ಶನಿವಾರ, ಫೆಬ್ರವರಿ 24, 2018

ದಿನೇಶ ಉಪ್ಪೂರ:

*ನನ್ನೊಳಗೆ- 76*

ನನಗೂ ಸುಬ್ರಾಯರಿಗೂ ಸ್ನೇಹವಾದದ್ದೂ ಸುಬ್ರಮಣ್ಯ ಉಡುಪರ ಮೂಲಕವೆ. ಅದು ಸುಮಾರು 1987 ರ ಅವಧಿ ಇರಬೇಕು. ಅವರು ಪುತ್ತಿಗೆ ಮಠದ ಹಿಂದುಗಡೆಯಲ್ಲಿರುವ ಸುಗುಣ ಪ್ರಿಂಟರ್ಸ್ ಎಂಬ ಒಂದು ಪ್ರೆಸ್ ನಲ್ಲಿ ಮೆನೇಜರ್ ಆಗಿದ್ದರು. ಆ ಪ್ರೆಸ್ ನ್ನು ಪುತ್ತಿಗೆ ಸ್ವಾಮಿಯವರು ನಡೆಸುತ್ತಿದ್ದರು. ಸುಬ್ರಾಯರಿಗೆ ಅದೇ ಮಠದಲ್ಲಿಯೇ ಒಂದು ರೂಮನ್ನು ಉಳಿದುಕೊಳ್ಳಲು ಕೊಟ್ಟಿದ್ದರು. ನಾನು ಆಫೀಸು ಮುಗಿಸಿ ಸಂಜೆ ಅವರ ಪ್ರೆಸ್ ಗೆ ಹೋದರೆ, ಅದೇ ಹೊತ್ತಿಗೆ ಉಡುಪರೂ ಅಲ್ಲಿಗೆ ಬರುತ್ತಿದ್ದರು. ಅದೂ ಇದೂ ಮಾತಾಡಿ, ರಥಬೀದಿಯಲ್ಲೇ ಇದ್ದ ಮಿತ್ರ ಸಮಾಜಕ್ಕೋ ಅನುರಾಧಾ ಹೋಟೇಲಿಗೋ ಹೋಗಿ,  ತಿಂಡಿ ತಿಂದು ಕಾಫಿ ಕುಡಿದು ಆಮೇಲೆ ನಾನೂ ಉಡುಪರು ನಮ್ಮ ವಾದಿರಾಜ ರಸ್ತೆಯಲ್ಲಿ ಇರುವ ಭೋಜರಾವ್ ಕಂಪೌಂಡ್ ನ ರೂಮಿಗೆ ಹೋಗುತ್ತಿದ್ದೆವು. ಕೆಲವುಸಲ ಪುತ್ತಿಗೆ ಮಠದಲ್ಲಿ ಇರುವ ಸುಬ್ರಾಯರ ರೂಮಿಗೇ ಹೋಗಿ ಅವರಿಂದಲೇ ಒಂದು ಚಾ ಮಾಡಿಸಿ ಕುಡಿಯುವುದೂ ಇತ್ತು. ಗಂಜಿ ಊಟವೂ ಆಗುತ್ತಿತ್ತು.

ಈ ಸುಬ್ರಾಯರು ಹಿಂದೆ ಶಂಕರನಾರಾಯಣದಲ್ಲಿ ಹೋಟೇಲನ್ನೂ ಇಟ್ಟು, ಅದರಲ್ಲಿ ಲಾಭ ಕಾಣದೇ ಹೋಟೇಲು ವೃತ್ತಿ ಕೈಗೆ ಹತ್ತದೇ ಅದನ್ನು ಬಿಟ್ಟು ಉಡುಪಿಗೆ ಬಂದಿದ್ದರು. ಆಗ ಪರಿಚಯವಾದ ಅವರ ಮತ್ತು ಉಡುಪರ ಸ್ನೇಹ, ಉಡುಪಿಗೆ ಬಂದ ಮೇಲೂ ಮುಂದುವರಿದಿತ್ತು. ನಾನು ನನ್ನ ಎಲ್ಲಸುಖ ಕಷ್ಟಗಳನ್ನೂ ಅವರಲ್ಲಿ ಮುಕ್ತವಾಗಿ ಹೇಳಿಕೊಳ್ಳುತ್ತಿದ್ದೆ. ಅವರು ತುಂಬಾ ಸರಳ ಸ್ವಭಾವದವರು. ಕಷ್ಟಜೀವಿ. ಯಾವ ಪರಿಸ್ಥಿತಿಗೂ ಹೊಂದಿಕೊಳ್ಳುವವರು. ಯಾರನ್ನೂ ಸ್ನೇಹಮಾಡಿಕೊಂಡು ಮಾತಾಡಿಸಬಲ್ಲವರು. ಎಲ್ಲಿ ಹೋದರೂ ಪ್ರೆಸ್ಸಿನ ಸುಬ್ರಾಯರು ಎಂದರೆ ಸಾಮಾನ್ಯವಾಗಿ ಗೊತ್ತಿರುತ್ತಿತ್ತು. ಈಗ ಅವರು ಒಳಕಾಡಿನಲ್ಲಿ ಸ್ವಂತ ಪ್ರೆಸ್ ಮಾಡಿಕೊಂಡಿದ್ದಾರೆ.

