ಶನಿವಾರ, ಫೆಬ್ರವರಿ 3, 2018

ದಿನೇಶ ಉಪ್ಪೂರ:

ನನ್ನೊಳಗೆ 67

    ನಾನು ಚಿಕ್ಕವನಿರುವಾಗ, ಮನೆಯಲ್ಲಿ ಏನಾದರೂ ವಿಶೇಷ ಊಟದ ಕಾರ್ಯಕ್ರಮ ಆದಾಗ, ನೆಂಟರು ಇಷ್ಟರು ಬಂದರೆ, ಅವರು ಈಗಿನಂತೆ ಊಟದ ಸಮಯಕ್ಕೆ ಬಂದು ಊಟ ಆಗಿ ಕೈ ತೊಳೆದ ಕೂಡಲೆ " ಹ್ವಾಯ್ ನಂಗೆ ಒಂಚೂರ್ ಹರಬ್ ಇತ್ತ್ ಮರ್ರೆ, ನಾನ್ ಬತ್ತೆ. ಅಕ್ಕಾ" ಎಂದು ತಮ್ಮತಮ್ಮ ಮನೆಗೆ ಹೊರಡುತ್ತಿರಲಿಲ್ಲ. ಬೆಳಿಗ್ಗೆ ಹತ್ತು ಗಂಟೆಯ ಹೊತ್ತಿಗೆಲ್ಲ ಬಂದು "ಏನಾರೂ  ಕೆಲಸ ಮಾಡುಕ್ಕಿತ್ತಾ? ಎಂದು ಉಪಚಾರದ ಮಾತಾಡಿ, ಬಾಳೆ ಎಲೆ ಸರಿ ಮಾಡುವುದು. ಬಾವಿಯಿಂದ ನೀರು ತರುವುದು,ನಂತರ ಬಂದವರಿಗೆ ನೀರು ಬೆಲ್ಲದ ಪಾತ್ರೆ,  ವೀಳ್ಯದ ಎಲೆ ಪೆಟ್ಟಿಗೆ ನೀಡುವುದು ಮಾಡುತ್ತಿದ್ದರು.  ಚಾವಡಿಯಲ್ಲಿ ಬಣ್ಣದ ಚಾಪೆ ಹಾಸಿ ಬನ್ನಿ ಬನ್ನಿ ಎಂದು ಉಪಚರಿಸುತ್ತಿದ್ದರು. ಏನೂ ಇಲ್ಲದಿದ್ದರೆ ಬಂದ ಇತರರ ಜೊತೆ ಲೋಕಾಭಿರಾಮವಾಗಿ ಸುಖಕಷ್ಟ ಮಾತಾಡುವುದು ಮಾಡುತ್ತಿದ್ದರು.  ಊಟದ ನಂತರವೂ ಕೆಲವರು ಎರಡನೇ ಊಟದ ಪಂಕ್ತಿಗೆ ಬಡಿಸುವುದೂ ಇತ್ತು. ನಂತರ ಉಳಿದ ಪದಾರ್ಥಗಳ ವಿಲೆವಾರಿ, ಸಿಹಿ ಖಾರತಿಂಡಿಗಳ ಹಂಚಿಕೆಗಳಿಗೆ ನೆರವಾಗುತ್ತಿದ್ದರು. ಕೆಲವು ಬಂಧುಗಳು ನಮ್ಮ ಮನೆಯಲ್ಲಿಯೇ ಉಳಿದುಕೊಂಡು ರಾತ್ರಿಯೂ ಇದ್ದು ಮರುದಿನ ಮನೆಗೆ ಹೋಗುತ್ತಿದ್ದರು. ಅವರಿಗಾಗಿ ರಾತ್ರಿ ಭಜನೆಯೋ ತಾಳಮದ್ದಲೆಯೋ ಹರಿಕತೆಯೋ ಏನೂ ಇಲ್ಲದಿದ್ದರೆ ಒಂದು ಸಣ್ಣ ಇಸ್ಪೀಟು ಆಟದ ವ್ಯವಸ್ಥೆ ಇರುತ್ತಿತ್ತು. ನಾವು, ಬದಿಯಲ್ಲಿ ಇದ್ದು ಅವರಿಗೆ ಚಾ,  ಕುಡಿಯಲು ನೀರು, ವೀಳ್ಯ ಸರಬರಾಜಿಗೆ ಓಡಾಡಿ ಸಂಭ್ರಮಿಸುವುದಿತ್ತು.

