಟು ಬಿಟ್ಟೆ.

 ನಾನು ಅದುವರೆಗೆ ಸಮುದ್ರವನ್ನು ನೋಡಿರಲಿಲ್ಲ. ನೋಡುವ ಉತ್ಸಾಹ ಒಮ್ಮೆಲೇ ಹೆಚ್ಚಾಯಿತು. ಅವರು ಮುಂದೆ ನಾನು ಹಿಂದೆ. ಒಮ್ಮೆ ಎತ್ತರದ ಗುಡ್ಡದ ದಾರಿ, ಒಮ್ಮೆ ತಗ್ಗಿನ ತೋಡು, ಹೀಗಿನ ದಾರಿಯಲ್ಲಿ ನಡೆದೇ ನಡೆದೆವು. ಸಮುದ್ರ ಹತ್ತಿರವಾಗುತ್ತಿದೆ ಎನ್ನುವಾಗ ಕಡಲಿನ ಭೋರ್ಗರೆತದ ಶಬ್ಧಕ್ಕೆ ನನಗೆ ಏನೋ ಅವರ್ಣನೀಯ ಆನಂದದ ಭಾವ. ಆಮೇಲಿನ ದಾರಿ ಬರೀ ಹೊಯಿಗೆಯದು. ಆ ಹೊಯಿಗೆಯಲ್ಲಿ ನಡೆಯಬೇಕು, ಒಂದಷ್ಟು ದೂರ. ಕಾಲು ಎತ್ತಿ ಮುಂದೆ ಇಟ್ಟರೆ ಹಿಂದಿನಕಾಲು ಹೊಯಿಗೆಯಲ್ಲಿ ಹಿಂದೆ ಜಾರುತ್ತಿತ್ತು.  ಚಪ್ಪಲಿಯ ಒಳಗೆಲ್ಲ ಹೊಯಿಗೆ. ಜೋರಾಗಿ ಗಾಳಿ ಬೀಸುತ್ತಿತ್ತು. ಜೊತೆಗೆ ಕೊಳೆತ ಮೀನಿನ ವಾಸನೆ.

ಅಂತೂ ಸಮುದ್ರದ ಎದುರು ಬಂದು ನಿಂತೆವು. ವಾಹ್ ಎಂತಹ ವಿಶಾಲ ಕಡಲು. ಆಚೆ ಈಚೆ ಮುಂದೆ ಎಲ್ಲಿ ನೋಡಿದರೂ ನೀರು. ಕಣ್ಣು ಕಾಣುವಷ್ಟು ದೂರ. ಅದಕ್ಕೆ ಅಂತ್ಯವೇ ಇಲ್ಲ ಎನ್ನುವಷ್ಟು ನೀರೇನೀರು. ಹೊಯಿಗೆಯಲ್ಲಿ ನಡೆಯಲು ಕಷ್ಟಪಡುವ ನನ್ನನ್ನು ನೋಡಿ ಮುಂದೆ ಹೋಗುತ್ತಿದ್ದ ಅಪ್ಪಯ್ಯ ನಿಂತು ಹಿಂದೆ ತಿರುಗಿ, " ಬಾ " ಎಂದು ಕೈ ನೀಡಿ ನನ್ನ ಕೈಯನ್ನು ಹಿಡಿದುಕೊಂಡು ನಡೆಯತೊಡಗಿದರು. ಜೊತೆಜೊತೆಯಾಗಿ ನಡೆದು ಮುಂದೆ ಮುಂದೆ ಹೋಗಿ ಸಮುದ್ರದ ಹತ್ತಿರಕ್ಕೆ ಬಂದೆವು.

ತೆರೆಯ ಹತ್ತಿರ ಹೋಗುವುದೇ ಬೇಡ. ಅದೇ ನಮ್ಮನ್ನು ಹಿಡಿಯಲೋ ಎಂಬಂತೆ ರಭಸದಿಂದ ನಮ್ಮೆಡೆಗೆ ಬರುತ್ತಿತ್ತು. ಒಮ್ಮೆಲೆ ನಮ್ಮ ಕಾಲುಗಳಿಗೆ ಬಡಿದು ಬಳಸಿಕೊಂಡು ಹಿಂದಕ್ಕೆ ಹೋಯಿತು. ಅಪ್ಪಯ್ಯ ನನ್ನ ಕೈ ಹಿಡಿದುಕೊಂಡೇ ಇನ್ನೂ ಮುಂದೆ ಹೊರಟರು. ಕಾಲಿನಡಿಯ ಹೊಯಿಗೆಯಲ್ಲಿ ಕಾಲು ಹುಗಿದು ಹುಗಿದು ಹೋಗುತ್ತಿತ್ತು. ಅಪ್ಪಯ್ಯ ಸುಮಾರಿಗೆ ನನ್ನನ್ನು ಎಳೆದುಕೊಂಡೇ ಹೋಗುತ್ತಿದ್ದರು. ನನಗೆ ಅಪ್ಪಯ್ಯ ಕೈ ಹಿಡಿದದ್ದೇ ಧೈರ್ಯ.

