ಬುಧವಾರ, ಅಕ್ಟೋಬರ್ 30, 2019

ದಿನೇಶ ಉಪ್ಪೂರ:


# *ರಾಜಸ್ಥಾನ ಯಾನ*


ಭಾಗ ೧೬


ಒಂದು ಕ್ಷಣ ಏನು ಮಾಡಬೇಕೆಂದೇ ಗೊತ್ತಾಗಲಿಲ್ಲ.

ಆಗ ಅಪೇಕ್ಷಾ ಆ ಮನೆಯಲ್ಲಿ ಕೆಲಸಕ್ಕಿರುವ ಹುಡುಗನಿಗೆ ಪೋನ್ ಮಾಡಿ ವಿಷಯ ತಿಳಿಸಿ ಕೂಡಲೇ ಬರಲು ಹೇಳಿದರು.  ಅವನು ಬಂದು ಏನೂ ಆಗಲಿಲ್ಲ ಎನ್ನುವಂತೆ ಸೀದ ಅಡುಗೆಮನೆಗೆ ಹೋಗಿ ಡ್ರಾವರ್ ನಲ್ಲಿ ಇದ್ದ ಒಂದು ಸ್ಕ್ರೂ ಡ್ರೈವರ್ ನ್ನು ತೆಗೆದುಕೊಂಡು ಬಂದು ಬಾಗಿಲಿನ ಲಾಕ್ ಗೆ ಹಾಕಿದ ಎಲ್ಲ ಸ್ಕ್ರೂಗಳನ್ನು ಬಿಚ್ಚಿ ಬಾಗಿಲನ್ನು ತೆರೆದ. ಬಹುಷ್ಯ ಇದು ಮುಂಚೆಯೂ ಹಾಗೆ ಆಗುತ್ತಿತ್ತು. ಅಂತೂ ನಮಗೆಲ್ಲ ಒಮ್ಮೆ ಹೋದ ಜೀವ ಬಂದ ಹಾಗಾಯ್ತು. ಶ್ರುತಿ ಓಡಿ ಹೋಗಿ ಮಗು ಎದ್ದಿದೆಯಾ? ಎಂದು  ಮುಟ್ಟಿ ನೋಡಿ, ಸಮಾಧಾನದಿಂದ ವಾಪಾಸು ಬಂದಳು. ನಾವು ಇಸ್ಪೀಟ್ ಆಟವನ್ನು ಮುಂದುವರಿಸಿ, ಸಾಕು ಎನಿಸಿದಾಗ ಮುಗಿಸಿ ಮಲಗಿಕೊಂಡೆವು.


ದಿನಾಂಕ 3.10.19


         ಇವತ್ತು ನಮ್ಮ ಪ್ರಯಾಣ ಜಯ್ ಸಲ್ಮೇರ್ ದತ್ತ ಎಂದು ನಿರ್ಣಯವಾಗಿತ್ತು. ಇಡೀ ದಿನದ ಪ್ರಯಾಣ.  ಜಯ್ ಸಲ್ಮೇರ್ ದಿಂದ ಈಗಾಗಲೇ ಗೊತ್ತು ಮಾಡಿದಂತೆ ಅಲ್ಲಿಯ ಏಜೆನ್ಸಿಯವರನ್ನು ಕಂಡು ಬೇಕಾದ ಮಾಹಿತಿಯನ್ನು ಪಡೆದದ್ದಾಯಿತು. ಅಲ್ಲಿಂದ ತಾರ್ ಮರು ಭೂಮಿಯ ಪ್ರದೇಶಕ್ಕೆ ಹೋಗಿ ಸಂಜೆಯ ಸೂರ್ಯಾಸ್ತದ ದ ಸೊಬಗನ್ನು ಸವಿದು, ಒಂಟೆಯಲ್ಲಿ ಕುಳಿತು ಸವಾರಿ, ಹೊಯಿಗೆಯ ಮೇಲೆ ಜೀಪ್ ನಲ್ಲಿ ವೇಗದ ಸವಾರಿ ಮಾಡಿ, ರಾತ್ರಿ ಅಲ್ಲಿಯ ಟೆಂಟ್ ಒಂದರಲ್ಲಿ ಮಲಗಿ, ಬೆಳಿಗ್ಗೆ ಪುನಃ ಮರುಭೂಮಿಯಲ್ಲಿ ಇದ್ದು ಸೂರ್ಯೋದಯ ವನ್ನು ನೋಡಿ ಮರಳುವುದು ನಮ್ಮ ಯೋಜನೆಯಾಗಿತ್ತು.

ಅದರಂತೆ ಮರುಭೂಮಿಯನ್ನು ಪ್ರವೇಶಮಾಡಿದೆವು. ಆದರೆ ನಾನು ಅಂದುಕೊಂಡಂತೆ, ಮತ್ತು ಸಿನಿಮಾಗಳಲ್ಲಿ ನೋಡಿದಂತೆ ಅದು ಬರೀ ಹೊಯಿಗೆ ಮಾತ್ರಾ ವ್ಯಾಪಿಸಿಕೊಂಡ ಪ್ರದೇಶವಾಗಿರಲಿಲ್ಲ. ಅಲ್ಲಲ್ಲಿ ಹಸಿರು ಗಿಡಗಳ ಪೊದೆಗಳು ಇತ್ತು. ಆ ಪೊದೆಗಳ ಗಿಡದಲ್ಲಿ ಕಲ್ಲಂಗಡಿ ಹಣ್ಣಿನ ತರಹದ ಸಣ್ಣ ಸಣ್ಣ ಹಣ್ಣುಗಳೂ ಇತ್ತು. ಆ ಪೊದೆಗಳ ಮಧ್ಯದ ಹೊಯಿಗೆಯಲ್ಲಿ ನಮ್ಮ ವಾಹನ ಸಾಗುತ್ತಿತ್ತು. ನಮಗಾಗಿ ಗೊತ್ತುಮಾಡಿದ ಟೆಂಟ್ ನಲ್ಲಿ ನಮ್ಮ ನಮ್ಮ ಬ್ಯಾಗ್ ಗಳನ್ನು ಇರಿಸಿ, ಒಮ್ಮೆ ಕೈಕಾಲು ಮುಖಗಳನ್ನು ತೊಳೆದುಕೊಂಡು ಪ್ರೆಶ್ ಆದೆವು.

ಟೆಂಟ್ ಅಂದರೆ ಎದುರು ಮಾತ್ರಾ ಟಾರ್ಪಲ್ ಹೊದೆಸಿದ್ದರು, ಹಿಂದೆ ಎಟ್ಯಾಚ್ಡ್ ಬಾತ್ ರೂಮ್ ಕಟ್ಡಿದ,ಟೆಂಟ್ ಅದು. ಯು ಆಕಾರದಲ್ಲಿ ಅಂತಹಾ ನಲವತ್ತು ಐವತ್ತು ಟೆಂಟ್ ನ ಮನೆ ಇರುವ ಜಾಗ ಅದು. ಮಧ್ಯದಲ್ಲಿ ಒಂದು ವೇದಿಕೆ ಯಂತಹ ಜಾಗ ಇತ್ತು. ಆ ಸ್ಥಳವನ್ನು ಹೊಕ್ಕ ಕೂಡಲೇ ಬಲಬದಿಯಲ್ಲಿ ಅಡುಗೆ ಮಾಡುವ ಸ್ಥಳ ಮತ್ತು ಡೈನಿಂಗ್ ಹಾಲ್ ಇತ್ತು.

ನಮ್ಮ ಟಿಟಿಯ ಏಸಿ ಸರಿಯಾಗಿ ಕೆಲಸ ಮಾಡುತ್ತಿರಲಿಲ್ಲ ಎಂಬ ಅನುಭವ ನಮಗೆ ಆಗತೊಡಗಿತು. ಏಕೆಂದರೆ ನಾವು ಹೋದಲ್ಲೆಲ್ಲಾ ಮಳೆ ಬಂದದ್ದರಿಂದ ರಣಬಿಸಿಲಿಗೆ ಹೆಸರಾದ ರಾಜಸ್ಥಾನದಲ್ಲಿದ್ದರೂ ನಮಗೆ ಇಷ್ಟರವರೆಗೆ ಅದು ಕಷ್ಟವಾಗಿರಲಿಲ್ಲ. ಕೂಡಲೇ ಟಿಟಿಯ ಡ್ರೈವರ್ ಗೆ ತಿಳಿಸಿ ನಾವು ಈ ಮರುಭೂಮಿಯಿಂದ ಹೊರಡುವುದರ ಒಳಗೆ ಎಸಿಯನ್ನು ಸರಿಮಾಡಿಸಲೇ ಬೇಕು ಎಂದು ನಿಷ್ಠುರವಾಗಿ ಹೇಳಿದಮೇಲೆ ಅವನು ರಾತ್ರಿ ಪುನಹ ಜೈ ಸಲ್ಮೇರ್ ವರೆಗೆ ಹೋಗಿ ಏಸಿಯನ್ನು ರಿಪೇರಿ ಮಾಡಿಕೊಂಡು, ಬೆಳಿಗ್ಗೆ ನಾವು ಹೊರಡುವುದರ ಒಳಗೆ ಬಂದುಬಿಟ್ಟಿದ್ದ.

 ಆದಿನ ಸಂಜೆ ಒಂಟೆಯ ಮೇಲೆ ಕುಳಿತು, ಒಂಟೆ ಎಳೆಯುವ ಬಂಡಿಯಲ್ಲಿ ಕುಳಿತು ಅಥವ ಜೀಪಿನಲ್ಲಿ ಹೋಗಿ ಹೊಯಿಗೆ ಹಾಸಿನಿಂದ ಆವೃತವಾದ ಏರು ತಗ್ಗಿನ ವಿಶಾಲ ಜಾಗದಲ್ಲಿ ಸಾಗುವ ಕಾರ್ಯಕ್ರಮ.. ಎರಡು ಜೀಪಿನಲ್ಲಿ ನಾವು ಹೊರಟೆವು. ಒಂದು ಜೀಪಿನಲ್ಲಿ ವೇಗವಾಗಿ ಹೊಯಿಗೆಯಲ್ಲಿ ರೈಡ್ ಮಾಡಿಕೊಂಡು ಹೋಗುವವರು ಇನ್ನೊಂದು ಜೀಪಿನಲ್ಲಿ ನಾವು, ನಿಧಾನವಾಗಿ ಹೋಗುವವರು ಕುಳಿತುಕೊಂಡೆವು. ಆಗಲೇ ಸುಮಾರು ಐದುವರೆ ಗಂಟೆಯಾಗಿತ್ತು. ಆಗ ಭಯಂಕರವಾದ ಒಂದು ಘಟನೆ ನಡೆಯಿತು

ಅಲ್ಲಿ ಹೋಗಿ ಒಂದು ಟಾರ್ಪಲ್ ಚಪ್ಪರ ಹಾಕಿದ ಮಾಡಿನ ಬಳಿ, ಸ್ವಲ್ಪ ಹೊತ್ತು ಹೊಯಿಗೆಯ ಮೇಲೆ ಕುಳಿತಿದ್ದೆವಷ್ಟೆ. ಆಗ ಒಮ್ಮೆಲೆ ಗಾಳಿ ಬೀಸಲು ಶುರುವಾಯಿತು. ನೋಡನೋಡುತ್ತಿರುವಂತೆ ಗಾಳಿಯ ವೇಗ ಹೆಚ್ಚುತ್ತಾ ಹೋಗಿ, ಹೊಯಿಗೆಯ ಕಣಗಳು ಗಾಳಿಯ ವೇಗಕ್ಕೆ ಸುರುಳಿ ಸುರುಳಿಯಾಗಿ ಸುತ್ತಿ ಸುಂಟರಗಾಳಿಯಂತೆ ವೇಗವಾಗಿ ನುಗ್ಗುತ್ತಿತ್ತು.

 ಆಗ ಹಾರಿದ ಹೊಯಿಗೆ ಕಣಗಳು ಮೈಗೆ ರಾಚಿ ಉರಿಯುತ್ತಿತ್ತು. ನಾವು ನಿಂತ ಚಪ್ಪರವನ್ನು ಹಾರಿಸಿಕೊಂಡು ಹೋಗುತ್ತದೋ ಎಂಬಷ್ಟು ಗಾಳಿ ಜೋರಾಗಿ ಬೀಸುತ್ತಿದ್ದುದರಿಂದ ನಮಗೆ ಭಯವಾಯಿತು.


*………..ಮುಂದುವರಿಯುವುದು*


ಫೋಟೋ ಮತ್ತು ವಿಡಿಯೋಗಾಗಿ ಕೆಳಗಿನ ಲಿಂಕ್ ನೋಡಿ,

https://drive.google.com/folderview?id=1j-gNpudxlLdqPiFbGM4IELfEQqIhUtTC

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