ಬುಧವಾರ, ಫೆಬ್ರವರಿ 26, 2014



ಹಾರಾಡಿ – ಮಟ್ಪಾಡಿ ಸಮ್ಮಿಶ್ರ ಶೈಲಿಯ

“ ಸಾಲಿಗ್ರಾಮ ಮಕ್ಕಳ ಮೇಳ ”
ಉಡುಪಿ ಜಿಲ್ಲೆಯ ಬಡಗುತಿಟ್ಟಿನಲ್ಲಿ ಹಿಂದೆ ಹಾರಾಡಿ ಶೈಲಿ – ಮಟ್ಪಾಡಿ ಶೈಲಿ ಎಂಬ ಎರಡು ಪ್ರಮುಖ ಶೈಲಿಗಳನ್ನು ಗುರುತಿಸುತ್ತಿದ್ದರು. ಇವೆರಡಕ್ಕಿಂತ ಭಿನ್ನವಾದ ಮಾರ್ವಿ ಶೈಲಿ ಎಂಬ ಇನ್ನೊಂದು ಶೈಲಿಯೂ ಇತ್ತೆಂದು ಪ್ರಸಿದ್ಧ ಸ್ತ್ರೀವೇಷಧಾರಿ ಮಾರ್ಗೋಳಿ ಗೋವಿಂದ ಶೇರೆಗಾರರು ಹೇಳಿದ್ದಾರೆ ( ಸಂದರ್ಶನದಲ್ಲಿ ). ಮಾರ್ವಿ ಶೈಲಿಯಲ್ಲಿ ಭಾಗವತರು, ಮದ್ದಲೆಗಾರರು, ವೇಷಧಾರಿಗಳೂ ಹೀಗೆ ಎಲ್ಲರೂ ಇದ್ದದ್ದರಿಂದ ಅದೊಂದು ಸ್ವತಂತ್ರ ಶೈಲಿಯಾಗಿತ್ತೆಂದು ಅವರು ವಿವರಿಸಿದ್ದಾರೆ.
ಹಾರಾಡಿ ಶೈಲಿ ಎಂದರೆ ದಿ. ಹಾರಾಡಿ ಕುಷ್ಟಗಾಣಿಗರು ಪ್ರಮುಖವಾಗಿ ಪ್ರತಿನಿಧಿಸಿದ ನರ್ತನ ಶೈಲಿ. ಬಡಗು ತಿಟ್ಟಿನ ಮುಂಡಾಸ, ಕೇದಗೆ ಮುಂದಲೆಯ ಸೌಂದರ್ಯ, ಅಚ್ಚುಕಟ್ಟುತನಕ್ಕೆ ಕೂಡ ಹಾರಾಡಿಯ ಕಲಾವಿದರು ಪ್ರಸಿದ್ಧರಾಗಿದ್ದರು. ಕುಷ್ಟಗಾಣಿಗರದು ನರ್ತನದಲ್ಲಿ ವಿಷಮಲಯದ ನರ್ತನ. ಇವರ ನರ್ತನಕ್ಕೆ ಹಿರಿಯಡಕ ಗೋಪಾಲರಾಯರ ಮದ್ದಲೆಗಾರಿಕೆ ಸಾಥಿಯಾಗಿತ್ತು. ಭಾಗವತರು ಪದ್ಯ ಹೇಳುವಾಗಲೇ ಕೇದಗೆ ಮುಂದಲೆ, ಮುಂಡಾಸಗಳ ವಿವಿಧ ಭಂಗಿಗಳನ್ನು, ವೇಷದ ಮುಂಭಾಗ-ಹಿಂಭಾಗಗಳನ್ನು ವಿವಿಧ ಕೋನಗಳಲ್ಲಿ, ಭಂಗಿಗಳಲ್ಲಿ ಪ್ರದರ್ಶಿಸುತ್ತಾ, ಎರಡೂ ಭುಜಗಳನ್ನು ಕುಣಿಸುತ್ತಾ ತಮ್ಮ ನರ್ತನ ಕೌಶಲವನ್ನು ಪ್ರದರ್ಶಿಸುವುದು “ಹಾರಾಡಿಶೈಲಿ” ಯ ಕೊರಿಯಾಗ್ರಫಿ ಅಂದರೆ ನರ್ತನ ವಿನ್ಯಾಸ. ರಥದ ಮೇಲಿನ ಕುಣಿತವಾಗಲೀ,ಯುದ್ಧ, ಪ್ರಯಾಣ ಕುಣಿತಗಳಲ್ಲಾಗಲೀ, ಪದ್ಯದ ಕುಣಿತಗಳಲ್ಲಾಗಲೀ ಹಾರಾಡಿ ಕುಷ್ಟ ಗಾಣಿಗರ ಕುಣಿತದ ಸೌಂದರ್ಯ ಆಸ್ವಾದಿಸಿದವರು ಅದನ್ನು ಇನ್ನೊಬ್ಬರಲ್ಲಿ ಕಾಣಲಾರರು.
              ಇದಕ್ಕೆ ಸಮಸಮವಾಗಿ ಮಟ್ಪಾಡಿ ವೀರಭದ್ರನಾಯ್ಕರ ಕುಣಿತದ ಚುರುಕುತನ, ತಾಳದ ಲಯಕ್ಕೆ ಬೇರೆ ಬೇರೆ ಲಯಗಳಲ್ಲಿ ಕುಣಿದು ಸವಾಲನ್ನೆಸೆಯುವ ವಿಧಾನವಿತ್ತು. ತಮ್ಮ ನರ್ತನ ಕೌಶಲಕ್ಕಾಗಿ ವೀರಭದ್ರನಾಯ್ಕರು ದಿ. ಬೇಳಂಜೆ ತಿಮ್ಮಪ್ಪ ನಾಯ್ಕರ ಮದ್ದಲೆಗಾರಿಕೆಯಲ್ಲಿ ಹೊಸ ಹೊಸ ಪ್ರಯೋಗಗಳನ್ನು ಮಾಡಿದ್ದುಂಟು. ಪದ್ಯ ಹಾಡುವಾಗ ಮಧ್ಯದಲ್ಲಿ ಪದ್ಯ ನಿಲ್ಲಿಸಿ, ನರ್ತನಕ್ಕೇ ವಿಶೇಷವಾದ ಅವಕಾಶ ಮಾಡಿಕೊಡುವುದು, ಆಗ ಮದ್ದಲೆವಾದಕರ ವಿವಿಧ ನುಡಿತಕ್ಕೆ ಆಹ್ವಾನ ನೀಡುವಂತೆ ವೀರಭದ್ರನಾಯ್ಕರ ಕುಣಿತ ವೈವಿಧ್ಯಗಳಿರುತ್ತಿದ್ದು, ತಾಮ್ರಧ್ವಜ, ಅತಿಕಾಯ ಪಾತ್ರಗಳಲ್ಲಿ ಅವು ವಿಶೇಷವಾಗಿ ಪ್ರೇಕ್ಷಕರನ್ನು ಬೆರಗುಗೊಳಿಸುತ್ತಿದ್ದವು. ಆ ಎರಡು ಪಾತ್ರಗಳು ಕೂಡಾ ವೀರಭದ್ರನಾಯ್ಕರ ಕುಣಿತಕ್ಕೇ ಮೀಸಲಾಗಿರುತ್ತಿದ್ದವು.
ಈಗ ವೀರಭದ್ರನಾಯ್ಕರ ನರ್ತನ ಶೈಲಿಯನ್ನು ಉಡುಪಿ ಯಕ್ಷಗಾನ ಕೇಂದ್ರದಲ್ಲಿ ಕಾಣುತ್ತೇವೆ. ಸಾಲಿಗ್ರಾಮ ಮಕ್ಕಳ ಮೇಳದ ಎಚ್. ಶ್ರೀಧರ ಹಂದೆಯವರು ಕಲಿಸುವ ಮಕ್ಕಳ ಕುಣಿತಗಳಲ್ಲಿ ವೀರಭದ್ರನಾಯ್ಕರ ಕುಣಿತದ ವಿಧಾನಗಳಲ್ಲದೇ ಹಾರಾಡಿ ಕುಷ್ಟಗಾಣಿಗರ ನರ್ತನ ಶೈಲಿಯನ್ನೂ ಕಾಣುತ್ತೇವೆ. ಇದಲ್ಲದೇ ಬಹಳ ವರ್ಷಗಳಿಂದ ಶ್ರೀಧರ ಹಂದೆಯವರು ಮಕ್ಕಳಿಗೆ ಕಲಿಸುವ ವಿಧಾನ ಕೂಡ ಅವರದ್ದೇ ಆದ  ‘ಕಲಿಕಾ ವಿಧಾನ’ ವೊಂದನ್ನು ರೂಪಿಸಿದೆ ಎಂದು ಮಿತ್ರರಾದ ಸದಾನಂದ ಐತಾಳರು ಇತ್ತೀಚೆಗೆ ಒಂದು ಭಾಷಣದಲ್ಲಿ ಪ್ರತಿಪಾದಿಸಿದರು.
