ಮಂಗಳವಾರ, ಅಕ್ಟೋಬರ್ 22, 2019

ದಿನೇಶ ಉಪ್ಪೂರ:

# *ರಾಜಸ್ಥಾನ ಯಾನ*

ಭಾಗ ೮

 ಕೊನೆಗೆ ಭಟ್ರು,  "ನಾನೊಮ್ಮೆ ನೋಡ್ತೇನೆ. ಅಲ್ಲಿ ಇದ್ದದ್ದು ಹೌದಾದರೆ ನನಗೆ ಸಿಕ್ಕಿಯೇ ಸಿಕ್ಕುತ್ತದೆ" ಎಂದು ಎದ್ದು ಹೊರಟರು.

"ಇವರೆಲ್ಲ ನೋಡಿಯಾಯ್ತಲ್ಲ. ಅದು ಎಲ್ಲೋ ಬೇರೆ ಕಡೆ ಮಿಸ್ ಆಗಿದೆ. ಎಲ್ಲಿ ಇಟ್ಟೆ?" ಎಂದು ತಲೆ ಕೆರೆದುಕೊಂಡರು ಡಾಕ್ಟರ್.

ಭಟ್ಟರು ಹೋದವರು ದಿಂಬನ್ನು ಎತ್ತಿ ಕೆಳಗೆ ಹಾಕಿರಬೇಕು. ದಿಂಬಿನ ಕವರಿನ ಒಳಗೆ ಹುದುಗಿದ್ದ ವಾಜು ಪಟ್ ಎಂದು ಕೆಳಗೆ ಬಿತ್ತು.

ಅವರು ವಾಚನ್ನು ತೆಗೆದುಕೊಂಡು ಬಂದು, ನಗುತ್ತಾ, "ಹ್ವಾಯ್ ಡಾಕ್ಟ್ರೆ, ನಿಮ್ಮ ವಾಚ್ ನ್ನು ನಾನು ಹುಡುಕಿಕೊಟ್ಟರೆ ನನಗೆ ಏನು ಕೊಡುತ್ತೀರಿ?" ಎಂದು ಹೇಳುತ್ತಾ ಹಾಲ್ ಗೆ ಬಂದರು.

"ಹೋ ಸಿಕ್ತಾ? ಕೊಡಿ ಕೊಡಿ" ಎನ್ನುತ್ತಾ ಡಾಕ್ಟರರು ಅವರಿಂದ ವಾಚನ್ನು ಪಡೆದು ಅವರ ರೂಮಿಗೆ ಹೋದರು. ಅವರು ವಾಚನ್ನು ದಿಂಬಿನ ಕೆಳಗೆ ಎಂದು ಇಟ್ಟು ದಿಂಬಿನ ಕವರ್ ಒಳಗೆ ಹೋಗಿ ಸಿಕ್ಕಿ ಹಾಕಿಕೊಂಡಿತ್ತು.

ಆ ದಿನದ ಬೆಳಿಗ್ಗೆ ಜಾಜಿಯಕ್ಕ ಊರಿನಿಂದ ಬರುವಾಗ ಹೊರಿದು ತಂದ ರವೆಯಿಂದ ಉಪ್ಪಿಟ್ಟನ್ನು ಮಾಡಿ ಎಲ್ಲರಿಗೂ ಕೊಟ್ಟರು. ಅದರ ರುಚಿ ಅದ್ಭುತವಾಗಿತ್ತು. ಎರಡೆರಡು ಸಲ ಹಾಕಿಕೊಂಡು ತಿಂದೆವು. ಹಿಂದಿನ ದಿನದಂತೆ ಅಪೇಕ್ಷಾ ಇವತ್ತೂ ಬೆಳಿಗ್ಗೆ ಬೇಗ ವಾಕಿಂಗ್ ಗೆ ಹೋಗಿ ಬರುವಾಗ ಒಗ್ಗರಣೆ ಅವಲಕ್ಕಿಯನ್ನು ತಂದಿದ್ದರು ಅದನ್ನೂ ತಿಂದು ಹೊಟ್ಟೆಗಟ್ಟಿ ಮಾಡಿಕೊಂಡೆವು. ಚಾ ಮತ್ತು ಕಾಫಿಯನ್ನು ಕುಡಿದೆವು.

