ಸೋಮವಾರ, ಅಕ್ಟೋಬರ್ 21, 2019

ದಿನೇಶ ಉಪ್ಪೂರ:
ರಾಜಸ್ಥಾನ ಯಾನ
ಭಾಗ ೭

ಅದರೆ ಅಲ್ಲಿಯ ದೇವಾಲಯಗಳ ಮತ್ತು ಅರಮನೆಗಳ ಹೆಚ್ಚಿನ ಸುಂದರ ಕೆತ್ತನೆಗಳನ್ನು ಅನ್ಯಮತೀಯರು, ಆಕ್ರಮಣದ ಸಮಯದಲ್ಲಿ ವಿರೂಪಗೊಳಿಸಿದ್ದನ್ನು ಕಂಡು ಬೇಸರಗೊಂಡೆವು.

ಪನ್ನಾ ಎಂಬ ಅರಮನೆಯ ದಾಸಿಯು  ಅರಸನ ಮಗು ಉದಯ ಸಿಂಹ ನನ್ನು ಉಳಿಸಲು, ತಾನು ಹೆತ್ತ ಮಗನನ್ನೇ ಬಲಿಕೊಟ್ಟು ಸ್ವಾಮಿನಿಷ್ಟೆಯನ್ನು ತೋರಿ ರಕ್ಷಿಸಿದ ಕತೆಯು ನಡೆದ ಮೂರಂತಸ್ಥಿನ ಅರಮನೆಯಿದ್ದ ಸ್ಥಳವನ್ನೂ ನೋಡಿದೆವು.

 ಅಲ್ಲಿಂದ ಮುಂದೆ ಪದ್ಮಿನಿಯ ಅರಮನೆಯನ್ನು ನೋಡಲು ಹೋದೆವು. ಅಥವಾ ರಾಣಿ ಪದ್ಮಿನಿಯ ಅರಮನೆಯು ಬಿಳಿ ಕಟ್ಟಡ ಮತ್ತು ಮೂರು ಅಂತಸ್ತಿನ ರಚನೆಯಾಗಿದೆ (19 ನೇ ಶತಮಾನದ ಮೂಲದ ಪುನರ್ನಿರ್ಮಾಣ). ಇದು ಕೋಟೆಯ ದಕ್ಷಿಣ ಭಾಗದಲ್ಲಿದೆ.  ಇಲ್ಲಿ ಹಲವಾರು ಮಂಟಪಗಳು ಅರಮನೆಯ ಚಾವಣಿಗಳನ್ನು ಕಿರೀಟವಾಗಿರಿಸುತ್ತವೆ ಮತ್ತು ನೀರಿನ ಕಂದಕವು ಅರಮನೆಯನ್ನು ಸುತ್ತುವರೆದಿದೆ.

ಅರಮನೆಯ ಈ ಶೈಲಿಯು ಜಲ ಮಹಲ್ (ನೀರಿನಿಂದ ಆವೃತವಾದ ಅರಮನೆ) ಪರಿಕಲ್ಪನೆಯೊಂದಿಗೆ ರಾಜ್ಯದಲ್ಲಿ ನಿರ್ಮಿಸಲಾದ ಇತರ ಅರಮನೆಗಳಿಗೆ ಮುಂಚೂಣಿಯಲ್ಲಿತ್ತು. ದಂತಕಥೆಗಳ ಪ್ರಕಾರ, ಈ ಅರಮನೆಯಲ್ಲಿಯೇ ಮಹಾರಾಣ ರಟ್ಟನ್ ಸಿಂಗ್ ಅವರ ಪತ್ನಿ ರಾಣಿ ಪದ್ಮಿನಿ ಅವರ ಕನ್ನಡಿ ಚಿತ್ರವನ್ನು ನೋಡಲು ಅಲಾವುದ್ದೀನ್‌ ಖಿಲ್ಜಿಗೆ ಅನುಮತಿಯನ್ನು ನೀಡಲಾಗಿರುತ್ತದೆ.

 ಪದ್ಮಿನಿಯ ಅಪಾರ ಸೌಂದರ್ಯವು ಅವನನ್ನು ಮೋಹಪರವಶನ್ನಾಗಿ ಮಾಡಿತು. ಮತ್ತು ಅದರಿಂದಲೆ ಅವನಿಂದ ಮಹಾರಾಣಾ ರಟ್ಟನ್ ಸಿಂಗ್ ಸರೆಹಿಡಿಯಲ್ಪಡುತ್ತಾನೆ. ಪದ್ಮಿನಿ ಉಪಾಯದಿಂದ ಅವನನ್ನು ಬಿಡಿಸಿಕೊಂಡು ಬರುತ್ತಾಳೆ. ಆದರೆ ನಂತರ ಖಿಲ್ಜಿ ಸೇನೆಯೊಂದಿಗೆ ಬಂದು ಮಾಡಿದ ಆಕ್ರಮಣದಿಂದ ರಟ್ಟನ್ ಸಿಂಗ್ ಕೊಲ್ಲಲ್ಪಟ್ಟನು ಮತ್ತು ರಾಣಿ ಪದ್ಮಿನಿ ಜೌಹರ್ (ಆತ್ಮಾಹುತಿ)ನ್ನು ತನ್ನ ಸಾವಿರಾರು ಸಖಿಯರೊಂದಿಗೆ ಎಸಗಿದ್ದಾರೆ ಎಂಬುದು ಇತಿಹಾಸ.