                                                  
                     






ಹಂದೆಯವರು ಮಕ್ಕಳಿಗೆ ಪ್ರತೀದಿನ ಅಭ್ಯಾಸ ಮಾಡಿಸುವುದನ್ನು ನಾನೂ ಆಗಾಗ ನೋಡಿದ್ದೇನೆ. ಹಂದೆಯವರ ಮಗ ಸುಜಯೀಂದ್ರ ಕೂಡ ಮಕ್ಕಳಿಗೆ ತರಬೇತಿ ನೀಡುವುದನ್ನೂ ನೋಡಿದ್ದೇನೆ. ಆದರೆ ಸುಜಯೀಂದ್ರ ಹಂದೆ ಕಲಿಸುವ ವಿಧಾನ ಮಟ್ಪಾಡಿ ಶೈಲಿಯೇ ಆಗಿದೆ. ಅಲ್ಲದೇ ಶ್ರೀಧರ ಹಂದೆಯವರಾಗಲೀ, ಸುಜಯೀಂದ್ರ ಹಂದೆಯಾಗಲೀ ಪದ್ಯ ಹೇಳುವ ವಿಧಾನ ಉಪ್ಪೂರರ ಶೈಲಿಯೇ ಹೊರತು, ಹಾರಾಡಿ ಕುಷ್ಟಗಾಣಿಗರಿಗೆ ಹಿನ್ನೆಲೆಯೊದಗಿಸಿದ ದಿ. ಶೇಷಗಿರಿ ಭಾಗವತರ ಶೈಲಿಯಲ್ಲ. ಶೇಷಗಿರಿ ಭಾಗವತರ ಶಿಷ್ಯರಾದ ಜಾನುವಾರುಕಟ್ಟೆ ಗೋಪಾಲಕೃಷ್ಣಕಾಮತರ  ಅಥವಾ ಗುಂಡ್ಮಿ ರಾಮಚಂದ್ರ ನಾವಡರ ಹಾಡುಗಾರಿಕೆಯ ವಿಧಾನವನ್ನು ಗಮನಿಸಿ ನಾನು ಈ ಮಾತನ್ನು ಹೇಳುತ್ತಿದ್ದೇನೆ.                                        
         ಇದರಲ್ಲಿ ತಪ್ಪೇನೂ ಇಲ್ಲ. ಹಾರಾಡಿ ಶೈಲಿಗೆ ಮಟ್ಪಾಡಿ ಶೈಲಿಯನ್ನು ಕಸಿಗೊಳಿಸಿದಂತಾಗಿದೆ. ಅಷ್ಟೆ. ಏಕೆಂದರೆ ಉಪ್ಪೂರರು ವೀರಭದ್ರನಾಯ್ಕರಿಗೆ ಭಾಗವತರಾಗಿದ್ದವರು. ಆದರೆ ಹಾರಾಡಿ ಶೈಲಿಯ ಕುಣಿತವನ್ನು ಶ್ರೀಧರ ಹಂದೆಯವರು ಕಲಿಸುವ ವಿಧಾನವನ್ನು ಈಗ ಶಿಸ್ತುಬದ್ಧವಾಗಿ ದಾಖಲಿಸಬೇಕಾದ ಅಗತ್ಯವಿದೆ, ಅದು ಮುಂದಿನ ಪೀಳಿಗೆಗೆ ಒಂದು ಅಮೂಲ್ಯವಾದ ಕೊಡುಗೆಯಾಗುತ್ತದೆ.
                                                                                 
                                                           ಡಾ. ಶ್ರೀಧರ ಉಪ್ಪೂರ 
                                                      ಮೊಬೈಲ್ 9449902794

       
        ಉಪ್ಪೂರರು  ಮತ್ತು ರಂಗ ನಿರ್ದೇಶನ

ದಿ.ನಾರ್ಣಪ್ಪ ಉಪ್ಪೂರರು ಹಿರಿಯ ಯಕ್ಷಗಾನ ಭಾಗವತರಾಗಿದ್ದುಕೊಂಡೇ ಈಗ ಕಣ್ಮರೆಯಾಗಿರುವರು. ಯಕ್ಷಗಾನ ರಂಗದಲ್ಲಿ ನಿರ್ದೇಶನದ ಕುರಿತು ಅವರ ಅಭಿಪ್ರಾಯ ಮತ್ತು ಅನುಭವಗಳನ್ನು ಸಂಗ್ರಹಿಸುವುದು ಅಪ್ರಸ್ತುತವಲ್ಲ. ಯಕ್ಷಗಾನಕ್ಕೆ ನಿರ್ದೇಶನ ಅತ್ಯಗತ್ಯವೆಂಬುದು ಅವರ ಅಭಿಪ್ರಾಯವಾಗಿತ್ತು. ಇದಕ್ಕೆ ಕಾರಣ ಕಾರಂತರ ನೃತ್ಯ ನಾಟಕಗಳಲ್ಲಿ ಭಾಗವಹಿಸಿದ ಅವರ ಅನುಭವ. ಯಕ್ಷಗಾನದ ನೃತ್ಯ,ಮಾತು, ರಂಗಚಲನೆ, ಹಾಡುಗಾರಿಕೆ ಈ ಪ್ರತಿಯೊಂದಕ್ಕೂ ಸೂಕ್ತವಾದ ನಿಯಂತ್ರಣವಿರಬೇಕು ಎಂದು ಅವರು ಭಾವಿಸಿದ್ದರು. ಕಾರಂತರ ‘ ಬ್ಯಾಲೆ’ ಯಶಸ್ವಿಯಾಗಲು ಕಾರಣವೇ ಇದೆಂದು ಅವರು ಹೇಳುತ್ತಿದ್ದರು.
ಆದರೆ ಹಿಂದಿನಿಂದಲೂ ಯಕ್ಷಗಾನದಲ್ಲಿ ಭಾಗವತನೇ ನಿರ್ದೇಶಕನ ಕೆಲಸ ನಿರ್ವಹಿಸುತ್ತಿದ್ದು, ಈ ಸಂಪ್ರದಾಯಕ್ಕನುಗುಣವಾಗಿ ಅವರು ನಿರ್ದೇಶಕನಿಲ್ಲದ ಯಕ್ಷಗಾನ ರಂಗಕ್ಕೆ ಭಾಗವತನಾಗಿ ತಾವೇ ನಿರ್ದೇಶನದ ಕೆಲಸ ಮಾಡುತ್ತಿದ್ದರು. ಯಾವುದೇ ಪ್ರಸಂಗ ಪ್ರದರ್ಶನವಾಗುವ ಮೊದಲು ಅವರು ಮೂಲ ಪ್ರಸಂಗದಿಂದ ಪದ್ಯಗಳನ್ನು ಆಯ್ದುಕೊಂಡು ಪ್ರಸಂಗದ ನಿಶ್ಚಿತ ಚೌಕಟ್ಟನ್ನು ರೂಪಿಸಿಕೊಳ್ಳುತ್ತಿದ್ದರು. ಅಗತ್ಯವಿದ್ದರೆ ಕೆಲವೆಡೆ ಒಂದೆರಡು ಪದ್ಯಗಳನ್ನು ಹೊಸದಾಗಿ ಸೇರಿಸುತ್ತಿದ್ದರು ಮತ್ತು ಪದ್ಯಗಳಿಗೆ ಸೂಕ್ತವಾದ ರಾಗ ತಾಳಗಳನ್ನು ಗುರುತಿಸಿಕೊಳ್ಳುತ್ತಿದ್ದರು. ಅನಂತರ ಪ್ರದರ್ಶನ ಪೂರ್ವ ಸಿದ್ಧತೆಗಾಗಿ ಪ್ರತಿಯೊಬ್ಬ ಕಲಾವಿದನಿಗೂ ಅವನವನ ರಂಗ ಕರ್ತವ್ಯಗಳನ್ನು ತಿಳಿಸುತ್ತಿದ್ದರು. ಪಾತ್ರ, ಸ್ವಭಾವ,ವೇಷಭೂಷಣಗಳ ವಿಧಾನ, ರಾತ್ರಿಯ ಯಾವ ಹೊತ್ತಿನಲ್ಲಿ ಪ್ರಸಂಗದ ಆಯಾ ದೃಶ್ಯಗಳು ಬರುತ್ತವೆಂಬ ವಿಷಯ, ಜೊತೆಗೆ ಪ್ರಸಂಗದಲ್ಲಿ ಯಾವ ದೃಶ್ಯ ಮುಖ್ಯವಾದುದು, ಅದು ಪ್ರೇಕ್ಷಕರ ಮೇಲೆ ಎಷ್ಟರ ಮಟ್ಟಿಗೆ ಪ್ರಭಾವ ಬೀರುತ್ತದೆಂಬ ಕಲ್ಪನೆ ಇದನ್ನು ಪಾತ್ರಧಾರಿಗಳಿಗೆ ತಿಳಿಸಿ ಆ ಬಗ್ಗೆ ಚರ್ಚಿಸುತ್ತಿದ್ದರು.
ಈ ಮೇಲಿನ ಭಾಗಗಳು ಎಲ್ಲ ಹಳೆಯ ಹೊಸ ಪ್ರಸಂಗಗಳಿಗೂ ಸಾಮಾನ್ಯವಾದ ಸಂಗತಿಗಳು. ಇನ್ನು ಹೊಸ ಪ್ರಸಂಗಗಳಾದರೆ ಆ ಬಗ್ಗೆ ಮೊದಲೇ ರಿಹರ್ಸಲ್ ಮಾಡಿ ನೋಡುವ ಪದ್ದತಿಯನ್ನು ಇರಿಸಿಕೊಂಡಿದ್ದರು. ಹೊಸ ಪ್ರಸಂಗದಲ್ಲಿ ವಿಶೇಷ ನೃತ್ಯ, ದ್ವಂದ್ವ ನೃತ್ಯ, ಜಲಕ್ರೀಡೆಯ ಹೊಸ ಆವಿಷ್ಕಾರ ಮುಂತಾದುವುಗಳಿದ್ದರೆ ಈ ಬಗ್ಗೆ ಮತ್ತೆ ಮತ್ತೆ ರಿಹರ್ಸಲ್ ನಡೆಸಿ ಮುಂಚೆಯೇ ಅದರ ಪೂರ್ಣವಾದ ಕಲ್ಪನೆ ತಂದುಕೊಳ್ಳುತ್ತಿದ್ದರು.
