ಶುಕ್ರವಾರ, ಅಕ್ಟೋಬರ್ 25, 2019

ದಿನೇಶ ಉಪ್ಪೂರ:

 # *ರಾಜಸ್ಥಾನ ಯಾನ*

ಭಾಗ ೧೧

ದಿನಾಂಕ 1.10.19

ನಾವು ಬೆಳಿಗ್ಗೆ ಬೇಗನೇ ಎದ್ದು ನಿತ್ಯ ಕರ್ಮಗಳನ್ನೆಲ್ಲ ಮುಗಿಸಿಕೊಂಡು, ನಮ್ಮವರೇ ಮಾಡಿದ ಚಿತ್ರಾನ್ನವನ್ನು ತಿಂದು, ಕಾಫಿ/ ಟೀಯನ್ನು ಸೇವಿಸಿಕೊಂಡು ಎಂಟು ಗಂಟೆಯ ಹಾಗೆ ಬಂದ ನಮ್ಮ ಟಿಟಿ ಯನ್ನು ಹತ್ತಿ ಜೋದಪುರದತ್ತ ಹೊರಟದ್ದಾಯಿತು.

ದಾರಿಯಲ್ಲಿ ಅದೂ ಇದೂ ಮಾತಾಡುತ್ತಲೋ ನಮ್ಮಷ್ಟಕ್ಕೇ ಆಗಲೇ ನೋಡಿದ ತಾಣಗಳನ್ನು ಮೆಲುಕು ಹಾಕುತ್ತಲೋ ಅದೂ ಅಲ್ಲದಿದ್ದರೆ ನಿದ್ದೆ ಮಾಡುತ್ತಲೋ ಕಾಲ ಕಳೆದೆವು. ಮಧ್ಯ ಮಧ್ಯ ತಿಂಡಿತಿನಿಸು, ಬಾಳೆಹಣ್ಣು ಸೇಬು ಹಣ್ಣು ಇತ್ಯಾದಿಗಳನ್ನು ಒದಗಿಸುತ್ತಿದ್ದರು.

ನಮ್ಮ ವಾಹನ ನಿಧಾನವಾಗಿ ಗುಡ್ಡಬೆಟ್ಟಗಳ ಹಸಿರಿನ ದಾರಿ ಹಿಡಿದು ಒಂದು ದೊಡ್ಡದಾದ ದೇವಾಲಯದ ಮುಂದೆ ನಿಂತಿತು. ಎಡಭಾಗದಲ್ಲಿ ಜುಳುಜುಳು ಹರಿಯುವ ನದಿಯೂ ಇದ್ದು ಆ ದೃಶ್ಯ ಮನೋಹರವಾಗಿತ್ತು.

ಅದು ರಣಕಪುರದ ಜೈನಮಂದಿರ. ನಾವು ಪ್ರತೀ ಕಡೆಯಲ್ಲಿಯೂ ಮಾಡುವಂತೆ ಅಲ್ಲಿಯೂ ಒಬ್ಬ ಗೈಡನ್ನು ಗೊತ್ತುಮಾಡಿಕೊಂಡು ಅವನ ನಿರ್ದೇಶನದಂತೆ ಆ ಬೃಹತ್ ಜೈನ ಮಂದಿರದ ಅಂದವನ್ನು ಸವಿಯುತ್ತಾ ಹೋದೆವು.

ಗೂಗಲ್ ದೇವತೆಯ ಪ್ರಕಾರ ಆ ಜೈನ ಮಂದಿರದ ವಿವರಗಳು ಹೀಗಿದೆ.

