ಗುರುವಾರ, ಅಕ್ಟೋಬರ್ 31, 2019

ದಿನೇಶ ಉಪ್ಪೂರ:

# *ರಾಜಸ್ಥಾನ ಯಾನ*

ಭಾಗ ೧೭

ಗಾಳಿಯ ರಭಸಕ್ಕೆ ಹೊಯಿಗೆಯ ಕಣಗಳು  ವೇಗದಿಂದ ಬಂದು ನಮ್ಮ ಕಣ್ಣು, ಬಾಯಿಗೆಲ್ಲ ಹೋಗುತ್ತಿದ್ದುದರಿಂದ ಅತ್ಯಂತ ಜಾಗ್ರತೆವಹಿಸಬೇಕಾಗಿತ್ತು. ಆಗಲೇ ಕತ್ತಲಾಗಲು ಶುರುವಾಯಿತು. ಅದು ಮೋಡ ಆವರಿಸಿದ್ದರಿಂದ ಆದದ್ದು. ದೊಡ್ಡ ದೊಡ್ಡ ಮಳೆಯ ಹನಿಗಳು ಬೀಳಲು ಶುರುವಾಯಿತು. ಭಟ್ಟರು ಮಗುವನ್ನು ಹಿಡಿದುಕೊಂಡಿದ್ದರು.

 ಹೊಯಿಗೆಯ ಕಣಗಳು ಬಡಿಯಬಾರದು ಎಂದು ಒಂದು ಬಟ್ಟೆಯಿಂದ ಮಗುವನ್ನು ಮುಚ್ಚಿ ಗಟ್ಟಿಯಾಗಿ ಅಪ್ಪಿಕೊಂಡು ಹಿಡಿದಿದ್ದರು. ಜೀಪ್ ಡ್ರೈವರ್, "ಹೋಗುವ ಬನ್ನಿ ಮಳೆ ಬರುವ ಹಾಗಿದೆ" ಎಂದ. ಬಹುಷ್ಯ ಅವರಿಗೆ ಇದು ಮಾಮೂಲು. ನಮಗೆ ಆಶ್ಚರ್ಯ. ಮರುಭೂಮಿಯಲ್ಲೂ ಮಳೆ ಬರುವುದೇ ಅಂತ. ಅದನ್ನೇ ಅವನಲ್ಲಿ ಕೇಳಿದಾಗ ವರ್ಷಕ್ಕೆ ಒಂದೋ ಎರಡೋ ಹೀಗೆ ಬರುವುದಿದೆ ಎಂದ.

ಆಂತೂ ರಭಸದಿಂದ ಬೀಸುವ ಗಾಳಿಯಲ್ಲಿಯೇ ಹೆದರಿ ಹೆದರಿ ಜೀಪ್ ಹತ್ತಿ ಟೆಂಟ್ ನತ್ತ ಹೊರಟೆವು. ನಮ್ಮ ಜೀಪ್ ಗಾಳಿಯಲ್ಲಿ ಆಚೀಚೆ ವಾಲುತ್ತಾ ನಿಧಾನವಾಗಿ ಸಾಗಿ ಟೆಂಟ್ ತಲುಪಿತು. ನಾವು ಬದುಕಿದೆವು ಎಂದು ನಿಟ್ಟುಸಿರು ಬಿಟ್ಟೆವು. ಗುಡುಗು ಮಿಂಚು ಶುರುವಾಗಿ, ಗಾಳಿ ರಭಸದಿಂದ ಬೀಸುತ್ತಿತ್ತು.

 ಮಳೆ  ಒಂದೆ ಸಮನೆ ಸುರಿಯುತ್ತಿತ್ತು. ನಮ್ಮ ಜೊತೆಗೆ ಹೋದ ಇನ್ನೊಂದು ಜೀಪ್ ಬರಲಿಲ್ಲ. ನಮಗೆ ಮತ್ತೆ ಗಾಬರಿ ಶುರುವಾಯಿತು. ಪೋನ್ ಮಾಡುವ ಎಂದರೆ ನೆಟ್ ವರ್ಕ್ ಸಹ ಸಿಗುತ್ತಿರಲಿಲ್ಲ.
ಪಕ್ಕನೇ ಕರೆಂಟ್ ಹೋಯಿತು. ಗಾಳಿಯ ರಭಸಕ್ಕೆ ಟಾರ್ಪಲ್ ಪಟಪಟ ಹಾರುತ್ತಿತ್ತು. ನಾವಂತೂ ಭಯದಲ್ಲಿ ನಡುಗುತ್ತಿದ್ದೆವು. ನಾನು ಮತ್ತು ಅನ್ನಪೂರ್ಣೆ ವಿಷ್ಣುಸಹಸ್ರನಾಮವನ್ನು ಪಠಣಮಾಡಲು ಶುರುಮಾಡಿದೆವು. ಅಷ್ಟರಲ್ಲಿ ಪಕ್ಕದ ಟೆಂಟ್ ನಲ್ಲಿದ್ದ ಜಾಜಿಯಕ್ಕ ಮತ್ತು ಶ್ರುತಿ ಮಾತಾಡುತ್ತಿರುವುದು ಕೇಳಿಸಿತು. ನಾವೂ ಅಲ್ಲಿಗೇ ಹೋಗುವ ಎಂದಳು ಅನ್ನಪೂರ್ಣೆ. ನಾವು ನಿಧಾನವಾಗಿ ನಡೆದು ಅವರ ಟೆಂಟನ್ನು ತಲುಪಿದೆವು. ಸಂಪೂರ್ಣ ಕತ್ತಲೆ.  ಉಳಿದವರ ಸುದ್ದಿಯೇನಾದರೂ ಗೊತ್ತಾಯ್ತಾ? ಎಂದು ನಾನು ಜಾಜಿಯಕ್ಕನನ್ನು ಕೇಳಿದೆ.

ಅವರು ಹೌದು ಈಗ ಪೋನ್ ಮಾಡಿದ್ದರು. ಅಂತು ಈಗ ಟೆಂಟನ್ನು ಸುರಕ್ಷಿತವಾಗಿ ತಲುಪಿದರಂತೆ ಎಂದರು. ನಾನು "ಹೌದಾ, ದೇವರು ದೊಡ್ಡವನು" ಎಂದು ನೆಮ್ಮದಿಯ ನಿಟ್ಟುಸಿರು ಬಿಟ್ಟೆ.

ಅಂತು ಎಲ್ಲರೂ ಒಂದುಕಡೆ ಸೇರಿದೆವು. ಅಷ್ಟರಲ್ಲಿ ಮಳೆಯೂ ಸ್ವಲ್ಪ ಕಡಿಮೆಯಾಗತೊಡಗಿತು. ಗುಡುಗೂ ಮಿಂಚು ಮಾತ್ರಾ ಕಡಿಮೆಯಾಗಲಿಲ್ಲ

ಕರೆಂಟೂ ಬಂತು. ಹೊರಗಡೆ ನಡೆಯ ಬೇಕಾಗಿದ್ದ ಒಂದು ಸಾಂಸ್ಕ್ರತಿಕ ಕಾರ್ಯಕ್ರಮವು, ಆಗ ಮಳೆಬಂದುದರಿಂದ ಡೈನಿಂಗ್ ಹಾಲ್ ನಲ್ಲಿ ನಡೆಯಲು ಶುರುವಾಯಿತು. ಆವಾಗಲೇ ಬಾಗೋರ್ ಕಿ ಹವೇಲಿಯಲ್ಲಿ ನೋಡಿದ ರಾಜಸ್ಥಾನೀ ನೃತ್ಯವನ್ನು ಮತ್ತೊಮ್ಮೆ ನೋಡಿದೆವು.

ನಂತರ ಎಲ್ಲರೂ ಅಲ್ಲಿ ಊಟಮಾಡಿ ನಮ್ಮ ನಮ್ಮ ಟೆಂಟಿಗೆ ಹೋಗಿ ಮಲಗಿ ನಿದ್ರೆ ಮಾಡಿದೆವು.

ದಿನಾಂಕ 4.10.19

ಮಳೆ ಬಂದುದರಿಂದ ನಮಗೆ ಇನ್ನೊಮ್ಮೆ ಜೀಪ್ ರೈಡಿಂಗ್ ಅವಕಾಶವನ್ನು ಕೊಡಬೇಕು ಎಂದು ವಿನಂತಿಸಿದ ಮೇರೆಗೆ ನಮ್ಮನ್ನು ಬೆಳಿಗ್ಗೆ ಬೇಗ ಸೂರ್ಯೋದಯ ವನ್ನು ನೋಡಲು ಎರಡು ಜೀಪ್ ನಲ್ಲಿ ಕರೆದುಕೊಂಡು ಹೋದರು.ಆದರೆ ಹಿಂದಿನ ರಾತ್ರಿ ಚೆನ್ನಾಗಿ ಮಳೆಬಂದುದರಿಂದ ಹೊಯಿಗೆಯಲ್ಲಿ ದೂಳು ಇರಲಿಲ್ಲ. ನೀರಿನ ಅಂಶವು ಹೊಯಿಗೆಯಲ್ಲಿ ಇದ್ದು ಒದ್ದೆಯಾಗಿದ್ದುದರಿಂದ ವಾತಾವರಣವೂ ಚೆನ್ನಾಗಿತ್ತು. ವೇಗವಾಗಿ ಹೊಯಿಗೆಯಲ್ಲಿ ನಾಲ್ಕು ಸುತ್ತು ಹಳ್ಳ ದಿಣ್ಣೆಯಲ್ಲಿ ಜೀಪ್ ರೈಡಿಂಗ್ ಮಾಡಿಯಾಯಿತು. ಮತ್ತೆ ಒಂಟೆಸವಾರಿಯೂ ಆಯಿತು. ಗೌತಮ್ ಒಂಟೆಯ ಮೇಲೆ ಕುಳಿತು ಓಟದ ಸವಾರಿಯನ್ನೂ ಮಾಡಿದರು. ನಂತರ ಎಲ್ಲರೂ ಮತ್ತೆ ಟೆಂಟ್ ಗೆ ಮರಳಿದೆವು. ಅಲ್ಲಿಗೆ ಬಂದು ಪೂರಿ ಯನ್ನು ತಿಂದು ಚಾ ಕುಡಿದು ಮುಂದಿನ ಪ್ರಯಾಣಕ್ಕೆ ಸಿದ್ಧರಾದೆವು.

ನಂತರ ಅಲ್ಲಿಂದ ನಾವು ನಮ್ಮ ಟಿಟಿಯಲ್ಲಿ ಜಯ್ ಸಲ್ಮೇರ್ ಕಡೆಗೆ ಹೊರಟೆವು. ದಾರಿಯಲ್ಲಿ ಟೊನೋಟಾ ಟೆಂಪಲ್ ಮತ್ತು ಸೈನಿಕರ. ಲಾಂಗ್ವಾಲಾ ಮ್ಯೂಸಿಯಂ ನ್ನು ನೋಡಿಕೊಂಡು ಹೋಗುವುದು ಎಂದು ನಿಶ್ಚಯವಾಗಿತ್ತು. ಅದು ಪಾಕಿಸ್ತಾನದ ಗಡಿಗಿಂತ ಕೇವಲ ಹದಿನೈದು ಕಿಲೋಮೀಟರ್ ಹತ್ತಿರದಲ್ಲಿ ಇತ್ತು.

ನಾನು ಗಮನಿಸಿದ ಹಾಗೆ ಆ ಪ್ರದೇಶದಲ್ಲಿ ಲೆಕ್ಕವಿಲ್ಲದಷ್ಟು ಗಾಳಿಯಂತ್ರಗಳು ಇತ್ತು. ಬಹುಷ್ಯ ಹೆಚ್ಚಿನ ಪ್ರಮಾಣದಲ್ಲಿ ಗಾಳಿಯಂತ್ರದಿಂದ ಅಲ್ಲಿ ವಿದ್ಯುತ್ ನ್ನು ಪಡೆಯುತ್ತಾರೆ. ಆದರೆ ಗಾಳಿಯೂ ತುಂಬಾ ವೇಗದಿಂದ ಬೀಸುತ್ತಿದ್ದರೂ ನಮಗೆ ಹೊರಗೆ ತುಂಬಾ ಬಿಸಿಯ ಸೆಖೆಯ ಅನುಭವ ಆಗುತ್ತಿತ್ತು.

ಟೆನೋಟಾ ಮಾತಾ ಮಂದಿರದ ಬಗ್ಗೆ ಈ ಕೆಳಗಿನ ಮಾಹಿತಿಯನ್ನು ಸಂಗ್ರಹಿಸಿದೆ.

………..ಮುಂದುವರಿಯುವುದು.


ಫೋಟೋ ಮತ್ತು ವಿಡಿಯೋ ಗಾಗಿ ಕೆಳಗಿನ ಲಿಂಕ್ ನೋಡಿ,

https://drive.google.com/folderview?id=1OFc52eYiC_S8eJYg9DqgLAf6-A1URX5Q

ಬುಧವಾರ, ಅಕ್ಟೋಬರ್ 30, 2019

ದಿನೇಶ ಉಪ್ಪೂರ:


# *ರಾಜಸ್ಥಾನ ಯಾನ*


ಭಾಗ ೧೬


ಒಂದು ಕ್ಷಣ ಏನು ಮಾಡಬೇಕೆಂದೇ ಗೊತ್ತಾಗಲಿಲ್ಲ.

ಆಗ ಅಪೇಕ್ಷಾ ಆ ಮನೆಯಲ್ಲಿ ಕೆಲಸಕ್ಕಿರುವ ಹುಡುಗನಿಗೆ ಪೋನ್ ಮಾಡಿ ವಿಷಯ ತಿಳಿಸಿ ಕೂಡಲೇ ಬರಲು ಹೇಳಿದರು.  ಅವನು ಬಂದು ಏನೂ ಆಗಲಿಲ್ಲ ಎನ್ನುವಂತೆ ಸೀದ ಅಡುಗೆಮನೆಗೆ ಹೋಗಿ ಡ್ರಾವರ್ ನಲ್ಲಿ ಇದ್ದ ಒಂದು ಸ್ಕ್ರೂ ಡ್ರೈವರ್ ನ್ನು ತೆಗೆದುಕೊಂಡು ಬಂದು ಬಾಗಿಲಿನ ಲಾಕ್ ಗೆ ಹಾಕಿದ ಎಲ್ಲ ಸ್ಕ್ರೂಗಳನ್ನು ಬಿಚ್ಚಿ ಬಾಗಿಲನ್ನು ತೆರೆದ. ಬಹುಷ್ಯ ಇದು ಮುಂಚೆಯೂ ಹಾಗೆ ಆಗುತ್ತಿತ್ತು. ಅಂತೂ ನಮಗೆಲ್ಲ ಒಮ್ಮೆ ಹೋದ ಜೀವ ಬಂದ ಹಾಗಾಯ್ತು. ಶ್ರುತಿ ಓಡಿ ಹೋಗಿ ಮಗು ಎದ್ದಿದೆಯಾ? ಎಂದು  ಮುಟ್ಟಿ ನೋಡಿ, ಸಮಾಧಾನದಿಂದ ವಾಪಾಸು ಬಂದಳು. ನಾವು ಇಸ್ಪೀಟ್ ಆಟವನ್ನು ಮುಂದುವರಿಸಿ, ಸಾಕು ಎನಿಸಿದಾಗ ಮುಗಿಸಿ ಮಲಗಿಕೊಂಡೆವು.


ದಿನಾಂಕ 3.10.19


         ಇವತ್ತು ನಮ್ಮ ಪ್ರಯಾಣ ಜಯ್ ಸಲ್ಮೇರ್ ದತ್ತ ಎಂದು ನಿರ್ಣಯವಾಗಿತ್ತು. ಇಡೀ ದಿನದ ಪ್ರಯಾಣ.  ಜಯ್ ಸಲ್ಮೇರ್ ದಿಂದ ಈಗಾಗಲೇ ಗೊತ್ತು ಮಾಡಿದಂತೆ ಅಲ್ಲಿಯ ಏಜೆನ್ಸಿಯವರನ್ನು ಕಂಡು ಬೇಕಾದ ಮಾಹಿತಿಯನ್ನು ಪಡೆದದ್ದಾಯಿತು. ಅಲ್ಲಿಂದ ತಾರ್ ಮರು ಭೂಮಿಯ ಪ್ರದೇಶಕ್ಕೆ ಹೋಗಿ ಸಂಜೆಯ ಸೂರ್ಯಾಸ್ತದ ದ ಸೊಬಗನ್ನು ಸವಿದು, ಒಂಟೆಯಲ್ಲಿ ಕುಳಿತು ಸವಾರಿ, ಹೊಯಿಗೆಯ ಮೇಲೆ ಜೀಪ್ ನಲ್ಲಿ ವೇಗದ ಸವಾರಿ ಮಾಡಿ, ರಾತ್ರಿ ಅಲ್ಲಿಯ ಟೆಂಟ್ ಒಂದರಲ್ಲಿ ಮಲಗಿ, ಬೆಳಿಗ್ಗೆ ಪುನಃ ಮರುಭೂಮಿಯಲ್ಲಿ ಇದ್ದು ಸೂರ್ಯೋದಯ ವನ್ನು ನೋಡಿ ಮರಳುವುದು ನಮ್ಮ ಯೋಜನೆಯಾಗಿತ್ತು.

ಅದರಂತೆ ಮರುಭೂಮಿಯನ್ನು ಪ್ರವೇಶಮಾಡಿದೆವು. ಆದರೆ ನಾನು ಅಂದುಕೊಂಡಂತೆ, ಮತ್ತು ಸಿನಿಮಾಗಳಲ್ಲಿ ನೋಡಿದಂತೆ ಅದು ಬರೀ ಹೊಯಿಗೆ ಮಾತ್ರಾ ವ್ಯಾಪಿಸಿಕೊಂಡ ಪ್ರದೇಶವಾಗಿರಲಿಲ್ಲ. ಅಲ್ಲಲ್ಲಿ ಹಸಿರು ಗಿಡಗಳ ಪೊದೆಗಳು ಇತ್ತು. ಆ ಪೊದೆಗಳ ಗಿಡದಲ್ಲಿ ಕಲ್ಲಂಗಡಿ ಹಣ್ಣಿನ ತರಹದ ಸಣ್ಣ ಸಣ್ಣ ಹಣ್ಣುಗಳೂ ಇತ್ತು. ಆ ಪೊದೆಗಳ ಮಧ್ಯದ ಹೊಯಿಗೆಯಲ್ಲಿ ನಮ್ಮ ವಾಹನ ಸಾಗುತ್ತಿತ್ತು. ನಮಗಾಗಿ ಗೊತ್ತುಮಾಡಿದ ಟೆಂಟ್ ನಲ್ಲಿ ನಮ್ಮ ನಮ್ಮ ಬ್ಯಾಗ್ ಗಳನ್ನು ಇರಿಸಿ, ಒಮ್ಮೆ ಕೈಕಾಲು ಮುಖಗಳನ್ನು ತೊಳೆದುಕೊಂಡು ಪ್ರೆಶ್ ಆದೆವು.

ಟೆಂಟ್ ಅಂದರೆ ಎದುರು ಮಾತ್ರಾ ಟಾರ್ಪಲ್ ಹೊದೆಸಿದ್ದರು, ಹಿಂದೆ ಎಟ್ಯಾಚ್ಡ್ ಬಾತ್ ರೂಮ್ ಕಟ್ಡಿದ,ಟೆಂಟ್ ಅದು. ಯು ಆಕಾರದಲ್ಲಿ ಅಂತಹಾ ನಲವತ್ತು ಐವತ್ತು ಟೆಂಟ್ ನ ಮನೆ ಇರುವ ಜಾಗ ಅದು. ಮಧ್ಯದಲ್ಲಿ ಒಂದು ವೇದಿಕೆ ಯಂತಹ ಜಾಗ ಇತ್ತು. ಆ ಸ್ಥಳವನ್ನು ಹೊಕ್ಕ ಕೂಡಲೇ ಬಲಬದಿಯಲ್ಲಿ ಅಡುಗೆ ಮಾಡುವ ಸ್ಥಳ ಮತ್ತು ಡೈನಿಂಗ್ ಹಾಲ್ ಇತ್ತು.

ನಮ್ಮ ಟಿಟಿಯ ಏಸಿ ಸರಿಯಾಗಿ ಕೆಲಸ ಮಾಡುತ್ತಿರಲಿಲ್ಲ ಎಂಬ ಅನುಭವ ನಮಗೆ ಆಗತೊಡಗಿತು. ಏಕೆಂದರೆ ನಾವು ಹೋದಲ್ಲೆಲ್ಲಾ ಮಳೆ ಬಂದದ್ದರಿಂದ ರಣಬಿಸಿಲಿಗೆ ಹೆಸರಾದ ರಾಜಸ್ಥಾನದಲ್ಲಿದ್ದರೂ ನಮಗೆ ಇಷ್ಟರವರೆಗೆ ಅದು ಕಷ್ಟವಾಗಿರಲಿಲ್ಲ. ಕೂಡಲೇ ಟಿಟಿಯ ಡ್ರೈವರ್ ಗೆ ತಿಳಿಸಿ ನಾವು ಈ ಮರುಭೂಮಿಯಿಂದ ಹೊರಡುವುದರ ಒಳಗೆ ಎಸಿಯನ್ನು ಸರಿಮಾಡಿಸಲೇ ಬೇಕು ಎಂದು ನಿಷ್ಠುರವಾಗಿ ಹೇಳಿದಮೇಲೆ ಅವನು ರಾತ್ರಿ ಪುನಹ ಜೈ ಸಲ್ಮೇರ್ ವರೆಗೆ ಹೋಗಿ ಏಸಿಯನ್ನು ರಿಪೇರಿ ಮಾಡಿಕೊಂಡು, ಬೆಳಿಗ್ಗೆ ನಾವು ಹೊರಡುವುದರ ಒಳಗೆ ಬಂದುಬಿಟ್ಟಿದ್ದ.

 ಆದಿನ ಸಂಜೆ ಒಂಟೆಯ ಮೇಲೆ ಕುಳಿತು, ಒಂಟೆ ಎಳೆಯುವ ಬಂಡಿಯಲ್ಲಿ ಕುಳಿತು ಅಥವ ಜೀಪಿನಲ್ಲಿ ಹೋಗಿ ಹೊಯಿಗೆ ಹಾಸಿನಿಂದ ಆವೃತವಾದ ಏರು ತಗ್ಗಿನ ವಿಶಾಲ ಜಾಗದಲ್ಲಿ ಸಾಗುವ ಕಾರ್ಯಕ್ರಮ.. ಎರಡು ಜೀಪಿನಲ್ಲಿ ನಾವು ಹೊರಟೆವು. ಒಂದು ಜೀಪಿನಲ್ಲಿ ವೇಗವಾಗಿ ಹೊಯಿಗೆಯಲ್ಲಿ ರೈಡ್ ಮಾಡಿಕೊಂಡು ಹೋಗುವವರು ಇನ್ನೊಂದು ಜೀಪಿನಲ್ಲಿ ನಾವು, ನಿಧಾನವಾಗಿ ಹೋಗುವವರು ಕುಳಿತುಕೊಂಡೆವು. ಆಗಲೇ ಸುಮಾರು ಐದುವರೆ ಗಂಟೆಯಾಗಿತ್ತು. ಆಗ ಭಯಂಕರವಾದ ಒಂದು ಘಟನೆ ನಡೆಯಿತು

ಅಲ್ಲಿ ಹೋಗಿ ಒಂದು ಟಾರ್ಪಲ್ ಚಪ್ಪರ ಹಾಕಿದ ಮಾಡಿನ ಬಳಿ, ಸ್ವಲ್ಪ ಹೊತ್ತು ಹೊಯಿಗೆಯ ಮೇಲೆ ಕುಳಿತಿದ್ದೆವಷ್ಟೆ. ಆಗ ಒಮ್ಮೆಲೆ ಗಾಳಿ ಬೀಸಲು ಶುರುವಾಯಿತು. ನೋಡನೋಡುತ್ತಿರುವಂತೆ ಗಾಳಿಯ ವೇಗ ಹೆಚ್ಚುತ್ತಾ ಹೋಗಿ, ಹೊಯಿಗೆಯ ಕಣಗಳು ಗಾಳಿಯ ವೇಗಕ್ಕೆ ಸುರುಳಿ ಸುರುಳಿಯಾಗಿ ಸುತ್ತಿ ಸುಂಟರಗಾಳಿಯಂತೆ ವೇಗವಾಗಿ ನುಗ್ಗುತ್ತಿತ್ತು.

 ಆಗ ಹಾರಿದ ಹೊಯಿಗೆ ಕಣಗಳು ಮೈಗೆ ರಾಚಿ ಉರಿಯುತ್ತಿತ್ತು. ನಾವು ನಿಂತ ಚಪ್ಪರವನ್ನು ಹಾರಿಸಿಕೊಂಡು ಹೋಗುತ್ತದೋ ಎಂಬಷ್ಟು ಗಾಳಿ ಜೋರಾಗಿ ಬೀಸುತ್ತಿದ್ದುದರಿಂದ ನಮಗೆ ಭಯವಾಯಿತು.


*………..ಮುಂದುವರಿಯುವುದು*


ಫೋಟೋ ಮತ್ತು ವಿಡಿಯೋಗಾಗಿ ಕೆಳಗಿನ ಲಿಂಕ್ ನೋಡಿ,

https://drive.google.com/folderview?id=1j-gNpudxlLdqPiFbGM4IELfEQqIhUtTC

ಮಂಗಳವಾರ, ಅಕ್ಟೋಬರ್ 29, 2019

ದಿನೇಶ ಉಪ್ಪೂರ:

# *ರಾಜಸ್ಥಾನ ಯಾನ*

ಭಾಗ ೧೫

ಈ ಪ್ರದೇಶದಲ್ಲಿನ ಬರಗಾಲದಿಂದ ಬಳಲುತ್ತಿರುವ ರೈತರಿಗೆ ಉದ್ಯೋಗ ನೀಡುವುದು ಇದರ ಆರಂಭಿಕ ಉದ್ದೇಶವಾಗಿದ್ದರಿಂದ ಅರಮನೆಯನ್ನು ನಿಧಾನಗತಿಯಲ್ಲಿ ನಿರ್ಮಿಸಲಾಯಿತು. 1929 ರಲ್ಲಿ ಅಡಿಪಾಯ ಹಾಕಲಾಯಿತು. ಇದರ ನಿರ್ಮಾಣದಲ್ಲಿ ಸುಮಾರು 2,000 ದಿಂದ 3,000 ಜನರು ಕೆಲಸ ಮಾಡುತ್ತಿದ್ದರು. ಮಹಾರಾಜರಿಂದ ಅರಮನೆಯ ಉದ್ಯೋಗವು 1943 ರಲ್ಲಿ ಪೂರ್ಣಗೊಂಡ ನಂತರ ಮತ್ತು ಭಾರತೀಯ ಸ್ವಾತಂತ್ರ್ಯದ ಅವಧಿಗೆ ಹತ್ತಿರವಾಯಿತು. ಅರಮನೆಯನ್ನು ನಿರ್ಮಿಸಲು ಅಂದಾಜು 11 ಮಿಲಿಯನ್ ರೂಪಾಯಿ ಆಗಿದೆ.

ಅರಮನೆಗೆ ಆಯ್ಕೆ ಮಾಡಲಾದ ಸ್ಥಳವು ಜೋಧ್‌ಪುರದ ಹೊರ ಮಿತಿಯಲ್ಲಿರುವ ಚಿತ್ತಾರ್ ಬೆಟ್ಟ ಎಂದು ಕರೆಯಲ್ಪಡುವ ಬೆಟ್ಟದ ಮೇಲೆ ಇತ್ತು, ಅಲ್ಲಿ ಯಾವುದೇ ನೀರು ಸರಬರಾಜು ಲಭ್ಯವಿಲ್ಲ ಮತ್ತು ಯಾವುದೇ ಸಸ್ಯವರ್ಗವು ಬೆಟ್ಟದ ಇಳಿಜಾರುಗಳಾಗಿ ಬೆಳೆಯುವುದಿಲ್ಲ. ಕಲ್ಲುಗಳು, ಮರಳುಗಲ್ಲಿನ ಕಲ್ಲುಗಣಿಗಳು ಸಾಕಷ್ಟು ದೂರದಲ್ಲಿರುವುದರಿಂದ ಅಗತ್ಯವಿರುವ ಕಟ್ಟಡ ಸಾಮಗ್ರಿಗಳು ಹತ್ತಿರದಲ್ಲಿರಲಿಲ್ಲ.

ಮಹಾರಾಜರು ತಮ್ಮ ಯೋಜನೆಯನ್ನು ಫಲಪ್ರದವಾಗಿಸುವ ದೂರದೃಷ್ಟಿಯನ್ನು ಹೊಂದಿದ್ದರಿಂದ, ಕಟ್ಟಡ ಸಾಮಗ್ರಿಗಳನ್ನು ಸಾಗಿಸಲು ಕ್ವಾರಿ ಸ್ಥಳಕ್ಕೆ ರೈಲ್ವೆ ಮಾರ್ಗವನ್ನು ನಿರ್ಮಿಸಿದರು. ರೈಲ್ವೆ ಮೂಲಕ ಸಾಗಿಸುವ ಮರಳುಗಲ್ಲನ್ನು ಗಾರೆ ಬಳಸದೆ ಇಡಲು ಅನುಕೂಲವಾಗುವಂತೆ ಇಂಟರ್ಲಾಕಿಂಗ್ ಕೀಲುಗಳನ್ನು ಹೊಂದಿರುವ ದೊಡ್ಡ ಬ್ಲಾಕ್ ಗಳಾಗಿ ಮಾಡಿ ಅಳವಡಿಸಿದ್ದರು.

