ಶನಿವಾರ, ಏಪ್ರಿಲ್ 14, 2018

ದಿನೇಶ ಉಪ್ಪೂರ:

*ನನ್ನೊಳಗೆ - 92*

ನಮ್ಮ ಕಲ್ಲಟ್ಟೆ ಮನೆಯ ಅಂಗಳದ ಬಾವಿಕಟ್ಟೆಯ ಹತ್ತಿರದ ದಂಡೆಯ ಬದಿಯಲ್ಲಿ ಒಂದು ದೊಡ್ಡ ದಿವೆಲ್ಸಿನ ಮರ ಇತ್ತು. ಒಂದು ವರ್ಷ ಅದರಲ್ಲಿ ತುಂಬಾ ದಿವೆಲ್ಸಿನ ಕಾಯಿ ಆಗಿತ್ತು. ದಿವೆಲ್ಸಿನ ಕಾಯಿಯ ಹುಳಿ (ಸಾಂಬಾರ್)ಎಂದರೆ ನಮಗೆಲ್ಲ ಅಷ್ಟು ಪ್ರೀತಿ. ಪಳಿದ್ಯ(ಮಜ್ಜಿಗೆಹುಳಿ)ಯನ್ನೂ ಮಾಡುತ್ತಾರೆ. ಸಣ್ಣಗೆ ಕೊಚ್ಚಿ ಪಲ್ಯವನ್ನೂ ಮಾಡುತ್ತಾರೆ. ಎಣ್ಣೆಯಲ್ಲಿ ಕರಿದು ಬಜ್ಜಿಯನ್ನೂ ಪೋಡಿಯನ್ನು ಮಾಡಬಹುದು. ಅದರಲ್ಲೂ ಆ ದಿವೆಲ್ಸಿನ ಕಾಯಿಯ ಸಿಪ್ಪೆ ತೆಗೆದು ಸಣ್ಣಗೆ ತೆಳುವಾಗಿ ಕತ್ತರಿಸಿ ಸ್ವಲ್ಪ ಖಾರ ಹಿಟ್ಟಿನಲ್ಲಿ ಮುಳುಗಿಸಿ ದೋಸೆಯ ಕಲ್ಲಿನ ಮೇಲೆ ಹಾಕಿ ಸಣ್ಣ ಬೆಂಕಿಯಲ್ಲಿ ಕಾಯಿಸಿ ಗರಿಗರಿ ಆಗಿ ಮಾಡುವ ಚಟ್ಟಿ ಅಂತೂ ತಿನ್ನಲು ಬಹಳ ರುಚಿಯಾಗಿರುತ್ತದೆ.

ಆ ವರ್ಷ ಇಡೀ ಮರವೇ ದಿವೆಲ್ಸಿನ ಕಾಯಿಗಳ ಭಾರಕ್ಕೆ ಕೆಳಕ್ಕೆ ಭಾಗಿಬಿಟ್ಟಿತ್ತು. ನಮ್ಮ ಮನೆಗೆ ಆಗಾಗ ಬಂದು ಹೋಗುತ್ತಿದ್ದ ಉಗ್ರಾಣಿ ಶಾಷ ಒಮ್ಮೆ ಬಂದಾಗ ಅದನ್ನು ನೋಡಿ, "ಅಮ್ಮಾ, ಅದೆಷ್ಟ್ ಕಾಯಿ ಬಿಟ್ಟಿತ್ ಮಾರಾಯ್ರೆ ಇದರಂಗೆ?, ಮರವೇ ಹಿಸ್ಕಂಡ್ ಬೀಳುವ ಹಾಂಗಿತ್ತಲ್ಲೆ" ಅಂದ.

