ಬುಧವಾರ, ಫೆಬ್ರವರಿ 26, 2014



ಹಾರಾಡಿ – ಮಟ್ಪಾಡಿ ಸಮ್ಮಿಶ್ರ ಶೈಲಿಯ

“ ಸಾಲಿಗ್ರಾಮ ಮಕ್ಕಳ ಮೇಳ ”
ಉಡುಪಿ ಜಿಲ್ಲೆಯ ಬಡಗುತಿಟ್ಟಿನಲ್ಲಿ ಹಿಂದೆ ಹಾರಾಡಿ ಶೈಲಿ – ಮಟ್ಪಾಡಿ ಶೈಲಿ ಎಂಬ ಎರಡು ಪ್ರಮುಖ ಶೈಲಿಗಳನ್ನು ಗುರುತಿಸುತ್ತಿದ್ದರು. ಇವೆರಡಕ್ಕಿಂತ ಭಿನ್ನವಾದ ಮಾರ್ವಿ ಶೈಲಿ ಎಂಬ ಇನ್ನೊಂದು ಶೈಲಿಯೂ ಇತ್ತೆಂದು ಪ್ರಸಿದ್ಧ ಸ್ತ್ರೀವೇಷಧಾರಿ ಮಾರ್ಗೋಳಿ ಗೋವಿಂದ ಶೇರೆಗಾರರು ಹೇಳಿದ್ದಾರೆ ( ಸಂದರ್ಶನದಲ್ಲಿ ). ಮಾರ್ವಿ ಶೈಲಿಯಲ್ಲಿ ಭಾಗವತರು, ಮದ್ದಲೆಗಾರರು, ವೇಷಧಾರಿಗಳೂ ಹೀಗೆ ಎಲ್ಲರೂ ಇದ್ದದ್ದರಿಂದ ಅದೊಂದು ಸ್ವತಂತ್ರ ಶೈಲಿಯಾಗಿತ್ತೆಂದು ಅವರು ವಿವರಿಸಿದ್ದಾರೆ.
ಹಾರಾಡಿ ಶೈಲಿ ಎಂದರೆ ದಿ. ಹಾರಾಡಿ ಕುಷ್ಟಗಾಣಿಗರು ಪ್ರಮುಖವಾಗಿ ಪ್ರತಿನಿಧಿಸಿದ ನರ್ತನ ಶೈಲಿ. ಬಡಗು ತಿಟ್ಟಿನ ಮುಂಡಾಸ, ಕೇದಗೆ ಮುಂದಲೆಯ ಸೌಂದರ್ಯ, ಅಚ್ಚುಕಟ್ಟುತನಕ್ಕೆ ಕೂಡ ಹಾರಾಡಿಯ ಕಲಾವಿದರು ಪ್ರಸಿದ್ಧರಾಗಿದ್ದರು. ಕುಷ್ಟಗಾಣಿಗರದು ನರ್ತನದಲ್ಲಿ ವಿಷಮಲಯದ ನರ್ತನ. ಇವರ ನರ್ತನಕ್ಕೆ ಹಿರಿಯಡಕ ಗೋಪಾಲರಾಯರ ಮದ್ದಲೆಗಾರಿಕೆ ಸಾಥಿಯಾಗಿತ್ತು. ಭಾಗವತರು ಪದ್ಯ ಹೇಳುವಾಗಲೇ ಕೇದಗೆ ಮುಂದಲೆ, ಮುಂಡಾಸಗಳ ವಿವಿಧ ಭಂಗಿಗಳನ್ನು, ವೇಷದ ಮುಂಭಾಗ-ಹಿಂಭಾಗಗಳನ್ನು ವಿವಿಧ ಕೋನಗಳಲ್ಲಿ, ಭಂಗಿಗಳಲ್ಲಿ ಪ್ರದರ್ಶಿಸುತ್ತಾ, ಎರಡೂ ಭುಜಗಳನ್ನು ಕುಣಿಸುತ್ತಾ ತಮ್ಮ ನರ್ತನ ಕೌಶಲವನ್ನು ಪ್ರದರ್ಶಿಸುವುದು “ಹಾರಾಡಿಶೈಲಿ” ಯ ಕೊರಿಯಾಗ್ರಫಿ ಅಂದರೆ ನರ್ತನ ವಿನ್ಯಾಸ. ರಥದ ಮೇಲಿನ ಕುಣಿತವಾಗಲೀ,ಯುದ್ಧ, ಪ್ರಯಾಣ ಕುಣಿತಗಳಲ್ಲಾಗಲೀ, ಪದ್ಯದ ಕುಣಿತಗಳಲ್ಲಾಗಲೀ ಹಾರಾಡಿ ಕುಷ್ಟ ಗಾಣಿಗರ ಕುಣಿತದ ಸೌಂದರ್ಯ ಆಸ್ವಾದಿಸಿದವರು ಅದನ್ನು ಇನ್ನೊಬ್ಬರಲ್ಲಿ ಕಾಣಲಾರರು.