ಜೈನರ ಐದು ಪ್ರಮುಖ ಯಾತ್ರಾಸ್ಥಳಗಳಲ್ಲಿ ರಣಕ್‍ಪುರ್ ಜೈನ ಮಂದಿರವು ಸಹ ಒಂದು. ಮೂರು ದಿಕ್ಕುಗಳಲ್ಲಿ ಎತ್ತರವಾದ ಅರಾವಳಿ ಪರ್ವತ ಶ್ರೇಣಿಗಳನ್ನು ಹೊಂದಿರುವ ಈ ದೇವಾಲಯವು ಆದಿನಾಥ ದೇವನಿಗಾಗಿ ನಿರ್ಮಿಸಲ್ಪಟ್ಟಿದೆ. ತೆಳು ಬಣ್ಣದ ಅಮೃತಶಿಲೆಯಿಂದ ನಿರ್ಮಾಣವಾಗಿರುವ ಈ ದೇವಾಲಯವು ನೋಡಲು ಅತ್ಯಂತ ಸುಂದರವಾಗಿದೆ. ಈ ದೇವಾಲಯದ ಅಡಿಪಾಯವು 48,000 ಚದರ ಅಡಿಗಳಷ್ಟು ವಿಸ್ತೀರ್ಣವನ್ನು ಹೊಂದಿದೆ. 80 ಗುಮ್ಮಟಗಳನ್ನು, 29 ಹಜಾರಗಳನ್ನು ಮತ್ತು 1,444 ಸ್ತಂಭಗಳನ್ನು ಹೊಂದಿರುವ ಈ ದೇವಾಲಯವು ಇದನ್ನು ಕಟ್ಟಿದ ಕಲಾವಿದರ ಕಲಾನೈಪುಣ್ಯತೆಯನ್ನು ಪ್ರವಾಸಿಗರಿಗೆ ಸಾರಿ ಸಾರಿ ಹೇಳುವಂತೆ ಹೆಮ್ಮೆಯಿಂದ ನಿಂತಿದೆ. ಇದೇ ದೇವಾಲಯದ ಸಂಕೀರ್ಣದಲ್ಲಿ ಪಾರ್ಶ್ವನಾಥ ಮತ್ತು ನೇಮಿನಾಥ ದೇವಾಲಯಗಳು ಮುಖ್ಯ ದೇವಾಲಯದತ್ತ ಮುಖ ಮಾಡಿ ನಿಂತಿವೆ.

ರಣಕ್‌ಪುರ್ ಜೈನ್ ಮಂದಿರ 15ನೇ ಶತಮಾನಕ್ಕೆ ಸೇರಿದ್ದು. ಆಧುನಿಕ ತಂತ್ರಜ್ಞಾನದ ಸಹಾಯವಿಲ್ಲದೆ ಇಂಥ ಅದ್ಭುತವಾದ ದೇವಾಲಯವನ್ನು ನಿರ್ಮಿಸಲು ಸಾಧ್ಯವೇ ಇಲ್ಲ ಎನಿಸಿಬಿಡುತ್ತದೆ. ಪ್ರಾಂಗಣದ ಕಂಬಗಳ ಎತ್ತರವನ್ನು ನೋಡಿದಾಗ– ಆಗಿನ ಕಾಲದಲ್ಲಿ ಈ ಕಂಬಗಳನ್ನು ಇಷ್ಟು ಎತ್ತರಕ್ಕೆ ಇಲ್ಲಿ ಹೇಗೆ ನಿಲ್ಲಿಸಿದರು? ಎಂಬ ಪ್ರಶ್ನೆ ಏಳುವುದು ಸಹಜ.

ಈ ಮಂದಿರದ ಪ್ರತಿ ಕಂಬವೂ ಅದ್ಭುತವಾದ ಕೆತ್ತನೆಗಳಿಂದ ಕೂಡಿದೆ. ಕೆತ್ತನೆಗಳಿಗೆ ಜೀವ ಇರುವಂತೆ ಭಾಸವಾಗುತ್ತವೆ. ಮೇಲ್ಛಾವಣಿಯಲ್ಲಿ ರಚಿಸಿರುವ ಒಂದೇ ದೇಹ ಐದು ಕಾಯಗಳ ಮಾನವ, ಕೃಷ್ಣನ ಕಾಳಿಂಗ ಮರ್ಧನ ಮುಂತಾದ ಹಲವಾರು ಕೆತ್ತನೆಗಳು ಅತ್ಯಂತ ಮನೋಹರವಾಗಿದೆ. ದೇವಾಲಯದ ಪ್ರಾಂಗಣ, ಒಳಾವರಣದ ಚಿತ್ತಾರಗಳು, ತೀರ್ಥಂಕರರ ಮೂರ್ತಿಗಳು, ಹೂಬಳ್ಳಿಗಳು, ಮಾಲೆಯಂಥ ಕೆತ್ತನೆಗಳು ಒಂದನ್ನೊಂದು ಮೀರಿಸುವಂತಿವೆ.

