ಗುರುವಾರ, ಏಪ್ರಿಲ್ 26, 2018

ದಿನೇಶ ಉಪ್ಪೂರ:

*ನನ್ನೊಳಗೆ - 93*

ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಓದುತ್ತಿದ್ದಾಗ ನಾನೂ ಮತ್ತು ಗೋಪಿ ರೂಮ್ ಮೇಟ್ಸ್ ಆಗಿದ್ದೆವು. ಅವನು ಬಿಎ.
ನಾನು ಬಿಎಸ್ಸಿ. ಸಂಜೆ ಕಾಲೇಜು ಮುಗಿಸಿಕೊಂಡು ಬಂದರೆ ಇಬ್ಬರೂ ಸೇರಿಬಸ್ ಸ್ಟಾಂಡ್ ಅವಿನಾಶ್ ಮೆಡಿಕಲ್ ಶಾಪಿಗೆ ಹೊರಡುವುದು.

 ಗೋಪಿ ಅಲಂಕಾರ ಪ್ರಿಯ. ಸಂಜೆಯೂ ಒಮ್ಮೆ ಸೋಪು ಹಾಕಿ ಮುಖ ತೊಳೆದು ತಲೆಗೆ ಅದೇನೋ ಕೂಲ್ ಆಗಲಿಕ್ಕೆ ಕ್ರೀಮ್ ಹಚ್ಚಿಕೊಂಡು ಮುಖಕ್ಜೆ ಫ್ಯಾರ್ ಅಂಡ್ ಲವ್ಲಿ ಹಚ್ಚಿ ಅದರ ಮೇಲೆ ಪೌಡರ್ ಹಾಕಿಕೊಳ್ಳುತ್ತಿದ್ದ. ಒಂದು ಕಾಲುಗಂಟೆ ಕನ್ನಡಿಯ ಮುಂದೆ ನಿಂತು ಆ ಕಡೆ ಈ ಕಡೆ ಮುಖ ತಿರುಗಿಸಿ ತಿರುಗಿಸಿ ನೋಡಿ ತಲೆಬಾಚಿಕೊಂಡು ಕಡೆಗೆ "ನೀನು ಬರದಿದ್ದರೆ ಬಿಡು ಮಾರಾಯಾ, ನಾನು ಮುಂದೆ ಹೋಗ್ತೆ" ಎಂದು ನನ್ನ ಹತ್ತಿರ ಬೈಸಿಕೊಂಡು ಆಮೇಲೆ ಹೊರಡುತ್ತಿದ್ದ. ಬಹಳ ಶೋಕಿ ಮನುಷ್ಯ.

