ಶುಕ್ರವಾರ, ಮೇ 11, 2018

ದಿನೇಶ ಉಪ್ಪೂರ:

*ನನ್ನೊಳಗೆ- 96*

ಸವಿ ನೆನಪುಗಳು ಬೇಕು ಸವಿಯಲೀ ಬದುಕು. ನಮ್ಮ ಜೀವನದಲ್ಲಿ ನಡೆದುಹೋದ ಅದೆಷ್ಟೋ ಸಣ್ಣ ಸಣ್ಣ ವಿಷಯಗಳು ಕೆಲವೊಮ್ಮೆ ದುತ್ತೆಂದು ಎದುರಿಗೆ ಬಂದು ನಿಲ್ಲುತ್ತದೆ. ಮುಖದಲ್ಲಿ ಸಣ್ಣ ಮಂದಹಾಸ ಮಿಂಚಿ ಮಾಯವಾಗುತ್ತದೆ.

ನನಗೆ ಮದುವೆಯಾದ ಹೊಸತು. ಹುಡುಗಾಟಿಕೆಯ ಕಾಲ. ನನ್ನ ಹೆಂಡತಿಯ ಮನೆಯಲ್ಲಿ ಆಗ ತಾನೇ ಟೆಲೆಪೋನ್ ಬಂದಿತ್ತು. ಪೋನ್ ಎಂದರೆ ಆಗ ನಮಗೆಲ್ಲ ಒಂದು ಕುತೂಹಲದ ವಿಷಯ. ಅದರಲ್ಲಿ ಮಾತಾಡುವುದೆಂದರೆ ಏನೋ ಒಂದು ತರಹದ ಖುಷಿ. ನಾನೊಮ್ಮೆ ಅಲ್ಲಿಗೆ ಹೋಗಿದ್ದಾಗ, ಸುಮ್ಮನೇ ಹೊಸ ಪೋನ್ ನ್ನು ನೋಡುತ್ತಾ ಇದ್ದೆ. ಇವಳ ಅಣ್ಣನ ಮಗ "ಇದರಲ್ಲಿ ಭವಿಷ್ಯ ಬರುತ್ತದೆ ಮಾಮ" ಅಂದ. ನಾನು ಹೌದಾ ಎಂದು ಹತ್ತಿರ ಹೋಗಿ ಕುತೂಹಲದಿಂದ ಪರಿಶೀಲಿಸಲು ಶುರುಮಾಡಿದೆ.

ಸುಮ್ಮನೇ ರಿಸೀವರ್ ಕಿವಿಯ ಹತ್ತಿರ ಹಿಡಿದು ಯಾವುದೋ ಬಟನ್ ಒತ್ತಿದೆ. ಆಗ ಭವಿಷ್ಯಕ್ಕಾಗಿ ಒಂದನ್ನು ಒತ್ತಿ... ಕನ್ನಡದಲ್ಲಿ ಕೇಳಲು ಎರಡನ್ನು ಒತ್ತಿ ಅಂತ ಅದೇನೋ ಬರುತ್ತಿತ್ತಪ. ನನಗೆ ಸರಿಯಾಗಿ ನೆನಪಿಲ್ಲ. ಆದರೆ ನಾನೂ, ಅವನು ಮತ್ತು ಅವನ ತಂಗಿಯೂ ಸೇರಿ ಎಲ್ಲರೂ ಪೋನಿನಲ್ಲಿ ಭವಿಷ್ಯ ಕೇಳಿದ್ದೇ ಕೇಳಿದ್ದು. ಅದು ಬಹುಷ್ಯ ರೆಕಾರ್ಡ್ ಮಾಡಿ ಇಟ್ಟಿದ್ದು ಪೋನಿನಲ್ಲಿ ಬರುತ್ತಿತ್ತು ಅಂತ ಈಗ ಅನ್ನಿಸುವುದು. ನಮಗೆ ಸಾಕೆನಿಸುವಷ್ಟು ಕೇಳಿ ದಣಿದೆವು.

ಇಷ್ಠೇ ಆಗಿದ್ದರೆ ಇಲ್ಲಿ ಅದನ್ನು ಹೇಳುವ ಅಗತ್ಯ ಇರಲಿಲ್ಲ. ಮುಂದಿನ ಸಾರಿ ಅವರಿಗೆ ಟೆಲಿಪೋನ್ ಬಿಲ್ಲು ಬಂದಾಗ ಮಾತ್ರ ನಮ್ಮ ಭಾವನಿಗೆ ಶಾಕ್! ಮುನ್ನೂರು, ನಾನೂರು ಬಿಲ್ಲು ಬರುವಲ್ಲಿ ಒಮ್ಮೆಲೇ ನಾಲ್ಕು ಸಾವಿರ ಚಿಲ್ಲರೆ ಬಿಲ್ಲು!. ಅದನ್ನು ನೋಡಿ ಹೌಹಾರಿದ ಅವರು, ಇಷ್ಟು ಬಿಲ್ಲು ಬರಲು ಸಾಧ್ಯವೇ ಇಲ್ಲ. ಅದರಲ್ಲಿ ಏನೋ ತಪ್ಪಾಗಿದೆ ಎಂದು ಟೆಲಿಪೋನ್ ಎಕ್ಸ್ ಚೇಂಜ್ ಗೆ ಓಡಿದರು. ಬಿಲ್ಲನ್ನು ತೋರಿಸಿ ನಿಮ್ಮದು ಎಂತಹ ಟೆಲಿಪೋನ್ ಮರ್ರೆ? ಯಾರಿಗಾದರೂ ಹಾರ್ಟ್ ಫೈಲ್ ಆಪುದೇ ಸೈ. ಈ ಬಿಲ್ಲು ನೋಡಿ. ಕಂಡಾಪಟ್ಟೆ ಬಂದಿದೆ. ಅದನ್ನು ಸರಿಮಾಡಿಕೊಡಿ ಎಂದು ಹೇಳಿದರು. ಅದರೆ ಅಲ್ಲಿಯ ಜೆಇಯವರು ಅವರ ಪರಿಚಯದವರಾಗಿದ್ದು, ಬಿಲ್ಲನ್ನು ನೋಡಿ ರೀಡಿಂಗ್ ಎಲ್ಲ ಪರಿಶೀಲಿಸಿ "ಬಿಲ್ಲು ಸರಿಯಾಗಿದೆ. ಮರ್ರೆ. ಇದನ್ನು ಕಟ್ಟಲೇಬೇಕಲ್ಲ" ಅಂದುಬಿಟ್ಟರು.

ನಮ್ಮ ಭಾವ "ಅದು ಆಗುವುದಿಲ್ಲ. ಅಷ್ಟು ಬಿಲ್ಲು ಹೇಗೆ ಆಯಿತು ಅಂತ ಬೇಕಲ್ಲ? ಅಷ್ಟೆಲ್ಲ ಕಟ್ಟಲು ಸಾಧ್ಯವೇ ಇಲ್ಲ. ನಿಮ್ಮ ಮೀಟರ್ ಸಮಾ ಇರಲಿಕ್ಕಿಲ್ಲ, ನಾನು ಬೇಕಾದರೆ ಒಂದು ಅರ್ಜಿಕೊಡುತ್ತೇನೆ. ಇನ್ನೊಮ್ಮೆ ಪರಿಶೀಲಿಸಿ ನೋಡಿ" ಎಂದು ಅನುನಯಿಸಿ ಹೇಳಿದರು. ಜೆಇಯವರು ಎಷ್ಟು ಹೇಳಿದರೂ ಇವರು ಕೇಳಲಿಲ್ಲ. ಅವರೂ ಗುರುತಿನವರಾದ್ದರಿಂದ, "ಆಗಲಿ, ನೋಡುವ" ಎಂದು, ಇವರ ಹತ್ತಿರ ಒಂದು ಅರ್ಜಿ ಪಡೆದುಕೊಂಡು, ಹಿಂದಿನ ತಿಂಗಳ ಬಿಲ್ಲಿನ ಪ್ರಕಾರ ಒಂದು ಅಂದಾಜು ಬಿಲ್ಲನ್ನು ಕಟ್ಟಿಸಿಕೊಂಡರು.

