ಭಾನುವಾರ, ಫೆಬ್ರವರಿ 18, 2018

ದಿನೇಶ ಉಪ್ಪೂರ:

*ನನ್ನೊಳಗೆ - 74*

ಅಮ್ಮ ಯಾವಾಗಲೂ ಹೇಳುವುದಿತ್ತು. "ನಮ್ ಕೈ ಕಾಲ್ ಗಟ್ಟಿ ಇಪ್ಪೂವರೆಗೆ ನಮ್ ನಮ್ ಕೆಲ್ಸ ನಾವೇ ಮಾಡ್ಕಣ್ಕ್. ಇನ್ನೊಬ್ರ ಮರ್ಜೀ ಕಾಂಬ್ಕಾಗ" ಅಂತ. ನಾನು ಕೆಲಸ ಮಾಡುವಾಗ ಉದಾಶೀನ ಮಾಡಿದಾಗಲೆಲ್ಲ "ಮಗೂ, ಪುಟ್ಟಾ," ಅಂತ ಹೇಳಿಯಾದರೂ ನಮ್ಮಿಂದಲೇ ನಮ್ಮ ಕೆಲಸಗಳನ್ನು ಅವಳು ಮಾಡಿಸುತ್ತಿದ್ದಳು. ಅಂದರೆ ಬೆಳಿಗ್ಗೆ ಎದ್ದ ಕೂಡಲೇ ಮಲಗಿದ ಚಾಪೆಯನ್ನು ಮಡಚಿ ಅದರ ಸ್ಥಾನದಲ್ಲಿ ಇಡುವುದರಿಂದ ಹಿಡಿದು ಊಟವಾದ ಮೇಲೆ ನಾವು ಉಂಡ ಬಟ್ಟಲನ್ನು ಆಗಲೇ ತೊಳೆದು ಇಡುವುದು, ಕಾಫಿ ಕುಡಿದ ನಂತರ ಖಾಲಿ ಲೋಟವನ್ನು ತೊಳೆದು ಇಡುವುದು. ನಮ್ಮ ನಮ್ಮ ಬಟ್ಟೆಗಳನ್ನು ಒಗೆದುಕೊಳ್ಳುವುದು, ಸ್ನಾನ ಮಾಡುವಾಗ ಬಚ್ಚಲ ತಾಮ್ರದ ಹಂಡೆಯಲ್ಲಿ ನೀರು ಖಾಲಿಯಾದರೆ, ಬಾವಿಯಿಂದ ಕೊಡಪಾನದಲ್ಲಿ ನೀರು ಎತ್ತಿ ತಂದು ಬಚ್ಚಲಹಂಡೆಗೆ ಹಾಕಿ ನಂತರ ಸ್ನಾನಮಾಡುವವರಿಗೆ ಅನುಕೂಲ ಮಾಡುವುದು.

ಹೀಗೆ ಮನೆ ಅಂತ ಆದಾಗ ಸಣ್ಣಪುಟ್ಟ ಇಂತಹ ಸಾವಿರ ಕೆಲಸ ಇದ್ದೇ ಇರುತ್ತದೆ. ಆದರೆ ಅದು ಕಣ್ಣಿಗೆ ಕಾಣುವುದಿಲ್ಲ.ಕಡಿಮೆ ಪಕ್ಷ, ನಮ್ಮ ನಮ್ಮ ದೈನಂದಿನ ಕೆಲಸಗಳನ್ನು ನಾವೇ ಮಾಡಿಕೊಳ್ಳಬೇಕು. ಇದರಿಂದ ನಮ್ಮ ನಮ್ಮ ಆತ್ಮ ಸ್ಥೈರ್ಯ ಹೆಚ್ಚುತ್ತದೆ. ಆ ಕೆಲಸದ ಮೇಲಿನ ಗೌರವ ಹೆಚ್ಚುತ್ತದೆ. ಇನ್ನೊಬ್ಬರಿಂದ ಮಾಡಿಸಿದಾಗ ಗೊತ್ತಾಗದ ಆ ಕೆಲಸದ ಶ್ರಮ, ಸಮಯ, ಗುರುತ್ವ, ಆ ಕೆಲಸವನ್ನು ನಾವೇ ಮಾಡಿದಾಗ ಹೆಚ್ಚು ತಿಳಿಯುತ್ತದೆ.