ಅರಮನೆಯನ್ನು ಎರಡು ರೆಕ್ಕೆಗಳಿಂದ "ಡನ್-ಬಣ್ಣದ" (ಚಿನ್ನದ - ಹಳದಿ) ಮರಳುಗಲ್ಲಿನಿಂದ ನಿರ್ಮಿಸಲಾಗಿದೆ. ಮಕ್ರಾನಾ ಮಾರ್ಬಲ್ ಅನ್ನು ಸಹ ಬಳಸಲಾಗಿದೆ, ಮತ್ತು ಬರ್ಮೀಸ್ ತೇಗದ ಮರವನ್ನು ಆಂತರಿಕ ಮರಗೆಲಸಕ್ಕೆ ಬಳಸಲಾಗುತ್ತದೆ. ಪೂರ್ಣಗೊಂಡಾಗ ಅರಮನೆಯಲ್ಲಿ 347 ಕೊಠಡಿಗಳು, ಹಲವಾರು ಪ್ರಾಂಗಣಗಳು ಮತ್ತು 300 ಜನರು ವಾಸಿಸುವ ದೊಡ್ಡ ಔತಣಕೂಟ ಸಭಾಂಗಣವಿತ್ತು. ವಾಸ್ತುಶಿಲ್ಪದ ಶೈಲಿಯನ್ನು ಅಂದಿನ ಪ್ರಚಲಿತದಲ್ಲಿರುವ ಬ್ಯೂಕ್ಸ್ ಆರ್ಟ್ಸ್ ಶೈಲಿಯನ್ನು ಪ್ರತಿನಿಧಿಸುತ್ತದೆ ಎಂದು ಪರಿಗಣಿಸಲಾಗುತ್ತದೆ, ಇದನ್ನು ಇಂಡೋ-ಡೆಕೊ ಶೈಲಿ ಎಂದೂ ಕರೆಯುತ್ತಾರೆ.

 ಆದಾಗ್ಯೂ, ರಾಜಮನೆತನದ ದುರಂತ ಘಟನೆಗಳ ನಂತರ ಹಲವು ವರ್ಷಗಳಿಂದ ಅರಮನೆ ಸಂಪೂರ್ಣವಾಗಿ ಕಾರ್ಯನಿರ್ವಹಿಸಲಿಲ್ಲ. ಕೇವಲ ನಾಲ್ಕು ವರ್ಷಗಳ ಕಾಲ ಈ ಸ್ಥಳದಲ್ಲಿಯೇ ಇದ್ದ ಉಮೈದ್ ಸಿಂಗ್ 1947 ರಲ್ಲಿ ನಿಧನರಾದರು. ಅವರ ನಂತರ ಬಂದ ಹನುಮಂತ್ ಸಿಂಗ್ ಕೂಡ ಚಿಕ್ಕ ವಯಸ್ಸಿನಲ್ಲಿಯೇ ನಿಧನರಾದರು; ಅವರು ಕೇವಲ 1952 ರ ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದಿದ್ದರು ಮತ್ತು ಈ ಗೆಲುವಿನ ನಂತರ ಮನೆಗೆ ಹಿಂದಿರುಗುತ್ತಿದ್ದಾಗ ಅವರ ವಿಮಾನ ಅಪಘಾತಕ್ಕೀಡಾಗಿ ಅವರು ನಿಧನರಾದರು. ತನ್ನ ತಂದೆಯ ನಂತರ ಬಂದ ಗಜ್ ಸಿಂಗ್ II 1971 ರಲ್ಲಿ ಅರಮನೆಯ ಒಂದು ಭಾಗವನ್ನು ಹೋಟೆಲ್ ಆಗಿ ಪರಿವರ್ತಿಸಲು ನಿರ್ಧರಿಸಿದರು.

ಅರಮನೆಯ ಹಲವಾರು ಕೋಣೆಗಳು, ಆಯುಧಗಳು, ಗಡಿಯಾರಗಳು ಅಲಂಕಾರಿಕ ಸಾಮಗ್ರಿಗಳು, ದೊಡ್ಡ ದೊಡ್ಡ ಪ್ರಾಂಗಣಗಳು, ಪಲ್ಲಕಿಗಳು ರಾಜರು ಕುಳಿತು ಸಮಾಲೋಚನೆ ಮಾಡುತ್ತಿದ್ದ ದರ್ಬಾರ್ ಸ್ಥಳವನ್ನು ಜೊತೆಗೆ, ಅಲ್ಲಲ್ಲಿ ರಾಜಸ್ಥಾನೀ ವೇಷಭೂಷಣದಲ್ಲಿ ದೊಡ್ಡ ಮೀಸೆ ಹೊತ್ತು ನಗುತ್ತಾ ಸ್ವಾಗತಿಸುವ ಸೇವಕರನ್ನು ಕಂಡೆವು.

ಇದರ ಒಂದು ಭಾಗವೇ ಆಗಿರುವ, ತಾಜ್ ಹೋಟೆಲ್ ನಲ್ಲಿಯೇ, ನಟಿ ಪ್ರಿಯಾಂಕಾ ಚೋಪ್ರಾರ ವಿವಾಹ ನಡೆದಿತ್ತಂತೆ. ಅಲ್ಲಿ ರೂಮುಗಳ ಬಾಡಿಗೆ ಲಕ್ಷಗಳಲ್ಲಿ ಇರುತ್ತದೆ ಎಂದು ನಮ್ಮ ಗೈಡ್ ತಿಳಿಸಿದ. ಅವನು ಈಗಿನ ರಾಜ ಗಜ ಸಿಂಗ್ ಗೆ ಜಿಮ್ ಹೇಳಿ ಕೊಡುವವನಂತೆ. ವಿರಾಮವಿರುವ ಹೊತ್ತಿನಲ್ಲಿ ಗೈಡ್ ಆಗಿ ಕೆಲಸ ಮಾಡುತ್ತಿದ್ದ.

ಅಲ್ಲಿಂದ ಹೊರಬಂದ ನಾವು ಅನತಿ ದೂರದಲ್ಲಿ ಇದ್ದ ಬೆಂಚಿನ ಮೇಲೆ ಕುಳಿತು ವಿಶ್ರಾಂತಿ ಪಡೆದೆವು. ನಮ್ಮಲ್ಲಿ ಕೆಲವರು ಅಲ್ಲಿಯೇ ಸನಿಹದಲ್ಲಿದ್ದ ಹಳೆಯ ಕಾರುಗಳ ಪ್ರದರ್ಶನಾಲಯಕ್ಕೆ ಹೋಗಿ ಬಂದರು. ಅಲ್ಲಿಂದ ನಾವು ನಮ್ಮ ಅಪಾರ್ಟ್ ಮೆಂಟ್ ಗೆ ಹಿಂತಿರುಗಿದೆವು.
ರಾತ್ರಿ ಊಟವನ್ನು ಮಾಡಿದ ನಾವು, ಮಕ್ಕಳೆಲ್ಲ ಉತ್ಸಾಹ ತೋರಿಸಿದ್ದರಿಂದ ಒಟ್ಟಾಗಿ ಸೇರಿ ಇಸ್ಪೀಟ್ ನ್ನು ಆಡುತ್ತಿದ್ದೆವು. ನನಗೆ ಗೊತ್ತಿರುವುದು ಕತ್ತೆ ಮತ್ತು ಸೆಟ್ ಮಾಡುವುದು ಮಾತ್ರಾ. ಆದ್ದರಿಂದ ಸೆಟ್ ಮಾಡುವ ಆಟವನ್ನು ಆಡಲು ಶುರು ಮಾಡಿದೆವು. ಹಣವನ್ನು ಇಟ್ಟು ಆಡುವ ಆಟವಲ್ಲ. ಸುಮ್ಮನೆ ಸಮಯ ಕಳೆಯುವುದಕ್ಕೆ ಒಂದೆರಡು ಆಟದಲ್ಲಿ ನಾನು ಗೆದ್ದೂ ಬಿಟ್ಟೆ. ಆಗ ಒಂದು ಪ್ರಸಂಗ ನಡೆಯಿತು.

 ಶ್ರುತಿಯ ಸಣ್ಣ ಮಗು, ಅವರು ಇರುವ ಬೆಡ್ ರೂಮಿನಲ್ಲಿ ಮಲಗಿತ್ತು. ಮಗುವನ್ನು ಮಲಗಿಸಿದ, ಶ್ರುತಿಯ ಗಂಡ ನಾಗರಾಜ್ ಅವರು ರೂಮಿನಿಂದ ಹೊರಗೆ ಬರುವಾಗ ಬಾಗಿಲು ಹಾಕಿಕೊಂಡು ಬಂದಿದ್ದರು.

ಸ್ವಲ್ಪಹೊತ್ತಿನಲ್ಲಿ ಅವರು ಏಕೋ ಮತ್ತೆ ಬೆಡ್ ರೂಮಿಗೆ ಹೋಗಲು ಬಾಗಿಲು ತೆರೆಯಬೇಕು ಎನ್ನುವಾಗ ಅದರ ಹಿಡಿಯು ಅವರ ಕೈಗೇ ಬಂದುಬಿಟ್ಟಿತು. ಪುನಹ ಜೋಡಿಸಿ ತಿರುಗಿಸಿದರೆ ತಿರುಗುವುದೇ ಇಲ್ಲ. ಅದು ಇಲ್ಲದೇ ಇದ್ದರೆ ಬಾಗಿಲು ತೆಗೆಯಲು ಆಗುವುದೇ ಇಲ್ಲ.  ಒಳಗೆ ಮಗು ಒಂದೆ. ಮಲಗಿದೆ. ಸುದ್ಧಿ ತಿಳಿದು ಕೆಲವರು ಪ್ರಯತ್ನಿಸಿದರೂ ಬಾಗಿಲು ತೆರೆಯಲು ಆಗಲಿಲ್ಲ. ಎಲ್ಲರಿಗೂ ಗಾಬರಿ. ಏನುಮಾಡುವುದು? ಮಗು ಎದ್ದು ಅತ್ತರೆ?.

……..ಮುಂದುವರಿಯುವುದು.

ಸೋಮವಾರ, ಅಕ್ಟೋಬರ್ 28, 2019

ದಿನೇಶ ಉಪ್ಪೂರ:

# *ರಾಜಸ್ಥಾನ ಯಾನ*

ಭಾಗ ೧೪

ಜಸ್ವಂತ್ ಥಾಡಾ ಎಂಬುದು ಭಾರತದ ರಾಜಸ್ಥಾನದ ಜೋಧ್ಪುರದಲ್ಲಿದೆ. ಇದನ್ನು 1899 ರಲ್ಲಿ ಜೋಧಪುರ ರಾಜ್ಯದಮಹಾರಾಜ ಸರ್ದಾರ್ ಸಿಂಗ್ ಅವರು ತಮ್ಮ ತಂದೆ ಮಹಾರಾಜ ಜಸ್ವಂತ್ ಸಿಂಗ್ II ರ ನೆನಪಿಗಾಗಿ ನಿರ್ಮಿಸಿದರು.

ಇದೊಂದು ಆಗ್ರಾದ ತಾಜ್ ಮಹಲ್ ನ್ನು ಹೋಲುವ ಸ್ಮಾರಕವಾಗಿದ್ದು ಸಮಾಧಿಯನ್ನು ಅಮೃತಶಿಲೆಯಿಂದ ಕೆತ್ತಿದ ಹಾಳೆಗಳಿಂದ ನಿರ್ಮಿಸಲಾಗಿದೆ. ಈ ಹಾಳೆಗಳು ಅತ್ಯಂತ ತೆಳುವಾದ ಮತ್ತು ಹೊಳಪು ಹೊಂದಿದ್ದು ಸೂರ್ಯನಿಂದ ಪ್ರಕಾಶಿಸಲ್ಪಟ್ಟಾಗ ಅವು ಬೆಚ್ಚಗಿನ ಹೊಳಪನ್ನು ಹೊರಸೂಸುತ್ತವೆ.

ಸ್ಮಾರಕದ ಮೈದಾನದಲ್ಲಿ ಉದ್ಯಾನ ಮತ್ತು ಸಣ್ಣ ಸರೋವರವಿದೆ. ಮೈದಾನದಲ್ಲಿ ಇನ್ನೂ ಮೂರು ಸಮಾಧಿಗಳಿವೆ. ಮಹಾರಾಜ ಜಸ್ವಂತ್ ಸಿಂಗ್ ಅವರ ಸ್ಮಾರಕವು ಜೋಧಪುರದ ಆಡಳಿತಗಾರರ ಮತ್ತು ಮಹಾರಾಜರ ಭಾವಚಿತ್ರಗಳನ್ನು ಪ್ರದರ್ಶಿಸುತ್ತದೆ.

ಅದನ್ನು ಅರೆಬರೆ ಆಸಕ್ತಿಯಿಂದ ನೋಡಿ ನಾವು ಸಿಟಿ ಪ್ಲಾಜಾ ಎಂಬ ಒಂದು ಹೋಟೆಲಿಗೆ ಹೋಗಿ ಊಟ ಮಾಡಿದೆವು. ನಂತರ ಸ್ವಲ್ಪಹೊತ್ತು ವಿಶ್ರಾಂತಿಯ ಬಳಿಕ ಅಲ್ಲಿಂದ ಮುಂದೆ ಉಮೈದ್ ಭವನವನ್ನು ನೋಡಲು ಹೋಗುವುದು ನಮ್ಮ ಉದ್ದೇಶವಾಗಿತ್ತು.
ಭಾರತದ ರಾಜಸ್ಥಾನದ ಜೋಧಪುರದಲ್ಲಿರುವ ಉಮೈದ್ ಭವನ ಅರಮನೆ ವಿಶ್ವದ ಅತಿದೊಡ್ಡ ಖಾಸಗಿ ನಿವಾಸಗಳಲ್ಲಿ ಒಂದಾಗಿದೆ.

ಪ್ರಸ್ತುತ ಮಾಲೀಕ ಗಜ್ ಸಿಂಗ್ ಅವರ ಅಜ್ಜ ಮಹಾರಾಜ ಉಮೈದ್ ಸಿಂಗ್ ಅವರ ಹೆಸರನ್ನು ಇಡಲಾಗಿದೆ. ಈ ಅರಮನೆಯಲ್ಲಿ 347 ಕೊಠಡಿಗಳಿವೆ ಮತ್ತು ಇದು ಜೋಧಪುರದ ಹಿಂದಿನ ರಾಜಮನೆತನದ ಪ್ರಮುಖ ನಿವಾಸವಾಗಿದೆ. ಅರಮನೆಯ ಒಂದು ಭಾಗವು ವಸ್ತುಸಂಗ್ರಹಾಲಯವಾಗಿದೆ. ಅರಮನೆಯ ಇನ್ನೊಂದು ಭಾಗವನ್ನು ತಾಜ್ ಹೊಟೇಲ್ ಆಗಿ ನಿರ್ವಹಿಸಲಾಗುತ್ತಿದೆ.

1929 ರ ನವೆಂಬರ್ 18 ರಂದು ಮಹಾರಾಜ ಉಮೈದ್ ಸಿಂಗ್ ಅವರು ಕಟ್ಟಡದ ಅಡಿಪಾಯವನ್ನು ಹಾಕಿದ್ದು ಮತ್ತು ನಿರ್ಮಾಣ ಕಾರ್ಯಗಳು 1943 ರಲ್ಲಿ ಪೂರ್ಣಗೊಂಡವು.
ಇದು 1943 ರಲ್ಲಿ ತೆರೆದಿದ್ದು, ವಿಶ್ವದ ಅತಿದೊಡ್ಡ ರಾಜಮನೆತನದ ನಿವಾಸಗಳಲ್ಲಿ ಒಂದಾಗಿದೆ.

ಉಮೈದ್ ಭವನ ಅರಮನೆಯನ್ನು ನಿರ್ಮಿಸುವ, ಬರಗಾಲದ ಅವಧಿಯಲ್ಲಿ ರಾಥೋಡ್ ರಾಜವಂಶವು ಉತ್ತಮ ಆಡಳಿತವನ್ನು ನಡೆಸುತ್ತಿತ್ತು. ಆದರೂ, ಪ್ರತಾಪ್ ಸಿಂಗ್ ಅವರ ಸುಮಾರು 50 ವರ್ಷಗಳ ಆಳ್ವಿಕೆಯ ನಂತರ, ಜೋಧ್ಪುರ್ 1920 ರ ದಶಕದಲ್ಲಿ ಸತತ ಮೂರು ವರ್ಷಗಳ ಕಾಲ ತೀವ್ರ ಬರ ಮತ್ತು ಬರಗಾಲವನ್ನು ಎದುರಿಸಿತು. ಈ ಸಂಕಷ್ಟವನ್ನು ಎದುರಿಸಿದ ಪ್ರದೇಶದ ರೈತರು, ಆಗಿನ ರಾಜ ಉಮೈದ್ ಸಿಂಗ್, ಅವರ ಸಹಾಯವನ್ನು ಬೇಡಿದರು. ಜೋಧ್‌ಪುರದ ಮೇವಾಡದ 37 ನೇ ರಾಥೋಡ್ ಆಡಳಿತಗಾರರಾಗಿದ್ದರು, ಅವರಿಗೆ ಸ್ವಲ್ಪ ಉದ್ಯೋಗವನ್ನು ಒದಗಿಸಲು, ರೈತರಿಗೆ ಸಹಾಯ ಮಾಡುವ ಸಲುವಾಗಿ ಅದ್ದೂರಿ ಅರಮನೆಯನ್ನು ನಿರ್ಮಿಸಲು ನಿರ್ಧರಿಸಿದರು.

ಅವರು ಅರಮನೆಯ ಯೋಜನೆಗಳನ್ನು ಸಿದ್ಧಪಡಿಸಲು ಹೆನ್ರಿ ವಾಘನ್ ಲ್ಯಾಂಚೆಸ್ಟರ್ ಅವರನ್ನು ವಾಸ್ತುಶಿಲ್ಪಿಯಾಗಿ ನೇಮಿಸಿದರು; ಲ್ಯಾಂಚೆಸ್ಟರ್ ಸರ್ ಎಡ್ವಿನ್ ಲುಟಿಯೆನ್ಸ್ ಅವರ ಸಮಕಾಲೀನರಾಗಿದ್ದರು, ಅವರು ನವದೆಹಲಿ ಸರ್ಕಾರಿ ಸಂಕೀರ್ಣದ ಕಟ್ಟಡಗಳನ್ನು ಯೋಜಿಸಿದ್ದರು.

 ಲ್ಯಾಂಚೆಸ್ಟರ್ ಗುಮ್ಮಟಗಳು ಮತ್ತು ಕಾಲಮ್‌ಗಳ ವಿಷಯವನ್ನು ಅಳವಡಿಸಿಕೊಳ್ಳುವ ಮೂಲಕ ನವದೆಹಲಿ ಕಟ್ಟಡ ಸಂಕೀರ್ಣದ ಮಾದರಿಯಲ್ಲಿ ಉಮೈದ್ ಅರಮನೆಯನ್ನು ವಿನ್ಯಾಸಗೊಳಿಸಿದರು. ಅರಮನೆಯನ್ನು ಪಾಶ್ಚಾತ್ಯ ತಂತ್ರಜ್ಞಾನ ಮತ್ತು ಭಾರತೀಯ ವಾಸ್ತುಶಿಲ್ಪದ ವೈಶಿಷ್ಟ್ಯಗಳ ಮಿಶ್ರಣವಾಗಿ ವಿನ್ಯಾಸಗೊಳಿಸಲಾಗಿದೆ.

*……...ಮುಂದುವರಿಯುವುದು*

ಫೋಟೋ ಗಾಗಿ ಕೆಳಗಿನ ಲಿಂಕ್ ನೋಡಿ,
https://drive.google.com/folderview?id=1FTreYkP18V0HIBNcdZp7ZzDP8VBeoVLD

ಭಾನುವಾರ, ಅಕ್ಟೋಬರ್ 27, 2019

ದಿನೇಶ ಉಪ್ಪೂರ:

# *ರಾಜಸ್ಥಾನ ಯಾನ*

ಭಾಗ ೧೩

ದಿನಾಂಕ 2.10.19

ಬೆಳಿಗ್ಗೆ ಬೇಗ ಎದ್ದು ಅಂದಿನ ವೀಕ್ಷಣೆಗೆ ತಯಾರಾದೆವು. ಉದಯಪುರದಿಂದ ಬಂದ ಟಿಟಿಯಲ್ಲಿಯೇ ಜೋಧಪುರದಲ್ಲೂ ತಿರುಗಾಟ ಮಾಡುವ ಯೋಜನೆಯಿತ್ತು. ಅಂದು ನಾವು ಇರುವ ಆನಂದ ವಿಲ್ಲಾದ ಕುಕ್ ಗೆ ಹೇಳಿ, ಇಡ್ಲಿ ವಡೆ ಮತ್ತು ಚಟ್ನಿ, ಸಾಂಬಾರ್ ಮಾಡಿಸಿದ್ದೆವು. ರಾತ್ರಿ ಚಪಾತಿ, ಮಿಕ್ಸ್ ವೆಜ್ ಮಸಾಲ ಮುಂತಾದ ಅಡುಗೆಯನ್ನು ಮಾಡಲು ಹೇಳಿ, ಚೆನ್ನಾಗಿ ಬೇಯಿಸಿ ಅನ್ನವನ್ನು ಮಾಡಲು ಅವನಿಗೆ ನಿರ್ದೇಶನ ಕೊಟ್ಟು ಅಂದು ಮೆಹರ್ನಗಢ ಎಂಬ ಕೋಟೆ ಮತ್ತು ಅರಮನೆಯನ್ನು ನೋಡಲು ಹೊರಟೆವು.

ನಾವು ನೋಡಿದ ಆ ಪ್ರೇಕ್ಷಣೀಯ ಸ್ಥಳದ ಬಗ್ಗೆ ಗೂಗಲ್ ಈ ಕೆಳಗಿನ ವಿವರವನ್ನು ನೀಡುತ್ತದೆ

ಜೋಧ್‌ಪುರ ಜಂಕ್ಷನ್‌ನಿಂದ 6 ಕಿ.ಮೀ ದೂರದಲ್ಲಿ, ಇರುವ ಮೆಹರನ್‌ ಗಢ ಕೋಟೆ ಜೋಧ್‌ಪುರ ನಗರದ ಪುರಾತನ ಬೆಟ್ಟದ ಮೇಲಿನ ದೊಡ್ಡ ಕೋಟೆಯಾಗಿದೆ. ಇದು ನಗರದಿಂದ 410 ಅಡಿ ಎತ್ತರದಲ್ಲಿದೆ, ಮೆಹರನ್‌ಗಢ ಕೋಟೆಯನ್ನು ಕ್ರಿ.ಶ 1459 ರಲ್ಲಿ ರಾವ್ ಜೋಧಾ ಅವರು ತಮ್ಮ ರಾಜಧಾನಿಯನ್ನು ಒಂದು ಸಾವಿರ ವರ್ಷದಷ್ಟು ಹಳೆಯದಾದ ಮಾಂಡೋರ್‌ನಿಂದ ಜೋಧಪುರಕ್ಕೆ ವರ್ಗಾಯಿಸಿದಾಗ ನಿರ್ಮಿಸಿದರು. ಈ ಕೋಟೆಗೆ ಮೆಹರನ್‌ಗಢ ಎಂದು ಹೆಸರಿಡಲಾಯಿತು, ಇದರ ಅರ್ಥ 'ಸೂರ್ಯನ ಕೋಟೆ'.

ಈ ಕೋಟೆಯನ್ನು ಮೂಲತಃ 1459 ರಲ್ಲಿ ರಾವ್ ಜೋಧಾ ಪ್ರಾರಂಭಿಸಿದರೂ, ಇಂದು ಇರುವ ಹೆಚ್ಚಿನ ಕೋಟೆಯು ಮಾರ್ವಾರ್ನ ಜಸ್ವಂತ್ ಸಿಂಗ್ (1638 -78) ರ ಕಾಲದಿಂದ ಬಂದಿದೆ. ಹಾಗೂ ಇಂದು, ಈ ಕೋಟೆಯನ್ನು ಈಗಿನ ರಾಥೋಡ್ ಆಡಳಿತಗಾರ ಮಹಾರಾಜ ಗಜ್ ಸಿಂಗ್  ರವರು ಸಂರಕ್ಷಿಸಿದ್ದಾರೆ.

 ಮೆಹರನ್‌ಗಢ ಕೋಟೆಯನ್ನು ಕಟ್ಟಲು ರಾವ್ ಜೋಧಾ ಅವರು ಬೆಟ್ಟದ ಮೇಲೆ ವಾಸವಾಗಿದ್ದ  ಚೀರಿಯಾ ನಾಥ್ಜಿ (ಪಕ್ಷಿಗಳ ಅಧಿಪತಿ) ಎಂಬ ಸನ್ಯಾಸಿಯನ್ನು ಸ್ಥಳಾಂತರಿಸಲು ಬಯಸಿದರೆ ಅವನು ಒಪ್ಪಲಿಲ್ಲವಂತೆ. ಕೊನೆಗೆ ಕರ್ಣಿಮಾತಾರನ್ನು ಕರೆಸಿ ಅವರಿಂದ ಹೇಳಿಸಿದಾಗ, ಅವರ ಪ್ರಭಾವಕ್ಕೆ ಹೆದರಿ ಅವನು ಓಡಿಹೋದನಂತೆ.

 ಆದರೆ, ಈ ಬಲವಂತದ ಸ್ಥಳಾಂತರದ ಬಗ್ಗೆ ಕೋಪಗೊಂಡ ಚೀರಿಯಾ ನಾಥ್ಜಿ , ರಾವ್ ಜೋಧಾ ಅವರ ರಾಜ್ಯವು ನೀರಿನ ಕೊರತೆಯಿಂದ ಬಳಲಲಿ ಎಂದು ಶಪಿಸಿದನಂತೆ. ಆದ್ದರಿಂದ ಇಂದಿಗೂ ಈ ಪ್ರದೇಶವು ಪ್ರತಿ 3 ರಿಂದ 4 ವರ್ಷಗಳಿಗೊಮ್ಮೆ ಬರಗಾಲದಿಂದ ಬಳಲುತ್ತಿದೆ

ಈ ಕೋಟೆಯು 120 ಅಡಿ ಎತ್ತರ ಮತ್ತು 70 ಅಡಿ ದಪ್ಪ ಗೋಡೆಗಳಿಂದ ಸುತ್ತುವರೆದಿದೆ. ಈ ಕೋಟೆಯು ಏಳು ದ್ವಾರಗಳನ್ನು ಹೊಂದಿದೆ ಮತ್ತು ಅವುಗಳಲ್ಲಿ ಅತ್ಯಂತ ಪ್ರಸಿದ್ಧವಾದದ್ದು ಜಯಪೋಲ್ (ಅಂದರೆ ವಿಜಯದ ದ್ವಾರ). ಜೈಪುರ ಮತ್ತು ಬಿಕಾನೆರ್ ಸೈನ್ಯಗಳ ವಿರುದ್ಧದ ವಿಜಯವನ್ನು ಆಚರಿಸಲು ಮಹಾರಾಜ ಮನ್ ಸಿಂಗ್ ಅವರು ಈ ಗೇಟ್ ಅನ್ನು ನಿರ್ಮಿಸಿದ್ದಾರೆ. ಮತ್ತೊಂದು ಗೇಟ್ - ಮೊಘಲರ ಸೋಲಿನ ನೆನಪಿಗಾಗಿ ಮಹಾರಾಜ ಅಜಿತ್ ಸಿಂಗ್ ಅವರು ಫತೇಪೋಲ್ ಅನ್ನು ಕಟ್ಟಿದರು.

ಜೈಪುರದ ಸೈನ್ಯಗಳ ಮೇಲೆ ದಾಳಿ ಮಾಡುವ ಮೂಲಕ ಹಾರಿಸಿದ ಫಿರಂಗಿ ಚೆಂಡಿನ ಗುರುತುಗಳನ್ನು ಎರಡನೇ ಗೇಟ್‌ನಲ್ಲಿ ಇನ್ನೂ ಕಾಣಬಹುದು. ಲೋಹಾ ಪೋಲ್ ಕೋಟೆ ಸಂಕೀರ್ಣದ ಮುಖ್ಯ ಭಾಗದ ಅಂತಿಮ ದ್ವಾರವಾಗಿದೆ.

ಕೋಟೆ ಸಂಕೀರ್ಣದೊಳಗಡೆಯಿಂದ ಸುಮಾರು 11 ಅಂತಸ್ತುಗಳಮೇಲೆ ಏರಬೇಕಾಗಿದ್ದು ಅದನ್ನು ಪ್ರವೇಶಿಸಲು ಈಗ ಲಿಫ್ಟ್ ವ್ಯವಸ್ಥೆಯನ್ನು ಮಾಡಲಾಗಿದ್ದು ಅಲ್ಲಿ ಹಲವಾರು ಅರಮನೆಗಳು ಇವೆ, ಅವುಗಳು ಸಂಕೀರ್ಣವಾದ ಕೆತ್ತನೆಗಳು ಮತ್ತು ವಿಸ್ತಾರವಾದ ಪ್ರಾಂಗಣಗಳಿಗೆ ಹೆಸರುವಾಸಿಯಾಗಿದೆ. ಇವುಗಳಲ್ಲಿ ಮೋತಿ ಮಹಲ್, ಫೂಲ್ ಮಹಲ್, ಶೀಶಾ ಮಹಲ್, ಮತ್ತು ದೌಲತ್ ಖಾನಾ ಸೇರಿದೆ.

ಮೋತಿ ಮಹಲ್ ಅಥವಾ ಪರ್ಲ್ ಪ್ಯಾಲೇಸ್ ಕೋಟೆಯು ಪ್ರಮುಖ ಅರಮನೆಗಳಲ್ಲಿ ಒಂದಾಗಿದೆ, ಇದರಲ್ಲಿಯ ಜೋಧಪುರದ ರಾಜ ಸಿಂಹಾಸನವನ್ನು ಶೃಂಗಾರ್ ಚೌಕಿ ಎಂದು ಕರೆಯಲಾಗುತ್ತದೆ. ಇದನ್ನು ರಾಜಾ ಸುರ್ ಸಿಂಗ್ (1595-1619) ನಿರ್ಮಿಸಿದ್ದಾರೆ. ಈ ಅರಮನೆಯು ಸುಂದರವಾಗಿ ಕೆತ್ತಿದ ವಾಸ್ತುಶಿಲ್ಪದ ಪರದೆಗಳಿಗೆ ಹೆಸರುವಾಸಿಯಾಗಿದೆ.

