ಶುಕ್ರವಾರ, ಏಪ್ರಿಲ್ 13, 2018

ದಿನೇಶ ಉಪ್ಪೂರ:

*ನನ್ನೊಳಗೆ- 91*

ನಾನು ಹಾಲಾಡಿ ಶಾಲೆಯಲ್ಲಿ ಓದುತ್ತಿದ್ದಾಗ ಅಲ್ಲಿಯೇ ಹತ್ತಿರವಿರುವ ಪೋಸ್ಟ್ ಆಫೀಸಿಗೆ ಮಧ್ಯಾಹ್ನ ಊಟವಾದ ಮೇಲೆ ಆಗಾಗ ಹೋಗಿ ಬರುವುದಿತ್ತು. ಅಲ್ಲಿ ಹಿರಿಯಣ್ಣ ನಾಯಕ್ ಎನ್ನುವವರು ಪೋಸ್ಟ್ ಮಾಸ್ಟರ್ ಆಗಿದ್ದರು. ಪೋಸ್ಟ್ ಆಫೀಸ್ ಅಂದರೆ ಅದು ರಸ್ತೆ ಬದಿಯಲ್ಲಿರುವ ಒಬ್ಬರ ಮನೆಯ ಮುಂಭಾಗದ ಒಂದು ಕೋಣೆ. ಕೋಣೆ ಅಂದರೆ ಬಹುಷ್ಯ ಗೋಡೌನ್ ತರಹದ ಒಂದು ದೊಡ್ಡ ಜಾಗ ಅಂತ ನೆನಪು. ಅದರ ಒಳಗೆ ಹಿಂದಿನ ಭಾಗ ಕತ್ತಲು ಕತ್ತಲು.  ಅಂತಹ ಎತ್ತರದ ಎರಡು ಕೋಣೆಯ ಮಧ್ಯದ ಹೆಬ್ಬಾಗಿಲಿನಿಂದ ಒಳಗೆ ಹೋದರೆ ಅಲ್ಲಿ ಮನೆ. ಆ ಕಟ್ಟಡದ ಗೋಡೆಗಳನ್ನು ಶಿಲೆಕಲ್ಲಿನಿಂದಲೇ ಕಟ್ಟಲಾಗಿತ್ತು.

ಆ ಪೋಸ್ಟ್ ಆಫೀಸಿನ ಬಾಗಿಲು ಎಂದರೆ ಹಲವಾರು ಹಲಗೆಗಳನ್ನು ಜೋಡಿಸಿ ಉದ್ದಕ್ಕೂ ಮೇಲಿನ ಮರದ ಚೌಕಟ್ಟಿಗೆ ಸಾಲಾಗಿ ಸಿಕ್ಕಿಸಿ ಪೇರಿಸಿ ಇಡುವುದು. ಆದರೆ ಒಂದೇ ಕಡೆಯಲ್ಲಿ ಮಾತ್ರ ಹಾಗೆ ಚೌಕಟ್ಟಿನ ತೂತಿಗೆ ಹಲಗೆಯನ್ನು ಎತ್ತಿ ಸಿಕ್ಕಿಸಿಲು ಆಗುವುದು. ನಂತರ ಹಲಗೆಯನ್ನು ಮುಂದೆ ದೂಡಬೇಕು. ತೆಗೆಯುವಾಗಲೂ ಸಿಕ್ಕಿಸಿದ ಜಾಗದಲ್ಲಿಗೇ ದೂಡಿ ತಂದು ಹಲಗೆಯನ್ನು ಈಚೆಗೆ ತೆಗೆಯಬೇಕಾಗುತ್ತಿತ್ತು. ಮತ್ತು ಅದೇ ಜಾಗದಲ್ಲಿ ಎರಡು ಮೂರು ಹಲಗೆಯನ್ನು ಸೇರಿಸಿ ಒಂದು ಕಬ್ಬಿಣದ ಸರಳು ಸಿಕ್ಕಿಸಿ ಬೀಗ ಹಾಕುವುದು. ಈಗ ಅಂತಹ ಬಾಗಿಲು ಎಲ್ಲಿಯೂ ಇಲ್ಲವೇನೋ ಅನ್ನಿಸುತ್ತದೆ.

