ಗುರುವಾರ, ಅಕ್ಟೋಬರ್ 31, 2019

ದಿನೇಶ ಉಪ್ಪೂರ:

# *ರಾಜಸ್ಥಾನ ಯಾನ*

ಭಾಗ ೧೭

ಗಾಳಿಯ ರಭಸಕ್ಕೆ ಹೊಯಿಗೆಯ ಕಣಗಳು  ವೇಗದಿಂದ ಬಂದು ನಮ್ಮ ಕಣ್ಣು, ಬಾಯಿಗೆಲ್ಲ ಹೋಗುತ್ತಿದ್ದುದರಿಂದ ಅತ್ಯಂತ ಜಾಗ್ರತೆವಹಿಸಬೇಕಾಗಿತ್ತು. ಆಗಲೇ ಕತ್ತಲಾಗಲು ಶುರುವಾಯಿತು. ಅದು ಮೋಡ ಆವರಿಸಿದ್ದರಿಂದ ಆದದ್ದು. ದೊಡ್ಡ ದೊಡ್ಡ ಮಳೆಯ ಹನಿಗಳು ಬೀಳಲು ಶುರುವಾಯಿತು. ಭಟ್ಟರು ಮಗುವನ್ನು ಹಿಡಿದುಕೊಂಡಿದ್ದರು.

 ಹೊಯಿಗೆಯ ಕಣಗಳು ಬಡಿಯಬಾರದು ಎಂದು ಒಂದು ಬಟ್ಟೆಯಿಂದ ಮಗುವನ್ನು ಮುಚ್ಚಿ ಗಟ್ಟಿಯಾಗಿ ಅಪ್ಪಿಕೊಂಡು ಹಿಡಿದಿದ್ದರು. ಜೀಪ್ ಡ್ರೈವರ್, "ಹೋಗುವ ಬನ್ನಿ ಮಳೆ ಬರುವ ಹಾಗಿದೆ" ಎಂದ. ಬಹುಷ್ಯ ಅವರಿಗೆ ಇದು ಮಾಮೂಲು. ನಮಗೆ ಆಶ್ಚರ್ಯ. ಮರುಭೂಮಿಯಲ್ಲೂ ಮಳೆ ಬರುವುದೇ ಅಂತ. ಅದನ್ನೇ ಅವನಲ್ಲಿ ಕೇಳಿದಾಗ ವರ್ಷಕ್ಕೆ ಒಂದೋ ಎರಡೋ ಹೀಗೆ ಬರುವುದಿದೆ ಎಂದ.

ಆಂತೂ ರಭಸದಿಂದ ಬೀಸುವ ಗಾಳಿಯಲ್ಲಿಯೇ ಹೆದರಿ ಹೆದರಿ ಜೀಪ್ ಹತ್ತಿ ಟೆಂಟ್ ನತ್ತ ಹೊರಟೆವು. ನಮ್ಮ ಜೀಪ್ ಗಾಳಿಯಲ್ಲಿ ಆಚೀಚೆ ವಾಲುತ್ತಾ ನಿಧಾನವಾಗಿ ಸಾಗಿ ಟೆಂಟ್ ತಲುಪಿತು. ನಾವು ಬದುಕಿದೆವು ಎಂದು ನಿಟ್ಟುಸಿರು ಬಿಟ್ಟೆವು. ಗುಡುಗು ಮಿಂಚು ಶುರುವಾಗಿ, ಗಾಳಿ ರಭಸದಿಂದ ಬೀಸುತ್ತಿತ್ತು.

 ಮಳೆ  ಒಂದೆ ಸಮನೆ ಸುರಿಯುತ್ತಿತ್ತು. ನಮ್ಮ ಜೊತೆಗೆ ಹೋದ ಇನ್ನೊಂದು ಜೀಪ್ ಬರಲಿಲ್ಲ. ನಮಗೆ ಮತ್ತೆ ಗಾಬರಿ ಶುರುವಾಯಿತು. ಪೋನ್ ಮಾಡುವ ಎಂದರೆ ನೆಟ್ ವರ್ಕ್ ಸಹ ಸಿಗುತ್ತಿರಲಿಲ್ಲ.
ಪಕ್ಕನೇ ಕರೆಂಟ್ ಹೋಯಿತು. ಗಾಳಿಯ ರಭಸಕ್ಕೆ ಟಾರ್ಪಲ್ ಪಟಪಟ ಹಾರುತ್ತಿತ್ತು. ನಾವಂತೂ ಭಯದಲ್ಲಿ ನಡುಗುತ್ತಿದ್ದೆವು. ನಾನು ಮತ್ತು ಅನ್ನಪೂರ್ಣೆ ವಿಷ್ಣುಸಹಸ್ರನಾಮವನ್ನು ಪಠಣಮಾಡಲು ಶುರುಮಾಡಿದೆವು. ಅಷ್ಟರಲ್ಲಿ ಪಕ್ಕದ ಟೆಂಟ್ ನಲ್ಲಿದ್ದ ಜಾಜಿಯಕ್ಕ ಮತ್ತು ಶ್ರುತಿ ಮಾತಾಡುತ್ತಿರುವುದು ಕೇಳಿಸಿತು. ನಾವೂ ಅಲ್ಲಿಗೇ ಹೋಗುವ ಎಂದಳು ಅನ್ನಪೂರ್ಣೆ. ನಾವು ನಿಧಾನವಾಗಿ ನಡೆದು ಅವರ ಟೆಂಟನ್ನು ತಲುಪಿದೆವು. ಸಂಪೂರ್ಣ ಕತ್ತಲೆ.  ಉಳಿದವರ ಸುದ್ದಿಯೇನಾದರೂ ಗೊತ್ತಾಯ್ತಾ? ಎಂದು ನಾನು ಜಾಜಿಯಕ್ಕನನ್ನು ಕೇಳಿದೆ.

ಅವರು ಹೌದು ಈಗ ಪೋನ್ ಮಾಡಿದ್ದರು. ಅಂತು ಈಗ ಟೆಂಟನ್ನು ಸುರಕ್ಷಿತವಾಗಿ ತಲುಪಿದರಂತೆ ಎಂದರು. ನಾನು "ಹೌದಾ, ದೇವರು ದೊಡ್ಡವನು" ಎಂದು ನೆಮ್ಮದಿಯ ನಿಟ್ಟುಸಿರು ಬಿಟ್ಟೆ.

ಅಂತು ಎಲ್ಲರೂ ಒಂದುಕಡೆ ಸೇರಿದೆವು. ಅಷ್ಟರಲ್ಲಿ ಮಳೆಯೂ ಸ್ವಲ್ಪ ಕಡಿಮೆಯಾಗತೊಡಗಿತು. ಗುಡುಗೂ ಮಿಂಚು ಮಾತ್ರಾ ಕಡಿಮೆಯಾಗಲಿಲ್ಲ

ಕರೆಂಟೂ ಬಂತು. ಹೊರಗಡೆ ನಡೆಯ ಬೇಕಾಗಿದ್ದ ಒಂದು ಸಾಂಸ್ಕ್ರತಿಕ ಕಾರ್ಯಕ್ರಮವು, ಆಗ ಮಳೆಬಂದುದರಿಂದ ಡೈನಿಂಗ್ ಹಾಲ್ ನಲ್ಲಿ ನಡೆಯಲು ಶುರುವಾಯಿತು. ಆವಾಗಲೇ ಬಾಗೋರ್ ಕಿ ಹವೇಲಿಯಲ್ಲಿ ನೋಡಿದ ರಾಜಸ್ಥಾನೀ ನೃತ್ಯವನ್ನು ಮತ್ತೊಮ್ಮೆ ನೋಡಿದೆವು.

ನಂತರ ಎಲ್ಲರೂ ಅಲ್ಲಿ ಊಟಮಾಡಿ ನಮ್ಮ ನಮ್ಮ ಟೆಂಟಿಗೆ ಹೋಗಿ ಮಲಗಿ ನಿದ್ರೆ ಮಾಡಿದೆವು.

ದಿನಾಂಕ 4.10.19

ಮಳೆ ಬಂದುದರಿಂದ ನಮಗೆ ಇನ್ನೊಮ್ಮೆ ಜೀಪ್ ರೈಡಿಂಗ್ ಅವಕಾಶವನ್ನು ಕೊಡಬೇಕು ಎಂದು ವಿನಂತಿಸಿದ ಮೇರೆಗೆ ನಮ್ಮನ್ನು ಬೆಳಿಗ್ಗೆ ಬೇಗ ಸೂರ್ಯೋದಯ ವನ್ನು ನೋಡಲು ಎರಡು ಜೀಪ್ ನಲ್ಲಿ ಕರೆದುಕೊಂಡು ಹೋದರು.ಆದರೆ ಹಿಂದಿನ ರಾತ್ರಿ ಚೆನ್ನಾಗಿ ಮಳೆಬಂದುದರಿಂದ ಹೊಯಿಗೆಯಲ್ಲಿ ದೂಳು ಇರಲಿಲ್ಲ. ನೀರಿನ ಅಂಶವು ಹೊಯಿಗೆಯಲ್ಲಿ ಇದ್ದು ಒದ್ದೆಯಾಗಿದ್ದುದರಿಂದ ವಾತಾವರಣವೂ ಚೆನ್ನಾಗಿತ್ತು. ವೇಗವಾಗಿ ಹೊಯಿಗೆಯಲ್ಲಿ ನಾಲ್ಕು ಸುತ್ತು ಹಳ್ಳ ದಿಣ್ಣೆಯಲ್ಲಿ ಜೀಪ್ ರೈಡಿಂಗ್ ಮಾಡಿಯಾಯಿತು. ಮತ್ತೆ ಒಂಟೆಸವಾರಿಯೂ ಆಯಿತು. ಗೌತಮ್ ಒಂಟೆಯ ಮೇಲೆ ಕುಳಿತು ಓಟದ ಸವಾರಿಯನ್ನೂ ಮಾಡಿದರು. ನಂತರ ಎಲ್ಲರೂ ಮತ್ತೆ ಟೆಂಟ್ ಗೆ ಮರಳಿದೆವು. ಅಲ್ಲಿಗೆ ಬಂದು ಪೂರಿ ಯನ್ನು ತಿಂದು ಚಾ ಕುಡಿದು ಮುಂದಿನ ಪ್ರಯಾಣಕ್ಕೆ ಸಿದ್ಧರಾದೆವು.

ನಂತರ ಅಲ್ಲಿಂದ ನಾವು ನಮ್ಮ ಟಿಟಿಯಲ್ಲಿ ಜಯ್ ಸಲ್ಮೇರ್ ಕಡೆಗೆ ಹೊರಟೆವು. ದಾರಿಯಲ್ಲಿ ಟೊನೋಟಾ ಟೆಂಪಲ್ ಮತ್ತು ಸೈನಿಕರ. ಲಾಂಗ್ವಾಲಾ ಮ್ಯೂಸಿಯಂ ನ್ನು ನೋಡಿಕೊಂಡು ಹೋಗುವುದು ಎಂದು ನಿಶ್ಚಯವಾಗಿತ್ತು. ಅದು ಪಾಕಿಸ್ತಾನದ ಗಡಿಗಿಂತ ಕೇವಲ ಹದಿನೈದು ಕಿಲೋಮೀಟರ್ ಹತ್ತಿರದಲ್ಲಿ ಇತ್ತು.

ನಾನು ಗಮನಿಸಿದ ಹಾಗೆ ಆ ಪ್ರದೇಶದಲ್ಲಿ ಲೆಕ್ಕವಿಲ್ಲದಷ್ಟು ಗಾಳಿಯಂತ್ರಗಳು ಇತ್ತು. ಬಹುಷ್ಯ ಹೆಚ್ಚಿನ ಪ್ರಮಾಣದಲ್ಲಿ ಗಾಳಿಯಂತ್ರದಿಂದ ಅಲ್ಲಿ ವಿದ್ಯುತ್ ನ್ನು ಪಡೆಯುತ್ತಾರೆ. ಆದರೆ ಗಾಳಿಯೂ ತುಂಬಾ ವೇಗದಿಂದ ಬೀಸುತ್ತಿದ್ದರೂ ನಮಗೆ ಹೊರಗೆ ತುಂಬಾ ಬಿಸಿಯ ಸೆಖೆಯ ಅನುಭವ ಆಗುತ್ತಿತ್ತು.

ಟೆನೋಟಾ ಮಾತಾ ಮಂದಿರದ ಬಗ್ಗೆ ಈ ಕೆಳಗಿನ ಮಾಹಿತಿಯನ್ನು ಸಂಗ್ರಹಿಸಿದೆ.

………..ಮುಂದುವರಿಯುವುದು.


ಫೋಟೋ ಮತ್ತು ವಿಡಿಯೋ ಗಾಗಿ ಕೆಳಗಿನ ಲಿಂಕ್ ನೋಡಿ,

https://drive.google.com/folderview?id=1OFc52eYiC_S8eJYg9DqgLAf6-A1URX5Q

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