 ನನ್ನ ನೆನಪಿದ್ದ ಹಾಗೆ ಹರಿಕತೆಯನ್ನು ನಾನು ಮೊದಲು ನೋಡಿದ್ದು ನಮ್ಮ ಮುಧೂರಿಯ ಸಾವಿತ್ರಮ್ಮನ ಮನೆಯಲ್ಲಿ. ಆ ದಿನ ಅಲ್ಲಿ ಮಧ್ಯಾಹ್ನ ಏನೋ ವಿಶೇಷ ಊಟದ ಕಾರ್ಯಕ್ರಮ ಇತ್ತು. ರಾತ್ರಿ ಹರಿಕತೆ. ಮಾ. ನಾರಾಯಣ ಹೆಬ್ಬಾರ್ ಎನ್ನುವವರನ್ನು ಹರಿಕತೆ ಮಾಡಲು ಕರೆಸಿದ್ದರು. ಅವರ ಮನೆ ಗೋಳಿಅಂಗಡಿ ಹತ್ತಿರ ಇತ್ತು.

 ಸಾವಿತ್ರಮ್ಮನ ಮನೆಯ ಎದುರು ದೊಡ್ಡ ದೊಡ್ಡ ಬಯಲು ಗದ್ದೆಗಳು ಸುತ್ತ ಎಲ್ಲಿ ನೋಡಿದರೂ ಹಸಿರೋ ಹಸಿರು  ವಿಶಾಲವಾದ ಜಾಗ ಅವರ ಮನೆಯ ಹೊರ ಅಂಗಳದಲ್ಲಿ ಒಂದು ಮಡಲಿನ ದೊಡ್ಡ ಚಪ್ಪರ ಹಾಕಿ ಕೆಳಗೆ ಚಾಪೆಗಳನ್ನು ಹಾಸಿದ್ದರು. ಆಗ ಮೂರೋ ನಾಲ್ಕೋ ಗ್ಯಾಸ್ ಲೈಟ್ ಬೆಳಕಿನಲ್ಲಿ ಹರಿಕತೆ ತಡ ರಾತ್ರಿಯಲ್ಲಿ ರಾತ್ರಿ ಊಟ ಆದ ನಂತರ ಪ್ರಾರಂಭವಾಗಿತ್ತು. ಹರಿಕತೆಯಾಗುವಾಗ ಕೆಲವರು ಕುಳಿತು ನೋಡುತ್ತಿದ್ದರು. ಕೆಲವರು ಹಗಲಿನಲ್ಲಿ ಕೆಲಸ ಮಾಡಿ ದಣಿದವರು ಅಲ್ಲಿಯೇ ಪಕ್ಕಕ್ಕೆ ಒರಗಿ ನಿದ್ದೆ ಮಾಡುತ್ತಿದ್ದರು. ಮಕ್ಕಳು ಕಚಕಚ ಮಾತಾಡುತ್ತಿದ್ದವು. ಅದರ ಮಧ್ಯ ಅವರು ಮಕ್ಕಳಿಗೆ "ಸುಮ್ಮನಿರಿ ಮಕ್ಳೆ" ಎಂದು ಗದರಿಸಿ ಜೋರು ಸ್ವರದಲ್ಲಿ ಹರಿಕತೆ ಶುರುಮಾಡಿದ್ದರು.

