ಶುಕ್ರವಾರ, ಜನವರಿ 23, 2015

 ನೆಬ್ಬೂರರಿಗೆ ಅಭಿನಂದನೆ 
ಕೆರೆಮನೆಯ ಮನೆಯ ಮಗನಾಗಿ ಕೆರೆಮನೆ ಶಿವರಾಮ ಹೆಗಡೆಯವರಲ್ಲಿ ಭಾಗವತಿಕೆ ಅಭ್ಯಾಸ ಮಾಡಿದ ನೆಬ್ಬೂರರು ಕೆರೆಮನೆಯ ನಾಲ್ಕು ತಲೆಮಾರಿನವರನ್ನು ರಂಗದಲ್ಲಿ ಕುಣಿಸಿದ ಹೆಗ್ಗಳಿಕೆ ಇರುವವರು ಇಡಗುಂಜಿ ಮೇಳದಲ್ಲಿ ಯಾಜಿ ಭಾಗವತರ ಮುಂದುವರಿಕೆಯಾಗಿ ಉತ್ತರ ಕನ್ನಡದಲ್ಲಿ ನೆಬ್ಬೂರರ ಶೈಲಿ ಎಂಬ ಪ್ರತ್ಯೇಕ ಅಸ್ತಿತ್ವವನ್ನು ಯಕ್ಷಗಾನ ಪ್ರಪಂಚದಲ್ಲಿ ದಾಖಲಿಸಿ ಉತ್ತರ ಕನ್ನಡ ಜಿಲ್ಲೆಯ ಭಾಗವತಿಕೆಯ ಪಾರಂಪರಿಕ ಪ್ರತಿನಿಧಿಯೆಂದು ಗುರುತಿಸಿಕೊಂಡವರು. ಇರಲಿ.
ಯಾಜಿ ಭಾಗವತರಿಗೆ ವಯಸ್ಸಾಗಿ ನಿವೃತ್ತರಾದಾಗ ಇಡಗುಂಜಿಮೇಳಕ್ಕೆ ನಾರ್ಣಪ್ಪ ಉಪ್ಪೂರರು ಭಾಗವತರಾಗಿ ಸೇರಿದಾಗ ನೆಬ್ಬೂರರು  ಸಂಗೀತಗಾರರಾಗಿ ಮೇಳದ ವೃತ್ತಿ ಜೀವನವನ್ನು ಆರಂಭಿಸಿದರು. ಕೆಲಸ ಮುಗಿದ ಕೂಡಲೇ ರಾತ್ರಿ ನಿದ್ರೆಗೆ ಜಾರದೇ ಉಪ್ಪೂರರಿಗೆ ಶೃತಿ ಬಾರಿಸುತ್ತಿದ್ದ ನೆಬ್ಬೂರರು ಉಪ್ಪೂರರಿಂದ ಹಲವು ಪ್ರಸಂಗಗಳ ನಡೆ ರಾಗಗಳ ಸಂಚಾರ ಸಾಹಿತ್ಯ ಶುದ್ಧತೆ ಇತ್ಯಾದಿಗಳನ್ನು ಕಲಿತುಕೊಂಡರು. ಇದನ್ನು ಮನಸಾರೆ ಒಪ್ಪಿಕೊಂಡ ಅವರು ಹಲವಾರು ಕಡೆ ಉಪ್ಪೂರರು ನನ್ನ ಗುರುಗಳ ಹಾಗೆ ಎಂದು ಹೇಳಿಕೊಂಡಿದ್ದಾರೆ. ಹಾಗಾಗಿಯೇ ಇವರಿಗೆ ಯಾಜಿ ಭಾಗವತರ ಪ್ರಭಾವದ ಜೊತೆಜೊತೆಗೆ ಇವರ ಭಾಗವತಿಕೆಯ ಅನೇಕ ಸಂದರ್ಭದಲ್ಲಿ ಉಪ್ಪೂರರ ಹಲವಾರು ಶಿಷ್ಯರಲ್ಲಿ ಕಾಣಲಾರದ ಉಪ್ಪೂರರ ಹಾಡಿನ ಛಾಯೆ, ಆಲಾಪ, ರಾಗಗಳ ಸಂಚಾರಗಳ ನೆನಪಾಗಿಯೇ ಆಗುತ್ತದೆ. ಅದಕ್ಕಾಗಿಯೇ ನಮಗೆ ನೆಬ್ಬೂರರು ತುಂಬಾ ಹತ್ತಿರವಾಗುತ್ತಾರೆ.
