ಮಂಗಳವಾರ, ಫೆಬ್ರವರಿ 6, 2018

ದಿನೇಶ ಉಪ್ಪೂರ:

*ನನ್ನೊಳಗೆ - 71*

ಅಪ್ಪಯ್ಯ ಆಗ  ಕೊಲ್ಲೂರೋ ಮಾರಣಕಟ್ಟೆಯೋ ಮೇಳದಲ್ಲಿ ಭಾಗವತರಾಗಿ ಇದ್ದರೂ ಸಂಪಾದನೆ ಅಷ್ಟು ಚೆನ್ನಾಗಿ ಇರಲಿಲ್ಲ. ಕೆಲವು ದಿನ ಆಟವೇ ನಿಶ್ಚಯವಾಗದೇ ಮಲಗಿಕೊಳ್ಳುವ ಪರಿಸ್ಥಿತಿ. ಆಟವೇ ಇಲ್ಲದಿದ್ದ ಮೇಲೆ ಸಂಬಳ ಎಲ್ಲಿ? ಒಂದು ವರ್ಷವಂತೂ ಕೊಲ್ಲೂರು ಮೇಳದಲ್ಲಿ ಆಟ ವಹಿಸಿಕೊಂಡ ಯಜಮಾನರು ಮಧ್ಯದಲ್ಲಿ ಕೈ ಕೊಟ್ಟು (ಬಿಟ್ಟು)ಹೋದುದರಿಂದ ತಿರುಗಾಟವನ್ನು ಅರ್ಧದಲ್ಲಿಯೇ ನಿಲ್ಲಿಸಿ, ವೇಷದ ಸಾಮಾನುಗಳನ್ನು  ಗಣಪತಿ ಪೆಟ್ಟಿಗೆಯನ್ನು ಕೊಲ್ಲೂರಿನ ಯಾರದೋ ಮನೆಯಲ್ಲಿ, ಆಗ ಮೇಳದಲ್ಲಿದ್ದ ತೆಕ್ಕಟ್ಟೆ ಆನಂದ ಮಾಸ್ತರ್ ಮತ್ತು ಅಪ್ಪಯ್ಯ ಸೇರಿ ಇಟ್ಟು ಬಂದದ್ದೂ ಇತ್ತು. ಮನೆಯಲ್ಲಿ ಬೇಸಾಯವಿದ್ದರೂ ಎಲ್ಲ ಕೆಲಸವನ್ನು ಆಳುಗಳಿಂದ ಮಾಡಿಸಿಯೇ ಆಗಬೇಕಿತ್ತು.

ಹಾಗಾಗಿ ನನ್ನ ಮೊದಲ ದೊಡ್ಡಣ್ಣಯ್ಯ ದಾಮೋದರನು ಮೂರು ಮೈಲಿದೂರದ ಹಾಲಾಡಿ ಶಾಲೆಯಲ್ಲಿ ಏಳನೇ ಕ್ಲಾಸ್ ಕಲಿತು ಮುಗಿಸಿದವನೇ ಮುಂದೆ ಓದಲು ಆಗದೇ ಮನೆಯಲ್ಲಿ ಉಳಿದ. ಎರಡನೆಯ ಅಣ್ಣ ಕೃಷ್ಣಮೂರ್ತಿಗೆ ಹಾಲಾಡಿ ಶಾಲೆಯಲ್ಲಿ ಏಳನೇ ಕ್ಣಾಸು ಪಾಸಾದ ಕೂಡಲೆ, ಅಲ್ಲಿಂದ ಮತ್ತೆ ಐದು