              ಇದಕ್ಕೆ ಸಮಸಮವಾಗಿ ಮಟ್ಪಾಡಿ ವೀರಭದ್ರನಾಯ್ಕರ ಕುಣಿತದ ಚುರುಕುತನ, ತಾಳದ ಲಯಕ್ಕೆ ಬೇರೆ ಬೇರೆ ಲಯಗಳಲ್ಲಿ ಕುಣಿದು ಸವಾಲನ್ನೆಸೆಯುವ ವಿಧಾನವಿತ್ತು. ತಮ್ಮ ನರ್ತನ ಕೌಶಲಕ್ಕಾಗಿ ವೀರಭದ್ರನಾಯ್ಕರು ದಿ. ಬೇಳಂಜೆ ತಿಮ್ಮಪ್ಪ ನಾಯ್ಕರ ಮದ್ದಲೆಗಾರಿಕೆಯಲ್ಲಿ ಹೊಸ ಹೊಸ ಪ್ರಯೋಗಗಳನ್ನು ಮಾಡಿದ್ದುಂಟು. ಪದ್ಯ ಹಾಡುವಾಗ ಮಧ್ಯದಲ್ಲಿ ಪದ್ಯ ನಿಲ್ಲಿಸಿ, ನರ್ತನಕ್ಕೇ ವಿಶೇಷವಾದ ಅವಕಾಶ ಮಾಡಿಕೊಡುವುದು, ಆಗ ಮದ್ದಲೆವಾದಕರ ವಿವಿಧ ನುಡಿತಕ್ಕೆ ಆಹ್ವಾನ ನೀಡುವಂತೆ ವೀರಭದ್ರನಾಯ್ಕರ ಕುಣಿತ ವೈವಿಧ್ಯಗಳಿರುತ್ತಿದ್ದು, ತಾಮ್ರಧ್ವಜ, ಅತಿಕಾಯ ಪಾತ್ರಗಳಲ್ಲಿ ಅವು ವಿಶೇಷವಾಗಿ ಪ್ರೇಕ್ಷಕರನ್ನು ಬೆರಗುಗೊಳಿಸುತ್ತಿದ್ದವು. ಆ ಎರಡು ಪಾತ್ರಗಳು ಕೂಡಾ ವೀರಭದ್ರನಾಯ್ಕರ ಕುಣಿತಕ್ಕೇ ಮೀಸಲಾಗಿರುತ್ತಿದ್ದವು.
ಈಗ ವೀರಭದ್ರನಾಯ್ಕರ ನರ್ತನ ಶೈಲಿಯನ್ನು ಉಡುಪಿ ಯಕ್ಷಗಾನ ಕೇಂದ್ರದಲ್ಲಿ ಕಾಣುತ್ತೇವೆ. ಸಾಲಿಗ್ರಾಮ ಮಕ್ಕಳ ಮೇಳದ ಎಚ್. ಶ್ರೀಧರ ಹಂದೆಯವರು ಕಲಿಸುವ ಮಕ್ಕಳ ಕುಣಿತಗಳಲ್ಲಿ ವೀರಭದ್ರನಾಯ್ಕರ ಕುಣಿತದ ವಿಧಾನಗಳಲ್ಲದೇ ಹಾರಾಡಿ ಕುಷ್ಟಗಾಣಿಗರ ನರ್ತನ ಶೈಲಿಯನ್ನೂ ಕಾಣುತ್ತೇವೆ. ಇದಲ್ಲದೇ ಬಹಳ ವರ್ಷಗಳಿಂದ ಶ್ರೀಧರ ಹಂದೆಯವರು ಮಕ್ಕಳಿಗೆ ಕಲಿಸುವ ವಿಧಾನ ಕೂಡ ಅವರದ್ದೇ ಆದ  ‘ಕಲಿಕಾ ವಿಧಾನ’ ವೊಂದನ್ನು ರೂಪಿಸಿದೆ ಎಂದು ಮಿತ್ರರಾದ ಸದಾನಂದ ಐತಾಳರು ಇತ್ತೀಚೆಗೆ ಒಂದು ಭಾಷಣದಲ್ಲಿ ಪ್ರತಿಪಾದಿಸಿದರು.
                                                  
