ಭಾನುವಾರ, ಫೆಬ್ರವರಿ 11, 2018

ದಿನೇಶ ಉಪ್ಪೂರ:

*ನನ್ನೊಳಗೆ - 73*

ಹಿಂದೆ, ಈಗಿನ ಕಲಾವಿದರಂತೆ ಒಂದೇ ದಿನ ಎರಡು ಮೂರು ಕಡೆ ಕಾರ್ಯಕ್ರಮವನ್ನು ಒಪ್ಪಿಕೊಳ್ಳುತ್ತಿರಲಿಲ್ಲ. ಚೌಕಿಗೆ ಹೋದ ಮೇಲೆ ಪರಿಚಿತರೂ ಅಭಿಮಾನಿಗಳು ಬಂದು ಮಾತಾಡಿಸಿದರೂ ಒಂದೋ ಎರಡೋ ಮಾತಾಡಿ ಆಮೇಲೆ ಅವರು ಅಂದು ಮಾಡುವ ಪಾತ್ರದೊಳಗೆ ಪರಕಾಯ ಪ್ರವೇಶ ಮಾಡುತ್ತಿದ್ದರು. ಒಮ್ಮೆ ಉಡುಪಿಯ ಆಟದಲ್ಲಿ ಒಬ್ಬರು ಕಲಾವಿದರಲ್ಲಿ ಯಾರೋ ದೊಡ್ಡವರು ಬಂದರು, ಎಂದು ಕರೆಯಲು ಹೋದರೆ, ಅವರು "ಅವರು ಬಂದ್ರೆ ನಾನು ಏನು ಮಾಡುವುದು?" ಎಂದು ಕಟುವಾಗಿ ನುಡಿದು ಕಳಿಸಿದ್ದು ನನಗೆ ನೆನಪಿದೆ.

 ಯಾರು ಹೆಚ್ಚು ಹಣ ಕೊಡುತ್ತಾರೋ ಅವರ ಮೇಳಕ್ಕೆ ಹೋಗುವುದು ಅಂತ ಇರಲಿಲ್ಲ. ಒಮ್ಮೆಯಂತೂ ಧರ್ಮಸ್ಥಳ ಮೇಳದಲ್ಲಿದ್ದ ಒಬ್ಬ ಭಾಗವತರು, ಸಾಲಿಗ್ರಾಮ ಮೇಳಕ್ಕೆ ನಿಶ್ಚಯವಾಯಿತು. ಅದು ಹೆಗಡೆಯವರಿಗೆ ಗೊತ್ತಾಗಿ ವಾಪಾಸು ಕರೆಸಬೇಕೆಂದರೂ ಸಾಲಿಗ್ರಾಮ ಮೇಳದ ಯಜಮಾನರು ಒಪ್ಪದೇ ಇದ್ದುದರಿಂದ ಆಗಲಿಲ್ಲ. ಕೊನೆಗೆ, ಆ ಮನಸ್ತಾಪ ಎಲ್ಲಿಯವರೆಗೆ ಹೋಯಿತು ಎಂದರೆ, ಆ ವರ್ಷ ಎಲ್ಲಿ ಸಾಲಿಗ್ರಾಮ ಮೇಳದ ಟಿಕೇಟು ಇಟ್ಟು ಆಟ ಆಗುತ್ತದೋ, ಅದೇ ಊರಿನ ಹತ್ತಿರದಲ್ಲಿ ಧರ್ಮಸ್ಥಳ ಮೇಳದ ಬಯಲಾಟ ಆಡಿ ಸಾಲಿಗ್ರಾಮ ಮೇಳದವರಿಗೆ ಕಲೆಕ್ಷನ್ ಆಗದ ಹಾಗೆ ಮಾಡಿದರು. ಕೊನೆಗೆ ಆ ಭಾಗವತರು ಪುನಃ ಧರ್ಮಸ್ಥಳ ಮೇಳಕ್ಕೇ ಹೋಗಬೇಕಾಯಿತು.