ಮಹಾರಾಜ ಅಭಯ ಸಿಂಗ್ (1724-1749) ಅವರು ಫೂಲ್ ಮಹಲ್ ಅನ್ನು ನಿರ್ಮಿಸಿದರು, ಅದು ಚಿನ್ನದ ಫಿಲಿಗ್ರೀಗಳಿಂದ ಸಮೃದ್ಧವಾಗಿದೆ.  ಮಹಾರಾಜ ತಖ್ತ್ ಸಿಂಗ್ ತಖ್ತ್ ವಿಲಾ ನಿರ್ಮಿಸಿದರು. ಪ್ಲ್ಯಾಸ್ಟರ್‌ನಲ್ಲಿ ಮಾಡಿದ ಪ್ರಕಾಶಮಾನವಾಗಿ ಚಿತ್ರಿಸಿದ ಧಾರ್ಮಿಕ ವ್ಯಕ್ತಿಗಳ ಕನ್ನಡಿ ಕೆಲಸವು ಶೀಶಾ ಮಹಲ್ ಅನ್ನು ಅಲಂಕರಿಸುತ್ತದೆ.

ಮೆಹರನ್‌ಗಢ ಕೋಟೆಯ ಬಹುಪಾಲು ಭಾಗವನ್ನು ಪಾರಂಪರಿಕ ವಸ್ತುಸಂಗ್ರಹಾಲಯವನ್ನಾಗಿ ಪರಿವರ್ತಿಸಲಾಗಿದೆ,  ವಸ್ತುಸಂಗ್ರಹಾಲಯದಲ್ಲಿ ರಾಯಲ್ ಪಲ್ಲಕ್ಕಿಗಳು, ಚಿಕಣಿ ವರ್ಣಚಿತ್ರಗಳು, ಪೀಠೋಪಕರಣಗಳು ಮತ್ತು ಐತಿಹಾಸಿಕ ಶಸ್ತ್ರಾಸ್ತ್ರಗಳು ಇತ್ಯಾದಿಗಳ ದೊಡ್ಡ ಸಂಗ್ರಹವಿದೆ. ಮೂರು ಅಂತಸ್ತಿನ ದೌಲತ್ ಖಾನಾ ಗ್ಯಾಲರಿಯಲ್ಲಿ ರಾಥೋರ್ಸ್‌ಗೆ ಸಂಬಂಧಿಸಿದ ಅಮೂಲ್ಯವಾದ ಕಲಾಕೃತಿಗಳು ಇವೆ.

ಕೋಟೆಯ ಒಳಗಡೆ ಅರಮನೆಯ ಆವರಣದಲ್ಲಿ ತುಂಬಾ ಕೋಣೆಗಳಿದ್ದು ಅಂತಸ್ತುಗಳಿದ್ದು  ಅದನ್ನು ಮೆಟ್ಟಿಲು ಹತ್ತಿ ಇಳಿದು ಹತ್ತಿ ಇಳಿದು, ಅದನ್ನು ಸಂಪೂರ್ಣವಾಗಿ ನೋಡಿ ನಾವು ಜಸ್ವಂತ್ ಥಾಡಾ ಎಂಬ ಇನ್ನೊಂದು ಸ್ಥಳವನ್ನು ನೋಡಲು ಹೊರಟೆವು. ಆಗಲೇ ಮಧ್ಯಾಹ್ನವಾಗುತ್ತಾ ಬಂದಿದ್ದು ಎಲ್ಲರಿಗೂ ಹಸಿವೆಯಾಗುತ್ತ ಇತ್ತು.

*............ಮುಂದುವರಿಯುವುದು.*

ಫೋಟೋ ಮತ್ತು ವಿಡಿಯೋಗಾಗಿ ಕಿಳಗಿನ ಲಿಂಕ್ ನೋಡಿ.


https://drive.google.com/folderview?id=123Z4S0EB_k36_EnkUd_QSvhSb9zxWXxu

ಶನಿವಾರ, ಅಕ್ಟೋಬರ್ 26, 2019

ದಿನೇಶ ಉಪ್ಪೂರ:

*ರಾಜಸ್ಥಾನ ಯಾನ*

ಭಾಗ ೧೨

ಅದು ಬುಲೆಟ್ ಬಾಬಾ ಮಂದಿರ. ಅದೊಂದು ಸಣ್ಣ ದೈವಸ್ಥಾನ ಇದ್ದಹಾಗಿತ್ತು. ಆದರೆ ಅಲ್ಲಿ ದೇವರ ಬದಲು ಒಂದು ಬುಲೆಟ್ ಬೈಕಿಗೆ ಪೂಜೆ ಮಾಡುತ್ತಿದ್ದರು. ಬುಲೆಟ್ ನ ಮುಂದೆ ಒಂದು ದೊಡ್ಡ ಕಟ್ಟೆ ಇದ್ದು ಅಲ್ಲಿ ಒಂದು ಬಾಬಾನ ಫೋಟೋ ಮತ್ತು ಒಂದೆಡೆ ಬೆಂಕಿಯನ್ನು ಉರಿಸಿಟ್ಟಿದ್ದರು. ಒಬ್ಬರು ಆ ಬಾಬಾನ ಫೋಟೋಗೆ ಒಂದು ಬಾಟಲಿಯಲ್ಲಿ ಮದ್ಯವನ್ನು ಕುಡಿಸುವಂತೆ ಬಾಗಿಸಿ ಹಿಡಿದು ತೆಗೆದುಕೊಂಡು ಹೋದರು.

ಓಂ ಬನ್ನಾ ಅಥವ ಬುಲೆಟ್ ಬಾಬಾ ಮಂದಿರದ ಇತಿಹಾಸವನ್ನು ಗೂಗಲ್ ಹೀಗೆ ತಿಳಿಸುತ್ತದೆ.
ಬುಲೆಟ್ ಬಾಬಾ (ಇದನ್ನು ಶ್ರೀ ಓಂ ಬನ್ನಾ ಎಂದೂ ಕರೆಯುತ್ತಾರೆ) ಭಾರತದ ಜೋಧ್‌ಪುರದ ಬಳಿಯ ಪಾಲಿ ಜಿಲ್ಲೆಯಲ್ಲಿರುವ ಒಂದು ದೇವಾಲಯವಾಗಿದ್ದು, ಮೋಟಾರ್ಸೈಕಲ್ ರೂಪದಲ್ಲಿ ದೇವತೆಗೆ ಅರ್ಪಿತವಾಗಿದೆ.

2 ಡಿಸೆಂಬರ್ 1991 ರಂದು, ಓಂ ಬನ್ನಾ (ಹಿಂದೆ ಇವರನ್ನು ಓಂ ಸಿಂಗ್ ರಾಥೋಡ್ ಎಂದು ಕರೆಯುತ್ತಾರೆ) ಪಾಲಿಯ ಸ್ಯಾಂಡೇರಾವ್ ಬಳಿಯ ಬಾಂಗ್ಡಿ ಪಟ್ಟಣದಿಂದ ಚೋಟಿಲಾಕ್ಕೆ ಪ್ರಯಾಣಿಸುತ್ತಿದ್ದಾಗ, ತನ್ನ ಮೋಟಾರ್ ಸೈಕಲ್‌ನ ನಿಯಂತ್ರಣ ಕಳೆದುಕೊಂಡು ಮರಕ್ಕೆ ಡಿಕ್ಕಿ ಹೊಡೆದು ಸಾವನ್ನಪ್ಪಿದರು ಮತ್ತು ಅವರ ಮೋಟಾರ್ ಸೈಕಲ್ ಹತ್ತಿರದ ಕಂದಕಕ್ಕೆ ಬಿತ್ತು. ಅಪಘಾತದ ನಂತರದ ಬೆಳಿಗ್ಗೆ ಸ್ಥಳೀಯ ಪೊಲೀಸರು ಮೋಟಾರ್ ಸೈಕಲ್ ನ್ನು ಹತ್ತಿರದ ಪೊಲೀಸ್ ಠಾಣೆಗೆ ತಂದು ಇಟ್ಟರು. ಮರುದಿನ ಅದು ಕಣ್ಮರೆಯಾಗಿ ಘಟನೆಯ ಸ್ಥಳದಲ್ಲಿ ಮತ್ತೆ ಪತ್ತೆಯಾಯ್ತು. ಆಶ್ಚರ್ಯಗೊಂಡ ಪೊಲೀಸರು ಮತ್ತೊಮ್ಮೆ ಮೋಟಾರ್ ಸೈಕಲ್ ಅನ್ನು ಸ್ಟೇಶನ್ನಿಗೆ ತಂದರು. ಮತ್ತು ಅದರ ಇಂಧನ ಟ್ಯಾಂಕ್ ಅನ್ನು ಖಾಲಿ ಮಾಡಿ ಲಾಕ್ ಮಾಡಿ ಮತ್ತು ಚೈನ್ ತೆಗೆದು ಅಡಿಯಲ್ಲಿ ಇಟ್ಟರು.  ಆದರೂ ಮರುದಿನ ಬೆಳಿಗ್ಗೆ ಅದು ಮತ್ತೆ ಕಣ್ಮರೆಯಾಗಿದ್ದು, ಅಪಘಾತದ ಸ್ಥಳದಲ್ಲಿ ಕಂಡುಬಂತು.

ಸ್ಥಳೀಯ ಜನರಿಗೆ ಇದು ಪವಾಡವೆಂದು ಕಂಡುಬಂದಿತು ಮತ್ತು ಅವರು "ಬುಲೆಟ್ ಬೈಕ್" ಅನ್ನು ಪೂಜಿಸಲು ಪ್ರಾರಂಭಿಸಿದರು.
ಪ್ರತಿದಿನ ಹತ್ತಿರದ ಗ್ರಾಮಸ್ಥರು ಮತ್ತು ಪ್ರಯಾಣಿಕರು ಬೈಕು ಮತ್ತು ಅದರ ದಿವಂಗತ ಮಾಲೀಕ ಓಂ ಸಿಂಗ್ ರಾಥೋಡ್ ಅವರನ್ನು  ಪ್ರಾರ್ಥಿಸುತ್ತಾರೆ. ಮತ್ತು ಕೆಲವು ಚಾಲಕರು ಸಣ್ಣ ಮದ್ಯದ ಬಾಟಲಿಗಳನ್ನು ಸಹ ಸ್ಥಳದಲ್ಲಿ ನೀಡುತ್ತಾರೆ. ಮೋಟಾರುಬೈಕಿನಲ್ಲಿ ಕೆಂಪು ದಾರವನ್ನು ಕಟ್ಟುತ್ತಾರೆ.
ಅಲ್ಲಿಯೇ ಪಕ್ಕದಲ್ಲಿ ಇರುವ ಒಂದು ಹೋಟಲ್ ನಲ್ಲಿ ಚಾ ಕುಡಿದು ನಮ್ಮ ಪ್ರಯಾಣವನ್ನು ಮುಂದುವರಿಸಿದೆವು.

ರಾತ್ರಿ ಏಳರ ಸುಮಾರಿಗೆ ಜೋಧಪುರಕ್ಕೆ ತಲುಪಿ ಅಲ್ಲಿ ಮೊದಲೇ ಗೊತ್ತುಮಾಡಿದ್ದ ಆನಂದ ವಿಲ್ಲಾ ಎಂಬ ಮನೆಯನ್ನು ಪ್ರವೇಶಮಾಡಿ ವಿಶ್ರಾಂತಿ ಪಡೆದದ್ದಾಯಿತು. ಅಲ್ಲಿಯೂ ಅಡುಗೆ ಮಾಡಲು ಒಬ್ಬ ಕುಕ್ ಇದ್ದ. ನಮ್ಮ ಗೃಹಿಣಿಯರು ನಮಗೆ ಬೇಕಾದ ಹಾಗೆ ರಾತ್ರಿಗೆ ಅಡುಗೆ ಮಾಡಲು ಅವನಿಗೆ ನಿರ್ದೇಶನವನ್ನು ಕೊಟ್ಟರು. ಅವನು ಮಾಡಿದ ಅಡುಗೆಯನ್ನು ಉಂಡು ಮಲಗಿದೆವು.

ಅದು ಮೂರು ಅಂತಸ್ತಿನ ದೊಡ್ಡ ಬಂಗಲೆ. ಕೆಳ ಅಂತಸ್ತಿನಲ್ಲಿ ಒಂದು ದೊಡ್ಡ ಹಾಲ್ ಮತ್ತು ಎರಡು ಬೆಡ್ ರೂಮ್ ಇತ್ತು. ಮೊದಲ ಮತ್ತು ಎರಡನೇ ಅಂತಸ್ತಿನಲ್ಲೂ ಎರಡೆರಡು ಬೆಡ್ ರೂಮ್ ಗಳೂ ಮತ್ತು ಬಾಲ್ಕನಿಗಳೂ ಇದ್ದವು. ಅಲ್ಲಿ ವೈಫೈ ಕೂಡ ಇದ್ದುದರಿಂದ ನಮಗೆ ಅನುಕೂಲವಾಯಿತು. ಎದುರಿಗೆ ದೊಡ್ಡ ಕಾಡು ಇದ್ದು ನವಿಲುಗಳು ಕಡವೆಗಳೂ ಸಂಚರಿಸುವುದು ಕಾಣುತ್ತಿತ್ತು.

*……..ಮುಂದುವರಿಯುವುದು*

ಪೋಟೋ ಮತ್ತು ವಿಡಿಯೋಗಾಗಿ ಕೆಳಗಿನ ಲಿಂಕ್ ನೋಡಿ,

https://drive.google.com/folderview?id=1TpN3AOshITRr-21R_QldRlTtDOCH_zMj

ಶುಕ್ರವಾರ, ಅಕ್ಟೋಬರ್ 25, 2019

ದಿನೇಶ ಉಪ್ಪೂರ:

 # *ರಾಜಸ್ಥಾನ ಯಾನ*

ಭಾಗ ೧೧

ದಿನಾಂಕ 1.10.19

ನಾವು ಬೆಳಿಗ್ಗೆ ಬೇಗನೇ ಎದ್ದು ನಿತ್ಯ ಕರ್ಮಗಳನ್ನೆಲ್ಲ ಮುಗಿಸಿಕೊಂಡು, ನಮ್ಮವರೇ ಮಾಡಿದ ಚಿತ್ರಾನ್ನವನ್ನು ತಿಂದು, ಕಾಫಿ/ ಟೀಯನ್ನು ಸೇವಿಸಿಕೊಂಡು ಎಂಟು ಗಂಟೆಯ ಹಾಗೆ ಬಂದ ನಮ್ಮ ಟಿಟಿ ಯನ್ನು ಹತ್ತಿ ಜೋದಪುರದತ್ತ ಹೊರಟದ್ದಾಯಿತು.

ದಾರಿಯಲ್ಲಿ ಅದೂ ಇದೂ ಮಾತಾಡುತ್ತಲೋ ನಮ್ಮಷ್ಟಕ್ಕೇ ಆಗಲೇ ನೋಡಿದ ತಾಣಗಳನ್ನು ಮೆಲುಕು ಹಾಕುತ್ತಲೋ ಅದೂ ಅಲ್ಲದಿದ್ದರೆ ನಿದ್ದೆ ಮಾಡುತ್ತಲೋ ಕಾಲ ಕಳೆದೆವು. ಮಧ್ಯ ಮಧ್ಯ ತಿಂಡಿತಿನಿಸು, ಬಾಳೆಹಣ್ಣು ಸೇಬು ಹಣ್ಣು ಇತ್ಯಾದಿಗಳನ್ನು ಒದಗಿಸುತ್ತಿದ್ದರು.

ನಮ್ಮ ವಾಹನ ನಿಧಾನವಾಗಿ ಗುಡ್ಡಬೆಟ್ಟಗಳ ಹಸಿರಿನ ದಾರಿ ಹಿಡಿದು ಒಂದು ದೊಡ್ಡದಾದ ದೇವಾಲಯದ ಮುಂದೆ ನಿಂತಿತು. ಎಡಭಾಗದಲ್ಲಿ ಜುಳುಜುಳು ಹರಿಯುವ ನದಿಯೂ ಇದ್ದು ಆ ದೃಶ್ಯ ಮನೋಹರವಾಗಿತ್ತು.

ಅದು ರಣಕಪುರದ ಜೈನಮಂದಿರ. ನಾವು ಪ್ರತೀ ಕಡೆಯಲ್ಲಿಯೂ ಮಾಡುವಂತೆ ಅಲ್ಲಿಯೂ ಒಬ್ಬ ಗೈಡನ್ನು ಗೊತ್ತುಮಾಡಿಕೊಂಡು ಅವನ ನಿರ್ದೇಶನದಂತೆ ಆ ಬೃಹತ್ ಜೈನ ಮಂದಿರದ ಅಂದವನ್ನು ಸವಿಯುತ್ತಾ ಹೋದೆವು.

ಗೂಗಲ್ ದೇವತೆಯ ಪ್ರಕಾರ ಆ ಜೈನ ಮಂದಿರದ ವಿವರಗಳು ಹೀಗಿದೆ.

ಜೈನರ ಐದು ಪ್ರಮುಖ ಯಾತ್ರಾಸ್ಥಳಗಳಲ್ಲಿ ರಣಕ್‍ಪುರ್ ಜೈನ ಮಂದಿರವು ಸಹ ಒಂದು. ಮೂರು ದಿಕ್ಕುಗಳಲ್ಲಿ ಎತ್ತರವಾದ ಅರಾವಳಿ ಪರ್ವತ ಶ್ರೇಣಿಗಳನ್ನು ಹೊಂದಿರುವ ಈ ದೇವಾಲಯವು ಆದಿನಾಥ ದೇವನಿಗಾಗಿ ನಿರ್ಮಿಸಲ್ಪಟ್ಟಿದೆ. ತೆಳು ಬಣ್ಣದ ಅಮೃತಶಿಲೆಯಿಂದ ನಿರ್ಮಾಣವಾಗಿರುವ ಈ ದೇವಾಲಯವು ನೋಡಲು ಅತ್ಯಂತ ಸುಂದರವಾಗಿದೆ. ಈ ದೇವಾಲಯದ ಅಡಿಪಾಯವು 48,000 ಚದರ ಅಡಿಗಳಷ್ಟು ವಿಸ್ತೀರ್ಣವನ್ನು ಹೊಂದಿದೆ. 80 ಗುಮ್ಮಟಗಳನ್ನು, 29 ಹಜಾರಗಳನ್ನು ಮತ್ತು 1,444 ಸ್ತಂಭಗಳನ್ನು ಹೊಂದಿರುವ ಈ ದೇವಾಲಯವು ಇದನ್ನು ಕಟ್ಟಿದ ಕಲಾವಿದರ ಕಲಾನೈಪುಣ್ಯತೆಯನ್ನು ಪ್ರವಾಸಿಗರಿಗೆ ಸಾರಿ ಸಾರಿ ಹೇಳುವಂತೆ ಹೆಮ್ಮೆಯಿಂದ ನಿಂತಿದೆ. ಇದೇ ದೇವಾಲಯದ ಸಂಕೀರ್ಣದಲ್ಲಿ ಪಾರ್ಶ್ವನಾಥ ಮತ್ತು ನೇಮಿನಾಥ ದೇವಾಲಯಗಳು ಮುಖ್ಯ ದೇವಾಲಯದತ್ತ ಮುಖ ಮಾಡಿ ನಿಂತಿವೆ.

ರಣಕ್‌ಪುರ್ ಜೈನ್ ಮಂದಿರ 15ನೇ ಶತಮಾನಕ್ಕೆ ಸೇರಿದ್ದು. ಆಧುನಿಕ ತಂತ್ರಜ್ಞಾನದ ಸಹಾಯವಿಲ್ಲದೆ ಇಂಥ ಅದ್ಭುತವಾದ ದೇವಾಲಯವನ್ನು ನಿರ್ಮಿಸಲು ಸಾಧ್ಯವೇ ಇಲ್ಲ ಎನಿಸಿಬಿಡುತ್ತದೆ. ಪ್ರಾಂಗಣದ ಕಂಬಗಳ ಎತ್ತರವನ್ನು ನೋಡಿದಾಗ– ಆಗಿನ ಕಾಲದಲ್ಲಿ ಈ ಕಂಬಗಳನ್ನು ಇಷ್ಟು ಎತ್ತರಕ್ಕೆ ಇಲ್ಲಿ ಹೇಗೆ ನಿಲ್ಲಿಸಿದರು? ಎಂಬ ಪ್ರಶ್ನೆ ಏಳುವುದು ಸಹಜ.

ಈ ಮಂದಿರದ ಪ್ರತಿ ಕಂಬವೂ ಅದ್ಭುತವಾದ ಕೆತ್ತನೆಗಳಿಂದ ಕೂಡಿದೆ. ಕೆತ್ತನೆಗಳಿಗೆ ಜೀವ ಇರುವಂತೆ ಭಾಸವಾಗುತ್ತವೆ. ಮೇಲ್ಛಾವಣಿಯಲ್ಲಿ ರಚಿಸಿರುವ ಒಂದೇ ದೇಹ ಐದು ಕಾಯಗಳ ಮಾನವ, ಕೃಷ್ಣನ ಕಾಳಿಂಗ ಮರ್ಧನ ಮುಂತಾದ ಹಲವಾರು ಕೆತ್ತನೆಗಳು ಅತ್ಯಂತ ಮನೋಹರವಾಗಿದೆ. ದೇವಾಲಯದ ಪ್ರಾಂಗಣ, ಒಳಾವರಣದ ಚಿತ್ತಾರಗಳು, ತೀರ್ಥಂಕರರ ಮೂರ್ತಿಗಳು, ಹೂಬಳ್ಳಿಗಳು, ಮಾಲೆಯಂಥ ಕೆತ್ತನೆಗಳು ಒಂದನ್ನೊಂದು ಮೀರಿಸುವಂತಿವೆ.

ಸುತ್ತ ಎತ್ತ ನೋಡಿದರೂ ಕಂಬಗಳ ಸಾಲು, ಅದರ ಮೇಲೆ ಇಂಚಿಂಚೂ ಬಿಡದೆ ಕೆತ್ತನೆ. ಮೇಲೆ, ಕೆಳಗೆ ಅಕ್ಕ ಪಕ್ಕ ಹೀಗೆ ಎಲ್ಲಿ ನೋಡಿದರೂ ಕಲೆಯೇ ಮೇಳೈಸಿದೆ ಇಲ್ಲಿ.

ನಾಲ್ಕು ಬೃಹತ್ ದ್ವಾರಗಳಲ್ಲೂ ನಾಲ್ಕು ಬೃಹತ್ತಾದ ಚಿತ್ತಾರವಿರುವ ಗುಮ್ಮಟಾಕಾರದ ಭವ್ಯ ಮೇಲ್ಛಾವಣಿ ಇದ್ದು ಈ ದೇವಾಲಯದ ನಾಲ್ಕು ದ್ವಾರಗಳಲ್ಲೂ ಭಗವಾನ್ ಆದಿನಾಥರ ಮೂರ್ತಿಯಿದೆ. ಸಂಪೂರ್ಣ ಗುಲಾಬಿ ಬಣ್ಣದ ಮಾರ್ಬಲ್‌ನಿಂದ ಕಂಗೊಳಿಸುವ ಈ ಮಂದಿರವು ಸಮಯ ಸರಿದಂತೆ ಬಣ್ಣ ಬದಲಾಯಿಸುತ್ತದೆ. ಸೂರ್ಯನ ಕಿರಣಗಳಿಗೆ ಸ್ಪಂದಿಸುತ್ತ ಗುಲಾಬಿ, ನೇರಳೆ ಹಾಗೂ ಬಂಗಾರದ ಬಣ್ಣಕ್ಕೆ ತಿರುಗುತ್ತದಂತೆ.

ಈ ದೇವಾಲಯದ ಇಂಚಿಂಚೂ  ಅಮೃತಶಿಲೆಯ ಅಪೂರ್ವ ಕೆತ್ತನೆಗಳಿಂದ ಕೂಡಿದ್ದು ದಕ್ಷಿಣಭಾರತದ ಶಿಲ್ಪಕಲೆ ಹಾಗೂ ಉತ್ತರದ ಶಿಲ್ಪಕಲೆ ಎರಡನ್ನೂ ಕಾಣಬಹುದಾಗಿದೆ. ‘ಸಹಸ್ರಪನಾ’ ಎಂದು ಕರೆಯಲಾಗುವ ಸಾವಿರ ಹೆಡೆಯ ಸರ್ಪವಂತೂ ಶಿಲ್ಪಕಲೆಯ ಸೋಜಿಗದಂತಿದೆ. ಅದನ್ನು ಕೆತ್ತಿದ ಪರಿ ಹಾಗೂ ಅದರ ಸಂಕೀರ್ಣತೆ ಎಂಥವರನ್ನೂ ಸೆಳೆದುಬಿಡುತ್ತದೆ.

ರಾಜಸ್ತಾನದ ಪ್ರಸಿದ್ಧ ರಾಜ, ಮಹಾರಾಣಾ ಪ್ರತಾಪಸಿಂಹನ ಮೂಲ ವಂಶಸ್ಥರ ಕಾಲದಲ್ಲಿ ಈ ಅದ್ಭುತ ದೇವಾಲಯದ ನಿರ್ಮಾಣವಾಯಿತು. ಅಂದರೆ ಮಹಾರಾಣಾ ಕುಂಭನ ಕಾಲದ್ದು ಎನ್ನುವ ಈ ಮಂದಿರ, ಧರಣ್ ಶಾ ಎನ್ನುವ ಜೈನ ವ್ಯಾಪಾರಿಯು ರಾಣಾ ಕುಂಭನ ಮಂತ್ರಿಯಾಗಿದ್ದ. ಆತನ ಕನಸೇ ಈ ಮನಮೋಹಕ ದೇವಾಲಯ ಎಂದು ಇತಿಹಾಸ ಹೇಳುತ್ತದೆ.

ಸೂರ್ಯನಾರಾಯಣ ದೇವಾಲಯವೆಂದು ಸಹ ಕರೆಯಲ್ಪಡುವ ಸೂರ್ಯ ದೇವಾಲಯವು ರಣಕ್‍ಪುರದ ಜೈನ ದೇವಾಲಯಕ್ಕೆ ಸಮೀಪದಲ್ಲಿ ನೆಲೆಗೊಂಡಿದೆ. ಈ ದೇವಾಲಯವು ಗತಕಾಲದ ಕಲಾವಿದರ ಶ್ರೇಷ್ಠ ಕಲಾಭಿವ್ಯಕ್ತಿಯನ್ನು ಅತ್ಯುತ್ತಮವಾಗಿ ಪ್ರತಿನಿಧಿಸುತ್ತದೆ. ಇದರ ಬಹುಭುಜಾಕೃತಿಯ ಗೋಡೆಯ ಮೇಲೆ ಸೈನಿಕರು, ಕುದುರೆಗಳು ಮತ್ತು ದೇವಾನುದೇವತೆಗಳನ್ನು ಕೆತ್ತಲಾಗಿದೆ. ಸೂರ್ಯದೇವನು ತನ್ನ ರಥದಲ್ಲಿ ಹೊರಟಿರುವಂತಹ ಮೂರ್ತಿಯನ್ನು ನಾವು ಇಲ್ಲಿ ಕಾಣಬಹುದು.

ಇವೆಲ್ಲವನ್ನೂ ನೋಡಿ ಕಣ್ತುಂಬಿಕೊಂಡ ನಾವು ಅಲ್ಲಿ ಭೋಜನಪ್ರಸಾದದ ವ್ಯವಸ್ಥೆ ಯೂ ಇದೆಯೆಂದು ಮೊದಲೇ ತಿಳಿದಿದ್ದು ಅದರ ಬಗ್ಗೆ ವಿಚಾರಿಸಿದಾಗ ಅಲ್ಲಿಯ ಭೋಜನಶಾಲೆಯಲ್ಲಿ ಸಣ್ಣಮೊತ್ತವನ್ನು ಸ್ವೀಕರಿಸಿ ಅತ್ಯಂತ ಉತ್ತಮವಾದ  ಚಪಾತಿ ಊಟವನ್ನು ಒದಗಿಸಿದರು. ಅದನ್ನು ಉಂಡು ಸ್ವಲ್ಪ ಹೊತ್ತು ವಿಶ್ರಾಂತಿ ಪಡೆದು ಅಲ್ಲಿಂದ ನಮ್ಮ ಪ್ರಯಾಣ ಹೊರಟಿತು. ಮುಂದೆ ದಾರಿಯಲ್ಲಿ ಒಂದು ವಿಚಿತ್ರವಾದ ದೇವಾಲಯವನ್ನು ನೋಡಿದೆವು.

……..ಮುಂದುವರಿಯುವುದು

ಫೋಟೋ ಮತ್ತು ವಿಡಿಯೋ ಗಾಗಿ ಕೆಳಗಿನ ಲಿಂಕ್‌ ನೋಡಿ

https://drive.google.com/folderview?id=1HTQ6o5lZlohD-VJXJZ2GezE1yUyUYfzE

ಗುರುವಾರ, ಅಕ್ಟೋಬರ್ 24, 2019

ದಿನೇಶ ಉಪ್ಪೂರ:
ದಿನೇಶ ಉಪ್ಪೂರ:

# *ರಾಜಸ್ಥಾನ ಯಾನ*

ಭಾಗ ೧೦
ಅಮರ್ ವಿಲಾಸ್ ಸಂಕೀರ್ಣದ ಒಳಗಿನ ಮೇಲ್ಭಾಗವಾಗಿದ್ದು, ಇದೊಂದು ಎತ್ತರದ ಉದ್ಯಾನವಾಗಿದೆ.
ಇಲ್ಲಿ ಒಂದು ಆಸನವನ್ನು ಇರಿಸಿದ್ದರು. ಆಗಿನ ಅರಸ ಬ್ರಿಟಿಶ್ ದೊರೆಯ ಕರೆಯನ್ನು ಮನ್ನಿಸದೇ ದೆಹಲಿಗೆ ಹೋಗಲಿಲ್ಲವಂತೆ. ಆಗ ದಿಲ್ಲಿಯ ದೊರೆ ಆ ಆಸನವನ್ನೇ ಗೌರವಾರ್ಥ ಇಲ್ಲಿಗೆ ತಂದು ಒಪ್ಪಿಸಿದನಂತೆ. ಅದರ ಜೊತೆಗೆ ರಾಜನ ಪ್ರತಿಷ್ಠೆಯ ಸಂಕೇತವಾಗಿ ಎರಡು ಕುದುರೆಯ ಪ್ರತಿಕೃತಿಯನ್ನು ಅಲ್ಲಿ ಇರಿಸಿದ್ದರು.