ಮೈಲಿ ದೂರದ ಶಂಕರನಾರಾಯಣದಲ್ಲಿ ಎಂಟನೇ ಕ್ಲಾಸಿಗೆ ಸೇರಿ ಮುಂದೆ ಓದುವ ಆಸೆ. ಆದರೆ ಹಾಲಾಡಿಯಲ್ಲಿರುವ ವಾರಾಹಿ ನದಿಯನ್ನು ದಾಟಿ ಶಂಕರ ನಾರಾಯಣಕ್ಕೆ ಹೋಗಬೇಕಾಗಿತ್ತು. ಆಗ ಈಗಿನಂತೆ ವಾರಾಹಿ ನದಿಗೆ ಸೇತುವೆ ಇರಲಿಲ್ಲ. ದೋಣಿಯನ್ನು ದಾಟಿ ಹೋಗಬೇಕಾಗಿತ್ತು. ಅಲ್ಲಿಯ ಮರ್ಲ ಚಿಕ್ಕು ದೈವಸ್ಥಾನದ ಹತ್ತಿರ ಒಬ್ಬರು ಸಾಯಿಬರು (ಅವರಿಗೆ ಕಳಿನ್ ಸಾಯಿಬ್ರು ಅಂತಲೇ ಕರೆಯುತ್ತಿದ್ದರು). ಅವರು ಒಂದು ದೋಣಿ ಇರಿಸಿಕೊಂಡು ನದಿದಾಟಲು ಬಂದ ಜನರನ್ನು ಆಚೆಗೆ ಈಚೆಗೆ ಮುಟ್ಟಿಸುತ್ತಿದ್ದರು. ಹಾಗೆ ದೋಣಿಯಲ್ಲಿ ನದಿ ದಾಟಲು ಅರ್ಧ ಆಣೆ ಕೊಡಬೇಕಾಗಿತ್ತು. ಪ್ತತೀದಿನ ಶಾಲೆಗೆ ಹೋಗುವುದೆಂದರೆ, ಹೋಗುವುದಕ್ಕೆ ಬರುವುದಕ್ಕೆ ಪ್ರತೀ ದಿನ ಒಂದು ಆಣೆ ಖರ್ಚು ಮಾಡಲೇಬೇಕಾಗಿತ್ತು. ಮನೆಯ ಪರಿಸ್ಥಿತಿಯಲ್ಲಿ ಅದು ಅಮ್ಮನಿಗೆ ಕಷ್ಟವಾಗಿ ಕಂಡದ್ದರಿಂದ 'ಮಾಣಿ ನೀನು ಓದಿದ್ ಸಾಕು. ಮನೆಯಲ್ಲಿ ಅದು ಇದು ಮಾಡ್ಕೊಂಡು, ಗಂಟಿ ಮೇಯಿಸ್ಕೊಂಡ್ ಆಯ್ಕೊ. ನಮಗೂ ಅನುಕೂಲ ಆತ್' ಎಂದು ಹೇಳಿದರು. ಆದರೆ ಕೃಷ್ಣಮೂರ್ತಿಯ ಮನಸ್ಸಿನಲ್ಲಿ ಹೇಗಾದರೂ ಮಾಡಿ ಮುಂದೆ ಓದಲೇ ಬೇಕೆಂಬ ಹಠ ಇತ್ತು. ಆದರೆ ಅದನ್ನು ಹೇಳುವ ಧೈರ್ಯ ಇರಲಿಲ್ಲ.

