ಗುರುವಾರ, ಅಕ್ಟೋಬರ್ 17, 2019

ದಿನೇಶ ಉಪ್ಪೂರ:

*ರಾಜಸ್ಥಾನ ಯಾನ*

ಭಾಗ ೩

ಅದೊಂದು ಮೊದಲ ಮಹಡಿಯಲ್ಲಿರುವ ವಿಶಾಲವಾದ ಸುಸಜ್ಹಿತವಾದ ಮನೆ.  ಒಳಗೆ ಹೋಗುತ್ತಿದ್ದಂತೆ ದೊಡ್ಡದಾದ ಒಂದು ಹಾಲ್. ಸುತ್ತಲೂ ಮೂರು ಬಾತ್ ರೂಮ್ ಸೌಕರ್ಯವಿರುವ ದೊಡ್ಡ ದೊಡ್ಡ ರೂಮುಗಳು ಮತ್ತು ದೊಡ್ಡ ಅಡುಗೆ ಮನೆ. ಮಕ್ಕಳಿಗೆ ಖುಷಿಯಾಗುವಂತೆ ಮಲಗಲು ರೈಲಿನಲ್ಲಿರುವಂತೆ ಅಂತಸ್ತು ಇರುವ ಮಂಚಗಳು.

ಅದರ ಓನರ್ ಒಬ್ಬ ಕಲಾವಿದ. ಹೆಸರು ರಿಷಿ ಅಂತೆ. ವರ್ಷದಲ್ಲಿ ಮೂರುನಾಲ್ಕು ತಿಂಗಳು ಊರೂರು ತಿರುಗುತ್ತಾರಂತೆ. ಅಲ್ಲಿ ಇರುವ ಅವಧಿಯಲ್ಲಿ ಆಗಾಗ ಸಂಗೀತ, ಸಭೆ ಚಿತ್ರಕಲಾಗಾರ ಮುಂತಾದ ಹಲವು ಕಾರ್ಯಕ್ರಮಗಳನ್ನು ಮಾಡುತ್ತಿದ್ದರಂತೆ. ಗೋಡೆಯಲ್ಲೆಲ್ಲ ನವಿಲು, ಜಿಂಕೆ, ಹಡಗು ಮುಂತಾದ ಬಗೆಬಗೆಯ ಸ್ಟಿಕ್ಕರ್ ಗಳನ್ನು ಹಚ್ಚಿದ್ದರು.  ಕೆಲವು ಗೋಡೆಗೆ ನವೀನ ರೀತಿಯ ಪೈಂಟಿಂಗ್ ಗಳನ್ನು ಮಾಡಿದ್ದರು. ಒಂದು ಮೂಲೆಯಲ್ಲಿ ಗಿಟಾರ್ ಮೊದಲಾದ ಮೂರ್ನಾಲ್ಕು ವಾದ್ಯಗಳನ್ನು ಇರಿಸಿದ್ದರು. ಹಲವು ಡ್ರಾಯಿಂಗ್ ಶೀಟ್ ಗಳನ್ನು ಪೆನ್ಸಿಲ್ ಗಳನ್ನೂ ಇನ್ನು ಏನೇನೋ ವಸ್ತುಗಳನ್ನು ಕಲಾತ್ಮಕವಾಗಿ ಜೋಡಿಸಿ ಇಟ್ಟಿದ್ದರು. ಹಳೆಯ ಟೈರ್ ನ ಮೇಲೆ ಒಂದು ಹಲಗೆಯನ್ನು ಫಿಕ್ಸ್ ಮಾಡಿ ಟೀ ಪಾಯ್ ತಯಾರಾಗಿತ್ತು.

            ಒಟ್ಟಿನಲ್ಲಿ ಒಂದು ಒಳ್ಳೆಯ ಟೇಸ್ಟ್ ಇರುವವರು ಎಂದು ಆ ಮನೆಯ ಒಳಗಡೆ ಹೋಗುತ್ತಿರುವಂತೆಯೆ ನಮಗೆ ಅನ್ನಿಸಿತು. ಅವರದೇ ಒಬ್ಬ ಅಡುಗೆಯವನಿದ್ದು ಅವನಿಗೆ, ರಾತ್ರಿ ನಮಗೆ ಬೇಕಾದಂತೆ ಸರಿಯಾಗಿ ಬೇಯಿಸಿದ ಅನ್ನ ಮೊಸರು, ಚಪಾತಿ ಸಬ್ಜಿ ಮಾಡಿ ಇಡಲು ತಿಳಿಸಿ ನಾವು ಫ್ರೆಶ್ ಆಗಿ ಆ ದಿನ ನಿರ್ಣಯಿಸಿದಂತೆ ಬಾಗೋರ್ ಕಿ ಹವೇಲಿಯಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೋಡಲು ಹೊರಟೆವು.

