ಶನಿವಾರ, ಮೇ 5, 2018

ದಿನೇಶ ಉಪ್ಪೂರ:

*ನನ್ನೊಳಗೆ - 94*

ನನ್ನ ಜೀವನದಲ್ಲಿ ಕಲ್ಲಟ್ಟೆಯ ಮನೆಯಲ್ಲಿದ್ದ ಅವಧಿಯನ್ನು ನಾನು ಎಂದೂ ಮರೆಯಲಾರೆ. ಆಗ ಗಂಟಿಯನ್ನು ಮೇಯಿಸಿಕೊಂಡು ಗುಡ್ಡದಲ್ಲಿ ಅಲೆಯುತ್ತಿದ್ದ ಆ ಕಾಲದಲ್ಲಿ, ಎತ್ತು ದನ ಹೆಂಗರು ಗುಡ್ಡ ಅಂತ ಹತ್ತು ಹನ್ನೆರಡು ಗಂಟಿಗಳು ಹಟ್ಟಿಯಲ್ಲಿ ಇದ್ದವು. ಕೈಲ್ತಿ ಎಂಬ ಒಂದು ದನ ಒಮ್ಮೆ ಒಂದು ಚಂದದ ಕಪ್ಪು ಹೆಣ್ಣು ಕರುವನ್ನು ಹಾಕಿತ್ತು.

ಆಗ ಬೈಲಿನ ಗದ್ದೆಯ ಕಂಟದಲ್ಲಿ ಬೆಳೆದ ಹಸಿಹುಲ್ಲು, ಬೆರಕೆ ಸೊಪ್ಪುಗಳನ್ನು, ಲೆಕ್ಕಾಚಾರದ ಒಣಹುಲ್ಲನ್ನು ಮಾತ್ರ ನಾವು ಹಾಕುತ್ತಿದ್ದು, ರಾತ್ರಿ ಹುಲ್ಲು ಬೇಯಿಸಿ ಮಾಡಿದ ಬಾಯ್ರನ್ನು ಬೆಳಿಗ್ಗೆ ಹಾಕುತ್ತಿದ್ದೆವು. ದಿನಕ್ಕೆ ಒಮ್ಮೆ ಮನೆಯ ಹಿಂದಿನ ಗುಡ್ಡಕ್ಕೋ, ಮಕ್ಕಿಗೋ ಅಟ್ಟಿ ಮೇಯಿಸಿಕೊಂಡು ಬರುತ್ತಿದ್ದುದು ಹಿಂಡಿ ಗಿಂಡಿ ಅಂತ ಪೌಷ್ಟಿಕವಾದ ಯಾವುದೇ ಆಹಾರವನ್ನು ಹಾಕದೇ ಇರುವುದರಿಂದ, ಇರುವ ಗಂಟಿಗಳು ಅಷ್ಟೇನೂ ಮೈತುಂಬಿಕೊಂಡು ಹುಷಾರಾಗಿ ಇರುತ್ತಿರಲಿಲ್ಲ. ಸಣ್ಣಸಣ್ಣಕರುಗಳಂತೂ ಮೈಯ ಕಾಂತಿಯನ್ನು ಕಳೆದುಕೊಂಡು, ಮೂಳೆಯೆಲ್ಲ ಕಾಣುವಷ್ಟು ಬಡಕಲಾಗಿರುತ್ತಿದ್ದವು. 

ಆದ್ದರಿಂದ ನಾನು ಹತ್ತರ ಜೊತೆ ಹನ್ನೊಂದಾಗುವ ಆ ಹೆಂಗರುವನ್ನು ಹಾಗೆಯೇ ಸಾಕುವ ಬದಲು ಯಾರಾದರೂ ಒಳ್ಳೆಯ ರೀತಿಯಲ್ಲಿ ಪ್ರೀತಿಯಿಂದ ಸಾಕುವವರಿಗೆ ಕೊಡಬಹುದಲ್ಲ ಎಂದು ಯೋಚಿಸುತ್ತಿದ್ದೆ. ಹಾಲಾಡಿಯ ದಾಸ ಭಟ್ಟರು ಎನ್ನುವ ಅಡುಗೆ ಭಟ್ಟರೊಬ್ಬರಿಗೆ ಮನೆಯಲ್ಲಿ ಕರಾವು ಇರಲಿಲ್ಲ. ಒಂದು ಬತ್ತುಗಂದಿ ದನ ಹಾಗೂ ಅದರ ಒಂದು ಗುಡ್ಡ ಮಾತ್ರಾ ಇತ್ತು. ಆ ಗುಡ್ಡನನ್ನು ಏನು ಮಾಡುವುದು? ಸಾಕುವುದು ಕಷ್ಟ ಎಲ್ಲಾದರೂ ದೇವಸ್ಥಾನದ ಹತ್ತಿರ ಬಿಟ್ಟು ಬಸವನ ಹಾಗೆ ಊರು ತಿರುಗುವ ಹಾಗೆ ಮಾಡುವುದೇ ಸೈ ಎಂದು ಯೋಚಿಸುತ್ತಿದ್ದ ಅವರು, ಒಮ್ಮೆ ನಮ್ಮ ಮನೆಯಲ್ಲಿ ನಡೆಯುವ ರಾಘವೇಂದ್ರ ಆರಾಧನೆಗೆ ಅಡುಗೆ ಮಾಡಲು ಬಂದಿದ್ದರು. ನಾನು ಹೀಗೆ ಮಾತಿಗೆ "ಇಷ್ಟೆಲ್ಲ ಗಂಟಿಗಳು ಇದ್ದರೂ ನಮಗೆ ಎಲ್ಲವನ್ನೂ ಚೆನ್ನಾಗಿ ಸಾಕಲು ಆಗುತ್ತಿಲ್ಲ. ಅದರ ಮೇಲೆ ಈಗ ಒಂದು ಹೆಂಗರು ಬೇರೆ ಹುಟ್ಟಿಕೊಂಡಿದೆ. ಯಾರಾದ್ರೂ ಸಾಕುವವರಿದ್ರೆ ಕೊಡಬಹುದಿತ್ತು ಮಾರಾಯ್ರೆ" ಎಂದೆ.

ಆಗ ಅವರು "ಎಂತ ಹೆಂಗರುವಾ?  ನಿಮಗೆ ಬೇಡದಿದ್ದರೆ ನಮಗೆ ಕೊಡಿ ಮಾರಾಯ್ರೆ ನಿಮ್ಮ ಹೆಸರು ಹೇಳಿ ಸಾಕ್ತೆ. ಬೇಕಾದ್ರೆ ಅದಕ್ಕೆ ಏನು ಅಂತ ಕೊಡುವ" ಎಂದರು. ನಾನು "ಕೊಡುವುದು ಬಿಡುವುದು ಬೇಡ ಮಾರಾಯ್ರೆ. ನಮಗೆ ಈಗ ಹಟ್ಟಿಯಲ್ಲಿರುವ ಗಂಟಿಗಳನ್ನೇ ಚೆನ್ನಾಗಿ ಸಾಕಲು ಆಗುತ್ತಿಲ್ಲ. ನಿಮಗೆ ಬೇಕಾದರೆ ಹೊಡೆದುಕೊಂಡು ಹೋಗಿ" ಎಂದು ಬಿಟ್ಟೆ.