ಅಚ್ಚುತ ಅಂತ ಒಬ್ಬರು ಬಟ್ಟೆ ಹೊಲಿಯುವವರು ಅಲ್ಲಿಯೇ ಎದುರಲ್ಲಿ ಹೊಲಿಗೆ ಯಂತ್ರವನ್ನು ಇಟ್ಟುಕೊಂಡು ಬಟ್ಟೆ ಹೊಲಿಯುತ್ತಿದ್ದರು. ನಾನು ಡಿಗ್ರಿ ಮುಗಿದು ಕಲ್ಲಟ್ಟೆಯಲ್ಲಿ ಇದ್ದು ಕೆಲಸ ಹುಡುಕುತ್ತಾ ಅಲೆದಾಡುತ್ತಿದ್ದಾಗ ಒಂದು ನಾಲ್ಕೈದು ತಿಂಗಳು ಅವರ ಹತ್ತಿರ ಹೋಗಿ ಹೊಲಿಗೆಯನ್ನು ಕಲಿತಿದ್ದೆ. ಅವರು ನನಗೆ ಅಂಗಿಗೆ ಗುಂಡಿ ಇಡಲು ಮತ್ತು ಗುಂಡಿಯ ತೂತಿಗೆ ಕೈ ಹೊಲಿಗೆ ಹಾಕಲು, ಹಳೆಯ ರಿಪೇರಿಗೆ ಬಂದ ಬಟ್ಟೆಗೆ ಕೈ ಹೊಲಿಗೆ ಹಾಕಲು ಹೇಳಿಕೊಟ್ಟಿದ್ದರು. ಆದರೆ ಹೊಲಿಗೆ ಮೆಶನ್ ಮಾತ್ರ ಮುಟ್ಟಲು ಬಿಡುತ್ತಿರಲಿಲ್ಲ. ಮೊದಲು ಕೈ ಹೊಲಿಗೆ ಮಾಡಲು ಸರಿಯಾಗಿ ಕಲಿಯಿರಿ ಆಮೇಲೆ ಹೇಳಿಕೊಡುತ್ತೇನೆ ಎನ್ನುತ್ತಿದ್ದರು. ಒಮ್ಮೆ ಅವರು ಹೊರಗೆ ಏನೋ ಕೆಲಸಕ್ಕೆ ಹೋಗಿದ್ದಾಗ ನಾನು ಹೊಲಿಗೆ ಮಿಶನ್ ನಲ್ಲಿ ಹೊಲಿಯಲು ಹೋಗಿ, ಮಿಶನ್ ನಲ್ಲಿ ದಾರ ಸಿಕ್ಕಿಹಾಕಿಕೊಂಡಿದ್ದು ಅವರಿಂದ ಬೈಸಿಕೊಂಡಿದ್ದೆ. ಆಮೇಲೆ ಅವರಲ್ಲಿಗೆ ಹೋಗುವುದನ್ನೇ ಬಿಟ್ಟುಬಿಟ್ಟೆ.

 ಅವರಿಗೆ ಹಿಂದೆ ಒಮ್ಮೆ ಯಾವುದೋ ಬಸ್ಸಿನ ಕೆಳಗೆ ಬಿದ್ದು ಎಕ್ಸಿಡೆಂಟ್ ಆಗಿದ್ದು ಎದೆಯ ಮೂಳೆಗಳೆಲ್ಲ ಮುರಿದಿತ್ತಂತೆ. ಹಾಗಾಗಿ ಎದೆಯ ಭಾಗ ಬೆನ್ನಿಗೆ ಒತ್ತಿದಂತೆ ಚಪ್ಪಟೆಯಾಗಿ ಇತ್ತು. ಅವರಿಗೆ ಮದುವೆ ಆಗಲಿಲ್ಲ. ಮತ್ತು ವಯಸ್ಸಾದಂತೆ ಅದೇ  ಚಿಂತೆಯಾಗಿ ಒಂದು ರೀತಿಯ ಮತಿಭ್ರಮಣೆಯಾದವರಂತೆ ಅವರಷ್ಟಕ್ಕೇ ಅವರು ಮಾತಾಡುತ್ತಿದ್ದರಂತೆ. ಕೊನೆಗೆ ಹಾಲಾಡಿ ಬಸ್ ನಿಲ್ದಾಣದ ಹತ್ತಿರದ ಒಬ್ಬ ವೇಶ್ಯೆಯ ಮನೆಯ ಹೊರಗಿನ ಜಗಲಿಯಲ್ಲೇ ಪ್ರತೀದಿನ ಹೋಗಿ ಕುಳಿತು ರಾತ್ರಿ ಕಳೆಯುತ್ತಿದ್ದರಂತೆ. ಅವಳು ಇಲ್ಲಿಗೆ ಬರಬೇಡ ಹೋಗು ಎಂದು ಬೈದು ಹೋಗಲು ಹೇಳಿದರೂ ಇವರು ಅಲ್ಲಿಯೇ ಇರುತ್ತಿದ್ದರಂತೆ. ಹಾಗೆಯೇ ಒಂದು ದಿನ ಅವರು ಸತ್ತು ಹೋದರು.

