ಮಂಗಳವಾರ, ಅಕ್ಟೋಬರ್ 15, 2019

ದಿನೇಶ ಉಪ್ಪೂರ:

*ರಾಜಸ್ಥಾನ ಯಾನ*

ಭಾಗ ೧

"ರಾಜಸ್ಥಾನದ ಪ್ರವಾಸಕ್ಕೆ ಹೋಗ್ತೇವೆ ಅಂದಿದ್ರಲ್ಲ. ಎಲ್ಲಿಯವರೆಗೆ ಬಂತು?",

ನಾನು ಜಾಜಿಯಕ್ಕನನ್ನು ಕೇಳಿದೆ.

"ಹೋ, ಆಯ್ತಲ್ಲ ನಮ್ಮದೆಲ್ಲ ಟಿಕೆಟ್ ಆಗಿದೆ. ನನ್ನಣ್ಣನ ಸೊಸೆ ಎಲ್ಲ ವ್ಯವಸ್ಥೆಯನ್ನು ಮಾಡಿದ್ದಾಳೆ. ನೀನು ಮತ್ತೆ ಏನೂ ಹೇಳಲಿಲ್ಲ. ಅದಕ್ಕೆ ನಾವು ಮುಂದುವರಿಸಿದೆವು" ಅಂದರು ಜಾಜಿಯಕ್ಕ.

ಹೌದು, ನಾನು ನನ್ನ ಉದ್ಯೋಗವನ್ನು ಬಿಟ್ಟು ಮನೆಯಲ್ಲಿ ಕೂತದ್ದೇ 'ದೇಶ ಸುತ್ತು, ಕೋಶ ಓದು' ಎಂಬ ಗಾದೆಯಂತೆ *ಒಂದಷ್ಟು ಓದಬೇಕು, ಊರೂರು ತಿರುಗಾಡಬೇಕು* ಅಂತಲೆ.

ಆದರೆ ನನ್ನ ಆರೋಗ್ಯ ಸ್ವಲ್ಪ ಕೈಕೊಟ್ಟದ್ದರಿಂದ ಡಾಕ್ಟರ್ ಹೆಚ್ಚು ಶ್ರಮವಿರುವ ಕೆಲಸ ಮಾಡಬಾರದು, ಮೆಟ್ಟಿಲು ಹತ್ತಬಾರದು, ಭಾರ ಎತ್ತಬಾರದು ಅಂತೆಲ್ಲ ನಿರ್ಭಂದ ಹಾಕಿದ್ದರಿಂದ, ರಾಜಸ್ಥಾನ ಟೂರ್ ಗೆ ಬರ್ತೀಯಾ? ಅಂತ ಸುಮಾರು ನಾಲ್ಕು ತಿಂಗಳ ಹಿಂದೆ ಅವರು ಕೇಳಿದಾಗ ನಾನು ಏನೂ ಹೇಳದೆ ಸುಮ್ಮನಿದ್ದೆ.
ಆದರೆ ಅವಕಾಶವನ್ನು ಬಿಡಬಾರದು ಎಂದು ಮನಸ್ಸು ಹೇಳುತ್ತಲೇ ಇತ್ತು.

ಅವರು ರಾಜಸ್ಥಾನಕ್ಕೆ ಹೋಗ್ತೇನೆ ಎಂದು ಹೇಳಿದ ಸೆಪ್ಟೆಂಬರ್ ಇನ್ನೇನು ಬಂದೇ ಬಿಟ್ಟಿತು ಎನ್ನುವಾಗ, ನಾನು ಅವರ ಜೊತೆ ಹೊರಡುವ ಮನಸ್ಸು ಮಾಡಿ, ಒಮ್ಮೆ ಅವರ ಮನೆಗೆ ಹೀಗೇ ಸುಮ್ಮನೇ ಹೋದಾಗ, "ನಾನು ಬರುವುದಾದರೆ ಈಗ ಚಾನ್ಸು ಉಂಟಾ?, ಒಮ್ಮೆ ಕೇಳಿ ಕೇಳ್ತೀರಾ?  ಅಂತ ಕೇಳಿದೆ.

ಅವರು, "ಆಯಿತು ಮಗಳ ಹತ್ರ ಕೇಳಿ ಹೇಳ್ತೇನೆ" ಅಂದ್ರು.

ಜಾಜಿಯಕ್ಕ ನನ್ನ ಹಿತೈಷಿಗಳೂ ಆಪ್ತರೂ ಆದ ಎಸ್. ವಿ. ಭಟ್ರ ಹೆಂಡತಿ. ಅವರು ಮತ್ತು ಅವರ ಅಣ್ಣನ ಫ್ಯಾಮಿಲಿ ಒಟ್ಟಿಗೇ ಹೊರಟ ಟೂರ್ ಅದು. ಅಂದರೆ ಅವರು, ಅವರ ಗಂಡ ಭಟ್ರು,  ಮಗಳು ಅಳಿಯ ಮತ್ತು ಅವರ ಎರಡು ಮಕ್ಕಳು, ಮತ್ತು ಅವರ ಅಣ್ಣ ಮತ್ತು ಅಣ್ಣನ ಮಗ ಸೊಸೆ, ಸೊಸೆಯ ಅಪ್ಪ, ಮತ್ತು ಅವರ ಇಬ್ಬರು ಮೊಮ್ಮಕ್ಕಳು ಮಾತ್ರಾ ಅದರಲ್ಲಿದ್ದರು.

ಅವರು ಸಂಜೆ ಪೋನ್ ಮಾಡಿದರು, "ಬರುವುದಾದರೆ ಅಡ್ಡಿಲ್ಲವಂತೆ. ಆದರೆ ಫ್ಲೈಟ್ ಟಿಕೇಟ್ ನಮಗಿಂತ ಹೆಚ್ಚಾಗುತ್ತದಂತೆ" ಅಂದರು.

ನಾನು ಒಪ್ಪಿದೆ. ನಾನು ಮತ್ತು ನನ್ನ ಹೆಂಡತಿ ಸೇರಿ ಎರಡು ಟಿಕೆಟ್ ಮಾಡಲು ಹೇಳಿದೆ.
ನನ್ನ ಅನ್ನಪೂರ್ಣೆ, "ನಮಗೆ ಆಗುವುದಿಲ್ಲ ನಿಮಗೆ ಆರೋಗ್ಯ ಸರಿ ಇಲ್ಲ. ಮೊದಲೇ ನನಗೆ ವಿಮಾನ ಪ್ರಯಾಣ ಅಂದರೆ ಹೆದರಿಕೆ" ಎಂದು ಗೋಗರೆದರೂ, ನಾನು ಹೋಗಲೇ ಬೇಕೆಂದು ಹಟ ಹಿಡಿದೆ.

ಅಂತೂ ರಾಜಸ್ಥಾನಕ್ಕೆ ಟೂರ್ ಹೋಗುವುದು ನಿಶ್ಚಯವಾಯಿತು.

ಸೆಪ್ಟೆಂಬರ್‌‌ 26 ರಂದು ರಾತ್ರಿ ಬಸ್ಸಿನಲ್ಲಿ ಬೆಂಗಳೂರಿಗೆ ಹೋಗಿ, ಅಲ್ಲಿ ನನ್ನ ಮಗನ ಮನೆಯಲ್ಲಿ ಒಂದು ದಿನ ಇದ್ದು, 28 ರ ಬೆಳಿಗ್ಗೆ 9 ಗಂಟೆಗೆ ವಿಮಾನ ನಿಲ್ದಾಣವನ್ನು ಸೇರಿ ನಾವು, ಜಾಜಿಯಕ್ಕ ಮತ್ತು ಅವರ ಸಂಗಡಿಗರನ್ನು ಕೂಡಿಕೊಂಡೆವು.

ನಮ್ಮದು ಒಟ್ಟು ಹನ್ನೊಂದು ದಿನದ  ಪ್ರವಾಸ.

 28 ಕ್ಕೆ ರಾಜಸ್ಥಾನದ ಉದಯಪುರವನ್ನು ತಲುಪಿ ಅಲ್ಲಿ ಒಂದು ಅಪಾರ್ಟ ಮೆಂಟ್ ಲ್ಲಿ ಮೂರುದಿನ ಇದ್ದು ನಂತರ ಜೋಧಪುರಕ್ಕೆ ಹೋಗಿ ಅಲ್ಲಿ ಎರಡುದಿನ ಒಂದು ಮನೆಯಲ್ಲಿ ಇದ್ದು, ನಂತರ ಜೈಸಲ್ಮೀರದಲ್ಲಿ ಒಂದು ರಾತ್ರಿ, ಒಂದು ದಿನ ಮರುಭೂಮಿಯ ಟೆಂಟ್ ನಲ್ಲಿ ಇದ್ದು ಮತ್ತು ಜೈಸಲ್ಮೀರ್ ಲ್ಲಿ ಒಂದು ದಿನ, ಕೊನೆಯಲ್ಲಿ ಜೈಪುರಕ್ಕೆ ಬಂದು ಅಲ್ಲಿ ಮೂರು ದಿನ ಒಂದು ಕಲ್ಯಾಣಮಂದಿರದಲ್ಲಿ ಉಳಿದು ಅಲ್ಲಿಯ ಪ್ರೇಕ್ಷಣೀಯ ಸ್ಥಳಗಳನ್ನು ನೋಡಿ ಮತ್ತೆ ಬೆಂಗಳೂರಿಗೆ ಮತ್ತೆ ವಿಮಾನದಲ್ಲಿ ವಾಪಾಸು ಬರುವುದು.
                                             *….ಮುಂದುವರಿಯುವುದು*

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