ಬುಧವಾರ, ಫೆಬ್ರವರಿ 26, 2014


       
        ಉಪ್ಪೂರರು  ಮತ್ತು ರಂಗ ನಿರ್ದೇಶನ

ದಿ.ನಾರ್ಣಪ್ಪ ಉಪ್ಪೂರರು ಹಿರಿಯ ಯಕ್ಷಗಾನ ಭಾಗವತರಾಗಿದ್ದುಕೊಂಡೇ ಈಗ ಕಣ್ಮರೆಯಾಗಿರುವರು. ಯಕ್ಷಗಾನ ರಂಗದಲ್ಲಿ ನಿರ್ದೇಶನದ ಕುರಿತು ಅವರ ಅಭಿಪ್ರಾಯ ಮತ್ತು ಅನುಭವಗಳನ್ನು ಸಂಗ್ರಹಿಸುವುದು ಅಪ್ರಸ್ತುತವಲ್ಲ. ಯಕ್ಷಗಾನಕ್ಕೆ ನಿರ್ದೇಶನ ಅತ್ಯಗತ್ಯವೆಂಬುದು ಅವರ ಅಭಿಪ್ರಾಯವಾಗಿತ್ತು. ಇದಕ್ಕೆ ಕಾರಣ ಕಾರಂತರ ನೃತ್ಯ ನಾಟಕಗಳಲ್ಲಿ ಭಾಗವಹಿಸಿದ ಅವರ ಅನುಭವ. ಯಕ್ಷಗಾನದ ನೃತ್ಯ,ಮಾತು, ರಂಗಚಲನೆ, ಹಾಡುಗಾರಿಕೆ ಈ ಪ್ರತಿಯೊಂದಕ್ಕೂ ಸೂಕ್ತವಾದ ನಿಯಂತ್ರಣವಿರಬೇಕು ಎಂದು ಅವರು ಭಾವಿಸಿದ್ದರು. ಕಾರಂತರ ‘ ಬ್ಯಾಲೆ’ ಯಶಸ್ವಿಯಾಗಲು ಕಾರಣವೇ ಇದೆಂದು ಅವರು ಹೇಳುತ್ತಿದ್ದರು.
ಆದರೆ ಹಿಂದಿನಿಂದಲೂ ಯಕ್ಷಗಾನದಲ್ಲಿ ಭಾಗವತನೇ ನಿರ್ದೇಶಕನ ಕೆಲಸ ನಿರ್ವಹಿಸುತ್ತಿದ್ದು, ಈ ಸಂಪ್ರದಾಯಕ್ಕನುಗುಣವಾಗಿ ಅವರು ನಿರ್ದೇಶಕನಿಲ್ಲದ ಯಕ್ಷಗಾನ ರಂಗಕ್ಕೆ ಭಾಗವತನಾಗಿ ತಾವೇ ನಿರ್ದೇಶನದ ಕೆಲಸ ಮಾಡುತ್ತಿದ್ದರು. ಯಾವುದೇ ಪ್ರಸಂಗ ಪ್ರದರ್ಶನವಾಗುವ ಮೊದಲು ಅವರು ಮೂಲ ಪ್ರಸಂಗದಿಂದ ಪದ್ಯಗಳನ್ನು ಆಯ್ದುಕೊಂಡು ಪ್ರಸಂಗದ ನಿಶ್ಚಿತ ಚೌಕಟ್ಟನ್ನು ರೂಪಿಸಿಕೊಳ್ಳುತ್ತಿದ್ದರು. ಅಗತ್ಯವಿದ್ದರೆ ಕೆಲವೆಡೆ ಒಂದೆರಡು ಪದ್ಯಗಳನ್ನು ಹೊಸದಾಗಿ ಸೇರಿಸುತ್ತಿದ್ದರು ಮತ್ತು ಪದ್ಯಗಳಿಗೆ ಸೂಕ್ತವಾದ ರಾಗ ತಾಳಗಳನ್ನು ಗುರುತಿಸಿಕೊಳ್ಳುತ್ತಿದ್ದರು. ಅನಂತರ ಪ್ರದರ್ಶನ ಪೂರ್ವ ಸಿದ್ಧತೆಗಾಗಿ ಪ್ರತಿಯೊಬ್ಬ ಕಲಾವಿದನಿಗೂ ಅವನವನ ರಂಗ ಕರ್ತವ್ಯಗಳನ್ನು