ಸುತ್ತ ಎತ್ತ ನೋಡಿದರೂ ಕಂಬಗಳ ಸಾಲು, ಅದರ ಮೇಲೆ ಇಂಚಿಂಚೂ ಬಿಡದೆ ಕೆತ್ತನೆ. ಮೇಲೆ, ಕೆಳಗೆ ಅಕ್ಕ ಪಕ್ಕ ಹೀಗೆ ಎಲ್ಲಿ ನೋಡಿದರೂ ಕಲೆಯೇ ಮೇಳೈಸಿದೆ ಇಲ್ಲಿ.

ನಾಲ್ಕು ಬೃಹತ್ ದ್ವಾರಗಳಲ್ಲೂ ನಾಲ್ಕು ಬೃಹತ್ತಾದ ಚಿತ್ತಾರವಿರುವ ಗುಮ್ಮಟಾಕಾರದ ಭವ್ಯ ಮೇಲ್ಛಾವಣಿ ಇದ್ದು ಈ ದೇವಾಲಯದ ನಾಲ್ಕು ದ್ವಾರಗಳಲ್ಲೂ ಭಗವಾನ್ ಆದಿನಾಥರ ಮೂರ್ತಿಯಿದೆ. ಸಂಪೂರ್ಣ ಗುಲಾಬಿ ಬಣ್ಣದ ಮಾರ್ಬಲ್‌ನಿಂದ ಕಂಗೊಳಿಸುವ ಈ ಮಂದಿರವು ಸಮಯ ಸರಿದಂತೆ ಬಣ್ಣ ಬದಲಾಯಿಸುತ್ತದೆ. ಸೂರ್ಯನ ಕಿರಣಗಳಿಗೆ ಸ್ಪಂದಿಸುತ್ತ ಗುಲಾಬಿ, ನೇರಳೆ ಹಾಗೂ ಬಂಗಾರದ ಬಣ್ಣಕ್ಕೆ ತಿರುಗುತ್ತದಂತೆ.

ಈ ದೇವಾಲಯದ ಇಂಚಿಂಚೂ  ಅಮೃತಶಿಲೆಯ ಅಪೂರ್ವ ಕೆತ್ತನೆಗಳಿಂದ ಕೂಡಿದ್ದು ದಕ್ಷಿಣಭಾರತದ ಶಿಲ್ಪಕಲೆ ಹಾಗೂ ಉತ್ತರದ ಶಿಲ್ಪಕಲೆ ಎರಡನ್ನೂ ಕಾಣಬಹುದಾಗಿದೆ. ‘ಸಹಸ್ರಪನಾ’ ಎಂದು ಕರೆಯಲಾಗುವ ಸಾವಿರ ಹೆಡೆಯ ಸರ್ಪವಂತೂ ಶಿಲ್ಪಕಲೆಯ ಸೋಜಿಗದಂತಿದೆ. ಅದನ್ನು ಕೆತ್ತಿದ ಪರಿ ಹಾಗೂ ಅದರ ಸಂಕೀರ್ಣತೆ ಎಂಥವರನ್ನೂ ಸೆಳೆದುಬಿಡುತ್ತದೆ.