 ಹಾಲಾಡಿ ಶಾಲೆಯಲ್ಲಿ ಏಳನೇ ಕ್ಲಾಸು ಮುಗಿದ ವರ್ಷ, ಈ ಮಕ್ಕಳಿಂದ ಒಂದು ನಾಟಕ ಮಾಡುವ ಉಮೇದು ಊರಿನ ಕೆಲವು ಹಿರಿಯರಿಗೆ ಬಂತು. ಯಾವ ನಾಟಕ ಎಂದು, ಅದು ಇದು ಅಂತ ಚರ್ಚೆಯಾಗಿ, ಕಡೆಗೆ "ಕರ್ಣಾರ್ಜುನ ಕಾಳಗ" ಮಾಡುವುದು ಅಂತ ನಿಶ್ಚಯವಾಯಿತು. ನಮ್ಮ ಮನೆಯಿಂದ ಸುಮಾರು ಅರ್ಧ ಪರ್ಲಾಂಗ್ ಆಚೆಯಿರುವ ಎಂಕಪ್ಪ ಹಂಜಾರರು ಎನ್ನುವವರ ಮಗ ಗಣೇಶ ಹಂಜಾರನದ್ದೇ ಕರ್ಣ. ನಮ್ಮ ಕೃಷ್ಣಮೂರ್ತಿಯಣ್ಣನದ್ದು ಅರ್ಜುನ.  ಪ್ರತೀದಿನ ರಾತ್ರಿ ಹಾಲಾಡಿ ಶಾಲೆಯಲ್ಲಿಯೇ ಟ್ರಯಲ್. ಒಳ್ಳೆಯ ಪ್ರಚಾರವೂ ಆಗಿತ್ತು. ಹಾಲಾಡಿಯ ಮಾರಿಕಾನು ದೇವಸ್ಥಾನದ ಹತ್ತಿರವೇ ರಸ್ತೆಯ ಬದಿಯಲ್ಲಿ ಒಂದು ದೊಡ್ಡ ಬಾವಿಯ ಕಟ್ಟೆ. ಅದರ ಪಕ್ಕದಲ್ಲೇ ವಿಶಾಲವಾದ ಜಾಗದಲ್ಲಿ ನಾಟಕದ ಸ್ಟೇಜ್ ಕಟ್ಟಿ ಪರದೆ ಬಿಟ್ಟು ಎಲ್ಲವೂ ಸಿದ್ದವಾಯಿತು. ಗ್ಯಾಸ್ ಲೈಟ್ ಬೆಳಕಿನಲ್ಲಿ ನಾಟಕ. ನಿಶ್ಚಿತ ದಿನದಂದು "ಮಕ್ಕಳನಾಟಕ ಅಲ್ವಾ ಹ್ಯಾಂಗ್ ಮಾಡ್ತೊ ಕಾಂಬ" ಎಂದು ಪೇಟೆಯವರು, ಮಕ್ಕಳ ಸಂಬಂಧಿಕರು, ಆಸುಪಾಸಿನವರು ಎಲ್ಲರೂ ಬಂದಿದ್ದರು. ಈಗಿನಂತೆ ಟಿವಿ, ಮೊಬೈಲ್ ಎಲ್ಲ ಇಲ್ಲದ ಕಾಲವಲ್ಲವೇ? ಇಂತಹ ಮನರಂಜನೆ ಇದ್ದಾಗ ಹಳ್ಳಿಯವರು ತಪ್ಪದೇ ಬಂದು ನೋಡುತ್ತಿದ್ದರು. ಅಜ್ಜಯ್ಯ ಶ್ರೀನಿವಾಸ ಉಪ್ಪೂರರೂ ಮೊಮ್ಮಗನ "ಹೊಡ್ತ" ನೋಡುವ ಎಂದು ನಾಟಕಕ್ಕೆ ಬಂದು ಎದುರಿಗೇ ಕುಳಿತಿದ್ದರು.

ಕೃಷ್ಣಮೂರ್ತಿ ಅಣ್ಣಯ್ಯನಿಗೆ ಸ್ವಲ್ಪ ಯಕ್ಷಗಾನದ ಟಚ್ಚೂ ಇದ್ದುದರಿಂದ, ಹಾಗೂ ಸಾಕಷ್ಟು ಕರ್ಣಾರ್ಜುನ ಕಾಳಗದ ಬಯಲಾಟ ನೋಡಿದ್ದರಿಂದ ಅವನು ತುಂಬಾ ಆತ್ಮವಿಶ್ವಾಸದಿಂದ ಸಾಕಷ್ಟು ಚೆನ್ನಾಗಿಯೇ ಅಭಿನಯಿಸಿದ್ದನಂತೆ. ಜೊತೆಗೆ ಅಜ್ಜಯ್ಯನೂ 'ಹಾಂಗಲ್ಲ ಹೀಂಗೆ ಮಾಡ್' ಎಂದು ಸ್ವಲ್ಪ ನಿರ್ದೇಶನ ಕೊಟ್ಟಿದ್ದಿರಬಹುದು.

ನಾಟಕದಲ್ಲಿ ಇವನ ಡೈಲಾಗ್ ಹೇಳುವಾಗ ಭಾರೀ ಚಪ್ಪಾಳೆ ಬಂತು. ಎದುರು ಪಾತ್ರಧಾರಿ ಕರ್ಣನಾಗಿ ಪಾತ್ರವಹಿಸಿದ್ದ ಗಣೇಶ ಹಂಜಾರನ ಪಾತ್ರ ಸಪ್ಪೆಯಾಯಿತು. ಅದು ಅವನಿಗೂ ಅನ್ನಿಸಿರಬೇಕು. ತನ್ನದು ಉಟಾವ್ ಆಗಲಿಲ್ಲ ಎಂಬ ಬೇಸರದೊಡನೆ ಹೊಡಿ ಹಾರಿಸಿ ಚಪ್ಪಾಳೆಗಿಟ್ಟಿಸಿಕೊಳ್ಳುತ್ರಿದ್ದ ಅರ್ಜುನನ ಮೇಲೂ ಸಿಟ್ಟು ಬಂದು, ಏನಾದರೂ ಮಾಡಿ ಅರ್ಜುನನ್ನು ಸಣ್ಣದು ಮಾಡಬೇಕು ಎಂದೋ ಅಥವ ಸಿಟ್ಟಿನಲ್ಲಿ ಗೊತ್ತಾಗದೇ ಹೋಯಿತೋ ಅಂತೂ ಸರ್ಪಾಸ್ತ್ರವನ್ನು ಪ್ರಯೋಗಿಸುವ ಸಂದರ್ಭ, ಅವನು ಬಿಟ್ಟ ಬಾಣ ಸ್ವಲ್ಪ ಹೆಚ್ಚು ರಭಸದಿಂದ ಬಂದು ಅಣ್ಣಯ್ಯನಿಗೆ ತಾಗಿತು. ಅಣ್ಣಯ್ಯನಿಗೆ ಏನಾಗುತ್ತಿದೆ ಅಂತ ಗೊತ್ತಾಗುವುದರ ಒಳಗೆ ಹಿಂದಕ್ಕೆ ಹಾರಿದ್ದರಿಂದ ಆಯತಪ್ಪಿ ಕೆಳಗೆ ಬಿದ್ದುಬಿಟ್ಟ. ಆಗ ಏನಾಯಿತು? ಏನಾಯಿತು? ಅಂತ ಜನ ಕುಳಿತಲ್ಲಿಂದ ಎದ್ದು ಸ್ಟೇಜಿನ ಕಡೆಗೆ ಬರತೊಡಗಿದರು. ಅಜ್ಜಯ್ಯನೂ ಆಧಾರಕ್ಕೆ ಹಿಡಿದ ಕೋಲನ್ನೇ ಎತ್ತರಕ್ಕೆ ತೂರಿ, "ಬಾಣ ಹೊಡೆದು ಕೊಲ್ತಿಯನಾ ನಮ್ಮ ಮಾಣಿನಾ?" ಅಂತ ಆರ್ಭಟಿಸುತ್ತಾ ಎದ್ದೇ ಸ್ಟೇಜಿಗೆ ಏರಿ ಬಿಟ್ಟರು. ಗಣೇಶ ಹಂಜಾರನಿಗೆ ಗಾಬರಿಯಾಗಿರಬೇಕು. ಥಟ್ಟನೇ ಅವನು ವೇಷದಸಹಿತ ಹಿಂದಕ್ಕೆ ಹಾರಿ ಪಕ್ಕದ ಗುಡ್ಡ ಹತ್ತಿ ಕತ್ತಲಲ್ಲಿ ಏಳುತ್ತಾ ಬೀಳುತ್ತಾ ಹೋ ಎಂದು ಕೂಗುತ್ತಾ  ಓಡತೊಡಗಿದ. ಅಜ್ಜಯ್ಯ ಅವನನ್ನು ಹಿಂಬಾಲಿಸುತ್ತಾ "ನಿನ್ನನ್ನ್ ಇವತ್ ಬಿಡುದಿಲ್ಲ. ಎಲ್ ಹೋತೆ ಕಾಂತೆ' ಅಂತ ಬೆನ್ನಟ್ಟಿದರು. ನಂತರ ಊರ ಜನರೆಲ್ಲ ಸೇರಿ ಹಂಜಾರನನ್ನು ಹಿಡಿದು, ಧೈರ್ಯ ಹೇಳಿ ಕರೆದುಕೊಂಡು ಬಂದರು. ಅಜ್ಜಯ್ಯನನ್ನು ಸಮಾಧಾನ ಮಾಡಿ ಕುಳ್ಳಿರಿಸಿ ನಾಟಕವನ್ನು ಮುಂದುವರಿಸಿದರಂತೆ.

ರಜೆ ಮುಗಿದ ಕೂಡಲೇ ಮತ್ತೆ ತಾನು ಮುಂದೆ ಓದಬೇಕು ಅಂತ ಹಠಮಾಡತೊಡಗಿದ ಮಗನನ್ನು ಸುಧಾರಿಸಲಾಗದೇ ಮನೆಯಲ್ಲಿ 'ಏನು ಬೇಕಾದರೂ ಮಾಡಿಕೋ' ಎಂದದ್ದೇ, ಒಂದು ದಿನ ಕೃಷ್ಣಮೂರ್ತಿಯಣ್ಣಯ್ಯ ಮನೆಯಲ್ಲಿ ಯಾರಿಗೂ ಹೇಳದೇ ಕೇಳದೆ ಬಸ್ಸು ಹತ್ತಿ ಹೋಗಿಯೇ ಬಿಟ್ಟ. ಮಗ ಮನೆ ಬಿಟ್ಟು ಹೋದದ್ದು ಗೊತ್ತಾಗಿ ಮನೆಯಲ್ಲಿ ಹಾಹಾಕಾರ ಶುರುವಾಯಿತು. ಅಪ್ಪಯ್ಯ ಮನೆಗೆ ಬಂದ ಕೂಡಲೆ ವಿಷಯ ತಿಳಿದು ಚಿಂತೆಗೊಳಗಾದರು.  ಎಲ್ಲಿ ಅಂತ ಹುಡುಕುವುದು? ಆಟಕ್ಕೆ ಹೋದ ಊರಿನಲ್ಲಿ ಅಲ್ಲಿ ಇಲ್ಲಿ ಎಲ್ಲಾ ಕಡೆಯಲ್ಲೂ ವಿಚಾರಿಸಿದರು. ಮಗ ಬೇಸರಗೊಂಡು ಮನೆಯನ್ನು ಬಿಟ್ಟು ಹೋದದ್ದು ಅವರಿಗೆ ನುಂಗಲಾರದ ತುತ್ತಾಯಿತು. "ಎಲ್ಲಾದರೂ ಇರಲಿ ಚೆನ್ನಾಗಿ ಇದ್ದರೆ ಸಾಕು" ಎಂದು ದೇವರಲ್ಲಿ ಬೇಡುವುದೊಂದೆ ಆಯಿತು.

ಅತ್ತ, ಮನೆ ಬಿಟ್ಟುಹೋದ ಕೃಷ್ಣಮೂರ್ತಿಯಣ್ಣಯ್ಯ ಗೊತ್ತುಗುರಿಯಿಲ್ಲದೇ ಎಲ್ಲೆಲ್ಲೋ ತಿರುಗಿದ. ಎಲ್ಲ ಕಡೆಯಲ್ಲಿಯೂ ಕೆಲಸಕ್ಕೆ ಪ್ರಯತ್ನಿಸಿದ. ಏಳನೇ ಕ್ಲಾಸು ಓದಿದವನಿಗೆ ಗುರುತು ಪರಿಚಯ ಇಲ್ಲದ ಊರಿನಲ್ಲಿ ಎಲ್ಲಿ ಕೆಲಸ ಸಿಕ್ಕೀತು? ಯಾರು ಕರೆದು ಕೆಲಸ ಕೊಟ್ಟಾರು? ಅಂತೂ ಶಿವಮೊಗ್ಗ, ದಾವಣಗೆರೆ ಹೊಸಪೇಟೆ ಅಂತ ಅಲ್ಲಿ ಇಲ್ಲಿ ಓಡಾಡಿ, ಸಿಕ್ಕಿದ ಕಡೆಯಲ್ಲಿ ಯಾರದೋ ಮನೆಯ ಜಗುಲಿಯಲ್ಲೋ, ಬಸ್ ಸ್ಟೇಂಡಿನಲ್ಲೋ ರಾತ್ರಿಯನ್ನು ಕಳೆದು, ಮತ್ತೆ ಹಾಗೂ ಹೀಗೂ ಅಂತೂ ಮೈಸೂರನ್ನು ಸೇರಿದ. ಅಲ್ಲಿ ಒಂದು ಹೋಟೇಲಿನಲ್ಲಿ ಇವನಿಗೆ ಕೆಲಸ ಸಿಕ್ಕಿತ್ತು. ಅದನ್ನೇ ಆಸಕ್ತಿಯಿಂದ ಮಾಡಿ ಹೋಟೇಲಿನ ಯಜಮಾನರ ವಿಶ್ವಾಸ ಗಳಿಸಿದ ಕೃಷ್ಣಮೂರ್ತಿಯಣ್ಣಯ್ಯ, ಹೋಟೇಲಿನ ಪಕ್ಕದಲ್ಲಿ ಇದ್ದ ಒಂದು ಸ್ಟುಡಿಯೋಗೂ ಸಮಯವಾದಾಗಲೆಲ್ಲ ಹೋಗಿ ಪೋಟೋಗ್ರಫಿಯನ್ನು  ಕಲಿಯತೊಡಗಿದ. ತನ್ನ ಆಸಕ್ತಿಯ ವಿಷಯವಾದ ಚಿತ್ರಕಲೆಯನ್ನು ಹೆಚ್. ಆರ್. ಶೇಷಾದ್ರಿ ಎಂಬವರಲ್ಲಿ ಕಲಿತುಕೊಂಡ. ಇವನ ಜೊತೆಗೆ ಅದೇ ಹೋಟೇಲಿನಲ್ಲಿ ಕೆಲಸ ಮಾಡುತ್ತಿದ್ದ ಸುಬ್ರಾಯ ಎಂಬ ಹುಡುಗನೂ ಇವನಿಗೆ ಜೊತೆಯಾಗಿದ್ದನಂತೆ.

ಮನೆಯಲ್ಲಿ ಅಪ್ಪಯ್ಯ, ಮಗನನ್ನು ಹುಡುಕಿ ಹುಡುಕಿ ಸುಸ್ತಾಗಿ ಮಗನ ಆಶೆಯನ್ನು ಬಿಟ್ಟು ಅವನ ಚಿಂತೆಯಲ್ಲೇ ಇದ್ದರು. ಅದಾದ ಸುಮಾರು ಆರೇಳು ವರ್ಷಗಳ ನಂತರ ಅಪ್ಪಯ್ಯನಿಗೆ, ಒಮ್ಮೆ ಮೈಸೂರಿಗೆ ಆಟಕ್ಕಾಗಿ ಹೋಗುವ ಅವಕಾಶ ಬಂದಿತು.  ಮೈಸೂರಿಗೆ ಹೋದವರು  ಅಲ್ಲಿ ಅವರ ತಾಯಿಯ ತಂಗಿಯ ಮಗಳೊಬ್ಬಳು ಲಕ್ಷ್ಮಿದೇವಮ್ಮ ಅಂತ ಇದ್ದರು, ಅವರ ಮಗ ಒಂದು ಹೋಟೆಲಿನಲ್ಲಿ ಕೆಲಸಕ್ಕಿದ್ದ ಎಂದು ತಿಳಿದಿದ್ದರಿಂದ ಆ ತಂಗಿಯ ಮನೆಗೆ ಹೋಗಲು ದಾರಿ ತಿಳಿಯದೇ, ಅವರ ಮಗ ಇದ್ದ ಹೋಟೇಲನ್ನು ಹುಡುಕಿಕೊಂಡು ಹೋದರು. ಅಂತೂ ಹೋಟೆಲಿಗೆ ಹೋಗಿ, ಲಕ್ಷ್ಮಿದೇವಮ್ಮನ ಮಗ ಸುಬ್ರಾಯನನ್ನು ಹುಡುಕಿ ತನ್ನ ಪರಿಚಯ ಹೇಳಿಕೊಂಡು ಅವರ ಮನೆಗೆ ಕರೆದುಕೊಂಡು ಹೋಗಲು ಹೇಳಿದರು. ಹಾಗೆಯೇ ಆಚೀಚೆ ನೋಡುತ್ತಿರುವಾಗ ಒಬ್ಬ ಹುಡುಗ ಮರೆಯಲ್ಲಿ ಇವರನ್ನೇ ನೋಡುತ್ತಾ ಅಡಗಿಕೊಳ್ಳುತ್ತಿರುವುದು ಅಕಸ್ಮಾತ್ ಆಗಿ ಕಾಣಿಸಿತು. ಸರಿಯಾಗಿ ನೋಡಿದರೆ ಅವನೇ, ಮಗ ಕೃಷ್ಣಮೂರ್ತಿ. ಒಮ್ಮೆ ರೋಮಾಂಚನವಾಗಿರಬೇಕು ಅಪ್ಪಯ್ಯನಿಗೆ. ಮಗನೆಂದು ಗೊತ್ತಾಗುತ್ತಲೇ ಕೂಡಲೇ ಓಡಿ ಹೋಗಿ ಅವನನ್ನು ಕಂಡು ಮಾತಾಡಿಸಿದರು. ಅಷ್ಟರವರೆಗೂ ಅದೇ ಹೋಟೆಲಿನಲ್ಲಿದ್ದರೂ ಆ ಸುಬ್ರಾಯ ಎನ್ನುವವನು ತನ್ನ ಸಂಬಂಧಿಕ ಎಂದು ಕೃಷ್ಣಮೂರ್ತಿಯಣ್ಣನಿಗೆ ತಿಳಿದಿರಲೇ ಇಲ್ಲ. ಯಾವ ಊರಿನಿಂದ ಬಂದದ್ದು ಅಂತ ಹೇಳಿದರಲ್ಲವೇ ಗೊತ್ತಾಗುವುದು? ಅಂತೂ ಮಗನನ್ನು ನೋಡಿ ಅಪ್ಪಯ್ಯನಿಗೆ ಭಾರೀ ಸಂತೋಷವಾಯಿತು.ಆಗಲೇ