ಆದರೆ ಮಾತಿನ ಭಾಗವನ್ನು ರಂಗದಲ್ಲಿ ಭಾಗವತನಾಗಿ ತಾನು ನಿಯಂತ್ರಿಸುವುದು ಸಾಧ್ಯವಿಲ್ಲ ಎಂಬುದನ್ನು ಅವರು ಕಂಡುಕೊಂಡಿದ್ದರು. ಸಾಮಾನ್ಯ ಪಾತ್ರಧಾರಿಗಳಿಗೆ ಆಯಾ ಪಾತ್ರಗಳ ಮೂಲಕ ಬರಬೇಕಾದ ಮುಖ್ಯವಾದ ಮಾತುಗಳನ್ನು ತಿಳಿಸುತ್ತಿದ್ದರು. ಮುಖ್ಯಪಾತ್ರಧಾರಿಗಳ ಮಹತ್ವದ ಸನ್ನಿವೇಶದಲ್ಲಿ ಬರಬೇಕಾದ ಮಾತುಗಳ ಕುರಿತು ಹೇಳಿ ಆ ಬಗ್ಗೆ ಅವರಲ್ಲಿ ಚರ್ಚಿಸುತ್ತಿದ್ದರು. ಆದರೂ ಯಕ್ಷಗಾನ ರಂಗದಲ್ಲಿ ಬರುವ ಅಸಂಗತವಾದ ಮಾತು, ಸಂಭಾಷಣೆಗಳ ಬಗ್ಗೆ ಅವರಿಗೆ ಆಗಾಗ ಅಸಮಾಧಾನ ಉಂಟಾಗುತ್ತಿತ್ತು. ಕೆಲವು ಪಾತ್ರಧಾರಿಗಳ   ಪಾತ್ರ ಚಿತ್ರಣ ಅಸಮರ್ಪಕ ಆಗುವುದನ್ನು ಕಂಡು ಬೇಸರ ಪಡುತ್ತಿದ್ದರು. ಆದರೆ ದೀರ್ಘವಾದ ಮಾತುಗಾರಿಕೆ ಅವರಿಗೆ ಒಂದು ತೊಡಕಾಗಿ ಕಾಣಿಸುತ್ತಿರಲಿಲ್ಲ. ತೋರಿಕೆಗೆ ಅವರ ಹಾಡುಗಾರಿಕೆ ತೀವ್ರ ಲಯದ್ದಾಗಿ ಕಂಡರೂ ಅದು ದೀರ್ಘವಾದ ಮಾತುಗಾರಿಕೆಯನ್ನು ತುಂಬಿಕೊಳ್ಳಬಹುದಾಗಿ ವಿಲಂಬಿತ ಕಾಲಕ್ಕನುಗುಣವಾಗಿಯೂ ಇರುತ್ತಿತ್ತು. ಅಂದರೆ  ಯಕ್ಷಗಾನದಲ್ಲಿ ಹಾಡು ಮತ್ತು ಮಾತುಗಾರಿಕೆ, ಪರಸ್ಪರ ಸಂಬಂಧಿಯಾದವುಗಳಾಗಿದ್ದು ಪದ್ಯದ ಲಯ ಮತ್ತು ಮಾತಿನ ಲಯ ಹೊಂದಿಕೊಳ್ಳದಿದ್ದರೆ ಮಾತು ಪದ್ಯದಿಂದ ಹೊರಗುಳಿದು ಬರಿಯ ಭಾಷಣವಾಗಿ ಕಂಡುಬರುತ್ತದೆ. ಉಪ್ಪೂರರ ಹಾಡುಗಾರಿಕೆ ಇರುವಾಗ ಮಾತ್ರ ಈ ದೋಷ ಕಾಣುತ್ತಿರಲಿಲ್ಲ.
ಇನ್ನು ಪ್ರದರ್ಶನ ಮುಗಿದ ನಂತರ ಪ್ರೇಕ್ಷಕರ, ವಿಮರ್ಶಕರ ಅಭಿಪ್ರಾಯಗಳನ್ನು ಕೇಳಿ ಆ ಬಗ್ಗೆ ಚರ್ಚಿಸುತ್ತಿದ್ದರು.ಪ್ರದರ್ಶನ ವಿಫಲವಾದರೆ ಯಾಕೆ ವಿಫಲವಾಯಿತು?. ಪ್ರದರ್ಶನದ ಯಾವುದಾದರೂ ಒಂದು ಸನ್ನಿವೇಶದ ವಿಫಲತೆ ಅಥವಾ ಸಮಸ್ಯೆಗಳನ್ನು ಪರಿಹರಿಸುವುದು ಹೇಗೆ ಎಂದು ಉಳಿದವರೊಂದಿಗೆ ಚರ್ಚಿಸಿ ಮುಂದಿನ ಪ್ರದರ್ಶನಕ್ಕೆ ಸಿದ್ಧರಾಗುತ್ತಿದ್ದರು. ಯಾವುದೇ ಪದ್ಯದ ರಾಗ, ತಾಳ ಅಥವಾ ದಾಟಿಯನ್ನು ಅನವಶ್ಯಕವಾಗಿ ಮತ್ತೆ ಮತ್ತೆ ಬದಲಾಯಿಸುತ್ತಿರಲಿಲ್ಲ. ಇದರಿಂದ ಅವರ ನಿರ್ದೇಶನದ ಪ್ರಸಂಗಕ್ಕೆ ನಿಶ್ಚಿತವಾದ ಚೌಕಟ್ಟು ಇರುವುದು ಎಲ್ಲರ ಗಮನಕ್ಕೆ ಗೋಚರವಾಗುತ್ತಿತ್ತು. ಪ್ರಸಂಗದಲ್ಲಿ ಹೊಸರಾಗ ಅಥವಾ ಧಾಟಿಯನ್ನು ಹಾಡಬೇಕೆನಿಸಿದ್ದರೆ ಆ ಬಗ್ಗೆ ಸ್ವತಃ ಮೊದಲೇ ತಾವು ಹಾಡಿ ಅಭ್ಯಾಸ ಮಾಡಿ ಆ ಸನ್ನಿವೇಶದ ಭಾವ, ಸಂದರ್ಭಕ್ಕೆ ಅದು ಹೊಂದಿಕ್ಕೊಳ್ಳುತ್ತದೆಯೇ ಎಂದು ನೋಡಿಕೊಳ್ಳುತ್ತಿದ್ದರು.
ಕೊನೆಯದಾಗಿ ಪ್ರದರ್ಶನದ ಅವಧಿ ಸೀಮಿತವಾಗಿದ್ದರೆ ಮಾತ್ರ ( ಮೂರು ಅಥವಾ ನಾಲ್ಕು ಗಂಟೆ ) ಸಮರ್ಪಕವಾದ ಪ್ರದರ್ಶನ ಕೊಡಬಹುದೆಂದು ಅವರು ಖಂಡಿತವಾಗಿ ಹೇಳುತ್ತಿದ್ದರು. 4 ಗಂಟೆಯ ಆಟದಿಂದ ಅರ್ಧ ಗಂಟೆಯ ಪ್ರದರ್ಶನದವರೆಗೂ ಪೂರ್ವಸಿದ್ಧತೆಯೊಂದಿಗೆ ಯಶಸ್ವಿಯಾಗಿ ಅವರು ಪ್ರದರ್ಶನ ನೀಡಿದ್ದಿದೆ. ಇಡೀರಾತ್ರಿಯ ಯಕ್ಷಗಾನದಲ್ಲಿ ಕೆಲವು ಭಾಗ ಬೇಸರವುಂಟು ಮಾಡಿದರೆ ಅದು ಅನಿವಾರ್ಯ ಎಂಬ ಅಭಿಪ್ರಾಯ ಅವರದಾಗಿತ್ತು. ಪ್ರಸಂಗದ ಯಾವ ಭಾಗದಲ್ಲಿ ನೃತ್ಯ ವಿಸ್ತರಣೆಗಳಿಗೆ ಅವಕಾಶವಿದೆ, ಯಾವ ಸನ್ನಿವೇಶ ಅತ್ಯಂತ ಚುಟುಕಾಗಿ ಚುರುಕಾಗಿ ಮುಗಿದರೆ ಹೆಚ್ಚು ಪ್ರಭಾವವುಂಟುಮಾಡೀತೆಂಬ ಕಲ್ಪನೆ ಅವರಿಗಿತ್ತು. ಹಾಗೆಯೇ ಪದ್ಯದ ಲಯದಲ್ಲಿ ನಿಧಾನಗತಿ ತೀವ್ರಗತಿ ಸನ್ನಿವೇಶಕ್ಕನುಗುಣವಾಗಿ ಬಂದು ಪ್ರಸಂಗ ಹಂತ ಹಂತವಾಗಿ ಮುನ್ನಡೆದಂತೆ ವೈವಿಧ್ಯಮಯವಾಗಿರುತ್ತಿತ್ತು. ಈ ಎಲ್ಲ ನಿರ್ದೇಶನದ ಅಂಶಗಳನ್ನು ಇಂದಿನ ತರುಣ ಭಾಗವತರು ಗಮನಿಸಬೇಕಾಗಿದೆ.