ಅಲ್ಲಿಂದ ಬಡಿ ಮಹಲ್‌ಗೆ ಪ್ರವೇಶವನ್ನು ಮಾಡಬಹುದಾಗಿದೆ. ಇದನ್ನು ಮೊಘಲ್ ಶೈಲಿಯಲ್ಲಿ ಆನಂದ ಪೆವಿಲಿಯನ್ ಆಗಿ ನಿರ್ಮಿಸಲಾಗಿದೆ. ಇದು ಒಂದು ದೊಡ್ಡ ಅಮೃತಶಿಲೆಯ ಟಬ್ ಅನ್ನು ಹೊಂದಿದ್ದು ಅದರಲ್ಲಿ ಬೆಳ್ಳಿಯ ನಾಣ್ಯಗಳನ್ನು ತುಂಬಿಸಿ ರಾಜನು ವಿಶೇಷ ದಿನಗಳಲ್ಲಿ ಪ್ರಜೆಗಳಿಗೆ ಎಸೆಯುತ್ತಿದ್ದನಂತೆ. ಅಮರ್ ವಿಲಾಸ್ ಸಿಟಿ ಪ್ಯಾಲೇಸ್‌ನ ಅತ್ಯುನ್ನತ ಸ್ಥಳವಾಗಿದೆ ಮತ್ತು ಆ ಸ್ಥಳದಲ್ಲಿ ಕೆಲವು ಕಾರಂಜಿಗಳು, ಗೋಪುರಗಳು ಮತ್ತು ಟೆರೇಸ್‌ ನಲ್ಲಿ ಅಲ್ಲಲ್ಲಿ ಮರಗಳೂ ಇವೆ.

ಗಾರ್ಡನ್ ಪ್ಯಾಲೇಸ್ ಎಂದು ಕರೆಯಲ್ಪಡುವ ಬಡಿ ಮಹಲ್ (ಗ್ರೇಟ್ ಪ್ಯಾಲೇಸ್) ಅರಮನೆಯ ಉಳಿದ ಭಾಗಗಳಲ್ಲಿ 27 ಮೀಟರ್ (89 ಅಡಿ) ಎತ್ತರದ ನೈಸರ್ಗಿಕ ಶಿಲಾ ರಚನೆಯಾಗಿದೆ. ಸುತ್ತಮುತ್ತಲಿನ ಕಟ್ಟಡಗಳ ಎತ್ತರವನ್ನು ಗಮನದಲ್ಲಿಟ್ಟುಕೊಂಡು ಇದು ನೆಲ ಮಹಡಿಯ ಕೊಠಡಿಗಳಿಗಿಂತ ನಾಲ್ಕನೇ ಮಹಡಿಯ ಮಟ್ಟದಲ್ಲಿದ್ದದ್ದು ಕಂಡುಬರುತ್ತವೆ.
ಪಕ್ಕದ ಸಭಾಂಗಣದಲ್ಲಿ, 18 ಮತ್ತು 19 ನೇ ಶತಮಾನಗಳ ಚಿಕಣಿ ವರ್ಣಚಿತ್ರಗಳನ್ನು ಪ್ರದರ್ಶಿಸಲಾಗಿದೆ. ಭೀಮ್ ವಿಲಾಸ್ ಅವರು ರಾಧಾ - ಕೃಷ್ಣನ ನಿಜ ಜೀವನದ ಕಥೆಗಳನ್ನು ಚಿತ್ರಿಸಿರುವ ಚಿಕಣಿ ವರ್ಣಚಿತ್ರಗಳ ಸಂಗ್ರಹವನ್ನು ಹೊಂದಿದೆ.

ಕೃಷ್ಣ ವಿಲಾಸ್ ಮತ್ತೊಂದು ಕೋಣೆಯಾಗಿದ್ದು, ಇದು ಮಹಾರಾಣರ ರಾಯಲ್ ಮೆರವಣಿಗೆಗಳು, ಉತ್ಸವಗಳು ಮತ್ತು ಆಟಗಳನ್ನು ಚಿತ್ರಿಸುವ ಚಿಕಣಿ ವರ್ಣಚಿತ್ರಗಳ ಸಮೃದ್ಧ ಸಂಗ್ರಹವನ್ನು ಹೊಂದಿದೆ.

ಲಕ್ಷ್ಮಿ ವಿಲಾಸ್ ಚೌಕ್ ಮೇವಾಡದ ವರ್ಣಚಿತ್ರಗಳ ವಿಶಿಷ್ಟ ಸಂಗ್ರಹವನ್ನು ಹೊಂದಿರುವ ಆರ್ಟ್ ಗ್ಯಾಲರಿಯಾಗಿದೆ.
ಮನಕ್ ಚೌಕ್‌ನಿಂದ ಸಮೀಪಿಸಿದ ಮನಕ್ ಮಹಲ್ ಮೇವಾಡದ ಆಡಳಿತಗಾರರಿಗೆ ಔಪಚಾರಿಕ ಪ್ರೇಕ್ಷಕರಿಗೆ ಒಂದು ಆವರಣವಾಗಿದೆ. ಇದು ಕನ್ನಡಿ ಗಾಜಿನಲ್ಲಿ ಸಂಪೂರ್ಣವಾಗಿ ಬೆಳೆದ ಅಲ್ಕೋವ್ ಅನ್ನು ಕೆತ್ತಲಾಗಿದೆ.

 ಸೂರ್ಯನ ಮುಖದ ಲಾಂಛನಗಳು, ಹೊಳೆಯುವ ಹಿತ್ತಾಳೆಯಲ್ಲಿ, ಸಿಸೋಡಿಯಾ ರಾಜವಂಶದ ಧಾರ್ಮಿಕ ಚಿಹ್ನೆಗಳು ಸಿಟಿ ಪ್ಯಾಲೇಸ್‌ನ ಹಲವಾರು ಸ್ಥಳಗಳಲ್ಲಿ ಪುನರಾವರ್ತಿತ ಪ್ರದರ್ಶನವಾಗಿದ್ದು, ಒಂದನ್ನು ಮನಕ್ ಚೌಕ್‌ನ ಮುಂಭಾಗದಲ್ಲಿ ಚಿತ್ರಿಸಲಾಗಿದೆ.
ಮೊರ್ ಚೌಕ್ ಅಥವಾ ನವಿಲು ಚೌಕವು ಅರಮನೆಯ ಒಳ ನ್ಯಾಯಾಲಯಗಳಿಗೆ ಅವಿಭಾಜ್ಯವಾಗಿದೆ. ಈ ಕೊಠಡಿಯ ವಿಸ್ತಾರವಾದ ವಿನ್ಯಾಸವು ಮೂರು ನವಿಲುಗಳನ್ನು ಒಳಗೊಂಡಿದೆ (ಬೇಸಿಗೆಗಾಲ, ಚಳಿಗಾಲ ಮತ್ತು ಮಳೆಗಾಲ) ಪಕ್ಕದ ಕೋಣೆಯಲ್ಲಿ, ಕಾಂಚ್-ಕಿ-ಬುರ್ಜ್ ಎಂದು ಕರೆಯಲ್ಪಡುವ, ಕನ್ನಡಿಗಳ ಮೊಸಾಯಿಕ್ಸ್ ಗೋಡೆಗಳನ್ನು ಅಲಂಕರಿಸುತ್ತದೆ.
ರಂಗ್ ಭವನ ಅರಮನೆಯಾಗಿದ್ದು, ಇದು ರಾಜ ನಿಧಿಯನ್ನು ಹೊಂದಿದ ಪ್ರದೇಶ ವಾಗಿತ್ತಂತೆ. ಅಲ್ಲಿ ಶ್ರೀಕೃಷ್ಣ, ಮೀರಾ ಬಾಯಿ ಮತ್ತು ಶಿವನ ದೇವಾಲಯಗಳು ಇಲ್ಲಿವೆ.

ಶೀಸ್ ಮಹಲ್ ಅಥವಾ ಕನ್ನಡಿಯಿಂದಾವೃತ ಅರಮನೆಯನ್ನು ಮಹಾರಾಣಾ ಪ್ರತಾಪ್ ಅವರ ಪತ್ನಿ ಮಹಾರಾಣಿ ಅಜಬ್ಡೆಗಾಗಿ ನಿರ್ಮಿಸಿದರು.
ಈಗ ಐಷಾರಾಮಿ ಹೋಟೆಲ್ ಆಗಿರುವ ಫಟೆಪ್ರಕಾಶ್ ಅರಮನೆಯಲ್ಲಿ ಸ್ಫಟಿಕ ಗ್ಯಾಲರಿ ಇದೆ, ಅದು ಸ್ಫಟಿಕ ಕುರ್ಚಿಗಳು, ಡ್ರೆಸ್ಸಿಂಗ್ ಟೇಬಲ್‌ಗಳು, ಸೋಫಾಗಳು, ಟೇಬಲ್‌ಗಳು, ಕುರ್ಚಿಗಳು ಮತ್ತು ಹಾಸಿಗೆಗಳು, ಮಣ್ಣಿನ ಪಾತ್ರೆಗಳು, ಟೇಬಲ್ ಕಾರಂಜಿಗಳನ್ನು ಒಳಗೊಂಡಿದೆ. ನಾವು ಅಲ್ಲಿಗೆ ಹೋಗಲಿಲ್ಲ.

ಆನೆಗಳಿಗೆ ತಾಲಿಮು ನಡೆಸುತ್ತಿದ್ದ, ಅವುಗಳು ವಿಶ್ರಾಂತಿ ಪಡೆಯುತ್ತಿದ್ದ ನೆಲದ ಹಾಸನ್ನು ನೋಡಿದೆವು.

ಇವಿಷ್ಟು ಆ ಅರಮನೆಯ ವಿವರಗಳು. ರಾಣಾ ಪ್ರತಾಪ ಸಿಂಹ ಶತ್ರುಗಳೊಡನೆ ಹೋರಾಡುವಾಗ ಶತ್ರುಗಳನ್ನು ಮೋಸಗೊಳಿಸಲು ತನ್ನ ನಿಷ್ಠಾವಂತ ಕುದುರೆ (ಅದರ ಹೆಸರು ಚೇತಕ್)ಯ ಮುಖಕ್ಕೆ ಆನೆಯ ಮುಖವಾಡವನ್ನು ಹಾಕಿ ಯುದ್ಧ ಮಾಡುತ್ತಿದ್ದ ಸಂಗತಿಯನ್ನು ಗೈಡ್ ತಿಳಿಸಿದ. ಅದಕ್ಕೆ ಸಂಬಂಧ ಪಟ್ಡ ಹಲವಾರು ಚಿತ್ರಗಳು, ಕುದುರೆಯ ಪ್ರತಿಕೃತಿಗಳೂ ಅಲ್ಲಿ ಇರಿಸಿದ್ದರು.
ಅರಮನೆಗೆ ಬರುವಾಗ ಏರುದಾರಿಯಲ್ಲಿ ಉತ್ಸಾಹದಿಂದ ನಡೆದು ಬಂದಿದ್ದೆವು. ಅರಮನೆಯಲ್ಲಿರುವ ಅಂತಸ್ತುಗಳಿಗೆ ಹೋಗಲು ಮೆಟ್ಟಿಲುಗಳನ್ನು ಹತ್ತಿ ಇಳಿದು ದಣಿದೆವು. ಆದ್ದರಿಂದ ಪುನಹ ಕೆಳಗೆ ಬರುವಾಗ ಎಲೆಕ್ಟ್ರಿಕ್ ಕಾರಿನಲ್ಲಿ ಬಂದೆವು.

ನಮ್ಮ ಮುಂದಿನ ಪ್ರಯಾಣ ಪತೇ ಸಾಗರದತ್ತ.

ಫತೇಸಾಗರ್ ಸರೋವರವು ಬೆರಗುಗೊಳಿಸುವ ಸುಂದರವಾದ ಸ್ಥಳದಲ್ಲಿದೆ, ಇದು ಬೆಟ್ಟಗಳು, ನೀರು ಮತ್ತು ಸಸ್ಯವರ್ಗಗಳ ಮೂರು ಪ್ರಪಂಚದ ಭಾವನೆಗಳನ್ನು ನೀಡುತ್ತದೆ. ಮೋತಿ ಮ್ಯಾಗ್ರಿ ಬೆಟ್ಟದ ಉದ್ದಕ್ಕೂ ಪಿಚೋಲಾ ಸರೋವರದ ಉತ್ತರದಲ್ಲಿ ನೆಲೆಗೊಂಡಿರುವ ಫತೇಸಾಗರ್ ಸರೋವರವು ಉದಯಪುರದ ಎರಡನೇ ಅತಿದೊಡ್ಡ ಕೃತಕ ಸರೋವರವಾಗಿದೆ. ಮೂರು ಕಡೆ ಎತ್ತರದ ಅರಾವಳ್ಳಿ ಬೆಟ್ಟಗಳು ಮತ್ತು ಉತ್ತರ ಭಾಗದಲ್ಲಿ ಪ್ರತಾಪ ಸಿಂಹ ಸ್ಮಾರಕದಿಂದ ಆವೃತವಾದ ಈ ಸರೋವರವನ್ನು ಉದಯಪುರದ ಹೆಮ್ಮೆಯೆಂದು ಪರಿಗಣಿಸಲಾಗಿದೆ. ಈ ಸರೋವರವು ಮೂರು ಸಣ್ಣ ದ್ವೀಪಗಳಿಗೆ ನೆಲೆಯಾಗಿದೆ.

ಐತಿಹಾಸಿಕ ಮಾಹಿತಿಯ ಪ್ರಕಾರ, 1888 ರಲ್ಲಿ ಪ್ರವಾಹದಿಂದಾಗಿ ಮೊದಲ ಸರೋವರವು ಕೊಚ್ಚಿ ಹೋಗಿದೆ. ಮಹಾರಾಣ ಫತೇಹ್ ಸಿಂಗ್ ಈ ಅಣೆಕಟ್ಟನ್ನು ಪುನಹ ನಿರ್ಮಿಸಲು ಆದೇಶಿಸಿದನು. 800 ಮೀಟರ್ ಉದ್ದದ ಅಣೆಕಟ್ಟನ್ನು ಸರೋವರದ ಪೂರ್ವ ಭಾಗದಲ್ಲಿ ನಿರ್ಮಿಸಲಾಗಿದೆ. ಉದಯಪುರದ ಜನರಿಗೆ  ಈ ಅಣೆಕಟ್ಟು ಪ್ರಮುಖ ಕುಡಿಯುವ ನೀರಿನ ಮೂಲವೆಂದು ಪರಿಗಣಿಸಲಾಗಿದೆ. ಆದ್ದರಿಂದ, ರಾಜ, ಮಹಾರಾಣಾ ಫತೇಹ್ ಸಿಂಗ್ ಅವರ ಔದಾರ್ಯವನ್ನು ಗೌರವಿಸಲು ಈ ಸರೋವರಕ್ಕೆ ಫತೇಸಾಗರ್ ಸರೋವರ ಎಂದು ಹೆಸರಿಡಲಾಗಿದೆ.

ಮುಂದೆ ನಾವು ಆ ದಿನ ನೋಡಿದ ಸ್ಥಳ ಮೋತಿ ಮಗ್ರಿ

ಮಹಾರಾಣಾ ಪ್ರತಾಪ್‌ಸಿಂಹ, ತನ್ನ ಕೊನೆಯುಸಿರಿರುವ ತನಕ ತನ್ನ ಮಾಲೀಕನನ್ನು ರಕ್ಷಿಸಿದ ಅವನ ನೆಚ್ಚಿನ ಮತ್ತು ನಿಷ್ಠಾವಂತ ಕುದುರೆ ಚೇತಕ್ ನ  ಕಂಚಿನ ಪ್ರತಿಮೆಯು ಮೋತಿ ಮಗ್ರಿಯ (ಮುತ್ತಿನ ಬೆಟ್ಟ) ತುದಿಯಲ್ಲಿ ಫತೇ ಸಾಗರ್‌ಗೆ ಮುಖಮಾಡಿರುವಂತೆ ಸ್ಥಾಪಿಸಲಾಗಿದೆ.  ಆಗ ಸಣ್ಣದಾಗಿ ಮಳೆ ಬರುತ್ತಿದ್ದು ಮುಂದಿನ ಸ್ಥಳವನ್ನು ನೋಡಲು ಯಾರಿಗೂ ಉತ್ಸಾಹವಿರಲಿಲ್ಲ ಆಗಲೇ ಸುಮಾರು ನಾಲ್ಕು ಗಂಟೆಯಾಗಿದ್ದು ಎಲ್ಲರೂ ಪುನಹ ಮನೆಯನ್ನು ಸೇರಿಕೊಳ್ಳಲು ಕಾತರರಾಗಿದ್ದೆವು.

ಅಲ್ಲಿಂದ ಮುಂದೆ ಒಂದು ಸುಂದರವಾದ ಮ್ಯೂಸಿಯಂ ನ್ನು ನೋಡಿದೆವು. ಆಗ ಒಬ್ಬರು ಕನ್ನಡದಲ್ಲಿ ಮಾತಾಡುತ್ತಿರುವುದನ್ನು ಕಂಡು ಯಾರು ಎಲ್ಲಿಯವರು ಎಂದು ಕುತೂಹಲದಿಂದ ವಿಚಾರಿಸಿದಾಗ ಅವರು ನಮ್ಮ ಕರ್ನಾಟಕ ದ ಬೆಂಗಳೂರಿನವರು ಎಂದು ತಿಳಿಯಿತು. ನಾವು  ಉದಯಪುರದಿಂದ ಹೊರಟು ನಮ್ಮ ಪ್ರವಾಸವನ್ನು ಶುರು ಮಾಡಿದ್ದರೆ ಅವರು ಜಯ್ ಪುರದಿಂದ ಇಲ್ಲಿಗೆ ಬಂದು ನೋಡಿ ಪ್ರವಾಸ ಮುಗಿಸಿ ಬೆಂಗಳೂರಿಗೆ ವಾಪಾಸಾಗುವವರಿದ್ದರು.

ಅಂದಿನ ತಿರುಗಾಟವನ್ನು ಅಲ್ಲಿಗೇ ಮುಗಿಸಿ ನಾವು ನಮ್ಮ ಅಪಾರ್ಟ್ ಮೆಂಟ್ ನತ್ತ ಟಿಟಿಯಲ್ಲಿ ಹೊರಟೆವು.

ಆ ಅಪಾರ್ಟ್ ಮೆಂಟ್ ನ ಮನೆಯನ್ನು ಸೇರಿದ ಮೇಲೆ ಜಾಜಿಯಕ್ಕ ಮತ್ತು ಸಂಗಡಿಗರು ಅನ್ನವನ್ನು ಮಾಡಿ ತೊವ್ವೆ ಮತ್ತು ಬೀನ್ಸ್ ಪಲ್ಯವನ್ನು ತಯಾರಿಸಿದರು. ಅದನ್ನು ಗಡದ್ದಾಗಿ ಹೊಟ್ಟೆತುಂಬಾ ಉಂಡು ಮಲಗಿದೆವು.

ಮರುದಿನ ನಾವು ಉದಯಪುರದಿಂದ ಜೋಧ್ಪುರದತ್ತ ಸಾಗುವ ಯೋಜನೆಯನ್ನು ಹಾಕಿಕೊಂಡಿದ್ದೆವು. ದಾರಿಯಲ್ಲಿ ರಣಕ್ ಪುರದ ಜೈನ್ ರ ದೇವಾಲಯ ಸಮುಚ್ಚಯ ಮತ್ತು ಬುಲೆಟ್ ಬಾಬ ಮಂದಿರವನ್ನು ನೋಡಿಕೊಂಡು ಹೋಗುವ ಗುರಿಯೂ ಇತ್ತು.

*…...ಮುಂದುವರಿಯುವುದು*

ಬುಧವಾರ, ಅಕ್ಟೋಬರ್ 23, 2019

ದಿನೇಶ ಉಪ್ಪೂರ:


 # *ರಾಜಸ್ಥಾನ ಯಾನ*


ಭಾಗ ೯


ಅದು ಉದಯಪುರದ ಹೆಮ್ಮೆಯ ಸಿಟಿ ಪ್ಯಾಲೇಸ್,

ಮೇವಾಡದ ರಾಜವಂಶದ ಹಲವಾರು ಆಡಳಿತಗಾರರ ಕೊಡುಗೆಗಳೊಂದಿಗೆ ಇದನ್ನು ಸುಮಾರು 400 ವರ್ಷಗಳ ಅವಧಿಯಲ್ಲಿ ನಿರ್ಮಿಸಲಾಗಿದೆ. ಇದರ ನಿರ್ಮಾಣವು 1553 ರಲ್ಲಿ ಪ್ರಾರಂಭವಾಯಿತು, ಇದನ್ನು ಸಿಸೋಡಿಯಾ ರಜಪೂತ್ ಕುಟುಂಬದ ಮಹಾರಾಣ ಉದಯ್ ಸಿಂಗ್ II ಪ್ರಾರಂಭಿಸಿದರು, ಅವರು ತಮ್ಮ ರಾಜಧಾನಿಯನ್ನು ಹಿಂದಿನ ಚಿತ್ತೋರ್‌ನಿಂದ ಹೊಸದಾದ ಉದಯಪುರಕ್ಕೆ ಸ್ಥಳಾಂತರಿಸಿದರು.  ಈ ಅರಮನೆಯು ಪಿಚೋಲಾ ಸರೋವರದ ಪೂರ್ವ ದಂಡೆಯಲ್ಲಿದೆ ರಾಜಸ್ಥಾನಿ ಮತ್ತು ಮೊಘಲ್ ವಾಸ್ತುಶಿಲ್ಪದ ಸಮ್ಮಿಲನದಲ್ಲಿ ಇದನ್ನು ಬೆಟ್ಟದ ಮೇಲೆ ನಿರ್ಮಿಸಲಾಗಿದೆ,


ಇದು ನಗರ ಮತ್ತು ಅದರ ಸುತ್ತಮುತ್ತಲಿನ ವಿಹಂಗಮ ನೋಟವನ್ನು ಒದಗಿಸುತ್ತದೆ. ಪಿಚೋಲಾ ಸರೋವರದ ಕಡೆ, ಹಲವಾರು ಐತಿಹಾಸಿಕ ಸ್ಮಾರಕಗಳಾದ ಲೇಕ್ ಪ್ಯಾಲೇಸ್ , ಜಗ್ ಮಂದಿರ , ಜಗದೀಶ್ ದೇವಾಲಯ , ಮಾನ್ಸೂನ್ ಪ್ಯಾಲೇಸ್ , ಮತ್ತು ನೀಮಾಚ್ ಮಾತಾ ದೇವಾಲಯ ಎಲ್ಲವೂ ಅರಮನೆ ಸಂಕೀರ್ಣದ ಸುತ್ತಮುತ್ತಲ ಪ್ರದೇಶಗಳಲ್ಲಿವೆ.


1537 ರಲ್ಲಿ ಚಿತ್ತೋರ್ ನಲ್ಲಿ ಮೇವಾಡ ಸಾಮ್ರಾಜ್ಯವನ್ನು ಆನುವಂಶಿಕವಾಗಿ ಪಡೆದರು. ಆದರೆ ಆ ಹೊತ್ತಿಗೆ ಮೊಘಲರೊಂದಿಗಿನ ಯುದ್ಧಗಳಲ್ಲಿ ಕೋಟೆಯ ನಿಯಂತ್ರಣವನ್ನು ಕಳೆದುಕೊಳ್ಳುವ ಲಕ್ಷಣಗಳು ಕಂಡುಬಂದವು. ಆದ್ದರಿಂದ ಉದಯ್ ಸಿಂಗ್ II ತನ್ನ ಹೊಸ ಸಾಮ್ರಾಜ್ಯಕ್ಕಾಗಿ ಪಿಚೋಲಾ ಸರೋವರದ ಸಮೀಪವಿರುವ ಸ್ಥಳವನ್ನು ಆರಿಸಿಕೊಂಡನು, ಏಕೆಂದರೆ ಈ ಸ್ಥಳವು ಎಲ್ಲಾ ಕಡೆಗಳಲ್ಲಿ ಕಾಡುಗಳು, ಸರೋವರಗಳು ಮತ್ತು ಅರಾವಳ್ಳಿ ಬೆಟ್ಟಗಳಿಂದ ಉತ್ತಮವಾಗಿ ರಕ್ಷಿಸಲ್ಪಟ್ಟಿದೆ.


1572 ರಲ್ಲಿ ಉದಯ್ ಸಿಂಗ್ ಅವರ ಮರಣದ ನಂತರ, ಅವರ ಮಗ ಮಹಾರಾಣಾ ಪ್ರತಾಪ್ ಉದಯಪುರದಲ್ಲಿ ಅಧಿಕಾರ ವಹಿಸಿಕೊಂಡರು. ಆದಾಗ್ಯೂ, 1576 ರಲ್ಲಿ ಹಲ್ಡಿಘಾಟಿ ಕದನದಲ್ಲಿ ಮೊಘಲ್ ಚಕ್ರವರ್ತಿ ಅಕ್ಬರ್ ನು ಅವರನ್ನು ಸೋಲಿಸಿದನು. ನಂತರ ಉದಯಪುರ ಮೊಘಲ್ ಆಳ್ವಿಕೆಯಲ್ಲಿ ಬಂದಿತು.  ಅಕ್ಬರ್‌ನ ಮರಣದ ನಂತರ, ಮೇವಾರ್ ಅನ್ನು ಮಹಾರಾಣಾ ಪ್ರತಾಪ್ ಅವರ ಮಗ ಮತ್ತು ಉತ್ತರಾಧಿಕಾರಿ ಅಮರ್ ಸಿಂಗ್ I ಗೆ ಜಹಾಂಗೀರ್ ಉದಯಪುರದ ಅಧಿಕಾರವನ್ನು ಹಿಂದಿರುಗಿಸಿದರು .


ಆದರೆ 1761 ರ ಹೊತ್ತಿಗೆ ಹೆಚ್ಚುತ್ತಿರುವ ಮರಾಠರ ದಾಳಿಯೊಂದಿಗೆ, ಉದಯಪುರ ಮತ್ತು ಮೇವಾಡ ರಾಜ್ಯವು ತೀವ್ರ ಸಂಕಷ್ಟದಲ್ಲಿ ಬಹಳಷ್ಟು ಹಾಳಾಗಿತ್ತು. 1818 ರ ಹೊತ್ತಿಗೆ, ಮಹಾರಾಣ ಭೀಮ್ ಸಿಂಗ್ ಬ್ರಿಟಿಷರು ಇತರ ಸಾಮ್ರಾಜ್ಯಗಳ ವಿರುದ್ಧ ತಮ್ಮ ರಕ್ಷಣೆಯನ್ನು ಸ್ವೀಕರಿಸುವ ಒಪ್ಪಂದಕ್ಕೆ ಸಹಿ ಹಾಕಿದರು. 1947 ರಲ್ಲಿ ಭಾರತೀಯ ಸ್ವಾತಂತ್ರ್ಯದ ನಂತರ, ಮೇವಾರ್ ಸಾಮ್ರಾಜ್ಯವು ರಾಜಸ್ಥಾನದ ಇತರ ರಾಜ ಸಂಸ್ಥಾನಗಳೊಂದಿಗೆ 1949 ರಲ್ಲಿ ಪ್ರಜಾಪ್ರಭುತ್ವ ಭಾರತದೊಂದಿಗೆ ವಿಲೀನಗೊಂಡಿತು.


ನಗರ ಅರಮನೆ ಸಂಕೀರ್ಣದಲ್ಲಿನ ಅರಮನೆಗಳ ಸರಣಿಯನ್ನು 244 ಮೀಟರ್ (801 ಅಡಿ) ಉದ್ದ ಮತ್ತು 30.4 ಮೀಟರ್ (100 ಅಡಿ) ಎತ್ತರದ ಮುಂಭಾಗದ ಹಿಂಭಾಗದಲ್ಲಿ ಪಿಚೋಲಾ ಸರೋವರದ ಪೂರ್ವದಲ್ಲಿರುವ ಒಂದು ಪರ್ವತದ ಮೇಲೆ ನಿರ್ಮಿಸಲಾಗಿದೆ.


ಅವುಗಳನ್ನು 1559 ರಿಂದ 22 ತಲೆಮಾರುಗಳ ಕಾಲ ಸಿಸೋಡಿಯಾ ರಜಪೂತರು ನಿರ್ಮಿಸಿದ್ದಾರೆ. ಉದಯ್ ಸಿಂಗ್ II ರಿಂದ ಪ್ರಾರಂಭವಾಗುವ ಹಲವಾರು ಮಹಾರಾಣಗಳು ಈ ಕಟ್ಟಡಕ್ಕೆ ಕೊಡುಗೆ ನೀಡಿವೆ, ಇದು 11 ಸಣ್ಣ ಪ್ರತ್ಯೇಕ ಅರಮನೆಗಳನ್ನು ರಚನೆಗಳನ್ನು ಒಳಗೊಂಡಿದೆ. ಈ ಸಂಘಟನೆಯ ವಿಶಿಷ್ಟ ಅಂಶವೆಂದರೆ ವಾಸ್ತುಶಿಲ್ಪದ ವಿನ್ಯಾಸವು ಸ್ಪಷ್ಟವಾಗಿ ಏಕರೂಪದ್ದಾಗಿದೆ.


ಅರಮನೆ ಸಂಕೀರ್ಣವನ್ನು ಸಂಪೂರ್ಣವಾಗಿ ಗ್ರಾನೈಟ್ ಮತ್ತು ಅಮೃತಶಿಲೆಯಲ್ಲಿ ನಿರ್ಮಿಸಲಾಗಿದೆ. ಅರಮನೆ ಸಂಕೀರ್ಣದ ಒಳಾಂಗಣಗಳು ಅದರ ಬಾಲ್ಕನಿಗಳು, ಗೋಪುರಗಳು ಮತ್ತು ಕುಪೋಲಾಗಳನ್ನು ಸೂಕ್ಷ್ಮವಾದ ಕನ್ನಡಿ-ಕೆಲಸ, ಅಮೃತಶಿಲೆಯಕೆಲಸ, ಭಿತ್ತಿಚಿತ್ರಗಳು, ಗೋಡೆಯ ವರ್ಣಚಿತ್ರಗಳು, ಬೆಳ್ಳಿ-ಕೆಲಸ, ಒಳಹರಿವು-ಕೆಲಸ ಮತ್ತು ಬಣ್ಣದ ಗಾಜಿನ ಅಲಂಕಾರಗಳಿಂದ ಕಂಗೊಳಿಸುತ್ತವೆ. ಸಂಕೀರ್ಣವು ಅದರ ಮೇಲಿನ ಟೆರೇಸ್ಗಳಿಂದ ಸರೋವರ ಮತ್ತು ಉದಯಪುರ ನಗರದ ನೋಟವನ್ನು ಒದಗಿಸುತ್ತದೆ.