ಹಿಂದೆ ನಾನು ಒಮ್ಮೆ ಅವರ ಮೂಲ ಮನೆಗೂ ಹೋಗಿದ್ದೆ. ಅದು ಕೊಲ್ಲೂರಿನಿಂದ ಮುಂದೆ ಹೊಸನಗರ ಮಾರ್ಗದಲ್ಲಿ ಇರುವ ಬ್ಯಾಡ್ಗೋಡು ಎಂಬ ಒಂದು ಹಳ್ಳಿ. ಚಳಿಯ ಪ್ರದೇಶ.

ಆವತ್ತು ಅವರ ಮನೆಗೆ ಹೋದಾಗ ಸಂಜೆಯಾಗಿತ್ತು. ಸಣ್ಣಗೆ ಮಳೆಯೂ ಬರುತ್ತಿತ್ತು ಅಂತ ನೆನಪು. ಸುಮಾರು ಅರ್ಧ ಗಂಟೆ ಗುಡ್ಡದದಾರಿ, ನೀರು ಇರುವ ತೋಡು, ಅಡಿಕೆ ತೋಟದ ಬದಿಯ ಏರಿ ಅಂತ ನಡೆದುಹೋಗಿದ್ದೆವು. ದೊಡ್ಡ ಅಡಿಕೆಯ ತೋಟದ ಹಿಂಭಾಗದ ಎತ್ತರದ ಜಾಗದಲ್ಲಿ ಅವರ ಮನೆ. ಅದು ಮಲೆನಾಡಿನ ತುಂಬಾ ಚಳಿಯ ಪ್ರದೇಶ. ಮನೆಯ ಹಿಂದೆ ಎತ್ತರವಾದ ಗುಡ್ಡ.

ಅಂದು ರಾತ್ರಿ ಅವರ ಮನೆಯಲ್ಲಿ ಚಿಮಣಿ ದೀಪದ ಬೆಳಕಿನಲ್ಲಿ ಕಳೆದದ್ದಾಯಿತು. ಊಟವಾಗಿ ಹೊರಗೆ ಚಾವಡಿಯಲ್ಲಿ ಕುಳಿತಿರುವಾಗಲೇ ಚಳಿ ತಾನೂ ಇದ್ದೇನೆ ಎಂದು ತೋರಿಸಿಕೊಂಡದ್ದರಿಂದ ನಾನು ಆಗಲೇ ಕೈಯನ್ನು ತಿಕ್ಕಿತಿಕ್ಕಿ ಬಿಸಿಮಾಡಿಕೊಳ್ಳುತ್ತಾ ಮುರುಟಿಕೊಳ್ಳತೊಡಗಿದ್ದೆ. ಮುಂಜಾಗ್ರತೆಯಿಂದ ನಾನು ಶಾಲು ತಂದಿದ್ದೆನಾದರೂ ಅದನ್ನು ಹೊದೆದಿದ್ದರೂ ಆ ಚಳಿಯ ಮುಂದೆ ಆ ಶಾಲೇ ತಣ್ಣಗಾಗುತ್ತಿರುವಂತೆ ಭಾಸವಾಗುತ್ತಿತ್ತು.

