ಸೋಮವಾರ, ಏಪ್ರಿಲ್ 2, 2018

ದಿನೇಶ ಉಪ್ಪೂರ:

*ನನ್ನೊಳಗೆ- 89*

ನಾನು ನನ್ನ ಅಜ್ಜಯ್ಯನನ್ನು ಕಾಣಲಿಲ್ಲ. ಯಾರಾದರೂ ನನ್ನ ಅಜ್ಜಯ್ಯನ ಸುದ್ದಿಯನ್ನು ಹೇಳಿದರೆ ನನಗೆ ನೆನಪಾಗುವುದು ಅವರು ತಾಳ ಹೇಳಿಕೊಡುತ್ತಿದ್ದ ಕ್ರಮವನ್ನು ಮನೆಯಲ್ಲಿ ವರ್ಣಿಸುತ್ತಿದ್ದ ರೀತಿ. ಅವರು ಹೇಳಿಕೊಟ್ಟರು ಅಂದರೆ ತಾಳದ ಲಯ, ಗತಿ ಅಷ್ಟು ನಿಖರವಾಗಿರುತ್ತಿತ್ತು ಅಂತ ಲೆಕ್ಕ. ಹೇಳಿಕೊಟ್ಟ ತಾಳ ಸರಿಯಾಯಿತು ಅಂತ ಅನ್ನಿಸದೇ ಇದ್ದರೆ ಅವರು ಮುಂದಿನ ತಾಳವನ್ನು ಹೇಳಿಕೊಡುತ್ತಲೇ ಇರಲಿಲ್ಲ. ಒಮ್ಮೆ ಕಲಿಯುವವರಿಗೆ ಇದು ಜಿತ ಆಗುವುದಿಲ್ಲ ಅಂತ ಅವರಿಗೆ ಅನ್ನಿಸಿದರೆ ನೇರವಾಗಿ "ಇದು ನಿಂಗ್ ಆಪ್ದಲ್ಲಾ. ನೀನು ನಾಳೆಯಿಂದ ಬಪ್ದ್ ಬ್ಯಾಡ. ನೀನ್ ಗೊಬ್ರ ಹೊರುಕೇ ಸೈ" ಎಂದು ಸ್ಪಷ್ಟವಾಗಿ ಹೇಳಿಬಿಡುತ್ತಿದ್ದರಂತೆ.

 ವಂಡಾರು ಬಸವ, ಮೊಳ್ಳಳ್ಳಿ ಹೆರಿಯ, ಗಾವಳಿ ಬಾಬು, ಎಂ ಎ ನಾಯ್ಕ, ಚೋರಾಡಿ ವಿಠಲ, ರಾಘವೇಂದ್ರ ಮಯ್ಯ ಮೊದಲಾದವರು ನಮ್ಮ ಮನೆಯಲ್ಲೇ ಇದ್ದು ಮನೆಕೆಲಸ ಮಾಡಿಕೊಂಡು ಅಥವ ಪ್ರತೀ ದಿನ ಸಂಜೆ ನಮ್ಮ ಮನೆಗೆ ಬಂದು ತಾಳ, ಕುಣಿತ ಅಭ್ಯಾಸ ಮಾಡಿ ಮೇಳಕ್ಕೆ ಸೇರಿ ಜೀವನದ ದಾರಿಯನ್ನು ಕಂಡುಕೊಂಡವರು.