ಸಂಕೀರ್ಣದೊಳಗಿನ ಅರಮನೆಗಳನ್ನು ಹಲವಾರು ಚೌಕ್‌ಗಳು ಅಥವಾ ಚತುರ್ಭುಜಗಳ ಮೂಲಕ ಅಂಕುಡೊಂಕಾದ ಕಾರಿಡಾರ್‌ಗಳೊಂದಿಗೆ ಜೋಡಿಸಲಾಗಿದೆ, ಶತ್ರುಗಳ ಅಚ್ಚರಿಯ ದಾಳಿಯನ್ನು ತಪ್ಪಿಸಲು ಈ ಶೈಲಿಯಲ್ಲಿ ಯೋಜಿಸಲಾಗಿದೆ. ಮುಖ್ಯ ಟ್ರಿಪೊಲಿಯಾ (ಟ್ರಿಪಲ್) ಗೇಟ್ ಮೂಲಕ ಪ್ರವೇಶಿಸಿದ ನಂತರ ಸಂಕೀರ್ಣದಲ್ಲಿ ಈ ಅರಮನೆಯನ್ನುನಿರ್ಮಿಸಲಾಗಿದೆ, ಸೂರಜ್ ಗೋಖ್ದಾ (ಸಾರ್ವಜನಿಕ ವಿಳಾಸದ ಮುಂಭಾಗ), ಮೊರ್-ಚೌಕ್ ( ನವಿಲು ಅಂಗಳ), ದಿಲ್ಖುಷ್ ಮಹಲ್ (ಹೃದಯದ ಸಂತೋಷ), ಸೂರ್ಯ ಚೋಪಾರ್, ಶೀಶ್ ಮಹಲ್ (ಗಾಜು ಮತ್ತು ಕನ್ನಡಿಗಳ ಅರಮನೆ), ಮೋತಿ ಮಹಲ್ (ಮುತ್ತುಗಳ ಅರಮನೆ), ಕೃಷ್ಣ ವಿಲಾಸ್ (ಭಗವಾನ್ ಕೃಷ್ಣನ ಹೆಸರಿಡಲಾಗಿದೆ), ಶಂಬು ನಿವಾಸ್ (ಈಗ ರಾಜಮನೆತನದವರು ಇದ್ದಾರೆ), ಭೀಮ್ ವಿಲಾಸ್, ಅಮರ್ ವಿಲಾಸ್ (ಬೆಳೆದ ಉದ್ಯಾನದೊಂದಿಗೆ) ಬಡಿ ಮಹಲ್ (ದೊಡ್ಡ ಅರಮನೆ), ಫತೇಪ್ರಕಾಶ್ ಅರಮನೆ ಮತ್ತು ಶಿವ ನಿವಾಸ್ ಅರಮನೆ ; ಕೊನೆಯ ಎರಡನ್ನು ಪಾರಂಪರಿಕ ಹೋಟೆಲ್‌ಗಳಾಗಿ ಪರಿವರ್ತಿಸಲಾಗಿದೆ

                             *…...ಮುಂದುವರಿಯುವುದು*


ಫೋಟೋ ಮತ್ತು ವಿಡಿಯೋ ಗಳಿಗೆ ಕೆಳಗಿನ ಲಿಂಕ್ ನೋಡಿ.

https://drive.google.com/folderview?id=11h0BWspq8XtOubdmbpq5wJzFTswUkw3Y

ಮಂಗಳವಾರ, ಅಕ್ಟೋಬರ್ 22, 2019

ದಿನೇಶ ಉಪ್ಪೂರ:

# *ರಾಜಸ್ಥಾನ ಯಾನ*

ಭಾಗ ೮

 ಕೊನೆಗೆ ಭಟ್ರು,  "ನಾನೊಮ್ಮೆ ನೋಡ್ತೇನೆ. ಅಲ್ಲಿ ಇದ್ದದ್ದು ಹೌದಾದರೆ ನನಗೆ ಸಿಕ್ಕಿಯೇ ಸಿಕ್ಕುತ್ತದೆ" ಎಂದು ಎದ್ದು ಹೊರಟರು.

"ಇವರೆಲ್ಲ ನೋಡಿಯಾಯ್ತಲ್ಲ. ಅದು ಎಲ್ಲೋ ಬೇರೆ ಕಡೆ ಮಿಸ್ ಆಗಿದೆ. ಎಲ್ಲಿ ಇಟ್ಟೆ?" ಎಂದು ತಲೆ ಕೆರೆದುಕೊಂಡರು ಡಾಕ್ಟರ್.

ಭಟ್ಟರು ಹೋದವರು ದಿಂಬನ್ನು ಎತ್ತಿ ಕೆಳಗೆ ಹಾಕಿರಬೇಕು. ದಿಂಬಿನ ಕವರಿನ ಒಳಗೆ ಹುದುಗಿದ್ದ ವಾಜು ಪಟ್ ಎಂದು ಕೆಳಗೆ ಬಿತ್ತು.

ಅವರು ವಾಚನ್ನು ತೆಗೆದುಕೊಂಡು ಬಂದು, ನಗುತ್ತಾ, "ಹ್ವಾಯ್ ಡಾಕ್ಟ್ರೆ, ನಿಮ್ಮ ವಾಚ್ ನ್ನು ನಾನು ಹುಡುಕಿಕೊಟ್ಟರೆ ನನಗೆ ಏನು ಕೊಡುತ್ತೀರಿ?" ಎಂದು ಹೇಳುತ್ತಾ ಹಾಲ್ ಗೆ ಬಂದರು.

"ಹೋ ಸಿಕ್ತಾ? ಕೊಡಿ ಕೊಡಿ" ಎನ್ನುತ್ತಾ ಡಾಕ್ಟರರು ಅವರಿಂದ ವಾಚನ್ನು ಪಡೆದು ಅವರ ರೂಮಿಗೆ ಹೋದರು. ಅವರು ವಾಚನ್ನು ದಿಂಬಿನ ಕೆಳಗೆ ಎಂದು ಇಟ್ಟು ದಿಂಬಿನ ಕವರ್ ಒಳಗೆ ಹೋಗಿ ಸಿಕ್ಕಿ ಹಾಕಿಕೊಂಡಿತ್ತು.

ಆ ದಿನದ ಬೆಳಿಗ್ಗೆ ಜಾಜಿಯಕ್ಕ ಊರಿನಿಂದ ಬರುವಾಗ ಹೊರಿದು ತಂದ ರವೆಯಿಂದ ಉಪ್ಪಿಟ್ಟನ್ನು ಮಾಡಿ ಎಲ್ಲರಿಗೂ ಕೊಟ್ಟರು. ಅದರ ರುಚಿ ಅದ್ಭುತವಾಗಿತ್ತು. ಎರಡೆರಡು ಸಲ ಹಾಕಿಕೊಂಡು ತಿಂದೆವು. ಹಿಂದಿನ ದಿನದಂತೆ ಅಪೇಕ್ಷಾ ಇವತ್ತೂ ಬೆಳಿಗ್ಗೆ ಬೇಗ ವಾಕಿಂಗ್ ಗೆ ಹೋಗಿ ಬರುವಾಗ ಒಗ್ಗರಣೆ ಅವಲಕ್ಕಿಯನ್ನು ತಂದಿದ್ದರು ಅದನ್ನೂ ತಿಂದು ಹೊಟ್ಟೆಗಟ್ಟಿ ಮಾಡಿಕೊಂಡೆವು. ಚಾ ಮತ್ತು ಕಾಫಿಯನ್ನು ಕುಡಿದೆವು.

ಇಂದಿನ ನಮ್ಮ ಕಾರ್ಯಕ್ರಮ ಉದಯಪುರದ ಸುತ್ತಮುತ್ತ ಇರುವ ಪ್ರೇಕ್ಷಣೀಯ ಸ್ಥಳಗಳನ್ನು ನೋಡುವುದು. ಮುಖ್ಯವಾಗಿ ರೋಪ್ ವೇ ಯಲ್ಲಿ ಹೋಗಿ ಗುಡ್ಡದ ಮೇಲಿರುವ ಕರಣಿಮಾತಾ ದೇವಸ್ಥಾನವನ್ನು ನೋಡುವುದು. ಸಿಟಿ ಪ್ಯಾಲೇಸ್ ಮತ್ತು ಇತರ ಸ್ಥಳಗಳನ್ನು ನೋಡುವುದಾಗಿತ್ತು. ಸುಮಾರು ಒಂಭತ್ತು ಗಂಟೆಯ ಸುಮಾರಿಗೆ ಎಲ್ಲರೂ ಸಿದ್ಧರಾಗಿ ಹೊರಟು ಆಗಲೇ ಬಂದ ಟಿಟಿಯನ್ನು ಏರಿ ಮನಸಾಪುರದ ಕರಣಿಮಾತಾ ದೇವಸ್ಥಾನವನ್ನು ನೋಡಲು ಹೋದೆವು.

ಅದೊಂದು ದೊಡ್ಡ ಪರ್ವತದ ಮೇಲಿರುವ ದೇವಸ್ಥಾನ.

ಅದರ ಬಗ್ಗೆ ಗೂಗಲ್ ನೀಡಿದ ವಿವರದಂತೆ,

ದೀನ್ ದಯಾಳ್ ಉಪಾಧ್ಯಾಯ ಉದ್ಯಾನವನದ ಬಳಿಯ ಮಕ್ಲಾ ಬೆಟ್ಟದಲ್ಲಿರುವ ಶ್ರೀ ಮಾನಸಪುರದ ಕರಣಿ ಮಾತಾ ದೇವಸ್ಥಾನವು ತುಂಬಾ ಎತ್ತರದಲ್ಲಿದೆ, ಇದು ದೀನ್ ದಯಾಳ್ ಉದ್ಯಾನವನದಿಂದ ಪ್ರಾರಂಭವಾಗಿ ಸುಮಾರು 150 ಮೀಟರ್ ಮೆಟ್ಟಿಲುಗಳ ಮೂಲಕ ಹತ್ತಿಕೊಂಡು ಪ್ರವೇಶಿಸಬಹುದು ಅಥವ್ ರೋಪ್‌ವೇ ಮಾರ್ಗವಾಗಿ ಬೆಟ್ಟದ ಶಿಖರವನ್ನು ತಲುಪಬಹುದು. ನಾವು ಅದರ ಮೂಲಕವೇ ಹೋಗಿ ಬೆಟ್ಟದ ಶಿಖರವನ್ನು ತಲುಪಿದೆವು.

ನಮಗೆ ಅದೊಂದು ಹೊಸ ಅನುಭವ. ಈ ದೇವಾಲಯವು ಬೆಟ್ಟದ ತುದಿಯ ಹೆಚ್ಚಿನ ಭಾಗವನ್ನು ಆವರಿಸಿಕೊಂಡಿದೆ. ಸರೋವರಗಳು, ಅರಮನೆಗಳು, ವೈಟ್‌ವಾಶ್ಡ್, ಹತ್ತಿರವಿರುವ ಮನೆಗಳು, ಗುಲಾಬ್ ಬಾಗ್ ಮತ್ತು ಬೆಟ್ಟದ ಸುತ್ತಮುತ್ತಲಿನ ಎಲ್ಲಾ ಪ್ರದೇಶಗಳ ವಿಹಂಗಮ ನೋಟವು ಹೃದಯಂಗಮವಾಗಿದೆ. ಇಲ್ಲಿಂದ ಪಿಚೋಲಾ ಸರೋವರದ ನೀರಿನ ಛಾಯೆಗಳನ್ನು ನೋಡಬಹುದು.

ಈ ಕರಣಿ ಮಾತಾ ದೇವಾಲಯವನ್ನು "ಇಲಿಗಳ ದೇವಾಲಯ" ಎಂದೂ ಕರೆಯುತ್ತಾರೆ ,  ಕರಣಿಮಾತಾ ಮೂಲತಃ ಹಿಂದೂ ಸ್ತ್ರೀಯಾಗಿದ್ದು, ಕ್ರಿ.ಶ 1387 ರಲ್ಲಿ ಜೋಧಪುರ ಜಿಲ್ಲೆಯ ಸುವಾಪ್ ಗ್ರಾಮದಲ್ಲಿ ಚರಣ್ ರಜಪೂತ್ ಕುಲದ ಏಳನೇ ಮಗಳಾಗಿ ಜನಿಸಿದಳು. ಅವಳು ದುರ್ಗಾ ದೇವಿಯ ಅವತಾರ ಎಂದು ನಂಬಲಾಗಿತ್ತು. ಅವಳ ಮೂಲ ಹೆಸರು ರಿಧು ಬಾಯಿ. ಅವಳು ಸಾತಿಕಾ ಗ್ರಾಮದ ದೆಪೋಜಿ ಚರಣ್ ಅವರನ್ನು ಮದುವೆಯಾದಳು. ಆದರೆ ಕೇವಲ ಎರಡು ವರ್ಷಗಳ ದಾಂಪತ್ಯ ಜೀವನದ ನಂತರ ವಿರಕ್ತಳಾಗಿ ತಮ್ಮ ಸಹೋದರಿ ಗುಲಾಬ್ ಅವರನ್ನು ಪತಿಗೆ ಮದುವೆಮಾಡಿಸಿದರು ಮತ್ತು ಎಲ್ಲವನ್ನು ತೊರೆಯುವ ಬಯಕೆಯಿಂದ ಗ್ರಾಮವನ್ನು ಶಾಶ್ವತವಾಗಿ ತೊರೆದರು.

ಲೌಕಿಕ ವ್ಯವಹಾರಗಳನ್ನು ತೊರೆದು ಅಲೆಮಾರಿಗಳಂತೆ ಜೀವನ. ತನ್ನ ಅನುಯಾಯಿಗಳು ಮತ್ತು ಗುಂಪಿನೊಂದಿಗೆ ಸ್ವಲ್ಪ ಸಮಯದವರೆಗೆ ಅಲೆದಾಡಿದ ನಂತರ, ಅವಳು ದೇಶೋಕ್ ತಲುಪಿದಳು ಮತ್ತು ಅಂತಿಮವಾಗಿ ಇಲ್ಲಿ ನೆಲೆಸಿ ಅವಳು ಕರಣಿ ಮಾತಾ ಆದಳು ಎಂಬ ನಂಬಿಕೆ ಅಲ್ಲಿದೆ .

ಈ ದೇವಾಲಯದಲ್ಲಿ ಸುಮಾರು 25,000 ಸಂಖ್ಯೆಯಷ್ಟು ಇಲಿಗಳು ಇವೆ ಎಂದು ನಂಬಲಾಗುತ್ತಿದೆ. ಇದನ್ನು ಧಾರ್ಮಿಕವಾಗಿ "ಕಬ್ಬಾಸ್" ಎಂದು ಕರೆಯಲಾಗುತ್ತಾರೆ .

ಅದರ ಹಿಂದಿನ ಕತೆ ಹೀಗಿದೆ. ಒಮ್ಮೆ ಕರಣಿಮಾತಾ ಅವರ ಮಲತಾಯಿ, ಲಕ್ಷ್ಮಣ್, ಕೊಲಾಯತ್ ತಹಸಿಲ್‌,  ಕಪಿಲ್ ಸರೋವರ್‌ನಲ್ಲಿ ನೀರು ಕುಡಿಯುವ ಕಾಲದಲ್ಲಿ ಆಕಸ್ಮಿಕವಾಗಿ ನೀರಿಗೆ ಬಿದ್ದು ಸಾವನ್ನಪ್ಪಿದರಂತೆ. ಕರಣಿ ಮಾತಾ ಯಮನನ್ನು ಬೇಡಿ, ತನ್ನ ಮಗನನ್ನು ಇಲಿಯಂತೆ ಮರುಜನ್ಮ ತಾಳಿ ಮರಳಿ ಪಡೆಯಲು ಬಯಸಿದ್ದು ಅದಕ್ಕೆ ಯಮನು ಒಪ್ಪಿಕೊಂಡನಂತೆ. ಮತ್ತು ತನ್ನ ಎಲ್ಲ ಗಂಡು ಮಕ್ಕಳನ್ನು ಇಲಿಗಳಾಗಿ ಪುನರ್ಜನ್ಮ ಪಡೆಯಲು ಯಮನನ್ನು ಒಪ್ಪಿಸಿದಳಂತೆ.

ಆದ್ದರಿಂದ ಇಲ್ಲಿ ಇಲಿ (ಕಬ್ಬಾಗಳು) ಬಹಳ ಪವಿತ್ರವೆಂದು ಭಾವಿಸಲಾಗುತ್ತಿದೆ ಮತ್ತು ಅವುಗಳಿಗೆ ಸಿಹಿತಿಂಡಿಗಳನ್ನು ಕೊಡುವುದು ಸಂಪ್ರದಾಯವಾಗಿದೆ. ಆದರೆ ನಮಗೆ ಇಲಿಗಳ ಭೇಟಿ ಆಗಲಿಲ್ಲ. ಅಲ್ಲಿ ದೇವಸ್ಥಾನವು ನಾವು ಹೋದಾಗ ಪುನರ್ನಿಮಾಣ ಮಾಡಲಾಗುತ್ತಿತ್ತು

ಅಲ್ಲಿಯ ಪ್ರಕೃತಿ ಸೌಂದರ್ಯವನ್ನು ಸವಿದು ಸಾಕಷ್ಟು ಪೋಟೋ ವಿಡಿಯೋಗಳನ್ನು ತೆಗೆದುಕೊಂಡು ನಾವು ಮರಳಿ ರೋಪ್ ವೇ ಮೂಲಕ ಇಳಿದು ಬಂದೆವು.

ಅಲ್ಲಿಂದ ನಾವು ಪಿಚೋಲ ಸರೋವರ ಎಂಬ ಸುಂದರವಾದ ಸ್ಥಳಕ್ಕೆ ಬಂದೆವು. ಸರೋವರದ ಮಧ್ಯದಲ್ಲಿ ಇರುವ ಅರಮನೆ ಕಣ್ಮನ ಸೆಳೆಯಿತು. ಅದರ ನೀರು ಅತ್ಯಂತ ಶುಭ್ರವಾಗಿತ್ತು. ಬೆಂಗಳೂರಿನ ಕೆಲವು ಸರೋವರಗಳಂತೆ ಅಲ್ಲಿ ಪೇಪರ್ ಎಸೆದು ಗಲೀಜು ಮಾಡುವುದು, ಪ್ಲಾಸ್ಟಿಕ್ ಗಳನ್ನು ಎಸೆಯುವುದು ಮಾಡುತ್ತಿರಲಿಲ್ಲ. ಆದರೆ ದೋಣಿಯಲ್ಲಿ ಅರಮನೆಗೆ ಹೋಗುವ ಅವಕಾಶ ಇದ್ದರೂ ಸಮಯದ ಅಭಾವದಿಂದ ನಾವು ಹೋಗಲಿಲ್ಲ

ಅಲ್ಲಿ ನಾನು ಮತ್ತು ಎಸ್ ವಿ ಭಟ್ರು ಮತ್ತು ಡಾಕ್ಟರ್ ಸದಾಶಿವ ಮತ್ತು ಅವರ ಮೊಮ್ಮಗ ರಾಜಸ್ಥಾನೀ ಉಡುಪುಗಳನ್ನು ಹಾಕಿಕೊಂಡು ಪೋಟೋ ತೆಗೆಸಿಕೊಂಡೆವು. ಅಲ್ಲಿಂದ ನಾವು ಸಿಟಿ ಪ್ಯಾಲೇಸ್ ಗೆ ಹೋದೆವು

                           *……...ಮುಂದುವರಿಯುವುದು*


ಫೋಟೋ ಮತ್ತು ವಿಡಿಯೋ ಗಾಗಿ ಲಿಂಕ್ ನೋಡಿ,


https://drive.google.com/folderview?id=1BYr6BKIIs0sU0oh_boJBbpb6PzC5_9AO

ಸೋಮವಾರ, ಅಕ್ಟೋಬರ್ 21, 2019

ದಿನೇಶ ಉಪ್ಪೂರ:
ರಾಜಸ್ಥಾನ ಯಾನ
ಭಾಗ ೭

ಅದರೆ ಅಲ್ಲಿಯ ದೇವಾಲಯಗಳ ಮತ್ತು ಅರಮನೆಗಳ ಹೆಚ್ಚಿನ ಸುಂದರ ಕೆತ್ತನೆಗಳನ್ನು ಅನ್ಯಮತೀಯರು, ಆಕ್ರಮಣದ ಸಮಯದಲ್ಲಿ ವಿರೂಪಗೊಳಿಸಿದ್ದನ್ನು ಕಂಡು ಬೇಸರಗೊಂಡೆವು.

ಪನ್ನಾ ಎಂಬ ಅರಮನೆಯ ದಾಸಿಯು  ಅರಸನ ಮಗು ಉದಯ ಸಿಂಹ ನನ್ನು ಉಳಿಸಲು, ತಾನು ಹೆತ್ತ ಮಗನನ್ನೇ ಬಲಿಕೊಟ್ಟು ಸ್ವಾಮಿನಿಷ್ಟೆಯನ್ನು ತೋರಿ ರಕ್ಷಿಸಿದ ಕತೆಯು ನಡೆದ ಮೂರಂತಸ್ಥಿನ ಅರಮನೆಯಿದ್ದ ಸ್ಥಳವನ್ನೂ ನೋಡಿದೆವು.

 ಅಲ್ಲಿಂದ ಮುಂದೆ ಪದ್ಮಿನಿಯ ಅರಮನೆಯನ್ನು ನೋಡಲು ಹೋದೆವು. ಅಥವಾ ರಾಣಿ ಪದ್ಮಿನಿಯ ಅರಮನೆಯು ಬಿಳಿ ಕಟ್ಟಡ ಮತ್ತು ಮೂರು ಅಂತಸ್ತಿನ ರಚನೆಯಾಗಿದೆ (19 ನೇ ಶತಮಾನದ ಮೂಲದ ಪುನರ್ನಿರ್ಮಾಣ). ಇದು ಕೋಟೆಯ ದಕ್ಷಿಣ ಭಾಗದಲ್ಲಿದೆ.  ಇಲ್ಲಿ ಹಲವಾರು ಮಂಟಪಗಳು ಅರಮನೆಯ ಚಾವಣಿಗಳನ್ನು ಕಿರೀಟವಾಗಿರಿಸುತ್ತವೆ ಮತ್ತು ನೀರಿನ ಕಂದಕವು ಅರಮನೆಯನ್ನು ಸುತ್ತುವರೆದಿದೆ.

ಅರಮನೆಯ ಈ ಶೈಲಿಯು ಜಲ ಮಹಲ್ (ನೀರಿನಿಂದ ಆವೃತವಾದ ಅರಮನೆ) ಪರಿಕಲ್ಪನೆಯೊಂದಿಗೆ ರಾಜ್ಯದಲ್ಲಿ ನಿರ್ಮಿಸಲಾದ ಇತರ ಅರಮನೆಗಳಿಗೆ ಮುಂಚೂಣಿಯಲ್ಲಿತ್ತು. ದಂತಕಥೆಗಳ ಪ್ರಕಾರ, ಈ ಅರಮನೆಯಲ್ಲಿಯೇ ಮಹಾರಾಣ ರಟ್ಟನ್ ಸಿಂಗ್ ಅವರ ಪತ್ನಿ ರಾಣಿ ಪದ್ಮಿನಿ ಅವರ ಕನ್ನಡಿ ಚಿತ್ರವನ್ನು ನೋಡಲು ಅಲಾವುದ್ದೀನ್‌ ಖಿಲ್ಜಿಗೆ ಅನುಮತಿಯನ್ನು ನೀಡಲಾಗಿರುತ್ತದೆ.

 ಪದ್ಮಿನಿಯ ಅಪಾರ ಸೌಂದರ್ಯವು ಅವನನ್ನು ಮೋಹಪರವಶನ್ನಾಗಿ ಮಾಡಿತು. ಮತ್ತು ಅದರಿಂದಲೆ ಅವನಿಂದ ಮಹಾರಾಣಾ ರಟ್ಟನ್ ಸಿಂಗ್ ಸರೆಹಿಡಿಯಲ್ಪಡುತ್ತಾನೆ. ಪದ್ಮಿನಿ ಉಪಾಯದಿಂದ ಅವನನ್ನು ಬಿಡಿಸಿಕೊಂಡು ಬರುತ್ತಾಳೆ. ಆದರೆ ನಂತರ ಖಿಲ್ಜಿ ಸೇನೆಯೊಂದಿಗೆ ಬಂದು ಮಾಡಿದ ಆಕ್ರಮಣದಿಂದ ರಟ್ಟನ್ ಸಿಂಗ್ ಕೊಲ್ಲಲ್ಪಟ್ಟನು ಮತ್ತು ರಾಣಿ ಪದ್ಮಿನಿ ಜೌಹರ್ (ಆತ್ಮಾಹುತಿ)ನ್ನು ತನ್ನ ಸಾವಿರಾರು ಸಖಿಯರೊಂದಿಗೆ ಎಸಗಿದ್ದಾರೆ ಎಂಬುದು ಇತಿಹಾಸ.

ನಂತರ ಅಲ್ಲಿಂದ ಮುಂದೆ ಹೋಗಿ, ಕೋಟೆಯ ಹೊರಭಾಗದಲ್ಲಿ ಯುದ್ಧ ನಡೆಯುವ ಅಥವ ಯುದ್ಧದ ತಾಲೀಮು ನಡೆಯುವ ಕಣ್ಣಿಗೆ ಕಾಣುವಷ್ಟು ವಿಶಾಲ ವಾದ ಸಮತಟ್ಟಾದ ಸ್ಥಳವನ್ನು ನೋಡಿದೆವು. ಅದರ ಆಚೆ ಬದಿಯಲ್ಲಿ ಯಾರೋ ಕುಂಬಕರ್ಣನಂತಹ ಭಾರೀ ದೇಹದ ವ್ಯಕ್ತಿ ಮಲಗಿದ್ದಂತೆ ಬೆಟ್ಟವೊಂದು ತೋರುತ್ತಿತ್ತು. ಅಲ್ಲಿ ಸೈನಿಕರು ಅಡಗಿ ಶತ್ರುಗಳನ್ನು ಸದೆ ಬಡೆಯುತ್ತಿದ್ದರಂತೆ.

ಈಗ ಆ ಬಯಲು ಪ್ರದೇಶದ ಒಂದು ಭಾಗದಲ್ಲಿ ಸೀತಾಫಲದ ಗಿಡದಿಂದ ನಾರು ತೆಗೆದು ಬಟ್ಟೆ ಮತ್ತು ಸೀರೆಯನ್ನು ತಯಾರಿಸುವ ಬುಡಕಟ್ಟು ಜನಾಂಗದವರು ವಾಸಿಸುತ್ತಿದ್ದಾರೆ ಎಂದು ಗೈಡ್ ನಿಂದ ತಿಳಿಯಿತು. ಇವುಗಳನ್ನೆಲ್ಲ ಬಹಳ ಆಸಕ್ತಿಯಿಂದ ನೋಡಿದೆವು. ಇಷ್ಟಾದರೂ ನಾವು ನೋಡಿದ್ದು ಇಡೀ ಕೋಟೆಯ ಹತ್ತನೇ ಒಂದರಷ್ಟೂ ಅಲ್ಲ ಎಂದು ಗೈಡ್ ಹೇಳಿದರು.. ಇನ್ನೂ ರಾಜ ಪರಂಪರೆಯವರು ನಡೆದಾಡಿದ ಬೇರೆ ಬೇರೆ ಸ್ಥಳಗಳನ್ನು, ಒಂದು ಸರೋವರದ ಮಧ್ಯದಲ್ಲಿ ಕಟ್ಟಿಸಿದ ಸುಂದರವಾದ ರಾಣಿ ಪದ್ಮಿನಿಯ ಮಹಲ್ ನ್ನು ದೂರದಿಂದ ನೋಡಿದೆವು.

ಸಂಜೆಯಾಯಿತು.

ಟಿಟಿಯಲ್ಲಿ ಕುಳಿತು ಅಪಾರ್ಟ್‌ಮೆಂಟ್ ಗೆ ಮರಳಿದೆವು. ರಾತ್ರಿ ಊಟದವರೆಗೆ ಸಮಯ ಇದೆ. ನಮ್ಮ ನಾಗರಾಜ್ ಮತ್ತು ಶ್ರುತಿಯ ಮಗ ಶುಶ್ರುತ ಚಿತ್ರ ಬಿಡಿಸುವುದರಲ್ಲಿ ತುಂಬಾ ಆಸಕ್ತಿ ಇದ್ದವನು, ಅಲ್ಲಿರುವ ಡ್ರಾಯಿಂಗ್ ಶೀಟ್ ತೆಗೆದುಕೊಂಡು ಅಂದವಾದ ಕುದುರೆ, ಸಿಂಹ, ಮನೆ ಮುಂತಾದ ಚಿತ್ರಗಳನ್ನು ಬಿಡಿಸಿ ಎಲ್ಲರಿಗೂ ತೋರಿಸಿದ. ಎಲ್ಲರ ಮೆಚ್ವುಗೆ ಪಡೆದ ಆ ಚಿತ್ರಗಳನ್ನು ಆ ಮನೆಯನ್ನು ಬಿಟ್ಟು ಹೊರಡುವಾಗ, ಓನರ್ ಋಷಿಯವರಿಗೆ ಉಡುಗೊರೆಯಾಗಿ ಕೊಟ್ಟು ಬಂದೆವು
ಕೆಲವರು ಇಸ್ಪೀಟು ಆಡಿದರು. ಮಕ್ಕಳು ಗಿಟಾರ್ ಬಾರಿಸಿದರು. ಅಷ್ಟರಲ್ಲಿ ಜಾಜಿಯಕ್ಕ ಮತ್ತು ಉಳಿದವರು ಸೇರಿ ಅನ್ನ ಸಾರು ತಯಾರು ಮಾಡಿದ್ದಾಯಿತು, ಮೊಸರನ್ನು ಮತ್ತು ಹಣ್ಣುಗಳನ್ನು ಅಂಗಡಿಯಿಂದ ತಂದಿದ್ದರು, ಮನೆಯಿಂದ ತಂದ ಉಪ್ಪಿನಕಾಯಿ ಹಾಕಿಕೊಂಡು ಎಲ್ಲರೂ ಗಡದ್ದಾಗಿ ಉಂಡು, ಅಂದು ನೋಡಿದ ಸ್ಥಳಗಳ ವಿವರವನ್ನು ಮೆಲುಕು ಹಾಕುತ್ತಾ ಮಲಗಿಕೊಂಡೆವು.