ಹಾಗಾಗಿ ಕಳೆದ ವರ್ಷ ನಮ್ಮ ಮನೆಯಲ್ಲಿ ಉಪ್ಪೂರರ 30 ನೇ ಪುಣ್ಯ ದಿನದ ಸ್ಮರಣಾರ್ಥ ಏರ್ಪಡಿಸಿದ ಕೌಟುಂಭಿಕ ಕಾರ್ಯಕ್ರಮದಲ್ಲಿ ನಾವು ನೆಬ್ಬೂರರನ್ನು ಕರೆಸಿ ಹಾಡಿಸಿ ಗೌರವಿಸಿದ್ದೆವು. ಅಂದು ಅವರು ಶ್ರೀಧರ ಹಂದೆಯವರು ಸುಜಯಿಂದ್ರ ಹಂದೆಯವರ ಜೊತೆ ಹಾಡಿದ ಅನೇಕ ಪದ್ಯಗಳು ಇಂದು ಯು ಟ್ಯೂಬ್ ನಲ್ಲಿ ನನ್ನ ಫೇಸ್ ಬುಕ್ ನಲ್ಲಿ ಅನೇಕರನ್ನು ಮೆಚ್ಚಿಸಿ ರಾರಾಜಿಸುತ್ತಿದೆ. ಆ ಎಲ್ಲಾ ಹಾಡುಗಳಲ್ಲಿ ಆಲಾಪನೆಗಳಲ್ಲಿ ಉಪ್ಪೂರರ ನೆನಪು ನಿಮಗೆ ಬಾರದೇ ಇರಲು ಸಾಧ್ಯವೇ ಇಲ್ಲ. ಇರಲಿ
ಆದರೆ ನೆಬ್ಬೂರರು ಹೆಚ್ಚಾಗಿ ಗುರುತಿಸಿ ಕೊಂಡದ್ದು ಕೆರೆಮನೆ ಶಂಭು ಹೆಗಡೆಯವರ  ಭಾಗವತರಾಗಿ. ಇವರು ಬೇರೆ ಎಷ್ಟೋ ಕಲಾವಿದರನ್ನು ಕುಣಿಸಿದ್ದರೂ ಶಂಭು ಹೆಗಡೆಯವರಿಗೆ ನೆಬ್ಬೂರರೇ ಬೇಕು. ನೆಬ್ಬೂರರ ಹಾಡುಗಾರಿಕೆ ಇಲ್ಲದಿದ್ದರೆ ಶಂಭು ಹೆಗಡೆಯವರ ವೇಷ ಇಲ್ಲ ಎಂಬಷ್ಟರ ಮಟ್ಟಿಗೆ. ಶಂಭು ಹೆಗಡೆಯವರ ಪಾತ್ರದ ಮನೋಧರ್ಮಕ್ಕೆ ಹೊಂದಿಕೊಂಡು ಆವರ್ತನ ಮಾಡಿ ಹಾಡುವ ಕಲೆ ನೆಬ್ಬೂರರಿಗೆ ಸಿದ್ಧಿಸಿತ್ತು. ಇದನ್ನು ಶಂಭು ಹೆಗಡೆಯವರು ಅನೇಕ ಕಡೆ ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ. ಆದ್ದರಿಂದ ಶಂಭು ಹೆಗಡೆಯವರು ನೆಬ್ಬೂರರನ್ನು ಬೇರೆ ಕಲಾವಿದರ ಕಡೆ ನೋಡದ ಹಾಗೆ ಸ್ನೇಹದಿಂದ ಕಟ್ಟಿ ಹಾಕಿ ಆವರಿಸಿಕೊಂಡುಬಿಟ್ಟರು ನೆಬ್ಬೂರರಿಗೂ ಅದು ಇಷ್ಟವಾಯಿತು. ಅಲ್ಲದೆ ಗುರುಮನೆಯ ಋಣ. ಇಂತಹಾ ಭಾಗವತ ಮತ್ತು ಕಲಾವಿದರ ಹೊಂದಾಣಿಕೆ ಹಿಂದೆ ಎಷ್ಟೋ ಮೇರು ಕಲಾವಿದರಲ್ಲೂ ಕಾಣಬಹುದು. ಅಂದಿನ ಆ ರಾಮನಿರ್ಯಾಣ, ಸತ್ಯ ಹರಿಶ್ಚಂದ್ರ, ನಳದಮಯಂತಿ,  ಕೃಷ್ಣ ಸಂದಾನ ಕಾರ್ತ್ಯವೀರ್ಯ ಮುಂತಾದ ಪ್ರಸಂಗಗಳು ಶಂಭು ಹೆಗಡೆಯವರಿಗೆ ತಂದಷ್ಟೇ ಕೀರ್ತಿ ನೆಬ್ಬೂರರಿಗೂ ತಂದುಕೊಟ್ಟಿದೆ. ನೆಬ್ಬೂರರ ಆತ್ಮಕಥನ “ನೆಬ್ಬೂರ ನಿನಾದ” ನೆಬ್ಬೂರರ ಪರಿಚಯ ಮಾಡಿಕೊಡುತ್ತದೆ
ಹಿಮ್ಮೇಳದಲ್ಲಿ ಪ್ರಭಾಕರ ಭಂಡಾರಿ ಶಂಕರ ಭಾಗವತರ ಮದ್ದಲೆಗಾರಿಕೆಯ ಜೊತೆಯನ್ನು ಮೆಚ್ಚಿಕೊಳ್ಳುವ ನೆಬ್ಬೂರರು ಒಮ್ಮೆ ಬೇಳಂಜೆ ತಿಮ್ಮಪ್ಪ ನಾಯಕರ ಮದ್ದಲೆಗೂ ಪದ್ಯ ಹೇಳಿದ್ದನ್ನು ಅವರ ಮದ್ದಲೆಗಾರಿಕೆಗೆ ಪದ್ಯಹೇಳಲು ಸುಖವಾಗುತ್ತಿತ್ತೆಂಬುದನ್ನು ನೆನಪಿಸಿಕೊಳ್ಳುತ್ತಾರೆ. ಮದ್ದಲೆಗಾರರು ಭಾಗವತರ ಹಾಡಿನ ಮಧ್ಯ ಅನುಕೂಲವಾಗುವಂತೆ ಗುಂಪು  ಚಾಪುಗಳನ್ನು ಕೊಡಬೇಕು ಯಾವ ಪದ್ಯಕ್ಕೆ ಚಾಲು ಬೇಕು ಯಾವುದಕ್ಕೆ ಬೇಡ ಎನ್ನುವುದನ್ನು ತಿಳಿದುಕೊಳ್ಳುವ ಸಾಮರ್ಥ್ಯ ಉಳ್ಳವರಾಗಿರಬೇಕು ಎನ್ನುತ್ತಾರೆ, ಇಂದು ಯಕ್ಷಗಾನ ಭಾಗವತಿಕೆ ದಾರಿ ತಪ್ಪಿ ಸಾಗುತ್ತಿದೆ ಹಾಡುಗಾರಿಕೆ ಹೋಗಿ ಹಾರುಗಾರಿಕೆಯಾಗುತ್ತಿದೆ. ಮದ್ದಲೆಯವರ ಅಬ್ಬರ ಹೆಚ್ಚಾಗಿ ಹೊಂದಾಣಿಕೆ ಕಷ್ಟವಾಗುತ್ತಿದೆ ಎನ್ನುತ್ತಾರೆ ಇವರು.
 ಇಂದು 78 ವರ್ಷ ವಯೋವೃದ್ಧರಾದ ನೆಬ್ಬೂರರು ಇಂದೂ ಭಾಗವತಿಕೆಯಲ್ಲಿ ಆಲ್ಲಲ್ಲಿ ಕಾಣಿಸಿಕೊಳ್ಳುತ್ತಿದ್ದು ಅವರ ಸ್ವರ ಮಾಧುರ್ಯ ವೃದ್ಧಿಸುತ್ತಲೇ ಹೋಗುತ್ತಿರುವುದನ್ನು ಕಾಣಬಹುದು ಅವರಿಗೆ ಆಯುಷ್ಯವನ್ನೂ ಆರೋಗ್ಯವನ್ನೂ ನೆಮ್ಮದಿಯನ್ನು ದೇವರು ಕರುಣಿಸಲಿ ಎಂದು ಹಾರೈಸಿ ನನ್ನ ಅನಿಸಿಕೆಯನ್ನು ಮುಗಿಸುತ್ತೇನೆ
  ದಿನೇಶ ಉಪ್ಪೂರ
 ಅಂಬಾಗಿಲು ಉಡುಪಿ - 5