 ಅವಿನಾಶ ಮೆಡಿಕಲ್ಸಿನಲ್ಲಿ ರಾಜ ಹೆಬ್ಬಾರ ನಮಗಿಬ್ಬರಿಗೂ ಸ್ನೇಹಿತ. ನಾನು ಮತ್ತು ಗೋಪಿ ಮೊದಲನೇ ವರ್ಷದ ವಿದ್ಯಾರ್ಥಿಗಳಾದರೆ ಅವನು ಅಂತಿಮ ವರ್ಷದಲ್ಲಿ ಓದುತ್ತಿದ್ದ. ಅಂಗಡಿಯಲ್ಲಿ ರಶ್ ಇದ್ದು ಗಿರಾಕಿಗಳು ತುಂಬಾ ಇದ್ದರೆ ನಾನೂ ಮತ್ತು ಗೋಪಿ ಅಲ್ಲಿಯೇ ಹೊರಗೆ ಇದ್ದ ಒಂದು ಬೆಂಚಿನಮೇಲೆ ಕುಳಿತುಕೊಂಡು ಆ ಕಡೆ ಈ ಕಡೆ ನೋಡುತ್ತಾ  ಯಾವ ಯಾವುದೋ ವಿಷಯವನ್ನು ಮಾತಾಡುತ್ತಾ ಕಾಲ ಕಳೆಯುತ್ತಿದ್ದೆವು. ರಾಜನಿಗೆ ಸ್ವಲ್ಪ ಪುರಸೊತ್ತು ಆದ ಕೂಡಲೇ ಅವನು ಹೊರಗೆ ಬರುತ್ತಿದ್ದ. ನಾವು ಮೂವರೂ ಹೋಟೆಲಿಗೆ ಹೋಗಿ ಕಾಫಿತಿಂಡಿ ಮುಗಿಸುತ್ತಿದ್ದೆವು. ಮತ್ತೆ ಪುನಹ ಅಂಗಡಿಗೆ ಬಂದು ಕುಳಿತುಕೊಳ್ಳುತ್ತಿದ್ದೆವು‌ ಕೆಲವೊಮ್ಮೆ ಅಂಗಡಿಯ ಒಳಗೂ ಹೋಗಿ ಮದ್ದು ಕೊಡುವ ಕೆಲಸದಲ್ಲಿ ರಾಜನಿಗೆ ಸಹಾಯವನ್ನೂ ಮಾಡುತ್ತಿದ್ದೆವು. ಯಕ್ಷಗಾನದಲ್ಲಿ ನಮಗೆ ಸಮಾನ ಆಸಕ್ತಿ. ಒಟ್ಡಿಗೇ ಆಟಕ್ಕೆ ಹೋಗುವುದು.

ಒಮ್ಮೆ ಹೀಗೆ ಮಾತಾಡುತ್ತಾ  "ನಾವೂ ಒಂದು ಆಟ ಮಾಡುವಾನಾ" ಎಂದು ಗೋಪಿ ಹೇಳಿದ. "ಹೋ" ಅಂತ ನಾನು ರಾಜ ಒಪ್ಪಿದೆವು. ನಾವು ಮೂವರು ವೇಷಮಾಡುವವರಾದರೆ ಜೊತೆಗೆ ಶಿವಸ್ವಾಮಿ ಹೊಳ್ಳರು ಎನ್ನುವ ಮಾಸ್ಟ್ರು ಗೋಪಾಲ ಶೆಟ್ಟಿಗಾರರು ಹಾಗೂ ನಮ್ಮ ಕಾಲೇಜಿನಲ್ಲಿ ಎಟೆಂಡರ್ ಕೆಲಸ ಮಾಡುತ್ತಿದ್ದ ಕುಮಾರ ಮತ್ತು ಹೊಳ್ಳರ ಪೈಕಿ ಒಬ್ಬ ಅವನ ಹೆಸರು ನೆನಪಿಲ್ಲ ಅವನು. ಹೀಗೆ ನಾವು ಕಲಾವಿದರ ಒಂದು ಪಟ್ಟಿ ಮಾಡಿದೆವು. ಭಾಗವತಿಕೆಗೆ ರಾಜನ ಅಪ್ಪಯ್ಯ ಸದಾನಂದ ಹೆಬ್ಬಾರರು. ಮದ್ದಲೆ ಬಾರಿಸಲು ನನ್ನ ಅಣ್ಣ ಸುರೇಶ ಉಪ್ಪೂರರು.  ಹಾರ್ಮೋನಿಯಂ ಬಾರಿಸಲು ಕೋಟ ಗಿಳಿಯಾರು ಶಾಲೆಯ ಎಟೆಂಡರ್ ಒಬ್ಬ ಬಾಬು ಅಂತ ಇದ್ದರು. ಸದಾನಂದ ಹೆಬ್ಬಾರರನ್ನು ಮಾತಾಡಿಸಿ ಒಪ್ಪಿಸಿಯಾಯಿತು. ಮಣೂರಿನ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದುದಿನ ರಾತ್ರಿ ಎಲ್ಲರೂ ಸೇರುವುದು ಅಂತ ನಿಶ್ಚಯವಾಯಿತು.

ನಿಶ್ಚಿತ ದಿನದಂದು ಆ ಮಣೂರು ಶಾಲೆಯಲ್ಲಿ ಎಲ್ಲರೂ ಸೇರಿದ ಮೇಲೆ ಎಂತ ಪ್ರಸಂಗ ಮಾಡುವುದು? ಅಂತ ಚರ್ಚೆಯಾಯಿತು. ಶ್ರೀ
ಸದಾನಂದ ಹೆಬ್ಬಾರರು "ರತ್ನಾವತಿ ಕಲ್ಯಾಣ ಮಾಡುವ" ಎಂದರು. ರಾಜನ ಭದ್ರಸೇನ, ಶಿವಸ್ವಾಮಿ ಹೊಳ್ಳರ ದೃಢವರ್ಮ, ಗೋಪಿಯ ಹಾಸ್ಯ,  ಗೋಪಾಲ ಶೆಟ್ಟಿಗಾರರ ವಿದ್ಯುಲ್ಲೋಚನ ಹಾಗೂ ನಾನು ರತ್ನಾವತಿ ಮಾಡಬೇಕು ಎಂದು ಹೆಬ್ಬಾರರು ಹೇಳಿದರು.

ನನಗೆ ಒಂದು ಕ್ಷಣ ಏನು ಹೇಳಬೇಕು ಎಂದೇ ತೋರಲಿಲ್ಲ. ಯಾಕೆಂದರೆ ಸ್ತ್ರೀ ವೇಷ ಮಾಡಲು ನನಗೆ ಇಷ್ಟವೇ ಇರಲಿಲ್ಲ. ಮತ್ತೇನಲ್ಲ ಮೀಸೆ ತೆಗೆಯುವುದು ಹೇಗೆ? ನಾಳೆಗೆ ಮತ್ತೆ ಕಾಲೇಜಿಗೆ ಹೋಗುವುದು ಬ್ಯಾಡವಾ? ಅಲ್ಲಿ ಎಲ್ಲರೂ ತಮಾಷೆ ಮಾಡುತ್ತಾರೆ ಎಂದು ಆತಂಕ. ಅದನ್ನೇ ಹೇಳಿದೆ. ಮತ್ತೆ ಮೀಸೆ ಇಟ್ಟುಕೊಂಡೇ ಯಾರಾದರೂ ಸ್ತ್ರೀ ವೇಷ ಮಾಡುತ್ತಾರಾ? ಮೀಸೆ ತೆಗೆಯುವುದೆ ಮತ್ತೆಂತ" ಎಂದರು ಹೆಬ್ಬಾರರು. ನಾನು ಸುಮ್ಮನಾದೆ.

