ಮಂಗಳವಾರ, ಮೇ 8, 2018

ದಿನೇಶ ಉಪ್ಪೂರ:

*ನನ್ನೊಳಗೆ-95*

ನಾನು ಹಾಲಾಡಿ ಶಾಲೆಗೆ ಹೋಗುತ್ತಿದ್ದ ಕಾಲ. ಆಗ ನನಗೆ ಐದನೇ ಕ್ಲಾಸೋ, ಆರನೆಯ ಕ್ಲಾಸೋ ಇರಬಹುದು. ಶಾಲೆಯಲ್ಲಿ ಪ್ರತೀ ವಾರದಲ್ಲಿ ಒಂದೊಂದು ದಿನ  ಭಜನೆ, ಡಿಬೆಟ್, ಪ್ರತಿಭಾ ಪ್ರದರ್ಶನ, ಹಾಡು ಅಂತ, ಶಾಲೆಯ ಅವಧಿ ಮುಗಿದ ನಂತರ ಏನಾದರೂ ಸಾಂಸ್ಕೃತಿಕ ಕಾರ್ಯಕ್ರಮ ಇರುತ್ತಿತ್ತು. ಅದರಲ್ಲಿ ಮಕ್ಕಳಾದ ನಮ್ಮನ್ನು ಬಲವಂತವಾಗಿ ಪಾಲ್ಗೊಳ್ಳಲು ಹೇಳುತ್ತಿದ್ದರು. ನಾನು ಅದರಲ್ಲಿ ಉಮೇದಿನಿಂದಲೇ ಭಾಗವಹಿಸುತ್ತಿದ್ದೆ. ಆದ್ದರಿಂದ ಎಲ್ಲ ಮಕ್ಕಳಿಗೂ ನಾನೆಂದರೆ ಪರಿಚಿತ ವ್ಯಕ್ತಿಯಾಗಿದ್ದೆ.

ಒಮ್ಮೆ ನಾನು ಒಂದು ಪುಟ್ಟ ನಾಟಕವನ್ನು ನನ್ನದೇ ನಿರ್ದೇಶನದಲ್ಲಿ ಮಾಡಲು ಸಿದ್ಧತೆ ಮಾಡಿಕೊಂಡಿದ್ದೆ. ರಕ್ತಜಂಘ, ಸತ್ಯಶೀಲೆ ಮತ್ತು ರುದ್ರಕೋಪ ಎಂಬ ಮೂರು ಪಾತ್ರಗಳು. ನನ್ನದು ರಕ್ತಜಂಘ. ರಕ್ತಜಂಘನು ಸತ್ಯಶೀಲೆಯನ್ನು ಹುಡುಕುತ್ತಾ ಬರುವುದು, ತಪಸ್ಸು ಮಾಡುತ್ತಿದ್ದ ಅವಳನ್ನು ಬಲಾತ್ಕಾರ ಮಾಡಲು ಬರುವುದು. ಸತ್ಯಶೀಲೆಯು ತಪ್ಪಿಕೊಂಡು ಓಡುತ್ತಾ ಹೋಗಿ, ಕೈಯಲ್ಲಿದ್ದ ಪಿಂಡವನ್ನು ಬಿಸಾಡಿದಾಗ ರುದ್ರಕೋಪ ಹುಟ್ಟಿಬರುವುದು. ಅವನಿಗೂ ರಕ್ತಜಂಘನಿಗೂ ಯುದ್ಧವಾಗಿ, ರಕ್ತ ಜಂಘನನ್ನು ಕೊಲ್ಲುವುದು. ರುದ್ರಕೋಪನು ತಾಯಿಯನ್ನು ಸಮಾಧಾನ ಮಾಡುವುದು. ಅಲ್ಲಿಗೆ ನಾಟಕ ಮುಕ್ತಾಯ. ನಾವು ಮೂವರು ( ಹೆಸರು ನೆನಪಾಗುವುದಿಲ್ಲ) ಟ್ರಯಲ್ ಮಾಡಿಕೊಂಡು ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದೆವು.

 ನಾಟಕದ ದಿನದಂದು, ಮನೆಯಲ್ಲಿದ್ದ ಅಪ್ಪಯ್ಯನ ಹಳೆಯ ವೇಸ್ಟಿ, ಅವರಿಗೆ ಸನ್ಮಾನ ಮಾಡಿದಾಗ ನೀಡಿದ್ದ ಝರಿ ಝರಿ ಇರುವ ಉಲ್ಲನ್ ಶಾಲು, ರಟ್ಟಿನ ಕಿರೀಟ, ಪ್ಲಾಸ್ಟಿಕ್ ಹೂವಿನಿಂದ ಮಾಡಿದ ಕೈಯ ಆಭರಣಗಳು, ಬಿದಿರು ಕೋಲಿನ ಬಿಲ್ಲು ಬಾಣಗಳು, ಅಲ್ಯುಮಿನಿಯಂ ತಂಬಿಗೆಗೆ ದಪ್ಪದ ಕೋಲು ಸಿಕ್ಕಿಸಿ ಮಾಡಿದ ಗದೆ ಇತ್ಯಾದಿಗಳನ್ನು ಮೊದಲೇ ಸಿದ್ಧಮಾಡಿ ಇಟ್ಟುಕೊಂಡು ಆ ದಿನ ಬೆಳಿಗ್ಗೆ ಕೆಳಶಾಲೆಯ ಕ್ರಾಪ್ಟ್ ರೂಮಿನಲ್ಲಿ ಇಟ್ಟಿದ್ದೆವು.

ನಮ್ಮ ಶಾಲೆಯ ನಾಟಕದ ಕಾರ್ಯಕ್ರಮದ ದಿನದಂದೇ, ಹಾಲಾಡಿಯ ಬಸ್ ನಿಲ್ದಾಣದ ಪಶ್ಚಿಮ ಬದಿಯ ಎತ್ತರದ ಜಾಗದಲ್ಲಿ ಅಮೃತೇಶ್ವರಿ ಮೇಳದ ಆಟ ಇತ್ತು. ಮೇಳದವರ ಬಿಡಾರ ನಮ್ಮ ಶಾಲೆಯ ಹತ್ತಿರ ಇರುವ ಮಾರಿಕಾನು ದೇವಸ್ಥಾನದಲ್ಲಿ. ಬೆಳಿಗ್ಗೆ  ಅಲ್ಲಿಗೇ ಎಲ್ಲ ಕಲಾವಿದರೂ ಬಂದು ಉಳಿದುಕೊಂಡು ವಿಶ್ರಾಂತಿಮಾಡಿ, ಸಂಜೆ ಆಟದ ಗರಕ್ಕೆ ಹೋಗುತ್ತಿದ್ದರು.

ನಮ್ಮ ಶಾಲೆ ಅಂದರೆ ಒಂದರಿಂದ ಏಳನೇ ತರಗತಿಯವರೆಗೆ ಇದ್ದು, ಸ್ಥಳಾವಕಾಶ ಕಡಿಮೆಯಾಗಿರುವುದರಿಂದ, ರಸ್ತೆಯ ಉತ್ತರದ ಭಾಗದಲ್ಲಿ ಒಂದರಿಂದ ಆರನೆಯ ಕ್ಲಾಸ್ ನ ವರೆಗೆ ಇದ್ದರೆ, ಏಳನೇ ಕ್ಲಾಸ್, ಟೀಚರ್ಸ್ ರೂಮು ಮತ್ತು ಕ್ರಾಫ್ಟ್ ರೂಮುಗಳು, ರಸ್ತೆಯ ಈಚೆ ಬದಿಯ ಒಂದು ಹಳೆಯ ಕಟ್ಟಡದಲ್ಲಿ ಇತ್ತು. ನಾನು ಅಲ್ಲಿ ಬೆಳಿಗ್ಗೆ ಮನೆಯಿಂದ ಬರುವಾಗ ತಂದು ಇಟ್ಟಿದ್ದ ನಮ್ಮ ನಾಟಕದ ಪರಿಕರಗಳನ್ನು ಹಾಕಿದ ಚೀಲವನ್ನು ಹಿಡಿದುಕೊಂಡು ರಸ್ತೆಯನ್ನು ದಾಟುವಾತ್ತಿರುವಾಗ, ನಗರ ಜಗನ್ನಾಥ ಶೆಟ್ಟರು ಬಿಡಾರಕ್ಕೆ ಹೋಗುವವರು, ಎದುರಿಗೆ ಬಂದರು. ನನ್ನನ್ನು ನೋಡಿದ ಕೂಡಲೆ ಅವರು, ಪಕ್ಕನೆ ನನ್ನ ಕೈಯನ್ನು ಹಿಡಿದುಕೊಂಡು "ಹೊ, ನೀವು ಭಾಗ್ವತ್ರ ಮಗ ಅಲ್ದಾ? ಇದೆಲ್ಲ ಎಂತ ಮಾರಾಯ್ರೆ? ಎಲ್ಲಿಗ್ ಹೊರ್ಟದ್? ನಮ್ ಆಟಕ್ ಬತ್ತಿಲ್ಯಾ?" ಅಂತ ಮಾತಾಡಿಸಿದರು.

ನಾನು ಸ್ವಲ್ಪ ಜಂಭದಿಂದಲೇ "ನಮ್ಮ ಶಾಲೆಯಲ್ಲಿ ನಾಟಕ ಇತ್ತು". ಅಂದೆ. "ಎಂತಾ ನಾಟ್ಕ? ನಿಮ್ದ್ ಪಾರ್ಟ್ ಇತ್ತಾ?" ಅಂದರು ಅವರು. "ಹೌದು, ನಾನು ರಕ್ತಜಂಘ ಮಾಡ್ತೆ. ಇದೇ ಕಿರೀಟ" ಎಂದು ಚೀಲದಲ್ಲಿ ಇದ್ದ ರಟ್ಟಿನ ಕಿರೀಟವನ್ನು, ಮೀಸೆಯನ್ನೂ ಅವರಿಗೆ ತೋರಿಸಿದೆ. ಅವರು, "ಆಂ, ನೀವು ರಕ್ತಜಂಘ ಮಾಡೂದಾ? ಅದು ನನ್ನ ಪಾರ್ಟ್ ಮರ್ರೆ" ಅಂದರು. ನಾನು ನಕ್ಕು ಅವರು ಗಟ್ಟಿಯಾಗಿ ಹಿಡಿದುಕೊಂಡಿದ್ದ, ನನ್ನ ಕೈಯನ್ನು ಬಿಡಿಸಿಕೊಂಡು ಶಾಲೆಯತ್ತ ಓಡಿದೆ.

ನಾಟಕ ಆಯಿತು. ಒಂದು ಹತ್ತು ನಿಮಿಷದ ನಾಟಕ ಇರಬಹುದು. ಮುಖಕ್ಕೆ ದಪ್ಪ ಪೌಡರ್ ಹಾಕಿಕೊಂಡು, ಕುಂಕುಮದ ಕೆಂಪು ನಾಮ ಹಾಕಿ ಕಣ್ಣಿಗೆ ಹುಬ್ಬಿಗೆ ಕಾಡಿಗೆ ಇಟ್ಟುಕೊಂಡದ್ದಿರಬೇಕು. ಅಪ್ಪಯ್ಯನ ವೇಸ್ಟಿಯನ್ನು ಕಚ್ಚೆಪಂಚೆ ಹಾಕಿ ನಮ್ಮ ಮಾಸ್ಟ್ರು ಉಡಿಸಿದ್ದರು. ತಲೆಗೆ ರಟ್ಟಿನ ಕಿರೀಟ. ರಟ್ಟಿನ ಮೇಲೆ ಕಪ್ಪು ಬಳಿದ ದಪ್ಪ ಮೀಸೆ. ಝರಿ ಶಾಲನ್ನು ಹಿಂದೆ ಕಟ್ಡಿ ಉದ್ದಕ್ಕೆ ಇಳಿಬಿಟ್ಟಿದ್ದೆ. ಶಾಲೆಯ ಪಶ್ಚಿಮ ಬದಿಯ ಎತ್ತರದ ಸ್ಟೇಜಿನಲ್ಲಿ ನಮ್ಮ ನಾಟಕ.

ಮತ್ತೆ ನಾಟಕ ಹೇಗಾಯಿತು? ಅಂತ ನನಗೆ ನೆನಪಿಲ್ಲ. ಅಂತೂ ನಾಟಕ ಮುಗಿಸಿ, ಮೂರು ಮೈಲಿ ನಡೆದು ನಮ್ಮ ಮನೆಗೆ ಬಂದು, ಶಾಲೆಯ ಚೀಲವನ್ನು ಇಟ್ಟು, ರಾತ್ರಿ ಊಟವನ್ನು ಮಾಡಿ ಮತ್ತೆ ಹಾಲಾಡಿಯ ಆಟಕ್ಕೆ ಮನೆಯವರ ಜೊತೆಗೆ ಬಂದೆ.

ಆವತ್ತು "ಮಧುರಾ ಮಹೀಂದ್ರ" ಆಟ. ಆ ವರ್ಷ ಆ ಪ್ರಸಂಗದ ತುಂಬಾ ಆಟ ಆಗಿತ್ತು. ನಗರ ಜಗನ್ನಾಥ ಶೆಟ್ರು ಮೊದಲು ಉಗ್ರಸೇನ ಪಾತ್ರವನ್ನು ಮಾಡಿ, ಕೊನೆಗೆ ಕಂಸವಧೆಯ ಕಂಸನನ್ನು ಮಾಡುತ್ತಿದ್ದರು. ಕೋಟ ವೈಕುಂಠನ ರುಚಿಮತಿ. ಮೊದಲು ದೃಮಿಳ ಗಂಧರ್ವ ಹಳ್ಳಾಡಿ ಮಂಜಯ್ಯ ಶೆಟ್ರದ್ದಾದರೆ, ಗೋಡೆಯವರ ದೃಮಿಳ ರಾಕ್ಷಸ, ವಾಸುದೇವ ಸಾಮಗರ ಬಾಲಕಂಸ, ಅಂಬಾತನಯರ ನಾರದ. ಜೊತೆಗೆ ವಿಶೇಷ ಆಕರ್ಷಣೆಯಾಗಿ ಉಗ್ರಸೇನ ಮತ್ತು ರುಚಿಮತಿಯರಿಗೆ ದ್ವಂದ್ವ ಹಿಮ್ಮೇಳ ಇತ್ತು. ಅಪ್ಪಯ್ಯ ಮತ್ತು ಕಾಳಿಂಗ ನಾವಡರದ್ದು.

ನಾನು ಅ ದಿನ ಚೌಕಿಗೆ ಹೋಗುತ್ತಲೇ ನನ್ನನ್ನು ಕಂಡು, "ಹೋ ರಕ್ತಜಂಘ" ಎಂದು ನಗರ ಜಗನ್ನಾಥ ಶೆಟ್ಟರು ಗಟ್ಟಿಯಾಗಿ ಹೇಳಿದರು. "ಏನು? ಏನು?" ಅಂತ ಎಲ್ಲರೂ ಕೇಳಿದಾಗ, ನಾನು ಪಾರ್ಟು ಮಾಡಿದ್ದು ಹೇಳಿದೆ. ಆಗ ಅಲ್ಲಿಯೇ ಇದ್ದ ವೈಕುಂಠ, "ನಮ್ಮ ಮೇಳಕ್ಕೆ ಒಬ್ರು ಕಲಾವಿದ್ರು ಬೇಕಿತ್ತ್ ಮರ್ರೆ. ಮುಂದಿನ ವರ್ಷ ಬತ್ರ್ಯಾ?" ಎಂದರು. ನಾನು ನಕ್ಕು ಸುಮ್ಮನಾದೆ.

ನಗರ ಜಗನ್ನಾಥ ಶೆಟ್ರು ಹಳೆಯ ಕಡತದ ಒಬ್ಬ ಉತ್ತಮ ವೇಷಧಾರಿಯಾಗಿದ್ದರು. ಒಂದು ಸ್ವಲ್ಪವೂ ವಿಕಾರವಿಲ್ಲದ ಕುಣಿತ, ಒಳ್ಳೆಯ ಜಾಪಿನ ಎಷ್ಟು ಬೇಕೋ ಅಷ್ಟೇ ಮಾತಿನ, ಭರ್ಜರಿ ಆಳಿನ ಯಾವ ಪಾತ್ರವನ್ನೂ ಸಮರ್ಥವಾಗಿ ಮಾಡಬಲ್ಲ ಸಮರ್ಥ ಕಲಾವಿದರಾಗಿದ್ದರು. ತಲೆಯ ಮೇಲೆ ಸದಾ ಒಂದು ಕಪ್ಪು ಟೊಪ್ಪಿ. ಬಗಲಲ್ಲಿ ಒಂದು ಚೀಲ.

ಅವರು ರಕ್ತಜಂಘ ಮಾಡಿಕೊಂಡು ಶಿವ ಶಿವ ಎಂಬ ಒಂದು ದುಃಖದ ಪದ್ಯಕ್ಕೆ, ಅಪ್ಪಯ್ಯ ಪದ್ಯವನ್ನು ಹೇಳಿದ ನಂತರ, ಅರ್ಥವನ್ನು ಎರಡೇ ವಾಕ್ಯದಲ್ಲಿ ಹೇಳಿ ಮುಗಿಸುತ್ತಿದ್ದರು. "ಅದ್ಯಾಕೆ?" ಎಂದರೆ "ಅದಕ್ಕೆ ಮತ್ತೆ ಅರ್ಥಯಾಕೆ ಹೇಳುವುದು? ಪದ್ಯ ಕೇಳಿಯೇ ಪ್ರೇಕ್ಷಕರು ದುಃಖದ ಭಾವದಲ್ಲಿ ಮುಳುಗಿರುತ್ತಾರೆ" ಅನ್ನುತ್ತಿದ್ದರು. ಅಪ್ಪಯ್ಯನನ್ನು ತುಂಬಾ ಗೌರವಿಸುತ್ತಿದ್ದ, ಹಾಗೂ ಅಪ್ಪಯ್ಯನ ಮೆಚ್ಚಿನ ಕಲಾವಿದರೂ ಆಗಿದ್ದರು. ಆದರೆ ಕೆಲವೊಮ್ಮೆ ರಜೆಹಾಕಿ ಮನೆಗೆ ಹೋದರೆ ನಾಲ್ಕಾರು ದಿನ ಬರುತ್ತಲೇ ಇರಲಿಲ್ಲ.

ಅಪ್ಪಯ್ಯನ ವೃತ್ತಿ ಜೀವನದ ಕೊನೆಯ ಭಾಗವತಿಕೆಯ  ಉಡುಪಿಯ ಜೋಡಾಟದಲ್ಲಿ, ನಮ್ಮ ಅಮೃತೇಶ್ವರಿ ಮೇಳದ ಕರ್ಣಾರ್ಜುನ ಕಾಳಗ ಪ್ರಸಂಗದಲ್ಲಿ, ಗೋಡೆಯವರ ಕರ್ಣನ ಎದುರಿಗೆ, ಮುಲ್ಕಿ ಮೇಳದಲ್ಲಿ ಅವರೇ ಕರ್ಣನ ಪಾತ್ರ ಮಾಡಿದ್ದರು. ಆ ಕಾಲದಲ್ಲಿ ಅವರ ಭರ್ಜರಿ ಆಳ್ತನ ಆ ದೊಡ್ಡ ಮುಂಡಾಸು, ಗತ್ತು, ರೂಪ, ಕರ್ಣನ ಪಾತ್ರಕ್ಕೆ ಹೇಳಿ ಮಾಡಿಸಿದಂತಿದ್ದ ಜಗನ್ನಾಥ ಶೆಟ್ರು, ಆ ದಿನದ ಜೋಡಾಟದ ತೀವ್ರ ಸ್ಪರ್ಧೆಯ, ತಿಕ್ಕಾಟದಲ್ಲಿ, ಅಮೃತೇಶ್ವರಿ ಮೇಳದವರು ಆಟ ಓಡಿಸಿ, ಓಡಿಸಿ, ಎಳೆದು ಎದುರಿನ ಮೇಳದವರಿಗೆ ಗೊಂದಲವನ್ನು ಉಂಟು ಮಾಡಿದಾಗ, ಅವರ ಮುಲ್ಕಿ ಮೇಳದಲ್ಲಿ ಕರ್ಣನ ಅವಸಾನವೇ ಆಗದೇ ಗಡಿಬಿಡಿಯಲ್ಲಿ ಆ ಪ್ರಸಂಗ ಮುಗಿದು ಮುಂದಿನ ಪ್ರಸಂಗ ಶುರುಮಾಡಿದ್ದು ಯಕ್ಷಗಾನದ ಇತಿಹಾಸದಲ್ಲಿ ಮತ್ತೊಂದು ಅಪೂರ್ವ ಸಂಗತಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