ಇನ್ನೂ ತೆರೆಯ ಹತ್ತಿರಕ್ಕೆ ಮುಂದೆ ಮುಂದೆ ಹೋದೆವು. ಅಷ್ಟರಲ್ಲಿ ಇನ್ನೊಂದು ತೆರೆ ದಡಕ್ಕೆ ಅಪ್ಪಳಿಸಿ, ಮೇಲೆ ಆಕಾಶದಷ್ಟು ಎತ್ತರಕ್ಕೆ ಎದ್ದು ಹಾವಿನ ಹೆಡೆಯಂತೆ ಮಡಚಿಕೊಂಡು ಮತ್ತೆ ನಮ್ಮತ್ತ ಮುನ್ನುಗ್ಗಿ ಬರತೊಡಗಿತು. ನಾನು ನೋಡನೋಡುತ್ತಿರುವಷ್ಟರಲ್ಲಿಯೇ ಅದು ನಮ್ಮ ಕಾಲಿನ ಸುತ್ತ ತೊಡೆಯಷ್ಟು ಮೇಲೆ ನುಗ್ಗಿ ಬಂದು ನನ್ನ ಚಡ್ಡಿಯನ್ನು ಪೂರ್ತಿಯಾಗಿ ಒದ್ದೆಮಾಡಿಬಿಟ್ಟಿತು. ನಮ್ಮನ್ನು ಬಳಸಿಕೊಂಡು ಹೋಗಿದ್ದೇ ಮತ್ತೆ ರಭಸದಿಂದ ಹಿಂದಕ್ಕೆ ಬಂದು ಕಾಲಿನ ಅಡಿಯ ಮರಳನ್ನು ಕೊಚ್ಚಿಕೊಂಡು ಸಮುದ್ರಕ್ಕೆ ನೊರೆನೊರೆಯಾಗಿ ಹೋಗಿ ಸೇರಿತು. ಅಬ್ಬಾ, ನನ್ನನ್ನೇ ಸಮುದ್ರಕ್ಕೆ ಎಳೆದುಕೊಂಡು ಹೋಯಿತೋ ಎಂಬಷ್ಟು ರಭಸ. ಅಪ್ಪಯ್ಯ ಕೈ ಹಿಡಿದುಕೊಂಡಿದ್ದರಿಂದ ನಾನು ಉಳಿದೆ. ಅದು ಎಂತಹ ಆನಂದ. ಮೈ ಮರೆಯುವ ಸಂತೋಷ.

 ಮತ್ತೆ ತೆರೆ ಮೇಲೆದ್ದು ಬಂದಿತು.  ಕಾಲಿನ ಅಡಿಯ ಹೊಯಿಗೆಯೊಂದಿಗೆ ಮತ್ತೆ ನಮ್ಮನ್ನು ಸಮುದ್ರದತ್ತ ಎಳೆಯತೊಡಗಿತು.  ಮತ್ತೆ ಪುನಹ ಪುನಹ ಉಕ್ಕಿ ಬರುವ ಕಡಲು. ಲಂಕಾದಹನದ ಪದ್ಯದ ಹಾಗೆ

" ಕಂಡಿರೇನೈ ನೀವೂ ಕಂಡಿರೇನೈ | ಕಂಡಿರೇ ಸಮುದ್ರರಾಜ| ಕೆಂಡದಂತುಬ್ಬೇರಿ ನಭೋ |ಮಂಡಲಕ್ಕೆ ಹಾರಿ ಮಗುಚಿ |ಬರುವುದಾ| ಭೋರ್ಗರೆವುದಾ||

ಎಂಬಂತೆ ತೆರೆಗಳು ದಡಕ್ಕೆ ಅಪ್ಪಳಿಸುವ ಸದ್ದು. ರಭಸವಾಗಿ ಬೀಸುವ ಗಾಳಿ.

  ಅಪ್ಪಯ್ಯ ನನ್ನೊಡನೆ ಏನೂ ಮಾತಾಡುತ್ತಿರಲಿಲ್ಲ. ಅಥವ "ಮಾಣಿ ಲಾಯ್ಕಿತ್ತಾ?" ಎಂದಿರಬಹುದೋ ಏನೋ. ಹೀಗೆಯೇ ಸ್ವಲ್ಪಹೊತ್ತು ಕಳೆಯಿತು. ಕೊನೆಗೆ ಸೂರ್ಯ ಪಡುಗಡಲ ಬಾನಿನ ಅಂಚಿನಲ್ಲಿ ಮೋಡಗಳ ಮಧ್ಯದಲ್ಲಿ ಮರೆಯಾಗುತ್ತಾ, ಆಗಸದಲ್ಲಿ ತನ್ನ ಪ್ರಖರತೆಯನ್ನು ಕಳೆದುಕೊಳ್ಳುತ್ತಾ  ಕಣ್ಮರೆಯಾದ. ನಿಧಾನವಾಗಿ ಕತ್ತಲು ಆವರಿಸತೊಡಗಿತು.

 ಅಪ್ಪಯ್ಯ, "ಹೋಗುವ ಹೊತ್ತಾಯ್ತು" ಅಂದರು. ನಾನು ಮಾತಾಡಲಿಲ್ಲ. ನಿಧಾನವಾಗಿ ಹೊರಟೆವು. ನಾನು ಮತ್ತೆ ಮತ್ತೆ ತಿರುಗಿ ಸಮುದ್ರವನ್ನು ನೋಡುತ್ತಿದ್ದೆ. ಅಪ್ಪಯ್ಯ ನನ್ನ ಕೈಯನ್ನು ಆ ಹೊಯಿಗೆಯ ರಾಶಿಯನ್ನು ದಾಟುವವರೆಗೂ ಹಿಡಿದಿದ್ದರು. ನಂತರ ನಾನು ಕುಣಿಯುತ್ತಾ ಮುಂದೆ ಹೋಗುತ್ತಿದ್ದರೆ ಅವರು ಹಿಂದೆ ರಾಜಗಾಂಭೀರ್ಯದಿಂದ ಬರುತ್ತಿದ್ದರು. ಪೂರ್ತಿ ಕತ್ತಲಾಗುವುದರ ಒಳಗೆ ಮನೆಯನ್ನು ಬಂದು ಸೇರಿದೆವು. 

ಹೀಗೆ ನಾನು ಮೊದಲ ಸಲ ಸಮುದ್ರವನ್ನು ಕಂಡದ್ದು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