       - ಡಾ. ಶ್ರೀಧರ ಉಪ್ಪೂರ  ಇವರ  ‘ ಭಾಗವತ ನಾರಣಪ್ಪ ಉಪ್ಪೂರ ’ (1998ರಲ್ಲಿ ಪ್ರಕಟಿತ) ಪುಸ್ತಕದಿಂದ


ಉಪ್ಪೂರರ ಶೈಲಿ

ಬಡಗುತಿಟ್ಟು ಯಕ್ಷಗಾನದ ಹಾಡುಗಾರಿಕೆಯಲ್ಲಿ ಹಿಂದೆ ಶೇಷಗಿರಿ ಭಾಗವತರ ಶೈಲಿ ಮತ್ತು ಮಾರ್ವಿ ಶೈಲಿ ಎಂದು ಎರಡು ಪ್ರಮುಖ ಶೈಲಿಗಳಿದ್ದವು ಎಂದು ದಿ.ಕೆ.ಎಸ್.ಉಪಾಧ್ಯಾಯರು ಸರಿಯಾಗಿಯೇ ಗುರುತಿಸಿದ್ದಾರೆ. "ಶೇಷಗಿರಿ ಭಾಗವತರು ತಮ್ಮ ಸ್ವರ ಸಂಪತ್ತಿಗೆ ಹೆಸರಾಗಿದ್ದರೆ, ರಂಗತಂತ್ರ, ಅನುಭವ, ಸ್ವಂತಿಕೆಯ ಶೈಲಿಗಳು ಶ್ರೀನಿವಾಸ ಉಪ್ಪೂರರ ಬಂಡವಾಳವಾಗಿದ್ದವು.”(ನೋಡಿ,ನಮ್ಮೂರ ಯಕ್ಷರು-ಪುಟ 61) ಮಾರ್ವಿ ಶ್ರೀನಿವಾಸ ಉಪ್ಪೂರರ ಶಿಷ್ಯರಾಗಿ ಅಂಪಾರು ಕೃಷ್ಣವೈದ್ಯರು, ಮಾರ್ವಿ ವಾದಿರಾಜ ಹೆಬ್ಬಾರರು, ಐರೋಡಿ ರಾಮಗಾಣಿಗರು ಪ್ರಸಿದ್ಢರಾಗಿದ್ದರೆ, ಶೇಷಗಿರಿ ಕಿಣಿಯವರ ಮಾರ್ಗದಲ್ಲಿ ಜಾನುವಾರು ಕಟ್ಟೆ ಗೋಪಾಲಕೃಷ್ಣ ಕಾಮತ್, ನೀಲಾವರ ರಾಮಕೃಷ್ಣಯ್ಯ, ಗುಂಡ್ಮಿ ರಾಮಚಂದ್ರ ನಾವಡ, ಮರಿಯಪ್ಪ ಆಚಾರ್, ಮರವಂತೆ ನರಸಿಂಹ ದಾಸರನ್ನು ಗುರುತಿಸಬಹುದು.
 ಮಾರ್ವಿ ಶ್ರೀನಿವಾಸ ಉಪ್ಪೂರರು ಒಮ್ಮೆ ಜಾನುವಾರುಕಟ್ಟೆ ಗೋಪಾಲ ಕಮ್ತಿಯವರಿಗೆ ಸಿಕ್ಕಿದಾಗ ಹೇಳಿದರಂತೆ. ”ಹಾಡುವುದು ಎಂದರೆ ಭತ್ತದ ಗದ್ದೆಯಲ್ಲಿ ಕೊಯ್ಯಲು ಬಳಸುವ ಕತ್ತಿಯಂತೆ. ಯಾವಾಗಲೂ ಬಳಸುತ್ತಿದ್ದರೆ ಹರಿತವಾಗಿರುತ್ತದೆ. ಇಲ್ಲವಾದರೆ ಬಡ್ಡಾಗುತ್ತದೆ.” ಎಂದು. ಅಂದರೆ ಯಾವಾಗಲೂ ಅಭ್ಯಾಸ ಮಾಡುತ್ತಿರಬೇಕು. ಇದಕ್ಕೆ ಕೊನೆ ಎಂಬುದೇ ಇಲ್ಲ. ಇಂತಹ ಅಧ್ಯಯನಶೀಲ ಪ್ರವೃತ್ತಿಯೇ ಅವರ ಮಗ ನಾರಣಪ್ಪ ಉಪ್ಪೂರರಲ್ಲಿಯೂ ಮುಂದುವರಿದು ಉಪ್ಪೂರರ ಶೈಲಿ ಪ್ರಸಿದ್ಧವಾಗಲು ಕಾರಣವಾಯಿತು.
  ನಾರಣಪ್ಪ ಉಪ್ಪೂರರ ಶೈಲಿ ಶ್ರೀನಿವಾಸ ಉಪ್ಪೂರರ ಶೈಲಿಯ ಮುಂದುವರಿಕೆಯೇ ಆಗಿದೆ. ಭಾವ ತೀವ್ರತೆ, ವೀರ ರಸದ ಆವೇಶಪೂರ್ಣ ಹಾಡುಗಾರಿಕೆ ಲಯ ವೈವಿಧ್ಯವನ್ನು ತೋರುವ ಶೃಂಗಾರ ರಸದ ಹಾಡುಗಾರಿಕೆಗೆ ಶ್ರೀನಿವಾಸ ಉಪ್ಪೂರರು ಪ್ರಸಿದ್ಧರಾಗಿದ್ದರು. ತಮ್ಮ ಇಳಿ ವಯಸ್ಸಿನಲ್ಲಿ ಒಮ್ಮೆ ಶ್ರೀನಿವಾಸ ಉಪ್ಪೂರರು ಹಾರಾಡಿ ರಾಮ ಗಾಣಿಗರ ಹಿಡಿಂಬಾ ಸ್ವಯಂವರದ ಭೀಮನ ಪಾತ್ರಕ್ಕೆ ಹಾಡು ಹೇಳುತ್ತಿದ್ದ ಸಂದರ್ಭ ಮಾಯಾ ಹಿಡಿಂಬೆಯ ಶೃಂಗಾರ ರಸದ ಪದ್ಯಗಳನ್ನು ಅತ್ಯುತ್ಸಾಹದಿಂದ ಹಾಡಿ ಕುಣಿಸುತ್ತಿದ್ದ ಅವರಿಗೆ ಭೀಮ ಕೂಡ ತನ್ನ ರೋಷಾವೇಶದ ಹಾಡುಗಳಿಗೆ ಅಷ್ಟೇ ಜೋರಾಗಿ ಕುಣಿಯಬೇಕೆಂಬ ನಿರೀಕ್ಷೆ. ಆದರೆ ಹಾರಾಡಿರಾಮ ಗಾಣಿಗರೋ “ಕುಣಿಯದೇ ಸುಧಾರಿಸುವ” ಜಾಣ ಕಲಾವಿದ. ಹಿಡಿಂಬೆಯ ಎದುರು ಭೀಮನ ಮೂರು ರೋಷಾವೇಶದ ಪದ್ಯಗಳಿದ್ದವು. ಒಂದು ಪದ್ಯಕ್ಕೆ ರಾಮ ಸುಮ್ಮನಿದ್ದರು. ಎರಡನೇ ಪದ್ಯಕ್ಕೂ ಕುಳಿತಲ್ಲಿಂದ ಮೇಲೇಳಲೇ ಇಲ್ಲ. ಮೂರನೇ ಪದ್ಯಕ್ಕೆ ನಿಧಾನವಾಗಿ ಎದ್ದು ಮಧ್ಯ ರಂಗಸ್ಥಳದವರೆಗೆ ಹೋಗಿ ಎರಡೂ ದೀವಟಿಗೆಗಳಲ್ಲಿ ಎಣ್ಣೆ ತೀರಿದೆಯೇ ಎಂದು (ರಾಮ ಗಾಣಿಗರು ಮೇಳದ ಯಜಮಾನರು) ನೋಡಿಕೊಂಡು ಬರುವವರಂತೆ ಒಂದು ಸುತ್ತು ಹಾಕಿ ಬಂದು ಕುಳಿತುಬಿಟ್ಟರು. ಮರುದಿನ ಉಪ್ಪೂರರು ರಾಮ ಕುಣಿಯದಿದ್ದಕ್ಕೆ  ಬೈದದ್ದೂ ಆಯಿತು. ಆಗ ರಾಮ, “ಉಪ್ಪೂರರೇ, ನಾನಿನ್ನು ಈ ಪ್ರಾಯದಲ್ಲಿ ಕುಣಿಯುವುದುಂಟೇ” ಎಂದು ನಗಾಡಿದ್ದೂ ಆಯಿತು.