 ಆಗ ಅತ್ತೆ, "ಮಾರಾಯಾ ಅದಕ್ಕೊಂದು ನೀನು ಕಣ್ಣ್ ಹಾಕ್ಬೇಡ. ಮೊದಲೇ ನಿನ್ನ ಕಣ್ಣು ಕೆಟ್ಟದ್ದು ಅಂತ ಜನ ಹೇಳ್ತ್ರು" ಎಂದು ನಗಾಡಿದರು. ಅವನು ನಗುತ್ತಾ, "ಕಣ್ಣ್ ಬೀಳೂದಾ? ಸುಮ್ನೆ ಆಯ್ಕಣಿ, ಮತ್ತೆಂತ ಇಲ್ಯಾ?" ಎಂದು ಹಲ್ಲು ಕಿಸಿದು ನಗಾಡಿದ. ಮತ್ತು ನಮ್ಮ ಮನೆಯ ಜಗಲಿಯ ಮೇಲೆ ಬಂದು ಕುಳಿತು ಅದು ಇದು ಮಾತಾಡಿ, ಒಂದು ವೀಳ್ಯವನ್ನು ಹಾಕಿ, "ಹಾಂಗಾರೆ ನಾನು ಬತ್ ನೆ" ಎಂದು ಹೇಳಿ ತನ್ನ ಮನೆಯ ಕಡೆಗೆ ಹೊರಟ. ಅವನು ಆಚೆಗೆ ಹಾಗೆ ಹೋದನೋ ಇಲ್ಲವೊ, ಇತ್ತ ದಿವೆಲ್ಸಿನ ಕಾಯಿ ಇದ್ದ ಆ ಮರದ ಒಂದು ಗೆಲ್ಲು "ಪಟಾರ್" ಎಂದು ಮುರಿದು ಕೆಳಗೆ ಬಿತ್ತು. ಅದರಲ್ಲಿದ್ದ ದಿವೆಲ್ಸಿನ ಕಾಯಿಯೆಲ್ಲ ನೆಲಕ್ಕೆ ಬಿದ್ದು ಒಡೆದು ಹಾಳಾಗಿಬಿಟ್ಟಿತು.

ಅದು ದಿವೆಲ್ಸಿನ ಕಾಯಿಯ ಭಾರಕ್ಕೆ ಹಾಗೆ ಗೆಲ್ಲು ಮುರಿದು ಬಿದ್ದಿದ್ದಿರಬಹುದು. ಕಾಕತಾಳೀಯವಾಗಿ ಆ ಶಾಷ ಹಾಗೆ ಹೇಳಿಹೋದ ಸ್ವಲ್ಪ ಹೊತ್ತಿಗೇ ಬೀಳಬೇಕೆ? ಅವನ ಕಣ್ಣುತಾಗಿಯೆ ಗೆಲ್ಲುಮುರಿದು ಕಾಯಿಯೆಲ್ಲ ಹಾಳಾಯಿತು ಎಂದು ನಂಬಿದ ಅತ್ತೆಗೆ ಅದರಿಂದ ಬಹಳ ಬೇಸರವಾಯಿತು. ಆ ಶಾಷನ ಕಣ್ಣು ತಾಗಿಯೇ ಹಾಗಾಯಿತು ಎಂದು, ಶೇಷನಿಗೆ ಚೆನ್ನಾಗಿ ಬೈದು ಅವನನ್ನು ಇನ್ನು ಮನೆಗೆ ಸೇರಿಸಿಕೊಳ್ಳಬಾರದು ಎಂದು ನಿರ್ಧಾರವನ್ನೂ ಎಲ್ಲರಿಗೂ ಹೇಳಿದರು. ಅಷ್ಟಕ್ಕೆ ಅವರ ಸಿಟ್ಟು ತಣಿಯಲಿಲ್ಲ. "ಛೆ ಹೀಗಾಯ್ತಲ್ಲ. ಅವನು ಬರಲಿ, ಅವನ ಬಲಿ ತೆಗೆಯುತ್ತೇನೆ" ಎಂದು ಕಣ್ಣಲ್ಲಿ ನೀರು ತಂದುಕೊಂಡು ಒಂದು ಪ್ರತಿಜ್ಞೆಯನ್ನೂ ಮಾಡಿದರು.

