ಶನಿವಾರ, ಅಕ್ಟೋಬರ್ 19, 2019

ದಿನೇಶ ಉಪ್ಪೂರ:

#*ರಾಜಸ್ಥಾನ ಯಾನ*

ಭಾಗ ೫
            ದಿನಾಂಕ  29. 9 19.
ಆ ದಿನ ನಾವು ಚಿತ್ತೋರ್ ಗಢ ಕೋಟೆ ಮತ್ತು ಪದ್ಮಿನಿ ಪ್ಯಾಲೇಸ್ ಗಳನ್ನು ನೋಡುವುದು ಅಂತ ತೀರ್ಮಾನವಾಗಿತ್ತು.

ನಾವು ಅಲ್ಲಿ ಊಟಕ್ಕೆ ಪ್ರತಿಯೊಬ್ಬರಿಗೆ ಇನ್ನೂರ ಐವತ್ತು ರೂಪಾಯಿ ಮತ್ತು ಬೆಳಿಗ್ಗಿನ ಉಪಾಹಾರಕ್ಕೆ ನೂರು ರೂಪಾಯಿ ಕೊಡಬೇಕಿತ್ತು. ನಮ್ಮ ಪ್ರವಾಸವನ್ನು ರೂಪಿಸಿದ ಆಯೋಜಿಸಿದ ಅಪೇಕ್ಷಳಿಗೆ ಅದನ್ನು ಉಳಿಸಬಹುದು ಅಂತ ಕಂಡಿತು.

ಬೆಳಿಗ್ಗೆ ತಿಂಡಿಯನ್ನು ನಾವೇ ಮಾಡಿಕೊಂಡರೆ ಹೇಗೆ? ನಮ್ಮ ಹತ್ರ ಎಲೆಕ್ಟ್ರಿಕ್ ಸ್ಟವ್, ಪಾತ್ರೆಗಳು ಎಲ್ಲವೂ ಇದೆ. ಹೇಗೂ ಅಡುಗೆಮನೆ ಇದೆಯಲ್ಲ ಎಂಬ ಯೋಚನೆ ಬಂದು ಅವರ ಕುಕ್ ಗೆ ಅಡುಗೆಯನ್ನು ನಾವೇ ಮಾಡಿಕೊಳ್ಳುತ್ತೇವೆ, ಬೇಕಾದರೆ ಮಾತ್ರಾ ನಿಮಗೆ ತಿಳಿಸುತ್ತೇವೆ ಎಂದು ಹೇಳಿ ಕಳಿಸಿಬಿಟ್ಟರು. ಅವರು ಬೆಳಿಗ್ಗೆ ಬೇಗನೇ ಎದ್ದು ವಾಕಿಂಗ್ ನೆಪದಲ್ಲಿ ಬೀದಿಯ ಉದ್ದಕ್ಕೂ ನಡೆದು, ದಾರಿಯಲ್ಲಿ ಸಿಕ್ಕಿದ ಒಂದು ಹೋಟೆಲ್ ಗೆ ಹೋಗಿ ಒಗ್ಗರಣೆ ಅವಲಕ್ಕಿಯನ್ನು (ಪೋಹ) ಮತ್ತು ಡೋಕ್ಲ,ಕಚೋರಿ ಕಟ್ಟಿಸಿಕೊಂಡು ತಂದರು.

ಹಿಂದಿನ ದಿನದ ಚಪಾತಿಯೂ ಸಾಕಷ್ಟು ಇತ್ತು. ಜೊತೆಯಲ್ಲಿ ಬಾಳೆಹಣ್ಣು ಸೇಬುಹಣ್ಣು ಇತ್ತು. ಅದನ್ನೇ ತಿಂದು ಹೊಟ್ಟೆ ತುಂಬಿಸಿಕೊಂಡು ಪ್ರಯಾಣಕ್ಕೆ ಸಿದ್ಧರಾದೆವು.