ಮರುದಿನ ರಾಜನ ಹತ್ತಿರ "ನಾನು ಸ್ತ್ರೀ ವೇಷ ಮಾಡಲಾರೆ ಮೀಸೆ ತೆಗೆಯಲು ಸಾಧ್ಯವೇ ಇಲ್ಲ" ಎಂದು ನನ್ನ ತೀರ್ಮಾನ ಹೇಳಿದೆ. ನಮ್ಮ ಗುಂಪಿನಲ್ಲಿ ಬೇರೆ ಯಾರೂ ಸ್ತ್ರೀ ವೇಷ ಮಾಡುವವರು ಇರಲೂ ಇಲ್ಲ. ಹಾಗಾಗಿ ಅವನು "ನಿನ್ನ ವೇಷ ಚಂದ ಆತ್ತಾ. ನೀನೇ ಮಾಡು" ಎಂದು ಉಬ್ಬಿಸಲು ನೋಡಿದ. ನಾನು ಒಪ್ಪಲೇ ಇಲ್ಲ. ಈ ಗೋಪಿಯೊಬ್ಬ ಆಚೆಕಡೆಗೂ ಇದ್ದಾನೆ. ಈಚೆಕಡೆಗೂ ಇದ್ದಾನೆ. ಅವನು ಹೇಳಿದ್ದೂ ಸರಿ ಅನ್ನುತ್ತಾನೆ. ನಾನು ಹೇಳಿದ್ದೂ ಸರಿ ಅನ್ನುತ್ತಾನೆ. ಕೊನೆಗೆ ಮಾತಿಗೆ ಮಾತು ಬೆಳೆದು ಒಂದು ಸಲ ಸುಮ್ಮನೇ ವೇಷ ಹಾಕಿಸಿ ನೋಡುವ ಎಂದು ಗೋಪಿಯು ತೀರ್ಮಾನ ಹೇಳಿದ. ನನಗೆ ಅದನ್ನು ಒಪ್ಪಿಕೊಳ್ಳದೇ ಉಪಾಯವಿರಲಿಲ್ಲ. ಅರೆಮನಸ್ಸಿನಿಂದ ಒಪ್ಪಿದೆ.
ಅದೇ ಒಂದು ನಾಲ್ಕು ದಿನಕ್ಕೆ ಕುಂದಾಪುರದಲ್ಲಿ ಅಮೃತೇಶ್ವರಿ ಮೇಳದ ಆಟ ಇತ್ತು. ನಾವು ಸುಮಾರು ಆರುಗಂಟೆಗೆ ಚೌಕಿಗೆ ಹೋಗಿ ಪೀಠಿಕೆ ಸ್ತ್ರೀ ವೇಷ ಮಾಡುವವರನ್ನು ಮಾತಾಡಿಸಿದೆವು. ಆಗ ಬಹುಷ್ಯ ಗಾವಳಿ ಬಾಬು ಅನ್ನುವವರು ಪೀಠಿಕೆ ಸ್ತ್ರೀ ವೇಷ ಮಾಡುತ್ತಿದ್ದರು ಅಂತ ನೆನಪು. ಅವರಿಗೆ ನನ್ನ ಪರಿಚಯವಿತ್ತು. ಅಲ್ಲದೇ ಭಾಗವತರ ಮಗ ಅಲ್ಲವೇ? ಕಷ್ಟದಿಂದ ಮೀಸೆ ತೆಗೆಸಿಕೊಂಡು ಹೋಗಿದ್ದೆ. ಅಂತೂ ಬಾಬು ನನ್ನ ಮುಖಕ್ಕೆ ಬರೆದು ಸೀರೆ ಉಡಿಸಿ ಒಂದು ಸ್ತ್ರೀ ವೇಷ ಮಾಡಿಯೇ ಬಿಟ್ಟರು. ಛಾಯಾ ಸ್ಟುಡಿಯೋದ ಗೋವಿಂದ ಎನ್ನುವವರನ್ನು ರಾಜ ಕರೆಸಿದ್ದ ಅವರಿಂದ ನಾಲ್ಕಾರು ಪೋಟೋವನ್ನು ತೆಗೆಸಿದ್ದಾಯಿತು. ಕೂಡಲೇ ವೇಷ ಕಳಚಿ ಆಟ ನೋಡಿಕೊಂಡು ಬಂದೆವು.

 ನಾನು ಅಷ್ಟಾದರೂ ಸ್ತ್ರೀ ವೇಷ ಮಾಡಲು ಪೂರ್ತಿಯಾಗಿ ಒಪ್ಪಿಕೊಳ್ಳದೇ "ಗುರುಗುರು" ಮಾಡುತ್ತಿದ್ದೆ. ಒಂದೆರಡು ದಿನದಲ್ಲೇ ಪೋಟೋ ಗಳೂ ಬಂದವು. ರಾಜ ಅದನ್ನು ನನಗೆ ತೋರಿಸಿ "ನೋಡು ಎಷ್ಟು ಚಂದ ಇತ್ತು ಕಾಣು ನೀನೇ ನಮ್ಮ ಮೇಳದ ಸ್ತ್ರೀ ವೇಷದವನು" ಎಂದು ಮತ್ತಷ್ಟು ಉಬ್ಬಿಸಿದ. ಕೊನೆಗೂ ಎಲ್ಲರ ಒತ್ತಾಯಕ್ಕೆ ರತ್ನಾವತಿ ಕಲ್ಯಾಣದ ರತ್ನಾವತಿಯನ್ನು ಮಾಡಲು ಒಪ್ಪಿಕೊಂಡೆ.