ತಿಳಿಸುತ್ತಿದ್ದರು. ಪಾತ್ರ, ಸ್ವಭಾವ,ವೇಷಭೂಷಣಗಳ ವಿಧಾನ, ರಾತ್ರಿಯ ಯಾವ ಹೊತ್ತಿನಲ್ಲಿ ಪ್ರಸಂಗದ ಆಯಾ ದೃಶ್ಯಗಳು ಬರುತ್ತವೆಂಬ ವಿಷಯ, ಜೊತೆಗೆ ಪ್ರಸಂಗದಲ್ಲಿ ಯಾವ ದೃಶ್ಯ ಮುಖ್ಯವಾದುದು, ಅದು ಪ್ರೇಕ್ಷಕರ ಮೇಲೆ ಎಷ್ಟರ ಮಟ್ಟಿಗೆ ಪ್ರಭಾವ ಬೀರುತ್ತದೆಂಬ ಕಲ್ಪನೆ ಇದನ್ನು ಪಾತ್ರಧಾರಿಗಳಿಗೆ ತಿಳಿಸಿ ಆ ಬಗ್ಗೆ ಚರ್ಚಿಸುತ್ತಿದ್ದರು.
ಈ ಮೇಲಿನ ಭಾಗಗಳು ಎಲ್ಲ ಹಳೆಯ ಹೊಸ ಪ್ರಸಂಗಗಳಿಗೂ ಸಾಮಾನ್ಯವಾದ ಸಂಗತಿಗಳು. ಇನ್ನು ಹೊಸ ಪ್ರಸಂಗಗಳಾದರೆ ಆ ಬಗ್ಗೆ ಮೊದಲೇ ರಿಹರ್ಸಲ್ ಮಾಡಿ ನೋಡುವ ಪದ್ದತಿಯನ್ನು ಇರಿಸಿಕೊಂಡಿದ್ದರು. ಹೊಸ ಪ್ರಸಂಗದಲ್ಲಿ ವಿಶೇಷ ನೃತ್ಯ, ದ್ವಂದ್ವ ನೃತ್ಯ, ಜಲಕ್ರೀಡೆಯ ಹೊಸ ಆವಿಷ್ಕಾರ ಮುಂತಾದುವುಗಳಿದ್ದರೆ ಈ ಬಗ್ಗೆ ಮತ್ತೆ ಮತ್ತೆ ರಿಹರ್ಸಲ್ ನಡೆಸಿ ಮುಂಚೆಯೇ ಅದರ ಪೂರ್ಣವಾದ ಕಲ್ಪನೆ ತಂದುಕೊಳ್ಳುತ್ತಿದ್ದರು.
ಆದರೆ ಮಾತಿನ ಭಾಗವನ್ನು ರಂಗದಲ್ಲಿ ಭಾಗವತನಾಗಿ ತಾನು ನಿಯಂತ್ರಿಸುವುದು ಸಾಧ್ಯವಿಲ್ಲ ಎಂಬುದನ್ನು ಅವರು ಕಂಡುಕೊಂಡಿದ್ದರು. ಸಾಮಾನ್ಯ ಪಾತ್ರಧಾರಿಗಳಿಗೆ ಆಯಾ ಪಾತ್ರಗಳ ಮೂಲಕ ಬರಬೇಕಾದ ಮುಖ್ಯವಾದ ಮಾತುಗಳನ್ನು ತಿಳಿಸುತ್ತಿದ್ದರು. ಮುಖ್ಯಪಾತ್ರಧಾರಿಗಳ ಮಹತ್ವದ ಸನ್ನಿವೇಶದಲ್ಲಿ ಬರಬೇಕಾದ ಮಾತುಗಳ ಕುರಿತು ಹೇಳಿ ಆ ಬಗ್ಗೆ ಅವರಲ್ಲಿ ಚರ್ಚಿಸುತ್ತಿದ್ದರು. ಆದರೂ ಯಕ್ಷಗಾನ ರಂಗದಲ್ಲಿ ಬರುವ ಅಸಂಗತವಾದ ಮಾತು, ಸಂಭಾಷಣೆಗಳ ಬಗ್ಗೆ ಅವರಿಗೆ ಆಗಾಗ ಅಸಮಾಧಾನ ಉಂಟಾಗುತ್ತಿತ್ತು. ಕೆಲವು ಪಾತ್ರಧಾರಿಗಳ   ಪಾತ್ರ ಚಿತ್ರಣ ಅಸಮರ್ಪಕ ಆಗುವುದನ್ನು ಕಂಡು ಬೇಸರ ಪಡುತ್ತಿದ್ದರು. ಆದರೆ ದೀರ್ಘವಾದ ಮಾತುಗಾರಿಕೆ ಅವರಿಗೆ ಒಂದು ತೊಡಕಾಗಿ ಕಾಣಿಸುತ್ತಿರಲಿಲ್ಲ. ತೋರಿಕೆಗೆ ಅವರ ಹಾಡುಗಾರಿಕೆ ತೀವ್ರ ಲಯದ್ದಾಗಿ ಕಂಡರೂ ಅದು ದೀರ್ಘವಾದ ಮಾತುಗಾರಿಕೆಯನ್ನು ತುಂಬಿಕೊಳ್ಳಬಹುದಾಗಿ ವಿಲಂಬಿತ ಕಾಲಕ್ಕನುಗುಣವಾಗಿಯೂ ಇರುತ್ತಿತ್ತು. ಅಂದರೆ  ಯಕ್ಷಗಾನದಲ್ಲಿ ಹಾಡು ಮತ್ತು ಮಾತುಗಾರಿಕೆ, ಪರಸ್ಪರ ಸಂಬಂಧಿಯಾದವುಗಳಾಗಿದ್ದು ಪದ್ಯದ ಲಯ ಮತ್ತು ಮಾತಿನ ಲಯ ಹೊಂದಿಕೊಳ್ಳದಿದ್ದರೆ ಮಾತು ಪದ್ಯದಿಂದ ಹೊರಗುಳಿದು ಬರಿಯ ಭಾಷಣವಾಗಿ ಕಂಡುಬರುತ್ತದೆ. ಉಪ್ಪೂರರ ಹಾಡುಗಾರಿಕೆ ಇರುವಾಗ ಮಾತ್ರ ಈ ದೋಷ ಕಾಣುತ್ತಿರಲಿಲ್ಲ.
ಇನ್ನು ಪ್ರದರ್ಶನ ಮುಗಿದ ನಂತರ ಪ್ರೇಕ್ಷಕರ, ವಿಮರ್ಶಕರ ಅಭಿಪ್ರಾಯಗಳನ್ನು ಕೇಳಿ ಆ ಬಗ್ಗೆ ಚರ್ಚಿಸುತ್ತಿದ್ದರು.ಪ್ರದರ್ಶನ ವಿಫಲವಾದರೆ ಯಾಕೆ ವಿಫಲವಾಯಿತು?. ಪ್ರದರ್ಶನದ ಯಾವುದಾದರೂ ಒಂದು ಸನ್ನಿವೇಶದ ವಿಫಲತೆ ಅಥವಾ ಸಮಸ್ಯೆಗಳನ್ನು ಪರಿಹರಿಸುವುದು ಹೇಗೆ ಎಂದು ಉಳಿದವರೊಂದಿಗೆ ಚರ್ಚಿಸಿ ಮುಂದಿನ ಪ್ರದರ್ಶನಕ್ಕೆ ಸಿದ್ಧರಾಗುತ್ತಿದ್ದರು. ಯಾವುದೇ ಪದ್ಯದ ರಾಗ, ತಾಳ ಅಥವಾ ದಾಟಿಯನ್ನು ಅನವಶ್ಯಕವಾಗಿ ಮತ್ತೆ ಮತ್ತೆ ಬದಲಾಯಿಸುತ್ತಿರಲಿಲ್ಲ. ಇದರಿಂದ ಅವರ ನಿರ್ದೇಶನದ ಪ್ರಸಂಗಕ್ಕೆ ನಿಶ್ಚಿತವಾದ ಚೌಕಟ್ಟು ಇರುವುದು ಎಲ್ಲರ ಗಮನಕ್ಕೆ ಗೋಚರವಾಗುತ್ತಿತ್ತು. ಪ್ರಸಂಗದಲ್ಲಿ ಹೊಸರಾಗ ಅಥವಾ ಧಾಟಿಯನ್ನು ಹಾಡಬೇಕೆನಿಸಿದ್ದರೆ ಆ ಬಗ್ಗೆ ಸ್ವತಃ ಮೊದಲೇ ತಾವು ಹಾಡಿ ಅಭ್ಯಾಸ ಮಾಡಿ ಆ ಸನ್ನಿವೇಶದ ಭಾವ, ಸಂದರ್ಭಕ್ಕೆ ಅದು ಹೊಂದಿಕ್ಕೊಳ್ಳುತ್ತದೆಯೇ ಎಂದು ನೋಡಿಕೊಳ್ಳುತ್ತಿದ್ದರು.