                     






ಹಂದೆಯವರು ಮಕ್ಕಳಿಗೆ ಪ್ರತೀದಿನ ಅಭ್ಯಾಸ ಮಾಡಿಸುವುದನ್ನು ನಾನೂ ಆಗಾಗ ನೋಡಿದ್ದೇನೆ. ಹಂದೆಯವರ ಮಗ ಸುಜಯೀಂದ್ರ ಕೂಡ ಮಕ್ಕಳಿಗೆ ತರಬೇತಿ ನೀಡುವುದನ್ನೂ ನೋಡಿದ್ದೇನೆ. ಆದರೆ ಸುಜಯೀಂದ್ರ ಹಂದೆ ಕಲಿಸುವ ವಿಧಾನ ಮಟ್ಪಾಡಿ ಶೈಲಿಯೇ ಆಗಿದೆ. ಅಲ್ಲದೇ ಶ್ರೀಧರ ಹಂದೆಯವರಾಗಲೀ, ಸುಜಯೀಂದ್ರ ಹಂದೆಯಾಗಲೀ ಪದ್ಯ ಹೇಳುವ ವಿಧಾನ ಉಪ್ಪೂರರ ಶೈಲಿಯೇ ಹೊರತು, ಹಾರಾಡಿ ಕುಷ್ಟಗಾಣಿಗರಿಗೆ ಹಿನ್ನೆಲೆಯೊದಗಿಸಿದ ದಿ. ಶೇಷಗಿರಿ ಭಾಗವತರ ಶೈಲಿಯಲ್ಲ. ಶೇಷಗಿರಿ ಭಾಗವತರ ಶಿಷ್ಯರಾದ ಜಾನುವಾರುಕಟ್ಟೆ ಗೋಪಾಲಕೃಷ್ಣಕಾಮತರ  ಅಥವಾ ಗುಂಡ್ಮಿ ರಾಮಚಂದ್ರ ನಾವಡರ ಹಾಡುಗಾರಿಕೆಯ ವಿಧಾನವನ್ನು ಗಮನಿಸಿ ನಾನು ಈ ಮಾತನ್ನು ಹೇಳುತ್ತಿದ್ದೇನೆ.                                        
         ಇದರಲ್ಲಿ ತಪ್ಪೇನೂ ಇಲ್ಲ. ಹಾರಾಡಿ ಶೈಲಿಗೆ ಮಟ್ಪಾಡಿ ಶೈಲಿಯನ್ನು ಕಸಿಗೊಳಿಸಿದಂತಾಗಿದೆ. ಅಷ್ಟೆ. ಏಕೆಂದರೆ ಉಪ್ಪೂರರು ವೀರಭದ್ರನಾಯ್ಕರಿಗೆ ಭಾಗವತರಾಗಿದ್ದವರು. ಆದರೆ ಹಾರಾಡಿ ಶೈಲಿಯ ಕುಣಿತವನ್ನು ಶ್ರೀಧರ ಹಂದೆಯವರು ಕಲಿಸುವ ವಿಧಾನವನ್ನು ಈಗ ಶಿಸ್ತುಬದ್ಧವಾಗಿ ದಾಖಲಿಸಬೇಕಾದ ಅಗತ್ಯವಿದೆ, ಅದು ಮುಂದಿನ ಪೀಳಿಗೆಗೆ ಒಂದು ಅಮೂಲ್ಯವಾದ ಕೊಡುಗೆಯಾಗುತ್ತದೆ.
                                                                                 
                                                           ಡಾ. ಶ್ರೀಧರ ಉಪ್ಪೂರ 
                                                      ಮೊಬೈಲ್ 9449902794

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