 ಸದಾನಂದ ಹೆಬ್ಬಾರರು ರತ್ನಾವತಿಗೆ ಕೆಲಸ ಕಡಿಮೆ, ಕುಣಿಯಲು ಅವಕಾಶ ಇಲ್ಲ ಎಂದು ಮೊದಲಿಗೆ ಒಡ್ಡೋಲಗ ಆದ ಮೇಲೆ ರತ್ನಾವತಿಯ ಪ್ರವೇಶ ಮಾಡಿಸಿ ತಂದೆ ದೃಢವರ್ಮನ ಹತ್ತಿರ ಬಂದು ತನಗೆ ಮದುವೆ ಮಾಡಿಸು ಎಂದು ಕೇಳಿಕೊಳ್ಳುವ ಒಂದು ದೃಶ್ಯವನ್ನು ಸೇರಿಸಿ, ಒಂದೆರಡು ಪದ್ಯವನ್ನು ಅವರೇ ಹೊಸದಾಗಿ ಬರೆದು ಹೇಳುತ್ತಿದ್ದರು.

ಹತ್ತಾರು ಕಡೆಗಳಲ್ಲಿ ರತ್ನಾವತಿ ಕಲ್ಯಾಣ ಪ್ರದರ್ಶನವಾಯಿತು. ಕೊನೆಗೆ ಪ್ರಭಾಕರ ಐತಾಳ ಎಂಬವರು ನಮ್ಮೊಡನೆ ಸೇರಿಕೊಂಡು ಭದ್ರಸೇನ ಮಾಡುತ್ತಿದ್ದರು. ಆಗ ರಾಜ ವತ್ಸಾಖ್ಯ ಎಂಬ ಪಾತ್ರ ಮಾಡುತ್ತಿದ್ದ.

ಎಲ್ಲರೂ ಸೇರಿ ಮೀಸೆ ತೆಗೆಸಿದ ಸಿಟ್ಟು ನನಗಿನ್ನೂ ಕಡಿಮೆಯಾಗಿರಲಿಲ್ಲ. ಬರೀ ಸ್ತ್ರೀ ವೇಷ ಮಾಡಿ ಮಾಡಿ ನನಗೆ ಬೇಸರವಾಗತೊಡಗಿತ್ತು.

ಒಂದು ಸಲ ಆಟದ ದಿನ ನಾನು ರಾಜನ ಹತ್ರ  "ಇವತ್ತು ನಾನು ರತ್ನಾವತಿ ಮಾಡುವುದಿಲ್ಲ" ಎಂದು ಖಡಾಖಂಡಿತವಾಗಿ ಹೇಳಿದೆ. ಅವನು ಮೊದಲು ಅಷ್ಟು ಸೀರಿಯಸ್ಸಾಗಿ ತೆಗೆದುಕೊಳ್ಳದಿದ್ದರೂ ನಾನು ಪದೇಪದೆ ಹೇಳಿದಾಗ, "ಹಾಗಾದರೆ ನಾನು ಮಾಡೂದಾ?" ಎಂದ. ನಾನು ಅದನ್ನೇ ಗಟ್ಟಿಮಾಡಿಕೊಂಡು, ಹೌದು, ನೀನೂ ಮೀಸೆ ತೆಗೆದುಬಿಡು ನೋಡುವ ಈ ಒಂದು ಸಾರಿಯಾದರೂ ನೀನು ರತ್ನಾವತಿ ಪಾತ್ರ ಮಾಡು. ನಾನು ವತ್ಸಾಖ್ಯ ಮಾಡ್ತೇನೆ" ಎಂದೆ.