ಅಜ್ಜಯ್ಯ ಅಂದರೆ ಶ್ರೀನಿವಾಸ ಉಪ್ಪೂರರು, ಅವರಿಗೆ ಸಿಟ್ಟು ಮೂಗಿನ ಮೇಲೆ. ಒಮ್ಮೆ ಒಬ್ಬರು ತಾಳಾಭ್ಯಾಸ ಮಾಡಲು ಸಂಜೆ ಬಂದು, ರಾತ್ರಿ ಪಾಠ ಹೇಳಿಸಿಕೊಂಡು ಮನೆಗೆ ಹೋಗುತ್ತಿದ್ದರು. ಅವರಿಗೆ ಲಯವಿಲ್ಲದ್ದರಿಂದ ತಾಳ ಕಲಿಯುವುದು ಕಷ್ಟವಾಯಿತು. ಎಷ್ಟು ಹೇಳಿಕೊಟ್ಟರೂ ಅವನಿಗೆ ತಾಳ ತಪ್ಪಿ ಹೋಗುತ್ತಿತ್ತು. ಅಜ್ಜಯ್ಯ ಒಮ್ಮೆ ಜಗಲಿಯ ಮೇಲೆ ಚಿಮಣಿ ಬೆಳಕಿನಲ್ಲಿ ಅವನನ್ನು ಎದುರಿಗೆ ಚಟ್ಟಮುಟ್ಟ ಹಾಕಿ ಕೂರಿಸಿ, (ಸಿದ್ದಾಸನ ಹಾಕಿ)  ತಾವೂ ಹಾಗೆಯೇ ಕುಳಿತು ತಿ ತ್ತಿ ತೈ ಹೇಳಿ ಕೊಡಲಾರಂಭಿಸಿದರು. ಅಜ್ಜಯ್ಯ ಮೊದಮೊದಲು ಕೈಯಲ್ಲಿ ತಾಳ ಹೊಡೆಯುತ್ತಿದ್ದವರು, ಕೊನೆಗೆ ತಮ್ಮ ತೊಡೆಯಮೇಲೆ ಕೈಯಲ್ಲಿ ತಟ್ಟತೊಡಗಿದರು. ಹೇಳಿಹೇಳಿ ಸಾಕಾಗಿ ಅವನು ತಪ್ಪಿದ ಕೂಡಲೇ ಒಮ್ಮೆ ಜೋರಾಗಿ ಇವರ ತೊಡೆಯಿಂದ ಕೈ ಎತ್ತಿ ಅವನ ತೊಡೆಯ ಮೇಲೆ ಗಟ್ಟಿಯಾಗಿ ತೈ ಎಂದು ಕೈಯಲ್ಲಿ ಬಡಿದ ಹೊಡೆತಕ್ಕೆ ಅವನಿಗೆ ತೊಡೆಯಲ್ಲಿ ಇವರ ಕೈಯೇ ಮೂಡುವಷ್ಟು ಬರೆ ಎದ್ದು, ನೋವಿನಲ್ಲಿ ಕಣ್ಣು ಕತ್ತಲೆ ಬರುವಂತಾಯಿತು. ಆ ರಾತ್ರಿ ಹೋದವನು ಇವರ ತಾಳವೂ ಬೇಡ ಪೆಟ್ಟೂ ಬೇಡ ಎಂದು ಮರುದಿವಸದಿಂದ ನಾಪತ್ತೆಯಾದನಂತೆ.

ಇನ್ನೊಮ್ಮೆ ಮತ್ತೊಬ್ಬ ಹಾಗೆ ಸಂಜೆ ಕಲಿಯಲು ಬಂದವನು "ದೀಂತ ತದ್ದಿನ್ನಾಂತ ತದ್ದಿನ್ನಾಂತ" ಅಂತ ಕಲಿಸಿಕೊಟ್ಟದ್ದನ್ನು ಮರುದಿನ ಅದನ್ನು ಸರಿಯಾಗಿ ಕಲಿತು ಬರಬೇಕು ಎಂದು ತಾಕೀತು ಮಾಡಿದಾಗ, ಪಾಪ, ರಾತ್ರಿ ಮನೆಗೆ ಹೋಗುವಾಗಲೂ ದಾರಿಯಲ್ಲಿಯೂ ತದ್ದಿನಾಂತ ತದ್ದಿನ್ನಾಂತ ಹೇಳುತ್ತಾ ತಾಳ ಬಡಿಯುತ್ತಾ ಹೋಗುವಾಗ, ಬೈಲಿನ ಗದ್ದೆಯ ಕಂಟದಲ್ಲಿ ಕಾಲು ಜಾರಿ ಕೆಸರಿಗೆ ಬಿದ್ದುಬಿಟ್ಟನಂತೆ. ಅಯ್ಯಬ್ಬ ಅಂತ ಹೇಳುತ್ತಾ ಕೈ ಊರಿದ. ತಾಳ ತಪ್ಪಿತ್ತು. ಉಚ್ಚಾರದ ಜೊತೆಗೆ ಅಯ್ಯಬ್ಬ ಎಂಬುದೂ ಸೇರಿಕೊಂಡಿತು. ಮರುದಿನ ಪಾಠ ಒಪ್ಪಿಸುವಾಗ ಅಯ್ಯಬ್ಬ ದೇಂತಾಂತ ಅಂತ ಆಗಿತ್ತಂತೆ. ಅಜ್ಜಯ್ಯನಿಗೆ ಸಿಟ್ಟು ಬಂದು "ಅಯ್ಯಬ್ಬ ಎಂತದ್ದು ನಿನ್ನ ಕರ್ಮವಾ" ಅಂತ ಮತ್ತಷ್ಟು ಬೈದರಂತೆ.

ಅವರು ಆಟಕ್ಕೆ ಹೋಗುತ್ತಿದ್ದಾಗ ದಾರಿಯಲ್ಲಿ ಗುರುತಿನವರು ಸಿಕ್ಕಿದರೆ ಅಜ್ಜಯ್ಯ ಪ್ರಸಿದ್ದ ಭಾಗವತರಲ್ವಾ? ಅವರನ್ನು ಮಾತಾಡಿಸುವ ಆಸೆ. ಇವರಿಗೆ ಸ್ವಲ್ಪ ಗತ್ತು ಬಿಗುಮಾನ.  "ಅಯ್ಯ ಇವತ್ತು ಎಲ್ ಆಟವೇ?" ಅವನು ವಿನಯದಿಂದ ಕೇಳಿದರೆ, ಅಜ್ಜಯ್ಯ "ಮುಂಡಕೊಡ"ಲ್ಲಿ ಅಂದ್ರು. ಅವನು ಅಷ್ಟಕ್ಕೇ ಬಿಡದೇ "ಅಯ್ಯ ಎಂತಾ ಪರಸಂಗೊ?" ಎಂದಾಗ ಅಜ್ಜಯ್ಯ "ಕೀಚಕ ವಧೆ" ಅಂದರು. ಅವನು, "ಕೀಚಕ ಮಾಡಿದ್ ಯಾರ್ ಅಯ್ಯ" ಅಂದ. ಇವರನ್ನು ಮಾತಾಡಿಸುವ ಆಸೆಯಿಂದ ಇವರ ಹಿಂದೆಯೇ ನಿಧಾನವಾಗಿ ಗದ್ದೆಯ ಅಂಚಿನಲ್ಲಿ ಹಿಂಬಾಲಿಸಿದ. ಅಜ್ಜಯ್ಯ, "ಗಣಪತಿ ಪ್ರಭು" ಎಂದು ಗಂಭೀರವಾಗಿ ಉತ್ತರಿಸಿದರು. ಆದರೆ ಅವನ ಮಾತು ಮುಗಿಯುವುದಿಲ್ಲ. "ಮೊನ್ನಿ ಆಂಟ ಎಲ್ಲೇ?" ಅಂದ. ಇವರು "ಜನ್ನಾಡಿ" ಎಂದರು ಅಜ್ಜಯ್ಯನಿಗೆ ಇದೆಂತ ಕರೆಕರೆ ಎಂತ ಅನ್ನಿಸಲು ಶುರುವಾಗಿತ್ತು. ಅಷ್ಟಕ್ಕೆ ಅವನು, "ಎಂತ ಪರಸಂಗ್ವೊ?" ಎಂದ ಇವರು ಅಸಹನೆಯಿಂದ "ಇಂದ್ರಕೀಲಕ" ಎಂದರು. "ಇಂದ್ರ ಕೀಲಕ ಯಾರ್ ಮಾಡಿದ್ದೇ" ಅವನ ಮುಗ್ಧ ಪ್ರಶ್ನೆ.

 ಅಜ್ಜಯ್ಯನಿಗೆ ನಗು ತಡೆಯಲಾಗಲಿಲ್ಲ. "ನಿನ್ನಪ್ಪ ಬೋಳಿ ಮಗನೇ. ಹೋತ್ಯಾ ಇಲ್ಲ್ಯಾ?" ಎಂದು ಜೋರು ಮಾಡಿ ಅವನನ್ನು ಓಡಿಸಿದರಂತೆ. ಪಾಪ ಅವನಿಗೆ ಇಂದ್ರ ಕೀಲಕ ಒಂದು ಪಾತ್ರ ಅಲ್ಲ ಎಂದು ಕೂಡ ಗೊತ್ತಿರಲಿಲ್ಲ.

2 ಕಾಮೆಂಟ್‌ಗಳು: