ಶನಿವಾರ, ಅಕ್ಟೋಬರ್ 26, 2019

ದಿನೇಶ ಉಪ್ಪೂರ:

*ರಾಜಸ್ಥಾನ ಯಾನ*

ಭಾಗ ೧೨

ಅದು ಬುಲೆಟ್ ಬಾಬಾ ಮಂದಿರ. ಅದೊಂದು ಸಣ್ಣ ದೈವಸ್ಥಾನ ಇದ್ದಹಾಗಿತ್ತು. ಆದರೆ ಅಲ್ಲಿ ದೇವರ ಬದಲು ಒಂದು ಬುಲೆಟ್ ಬೈಕಿಗೆ ಪೂಜೆ ಮಾಡುತ್ತಿದ್ದರು. ಬುಲೆಟ್ ನ ಮುಂದೆ ಒಂದು ದೊಡ್ಡ ಕಟ್ಟೆ ಇದ್ದು ಅಲ್ಲಿ ಒಂದು ಬಾಬಾನ ಫೋಟೋ ಮತ್ತು ಒಂದೆಡೆ ಬೆಂಕಿಯನ್ನು ಉರಿಸಿಟ್ಟಿದ್ದರು. ಒಬ್ಬರು ಆ ಬಾಬಾನ ಫೋಟೋಗೆ ಒಂದು ಬಾಟಲಿಯಲ್ಲಿ ಮದ್ಯವನ್ನು ಕುಡಿಸುವಂತೆ ಬಾಗಿಸಿ ಹಿಡಿದು ತೆಗೆದುಕೊಂಡು ಹೋದರು.

ಓಂ ಬನ್ನಾ ಅಥವ ಬುಲೆಟ್ ಬಾಬಾ ಮಂದಿರದ ಇತಿಹಾಸವನ್ನು ಗೂಗಲ್ ಹೀಗೆ ತಿಳಿಸುತ್ತದೆ.
ಬುಲೆಟ್ ಬಾಬಾ (ಇದನ್ನು ಶ್ರೀ ಓಂ ಬನ್ನಾ ಎಂದೂ ಕರೆಯುತ್ತಾರೆ) ಭಾರತದ ಜೋಧ್‌ಪುರದ ಬಳಿಯ ಪಾಲಿ ಜಿಲ್ಲೆಯಲ್ಲಿರುವ ಒಂದು ದೇವಾಲಯವಾಗಿದ್ದು, ಮೋಟಾರ್ಸೈಕಲ್ ರೂಪದಲ್ಲಿ ದೇವತೆಗೆ ಅರ್ಪಿತವಾಗಿದೆ.

2 ಡಿಸೆಂಬರ್ 1991 ರಂದು, ಓಂ ಬನ್ನಾ (ಹಿಂದೆ ಇವರನ್ನು ಓಂ ಸಿಂಗ್ ರಾಥೋಡ್ ಎಂದು ಕರೆಯುತ್ತಾರೆ) ಪಾಲಿಯ ಸ್ಯಾಂಡೇರಾವ್ ಬಳಿಯ ಬಾಂಗ್ಡಿ ಪಟ್ಟಣದಿಂದ ಚೋಟಿಲಾಕ್ಕೆ ಪ್ರಯಾಣಿಸುತ್ತಿದ್ದಾಗ, ತನ್ನ ಮೋಟಾರ್ ಸೈಕಲ್‌ನ ನಿಯಂತ್ರಣ ಕಳೆದುಕೊಂಡು ಮರಕ್ಕೆ ಡಿಕ್ಕಿ ಹೊಡೆದು ಸಾವನ್ನಪ್ಪಿದರು ಮತ್ತು ಅವರ ಮೋಟಾರ್ ಸೈಕಲ್ ಹತ್ತಿರದ ಕಂದಕಕ್ಕೆ ಬಿತ್ತು. ಅಪಘಾತದ ನಂತರದ ಬೆಳಿಗ್ಗೆ ಸ್ಥಳೀಯ ಪೊಲೀಸರು ಮೋಟಾರ್ ಸೈಕಲ್ ನ್ನು ಹತ್ತಿರದ ಪೊಲೀಸ್ ಠಾಣೆಗೆ ತಂದು ಇಟ್ಟರು. ಮರುದಿನ ಅದು ಕಣ್ಮರೆಯಾಗಿ ಘಟನೆಯ ಸ್ಥಳದಲ್ಲಿ ಮತ್ತೆ ಪತ್ತೆಯಾಯ್ತು. ಆಶ್ಚರ್ಯಗೊಂಡ ಪೊಲೀಸರು ಮತ್ತೊಮ್ಮೆ ಮೋಟಾರ್ ಸೈಕಲ್ ಅನ್ನು ಸ್ಟೇಶನ್ನಿಗೆ ತಂದರು. ಮತ್ತು ಅದರ ಇಂಧನ ಟ್ಯಾಂಕ್ ಅನ್ನು ಖಾಲಿ ಮಾಡಿ ಲಾಕ್ ಮಾಡಿ ಮತ್ತು ಚೈನ್ ತೆಗೆದು ಅಡಿಯಲ್ಲಿ ಇಟ್ಟರು.  ಆದರೂ ಮರುದಿನ ಬೆಳಿಗ್ಗೆ ಅದು ಮತ್ತೆ ಕಣ್ಮರೆಯಾಗಿದ್ದು, ಅಪಘಾತದ ಸ್ಥಳದಲ್ಲಿ ಕಂಡುಬಂತು.