ಮೊನ್ನೆ ಒಬ್ಬರ ಮನೆಗೆ ಹೋಗಿದ್ದಾಗ ಅವರ ಒಬ್ಬಳೇ ಮಗಳ ಬಗ್ಗೆ ಅವರು, "ಮನೆಯಲ್ಲಿ ಒಂದು ಚೂರು ಕೆಲಸ ಮಾಡುವುದಿಲ್ಲ ಮಾರಾಯ್ರೆ. ಮೊದಲು ಸಣ್ಣವಳಲ್ಲವಾ ಪಾಪ ಓದಿಕೊಳ್ಳಲಿ ಅಂತ ಬಿಟ್ಟದ್ದು. ಈಗ ಏನಾದರೂ ಹೇಳಿದರೆ ಮುಖ ತಿರುಗಿಸಿ ಹೋಗುತ್ತಾಳೆ. ನಾಳೆ ಗಂಡನ ಮನೆಗೆ ಹೋದರೆ ಕಷ್ಟ ಅಲ್ಲವೇ? ಅಂದರು. ಅದಕ್ಕೆ ಆ ಮಗಳು ಆಚೆ ಕೋಣೆಯಿಂದಲೇ "ಆಗ ಕಲಿತುಕೊಂಡರಾಯಿತು" ಎಂದು ಕೂಗಿದಳು.

 ಮನೆಗೆ ಯಾರಾದರೂ ನೆಂಟರೋ, ಆಗಂತುಕರೋ ಬಂದರೆ ಎದ್ದು ಬಾಗಿಲು ತೆರೆದು ಬಂದವರನ್ನು ಬನ್ನಿ ಕುಳಿತು ಕೊಳ್ಳಿ ಎನ್ನಲೂ ಈಗಿನ ಮಕ್ಕಳಿಗೆ "ಮಾಡಿ" ಎಂದು ಹೇಳಬೇಕು.
ನಾನು ಚಿಕ್ಕವರಿರುವಾಗ ಅಮ್ಮನಿಗೆ, ಅತ್ತಿಗೆಗೆ, ಅಡುಗೆ ಮನೆಯಲ್ಲಿ ತೆಂಗಿನ ಕಾಯಿ ಹೆರೆದುಕೊಡುವುದು, ಬೆಳ್ಳುಳ್ಳಿ ಸಿಪ್ಪೆ ತೆಗೆದುಕೊಡುವುದು, ಮಸಾಲೆ ರುಬ್ಬಿಕೊಡುವುದು ಬೆಳಿಗ್ಗೆ ತಿಂಡಿಯ ದೋಸೆ ಹೊಯ್ಯುವುದು ಇತ್ಯಾದಿಗಳನ್ನು ಮಾಡಿ ಸಹಾಯ ಮಾಡುತ್ತಿದ್ದೆ. ಆಗೊಮ್ಮೆ ಈಗೊಮ್ಮೆ ಕಸಗುಡಿಸುವುದೂ ನೆಲ ಒರೆಸುವುದೂ ಪಾತ್ರೆ ತೊಳೆಯುವುದೂ ಮಾಡಿದ್ದಿದೆ. ಹಾಗಾಗಿ ಈಗಲೂ ನನಗೆ ಯಾವುದೇ ಕೆಲಸ ಗೊತ್ತಿಲ್ಲ ಅಂತ ಇಲ್ಲ. ಕಡಬು ಮಾಡಲು ಹಲಸಿನ ಎಲೆಯನ್ನು ಸೆಟ್ಟು ಕೊಟ್ಟೆ ಮಾಡುವುದು, ಬರಿಯಕ್ಕಿ ದೋಸೆ ಹೊಯ್ಯುವುದು. ಹಲಸಿನ ಹಪ್ಪಳ, ಅಕ್ಕಿ ಹಪ್ಪಳ ಮಾಡುವುದು ಎಲ್ಲವೂ ಗೊತ್ತಿದೆ. ಈಗಿನ ಮಕ್ಕಳಿಗೆ ಅದು ಬೇಡ. ಮನೆಯಲ್ಲಿ ಓದುವುದನ್ನು ಬಿಟ್ಟರೆ, ಟಿವಿ ಮೊಬೈಲ್ ಮಾತ್ರ ಸಾಕು ಅವರಿಗೆ. ಇಂತಹ ಕೆಲಸ ಹೇಳಿಕೊಡುವವರೂ ಇಲ್ಲ, ಹೇಳಿದರೆ ಮಾಡುವವರೂ ಇಲ್ಲ. ಅದರ ಸುಖ ಅವರಿಗೆ ಗೊತ್ತೇ ಇಲ್ಲ. ಇವೇನು ಸಣ್ಣ ಸಣ್ಣ ಸಂಗತಿಗಳಾದರೂ ಕಡೆಗಣಿಸುವಂತವುಗಳಲ್ಲ.