ಅಲ್ಲಿಗೆ ಮುಟ್ಟುವಾಗಲೇ ಸುಮಾರು ಆರೂವರೆ ಆಗಿತ್ತು.  ಆಗಲೇ ಕತ್ತಲಾಗುತ್ತಾ ಬರುತ್ತಿತ್ತು.. ಏಳು ಗಂಟೆಗೆ ಪ್ರಾರಂಭವಾಗುವ ಪ್ರದರ್ಶನದ ಟಿಕೆಟ್ ಮುಗಿದ್ದಿದ್ದರಿಂದ ನಾವು ಎರಡನೇ ಪ್ರದರ್ಶನ ಶುರುವಾಗುವ ಎಂಟು ಗಂಟೆಯವರೆಗೆ ಕಾಯಬೇಕಾಗಿತ್ತು.
ಬಾಗೋರ್ ಕಿ ಹವೇಲಿ ಉದಯಪುರ ದ ಪ್ರಸಿದ್ಧ ಆಕರ್ಷಣೀಯ ಸ್ಥಳಗಳಲ್ಲಿ ಒಂದು. ಅದು ವಿಸ್ತಾರವಾದ ಪಿಚೋಲ ಎಂಬ ಸರೋವರದ ದಡದಲ್ಲಿದೆ. ಅಲ್ಲಿಗೇ ಪ್ರವೇಶವಾಗುತ್ತಿದ್ದಂತೆಯೇ ಕಾಣುವ ಮೂರು ಬೃಹತ್ ದ್ವಾರಗಳು ಅದನ್ನು ದಾಟಿಹೋದಾಗ ಕಾಣುವ ಸರೋವರವು ತುಂಬಾ ಚೆನ್ನಾಗಿ ಕಾಣುತ್ತದೆ.
ಅಷ್ಟರಲ್ಲಿ ಮಳೆ ಶುರುವಾಯಿತು. ಅಲ್ಲಿಯ ವಸ್ತು ಪ್ರದರ್ಶನದ ಅವಧಿಯೂ ಮುಗಿದ್ದಿದ್ದರಿಂದ ನಾವು ಏನೂ ಮಾಡದೇ ಮಳೆಯಲ್ಲಿ ಒಂದು ಬದಿಯಲ್ಲಿ ನಿಂತು ಕಾಯಬೇಕಾಯಿತು. ಅಲ್ಲಿಯ ವಸ್ತು ಸಂಗ್ರಹಾಲಯವೂ ಸಂಜೆ ಸಮಯವಾಗಿ ಮುಚ್ಚಿದ್ದರಿಂದ ನೋಡಲಾಗಲಿಲ್ಲ.
ಈ ಹವೇಲಿಯ ಇತಿಹಾಸವನ್ನು ಕೆದಕಿದಾಗ ಕೆಲವೊಂದು ಕುತೂಹಲಕಾರಿಯಾದ ವಿವರಗಳು ಅಂತರ್ಜಾಲದಲ್ಲಿ ಸಿಕ್ಕಿತು.

ಕ್ರಿ. ಶ. 1751 ರಿಂದ 1778 ರವರೆಗಿನ ಅಲ್ಲಿಯ ಅರಸ ಪ್ರತಾಪ್ ಸಿಂಗ್ II, ರಾಜ್ ಸಿಂಗ್ II, ಆರಿ ಸಿಂಗ್ ಮತ್ತು ಹಮೀರ್ ಸಿಂಗ್ ಅವರ ಆಳ್ವಿಕೆಯಲ್ಲಿ ಮೇವಾಡದ ಸಾಮ್ರಾಜ್ಯದ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದ ಶ್ರೀ ಅಮರ್ಚಂದ್ ಬದ್ವಾ ಅವರು “ಈ ಬಾಗೋರ್ ಕಿ ಹವೇಲಿ” ಯನ್ನು ನಿರ್ಮಿಸಿದರು. ಅಮರ್ಚಂದ್ ಬದ್ವಾ ಅವರ ಮರಣದ ನಂತರ, ಹವೇಲಿ ಮೇವಾಡದ ರಾಜಮನೆತನದ ವಶಕ್ಕೆ ಬಂದಿತು ಮತ್ತು ಅಂದಿನ ಮಹಾರಾಣರ ಸಂಬಂಧಿಯಾದ ನಾಥ್ ಸಿಂಗ್ ಅವರ ವಾಸಸ್ಥಾನವಾಯಿತು.

1878 ರಲ್ಲಿ, ಬಾಗೋರ್‌ನ ಮಹಾರಾಜ ಶಕ್ತಿ ಸಿಂಗ್ ಅವರು ತ್ರಿವಳಿ ಕಮಾನುಗಳ ಗೇಟ್‌ವೇ ನಿರ್ಮಿಸುವ ಮೂಲಕ ಹವೇಲಿಯನ್ನು ಮತ್ತಷ್ಟು ಸುಂದರವಾಗಿ ಕಾಣುವಂತೆ ವಿಸ್ತರಿಸಿದರು ಮತ್ತು ಅಂದಿನಿಂದ ಇದನ್ನು ಬಾಗೋರ್ ಕಿ ಹವೇಲಿ ಎಂದು ಕರೆಯಲಾಯಿತು. 1947 ರವರೆಗೆ, ಹವೇಲಿ ಮೇವಾಡದ ರಾಜ್ಯದ ವಶದಲ್ಲಿತ್ತು.

ಭಾರತದ ಸ್ವಾತಂತ್ರ್ಯದ ನಂತರ, ಈ ಹವೇಲಿಯನ್ನು ರಾಜಸ್ಥಾನ ಸರ್ಕಾರವು ಸರ್ಕಾರಿ ನೌಕರರ ವಸತಿಗಾಗಿ ಬಳಸಿಕೊಂಡಿತು. ಹಾಗಾಗಿ ಈ ಹವೇಲಿಯನ್ನು ಸುಮಾರು ನಲವತ್ತು ವರ್ಷಗಳ ಕಾಲ ನಿರ್ಲಕ್ಷಿಸಲಾಯಿತು ಮತ್ತು ನಂತರ 1986 ರಲ್ಲಿ, ಅದರ ಪುನಃಸ್ಥಾಪನೆ ಕಾರ್ಯವನ್ನು ಪಶ್ಚಿಮ ವಲಯ ಸಾಂಸ್ಕೃತಿಕ ಕೇಂದ್ರಕ್ಕೆ ಹಸ್ತಾಂತರಿಸಲು ಸರ್ಕಾರ ನಿರ್ಧರಿಸಿತು
.ಪಶ್ಚಿಮ ವಲಯ ಸಾಂಸ್ಕೃತಿಕ ಕೇಂದ್ರವು ಈ ಹವೇಲಿಯನ್ನು ಒಂದು ವಸ್ತು ಸಂಗ್ರಹಾಲಯವನ್ನಾಗಿ ಪರಿವರ್ತಿಸಿತು, ಅದೇ ಹಳೆಯ ವಾಸ್ತುಶಿಲ್ಪ ಶೈಲಿಯಲ್ಲಿ ರಾಯಲ್ ನೋಟವನ್ನು ಉಳಿಸಿಕೊಂಡಿದೆ. ಬಾಗೋರ್ ಕಿ ಹವೇಲಿಯನ್ನು ಕಟ್ಟಲು ಬಳಸಿದ ವಸ್ತುಗಳು ಸಾಂಪ್ರದಾಯಿಕ ವಸ್ತುಗಳಾದ ಲಖೋರಿ ಇಟ್ಟಿಗೆಗಳು ಮತ್ತು ಸುಣ್ಣದ ಗಾರೆಗಳನ್ನು ಒಳಗೊಂಡಿವೆ. ಅಸ್ತಿತ್ವದಲ್ಲಿರುವ ಭಿತ್ತಿಚಿತ್ರಗಳನ್ನು ಸಂರಕ್ಷಿಸಲಾಗಿದೆ.

ಯಾವುದೇ ಕಲಾ ಪ್ರೇಮಿಗಳು ಬಾಗೋರ್ ಕಿ ಹವೇಲಿಯನ್ನು ಅದರ ಅದ್ಭುತ ವಾಸ್ತುಶಿಲ್ಪ ಮತ್ತು ಕೌಶಲ್ಯಪೂರ್ಣ ಕರಕುಶಲತೆಗಾಗಿ ಅನ್ವೇಷಿಸಲು ಇಷ್ಟಪಡುತ್ತಾರೆ. ಮೇವಾಡದ ಶ್ರೀಮಂತ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಬಾಗೋರ್ ಕಿ ಹವೇಲಿ ಬೃಹತ್ ಪ್ರಾಂಗಣಗಳು, ಬಾಲ್ಕನಿಗಳು ಅಲಂಕಾರಿಕ ಕಮಾನು ಮಾರ್ಗಗಳು, ಮತ್ತು ಕಾರಂಜಿಗಳ ಅದ್ಭುತ ಸಂಗ್ರಹವಾಗಿದೆ.

                                            …...ಮುಂದುವರಿಯುವುದು


ಫೋಟೋ ಮತ್ತು ವಿಡಿಯೋ ಗಳಿಗಾಗಿ ಈ ಕೆಳಗಿನ ಲಿಂಕ್ ನೋಡಿರಿ.

https://drive.google.com/folderview?id=1oC3sEZUuzv9V_sPU1hibQw_CtQtd1Ozm

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