ರಾಜಸ್ತಾನದ ಪ್ರಸಿದ್ಧ ರಾಜ, ಮಹಾರಾಣಾ ಪ್ರತಾಪಸಿಂಹನ ಮೂಲ ವಂಶಸ್ಥರ ಕಾಲದಲ್ಲಿ ಈ ಅದ್ಭುತ ದೇವಾಲಯದ ನಿರ್ಮಾಣವಾಯಿತು. ಅಂದರೆ ಮಹಾರಾಣಾ ಕುಂಭನ ಕಾಲದ್ದು ಎನ್ನುವ ಈ ಮಂದಿರ, ಧರಣ್ ಶಾ ಎನ್ನುವ ಜೈನ ವ್ಯಾಪಾರಿಯು ರಾಣಾ ಕುಂಭನ ಮಂತ್ರಿಯಾಗಿದ್ದ. ಆತನ ಕನಸೇ ಈ ಮನಮೋಹಕ ದೇವಾಲಯ ಎಂದು ಇತಿಹಾಸ ಹೇಳುತ್ತದೆ.

ಸೂರ್ಯನಾರಾಯಣ ದೇವಾಲಯವೆಂದು ಸಹ ಕರೆಯಲ್ಪಡುವ ಸೂರ್ಯ ದೇವಾಲಯವು ರಣಕ್‍ಪುರದ ಜೈನ ದೇವಾಲಯಕ್ಕೆ ಸಮೀಪದಲ್ಲಿ ನೆಲೆಗೊಂಡಿದೆ. ಈ ದೇವಾಲಯವು ಗತಕಾಲದ ಕಲಾವಿದರ ಶ್ರೇಷ್ಠ ಕಲಾಭಿವ್ಯಕ್ತಿಯನ್ನು ಅತ್ಯುತ್ತಮವಾಗಿ ಪ್ರತಿನಿಧಿಸುತ್ತದೆ. ಇದರ ಬಹುಭುಜಾಕೃತಿಯ ಗೋಡೆಯ ಮೇಲೆ ಸೈನಿಕರು, ಕುದುರೆಗಳು ಮತ್ತು ದೇವಾನುದೇವತೆಗಳನ್ನು ಕೆತ್ತಲಾಗಿದೆ. ಸೂರ್ಯದೇವನು ತನ್ನ ರಥದಲ್ಲಿ ಹೊರಟಿರುವಂತಹ ಮೂರ್ತಿಯನ್ನು ನಾವು ಇಲ್ಲಿ ಕಾಣಬಹುದು.

ಇವೆಲ್ಲವನ್ನೂ ನೋಡಿ ಕಣ್ತುಂಬಿಕೊಂಡ ನಾವು ಅಲ್ಲಿ ಭೋಜನಪ್ರಸಾದದ ವ್ಯವಸ್ಥೆ ಯೂ ಇದೆಯೆಂದು ಮೊದಲೇ ತಿಳಿದಿದ್ದು ಅದರ ಬಗ್ಗೆ ವಿಚಾರಿಸಿದಾಗ ಅಲ್ಲಿಯ ಭೋಜನಶಾಲೆಯಲ್ಲಿ ಸಣ್ಣಮೊತ್ತವನ್ನು ಸ್ವೀಕರಿಸಿ ಅತ್ಯಂತ ಉತ್ತಮವಾದ  ಚಪಾತಿ ಊಟವನ್ನು ಒದಗಿಸಿದರು. ಅದನ್ನು ಉಂಡು ಸ್ವಲ್ಪ ಹೊತ್ತು ವಿಶ್ರಾಂತಿ ಪಡೆದು ಅಲ್ಲಿಂದ ನಮ್ಮ ಪ್ರಯಾಣ ಹೊರಟಿತು. ಮುಂದೆ ದಾರಿಯಲ್ಲಿ ಒಂದು ವಿಚಿತ್ರವಾದ ದೇವಾಲಯವನ್ನು ನೋಡಿದೆವು.

……..ಮುಂದುವರಿಯುವುದು

ಫೋಟೋ ಮತ್ತು ವಿಡಿಯೋ ಗಾಗಿ ಕೆಳಗಿನ ಲಿಂಕ್‌ ನೋಡಿ

https://drive.google.com/folderview?id=1HTQ6o5lZlohD-VJXJZ2GezE1yUyUYfzE

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