ನಾವು ಪ್ರಯಾಣಕ್ಕಾಗಿ ಒಂದು ಟಿಟಿಯನ್ನು ಗೊತ್ತುಮಾಡಿದ್ದೆವು. ಅದರ ಡ್ರೈವರ್ ಯೋಗೀಶ ಅಂತ ಅವನ ಹೆಸರಿರಬೇಕು.  ಒಳ್ಳೆಯ ವ್ಯಕ್ತಿ. ನಾವು ಹೋದ ಅವಧಿಯು ನವರಾತ್ರಿಯಾದ್ದರಿಂದ ಅವನು ಉಪವಾಸ ಆಚರಿಸುತ್ತಿದ್ದ. ಅವನು ಜೈನ್ ಪಂಥದವನಾದ್ದರಿಂದ ಅದು ಅವರ ಅಲ್ಲಿಯ ಸಂಪ್ರದಾಯವಂತೆ. ಅವನು ಹೇಳಿದ ಸಮಯಕ್ಕೆ ಸರಿಯಾಗಿ ನಾವಿರುವಲ್ಲಿಗೆ ಬಂದು, ನಮ್ಮನ್ನು ಹತ್ತಿಸಿಕೊಂಡು ಚಿತ್ತೋರ್ ಕೋಟೆಯತ್ತ ಹೊರಟ. ಅವನ ಟಿಟಿ ಸ್ವಲ್ಪ ಹಳೆಯದಾಗಿದ್ದರೂ ತುಂಬಾ ಜಾಗ್ರತೆಯಿಂದ ಡ್ರೈವ್ ಮಾಡುತ್ತಿದ್ದ.

ನಮ್ಮ ಡಾಕ್ಟರ್ ರಿಗೆ ದಿನವೂ ಪೇಪರ್ ಓದುವ  ಅಭ್ಯಾಸ. ದಿನದ ಪ್ರಾರಂಭದಲ್ಲಿ ಒಮ್ಮೆ ಪೇಪರ್ ಮೇಲೆ ಕಣ್ಣು ಆಡಿಸದಿದ್ದರೆ ಏನೋ ಕಳೆದುಕೊಂಡ ಅನುಭವವಂತೆ. ಹಾಗಾಗಿ ದಾರಿಯಲ್ಲಿ ನಮ್ಮ ಡ್ರೈವರ್ ಗೆ ಪೇಪರ್ ಇರುವ ಅಂಗಡಿಯ ಬಳಿ ಸ್ವಲ್ಪ ನಿಲ್ಲಿಸಿ ಪೇಪರ್ ತರಲು ಹೇಳಿದರು. ಅವನು "ಅವರ ಊರಿನಲ್ಲಿ ಪೇಪರ್ ಬರುವುದೇ ಹತ್ತು ಗಂಟೆಯಾಗುತ್ತದೆ ಸರ್", ಅಂದ. ನಮಗೆ ಹಿಂದಿ ಸರಿಯಾಗಿ ಓದಲು ಬರದೇ ಇರುವುದರಿಂದ, ಇಂಗ್ಲೀಷ್ ಪೇಪರ್ ಬೇಕಾಗಿತ್ತು. ಆದರೆ ನಾಲ್ಕಾರು ಅಂಗಡಿ ಸುತ್ತಿದರೂ ಪೇಪರ್ ಸಿಗಲೇ ಇಲ್ಲ. "ನಿನ್ನೆಯದಾದರೂ ಅಡ್ಡಿಲ್ಲ ಮಾರಾಯಾ ನೋಡು" ಅಂದರು. ಕೊನೇಗೊಂದು ಅಂಗಡಿಯಲ್ಲಿ ಅಂತೂ ದಿನದ ಪೇಪರ್ ಸಿಕ್ಕಿತು ಅಂತ ಆಯಿತು.

ನಾನು ಕನ್ನಡ ಪೇಪರ್ ಬೇಕಾದರೆ ಡೌನ್ಲೋಡ್ ಮಾಡಿಕೊಡುತ್ತೇನೆ ಎಂದು ಆ ದಿನದ ಉದಯವಾಣಿಯನ್ನು ಅವರಿಗೆ (ಪಿಡಿಎಫ್) ವಾಟ್ಸಾಪ್ ಲ್ಲಿ ಕಳಿಸಿದೆ. ಆಮೇಲೆ ಪ್ರತೀ ದಿನ ಬೆಳಿಗ್ಗೆ ಅವರಿಗೆ ಪೇಪರ್ ಒದಗಿಸುವ ಕೆಲಸ ನನ್ನದಾಯಿತು. ಇಲ್ಲದಿದ್ದರೆ "ಹ್ವಾಯ್ ಉಪ್ಪೂರ್ರೆ, ಪೇಪರ್ ಎಲ್ಲಿ?" ಎಂದು ನೆನಪಿಸುತ್ತಿದ್ದರು.