ಇಂದಿನ ನಮ್ಮ ಕಾರ್ಯಕ್ರಮ ಉದಯಪುರದ ಸುತ್ತಮುತ್ತ ಇರುವ ಪ್ರೇಕ್ಷಣೀಯ ಸ್ಥಳಗಳನ್ನು ನೋಡುವುದು. ಮುಖ್ಯವಾಗಿ ರೋಪ್ ವೇ ಯಲ್ಲಿ ಹೋಗಿ ಗುಡ್ಡದ ಮೇಲಿರುವ ಕರಣಿಮಾತಾ ದೇವಸ್ಥಾನವನ್ನು ನೋಡುವುದು. ಸಿಟಿ ಪ್ಯಾಲೇಸ್ ಮತ್ತು ಇತರ ಸ್ಥಳಗಳನ್ನು ನೋಡುವುದಾಗಿತ್ತು. ಸುಮಾರು ಒಂಭತ್ತು ಗಂಟೆಯ ಸುಮಾರಿಗೆ ಎಲ್ಲರೂ ಸಿದ್ಧರಾಗಿ ಹೊರಟು ಆಗಲೇ ಬಂದ ಟಿಟಿಯನ್ನು ಏರಿ ಮನಸಾಪುರದ ಕರಣಿಮಾತಾ ದೇವಸ್ಥಾನವನ್ನು ನೋಡಲು ಹೋದೆವು.

ಅದೊಂದು ದೊಡ್ಡ ಪರ್ವತದ ಮೇಲಿರುವ ದೇವಸ್ಥಾನ.

ಅದರ ಬಗ್ಗೆ ಗೂಗಲ್ ನೀಡಿದ ವಿವರದಂತೆ,

ದೀನ್ ದಯಾಳ್ ಉಪಾಧ್ಯಾಯ ಉದ್ಯಾನವನದ ಬಳಿಯ ಮಕ್ಲಾ ಬೆಟ್ಟದಲ್ಲಿರುವ ಶ್ರೀ ಮಾನಸಪುರದ ಕರಣಿ ಮಾತಾ ದೇವಸ್ಥಾನವು ತುಂಬಾ ಎತ್ತರದಲ್ಲಿದೆ, ಇದು ದೀನ್ ದಯಾಳ್ ಉದ್ಯಾನವನದಿಂದ ಪ್ರಾರಂಭವಾಗಿ ಸುಮಾರು 150 ಮೀಟರ್ ಮೆಟ್ಟಿಲುಗಳ ಮೂಲಕ ಹತ್ತಿಕೊಂಡು ಪ್ರವೇಶಿಸಬಹುದು ಅಥವ್ ರೋಪ್‌ವೇ ಮಾರ್ಗವಾಗಿ ಬೆಟ್ಟದ ಶಿಖರವನ್ನು ತಲುಪಬಹುದು. ನಾವು ಅದರ ಮೂಲಕವೇ ಹೋಗಿ ಬೆಟ್ಟದ ಶಿಖರವನ್ನು ತಲುಪಿದೆವು.

ನಮಗೆ ಅದೊಂದು ಹೊಸ ಅನುಭವ. ಈ ದೇವಾಲಯವು ಬೆಟ್ಟದ ತುದಿಯ ಹೆಚ್ಚಿನ ಭಾಗವನ್ನು ಆವರಿಸಿಕೊಂಡಿದೆ. ಸರೋವರಗಳು, ಅರಮನೆಗಳು, ವೈಟ್‌ವಾಶ್ಡ್, ಹತ್ತಿರವಿರುವ ಮನೆಗಳು, ಗುಲಾಬ್ ಬಾಗ್ ಮತ್ತು ಬೆಟ್ಟದ ಸುತ್ತಮುತ್ತಲಿನ ಎಲ್ಲಾ ಪ್ರದೇಶಗಳ ವಿಹಂಗಮ ನೋಟವು ಹೃದಯಂಗಮವಾಗಿದೆ. ಇಲ್ಲಿಂದ ಪಿಚೋಲಾ ಸರೋವರದ ನೀರಿನ ಛಾಯೆಗಳನ್ನು ನೋಡಬಹುದು.

ಈ ಕರಣಿ ಮಾತಾ ದೇವಾಲಯವನ್ನು "ಇಲಿಗಳ ದೇವಾಲಯ" ಎಂದೂ ಕರೆಯುತ್ತಾರೆ ,  ಕರಣಿಮಾತಾ ಮೂಲತಃ ಹಿಂದೂ ಸ್ತ್ರೀಯಾಗಿದ್ದು, ಕ್ರಿ.ಶ 1387 ರಲ್ಲಿ ಜೋಧಪುರ ಜಿಲ್ಲೆಯ ಸುವಾಪ್ ಗ್ರಾಮದಲ್ಲಿ ಚರಣ್ ರಜಪೂತ್ ಕುಲದ ಏಳನೇ ಮಗಳಾಗಿ ಜನಿಸಿದಳು. ಅವಳು ದುರ್ಗಾ ದೇವಿಯ ಅವತಾರ ಎಂದು ನಂಬಲಾಗಿತ್ತು. ಅವಳ ಮೂಲ ಹೆಸರು ರಿಧು ಬಾಯಿ. ಅವಳು ಸಾತಿಕಾ ಗ್ರಾಮದ ದೆಪೋಜಿ ಚರಣ್ ಅವರನ್ನು ಮದುವೆಯಾದಳು. ಆದರೆ ಕೇವಲ ಎರಡು ವರ್ಷಗಳ ದಾಂಪತ್ಯ ಜೀವನದ ನಂತರ ವಿರಕ್ತಳಾಗಿ ತಮ್ಮ ಸಹೋದರಿ ಗುಲಾಬ್ ಅವರನ್ನು ಪತಿಗೆ ಮದುವೆಮಾಡಿಸಿದರು ಮತ್ತು ಎಲ್ಲವನ್ನು ತೊರೆಯುವ ಬಯಕೆಯಿಂದ ಗ್ರಾಮವನ್ನು ಶಾಶ್ವತವಾಗಿ ತೊರೆದರು.

ಲೌಕಿಕ ವ್ಯವಹಾರಗಳನ್ನು ತೊರೆದು ಅಲೆಮಾರಿಗಳಂತೆ ಜೀವನ. ತನ್ನ ಅನುಯಾಯಿಗಳು ಮತ್ತು ಗುಂಪಿನೊಂದಿಗೆ ಸ್ವಲ್ಪ ಸಮಯದವರೆಗೆ ಅಲೆದಾಡಿದ ನಂತರ, ಅವಳು ದೇಶೋಕ್ ತಲುಪಿದಳು ಮತ್ತು ಅಂತಿಮವಾಗಿ ಇಲ್ಲಿ ನೆಲೆಸಿ ಅವಳು ಕರಣಿ ಮಾತಾ ಆದಳು ಎಂಬ ನಂಬಿಕೆ ಅಲ್ಲಿದೆ .

ಈ ದೇವಾಲಯದಲ್ಲಿ ಸುಮಾರು 25,000 ಸಂಖ್ಯೆಯಷ್ಟು ಇಲಿಗಳು ಇವೆ ಎಂದು ನಂಬಲಾಗುತ್ತಿದೆ. ಇದನ್ನು ಧಾರ್ಮಿಕವಾಗಿ "ಕಬ್ಬಾಸ್" ಎಂದು ಕರೆಯಲಾಗುತ್ತಾರೆ .

ಅದರ ಹಿಂದಿನ ಕತೆ ಹೀಗಿದೆ. ಒಮ್ಮೆ ಕರಣಿಮಾತಾ ಅವರ ಮಲತಾಯಿ, ಲಕ್ಷ್ಮಣ್, ಕೊಲಾಯತ್ ತಹಸಿಲ್‌,  ಕಪಿಲ್ ಸರೋವರ್‌ನಲ್ಲಿ ನೀರು ಕುಡಿಯುವ ಕಾಲದಲ್ಲಿ ಆಕಸ್ಮಿಕವಾಗಿ ನೀರಿಗೆ ಬಿದ್ದು ಸಾವನ್ನಪ್ಪಿದರಂತೆ. ಕರಣಿ ಮಾತಾ ಯಮನನ್ನು ಬೇಡಿ, ತನ್ನ ಮಗನನ್ನು ಇಲಿಯಂತೆ ಮರುಜನ್ಮ ತಾಳಿ ಮರಳಿ ಪಡೆಯಲು ಬಯಸಿದ್ದು ಅದಕ್ಕೆ ಯಮನು ಒಪ್ಪಿಕೊಂಡನಂತೆ. ಮತ್ತು ತನ್ನ ಎಲ್ಲ ಗಂಡು ಮಕ್ಕಳನ್ನು ಇಲಿಗಳಾಗಿ ಪುನರ್ಜನ್ಮ ಪಡೆಯಲು ಯಮನನ್ನು ಒಪ್ಪಿಸಿದಳಂತೆ.

ಆದ್ದರಿಂದ ಇಲ್ಲಿ ಇಲಿ (ಕಬ್ಬಾಗಳು) ಬಹಳ ಪವಿತ್ರವೆಂದು ಭಾವಿಸಲಾಗುತ್ತಿದೆ ಮತ್ತು ಅವುಗಳಿಗೆ ಸಿಹಿತಿಂಡಿಗಳನ್ನು ಕೊಡುವುದು ಸಂಪ್ರದಾಯವಾಗಿದೆ. ಆದರೆ ನಮಗೆ ಇಲಿಗಳ ಭೇಟಿ ಆಗಲಿಲ್ಲ. ಅಲ್ಲಿ ದೇವಸ್ಥಾನವು ನಾವು ಹೋದಾಗ ಪುನರ್ನಿಮಾಣ ಮಾಡಲಾಗುತ್ತಿತ್ತು

ಅಲ್ಲಿಯ ಪ್ರಕೃತಿ ಸೌಂದರ್ಯವನ್ನು ಸವಿದು ಸಾಕಷ್ಟು ಪೋಟೋ ವಿಡಿಯೋಗಳನ್ನು ತೆಗೆದುಕೊಂಡು ನಾವು ಮರಳಿ ರೋಪ್ ವೇ ಮೂಲಕ ಇಳಿದು ಬಂದೆವು.

ಅಲ್ಲಿಂದ ನಾವು ಪಿಚೋಲ ಸರೋವರ ಎಂಬ ಸುಂದರವಾದ ಸ್ಥಳಕ್ಕೆ ಬಂದೆವು. ಸರೋವರದ ಮಧ್ಯದಲ್ಲಿ ಇರುವ ಅರಮನೆ ಕಣ್ಮನ ಸೆಳೆಯಿತು. ಅದರ ನೀರು ಅತ್ಯಂತ ಶುಭ್ರವಾಗಿತ್ತು. ಬೆಂಗಳೂರಿನ ಕೆಲವು ಸರೋವರಗಳಂತೆ ಅಲ್ಲಿ ಪೇಪರ್ ಎಸೆದು ಗಲೀಜು ಮಾಡುವುದು, ಪ್ಲಾಸ್ಟಿಕ್ ಗಳನ್ನು ಎಸೆಯುವುದು ಮಾಡುತ್ತಿರಲಿಲ್ಲ. ಆದರೆ ದೋಣಿಯಲ್ಲಿ ಅರಮನೆಗೆ ಹೋಗುವ ಅವಕಾಶ ಇದ್ದರೂ ಸಮಯದ ಅಭಾವದಿಂದ ನಾವು ಹೋಗಲಿಲ್ಲ

ಅಲ್ಲಿ ನಾನು ಮತ್ತು ಎಸ್ ವಿ ಭಟ್ರು ಮತ್ತು ಡಾಕ್ಟರ್ ಸದಾಶಿವ ಮತ್ತು ಅವರ ಮೊಮ್ಮಗ ರಾಜಸ್ಥಾನೀ ಉಡುಪುಗಳನ್ನು ಹಾಕಿಕೊಂಡು ಪೋಟೋ ತೆಗೆಸಿಕೊಂಡೆವು. ಅಲ್ಲಿಂದ ನಾವು ಸಿಟಿ ಪ್ಯಾಲೇಸ್ ಗೆ ಹೋದೆವು

                           *……...ಮುಂದುವರಿಯುವುದು*


ಫೋಟೋ ಮತ್ತು ವಿಡಿಯೋ ಗಾಗಿ ಲಿಂಕ್ ನೋಡಿ,


https://drive.google.com/folderview?id=1BYr6BKIIs0sU0oh_boJBbpb6PzC5_9AO

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