 ಆದರೂ ಅವರಿಗೆ ಸಮಾಧಾನವಾಗಲಿಲ್ಲ. ಮಧ್ಯಾಹ್ನ ನಮ್ಮ ಮನೆಯ ಕೆಲಸದ ಆಳು ರಾಮ ಮರಾಠಿಯನ್ನು ಕರೆದು, "ಆ ಶಾಷ ಎಲ್ಲಿದ್ದ ಎಂದು ನೋಡಿ ಬಾ. ಅವನನ್ನು ನಾನು ಬರಲಿಕ್ಕೆ ಹೇಳಿದ್ದೆ ಎಂದು ಕರೆದುಕೊಂಡು ಬಾ" ಎಂದು ಆಜ್ಞೆಯನ್ನೂ ಮಾಡಿದರು. ರಾಮ ತಕ್ಷಣವೇ ಹೊರಟು ಶಾಷನ ಮನೆಗೆ ಹೋದರೆ, ಅವನು ಅಲ್ಲಿ ಇರಲಿಲ್ಲ. ಹಾಲಾಡಿ ಪೇಟೆಗೆ ಹೋಗಿರಬಹುದು ಎಂದು ಮನೆಯ ಅಕ್ಕ ಪಕ್ಕದವರು ಹೇಳಿದರು. ಪೇಟೆಗೂ ಹೋಗಿ, ಶಾಷ ಎಲ್ಲೆಲ್ಲಿ ಇರಬಹುದು ಎಂದು ಒಂದು ಅಂದಾಜಿನ ಮೇಲೆ ಹುಡುಕಿ, ಅಂತೂ ಅವನನ್ನು ಪತ್ತೆಮಾಡಿ "ಅಮ್ಮ ಬರಲಿಕ್ಕೆ ಹೇಳಿದರು" ಎಂದು ಸುದ್ದಿ ಮುಟ್ಟಿಸಿ ಬಂದ.

ಶಾಷ ಮೊದಲಿನಿಂದಲೂ ನಮ್ಮ ಮನೆಗೆ ವಿಧೇಯನಾಗಿದ್ದವನು. ಅಲ್ಲಿ ಇಲ್ಲಿ ತಿರುಗಾಟಕ್ಕೆ ಮಾತುಕತೆಗೆ ಬೇಕಾದವನು. ಅವನು, ಅತ್ತೆ ಬರಲು ಹೇಳಿದರು ಎಂದ ಕೂಡಲೇ ಅವನ ಎಲ್ಲ ಕೆಲಸವನ್ನು ಬಿಟ್ಟು ಸಂಜೆಯ ಹೊತ್ತಿಗೆ ಓಡೋಡಿ ಬಂದ.

ಅವನು ಬಂದ ಕೂಡಲೇ ಅತ್ತೆ ಅವನ ಮೇಲೆ ಇದ್ದ ಸಿಟ್ಟನ್ನೆಲ್ಲಾ ಕಾರಿದರು. "ನೀನು ಬೆಳಿಗ್ಗೆ ಹಾಗೆ ಹೇಳಿದ್ದರಿಂದಲೇ ಮರ ಬಿದ್ದು ಹೋಯಿತು. ನಿನ್ನ ಕಣ್ಣು ತಾಗಿ ಹೀಗೆ ಆಯಿತು. ನಿನ್ನ ಕಣ್ಣು ಹೊಟ್ಟಿಹೋಗಲಿ" ಎಂದು ಅವನಿಗೆ ಮಾತನಾಡಲೂ ಬಿಡದೇ ಚೆನ್ನಾಗಿ ಬೈದು ಅವನನ್ನು ಕರೆದುಕೊಂಡು ಮರದ ಬಳಿಗೆ ಬಂದು, "ನೀನು ಮರವನ್ನು ಮುಟ್ಟಬೇಕು, ಮತ್ತು ನನ್ನದು ತಪ್ಪಾಯಿತು ಎಂದು ಹೇಳಬೇಕು" ಎಂದು ಒಂದೇ ಸಮನೆ ಅವನಿಗೆ ಬೈದು, "ನೀನು ಮರವನ್ನು ಮುಟ್ಟಿ ತಪ್ಪಾಯಿತು ಅನ್ನದೆ ಇದ್ದರೆ ಇನ್ನು ನಮ್ಮ ಮನೆಗೆ ಬರುವುದೇ ಬೇಡ" ಎಂದೂ ಆಡಿಬಿಟ್ಟರು.