ಅವರು ಒಂದು ಉಪಕತೆ ಹೇಳಿದ್ದು ನನಗಿನ್ನೂ ನೆನಪಿದೆ. ಅದೇನೆಂದರೆ, ಹರಿಕತೆ ಮುಗಿಸಿ ಮನೆಗೆ ಹೋದ ಮೇಲೆ ಒಬ್ಬರನ್ನು ಯಾರೋ ಕೇಳಿದರಂತೆ. "ಹರಿಕತೆ ಹ್ಯಾಂಗಾಯ್ತೆ?" ಅಂತ. ಅದಕ್ಕೆ ಹರಿಕತೆಗೆ ಹೋದವರು "ಹರಿಕತೆ ಉಪ್ಪುಪ್ಪಾಯ್ತು" ಎಂದರಂತೆ. "ಹಾಂಗಂದರೆ ಎಂತ" ಅಂತ ಅವರು ಕೇಳಿದ್ದಕ್ಕೆ ಇವರು "ಗಡದ್ದಾಯಿತು". ಅಂದರಂತೆ ಆದರೆ ಆದದ್ದೇನು? ಅಂದರೆ, ಇವರು ಹರಿಕತೆಗೆ ಹೋದವರು ಸ್ವಲ್ಪಹೊತ್ತು ಹರಿಕತೆ ನೋಡಿ ಅಲ್ಲಿಯೇ ಬದಿಯಲ್ಲಿ ಮಲಗಿದರು. ಮಲಗಿದ್ದು ನಾಯಿ ಮಲಗುವ ಗೋಣಿಯ ಮೇಲೆ. ನಾಯಿ ಬಂದು ನೋಡಿತು. ಇವರು ಬಾಯಿ ಕಳೆದುಕೊಂಡು ಗೊರಕೆ ಹೊಡೆಯುತ್ತಿದ್ದಾರೆ. ಅದು ಕುಯ್ ಕುಯ್ ಎಂದು ಏಳಲು ತಿಳಿಸಿತು. ಇವರು ಮತ್ತೂ ದೊಡ್ಡದಾಗಿ ಬಾಯಿಯಲ್ಲಿ ಹೂಸು ಬಿಟ್ಟು ಸ್ವರ ಮಾಡಿದರು. ಅದಕ್ಕೆ ಸಿಟ್ಟು ಬಂದು ಒಂದು ಕಾಲನ್ನು ಎತ್ತಿ ಅವರ ಮುಖದ ಮೇಲೆ ತೀರ್ಥ ಪ್ರೋಕ್ಷಣೆ ಮಾಡಿ ಹೊರಟು ಹೋಯಿತಂತೆ. ಹಾಗಾಗಿ ಅವರು ಹರಿಕತೆ ಉಪ್ಪುಪ್ಪಾಯಿತು ಅಂದರು ಅಂತ ಕತೆ. ಇಂತಹ ತುಂಬಾ ಕತೆಗಳನ್ನು ಅವರು ಅಂದು ಹೇಳಿದ್ದರು.

ಒಂದು ಕಾಲದಲ್ಲಿ ಹರಿಕತೆಗೆ ತುಂಬಾ ಜನ ಸೇರುತ್ತಿದ್ದರು. ಮಲ್ಪೆ ರಾಮದಾಸ ಸಾಮಗರ ಹರಿಕತೆ ಶಂಕರನಾರಾಯಣ ದೇವಸ್ಥಾನದಲ್ಲಿ ವಾರಗಟ್ಟಳೆ ನಡೆಯುತ್ತಿತ್ತು. ರಾಮಾಯಣ, ಭಾಗವತ, ಮಹಾಭಾರತ ಇತ್ಯಾದಿ ಕತೆಗಳನ್ನು ಒಂದೊಂದು ದಿವಸ ಇಟ್ಟು ಅದರ ಕತೆಯನ್ನು ಒಂದು ದೊಡ್ಡ ಪೀಠಿಕೆಯೊಂದಿಗೆ ಪ್ರಾರಂಭಿಸುತ್ತಿದ್ದರು. ನಾವು ಅದನ್ನು ಕೇಳಲು ಮನೆಯಿಂದ ನಡೆದುಕೊಂಡೇ ಅಲ್ಲಿಗೆ ಹೋಗಿ ಹರಿಕತೆಯನ್ನು ಕೇಳಿ ರಾತ್ರಿ ತುಂಬಾ ತಡವಾದರೆ ಅಲ್ಲಿಯೇ ದೇವಸ್ಥಾನದಲ್ಲಿ ಮಲಗಿ ಬೆಳಿಗ್ಗೆ ಮರಳುತ್ತಿದ್ದೆವು.