ನಂತರ ಅಲ್ಲಿಂದ ಮುಂದೆ ಹೋಗಿ, ಕೋಟೆಯ ಹೊರಭಾಗದಲ್ಲಿ ಯುದ್ಧ ನಡೆಯುವ ಅಥವ ಯುದ್ಧದ ತಾಲೀಮು ನಡೆಯುವ ಕಣ್ಣಿಗೆ ಕಾಣುವಷ್ಟು ವಿಶಾಲ ವಾದ ಸಮತಟ್ಟಾದ ಸ್ಥಳವನ್ನು ನೋಡಿದೆವು. ಅದರ ಆಚೆ ಬದಿಯಲ್ಲಿ ಯಾರೋ ಕುಂಬಕರ್ಣನಂತಹ ಭಾರೀ ದೇಹದ ವ್ಯಕ್ತಿ ಮಲಗಿದ್ದಂತೆ ಬೆಟ್ಟವೊಂದು ತೋರುತ್ತಿತ್ತು. ಅಲ್ಲಿ ಸೈನಿಕರು ಅಡಗಿ ಶತ್ರುಗಳನ್ನು ಸದೆ ಬಡೆಯುತ್ತಿದ್ದರಂತೆ.

ಈಗ ಆ ಬಯಲು ಪ್ರದೇಶದ ಒಂದು ಭಾಗದಲ್ಲಿ ಸೀತಾಫಲದ ಗಿಡದಿಂದ ನಾರು ತೆಗೆದು ಬಟ್ಟೆ ಮತ್ತು ಸೀರೆಯನ್ನು ತಯಾರಿಸುವ ಬುಡಕಟ್ಟು ಜನಾಂಗದವರು ವಾಸಿಸುತ್ತಿದ್ದಾರೆ ಎಂದು ಗೈಡ್ ನಿಂದ ತಿಳಿಯಿತು. ಇವುಗಳನ್ನೆಲ್ಲ ಬಹಳ ಆಸಕ್ತಿಯಿಂದ ನೋಡಿದೆವು. ಇಷ್ಟಾದರೂ ನಾವು ನೋಡಿದ್ದು ಇಡೀ ಕೋಟೆಯ ಹತ್ತನೇ ಒಂದರಷ್ಟೂ ಅಲ್ಲ ಎಂದು ಗೈಡ್ ಹೇಳಿದರು.. ಇನ್ನೂ ರಾಜ ಪರಂಪರೆಯವರು ನಡೆದಾಡಿದ ಬೇರೆ ಬೇರೆ ಸ್ಥಳಗಳನ್ನು, ಒಂದು ಸರೋವರದ ಮಧ್ಯದಲ್ಲಿ ಕಟ್ಟಿಸಿದ ಸುಂದರವಾದ ರಾಣಿ ಪದ್ಮಿನಿಯ ಮಹಲ್ ನ್ನು ದೂರದಿಂದ ನೋಡಿದೆವು.

ಸಂಜೆಯಾಯಿತು.

ಟಿಟಿಯಲ್ಲಿ ಕುಳಿತು ಅಪಾರ್ಟ್‌ಮೆಂಟ್ ಗೆ ಮರಳಿದೆವು. ರಾತ್ರಿ ಊಟದವರೆಗೆ ಸಮಯ ಇದೆ. ನಮ್ಮ ನಾಗರಾಜ್ ಮತ್ತು ಶ್ರುತಿಯ ಮಗ ಶುಶ್ರುತ ಚಿತ್ರ ಬಿಡಿಸುವುದರಲ್ಲಿ ತುಂಬಾ ಆಸಕ್ತಿ ಇದ್ದವನು, ಅಲ್ಲಿರುವ ಡ್ರಾಯಿಂಗ್ ಶೀಟ್ ತೆಗೆದುಕೊಂಡು ಅಂದವಾದ ಕುದುರೆ, ಸಿಂಹ, ಮನೆ ಮುಂತಾದ ಚಿತ್ರಗಳನ್ನು ಬಿಡಿಸಿ ಎಲ್ಲರಿಗೂ ತೋರಿಸಿದ. ಎಲ್ಲರ ಮೆಚ್ವುಗೆ ಪಡೆದ ಆ ಚಿತ್ರಗಳನ್ನು ಆ ಮನೆಯನ್ನು ಬಿಟ್ಟು ಹೊರಡುವಾಗ, ಓನರ್ ಋಷಿಯವರಿಗೆ ಉಡುಗೊರೆಯಾಗಿ ಕೊಟ್ಟು ಬಂದೆವು
ಕೆಲವರು ಇಸ್ಪೀಟು ಆಡಿದರು. ಮಕ್ಕಳು ಗಿಟಾರ್ ಬಾರಿಸಿದರು. ಅಷ್ಟರಲ್ಲಿ ಜಾಜಿಯಕ್ಕ ಮತ್ತು ಉಳಿದವರು ಸೇರಿ ಅನ್ನ ಸಾರು ತಯಾರು ಮಾಡಿದ್ದಾಯಿತು, ಮೊಸರನ್ನು ಮತ್ತು ಹಣ್ಣುಗಳನ್ನು ಅಂಗಡಿಯಿಂದ ತಂದಿದ್ದರು, ಮನೆಯಿಂದ ತಂದ ಉಪ್ಪಿನಕಾಯಿ ಹಾಕಿಕೊಂಡು ಎಲ್ಲರೂ ಗಡದ್ದಾಗಿ ಉಂಡು, ಅಂದು ನೋಡಿದ ಸ್ಥಳಗಳ ವಿವರವನ್ನು ಮೆಲುಕು ಹಾಕುತ್ತಾ ಮಲಗಿಕೊಂಡೆವು.

ದಿನಾಂಕ 30. 9.19

 ನಾವು ಬೆಳಿಗ್ಗೆ ಕಾಫಿಯನ್ನು ಕುಡಿಯುತ್ತ ಹಾಲ್ ನಲ್ಲಿ ಕುಳಿತಿದ್ದೆವು. ಆಗ ಒಂದು ಘಟನೆ ನಡೆಯಿತು.
ನಮ್ಮ ಡಾಕ್ಟರ್ ಅವಸರದಲ್ಲಿ ಬಂದು, "ನನ್ನ ವಾಚ್ ಕಳೆದುಹೋಗಿದೆ. ಅದನ್ನು ಯಾರಾದರೂ ನೋಡಿದಿರಾ? ನಾನು ನನ್ನ ತಲೆದಿಸೆಯ ದಿಂಬಿನ ಅಡಿಯಲ್ಲಿ ಇಟ್ಟಿದ್ದೆ. ಈಗ ಎಷ್ಟು ಹುಡುಕಿದರೂ ಸಿಗುತ್ತಿಲ್ಲ. ಯಾರಿಗಾದರೂ ಸಿಕ್ಕಿದೆಯಾ?  ಅಥವ ಬೇರೆ ಎಲ್ಲಾದರೂ ಇಟ್ಟಿದ್ದು ಯಾರಾದರೂ ನೋಡಿದ್ದೀರಾ?" ಎಂದು ಪ್ಯಾಂಟಿನ ಕಿಸೆಯ ಒಳಗೆ ಕೈ ಹಾಕಿ ಹುಡುಕಿದಂತೆ ಮಾಡುತ್ತಾ ಕೇಳಿದರು.
ನಾವು ಯಾರೂ ಅವರ ವಾಚನ್ನು ನೋಡಿರಲಿಲ್ಲ. ಅಲ್ಲಿಯೇ ಇರಬಹುದು ಎಂದು ಒಬ್ಬಿಬ್ಬರು ಅವರ ರೂಮಿಗೆ ಹೋಗಿ ಹಾಸಿಗೆಯ ಮೇಲೆ, ದಿಂಬಿನ ಕೆಳಗೆ, ಮಂಚದ ಕೆಳಗೆ ಹುಡುಕಿದರು ಆದರೆ ವಾಚ್ ಸಿಗದೇ ನಿರಾಶರಾಗಿ ಬಂದರು.
ರಾತ್ರಿ ಇಟ್ಟದ್ದು ಬೆಳಿಗ್ಗೆ ಒಳಗೆ ಹೇಗೆ ಮಾಯವಾಗುತ್ತದೆ? ಎಂದು ನಾವೆಲ್ಲ ಚಿಂತೆಗೊಳಗಾದೆವು.
                             *……..ಮುಂದುವರಿಯುವುದು*

ಫೋಟೋ ಮತ್ತು ವಿಡಿಯೋ ಗಾಗಿ ಕೆಳಗಿನ ಲಿಂಕ್ ನೋಡಿ.

https://drive.google.com/drive/folders/1xxWoTVOCbT9usdTxRz-6O573Zh9MsMl9?usp=sharing

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