 ಮನೆಯಲ್ಲಿ ಸಣ್ಣಪುಟ್ಟ ಕೆಲಸಗಳನ್ನು ನಾವು ನಾವೇ ಮಾಡಿಕೊಳ್ಳಬೇಕು. ನಮಗೆ ಮಾಡಲು ಸಾಧ್ಯವಿರುವಾಗ ಸ್ಥಾನಮಾನ ಅಂತ ಎಣಿಸದೇ ಅದನ್ನು ನಾವೇ ಮಾಡಬೇಕು. ಇನ್ನೊಬ್ಬರಿಗೆ ಭಾರವಾಗಿ ಇರಬಾರದು. ನಾವು ಮಾಡಿದರೆ, ನಮ್ಮ ಮಕ್ಕಳು ಕಲಿತುಕೊಳ್ಳುತ್ತಾರೆ. ಮನೆಯಲ್ಲಿ ಇಂತದ್ದನ್ನು ಮಾಡುವ ಕೆಲಸಗಾರರು ಇರಬಹುದು. ಇವೆಲ್ಲ ನಮ್ಮ ಕೆಲಸವಲ್ಲ ಅಂತ ಅಂದುಕೊಳ್ಳುವುದೂ ಬಹಳ ಸುಲಭ. ಆದರೆ ಅನಿವಾರ್ಯ ಸಂದರ್ಭದಲ್ಲಿ ನಾವೇ ಮಾಡಿಕೊಳ್ಳಬೇಕಾಗಿ ಬಂದಾಗ ಅಥವ ಬೇರೆಯವರನ್ನು ಅವಲಂಬಿಸಿಕೊಳ್ಳಬೇಕಲ್ಲ ಎಂಬ ಸ್ಥಿತಿಬಂದಾಗ ಮಾತ್ರ ಕಷ್ಟವಾಗುತ್ತದೆ. ಇಂದು ಯಾವುದೋ ಮುಲಾಜಿಗೋ, ಸಂಬಳಕ್ಕೋ, ನಮ್ಮ ಕೆಲಸ ಮಾಡುವವರು, ಮುಂದೊಮ್ಮೆ ನಮಗೆ ಅಂತಹ ಕೆಲಸ ಗೊತ್ತಿಲ್ಲದ್ದನ್ನೇ ಬಂಡವಾಳ ಮಾಡಿಕೊಂಡು ನಮ್ಮ ಮೇಲೆ ಸವಾರಿ ಮಾಡಬಹುದು.

ಆದ್ದರಿಂದ ಸುಮ್ಮನೇ ಕುಳಿತುಕೊಂಡಿರುವಾಗಲೆಲ್ಲ  "ಅಲ್ಲಿ ಇನ್ನು ಏನು ಮಾಡಿದರೆ ಸ್ವಲ್ಪ ಬೆಟರ್ ಆಗಬಹುದು" ಎಂದು ಯೋಚಿಸಿದರೆ ಏನಾದರೂ ಕೆಲಸ ಮಾಡಲು, ನಿಮ್ಮ ಅಭಿರುಚಿಯನ್ನು ತೋರಿಸಲು ಅವಕಾಶದೊರೆತೇ ದೊರೆಯುತ್ತದೆ.

ಹಿಂದೆ ಕಕ್ಕುಂಜೆ ಗ್ರಾಮದ ಪಟೇಲರೂ, ಅಗರ್ಭ ಶ್ರೀಮಂತರೂ ಆಗಿದ್ದ ಶಂಕರನಾರಾಯಣ ಅಡಿಗರು  ನನ್ನ ಅತ್ತೆ ಭವಾನಿಯಮ್ಮನನ್ನು ಮದುವೆಯಾಗಿ ಕಲ್ಲಟ್ಟೆಯಲ್ಲಿ ಮನೆ ಕಟ್ಟಿಸಿ, ಅಲ್ಲಿಯ ಜಮೀನು ನೋಡಿಕೊಂಡು ಅಲ್ಲಿಯೇ ವಾಸವಾಗಿದ್ದಾಗ  ನಡೆದ ಘಟನೆಯನ್ನು ನನ್ನ ಅತ್ತೆ ಹೇಳಿದ್ದರು.

 ಒಮ್ಮೆ  ಗದ್ದೆಯಲ್ಲಿದ್ದ ಭತ್ತದ ಕೊಯ್ಲು ಆಗಿ, ಅದನ್ನು ಭತ್ತದ  ಸಮೇತ (ಕೆಯ್ ) ಗದ್ದೆಯಿಂದ ಅಂಗಳಕ್ಕೆ  ತಂದು ರಾಶಿ ಹಾಕಿದ್ದರು. ನಂತರ ಆಳುಗಳು ಅಂಗಳದ ಮಧ್ಯದ ಮೇಟಿಕಂಬಕ್ಕೆ ತಾಗಿಸಿ ಇರಿಸಿದ್ದ ಹಡಿಮಂಚಕ್ಕೆ ಭತ್ತದ ಕಟ್ಟನ್ನು ಬಡಿದು ಭತ್ತವನ್ನು  ಬೇರೆ ಮಾಡಿದ್ದಾಯಿತು. ಸಂಜೆ ಅಂಗಳವನ್ನು ಗುಡಿಸಿ ಚೆಲ್ಲಿಹರಡಿಹೋದ ಭತ್ತವನ್ನು  ಗುಡಿಸಿ ಒಂದೆಡೆಯಲ್ಲಿ ರಾಶಿ ಹಾಕಿ ಕೆಲಸಗಾರರು ಮನೆಗೆ ಹೋದರು. ನಂತರ  ನಸು ಕತ್ತಲ ಹೊತ್ತಿನಲ್ಲಿ, ಅಡಿಗರು,  ಅಂಗಳದ ಒಂದು ಬದಿಯಲ್ಲಿ ಕುಕ್ಕರಗಾಲಿನಲ್ಲಿ ಕುಳಿತು ಅಲ್ಲಲ್ಲಿ ಬಿದ್ದ ಒಂದೊಂದು ಕಾಳು ಭತ್ತವನ್ನು ಹೆಕ್ಕಿ ಹೆಕ್ಕಿ ಒಂದು ಸಿಬ್ಬಲಿಗೆ ಹಾಕುತ್ತಿದ್ದರಂತೆ.

ಯಾರೋ ಪಕ್ಕದ ದಾರಿಯಲ್ಲಿ ಹಾದುಹೋಗುವಾಗ ಅದನ್ನು ನೋಡಿದರು. ಇಷ್ಟು ಹೊತ್ತಿನಲ್ಲಿ ಅಂಗಳದ ಮಧ್ಯದಲ್ಲಿ ಕುಳಿತು ಈ ಅಯ್ಯ ಎಂತ ಮಾಡ್ತಾರಪ್ಪ ಎಂದು ನೋಡಲು ಹತ್ತಿರ ಬಂದು ಅದನ್ನು ನೋಡಿದರೆ,.. ಅಡಿಗರು ಒಂದೊಂದೇ ಭತ್ತದ ಕಾಳನ್ನು ಹೆಕ್ಕುತ್ತಿದ್ದಾರೆ.  ಅವರು ಆಶ್ಚರ್ಯದಿಂದ "ಎಂತ ಅಯ್ಯ, ನೀವು  ಭತ್ತದ ಕಾಳು ಹೆಕ್ಕುದಾ? ಇಷ್ಟೆಲ್ಲ ಇಪ್ಪವರು" ಅಂದರಂತೆ.

ಆಗ ಅಡಿಗರು "ಯಾಕೆ ? ನಾನು ಹೆಕ್ಕಬಾರದಂತ ಉಂಟಾ? ಇದರಿಂದ ಅವಮಾನ ಏನೂ ಇಲ್ಲ. ಇಂತ ಒಂದೊಂದು ಬತ್ತವನ್ನು ಒಟ್ಟಾಗಿಯೇ  ಅಲ್ವನಾ ಅಷ್ಟು ದೊಡ್ಡ ತಿರಿಯಾಗುವುದು?, ಆಣೆ ಆಣೆ ಸೇರಿಯೇ ರುಪಾಯಿಯಲ್ದಾ? ಇದೇನ್ ನಂಗೆ ಅವಮಾನ ಅಲ್ಲ.   ಹೀಂಗೆ ಇರುವುದರಿಂದಲೇ ನಾನಿವತ್ತು ಇಷ್ಟರಮಟ್ಟಿಗೆ ಇದ್ದದ್ದು ಮಾರಾಯಾ" ಅಂದರಂತೆ. ಬಂದವರು, "ಅದೂ ಸಮವೆ ಎನ್ನಿ" ಎಂದು ಅವರಿಗೆ ನಮಸ್ಕರಿಸಿ  ಮುಂದೆ ಹೊರಟುಹೋದರಂತೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