ಮುಂದಿನ ಸಲ ನಾನು ಅವರ ಮನೆಗೆ ಹೋದಾಗ ಹೀಗೆ ಯಾವುದೋ ವಿಷಯವನ್ನು ಮಾತಾಡುತ್ತಾ ಟೆಲಿಪೋನ್ ಬಿಲ್ಲಿನ ಬಗ್ಗೆ ಹೇಳಿದರು. ನನಗೆ ಆಗ ನೆನಪಾಯಿತು. "ಹೋ ಅಂದು ನಾವು ಪೋನಿನಲ್ಲಿ ಕೇಳಿದ ಭವಿಷ್ಯ ಕತೆ ಇಷ್ಟೆಲ್ಲ ಮಾಡಿತಲ್ಲ" ಎಂದು ಪಶ್ಚಾತ್ತಾಪವಾಯಿತು. ಆದರೆ ಅವರ ಮಕ್ಕಳು ಆ ವಿಷಯವನ್ನು ಮರೆತು ಬಿಟ್ಟದ್ದರು. ನಾನೂ ಮತ್ತೆ ಅದನ್ನು ಹೇಳಿ ಸಿಕ್ಕಿಹಾಕಿಕೊಳ್ಳಲು ಮನಮಾಡಲಿಲ್ಲ. ಮತ್ತೆ ಅವರಿಗೂ ಮುಂದೆ ಅದರ ವ್ಯತ್ಯಾಸದ ಬಿಲ್ಲು ಬಂದಿರಲಿಕ್ಕಿಲ್ಲ ಅಂತ ಕಾಣುತ್ತದೆ. ಆ ನಂತರ ಎಲ್ಲರಿಗೂ ಅದು ಮರೆತು ಹೋಯಿತು.

ಇನ್ನೊಮ್ಮೆ ಅಂತಹುದೇ ಆದ ಮತ್ತೊಂದು ಎಡವಟ್ಟು ಆಯಿತು. ನಮ್ಮ ಮಾವನವರ ಹುಟ್ಟುಹಬ್ಬ ಮತ್ತು ರಾಮನವಮಿ ಪ್ರತೀ ವರ್ಷವೂ ಒಂದೇ ದಿನ ಬರುತ್ತಿದ್ದು ಅದನ್ನು ಅವರ ಮನೆಯಲ್ಲಿ ತುಂಬಾ ಅದ್ದೂರಿಯಾಗಿ ಆಚರಿಸುತ್ತಿದ್ದರು. ಒಮ್ಮೆ ನಾವು ಹಿಂದಿನ ದಿನವೇ ಅಲ್ಲಿಗೆ ಹೋಗಿದ್ದೆವು. ಹುಟ್ಟುಹಬ್ಬದ ಶುಭಾಶಯದ ವಿಷಯವನ್ನು ಗೋಡೆಯ ಮೇಲೆ ಎದ್ದು ಕಾಣುವಂತೆ ಬರೆಯುವ ಎಂದು ಯಾರಿಗೋ ಹಂಬಲವಾಯಿತು. ಒಬ್ಬರು ಅದನ್ನು ಪ್ರಾಸ್ಥಾಪಿಸಿದ್ದೇ, ಮಕ್ಕಳೆಲ್ಲ ಸೇರಿ ನನ್ನನ್ನು ಒತ್ತಾಯಿಸಿದರು. ನನಗೂ ಉಮೇದು. ಮನೆಯ ಒಳಗೆ ಪ್ರವೇಶಿಸುವಾಗ ಹೆಬ್ಬಾಗಿಲಿನ ಎದುರಿಗೇ  ಮುಂದೆ ಕಾಣುವ ಗೋಡೆಯ ಮೇಲೆ ಬಣ್ಣದ ಕಾಗದವನ್ನು ಕತ್ತರಿಸಿ ಅಬ್ಬಲಿಗೆ ಹೂವುಗಳನ್ನು ಮಧ್ಯ ಮಧ್ಯ , ಗಮ್ಮು ಹಾಕಿ ಗೋಡೆಗೆ ಹಚ್ಚಿ ಅಂಟಿಸಿ, ದೊಡ್ಡದಾಗಿ "ಹುಟ್ಟುಹಬ್ಬದ ಶುಭಾಶಯಗಳು" ಎಂಬ ಬರಹವನ್ನು ರಾರಾಜಿಸುವಂತೆ ಬರೆದೆವು. ಮರುದಿನ ಅದನ್ನು ನೋಡಿದ ಎಲ್ಲರೂ ಹೊಗಳಿದ್ದೇ ಹೊಗಳಿದ್ದು. ಬಹಳ ಚಂದ ಆಯಿತು ಎಂದು.

ಹುಟ್ಟುಹಬ್ಬ ಮುಗಿದು ಎರಡು ದಿನದ ನಂತರ ಅದನ್ನು ತೆಗೆಯಲು ನೋಡಿದರೆ, ಬಣ್ಣದ ಕಾಗದದೊಂದಿಗೆ ಗೋಡೆಗೆ ಹಾಕಿದ ಸುಣ್ಣವೂ ಎದ್ದು ಬರಲು ಶುರುವಾದಾಗ, ನನ್ನ ಮುಖ ನೋಡಬೇಕಿತ್ತು.  "ಹೋ ಇದು ಕೆಲಸ ಕೆಟ್ಟಿತು. ಗೋಡೆ ಅಲ್ಲಲ್ಲಿ ಹರಿದು ತಿಂದಂತೆ ಕಲೆಯಾಗುತ್ತದೆ" ಅನ್ನಿಸಿತು. ಏನು ಮಾಡುವುದು? ತೆಗೆಯದೇ ಹಾಗೆಯೇ ಬಿಡುವ ಹಾಗೂ ಇರಲಿಲ್ಲ. ಮುಂದಿನ ದಿನಗಳಲ್ಲಿ ಅದು ಪ್ರಸ್ತುತವಲ್ಲದ್ದರಿಂದ ಅದನ್ನು ತೆಗೆಯುವುದೇ ಒಳ್ಳೆಯದು ಎಂತ ಎಲ್ಲರೂ ಹೇಳಿದರು. ಅಂತೂ ಏನೆಲ್ಲ ಒದ್ದಾಡಿ ನೀರು ಹಾಕಿ ಬಣ್ಣದ ಕಾಗದವನ್ನೆಲ್ಲ ತೆಗೆದು ಮತ್ತೆ ಗೋಡೆ ನೋಡುವಾಗ, ಅಲ್ಲಲ್ಲಿ ಗೋಡೆಯ ಸುಣ್ಣ ಬಣ್ಣವೆಲ್ಲ ಕಿತ್ತುಹೋಗಿ ನೋಡಲಾಗದ ಸ್ಥಿತಿ ಉಂಟಾಗಿತ್ತು.

ಪುಣ್ಯಕ್ಕೆ ಅಳಿಯನೆಂಬ ದಾಕ್ಷಿಣ್ಯದಿಂದಲೋ ಏನೋ, ನನ್ನ ಎದುರಿಗೆ ಒಂದು ಬೈಯಲಿಲ್ಲ. ನಾನೂ ಮತ್ತೆ ಮುಂದಿನ ದಿನಗಳಲ್ಲಿ, ಅಲ್ಲಿಗೆ ಹೋದಾಗ, ಆ ಗೋಡೆಯನ್ನೂ ನೋಡಿಯೂ ನೋಡದವನಂತೆ ಇದ್ದು, ಅದರ ಸುದ್ದಿ ಎತ್ತುತ್ತಲೇ ಇರಲಿಲ್ಲ. ಮತ್ತೆ ಮುಂದಿನ ಸಲ ಮನೆಗೆ ಪೈಂಟಿಂಗ್ ಮಾಡುವಾಗಲೇ ಅದು ಸರಿಯಾಯಿತು ಅನ್ನಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