ನಮ್ಮ ಪೋಸ್ಟ್ ಆಫೀಸಿನಲ್ಲಿ ಮೊದಲಿಗೆ ಅಣ್ಣಪ್ಪಯ್ಯ ಶ್ಯಾನುಭೋಗ್ ಅಂತ ಒಬ್ಬರು ಪೋಸ್ಟ್ ಮೆನ್ ಇದ್ದರು. ಪೋಸ್ಟ್ ಮೆನ್ ಅಂದರೆ ಅವರನ್ನು ನಾವು ಐಡಿಯಲ್ ಪೋಸ್ಟ್ ಮೆನ್ ಅಂತ ಕರೆಯಬಹುದು. ಅವರು ಸಪೂರ ಉದ್ದ ಆಳು. ಜುಬ್ಬ ಪೈಜಾಮ ಹಾಕಿ, ತಲೆಗೆ ಒಂದು ಟೋಪಿ ಧರಿಸುತ್ತಿದ್ದರು. ಸೈಕಲ್ಲಿನಲ್ಲಿಯೇ ಪ್ರಯಾಣ ಮಾಡಿ ಮನೆಮನೆಗೆ ಪತ್ರವನ್ನು ಕೊಂಡುಹೋಗಿ ಕೊಡುತ್ತಿದ್ದರು. ಎಲ್ಲರನ್ನೂ ಪ್ರೀತಿಯಿಂದ ಮಾತನಾಡಿಸುತ್ತಿದ್ದರು. ಅವರ ಕಾಲದ ನಂತರ ಅಚ್ಚುತ, ಆಮೇಲೆ ಭಾಸ್ಕರ ಮಿತ್ಯಾಂತರು ಪೋಸ್ಟ್ ಮೆನ್ ಆದರು ಎಂದು ಕಾಣುತ್ತದೆ.

ಮಧ್ಯಾಹ್ನ ಸುಮಾರು ಎರಡು ಗಂಟೆಯ ಹೊತ್ತಿಗೆ ಆ ದಿನದ ಪತ್ರಗಳ ಒಂದು ದೊಡ್ಡ ಚೀಲವು ಹನುಮಾನ್ ಎಂಬ ಬಸ್ಸಿನಲ್ಲಿ ಬರುತ್ತಿತ್ತು. ಅಲ್ಲಿಗೆ ಬರುವಾಗ ಡ್ರೈವರ್ ಬಸ್ ನ ವೇಗವನ್ನು ಸ್ವಲ್ಪ ನಿಧಾನಮಾಡುತ್ತಿದ್ದು,ಆಗ ಆ ಚೀಲವನ್ನು ಬಸ್ಸಿನ ಕಂಡಕ್ಟರ್ ನಮ್ಮ ಪೋಸ್ಟ್ ಆಫೀಸಿನ ಎದುರೇ ಎಸೆದು ಹೋಗುತ್ತಿದ್ದರು. ಅದರ ಬಾಯಿಯನ್ನು ಹಗ್ಗದಿಂದ ಕಟ್ಟಿ, ಕಪ್ಪಗಿನ ರಾಳವನ್ನು ಬಿಸಿಮಾಡಿ, ಹಚ್ಚಿ ಶೀಲು ಮಾಡಿ ಯಾರೂ ಅನಧಿಕೃತವಾಗಿ ಪತ್ರವನ್ನು ಹೊರಕ್ಕೆ ತೆಗೆಯದಂತೆ ಮಾಡಿರುತ್ತಿದ್ದರು.