ದಿನಾಂಕ 30. 9.19

 ನಾವು ಬೆಳಿಗ್ಗೆ ಕಾಫಿಯನ್ನು ಕುಡಿಯುತ್ತ ಹಾಲ್ ನಲ್ಲಿ ಕುಳಿತಿದ್ದೆವು. ಆಗ ಒಂದು ಘಟನೆ ನಡೆಯಿತು.
ನಮ್ಮ ಡಾಕ್ಟರ್ ಅವಸರದಲ್ಲಿ ಬಂದು, "ನನ್ನ ವಾಚ್ ಕಳೆದುಹೋಗಿದೆ. ಅದನ್ನು ಯಾರಾದರೂ ನೋಡಿದಿರಾ? ನಾನು ನನ್ನ ತಲೆದಿಸೆಯ ದಿಂಬಿನ ಅಡಿಯಲ್ಲಿ ಇಟ್ಟಿದ್ದೆ. ಈಗ ಎಷ್ಟು ಹುಡುಕಿದರೂ ಸಿಗುತ್ತಿಲ್ಲ. ಯಾರಿಗಾದರೂ ಸಿಕ್ಕಿದೆಯಾ?  ಅಥವ ಬೇರೆ ಎಲ್ಲಾದರೂ ಇಟ್ಟಿದ್ದು ಯಾರಾದರೂ ನೋಡಿದ್ದೀರಾ?" ಎಂದು ಪ್ಯಾಂಟಿನ ಕಿಸೆಯ ಒಳಗೆ ಕೈ ಹಾಕಿ ಹುಡುಕಿದಂತೆ ಮಾಡುತ್ತಾ ಕೇಳಿದರು.
ನಾವು ಯಾರೂ ಅವರ ವಾಚನ್ನು ನೋಡಿರಲಿಲ್ಲ. ಅಲ್ಲಿಯೇ ಇರಬಹುದು ಎಂದು ಒಬ್ಬಿಬ್ಬರು ಅವರ ರೂಮಿಗೆ ಹೋಗಿ ಹಾಸಿಗೆಯ ಮೇಲೆ, ದಿಂಬಿನ ಕೆಳಗೆ, ಮಂಚದ ಕೆಳಗೆ ಹುಡುಕಿದರು ಆದರೆ ವಾಚ್ ಸಿಗದೇ ನಿರಾಶರಾಗಿ ಬಂದರು.
ರಾತ್ರಿ ಇಟ್ಟದ್ದು ಬೆಳಿಗ್ಗೆ ಒಳಗೆ ಹೇಗೆ ಮಾಯವಾಗುತ್ತದೆ? ಎಂದು ನಾವೆಲ್ಲ ಚಿಂತೆಗೊಳಗಾದೆವು.
                             *……..ಮುಂದುವರಿಯುವುದು*

ಫೋಟೋ ಮತ್ತು ವಿಡಿಯೋ ಗಾಗಿ ಕೆಳಗಿನ ಲಿಂಕ್ ನೋಡಿ.

https://drive.google.com/drive/folders/1xxWoTVOCbT9usdTxRz-6O573Zh9MsMl9?usp=sharing

ಭಾನುವಾರ, ಅಕ್ಟೋಬರ್ 20, 2019

ದಿನೇಶ ಉಪ್ಪೂರ:

# *ರಾಜಸ್ಥಾನ ಯಾನ*

ಭಾಗ ೬

ಚಿತ್ತೋರ್ ಕೋಟೆ ಅಥವಾ ಚಿತ್ತೋರ್ಗಡ ಭಾರತದ ಅತಿದೊಡ್ಡ ಕೋಟೆಗಳಲ್ಲಿ ಒಂದಾಗಿದೆ. ಈ ಕೋಟೆ ಹಿಂದೆ ಮೇವಾಡದ ರಾಜಧಾನಿಯಾಗಿತ್ತು ಮತ್ತು ಇದು ಇಂದಿನ ಚಿತ್ತೋರ್ ಪಟ್ಟಣದಲ್ಲಿದೆ. ಇದು ಬೆರಾಚ್ ನದಿಯಿಂದ ಬರಿದಾದ ಕಣಿವೆಯ ಬಯಲು ಪ್ರದೇಶಕ್ಕಿಂತ 280 ಹೆಕ್ಟೇರ್ (691.9 ಎಕರೆ) ವಿಸ್ತೀರ್ಣದಲ್ಲಿ 180 ಮೀ (590.6 ಅಡಿ) ಎತ್ತರದ ಬೆಟ್ಟದ ಮೇಲೆ ವ್ಯಾಪಿಸಿದೆ. ಕೋಟೆ ಆವರಣದಲ್ಲಿ ಹಲವಾರು ಐತಿಹಾಸಿಕ ಅರಮನೆಗಳು, ದ್ವಾರಗಳು, ದೇವಾಲಯಗಳು ಮತ್ತು ಎರಡು ಪ್ರಮುಖ ಸ್ಮರಣಾರ್ಥ ಗೋಪುರಗಳಿವೆ.

7ನೇ ಶತಮಾನದಿಂದ ಆರಂಭಗೊಂಡು ಈ ಕೋಟೆಯನ್ನು ಮೇವಾಡದ ಸಾಮ್ರಾಜ್ಯ ನಿಯಂತ್ರಿಸಿತು. 9 ರಿಂದ 13 ನೇ ಶತಮಾನಗಳವರೆಗೆ ಕೋಟೆಯನ್ನು ಪರಮರ ರಾಜವಂಶವು ಆಳಿತು. ಕ್ರಿ.ಶ.1303 ರಲ್ಲಿ ದೆಹಲಿಯ ತುರ್ಕಿ ದೊರೆ ಅಲಾವುದ್ದೀನ್ ಖಿಲ್ಜಿಯು ಈ ಕೋಟೆಯಲ್ಲಿ ರಾಣಾ ರತನ್ ಸಿಂಗ್ ಪಡೆಗಳನ್ನು ಸೋಲಿಸಿದರು.

ಮುಂದೆ ಕ್ರಿ.ಶ.1535 ರಲ್ಲಿ ಗುಜರಾತ್ನ ಸುಲ್ತಾನನಾದ ಬಹದ್ದೂರ್ ಷಾ ಬಿಕ್ರಮ್ಜೀತ್ ಸಿಂಗ್ನನ್ನು ಸೋಲಿಸಿ ಕೋಟೆಯನ್ನು ತನ್ನದಾಗಿಸಿಕೊಂಡನು. ಕ್ರಿ.ಶ.1567ರಲ್ಲಿ ಅಕ್ಬರನು, ಮಹಾರಾಣ ಉದಯ್ ಸಿಂಗ್ ನ ಸೈನ್ಯವನ್ನು ಸೋಲಿಸಿದನು. ಈ ಸೋಲುಗಳನ್ನು ಅನುಸರಿಸಿ, ಸಾವಿರಾರು ಮಹಿಳೆಯರು ಜೌಹರ್ (ಆತ್ಮಾಹುತಿ) ಮಾಡಿಕೊಂಡರು.
ಸರಿಸುಮಾರು ಮೀನಿನ ಆಕಾರದಲ್ಲಿರುವ ಈ ಕೋಟೆಯು 13 ಕಿ.ಮೀ (8.1 ಮೈಲಿ) ಸುತ್ತಳತೆಯನ್ನು ಹೊಂದಿದ್ದು, ಗರಿಷ್ಠ ಉದ್ದ 5 ಕಿ.ಮೀ (3.1 ಮೈಲಿ) ಮತ್ತು 700 ಎಕರೆ ವಿಸ್ತೀರ್ಣವನ್ನು ಹೊಂದಿದೆ. ಸುಣ್ಣದ ಸೇತುವೆಯೊಂದನ್ನು ದಾಟಿದ ನಂತರ ಬಯಲು ಪ್ರದೇಶದಿಂದ 1 ಕಿ.ಮೀ (0.6 ಮೈಲಿ) ಗಿಂತ ಹೆಚ್ಚು ಕಷ್ಟಕರವಾದ ಹಾದಿಯಲ್ಲಿ ಹತ್ತಿಕೊಂಡು ಹೋಗಿ  ಕೋಟೆಯನ್ನು ತಲುಪಬೇಕಾಗುತ್ತದೆ. ಈ ಭವ್ಯವಾದ ಕೋಟೆಗಳಲ್ಲಿ ಪ್ರಾಬಲ್ಯ ಹೊಂದಿರುವ ಎರಡು ಎತ್ತರದ ಗೋಪುರಗಳ ಹೊರತಾಗಿ, ವಿಸ್ತಾರವಾದ ಕೋಟೆಯು ಅದರ ಪ್ರಾಂತದೊಳಗೆ ಅರಮನೆಗಳು ಮತ್ತು ದೇವಾಲಯಗಳ ಸಮೃದ್ಧಿಯನ್ನು ಹೊಂದಿದೆ (ಅವುಗಳಲ್ಲಿ ಹಲವು ಹಾಳಾಗಿವೆ).

ಕೋಟೆಯ ಪ್ರವೇಶವು ಸಿಸೋಡಿಯಾ ಕುಲದ ಮೇವಾಡದ ದೊರೆ ರಾಣಾ ಕುಂಭ (1433–1468) ನಿರ್ಮಿಸಿದ ಏಳು ಗೇಟ್ವೇಗಳ ಮೂಲಕ ಹಾದು ಹೋಗಬೇಕಾಗುತ್ತದೆ. ಈ ದ್ವಾರಗಳನ್ನು ಬೇಸ್ನಿಂದ ಬೆಟ್ಟದ ತುದಿಗೆ, ಪೈಡಾಲ್ ಪೋಲ್, ಭೈರೋನ್ ಪೋಲ್, ಹನುಮಾನ್ ಪೋಲ್, ಗಣೇಶ್ ಪೋಲ್, ಜೋರ್ಲಾ ಪೋಲ್, ಲಕ್ಷ್ಮಣ್ ಪೋಲ್ ಮತ್ತು ರಾಮ್ ಪೋಲ್, ಅಂತಿಮ ಮತ್ತು ಮುಖ್ಯ ದ್ವಾರ ಎಂದು ಕರೆಯಲಾಗುತ್ತದೆ.  ಏಳನೇ ಮತ್ತು ಅಂತಿಮ ದ್ವಾರವು ನೇರವಾಗಿ ಅರಮನೆ ಪ್ರದೇಶಕ್ಕೆ ಕರೆದೊಯ್ಯುತ್ತದೆ,

ಕೋಟೆ ಸಂಕೀರ್ಣವು 65 ಐತಿಹಾಸಿಕ ನಿರ್ಮಿತ ರಚನೆಗಳನ್ನು ಒಳಗೊಂಡಿದೆ, ಅವುಗಳಲ್ಲಿ 4 ಅರಮನೆ ಸಂಕೀರ್ಣಗಳು, 19 ಮುಖ್ಯ ದೇವಾಲಯಗಳು, 4 ಸ್ಮಾರಕಗಳು ಮತ್ತು 20 ಕೃತಕ ಜಲಮೂಲಗಳಿವೆ.

ಅರಮನೆ ಸಂಕೀರ್ಣದ ಹೊರತಾಗಿ, ಕೋಟೆಯ ಪಶ್ಚಿಮದಲ್ಲಿ ಕುಂಭ ಶ್ಯಾಮ್ ದೇವಸ್ಥಾನ, ಮೀರಾ ಬಾಯಿ ದೇವಾಲಯ, ಆದಿ ವರ ದೇವಾಲಯ, ಶೃಂಗಾರ್ ಚೌರಿ ದೇವಾಲಯ, ಮತ್ತು ಇತರ ಹಲವು ಮಹತ್ವದ ರಚನೆಗಳು ಅಲ್ಲಿವೆ.

ನಮ್ಮ ಗೈಡ್ ಮೊದಲು ಒಂದು ದೊಡ್ಡ ಅರಮನೆಯ ಅವಶೇಷದಂತಿರುವ ಸ್ಥಳಕ್ಕೆ ಕರೆದುಕೊಂಡು ಹೋದ. ಅಲ್ಲಿ ಒಂದು ನೆಲಮಾಳಿಗೆಯ ಮಾರ್ಗವನ್ನು ಕಂಡೆವು. ಪ್ರತಿದಿನ ಸರೋವರದಲ್ಲಿ ಸ್ನಾನವನ್ನು ಮಾಡಿದ ರಾಣಿ ಪದ್ಮಿನಿಯು ಆ ನೆಲಮಾಳಿಗೆಯ ಮಾರ್ಗದಲ್ಲಿ ಅರಮನೆಗೆ ಬರುತ್ತಿದ್ದಳಂತೆ.

ರಾಣಾ ಕುಂಭಾ ಅರಮನೆಯಾದ ರಾಣಾ ಕುಂಭ ಮಹಲ್ ಒಂದು ದೊಡ್ಡ ರಜಪೂತ ದೇಶೀಯ ರಚನೆಯಾಗಿದ್ದು, ಈಗ ಕನ್ವರ್ ಪಾಡೆ ಕಾ ಮಹಲ್ (ಉತ್ತರಾಧಿಕಾರಿಯ ಅರಮನೆ) ಮತ್ತು ನಂತರದ ಕವಿ ಮೀರಾ ಬಾಯಿ (1498–1546) ಅರಮನೆಯನ್ನು ಒಳಗೊಂಡಿದೆ.

ರತನ್ ಸಿಂಗ್ ಅರಮನೆ (1528–1531) ಅಥವಾ ಬಾದಲ್ ಮಹಲ್ (1885-1930) ಎಂದು ಕರೆಯಲ್ಪಡುವ ಫತೇ ಪ್ರಕಾಶ್ನಂತಹ ಹೆಚ್ಚುವರಿ ರಚನೆಗಳನ್ನು ಸೇರಿಸಿದಾಗ ನಂತರದ ಶತಮಾನಗಳಲ್ಲಿ ಅರಮನೆ ಪ್ರದೇಶವನ್ನು ಮತ್ತಷ್ಟು ವಿಸ್ತರಿಸಲಾಯಿತು.
 ವಿಜಯ್ ಸ್ತಂಭ ಸ್ಮಾರಕವನ್ನು ಈ ಎರಡನೇ ಹಂತದಲ್ಲಿ ನಿರ್ಮಿಸಲಾಗಿದೆ. ಪ್ರಧಾನ ನಿರ್ಮಾಣ ಹಂತವು ತುಲನಾತ್ಮಕವಾಗಿ ಶುದ್ಧ ರಜಪೂತ ಶೈಲಿಯನ್ನು ವಿವರಿಸುತ್ತದೆ, ಚಿತ್ತೋರ್ನ ಸಂಕೇತ ಮತ್ತು ವಿಜಯದ ವಿಶೇಷವಾಗಿ ಧೈರ್ಯಶಾಲಿ ಅಭಿವ್ಯಕ್ತಿ ಎಂದು ಕರೆಯಲ್ಪಡುವ ವಿಜಯ್ ಸ್ತಂಭ (ವಿಜಯದ ಗೋಪುರ) ಅಥವಾ ಜಯ ಸ್ತಂಭವನ್ನು ರಾಣಾ ಕುಂಭ ಅವರು 1458 ಮತ್ತು 1468 ರ ನಡುವೆ ಮಾಲ್ವಾ ಸುಲ್ತಾನನಾದ ಮಹಮ್ಮದ್ ಶಾ ಐ ಖಿಲ್ಜಿ ವಿರುದ್ಧ ಜಯಗಳಿಸಿದ ನೆನಪಿಗಾಗಿ ಸ್ಥಾಪಿಸಿದರು.

ಹತ್ತು ವರ್ಷಗಳ ಅವಧಿಯಲ್ಲಿ ನಿರ್ಮಿಸಲಾಗಿರುವ ಇದು 47 ಚದರ ಅಡಿ (4.4 ಮೀ 2 ) ನೆಲೆಯಲ್ಲಿ 37.2 ಮೀಟರ್ (122 ಅಡಿ) ಎತ್ತರವನ್ನು ಒಂಬತ್ತು ಅಂತಸ್ತಿನಲ್ಲಿ 157 ಮೆಟ್ಟಿಲುಗಳ ಕಿರಿದಾದ ವೃತ್ತಾಕಾರದ ಮೆಟ್ಟಿಲಿನ ಮೂಲಕ ಪ್ರವೇಶಿಸಬಹುದಾಗಿದೆ. (ಒಳಾಂಗಣವನ್ನು ಸಹ ಕೆತ್ತಲಾಗಿದೆ) 8 ನೇ ಮಹಡಿಯವರೆಗೆ, ಗುಮ್ಮಟವು ನಂತರದ ಸೇರ್ಪಡೆಯಾಗಿದ್ದು, ಮೇಲಿನಿಂದ ಇಡೀ ಚಿತ್ತೋರಿನ ಸುಂದರ ನೋಟವನ್ನು ನೋಡಬಹುದಾಗಿದೆ.

ಆದರೆ ನಾನು ಈ ಗೋಪುರವನ್ನು ಹತ್ತುವ ಸಾಹಸ ಮಾಡಲಿಲ್ಲ. 157 ಮೆಟ್ಡಿಲಾದರೂ ಒಂದೊಂದು ಒಂದುವರೆ ಅಡಿ ಎತ್ತರವಿದ್ದುದರಿಂದ ನಾನು ಮೊದಲ ಮಹಡಿಯನ್ನು ಏರಿಅಷ್ಟಕ್ಕೆ ತೃಪ್ತಿಪಟ್ಟು ಮತ್ತೆ ಕೆಳಗೆ ಇಳಿದುಕೊಂಡು ಬಂದೆ. ಆದರೆ ಗೌತಮ್ ಮತ್ತು ಮಕ್ಕಳು, ಭಟ್ರು ಗೋಪುರದ ತುತ್ತ ತುದಿಯವರೆಗೆ ಹತ್ತಿ ಹೋಗಿ ಪೋಟೋ ಗಳನ್ನು ತೆಗೆದು ಸುತ್ತಲಿನ ಸೌಂದರ್ಯ ವನ್ನು ಸವಿದು ಕೆಳಗೆ ಬಂದರು. ನಾವು ಆ ಪ್ರದೇಶದ ಎಲ್ಲ ತಾಣಗಳನ್ನು ಒಂದೊಂದಾಗಿ ನೋಡುತ್ತ ಅದರ ಇತಿಹಾಸ ಮಹತ್ವಗಳನ್ನು ಹೇಳುತ್ತಿದ್ದ ಗೈಡ್ ನನ್ನು ಹಿಂಬಾಲಿಸಿ ತುಂಬಾ ಕಡೆ ತಿರುಗಾಟ ಮಾಡಿದೆವು. ರಾಣಿ ಪದ್ಮಾವತಿ ಯು ಆತ್ಮಾಹುತಿ ಮಾಡಿಕೊಂಡ ಸ್ಥಳವನ್ನೂ ನೋಡಿದೆವು. 
         
 *…...ಮುಂದುವರಿಯುವುದು*

ಫೋಟೋ ಮತ್ತು ವಿಡಿಯೋಗಳಿಗಾಗಿ ಲಿಂಕ್ ನೋಡಿ
https://drive.google.com/drive/folders/1XZuWWY-8sFjgl9v1Ugn_wZNA8Sb7PZOX?usp=sharing

ಶನಿವಾರ, ಅಕ್ಟೋಬರ್ 19, 2019

ದಿನೇಶ ಉಪ್ಪೂರ:

#*ರಾಜಸ್ಥಾನ ಯಾನ*

ಭಾಗ ೫
            ದಿನಾಂಕ  29. 9 19.
ಆ ದಿನ ನಾವು ಚಿತ್ತೋರ್ ಗಢ ಕೋಟೆ ಮತ್ತು ಪದ್ಮಿನಿ ಪ್ಯಾಲೇಸ್ ಗಳನ್ನು ನೋಡುವುದು ಅಂತ ತೀರ್ಮಾನವಾಗಿತ್ತು.

ನಾವು ಅಲ್ಲಿ ಊಟಕ್ಕೆ ಪ್ರತಿಯೊಬ್ಬರಿಗೆ ಇನ್ನೂರ ಐವತ್ತು ರೂಪಾಯಿ ಮತ್ತು ಬೆಳಿಗ್ಗಿನ ಉಪಾಹಾರಕ್ಕೆ ನೂರು ರೂಪಾಯಿ ಕೊಡಬೇಕಿತ್ತು. ನಮ್ಮ ಪ್ರವಾಸವನ್ನು ರೂಪಿಸಿದ ಆಯೋಜಿಸಿದ ಅಪೇಕ್ಷಳಿಗೆ ಅದನ್ನು ಉಳಿಸಬಹುದು ಅಂತ ಕಂಡಿತು.

ಬೆಳಿಗ್ಗೆ ತಿಂಡಿಯನ್ನು ನಾವೇ ಮಾಡಿಕೊಂಡರೆ ಹೇಗೆ? ನಮ್ಮ ಹತ್ರ ಎಲೆಕ್ಟ್ರಿಕ್ ಸ್ಟವ್, ಪಾತ್ರೆಗಳು ಎಲ್ಲವೂ ಇದೆ. ಹೇಗೂ ಅಡುಗೆಮನೆ ಇದೆಯಲ್ಲ ಎಂಬ ಯೋಚನೆ ಬಂದು ಅವರ ಕುಕ್ ಗೆ ಅಡುಗೆಯನ್ನು ನಾವೇ ಮಾಡಿಕೊಳ್ಳುತ್ತೇವೆ, ಬೇಕಾದರೆ ಮಾತ್ರಾ ನಿಮಗೆ ತಿಳಿಸುತ್ತೇವೆ ಎಂದು ಹೇಳಿ ಕಳಿಸಿಬಿಟ್ಟರು. ಅವರು ಬೆಳಿಗ್ಗೆ ಬೇಗನೇ ಎದ್ದು ವಾಕಿಂಗ್ ನೆಪದಲ್ಲಿ ಬೀದಿಯ ಉದ್ದಕ್ಕೂ ನಡೆದು, ದಾರಿಯಲ್ಲಿ ಸಿಕ್ಕಿದ ಒಂದು ಹೋಟೆಲ್ ಗೆ ಹೋಗಿ ಒಗ್ಗರಣೆ ಅವಲಕ್ಕಿಯನ್ನು (ಪೋಹ) ಮತ್ತು ಡೋಕ್ಲ,ಕಚೋರಿ ಕಟ್ಟಿಸಿಕೊಂಡು ತಂದರು.

ಹಿಂದಿನ ದಿನದ ಚಪಾತಿಯೂ ಸಾಕಷ್ಟು ಇತ್ತು. ಜೊತೆಯಲ್ಲಿ ಬಾಳೆಹಣ್ಣು ಸೇಬುಹಣ್ಣು ಇತ್ತು. ಅದನ್ನೇ ತಿಂದು ಹೊಟ್ಟೆ ತುಂಬಿಸಿಕೊಂಡು ಪ್ರಯಾಣಕ್ಕೆ ಸಿದ್ಧರಾದೆವು.

ನಾವು ಪ್ರಯಾಣಕ್ಕಾಗಿ ಒಂದು ಟಿಟಿಯನ್ನು ಗೊತ್ತುಮಾಡಿದ್ದೆವು. ಅದರ ಡ್ರೈವರ್ ಯೋಗೀಶ ಅಂತ ಅವನ ಹೆಸರಿರಬೇಕು.  ಒಳ್ಳೆಯ ವ್ಯಕ್ತಿ. ನಾವು ಹೋದ ಅವಧಿಯು ನವರಾತ್ರಿಯಾದ್ದರಿಂದ ಅವನು ಉಪವಾಸ ಆಚರಿಸುತ್ತಿದ್ದ. ಅವನು ಜೈನ್ ಪಂಥದವನಾದ್ದರಿಂದ ಅದು ಅವರ ಅಲ್ಲಿಯ ಸಂಪ್ರದಾಯವಂತೆ. ಅವನು ಹೇಳಿದ ಸಮಯಕ್ಕೆ ಸರಿಯಾಗಿ ನಾವಿರುವಲ್ಲಿಗೆ ಬಂದು, ನಮ್ಮನ್ನು ಹತ್ತಿಸಿಕೊಂಡು ಚಿತ್ತೋರ್ ಕೋಟೆಯತ್ತ ಹೊರಟ. ಅವನ ಟಿಟಿ ಸ್ವಲ್ಪ ಹಳೆಯದಾಗಿದ್ದರೂ ತುಂಬಾ ಜಾಗ್ರತೆಯಿಂದ ಡ್ರೈವ್ ಮಾಡುತ್ತಿದ್ದ.

ನಮ್ಮ ಡಾಕ್ಟರ್ ರಿಗೆ ದಿನವೂ ಪೇಪರ್ ಓದುವ  ಅಭ್ಯಾಸ. ದಿನದ ಪ್ರಾರಂಭದಲ್ಲಿ ಒಮ್ಮೆ ಪೇಪರ್ ಮೇಲೆ ಕಣ್ಣು ಆಡಿಸದಿದ್ದರೆ ಏನೋ ಕಳೆದುಕೊಂಡ ಅನುಭವವಂತೆ. ಹಾಗಾಗಿ ದಾರಿಯಲ್ಲಿ ನಮ್ಮ ಡ್ರೈವರ್ ಗೆ ಪೇಪರ್ ಇರುವ ಅಂಗಡಿಯ ಬಳಿ ಸ್ವಲ್ಪ ನಿಲ್ಲಿಸಿ ಪೇಪರ್ ತರಲು ಹೇಳಿದರು. ಅವನು "ಅವರ ಊರಿನಲ್ಲಿ ಪೇಪರ್ ಬರುವುದೇ ಹತ್ತು ಗಂಟೆಯಾಗುತ್ತದೆ ಸರ್", ಅಂದ. ನಮಗೆ ಹಿಂದಿ ಸರಿಯಾಗಿ ಓದಲು ಬರದೇ ಇರುವುದರಿಂದ, ಇಂಗ್ಲೀಷ್ ಪೇಪರ್ ಬೇಕಾಗಿತ್ತು. ಆದರೆ ನಾಲ್ಕಾರು ಅಂಗಡಿ ಸುತ್ತಿದರೂ ಪೇಪರ್ ಸಿಗಲೇ ಇಲ್ಲ. "ನಿನ್ನೆಯದಾದರೂ ಅಡ್ಡಿಲ್ಲ ಮಾರಾಯಾ ನೋಡು" ಅಂದರು. ಕೊನೇಗೊಂದು ಅಂಗಡಿಯಲ್ಲಿ ಅಂತೂ ದಿನದ ಪೇಪರ್ ಸಿಕ್ಕಿತು ಅಂತ ಆಯಿತು.

ನಾನು ಕನ್ನಡ ಪೇಪರ್ ಬೇಕಾದರೆ ಡೌನ್ಲೋಡ್ ಮಾಡಿಕೊಡುತ್ತೇನೆ ಎಂದು ಆ ದಿನದ ಉದಯವಾಣಿಯನ್ನು ಅವರಿಗೆ (ಪಿಡಿಎಫ್) ವಾಟ್ಸಾಪ್ ಲ್ಲಿ ಕಳಿಸಿದೆ. ಆಮೇಲೆ ಪ್ರತೀ ದಿನ ಬೆಳಿಗ್ಗೆ ಅವರಿಗೆ ಪೇಪರ್ ಒದಗಿಸುವ ಕೆಲಸ ನನ್ನದಾಯಿತು. ಇಲ್ಲದಿದ್ದರೆ "ಹ್ವಾಯ್ ಉಪ್ಪೂರ್ರೆ, ಪೇಪರ್ ಎಲ್ಲಿ?" ಎಂದು ನೆನಪಿಸುತ್ತಿದ್ದರು.

   ನಾವು ಸುಮಾರು ಮಧ್ಯಾಹ್ನ ಹನ್ನೆರಡು ಗಂಟೆಯ ಹೊತ್ತಿಗೆ ಚಿತ್ತೋರ್ ಗಢವನ್ನು ತಲುಪಿದೆವು. ಅಲ್ಲಿಯೇ ಹತ್ತಿರದಲ್ಲಿ ಇದ್ದ ಒಂದು ಹೋಟೆಲ್ ಗೆ ಹೋಗಿ ಊಟವನ್ನು ಮಾಡಿಕೊಂಡೇ ಹೋಗುವ ಎಂದು ನಿರ್ಣಯವಾಯಿತು. ರಾಜಸ್ಥಾನದಲ್ಲಿ ಖಾರ ಮತ್ತು ಬೆಳ್ಳುಳ್ಳಿ ಹಾಕಿದ ಅಡುಗೆಗಳೇ ಹೆಚ್ಚು ಎಂದು ಮನಗಂಡ ನಾವು ನಮಗೆ ಬೇಕಾದಂತೆ ಮಾಡುವ ಹೋಟೆಲನ್ನು ಹುಡುಕಿಕೊಂಡು ಹೋಗಬೇಕಾಗಿತ್ತು.  ಡ್ರೈವರ್ ನ ಸಲಹೆಯಂತೆ (ಬಹುಷ್ಯ ನೆನಪಿಗೆ ಬರುವಂತೆ  ಕೃಷ್ಣವಿಲಾಸ್ ಎಂದು ಹೆಸರು) ಒಂದು ಹೋಟೆಲಿನಲ್ಲಿ ಊಟ ಮಾಡುವುದೆಂದು ನಿರ್ಧರಿಸಿ ಅಲ್ಲಿಗೆ ಹೋದೆವು.