"ಮನೆಗೆ ಹೊರಡು" ಎಂದು ಒತ್ತಾಯ ಮಾಡಿದರು. ಅಷ್ಟರಲ್ಲಿ ಕೃಷ್ಣಮೂರ್ತಿಯಣ್ಣನಿಗೆ ಮನೆಯಿಂದ ಹೇಳದೇ ಕೇಳದೇ ಬಂದುದು ತಪ್ಪಾಯಿತು ಅನ್ನಿಸಿರಬೇಕು. ಅಪ್ಪಯ್ಯನ ಮಾತಿಗೆ ಒಪ್ಪಿ, ಹೋಟೆಲ್ ಯಜಮಾನರಿಗೆ ವಿಷಯವನ್ನು ಹೇಳಿ, ಲಕ್ಷ್ಮಿದೇವಮ್ಮನ ಮನೆಗೂ ಹೋಗಿ ಅಪ್ಪಯ್ಯನೊಂದಿಗೆ  ಹೊರಟ. ಅಲ್ಲಿ ಅಪ್ಪಯ್ಯನು ಒಪ್ಪಿಕೊಂಡ ಆಟ ಮುಗಿಸಿ ಮಗನೊಂದಿಗೆ ಮನೆಗೆ ಬಂದರು. ಅದೇ ಸುಬ್ರಾಯ ಎನ್ನುವವರು ಮುಂದೆ ಮೈಸೂರಿನಲ್ಲಿ ಮುರಳಿ ಸ್ಟುಡಿಯೋ ಎಂಬ ಸ್ಟುಡಿಯೋವನ್ನು ಇಟ್ಟು ಪೋಟೋಗ್ರಾಫಿಯನ್ನೇ ಮುಂದುವರಿಸಿದರಂತೆ.

ಮುಂದೆಯೂ ಕೃಷ್ಣಮೂರ್ತಿ ಯಣ್ಣಯ್ಯನಿಗೆ ಓದು ಮುಂದುವರಿಸಲು ಆಗಲಿಲ್ಲ. ಮತ್ತೆ ಬೆಂಗಳೂರಿಗೆ ಹೋಗಿ, ನನ್ನ ಅಕ್ಕನ ಗಂಡನ ತಮ್ಮನ ಹೋಟೆಲಿಗೆ ಸೇರಿಕೊಂಡು ಹೋರಾಟದ ಬದುಕು ನಡೆಸಿದ. ಕಷ್ಟಪಟ್ಟು ಹಗಲೂ ರಾತ್ರಿ ದುಡಿದು ಅಲ್ಲಿಯೇ ಅವನ ಜೀವನದ ದಾರಿಯನ್ನು ಕಂಡುಕೊಂಡ. ಹೋಟೆಲಿನಲ್ಲಿ ಸಪ್ಲೈಯರ್ ಆಗಿ, ಕ್ಯಾಶಿಯರ್ ಆಗಿ ರೋಜ್  ಅಡುಗೆಯವನಾಗಿ ದುಡಿದ. ಒಂದು ಸೆಕೆಂಡ್ ಹ್ಯಾಂಡ್ ಅಟೋರಿಕ್ಷಾವನ್ನು ಖರೀದಿಸಿ ಅದನ್ನು ಬಾಡಿಗೆಗೆ ಓಡಿಸಿ ಜೀವನ ನಡೆಸಿದ. ಮುಂದೆ ಬಸವನ ಗುಡಿಯಲ್ಲಿರುವ ಗುರುನರಸಿಂಹ ಕಲ್ಯಾಣ ಮಂದಿರದಲ್ಲಿ ಮೇನೇಜರ್ ಆಗಿ ದುಡಿದು, ಈಗ ನಿವೃತ್ತನಾಗಿ  ಬೆಂಗಳೂರಿನಲ್ಲಿಯೇ ಹವ್ಯಾಸಕ್ಕಾಗಿ ಯಕ್ಷಗಾನದ ವಿವಿಧ ರೀತಿಯ ಗೊಂಬೆಗಳನ್ನು ತಯಾರಿಸುವುದು, ಆಟ ನೋಡುವುದು ಅದು ಇದು ಮಾಡಿಕೊಂಡು ವಿಶ್ರಾಂತ ಜೀವನವನ್ನು ನಡೆಸುತ್ತಿದ್ದಾನೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