ಅಂತೂ ಅವನ ಮೀಸೆಯನ್ನೂ ತೆಗೆಸುವ ಹಟತೊಟ್ಟೆ. ಕೊನೆಗೆ ಅದೇ ಜಗಳವಾಗಿ ಸಂಜೆಯ ಹೊತ್ತಿಗೆ ಗೋಪಿಯ ಸಂಧಾನವಾಗಿ ಅವನು "ನೋಡಿಯೇ ಬಿಡುವ" ಎಂದು ಮೀಸೆಯನ್ನು ತೆಗೆದು ರತ್ನಾವತಿ ಮಾಡಲು ಸಿದ್ಧನಾದ. ನನಗೂ ಒಳಗೊಳಗೆ ನಗು. ಅಂದು ಅವನು ರತ್ನಾವತಿ ಮಾಡಿದ. ನಾನು ವತ್ಸಾಖ್ಯನ ಪಾತ್ರವನ್ನು ಮಾಡಿದೆ. ಅಂತೂ ನನ್ನ ಹಟ ಗೆದ್ದುಬಿಟ್ಟಿತು.  ಆದರೆ ಮುಂದಿನ ಸಲ ಮತ್ತೆ ನಾನೇ ರತ್ನಾವತಿಯನ್ನೇ ಮಾಡಬೇಕಾಯಿತು. ಅದನ್ನೆಲ್ಲ ನೆನಪಿಸಿಕೊಂಡರೆ ಈಗ ನಗು ಬರುತ್ತದೆ.

ಕಾಲೇಜು ಮುಗಿದ ನಂತರ ನಮ್ಮ ಬದುಕು ಬೇರೆ ಬೇರೆ ದಿಕ್ಕನ್ನು ಹಿಡಿದು ಪಯಣ ಸಾಗಿತು. ರಾಜ ಶಿರೂರಿನಲ್ಲಿ ಔಷಧಿ ಅಂಗಡಿಯನ್ನು ನಡೆಸಿದ. ನಂತರ ಈಗ ಹಂಗಾರಕಟ್ಟೆ ಕೇಂದ್ರವನ್ನು ಕಾರ್ಯದರ್ಶಿಯಾಗಿ ನಡೆಸುತ್ತಿದ್ದಾನೆ. ಗೋಪಿ ಯಾವಾಗಾದರೊಮ್ಮೆ ಉಡುಪಿಯಲ್ಲಿ ಸಿಗುತ್ತಿದ್ದ. ಆದರೆ ಅವನು ಅದೇನೋ ಸ್ವಂತ ವ್ಯಾಪಾರ ಮಾಡುತ್ತಿದ್ದೇನೆ ಎಂದು ಹೇಳುತ್ತಿದ್ದ. ನೋಡಲು ಹಿಂದಿನಂತೆಯೇ ಜಾಲಿಯಾಗಿಯೇ ಇದ್ದ. ಜೊತೆಗೆ ಕುಡಿತದ ಚಟವೂ ಅವನಿಗೆ ಅಂಟಿಕೊಂಡಿತು. ಮೊನ್ನೆ ಮೊನ್ನೆ ಅದೇ ವಿಪರೀತವಾಗಿ ಕೊನೆಯುಸಿರೆಳೆದ ಎಂಬ ಸುದ್ದಿಯೂ ಬಂದು ಹೀಗೆ ಒಮ್ಮೆ ಹಿಂದಿನದ್ದೆಲ್ಲ ನೆನಪಾಯಿತು.

2 ಕಾಮೆಂಟ್‌ಗಳು: