ಬುಧವಾರ, ಅಕ್ಟೋಬರ್ 16, 2019

ದಿನೇಶ ಉಪ್ಪೂರ:

*ರಾಜಸ್ಥಾನ ಯಾನ*

ಭಾಗ ೨

ಜಾಜಿಯಕ್ಕನ ಮಗಳು ಶ್ರುತಿ ಮತ್ತು ಜಾಜಿಯಕ್ಕನ ಅಣ್ಣನ ಸೊಸೆ ಅಪೇಕ್ಷಾ ಒಟ್ಟಿಗೇ ಸೇರಿ ಯೋಜನೆಯನ್ನು ರೂಪಿಸಿ ಮಾಡಿದ ವ್ಯವಸ್ಥಿತವಾದ ಟೂರ್ ಅದಾಗಿತ್ತು. ಬೆಂಗಳೂರಿನಿಂದಲೇ ಇಂಟರ್ನೆಟ್ ಮೂಲಕ ನೋಡಿ, ಸಂಬಂಧಿಸಿದ  ಹೋಟೆಲ್ಸ್, ಟೂರಿಸಂ ನವರನ್ನು ಸಂಪರ್ಕಿಸಿ ಆಯಾಯ ಊರಿನಲ್ಲಿ ಉಳಿದುಕೊಳ್ಳುವ, ತಿರುಗಾಡುವ, ಪ್ರಾಮುಖ್ಯ ಸ್ಥಳಗಳನ್ನು ಸಂದರ್ಶಿಸುವ ಒಂದು ಚೆಂದದ ಯೋಜನೆಯನ್ನು ಅವರು ರೂಪಿಸಿ ಕೊಂಡಿದ್ದರು.

ನನಗೆ ಅದು ಮೊದಲ ವಿಮಾನಯಾನ.
ವಿಮಾನದಲ್ಲಿ ಒಬ್ಬರಿಗೆ ಲಗ್ಗೇಜು ಗರಿಷ್ಟ 15 ಕೆಜಿ ಮತ್ತು ಕೈಯಲ್ಲಿ 7 ಕೆಜಿ ಮಾತ್ರ ಒಯ್ಯಲು ಬಿಡುತ್ತಾರೆ ಎಂದು ಹೇಳಿದ್ದರಿಂದ ನಾವು ಗಂಡಹೆಂಡತಿ ಇಬ್ಬರದು ಸೇರಿ ಒಂದು ಬ್ಯಾಗ್ ಮತ್ತು ನಮ್ಮ ಕೈಯಲ್ಲಿ ಸಣ್ಣ ಸಣ್ಣ  ಎರಡು ಕೈ ಚೀಲಗಳನ್ನು ಮಾಡಿಕೊಂಡಿದ್ದೆವು. ವಿಮಾನ ನಿಲ್ದಾಣಕ್ಕೆ ಬಂದು ನಮ್ಮ ಬ್ಯಾಗ್ ಗಳನ್ನು ಚೆಕ್ ಇನ್ ನಲ್ಲಿ ಕೊಟ್ಟದ್ದಾಯಿತು. ನಂತರ ನಮ್ಮ ಕೈಚೀಲದೊಂದಿಗೆ ನಮ್ಮ ತಪಾಸಣೆಯೂ ಆಯಿತು. ಮಾರಕಾಸ್ತ್ರಗಳು, ಎಲೆಕ್ಟ್ರಾನಿಕ್ ಉಪಕರಣಗಳು ತೆಗೆದುಕೊಂಡು ಹೋಗಲು ಅವಕಾಶವಿಲ್ಲವೆಂದು ತಿಳಿಸಿದರು. ಮೊಬೈಲ್ ಮೊಬೈಲ್ ಚಾರ್ಜರ್ ಬಿಟ್ಟರೆ ನಮ್ಮಲ್ಲಿ ಬೇರೆ ಏನೂ ಇರಲು ಇಲ್ಲ . ಅದಕ್ಕೆ ಅನುಮತಿಯಿದ್ದುದರಿಂದ ತೊಂದರೆ ಆಗಲಿಲ್ಲ. ಅಂತೂ ನಮ್ಮ ಎಲ್ಲ ತಪಾಸಣೆ ಮುಗಿದು ನಾವು ವಿಮಾನ ಇರುವ ಗ್ರೌಂಡ್ ತಲುಪಿದೆವು. ಹನ್ನೊಂದುವರೆಗೆ ಪ್ರಯಾಣ ಪ್ರಾರಂಭ. ನಮ್ಮದು ಸುಮಾರು ಎರಡು ಗಂಟೆ 20 ನಿಮಿಷದ ಪ್ರಯಾಣ.

ವಿಮಾನ ಹೊರಡುವ ಸಮಯವಾಯಿತು.
ಅಷ್ಟರಲ್ಲಿ ನಮ್ಮ ಜೊತೆ ಇರುವ ಡಾಕ್ಟರ್ ಮೂತ್ರ ಬರುತ್ತದೆ ಎಂದು ಟಾಯ್ಲೆಟ್ ಹುಡುಕಿಕೊಂಡು ಹೋದರು. ಅವರು ಬರಲಿಲ್ಲ ಎಂದು ಎಲ್ಲರೂ ಆತಂಕದಲ್ಲಿ ಇರುವಾಗ ಭಟ್ರು ಅವರನ್ನು ಹುಡುಕಿಕೊಂಡು ಬರುತ್ತೇನೆ ಎಂದು ಹೊರಟುಹೋದರು. ಮೊದಲು ಹೋದ ಡಾಕ್ಟರ್ ರವರು ಬಂದರೂ ಭಟ್ರು ಪತ್ತೆಯಿಲ್ಲ. ವಿಮಾನದ ವರೆಗೆ ಹೋಗಲು ಬಸ್ ಹೊರಟಾಯ್ತು. ಭಟ್ರು ಪತ್ತೆಯಿಲ್ಲ. ಎಲ್ಲರಿಗೂ ಆತಂಕ.

ಬಸ್ಸು ಇನ್ನೇನು ಹೊರಡುತ್ತದೆ ಅನ್ನುವಾಗ ಭಟ್ರು ನಗುತ್ತಾ ಓಡೋಡಿ ಬಂದು ಬಸ್ಸು ಹತ್ತಿದರು. ನಾವು ಆಗ "ಎಂತ ಮರ್ರೆ ನೀವು? ಕೊನೆಯ ಕ್ಷಣದಲ್ಲಿ ಕಣ್ಮರೆಯಾಗುವುದು" ಎಂದು ಹೇಳಿ ನಕ್ಕು ನಿರಾಳವಾದಾಗ, ಬಸ್ಸು ಹೊರಟು ನಮ್ಮನ್ನು ವಿಮಾನ ಇರುವಲ್ಲಿಗೆ ಹೋಗಿ ಇಳಿಸಿತು. ನಾವೆಲ್ಲ ವಿಮಾನದ ಒಳಗೆ ಹೋಗಿ ನಮ್ಮ ನಮ್ಮ ಸೀಟಿನಲ್ಲಿ ಕುಳಿತೆವು.

ಹೊಸದಾಗಿ ವಿಮಾನ ಯಾನವೆಂದರೆ ಬಹಳ ಹೆದರಿಕೆ, ಮೇಲೆ ಹೋದಂತೆ ಕೆಲವರಿಗೆ ಉಸಿರು ಕಟ್ಟುತ್ತದೆ, ತುಂಬಾ ಶಬ್ಧ ಇದ್ದು ಕಿವಿಯ ತಮ್ಮಟೆಗೆ ಪೆಟ್ಟಾಗುತ್ತದೆ, ವಿಮಾನ ನೆಲ ಬಿಟ್ಟು ಮೇಲೆ ಹಾರುವಾಗ ಮುಗ್ಗರಿಸುತ್ತದೆ ಎಂದೆಲ್ಲ ಹೇಳುವುದನ್ನು ಕೇಳಿದ್ದೆ. ಆದರೆ ನನಗೆ ಅದ್ಯಾವುದೂ ಆಗದೇ ಏನೂ ತೊಂದರೆ ಆಗಲಿಲ್ಲ.

ವಿಮಾನ ನಿಧಾನವಾಗಿ ಚಲಿಸಿ ವೇಗವನ್ನು ಪಡೆದುಕೊಳ್ಳುತ್ತಾ ಸಾಗಿದಾಗ ಮೊದಮೊದಲು ಏನೋ ಒಂದುತರಹದ ಉದ್ವೇಗವಿದ್ದರೂ ಅದು ನೆಲವನ್ನು ಬಿಟ್ಟು ಮೇಲೇರತೊಡಗಿದಾಗ ರೋಮಾಂಚನದ ಅನುಭವ. ಗಾಳಿಯಲ್ಲಿ ತೇಲುತ್ತಿರುವಂತೆ ಆಗುತ್ತಿತ್ತು.

ಹೊಸ ಅನುಭವ. ಕೆಳಗೆ ಹತ್ತಿಯ ಗುಪ್ಪೆಯಂತೆ ಹಾಸಿದ ಮೋಡದ ಮೇಲೆ, ಆಕಾಶದಲ್ಲಿ ತೇಲಿಕೊಂಡು  ಹೋಗುವ ರೋಮಾಂಚಕ ಅನುಭವ. ಮೋಡಗಳ ಕೆಳಗೆ ನೋಡುವಾಗ ಪ್ರಕೃತಿಯೆ ಚಿತ್ರ ಬಿಡಿಸಿದಂತೆ ಸಣ್ಣದಾಗಿ ಗೆರೆ ಎಳೆದಂತೆ ಹರಿಯುವ ನದಿಗಳು, ಅಡ್ಡಾದಿಡ್ಡಿಯಾಗಿ ಗೆರೆ ಹಾಕಿದಂತೆ ಕಾಣುವ ರಸ್ತೆಗಳು, ಗುಪ್ಪೆ ಗುಪ್ಪೆಯಾಗಿ ಎದ್ದು ನಿಂತ ಕಟ್ಟಡಗಳು  ಹಸಿರಾಗಿ ಕಾಣುವ ಮರಗಳು. ಕಾಡುಗಳು ಒಟ್ಟಾರೆ ಮೋಡಗಳ ಸಂದಿಯಲ್ಲಿ ಕೆಳಗಿನ ಭೂಮಿ ಸುಂದರ ತಾಣಗಳಾಗಿ ಕಣ್ಮನ ಸೆಳೆಯುತ್ತಿತ್ತು.

ಆದರೆ ವಿಮಾನವು ಆಗಾಗ ಸ್ವಲ್ಪ ಮೇಲೆ ಕೆಳಗೆ ಹೋದಾಗ ಏನೋ ತಳಮಳ, ಆ ಕಡೆಗೆ ಈ ಕಡೆಗೆ ವಾಲಿದಾಗ ಸ್ವಲ್ಪ ಮಗುಚಿಕೊಂಡಂತಾಗಿ ಕಳವಳವಾಗಿ ನಗು ಬರುತ್ತಿತ್ತು. ಆಗಾಗ ಮೋಡಗಳಿಗೆ ಡಿಕ್ಕಿಹೊಡೆದೋ ಇನ್ನೇನೋ ಆಗಿ ಸ್ವಲ್ಪ ಜರಕ್ ಆಗಿ ಹೋ ಏನಾಯ್ತೋ ಎನ್ನುವಂತೆ ಆಗುತ್ತಿತ್ತು. ಆಗ ಒಮ್ಮೆ ಹಿಂದಿನಿಂದ ಯಾರೋ ರಸ್ತೆಯಲ್ಲಿ ದೊಡ್ಡ ಹಂಪ್ ಇತ್ತೋ ಏನೋ ಎಂದಾಗ ಎಲ್ಲರೂ ನಕ್ಕು ಬಿಟ್ಟೆವು.

ಒಟ್ಟಾರೆ ವಿಮಾನದಲ್ಲಿ ಎರಡು ಗಂಟೆ 20 ನಿಮಿಷ ಕಳೆದದ್ದು ಗೊತ್ತಾಗಲೇ ಇಲ್ಲ. ನಮ್ಮ ವಿಮಾನವು ನಿಧಾನವಾಗಿ ರಾಜಸ್ಥಾನದ ಉದಯಪುರದ ವಿಮಾನ ನಿಲ್ದಾಣದಲ್ಲಿ ಕ್ಷೇಮವಾಗಿ ಇಳಿಯಿತು.

ಉದಯಪುರದ ಏರ್ ಪೋರ್ಟ್ ನಲ್ಲಿ ನಾವು ನಮ್ಮ ನಮ್ಮ ಲಗ್ಗೇಜುಗಳನ್ನು ತೆಗೆದುಕೊಂಡು ನಿಲ್ದಾಣ ದ ಹೊರಗೆ ಬಂದೆವು. ಮೂರು ಟ್ಯಾಕ್ಸಿ ಮಾಡಿಕೊಂಡು ದಾರಿಯಲ್ಲಿ ಸಿಕ್ಕಿದ ಒಂದು ಒಳ್ಳೆಯ ಹೋಟೆಲಿನಲ್ಲಿ ಊಟಮಾಡಿದೆವು. ಆಗಲೇ ಸುಮಾರು ಮೂರು ಗಂಟೆಯಾದ್ದರಿಂದ ಅಲ್ಲಿ ಇದ್ದ ರೊಟ್ಟಿ ಸಬ್ಜಿ , ಮೊಸರನ್ನ ನಮಗೆ ಮೃಷ್ಟಾನ್ನವಾಗಿ ಅದನ್ನೇ ತಿಂದೆವು. ಆದರೆ ಅನ್ನವು ಸರಿಯಾಗಿ ಬೇಯದೇ ಗಟ್ಟಿಗಟ್ಟಿಯಾಗಿ ಇರುವುದರಿಂದ ಹೋ, ಇಲ್ಲಿ ಅಕ್ಕಿಯನ್ನು ಇಷ್ಟೇ ಬೇಯಿಸಿ ಅನ್ನ ಮಾಡುವುದು, ಆದ್ದರಿಂದ ಇನ್ನು ಮುಂದೆ ಸ್ವಲ್ಪ ಜಾಗ್ರತೆ ಮಾಡಬೇಕು ಎಂದುಕೊಳ್ಳುವಂತಾಯಿತು. ನಂತರ ನಮಗಾಗಿ ಗೊತ್ತುಮಾಡಿದ್ದ ಎಂ ಜಿ ಅಪಾರ್ಟ್ ಮೆಂಟ್ ನಲ್ಲಿಯ ಆರ್ತ್ರುಷ್ ಎಂಬ ಮನೆಗೆ ಸುಮಾರು ಐದು ಗಂಟೆಯ ಹೊತ್ತಿಗೆ ಸೇರಿದೆವು
                                          *…..ಮುಂದುವರಿಯುವುದು*

ಪೋಟೋ, ವಿಡಿಯೋ ಗಾಗಿ ಕೆಳಗಿನ ಲಿಂಕ್ ನೋಡಿ

https://drive.google.com/folderview?id=1D6pOVyfTpnjl9If_A8JtFbDpgvJn13Wc

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