ಸ್ಥಳೀಯ ಜನರಿಗೆ ಇದು ಪವಾಡವೆಂದು ಕಂಡುಬಂದಿತು ಮತ್ತು ಅವರು "ಬುಲೆಟ್ ಬೈಕ್" ಅನ್ನು ಪೂಜಿಸಲು ಪ್ರಾರಂಭಿಸಿದರು.
ಪ್ರತಿದಿನ ಹತ್ತಿರದ ಗ್ರಾಮಸ್ಥರು ಮತ್ತು ಪ್ರಯಾಣಿಕರು ಬೈಕು ಮತ್ತು ಅದರ ದಿವಂಗತ ಮಾಲೀಕ ಓಂ ಸಿಂಗ್ ರಾಥೋಡ್ ಅವರನ್ನು  ಪ್ರಾರ್ಥಿಸುತ್ತಾರೆ. ಮತ್ತು ಕೆಲವು ಚಾಲಕರು ಸಣ್ಣ ಮದ್ಯದ ಬಾಟಲಿಗಳನ್ನು ಸಹ ಸ್ಥಳದಲ್ಲಿ ನೀಡುತ್ತಾರೆ. ಮೋಟಾರುಬೈಕಿನಲ್ಲಿ ಕೆಂಪು ದಾರವನ್ನು ಕಟ್ಟುತ್ತಾರೆ.
ಅಲ್ಲಿಯೇ ಪಕ್ಕದಲ್ಲಿ ಇರುವ ಒಂದು ಹೋಟಲ್ ನಲ್ಲಿ ಚಾ ಕುಡಿದು ನಮ್ಮ ಪ್ರಯಾಣವನ್ನು ಮುಂದುವರಿಸಿದೆವು.

ರಾತ್ರಿ ಏಳರ ಸುಮಾರಿಗೆ ಜೋಧಪುರಕ್ಕೆ ತಲುಪಿ ಅಲ್ಲಿ ಮೊದಲೇ ಗೊತ್ತುಮಾಡಿದ್ದ ಆನಂದ ವಿಲ್ಲಾ ಎಂಬ ಮನೆಯನ್ನು ಪ್ರವೇಶಮಾಡಿ ವಿಶ್ರಾಂತಿ ಪಡೆದದ್ದಾಯಿತು. ಅಲ್ಲಿಯೂ ಅಡುಗೆ ಮಾಡಲು ಒಬ್ಬ ಕುಕ್ ಇದ್ದ. ನಮ್ಮ ಗೃಹಿಣಿಯರು ನಮಗೆ ಬೇಕಾದ ಹಾಗೆ ರಾತ್ರಿಗೆ ಅಡುಗೆ ಮಾಡಲು ಅವನಿಗೆ ನಿರ್ದೇಶನವನ್ನು ಕೊಟ್ಟರು. ಅವನು ಮಾಡಿದ ಅಡುಗೆಯನ್ನು ಉಂಡು ಮಲಗಿದೆವು.

ಅದು ಮೂರು ಅಂತಸ್ತಿನ ದೊಡ್ಡ ಬಂಗಲೆ. ಕೆಳ ಅಂತಸ್ತಿನಲ್ಲಿ ಒಂದು ದೊಡ್ಡ ಹಾಲ್ ಮತ್ತು ಎರಡು ಬೆಡ್ ರೂಮ್ ಇತ್ತು. ಮೊದಲ ಮತ್ತು ಎರಡನೇ ಅಂತಸ್ತಿನಲ್ಲೂ ಎರಡೆರಡು ಬೆಡ್ ರೂಮ್ ಗಳೂ ಮತ್ತು ಬಾಲ್ಕನಿಗಳೂ ಇದ್ದವು. ಅಲ್ಲಿ ವೈಫೈ ಕೂಡ ಇದ್ದುದರಿಂದ ನಮಗೆ ಅನುಕೂಲವಾಯಿತು. ಎದುರಿಗೆ ದೊಡ್ಡ ಕಾಡು ಇದ್ದು ನವಿಲುಗಳು ಕಡವೆಗಳೂ ಸಂಚರಿಸುವುದು ಕಾಣುತ್ತಿತ್ತು.

*……..ಮುಂದುವರಿಯುವುದು*

ಪೋಟೋ ಮತ್ತು ವಿಡಿಯೋಗಾಗಿ ಕೆಳಗಿನ ಲಿಂಕ್ ನೋಡಿ,

https://drive.google.com/folderview?id=1TpN3AOshITRr-21R_QldRlTtDOCH_zMj

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