ನಾರಣಪ್ಪ ಉಪ್ಪೂರರ ಮೇಲೆ ಆದ ಅನ್ಯ ಪ್ರಭಾವಗಳನ್ನು ನೋಡುವ, ಹಾಲಾಡಿಯಲ್ಲಿ ಪ್ರಭಾಕರ ಹಾಲಂಬಿ ಎಂಬ ಒಬ್ಬರು ವೃತ್ತಿ ನಾಟಕ ಕಂಪೆನಿಯಲ್ಲಿ ನುರಿತ ಕಲಾವಿದರಿದ್ದರು. ಬಾರ್ಕೂರಿನ ವಿ. ವಿ. ನಾಯಕ್, ಇಂದುಶೇಖರ ಮುಂತಾದವರ ಜೊತೆಗೆ ಹಲವು ವರ್ಷಗಳ ಕಾಲ ಪಳಗಿದ ಅವರು ತಮ್ಮ ಇಳಿವಯಸ್ಸಿನಲ್ಲಿ ಹಾರ್ಮೋನಿಯಂ, ತಬಲಾ ಸಾಥಿಯೊಡನೆ ಅಥವಾ ಏನೂ ಇಲ್ಲದೇ ಬೇರೆ ಬೇರೆ ಕಂಪೆನಿ ನಾಟಕದ ಹಾಡುಗಳನ್ನು ಇದು ಇಂಥ ರಾಗ ಎಂದು ತಿಳಿಸಿ ಕೌಶಲ ಪೂರ್ಣವಾಗಿ ಹಾಡುವುದನ್ನು ನಾನು ಚಿಕ್ಕಂದಿನಲ್ಲಿ ಕೇಳಿದ್ದೆ. ಹಿಂದೆ ಅವರೂ ನಾರಣಪ್ಪ ಉಪ್ಪೂರರೂ ಹಾಲಾಡಿಯ ಭಜನಾ ಕೂಟಗಳಲ್ಲಿ ಸ್ಪರ್ಧೆಯಿಂದೆಂಬಂತೆ ಭಜನಾ ಪದ್ಯಗಳನ್ನು ವೈವಿಧ್ಯಪೂರ್ಣವಾಗಿ ಹಾಡುತ್ತಿದ್ದರಂತೆ. ಹೀಗೆ  ನಾಟಕದ ಮಟ್ಟುಗಳು, ರಾಗಗಳು, ಅದರ ಶಾಸ್ತ್ರೀಯ ಶೈಲಿಯ ಹಾಡುಗಾರಿಕೆ, ಲಯ ವೈವಿಧ್ಯ ಇವು ಉಪ್ಪೂರರ ಯಕ್ಷಗಾನ ಹಾಡುಗಾರಿಕೆಯ ಮೇಲೆ ಪ್ರಭಾವ ಬೀರಿದವು. ಆದರೂ ಉಪ್ಪೂರರ ಯಕ್ಷಗಾನದ ಹಾಡುಗಾರಿಕೆ ತಾರಸ್ಥಾಯಿಯ ಹಾಡುಗಾರಿಕೆ. ವೈವಿಧ್ಯಕ್ಕಾಗಿ ಮಾತ್ರ ಕೆಲವೊಮ್ಮೆ ನಾಟಕದ ಮಟ್ಟುಗಳನ್ನು ಪ್ರಯೋಗಿಸುತ್ತಿದ್ದರು. ಉಳಿದಂತೆ ತಮ್ಮ ಸ್ವರವನ್ನು ಯಕ್ಷಗಾನ ಶೈಲಿಯಲ್ಲಿ ತಾರಸ್ಥಾಯಿಯ ಪಂಚಮದವರೆಗೂ ಏರಿಸಿ ತೋರಿಸುವುದು ಅವರ ಪದ್ಧತಿಯಾಗಿತ್ತು. ಜೊತೆಗೆ ರಾಗದ ಸೂಕ್ಷ್ಮ ಪಲುಕುಗಳು, ಭಾವ ತನ್ಮಯತೆ, ಪದ್ಯ ಸಾಹಿತ್ಯದ ಸ್ಪಷ್ಟತೆ, ಇವರು ಪದ್ಯ ಹೇಳಿದರೆ ಮತ್ತೆ ಅರ್ಥ ಹೇಳುವ ಅಗತ್ಯವಿಲ್ಲ ಎಂಬಂಥ ಪ್ರಶಂಸೆಗೆ ಪಾತ್ರವಾಗಿದ್ದವು.
ಕೆರೆಮನೆ ಮಹಾಬಲ ಹೆಗಡೆಯವರು ಬಿಡುವಿದ್ದಾಗ ತಮ್ಮ ಮನೆಯಲ್ಲಿ ಕುಳಿತು ವರಕವಿ ಬೇಂದ್ರೆಯವರ “ಇನ್ನೂ ಯಾಕ ಬರಲಿಲ್ಲವ್ವ ಹುಬ್ಬಳ್ಳಿಯಾಂವ”. ಕೆ,ಎಸ್, ನರಸಿಂಹ ಸ್ವಾಮಿಯವರ “ಹತ್ತು ವರುಷದ ಹಿಂದೆ ಮುತ್ತೂರ ತೇರಿನಲಿ” ಮೊದಲಾದ ಭಾವಗೀತೆಗಳನ್ನು ಹಾಡುತ್ತಿದ್ದರು. ಅವರ ಪ್ರಭಾವ ನಾರಣಪ್ಪ ಉಪ್ಪೂರರ ಮೇಲೆ ಬಿದ್ದು, ಇವರು ಕೂಡಾ ತಮ್ಮ ಮನೆಯಲ್ಲಿ ಲಹರಿಯುಂಟಾದಾಗ ಆ ಹಾಡುಗಳನ್ನು ಹಾಡಿ ಸಂತೋಷಪಡುತ್ತಿದ್ದರು. ಯಕ್ಷಗಾನ ರಂಗದಲ್ಲಿ “ಜೀವನ ಯಾತ್ರೆಯ ಯಾತ್ರಿಕರೆಲ್ಲ”( ಕೊಲ್ಲೂರು ಕ್ಷೇತ್ರ ಮಹಾತ್ಮೆ), ಎಲ್ಲೆಲ್ಲೂ ಸೊಬಗಿದೆ (ಶ್ವೇತಕುಮಾರ ಚರಿತ್ರೆ) ,”ವೃಂದಾವನಕೆ ಹಾಲನು ಮಾರಲು”(ಕುವೆಂಪು ರಚಿತ) ಮೊದಲಾದ ಪದ್ಯಗಳನ್ನು ಪ್ರಯೋಗಿಸಲು ಇದು ಕಾರಣವಾಯಿತು.
ಮಾರಣಕಟ್ಟೆ ಮೇಳದಲ್ಲಿ ವೀರಭದ್ರನಾಯಕರಿಗೂ ಮದ್ದಲೆಗಾರ ತಿಮ್ಮಪ್ಪ ನಾಯಕರಿಗೂ ಮದ್ದಲೆ ಬಾರಿಸುವ, ಕುಣಿಯುವ ರೀತಿಯಲ್ಲಿ ಸ್ಪರ್ಧೆಯುಂಟಾಗುತ್ತಿತ್ತು. ಈ ಸ್ಪರ್ಧೆಗೆ ಅಂದರೆ ವೀರಭದ್ರ ನಾಯಕರ ಕುಣಿತಕ್ಕೆ ತಿಮ್ಮಪ್ಪ ನಾಯಕರ ಮದ್ದಲೆ ವಾದನಕ್ಕೆ ಅವಕಾಶವಾಗಲಿ ಎಂದೇ ಉಪ್ಪೂರರು ಹಾಡುವುದನ್ನು ಮಧ್ಯೆ ನಿಲ್ಲಿಸಿ ಅವಕಾಶವೊದಗಿಸುತ್ತಿದ್ದರು. ಇದನ್ನೇ ಕೆಲವರು ಉಪ್ಪೂರರಿಗೆ ಸ್ವರ ಕಡಿಮೆಯಿತ್ತು, ಆದ್ದರಿಂದ ಪದ್ಯವನ್ನು ನಿಲ್ಲಿಸಿ ಕೇವಲ ಕುಣಿತಕ್ಕೆ ಅವಕಾಶ ನೀಡುವ ಸಂಪ್ರದಾಯ ಆರಂಭಿಸಿದರು ಎಂದರು. ಮುಂದೆ ಡಾ. ಕಾರಂತರ ನೃತ್ಯ ನಾಟಕ ಪ್ರಯೋಗಗಳಲ್ಲಿ ಹಾಡಿದ ಅನುಭವದಿಂದ ಉಪ್ಪೂರರು, ಪದ್ಯ ಹಾಡುವಾಗ ಬಗೆಬಗೆಯ ಕುಣಿತ ಕುಣಿದರೆ ಸಾಹಿತ್ಯ ಸ್ಪಷ್ಟತೆಗೆ ಭಂಗ ಬರುವುದೆಂಬ ಅಭಿಪ್ರಾಯಕ್ಕೆ ಬಂದರು. ವೀರರಸದ ಹಾಡುಗಳನ್ನು ಸ್ಪಷ್ಟವಾಗಿ ಹೇಳಬೇಕು, ಪದ್ಯದ ಅರ್ಥ ಕೆಡಬಾರದು, ಮೋಹನವಾಗಲಿ, ಹಂಸಧ್ವನಿಯಾಗಲಿ ವೀರರಸದಲ್ಲೂ ರಾಗ ಸ್ಪಷ್ಟವಾಗಬೇಕೇ ಹೊರತು ಸುಮ್ಮನೆ ಕಿರುಚಾಡುವುದು ಸರಿಯಲ್ಲ ಎಂಬುದು ಅವರ ಅಭಿಪ್ರಾಯವಾಗಿತ್ತು. ಪದ್ಯದ ಆರಂಭ, ಮುಕ್ತಾಯ ಮಾಡುವಾಗಲೂ ಅರ್ಥ ಕೆಡದಂತೆ ಜಾಗ್ರತೆ ವಹಿಸಬೇಕೆಂದು ಹೇಳುತ್ತಿದ್ದರು.