  ಅಲ್ಲಿ ಹೋಟೆಲ್ ಗಳಲ್ಲಿ ಅನ್ನವನ್ನು ಸರಿಯಾಗಿ ಬೇಯಿಸದೇ ಇರುವುದೇ ನಮಗೆ ಒಂದು ದೊಡ್ಡ ತೊಡಕಾಗಿರುವುದರಿಂದ ಆ ಹೋಟೆಲ್ ಮಾಲಿಕಳಿಗೆ ಮುಂಚಿತವಾಗಿ ಹೋಗಿ, ಅನ್ನವನ್ನು ಮೆದುವಾಗುವಂತೆ ಮತ್ತೊಮ್ಮೆ ಬೇಯಿಸಲು ಹೇಳಿ, ನಾವು ರೊಟ್ಟಿ ಅಥವ ನಮಗೆ ಬೇಕಾದ ಅಲ್ಲಿ ಲಭ್ಯವಿರುವ ತಿಂಡಿಯನ್ನು ತಿಂದು, ಆಮೇಲೆ ಅನ್ನ ಮೊಸರನ್ನು ಉಂಡು ಕೋಟೆಯತ್ತ ಹೊರಟೆವು. ಊಟಮಾಡುವಾಗಲೇ ದೂರದಿಂದ ಕೋಟೆ ಇರುವ ಬೆಟ್ಟ ನಮ್ಮನ್ನು ಆಕರ್ಷಿಸಿತ್ತು. ಪದ್ಮಿನಿ ಸರೋವರ, ಮತ್ತು ಮೇಲಿನಿಂದ ಧಾರೆಧಾರೆಯಾಗಿ ಬೀಳುವ ಜಲಪಾತ ಸುಂದರವಾಗಿ ಕಾಣುತ್ತಿತ್ತು. ರಾಜಸ್ಥಾನದಲ್ಲಿ ಮಳೆಯಿಲ್ಲ ನೀರಿನ ಅಭಾವವಿದೆ ಎಂದು ಅಂದುಕೊಂಡಿದ್ದ ನಮಗೆ ಆ ನೀರು ಧಾರೆಧಾರೆಯಾಗಿ ಮೇಲಿನಿಂದ ಸರೋವರಕ್ಕೆ ಬೀಳುವ ಸೌಂದರ್ಯವನ್ನು ನೋಡಿ ಪುಳಕಿತರಾದೆವು.

   ಚಿತ್ತೋರ್ ಗಢ ಕೋಟೆ ಬಗ್ಗೆ ಕುತೂಹಲದಿಂದ ಅಂತರ್ಜಾಲದಲ್ಲಿ ಹುಡುಕಿದಾಗ ಬಹಳಷ್ಟು ಮಾಹಿತಿಗಳು  ಸಿಕ್ಕಿದವು. ಇದನ್ನು ನಿಮಗೆ ತಿಳಿಸದೇ ಇದ್ದರೆ ನನ್ನ ವಿವರಗಳು 'ಹೋದಪುಟ್ಟ ಬಂದ ಪುಟ್ಟ' ಅನ್ನುವಂತೆ ಆಗುವುದರಿಂದ ಸಾಧ್ಯವಾದಷ್ಟು ಮಾಹಿತಿಯನ್ನು ಸಂಗ್ರಹಿಸಿ ಕೊಡುತ್ತಿದ್ದೇನೆ. ಅಲ್ಲದೇ ನಾವು ಹೋದ ಪ್ರತಿಯೊಂದು ಸ್ಥಳದಲ್ಲೂ ನಾವು ಗೈಡ್ ಗಳನ್ನು ನಿಯೋಜಿಸಿಕೊಂಡಿದ್ದರೂ ಅವರು  ಹಿಂದಿಯಲ್ಲಿ ಹೇಳಿದ್ದರಿಂದ ಕೆಲವೊಂದು ಸಂಗತಿಗಳು ಸರಿಯಾಗಿ ಅರ್ಥವಾಗಿರಲಿಲ್ಲ, ಇನ್ನು ಕೆಲವು ಸಂಗತಿಗಳನ್ನು ಅಲ್ಲಿಯ ವಾತಾವರಣ, ಗೌಜಿಯಲ್ಲಿ, ನನ್ನ ಮೂಡ್ ನ ಕಾರಣದಿಂದ ನನಗೆ ಕೇಳಿಸಿಕೊಳ್ಳಲು ಸಾಧ್ಯವಾಗಿಲ್ಲ, ಕೆಲವು ಮರೆತು ಹೋಗಿದೆ.

ಹಾಗಂತ ಇಂತಹ ಪ್ರೇಕ್ಷಣೀಯ ಸ್ಥಳಗಳಿಗೆ ಹೋದಾಗ  ಗೈಡ್ ಗಳು ಅನಿವಾರ್ಯವಾಗುತ್ತಾರೆ. ಅವರು ಇಲ್ಲದಿದ್ದರೆ ನಾವು ಎಷ್ಟೇ ಓದಿಕೊಂಡಿದ್ದರೂ ಸ್ಥಳಕ್ಕೆ ಬೇಟಿ ನೀಡಿದಾಗ ಅವುಗಳು ಏನೇನೂ ಉಪಯೋಗಕ್ಕೆ ಬರುವುದಿಲ್ಲ. ಆಮೇಲೆ ಆ ಗೈಡ್ ಗಳು ಹೇಳುವಾಗ ಹೌದು ಹೌದು ಎನಿಸುತ್ತದೆ. ಇರಲಿ.

               *..........ಮುಂದುವರಿಯುವುದು*


ಪೋಟೋ ಮತ್ತು ವಿಡಿಯೋಗಳಿಗಾಗಿ ಲಿಂಕ್

https://drive.google.com/drive/folders/1sSxFJiu5QH7C9kx7VH_wtcrVNSPccO-J?usp=sharing

ಶುಕ್ರವಾರ, ಅಕ್ಟೋಬರ್ 18, 2019

ದಿನೇಶ ಉಪ್ಪೂರ:

*ರಾಜಸ್ಥಾನ ಯಾನ*

ಭಾಗ ೪.
ಸುಮಾರು 138 ಕೋಣೆಗಳೊಂದಿಗೆ, ಹವೇಲಿಯ ಒಳಾಂಗಣವನ್ನು ಅಸಾಧಾರಣ ಕನ್ನಡಿ ಕೆಲಸದಿಂದ ಅಲಂಕರಿಸಲಾಗಿದೆ. ಹವೇಲಿಯ ಗೋಡೆಗಳನ್ನು ಆಕರ್ಷಕ ಗಾಜಿನ ಕೆಲಸ ಮತ್ತು ಮ್ಯೂರಲ್ ವರ್ಣಚಿತ್ರಗಳಿಂದ ಸುಂದರವಾಗಿ ಅಲಂಕರಿಸಲಾಗಿದೆ. ಹವೇಲಿಯ ದ್ವಾರಗಳಿಗೆ ಪ್ರವೇಶಿಸುತ್ತಿದ್ದಂತೆ, ಅಷ್ಟೇ ಆಕರ್ಷಕವಾದ ಎರಡು ಅಂತಸ್ತಿನ ಕಮಲದ ಕಾರಂಜಿ ಹೊಂದಿರುವ ಆಕರ್ಷಕ ಪ್ರಾಂಗಣವು ಸ್ವಾಗತಿಸುತ್ತದೆ. ಬಾಗೋರ್ ಕಿ ಹವೇಲಿಯಲ್ಲಿ ಕುವಾನ್ ಚೌಕ್, ನೀಮ್ ಚೌಕ್ ಮತ್ತು ತುಳಸಿ ಚೌಕ್ ಎಂಬ ಮೂರು ಚೌಕ್‌ಗಳಿವೆ.

ಕುವಾನ್ ಚೌನ್ ಅಥವಾ ವೆಲ್ ಕೋರ್ಟ್ ಬಾಗೋರ್ ಕಿ ಹವೇಲಿಯ ನೆಲಮಹಡಿಯಲ್ಲಿದೆ, ಹವೇಲಿಯ ಮೊದಲ ಮಹಡಿಯಲ್ಲಿರುವ ಬೇವಿನ ಚೌಕ್ ಆಕರ್ಷಕ ಹಿತ್ತಾಳೆ ಬಾಗಿಲುಗಳಿಂದ ಆವೃತವಾಗಿದೆ ಮತ್ತು ಇದು ಸಂಗೀತ ಮತ್ತು ನೃತ್ಯ ಪ್ರದರ್ಶನಗಳಿಗೆ ವೇದಿಕೆಯಾಗಿದೆ. ಈಗಲೂ ಈ ಸ್ಥಳವು ವಿವಿಧ ಪ್ರದರ್ಶನ ಕಲಾ ಪ್ರಕಾರಗಳನ್ನು ಪ್ರದರ್ಶಿಸುತ್ತದೆ. ಅದನ್ನು ನೋಡಲೆಂದೇ ನಾವು ಕಾದು ಕುಳಿತದ್ದು.

ಮೊದಲ ಪ್ರದರ್ಶನ ಮುಗಿದು ಜನರೆಲ್ಲ ಮೆಟ್ಟಿಳಿದು ಬಂದ ಮೇಲೆ ನಮ್ಮನ್ನು ಒಳಗೆ ಬಿಟ್ಟರು. ಮೊದಲೇ ಪ್ರದರ್ಶನಕ್ಕೆ ಟಿಕೇಟು ತೆಗೆದುಕೊಂಡಿದ್ದ ನಾವು ಮೆಟ್ಟಿಲು ಹತ್ತಿ ಹೋಗಿ ವಿಶಾಲವಾದ ಬೇವಿನ ಚೌಕಿಯನ್ನು ಪ್ರವೇಶಿಸಿದೆವು. ಫೋಟೋ ಮತ್ತು ವಿಡಿಯೋ ತೆಗೆಯಬೇಕಾಗಿದ್ದಲ್ಲಿ ಅದಕ್ಕೆ ಪ್ರತ್ಯೇಕ ಹಣ ಕೊಡಬೇಕಾಗಿದ್ದು ಗೌತಮ್ ಹಣ ಪಾವತಿಸಿ ರಸೀದಿ ಪಡೆದುಕೊಂಡರು.

ಬಾಗೋರ್ ಕಿ ಹವೇಲಿಯ ಒಂದು ಪ್ರಮುಖ ಆಕರ್ಷಣೆ ಧರೋಹರ್ ನೃತ್ಯ ಪ್ರದರ್ಶನವಾಗಿದೆ. ಒಂದು ಗಂಟೆಯ ಅವಧಿಯ ಪ್ರದರ್ಶನವು ಬೇವಿನ ಚೌಕ್ ಎಂದು ಕರೆಯಲ್ಪಡುವ ಅಂಗಳದಲ್ಲಿ ನಡೆಯುತ್ತದೆ. ನೀಮ್ ಮರದ ಕಟ್ಟೆಯ ಹತ್ತಿರ ಇರುವ ಸುಂದರವಾದ ಬಾಲ್ಕನಿಯಲ್ಲಿ ಈ  ರಾಜಸ್ಥಾನಿ ಜಾನಪದ ನೃತ್ಯ ಮತ್ತು ಸಂಗೀತಕ್ಕೆ ಒಂದು ವೇದಿಕೆಯನ್ನು ಸಿದ್ಧಪಡಿಸಲಾಗಿತ್ತು.
ವೇದಿಕೆಯ ಸುತ್ತಲೂ ನೆಲದ ಮೇಲೆ ಹಲಗೆಯ ಮೇಲೆ ಬಟ್ಟೆಯನ್ನು ಹಾಸಿ ಆಸನ ವ್ಯವಸ್ಥೆ ಮಾಡಲಾಗಿತ್ತು. ನೃತ್ಯ ಪ್ರದರ್ಶನಗಳನ್ನು ಚೆನ್ನಾಗಿ ಅನುಭವಿಸಲು ಟೆರೇಸ್‌ನ ಮೂರು ಬದಿಗಳಲ್ಲಿ ಮಂಚಗಳನ್ನು ಇರಿಸಿ, ದೊಡ್ಡ ಹಾಸಿಗೆಗಳನ್ನು ಹಾಸಿ ಜೋಡಿಸಲಾಗಿದೆ. ಅಲ್ಲಿ ಹೋಗಿ ನಾವು ಕುಳಿತುಕೊಂಡೆವು.
ಸಾಂಪ್ರದಾಯಿಕ ರಾಜಸ್ಥಾನಿ ಉಡುಪನ್ನು ಧರಿಸಿದ ರಾಜಸ್ಥಾನ ಪುರುಷ ಮತ್ತು ಮಹಿಳೆ ಮೊದಲು ನೀಡಿದ ಸಂಕ್ಷಿಪ್ತ ಪರಿಚಯದೊಂದಿಗೆ ಧರೋಹರ್ ನೃತ್ಯ ಪ್ರದರ್ಶನವನ್ನು ಚೆನ್ನಾಗಿ ಆಯೋಜಿಸಲಾಗಿತ್ತು. ಪ್ರದರ್ಶನಗಳು ಡ್ರಮ್ ಅನ್ನು ಹೊಡೆಯುವುದು, ಶಂಖ ಚಿಪ್ಪು ಮತ್ತು ಧಾರ್ಮಿಕ ಹಾಡಿನಿಂದ ಕೂಡಿತ್ತು.

ಪ್ರದರ್ಶನವು ತಬಲಾ ಮತ್ತು ಹಾರ್ಮೋನಿಯಂ ನುಡಿಸುವ ಸಂಗೀತಗಾರರ ಹಿನ್ನೆಲೆಯಲ್ಲಿ ಸುಂದರವಾದ ರಾಜಸ್ಥಾನೀ ಉಡುಪುಗಳನ್ನು ಧರಿಸಿದ ಸ್ತ್ರೀಯರಿಂದ ಸಂಯೋಜಿತ ನೃತ್ಯಗಳನ್ನು ಒಳಗೊಂಡಿತ್ತು.

ಮೊದಲ ನೃತ್ಯ ಪ್ರದರ್ಶನವನ್ನು ಚಾರಿ ಡ್ಯಾನ್ಸ್ ಎಂದು ಕರೆಯಲಾಗುತ್ತದೆ, ಅಲ್ಲಿ ಪ್ರದರ್ಶಕರು ತಲೆಯ ಮೇಲೆ ಹಿತ್ತಾಳೆಯ ಮಡಕೆಗಳನ್ನು ಹೊತ್ತುಕೊಂಡು ಕೌಶಲ್ಯದಿಂದ ಸಮತೋಲನದಿಂದ ಕುಣಿಯುತ್ತಾರೆ.
ತರ್ಹಾ ಟಾಲ್ ಡ್ಯಾನ್ಸ್ ಎಂದು ಕರೆಯಲ್ಪಡುವ ಮುಂದಿನ ನೃತ್ಯ ಪ್ರದರ್ಶನಕ್ಕೆ ಸಂಗೀತದ ಲಯಕ್ಕೆ ಅನುಗುಣವಾಗಿ ನರ್ತಕರು ತಮ್ಮ ಕೈ ಕಾಲುಗಳಿಗೆ ಕಟ್ಟಿರುವ 13 ಮಂಜೀರಗಳನ್ನು (ತಾಳಗಳು) ನುಡಿಸುತ್ತಾ ಬಗೆಬಗೆಯ ವಿನ್ಯಾಸದಲ್ಲಿ ಹಾವಭಾವಗಳನ್ನು ಪ್ರದರ್ಶಿಸುತ್ತಾ ನರ್ತಿಸುತ್ತಾರೆ.. ಪ್ರದರ್ಶನದ ಒಂದು ಹಂತದಲ್ಲಿ ಅವರು ತಮ್ಮ ಬಾಯಿಯಲ್ಲಿ ಚಾಕುವನ್ನು ಹಿಡಿದು ತಮ್ಮ ತಲೆಯ ಮೇಲೆ ಹಿತ್ತಾಳೆ ಮಡಕೆಗಳನ್ನು ಇಟ್ಟುಕೊಂಡು, ಮತ್ತು ಮಂಜಿರಾಗಳನ್ನು ಹೊಡೆಯುತ್ತಾ ಕುಣಿಯುತ್ತಾರೆ.

ನೀರಿನ ಸಮಸ್ಯೆ ಹೆಚ್ಚಾಗಿರುವ ರಾಜಸ್ಥಾನದಲ್ಲಿ ನೀರನ್ನು ಕೊಡಪಾನಗಳಲ್ಲಿ ಹೆಂಗಸರೇ ತರುತ್ತಿದ್ದು ಆಗ ಸೃಷ್ಟಿ ಯಾದ ನೃತ್ಯಗಳಿವು ಎನ್ನಬಹುದೇನೋ  ಗಂಡಸರು ಒಂದು  ಸಣ್ಣ ಸ್ಕಿಟ್ ನಡೆಸಿದರು. ಅದರಲ್ಲಿ ಕಾಳಿಯು ಮಹಿಷಾಸುರನನ್ನು ಸಂಹಾರ ಮಾಡುವ ದೃಶ್ಯವನ್ನು ತೋರಿಸಲಾಯಿತು. ಆದರೆ ನಮ್ಮ ದಕ್ಷಿಣ ಭಾರತ ಅಥವ ಕರ್ನಾಟಕದ ವಿವಿಧ ನೃತ್ಯಪ್ರಕಾರಗಳಿಗೆ ಹೋಲಿಸಿದರೆ ಅಲ್ಲಿಯ ನೃತ್ಯಗಳು ಕಾಲಾನುಸಾರ ಬದಲಾವಣೆಗೊಳ್ಳದೇ ಹಾಗೇ ಉಳಿಸಿಕೊಂಡ ಕಲೆಯಾಗಿದ್ದಂತೆ ಕಂಡಿತು.
ಗೋರ್ಬಂದ್ ನೃತ್ಯವು ಮುಂದಿನ ಪ್ರದರ್ಶನವಾಗಿದ್ದು, ಅಲ್ಲಿ ನರ್ತಕರು ಕನ್ನಡಿಯಿಂದ ಮಾಡಿದ ಉಡುಗೆಗಳನ್ನು ಆಭರಣಗಳನ್ನು ಧರಿಸುತ್ತಾರೆ. ಅವರು ನೃತ್ಯ ಮಾಡುತ್ತಾ ಮಾಡುತ್ತಾ ಕೊನೆಯಲ್ಲಿ ಪರಸ್ಪರ ಕೈ ಕೈ ಹಿಡಿದು ಹೆಚ್ಚಿನ ವೇಗದಲ್ಲಿ ಸುತ್ತುತ್ತಾರೆ, ಈ ಪ್ರದರ್ಶನವು  ಬಾಲ್ಯದ ದಿನಗಳಲ್ಲಿ ನಾವು ಕೈ ಕೈ ಹಿಡಿದು ಸುತ್ತುತ್ತಿದ್ದುದನ್ನು ನೆನಪಿಸುತ್ತದೆ.
ಮುಂದಿನದು ರಾಜಸ್ಥಾನಿ ಪಪೆಟ್ ಪ್ರದರ್ಶನವಾಗಿದ್ದು, ಇದು ಪ್ರೇಕ್ಷಕರಲ್ಲಿ ಮತ್ತು ಚಿಕ್ಕ ಮಕ್ಕಳ ಮನಸ್ಸನ್ನು ಮುದಗೊಳಿಸುವಲ್ಲಿ ಸಫಲವಾಗುತ್ತದೆ. ಕೈಗೊಂಬೆಗಳೊಂದಿಗೆ ಪ್ರದರ್ಶಿಸಿದ ಹಾಸ್ಯ ಸ್ಕಿಟ್‌ಗಳು ಪ್ರದರ್ಶನಕ್ಕೆ ಹಾಸ್ಯವನ್ನು ಸೇರಿಸುತ್ತವೆ.

ಪ್ರದರ್ಶನಗಳ ಸಾಲಿನಲ್ಲಿ ಮುಂದಿನದು ಘುಮರ್ ಡ್ಯಾನ್ಸ್ ಎಂದು ಕರೆಯಲ್ಪಡುವ ಉನ್ನತ ದರ್ಜೆಯ ನೃತ್ಯ ಪ್ರದರ್ಶನ, ಅಲ್ಲಿನ ಸಂಗೀತದ ಪ್ರಕಾರ ನರ್ತಕರು ಲಯಬದ್ಧ ವಲಯಗಳಲ್ಲಿ ನೃತ್ಯ ಮಾಡುತ್ತಾರೆ.

ಪ್ರದರ್ಶನದ ಅಂತಿಮ ಪ್ರದರ್ಶನವನ್ನು ಭವಾನಿ ನೃತ್ಯ ಎಂದು ಕರೆಯಲಾಗುತ್ತದೆ, ಅಲ್ಲಿಯ ಪ್ರದರ್ಶಕಿ ತನ್ನ ತಲೆಯ ಮೇಲೆ ಮಣ್ಣಿನ ಮಡಕೆಗಳೊಂದಿಗೆ ನೃತ್ಯ ಮಾಡುತ್ತಾಳೆ. ಹರಿವಾಣದ ಮೇಲೆ ನಿಂತು ನಡೆಯುವುದು, ಗಾಜಿನ ತುಂಡುಗಳ ಮೇಲೆ ನಿಂತು ನರ್ತಿಸುವುದೂ ಸೇರಿದಂತೆ ವಿವಿಧ ಕಾರ್ಯಗಳನ್ನು ನಿರ್ವಹಿಸುವಾಗ  ತನ್ನ ತಲೆಯ ಮೇಲೆ 13 ಮಡಕೆಗಳವರೆಗೆ ಪೇರಿಸಿಟ್ಟು ನೃತ್ಯ ಮಾಡುತ್ತಿರುವುದರಿಂದ ಈ ಪ್ರದರ್ಶನವು ಅತ್ಯಂತ ಕಷ್ಟಕರವಾಗಿದೆ.

ಅದನ್ನೆಲ್ಲವನ್ನು ನೋಡಿ ಕಣ್ತುಂಬಿಕೊಂಡ ನಾವು ರಾತ್ರಿ ನಮ್ಮ ಅಪಾರ್ಟ್ ಮೆಂಟ್ ಗೆ ಬಂದೆವು.  ಕುಕ್ ಮಾಡಿ ಇಟ್ಟಿದ್ದ ಅಡುಗೆಯನ್ನು ಊಟಮಾಡಿ ಹಾಯಾಗಿ ನಿದ್ದೆ ಮಾಡಿದೆವು
                                           *…...ಮುಂದುವರಿಯುವುದು*


ವಿಡಿಯೋ ಮತ್ತು ಫೋಟೋ ಗಾಗಿ ಕೆಳಗಿನ ಲಿಂಕ್ ನೋಡಿ,

bagore ki haveli
https://drive.google.com/drive/folders/18lDMx0stDVDDJ9RBWf1nJmLy2za9nvWu?usp=sharing

ಗುರುವಾರ, ಅಕ್ಟೋಬರ್ 17, 2019

ದಿನೇಶ ಉಪ್ಪೂರ:

*ರಾಜಸ್ಥಾನ ಯಾನ*

ಭಾಗ ೩

ಅದೊಂದು ಮೊದಲ ಮಹಡಿಯಲ್ಲಿರುವ ವಿಶಾಲವಾದ ಸುಸಜ್ಹಿತವಾದ ಮನೆ.  ಒಳಗೆ ಹೋಗುತ್ತಿದ್ದಂತೆ ದೊಡ್ಡದಾದ ಒಂದು ಹಾಲ್. ಸುತ್ತಲೂ ಮೂರು ಬಾತ್ ರೂಮ್ ಸೌಕರ್ಯವಿರುವ ದೊಡ್ಡ ದೊಡ್ಡ ರೂಮುಗಳು ಮತ್ತು ದೊಡ್ಡ ಅಡುಗೆ ಮನೆ. ಮಕ್ಕಳಿಗೆ ಖುಷಿಯಾಗುವಂತೆ ಮಲಗಲು ರೈಲಿನಲ್ಲಿರುವಂತೆ ಅಂತಸ್ತು ಇರುವ ಮಂಚಗಳು.

ಅದರ ಓನರ್ ಒಬ್ಬ ಕಲಾವಿದ. ಹೆಸರು ರಿಷಿ ಅಂತೆ. ವರ್ಷದಲ್ಲಿ ಮೂರುನಾಲ್ಕು ತಿಂಗಳು ಊರೂರು ತಿರುಗುತ್ತಾರಂತೆ. ಅಲ್ಲಿ ಇರುವ ಅವಧಿಯಲ್ಲಿ ಆಗಾಗ ಸಂಗೀತ, ಸಭೆ ಚಿತ್ರಕಲಾಗಾರ ಮುಂತಾದ ಹಲವು ಕಾರ್ಯಕ್ರಮಗಳನ್ನು ಮಾಡುತ್ತಿದ್ದರಂತೆ. ಗೋಡೆಯಲ್ಲೆಲ್ಲ ನವಿಲು, ಜಿಂಕೆ, ಹಡಗು ಮುಂತಾದ ಬಗೆಬಗೆಯ ಸ್ಟಿಕ್ಕರ್ ಗಳನ್ನು ಹಚ್ಚಿದ್ದರು.  ಕೆಲವು ಗೋಡೆಗೆ ನವೀನ ರೀತಿಯ ಪೈಂಟಿಂಗ್ ಗಳನ್ನು ಮಾಡಿದ್ದರು. ಒಂದು ಮೂಲೆಯಲ್ಲಿ ಗಿಟಾರ್ ಮೊದಲಾದ ಮೂರ್ನಾಲ್ಕು ವಾದ್ಯಗಳನ್ನು ಇರಿಸಿದ್ದರು. ಹಲವು ಡ್ರಾಯಿಂಗ್ ಶೀಟ್ ಗಳನ್ನು ಪೆನ್ಸಿಲ್ ಗಳನ್ನೂ ಇನ್ನು ಏನೇನೋ ವಸ್ತುಗಳನ್ನು ಕಲಾತ್ಮಕವಾಗಿ ಜೋಡಿಸಿ ಇಟ್ಟಿದ್ದರು. ಹಳೆಯ ಟೈರ್ ನ ಮೇಲೆ ಒಂದು ಹಲಗೆಯನ್ನು ಫಿಕ್ಸ್ ಮಾಡಿ ಟೀ ಪಾಯ್ ತಯಾರಾಗಿತ್ತು.

            ಒಟ್ಟಿನಲ್ಲಿ ಒಂದು ಒಳ್ಳೆಯ ಟೇಸ್ಟ್ ಇರುವವರು ಎಂದು ಆ ಮನೆಯ ಒಳಗಡೆ ಹೋಗುತ್ತಿರುವಂತೆಯೆ ನಮಗೆ ಅನ್ನಿಸಿತು. ಅವರದೇ ಒಬ್ಬ ಅಡುಗೆಯವನಿದ್ದು ಅವನಿಗೆ, ರಾತ್ರಿ ನಮಗೆ ಬೇಕಾದಂತೆ ಸರಿಯಾಗಿ ಬೇಯಿಸಿದ ಅನ್ನ ಮೊಸರು, ಚಪಾತಿ ಸಬ್ಜಿ ಮಾಡಿ ಇಡಲು ತಿಳಿಸಿ ನಾವು ಫ್ರೆಶ್ ಆಗಿ ಆ ದಿನ ನಿರ್ಣಯಿಸಿದಂತೆ ಬಾಗೋರ್ ಕಿ ಹವೇಲಿಯಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೋಡಲು ಹೊರಟೆವು.

ಅಲ್ಲಿಗೆ ಮುಟ್ಟುವಾಗಲೇ ಸುಮಾರು ಆರೂವರೆ ಆಗಿತ್ತು.  ಆಗಲೇ ಕತ್ತಲಾಗುತ್ತಾ ಬರುತ್ತಿತ್ತು.. ಏಳು ಗಂಟೆಗೆ ಪ್ರಾರಂಭವಾಗುವ ಪ್ರದರ್ಶನದ ಟಿಕೆಟ್ ಮುಗಿದ್ದಿದ್ದರಿಂದ ನಾವು ಎರಡನೇ ಪ್ರದರ್ಶನ ಶುರುವಾಗುವ ಎಂಟು ಗಂಟೆಯವರೆಗೆ ಕಾಯಬೇಕಾಗಿತ್ತು.
ಬಾಗೋರ್ ಕಿ ಹವೇಲಿ ಉದಯಪುರ ದ ಪ್ರಸಿದ್ಧ ಆಕರ್ಷಣೀಯ ಸ್ಥಳಗಳಲ್ಲಿ ಒಂದು. ಅದು ವಿಸ್ತಾರವಾದ ಪಿಚೋಲ ಎಂಬ ಸರೋವರದ ದಡದಲ್ಲಿದೆ. ಅಲ್ಲಿಗೇ ಪ್ರವೇಶವಾಗುತ್ತಿದ್ದಂತೆಯೇ ಕಾಣುವ ಮೂರು ಬೃಹತ್ ದ್ವಾರಗಳು ಅದನ್ನು ದಾಟಿಹೋದಾಗ ಕಾಣುವ ಸರೋವರವು ತುಂಬಾ ಚೆನ್ನಾಗಿ ಕಾಣುತ್ತದೆ.
ಅಷ್ಟರಲ್ಲಿ ಮಳೆ ಶುರುವಾಯಿತು. ಅಲ್ಲಿಯ ವಸ್ತು ಪ್ರದರ್ಶನದ ಅವಧಿಯೂ ಮುಗಿದ್ದಿದ್ದರಿಂದ ನಾವು ಏನೂ ಮಾಡದೇ ಮಳೆಯಲ್ಲಿ ಒಂದು ಬದಿಯಲ್ಲಿ ನಿಂತು ಕಾಯಬೇಕಾಯಿತು. ಅಲ್ಲಿಯ ವಸ್ತು ಸಂಗ್ರಹಾಲಯವೂ ಸಂಜೆ ಸಮಯವಾಗಿ ಮುಚ್ಚಿದ್ದರಿಂದ ನೋಡಲಾಗಲಿಲ್ಲ.
ಈ ಹವೇಲಿಯ ಇತಿಹಾಸವನ್ನು ಕೆದಕಿದಾಗ ಕೆಲವೊಂದು ಕುತೂಹಲಕಾರಿಯಾದ ವಿವರಗಳು ಅಂತರ್ಜಾಲದಲ್ಲಿ ಸಿಕ್ಕಿತು.