   ನಾವು ಸುಮಾರು ಮಧ್ಯಾಹ್ನ ಹನ್ನೆರಡು ಗಂಟೆಯ ಹೊತ್ತಿಗೆ ಚಿತ್ತೋರ್ ಗಢವನ್ನು ತಲುಪಿದೆವು. ಅಲ್ಲಿಯೇ ಹತ್ತಿರದಲ್ಲಿ ಇದ್ದ ಒಂದು ಹೋಟೆಲ್ ಗೆ ಹೋಗಿ ಊಟವನ್ನು ಮಾಡಿಕೊಂಡೇ ಹೋಗುವ ಎಂದು ನಿರ್ಣಯವಾಯಿತು. ರಾಜಸ್ಥಾನದಲ್ಲಿ ಖಾರ ಮತ್ತು ಬೆಳ್ಳುಳ್ಳಿ ಹಾಕಿದ ಅಡುಗೆಗಳೇ ಹೆಚ್ಚು ಎಂದು ಮನಗಂಡ ನಾವು ನಮಗೆ ಬೇಕಾದಂತೆ ಮಾಡುವ ಹೋಟೆಲನ್ನು ಹುಡುಕಿಕೊಂಡು ಹೋಗಬೇಕಾಗಿತ್ತು.  ಡ್ರೈವರ್ ನ ಸಲಹೆಯಂತೆ (ಬಹುಷ್ಯ ನೆನಪಿಗೆ ಬರುವಂತೆ  ಕೃಷ್ಣವಿಲಾಸ್ ಎಂದು ಹೆಸರು) ಒಂದು ಹೋಟೆಲಿನಲ್ಲಿ ಊಟ ಮಾಡುವುದೆಂದು ನಿರ್ಧರಿಸಿ ಅಲ್ಲಿಗೆ ಹೋದೆವು.

  ಅಲ್ಲಿ ಹೋಟೆಲ್ ಗಳಲ್ಲಿ ಅನ್ನವನ್ನು ಸರಿಯಾಗಿ ಬೇಯಿಸದೇ ಇರುವುದೇ ನಮಗೆ ಒಂದು ದೊಡ್ಡ ತೊಡಕಾಗಿರುವುದರಿಂದ ಆ ಹೋಟೆಲ್ ಮಾಲಿಕಳಿಗೆ ಮುಂಚಿತವಾಗಿ ಹೋಗಿ, ಅನ್ನವನ್ನು ಮೆದುವಾಗುವಂತೆ ಮತ್ತೊಮ್ಮೆ ಬೇಯಿಸಲು ಹೇಳಿ, ನಾವು ರೊಟ್ಟಿ ಅಥವ ನಮಗೆ ಬೇಕಾದ ಅಲ್ಲಿ ಲಭ್ಯವಿರುವ ತಿಂಡಿಯನ್ನು ತಿಂದು, ಆಮೇಲೆ ಅನ್ನ ಮೊಸರನ್ನು ಉಂಡು ಕೋಟೆಯತ್ತ ಹೊರಟೆವು. ಊಟಮಾಡುವಾಗಲೇ ದೂರದಿಂದ ಕೋಟೆ ಇರುವ ಬೆಟ್ಟ ನಮ್ಮನ್ನು ಆಕರ್ಷಿಸಿತ್ತು. ಪದ್ಮಿನಿ ಸರೋವರ, ಮತ್ತು ಮೇಲಿನಿಂದ ಧಾರೆಧಾರೆಯಾಗಿ ಬೀಳುವ ಜಲಪಾತ ಸುಂದರವಾಗಿ ಕಾಣುತ್ತಿತ್ತು. ರಾಜಸ್ಥಾನದಲ್ಲಿ ಮಳೆಯಿಲ್ಲ ನೀರಿನ ಅಭಾವವಿದೆ ಎಂದು ಅಂದುಕೊಂಡಿದ್ದ ನಮಗೆ ಆ ನೀರು ಧಾರೆಧಾರೆಯಾಗಿ ಮೇಲಿನಿಂದ ಸರೋವರಕ್ಕೆ ಬೀಳುವ ಸೌಂದರ್ಯವನ್ನು ನೋಡಿ ಪುಳಕಿತರಾದೆವು.

   ಚಿತ್ತೋರ್ ಗಢ ಕೋಟೆ ಬಗ್ಗೆ ಕುತೂಹಲದಿಂದ ಅಂತರ್ಜಾಲದಲ್ಲಿ ಹುಡುಕಿದಾಗ ಬಹಳಷ್ಟು ಮಾಹಿತಿಗಳು  ಸಿಕ್ಕಿದವು. ಇದನ್ನು ನಿಮಗೆ ತಿಳಿಸದೇ ಇದ್ದರೆ ನನ್ನ ವಿವರಗಳು 'ಹೋದಪುಟ್ಟ ಬಂದ ಪುಟ್ಟ' ಅನ್ನುವಂತೆ ಆಗುವುದರಿಂದ ಸಾಧ್ಯವಾದಷ್ಟು ಮಾಹಿತಿಯನ್ನು ಸಂಗ್ರಹಿಸಿ ಕೊಡುತ್ತಿದ್ದೇನೆ. ಅಲ್ಲದೇ ನಾವು ಹೋದ ಪ್ರತಿಯೊಂದು ಸ್ಥಳದಲ್ಲೂ ನಾವು ಗೈಡ್ ಗಳನ್ನು ನಿಯೋಜಿಸಿಕೊಂಡಿದ್ದರೂ ಅವರು  ಹಿಂದಿಯಲ್ಲಿ ಹೇಳಿದ್ದರಿಂದ ಕೆಲವೊಂದು ಸಂಗತಿಗಳು ಸರಿಯಾಗಿ ಅರ್ಥವಾಗಿರಲಿಲ್ಲ, ಇನ್ನು ಕೆಲವು ಸಂಗತಿಗಳನ್ನು ಅಲ್ಲಿಯ ವಾತಾವರಣ, ಗೌಜಿಯಲ್ಲಿ, ನನ್ನ ಮೂಡ್ ನ ಕಾರಣದಿಂದ ನನಗೆ ಕೇಳಿಸಿಕೊಳ್ಳಲು ಸಾಧ್ಯವಾಗಿಲ್ಲ, ಕೆಲವು ಮರೆತು ಹೋಗಿದೆ.

ಹಾಗಂತ ಇಂತಹ ಪ್ರೇಕ್ಷಣೀಯ ಸ್ಥಳಗಳಿಗೆ ಹೋದಾಗ  ಗೈಡ್ ಗಳು ಅನಿವಾರ್ಯವಾಗುತ್ತಾರೆ. ಅವರು ಇಲ್ಲದಿದ್ದರೆ ನಾವು ಎಷ್ಟೇ ಓದಿಕೊಂಡಿದ್ದರೂ ಸ್ಥಳಕ್ಕೆ ಬೇಟಿ ನೀಡಿದಾಗ ಅವುಗಳು ಏನೇನೂ ಉಪಯೋಗಕ್ಕೆ ಬರುವುದಿಲ್ಲ. ಆಮೇಲೆ ಆ ಗೈಡ್ ಗಳು ಹೇಳುವಾಗ ಹೌದು ಹೌದು ಎನಿಸುತ್ತದೆ. ಇರಲಿ.

               *..........ಮುಂದುವರಿಯುವುದು*


ಪೋಟೋ ಮತ್ತು ವಿಡಿಯೋಗಳಿಗಾಗಿ ಲಿಂಕ್

https://drive.google.com/drive/folders/1sSxFJiu5QH7C9kx7VH_wtcrVNSPccO-J?usp=sharing

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