ಉಪ್ಪೂರರ ಶೈಲಿಯಲ್ಲಿ ಲಯಗಾರಿಕೆ ಮುಖ್ಯವಾಗಿದ್ದರೆ. ಶೇಷಗಿರಿ ಕಿಣಿಯವರ ಹಾಡುಗಾರಿಕೆಯಲ್ಲಿ ಇಂಪುಗಾರಿಕೆ ಪ್ರಾಧಾನ್ಯವಿತ್ತು. ಕಾಳಿಂಗ ನಾವಡರ ತಂದೆ ರಾಮಚಂದ್ರ ನಾವಡರದು ಶೇಷಗಿರಿ ಭಾಗವತರ ಶೈಲಿ. ಆದರೆ ಕಾಳಿಂಗ ನಾವಡರ ಗುರು ನಾರಣಪ್ಪ ಉಪ್ಪೂರರು. ಆರಂಭದಲ್ಲಿ ಕಾಳಿಂಗ ನಾವಡರು ಶುದ್ಧವಾಗಿ ಉಪ್ಪೂರರ ಶೈಲಿಯಲ್ಲೇ ಹಾಡುತ್ತಿದ್ದರು. ಅನಂತರ ಶೇಷಗಿರಿ ಶೈಲಿಯವರ ಹಾಗೆ ರಾಗದ ಆಲಾಪಗಳಿಗೇ ಹೆಚ್ಚು ಒಲವು ತೋರಿಸಿದರು. ಇದರಿಂದ ಲಯ ವೈವಿಧ್ಯ ಕಡಿಮೆಯಾಯಿತು. ನಾವಡರ ಪದ್ಯದಲ್ಲಿ ಮದ್ದಲೆಗಾರರಿಗೆ ಕೆಲಸವಿಲ್ಲ. ಉಪ್ಪೂರರ ಶೈಲಿಯ ವೈಶಿಷ್ಟ್ಯ, ಅವರ ಲಯಗಾರಿಕೆ, ಉಪ್ಪೂರರ ಲಯಗಾರಿಕೆ ಈಗ ಸುಬ್ರಹ್ಮಣ್ಯ ಧಾರೇಶ್ವರರಲ್ಲಿ ಮುಂದುವರಿದಿರುವುದನ್ನು ಕಾಣಬಹುದು. ದುರ್ಗಪ್ಪ ಗುಡಿಗಾರರಂತಹ ಮದ್ದಲೆಗಾರರು ಧಾರೇಶ್ವರರ ಪದ್ಯಗಳ ಲಯ ವೈವಿಧ್ಯವನ್ನು ಚೆನ್ನಾಗಿ ನುಡಿಸಿ ತೋರಿಸಿದ್ದಾರೆ.
ಕೆರೆಮನೆ ಮಹಾಬಲ ಹೆಗಡೆಯವರು ಒಮ್ಮೆ ಉಪ್ಪೂರರ ಹಾಡುಗಾರಿಕೆಯ ಲಯದ ಬಗ್ಗೆ ಆಕ್ಷೇಪವೆತ್ತಿದರು. ಇದಕ್ಕೆ ಕಾರಣ ಉತ್ತರ ಕನ್ನಡದ ಕಲಾವಿದರು ಸಾಮಾನ್ಯವಾಗಿ ಲಯಕ್ಕಿಂತ ಅಭಿನಯಕ್ಕೆ ಹೆಚ್ಚು ಆದ್ಯತೆ ಕೊಟ್ಟವರು. ಚಿಟ್ಟಾಣಿ ರಾಮಚಂದ್ರ ಹೆಗಡೆ ಮಾತ್ರ ಉಪ್ಪೂರರ ಲಯಕ್ಕೆ ಹೊಂದಿಕೊಂಡದ್ದರಿಂದ ಮುಂದೆ ಉಪ್ಪೂರರು, ದುರ್ಗಪ್ಪ, ಚಿಟ್ಟಾಣಿಯವರ ಜೋಡಿ ಯಶಸ್ವಿಯಾಯಿತು.
ಉಪ್ಪೂರರ ಶೈಲಿಯ ಇನ್ನೊಂದು ಮುಖ್ಯವಾದ ಲಕ್ಷಣವೆಂದರೆ ರಂಗದಲ್ಲಿ ಕಲಾವಿದರಿಗೆ ಅನುಕೂಲವಾಗಿ ಹಾಡುವುದು. ರಂಗಕ್ಕೆ ಅಗತ್ಯವಿಲ್ಲದ ಯಾವ ಹಾಡನ್ನೂ ವೈಭವೀಕರಿಸಲು ಅವರು ಹೋಗುತ್ತಿರಲಿಲ್ಲ. ಯಕ್ಷಗಾನದಂಥ ರಂಗ ಕಲೆಯಲ್ಲಿ ಹಿಮ್ಮೇಳದ ಹಾಡುಗಾರನಿಗೆ ಪ್ರತ್ಯೇಕ ಅಸ್ತಿತ್ವವಿಲ್ಲ. ರಂಗದಲ್ಲಿ ನರ್ತಿಸುವ ಪಾತ್ರಧಾರಿಗೆ ಅನುಕೂಲವಾಗಿ ಹಾಡುವುದೇ ಅವನ ಕರ್ತವ್ಯ. ಅದನ್ನು ಮರೆತರೆ ಆತ ಕೇವಲ ಹಾಡುಗಾರನಾಗಿ ಉಳಿಯುತ್ತಾನೆ ಅಷ್ಟೆ. ಮದ್ದಲೆಗಾರ ಪದ್ಯಕ್ಕೆ ಪೂರಕವಾಗಿ ನುಡಿಸಬೇಕು. ಚಂಡೆ ಬಾರಿಸುವುದಲ್ಲ. ನುಡಿಸಬೇಕು. ಪದ್ಯ ಹಾಡುವಾಗ ಚಂಡೆ ಜೋರಾಗಿ ಬಡಿದು ಪದ್ಯ ಕೇಳದಂತೆ ಮಾಡುವುದನ್ನು ಡಾ. ಕಾರಂತರು ತಮ್ಮ ನೃತ್ಯನಾಟಕದ ಸಂದರ್ಭದಲ್ಲಿ ತೀವ್ರವಾಗಿ ಆಕ್ಷೇಪಿಸುತ್ತಿದ್ದರು. ಅದೇ ರೀತಿ ಉಪ್ಪೂರರು ಕೂಡ ಚಂಡೆ ವಾದಕರಿಗೆ ಪದ್ಯದ ನಡುವೆ ಸಾಹಿತ್ಯ ಅಸ್ಪಷ್ಟವಾಗುವಂತೆ ಬಾರಿಸಲು ಬಿಡುತ್ತಿರಲಿಲ್ಲ. “ಯಕ್ಷಗಾನದಲ್ಲಿ ಅಲ್ಪ ಸ್ವಲ್ಪ ಪದ್ಯ ಹೇಳಲು ಬಂದವರೆಲ್ಲಾ ಭಾಗವತಿಕೆ ಮಾಡುತ್ತಾರೆಂದರೆ ಅವರ ಧೈರ್ಯಕ್ಕೆ ಮೆಚ್ಚಬೇಕು ಅಷ್ಟೆ. ಒಂದಿಪ್ಪತ್ತೈದು ಪ್ರಸಂಗವಾದರೂ ಪುಸ್ತಕದಿಂದ ಮಸ್ತಕಕ್ಕೆ ಬಂದಿರಬೇಕು. ಯಾವ ಭಾವಕ್ಕೆ ಯಾವ ರಾಗ ಯಾವ ತಾಳದ ಯಾವ ನಡೆ ನೃತ್ಯಕ್ಕೆ ಅನುಕೂಲ, ಪದ್ಯ ಎಷ್ಟು ಸಲ ಹೇಳಬೇಕು, ಎಷ್ಟು ನಿಧಾನ, ಎಷ್ಟು ತ್ವರಿತವಾಗಿ ಹೇಳಬೇಕು, ದೊಡ್ಡ ಮುಂಡಾಸಿನ ಪಾತ್ರಕ್ಕೆ ಹೇಗೆ, ಕಿರೀಟದ ರಾಜನಿಗೆ ಹೇಗೆ, ಕೇದಗೆ ಮುಂದಲೆ ವೇಷಕ್ಕೆ ಹೇಗೆ,ಸ್ತ್ರೀ ಪಾತ್ರದಲ್ಲಿ ವೀರ, ಶೃಂಗಾರ, ದುಃಖದಲ್ಲಿ ಹೇಗೆ ಹಾಡಬೇಕು ಎಂಬ ವ್ಯತ್ಯಾಸ ತಿಳಿದಿರಬೇಕು. ಹಾಗೆಯೇ ಮದ್ದಲೆ ಬಾರಿಸುವವರಿಗೂ ಈ ತಿಳುವಳಿಕೆ ಇರಬೇಕು. ಚಂಡೆ  ಬಾರಿಸುವವರಿಗಂತೂ ಇದು ಮತ್ತಷ್ಟು ಅಗತ್ಯ. ಇಷ್ಟು ತಿಳುವಳಿಕೆ ಇಲ್ಲದೇ ಎಲ್ಲಾ ಪದ್ಯಕ್ಕೂ ಚಂಡೆ ಬಾರಿಸಿ, ಪದ್ಯ, ಮದ್ದಲೆ,ಗೆಜ್ಜೆ ಶಬ್ದ ಕೇಳಿಸದಂತೆ ಗದ್ದಲ ಮಾಡಿದರೆ ಅವರನ್ನು ಕೂಡಲೇ ರಜೆ ಕೊಟ್ಟು ಮನೆಗೆ ಕಳಿಸಬೇಕು” ಎಂದು ಡೈರಿಯಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ. ತೆಂಕುತಿಟ್ಟಿನ ಹಾಡುಗಾರಿಕೆಯಲ್ಲಿ ಚಂಡೆವಾದನವೆಲ್ಲವೂ ಪದ್ಯದ ಆರಂಭ ಮತ್ತು ಕೊನೆಗೆ ಬರುವುದರಿಂದ ಈ ಸಮಸ್ಯೆ ಉಂಟಾಗುವುದಿಲ್ಲ. ಕೆಮ್ಮಣ್ಣು ಆನಂದರು ಪದ್ಯಕ್ಕೆ ಪೂರಕವಾಗಿ ಚಂಡೆ ನುಡಿಸುವುದನ್ನು ಡಾ. ಕಾರಂತರ ಪ್ರಯೋಗಗಳಿಂದ ಕಲಿತುಕೊಂಡರು. ದುಃಖ ರಸದ ಪದ್ಯಕ್ಕೂ ಚಂಡೆ ನುಡಿಸುವ ಸಾಮರ್ಥ್ಯವಿರಬೇಕು ಎಂಬುದು ಕಾರಂತರ ವಾದವಾಗಿತ್ತು.  ಮುಂದೆ ಉತ್ತರಕನ್ನಡದ ಪ್ರಭಾಕರ ಭಂಡಾರಿಯವರು ಉಪ್ಪೂರರ ಜೊತೆಗೆ ಸಿಕ್ಕಿದ ಮೇಲೆ ಚಂಡೆವಾದನದಲ್ಲಿ ಮತ್ತಷ್ಟು ಕಿರುನುಡಿತಗಳು ಪ್ರಾರಂಭವಾದವು. ವಿವಿಧ ಶ್ರುತಿಗಳ ಚಂಡೆಗಳ ಪ್ರಯೋಗವೂ ನಡೆಯಿತು.
ಇಂದು ಬಡಗುತಿಟ್ಟಿನ ಯಕ್ಷಗಾನ ರಂಗದಲ್ಲಿ ಕಾಣಿಸುತ್ತಿರುವುದೆಲ್ಲ ಮುಖ್ಯವಾಗಿ ಉಪ್ಪೂರರ ಶೈಲಿಯೇ. ಕೆಲವರು ಇದರಿಂದ ದೂರ ಸರಿಯಲು ಪ್ರಯತ್ನಿಸುತ್ತಿರುವರಾದರೂ  ಇದರಲ್ಲಿ ಸಂಪೂರ್ಣ ಯಶಸ್ಸನ್ನು ಕಂಡ ಹಾಗಿಲ್ಲ. ಉಪ್ಪೂರರ ಶೈಲಿಯಲ್ಲಿ ಸಾಹಿತ್ಯ ಸ್ಪಷ್ಟತೆ, ಅಭಿನಯಕ್ಕೆ ಅನುಕೂಲವಾಗಿ ಪುನರಾವರ್ತನೆ ಮಾಡುವುದು, ಕುಣಿತಕ್ಕೆ ಬೇಕಾದಂತೆ ಅವಕಾಶ ನೀಡುವುದು ಮುಖ್ಯವಾಗಿ ಕಾಣಿಸುತ್ತದೆ. ಆದ್ದರಿಂದ ರಂಗದಲ್ಲಿ ಉಪ್ಪೂರರ ಶೈಲಿ ಹೆಚ್ಚು ಯಶಸ್ವಿಯಾಗುತ್ತದೆ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ಆದರೆ ಪ್ರತೀ ಪದ್ಯದಲ್ಲೂ ನರ್ತನಕ್ಕೆ ಅವಕಾಶ ನೀಡುವ ಗೀಳು ಹೆಚ್ಚಾದರೆ ಈ ಶೈಲಿಯ ದುರ್ಬಳಕೆಯಾದಂತೆನಿಸುತ್ತದೆ. ಎಲ್ಲಿ ಎಷ್ಟು ನರ್ತನವಿರಬೇಕು ಅಥವಾ ನರ್ತನವಿರಲೇಬೇಕೇ ಎಂದು ಪ್ರಶ್ನಿಸಿಕೊಳ್ಳುವ ಔಚಿತ್ಯ ಜ್ಞಾನವಿಲ್ಲದಿದ್ದರೆ ಇದೂ ಏಕತಾನಕ್ಕೆ ಅವಕಾಶ ಮಾಡಿಕೊಡುತ್ತದೆ. ತೆಂಕುತಿಟ್ಟಿನ ಕಲಾಭಿಮಾನಿಗಳೊಬ್ಬರು ಒಮ್ಮೆ ಹೀಗೆ ಪ್ರಶ್ನಿಸಿದರು. “ಬಡಗಿನಲ್ಲಿ ಯಾಕೆ ಹಾಗೆ ಅನಗತ್ಯವಾಗಿ ಪ್ರತೀ ಪದ್ಯಕ್ಕೂ ಕುಣಿಯುತ್ತಾರೆ?” ಈ ಪ್ರಶ್ನೆ ಬಡಗಿನ ಕಲಾವಿದರು ಆತ್ಮ ವಿಮರ್ಶೆ ಮಾಡಿಕೊಳ್ಳಲು ಸಹಕಾರಿಯಾಗಬಹುದು. 
     - ಡಾ. ಶ್ರೀಧರ ಉಪ್ಪೂರ ಇವರ  ‘ ಭಾಗವತ ನಾರಣಪ್ಪ ಉಪ್ಪೂರ ’ (1998ರಲ್ಲಿ ಪ್ರಕಟಿತ) ಪುಸ್ತಕದಿಂದ

ಶನಿವಾರ, ಫೆಬ್ರವರಿ 1, 2014




ಯಕ್ಷ ಮೂರ್ತಿ ಕರ್ತಾರ -ಕೃಷ್ಣಮೂರ್ತಿ ಉಪ್ಪೂರ
ಹೊಸ ಮನೆಯ ಮುಂದೆ ದೃಷ್ಠಿ ಗೊಂಬೆಗಳನ್ನು, ಶೋಕೇಸಿನಲ್ಲಿ ಬಣ್ಣ ಬಣ್ಣದ ಗೊಂಬೆಗಳನ್ನು ಇಡುವುದನ್ನು ನೋಡಿದ್ದೇವೆ. ಅವುಗಳು ಯಕ್ಷಗಾನದ ಗೊಂಬೆಗಳೂ ಇರಬಹುದು, ಕಥಕ್ಕಳಿ ಗೊಂಬೆಗಳೂ ಇರಬಹುದು. ಆದರೆ ಕಥಕ್ಕಳಿ ಗೊಂಬೆಗಳ ಮುಖವರ್ಣಿಕೆಗೂ, ಯಕ್ಷಗಾನ ಗೊಂಬೆಗಳ ಮುಖವರ್ಣಿಕೆಗೂ ಬಳಸುವ ಬಣ್ಣಗಳಲ್ಲಿ ವ್ಯತ್ಯಾಸವಿದೆ. 1969 ರಲ್ಲಿ ಕೆಲಸದ ನಿಮಿತ್ತ ಬೆಂಗಳೂರಿಗೆ ಬಂದಾಗಲೇ ನಾನಿದನ್ನು ಗಮನಿಸಿದ್ದೆ. 1983 ರಿಂದಲೇ ಯಕ್ಷಗಾನದ ಗೊಂಬೆಗಳನ್ನು ತಯಾರಿಸಲು ಪ್ರಾರಂಭಿಸಿದ್ದ ನಾನು ಮುಖವರ್ಣಿಕೆಯ ಸೂಕ್ಷ್ಮರೇಖೆಗಳನ್ನು, ಬಣ್ಣಗಳನ್ನು ಯಕ್ಷಗಾನ ಗೊಂಬೆಯಲ್ಲಿ ತರಲು ಪ್ರಯತ್ನಿಸಿದೆ ” ಎನ್ನುತ್ತಾರೆ, ಬೆಂಗಳೂರಿನ ಯಕ್ಷಗಾನ ಗೊಂಬೆಗಳ ತಯಾರಕ ಕೃಷ್ಣಮೂರ್ತಿ ಉಪ್ಪೂರರು. ಬಡಗುತಿಟ್ಟಿನ ಪ್ರಸಿದ್ಧ ಭಾಗವತರಾಗಿದ್ದ ಪ್ರಾಚಾರ್ಯ ಮಾರ್ವಿ ನಾರಾಣಪ್ಪ ಉಪ್ಪೂರರ ಪುತ್ರರಾಗಿ, ಬಾಲ್ಯದಿಂದಲೇ ಯಕ್ಷಗಾನದ ಬಗ್ಗೆ, ಚಿತ್ರಕಲೆಯ ಬಗ್ಗೆ ಆಸಕ್ತಿ ತಳೆದಿದ್ದ ಇವರಿಗೆ ಮೈಸೂರಿನಲ್ಲಿ ಕಲಿತ ಚಿತ್ರಕಲೆಯ ಅಭ್ಯಾಸ ಯಕ್ಷಗಾನದ ಗೊಂಬೆ ತಯಾರಿಕೆಗೆ ಪ್ರೇರಣೆ ಒದಗಿಸಿತು. ಶ್ರೀ ಎಚ್. ಆರ್. ಶೇಷಾದ್ರಿಯವರು ಕೃಷ್ಣಮೂರ್ತಿಯವರ ಚಿತ್ರಕಲೆಯ ಗುರುಗಳು. ಮುಂದೆ ಶ್ರೀವಾದಿರಾಜರವರಲ್ಲಿ ಶಿಲ್ಪಕಲೆಯ ಬಗ್ಗೆ ತರಬೇತಿಯನ್ನು ಪಡೆದು ಪರಿಣತಿ ಹೊಂದಿದ್ದರು.