ಕೊನೆಯದಾಗಿ ಪ್ರದರ್ಶನದ ಅವಧಿ ಸೀಮಿತವಾಗಿದ್ದರೆ ಮಾತ್ರ ( ಮೂರು ಅಥವಾ ನಾಲ್ಕು ಗಂಟೆ ) ಸಮರ್ಪಕವಾದ ಪ್ರದರ್ಶನ ಕೊಡಬಹುದೆಂದು ಅವರು ಖಂಡಿತವಾಗಿ ಹೇಳುತ್ತಿದ್ದರು. 4 ಗಂಟೆಯ ಆಟದಿಂದ ಅರ್ಧ ಗಂಟೆಯ ಪ್ರದರ್ಶನದವರೆಗೂ ಪೂರ್ವಸಿದ್ಧತೆಯೊಂದಿಗೆ ಯಶಸ್ವಿಯಾಗಿ ಅವರು ಪ್ರದರ್ಶನ ನೀಡಿದ್ದಿದೆ. ಇಡೀರಾತ್ರಿಯ ಯಕ್ಷಗಾನದಲ್ಲಿ ಕೆಲವು ಭಾಗ ಬೇಸರವುಂಟು ಮಾಡಿದರೆ ಅದು ಅನಿವಾರ್ಯ ಎಂಬ ಅಭಿಪ್ರಾಯ ಅವರದಾಗಿತ್ತು. ಪ್ರಸಂಗದ ಯಾವ ಭಾಗದಲ್ಲಿ ನೃತ್ಯ ವಿಸ್ತರಣೆಗಳಿಗೆ ಅವಕಾಶವಿದೆ, ಯಾವ ಸನ್ನಿವೇಶ ಅತ್ಯಂತ ಚುಟುಕಾಗಿ ಚುರುಕಾಗಿ ಮುಗಿದರೆ ಹೆಚ್ಚು ಪ್ರಭಾವವುಂಟುಮಾಡೀತೆಂಬ ಕಲ್ಪನೆ ಅವರಿಗಿತ್ತು. ಹಾಗೆಯೇ ಪದ್ಯದ ಲಯದಲ್ಲಿ ನಿಧಾನಗತಿ ತೀವ್ರಗತಿ ಸನ್ನಿವೇಶಕ್ಕನುಗುಣವಾಗಿ ಬಂದು ಪ್ರಸಂಗ ಹಂತ ಹಂತವಾಗಿ ಮುನ್ನಡೆದಂತೆ ವೈವಿಧ್ಯಮಯವಾಗಿರುತ್ತಿತ್ತು. ಈ ಎಲ್ಲ ನಿರ್ದೇಶನದ ಅಂಶಗಳನ್ನು ಇಂದಿನ ತರುಣ ಭಾಗವತರು ಗಮನಿಸಬೇಕಾಗಿದೆ.
       - ಡಾ. ಶ್ರೀಧರ ಉಪ್ಪೂರ  ಇವರ  ‘ ಭಾಗವತ ನಾರಣಪ್ಪ ಉಪ್ಪೂರ ’ (1998ರಲ್ಲಿ ಪ್ರಕಟಿತ) ಪುಸ್ತಕದಿಂದ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