ಕ್ರಿ. ಶ. 1751 ರಿಂದ 1778 ರವರೆಗಿನ ಅಲ್ಲಿಯ ಅರಸ ಪ್ರತಾಪ್ ಸಿಂಗ್ II, ರಾಜ್ ಸಿಂಗ್ II, ಆರಿ ಸಿಂಗ್ ಮತ್ತು ಹಮೀರ್ ಸಿಂಗ್ ಅವರ ಆಳ್ವಿಕೆಯಲ್ಲಿ ಮೇವಾಡದ ಸಾಮ್ರಾಜ್ಯದ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದ ಶ್ರೀ ಅಮರ್ಚಂದ್ ಬದ್ವಾ ಅವರು “ಈ ಬಾಗೋರ್ ಕಿ ಹವೇಲಿ” ಯನ್ನು ನಿರ್ಮಿಸಿದರು. ಅಮರ್ಚಂದ್ ಬದ್ವಾ ಅವರ ಮರಣದ ನಂತರ, ಹವೇಲಿ ಮೇವಾಡದ ರಾಜಮನೆತನದ ವಶಕ್ಕೆ ಬಂದಿತು ಮತ್ತು ಅಂದಿನ ಮಹಾರಾಣರ ಸಂಬಂಧಿಯಾದ ನಾಥ್ ಸಿಂಗ್ ಅವರ ವಾಸಸ್ಥಾನವಾಯಿತು.

1878 ರಲ್ಲಿ, ಬಾಗೋರ್‌ನ ಮಹಾರಾಜ ಶಕ್ತಿ ಸಿಂಗ್ ಅವರು ತ್ರಿವಳಿ ಕಮಾನುಗಳ ಗೇಟ್‌ವೇ ನಿರ್ಮಿಸುವ ಮೂಲಕ ಹವೇಲಿಯನ್ನು ಮತ್ತಷ್ಟು ಸುಂದರವಾಗಿ ಕಾಣುವಂತೆ ವಿಸ್ತರಿಸಿದರು ಮತ್ತು ಅಂದಿನಿಂದ ಇದನ್ನು ಬಾಗೋರ್ ಕಿ ಹವೇಲಿ ಎಂದು ಕರೆಯಲಾಯಿತು. 1947 ರವರೆಗೆ, ಹವೇಲಿ ಮೇವಾಡದ ರಾಜ್ಯದ ವಶದಲ್ಲಿತ್ತು.

ಭಾರತದ ಸ್ವಾತಂತ್ರ್ಯದ ನಂತರ, ಈ ಹವೇಲಿಯನ್ನು ರಾಜಸ್ಥಾನ ಸರ್ಕಾರವು ಸರ್ಕಾರಿ ನೌಕರರ ವಸತಿಗಾಗಿ ಬಳಸಿಕೊಂಡಿತು. ಹಾಗಾಗಿ ಈ ಹವೇಲಿಯನ್ನು ಸುಮಾರು ನಲವತ್ತು ವರ್ಷಗಳ ಕಾಲ ನಿರ್ಲಕ್ಷಿಸಲಾಯಿತು ಮತ್ತು ನಂತರ 1986 ರಲ್ಲಿ, ಅದರ ಪುನಃಸ್ಥಾಪನೆ ಕಾರ್ಯವನ್ನು ಪಶ್ಚಿಮ ವಲಯ ಸಾಂಸ್ಕೃತಿಕ ಕೇಂದ್ರಕ್ಕೆ ಹಸ್ತಾಂತರಿಸಲು ಸರ್ಕಾರ ನಿರ್ಧರಿಸಿತು
.ಪಶ್ಚಿಮ ವಲಯ ಸಾಂಸ್ಕೃತಿಕ ಕೇಂದ್ರವು ಈ ಹವೇಲಿಯನ್ನು ಒಂದು ವಸ್ತು ಸಂಗ್ರಹಾಲಯವನ್ನಾಗಿ ಪರಿವರ್ತಿಸಿತು, ಅದೇ ಹಳೆಯ ವಾಸ್ತುಶಿಲ್ಪ ಶೈಲಿಯಲ್ಲಿ ರಾಯಲ್ ನೋಟವನ್ನು ಉಳಿಸಿಕೊಂಡಿದೆ. ಬಾಗೋರ್ ಕಿ ಹವೇಲಿಯನ್ನು ಕಟ್ಟಲು ಬಳಸಿದ ವಸ್ತುಗಳು ಸಾಂಪ್ರದಾಯಿಕ ವಸ್ತುಗಳಾದ ಲಖೋರಿ ಇಟ್ಟಿಗೆಗಳು ಮತ್ತು ಸುಣ್ಣದ ಗಾರೆಗಳನ್ನು ಒಳಗೊಂಡಿವೆ. ಅಸ್ತಿತ್ವದಲ್ಲಿರುವ ಭಿತ್ತಿಚಿತ್ರಗಳನ್ನು ಸಂರಕ್ಷಿಸಲಾಗಿದೆ.

ಯಾವುದೇ ಕಲಾ ಪ್ರೇಮಿಗಳು ಬಾಗೋರ್ ಕಿ ಹವೇಲಿಯನ್ನು ಅದರ ಅದ್ಭುತ ವಾಸ್ತುಶಿಲ್ಪ ಮತ್ತು ಕೌಶಲ್ಯಪೂರ್ಣ ಕರಕುಶಲತೆಗಾಗಿ ಅನ್ವೇಷಿಸಲು ಇಷ್ಟಪಡುತ್ತಾರೆ. ಮೇವಾಡದ ಶ್ರೀಮಂತ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಬಾಗೋರ್ ಕಿ ಹವೇಲಿ ಬೃಹತ್ ಪ್ರಾಂಗಣಗಳು, ಬಾಲ್ಕನಿಗಳು ಅಲಂಕಾರಿಕ ಕಮಾನು ಮಾರ್ಗಗಳು, ಮತ್ತು ಕಾರಂಜಿಗಳ ಅದ್ಭುತ ಸಂಗ್ರಹವಾಗಿದೆ.

                                            …...ಮುಂದುವರಿಯುವುದು


ಫೋಟೋ ಮತ್ತು ವಿಡಿಯೋ ಗಳಿಗಾಗಿ ಈ ಕೆಳಗಿನ ಲಿಂಕ್ ನೋಡಿರಿ.

https://drive.google.com/folderview?id=1oC3sEZUuzv9V_sPU1hibQw_CtQtd1Ozm

ಬುಧವಾರ, ಅಕ್ಟೋಬರ್ 16, 2019

ದಿನೇಶ ಉಪ್ಪೂರ:

*ರಾಜಸ್ಥಾನ ಯಾನ*

ಭಾಗ ೨

ಜಾಜಿಯಕ್ಕನ ಮಗಳು ಶ್ರುತಿ ಮತ್ತು ಜಾಜಿಯಕ್ಕನ ಅಣ್ಣನ ಸೊಸೆ ಅಪೇಕ್ಷಾ ಒಟ್ಟಿಗೇ ಸೇರಿ ಯೋಜನೆಯನ್ನು ರೂಪಿಸಿ ಮಾಡಿದ ವ್ಯವಸ್ಥಿತವಾದ ಟೂರ್ ಅದಾಗಿತ್ತು. ಬೆಂಗಳೂರಿನಿಂದಲೇ ಇಂಟರ್ನೆಟ್ ಮೂಲಕ ನೋಡಿ, ಸಂಬಂಧಿಸಿದ  ಹೋಟೆಲ್ಸ್, ಟೂರಿಸಂ ನವರನ್ನು ಸಂಪರ್ಕಿಸಿ ಆಯಾಯ ಊರಿನಲ್ಲಿ ಉಳಿದುಕೊಳ್ಳುವ, ತಿರುಗಾಡುವ, ಪ್ರಾಮುಖ್ಯ ಸ್ಥಳಗಳನ್ನು ಸಂದರ್ಶಿಸುವ ಒಂದು ಚೆಂದದ ಯೋಜನೆಯನ್ನು ಅವರು ರೂಪಿಸಿ ಕೊಂಡಿದ್ದರು.

ನನಗೆ ಅದು ಮೊದಲ ವಿಮಾನಯಾನ.
ವಿಮಾನದಲ್ಲಿ ಒಬ್ಬರಿಗೆ ಲಗ್ಗೇಜು ಗರಿಷ್ಟ 15 ಕೆಜಿ ಮತ್ತು ಕೈಯಲ್ಲಿ 7 ಕೆಜಿ ಮಾತ್ರ ಒಯ್ಯಲು ಬಿಡುತ್ತಾರೆ ಎಂದು ಹೇಳಿದ್ದರಿಂದ ನಾವು ಗಂಡಹೆಂಡತಿ ಇಬ್ಬರದು ಸೇರಿ ಒಂದು ಬ್ಯಾಗ್ ಮತ್ತು ನಮ್ಮ ಕೈಯಲ್ಲಿ ಸಣ್ಣ ಸಣ್ಣ  ಎರಡು ಕೈ ಚೀಲಗಳನ್ನು ಮಾಡಿಕೊಂಡಿದ್ದೆವು. ವಿಮಾನ ನಿಲ್ದಾಣಕ್ಕೆ ಬಂದು ನಮ್ಮ ಬ್ಯಾಗ್ ಗಳನ್ನು ಚೆಕ್ ಇನ್ ನಲ್ಲಿ ಕೊಟ್ಟದ್ದಾಯಿತು. ನಂತರ ನಮ್ಮ ಕೈಚೀಲದೊಂದಿಗೆ ನಮ್ಮ ತಪಾಸಣೆಯೂ ಆಯಿತು. ಮಾರಕಾಸ್ತ್ರಗಳು, ಎಲೆಕ್ಟ್ರಾನಿಕ್ ಉಪಕರಣಗಳು ತೆಗೆದುಕೊಂಡು ಹೋಗಲು ಅವಕಾಶವಿಲ್ಲವೆಂದು ತಿಳಿಸಿದರು. ಮೊಬೈಲ್ ಮೊಬೈಲ್ ಚಾರ್ಜರ್ ಬಿಟ್ಟರೆ ನಮ್ಮಲ್ಲಿ ಬೇರೆ ಏನೂ ಇರಲು ಇಲ್ಲ . ಅದಕ್ಕೆ ಅನುಮತಿಯಿದ್ದುದರಿಂದ ತೊಂದರೆ ಆಗಲಿಲ್ಲ. ಅಂತೂ ನಮ್ಮ ಎಲ್ಲ ತಪಾಸಣೆ ಮುಗಿದು ನಾವು ವಿಮಾನ ಇರುವ ಗ್ರೌಂಡ್ ತಲುಪಿದೆವು. ಹನ್ನೊಂದುವರೆಗೆ ಪ್ರಯಾಣ ಪ್ರಾರಂಭ. ನಮ್ಮದು ಸುಮಾರು ಎರಡು ಗಂಟೆ 20 ನಿಮಿಷದ ಪ್ರಯಾಣ.

ವಿಮಾನ ಹೊರಡುವ ಸಮಯವಾಯಿತು.
ಅಷ್ಟರಲ್ಲಿ ನಮ್ಮ ಜೊತೆ ಇರುವ ಡಾಕ್ಟರ್ ಮೂತ್ರ ಬರುತ್ತದೆ ಎಂದು ಟಾಯ್ಲೆಟ್ ಹುಡುಕಿಕೊಂಡು ಹೋದರು. ಅವರು ಬರಲಿಲ್ಲ ಎಂದು ಎಲ್ಲರೂ ಆತಂಕದಲ್ಲಿ ಇರುವಾಗ ಭಟ್ರು ಅವರನ್ನು ಹುಡುಕಿಕೊಂಡು ಬರುತ್ತೇನೆ ಎಂದು ಹೊರಟುಹೋದರು. ಮೊದಲು ಹೋದ ಡಾಕ್ಟರ್ ರವರು ಬಂದರೂ ಭಟ್ರು ಪತ್ತೆಯಿಲ್ಲ. ವಿಮಾನದ ವರೆಗೆ ಹೋಗಲು ಬಸ್ ಹೊರಟಾಯ್ತು. ಭಟ್ರು ಪತ್ತೆಯಿಲ್ಲ. ಎಲ್ಲರಿಗೂ ಆತಂಕ.

ಬಸ್ಸು ಇನ್ನೇನು ಹೊರಡುತ್ತದೆ ಅನ್ನುವಾಗ ಭಟ್ರು ನಗುತ್ತಾ ಓಡೋಡಿ ಬಂದು ಬಸ್ಸು ಹತ್ತಿದರು. ನಾವು ಆಗ "ಎಂತ ಮರ್ರೆ ನೀವು? ಕೊನೆಯ ಕ್ಷಣದಲ್ಲಿ ಕಣ್ಮರೆಯಾಗುವುದು" ಎಂದು ಹೇಳಿ ನಕ್ಕು ನಿರಾಳವಾದಾಗ, ಬಸ್ಸು ಹೊರಟು ನಮ್ಮನ್ನು ವಿಮಾನ ಇರುವಲ್ಲಿಗೆ ಹೋಗಿ ಇಳಿಸಿತು. ನಾವೆಲ್ಲ ವಿಮಾನದ ಒಳಗೆ ಹೋಗಿ ನಮ್ಮ ನಮ್ಮ ಸೀಟಿನಲ್ಲಿ ಕುಳಿತೆವು.

ಹೊಸದಾಗಿ ವಿಮಾನ ಯಾನವೆಂದರೆ ಬಹಳ ಹೆದರಿಕೆ, ಮೇಲೆ ಹೋದಂತೆ ಕೆಲವರಿಗೆ ಉಸಿರು ಕಟ್ಟುತ್ತದೆ, ತುಂಬಾ ಶಬ್ಧ ಇದ್ದು ಕಿವಿಯ ತಮ್ಮಟೆಗೆ ಪೆಟ್ಟಾಗುತ್ತದೆ, ವಿಮಾನ ನೆಲ ಬಿಟ್ಟು ಮೇಲೆ ಹಾರುವಾಗ ಮುಗ್ಗರಿಸುತ್ತದೆ ಎಂದೆಲ್ಲ ಹೇಳುವುದನ್ನು ಕೇಳಿದ್ದೆ. ಆದರೆ ನನಗೆ ಅದ್ಯಾವುದೂ ಆಗದೇ ಏನೂ ತೊಂದರೆ ಆಗಲಿಲ್ಲ.

ವಿಮಾನ ನಿಧಾನವಾಗಿ ಚಲಿಸಿ ವೇಗವನ್ನು ಪಡೆದುಕೊಳ್ಳುತ್ತಾ ಸಾಗಿದಾಗ ಮೊದಮೊದಲು ಏನೋ ಒಂದುತರಹದ ಉದ್ವೇಗವಿದ್ದರೂ ಅದು ನೆಲವನ್ನು ಬಿಟ್ಟು ಮೇಲೇರತೊಡಗಿದಾಗ ರೋಮಾಂಚನದ ಅನುಭವ. ಗಾಳಿಯಲ್ಲಿ ತೇಲುತ್ತಿರುವಂತೆ ಆಗುತ್ತಿತ್ತು.

ಹೊಸ ಅನುಭವ. ಕೆಳಗೆ ಹತ್ತಿಯ ಗುಪ್ಪೆಯಂತೆ ಹಾಸಿದ ಮೋಡದ ಮೇಲೆ, ಆಕಾಶದಲ್ಲಿ ತೇಲಿಕೊಂಡು  ಹೋಗುವ ರೋಮಾಂಚಕ ಅನುಭವ. ಮೋಡಗಳ ಕೆಳಗೆ ನೋಡುವಾಗ ಪ್ರಕೃತಿಯೆ ಚಿತ್ರ ಬಿಡಿಸಿದಂತೆ ಸಣ್ಣದಾಗಿ ಗೆರೆ ಎಳೆದಂತೆ ಹರಿಯುವ ನದಿಗಳು, ಅಡ್ಡಾದಿಡ್ಡಿಯಾಗಿ ಗೆರೆ ಹಾಕಿದಂತೆ ಕಾಣುವ ರಸ್ತೆಗಳು, ಗುಪ್ಪೆ ಗುಪ್ಪೆಯಾಗಿ ಎದ್ದು ನಿಂತ ಕಟ್ಟಡಗಳು  ಹಸಿರಾಗಿ ಕಾಣುವ ಮರಗಳು. ಕಾಡುಗಳು ಒಟ್ಟಾರೆ ಮೋಡಗಳ ಸಂದಿಯಲ್ಲಿ ಕೆಳಗಿನ ಭೂಮಿ ಸುಂದರ ತಾಣಗಳಾಗಿ ಕಣ್ಮನ ಸೆಳೆಯುತ್ತಿತ್ತು.

ಆದರೆ ವಿಮಾನವು ಆಗಾಗ ಸ್ವಲ್ಪ ಮೇಲೆ ಕೆಳಗೆ ಹೋದಾಗ ಏನೋ ತಳಮಳ, ಆ ಕಡೆಗೆ ಈ ಕಡೆಗೆ ವಾಲಿದಾಗ ಸ್ವಲ್ಪ ಮಗುಚಿಕೊಂಡಂತಾಗಿ ಕಳವಳವಾಗಿ ನಗು ಬರುತ್ತಿತ್ತು. ಆಗಾಗ ಮೋಡಗಳಿಗೆ ಡಿಕ್ಕಿಹೊಡೆದೋ ಇನ್ನೇನೋ ಆಗಿ ಸ್ವಲ್ಪ ಜರಕ್ ಆಗಿ ಹೋ ಏನಾಯ್ತೋ ಎನ್ನುವಂತೆ ಆಗುತ್ತಿತ್ತು. ಆಗ ಒಮ್ಮೆ ಹಿಂದಿನಿಂದ ಯಾರೋ ರಸ್ತೆಯಲ್ಲಿ ದೊಡ್ಡ ಹಂಪ್ ಇತ್ತೋ ಏನೋ ಎಂದಾಗ ಎಲ್ಲರೂ ನಕ್ಕು ಬಿಟ್ಟೆವು.

ಒಟ್ಟಾರೆ ವಿಮಾನದಲ್ಲಿ ಎರಡು ಗಂಟೆ 20 ನಿಮಿಷ ಕಳೆದದ್ದು ಗೊತ್ತಾಗಲೇ ಇಲ್ಲ. ನಮ್ಮ ವಿಮಾನವು ನಿಧಾನವಾಗಿ ರಾಜಸ್ಥಾನದ ಉದಯಪುರದ ವಿಮಾನ ನಿಲ್ದಾಣದಲ್ಲಿ ಕ್ಷೇಮವಾಗಿ ಇಳಿಯಿತು.

ಉದಯಪುರದ ಏರ್ ಪೋರ್ಟ್ ನಲ್ಲಿ ನಾವು ನಮ್ಮ ನಮ್ಮ ಲಗ್ಗೇಜುಗಳನ್ನು ತೆಗೆದುಕೊಂಡು ನಿಲ್ದಾಣ ದ ಹೊರಗೆ ಬಂದೆವು. ಮೂರು ಟ್ಯಾಕ್ಸಿ ಮಾಡಿಕೊಂಡು ದಾರಿಯಲ್ಲಿ ಸಿಕ್ಕಿದ ಒಂದು ಒಳ್ಳೆಯ ಹೋಟೆಲಿನಲ್ಲಿ ಊಟಮಾಡಿದೆವು. ಆಗಲೇ ಸುಮಾರು ಮೂರು ಗಂಟೆಯಾದ್ದರಿಂದ ಅಲ್ಲಿ ಇದ್ದ ರೊಟ್ಟಿ ಸಬ್ಜಿ , ಮೊಸರನ್ನ ನಮಗೆ ಮೃಷ್ಟಾನ್ನವಾಗಿ ಅದನ್ನೇ ತಿಂದೆವು. ಆದರೆ ಅನ್ನವು ಸರಿಯಾಗಿ ಬೇಯದೇ ಗಟ್ಟಿಗಟ್ಟಿಯಾಗಿ ಇರುವುದರಿಂದ ಹೋ, ಇಲ್ಲಿ ಅಕ್ಕಿಯನ್ನು ಇಷ್ಟೇ ಬೇಯಿಸಿ ಅನ್ನ ಮಾಡುವುದು, ಆದ್ದರಿಂದ ಇನ್ನು ಮುಂದೆ ಸ್ವಲ್ಪ ಜಾಗ್ರತೆ ಮಾಡಬೇಕು ಎಂದುಕೊಳ್ಳುವಂತಾಯಿತು. ನಂತರ ನಮಗಾಗಿ ಗೊತ್ತುಮಾಡಿದ್ದ ಎಂ ಜಿ ಅಪಾರ್ಟ್ ಮೆಂಟ್ ನಲ್ಲಿಯ ಆರ್ತ್ರುಷ್ ಎಂಬ ಮನೆಗೆ ಸುಮಾರು ಐದು ಗಂಟೆಯ ಹೊತ್ತಿಗೆ ಸೇರಿದೆವು
                                          *…..ಮುಂದುವರಿಯುವುದು*

ಪೋಟೋ, ವಿಡಿಯೋ ಗಾಗಿ ಕೆಳಗಿನ ಲಿಂಕ್ ನೋಡಿ

https://drive.google.com/folderview?id=1D6pOVyfTpnjl9If_A8JtFbDpgvJn13Wc

ಮಂಗಳವಾರ, ಅಕ್ಟೋಬರ್ 15, 2019

ದಿನೇಶ ಉಪ್ಪೂರ:

*ರಾಜಸ್ಥಾನ ಯಾನ*

ಭಾಗ ೧

"ರಾಜಸ್ಥಾನದ ಪ್ರವಾಸಕ್ಕೆ ಹೋಗ್ತೇವೆ ಅಂದಿದ್ರಲ್ಲ. ಎಲ್ಲಿಯವರೆಗೆ ಬಂತು?",

ನಾನು ಜಾಜಿಯಕ್ಕನನ್ನು ಕೇಳಿದೆ.

"ಹೋ, ಆಯ್ತಲ್ಲ ನಮ್ಮದೆಲ್ಲ ಟಿಕೆಟ್ ಆಗಿದೆ. ನನ್ನಣ್ಣನ ಸೊಸೆ ಎಲ್ಲ ವ್ಯವಸ್ಥೆಯನ್ನು ಮಾಡಿದ್ದಾಳೆ. ನೀನು ಮತ್ತೆ ಏನೂ ಹೇಳಲಿಲ್ಲ. ಅದಕ್ಕೆ ನಾವು ಮುಂದುವರಿಸಿದೆವು" ಅಂದರು ಜಾಜಿಯಕ್ಕ.

ಹೌದು, ನಾನು ನನ್ನ ಉದ್ಯೋಗವನ್ನು ಬಿಟ್ಟು ಮನೆಯಲ್ಲಿ ಕೂತದ್ದೇ 'ದೇಶ ಸುತ್ತು, ಕೋಶ ಓದು' ಎಂಬ ಗಾದೆಯಂತೆ *ಒಂದಷ್ಟು ಓದಬೇಕು, ಊರೂರು ತಿರುಗಾಡಬೇಕು* ಅಂತಲೆ.

ಆದರೆ ನನ್ನ ಆರೋಗ್ಯ ಸ್ವಲ್ಪ ಕೈಕೊಟ್ಟದ್ದರಿಂದ ಡಾಕ್ಟರ್ ಹೆಚ್ಚು ಶ್ರಮವಿರುವ ಕೆಲಸ ಮಾಡಬಾರದು, ಮೆಟ್ಟಿಲು ಹತ್ತಬಾರದು, ಭಾರ ಎತ್ತಬಾರದು ಅಂತೆಲ್ಲ ನಿರ್ಭಂದ ಹಾಕಿದ್ದರಿಂದ, ರಾಜಸ್ಥಾನ ಟೂರ್ ಗೆ ಬರ್ತೀಯಾ? ಅಂತ ಸುಮಾರು ನಾಲ್ಕು ತಿಂಗಳ ಹಿಂದೆ ಅವರು ಕೇಳಿದಾಗ ನಾನು ಏನೂ ಹೇಳದೆ ಸುಮ್ಮನಿದ್ದೆ.
ಆದರೆ ಅವಕಾಶವನ್ನು ಬಿಡಬಾರದು ಎಂದು ಮನಸ್ಸು ಹೇಳುತ್ತಲೇ ಇತ್ತು.

ಅವರು ರಾಜಸ್ಥಾನಕ್ಕೆ ಹೋಗ್ತೇನೆ ಎಂದು ಹೇಳಿದ ಸೆಪ್ಟೆಂಬರ್ ಇನ್ನೇನು ಬಂದೇ ಬಿಟ್ಟಿತು ಎನ್ನುವಾಗ, ನಾನು ಅವರ ಜೊತೆ ಹೊರಡುವ ಮನಸ್ಸು ಮಾಡಿ, ಒಮ್ಮೆ ಅವರ ಮನೆಗೆ ಹೀಗೇ ಸುಮ್ಮನೇ ಹೋದಾಗ, "ನಾನು ಬರುವುದಾದರೆ ಈಗ ಚಾನ್ಸು ಉಂಟಾ?, ಒಮ್ಮೆ ಕೇಳಿ ಕೇಳ್ತೀರಾ?  ಅಂತ ಕೇಳಿದೆ.

ಅವರು, "ಆಯಿತು ಮಗಳ ಹತ್ರ ಕೇಳಿ ಹೇಳ್ತೇನೆ" ಅಂದ್ರು.

ಜಾಜಿಯಕ್ಕ ನನ್ನ ಹಿತೈಷಿಗಳೂ ಆಪ್ತರೂ ಆದ ಎಸ್. ವಿ. ಭಟ್ರ ಹೆಂಡತಿ. ಅವರು ಮತ್ತು ಅವರ ಅಣ್ಣನ ಫ್ಯಾಮಿಲಿ ಒಟ್ಟಿಗೇ ಹೊರಟ ಟೂರ್ ಅದು. ಅಂದರೆ ಅವರು, ಅವರ ಗಂಡ ಭಟ್ರು,  ಮಗಳು ಅಳಿಯ ಮತ್ತು ಅವರ ಎರಡು ಮಕ್ಕಳು, ಮತ್ತು ಅವರ ಅಣ್ಣ ಮತ್ತು ಅಣ್ಣನ ಮಗ ಸೊಸೆ, ಸೊಸೆಯ ಅಪ್ಪ, ಮತ್ತು ಅವರ ಇಬ್ಬರು ಮೊಮ್ಮಕ್ಕಳು ಮಾತ್ರಾ ಅದರಲ್ಲಿದ್ದರು.

ಅವರು ಸಂಜೆ ಪೋನ್ ಮಾಡಿದರು, "ಬರುವುದಾದರೆ ಅಡ್ಡಿಲ್ಲವಂತೆ. ಆದರೆ ಫ್ಲೈಟ್ ಟಿಕೇಟ್ ನಮಗಿಂತ ಹೆಚ್ಚಾಗುತ್ತದಂತೆ" ಅಂದರು.

ನಾನು ಒಪ್ಪಿದೆ. ನಾನು ಮತ್ತು ನನ್ನ ಹೆಂಡತಿ ಸೇರಿ ಎರಡು ಟಿಕೆಟ್ ಮಾಡಲು ಹೇಳಿದೆ.
ನನ್ನ ಅನ್ನಪೂರ್ಣೆ, "ನಮಗೆ ಆಗುವುದಿಲ್ಲ ನಿಮಗೆ ಆರೋಗ್ಯ ಸರಿ ಇಲ್ಲ. ಮೊದಲೇ ನನಗೆ ವಿಮಾನ ಪ್ರಯಾಣ ಅಂದರೆ ಹೆದರಿಕೆ" ಎಂದು ಗೋಗರೆದರೂ, ನಾನು ಹೋಗಲೇ ಬೇಕೆಂದು ಹಟ ಹಿಡಿದೆ.

ಅಂತೂ ರಾಜಸ್ಥಾನಕ್ಕೆ ಟೂರ್ ಹೋಗುವುದು ನಿಶ್ಚಯವಾಯಿತು.

ಸೆಪ್ಟೆಂಬರ್‌‌ 26 ರಂದು ರಾತ್ರಿ ಬಸ್ಸಿನಲ್ಲಿ ಬೆಂಗಳೂರಿಗೆ ಹೋಗಿ, ಅಲ್ಲಿ ನನ್ನ ಮಗನ ಮನೆಯಲ್ಲಿ ಒಂದು ದಿನ ಇದ್ದು, 28 ರ ಬೆಳಿಗ್ಗೆ 9 ಗಂಟೆಗೆ ವಿಮಾನ ನಿಲ್ದಾಣವನ್ನು ಸೇರಿ ನಾವು, ಜಾಜಿಯಕ್ಕ ಮತ್ತು ಅವರ ಸಂಗಡಿಗರನ್ನು ಕೂಡಿಕೊಂಡೆವು.

ನಮ್ಮದು ಒಟ್ಟು ಹನ್ನೊಂದು ದಿನದ  ಪ್ರವಾಸ.

 28 ಕ್ಕೆ ರಾಜಸ್ಥಾನದ ಉದಯಪುರವನ್ನು ತಲುಪಿ ಅಲ್ಲಿ ಒಂದು ಅಪಾರ್ಟ ಮೆಂಟ್ ಲ್ಲಿ ಮೂರುದಿನ ಇದ್ದು ನಂತರ ಜೋಧಪುರಕ್ಕೆ ಹೋಗಿ ಅಲ್ಲಿ ಎರಡುದಿನ ಒಂದು ಮನೆಯಲ್ಲಿ ಇದ್ದು, ನಂತರ ಜೈಸಲ್ಮೀರದಲ್ಲಿ ಒಂದು ರಾತ್ರಿ, ಒಂದು ದಿನ ಮರುಭೂಮಿಯ ಟೆಂಟ್ ನಲ್ಲಿ ಇದ್ದು ಮತ್ತು ಜೈಸಲ್ಮೀರ್ ಲ್ಲಿ ಒಂದು ದಿನ, ಕೊನೆಯಲ್ಲಿ ಜೈಪುರಕ್ಕೆ ಬಂದು ಅಲ್ಲಿ ಮೂರು ದಿನ ಒಂದು ಕಲ್ಯಾಣಮಂದಿರದಲ್ಲಿ ಉಳಿದು ಅಲ್ಲಿಯ ಪ್ರೇಕ್ಷಣೀಯ ಸ್ಥಳಗಳನ್ನು ನೋಡಿ ಮತ್ತೆ ಬೆಂಗಳೂರಿಗೆ ಮತ್ತೆ ವಿಮಾನದಲ್ಲಿ ವಾಪಾಸು ಬರುವುದು.
                                             *….ಮುಂದುವರಿಯುವುದು*