ಶೇಣಿಯವರು ದೊಡ್ಡ ಸಾಮಗರಂತವರಾದರೆ ಕತೆಗಿಂತ ಪೀಠಿಕೆಯೇ ದೊಡ್ಡದಿರುತ್ತಿತ್ತು. ಪೀಠಿಕೆಯಲ್ಲಿ ಅವರು ಅಂದಿನ ಕತೆಯ ಸಂದರ್ಭ ಅದರ ಹಿನ್ನೆಲೆ ಕತೆಯ ಮಹತ್ವ, ಕತೆ ಸಾರುವ ನೀತಿಯ ಬಗ್ಗೆ ಹಲವು ಉದಾಹರಣೆಗಳನ್ನು ಕೊಟ್ಟು ವಿವರಿಸುತ್ತಿದ್ದರು. ಆಮೇಲೆ ಕತೆಯನ್ನು ಭಾವನಾತ್ಮಕವಾಗಿ ಹೇಳುತ್ತಾ ಮಧ್ಯ ಮಧ್ಯ ದಾಸರ ಪದಗಳನ್ನು, ಸ್ವರಚಿತ ಪದ್ಯಗಳನ್ನು ಹೇಳುತ್ತಾರೆ. ಅಲ್ಲಲ್ಲಿ ಉಪಕತೆಗೂ, ಹಾಸ್ಯ ರಂಜನೆಗಳೂ ಆಗಮಿಸಿದ ಪ್ರೇಕ್ಷಕರು ನಿಂತರೆ,  ಹೊರಟರೆ, ಮಲಗಿದರೆ, ಮಾತಾಡುತ್ತಿದ್ದರೆ ಅವರಿಗೆ ಮಾತಿನಲ್ಲೇ ಸಾಂದರ್ಭಿಕವಾಗಿ ಚಮತ್ಕಾರವಾಗಿ ಚುಚ್ಚಿ ಮಾತಾಡುವುದೂ ಇತ್ತು. ರಾಮದಾಸ ಸಾಮಗರಂತವರು ಎಷ್ಟು ಭಾವನಾತ್ಮಕವಾಗಿ ಕೆಲವು ಪಾತ್ರಗಳನ್ನು ಚಿತ್ರಿಸುತ್ತಿದ್ದರೆಂದರೆ ಅವರು ಪಾತ್ರದಲ್ಲೇ ತನ್ಮಯರಾಗಿ ಭಾವಪರವಶರಾಗಿ ಮಾತನಾಡಿ ನಮ್ಮ ಕಣ್ಣಿನಲ್ಲೂ ನೀರು ಬರುವಂತೆ ಮಾಡುತ್ತಿದ್ದರು. ಪ್ರಾಸಬದ್ದವಾದ ಪದಪುಂಜಗಳನ್ನು ವೇಗವಾಗಿ ಹಾಡಿ ವಿಸ್ಮಯವನ್ನು ಮೂಡಿಸುತ್ತಿದ್ದರು.
ನಾವು ಅಂತಹ ಪದ್ಯಗಳನ್ನು ಉರುಹೊಡೆದು ಮರುದಿನ ಪ್ರಯೋಗ ಮಾಡಲು ಪ್ರಯತ್ನಿಸಿ ನಗೆಪಾಟಲಿಗೀಡಾಗುತ್ತಿದ್ದೆವು.

ಈಗ ಹರಿಕತೆ ಮಾಡುವವರೂ ಕಡಿಮೆ ಮಾಡಿಸಿದರೆ ನೋಡಲು ಬರುವವರೂ ಕಡಿಮೆ. ಒಮ್ಮೆ ನಾನು ವಾಸುದೇವ ಸಾಮಗರನ್ನು ಹರಿಕತೆಗೆ ಮಾಡಲು ಬರುತ್ತೀರಾ ಎಂದು ಕೇಳಿದಾಗ ಅವರು ಈಗ ಹರಿಕತೆ ಯಾರಿಗೆ ಬೇಕು ಮರ್ರೆ? ಕಾಂಬುಕೆ ಯಾರ್ ಬತ್ರು? ನಿಮಗೆ ಬೇರೆ ಕೆಲಸ ಇಲ್ಯಾ? ಎಂದು ಹೇಳಿ ನಿರಾಶೆ ಮಾಡಿದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