 ಈಗ ಎಲ್ಲ ಕ್ಷೇತ್ರದಲ್ಕೂ ಈ ಕಾಂಟ್ರಾಕ್ಟ್ ಸಿಸ್ಟಮ್  ಬಂದು, ಮನುಷ್ಯ ಮನುಷ್ಯರೊಳಗಿನ ನಂಬಿಕೆ, ನಿಯತ್ತುಗಳೇ ಮಾಯವಾಗಿವೆ. ಅಡುಗೆ ಊಟದಿಂದ ಹಿಡಿದು ಮನೆ, ಮದುವೆ, ಶ್ರಾದ್ಧದವರೆಗೂ ಇಂತಿಷ್ಟು ಕೆಲಸಕ್ಕೆ, ಇಂತಿಷ್ಟು ಹಣ ಅಂತ ಆಗಿಬಿಟ್ಟಿದೆ. ಅಥವ ಇಂತಿಂತಹ ವ್ಯವಸ್ಥೆಗೆ ಇಂತಿಷ್ಟು ಅಂತ ಗುತ್ತಿಗೆ. ಕಾಂಟ್ರಾಕ್ಟ್ ಇಲ್ಲದೇ ಯಾವ ಕೆಲಸವನ್ನೂ ಮಾಡಿಸಲು ಸಾಧ್ಯವಾಗದ ಪರಿಸ್ಥಿತಿ ಬಂದಿದೆ. ಬದುಕಿನ ಪ್ರತೀ ಕ್ರಿಯೆಯಲ್ಲೂ ಭಾವುಕತೆ, ಮುಲಾಜು, ದಾಕ್ಷಿಣ್ಯ ಇರಬೇಕಾದ ಜಾಗದಲ್ಲಿ ನಿಷ್ಟುರತೆ ವ್ಯವಹಾರ ಡೋಂಗಿ ಆವರಿಸಿಕೊಂಡುಬಿಟ್ಟಿದೆ. ಇರಲಿ.

  ಮಳೆಗಾಲದಲ್ಲಿ  ಅಪ್ಪಯ್ಯ ಅನಿವಾರ್ಯ ಅಲ್ಲದಿದ್ದರೆ ಹಂಗಾರಕಟ್ಟೆ ಯಕ್ಷಗಾನ ಕೇಂದ್ರದಲ್ಲಿ ಗುರುಗಳಾಗಿದ್ದ ಕಾಲದಲ್ಲಿ ಆಟವನ್ನು ಒಪ್ಪಿಕೊಳ್ಳುತ್ತಿರಲಿಲ್ಲ. ಹಣ ಸಿಗುತ್ತದೆಯಾದರೂ ಕೇಂದ್ರದಲ್ಲಿ ತಾನು ಇಲ್ಲದಿದ್ದರೆ ಸಮ ಆಗುವುದಿಲ್ಲ ಎಂಬ ಭಾವ ಅವರಿಗೆ. ಖಾಯಂ ಹೋಗುವ ತಾಳಮದ್ದಲೆಗಳು  ಆಟಗಳು ಆಗಿದ್ದರೆ ಮಾತ್ರ, ಬಿಡಲಾಗದಿದ್ದುದಕ್ಕೆ, ಕೇಂದ್ರದಲ್ಲಿ ಸಮರ್ಥರಾದವರಿಗೆ ಹೇಳಿ, ಪರ್ಯಾಯ ವ್ಯವಸ್ಥೆಯನ್ನು ಮಾಡಿಯೇ ಹೋಗುತ್ತಿದ್ದರು. ಅದು ಅವರ ನಿಯತ್ತು.

ನಿಯತ್ತಿನ ಮಾತು ಬಂದಾಗ ಹಿಂದಿನ ಕಲಾವಿದರ ಕೆಲವು ಆದರ್ಶಗಳು ನೆನಪಿಗೆ ಬರುತ್ತದೆ. ಒಮ್ಮೆ ಶಂಕರನಾರಾಯಣ ಸಾಮಗರು ಒಂದು ತಾಳಮದ್ದಲೆಯಲ್ಲಿ ಕೊಟ್ಟ ಸಂಭಾವನೆ ಹೆಚ್ಚಾಯಿತು ಎಂದು ಎಂ ಒ ಮಾಡಿ ಹಿಂದೆ ಕಳಿಸಿದ್ದರಂತೆ. ಸಾಲಿಗ್ರಾಮ ಮೇಳದಲ್ಲಿದ್ದ ಅಪ್ಪಯ್ಯ ಭಾವಯ್ಯನ ಒತ್ತಾಯಕ್ಕೆ ಅಮೃತೇಶ್ವರಿ ಮೇಳಕ್ಕೆ ಬರಲು ನಿಶ್ಚಯಿಸಿದಾಗ, ಮದ್ದಲೆಗಾರ ತಿಮ್ಮಪ್ಪನನ್ನಾದರೂ ಸಾಲಿಗ್ರಾಮ ಮೇಳದಲ್ಲಿ ಉಳಿಸಿರಿ ಎಂದು ಸೋಮನಾಥ ಹೆಗಡೆಯವರು ಸಾಲಿಗ್ರಾಮ ಮೇಳದ ಯಜಮಾನರು ಹೇಳಿದಾಗ, ಅಪ್ಪಯ್ಯ "ಮದ್ಲೆಗಾರನನ್ನೇ ಕೇಳಿ" ಅಂದರಂತೆ. ತಿಮ್ಮಪ್ಪನನ್ನು ಕೇಳಿದಾಗ, ಅವನು ಅಂದದ್ದು. "ನನಗೆ ಊಟಕ್ಕೆ ಕಷ್ಟ ಇರಬಹುದು. ಆದರೆ ನಾನು ಆತ್ಮತೃಪ್ತಿಗೋಸ್ಕರ ದುಡಿಯುವವ. ದುಡ್ಡು ಕೊಟ್ಟವರೆಲ್ಲ ನನ್ನ ಯಜಮಾನರಲ್ಲ. ಭಾಗವತ್ರು (ಉಪ್ಪೂರರು) ಯಾವ ಮೇಳವೋ, ಅದೆ ನನ್ನ ಮೇಳ".

ಕೆಮ್ಮಣ್ಣು ಆನಂದ ತುಂಬಾ ಕುಡಿಯುತ್ತಿದ್ದ ಕಾಲದಲ್ಲಿ, ಎಲ್ಲೆಲ್ಲೋ ಮೈಮೇಲಿನ ಸ್ವಯ ತಪ್ಪಿ ಬೀಳುತ್ತಿದ್ದ ಕಾಲದಲ್ಲಿಯೂ ಅವನು, ಚಂಡೆಯ ಎರಡು ಕೋಲು ಅವನ ಅಂಗಿಯ ಒಳಗೆ ಪಂಚೆಗೆ ಸಿಕ್ಕಿಸಿಕೊಂಡೇ ಇರುತ್ತಿದ್ದನಂತೆ. ಅವನ ಕುಡಿತದಿಂದ ಕಸುಬು ಮಾಡುವುದರಲ್ಲಿ ಸೋತು, ಯಾವ ಮೇಳದಲ್ಲೂ ಉಳಿಯದಿದ್ದರೂ, ಅವನು ಚಂಡೆ ನುಡಿಸಿದ ಹಾಗೆ ನುಡಿಸುವವರು ಇನ್ನೂ ಹುಟ್ಟಲೇ ಇಲ್ಲ. ಇರಲಿ

ಒಮ್ಮೆ, ಮಂಗಳೂರಿನಲ್ಲಿ ಮಳೆಗಾಲದ ಆಟ. ಆಟ ಆಡಿಸುವ ಗುತ್ತಿಗೆದಾರರು ಅಪ್ಪಯ್ಯನ ಸ್ನೇಹಿತರೆ. ಪ್ರತೀ ವರ್ಷ ಭಾಗವತಿಕೆಗೆ ಅಪ್ಪಯ್ಯನೇ ಆಗಬೇಕು. ಅವರಿಗೇ ಹೇಳುತ್ತಿದ್ದರು. ಆದರೆ ಆ ವರ್ಷ ಆಟಕ್ಕೆ ಅಪ್ಪಯ್ಯನಿಗೆ ಹೇಳಿರಲಿಲ್ಲ. ಅಪ್ಪಯ್ಯನಿಗೆ 'ಆಟ ಇದೆ' ಎಂದು ಗೊತ್ತಾಯಿತು.  ಹಾಗಾದರೆ ಬೇರೆ ಯಾರೋ ಭಾಗವತರಿಗೆ ಹೇಳಿರಬೇಕು ಎಂದು ಸುಮ್ಮನಾದರು.

ಆದರೆ, ಆಟದ ದಿನ ಉದಯವಾಣಿ ಪೇಪರಿನಲ್ಲಿ ನೋಡಿದರೆ ಆಟದ ಪ್ರಕಟಣೆಯಲ್ಲಿ ಅಪ್ಪಯ್ಯನ ಹೆಸರು ಇತ್ತು. ಆ ಬಗ್ಗೆ ವಿಚಾರಿಸುವ ಎಂದರೆ ಆಗ ಈಗಿನಂತೆ ಪೋನ್ ವ್ಯವಸ್ಥೆಯೂ ಇರಲಿಲ್ಲ.
ಅಪ್ಪಯ್ಯ ಯೋಚಿಸಿದರು, "ಏನು ಮಾಡುವುದು?" ಬಹುಷ್ಯ ಇವರಿಗೆ ಹೇಳಲು ಮರೆತುಹೋಗಿರಬಹುದು. ಅಥವ ಪೇಪರಿನಲ್ಲಿ ಬಂದಿದೆ ಎಂದಾದರೆ ಬಹುಷ್ಯ 'ನನಗೆ ಹೇಳಿದ್ದೇನೆ' ಎಂದೇ ತಿಳಿದುಕೊಂಡಿರಬೇಕು. ಏನೇ ಇರಲಿ ಹೋಗಿಯೇ ತಿಳಿಯಬೇಕು. ಎಂದು  ಸಂಜೆ ಕೋಟದಿಂದ ಮಂಗಳೂರಿಗೆ ಬಸ್ಸು ಹತ್ತಿದರು.

ಅಲ್ಲಿ ಹೋಗಿ ನೋಡಿದರೆ ಬೇರೆ ಯಾವ ಭಾಗವತರಿಗೂ ಹೇಳಿರಲಿಲ್ಲ ಎಂದು ಗೊತ್ತಾಯಿತು. ಅಷ್ಟರಲ್ಲಿ ಆಟ ವಹಿಸಿಕೊಂಡ ಗುತ್ತಿಗೆದಾರರೇ ಎದುರಿಗೆ ಬಂದರು. ಅಪ್ಪಯ್ಯನನ್ನು ನೋಡಿದವರೇ ಓಡಿಬಂದು ಅಪ್ಪಯ್ಯನ ಕೈ ಹಿಡಿದು, "ನನ್ನ ಮರ್ಯಾದೆ ಉಳಿಸಿದಿರಿ ಭಾಗವತರೆ, ನನಗೆ ಇವತ್ತು ಗೊತ್ತಾಯಿತು. ನನ್ನ ತಮ್ಮನಿಗೆ ಹೇಳಿದ್ದೆ. ಕೋಟಕ್ಕೆ ಹೋಗಿ ಉಪ್ಪೂರರಿಗೆ ಹೇಳಿ ಒಪ್ಪಿಸಿ ಬಾ ಎಂದು. ಅವನು, ಅವನ ಕೆಲಸದ ಗಡಿಬಿಡಿಯಲ್ಲಿ ಮರೆತೇ ಬಿಟ್ಟಿದ್ದನಂತೆ. ಇವತ್ತು ನನ್ನ ಹತ್ತಿರ ಹೇಳುತ್ತಿದ್ದಾನೆ. ಒಂದು ಕಾರ್ಡು ಬರೆದು ಹಾಕಿದರೂ ಆಗುತ್ತಿತ್ತು. ಏನು ಮಾಡುವುದು? ಎಂದು ತಲೆಬಿಸಿ ಮಾಡಿಕೊಂಡಿದ್ದೆ. ಏನೇ ಆಗಲಿ ನೀವು ದೇವರು ಬಂದ ಹಾಗೆ ಬಂದಿರಿ. ಇಲ್ಲದಿದ್ದರೆ ಗಂಡಾಂತರವೇ ಆಗುತ್ತಿತ್ತು"  ಎಂದು  ಕಾಲು ಹಿಡಿಯಲು ಬಂದರಂತೆ. ಆದರೆ ಅದೇ ಆಟದಲ್ಲಿ ಒಬ್ಬರು ದೂರದ ಕಲಾವಿದರು ಅವರಿಗೆ ಪತ್ರಮುಖೇನ ಆಟಕ್ಕೆ ಆಮಂತ್ರಿಸಿದ್ದು, ಅವರು ಒಪ್ಪಿಗೆ ಸೂಚಿಸಿಯೂ, ಅಂದು ಉದಯವಾಣಿಯಲ್ಲಿ ಪ್ರಕಟವಾದ ಆಟದ ಪ್ರಕಟಣೆಯಲ್ಲಿ ಅವರ ಹೆಸರು ಇರಲಿಲ್ಲ ಎಂದು ಅವರು ಆಟಕ್ಕೆ ಬಂದಿರಲಿಲ್ಲ.

ನೈತಿಕತೆ ಇಲ್ಲದಿದ್ದರೆ ಕಲಾವಿದನಲ್ಲಿಯ ಕಲಾವಿದ ಸತ್ತು ಹೋಗುತ್ತಾನೆ. ಭಾವಯ್ಯ ಅಮೃತೇಶ್ವರಿ ಮೇಳದ ಯಜಮಾನರಾಗಿದ್ದಾಗ ಕೆಲವು ಕಲಾವಿದರು ಅವರ ಮನೆಗೆ ಬಂದರೆ ವಾರಗಟ್ಟಳೆ ಇರುತ್ತಿದ್ದರು.  ಅವರಿಗೆ ಮನೆಯಿಲ್ಲ ಅಥವ ಮನೆಯಲ್ಲಿ ಇಲ್ಲ ಅಂತ ಅಲ್ಲ, ಯಜಮಾನರಿಗೆ ತನ್ನಿಂದ ಏನಾದರೂ ಸಹಾಯವಾಗುವುದಾದರೆ ಆಗಲಿ ಅಂತ. ಭಾವಯ್ಯ ಏನಾದರು ಕೆಲಸ ಹೇಳಿದರೆ, ಯಾವುದಾದರೂ ಕಲಾವಿದರನ್ನು ಮಾತಾಡಿಸಿ ಬಾ ಎಂದೋ, ಇಂತಹ ಊರಿಗೆ ಹೋಗಿ ಒಂದು ಆಟ ನಿಶ್ಚಯ ಮಾಡಿ ಬಾ, ಎಂದು ಹೇಳಿದರೆ, ಅವರು ಅದು ಅವರದೇ ಕೆಲಸ ಎಂಬಷ್ಟು ನಿಷ್ಟೆಯಿಂದ ಅದನ್ನು ಮಾಡುತ್ತಿದ್ದರು. ಒಮ್ಮೆ ನಗರ ಜಗನ್ನಾಥ ಶೆಟ್ರು ಕಾಯಿಲೆಯಾದಾಗ ಅಕ್ಕನ ಮನೆಯಲ್ಲೇ ವಾರಗಟ್ಟಳೆ ಇದ್ದು ಹುಷಾರಾಗಿಯೇ ಮನೆಗೆ ಹೋಗಿದ್ದರಂತೆ. ಕೋಟ ವೈಕುಂಠನಂತೂ ಯಜಮಾನರೇ, ಯಜಮಾನರೇ, ಎನ್ನುತ್ತಾ ಅಲ್ಲಿಯೇ ಇರುತ್ತಿದ್ದ.

ಒಮ್ಮೆ ಕೋಟದ ಹತ್ತಿರ ಬಯಲಾಟದಲ್ಲಿ ಭಾವಯ್ಯ ವೇಷ ಮಾಡಿದ್ದರು. ಭೀಷ್ಮ ವಿಜಯದಲ್ಲಿ ಭೀಷ್ಮ. ವೈಕುಂಠನದು ಅಂಬೆ. ಬೆಳಿಗ್ಗೆ ಮನೆಗೆ ಬಂದವನೇ ಖುಷಿಯಲ್ಲಿ ಮೈಕುಂಠ " ಯಜಮಾನ್ರೆ ಹೇಂಗೆ?  ನಿಮಗೆ ಬೈದದ್ದು? ನಿನ್ನೆ ಆಟದಲ್ಲಿ ನಿಮ್ಮ ಮೇಲಿದ್ದ ಸಿಟ್ಟೆಲ್ಲ ತೀರಿಸಿಕೊಂಡೆ" ಅಂದನಂತೆ. ನಿಜ ಜೀವನದಲ್ಲಿ ಯಜಮಾನರಿಗೆ ಬೈಯಲು ಆಗುವುದಿಲ್ಲವಲ್ಲ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