ಆ ಬಸ್ಸು ಬಂದುದನ್ನು ಕಂಡ ಕೂಡಲೇ ನಾವೆಲ್ಲ ಶಾಲೆಯಿಂದ ಆ ಪೋಸ್ಟ್ ಆಫೀಸಿಗೆ ಓಡುತ್ತಿದ್ದೆವು. ಅಷ್ಟರಲ್ಲಿ ಪೋಸ್ಟ್ ಮಾಸ್ಟರ್ ರು ಪೋಸ್ಟ್ ಬ್ಯಾಗ್ ನ ಬಾಯಿಯಲ್ಲಿ ಇರುವ ಹಗ್ಗವನ್ನು ಕತ್ತರಿಸಿ ಶೀಲ್ ಓಪನ್ ಮಾಡಿ ತೆಗೆದು ಅದರಲ್ಲಿದ್ದ ಪತ್ರಗಳನ್ನೆಲ್ಲ ಒಂದು ಟೇಬಲ್ ಮೇಲೆ  ಸುರಿಯುತ್ತಿದ್ದರು. ಪೋಸ್ಟ್ ಮೆನ್ ರು ಆ ಒಂದೊಂದೇ ಪತ್ರಗಳಿಗೆ ಟಪ್ ಟಕ್ ಟಪ್ ಟಕ್ ಅಂತ ಆ ದಿನದ ತಾರೀಕು ಇರುವ ಶೀಲನ್ನು ಹೊಡೆಯುತ್ತಿದ್ದರು. ಆ ಮೇಲೆ ಎಲ್ಲಾ ಪತ್ರಗಳನ್ನು ಪೋಸ್ಟ್ ಮಾಸ್ಟರ್ ಎದುರಿನ ಟೇಬಲ್ ಮೇಲೆ ತಂದು ಇಡುತ್ತಿದ್ದರು.

 ಪೋಸ್ಟ್ ಮಾಸ್ಟರ್ ಒಂದೊಂದಾಗಿ ಪತ್ರವನ್ನು ಎತ್ತಿ ಕಣ್ಣು ಸಣ್ಣದು ಮಾಡಿ, ಆ ಪತ್ರದ ಹೆಸರು ಮತ್ತು ವಿಳಾಸವನ್ನು ಗಟ್ಟಿಯಾಗಿ ಓದಿ ಹೇಳಿ ಅವುಗಳನ್ನು ಸ್ಥಳದ ಪ್ರಕಾರ ವಿಂಗಡಿಸಿ ಇಡುತ್ತಿದ್ದರು. ಆಗ ಅವರ ಟೇಬಲ್ಲಿನ  ಸುತ್ತ  ನಿಂತು ಸುತ್ತುವರಿದುಕೊಂಡಿದ್ದ ನಾವು, ನಮ್ಮ ಮನೆಯ ಅಥವ ನಮ್ಮ ಪಕ್ಕದ ಮನೆಯವರಿಗೆ ಪತ್ರ ಬಂದಿದ್ದರೆ, ಅವರು ಆ ಹೆಸರನ್ನು ಹೇಳಿದ ಕೂಡಲೇ  "ನನಗೆ ಕೊಡಿ" ಎಂದು ಗಟ್ಟಿಯಾಗಿ ಕೂಗಿ, ಆ ಪತ್ರವನ್ನು ತೆಗೆದುಕೊಳ್ಳುತ್ತಿದ್ದೆವು. ಅದನ್ನು ಮನೆಗೆ ತಲುಪಿಸುವ ಜವಾಬ್ದಾರಿ ನಮ್ಮದಾಗಿತ್ತು.

ಈ ಕೆಲಸವು ನಾವು ಶಾಲೆಗೆ ಹೋಗುವಾಗಿನ ದೈನಂದಿನ ಕೆಲಸದ ಒಂದು ಭಾಗವೇ ಆಗಿತ್ತು. ಹಾಗೆ ಬಂದ ಪತ್ರಗಳು ಕೆಲವೊಮ್ಮೆ ಎರಡು ಮೂರು ದಿನಗಳವರೆಗೆ ನಮ್ಮ ಶಾಲೆಯ ಚೀಲದಲ್ಲಿಯೇ ಉಳಿಯುವುದೂ ಇತ್ತು. ಮನೆಯವರಿಗೆ ಪೋಸ್ಟ್ ಮಾಸ್ಟರ್ ರಿಂದ ಪತ್ರ ಬಂದ ವಿಷಯ ತಿಳಿದು, ಆನಂತರ ನಮ್ಮ ತನಿಖೆ ಆದರೆ ಏನಾದರೂ ಸುಳ್ಳು ಹೇಳಲು ಸಿದ್ಧವಾಗಿ ಇರಬೇಕಾಗುತ್ತಿತ್ತು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