ಸೋಮವಾರ, ಫೆಬ್ರವರಿ 26, 2018

ದಿನೇಶ ಉಪ್ಪೂರ:

*ನನ್ನೊಳಗೆ - 77*

ಕೋಟದ ಅಕ್ಕನ ಮನೆಗೆ ಹೋದರೆ, ಕೋಟ ಬಸ್ ಸ್ಟಾಂಡ್  ಅಕ್ಕನಮನೆಗೆ ಹೋಗುವ ದಾರಿಯಲ್ಲಿ  ಅಮೃತೇಶ್ವರಿ ದೇವಸ್ಥಾನದ ಪಕ್ಕದಲ್ಲೇ  ಶ್ರೀಧರ ಟಾಕೀಸ್ ಅಂತ ಒಂದು ಟೆಂಟ್ ಸಿನಿಮಾ ಟಾಕೀಸ್ ಇತ್ತು. ಅಲ್ಲಿಗೆ ಹೋದಾಗ, ಅಕ್ಕ, ಅಕ್ಕನ ಮಕ್ಕಳು ಎಲ್ಲರೂ ಸೇರಿ ಒಟ್ಟಿಗೇ ಸಿನಿಮಾಕ್ಕೆ ಹೋಗುತ್ತಿದ್ದೆವು.

 ಆದರೆ ಸಿನಿಮಾಕ್ಕೆ ಹೋಗುವಾಗ ಭಾವಯ್ಯನಿಗೆ ಹೇಳುತ್ತಿರಲಿಲ್ಲ. ಹೇಳಿದರೆ, "ನಿಮಗೆ ಸಿನ್ಮವಾ ಮತ್ತೆಂತದಾ?" ಅಂತ ಬೈಯುತ್ತಾರೋ  ಅಂತ ಭಯ. ಅವರು ಮೇಳದ ಯಜಮಾನರು. ಯಾವಾಗಲೂ ಗಂಭೀರವಾಗಿಯೇ ಇರುತ್ತಿದ್ದರು. ನಮ್ಮೊಂದಿಗೆ ಸಲಿಗೆ ಅಂತ ಇರಲಿಲ್ಲ. ಮೇಳದ ವ್ಯವಹಾರ, ಕಲಾವಿದರು, ಕ್ಯಾಂಪ್ ಇದರಲ್ಲೇ ಬಿಝಿ ಇರುತ್ತಿದ್ದರು.   ಎಲ್ಲರೂ ಅವರಿಗೆ ಗೌರವ ಕೊಡುತ್ತಿದ್ದುದರಿಂದ, ದೂರವೇ ನಿಂತು ಮಾತಾಡುತ್ತಿದ್ದುದರಿಂದ ನಾವು ಅವರೊಂದಿಗೆ ಮಾತಾಡಲು ಹೆದರುತ್ತಿದ್ದೆವು. ಆಫೀಸಿನಂತೆ ಇರುವ ಒಂದು ಪ್ರತ್ಯೇಕ ರೂಮೂ ಆ ಮನೆಯಲ್ಲಿ ಇತ್ತು.

ಹಾಗಂತ ಅವರು ನಮಗೆ ಬೈದು, ಹೊಡೆದು ಮಾಡಿದವರಲ್ಲ. ಅವರು ಒಂದು ಸಲ ಎದುರಿಗೆ ಬಂದು ಒಮ್ಮೆ ಹೆಗಲಿನ ಮೇಲಿದ್ದ ಶಾಲನ್ನು ಪಟ್ ಅಂತ ಕೊಡಕಿ,  "ಎಂತ ಮಾಡ್ತ್ರಿ ಮಕ್ಳೆ" ಅಂದ್ರೆ ಸಾಕು, ನಾವೆಲ್ಲಾ ಆ ಜಾಗ ಬಿಟ್ಟು ಓಡಿ ಹೋಗುತ್ತಿದ್ದೆವು. ಮನೆಯಲ್ಲಿ ತುಂಬಾ ಜನರು ಇದ್ದು ಮನೆಯವರು, ಮಕ್ಕಳೆಲ್ಲಾ ಗಲಾಟೆ ಮಾಡುತ್ತಿದ್ದರೂ, ಅವರು ಮನೆಗೆ ಬಂದರು ಅಂದರೆ, ಮನೆ ಎಲ್ಲ ಗಪ್ ಚುಪ್. ಆಗ ಎಲ್ಲರದ್ದು ಪಿಸುಪಿಸು ಮಾತು ಅಷ್ಟೆ. ಅವರು ಆಟದ ಕ್ಯಾಂಪಿಗೆ ಹೋಗುತ್ತಾರೆ, ಮನೆಯಲ್ಲಿ ಇರುವುದಿಲ್ಲ ಎಂದು ಗೊತ್ತಾದ ಕೂಡಲೇ, ನಾವು ಎಲ್ಲರೂ ಸೇರಿಕೊಂಡು, ಸಿನಿಮಾಕ್ಕೆ ಹೋಗುತ್ತಿದ್ದೆವು. ಅದೇ ರೀತಿ ನಾನು ಕೆಲವು ಸಿನಿಮಾ ನೋಡಿದ್ದೆ. ಅದರಲ್ಲಿ ವಿಧಿವಿಲಾಸ, ಕೃಷ್ಣಗಾರುಡಿ, ಕೃಷ್ಣ ರುಕ್ಮಿಣಿ ಸತ್ಯಭಾಮೆ ಹೀಗೆ  ನೋಡಿದ ಕೆಲವು ಸಿನಿಮಾದ ಹೆಸರುಗಳು ಮಾತ್ರ ನೆನಪಿನಲ್ಲಿ ಉಳಿದಿದೆ.

ನಾನು ಶಂಕರನಾರಾಯಣದಲ್ಲಿ ಪಿಯುಸಿ ಓದುವಾಗ, ಸಿನಿಮಾ ನೋಡಲು ಕುಂದಾಪುರಕ್ಕೆ ಬರಬೇಕಿತ್ತು. ಸುಮಾರು ಇಪ್ಪತ್ತೆರಡು ಮೈಲಿ ದೂರ. ಮನೆಯಲ್ಲಿ ಗೊತ್ತಾದರೆ "ಸುಮ್ಮನೇ ದುಡ್ಡು ದಂಡ ಮಾಡ್ತ್ಯಾ" ಅಂತ ಅಮ್ಮ ಬೈಯುತ್ತಿದ್ದುದರಿಂದ ಮನೆಯಲ್ಲೂ ಹೇಳಲು ಸಾಧ್ಯವಿರಲಿಲ್ಲ.  ಸುಮಾರಿಗೆ ಶನಿವಾರ ಅಥವ ಭಾನುವಾರ ನಾನು ಬಸ್ಸಿನಲ್ಲಿ ಕುಂದಾಪುರಕ್ಕೆ ಹೋಗಿ, ಸಿನಿಮಾ ನೋಡಿಕೊಂಡು ಸಂಜೆಹೊತ್ತಿಗೆ ಪುನಃ ಶಂಕರನಾರಾಯಣ ಕ್ಕೆ ಬರುತ್ತಿದ್ದೆ. ಶನಿವಾರ ಮಧ್ಯಾಹ್ನ ಒಂದು ಪಿರಿಯೇಡ್ ಗೆ ಚಕ್ಕರ್ ಹಾಕಿ ಬಸ್ಸಿನಲ್ಲಿ ಕುಂದಾಪುರಕ್ಕೆ ಹೋದರೆ ಎರಡೂವರೆಯ ಮ್ಯಾಟನಿ ಶೋ ಮುಗಿಸಿಕೊಂಡು ಬರಲು ಆಗುತ್ತದೆ. ಆದರೆ ಸಂಜೆ ಮೊದಲ ಶೋ ಗೆ ಹೋದರೆ ಕೊನೆಯ ಬಸ್ಸು ಎಂಟುಕಾಲು ಗಂಟೆಗೆ ಇದ್ದು,ಅದು ತಪ್ಪಿ ಹೋದರೆ ಪಚೀತಿ ಆಗುತ್ತಿತ್ತು. ಮತ್ತೆ ಬಸ್ ಇಲ್ಲ. ಆ ರಾತ್ರಿ ಬಸ್ ಸ್ಟಾಂಡಿನಲ್ಲೇ ಇರಬೇಕಾದ್ದರಿಂದ ಹೆದರಿಕೆಯಾಗಿ, ನಾನು ಮ್ಯಾಟನಿ ಶೋ ಗೇ ಹೆಚ್ಚಿಗೆ  ಹೋಗುತ್ತಿದ್ದೆ. ಹಾಗೆಯೇ ನಾನು, ಬದುಕು ಬಂಗಾರವಾಯಿತು, ಬಯಲುದಾರಿ, ಮಯೂರ, ಭೂತಯ್ಯನ ಮಗ ಅಯ್ಯು ಮುಂತಾದ ಸಿನಿಮಾಗಳನ್ನು ಆಗ ನೋಡಿದ್ದೆ. ಕೆಲವು ಇಂಗ್ಲೀಷ್ ಸಿನಿಮಾವನ್ನೂ ನೋಡಿದ್ದೆ. ಚಾರ್ಲಿ ಚಾಪ್ಲಿನ್ ನ ಗೋಲ್ಡ್ ರಶ್ ಕೂಡ ಆಗ ನೋಡಿದ್ದೆ.

ಒಮ್ಮೆ ಏನೋ ತೊಂದರೆಯಾಗಿ ಮಧ್ಯಾಹ್ನ ಹೋಗಲು ಆಗದೇ ಸಾಯಂಕಾಲವೇ ಕುಂದಾಪುರಕ್ಕೆ ಹೋಗಿ  ಸಿನಿಮಾ ನೋಡಬೇಕಾದ ಪ್ರಸಂಗ ಬಂತು. ಯಾವ ಸಿನಿಮಾ ಅಂತ ಸರಿಯಾಗಿ ನೆನಪಿಲ್ಲ. ಕೊನೆಯ ಬಸ್ಸು ತಪ್ಪಿಸಿಕೊಳ್ಳಬಾರದು, ಸ್ವಲ್ಪ ಸಿನಿಮಾ ಇರುವಾಗಲೇ ಬಂದರಾಯಿತು ಎಂದು ಧೈರ್ಯ ಮಾಡಿದ್ದು. ಆದರೆ ಸಿನಿಮಾ ನೋಡುವುದರೊಳಗೆ ಹೊರಗಿನ ಪ್ರಪಂಚವನ್ನೆ ಮರೆತ ನಾನು, ಸಮಯದ ಪರಿವೆಯೇ ಆಗದೆ ಸಿನಿಮಾ ಮುಗಿಯದೇ ಬಿಟ್ಟು ಬರಲು ಆಗಲಿಲ್ಲ. ಸಿನಿಮಾ ಮುಗಿದು ಬಸ್ ಸ್ಟಾಂಡಿಗೆ ಓಡಿ ಓಡಿ ಬಂದರೆ ಬಸ್ಸು ಹೋಗಿಯಾಗಿತ್ತು.

ಏನು ಮಾಡುವುದು‌?. ಅಲ್ಲಿ ಯಾರ ಪರಿಚಯವೂ ಇಲ್ಲ. ಲಾಡ್ಜಿಂಗ್ ಗೆ ಹೋಗುವ ಎಂದರೆ ಕಿಸೆಯಲ್ಲಿ ದುಡ್ಡು ಇಲ್ಲ. ಬಸ್ ಸ್ಟಾಂಡಿನಲ್ಲಿ ಮಲಗಲು ಮನಸ್ಸು ಒಪ್ಪಲಿಲ್ಲ. ಏನು ಮಾಡುವುದು ಶಂಕರನಾರಾಯಣ ಕ್ಕೆ ಸುಮಾರು ಇಪ್ಪತ್ತ ಎರಡು ಕಿಲೋಮೀಟರ್ ದೂರ ಆಗುತ್ತದೆ. ತುಂಬಾ ಹೆದರಿಕೆಯಾಯಿತು. ಅಲ್ಲಲ್ಲಿ ಬೀದಿದೀಪ ಇದ್ದರೂ ಎಲ್ಲ  ಕತ್ತಲೆಯಂತೆಯೇ ಕಾಣುತ್ತಿತ್ತು. ಬಸ್ಸಿನ, ವಾಹನಗಳ ಓಡಾಟವೂ ಕಡಿಮೆಯಾಗುತ್ತಾ ಬಂದಿದ್ದು ನೀರವ ಮೌನದ ವಾತಾವರಣ.

ಸುಮ್ಮನೇ ಕಾಲು ಎಳೆದುಕೊಂಡು ನಡೆಯತೊಡಗಿದೆ. ಮೂರು ಮೈಲಿ ನಡೆದು ಕೋಟೇಶ್ವರ ತಲುಪುವ ಹೊತ್ತಿಗೆ ಕಾಲು ನೋಯಲು ಪ್ರಾರಂಭವಾಯಿತು.  ಸಂಜೆ ಏನೂ ತಿಂದಿರಲಿಲ್ಲ. ಹಸಿವೆಯೂ ಆಗುತ್ತಿತ್ತು. ಆದರೆ ಬೇರೆ ಏನು ಮಾಡಲೂ ತೋಚಲಿಲ್ಲ. ಹಾಗೂ ಹೀಗೂ ಕೋಟೇಶ್ವರಕ್ಕೆ ಬಂದು,ಅಲ್ಲಿಂದ ಎಡಕ್ಕೆ ತಿರುಗಿ ಹಾಲಾಡಿ ರಸ್ತೆಗೆ ಬಂದು, ಮತ್ತೆ ನಿಧಾನವಾಗಿ ನಡೆಯತೊಡಗಿದೆ. ನಡೆಯಲು ಸಾಧ್ಯವಾಗದೇ ಅಲ್ಲಿಯೇ ಒಂದು ಮೋರಿಯ ಬದಿಯಲ್ಲಿ ಸ್ವಲ್ಪ ಹೊತ್ತು ಕುಳಿತುಕೊಂಡೆ. ರಸ್ತೆಯ ದಾರಿ ದೀಪಗಳು ಬಿಟ್ಟರೆ, ಬೇರೆ ಯಾವುದೇ ಬೆಳಕು ಇರಲಿಲ್ಲ. ಜನರ ಓಡಾಟವೂ ಇರಲಿಲ್ಲ. ಸುತ್ತಲೂ ಕತ್ತಲೆ ಕತ್ತಲೆ. ಮತ್ತೆ ಎದ್ದು ನಿಧಾನವಾಗಿ ನಡೆಯತೊಡಗಿದೆ. ಆಗೊಂದು ಈಗೊಂದು ಲಾರಿಯೋ ಕಾರೋ ಸರ್ ರ್  ಅಂತ ಬಂದು ಮರೆಯಾಗಿ ಹೋಗುತ್ತಿತ್ತು.

ಅಂದು ಶನಿವಾರ. ಕುಂದಾಪುರದ ಸಂತೆ.  ಸಂತೆಗೆ ತರಕಾರಿಯನ್ನೋ ಮತ್ತೇನನ್ನೋ ಮಾರಲು ಹೋದ ಒಬ್ಬರು ಸಂತೆಯನ್ನು ಮುಗಿಸಿ, ಒಂದು ಎತ್ತಿನ ಗಾಡಿ ಹೊಡೆದುಕೊಂಡು ಅದೇ ದಾರಿಯಲ್ಲಿ ಬಂದರು. ನಾನು ಆ ಗಾಡಿ ಬರುವವರೆಗೆ ನಿಂತಿದ್ದು, ಅವರ ಗಾಡಿಯ ಜೊತೆಗೆ ನಡೆಯತೊಡಗಿದೆ. ಆ ಗಾಡಿ ಹೊಡೆಯುವವನಿಗೆ ಏನನ್ನಿಸಿತೋ "ಈ ರಾತ್ರಿಯಂಗೆ ಎಲ್ಲಿಗ್ ಹ್ಯಾತ್ರಿ" ಅಂತ ಕೇಳಿದ್ರು. ಯಾರೋ ಮನೆಯನ್ನು ಬಿಟ್ಟು ಓಡಿ ಬಂದ ಹುಡುಗ ಎಂದು ಎಣಿಸಿರಬೇಕು ಅವರು. "ಶಂಕರನಾರಾಯಣಕ್ಕೆ ಹೋಗಬೇಕಿತ್ತು. ಬಸ್ಸು ತಪ್ಪಿಹೋಯಿತು ಮರ್ರೆ" ಎಂದು ನನ್ನ ಅಳಲನ್ನು ತೋಡಿಕೊಂಡೆ. "ನೀವು ಅಲ್ಲೀವರೆಗೆ ಒಬ್ರೆ ನೆಡಕಂಡ್ ಹ್ವಾತ್ರ್ಯಾ?" ಎಂದು ಅವರು ಆಶ್ಚರ್ಯ ತೋರಿಸಿದರು. ನಾನು ಮಾತಾಡಲಿಲ್ಲ. ನನಗೂ ಉತ್ತರ ಗೊತ್ತಿರಲಿಲ್ಲ.

ನಾನು ಹಿಂದೆ ಗಾಡಿಯಲ್ಲಿ ಕುಳಿತುಕೊಳ್ಳಬಹುದೇ? ಎಂದು ತೀರಾ ಕಂಗಾಲಾದ ನಾನು ಕೇಳಿದೆ. ನನಗೆ ಆಗಲೇ ಕಾಲು ನೋಯುತ್ತಿದ್ದು ಇನ್ನು ನಡೆಯಲು ಸಾಧ್ಯವೇ ಇಲ್ಲ ಎಂಬಷ್ಟು ಬಳಲಿಕೆಯಾಗಿತ್ತು. ಅವನಿಗೆ ಕನಿಕರವಾಗಿರಬೇಕು. "ಹೋ ಅಡ್ಡಿಲ್ಲೆ. ಕೂಕಣಿ. ನಾನೇನ್ ನಿಮ್ಮನ್ ಹೊರಕಾ" ಎಂದರು., "ಆದ್ರೆ ನಾನು ಹುಣ್ಸಿಮಕ್ಕೀವರಗೇ ಮಾತ್ರಾ ಹೋಪುದು. ಮತ್ತೆಂತ ಮಾಡ್ತರಿ? " ಎಂದರು. ನಾನು ಏನೂ ಮಾತಾಡಲಿಲ್ಲ. ನಾನು ಹೋಗಿ ಗಾಡಿಯನ್ನು ಹತ್ತಿ ಕುಳಿತುಕೊಂಡೆ.

 ನಾನು ಅಷ್ಟರವರೆಗೆ ಎತ್ತಿನ ಗಾಡಿಯಲ್ಲಿ ಕುಳಿತಿರಲಿಲ್ಲ. ಆಚೆ ಈಚೆ ಎರಡೂ ಕಡೆಯ ದಂಡೆಯನ್ನು ಹಿಡಿದು ಗಟ್ಟಿಯಾಗಿ ಕುಳಿತುಕೊಂಡೆ. ಅದು ಗಡಬಡ ಮಾಡುತ್ತಾ ಆಚೆ ಈಚೆ ಅಲ್ಲಾಡುತ್ತಾ  ಸಾಗುತ್ತಿತ್ತು. ಗಾಡಿಗೆ ಕಟ್ಟಿದ ಎತ್ತುಗಳ ಕುತ್ತಿಗೆಯ ಗಂಟೆಗಳ ಶಬ್ದ, ಎತ್ತುಗಳ ಕಾಲಿನ ಟಕ್ ಟಕ್ ಶಬ್ದ, ಮೌನವನ್ನು ಭೇದಿಸುತ್ತಿದ್ದರೆ, ಎತ್ತುಗಳ ಮಧ್ಯ ಗಾಡಿಯ ಕೆಳಗಡೆ ಕಟ್ಟಿದ ಲಾಟೀನಿನ ಮಂದ ಬೆಳಕು ಗಾಡಿಯ ಅಸ್ಥಿತ್ವವನ್ನು ಆ ರಸ್ತೆಯಲ್ಲಿ ಎತ್ತಿ ತೋರಿಸುತ್ತಿತ್ತು.ಆಗಾಗ ಗಾಡಿಗೆ ಚಕ್ರಕ್ಕೆ ಬಿಗಿದ ಬ್ರೇಕ್ ಬಿರಿಗುಂಟೆ ಕರ್ರ್ ಕರ್ರ್ ಎನ್ನುತ್ತಿತ್ತು. ಮೆಲ್ಲಗೆ ಸಾಗುತ್ತಿತ್ತು ನಮ್ಮ ಪ್ರಯಾಣ. ಹುಣ್ಸೆಮಕ್ಕಿಗೆ ಹೋದ ಮೇಲೆ ಏನು ಮಾಡುವುದು? ಎಂದೂ ನನಗೂ ತಿಳಿಯಲಿಲ್ಲ. ಮನಸ್ಸಿನೊಳಗೆ ಪುಕಪುಕ ಆಗಿ, ನಾನು ಇಷ್ಟು ಉಮೇದು ಮಾಡಬಾರದಿತ್ತು ಎಂದುಕೊಂಡೆ.

ಹಾಗೆಯೇ ಗಾಡಿಯಲ್ಲಿ ಸುಮಾರು ಐದು ಮೈಲು ಪ್ರಯಾಣ ಮಾಡಿ, ಸುಣ್ಣಾರಿಯ ತನಕ ಬಂದದ್ದಾಯಿತು. ಸುಣ್ಣಾರಿಯ ಪೇಟೆಯ ಹತ್ತಿರ ಹತ್ತಿರ ಬರುವಾಗ, ಒಮ್ಮೆಲೆ ಎಲ್ಲೋ ಚಂಡೆ ಮದ್ದಲೆಗಳ ಶಬ್ದ ದೂರದಲ್ಲಿ ಕೇಳಿಸಿತು. ಹೋ, ಇಲ್ಲೆಲ್ಲೋ ಆಟ ಇರಬಹುದು. ರಾತ್ರಿ ಕಳೆಯಲು ಆಗುತ್ತದೆ ಎನ್ನಿಸಿ," ನಾನು ಇಲ್ಲಿಯೇ ಇಳಿಯುತ್ತೇನೆ" ಎಂದು ಗಾಡಿಯವನಿಗೆ ಹೇಳಿದೆ. ಅವನು ಗಾಡಿಯನ್ನು ನಿಲ್ಲಿಸಿದ. ಅಲ್ಲಿಯೇ ಇಳಿದುಕೊಂಡೆ.

ಚಂಡೆಯ ಶಬ್ದ ಕೇಳಿದ ಕಡೆಗೆ ನೋಡುತ್ತಾ ಹೆಜ್ಜೆ ಹಾಕಿದೆ. ಅದರೆ ಆಟದ ಗರದ ಬೆಳಕಾಗಲಿ, ಮೈಕಿನ ಶಬ್ದವಾಗಲೀ, ಜನ ಓಡಾಡುವುದಾಗಲೀ ಕಾಣಲಿಲ್ಲ. ಆದರೂ ಮುಂದೆ ಹೋಗಿ ನೋಡುವಾಗ, ಅಲ್ಲಿ ಒಂದು ಶಾಲೆಯಲ್ಲಿ ಯಕ್ಷಗಾನದ ಟ್ರಯಲ್ ಆಗುತ್ತಿತ್ತು. ಹೋ, ಮತ್ತೆ ನಾನು ತಪ್ಪಿಬಿದ್ದೆ. ಸುಮ್ಮನೆ ಗಾಡಿಯಲ್ಲಿ ಹೋಗಬೇಕಾಗಿತ್ತು ಅನ್ನಿಸಿತು. ಇನ್ನೇನು ಮಾಡುವುದು? ಎಂದುಕೊಳ್ಳುತ್ತಾ ಶಾಲೆಯ ಒಳಗೆ ಹೋದೆ. ಅಲ್ಲಿ ಹೋಗಿ ಇಣಕಿದಾಗ ಅಲ್ಲಿ ಯಕ್ಷಗಾನ ಹೇಳಿಕೊಡುತ್ತಿದ್ದವನು ನನ್ನ ಹಿರಿಯ ಅಣ್ಣ ದಾಮೋದರಣ್ಣಯ್ಯನೇ ಆಗಿದ್ದ.

ನನಗೆ ಒಮ್ಮೆಲೇ ಭಾರೀ ಸಂತೋಷವಾಯಿತು. ಹೋದ ಜೀವ ಬಂದ ಹಾಗಾಗಿ, ಟ್ರಯಲ್ ನಡೆಯುತ್ತಿದ್ದಲ್ಲಿಗೆ ಹೋದೆ. ಅಣ್ಣಯ್ಯ ನನ್ನನ್ಬು ನೋಡಿ ಆಶ್ಚರ್ಯದಿಂದ  "ಇಲ್ಲಿಗೆ ಹೇಗೆ ಬಂದೆ?" ಎಂದು ಕೇಳಿದ. ಏನೋ ಒಂದು ಸುಳ್ಳು ಹೇಳಿದೆ. ಅವನು ಮತ್ತೆ ಪ್ರಶ್ನಿಸದೇ, ಅಲ್ಲಿದ್ದವರಿಗೆಲ್ಲ ನನ್ನ ಪರಿಚಯವನ್ನು ಮಾಡಿಸಿದ. ಅದು ಸ್ವಲ್ಪ ದಿನದ ನಂತರ ಅಲ್ಲಿನ ಊರವರು ಸೇರಿ ಮಾಡುವ ಆಟದ ಗ್ರಾಂಡ್ ಟ್ರಯಲ್ ಆಗಿತ್ತು. ದಾಮೋದರಣ್ಣಯ್ಯನೇ ಅವರಿಗೆ ತಾಳ, ಕುಣಿತಗಳನ್ನು ಹೇಳಿಕೊಟ್ಟು ಪ್ರಸಂಗ ತರಬೇತಿ ಮಾಡಿದ್ದ. ನಾನೂ ಸಾಂದರ್ಭಿಕವಾಗಿ ಆ ಮಕ್ಕಳಿಗೆ ಒಂದೆರಡು ಕುಣಿತ ಹೇಳಿಕೊಡುವುದರಲ್ಲಿ ಭಾಗಿಯಾದೆ. ರಾತ್ರಿ ಅದೇ ಊರಿನ ಬ್ರಾಹ್ಮಣರೊಬ್ಬರ ಮನೆಯಲ್ಲಿ ಊಟವೂ ಆಯಿತು. ಅಂದು ರಾತ್ರಿ ಆ ಶಾಲೆಯಲ್ಲಿಯೇ ಮಲಗಿದೆವು. ಮರುದಿನ ಬೆಳಿಗ್ಗೆ ಅಣ್ಣನೊಂದಿಗೆ ಹೊರಟು ಅವನ ಸೈಕಲ್ಲಿನಲ್ಲಿ ಕುಳಿತು ಹಾಲಾಡಿಯವರೆಗೆ ಬಂದೆ. ನಂತರ ಬಸ್ಸು ಹತ್ತಿ ಶಂಕರನಾರಾಯಣದ ನನ್ನ ರೂಮಿಗೆ ಹೋದಾಗ "ಅಯ್ಯಬ್ಬ" ಅನ್ನಿಸಿತು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