ಅವರು ನನ್ನ ಅಮ್ಮನ ಮುಖ ನೋಡಿದರು. ಅಮ್ಮ ಮಾತಾಡಲಿಲ್ಲ. "ಹೆಂಗರುವನ್ನು ಹಾಗೆ  ಸುಮ್ಮನೇ ದಾನ ಮಾಡುವವರುಂಟೇ?" ಎಂದು ದಾಸ ಭಟ್ಟರು ಮೌನವಾದರು. ನಾನು ಹಟ್ಟಿಗೆ ಹೋಗಿ ಆ ಕರುವಿನ ಕುತ್ತಿಗೆಗೆ ಬಳ್ಳಿ ಹಾಕಿ, ಎಳೆದು ತಂದು, "ನೀವು ಹೊಡೆದುಕೊಂಡು ಹೋಗಿ ಮಾರಾಯ್ರೆ. ನಮಗೆ ನೋಡಬೇಕು ಅನ್ನಿಸಿದರೆ ನಿಮ್ಮ ಮನೆಗೇ ಬಂದು ನೋಡಿಕೊಂಡು ಹೋಗುತ್ತೇವೆ" ಅಂದೆ. ಕೊನೆಗೆ ಅಮ್ಮನೂ ಒಪ್ಪಿದಳು. ಅವರು "ಹಾಗಾದರೆ ಹೀಗೆ ಮಾಡುವ. ನಮ್ಮ ಮನೆಯಲ್ಲಿ ಒಂದು ಗುಡ್ಡ ಇತ್. ಮಾರಾಯ್ರೆ. ನಮಗೆ ಅದನ್ನು ನೋಡಿಕೊಳ್ಳುವುದು ಕಷ್ಟ. ಅದನ್ನು ನೀವು ಕರೆದುಕೊಂಡು ಬನ್ನಿ. ಅಕಾ" ಎಂದರು. ನಾನು "ಹಾಂಗಾರೂ ಅಡ್ಡಿಲ್ಲ. ನಿಮಗೂ ಬರ್ದೇ ಕರುವನ್ನು ತಕೊಂಡುಹೋದೆ ಎನ್ನಿಸದ ಹಾಗೆ ಆಯಿತಲ್ಲ. ನಾನು ಈಗಲೇ ನಿಮ್ಮ ಮನೆಗೆ ಬರುತ್ತೇನೆ. ಹೋಗುವ" ಎಂದೆ. "ಆಯ್ತು" ಎಂದು ಭಟ್ಟರು ನಮ್ಮ ಮನೆಯ ಕರುವನ್ನು ಹೊಡೆದುಕೊಂಡು ಹೊರಟರು. ನಾನೂ ಹಿಂದಿನಿಂದಲೇ ಅವರ ಮನೆಗೆ ಹೋದೆ.

ನಮ್ಮ ಕರುವನ್ನು ಕಟ್ಟಿದ ಹಗ್ಗವನ್ನೇ ಅವರ ಮನೆಯ ಗುಡ್ಡದ ಕುತ್ತಿಗೆಗೆ ಕಟ್ಟಿ, ನಾನು ಅದನ್ನು ಕರೆದುಕೊಂಡು ಬಂದೆ. ಆಗಲೇ ಕತ್ತಲಾಗುತ್ತಾ ಬಂದಿತ್ತು. ನನ್ನ ಜೊತೆಗೆ ಬಂದ ಆ ಗುಡ್ಡ ಮನೆಯಿಂದ ಹೊರಗೆ ಹೋಗಿಯೇ ಇರಲಿಲ್ಲ ಅಂತ ಕಾಣುತ್ತದೆ. ದಾಸ ಭಟ್ಟರ ಮನೆಯು ಹಾಲಾಡಿ ಪೇಟೆಯ ಹತ್ತಿರವೇ, ರಸ್ತೆಯ ಬದಿಯಲ್ಲೇ ಇದ್ದುದರಿಂದ ಹಾಗೂ ಅವರಿಗೆ ಮನೆ ಅಡಿಯ ಜಾಗ ಬಿಟ್ಟರೆ ಬೇರೆ ಗದ್ದೆ ಬಯಲು ಇಲ್ಲದಿರುವುದರಿಂದ, ಹುಲ್ಲು ಹಿಂಡಿ ವಗೈರೆ ದುಡ್ಡುಕೊಟ್ಟೇ ತಂದು ಹಾಕಬೇಕಾಗಿದ್ದು, ಮನೆಯಿಂದ ಹೊರಗೆ ಸ್ವಲ್ಪ ಹೊತ್ತು ಕಟ್ಟಿಹಾಕಿ ಮೇಯಿಸುತ್ತಿದ್ದರೇ ಹೊರತು, ಮತ್ತೆ ಅದು ಹಟ್ಡಿಯಲ್ಲೇ ಇರುತ್ತಿತ್ತು. ನಮ್ಮ ದೊಡ್ಡ ಹಟ್ಟಿಯನ್ನು, ಹತ್ತಾರು ದನಕರುಗಳನ್ನು ನೋಡಿದ ಆ ಕರುವಿಗೆ ಗಾಬರಿಯಾಗಿರಬೇಕು. ಹಗ್ಗದಿಂದ ಅದನ್ನು ಎಳೆದು ಹಟ್ಟಿಗೆ  ಕರೆದುಕೊಂಡು ಹೋದರೆ, ಅದು ಸುತರಾಮ್ ಹಟ್ಟಿಗೆ ಇಳಿಯಲು ಕೇಳಲೇ ಇಲ್ಲ. ಜೊತೆಗೆ "ಅಂಬಾ" ಎನ್ನುವ ಆರ್ತನಾದದ ಕೂಗು ಬೇರೆ.

 ನನಗೂ ಪಾಪ ಅನ್ನಿಸಿತು. "ಹಾಂಗಾರೆ ಇವತ್ತು ಒಳ ಅಂಗಳದಲ್ಲಿ ಕಟ್ಟುವ. ನಾಳೆ ಮತ್ತೆ ಕಂಡ" ಅಂತ ಅಮ್ಮನೂ ಹೇಳಿದ್ದರಿಂದ, ನಮ್ಮ ಒಳ ಅಂಗಳದ ಒಂದು ಬದಿಯಲ್ಲಿ, ಕಿಟಕಿಯ ಕಂಬಕ್ಕೆ ಅದನ್ನು ಕಟ್ಟಿ ಹಾಕಿ, ಒಳಗೆ ಬಂದೆ. ಅಮ್ಮ "ಅದು ಹೆದ್ರ ಕಂಡಿತ್ ಕಾಣತ್ ಮಾಣಿ?" ಎಂದಳು. ನಾನು ರಾತ್ರಿ ಊಟ ಮಾಡಿದ ಮೇಲೆ ಪುನಃ ಟಾರ್ಚು ಹಿಡಿದು, ಹೊರಗೆ ಹೋಗಿ ಅದರ ಎದುರು ಒಂದಷ್ಟು ಒಣಹುಲ್ಲನ್ನು ಹಾಕಿ ಅದರ ಮುಖವನ್ನು ಉಗುರಿನಿಂದ ಸವರಲು ಶುರುಮಾಡಿದೆ. ಅದು ಅಲ್ಲಿಯೇ ಮೂತ್ರ ಮಾಡಿ, ಸೆಗಣಿಯನ್ನೂ ಹಾಕಿಯಾಗಿತ್ತು. ಇರಲಿ ಎಂದು ಅದನ್ನು ಅಲ್ಲಿಯೇ ಬಿಟ್ಟು ಬಂದು ಮಲಗಿಕೊಂಡೆ. ರಾತ್ರಿಯೂ ಅದು ನಾಲ್ಕಾರು ಭಾರಿ ಎಚ್ಚೆತ್ತು "ಅಂಬಾ" ಎಂದು ಕೂಗುತ್ತಿದ್ದುದು ಕೇಳಿದ್ದರೂ, ನಾನು ಹೋಗಲಿಲ್ಲ.

 ಬೆಳಿಗ್ಗೆ ಎದ್ದ ಕೂಡಲೇ ಹೋಗಿ ಆ ಗುಡ್ಡನನ್ನು ನೋಡಿದೆ. ಅದರ ಮೈಯನ್ನು ತಡವರಿಸಿದೆ. ಅದಕ್ಕೊಂದು ಹೆಸರು ಇಡಬೇಕಲ್ಲಾ ಎಂದು ಯೋಚನೆ ಮಾಡುತ್ತಿದ್ದಾಗಲೇ, ಕೆಲಸದ ರಾಮ, ಗಂಟಿಗಳಿಗೆ ಅಕ್ಕಚ್ಚು ಹಾಕಲು ಬಂದವನು "ಇದೆಂತಕೆ ಅಯ್ಯಾ,  ಬೀಜದ ಗುಡ್ಡ. ಎಂದು ಸಸಾರದಿಂದ ಮಾತಾಡಿದ. ನಾನು "ಇರಲಿ ಮಾರಾಯಾ, ಬೀಜಕ್ಕಾದರೆ ಬೀಜಕ್ಕೆ ಹೂಡಲಿಕ್ಕಾದರೆ ಹೂಡಲಿಕ್ಕೆ" ಅಂದೆ. ಅವನು, "ಹಾಂಗಾರೆ ಇನ್ನೊಂದು ಗುಡ್ಡ ತತ್ರ್ಯಾ?" ಎಂದು ನಗೆಯಾಡಿದ. ನಾನು ಉತ್ತರಿಸಲಿಲ್ಲ.

 ಪಾಪದ ಗುಡ್ಡ. ಮುಖ ಮುದ್ದು ಮುದ್ದಾಗಿತ್ತು. ಕೆಂಚು ಬಣ್ಣ. ಕೋಡು ಇನ್ನೂ ಮೂಡಿರಲಿಲ್ಲ. ಆಗಲೇ ಅದರ ಭುಜ ಎತ್ತರವಾಗಿದ್ದು, ಬೆನ್ನಿನ ಮೇಲೆ ದೊಡ್ಡ ಸುಳಿ ಇತ್ತು. ನಾನು ಅದರ ಬೆನ್ನು ಚಪ್ಪರಿಸಿ "ಇದು ನಮ್ಮ ಶಂಭು ಗುಡ್ಡ" ಎಂದೆ. ಅದರ ಹೆಸರು ಶಂಭು ಎಂದೆ ಆಯಿತು.

ಆ ಗುಡ್ಡನನ್ನು ನಾನು ಮರುದಿನವೂ ದೊಡ್ಡ ಹಟ್ಟಿಯಲ್ಲಿ ಬೇರೆ ಗಂಟಿಗಳ ಜೊತೆಗೆ ಕಟ್ಟಲು ಆಗಲಿಲ್ಲ. ನಮ್ಮ ಮನೆಯಲ್ಲಿ ಕರುಗಳನ್ನು ಹಾಕುವುದಕ್ಕಾಗಿಯೇ ಒಂದು ದೊಡ್ಡ ಮರದ ಗೂಡು ಮಾಡಿದ್ದರು. ಮತ್ತೊಂದು ಕರುವಿನ ಜೊತೆಗೆ ಶಂಭುವನ್ನೂ ಅದೇ ಮರದ ಗೂಡಿಗೆ ಹಾಕಿದೆ. ಮರದ ಗೂಡು ಅಂದರೆ ನಾಲ್ಕೂ ಬದಿಯಲ್ಲಿ ಮರದ ಹಲಗೆಯನ್ನು ಕಿಂಡಿಯ ಹಾಗೆ ನಿಲ್ಲಿಸಿದ ಒಂದು ಚೌಕಾಕಾರ ಗೂಡು ಅದು. ಅದರ ಒಂದು ಬದಿಯಲ್ಲಿ ಮಧ್ಯ ಎರಡು ಹಲಗೆಯನ್ನು ಮೇಲಕ್ಕೆ ದೂಡಿ ಹೊರಗೆ ತೆಗೆಯಲು ಬರುತ್ತಿದ್ದು ಗೂಡಿನ ಒಳಗೆ ಕರುಗಳನ್ನು ದೂಡಿ ಹಲಗೆಯನ್ನು ಸಿಕ್ಕಿಸಿದರೆ ಆಯಿತು. ಕರುಗಳು ಅಲ್ಲಿಯೇ ಮಲಗುತ್ತಿದ್ದವು.

ನಾನು ಆ ಶಂಭುವನ್ನು ಬಹಳ ಮುದ್ದಿಸುತ್ತಿದ್ದೆ. ಹೋದಲ್ಲಿ ಬಂದಲ್ಲಿ ಶಂಭೂ ಎಂದು ಕೂಗುತ್ತಿದ್ದೆ. ಅದು ತಲೆ ಎತ್ತಿ ಕಿವಿಯನ್ನು ಮುಂದೆ ಮಾಡಿ ನನ್ನನ್ನು ನೋಡುತ್ತಿತ್ತು. ಅದರ ಮುಖವನ್ನು ನನ್ನ ತಲೆಗೆ ಒತ್ತಿ ಹಿಡಿದು ದೂಡುತ್ತಿದ್ದೆ. ಅದರ ಎದುರು ಗಟ್ಟಿಯಾಗಿ ನಿಂತುಕೊಂಡು ಕಿವಿಯನ್ನು ಹಿಡಿದುಕೊಂಡು ನನ್ನ ಕಾಲುಗಳಮಧ್ಯೆ ಅದರ ಮಂಡೆಯನ್ನು ತಂದು ಅದಕ್ಕೆ ಗುದ್ದಲು ಹೇಳಿ ಕೊಡುತ್ತಿದ್ದೆ. ಅದನ್ನು ಅಂಗಳದಲ್ಲೆಲ್ಲಾ ಓಡಿಸುತ್ತಿದ್ದೆ. ಆ ಕರುವೂ ನನ್ನನ್ನು ತುಂಬಾ ಹಚ್ಚಿಕೊಳ್ಳತೊಡಗಿತು.ಬೆಳಿಗ್ಗೆ ಗುಡ್ಡಕ್ಕೆ ಎಲ್ಲಾ ಗಂಟಿಗಳನ್ನು ಎಬ್ಬಿಕೊಂಡು ಹೋಗುವಾಗ ಅದು ಮಾತ್ರಾ ಆ ಗಂಟಿಗಳ ಜೊತೆಗೆ ಹೆಚ್ಚು ಬೆರೆಯದೇ ನಾನು ಹೋದಲ್ಲಿ ಬಂದಲ್ಲಿ ಬರುತ್ತಿತ್ತು. ನಾನೂ ಅದಕ್ಕೆ ಸೊಪ್ಪುಗಳನ್ನು ನ್ಯಾಗಳ್ ಬೀಳು ಅದೂ ಇದೂ ಕಿತ್ತು ಕಿತ್ತು ಕೊಡುತ್ತಿದ್ದೆ. ಮನೆಗೆ ಬಂದರೆ ಅದು ಎಲ್ಲ ಗಂಟಿಗಳ ಜೊತೆಗೆ ಹಟ್ಟಿಗೆ ಹೋಗದೇ ನನ್ನ ಹಿಂದೆಯೇ ಜಗುಲಿಗೇ ಬರುತ್ತಿತ್ತು. ನಾನು "ಇಲ್ಲಿಗ್ಯಾಕೆ ಬಂದೆ?" ಎಂದು ಅದರ ಮುಖ ಹಿಡಿದು ಮುದ್ದಿಸಿ, ಹಾಗೆಯೇ ಅದರ ಕಿವಿಯನ್ನು ಹಿಡಿದು ದೂಡಿಕೊಂಡೇ ಅದರ ಗೂಡಿನ ತನಕಹೋಗಿ ಬಿಟ್ಟು ಬರುತ್ತಿದ್ದೆ. ನಂತರ ಅದರ ಕುತ್ತಿಗೆಗೆ ಒಂದು ಹುರಿಹಗ್ಗದಿಂದ ನೇಯ್ದು ಮಾಡಿದ ಒಂದು  ಚಂದದ ಗಗ್ಗರವನ್ನು ಕಟ್ಟಿದೆ.

ಒಮ್ಮೆ ವಂಡಾರು ಕಂಬಳಕ್ಕೆ ಅದನ್ನು ಕರೆದುಕೊಂಡು ಹೋಗಲು ಮನಸ್ಸಾಯಿತು. ವಂಡಾರು ಕಂಬಳದ ಗದ್ದೆ ನಮ್ಮ ಮನೆಯಿಂದ ಮೂರು ಮೈಲಿಯ ದೂರದಲ್ಲಿ ಇತ್ತು. ಕಂಬಳದ ಗದ್ದೆಗೆ ಎತ್ತುಗಳನ್ನು ಇಳಿಸಿದರೆ ಒಳ್ಳೆಯದು ಎಂದು ಯಾರೋ ಹೇಳಿದ್ದರು. ಕಂಬಳದ ಗದ್ದೆ ಅಂದರೆ ಅದು ಹತ್ತಾರು ಎಕರೆ ವಿಸ್ತೀರ್ಣದ ದೊಡ್ಡ ಗದ್ದೆ ಅದು ನಮ್ಮ ರೈತರಿಗೆ ಒಂದು ಪವಿತ್ರವಾದ ಸ್ಥಳ. ಮೈಯಲ್ಲಿ ತೊನ್ನು ಆದರೆ, ಗಂಟಿಕರುಗಳಿಗೆ ಒಣಗು ಕಾಯಿಲೆ ಆದರೆ, ಆ ಕಂಬಳ ಗದ್ದೆಯ ಸುತ್ತಲೂ ಅಕ್ಕಿಯನ್ನು ಚೆಲ್ಲುತ್ತೇನೆ ಎಂದು ಹರಕೆ ಹೊತ್ತರೆ ಕಾಯಿಲೆ ಗುಣವಾಗುತ್ತದಂತೆ ಅಂತ ಜನ ಹೇಳುತ್ತಿದ್ದರು. ಆ ಕಂಬಳದ ಗದ್ದೆಗೆ ಒಂದು ಸುತ್ತು ಬರಲು ಮೂರ್ನಾಲ್ಕು ಮೈಲಿಯಾದರೂ ನಡೆಯಬೇಕಿತ್ತು. ಆ ಕಂಬಳದ ಗದ್ದೆಯ ಒಂದು ಬದಿಯಲ್ಲಿದ್ದ ಬಾವಿಯಲ್ಲಿ  ಒಂದು ಮೊಸಳೆಯೂ ಇದೆ ಎಂದೂ ಪ್ರತೀತಿ.

ಬಹಳ ಹಿಂದಿನ ಕಾಲದಲ್ಲಿ ಆ ಕಂಬಳ ಗದ್ದೆಯನ್ನು ನಟ್ಟಿ ಮಾಡಲು ಅಲ್ಲಿ ಇರುವ ಒಂದು ದೈವವೇ ಬರುತ್ತಿತ್ತಂತೆ. ರಾತ್ರಿ ಒಂದು ಅಗೆಯನ್ನು ನಟ್ಟರೆ ಸಾಕು ಬೆಳಿಗ್ಗೆ ಬಂದು ನೋಡುವಾಗ ಇಡೀ ಗದ್ದೆಯ ನಟ್ಟಿ ಆಗಿರುತ್ತಿತ್ತಂತೆ. ಒಮ್ಮೆ ಯಾರೋ ಒಬ್ಬ ಪುಂಡ ಆ ದೈವವನ್ನು ಪರಿಶೀಲಿಸಲು ಗದ್ದೆಯ ಒಡೆಯರು ನೆಟ್ಟು ಹೋದ ಅಗೆಯನ್ನು ಅವರು ಹೋದ ನಂತರ ಮೆಲ್ಲಗೇ ಹೋಗಿ ಅದನ್ನು ತಲೆಯಡಿಮಾಡಿ ನೆಟ್ಟುಹೋದನಂತೆ. ಬೆಳಿಗ್ಗೆ ನೋಡುವಾಗ ಇಡೀ ಗದ್ದೆಯಲ್ಲಿ ನಟ್ಟಿಯಾಗಿದ್ದು, ಬೇರು ಮೇಲೆ, ಅಗೆಯ ತುದಿ ಕೆಳಗೆ. ಹೌದೋ ಅಲ್ಲವೋ ಗೊತ್ತಿಲ್ಲ.

ಅಂತಹಾ ಕಾರಣೀಕವಾದ ವಂಡಾರು ಕಂಬಳದ ಗದ್ದೆಗೆ ನನ್ನ ಶಂಭು ವನ್ನು "ಬಾ" ಎಂದ ಕರೆದುಕೊಂಡು ಹೋದೆ. ಅದು ನನ್ನನ್ನು ಬಿಟ್ಟು ಎಲ್ಲಿಯೂ ಹೋಗುವುದಿಲ್ಲ ಎಂಬ ನಂಬಿಕೆಯಿಂದ ಅದರ ಕುತ್ತಿಗೆಗೆ ಹಗ್ಗವನ್ನೂ ಹಾಕಿರಲಿಲ್ಲ. ಅದು ನನ್ನ ಹಿಂದೆಯೇ ಬಂದಿತ್ತು. ಕುತ್ತಿಗೆಗೆ ಕಟ್ಟಿದ ಗಗ್ಗರ ಸದ್ದು ಮಾಡುತ್ತಾ ಇತ್ತು. ಅದು ನನ್ನ ಜೊತೆಗೆ ಕಂಬಳದ ಗದ್ದೆಯವರೆಗೂ ಬಂದು ನನ್ನ ಜೊತೆಗೆ ಗದ್ದೆಯನ್ನೂ ಇಳಿಯಿತು. ಅದರ ಕುತ್ತಿಗೆಯನ್ನು ಹಿಡಿದು ಕೆಸರು ನೀರಿನಲ್ಲಿ ಒಂದೆರಡು ಸಲ ಮುಳುಗಿಸಿದೆ. ಮೈಗೆಲ್ಲ ಕೆಸರನ್ನು ಚೋಕಿದೆ. ಮತ್ತೆ "ಬಾ ಹೋಗುವ" ಎಂದು ಅದರ ಕುತ್ತಿಗೆಯ ಗಗ್ಗರಕ್ಕೆ ಕೈ ಹಾಕಿ ಹೇಳಿದೆ. ಅದು ನನ್ನ ಹಿಂದೆಯೇ ಬಂದಿತು. ಹಾಗೆಯೇ ಮನೆಯವರೆಗೂ ನನ್ನ ಹಿಂದೆಯೇ ಬಂತು.

ನನಗೆ  ಉಡುಪಿಯಲ್ಲಿ ಕೆಲಸ ಸಿಕ್ಕಿದ ನಂತರವೂ ನಾನು ಪ್ರತೀ ವಾರ ಮನೆಗೆ ಹೋಗುತ್ತಿದ್ದೆ. ನನ್ನ ಪ್ರೀತಿಯ ದಾಸು ನಾಯಿಯಂತೆಯೇ ಈ ಶಂಭು ಕೂಡ ನಾನು ಬಂದದ್ದು ಗೊತ್ತಾಗಿ, ಮನೆಗೆ ಬಂದ ನನ್ನ ಸ್ವರ ಕೇಳಿದ ಕೂಡಲೇ ಕಿವಿಯನ್ನು ನಿಗುರಿಸಿ ತಲೆಯನ್ನು ಎತ್ತಿ, "ಹೂಂ,ಹೂಂ" ಎಂದು ಹೂಂಕರಿಸಿ ಕರೆಯುತ್ತಿತ್ತು. ನಾನು ಅದರ ಹತ್ತಿರ ಹೋಗಿ "ಏನಾ ಶಂಭು?" ಎಂದು ನನ್ನ ತಲೆಯನ್ನು ಅದರ ಮುಖಕ್ಕೆ ಒತ್ತಿ, ಹಿಡಿದು ಅಪ್ಪಿ ಮಾತಾಡಿಸಿ ಬರುತ್ತಿದ್ದೆ.

ಆದರೆ ಅಮ್ಮ, ನಮ್ಮ ದೊಡ್ಡಣ್ಣಯ್ಯ ಇರುವ ಚೇರಿಕೆಯ ಮನೆಗೆ ಬಂದು ಇದ್ದುದರಿಂದ ಅವಳನ್ನು ನೋಡಲು ಚೇರಿಕೆಯ ಮನೆಗೆ ಬರುವುದಾಯಿತು. ನಾನು ಕ್ರಮೇಣ ಆ ಶಂಭುವನ್ನು ಮರೆತು ಬಿಟ್ಟೆ. ಶಂಭುವನ್ನು ನೋಡಲು ಹೋಗಲಾಗುತ್ತಿರಲಿಲ್ಲ. ಅದು ನನ್ನನ್ನು ನೆನಪಿಸಿಕೊಂಡು ಎಷ್ಟು ಹಂಬಲಿಸುತ್ತಿತ್ತೋ ನನಗೆ ಗೊತ್ತಾಗಲೇ ಇಲ್ಲ. ನಾನು ನನ್ನ ಹೋರಾಟದ ಬದುಕಿನ ಹಿಂದೆ, ಕೆಲಸದ ಮಧ್ಯೆ ಎಲ್ಲೋ ಕಳೆದು ಹೋಗಿ ಬಿಟ್ಟಿದ್ದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