   ಆಗಲೇ ಬ್ರಹ್ಮಾವರ ಪರಿಸರದ ಪ್ರಸಿದ್ಧ ಸಾಹಿತಿ ಬೈಕಾಡಿ ವೆಂಕಟಕೃಷ್ಣರಾಯರು ಇವರ ಬಗ್ಗೆ 80 ರ ದಶಕದಲ್ಲಿಯೇ ‘ಉದಯವಾಣಿ’ ಪತ್ರಿಕೆಯಲ್ಲಿ ಶ್ರೀ ಕೃಷ್ಣಮೂರ್ತಿ ಉಪ್ಪೂರರ ಯಕ್ಷಗಾನ ಗೊಂಬೆಗಳ ತಯಾರಿಕೆಯ ಬಗ್ಗೆ ಹೊಗಳಿ ಸಚಿತ್ರ ಲೇಖನವನ್ನು ಬರೆದಿದ್ದರು. ಇದರಲ್ಲಿ ಶ್ರೀ ನಾಗರಾಜ ವಾರಂಬಳ್ಳಿಯವರು ಈ ಯಕ್ಷಗಾನದ ಗೊಂಬೆಗಳ ಚಿತ್ರವನ್ನು ಒದಗಿಸಿದ್ದರು. ಅಲ್ಲದೇ ಪ್ರಜಾವಾಣಿ, ಡೆಕ್ಕನ್ ಹೆರಾಲ್ಡ್, ಪ್ರಕಾಶ ವಾರಪತ್ರಿಕೆಯಲ್ಲೂ ಇವರ ಗೊಂಬೆ ತಯಾರಿಕೆಯ ಕಾರ್ಯದ ಬಗ್ಗೆ ಶ್ಲಾಘಿಸಿ ಲೇಖನಗಳೂ ಪ್ರಕಟವಾಗಿತ್ತು.
  ಕಾರಣಾಂತರದಿಂದ ಕೆಲವು ಕಾಲ ಗೊಂಬೆ ತಯಾರಿಕೆಯನ್ನು ನಿಲ್ಲಿಸಿದ್ದ ಉಪ್ಪೂರರು ಈಗ ಪುನಃ ಗೊಂಬೆಯನ್ನು ತಯಾರಿಸಲು ಆಧುನಿಕ ವ್ಯವಸ್ಥೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಮೊದಲು ಗೊಂಬೆಗಳನ್ನು ಪ್ಲಾಸ್ಟರ್ ಆಫ್ ಪ್ಯಾರಿಸಿನಲ್ಲಿ ತಯಾರಿಸಿದ್ದು ಅನಂತರ ಪೇಪರ್ಪಲ್ಪ್ ಪುಡಿಯ ಹಿಟ್ಟಿನಿಂದ ಗೊಂಬೆಗಳನ್ನು ತಯಾರಿಸಿದರು. ಆಗೆಲ್ಲಾ ಗೊಂಬೆಯ ಮೂಗು, ತುರಾಯಿಯ ತುದಿ ಇತ್ಯಾದಿ ಭಾಗಗಳು ಡ್ಯಾಮೇಜ್ ಆಗಿ ತೊಂದರೆಯಾಗುತಿತ್ತು. ಹಾಗಾಗಿ ಈಗ  ಮೂರ್ತಿಯ ಮೌಲ್ಡ್ ಮಾಡಿಕೊಂಡು ಫೈಬರ್ ನಿಂದ ಶಾಸ್ತ್ರೀಯ ವಿಧಾನವನ್ನು ಅಳವಡಿಸಿ  ಬಣ್ಣ ಹಾಕಿ ಗೊಂಬೆಗಳನ್ನು ತಯಾರಿಸುತ್ತಿದ್ದಾರೆ. ಸಾಮಾನ್ಯವಾಗಿ ಯಕ್ಷಗಾನದ ಗೊಂಬೆ ತಯಾರಿಸುವವರು ಮುಖವರ್ಣಿಕೆಯನ್ನು ಮಾಡುವ ಬದಲು ಮುಖದ ಚಿತ್ರವನ್ನು ಅಂಟಿಸಿಯೋ ಅಥವಾ ಮುಖವನ್ನೇ ಮಾಡದೆಯೋ ಗೊಂಬೆಗಳನ್ನು ತಯಾರಿಸುತ್ತಿದ್ದರೆ ಉಪ್ಪೂರರು ಕಣ್ಣು, ಬಾಯಿ, ತಿಲಕ ಇತ್ಯಾದಿ ಸೂಕ್ಷ್ಮ ಭಾಗಗಳ ಬಣ್ಣಗಳನ್ನೂ ಹಾಕಿ, ಕೇದಗೆ ಮುಂದಲೆಯ ಜರಿಯನ್ನೂ ಬರೆದೇ ಮಾಡುವುದರಿಂದ ಮಾನವ ಸಂಪನ್ಮೂಲ ಹೆಚ್ಚಾಗಿ ಗೊಂಬೆಯನ್ನು ಸಾಮಾನ್ಯ ದರದಲ್ಲಿ ಮಾರಾಟ ಮಾಡಲು ಕಷ್ಟ ಸಾಧ್ಯವೆಂಬ ಕೊರಗಿನ ಮಧ್ಯೆಯೂ ಆಸಕ್ತರಿಗೆ ಯೋಗ್ಯವಾದ ಬೆಲೆಗೆ ಗೊಂಬೆಗಳನ್ನು ನೀಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಸನ್ಮಾನ, ಸಭೆ, ಸಮಾರಂಭಗಳಲ್ಲಿ ನೆನಪಿನ ಕಾಣಿಕೆ ಕೊಡುವಾಗ ಕರ್ನಾಟಕದ ಹೆಮ್ಮೆಯ ಯಕ್ಷಗಾನದ ಇಂತಹ ಸುಂದರ ಮೂರ್ತಿಗಳನ್ನು ಶಾಶ್ವತ ಕಾಣಿಕೆಯಾಗಿ ಕೊಡುವುದರಲ್ಲಿ ಸಾರ್ಥಕತೆ ಇದೆ. ಉಪ್ಪೂರರು ಯಕ್ಷಗಾನದ ಕಪ್ಪು, ಕೆಂಪು, ಹಸಿರು ಕೇದಗೆ ಮುಂದಲೆ, ಮೈಂದ, ದ್ವಿವಿಧರಂತಹ ವಾನರಗಳ ಸಂಪ್ರದಾಯ ಮುಖವರ್ಣಿಕೆಯುಳ್ಳ ಕೇದಗೆ ಮುಂದಲೆ, ಕಪ್ಪು ಕೆಂಪು, ಹಸಿರು ಮುಂಡಾಸು ವೇಷಗಳು, ಗಂಧರ್ವ, ಕರ್ಣ ಪಾತ್ರದ ಮುಂಡಾಸುಗಳ ಗೊಂಬೆಗಳನ್ನು ತಯಾರಿಸುತ್ತಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಇವರ ಕೌಶಲದಿಂದ ಮೂಡಿ ಬರುವ  ಸೂಕ್ಷ್ಮ ರೇಖೆಗಳ, ಮುಖವರ್ಣಿಕೆಯ ಬಣ್ಣದ ರಾಕ್ಷಸ ವೇಷದ ಗೊಂಬೆಗಳು ಅತ್ಯಾಕರ್ಷಕವಾಗಿದೆ. ಆದರೆ ಸ್ತ್ರೀ ವೇಷ, ಹಾಸ್ಯ, ಕಿರೀಟ ವೇಷದಂತಹ ಗೊಂಬೆಗಳನ್ನೂ ತಯಾರಿಸುವ ಬಗ್ಗೆ ಮುಂದೆ ಅವರು  ಪ್ರಯತ್ನಿಸಬಹುದು.



    
 










 ಈ ಬಗ್ಗೆ ನಿಮಗೆ ತಿಳಿದುಕೊಳ್ಳಬೇಕಿದ್ದರೆ ಗೊಂಬೆಗಳನ್ನು ಕೊಂಡುಕೊಳ್ಳಬೇಕಿದ್ದರೆ ಶ್ರೀ ಕೃಷ್ಣಮೂರ್ತಿ ಉಪ್ಪೂರರನ್ನು ಅವರ ಮೊಬೈಲ್ ಸಂಖ್ಯೆ 9449545170  ಕ್ಕೆ ಸಂಪರ್ಕಿಸಬಹುದು.


ಡಾ. ಶ್ರೀಧರ ಉಪ್ಪೂರ 
ಅಂಚೆ- ಕೋಟೇಶ್ವರ, ಕುಂದಾಪುರ ತಾಲೂಕು
ಉಡುಪಿ ಜಿಲ್ಲೆ.