ಇವರ ರೌದ್ರಾವತಾರ ನೋಡಿದ ಆ ಶಾಷ ತನ್ನ ತಪ್ಪು ಏನು ಎಂದು ಗೊತ್ತಾಗದಿದ್ದರೂ ಮನೆಗೆ ಬರುವುದು ಬೇಡ ಎಂದದ್ದರಿಂದ ಮೆತ್ತಗಾಗಿ ಬಿಟ್ಟ. ಅತ್ತೆ ಹೇಳಿದಂತೆ ಮರದ ಬಳಿಗೆ ಹೋಗಿ, ಮರವನ್ನು ಮುಟ್ಟಿ "ಎಂತ ಅಮ್ಮ, ನೀವ್ ಹೀಂಗ್ ಯ್ಯಾಕ್ ಮಾಡ್ತ್ರಿ?  ನಾನು ಎಂತದೂ ಮಾಡ್ಲಿಲ್ಲೆ. ನೀವು ಹೀಂಗ್ ನನ್ನ ಮೇಲೆ ಅಪ್ವಾದ ಹೊರ್ಸುದಾ? ಇಗಣಿ ಏನೇ ಆಯ್ಲಿ ನೀವ್ ಬೇಸರ ಮಾಡಕಂಬುಕಾಗ ಅಂದೇಳಿ ನಾನು ಮರವನ್ನು ಮುಟ್ಟಿದಿ. ತಪ್ಪಾಯ್ತು ಅಂದಿ" ಎಂದು ದುಃಖದಿಂದ ನುಡಿದು ಮತ್ತೆ ಸೀದಾ ಜಗಲಿಗೆ ಬಂದು ಸುಮ್ಮನೇ ಕುಳಿತ. ಆದರೆ ಅಷ್ಟಕ್ಕೂ ಅತ್ತೆಯ ಸಿಟ್ಟು ಶಾಂತವಾಗಲಿಲ್ಲ. ಅತ್ತೆ ಅವನನ್ನೂ ಮಾತಾಡಿಸಿ ಸಮಾಧಾನ ಮಾಡುವ ಗೋಜಿಗೂ ಹೋಗಲಿಲ್ಲ. ಅವನು ಹಾಗೆ ಸುಮಾರು ಹೊತ್ತು ಕುಳಿತು ಕುಳಿತು ಸಾಕಾಗಿ ನಂತರ ನಿಧಾನವಾಗಿ ಎದ್ದು ತನ್ನಮನೆಗೆ ಪೆಚ್ಚುಮೋರೆ ಹಾಕಿಕೊಂಡು ಹೊರಟು ಹೋದ.

ಒಂದು ನಾಲ್ಕಾರು ದಿನ ಮತ್ತೆ ನಮ್ಮ ಮನೆಯ ಕಡೆಗೆ ಅವನು ಸುಳಿಯಲಿಲ್ಲ.ಒಂದು ವಾರದ ನಂತರ ಮತ್ತೆ ಅತ್ತೆಯೇ ನಮ್ಮ ಆಳು ರಾಮನನ್ನು ಕರೆದು, " ನೋಡ್ ಮಾರಾಯಾ, ಆ ಶಾಷ ಒಬ್ಬ ಎಲ್ಲಿ ಸತ್ತ್ ಹೋದ ಅಂತ ನೋಡ್ಕೊಂಡು ಬಾ, ಬದ್ಕಿ ಇದ್ರೆ ಅಮ್ಮ ಬಪ್ಕೆ ಹೇಳೀರ್ ಅಂತ ಹೇಳಿ ಕರ್ಕಂಡೆ ಬಾ ಕಾಂಬ" ಎಂದು ಹೇಳಿಕಳಿಸಿದರು. ರಾಮ ಹೋಗಿ ಶಾಷನಿಗೆ ಅದನ್ನು ಹೇಳಿ ಬಂದ.

ಶಾಷ, ಆಗಲೇ ಹೊರಟು ನಮ್ಮ ಮನೆಗೆ ಬಂದು, ಹಿಂದೆ ಆದದ್ದಲ್ಲವನ್ನೂ ಮರೆತು, " ಏನ್ ಶ್ಯೆಖಿ ಮರ್ರೆ, ಹ್ಯಾಯ್ ಅಮ್ಮಾ, ಬಪ್ಪುಕ್ ಹೇಳಿದ್ರಿಯಂಬ್ರಲೆ?" ಎಂದು ನಗುತ್ತಾ ಜಗಲಿಯ ಮೇಲೆ ಕುಳಿತು, " ತಿಂಬುಕೆ ಒಂದ್ ವೀಳ್ಯ ಕೊಡಿ ಕಾಂಬ. ಹಾಂಗೆ ಒಂದ್ ಚೂರ್ ಹೊಯ್ಸೊಪ್ " ಅಂದ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