 ಅವರ ಮನೆಯವರೋ ತುಂಬಾ ಉಪಚಾರ ಮಾಡುವವರು. ಊಟಕ್ಕೆ ಬಡಿಸುವಾಗಲೂ ಬೇಡ ಬೇಡ ಎಂದರೂ ಬಡಿಸಿ, ನನ್ನನ್ನು ದಾಕ್ಷಿಣ್ಯಕ್ಕೆ ಒಳಪಡಿಸಿ ಹೊಟ್ಟೆಯಲ್ಲಿ ಜಾಗ ಇಲ್ಲದ ಹಾಗೆ ಮಾಡಿದ್ದರು. ಆಗಲೇ ನಿದ್ದೆ ಬರುವಂತಾಗಿದ್ದು ಮಂಪರು ಶುರುವಾಗಿತ್ತು. ಊಟವಾದ ಮೇಲೆ ಒಂದಷ್ಟು ಮಾತಾಡಿ, ಆಮೇಲೆ ಎಲ್ಲಿ ಮಲಗುವುದು? ಎಂದು ಚರ್ಚೆಯಾಗಿ " ಇವತ್ತು ಚಳಿ ಜೋರು ಉಂಟು. ಮಾಳಿಗೆಯ ಮೇಲೆ ಬೆಚ್ಚಗೆ ಇರುತ್ತದೆ" ಅಂತ ತೀರ್ಮಾನವಾಗಿ ನಾನೂ ಸುಬ್ರಾಯರೂ ಅಲ್ಲಿ ಮಲಗಲು ಹೊರಟೆವು. ಮನೆಯ ಪಡಸಾಲೆಯ ಮಧ್ಯದಲ್ಲಿರುವ ಒಂದು ಮರದ ಏಣಿಯನ್ನು ಇಳಿಬಿಟ್ಟ ಹಗ್ಗವನ್ನು ಹಿಡಿದು ಮೇಲೆ ಹತ್ತಿ ಮಾಳಿಗೆಯನ್ನು ಸೇರಿದೆವು. ಅಲ್ಲಿ ತಲೆಗೆ ಮಾಡು ತಾಗುತ್ತಿದ್ದುದರಿಂದ ನೆಟ್ಟಗೆ ನಿಲ್ಲಲೂ ಆಗುತ್ತಿರಲಿಲ್ಲ. ಕೈಯಲ್ಲೊಂದು ಬ್ಯಾಟರಿಯನ್ನೂ ಕೊಟ್ಟಿದ್ದರು. ಅದರ ಬೆಳಕಿನಲ್ಲಿ ಮೆಲ್ಲನೇ ಅಂಬೆಕಾಲಿಟ್ಟುಕೊಂಡು ಹೋಗಿ, ನನಗಾಗಿ ಹಾಸಿದ ಹಾಸಿಗೆಯಲ್ಲಿ  ಮಲಗಿದೆ. ಎರಡು ಕಂಬಳಿಯನ್ನು ಹೊದೆಯಲು ಕೊಟ್ಟಿದ್ದರು. ಅಷ್ಟಾದರೂ ಚಳಿ ತುಂಬಾ ಇದ್ದು, ನನ್ನ ಹಲ್ಲುಹಲ್ಲಿಗೆ ತಾಗಿ ಕಟಕಟ ಸದ್ದು ಆಗುತ್ತಿತ್ತು. ಕಾಲುಗಳು ತಂಡಿಯೇರಿದಂತೆ ಆಗುತ್ತಿತ್ತು. ಕಿವಿಯು ತಣ್ಣಗೆ ಆಗಿದ್ದರಿಂದ ನನಗೆ ಒಂದು ಪಾಣಿಪಂಚೆಯನ್ಬು ತಲೆಗೆ ಸುತ್ತಿಕೊಳ್ಳಲು ಕೊಟ್ಟಿದ್ದರು.

ಮಲಗಿದ ಸುಮಾರು ಹೊತ್ತಿನ ಬಳಿಕ ಸುಬ್ರಾಯರ ಅಮ್ಮ, ಮತ್ತೆ ಏಣಿಯಲ್ಲಿ ಮೇಲೆ ಹತ್ತಿ ಬಂದು, ಇಣಕಿ " ನಿದ್ದೆ ಬಂತಾ? ಇವತ್ತು ಚಳಿ ಜೋರು ಉಂಟು" ಎಂದು ನನ್ನ ಮೈಮೇಲೆ ಮತ್ತೊಂದು ತೆಳುವಾದ ಬಟ್ಟೆಯನ್ನು ಇಚ್ಚಡಿ ಮಾಡಿ ಹೊದೆಸಿ ಹೋದರು. ಬಹುಷ್ಯ ಅದು ಅವರ ಸೀರೆಯೇ ಇರಬೇಕು. ಅಂದು ಎಷ್ಟು ಹೊತ್ತಿಗೆ ನಿದ್ದೆ ಬಂತೋ ಗೊತ್ತಾಗಲಿಲ್ಲ.  ಬೆಳಿಗ್ಗೆ ತಡವಾಗಿ ಎಚ್ಚರವಾಯಿತು. ಆ ದಿನ ಅಲ್ಲಿಯೇ ಇದ್ದು ಅವರ ಮನೆಯ ಹವ್ಯಕರ ಮನೆಯ ತುಂಬು ಮನಸ್ಸಿನ ಆತಿಥ್ಯ ಸ್ವೀಕರಿಸಿ, ಸಂಜೆಗೆ ಉಡುಪಿಗೆ ಮರಳಿದೆವು. ಅದೊಂದು ನನ್ನ ನೆನಪಿನಲ್ಲಿ ಉಳಿದುಕೊಂಡ ಅನುಭವ.

 ಅವರ ಮದುವೆಯ ಸಂದರ್ಭದ ಘಟನೆಯೂ ನೆನಪಿನಲ್ಲಿ ಉಳಿಯುವಂತಾದ್ದು. ಅವರ ಮದುವೆಗೆಂದು ಅವರ ಹೆಂಡತಿಯ ಮನೆ ಇರುವ ಭೀಮನಕೋಣೆಯ ಊರಿಗೂ ನಮ್ಮ ಸ್ನೇಹಿತರ ಸೈನ್ಯಸಹಿತ ಹೋಗಿದ್ದೆವು. ಅದು ಸಾಗರದ ಹತ್ತಿರದ ಒಂದು ಹಳ್ಳಿ.

ಆ ದಿನ ಅವರ ಮನೆಯ ಹೊರ ಅಂಗಳದಲ್ಲಿ ದೊಡ್ಡ ತಗಡಿನ ಚಪ್ಪರ ಹಾಕಿ ಮಧ್ಯಾಹ್ನ ಊಟಕ್ಕೆ ವ್ಯವಸ್ಥೆ ಮಾಡಿದ್ದರು. ನಾನೂ ಉಡುಪರು ನಮ್ಮ ರೂಮಿನ ಕೆಳಗಡೆಯೇ ಇರುವ ಗೋಪಾಲ ಮಾಸ್ಟ್ರು ರಾಘು ಆಚಾರ್ ಅಡಿಗದ್ವಯರೂ ಎಲ್ಲರೂ ಸಾಲಾಗಿ ಒಟ್ಟಿಗೇ ಕುಳಿತಿದ್ದೆವು. ಮಾತಾಡುತ್ತಾ ನಗೆಯಾಡುತ್ತಾ ಊಟವನ್ನು ಮಾಡುತ್ತಿದ್ದೆವು. ಊಟದ ಮುಗಿಯುತ್ತಾ ಬಂದು ಮಜ್ಜಿಗೆಗೆ ಅನ್ನ ಬಂದು, ಮಜ್ಜಿಗೆ ಬಡಿಸುತ್ತ ಬರುವಾಗ, ಅದೆಲ್ಲಿತ್ತೋ  ದೊಡ್ಡದೊಂದು ಗಾಳಿ,  ಬಿರುಗಾಳಿಯೇ, ರೊಯ್ಯನೇ ಬೀಸಿತು ನೋಡಿ. ಆ ಭಯಂಕರ ಗಾಳಿಯ ಹೊಡೆತಕ್ಕೆ ಆ ತಗಡಿನ ಚಪ್ಪರಕ್ಕೆ ಕಟ್ಟಿದ ಹಗ್ಗವೇ ಬಿಚ್ಚಿಹೋಯಿತು. ಪಟಪಟ.. ಎನ್ನುತ್ತಾ ಒಂದು ಬದಿಯಿಂದ ತಗಡುಗಳು ಒಮ್ಮೆಲೇ ಮೇಲಕ್ಕೆ ಹಾರಿದವು. ಅದರ ಶಬ್ದಕ್ಕೆ ಏನು ಆಗುತ್ತಿದೆ ಎಂದು ತಿಳಿಯದೆ, ನಾವೆಲ್ಲ ಗಾಬರಿಯಾಗಿ, ಎಂಜಲು ಕೈಯಲ್ಲಿ  ಎದ್ದು ಬಿದ್ದು ಓಡಿದ್ದೆ ಓಡಿದ್ದು. ಪುಣ್ಯಕ್ಕೆ ಚಪ್ಪರ ಗಟ್ಡಿಯಾಗಿ ಇದ್ದುದರಿಂದ ತಗಡುಗಳು ಕೆಳಗೆ ಬೀಳಲಿಲ್ಲ. ಯಾರಿಗೂ ಪೆಟ್ಟಾಗಲಿಲ್ಲ.

ಮುಂದೆ ಸುಬ್ರಾಯರು ಅಂಬಾಗಿಲಿನಲ್ಲಿ ಮನೆ ಮಾಡಿದರು. ಅವರ ಮನೆಯ ಹತ್ತಿರವೇ ನಾನೂ ಜಾಗ ತೆಗೆದುಕೊಂಡು ಮನೆ ಕಟ್ಟಿಸಿದೆ.
 ಮೊನ್ನೆ ಮೊನ್ನೆ ಅವರ ಮಗಳ ನಿಶ್ಚಿತಾರ್ಥಕ್ಕೆ ಮತ್ತೆ ಅವರ ಮನೆಗೆ ಹೋಗುವ ಒಂದು ಯೋಗ ಬಂತು. ಆಗ ಹಿಂದಿನದ್ದೆಲ್ಲ ಒಮ್ಮೆ ನೆನಪಾಯಿತು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